ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಯಾವ ಕರ್ಮವನ್ನೂ ನಿರರ್ಥಕವಾಗಿ ಮಾಡಬಾರದು. ಏನೇ ಮಾಡಿದರೂ ಅದಕ್ಕೊಂದು ಅರ್ಥ ಇರಬೇಕು. ಅದಕ್ಕೊಂದು ಪ್ರಯೋಜನ ಇರಬೇಕು. ಜಲತಾಡನದ ಉದಾಹರಣೆ ಕೊಡ್ತಾರೆ ಶಾಸ್ತ್ರಗಳಲ್ಲಿ. ಸುಮ್ಮನೆ ನೀರನ್ನು ಬಡೀತಾ ಇರೋದು. ಯಾರಿಗೂ ಉಪಯೋಗ ಇಲ್ಲ. ಹಾಗೆ ಮಾಡಬೇಡ. ನೀನು ಏನೇ ಕೆಲಸ ಮಾಡಿದರೂ ಕೂಡ ಅದಕ್ಕೆ ಯೋಜನೆ, ಪ್ರಯೋಜನ ಇರಬೇಕು ಅಂತ.

ಚಾಣಕ್ಯನ ಬಗ್ಗೆ ಹೇಳ್ತಾರೆ ನೋಡಿ; ಚಾಣಕ್ಯನು ಸ್ವಪ್ನದಲ್ಲಿಯೂ ಕೂಡ ಸುಮ್ಮನೆ ಏನನ್ನೂ ಮಾಡೋದಿಲ್ವಂತೆ. ಹಾಗೆ ಸುಮ್ಮನೆ ಏನನ್ನೂ ಮಾಡಬಾರದು. ಸಣ್ಣ ಸಣ್ಣ ವಿಷಯಕ್ಕೆ ದೊಡ್ಡ ಪ್ರಯತ್ನವನ್ನ ಹಾಕಬಾರದು. ದೊಡ್ಡದಕ್ಕೆ ದೊಡ್ಡ ಪ್ರಯತ್ನ, ಸಣ್ಣದಕ್ಕೆ ಸ್ವಲ್ಪ ಸಣ್ಣ ಪ್ರಯತ್ನ. ಕೆಲವು ಬಾರಿ ಮಹತ್ಕಾರ್ಯಕ್ಕೆ ಪುಟ್ಟ ಪ್ರಯತ್ನ ಮಾಡಿ ಕೆಲಸವೇ ಆಗೋದಿಲ್ಲ. ಪುಟ್ಟ ಕಾರ್ಯಕ್ಕೆ ಮಹಾಪ್ರಯತ್ನ ಮಾಡಿ ಸುಮ್ಮನೆ ವ್ಯರ್ಥವಾಗ್ತದೆ ಪ್ರಯತ್ನ.

ಹನುಮಂತ ಭಾವಿಸ್ತಾ ಇದಾನೆ. ಸೀತೆಗಾಗಿ ರಾಮನ ಪ್ರಯತ್ನ ಇದೆಯಲ್ಲ, ವಿಶ್ವದಾದ್ಯಂತ ಸೀತೆಯನ್ನು ಹುಡುಕುವಂಥದ್ದು. ಹನುಮಂತ ಸಮುದ್ರವನ್ನು ಹಾರಿ, ಲಂಕೆಗೆ ಹೋಗಿ ಸೀತೆಯನ್ನು ಹುಡುಕುವಂಥದ್ದು. ಇಷ್ಟು ದೊಡ್ಡ ಪ್ರಯತ್ನ ಮಾಡ್ಬೇಕಾದ್ರೆ ಸೀತೆ ಹೇಗಿರಬೇಕೋ ಹಾಗಿದ್ರೆ ಮಾತ್ರ ಪ್ರಯೋಜನ. ಸೀತೆಯ ವಿಷಯವೇ ಬೇರೆ. ಅವಳ ಬಗ್ಗೆ ಮಾತನಾಡುವಂತಿಲ್ಲ. ರಾವಣನ ಹಿಂದೆ ಹೋದ ಅನೇಕ ಸ್ತ್ರೀಯರಿದ್ದಾರಲ್ಲ ಅಂಥವರಿಗಾಗಿ ಪ್ರಯತ್ನ ಮಾಡಿ ಪ್ರಯೋಜನ ಏನು?

ಇಷ್ಟು ದೊಡ್ಡ ಪ್ರಯತ್ನಕ್ಕೆ ಫಲ ಬರಬೇಕಾದರೆ ಸೀತೆಯಂತಹ ಒಂದು ಸೌಶೀಲ್ಯ ಬೇಕಾಗ್ತದೆ. ಹಾಗಾಗಿ ಹನುಮಂತ ಯೋಚನೆ ಮಾಡ್ತಾನೆ. ಸೀತೆಯ ಆ ಒಂದು ಮನಸ್ಸು , ಪರಿಶುದ್ಧ ಚಾರಿತ್ರ್ಯ ಗಮನಿಸಿದಾಗ ರಾಮನ ಪ್ರಯತ್ನ ಸಾರ್ಥಕ. ಸುಗ್ರೀವನ ಸಂಭ್ರಮ ಸಾರ್ಥಕ. ಏಕೆಂದರೆ ಸೀತೆಯ ಶೀಲವು ಶ್ರೇಷ್ಠ. ಕಪಿಗಳ ಮುಂದೆ ಹೇಳ್ಕೊಳ್ತಾನೆ ಅವನು. ನನ್ನ ಮನಸ್ಸಂತೂ ತುಂಬಿ ಬರ್ತಾ ಇದೆ. ಸೀತೆಯ ಶೀಲವನ್ನು, ಚಾರಿತ್ರ್ಯವನ್ನು, ಅವಳ ಉತ್ಕೃಷ್ಟವಾದ ನಡತೆಯನ್ನು ಗಮನಿಸಿದಾಗ ನನಗೆ ಮನಸ್ಸು ತುಂಬಿ ಬರ್ತದೆ ಅಂತ ಹನುಮಂತ ಕಪಿಗಳ ಮುಂದೆ ಹೇಳ್ಕೊಳ್ತಾನೆ.

ಇನ್ನು ಈ ಮೂರು ಸಂಗತಿಗಳು:
*ರಾಮನ ಪ್ರಯತ್ನ ಸಾರ್ಥಕ.
*ಸೀತೆಯ ಶೀಲ ಶ್ರೇಷ್ಠ
*ರಾವಣನು ಬಲುದುಷ್ಟ. ಅವನು ಮಹಾ ಬಲಿಷ್ಟ.
ಇದು ಹನುಮಂತ ಹೇಳಿದ್ದು. ವಿಷದ ಕಾಡಿನ ಹಾಗೆ, ಶರೀರದಲ್ಲೆಲ್ಲಾ ವಿಷವು ವ್ಯಾಪಿಸಿರುವಂತೆ ಬೆಳೆದುಕೊಂಡಿದಾನೆ ರಾವಣ. ಯಾವುದರಿಂದ ಅಂದ್ರೆ ತಪಸ್ಸಿನಿಂದ. ತಪಸ್ಸಿನಿಂದ ವರಗಳನ್ನ ಪಡೆದುಕೊಂಡು ಬೆಳೆದುಕೊಂಡಿದಾನೆ. ಎಷ್ಟರ ಮಟ್ಟಿಗೆ ಅಂದ್ರೆ ಒಳ್ಳೆಯ ಬುದ್ಧಿ ಇದ್ದಿದ್ರೆ ಜಗತ್ತನ್ನ ರಕ್ಷಣೆ ಮಾಡ್ಬಹುದಿತ್ತು. ಅವ್ನು. ಕೆಟ್ಟ ಬುದ್ಧಿ ಇದೆ. ಇಡೀ ಜಗತ್ತನ್ನ ಹಾಳುಮಾಡಲು ಇವನೊಬ್ಬನೇ ಸಾಕು. ಧ್ವಂಸ-ವಿಧ್ವಂಸಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ ಎಂಬುದಾಗಿ ಹೇಳಿ, ಅವನು ಹೇಗೆ ಸುಟ್ಟುಹೋಗಲಿಲ್ಲ? ಸೀತೆಯನ್ನು ಎತ್ತಿಕೊಂಡು ಬರಬೇಕಾದ್ರೆ ಎಂದು ದೊಡ್ಡ ಜಿಜ್ಞಾಸೆ ಹನುಮಂತನದ್ದು. ಸುಟ್ಟು ಹೋಗಬೇಕಿತ್ತಲ್ಲ ಅಂದ್ರೆ, ಅವನೇ ಉತ್ತರ ಹೇಳ್ತಾನೆ; ಅದು ಹಿಂದೆ ಮಾಡಿದ ತಪಸ್ಸಿದ್ಯಲ ಅದರಿಂದಾಗಿ ಅವನು ಸುಟ್ಟು ಹೋಗಿಲ್ಲ. ಇಲ್ಲಾಂದ್ರೆ ಬೆಂಕಿ ಆ ಕೆಲಸ ಮಾಡಲಾರದು. ಕ್ರುದ್ಧಳಾದ ಸೀತೆ ಏನು ಮಾಡಬಹುದೋ ಅದನ್ನ ಬೆಂಕಿಯೂ ಕೂಡ ಮಾಡಲಾರದು. ಸಿಟ್ಟು ಬಂದರೆ ಸುಟ್ಟುಬಿಟ್ಟಾಳು. ಹಾಗಿದಾಳೆ ಅವಳು. ಇವ್ನು ಸುಟ್ಟಿಲ್ಲ ಅಂದ್ರೆ ಹಿಂದೆ ಮಾಡಿದ ತಪಸ್ಸು. ಮತ್ತೆ ವಿಧಿಯ ಯೋಜನೆ ಬೇರೇನಾದರೂ ಇರಬಹುದು. ಇಷ್ಟು ಹೇಳಿದ ಮೇಲೆ ಇದ್ದಕಿದ್ದಂತೆ ಹೊಸ ಯೋಚನೆ ಬಂದುಬಿಡ್ತು ಹನುಮಂತನಿಗೆ. ಜಾಂಬವಂತನಿಗೂ, ಉಳಿದ ಹಳೆಯ ಕಪಿಗಳಿಗೂ ಮತ್ತು ಹೊಸ ನೇತಾರರಿಗೂ ಹನುಮಂತ ಒಂದು ಮಾತನ್ನ ಹೇಳಿದ್ನಂತೆ. ಅಲ್ಲ, ಸುಮ್ನೆ ನಾವೀಗ ಮತ್ತೆ ಕಿಷ್ಕಿಂಧೆಗೆ ಹೋಗೋದು, ರಾಮನಿಗೂ, ಸುಗ್ರೀವನಿಗೂ, ಉಳಿದ ಕಪಿಗಳಿಗೂ ಉಪದ್ರವ ಕೊಡೋದು ಯಾಕೆ? ಸುಮ್ನೆ ಹೋಗಿ ಸೀತೆಯನ್ನ ಕರೆದುಕೊಂಡು ಬಂದ್ಬಿಡೋಣ. ವಾಪಸ್ಸು ಲಂಕೆಗೆ ಹೋಗಿ. ಸೀತೆಯ ಸುದ್ಧಿ ತಾ ಅಂತ ರಾಮ ಹೇಳಿದ್ದು, ಸೀತೆಯನ್ನೇ ಕರೆದುಕೊಂಡು ಬಂದ್ಬಿಡೋಣ. ಏನಾಗತ್ತೆ? ರಾಮ ಲಕ್ಷ್ಮಣರನ್ನ ನಾವು ಸೀತೆಯ ಜೊತೆಗೆ ಕಾಣೋದು ಸರಿ. ನೋಡ್ಕೊಂಡು ಬಂದೆ ಅಂದ್ರೇನು? ಸರಿಯಲ್ಲ ಅದು. ಅವ್ರೆಲ್ಲ ಯಾಕೆ ಬೇಕು? ನಾವೇ ಇದೇವಲ್ಲ. ಸೀತೆಯ ಕಷ್ಟವನ್ನ ನೋಡಿದಾನೆ ಅವ್ನು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅದನ್ನ ಪರಿಹಾರ ಮಾಡ್ಬೇಕಾಗಿದೆ ಅವ್ನಿಗೆ.

ಆಗ ಮುಂದೆ ಬರುವ ಪ್ರಶ್ನೆ ಸಾಧ್ಯವಾ ಅಂತ. ಯಾಕಂದ್ರೆ, ಚತುರ್ದಶಭುವನದಲ್ಲಣ ಎಂಬುದಾಗಿ ರಾವಣನಿಗೆ ಇರುವ ಬಿರುದು. ಈವರೆಗೆ ಯಾರಿಗೂ ರಾವಣನನ್ನ, ಅವನ ಸೈನ್ಯವನ್ನ ಗೆಲ್ಲಲಿಕ್ಕೆ ಸಾಧ್ಯವಾಗಿಲ್ಲ. ಸೀತೆಯನ್ನು ಸುಮ್ಮನೆ ಕರೆತರಲಿಕ್ಕೆ ಸಾಧ್ಯವಾ? ಯುದ್ಧ ಆಗ್ಲೇಬೇಕು ಅಲ್ಲಿ. ಆಗ ಆ ಯುದ್ಧವನ್ನು ಗೆದ್ದು, ಸೀತೆಯನ್ನು ಕರೆತರಲಿಕ್ಕೆ ಸಾಧ್ಯವಾ ಅಂದ್ರೆ ಅದಕ್ಕೆ ಹನುಮಂತ ಉತ್ತರ ಕೊಡ್ತಾನೆ; ನಾನೊಬ್ಬನೇ ಸಾಕು. ರಾಕ್ಷಸ ಗಣಗಳನ್ನೆಲ್ಲ ಸಂಹಾರ ಮಾಡುವುದಕ್ಕೆ, ರಾವಣನನ್ನು ಕೊಂದುಹಾಕುವುದಕ್ಕೆ ನಾನೊಬ್ಬನೇ ಸಾಕು. ಮತ್ತೆ ನೀವೆಲ್ಲ ಸೇರಿದ್ಮೇಲೆ ಕೇಳ್ಬೇಕ? ನೀವೆಲ್ಲ ಯುದ್ಧ ಬಲ್ಲವರು, ಬಲವಂತರು, ಯುದ್ಧವಿದ್ಯೆಯನ್ನು ಅಭ್ಯಾಸ ಮಾಡಿರುವಂಥವರು, ಮತ್ತು ನಿರಂತರವು ವಿಜಯವನ್ನು ಹಾರೈಸುವಂಥವರು.

ಗೆಲುವು ಬೇಕೆಂದರೆ ಗೆಲುವಿನ ಹಸಿವು ಬೇಕಾಗ್ತದೆ. ಗೆಲುವಿನ ಹಸಿವುಳ್ಳವರು ನೀವೆಲ್ಲರೂ ಕೂಡ. ಹಾಗಾಗಿ ಯಾಕೆ ಸಾಧ್ಯವಿಲ್ಲ. ನಾನು ಕೊಂದುಬಿಡ್ತೇನೆ ರಾವಣನನ್ನು. ನಾನಾದರೂ ರಾವಣನನ್ನು, ಅವನ ಸೈನ್ಯವನ್ನು, ಅವನ ಬಳಗವನ್ನು, ಅವನ ಮಕ್ಕಳನ್ನು, ಅವನ ಸೋದರರನ್ನು ಎಲ್ಲರನ್ನು ನಾನೇ ಕೊಂದುಹಾಕ್ತೇನೆ.

ಆಗೊಂದು ಪ್ರಶ್ನೆ ಬಂದಿದ್ದು. ಸರಿ, ಇಂದ್ರಜಿತು ದಿವ್ಯಾಸ್ತ್ರಗಳನ್ನ ಪ್ರಯೋಗ ಮಾಡ್ತಾನಲ್ಲ. ಬ್ರಹ್ಮಾಸ್ತ್ರ, ರೌದ್ರಾಸ್ತ್ರ, ಇಂದ್ರಾಸ್ತ್ರ ಬೇರೆ ಬೇರೆ ಅಸ್ತ್ರಗಳನ್ನ ಇಂದ್ರಜಿತು ಪ್ರಯೋಗ ಮಾಡಿದಾಗ ಕಥೆಯೇನು? ಕಪಿಗಳು ಅಸ್ತ್ರಗಳನ್ನು ಎದುರಿಸುವುದಾದರೂ ಹೇಗೆ? ಬೇರೆ ಕಪಿಗಳಿಗೆ ಇಂದ್ರಜಿತುವಿನ ಅಸ್ತ್ರಗಳನ್ನ ಎದುರಿಸಲಿಕ್ಕೆ ಸಾಧ್ಯವಿಲ್ಲ. ಕಷ್ಟವಾಗಬಹುದು. ನಾನಿದ್ದೇನಲ್ಲ. ಬ್ರಹ್ಮಾಸ್ತ್ರ ಬಿಡಲಿ, ಐಂದ್ರಾಸ್ತ್ರ ಬಿಡಲಿ, ರೌದ್ರಾಸ್ತ್ರ, ವಾಯುವ್ಯಾಸ್ತ್ರಗಳನ್ನ ಬಿಡಲಿ, ವಾರುಣಾಸ್ತ್ರವನ್ನ ಬಿಡಲಿ, ಸಾಮಾನ್ಯವಾಗಿ ವೀರಾಧಿವೀರರಿಗೆ ನೋಡಲಿಕ್ಕೂ ಕಷ್ಟವಾಗತಕ್ಕಂತಹ ಆ ಅಸ್ತ್ರಗಳನ್ನು ನಾನು ಧ್ವಂಸ ಮಾಡ್ತೇನೆ. ರಾಕ್ಷಸರನ್ನು ಇಲ್ಲ ಅಂತ ಮಾಡ್ತೇನೆ. ನೀವೆಲ್ಲ ಒಂದು “ಹ್ಞೂ” ಅನ್ನಿ, ಉಳಿದಿದ್ದೆಲ್ಲ ನಾನು ನೋಡಿಕೊಳ್ತೇನೆ. ನಾನು ಗಗನದಲ್ಲಿ ನಿಂತು ಪರ್ವತಗಳ ಮಳೆಗರೆದರೆ ದೇವಸೈನ್ಯವಾದರೂ ಕೂಡ ಧ್ವಂಸವಾಗಿ ಹೋದೀತು. ರಾಕ್ಷಸರ್ಯಾವ ಲೆಕ್ಕ? ಎಂಬುದಾಗಿ ತನ್ನ ಪರಿಚಯ ಕೊಟ್ಟ. ಆಮೇಲೆ ಜಾಂಬವಂತನ ಬಗ್ಗೆ ಹೇಳ್ತಾನೆ; ಈ ಜಾಂಬವಂತ, ಇಷ್ಟು ವಯಸ್ಸಾದವನಾದರೂ ಕೂಡ ಇವನನ್ನ ಶತ್ರುಸೈನ್ಯವು ಕಂಪನಗೊಳಿಸಲಿಕ್ಕೆ ಸಾಧ್ಯವಿಲ್ಲ. ಹೇಗೆಂದರೆ, ಸಮುದ್ರವೇ ತೀರವನ್ನು ಮೀರಿ ಬರಬಹುದು, ಮಂದರ ಪರ್ವತವು ಕಂಪಿಸಬಹುದು, ಆದರೆ ಜಾಂಬವಂತನನ್ನು ಶತ್ರುಸೈನ್ಯವು ಕಂಪನಗೊಳಿಸುವುದು ಎನ್ನುವುದು ಸಾಧ್ಯವಿಲ್ಲ. ಪನಸ ಮತ್ತು ನೀಲ. ಅವ್ರು ಹೇಗಿದಾರೆ? ಅವರ ವೇಗಕ್ಕೆ ಮಂದರ ಪರ್ವತವೇ ಸೀಳಿ ಹೋದೀತು. ರಾಕ್ಷಸರ್ಯಾವ ಲೆಕ್ಕ? ಅಂಗದನ ಬಗ್ಗೆ ಹೇಳ್ತಾನೆ. ಈ ವಾಲಿಸುತ ಸದ್ಯ ಭೂಮಿಲ್ಲಿರತಕ್ಕಂತಹ ಎಲ್ಲ ರಾಕ್ಷಸರನ್ನು ಮಾತ್ರವಲ್ಲ, ಸತ್ತುಹೋದ ರಾಕ್ಷಸರು ಎದ್ದು ಬರಲಿ ಬೇಕಾದ್ರೆ ಅಷ್ಟ್ರೂ ಸೇರಿದ್ರೂ ಇವನೊಬ್ಬನೇ ಸಾಕು. ವೀರನಾದ ವಾಲಿ ತನಯನು ಇರುವ, ಗತಿಸಿದ ಎಲ್ಲಾ ರಾಕ್ಷಸರನ್ನು ಒಟ್ಟಿಗೇ ಎದುರಿಸಿ ಧ್ವಂಸ ಮಾಡಲು ಸಮರ್ಥ. ಬಳಿಕ ಮೈಂದ-ದ್ವಿವಿದರ ಬಗ್ಗೆ ಹೇಳ್ತಾನೆ. ದೇವತೆಗಳು, ಅಸುರರು, ಯಕ್ಷರು, ಗಂಧರ್ವರು, ಉರಗರು, ಪಕ್ಷಿಗಳಲ್ಲಿ ಮೈಂದನ ಅಥವಾ ದ್ವಿವಿದನ ಎದುರು ಯುದ್ಧ ಮಾಡಬಲ್ಲವರನ್ನು ಇಡೀ ಪ್ರಪಂಚದಲ್ಲಾ ತೋರಿಸಿ. ಯಾರಿದ್ದಾರೆ?

ಅಶ್ವಿನೀ ದೇವತೆಗಳ ಮಕ್ಕಳು, ಮಹಾಭಾಗರು ಈರ್ವರೂ ವಾನರ ನಾಯಕರು ಅವರು. ಇವರಿಗೆ ಇದಿರಾಗಿ ಯುದ್ಧಮಾಡಬಲ್ಲವರನ್ನು ನಾ ಕಾಣೆ. ಬ್ರಹ್ಮನಿಂದ ವರಪಡೆದುಕೊಂಡು, ಬಹಳ ಸೊಕ್ಕಿನಿಂದ, ದರ್ಪದಿಂದ ಸ್ವರ್ಗವನ್ನಾಕ್ರಮಿಸಿ ಅಮೃತವನ್ನು ಕುಡಿದವರು. ಅದೇನು ಕಥೆ ಅಂದ್ರೆ ಅಶ್ವಿನೀ ದೇವತೆಗಳನ್ನು ಆದರಿಸುವ ಸಲುವಾಗಿ ಬ್ರಹ್ಮನು ಅವರ ಮಕ್ಕಳೀರ್ವರಿಗೆ ವರ ಕೊಟ್ಟನಂತೆ. ವರ ಏನು? ಯಾರಿಂದಲೂ ವಧಿಸಲಿಕ್ಕೆ ಸಾಧ್ಯವಿಲ್ಲ. ಆ ವರ ಸಿಕ್ಕಿದ ಮೇಲೆ ಇವರ ಸೊಕ್ಕು ಎಷ್ಟು ಹೆಚ್ಚಾಯಿತು. ವರಬಲದಿಂದ ದರ್ಪಿತರಾಗಿ, ದೇವಸೈನ್ಯವನ್ನು ಧ್ವಂಸ ಮಾಡಿ, ದೇವತೆಗಳು ತಡೆದಿದಾರೆ, ಹಾಗೆಲ್ಲ ಅಮೃತ ಕೊಡೋದಕ್ಕಾಗೋದಿಲ್ಲ ಅಂತ ಹೇಳಿದ್ದಕ್ಕೆ. ದೈವ ಸೈನ್ಯವನ್ನೇ ಪರಾಭವಗೊಳಿಸಿ ಅಮೃತವನ್ನು ಕುಡಿದವರು. ಇವರೇ ಸಾಕು ಲಂಕೆಯನ್ನು ನಾಶಮಾಡುವುದಕ್ಕೆ. ನೀವೆಲ್ಲ ಬೇಕೂಂತ ಇಲ್ಲ, ಇವರಿಬ್ಬರೇ ಮಾಡ್ತಾರೆ.

ಹೀಗೆ ತನ್ನ ಒಡನಾಡಿಗಳ ಹುಮ್ಮಸ್ಸನ್ನು ಏರಿಸಿ, ಎಬ್ಬಿಸಿ ಯಾಕೆ ತಾನು ಈ ಮಾತನ್ನು ಹೇಳಬೇಕು ಎನ್ನುವುದನ್ನು ವಿವರಿಸುತ್ತಾನೆ. ದುರಾತ್ಮಕ ರಾವಣನ ಅಶೋಕವನದ ಮಧ್ಯದಲ್ಲಿ ಶಿಂಶುಪ ವೃಕ್ಷದ ಮೂಲದಲ್ಲಿ ಆ ಸಾಧ್ವಿ, ಸೀತೆಯು ಕರುಣಾವಸ್ಥೆಯಲ್ಲಿ ಇದ್ದಾಳೆ. ರಾಕ್ಷಸಿಯರಿಂದ ಸುತ್ತುವರಿಯಲ್ಪಟ್ಟು ಶೋಕ ಸಂತಾಪ ಮೂರ್ತಿಯಾಗಿ ಮೋಡ ಮುಚ್ಚಿದ ಚಂದ್ರರೇಖೆಯಂತೆ ನಿಷ್ಪ್ರಭಳಾಗಿದ್ದಾಳೆ ಸೀತೆ. ಇಷ್ಟಾದರೂ ಬಲದರ್ಪಿತನಾದ ರಾವಣನನ್ನು ಲೆಕ್ಕಕ್ಕೆ ತೆಗೆದುಕೊಳ್ತಾ ಇಲ್ಲ. ಅವನ ಮಾತನ್ನು ಮಾನ್ಯ ಮಾಡ್ತಾ ಇಲ್ಲ. ಪತಿವ್ರತೆಯಾಗಿದ್ದಾಳೆ. ತನ್ನ ಪಾತಿವ್ರತ್ಯವನು ದೃಢವಾಗಿ ಕಚ್ಚಿ ಹಿಡಿದಿದ್ದಾಳೆ, ಬಿಡಲಾರೆ ಎಂಬಂತೆ. ಸರ್ವಾತ್ಮನಾದ ರಾಮನಲ್ಲಿ ಅನುರಕ್ತಳಾಗಿದ್ದಾಳೆ. ಶುಭಳು ಅವಳು. ಹೇಗೆ ಶಚಿಯು ದೇವರಾಜ ಇಂದ್ರನನ್ನು ಬಿಟ್ಟು ಬೇರೆಯಾರನ್ನೂ ಮನಸ್ಸಿನಲ್ಲಿ ಎನಿಸಲಾರಳೋ ಹಾಗೇ ಅನನ್ಯಳಾಗಿ ರಾಮನನ್ನು ಆಶ್ರಯಿಸಿದ್ದಾಳೆ. ಎಷ್ಟೋ ಸಮಯದಿಂದ ಉಟ್ಟದ್ದು ಒಂದೇ ಬಟ್ಟೆ. ಧೂಳಿನಿಂದ ಕೂಡಿದೆ. ನಿರಂತರ ರಾಮನ ಚಿಂತನೆಯನ್ನೇ ಮಾಡ್ತಾ ಇದ್ದಾಳೆ. ರಾಕ್ಷಸರು ಪೀಡಿಸೋದು, ಬೈಯ್ಯೋದು ಅವಳಿಗೆ. ಅವಳು ಮಾತ್ರ ವಿಚಲಿತವಾಗ್ತಾ ಇಲ್ಲ. ಏಕವೇಣಿ, ಸಂಸ್ಕಾರ ಕೊಡದ ಕೂದಲು. ನೆಲದ ಮೇಲೆ ಮಲಗೋದು, ಮಾಸಿಹೋದ ಮೈ ಬಣ್ಣ. ಚಳೀಗಾಲ ಬಂದಾಗ ಸರೋವರಗಳಲ್ಲಿನ ಕಮಲವು ಮುರುಟಿದ ಹಾಗೇ, ದಳಗಳು ಬಿದ್ದ ಕಮಲದ ಹಾಗೆ ಸೀತೆ ಇದ್ದಾಳೆ. ಸಾಯ್ತೇನೆ ಎನ್ನುವ ನಿಶ್ಚಯವನ್ನು ಮಾಡಿ ಕುಳಿತಿದ್ದಾಳೆ. ನಾವು ತಡಮಾಡದೇ ಹೋಗೋಣ. ಬೇಗ ಸೀತೆಯನ್ನು ಕಷ್ಟದಿಂದ ಪಾರುಮಾಡೋಣ.

ಸೀತೆಯ ವಿಶ್ವಾಸ ಗಳಿಸಲಿಕ್ಕೆ ಅವನಿಗೆ ಎಷ್ಟು ಕಷ್ಟ ಆಯಿತು ಎಂದು ಹನುಮಂತ ನೆನಪು ಮಾಡಿಕೊಂಡ. ಆಮೇಲೆ ನನ್ನ ಬಗ್ಗೆ ಹೇಳಿ, ರಾಮನ ಬಗ್ಗೆ ಹೇಳಿ. ನನ್ನ ಸಖ್ಯ ಆಗಿದೆ ಎಂದಾಗ ಎಷ್ಟು ಸಂತೋಷ ಪಟ್ಟಳು. ಅವಳ ಶೀಲ, ಚಾರಿತ್ಯ, ನಡತೆ, ಪತಿಭಕ್ತಿ ತುಂಬಾ ಉತ್ಕೃಷ್ಟವಾಗಿರತಕ್ಕಂತಹದ್ದು. ಅವಳ ಪ್ರಭಾವದಿಂದಲೇ ರಾವಣ ಸಾಯಬೇಕಿತ್ತು, ಸತ್ತಿಲ್ಲ. ಅರ್ಜುನ ನಿಮಿತ್ತ ಮಾತ್ರ, ಕೃಷ್ಣ ಕೊಂದಿದ್ದು ಎನ್ನುವ ಹಾಗೇ ರಾವಣನನ್ನು ನಿಜವಾಗಿ ಕೊಲ್ಲುವವಳು ಸೀತೆ, ರಾಮ ಕೇವಲ ನಿಮಿತ್ತ ಮಾತ್ರ ಆಗಿರ್ತಾನೆ ರಾವಣನ ಸಾವಿಗೆ. ಸೀತೆಯ ತೇಜಸ್ಸು, ಪಾತಿವ್ರತ್ಯ, ತಪಸ್ಸು ಅದು ರಾವಣನನ್ನು ಕೊಲ್ಲುವಂತಹದ್ದು. ಎಷ್ಟು ಎತ್ತರ ಸೀತೆ ಎನ್ನುವುದನ್ನು ಹನುಮಂತ ವಿವರಿಸುವಂತಹದ್ದು. ಪಾಡ್ಯ ಅಥವಾ ಪ್ರತಿಪದೆ ದಿನ ಅಧ್ಯಯನ ಮಾಡಿದ್ರೆ ಅವನ ವಿದ್ಯೆ ಹೇಗೆ ಕ್ಷೀಣವಾಗುತ್ತದೋ ಹಾಗೇ ಸೀತೆ ಕ್ಷೀಣಾವಸ್ಥೆಯಲ್ಲಿ ಇದ್ದಾಳೆ. ಇದರಲ್ಲಿ ಒಂದು ಉಪದೇಶ ಯಾವ ದಿನ ಅಧ್ಯಯನ ಮಾಡಬಾರದು. ಜ್ಞಾನವನ್ನು ಕಳೆದುಕೊಳ್ಳಬೇಕು ಅಂತಾದರೆ ಪ್ರತಿಪದೆಯದಿನ ಅಧ್ಯಯನ ಮಾಡು. ಹಾಗೆ ಸೀತೆ ಇದ್ದಾಳೆ, ಈಗ ನೀವೆ ಹೇಳಿ ಏನು ಮಾಡಬಹುದು. ಆಗ ಅಂಗದ ಮಾತನಾಡಿದ ಹನುಮಂತ ಹೇಳಿದ್ದು ಎಲ್ಲ ರೀತಿಯಿಂದ ಸರಿ. ಸೀತೆಯನ್ನು ನೋಡಿದ ಮೇಲೆ ಅವಳನ್ನು ಕರೆದುಕೊಂಡು ಹೋಗದೇ ರಾಮನನ್ನು ಕಾಣುವುದಕ್ಕೆ ಯಾವ ಅರ್ಥವಿದೆ? ನಾವು ದುರ್ಬಲರಾ? ನಿಶಕ್ತರಾ? ಅಥವಾ ಅವಳ ಬಗ್ಗೆ ನಮಗೆ ಕನಿಕರ ಇಲ್ಲವಾ? ಅವಳು ಇನ್ನೂ ಕಷ್ಟ ಪಡಬೇಕೂಂದ್ರೆ ಏನು? ಮರ್ಯಾದೆ ಪ್ರಶ್ನೆ. ನಾವೆಲ್ಲ ಖ್ಯಾತ ವಿಕ್ರಮರು ಹಾಗಿರುವಾಗ ಸೀತೆಯನ್ನು ನೋಡಿ ಕರೆದುಕೊಂಡುಬರಲಿಲ್ಲ ಅಂತ ರಾಮ ಮತ್ತು ಲಕ್ಷ್ಮಣ ಮುಂದೆ ಹೇಗೆ ಹೇಳಿಕೊಳ್ಳುವುದು? ಪ್ಲವನದಲ್ಲಿ, ನೆಗೆತದಲ್ಲಿ ಮತ್ತು ಯುದ್ಧದಾಲ್ಲಿ ನಮಗೆ ಯಾರು ಸಮಾನರು? ಒಂದಿಷ್ಟು ಜನರನ್ನ ಹನುಮಂತ ಕೊಂದಿದ್ದಾನೆ, ನಾವು ಉಳಿದವರನ್ನು ಕೊಂದು ಸೀತೆಯನ್ನು ಕರೆದುಕೊಂಡು ಬಂದು ರಾಮ ಲಕ್ಷ್ಮಣರ ಮಧ್ಯದಲಿ ತಂದು ನಿಲ್ಲಿಸಿಬಿಡೋಣ.

ಇನ್ಯಾರಿಗೂ ಉಪದ್ರವ ಕೊಡೋದು ಬೇಡಾ, ನಾವೇ ಕೆಲಸ ಮುಗಿಸಿ ಬಿಡೋಣ. ಎಂದು ಅಂಗದ ಹೇಳಿದಾಗ, ಜಾಂಬವಂತನಿಗೆ ತುಂಬಾ ಸಂತೋಷ ಆಯಿತು ಅವರ ಕಾರ್ಯೋತ್ಸಾಹ ನೋಡಿ, ಆದರೆ ಹೇಳಿದ, “ಎಲೈ ಮಹಾಬುದ್ಧಿಯೇ, ಇದನ್ನು ನಾನು ಒಪ್ಪೋದಿಲ್ಲ. ಯಾಕೆಂದ್ರೆ ನಮಗೆ ಸೂಚನೆ ಆದಾದ್ದೇನು? ದಕ್ಷಿಣ ದಿಕ್ಕಿಗೆ ಹುಡುಕಿ ಅಂತ ಸೂಚನೆ ಆಗಿದ್ದು, ಕರೆದುಕೊಂಡು ಬಾ ಎಂದು ಸೂಚಿಸಲಿಲ್ಲ. ಕಪಿರಾಜನಾಗಲೀ ರಾಮನಾಗಲಿ ನಮಗೆ ಸೂಚನೆ ಕೊಟ್ಟಿದ್ದು ಇಷ್ಟೇ. ಹಾಗೆ ಸೀತೆಯನ್ನು ಕರೆದುಕೊಂಡು ಹೋದರೆ ರಾಮನಿಗೆ ಅದು ರುಚಿಸದೇ ಹೋಗಬಹುದು. ಯಾಕೆಂದ್ರೆ ಅವನಿಗೆ ಕುಲ ಇದೆ. ಹುಲಿ ತಾನು ಬೇಟೆ ಆಡಿದ್ರೆ ಮಾತ್ರ ಆಹಾರವನ್ನು ತಿನ್ನತಕ್ಕದ್ದು. ಅಂತಹ ಕುಲದವನು, ಹಾಗಾಗಿ ಒಪ್ಪದೇ ಹೋಗಬಹುದು. ನಾವು ಮಾಡಿದ ಕಾರ್ಯವೂ ವ್ಯರ್ಥ ಆಗಬಹುದು. ಹಾಗಾಗಿ ರಾಮ ಲಕ್ಷ್ಮಣರಿದ್ದಲ್ಲಿ ಹೋಗಿ ವಿಷಯ ಹೇಳುವ. ಅಂಗದ ಹನುಮಂತ ನಿಮ್ಮ ಯೋಚನೆ ಚೆನ್ನಾಗಿ ಇದೆ ಆದರೆ ರಾಮನ ವಚನ ಏನಿದೆಯೋ ಹಾಗೇ ಹೋಗುವ ನಾವು ಸ್ವಂತ ವಿಚಾರ ಮಾಡುವುದು ಬೇಡ” ಎಂದು ಹೇಳಿದ. ಆಗ ಜಾಂಬವಂತನ ವಾಕ್ಯವನ್ನು ಎಲ್ಲ ಕಪಿಗಳು ಹನುಮಂತನನ್ನೂ ಸೇರಿ ಸ್ವೀಕಾರ ಮಾಡಿದರಂತೆ. ಸೀತೆ ಕಷ್ಟ ಪಡ್ತಾ ಇದ್ದಾಳೆ, ಈ ಕಾರ್ಯವನ್ನು ಬೇಗ ಮುಗಿಸಬೇಕೂಂತ ಹನುಮಂತನ ಮನಸ್ಸು. ಈ ಯುವಕರೆಲ್ಲ accelerator ಆಗಿ ಇದ್ರೆ ಇಂತಹ ಹಳಬರು break ಇದ್ದ ಹಾಗೆ, ಅವರು ಬೇಕಾಗ್ತಾರೆ. ಹನುಮಂತನೂ ಕೂಡ ಏನಾದರೂ ಸಮಸ್ಯೆ ಬಂದರೆ ಮೊದಲು ನೆನಪಾಗುವುದು ಜಾಂಬವಂತ ಹಾಗೇ ಏನಾದರೂ ದೊಡ್ಡ ಕೆಲಸ ಮಾಡುವುದಿದ್ದರೇ ಮೊದಲು ಜಾಂಬವಂತನಿಗೆ ನೆನಪಾಗುವುದು ಹನುಮಂತ. ಅಂತಹ ಗುರು ಶಿಷ್ಯರ ಅಥವಾ ಅಜ್ಜ ಮೊಮ್ಮಕ್ಕಳ ಅಥವಾ ಅಪ್ಪ ಮಕ್ಕಳ ಬಾಂಧವ್ಯ ಅವರ ಮಧ್ಯೆ ಇದೆ. ಜಾಂಬವಂತನ ಮಾತಿಗೆ ಬೆಲೆ ಇದೆ ಹಾಗಾಗಿ ಅವನ ಮಾತಿಗೆ ಬೆಲೆ ಕೊಟ್ಟು ಎಲ್ಲರೂ ಹೊರಟರು.

ಹನುಮಂತ ಮೊದಲು ಹಿಂದೆ ಎಲ್ಲ ಕಪಿಗಳು. ಮಹೇಂದ್ರ ಪರ್ವತದಿಂದ ಎಲ್ಲರೂ ಜಿಗಿದರಂತೆ. ನಡೆದುಕೊಂಡು ಹೋಗಲಿಲ್ಲ ಯಾರೂ. ನೋಡಿದ್ರೆ ಮೇರು ಮಂದಾರ ಪರ್ವತ ಹಾರ್ತಾ ಇರುವಂತೆ ಕಾಣ್ತಾ ಇತ್ತು. ಮಧಿಸಿದ ಗಜದಂತೆ, ಆಕಾಶವನ್ನು ಮುಚ್ಚಿ ಆ ಮಹಾಬಲರಾದ ಕಪಿಗಳು ಮುಂದುವರಿದರು. ಎಲ್ಲರ ದೃಷ್ಟಿ ಹನುಮಂತನ ಮೇಲೆ ಪ್ರೀತಿಯಿಂದ ನೆಟ್ಟಿದ್ದಾರೆ. ಅದು ಹೇಗೆ ಕಾಣ್ತಾ ಇದೆ ಅಂದ್ರೆ ಎಲ್ಲ ದೃಷ್ಟಿಗಳು ಸೇರಿ ಹನುಮಂತನನ್ನು ಎತ್ತುಕೊಂಡು ಹೋಗ್ತಾ ಇದ್ದಾರೆ ಎನ್ನುವಂತೆ. ಹನುಮಂತನ ಮೇಲೆ ಎಲ್ಲ ಕಪಿಗಳಿಗೂ ಒಂದು ತರಹ ಗೌರವ ಬಂದು ಬಿಟ್ಟಿದೆ. ರಾಮನ ಕಾರ್ಯವಾಗಬೇಕೆಂಬ ಒಂದೇ ಮನಸ್ಸು ಎಲ್ಲರಿಗೂ. ರಾಮನ ಕಾರ್ಯವನ್ನು ಮುಗಿಸಿ ಆ ಕೀರ್ತಿಗೆ ನಾವು ಭಾಜನರಾಗಬೇಕು ಎನ್ನುವ ನಿಶ್ಚಯ ಮಾಡಿ ಎಲ್ಲರೂ ಹೋಗ್ತಾ ಇದ್ದಾರೆ. ಹೋದ ಕಾರ್ಯ ಆದ ಕಾರಣ ಎಲ್ಲ ಕಪಿಗಳು ಹೆಮ್ಮೆಯಿಂದ ಗರ್ವದಲ್ಲಿ ತಲೆ ಎತ್ತಿಕೊಂಡು ಹೋಗ್ತಾ ಇದ್ದಾರೆ.

ಮತ್ತೆ ಎಲ್ಲರಿಗೂ, ಹೋಗಿ ಈ ಪ್ರಿಯ ವಾರ್ತೆಯನ್ನು ಹೇಳಿಬಿಡಬೇಕು ರಾಮನಿಗೆ ಅಂತ ಇದೆ. ಅಲ್ಲೂ ಸ್ಪರ್ಧೆ! ಯಾರು ಹೇಳೋದು ಅಂತ? ಎಲ್ಲರೂ ಹೇಳಲಿಕ್ಕೆ ತಯಾರಿ ಮಾಡಿಕೊಳ್ತಾ ಇದ್ದಾರೆ. ಮತ್ತೆ, ಎಷ್ಟು ಹೊತ್ತಿಗೆ ಯುದ್ಧ ಆಗ್ತದೆ ಅಂತ ಕಾಯ್ತಾ ಇದ್ದಾರೆ ಅವರೆಲ್ಲರೂ ಕೂಡ.‌ ಯುದ್ಧದಲ್ಲಿ ಭಾಗವಹಿಸಬೇಕು ಮತ್ತು ರಾಮನಿಗಾಗಿ ಪ್ರತೀಕಾರ ಮಾಡಬೇಕು ಎನ್ನುವ ಮನಸ್ಸು. ಸೀತಾಪಹಾರಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನಾವು ಕೊಡ್ತೇವೆ ಎನ್ನುವ ಭಾವದಲ್ಲಿ ಆ ಕಪಿಗಳೆಲ್ಲ ಇದ್ದರು‌.

ಅಲ್ಲೊಂದು ಸಂದರ್ಭ ಬಂತು. ಕಿಷ್ಕಿಂಧೆಯ ಹತ್ತಿರ ಹೋಗಿದ್ದಾರೆ, ಅಲ್ಲಿ ಬಗೆ ಬಗೆಯ ತ್ರಿರಸಗಳಿಂದ ಕೂಡಿರ್ತಕ್ಕಂತಾ ‘ಮಧುವನ’ ಅವರ ಕಣ್ಣಿಗೆ ಬಿತ್ತಂತೆ ಆ ಹೊತ್ತಿಗೆ! ಅದು ರಕ್ಷಿತ ಅರಣ್ಯ. ವಿಶೇಷವಾದ ವನ, ಆ ವನದಲ್ಲಿ ತುಂಬ ವಿಶೇಷವಾಗಿ, ಸ್ವಲ್ಪ‌ ಅಮಲೂ ತರಿಸ್ತಕ್ಕಂತ ಜೇನಿದೆಯಂತೆ ಅಲ್ಲಿ. ಅದು ಸುಗ್ರೀವನಿಗೇ ಸೇರಿದ್ದು, ಯಾರೂ ಪ್ರವೇಶ ಮಾಡಿವಂತಿರಲಿಲ್ಲ. ಸಾವಿರಾರು ಕಪಿಸೈನಿಕರ ಕಾವಲು, ಮಹಾಕಪಿಯಾದ ‘ದಧಿಮುಖ’ ಎನ್ನುವ ಸುಗ್ರೀವನ ಸೋದರಮಾವ ಆ ವನದ ಕಾವಲುಗಾರ. ರಾಜನಿಗೂ ಅವನ ಪರಿವಾರಕ್ಕೂ ಸೇರಿದ್ದು ಅದು! ಯಾರ ಮನಸ್ಸನ್ನಾದರೂ ಅಪಹರಿಸ್ತಕ್ಕಂತ ಸೌಂದರ್ಯದಿಂದ ಕೂಡಿದ ಮಧುವನ! ಕಪಿಗಳಿಗೆಲ್ಲರಿಗೂ ಆಸೆ, ಯಾರಿಗೂ ಅವಕಾಶವಿಲ್ಲ. ಅಂಥದ್ದು! ಮೇಲಿಂದ ಹಾರುವಾಗ ಕಪಿಗಳ ಕಣ್ಣಿಗೆ ಮಧುವನ ಬಿತ್ತಂತೆ!

ವಿಪರೀತ ಆಸೆಯಾಯಿತಂತೆ ವಾನರೇಂದ್ರನ ಅತ್ಯಂತ ಪ್ರೀತಿಯ ಮಧುವನದ ಮೇಲೆ! ಎಲ್ಲಾ ಕಪಿಗಳು ಸೇರಿ ಅಂಗದನಲ್ಲಿ ಬೇಡಿಕೆ ಇಟ್ಟರಂತೆ, ನಮಗೆ ಆ ಮಧುವನ ಹಾಳು ಮಾಡೋದಕ್ಕೆ ಅವಕಾಶ ಮಾಡಿಕೊಡಬೇಕು ಅಂತ. ಇಲ್ಲದಿದ್ರೆ ಕುಡಿದ ಜೇನು ರುಚಿಯಾಗೋದಿಲ್ಲಾಂತ! ಹಾಗಾಗಿ ಒಂದು ಅವಕಾಶ.. ಆ ಕಾಡಿನೊಳಗಡೆ ನಮ್ಮನ್ನು ಮುಕ್ತವಾಗಿ ಬಿಡಬೇಕು. ಜೇನು ಕುಡಿಯಲು ನಮ್ಮನ್ನು ಬಿಡು ಎಂಬುದಾಗಿ ಎಲ್ಲಾ ಕಪಿಗಳೂ ಸೇರಿ ಅಂಗದನನ್ನು ಬೇಡಿಕೊಂಡಿದ್ದಾರೆ.

ಅಂಗದನಿಗೆ ಜಿಜ್ಞಾಸೆ! ಯುವರಾಜ, ಅಧಿಕಾರಿಯವನು ಕಪಿಗಳಿಗೆ. ಎಲ್ಲ ಕಪಿಗಳೂ ಸೇರಿ ಅವನಲ್ಲಿ‌ ಕಾನೂನುಭಂಗಕ್ಕೆ ಅವಕಾಶ ಕೇಳ್ತಾ ಇದ್ದಾರೆ. ಅಂಗದ ಏನು ಹೇಳಬೇಕು? ಇಲ್ಲ ಅಂತ ಹೇಳಲಿಕ್ಕೆ ಸಂದರ್ಭ ಯಾವುದು? ದೊಡ್ಡ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಬೇಸರ ಮಾಡೋದಕ್ಕೆ ಇಷ್ಟ ಇಲ್ಲ ಅಂಗದನಿಗೆ. ಕೊಡಬೇಕು‌ ಅಂದರೆ ಸುಗ್ರೀವನದ್ದದು. ಜಾಂಬವಂತನನ್ನು ಮತ್ತು ಹಿರಿಯ ಕಪಿಗಳನ್ನು ಕೇಳಿದನಂತೆ. ಅದಕ್ಕೆ‌ ಅವರು ಹೇಳಿದರಂತೆ, ‘ ಕಾರ್ಯಸಿದ್ಧಿ ಮಾಡಿಕೊಂಡು ಬಂದಿದ್ದಾರೆ. ಅವರು ಕೇಳಿದ್ದಕ್ಕೆ ಇಲ್ಲ ಅನ್ನಬಾರದು‌ ನಾವು, ಕೊಟ್ಟುಬಿಡು ಅವಕಾಶವನ್ನ’. ಅಂಗದ ಅನುಮತಿ‌ ಕೊಟ್ಟನಂತೆ ಕಪಿಗಳಿಗೆಲ್ಲ. ಸಂತೋಷವಾಯಿತು! ಯಾವಾಗಿನ ಕನಸು ಅವರಿಗೆ, ಹನುಮಂತನ ಕೃಪೆಯಿಂದ ನನಸಾಗ್ತಾ ಇದೆ! ಅಲ್ಲೇ ಒಮ್ಮೆ ದೊಡ್ಡ ಸಂತೋಷದ ನೃತ್ಯ ಮಾಡಿದರಂತೆ ಕೂಡಲೆ. ಆಮೇಲೆ ಸಂತೋಷದ ಆಚರಣೆ ಆರಂಭವಾಯಿತು. ಕೆಲವರು ಹಾಡಲಿಕ್ಕೆ ಶುರುಮಾಡಿದರಂತೆ, ಕೆಲವರು ಸಂತೋಷ ತಡ್ಕೊಳ್ಳಲಿಕ್ಕಾಗದೇ ‘ದೊಪ್ಪನೆ’ ಬಿದ್ದುಬಿಟ್ಟರಂತೆ. ಕೆಲವರಂತೂ ತರಹೇವಾರು ನೃತ್ಯ ಮಾಡ್ತಾ ಇದ್ದಾರೆ. ಕೆಲವರು ಬಿದ್ದು ಬಿದ್ದು ನಗ್ತಾ ಇದ್ದಾರಂತೆ. ಕೆಲವರು ಓಡಿದರಂತೆ, ಕೆಲವರು ಹಾರಿದರಂತೆ, ಕೆಲವರು ಏನೇನೋ ಹಲುಬಿದರಂತೆ. ಸ್ವಾತಂತ್ರ್ಯದ ಫಲಿತಾಂಶ ಇದೆಲ್ಲ! ಸುಗ್ರೀವನ ಬಳಿ ಹೋದ ಮೇಲೆ ಉಸಿರು ಬಿಗಿ ಹಿಡಿದಿಟ್ಟುಕೊಂಡಿರಬೇಕು, ಹಾಗಾಗಿ. ಕೆಲವರು ಕೆಲವರನ್ನ ಬಂದು ತಬ್ಬಿಕೊಂಡರಂತೆ, ಕೆಲವರು ಕೆಲವರನ್ನ ಬಂದು ನೂಕಿದರಂತೆ. ಇನ್ನು ಕೆಲವರು ಪರಸ್ಪರ ಪ್ರೀತಿಯಿಂದ ಕಚ್ಚಾಡಿಕೊಂಡರಂತೆ. ಇನ್ನು ಕೆಲವರು ಕೆಲವರನ್ನ ತುಂಬ ಪ್ರೀತಿ ಮಾಡಿದರಂತೆ. ಮರದಿಂದ ಮರಕ್ಕೆ ಹಾರುವವರೇನು! ಶಿಖರದಿಂದ ಶಿಖರಕ್ಕೆ ಹಾರುವವರೇನು! ಕೆಲವರು ಮರದ ತುದಿಯಿಂದ ಕೆಳಗೆ ಹಾರುವವರು, ಕೆಲವರು ನೆಲದಿಂದ ಮರದ ತುದಿಗೆ ಹಾರುವವರು. ಹೀಗೆ ತರಹೇವಾರಿ ಆಟಗಳು ನಡೀತಾ ಇವೆ ಅಲ್ಲಿ. ಇನ್ನು, ಒಬ್ಬ ಹಾಡ್ತಾ ಇದ್ದಾನೆ; ಅವನ ಮುಂದೆ ಹೋಗಿ ನಗೋದಂತೆ! ಆ ನಗುವವನ ಮುಂದೆ ನಿತ್ತುಕೊಂಡು ಒಬ್ಬ ಜೋರಾಗಿ ಅಳೋದಂತೆ, ಅವನ ಮುಂದೆ ಬಂದು ಇನ್ನೊಬ್ಬ ಜೋರಾಗಿ ಕೂಗಿಕೊಳ್ಳೋದಂತೆ. ಆ ಕೂಗಿದವನನ್ನು ಮತ್ತೊಬ್ಬ ಬಂದು ನೂಕೋದು. ಏನೇನು ಆಟವೋ!?

ಇಡೀ ಕಪಿಸೈನ್ಯವು ಸಮಾಕುಲವಾಯಿತು ಮಧುಪಾನದ ವಿಷಯದಿಂದಾಗಿ. ಇಡೀ ಕಪಿಸೇನೆಯಲ್ಲಿ ಅಮಲೇರಿದವನು ಯಾರೂ ಇಲ್ಲ, ತೃಪ್ತಿಯಾಗದವನು ಕೂಡ ಯಾರೂ ಇಲ್ಲ. ದೊಡ್ಡವರು, ಸಣ್ಣವರೆಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಜೇನು ಕುಡಿದವರೇ. ಯಾರೂ ಬಾಕಿ ಇಲ್ಲ! ಅಂಥಾ ಸಂತರ್ಪಣೆ‌ ಕಪಿಗಳಿಗೆ, ಕಾರ್ಯಸಿದ್ಧಿಯನ್ನು ಮಾಡಿಕೊಂಡು ಬಂದವರಿಗೆ.

ಆದರೆ, ಆ ದಧಿಮಖನಿಗೆ ಪಾಪ! ಏನಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಭಯಂಕರವಾದ ಆಕ್ರಮಣವಾಗಿದೆ ಮಧುವನದ ಮೇಲೆ. ಯಾರು ಏನೂಂತ ಇಲ್ಲ! ನೋಡಿದರೆ, ಎಲ್ಲಾ‌ ನಮ್ಮವರೆ. ಸುಗ್ರೀವನ ಎಲ್ಲಾ ಪ್ರಮುಖ ಪದಾಧಿಕಾರಿಗಳು ಬಂದು ಕಾನೂನುಭಂಗ ಮಾಡ್ತಾ ಇದ್ದಾರೆ. ಸುಗ್ರೀವ ರಕ್ಷಿತ ವನವನ್ನು ಹಾಳು ಮಾಡ್ತಾ ಇದ್ದಾರೆ, ಜೇನು ಪೂರ್ತಿ ಕುಡೀತಾ ಇದ್ದಾರೆ. ಮಾತ್ರವಲ್ಲ, ಎಲೆಗಳು, ಹೂವು, ಹಣ್ಣು, ಏನೊಂದೂ ಉಳಿಸಿಲ್ಲವಂತೆ. ಕೋಪ ಬಂತಂತೆ ದಧಿಮುಖನಿಗೆ. ನನ್ನ ಕಾವಲಲ್ಲಿ ಇರತಕ್ಕಂತ ವನವನ್ನು ಮುಟ್ಟಲಿಕ್ಕೆ ಯಾರು ಹೇಳಿದ್ದು ನಿಮಗೆ? ಯಾಕಂದ್ರೆ, ಹಿಂದೆ ಸುಗ್ರೀವನ ಬೆಂಬಲವಿದೆ ಅವನಿಗೆ. ಅವನು ಹೇಳಿದ್ದಕ್ಕೆ ಭಾರೀ ಬೆಲೆ ಇದೆ ಸುಗ್ರೀವನಲ್ಲಿ, ಹಾಗೇ ಶಕ್ತಿ ಕೂಡ ಇದೆ ಸ್ವಲ್ಪ. ಹಾಗಾಗಿ, ಕೋಪಗೊಂಡು ಆ ಕಪಿಗಳನ್ನು ತಡೆದನಂತೆ ದಧಿಮುಖ, ಮಧುವನವನ್ನು ಯಾರೂ ಭಂಗ ಮಾಡಬಾರದು ಅಂತ.

ಅವರು ಬಿಡ್ತಾರಾ? ಸರೀ ಬೈದರಂತೆ ದಧಿಮುಖನಿಗೆ. ಸ್ವಲ್ಪ ವಯಸ್ಸೂ ಆಗಿದೆ ಅವನಿಗೆ ಪಾಪ. ಆಗ ಅವನೂ ಒಂದು ಕಠೋರ ನಿಶ್ಚಯ ಮಾಡ್ತಾನೆ, ಇವರು ಸುಮ್ನೆ ಪ್ರೀತಿ ಮಾತಿಗೆ ಬಗ್ಗುವವರಲ್ಲಂತ ಹೇಳಿ ಕೆಲವರನ್ನ ಚೆನ್ನಾಗಿ ಝಾಡಿಸಿದನಂತೆ, ಕೆಲವರಿಗೆ ಪೆಟ್ಟೇ ಕೊಟ್ಟನಂತೆ, ಕೆಲವರು ಗಟ್ಟಿಯಿರುವವರ ಬಳಿ ಹೋಗಿ ಜಗಳಾಡಿದನಂತೆ, ಕೆಲವರು ಅಂಗದನವರ ಬಳಿ ಹೋಗಿ ಸಮಾಧಾನದಿಂದ.. ‘ಈ ಕೆಲಸವನ್ನು ಮಾಡಬಹುದಾ ನೀವು? ಸುಗ್ರೀವನಿಗೆ ಗೊತ್ತಾದರೆ ಏನು ಗತಿ?’ ಹಾಗೇ ತಡಿಯುವ ಪ್ರಯತ್ನವನ್ನು ಮಾಡ್ತಾ ಇದ್ದಾನೆ ದಧಿಮುಖ.

ಅವರಿಗೆ ಮೊದಲನೆಯದಾಗಿ ಒಂದು ಅಪರೂಪದ ಅವಕಾಶ ಪ್ರಾಪ್ತವಾಗಿದೆ, ಕಳೆದುಕೊಳ್ಳಲಿಕ್ಕೆ ತಯಾರಿಲ್ಲ, ಎರಡನೆಯದಾಗಿ ಅಮಲು ಬೇರೆ ಏರಿದೆ ಸ್ವಲ್ಪ! ಅಂಗದನೇ ಒಪ್ಪಿಗೆ ಕೊಟ್ಟಾಗಿದೆ, ಇವನು ಯಾರು ತಡೆಯುವವನು? ಹಾಗಾಗಿ, ಭಯವನ್ನೇ ಬಿಟ್ಟು ಪೆಟ್ಟು ಹಾಕಿದರಂತೆ ದಧಿಮುಖನಿಗೆ. ಮತ್ತೆ ಎಳೆದಾಡಿದರಂತೆ. ಅವನಿಗೆ ವಯಸ್ಸಾಗಿದೆ, ರಾಜನಿಗೆ ಹತ್ತಿರ, ವನಪಾಲಕ ಅವನು ಎಂಬ ಎಲ್ಲವನ್ನೂ ಮರೆತು ಅವನಿಗೆ ಕೈಮಾಡಿದ್ದಾರೆ ಮತ್ತು ಅವನನ್ನು ಎಳೆದಾಡ್ತಾ ಇದ್ದಾರೆ. ಅಷ್ಟಕ್ಕೇ ಬಿಟ್ಟರಾ?

ಕೆಲವರು ಕಚ್ಚಿದರು, ಕೆಲವರು ಒದ್ದರು, ಕಣ್ಣ ಮುಂದೆಯೇ ವನವನ್ನು ನಾಶ ಮಾಡಿದರು. ಈತನ್ಮಧ್ಯೆ ಜೇನು ಕುಡಿಯುತ್ತಿರುವ ಕಪಿಗಳನ್ನು ತಡೆಯುತ್ತಿರುವವರು ಯಾರು ಎಂದು ಹನುಮಂತನಿಗೆ ಸಿಟ್ಟು ಬಂದಿತು. ಆಗ ಹನುಮಂತನು ನಿಶ್ಚಿಂತೆಯಿಂದ ಜೇನನ್ನು ಕುಡಿಯಿರಿ, ಯಾರಾದರೂ ತಂಟೆಗೆ ಬಂದರೆ ನಾನು ನಾನು ನೋಡಿಕೊಳ್ಳುತ್ತೇನೆ ಎಂದು ಎಲ್ಲ ವಾನರರಿಗೆ ಹೇಳಿದನು. ಹನಮಂತನು ಹೇಳಿದ್ದು ಅಂಗದನಿಗೆ ಕೇಳಿಸಿತು. ಲಂಕೆಗೆ ಹಾರಿ, ಸೀತೆಯನ್ನು ನೋಡಿ ಕಾರ್ಯಸಾಧನೆಯನ್ನು ಹನುಮಂತನು ಮಾಡಿದ್ದಾನೆ, ಆದ್ದರಿಂದ ಅವನು ಈಗ ಅಕಾರ್ಯವನ್ನು ಹೇಳಿದರೂ ಮಾಡಬೇಕು, ಈಗ ಇಂತಹ ಒಳ್ಳೆಯ ಕೆಲಸವನ್ನು ಹೇಳುತ್ತಿದ್ದಾನೆ, ನಾವೆಲ್ಲರೂ ಮಾಡೋಣ ಎಂದು ಪ್ರಸನ್ನನಾದ ಅಂಗದನು ಹೇಳಿದನು. ಇವರೀರ್ವರ ಮಾತನ್ನು ಕೇಳುತ್ತಿದ್ದಂತೆಯೇ ಎಲ್ಲ ಕಪಿಗಳು ಹರ್ಷೋದ್ಗಾರ ಮಾಡಿ ಗೌರವವನ್ನು ಕೊಟ್ಟು, ‘ಸಾಧು ಸಾಧು’ ಎಂದು ಕೂಗಿದರು. ನಂತರ ಎಲ್ಲ ಕಪಿಗಳು ಅಂಗದನಿಗೆ ಗೌರವ ಸಲ್ಲಿಸಿ ನದಿ ಹರಿಯುವಂತೆ, ಪ್ರವಾಹ ಹೋದಂತೆ ಮಧುವನಕ್ಕೆ ಹೋದರು. ಮಧುವನವನ್ನು ಪ್ರವೇಶಿಸಿದ ಕಪಿಗಳು ವನಪಾಲಕರಿಗೆ ಹೊಡೆದು, ನೂಕಾಡಿ, ಬಿಳಿಸಿ “ಸೀತಾ ಮಾತಾ ಕಿ ಜೈ” , “ಜೈ ಶ್ರೀರಾಮ್” ಎಂದು ಘೋಷಣೆ ಮಾಡಿದರು.

ವಾನರರೆಲ್ಲರೂ ರಸವತ್ತಾದ ಹಣ್ಣನ್ನು ತಿಂದು ಜೇನನ್ನು ಸೇವಿಸಿದರು. ತಿನ್ನುವಾಗ ಬಂದ ವನಪಾಲಕರಿಗೆ ಸರಿಯಾಗಿ ಹೊಡೆದರು. ಕೆಲವು ವಾನರರು ದೊಡ್ಡ ದೊಡ್ಡ, ದ್ರೋಣದ ಜೇನು ಗೂಡನ್ನು ಎತ್ತಿಕೊಂಡು ( 1 ದ್ರೋಣ =10kg) ಹಿಂಡಿ ಬಾಯಿಯೊಳಗೆ ಹಾಕಿಕೊಂಡರು. ಒಂದೊಂದು ಜೇನುಗೂಡನ್ನು ಒಬ್ಬೊಬ್ಬರೇ ಸೇವಿಸಿದರು. ಜೇನು ಕಚ್ಚಿದರು ಬಿಡದೆ ಸೇವಿಸಿದರು. ಕೆಲವರು ದೊಡ್ಡ ಗೂಡಿಗೆ ಹೋಗಿ ಗುದ್ದಿ, ರಂಧ್ರ ಮಾಡಿದರು. ಹೊಟ್ಟೆ ತುಂಬಿದ ಕೆಲವರು ಪ್ರಪಂಚದಲ್ಲೇ ಅಪರೂಪದ ಜೇನನ್ನು ಚೆಲ್ಲಿದರು. ಕೆಲವರು ಜೇನನ್ನು ಕೈಗೆ ಹಾಕಿಕೊಂಡು ಇನ್ನೊಬ್ಬರಿಗೆ ಎರಚಿದರು. ಜೇನುಗೂಡಿನ ಸತ್ತಿಯಿಂದ ಕೆಲವರು ಹೊಡೆದಾಡಿಕೊಂಡರು. ಜೇನು ಹೆಚ್ಚಾಗಿ ಕೆಲವರಿಗೆ ನಿಲ್ಲಲು ಆಗುತ್ತಿರಲಿಲ್ಲ, ಮರದ ಕೊಂಬೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತುಕೊಂಡಿದ್ದರು. ಇನ್ನು ಕೆಲವರು ನೆಲದ ಮೇಲೆ ದಪ್ಪನೆಯ ಎಲೆ ಹಾಸಿ ಮಲಗಿ, ಗೊರಕೆ ಹೊಡೆಯುತ್ತಿದ್ದರು. ಹೀಗೆ ವಾನರರೆಲ್ಲರೂ ಉನ್ಮತ್ತರಾದರು, ಮದುಮತ್ತರಾದರು. ಅಮಲಿನಲ್ಲಿ ಮಾಡುವಂತೆ ಒಬ್ಬರನ್ನೊಬ್ಬರು ನೂಕಾಡುತ್ತಾ ಬಿದ್ದರು, ಇನ್ನು ಕೆಲವರು ನಡೆಯಲು ಸಾಧ್ಯವಾಗದೇ ಬಿದ್ದರು, ಕೆಲವರು ಸಿಂಹನಾದ ಮಾಡಿದರೆ ಮತ್ತೆ ಕೆಲವರು ಹಕ್ಕಿಗಳಂತೆ ಕೂಗಿದರು. ಕೆಲವರು ಒಳ್ಳೆಯ ನಿದ್ದೆ ಮಾಡಿದರು. ಕೆಲವರು ಚೇಷ್ಟೆ ಮಾಡಿ ನಕ್ಕಿದರು, ಅದನ್ನು ನೋಡಿ ಮತ್ತೆ ಚೇಷ್ಟೆ ಮಾಡುವವರು ಇದ್ದರು. ಕೆಲವರು ಏನೋ ಹೇಳಿ ಏನೋ ಮಾಡಿದರು, ಇನ್ನು ಕೆಲವರಿಗೆ ಅರ್ಥವಾಗದೇ ಏನೇನೋ ತಿಳಿದುಕೊಂಡರು.

ಯಾರೂ ಸಹ ತಾವು ಮಾಡಿದ್ದನ್ನು ಹೇಳುವ ಸ್ಥಿತಿಯಲ್ಲಿ ಅಥವಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆ ಸಮಯದಲ್ಲಿ ವನಪಾಲಕರು ಮತ್ತೆ ಬಂದರು. ವನಪಾಲಕರಿಗೆ ಇದು ಅವರ ಜೀವನದ ಪ್ರಶ್ನೆಯಾಗಿತ್ತು. ವನಪಾಲಕರು ಬಂದಾಗ ವಾನರರು ಅವರನ್ನು ಹೊಡೆದು, ಇನ್ನು ಕೆಲವರ ಕಾಲನ್ನು ಹಿಡಿದು ತಿರುಗಿಸಿ ಆಕಾಶದ ಎತ್ತರಕ್ಕೆ ಹಾರಿಸಿದರು. ಇನ್ನು ಕೆಲವು ವನಪಾಲಕರ ಎರಡು ಕಿವಿಯನ್ನು ಹಿಡಿದುಕೊಂಡು ಹಿಂದೆ ಬಗ್ಗಿಸಿ ಆಕಾಶವನ್ನು ತೋರಿಸಿದರು. ಇನ್ನು ಕೆಲವರನ್ನು ಬಗ್ಗಿಸಿ ಹಿಂಭಾಗವನ್ನು ತೋರಿಸಿ ಕಪಿಗಳು ಚೇಷ್ಟೆ ಮಾಡಿದರು. ಹೀಗೆ ಎಲ್ಲ ತರಹದ ಕಪಿಚೇಷ್ಟೆಗಳನ್ನು ಮಾಡಿ ಅವರನ್ನೆಲ್ಲ ಓಡಿಸಿದಾಗ ದಧಿಮುಖನ ಬಳಿ ದೂರು ಕೊಟ್ಟರು. ಸಂಪೂರ್ಣ ಧ್ವಂಸವಾಗಿದೆ, ನಮಗೂ ಹೀಗೆಲ್ಲಾ ಮಾಡಿದರು ಎಂದಾಗ ಏನು ಭಯಪಡಬೇಡಿ, ನಾನಿದ್ದೇನೆ, ನಾವೆಲ್ಲ ಸೇರಿ ಹೋಗಿ ಆಕ್ರಮಣ ಮಾಡೋಣ, ಸರಿಯಾಗಿ ದಂಡಿಸಿ ದಾರಿಗೆ ತರೋಣ ಎಂದು ದಧಿಮುಖನು ಹೇಳಿದನು.

ಆಗ ವನಪಾಲಕರ ಸೈನ್ಯವೇ ಕಪಿಗಳ ಮೇಲೆ ದಾಳಿ ಮಾಡಲು ಹೊರಟಿತು. ಮಧ್ಯದಲ್ಲಿ ಮರವನ್ನೇ ಕಿತ್ತು ಆಯುಧವನ್ನಾಗಿ ಕೈಯಲ್ಲಿ ಹಿಡಿದುಕೊಂಡ ದಧಿಮುಖ, ಸುತ್ತಮುತ್ತ ಬಂಡೆಗಳನ್ನು ಕೈಯಲ್ಲಿ ಹಿಡಿದುಕೊಂಡ ವನಪಾಲಕರೆಲ್ಲರು ಅಲ್ಲಿಗೆ ಬಂದರು. ವನಪಾಲಕರಿಗೆ ಹೋಗಲು ಧೈರ್ಯವಿರಲಿಲ್ಲ. ಆದರೆ ಅಧಿಪತಿಯ ಅಪ್ಪಣೆಯ ಮೇರೆಗೆ ಮತ್ತು ಅವನು ಜೊತೆಯಲ್ಲಿ ಬಂದಿದ್ದರಿಂದ ಅಪ್ಪಣೆಯನ್ನು ಪಾಲಿಸಲು ವೃಕ್ಷ ಮತ್ತು ಬಂಡೆಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಮುನ್ನುಗ್ಗಿದರು. ವಾನರರು ಮರದ ಮೇಲೆ , ಕೆಳಗೆ ಎಲ್ಲ ಮಲಗಿದ್ದರು. ದಕ್ಷಿಣ ದಿಕ್ಕಿನಿಂದ ಬಂದ ಕಪಿಗಳಿಗೆ ವನಪಾಲಕರನ್ನು ನೋಡಿದಾಕ್ಷಣ ಸಿಟ್ಟು ಮಿತಿ ಮೀರಿತು. ಹನುಮಂತನೇ ಮುಂದಾಗಿ ಅವನ ಹಿಂದೆ ಎಲ್ಲ ಕಪಿಗಳು ಬಂದರು. ಆಗ ಅಂಗದನು ಅಮಲಿನಲ್ಲಿ ಅಜ್ಜ ಎಂದು ನೋಡದೆ ಎರಡು ಕೈಯಲ್ಲಿ ದಧಿಮುಖನಿಗೆ ಬಡಿದು, ಮೇಲಕ್ಕೆ ಎತ್ತಿ ನೆಲಕ್ಕೆ ಉರುಳಿಸಿ ಹೊರಳಾಡಿಸಿದನು. ದಧಿಮುಖನಿಗೆ ಕೈ–ಕಾಲುಗಳೆಲ್ಲ ಪೆಟ್ಟಾಗಿ ಸರಿಯಾಗಿ ನೋವಾಯಿತು. ಮೈಯೆಲ್ಲ ರಕ್ತದಿಂದ ಕೂಡಿದ ದಧಿಮುಖನು ಎಚ್ಚರ ತಪ್ಪಿದನು. ಅಂಗದ ಮತ್ತು ಹನುಮಂತ ಬೇರೆ ಕಡೆಗೆ ಹೋಗಿ ತಮ್ಮ ಕೆಲಸವನ್ನು ಮುಂದುವರೆಸಿದರು. ಸ್ವಲ್ಪ ಸಮಯದ ನಂತರ ದಧಿಮುಖನಿಗೆ ಎಚ್ಚರವಾಯಿತು. ಎಚ್ಚರವಾದ ಮೇಲೆ ದೊಣ್ಣೆ ತೆಗೆದುಕೊಂಡು ಮತ್ತೆ ದಧಿಮುಖನು ಹೊರಟ. ಈ ಬಾರಿ ದಧಿಮುಖ ಹೇಗೋ ಬಚಾವಾಗಿ ಬಂದು ಸೇವಕರಿಗೆಲ್ಲ ಇನ್ನು ಈ ಕೆಲಸ ಬೇಡ, ನಾವು ಸಾಯುತ್ತೇವೆ, ಸುಗ್ರೀವನ ಬಳಿ ಹೋಗಿ ದೂರು ಕೊಡೋಣ, ಹತ್ತಿರದವರಿಗೆಲ್ಲ ಹೇಳಿ ಸುಗ್ರೀವನ ಬಳಿ ಇವರ ಮೇಲೆ ಸರಿಯಾದ ದೂರನ್ನು ಕೊಡೋಣ, ಎಲ್ಲ ವಿಷಯವನ್ನು ಅಂಗದನ ಮೇಲೆ ಹಾಕೋಣ ಎಂದು ಹೇಳಿದನು.

ವಾಲಿಯ ಮಗ ಎಂದು ಅಂಗದನ ಮೇಲೆ ದಧಿಮುಖನಿಗೆ ಮೊದಲೇ ದ್ವೇಷವಿತ್ತು. ಪಿತಾಮಹರ ಕಾಲದಿಂದ ರಕ್ಷಿತವಾಗಿರುವಂತಹ, ದೇವತೆಗಳು ಮುಟ್ಟದ ಮಧುವನ್ನು ಹಾಳು ಮಾಡಿದರಲ್ಲ, ಇವರಿಗೆಲ್ಲ ಸುಗ್ರೀವ ಶಿಕ್ಷೆ ಕೊಡುತ್ತಾನೆ ಎಂದು ತೀರ್ಮಾನ ಮಾಡಿ ಎಲ್ಲ ವನಪಾಲಕರ ಜೊತೆಯಲ್ಲಿ ಸುಗ್ರೀವನಿರುವಲ್ಲಿಗೆ ಹೋದರು. ಮಾಧಕಾಲದಲ್ಲಿ ದಧಿಮುಖ ಶಬ್ದವು ತುಂಬಾ ಪ್ರಸಿದ್ದವಾಗಿತ್ತು. ಯಾರನ್ನಾದರೂ ಚೆನ್ನಾಗಿ ಹೊಡೆದು, ಹೀಯಾಳಿಸಿದಾಗ ಈ ಶಬ್ದವನ್ನು ಬಳಸುತ್ತಿದ್ದರು. ದಧಿಮುಖನು ಎಲ್ಲರ ಜೊತೆಯಲ್ಲಿ ಹೋಗಿ ಸುಗ್ರೀವನನ್ನು ಕಂಡನು. ಸುಗ್ರೀವನು ಕಿಷ್ಕಿಂಧೆಗೆ ಹೋಗಿರಲಿಲ್ಲ. ರಾಮ–ಲಕ್ಷ್ಮಣ, ಸುಗ್ರೀವ ಎಲ್ಲರೂ ಪ್ರಸ್ರವಣ ಪರ್ವತದ ಮೇಲೆ ಒಟ್ಟಿಗೆ ಇದ್ದರು. ಸುಗ್ರೀವನು ಕಪಿಗಳು ಬರುವುದನ್ನೇ ಕಾಯುತ್ತಿದ್ದನು. ರಾಮ–ಲಕ್ಷ್ಮಣ, ಸುಗ್ರೀವನಿರುವಲ್ಲಿ ಹೋಗಿ ಆಕಾಶದಿಂದ ದಧಿಮುಖನು ಕೆಳಗಿಳಿದನು. ದಧಿಮುಖನ ಮುಖ ಪೂರ್ತಿ ಬಾಡಿಹೋಗಿತ್ತು, ಮೈಯೆಲ್ಲ ಪೆಟ್ಟಾಗಿತ್ತು. ತಲೆಯೇ ಮೇಲೆ ಕೈಮುಗಿದುಕೊಂಡು ಹೋಗಿ ಸುಗ್ರೀವನ ಕಾಲಿಗೆ ಬಿದ್ದನು. ಆಗ ಸುಗ್ರೀವನಿಗೆ ಗಾಬರಿಯಾಯಿತು. ನಮ್ಮವರು, ನನ್ನ ಮಾವ! , ಕೈಕಾಲೆಲ್ಲ ಮುರಿದು ರಕ್ತ , ಜೊತೆಗಿರುವ ಕಪಿಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲದಿರುವನ್ನು ಕಂಡ ಸುಗ್ರೀವನು ದಧಿಮುಖನನ್ನು ಪ್ರಶ್ನಿಸಿದನು. ಏನಾಯಿತು.? ಯಾಕೆ ಹೀಗೆಲ್ಲ ಆಯಿತು ಎಂದೆಲ್ಲ ಕೇಳಿದನು. ಸಿಕ್ಕ ಅವಕಾಶನ್ನು ಬಿಡದೆ ಅಂಗದನ ಮೇಲೆ ದಧಿಮುಖನು ಛಾಡಿ ಹೇಳಿದನು.

ಮುಂದೇನಾಯಿತು..? ಸುಗ್ರೀವನ ಪ್ರತಿಕ್ರಿಯೆ ಏನು..?? ಅಂಗದನಿಗೆ ಏನು ಶಿಕ್ಷೆ ಆಯಿತು? ಹನುಮಂತನಿಗೆ ಏನು ಶಿಕ್ಷೆ ಆಯಿತು..? ಉಳಿದ ಕಪಿಗಳಿಗೆ ಏನು ಶಿಕ್ಷೆ ಆಯಿತು ? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments