ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ದೂರಿಲ್ಲದೇ ಬದುಕಿಲ್ಲ. ಕೆಲವೊಮ್ಮೆ ಹೆಚ್ಚು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಕುರುಹು ಏನು ಅಂದರೆ ಹೆಚ್ಚು ದೂರು ಬಂದಿದ್ದು ಎನ್ನುವ ಹಾಗೆ ದೂರುಗಳು ಬರ್ತಾವೆ. ಹಾಗೆಂದ ಮಾತ್ರಕ್ಕೆ ಕಂದಬೇಕಿಲ್ಲ, ಕುಂದಬೇಕಿಲ್ಲ, ಎದೆಗುಂದಬೇಕಿಲ್ಲ. ಯಾಕೆಂದರೆ ಸತ್ಯಕ್ಕೆ ಜಯವಿದೆ ಮತ್ತು ಯಾರಿಗೆ ಯಾವುದು ಯಾವಾಗ ಗೊತ್ತಾಗಬೇಕೋ ಆವಾಗ ಗೊತ್ತಾಗಿಯೇ ಆಗ್ತದೆ. ಹೃದಯ ನಿಶ್ಕಲ್ಮಶವಾಗಿದ್ದರೆ ಚಿಂತೆ ಏನೂ ಇಲ್ಲ. ಅದಲ್ಲದಿದ್ದರೆ ನಿಜವಾಗಿ ಎಷ್ಟು ಒಳ್ಳೆಯ ಮಾತುಗಳು ಬರಬೇಕಿತ್ತು. ಹನುಮಂತನೋ, ಅಂಗದನೋ, ಜಾಂಬವಂತನೋ ಅವರು ಕಪಿರಾಜ್ಯಕ್ಕೆ ಮಾಡಿದ ಸೇವೆ ಬಹಳ ಬಹಳ ಬಹಳ ದೊಡ್ಡದು. ಸುಗ್ರೀವ ಇಲ್ಲಿಯವರೆಗೆ ಹೇಳಿದ್ದಾನೆ; ಯಾರು ಸೀತೆಯನ್ನು ಕಂಡು ಬರ್ತಾನೋ ಅವನು ನನಗೆ ಸಮಾನ. ಅವನು ಸಾವಿರಾರು ಅಪರಾಧಗಳನ್ನು ಮಾಡಿದರೂ ಕೂಡ ಕ್ಷಮಿಸಿ ಬಿಡ್ತೇನೆ. ಶತಾಪರಾಧಗಳನ್ನು ಮಾಡಿದ್ದರೂ ಕೂಡ ಯಾರು ಸೀತೆಯನ್ನು ಕಂಡು ಬರ್ತಾನೋ ಅವನಿಗೆ ಕ್ಷಮೆಯಿದೆ. ಅವನು ವಾನರ ಚಕ್ರವರ್ತಿಗೆ ಸಮ ಎನ್ನಿಸ್ತಾನೆ ಎನ್ನುವಷ್ಟು ದೊಡ್ಡ ಸೇವೆಯನ್ನು ಮಾಡಿ ಬರ್ತಿದಾರೆ ಅವ್ರು, ಬರುವ ಮೊದಲೇ ಅವರ ಮೇಲೆ ದೂರು ಬಂದಿದೆ. ಪ್ರಸ್ರವಣ ಪರ್ವತದ ಶಿಖರದಲ್ಲಿ ರಾಮ ಲಕ್ಷ್ಮಣರೊಡನೆ ಸುಗ್ರೀವನಿದ್ದಾನೆ. ದಕ್ಷಿಣ ದಿಕ್ಕಿಗೆ ಹೋದ ಅಂಗದಾದಿ ವಾನರರ ಪ್ರತೀಕ್ಷೆಯಲ್ಲಿ. ಶುಭದ ಪ್ರತೀಕ್ಷೆಯಲ್ಲಿ, ಒಳ್ಳೆಯ ಸುದ್ದಿ ಬರುತ್ತದೆಯಾ ಎನ್ನುವ ಪ್ರತೀಕ್ಷೆಯಲ್ಲಿ. ಏಕೆಂದರೆ ಅಲ್ಲಿಂದ ಒಳ್ಳೆಯ ಸುದ್ದಿ ಬರದಿದ್ದರೆ ಇನ್ನು ಜೀವನದಲ್ಲಿ ಒಳ್ಳೆಯದು ಅಂತಿಲ್ಲ. ಅವರ ಸ್ಥಿತಿ ಹೇಗಿದೆ ನೋಡಿ; ಪೂರ್ವ ದಿಕ್ಕಿಗೆ ಹೋದವರು ಬರಿಗೈಯಲ್ಲಿ ಮರಳಿದಾರೆ, ಪಶ್ಚಿಮ ದಿಕ್ಕಿನವರು, ಉತ್ತರ ದಿಕ್ಕಿನವರು ಬರಿಗೈಯಲ್ಲಿ ಹಿಂದಿರುಗಿ ಬಂದಿದಾರೆ. ಅವರ್ಯಾರಿಗೂ ಸೀತೆ ಸಿಕ್ಕಿಲ್ಲ. ದಕ್ಷಿಣ ದಿಕ್ಕಿಗೆ ಹೋದವರು ಸಮಯ ಕಳೆದು ಬಹಳ ದಿನಗಳಾದರೂ ಕೂಡ ಬಂದಿಲ್ಲ. ಎಲ್ಲ ಆಶೆ ಅವರಲ್ಲಿ. ಒಂದು ವೇಳೆ ಅವರು ಬರಿಗೈಯಲ್ಲಿ ಬಂದರೆ, ಸುಗ್ರೀವನ ಬದುಕಿನಲ್ಲೂ ಏನೂ ಸ್ವಾರಸ್ಯವಿಲ್ಲ ಯಾಕೆಂದರೆ ರಾಮನ ಬದುಕೇ ಸಪ್ಪೆಯಾಗಿಬಿಡ್ತದೆ. ರಾಮನ ಬದುಕೇ ಅರ್ಥಹೀನವಾಗಿಬಿಡ್ತದೆ. ಏಕೆಂದರೆ ರಾಮನ ಬದುಕಿನ ಅರ್ಥ ಸೀತೆ, ರಾಮನ ಬದುಕಿನ ಜೀವನಾಡಿ ಸೀತೆ, ರಾಮನ ಬದುಕಿನ ಕಾಂತಿ ಸೀತೆ. ಹಾಗಾಗಿ ಸೀತೆಯ ಸುದ್ದಿ ಬರದೇ ಇದ್ದರೆ ರಾಮನ ಬದುಕಿಗೆ ಅರ್ಥವಿಲ್ಲದಂತೆ ಆಗಿಬಿಡ್ತದೆ.

ಹೀಗಾಗಿ ದಕ್ಷಿಣ ದಿಕ್ಕಿನ ವಾನರರ ಪ್ರತೀಕ್ಷೆಯಲ್ಲಿ ಸುಗ್ರೀವ, ರಾಮ-ಲಕ್ಷ್ಮಣರಿದ್ದಾಗ, ಆಕಾಶದಿಂದ ಹಾರಿಬಂದು ಸುಗ್ರೀವನ ಪಾದಗಳಲ್ಲಿ ದೊಪ್ಪನೆ ಬಂದು ಬಿದ್ದಿದಾನೆ ದಧಿಮುಖ. ವೃದ್ಧನಾದರೂ ಕೂಡ ಗಟ್ಟಿಯಿದ್ದಾನೆ ಅವನು. ಒಂದು ಕಾಲದಲ್ಲಿ ತುಂಬಾ ಪರಾಕ್ರಮಗಳನ್ನ ಮೆರೆದವನು, ಬಹಳ ಹೆಸರು ತಗೊಂಡಿದಾನೆ. ಅವನು ಮಧುವನದ ಸಂರಕ್ಷಕ. ಒಡನಾಡಿಗಳೊಡಗೂಡಿ ಭಾರೀ ವೇಗದಲ್ಲಿ ಆಕಾಶದಿಂದ ಬಂದು ಇಳಿದ ಎನ್ನುವುದಕ್ಕಿಂತ ಬಿದ್ದ ಸುಗ್ರೀವನ ಪಾದದಲ್ಲಿ. ಸುಗ್ರೀವನಿಗೆ ಉದ್ವೇಗವಾಯಿತು. ಯಾಕೆಂದರೆ, ಭಾರೀ ಒಂದು ಚಿಂತೆಯಲ್ಲಿ ಕೂತಿದ್ದಾಗ ಪಕ್ಕದಲ್ಲಿ ಒಂದು ಸೂಜಿ ಬಿದ್ದರೂ ಏನೋ ಗಡಿಬಿಡಿಯಾಗ್ತದೆ. ಅದರಲ್ಲೂ ದೊರೆಗಳಿಗೆ ಹೀಗೆ ಇದ್ದಕಿದ್ದಂತೆ ಬಂದು ಕೈಕಾಲಿಗೆ ಬಿದ್ದರೆ ಒಂದು ಸಾರಿ ಗಾಬರಿಯಾಗುವಂಥದ್ದೇ. ಪಕ್ಕದ ರಾಜ್ಯದ ರಾಜ ಧಾಳಿ ಮಾಡಿದ್ನಾ? ಏನಾದರೂ ಆಪತ್ತಾಯಿತಾ? ಎನ್ನುವಂತಹ ಶಂಕೆ ಬರುವಂಥದ್ದು ತುಂಬಾ ಸಹಜ. ಹಾಗಾಗಿಯೇ ಹಾಗಾಗಿ ಕಂಡೊಡನೆಯೇ ಸುಗ್ರೀವನು ಉದ್ವಿಗ್ನ ಹೃದಯನಾದ.

ಕೂಡಲೇ ಈ ಮಾತನ್ನು ದಧಿಮುಖನಿಗೆ ಹೇಳ್ತಾನೆ: ಏಳು ಏಳು! ಯಾಕೆ ನೀನು ನನ್ನ ಕಾಲಿಗೆ ಬಿದ್ದೆ? ಇದೋ ನಿನಗೆ ಅಭಯವನ್ನು ಕೊಟ್ಟಿದ್ದೇನೆ. ನಿನಗೆಲ್ಲಿಂದ ಭಯ? ಹೇಳು. ಎಲ್ಲಿಂದ ತೊಂದರೆ ಬಂತು? ನಿನಗೇ ತೊಂದರೆ ಬಂತೋ? ಅಥವಾ ವಾನರ ಸಾಮ್ರಾಜ್ಯಕ್ಕೆ ತೊಂದರೆ ಬಂತೋ? ಸರ್ವಮೇವ ಅಭಿದೀಯತಾಂ – ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳು ಎಂದಾಗ ವಿಶ್ವಾಸ ಬಂತು ದಧಿಮುಖನಿಗೆ. ಯಾಕೆಂದರೆ ದೂರು ಕೊಡಬೇಕಾಗಿರುವುದು ಯುವರಾಜನ ಮೇಲೆ. ಎರಡನೇ ಸ್ಥಾನದಲ್ಲಿರುವವನ ಮೇಲೆ ಒಂದನೆ ಸ್ಥಾನದಲ್ಲಿರುವವನಿಗೆ ದೂರು ಕೊಡಬೇಕು ಅಂದ್ರೆ ಯಾರಿಗಾದ್ರೂ ಕೂಡ ಎಂಟೆದೆ ಬಂಟ ಆಗಿರಬೇಕು ಎನ್ನುವಂತಹ ಸಂದರ್ಭ ಅದು. ಹಾಗಾಗಿ ಯಾವುದಕ್ಕೂ ಮೊದಲು ಸುಗ್ರೀವನಿಂದ ಅಭಯ ತಗೊಂಡ. ವಿಶ್ವಾಸ ಬಂದಮೇಲೆ ಸುಗ್ರೀವನಿಗೆ ದಧಿಮುಖ ವಿಷಯ ಹೇಳ್ತಾನೆ; ನಿನ್ನ ತಂದೆ ಋಕ್ಷರಜಸ್ಸಿನ ಕಾಲದಲ್ಲಿಯೂ ಆಗದಿರುವಂತಹ ಅಕಾರ್ಯ, ವಾಲಿಯ ಕಾಲದಲ್ಲೂ ನಡೆಯದೇ ಇರತಕ್ಕಂತಹ ಒಂದು ಅಕಾರ್ಯ, ನಿನ್ನ ಕಾಲದಲ್ಲಿಯೂ ನಡೆದಿಲ್ಲ ಈವರೆಗೂ, ಅಂತಹದ್ದೊಂದು ಅನಾಹುತ ನಡೆದುಹೋಗಿದೆ. ನೀವ್ಯಾರೂ ಒಪ್ಪಿರಲಿಲ್ಲ. ಋಕ್ಷರಜಸ್ಸಾಗಲಿ, ವಾಲಿಯಾಗಲಿ, ನೀನಾಗಲಿ. ಋಕ್ಷರಜಸ್ಸು ಅಂದ್ರೆ ವಾಲಿ ಸುಗ್ರೀವರ ತಂದೆ. ಅವನೇ ತಂದೆ ಅವನೇ ತಾಯಿ. ವಿಚಿತ್ರವಾಗಿರುವ ಕಥೆ. ಎರಡೂ ಪಾತ್ರವನ್ನು ಅವನೇ ವಹಿಸ್ತಾನೆ. ಜನ್ಮಕೊಟ್ಟ ತಂದೆ ಅನ್ನಬಹುದು. ಕಾರಣಾಂತರದಿಂದ ಸ್ತ್ರೀ ಆಗ್ತಾನೆ ಅವನು. ಒಂದಿಷ್ಟು ಕಾಲ ಸ್ತ್ರೀಯಾಗಿದ್ದ ಅವನು. ಆವಾಗ ಹುಟ್ಟಿದವರು ಇವರಿಬ್ಬರು. ಆಮೇಲೆ ಯಥಾಪ್ರಕಾರ ಪುರುಷನಾಗಿ ವಾನರ ಚಕ್ರವರ್ತಿಯಾಗಿರ್ತಾನೆ ಅವ್ನು. ಅವನೂ ಒಪ್ತಿರಲಿಲ್ಲ, ವಾಲಿಯೂ ಒಪ್ತಿರಲಿಲ್ಲ. ನೀನಂತೂ ಅವರಿಬ್ಬರಿಗಿಂತ ಬಿಗಿ. ಇಂಥದ್ದು ಮಾಡಬಹುದಾ ಎಂದಾಗ ಸುಗ್ರೀವ ಏನು ಮಾಡಿದ್ರು ಹೇಳು ಅಂತ ಕೇಳ್ತಾನೆ.

ಏನು ಹೇಳೋದು? ಮಧುವನ ಇನ್ನಿಲ್ಲ. ಮಧುವನ ಇನ್ನು ಸ್ಮೃತಿ ಮಾತ್ರ. ನಾಮಾವಶೇಷ. ಯಾರೋ ರಾಕ್ಷಸರಾಗಲಿ, ಮನುಷ್ಯರಾಗಲಿ ಇನ್ಯಾರೋ ಬಂದು ಧಾಳಿ ಮಾಡಿದ್ರೆ ವಿಷಯ ಬೇರೆ ಇತ್ತು. ಇದು ಅದಲ್ಲ. ನಮ್ಮವರೇ ಬಂದು ಮಧುವನವನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ. ಜೇನು ಏನೂ ಉಳಿದಿಲ್ಲ. ತಿಂದು, ಚೆಲ್ಲಿ, ಒಬ್ಬರ ಮೇಲೊಬ್ಬರು ಚೆಲ್ಲಾಡಿ ಏನೇನು ಮಾಡಬಾರದೋ ಎಲ್ಲ ಮಾಡಿಬಿಟ್ಟಿದಾರೆ. ನೀವೇನು ಮಾಡ್ತಿದ್ರಿ ಆ ಸಮಯದಲ್ಲಿ ಎನ್ನುವ ಪ್ರಶ್ನೆ ಬಂದರೆ ಅಂತ ಹೇಳ್ತಾನೆ; ಈ ನನ್ನ ಸೈನಿಕರು ಹೋಗಿ ಬೆದರಿಸಿದಾರೆ. ಹಾಗೆ ಮಾಡಬಾರದು ನೀವು, ಮಧುವನ ಧ್ವಂಸ ಮಾಡುವಂತಿಲ್ಲ, ಎಂದು ಬೆದರಿಸಿದ್ದಕ್ಕೆ ಅವರು ಲೆಕ್ಕಕ್ಕೇ ತಗೊಂಡಿಲ್ಲ. ನಮ್ಮನ್ನು ಪರಿಗಣಿಸಿಲ್ಲ. ತಿಂದಿದ್ದು, ಕುಡಿದಿದ್ದೆ ಕೆಲಸ ಮಧುವನದಲ್ಲಿ. ಮಾತ್ರವಲ್ಲ, ಅಪಮಾನ ಮಾಡುವ ಹಾಗೆ ತಿಂದುಳಿದಿದ್ದನ್ನು ಚೆಲ್ಲಿದಾರೆ. ಅಂಥ ಅಪರೂಪದ ಜೇನನ್ನು, ಪ್ರಪಂಚದಲ್ಲಿ ಎಲ್ಲಿಯೂ ಸಿಗದಿರುವಂತಹ ಜೇನನ್ನು ತಿಂದಿದ್ದು ಸಾಲದೇ ಚೆಲ್ಲಿದಾರೆ. ನಮ್ಮವರು ತಡೆಯಲಿಕ್ಕೆ ಹೋದರೆ ಹುಬ್ಬುಗಳನ್ನ ಕುಣಿಸ್ತಾರೆ. ಆಗ ನಮ್ಮ ವನಪಾಲಕರಿಗೆಲ್ಲ ಕೋಪ ಬಂತು. ಅವರು ಹೋಗಿ ಇನ್ನೂ ಗಂಭೀರವಾಗಿ ತಡೆಯುವ ಪ್ರಯತ್ನವನ್ನು ಮಾಡಿದಾಗ ಜೀವಮಾನದಲ್ಲಿ ಆಗದೇ ಇರುವಷ್ಟು ಅವಮಾನವನ್ನ ಮಾಡಿದಾರೆ, ಅಷ್ಟು ಪೆಟ್ಟು ಕೊಟ್ಟಿದಾರೆ. ಏನಾಗಿದೆ ಇದಕ್ಕೂ ಮುಂಚೆ ಅಂತ ಗೊತ್ತಾಗೋಹಾಗಿದಾರೆ ಎಲ್ಲರೂ ಕೂಡ.

ಏನ್ಮಾಡೋದು ಅವರ ಸಂಖ್ಯೆ ಬಹಳ ಇತ್ತು. ನಮ್ಮದು ದೊಡ್ಡ ಸಂಖ್ಯೆ ಇರಲಿಲ್ಲ. ದಧಿಮುಖ ಹೇಳೋದು. ಸುಗ್ರೀವನ ಸೈನ್ಯದ ಮೂರನೇ ಒಂದು ಭಾಗ ದಕ್ಷಿಣ ದಿಕ್ಕಿಗೆ ಹೋಗಿದೆ. ಕಣ್ಣು ಕೆಂಪು ಮಾಡ್ತಾರೆ. ಜೇನು ಕದ್ದು ಕುಡಿದಿದ್ದಲ್ಲದೇ ನಮಗೆ ಕಣ್ಣು ಕೆಂಪು ಮಾಡ್ತಾರೆ. ಕೆಲವರನ್ನು ದೂರದವರೆಗೆ ಓಡಿಸ್ಕೊಂಡು ಹೋಗಿದಾರೆ. ಕೆಲವರಿಗೆ ಕೈಯಿಂದ ಹೊಡೆದಿದ್ದಾರೆ, ಕೆಲವರಿಗೆ ಮಂಡಿಯಿಂದ ತಿವಿದಿದ್ದಾರೆ. ಈ ವಾನರರನ್ನು ಮಧುವನದಲ್ಲಿ ಮನಸ್ಸಿಗೆ ಬಂದಹಾಗೆ ಸೆಳೆದಾಡಿದಾರೆ. ದೇವಮಾರ್ಗವನ್ನೂ ತೋರಿಸಿದಾರೆ. ಕೆಲವರನ್ನು ಎತ್ತಿ ಆಕಾಶಕ್ಕೆ ಎಸೆದಿದ್ದಾರೆ. ಕಿವಿ ಹಿಡಿದು ಮುಖ ಬಗ್ಗಿಸಿ ಆಕಾಶ ತೋರ್ಸಿದಾರೆ. ಅದಕ್ಕಿಂತ ಮೊದಲು ಸರೀ ಗುದ್ದಿ ಅವರನ್ನ ವಶಕ್ಕೆ ತಂದು ಅವರು ಪೂರ್ತಿ ಸೋತಮೇಲೆ ಕಿವಿ ಹಿಡಿದು ಬಗ್ಗಿಸಿದಾರೆ. ಹೀಗೆಲ್ಲಾ ಮಾಡಿದಾರೆ. ಇದೆಲ್ಲಾ ಏನು? ನಮ್ಮ ನಾಥನಾಗಿ ನೀನಿರಲಾಗಿ ಇಷ್ಟು ದುರವಸ್ಥೆ ನಮಗೆ. ಸುಗ್ರೀವನಂತಹ ರಾಜ. ಅವನ ಆಜ್ಞೆ ಅತ್ಯುಗ್ರ- ಸುಗ್ರೀವಶ್ಚ ಉಗ್ರಶಾಸನಃ. ಅವನ ಅಪ್ಪಣೆಯನ್ನು ಯಾರೂ ಮೀರುವಂತಿಲ್ಲ. ಸುಗ್ರೀವನ ರಾಜ್ಯದಲ್ಲಿ ಕಾನೂನು ಭಂಗದ ಮಾತೇ ಇಲ್ಲ. ಕಾನೂನು ಭಂಗ ಮಾಡಿದವನ ಪ್ರಾಣ ಭಂಗವೇ ಆಗ್ತದೆ. ಹಾಗಾಗಿ ಅಷ್ಟು ಕಠೋರವಾದ ಶಿಕ್ಷೆ ಕೊಡುವುದರಿಂದ ಯಾರೂ ನಿಯಮವನ್ನು ಮೀರಿ ನಡೆಯುವಂತಿಲ್ಲ. ಕಪಿರಾಜ್ಯವೇ ಆದರೂ ಕೂಡ ಎಲ್ಲರೂ ಶಾಸನವನ್ನು ಪಾಲನೆ ಮಾಡಲೇಬೇಕು.

ಹಾಗಿರುವಾಗ ಶೂರರಾದ ಈ ನಿನ್ನ ಸೇವಕರು ಸೈನಿಕರು ಕಪಿಗಳಿಗೆ ಇಂತಹ ಒಂದು ದುರ್ಗತಿಯನ್ನು ಮಾಡಿದಾರೆ. ಮಧುವನವನ್ನು ಮನಸ್ಸಿಗೆ ಬಂದಹಾಗೆ ಭೋಗಿಸಿದಾರೆ. ಇದಿಷ್ಟು ಹೇಳಿ ಸುಗ್ರೀವನ ಮುಖ ನೋಡಿದ್ನಂತೆ ದಧಿಮುಖ. ಈಗ ಬರ್ತದೆ ಸುಗ್ರೀವಾಜ್ಞೆ ಅಂತ ಅವನ ನಿರೀಕ್ಷೆ. ಸುಗ್ರೀವನ ಮುಖ ಅರಳಿತಂತೆ. ಸುಗ್ರೀವನಿಗೆ ಇದ್ದಕಿದ್ದಂತೆ ಒಂದು ನಿರಾಳವಾದ ನಗು ಬಂತಂತೆ. ಲಕ್ಷ್ಮಣ ಗಮನಿಸ್ತಾ ಇದಾನೆ. ಲಕ್ಷ್ಮಣನಿಗೆ ಅರ್ಥವಾಗಿಲ್ಲ. ಅರ್ಥವಾಗಿಲ್ಲ ಅನ್ನೋದಕ್ಕೆ ಎರಡು ಕಾರಣ. ಒಂದು ಇವರ ಭಾಷೆ ಬೇರೆ. ಇನ್ನೊಂದು, ಪಾಪ ದಧಿಮುಖ ನಖಶಿಖಾಂತ ಗಾಯ ಮಾಡ್ಕೊಂಡು, ಕೈಕಾಲು ಮುರ್ಕೊಂಡು ಬಂದಿದಾನೆ. ಕಾಲಿಗೆ ಬಿದ್ದು ಕಣ್ಣೀರು ಹಾಕಿ, ಬೇಡಿಕೊಂಡ್ರೆ, ಇವನು ಭಾರೀ ಖುಷಿಯಾದನಲ್ಲ ಸುಗ್ರೀವ. ಒಂದಕ್ಕೊಂದು ಏನು ಸಂಬಂಧ ಅಂತ. ಭಾಷೆ ಅರ್ಥಾಗಿಲ್ಲ, ಕೊನೇ ಪಕ್ಷ ಚರ್ಯೆಯಿಂದ ಅರ್ಥ ಮಾಡ್ಕೊಳೋಣ ಅಂದ್ರೆ ಇವನದ್ದೇ ಸೇವಕ, ವನಪಾಲಕ. ಸೋದರಮಾವ ಸಂಬಂಧದಲ್ಲಿ. ಹತ್ತಿರದವನು. ಅಂಥವನು ದುರವಸ್ಥೆಯಲ್ಲಿ ಬಂದು ಕಾಲು ಹಿಡಿದು ಕಷ್ಟ ಹೇಳಿಕೊಂಡ್ರೆ ಯಾಕೆ ಸುಗ್ರೀವನಿಗೆ ಮುಖ ಅರಳಿದ್ದು? ಯಾಕೆ ಖುಷಿಯಾಗಿದ್ದು? ಅಂತ ಲಕ್ಷ್ಮಣನಿಗೆ ಸಮಸ್ಯೆ ಇರುವಂಥದ್ದು.

ಲಕ್ಷ್ಮಣ ಸುಗ್ರೀವನನ್ನು ಕೇಳ್ತಾನೆ. ದೊರೆಯೇ, ಈ ದಧಿಮುಖನು ಯಾಕೆ ಬಂದ ಇಲ್ಲಿಗೆ? ದುಃಖಿತನಾಗಿ ನಿನ್ನ ಬಳಿ ಹೇಳಿದ್ದೇನು? ಎಂದಾಗ ಸುಗ್ರೀವ ಹೇಳ್ತಾನೆ. ದಧಿಮುಖ ಅಂದ್ರೆ ಮಧುರವಾದ ಮಾತುಗಳನ್ನಾಡುವ ಬೆಲ್ಲದ ಬಾಯವನು. ಎಂಥಾ ಸಿಹಿ ಸುದ್ದಿ ಹೇಳಿದಾನೆ. ವೀರನಾದ ದಧಿಮುಖನು ಹೇಳಿದ್ದಿಷ್ಟು; ದಕ್ಷಿಣ ದಿಕ್ಕನ್ನೆ ಹುಡುಕಿ ಬಂದಿರತಕ್ಕಂತಹ ಅಂಗದನೇ ಮೊದಲಾದ ವಾನರರು ನನ್ನ ಖಾಸಗಿ ರಕ್ಷಿತ ಮಧುವನವನ್ನು ಮನಬಂದಂತೆ ಭೋಗಿಸಿದ್ದಾರೆ. ನಿನ್ನ ಮುಖ ಯಾಕೆ ಅರಳಿದ್ದು ಅಂತ ಪ್ರಶ್ನೆ ಇರೋದು. ಅದಕ್ಕೆ ಹೇಳೋದು ಒಬ್ಬ ರಾಜ ಎಷ್ಟು ಸೂಕ್ಷ್ಮ ಇರಬೇಕು ಅಂತ. ಮಧುವನ ಹೋಯ್ತು ಅಂತ ಯೋಚ್ನೆ ಮಾಡೋದಲ್ಲ, ಯಾಕೆ ಹೀಗೆ ಮಾಡಿದ್ರು ಅವರು ಅಂತ ಯೋಚನೆ ಮಾಡ್ಲಿಕ್ಕೆ ಇರುವಂಥದ್ದು. ಸುಗ್ರೀವನ ತರ್ಕ ಬಹಳ ಸರಳ ಇದೆ. ಅಂಗದಾದಿಗಳು ಯಾವ ಕೆಲಸಕ್ಕಾಗಿ ಹೋಗಿದ್ದರೋ ಆ ಕೆಲಸ ಆಗದೇ ಇದ್ದರೆ ಈ ಕೆಲಸ ಮಾಡೋದಿಲ್ಲ ಅವರು. ದಕ್ಷಿಣ ದಿಕ್ಕಿಗೆ ಹೋದ ವಾನರರು ತಮ್ಮ ಕಾರ್ಯವನ್ನು ಸಾಧಿಸದೇ ಇದ್ದರೆ ಯಾವುದೇ ಕಾರಣಕ್ಕೂ ಬರೋದಿಲ್ಲ. ಮಧುವನ ಭಂಗದ ಕೆಲಸವನ್ನಂತೂ ಮಾಡೋದೇ ಇಲ್ಲ. ಮಧುವನಭಂಗಕ್ಕೆ ಒಂದೇ ಅರ್ಥ. ಅವರು ಹೋದ ಕೆಲಸ ಆಗಿದೆ. ರಾಜತ್ವ ಅಂದರೆ ಇದು. ಒಂದು ಘಟನೆಯನ್ನ ಹೇಗೆ ಅರ್ಥ ಮಾಡ್ಬೇಕು ಅನ್ನೋದು ಅವರಿಗೆ ಗೊತ್ತಿರಬೇಕು. ಮಧುವನ ಭಂಗ ಆಯ್ತು ಅಂದ್ರೆ ಆ ಘಟನೆಗೆ ಅರ್ಥ ಏನು? ವಿವರಣೆ ಏನು? ಆ ಘಟನೆಗೆ ಇರತಕ್ಕಂತಹ ಆಯಾಮಗಳೇನು? ಅಂತ ಯೋಚನೆ ಮಾಡ್ಬೇಕು. ಸುಗ್ರೀವನನ್ನ ನೋಡಿ; ಸಾಮಾನ್ಯವಾಗಿ ಬೇರೆ ದೊರೆಗಳಾಗಿದ್ರೆ ಒಂದು ವಿಚಾರಣೆಯಾದ ಮೇಲೆ ವಿಷಯ ಗೊತ್ತಾಗ್ತಿತ್ತು. ಆದರೆ ಸೂಕ್ಷ್ಮಮತಿ ಸುಗ್ರೀವನಿಗೆ ಹೇಳುವ ಮೊದಲೇ ಗೊತ್ತಾಯಿತು. ಕೆಲಸ ಆಗಿರ್ಬೇಕು. ಅಲ್ಲಿಗೆ ಹೋಗಿ ಬಂದವರು ಮಧುವನದ ಮೇಲೆ ಧಾಳಿ ಮಾಡ್ತಾರೆ, ಮಧುವನವನ್ನ ಧ್ವಂಸ ಮಾಡ್ತಾರೆ. ಇಡೀ ಮಧುವನವನ್ನು ಖರ್ಚು ಮಾಡೋವಷ್ಟು ಏನಾದರೂ ಆಗಿರ್ಬೇಕಲ್ಲ. ಆ ರೀತಿ ಹುಮ್ಮಸ್ಸು, ಆ ರೀತಿ ಉತ್ಸಾಹ, ಅಂಥಾ ಸಂತೋಷ, ಕಾನೂನು ಭಂಗದ ಭಯವಿಲ್ಲ. ಹೇಗೆ ಅದು? ಅಂಗದಾದಿಗಳು ವನವನ್ನು ನಾಶ ಮಾಡಿದಾರೆ ಅಂದ್ರೆ ವಾನರರು ತಮ್ಮ ಕಾರ್ಯವನ್ನು ಸಾಧನೆ ಮಾಡಿದಾರೆ. ಇಷ್ಟೇ ಅಲ್ಲ ಸುಗ್ರೀವನ ಸೂಕ್ಷ್ಮಗ್ರಾಹಿತ್ವ. ಮುಂದುವರೆದು ಹೇಳ್ತಾನೆ ದೃಷ್ಟಾ ದೇವೀ ನ ಸಂದೇಹಃ – ಸೀತೆಯನ್ನು ನೋಡಿದಾರೆ ಸಂದೇಹವಿಲ್ಲ. ಬೇರೆ ಯಾರೋ ಅಲ್ಲ. ಹನುಮಂತನೇ. ಸುಗ್ರೀವನೇನು ಜೊತೆಗೆ ಹೋಗಿಲ್ಲ. ಹಿಂದೆ ಮುಂದೆ ಏನೂ ಗೊತ್ತಿಲ್ಲ ಸುಗ್ರೀವನಿಗೆ. ಬೇರೆಯವರಲ್ಲ ಹನುಮಂತನೇ ಆಗಿರ್ಬೇಕು. ಯಾಕಂದ್ರೆ ನಾಲ್ಕು ದಿಕ್ಕಿಗೆ ಹೋದವರಲ್ಲಿ ದಕ್ಷಿಣ ದಿಕ್ಕಿಗೆ ಹೋದವರಿಗೆ ಮಾತ್ರವೇ ಸೀತೆಯನ್ನು ಹುಡುಕುವ ಯೋಗ್ಯತೆ ಇದ್ದಿದ್ದು. ಅವರಲ್ಲಿಯೂ ಕೂಡ ಹನುಮಂತನಿಗೆ ಈ ಅರ್ಹತೆ. ಯಾಕೆ ಅಂದ್ರೆ ‘ಹನುಮಂತನಲ್ಲಿ ಕಾರ್ಯಸಿದ್ಧಿ ನೆಲೆಸಿದೆ’. ಇದನ್ನ ನೋಡೋದಿಕ್ಕೆ ಚರ್ಮಚಕ್ಷುವಲ್ಲ, ಜ್ಞಾನಚಕ್ಷು ಬೇಕಾಗ್ತದೆ.

ಹನುಮನಲ್ಲಿ ಕಾರ್ಯಸಿದ್ಧಿ ಇದೆ. ಅವನು ಹೆಜ್ಜೆಯಿಟ್ಟನೆಂದರೆ ಆ ಕೆಲಸ ಆಗಬೇಕು ಅಂತಲೇ. ಪ್ರಶಸ್ತವಾದ ಮತಿಯುಳ್ಳವನು ಹನುಮಂತ. ಸರಿಯಾದ ಪ್ರಯತ್ನ, ಪರಾಕ್ರಮ, ವಿದ್ಯೆ ಎಲ್ಲವೂ ಹನುಮಂತನಲ್ಲಿದೆ. ಅವನೇ ಕಂಡಿರಬೇಕು. ಮಾತ್ರವಲ್ಲ, ಯಾವ ಸೇನೆಗೆ ಜಾಂಬವಂತ ನೇತಾರನೋ, ಜೊತೆಯಲ್ಲಿ ಅಂಗದನೂ ಇದ್ದಾನೋ, ಯಾವ ಸೇನೆಯಲ್ಲಿ ಹನುಮಂತನಿದ್ದಾನೋ ಆ ಸೇನೆ ವಿಫಲವಾಗಲು ಸಾಧ್ಯವಿಲ್ಲ. ಅದು ಕೊಟ್ಟ ಕಾರ್ಯವನ್ನು ಪೂರೈಸಲೇಬೇಕು, ಸಂದೇಹವಿಲ್ಲ. ಈ ಮೂವರೂ ಒಟ್ಟಿಗಿದ್ದಾರೆಂದರೆ ಆ ಕೆಲಸ ಆಗಲೇ ಬೇಕು. ಮತ್ತದನ್ನೇ ಹೇಳುತ್ತಾನೆ. ಅಂಗದ ಪ್ರಮುಖರು ಮಧುವನವನ್ನು ಧ್ವಂಸಮಾಡಿದರಂತೆ, ಇವರಿಗೆಲ್ಲಾ ಪೆಟ್ಟು ಕೊಟ್ಟರಂತೆ, ಮೊಳಕಾಲನ್ನು ತಿವಿದರಂತೆ, ಈ ಮಧುರವಾದ ವಿಷಯವನ್ನು ಹೇಳಲಿಕ್ಕೆ ದಧಿಮುಖ ಬಂದಿದ್ದು ಎಂದು. ದಧಿಮುಖನಿಗೆ ಹೇಗಾಗಿರಬೇಡ! ಕೆಲವೊಮ್ಮೆ ದೂರುಕೊಡಲು ಹೋಗಿ ಹೀಗೆಲ್ಲಾ ಆಗುವುದಿದೆ. ಇವನು ಪ್ರಖ್ಯಾತನಾದ ದಧಿಮುಖ ಎಂದು, ಪುನಃ ಹೇಳುತ್ತಾನೆ ಸುಗ್ರೀವ ‘ನೋಡು ಸೌಮಿತ್ರಿ, ನಿಜವನ್ನು ಹೇಳುತ್ತೇನೆ ನಿನಗೆ. ಸೀತೆಯನ್ನು ವಾನರರು ಕಂಡಿದ್ದಾರೆ. ಅದರ ಲಕ್ಷಣವೇ ಮಧುವನದ ಮಧುಪಾನ. ಸೀತೆಯನ್ನು ಕಾಣದೇ ಮಧುವನವನ್ನು ವಾನರರು ಧ್ವಂಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ವನಕ್ಕೆ ವರವಿದೆ. ಈ ವಾನರ ಚಕ್ರವರ್ತಿಗಳ ರಕ್ಷಣೆಯಿದೆ. ಅದನ್ನು ಮುಟ್ಟಲು ಸಾಧ್ಯವಿಲ್ಲ’ ಎಂದಾಗ ರಾಮಲಕ್ಷ್ಮಣರು ವರ್ಣನಾತೀತವಾದ ಆನಂದವನ್ನು ಅನುಭವಿಸಿದರು. ಸುಗ್ರೀವನ ಆ ವಾಣಿಯು ರಾಮಲಕ್ಷ್ಮಣರ ಕಿವಿಗೆ ಅಮೃತದಂತೆ ಹಿತ. ರಾಮನು ಅತಿಶಯವಾಗ ಸಂತೋಷಪಟ್ಟನು, ಜೊತೆಗೆ ಲಕ್ಷ್ಮಣನೂ ಕೂಡ.

ದಧಿಮುಖನಿಗೆ ಸುಗ್ರೀವನು ಉತ್ತರಿಸಿದ. ‘ಅವರು ಮಧುವನವನ್ನು ಧ್ವಂಸ ಮಾಡಿದ್ದಾರಾ? ಪೂರ್ತಿ ಮಧುವನ್ನು ಕುಡಿದಿದ್ದಾರಾ? ಕಾಡಿನಲ್ಲಿ ಹಣ್ಣು-ಹೂವು,ಎಲೆ ಯಾವುದೂ ಇಲ್ಲವಾ? ಸಂತೋಷವಾಗಿದೆ. ಅವರು ತಿಂದಿದ್ದಕ್ಕೆ ,ಚೇಷ್ಟೆ ಮಾಡಿದ್ದಕ್ಕೆ ಸಂತೋಷವಾಗಿದೆ’. ಮುಂದಿನದು ರಾಜನೀತಿಯ ಮಾತು. ‘ಕಾರ್ಯಸಾಧನೆಯನ್ನು ಮಾಡಿಬಂದ ಸೇವಕರು ಇಂಥದ್ದನ್ನು ಮಾಡಿದರೆ ನಾವದನ್ನು ಒಪ್ಪಿಕೊಳ್ಳಬೇಕು. ದೊಡ್ಡದ್ದನ್ನು ಸಾಧಿಸಿಕೊಟ್ಟವರಲ್ಲಿ ಸಣ್ಣ ವಿಷಯಕ್ಕೆ ಬೇಸರ ಮಾಡಿಕೊಳ್ಳುವಂತಿಲ್ಲ’. ಹನುಮಂತನು ಮೈನಾಕನಲ್ಲಿ ವಿಶ್ರಾಂತಿಯನ್ನು ಪಡೆಯದೇ ಅವಸರವಾಗಿ ಬಂದು, ರಾಮನ ಬಳಿ ಹೋಗದೇ ಇಲ್ಲಿ ಮಧುವನದಲ್ಲಿ ‘ನೀವು ಜೇನು ಕುಡಿಯಿರಿ ನಾನು ನೋಡಿಕೊಳ್ಳುತ್ತೇನೆ’ ಎನ್ನುತ್ತಾನೆಂದರೆ ಅದು ತತ್ವ. ಕಾರ್ಯಕರ್ತರು, ಸೈನ್ಯವನ್ನು ಸಂತೋಷವಾಗಿಟ್ಟಿರಬೇಕು. ಇದು ರಾಜನೀತಿ. ‘ಸಂತೋಷಪಡಲಿ ಅವರು. ನಾನು ಅನುಭವಿಸಬೇಕಾಗಿತ್ತು ಮಧುವನವನ್ನು, ಈಗ ಅವರು ನನ್ನ ಸಮಾನರು’. ಸುಗ್ರೀವನು ಮೊದಲೇ ಹೇಳಿದ್ದ ಈ ಮಾತು ಕಪಿಗಳಿಗೆ ನೆನಪಿದ್ದಿರಬೇಕು. ಹಾಗಾಗಿ ಈ ಕೆಲಸ ಮಾಡಿದ್ದಾರೆ. ‘ಹಾಗಾಗಿ ಹನುಮಂತನೇ ಮೊದಲಾದ ವಾನರರಿಗೆ ಸುಗ್ರೀವ ನಿಮ್ಮನ್ನು ಕಾಣಬಯಸಿದ್ದಾನೆ ಎಂದು ಹೇಳು. ಹೇಗೂ ಮಧುವನದಲ್ಲಿ ಎಲ್ಲಾ ಮುಗಿದಿರಬೇಕು, ಬರಲು ಹೇಳು. ನನಗೂ ಮತ್ತು ರಾಮಲಕ್ಷ್ಮಣರಿಗೂ ದಕ್ಷಿಣ ದಿಕ್ಕಿಗೆ ಹೋದ ವಾನರರ ಸೀತೆಯನ್ನು ಹುಡುಕುವ ಪ್ರಯತ್ನವನ್ನು ತಿಳಿಯುವ ಕುತೂಹಲವಿದೆ. ಅಲ್ಲಿ ನಡೆದ ಘಟನೆಗಳನ್ನು, ಅದರ ವಿವರವನ್ನು ತಿಳಿಯುವ ಬಯಕೆಯಿದೆ’. ಎಂದು ದಧಿಮುಖನನ್ನು ಕಳುಹಿಸಿಕೊಟ್ಟ.

ರಾಮ-ಲಕ್ಷ್ಮಣರು ತುಂಬಾ ಸಂತೋಷಪಟ್ಟಿದ್ದಾರೆ. ಅವರ ಕಣ್ಣುಗಳಲ್ಲಿ ಸಂತೋಷವು ವ್ಯಕ್ತವಾಗುತ್ತಿದೆ. ಈಗಲೇ ಅವರಿಗೆ ಕಾರ್ಯಸಿದ್ಧಿಯಾದಂತಹ ಅನುಭವವಿದೆ. ಅವರನ್ನು ಕಾಣುತ್ತಾನೆ ವಾನರರಾಜ. ಅವನಿಗೂ ಖುಷಿ. ಎಷ್ಟೋ ದಿನಗಳ ಬಳಿಕ ರಾಮ-ಲಕ್ಷ್ಮಣರ ಮುಖದಲ್ಲಿ ಆ ಬೆಳಕನ್ನು ಕಂಡ. ಹಾಗಾಗಿ ಅವನಿಗೆ ಸಂತೋಷ. ತನ್ನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಾನೆ. ಅವನ ಅಂಗಾಂಗಗಳು ಕಾರ್ಯಸಿದ್ಧಿಯ ಸೂಚನೆಯನ್ನು ಕೊಡುತ್ತಿದ್ದಾವೆ. ಅವನ ದೇಹಭಾಗಗಳಲ್ಲಿ ಸಂತೋಷವು ತುಂಬಿ ಬರುತ್ತಿದೆ. ದೇಹದಲ್ಲಿ ಸುನಿಮಿತ್ತಗಳು ಆಗುತ್ತಿವೆ.

ಅತ್ತ ದಧಿಮುಖ ಅಂಗದಾದಿಗಳಿದ್ದಲ್ಲಿ ಹೋದನು. ಅವನಿಗೂ ಸಂತೋಷವಾಗಿತ್ತು. ಸೀತಾದರ್ಶನದ ಕಾರ್ಯವಾಗಿದೆ ಎಂದರೆ ರಾಜ್ಯಕ್ಕೇ ಶುಭ. ರಾಮ-ಲಕ್ಷ್ಮಣ ಮತ್ತು ಸುಗ್ರೀವರಿಗೆ ಅಭಿವಾದನ ಮಾಡಿ ಆಕಾಶಕ್ಕೆ ನೆಗೆದನು. ಪ್ಲವಗ ಎಂದೇ ಕರೆಯುತ್ತಾರೆ. ವಾಲಿಗೆ ಉತ್ತರ ಕೊಡುವಾಗ ರಾಮ ಆ ಮಾತನ್ನು ಬಳಸುತ್ತಾನೆ. ‘ಸತ್ಪುರುಷರ ಧರ್ಮವು ಸೂಕ್ಷ್ಮ. ಸುಲಭವಾಗಿ ತಿಳಿಯುವುದಲ್ಲ. ನಿನಗೇನು ಗೊತ್ತು ಪ್ಲವಂಗಮ?’ ಎಂದು. ಹಾರಿಕೊಂಡು ಹೋಗುವವನಿಗೆ ಭೂಮಿಯಲ್ಲಾಗುವುದು ತಿಳಿಯುವುದು ಹೇಗೆ? ಎಂಬ ಧ್ವನಿ ಅದಕ್ಕೆ. ಅವರಿಗೆ ಹಾರುವುದೇ ನಡಿಗೆ. ಹಾರಿಕೊಂಡು ಮಧುವನಕ್ಕೆ ಬಂದರೆ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಕಪಿಗಳೆಲ್ಲಾ ಅಮಲಿಳಿದು ಎದ್ದು ಕುಳಿತಿದ್ದಾರೆ. ಮಧುಜಲವನ್ನು ಮೂತ್ರದ ಮೂಲಕ ವಿಸರ್ಜಿಸುತ್ತಿದ್ದಾರೆ. ಇಲ್ಲೊಂದು ಆಯುರ್ವೇದದ ಸೂಕ್ಷ್ಮವಿದೆ. ವಾಗ್ಭಟ ಏನು ಹೇಳುತ್ತಾನೆಂದರೆ ಅನುಪಾನ ಮಾಡಿದರೆ ನಂತರದಲ್ಲಿ ನೀರು ಕುಡಿಯಬೇಕು. ಈ ಕಪಿಗಳು ನೀರು ಕುಡಿದಿದ್ದಾರೆ. ಅಂದರೆ ಜೇನು ಜೀರ್ಣವಾಯಿತು ಎಂದು. ಹಾಗಾಗಿ ಅಮಲಿಳಿದಿದೆ. ದಧಿಮುಖ ಕೈಯನ್ನು ಮುಗಿದುಕೊಂಡೇ ಬಂದಿದ್ದಾನೆ. ಹೋಗಿ ಅಂಗದನನ್ನು ಕಂಡನು. ಭಾರೀ ಸಂತೋಷದಲ್ಲಿದ್ದವನಂತೆ ಈ ರೀತಿ ಹೇಳಿದನು. ‘ಸಿಟ್ಟು ಮಾಡಬೇಡ. ಈ ವನಪಾಲಕರೆಲ್ಲಾ ನಿನ್ನನ್ನು ಜೇನು ಸೇವಿಸುವಾಗ ತಡೆದಿರಬೇಕು. ಅವರಿಗೆ ಅಜ್ಞಾನ. ಅದರಿಂದ ಬಂದ ಸಿಟ್ಟು ಅದು. ನಾವ್ಯಾರು? ನೀನು ಈ ವನಕ್ಕೆ ಅಧಿಪತಿ. ಯುವರಾಜ ನೀನು. ನಾವು ಮೊದಲು ಮಾಡಿದ್ದು ಮೂರ್ಖತನ. ಆ ದೋಷವನ್ನು ಕ್ಷಮಿಸು’ ಎಂದು ಕ್ಷಮೆ ಕೇಳಿಕೊಂಡ. ಆಮೇಲೆ ವಿಷಯ ಹೇಳಿದ. ‘ನೀವು ಇಲ್ಲಿಗೆ ಬಂದ ಘಟನೆಯ ಕುರಿತು ನಾವು ಸುಗ್ರೀವನಲ್ಲಿ ಹೇಳಿದಾಗ ಅದನ್ನು ಕೇಳಿ ಸಂತೋಷವಾಯಿತು ಅವನಿಗೆ. ಈ ಕಾಡನ್ನು ಧ್ವಂಸ ಮಾಡಿದ್ದು ತಿಳಿದಾಗ ಮತ್ತೂ ಸಂತೋಷಗೊಂಡ. ಹೀಗೆ ಸಂತುಷ್ಟನಾದ ಸುಗ್ರೀವನು ನಿಮಗೆ ನನ್ನ ಮೂಲಕ ಬೇಗ ಬರಲು ಹೇಳಿ ಕಳುಹಿಸಿದ್ದಾನೆ’. ಕಾಯುತ್ತಿದ್ದೇವೆ ನಾವು, ವಿಷಯ ಏನೆಂದು ತಿಳಿಯಬೇಕು, ಬೇಗ ಬನ್ನಿ ಎಂದು ದೊರೆಯ ಆಜ್ಞೆಯಾಗಿದೆ ಎಂದು ತಿಳಿದಾಗ ಅಂಗದನು ತನ್ನ ಸಂಗಡಿಗರ ಕಡೆ ತಿರುಗಿದನು.

‘ಕಪಿಗಳೇ, ಈ ಸುದ್ದಿ ರಾಮನಿಗೆ ಗೊತ್ತಾದ ಹಾಗಿದೆ. ಹಾಗಾಗಿ ನಾವಿನ್ನು ಇಲ್ಲಿರುವುದು ಸರಿಯಲ್ಲ. ನಾವು ಬೇಗ ಅಲ್ಲಿ ಹೋಗೋಣ. ಚೆನ್ನಾಗಿ ಜೇನು ಕುಡಿದಿರಿ ತಾನೇ? ವಿಶ್ರಾಂತಿಯಾಯಿತು ಅಲ್ಲವೇ? ಕೆಲಸವಾದ ಮೇಲೆ ಇರುವುದು ಬೇಡ. ಎಲ್ಲಿ ನನ್ನ ದೊರೆ ಸುಗ್ರೀವನಿದ್ದಾನೋ ಅಲ್ಲಿ ಹೋಗೋಣ. ನೀವೆಲ್ಲಾ ಹೇಗೆ ಹೇಳುತ್ತೀರೋ ಹಾಗೆ. ನಾನು ನಿಮಗೆ ಅಧೀನ. ಮುಂದಿನ ಹೆಜ್ಜೆ ಏನು ಎಂದು ನೀವೇ ಹೇಳಬೇಕು. ನಾನು ಯುವರಾಜನಾದರೂ ಕಾರ್ಯಸಾಧನೆ ಮಾಡಿದವರು ನೀವು. ನಿಮ್ಮನ್ನು ನಾನು ಬಲಾತ್ಕರಿಸಬಾರದು. ಹಾಗಾಗಿ ನಿಮ್ಮ ಮಾತಿನಂತೆ ನಡೆದುಕೊಳ್ಳುತ್ತೇನೆ’ ಎಂದು ಅವರಿಗೆ ಗೌರವ ಕೊಟ್ಟನು. ಆ ವಾನರ ನಾಯಕರಿಗೆ ಸಂತೋಷವಾಯಿತು. ‘ಪ್ರಭು, ನಿನ್ನ ಬಿಟ್ಟು ಇನ್ಯಾರು ಇಂತಹ ಮಾತನ್ನಾಡುವವರು? ತನ್ನ ಅಧೀನದಲ್ಲಿರುವ ನೌಕರರಿಗೆ ಹೀಗೆ ಯಾರೂ ಹೇಳುವುದಿಲ್ಲ.

ಪ್ರಭುತ್ವ ಇರುವವರು ಮದಮತ್ತರಾಗುತ್ತಾರೆ’. ತಾನೇ ಸರ್ವ ಅಂತ ಭಾವಿಸಿಬಿಡ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಲ್ಲ ತಾನೆ ಎನ್ನುವ ಮಟ್ಟಕ್ಕೆ ಬಂದುಬಿಡ್ತಾರೆ. ಅವರಿಗೆ ಗುರುಗಳು, ಹಿರಿಯರು ಕಿರಿಯರು ಎನ್ನುವ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಐಶ್ವರ್ಯ ಇರುವವರು ದಬ್ಬಾಳಿಕೆಯನ್ನೇ ಮಾಡ್ತಾರೆ. ಅಂತವರು ಇರುವಾಗ ನೀನು ಯುವರಾಜನಾಗಿ ಅದೂ ನಮ್ಮ ತುಕಡಿಗೆ ನಾಯಕನಾಗಿ ನಮ್ಮನ್ನು ಇಷ್ಟು ಗೌರವವಾಗಿ ನಡೆಸಿಕೊಳ್ಳುತ್ತಿದ್ದೆಯಲ್ಲ! ಇದನ್ನು ನೋಡಿದರೆ ಮುಂದಿನ ಶುಭವನ್ನು ಹೇಳ್ತದೆ ಇದು. ನೀನು ಎಂತಹ ಒಳ್ಳೆಯ ಚಕ್ರವರ್ತಿ ಆಗುತ್ತಿ ಎಂಬುದನ್ನು ಈ ಘಟನೆ ಹೇಳ್ತದೆ. ಚಕ್ರವರ್ತಿಯ ಮುಖ್ಯ ಯೋಗ್ಯತೆ ಯಾವುದು? ವಿನಯ, ಸೌಜನ್ಯ. ತನ್ನ ಒಡನಾಡಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಂಥಾದ್ದು. ಅವರ ಮಾತುಗಳನ್ನು ಆಲಿಸಿ ಅವರ ಮನಸ್ಸಿನಿಂದ ಹೂಂ ಗುಟ್ಟುವಂತೆ ಮಾಡಿ ಮುಂದುವರಿಯುವುದಿದೆಯಲ್ಲ ಅದು ನಾಯಕತ್ವದ ಪ್ರಥಮ ಲಕ್ಷಣ. ಹೀಗೆ ಕಾರ್ಯಸಾಧನೆ ಮಾಡಿದ್ದು ಹನುಮಂತನೊಬ್ಬನೇ ಆದರೂ ಕೂಡ ಅದರ ಲಾಭ ಎಲ್ಲರಿಗೂ ಆಗಿದೆ. ಮಧುವನ ಭಂಗ ಮಾಡು ಅಂತ ಹನುಮಂತ ಅಪೇಕ್ಷೆ ಪಡಲಿಲ್ಲ. ಅವನೇನಾದರೂ ಇಷ್ಟು ಜೇನು ಕುಡಿದ್ದಾನೆ ಎನ್ನುವುದು ಎಲ್ಲಿಯಾದರೂ ಇದೆಯಾ? ಅವನು ಕಪಿಗಳಿಗೆ ಹೇಳಿದ್ದಿಷ್ಟೇ, ಯಾರಾದರೂ ಬಂದರೆ ನಾನು ನೋಡಿಕೊಳ್ಳುತ್ತೇನೆ ಅಂತ. ಹೊರಡುವ ಅಂತ ಹೇಳಿ ಅಂಗದ ಆಕಾಶಕ್ಕೆ ನೆಗೆದನು. ಅವನ ಹಿಂದೆ ಎಲ್ಲರೂ ನೆಗೆದರು.

ಉಪ್ಪಿನಕಾಯಿ ಕಥೆ ಕೇಳಿರುತ್ತೀರಿ. ಈ ಕಥೆ ರಾಮಾಯಣದಲ್ಲಿ ಇಲ್ಲ ಇದು. ಜನಕನ ಔತಣ ಕೂಟ ಇತ್ತು. ರಾಮ ಜನಕನಿಗೆ ಬಹಳ ಜಾಗ್ರತೆ ಅಂತ ಹೆಳಿದ್ದ. ಕಪಿಗಳೂ ಅಲ್ಲಿ ಕಪಿ ಚೇಷ್ಟೆ ಮಾಡಬೇಡಿ ಅಂತ ಹೇಳಿದ್ದ. ನನ್ನ ಮರ್ಯಾದೆ ಉಳಿಸಿ. ಯಾರೂ ಹಾರಿ ಕುಣಿದು ಎಲ್ಲ ಮಾಡಬೇಡಿ ಅಂತ ಹೇಳಿದ್ದ. ಸುಮ್ಮನೆ ಊಟ ಮಾಡಿಕೊಂಡು ಬನ್ನಿ ಅಂತ ಹೇಳಿದ್ದ ಹಾಗೇ ಎಲ್ಲ ಕಪಿಗಳು ಸುಮ್ಮನೆ ಊಟ ಮಾಡ್ತಾ ಇದ್ದರಂತೆ. ಮಾವಿನ ಮಿಡಿ ಉಪ್ಪಿನ ಕಾಯಿ ಬಡಿಸಿದ್ದಾರೆ. ಕೊನೆಯಲ್ಲಿ ಕುಳಿತ ಸಣ್ಣ ಕಪಿ ಮಾವಿನ ಮಿಡಿಯನ್ನು ಸ್ವಲ್ಪ ಕಚ್ಚಿತಂತೆ. ಹಾಗೆಯೇ ಸ್ವಲ್ಪ ಒತ್ತಿತು ಆ ಮಿಡಿಯನ್ನ. ಒತ್ತಿದಾಗ ಮಿಡಿಯೊಳಗೆ ಇರುವ ಬೀಜ ಸಟ್ಟನೆ ಹಾರಿತಂತೆ. ಎಲಾ ಬೀಜವೇ ನೀನೇ ಇಷ್ಟು ಹಾರಬೇಕಾದರೆ ನಾನೆಷ್ಟು ಹಾರಬೇಡ ಅಂತ ಆ ಬೀಜ ಎಷ್ಟು ಹಾರಿತ್ತೋ ಅದಕ್ಕಿಂತ ಮೇಲೆ ಹಾರಿ ಮೇಲಿ ಕುಳಿತುಕೊಂಡಿತಂತೆ ಆ ಕಪಿ. ಅದರ ಪಕ್ಕಕ್ಕೆ ಕುಳಿತ ಕಪಿ, ಇದಕ್ಕಿಂತ ಸ್ವಲ್ಪ ದೊಡ್ಡದು. ನೀನು ಹೀಗೆ ಹಾರ್ತಿಯಾ ಅಂತ ಅದೂ ಹಾರಿತು, ಅದರ ಮುಂದಿಂದೂ ಹಾರಿತು, ನಂತರ ಅದರ ಮುಂದಿಂದೂ ಹಾರಿತು. ಕೊನೆ ಕೊನೆಗೆ ಯಾಕೆ ಅಂತ ಗೊತ್ತಿಲ್ಲ ಒಬ್ಬರು ಹಾರಿದ್ದನ್ನು ನೋಡಿ ಇನ್ನೊಬ್ಬರು ಹಾರಿದರು. ಕಡೆಗೆ ಹನುಮಂತ, ಅಂಗದ ಎಲ್ಲರೂ ಹಾರಲಿಕ್ಕೆ ಶುರುಮಾಡಿದರಂತೆ. ಉದಾಹರಣೆ ಕೊಟ್ಟಿದ್ದಾರೆ. ಹಿಂದೆ ಉಪಲಯ ಯಂತ್ರಗಳು ಅಂತ ಇರ್ತಿತ್ತು. ಯಂತ್ರ ಅಂದ್ರೆ ಕೋಟೆಯ ಮೇಲೆ, ಶತ್ರು ಸೇನೆ ಬಂದಾಗ, ಕಲ್ಲುಗಳನ್ನು ಎಸೆಯುವ ಯಂತ್ರಗಳು. ಯಂತ್ರದಿಂದ ಹಾರುವ ಕಲ್ಲುಗಳ ಹಾಗೇ ಎಲ್ಲ ಕಪಿಗಳು ಅಂಗದ ಹಿಂದೆ ಜಿಗಿದರು. ಆ ಶ್ಲೋಕದಲ್ಲಿ ಒಂದು ಸಣ್ಣ ವ್ಯತ್ಯಾಸ ಏನು ಮಾಡಿದ್ದಾರೆ ಅಂದ್ರೆ, ಯಂತ್ರಗಳಿಂದ ಹಾರುವ “ಬೆಟ್ಟ” ಗಳಂತೆ, ಎಲ್ಲ ಕಪಿಗಳು ಆಕಾಶಕ್ಕೆ ಹಾರಿದಾಗ, ಅಂತಹ ದೃಶ್ಯ ಕಂಡಿತಂತೆ.

ಬಿರುಗಾಳಿ ತಳ್ಳುವ ಮೋಡಗಳಂತೆ ರಾಮ ಲಕ್ಷ್ಮಣ ಸುಗ್ರೀವರು ಇರುವ ಕಡೆಗೆ ಬರ್ತಾ ಇದ್ದರಂತೆ. ಕಪಿಗಳೆಲ್ಲ ಬಂದು ತಲುಪುವ ಮೊದಲು, ವಾನರ ರಾಜ, ಸುಗ್ರೀವ ರಾಮ ಲಕ್ಷ್ಮಣರಿಗೆ ಹೇಳಿದನಂತೆ. ದುಃಖಿತ ರಾಮನಿಗೆ ಸುಗ್ರೀವ ಹೇಳ್ತಾನೆ, “ಇನ್ನು ನೀನು ದುಃಖಿಸಬೇಕಿಲ್ಲ. ಇನ್ನು ನೀನು ಸಮಾಧಾನ ಪಡು. ಸೀತೆಯನ್ನು ಕಂಡಿದ್ದಾರೆ ಕಪಿಗಳು. ಅದಕ್ಕೆ ಸಂಶಯವಿಲ್ಲ. ಯಾಕೆಂದ್ರೆ ಸೀತೆಯನ್ನು ನೋಡದೇ ಇದ್ದಿದ್ದರೇ ಅವರು ಬರ್ತಿರಲಿಲ್ಲ. ” ಕಪಿಗಳ ಮನಸ್ಸು ಹೇಗಿದೆ ಅಂತ ಸುಗ್ರೀವನಿಗೂ ಗೊತ್ತು. “ಸಮಯ ಮೀರಿದಾಗ ವಾಪಸ್ ಹೋಗುವುದೇ ಬೇಡ ಅಂತ ಮಾತನಾಡಿದ್ದಾರೆ ಅವರು, ಗೊತ್ತು ಸುಗ್ರೀವನಿಗೆ. ಕೊಟ್ಟ ಅವಧಿಯ ಬಳಿಕ ಕಾರ್ಯವಾಗದಿದ್ದರೆ ಖಂಡಿತವಾಗಿ ಕಪಿಗಳು ಹಿಂದಿರುಗಿ ಬರುತ್ತಿರಲಿಲ್ಲ. ಯುವರಾಜ ಅವನು, ಮಹಾಬಾಹು ಮಹಾ ಬಲಶಾಲಿ. ಸೋತಿದ್ದರೆ ಅಂಗದ ಇಲ್ಲಿ ಬರುತ್ತಿರಲಿಲ್ಲ. ಒಂದು ವೇಳೆ ಬಂದರೂ ಕೂಡ, ಹೇಗೆ ಇರ್ತಿದ್ದರು? ಹುಚ್ಚು ಹಿಡಿದವರಂತೆ, ಮುಖ ಕೆಳಗೆ ಮಾಡಿಕೊಂಡು ಅಂತಹ ಮುಖದಲ್ಲಿ ಬರುತ್ತಿದ್ದರು. ಧ್ವಂಸ ಮಾಡಿ ನಾನು ಬಂದೆ ಅಂತ ಹೇಳುತ್ತಿರಲಿಲ್ಲ. ಮತ್ಯಾರೂ ಅಲ್ಲ ಹನುಮಂತನೇ ನೋಡಿದ್ದು.” ಈ ಕಾರ್ಯ ಯಾರಾದರೂ ಮಾಡಿದ್ದರೇ ಅದು ನಮ್ಮ ಹನುಮಂತನೇ ಬೇರೆ ಯಾರೂ ಅಲ್ಲ. ” ಅಂತ ಸುಗ್ರೀವ ಹೇಳ್ತಾ ಇರುವಾಗಲೇ ಆಕಾಶದಲ್ಲಿ “ಕಿಲ ಕಿಲ” ಅಂತ ಶಬ್ದ ಕೇಳಿತು. ಈ ಕಿಲ ಕಿಲ ಶಬ್ದ ಈಗ ಹುಟ್ಟಿದ್ದಲ್ಲ, ರಾಮಾಯಣದ ಶಬ್ದ ಇದು. ಈ ಕಿಲ ಕಿಲ ಶಬ್ದ ಹತ್ರ ಹತ್ರ ಆಗ್ತಾ ಇದೆ. ಯಾರದ್ದು ಅಂದ್ರೆ? ಹನುಮಂತನ ಸಾಧನೆಯಿಂದ ಸೊಕ್ಕಿದ ಕಪಿಗಳದ್ದು. ಆ ಕಿಲ ಕಿಲ ಶಬ್ದದಿಂದಲೇ ಕಾರ್ಯ ಸಾಧನೆ ಆಗಿದೆ ಅಂತ ರಾಮನಿಗೆ ಹೇಳಿದರು. ಆ ಶಬ್ದವನ್ನು ಕೇಳಿ ಸುಗ್ರೀವನಿಗೆ ರೋಮಾಂಚನವಾಯಿತಂತೆ. ನಿಂತುಕೊಂಡು ತನ್ನ ಬಾಲವನ್ನು ಆಡಿಸಿ ತನ್ನ ಸಂತೋಷವನ್ನು ವ್ಯಕ್ತ ಮಾಡಿದನಂತೆ.

ಅಷ್ಟೊತ್ತಿಗೆ ಎಲ್ಲರೂ ಬಂದರೂ ರಾಮ ದರ್ಶನದ ತವಕದಿಂದ. ಅಂಗದ ಮತ್ತು ಹನುಮಂತ ಮುಂದೆ ಇದ್ರು. ಎಲ್ಲರೂ ರಾಮ ಲಕ್ಷ್ಮಣರ ಮುಂದೆ ಬಂದು ದಪ್ಪ ಅಂತ ಇಳಿದರಂತೆ. ಆಗ ಹನುಮಂತ ನೇರವಾಗಿ ಮುಂದೆ ಬಂದು ರಾಮನಿಗೆ ಶಿರಸಾ ಪ್ರಣಾಮ ಸಲ್ಲಿಸಿ ದೇವಿ ಸೀತೆಯು ಸುರಕ್ಷಿತವಾಗಿ ಮತ್ತು ಶೀಲೆ ರಕ್ಷಿತಳಾಗಿ ಇದ್ದಾಳೆ ಎಂಬುದಾಗಿ ರಾಮನಿಗೆ ಹೇಳಿಬಿಟ್ಟ. ಸುಗ್ರೀವನ ಕಣ್ಣುಗಳು ಫಳ ಫಳ ಹೊಳೆದವಂತೆ, ನಾನು ಹೇಳಿಲ್ವಾ? ಹನುಮಂತನೇ ಮಾಡಿದ್ದು ಎಂದು ಹೇಳುವಂತೆ. ಲಕ್ಷ್ಮಣ ತನ್ನ ಸಂತೋಷವನ್ನು ಹನುಮಂತನೆಡೆಗೆ ಸಂತೋಷ ಮತ್ತು ಆದರದ ನೋಟವನ್ನು ಹನುಮಂತನ ಮೇಲೆ ಬೀರ್ತಾನೆ. ರಾಮನಂತೂ ಆನಂದಾತಿರೇಕದಲ್ಲಿ ರಮಿಸುವ ರಾಮನು ದೊಡ್ಡ ಆದರದಿಂದ ಹನುಮಂತನನ್ನು ನೋಡಿದ. ಆ ನೋಟದಲ್ಲಿ ಅಷ್ಟು ಪ್ರೀತಿ ಆದರ ತುಂಬಿದೆ. ಆ ನೋಟವೇ ಹನುಮಂತನಿಗೆ ದೊಡ್ಡ ಬಹುಮಾನ. ರಾಮನ ಆ ನೋಟದಲ್ಲಿ ಎಲ್ಲವೂ ಇತ್ತು. ಏತನ್ಮಧ್ಯದಲ್ಲಿ ಎಲ್ಲ ಕಪಿಗಳು ಕಥೆ ಹೇಳೋಕೆ ಶುರುಮಾಡಿದರಂತೆ. ಇಷ್ಟು ಮಾತು ಮಾತ್ರ ಹನುಮಂತನಿಗೆ ಬಿಟ್ಟಿದ್ದಾರೆ ಆದರದಿಂದ, ಮತ್ತೆ ಎಲ್ಲರೂ ಸೀತೆಯ ಕಥೆಯನ್ನು ಹೇಳೋಕೆ ಶುರುಮಾಡಿದರಂತೆ.

ಸೀತೆ ಇರುವುದು, ರಾಕ್ಷಸಿಯರ ಮಾತು, ರಾಮನ ಮೇಲಿನ ಪ್ರೀತಿ ಎರಡು ತಿಂಗಳು ಮಾತ್ರ ಉಳಿದಿದೆ ಎಂದೆಲ್ಲ ಹೇಳಲಿಕ್ಕೆ ಶುರುಮಾಡಿದರಂತೆ. ಆಗ ರಾಮ ಕೇಳಿದನಂತೆ, “ಎಲ್ಲಿದ್ದಾಳೆ ಸೀತೆ ಹೇಗಿದ್ದಾಳೆ ನನ್ನಲ್ಲಿ” ಅಂತ ಈ ಎರಡು ಪ್ರಶ್ನೆಗಳನ್ನು ಕೇಳಿದನಂತೆ. ಗೊತ್ತಿದ್ದರೂ ಕೇಳಬೇಕಾದಂತ ಮಾತುಗಳು. ಅದೇ ಪ್ರೀತಿ ಇದೆಯಾ ನನ್ನಲ್ಲಿ ಇನ್ನೂ ಎನ್ನುವ ಪ್ರಶ್ನೆ ಬಾಯಿ ಬಿಟ್ಟು ಕೇಳ್ತಾ ಇದ್ದಾನೆ. ಆಗ ಎಲ್ಲ ಕಪಿಗಳು ಗುಪ್ ಚುಪ್ ಆಗಿ ಎಲ್ಲ ಹನುಮಂತನ ಕಡೆಗೆ ನೋಡಿದರಂತೆ ಆಗ. ಯಾಕೆಂದ್ರೆ ರಾಮ ವಿವರ ಕೇಳೋಕೆ ಶುರುಮಾಡಿದ್ದಾನೆ. ಹನುಮಂತನಿಗೆ “ಸೀತಾ ವೃತ್ತಾಂತ ಕೋವಿದಂ” ಎನ್ನುವ ಬಿರುದು ಬಂದಿದೆ. ಆಗ ಹನುಮಂತ ಮುಂದೆ ಬಂದು ಲಂಕೆಯ ದಿಕ್ಕಿನ ಕಡೆಗೆ ತಿರುಗಿ ನಮಸ್ಕಾರ ಮಾಡಿದನಂತೆ. ಕಣ್ಮುಂದೆ ರಾಮನಿದ್ದಾನೆ ಆದರೆ ಸೀತೆಯ ಇರುವ ದಿಕ್ಕಿಗೆ ತಿರುಗಿ ಪ್ರಣಾಮವನ್ನು ಸಂದಿಸಿ ಕಥೆಯನ್ನು ಪ್ರರಂಭ ಮಾಡ್ತಾನೆ. ಮುಂದಿನ ಭಾಗವನ್ನು ರಾಮನಿಗೆ ವಿವರ ಕೊಡ್ತಾನೆ. ಸಾಗರದಾಚೆಗೆ ಲಂಕೆ, ಅಲ್ಲಿ ಅಶೋಕಾವನ, ಅಶೋಕಾವನದ ಮಧ್ಯದಲ್ಲಿ ಸೀತೆ. ಎಲ್ಲವನ್ನೂ ಹೇಳಿದ್ದಾನೆ. ಒಂದು ಮಾತನ್ನು ಮಾತ್ರ ವಿಶೇಷವಾಗಿ ಹೇಳ್ತಾನೆ. ತನ್ನ ಮನೋರಥವನ್ನು ನಿನ್ನಲ್ಲಿ ನೆಲೆಗೊಳಿಸಿ ಸೀತೆಯು ಬದುಕಿದ್ದಾಳೆ. ರಾವಣ ಪೀಡಿಸುವ ಹೊತ್ತಿನಲ್ಲಿ, ಸಂಕಲ್ಪವೆಂಬ ಕುದುರೆಗಳನ್ನು ಕಟ್ಟಿದಂತಹ ತನ್ನ ಮನೋರಥವನ್ನು ರಾಮನ ಕಡೆಗೆ ಧಾವಿಸಿದಳು ಸೀತೆ. ಅದನ್ನೇ ಬೇರೆ ಭಾಷೆಯಲ್ಲಿ ಹೇಳ್ತಾ ಇದ್ದಾನೆ ಹನುಮಂತ. ನಿನ್ನಲ್ಲಿ ತನ್ನ ಮನೋರಥವನ್ನು ಇರಿಸಿ ಬದುಕಿದ್ದಾಳೆ. ಬದುಕಿರುವುದು ಮತ್ರ ಅಲ್ಲಿ. ಸೀತಾ ದರ್ಶನ, ರಾಕ್ಷಸಿಯರ ತರ್ಜನ, ದುಃಖಾವಸ್ಥೆ ಸೀತೆಯದ್ದು, ಅವಳ ದೈನ್ಯ ಸ್ವರೂಪ, ಸಂಸ್ಕಾರವಿಲ್ಲದ ಕೂದಲು, ಮಾಸಿಹೋದ ಬಟ್ಟೆ, ಮಲಿನವಾದ ಮೈ, ಕೃಶವಾದ ಶರೀರ, ಕಂದಿಹೋದ ಆಭರಣಗಳು, ನಿರಂತರವಾಗಿ ಕಣ್ಣೀರು ಇಡತಕ್ಕಂತಹ ಕಣ್ಣು ಎಲ್ಲವನ್ನೂ ವರ್ಣನೆ ಮಾಡ್ತಾನೆ. ರಾವಣನ ಕಡೆಗೆ ಬೆನ್ನು ಹಾಕಿದ್ದಾಳೆ. ಎಡಗಾಲ ತುದಿಯಿಂದಲೂ ಮುಟ್ಟೋದಿಲ್ಲ ರಾವಣನನ್ನು ಅಂತ ಹೇಳ್ತಾಳೆ. ಅವನನ್ನು ಕಾಮಿಸುವುದು ಅಂತಿರಲಿ ಎಡಗಾಲ ತುದಿಯಿಂದಲೂ ಮುಟ್ಟೋದಿಲ್ಲ ಅಂತ ನಿಶ್ಚಯಿಸಿ ರಾವಣನಿಗೆ ಬೆನ್ನು ಹಾಕಿ, ಸಾವನ್ನು ನಿಶ್ಚಯಿಸಿ, ಪೂರ್ತಿ ನಿನ್ನಲ್ಲೆ ಮನಸ್ಸಿಟ್ಟು ಅಶೋಕವನದಲ್ಲಿರುವ ಸೀತೆಯನ್ನು ಹೇಗೋ ಬಲು ಕಷ್ಟದಲ್ಲಿ ಹುಡುಕಿದೆ. ಅವಳು ನನ್ನನ್ನ ಸುಲಭದಲ್ಲಿ ನಂಬಲಿಲ್ಲ. ನನಗೆ ನಿನ್ನ ಸಹಾಯ ಬೇಕಾಯಿತು. ನಿನ್ನ ಕಥೆ ಹೇಳಿದಾಗ ಒಂದು ಚೂರು ನನ್ನ ಕಡೆಗೆ ಗಮನ ಬಂತು. ಇಡೀ ವಿವರವನ್ನು ಕೊಟ್ಟಿದ್ದೇನೆ. ರಾಮ ಸುಗ್ರೀವರ ಸಖ್ಯದ ಬಗ್ಗೆ ಹೇಳಿದಾಗ ಬಹಳ ಸಂತೋಷ ಆಗಿದೆ ಅವಳಿಗೆ. ಪ್ರಭು, ಶೀಲವಂತೆ ಸೀತೆ. ನಡತೆ ಒಂದಿಷ್ಟೂ ಕೂಡ ಅತ್ತ ಇತ್ತ ಆಗಿಲ್ಲ. ಮಾತ್ರವಲ್ಲ ಅವಳ ಪ್ರೀತಿ ಇದೆಯಲ್ಲ ನಿನ್ನಲ್ಲಿ ಅದು ಇನ್ನು ಸ್ಥಿರವಾಗಿದೆ. ಅದು ಹೇಗಿತ್ತೋ ಹಾಗೇ ಇದೆ, ಅದು ಇನ್ನಷ್ಟು ದೃಢವಾಗಿದೆ. ಅವಳು ನಿನ್ನಲ್ಲಿ ಒಂದಾಗಿದ್ದಾಳೆ. ಅದಕ್ಕೆ ಭಕ್ತಿ ಅಂತ ಹೆಸರು. ಉಗ್ರ ತಪಸ್ಸಿನಿಂದ ಕೂಡಿದ್ದಾಳೆ. ನಿರಂತರ ನಿನ್ನನ್ನು ನೆನೆಸಿ ನೆನಸಿ ತಪಸ್ಸೇ ಮಾಡಿದ್ದಾಳೆ. ಆಮೇಲೆ ಅವಳ ಕುರುಹುಗಳನ್ನು ಮೊದಲು ಹೇಳಿದ. ಕಾಗೆ ಕಥೆ ಹೇಳಿದ. ಕಾಗೆ ಬಂದು ಕುಕ್ಕಿದ್ದು. ರಾಮ ಬ್ರಹ್ಮಾಸ್ತ್ರ ಬಿಟ್ಟಿದ್ದು.

ಪ್ರಭುವೇ ಸೀತೆಯ ನಡತೆ ಒಂದಿಷ್ಟೂ ಕೂಡ ಅತ್ತ ಇತ್ತ ಆಗಿಲ್ಲ, ನಿನ್ನ ಮೇಲಿರುವ ಪ್ರೀತಿಯೂ ಹಾಗೆ ಇದೆ, ಇನ್ನು ದೃಢವಾಗಿದೆ. ನಿನ್ನಲ್ಲಿ ಅವಳು ಒಂದಾಗಿದ್ದಾಳೆ ಎಂದು ಹನುಮಂತನು ರಾಮನಿಗೆ ಹೇಳಿದನು. ಭಕ್ತಿ ಶಬ್ದದ ಅರ್ಥ ಒಂದಾಗುವುದು. ಉಗ್ರ ತಪಸ್ಸಿನಿಂದ ಕೂಡಿದ್ದಾಳೆ, ನಿನ್ನನ್ನೇ ನೆನೆಸಿ ತಪಸ್ಸನ್ನು ಮಾಡುತ್ತಿದ್ದಾಳೆ ಎಂದು ಹೇಳಿದನು. ನಂತರ ಹನುಮಂತನು ರಾಮನಿಗೆ ಕುರುಹಗಳ ಬಗ್ಗೆ ಹೇಳಿದನು. ಕಾಗೆ ಬಂದು ಕುಕ್ಕಿದ್ದು, ರಾಮ ಬ್ರಹ್ಮಾಸ್ತ್ರ ಬಿಟ್ಟಿದ್ದು, ಸೀತೆ ಚೂಡಾಮಣಿಯನ್ನು ನೀಡಿದ ಎಲ್ಲ ಕಥೆಯನ್ನು ಹೇಳಿದನು. ತಿಲಕವು ಅಳಿಸಿ ಹೋದಾಗ ಮನಷ್ಯಳಿಯ (ಗೈರಕ ) ಕಲ್ಲಿನ ಬಣ್ಣವನ್ನು ರಾಮನು ಹಣೆಗೆ ಹಚ್ಚಿಕೊಳ್ಳುತ್ತಾನೆ ಎಂದು ನೋಡುತ್ತಿದ್ದಾಗ ಗಲ್ಲಕ್ಕೆ ಹಚ್ಚಿದ್ದ ಹಿಂದಿನ ಕಥೆಯನ್ನು ಸೀತೆ ಹೇಳಿದ್ದಾಳೆ ಎಂದು ಹನುಮಂತನು ಹೇಳಿದನು. ನಂತರ ಈ ಚೂಡಾಮಣಿಯನ್ನು ನಿನಗೆ ಕೊಟ್ಟಾಯ್ತು, ಇಲ್ಲಿಯವರೆಗೆ ನೀನಿದ್ದಂತೆ ಚೂಡಾಮಣಿ ಇತ್ತು, ಇದನ್ನು ನೋಡಿ ಸಮಾಧಾನ ಪಡುತ್ತಿದ್ದೆ, ಕೊಟ್ಟಾದ ಮೇಲೆ ನಾನು ಬದುಕಿರುವುದಿಲ್ಲ, ಇನ್ನು ಒಂದು ತಿಂಗಳಿನ ನಂತರ ಬದುಕಿರುವುದಿಲ್ಲ, ಅದರೊಳಗೆ ನನ್ನನ್ನು ಕಾಪಾಡು, ರಾಕ್ಷಸರ ವಶವಾಗಿ ಉಳಿಯುವುದಿಲ್ಲ ಎಂದು ಸೀತೆ ಹೇಳಿದ್ದೆಲ್ಲವನ್ನು ಹನುಮಂತನು ರಾಮನಿಗೆ ಹೇಳಿದನು.

ನಂತರ ರಾಮನಿಗೆ ನಾವು ಈಗ ಸಮುದ್ರ ತರಣದ ಸಿದ್ಧತೆಯನ್ನು ಮಾಡೋಣ ಎಂದು ಹೇಳಿದನು. ಲಂಕೆಗೆ ಹೋಗಿ ಯುದ್ಧ ಮಾಡಬೇಕಾದರೆ ಸಮುದ್ರವೇ ಸಮಸ್ಯೆಯಾಗಿತ್ತು. ಹನುಮಂತನು ಸೀತೆ ತನಗೆ ಕೊಟ್ಟ ಚೂಡಾಮಣಿಯನ್ನು ರಾಮನಿಗೆ ನೀಡಿದನು. ಸೀತೆಯು ಚೂಡಾಮಣಿಯನ್ನು ಧರಿಸಿರಲಿಲ್ಲ, ಗಂಟಿನಲ್ಲಿ ಭದ್ರವಾಗಿ ಕಟ್ಟಿಟ್ಟುಕೊಂಡಿದ್ದಳು. ಸೀತೆಗೆ ಚೂಡಾಮಣಿಯಲ್ಲಿ ವಿಶೇಷವಾದ ಭಾವನೆ ಇತ್ತು. ಅದಕ್ಕಾಗಿ ಹನುಮಂತನಿಗೆ ಕೊಡುವಾಗ ಎಲ್ಲ ಕಡೆ ನೋಡಿ ನಂತರ ಕೊಟ್ಟಿದ್ದಳು. ರಾಮನಿಗೆ ಚೂಡಾಮಣಿಯನ್ನು ಕೊಟ್ಟ ಹನುಮಂತನು ದೇವಿಯು ಹೇಳಿದ ಒಂದಕ್ಷರವನ್ನು ಬಿಡದೆ ಎಲ್ಲವನ್ನು ರಾಮನಲ್ಲಿ ಹೇಳಿದನು.

ರಾಮನು ಆ ಚೂಡಾಮಣಿಯನ್ನು ಸ್ವೀಕರಿಸಿ, ಎದೆಗೊತ್ತಿಕೊಂಡು ದುಃಖಿಸಿದನು. ಕರುವನ್ನು ಕಂಡಾಗ ಹಸು ಹಾಲಾಗಿ ಕರಗಿ ಹರಿದು ಹೋಗುವಂತೆ ಚೂಡಾಮಣಿಯನ್ನು ಕಂಡಾಗ ನನ್ನ ಹೃದಯವು ಕರಗಿ ಹೋಗುತ್ತಿದೆ ಎಂದು ರಾಮನು ಹೇಳಿದನು. ಇದು ಸೀತೆ ಮದುಮಗಳಾಗಿದ್ದಾಗ ಜನಕನು ಸೀತೆಗೆ ಕೊಟ್ಟಿರುವಂತಹ ಆಭರಣ, ಅದೆಷ್ಟೋ ಶೋಭೆಯಿತ್ತು ಆದಿನ ಎಂದು ರಾಮನು ಆ ದಿನವನ್ನು ನೆನಪು ಮಾಡಿಕೊಂಡನು. ಸೀತೆಯು ಸಹ ಹನುಮಂತನು ಮುದ್ರೆಯುಂಗುರವನ್ನು ಕೊಟ್ಟಾಗ ಮದುವೆಯ ದಿನದ ನೆನಪು ಮಾಡಿಕೊಂಡು ಸಂತೋಷ ಪಟ್ಟಿದ್ದಳು. ರಾಮನು ಮದುವೆಯ ದಿನದ ನೆನಪನ್ನು ಮಾಡಿಕೊಂಡು, ಆದಿನ ಜನಕ ಮಹಾರಾಜ ಚೂಡಾಮಣಿಯನ್ನು ಸೀತೆಯ ನೆತ್ತಿಯಲ್ಲಿ ತೊಡಿಸಿದಾಗ ಎಷ್ಟು ಚೆಂದವಾಗಿ ಸೀತೆ ಕಂಡಳು! ಮಣಿಯು ಸೀತೆಯ ಶಿರಸ್ಸಿನಲ್ಲಿ ಶೋಭಿಸುತ್ತಿತ್ತು ಎಂದು ರಾಮನು ಹಳೆಯ ನೆನಪು ಮಾಡಿಕೊಂಡು ಹೇಳಿದನು. ಚೂಡಾಮಣಿಯು ನೀರನಲ್ಲಿ ಹುಟ್ಟಿದ್ದಾಗಿತ್ತು. ಲೋಕದಲ್ಲಿ ಸತ್ಪುರುಷರು, ಸಜ್ಜನರೆಲ್ಲ ಪೂಜಿಸುವಂತಹ, ಗೌರವಿಸುವಂತಹ ಮಣಿ ಆಗಿತ್ತು. ಯಜ್ಞವೊಂದರಲ್ಲಿ ಪರಮ ಸಂತುಷ್ಟನಾದ ಇಂದ್ರನು ಜನಕನಿಗೆ ಬಹುಮಾನವಾಗಿ ಕೊಟ್ಟಿರುವಂತಹ ಮಣಿಯಾಗಿತ್ತು. ಮಣಿ ಕಂಡಾಗ ನನ್ನ ತಂದೆಯ ಮತ್ತು ಜನಕನ ನೆನಪು ಆಗುತ್ತಿದೆ, ಅವರಿಬ್ಬರ ಚಿತ್ರ ಕಣ್ಮುಂದೆ ಬರುತ್ತಿದೆ ಎಂದು ಹೇಳಿದ ರಾಮನು ನೋಡು ಸುಗ್ರೀವ ಈ ಮಣಿಯನ್ನು ನೋಡುತ್ತಿದ್ದಂತೆಯೇ ಸೀತೆ ಬಂದಳು ಎಂದೇ ಭಾವಿಸುತ್ತೇನೆ ಎಂದನು.

ರಾಮನು ಹನುಮಂತನ ಬಳಿ ಸೀತೆ ಮತ್ತೇನೆಂದಳು ..? ಹೇಳು ಎಂದು ಹೇಳಿದನು. ವಾಕ್ಯವೇ ಜಲವಾಗಿ ಬಾಯಾರಿಕೆಯನ್ನು ತಣಿಸುತ್ತಾ ಸೀತೆ ಏನೆಂದಳು ಎಂದು ಕೇಳಿದನು. ಇದಕ್ಕಿಂತ ದುಃಖ ಬೇರೆ ಇರಲಿಲ್ಲ. ಚೂಡಾಮಣಿ ಕಣ್ಮುಂದೆ ಇತ್ತು ಆದರೆ ಸೀತೆ ಇರಲಿಲ್ಲ. ಇದಕ್ಕಿಂತ ದುಃಖದ ವಿಷಯ ಇನ್ನೇನಿದೆ? ಹನುಮಾ, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗು ಎಂದು ರಾಮನು ಹೇಳಿದನು. ಎಲ್ಲಿ ನೀನು ಸೀತೆಯನ್ನು ಕಂಡೆಯೋ ಅಲ್ಲಿಗೆ ನನ್ನನ್ನು ಈಗಲೇ ಕರೆದುಕೊಂಡು ಹೋಗು, ಒಂದು ಕ್ಷಣವು ಕೂಡ ನಾನು ಇಲ್ಲಿ ನಿಲ್ಲಲಾರೆ, ಸೀತೆಯ ವಾರ್ತೆ ತಿಳಿದ ಮೇಲೆ, ಅವಳು ಎಲ್ಲಿರುವುದೆಂದು ಗೊತ್ತಾದ ಮೇಲೂ ನಾನು ಇಲ್ಲಿ ನಿಲ್ಲಲಾರೆ, ನನ್ನ ಮನಸ್ಸು ನಿಲ್ಲದು, ಕರೆದುಕೊಂಡು ಹೋಗು ಎಂದು ರಾಮನು ಹನುಮಂತನಿಗೆ ಹೇಳಿದನು. ಸೀತೆಗೆ ಸ್ವಾಭಾವಿಕವಾಗಿ ತುಂಬಾ ಭಯಪಡುತ್ತಿದ್ದಳು, ಕಾಡಿನಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಭಯ ಪಡುತ್ತಿದ್ದಳು, ಈಗಂತೂ ಘೋರಾಕಾರವಾದ ರಾಕ್ಷಸರ ಮಧ್ಯದಲ್ಲಿ ಹೇಗೆ ಬದುಕಿದ್ದಾಳೆ ? ಮೋಡಗಳು ಚಂದ್ರನನ್ನು ಮುಚ್ಚುವ ಹಾಗೆ ರಾಕ್ಷಸರ ಮಧ್ಯೆ ಇರುವ ಸೀತೆಯು ಕಂದಿರಬಹುದು, ಶೋಭಿಸದೆ ಇರಬಹುದು, ಸೀತೆ ಏನು ಹೇಳಿದಳು ? ಸೀತೆಯ ಮಾತೇ ಔಷಧ , ಬದುಕುವದೇ ಅವಳ ಮಾತಿನಿಂದ, ಹೇಗೆ ಮೃತ್ಯುವಶನಾಗುವವನು ಔಷಧಿಯಿಂದ ಬದುಕುತ್ತಾನೋ ಹಾಗೆ ನಾನು ಇನ್ನು ಬದುಕುವುದಾದರೆ ಸೀತೆ ಮಾತುಗಳಿಂದ ಎಂದು ರಾಮನು ಹೇಳಿದನು. ಸೀತೆ ನನ್ನವಳು, ಅವಳ ವ್ಯಕ್ತಿತ್ವವೇ ಮಧುರ, ಅವಳ ಒಂದೋಂದು ಹೆಜ್ಜೆ, ಒಂದೊಂದು ಮಾತು, ನೋಟ ಎಲ್ಲವೂ ಮಧುರ, ಮಾತಂತೂ ಮಧುರ ಮಧುರ. ಅಂತಹ ಸೀತೆ ಏನೆಂದಳು ? ಹೇಳು ಎಂದು ರಾಮನು ಮತ್ತೆ ಮತ್ತೆ ಹನುಮಂತನನ್ನು ಕೇಳಿದನು.

ಹನುಮಂತನಿಗೆ ಹೇಳಿದಷ್ಟೂ ತೃಪ್ತಿಯಿರಲಿಲ್ಲ. ಒಂದು ಸಾರಿ ಎಲ್ಲವನ್ನು ಹೇಳಿದ ಹನುಮಂತನು ಮತ್ತೊಮ್ಮೆ ವಿಸ್ತಾರವಾಗಿ ಎಲ್ಲವನ್ನು ಹೇಳಿದನು. ಮುಖ್ಯವಾಗಿ ಕಾಗೆ ಕಥೆ, ರಾಮ ನಂಬುವ ಎಲ್ಲ ವಿವರಗಳನ್ನು ಹೇಳಿದನು. “ರಕ್ಷಿಸಬಲ್ಲ , ರಾಮನೇಕೆ ಬರಲೊಲ್ಲ?” ರಾಮ–ಲಕ್ಷ್ಮಣರು ಏಕೆ ನನ್ನನ್ನು ಕಾಪಾಡಲು ಮುಂದೆ ಬರುತ್ತಿಲ್ಲ? ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದವರು, ರಾವಣ ಕಾಗೆ ಅಲ್ಲ ಹದ್ದು, ಯಾಕೆ ನನ್ನನ್ನು ರಾಮ–ಲಕ್ಷ್ಮಣರು ಉಪೇಕ್ಷೆ ಮಾಡುತ್ತಿದ್ದಾರೆ ಎಂದು ಸೀತೆ ಕೇಳಿದ್ದನ್ನು ವಿವರವಾಗಿ ರಾಮನಿಗೆ ಹನುಮಂತನು ಹೇಳಿದನು. ನಂತರ ತಾನು ಸೀತೆಯನ್ನು ಸಂತೈಸಿದ ಪರಿಯನ್ನು ಹನುಮಂತನು ವಿವರಿಸಿದನು. ಯಾಕೆ ಇನ್ನು ರಾಮ–ಲಕ್ಷ್ಮಣರು ಬಂದಿಲ್ಲ ಎಂಬುದಕ್ಕೆ ಮತ್ತು ಮುಂದೆ ಬರುತ್ತಾರೆ ಎಂಬುದನ್ನು ಸರಿಯಾಗಿ ನಿನ್ನ ಪರವಾಗಿ ನಾನೇ ಉತ್ತರಿಸಿದ್ದೇನೆ ಎಂದು ಹನುಮಂತನು ಹೇಳಿದನು. ನಂತರ ಸೀತೆ ಚೂಡಾಮಣಿ ಕೊಟ್ಟಿದ್ದು, ಭಯದ ವಾತಾವರಣ, ಕೊಡುವಾಗ ಸೀತೆ ಅತ್ತ ಇತ್ತ ನೋಡಿದ್ದು ಎಲ್ಲವನ್ನು ವಿವರಿಸಿ ನಂತರ ತಾನು ಜೋಪಾನವಾಗಿ ಬಟ್ಟೆಯಲ್ಲಿ ಕಟ್ಟಿಟ್ಟುಕೊಂಡಿದ್ದು, ತಾನು ಹೊರಟಾಗ ಸೀತೆಗೆ ದುಃಖ ಆಗಿದ್ದು, ದುಃಖದಲ್ಲಿಯೇ ರಾಮ–ಲಕ್ಷ್ಮಣ, ಸುಗ್ರೀವರಿಗೆಲ್ಲ ಕೇಳಿದ್ದೇನೆ ಎಂದು ಹೇಳು ಹೇಳಿದ್ದು, ತನಗೆ ಭಾಗ್ಯವಂತ ನೀನೇ ಎಂದು ಹೇಳಿದ್ದು, ಕಮಲ ನೇತ್ರನಾದ ರಾಮನನ್ನು ನೋಡುವ ನೀನೇ ಭಾಗ್ಯವಂತ ಎಂದು ಹೇಳಿ ಸೀತೆ ತನಗೆ ನೋಡುವ ಯೋಗ ಇದೆಯೋ ಇಲ್ಲವೋ ಎಂದು ಹೇಳಿದ್ದು ಎಲ್ಲವನ್ನು ರಾಮನಿಗೆ ಹನುಮಂತನು ವಿವರಿಸಿದನು. ರಾಮನಿದ್ದಲ್ಲಿಗೆ ಕರೆದೊಯ್ಯುತ್ತೇನೆ, ನನ್ನ ಬೆನ್ನಮೇಲೆ ಕುಳಿತುಕೊಳ್ಳಲು ತಾನು ಸೀತೆಗೆ ಹೇಳಿದ್ದು, ಸೀತೆ ಒಪ್ಪದೇ ಇದ್ದಿದ್ದು ಎಲ್ಲವನ್ನು ಹೇಳಿದನು. ಸೀತೆ ಎರಡು ಕಾರಣಕ್ಕೆ ಒಪ್ಪಿರಲಿಲ್ಲ. ಒಂದು ಹನುಮಂತನಿಂದ ಸಾಧ್ಯವೇ ಎಂದು, ಮತ್ತೆ ತಾನಾಗಿ ಮುಟ್ಟಬಾರದು ಎಂದು ಒಪ್ಪಿರಲಿಲ್ಲ. ಇದರಿಂದಾಗಿ ಅವರ ಮುಗ್ದತೆ, ಸ್ವಚ್ಛತೆ, ಸ್ಪಟಿಕತೆಯನ್ನು ಅರ್ಥಮಾಡಿಕೊಳ್ಳಬಹುದು. ನಂತರ ಸೀತೆ ಆಶೀರ್ವಾದ ಮಾಡಿದ್ದನ್ನು ಹೇಳಿ ಸೀತೆಯ ಅಂಗಾಂಗಗಳು ಎಲ್ಲವು ಚೆನ್ನಾಗಿರುವುದನ್ನು ಹನುಮಂತನು ವಿವರಿಸಿದನು. ಸೀತೆ ತನಗೆ ಆದಿನ ಅಲ್ಲೇ ಇದ್ದು ಹೋಗು ಎಂದು ಹೇಳಿದ್ದು, ಹೋದರೆ ಮತ್ತೆ ಹಿಂದುರಿಗಿ ಬರುವವರೆಗೆ ಇರುತ್ತೇನೆಯೋ ಇಲ್ಲವೋ ಎಂದು ಹೇಳಿದ್ದು ಎಲ್ಲವನ್ನು ಹೇಳಿದನು.

ಹಾಗಾಗಿಯೇ ಹನುಮಂತನು ಸಮುದ್ರ ದಾಟಿ ಬಂದ ಕೂಡಲೇ ಸೀತೆಯನ್ನು ಕರೆದುಕೊಂಡು ಬರೋಣ ಎಂದು ಅವಸರ ಮಾಡಿದ್ದನು. ರಾಮ–ಲಕ್ಷ್ಮಣರು, ಬೇರೆ ಕಪಿಗಳೆಲ್ಲ ಹೇಗೆ ಬರುತ್ತಾರೆ ಎಂಬ ಸೀತೆಯ ಆತಂಕ, ಅದಕ್ಕೆ ಸಮಾಧಾನ ಮಾಡಿದ್ದು, ಆ ಆತಂಕದ ಮಧ್ಯೆಯೇ ಸೀತೆಯು ತನಗೆ ನೀನು ಕರೆದೊಯ್ಯಬಹುದಿತ್ತು, ಆದರೆ ರಾವಣ ಮಾಡಿದ ಹಾಗೆ ರಾಮ ಮಾಡುವ ಹಾಗೆ ಇಲ್ಲ, ರಾಮನದು ರಾಜ ಮಾರ್ಗ, ರಾಮನಾದರೆ ಲಂಕೆಗೆ ಬಂದು ರಾವಣನ ತಲೆ ಮೆಟ್ಟಿ ನನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದ್ದು ಎಲ್ಲವನ್ನು ಹನುಮಂತನು ರಾಮನಿಗೆ ವಿವರಿಸಿದನು. ತಾನು “ಎನಗಿಂತ ಕಿರಿಯವರಿಲ್ಲ” ಸುಗ್ರೀವನ ಬಳಗದಲ್ಲಿ ನನಗಿಂತ ಕಿರಿಯವರಿಲ್ಲ ಎಂಬುದನ್ನು ವಿವರಿಸಿದ್ದು, ಸುಗ್ರೀವ ಮತ್ತು ಅವನ ಬಳಗ ನಿನ್ನನ್ನು ಕರೆತರಲು ನಿಶ್ಚಯ ಮಾಡಿದೆ ಎಂದು ಸೀತೆಗೆ ಹೇಳಿದ್ದು, ತಾನು ಚಿಕ್ಕವನು ಎಂದರೆ ಆ ಬಳಗ ಹೇಗಿರಬಹುದು.. ರಾಮ–ಲಕ್ಷ್ಮಣರು ನನ್ನ ಬೆನ್ನ ಮೇಲೆ ಕುಳಿತು ಬರುತ್ತಾರೆ ಎಂದು ಹೇಳಿದ್ದು ಎಲ್ಲವನ್ನು ವಿವರಿಸಿದನು. ವನವಾಸ ಮುಗಿಯುತ್ತಿದ್ದಂತೆಯೇ ರಾಮನು ಅಯೋಧ್ಯೆಯ ಸಿಂಹಾಸನವನ್ನು ಏರುತ್ತಾನೆ, ನೀವಿಬ್ಬರೂ ಸಿಂಹಾಸನ ಏರಿದಾಗ ವಸಿಷ್ಠರು ತೀರ್ಥಗಳಿಂದ ಅಭಿಷೇಕವನ್ನು ಮಾಡುವರು, ಹಾಗಾಗಿ ಏನು ವ್ಯಥೆ ಪಡಬೇಡ ಎಂದು ತಾನು ಸಂತೈಸಿದ್ದನ್ನು ರಾಮನಿಗೆ ಹೇಳಿದನು. ಸೀತೆಗೆ ನೀನಿಲ್ಲದೆ ತುಂಬಾ ನೋವಾಗಿತ್ತು. ನಿನ್ನ ದೂತನಾಗಿ ನಾನು ಹೋದಾಗ ಸ್ವಲ್ಪ ಸಮಾಧಾನವಾಗಿತ್ತು. ಅಲ್ಲಿಂದ ಮತ್ತೆ ಹೊರಟು ನಿಂತಾಗ ಮತ್ತೆ ನೋವಾಗಿತ್ತು, ಆಗ ಸಮಾಧಾನ ಮಾಡಿದ್ದೇನೆ ಎಂದು ಹನುಮಂತನು ಹೇಳಿದನು. ಇಲ್ಲಿಗೆ ಸುಂದರಕಾಂಡವು ಸಂಪೂರ್ಣವಾಯಿತು.

ಸೀತೆಯನ್ನು ನೆಲೆಯನ್ನು ಕಾಣಲು ಹನುಮಂತನು ಬಯಸಿದಾಗ ಸುಂದರ ಕಾಂಡವು ಆರಂಭವಾಗುವುದು. ಹನುಮಂತನು ಮರಳಿ ರಾಮನಲ್ಲಿಗೆ ಬಂದು ಚೂಡಾಮಣಿಯನ್ನು ಕೊಟ್ಟು ಎಲ್ಲ ಕುರುಹುಗಳನ್ನು ಹೇಳಿ, ಸೀತೆಯನ್ನು ಸಂತೈಸಿದ್ದನ್ನು ಹೇಳಿ ಸಮಾಧಾನವನ್ನು ತಿಳಿಸುವಲ್ಲಿಗೆ ಸುಂದರ ಕಾಂಡವು ಪರ್ಯವಸಾನಗೊಳ್ಳುತ್ತದೆ.

ಮುಂದೇನಾಯಿತು…? ರಾಮನು ಹನುಮಂತನಿಗೆ ಯಾವ ಬಹುಮಾನವನ್ನು ನೀಡಿದನು? ಇದಕ್ಕೆ ಉತ್ತರ ಯುದ್ಧಕಾಂಡದಲ್ಲಿದೆ. ರಾಜರಾದವರು ಅವರಿಗೆ ಏನನ್ನು ಸಮರ್ಪಣೆ ಮಾಡಿದರು ಅದಕ್ಕಿಂತ ಕಡಿಮೆ ಇಲ್ಲದ ಬಹುಮಾನವನ್ನು ಕೊಡಬೇಕು. ಈಗ ಹನುಮಂತನು ರಾಮನಿಗೆ ಸೀತೆಯನ್ನೇ ಸಮರ್ಪಣೆ ಮಾಡಿದ್ದಾನೆ. ರಾಮನು ಸೀತೆಗೆ ಕಡಿಮೆ ಇಲ್ಲದೆ ಇರುವಂತಹದ್ದನ್ನು ಕೊಡಬೇಕು. ರಾಮ ಕೊಟ್ಟ ಬಹುಮಾನ ಯಾವುದು ಎಂದು ಶ್ರೀಸಂಸ್ಥಾನದವರ ಯುದ್ಧಕಾಂಡದ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments