ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಆಗ ತಾನೇ ಜನಿಸಿದ ಮಾನವ ಶಿಶು ಅದೆಷ್ಟು ಅಸಹಾಯಕ, ಎಷ್ಟು ದುರ್ಬಲ. ಕುಳಿತುಕೊಳ್ಳುವ, ನಿಂತುಕೊಳ್ಳುವ ಶಕ್ತಿಯಿಲ್ಲ, ನಡೆಯುವ ಶಕ್ತಿಯಿಲ್ಲ, ಮಾತು ಬರೋದಿಲ್ಲ, ಅಗೆಯಲಿಕ್ಕೆ ಹಲ್ಲಿಲ್ಲ, ಆಲೋಚನೆ ಮಾಡ್ಲಿಕ್ಕೆ ಬುದ್ಧಿ, ಅನುಭವ ಇಲ್ಲ, ಚರ್ಮ ದಪ್ಪ ಇಲ್ಲ, ಇರುವೆಗಳೂ ಕಚ್ಚಿ ಕೊಲ್ಲಬಹುದು. ಅಂತಹ ಮೃದು ಶರೀರ. ತನ್ನವರ್ಯಾರು? ಪರಕೀಯರು ಯಾರು ಏನೂ ಗೊತ್ತಿಲ್ಲ. ಅದರ ಮೇಲೆ ಯಾರಾದರೂ ಆಕ್ರಮಣ ಮಾಡಿದರೆ ರಕ್ಷಣೆ ಮಾಡಿಕೊಳ್ಳುವಂತ ಯಾವುದೇ ಚೈತನ್ಯ ಆ ಮಗುವಿಗಿಲ್ಲ. ತಾಯಿ ರಕ್ಷಿಸ್ತಾಳೆ. ಆ ಮಗು ಏನನ್ನೂ ಕೇಳದೇ ಇದ್ರೂ ಕೂಡ ತಿಳಿದು ತಾನೇ ಕೊಡ್ತಾಳೆ ಎಲ್ಲವನ್ನೂ ಕೂಡ. ವಿಧಿ ಅದಕ್ಕಾಗಿಯೇ ಮಮತೆಯನ್ನು ತಾಯಿಯಲ್ಲಿ ಇಟ್ಟಿದೆ. ಅದೊಂದು ಭಾವ ತಾಯಿಯಲ್ಲಿ ಇಲ್ದೇ ಇದ್ರೆ ಯಾವ ಮಾನವ ಶಿಶುವೂ ಬೆಳೆದು ದೊಡ್ಡದಾಗ್ಲಿಕ್ಕೆ ಸಾಧ್ಯ ಇರಲಿಲ್ಲ. ತಾಯಿ ಮಮತೆಯಿಂದಾಗಿ ಮಗುವಿನ ಬೇಕುಬೇಡಗಳೆಲ್ಲವನ್ನೂ ಗಮನಿಸ್ತಾಳೆ. ಮಗುವನ್ನು ಆರೈಕೆ ಮಾಡಿ ರಕ್ಷಿಸ್ತಾಳೆ ಮತ್ತು ಬೆಳೆಸ್ತಾಳೆ. ಒಂದು ಹಸು-ಕರು ಅಂದ್ರೆ, ಆ ಕರುವನ್ನು ಅದೆಷ್ಟು ಮುತುವರ್ಜಿಯಿಂದ ಕಾಪಾಡಿಕೊಳ್ತದೆ. ಎಲ್ಲಿವರೆಗೆ ಅಂದ್ರೆ ಅದು ಪ್ರವರ್ಧಮಾನಕ್ಕೆ ಬರುವಲ್ಲಿವರೆಗೆ. ನಾಯಿ ತನ್ನ ಮರಿಯನ್ನು ಎಷ್ಟು ಮುತುವರ್ಜಿಯಿಂದ ಕಾಪಾಡ್ತದೆ. ಇದು ನಾಯಿ ಮತ್ತು ಹಸು ಮಾತ್ರ ಅಂತಲ್ಲ, ಯಾವ ಪ್ರಾಣಿ ತೆಗೆದುಕೊಂಡರೂ ಅದು ಅಸಹಾಯಕ ಅವಸ್ಥೆಯಲ್ಲಿದ್ದಾಗ ತಾಯಿ ಎನ್ನುವ ತತ್ವ ಎಷ್ಟು ಮಮತೆಯಿಂದ, ಮುತುವರ್ಜಿಯಿಂದ ಕಾಪಾಡ್ತದೆ ಎನ್ನುವುದನ್ನ ನಾವು ಸೃಷ್ಟಿಯ ಎಲ್ಲೆಡೆಯಿಂದ ಗಮನಿಸಿಕೊಳ್ತೇವೆ.

ಈ ದೇವರಿಗೂ ಮತ್ತು ಜೀವರಿಗೂ ಇರತಕ್ಕಂತಹ ಒಂದು ಬಾಂಧವ್ಯ ಹೀಗೆಯೇ ಇದೆ. ಜೀವವು ಅಸಹಾಯಕವೇ ಹೌದು. ಏನಿದೆ ನಮ್ಮ ಕೈಯಲ್ಲಿ? ಪಂಚಭೂತಗಳ ಮುಂದೆ, ಈ ದೊಡ್ಡ ಪ್ರಪಂಚದ ಮುಂದೆ ನಮ್ಮಂತಹ ಧೂಳು ಮತ್ಯಾವುದಿದೆ ಹೇಳಿ? ನಾವು ಇಷ್ಟು ಅಲ್ಪಜ್ಞರು, ಅಲ್ಪಶಕ್ತಿಗಳು. ಕಾಪಾಡಿದ್ರೆ ಅವ್ನೇ ಕಾಪಾಡ್ಬೇಕು. ಕಾಲ್ಕೆಳಗಿನ ಭೂಮಿ ನಡುಗಿದರೆ ನಾವೇನು ಇಲ್ಲ. ಆಕಾಶದಿಂದ ಸಿಡಿಲು ಬಂದ್ರೆ, ಒಂದು ಚಂಡಮಾರುತ ಬೀಸಿದ್ರೆ? ಇದು ಪಂಚಭೂತಗಳದ್ದು. ಇನ್ನು ಪ್ರಪಂಚದಲ್ಲಿ ನಮ್ಮನ್ನ ನಾಶಮಾಡತಕ್ಕಂತಹ ಸಂಗತಿಗಳು ಬೇಕಾದಷ್ಟಿವೆ. ದೇಹದ ವಿಷಯವಾಯಿತು. ಜೀವವನ್ನು ಕಲುಷಿತಗೊಳಿಸುವಂಥದ್ದು, ಮನಸ್ಸನ್ನು ಹಾಳುಮಾಡಿ ತನ್ಮೂಲಕ ನಮ್ಮ ಜೀವನವನ್ನೇ ಹಾಳುಮಾಡುವಂಥದ್ದು ಎಷ್ಟಿದೆಯೋ? ಲೆಕ್ಕವೇ ಇಲ್ಲ. ದೇವರೇ ಗತಿ. ಆದರೆ ದೇವರು ಕಾಪಾಡ್ಬೇಕಾದ್ರೆ ನಮ್ಮಲ್ಲಿ ಒಂದು ಭಾವ ಇರಬೇಕಂತೆ. ಆ ಭಾವಕ್ಕೆ ಶರಣಾಗತಿ ಎಂದು ಹೆಸರು. ಶರಣಾಗತಿ ಅಂದ್ರೇನು? ನೀನೇ ರಕ್ಷಕ, ನೀನಲ್ಲದೇ ಅನ್ಯ ಗತಿಯಿಲ್ಲ, ನೀನೇ ಗತಿ ಎಂಬುದಾಗಿ ಏಕದೃಷ್ಟಿ, ಏಕಚಿತ್ತದಿಂದ ಭಗವಂತನನ್ನು ನಾವು ಭಾವಿಸಬೇಕು. ಅದನ್ನ ಪ್ರಾಮಾಣಿಕವಾಗಿ ಮಾಡಿದ್ದೇ ಹೌದಾದರೆ ಅಂತಹವರಿಗೆ ಜೀವನದಲ್ಲಿ ಬೇರಾವ ಚಿಂತೆಯೂ ಇಲ್ಲ. ಎಲ್ಲ ಭಗವಂತನದ್ದು. ಅವನೇ ನೋಡಿಕೊಳ್ತಾನೆ. ಇಂತಹ ಒಂದು ಪವಿತ್ರವಾದ ಶರಣಾಗತಿ ಭಾವ ಇದೊಂದು ಸಾಧನೆಯ ದೊಡ್ಡ ಪ್ರಕಾರವೂ ಹೌದು. ಸಾಧನೆಗೆ ಬೇಕಾದಷ್ಟು ದಾರಿಗಳಿವೆ. ತಪಸ್ಸು ಮಾಡ್ಬಹುದು, ಯಜ್ಞ ಮಾಡ್ಬಹುದು, ಹಾಗೆಯೇ ಮಂತ್ರಜಪ ಮಾಡ್ಬಹುದು, ಧ್ಯಾನ ಮಾಡ್ಬಹುದು ಹೀಗೆ ಬೇರೆ ಬೇರೆ ರೀತಿ ದಾರಿಗಳು ಸಾಧನೆಗಿದಾವೆ. ಹಾಗೇ ಇದು ಕೂಡ ಒಂದು ದಾರಿ. ಈ ದಾರಿಗೆ ಬೇರೇನೂ ಬೇಡ. ನಾನು ನಿನ್ನವನು, ನೀನೇ ನನಗೆ ಆಶ್ರಯ ಎಂಬ ಶುದ್ಧವಾಗಿರತಕ್ಕಂತಹ ಒಂದು ಭಾವ, ಅನನ್ಯವಾಗಿ ನಾವು ಒಂದು ತತ್ವವನ್ನು ಆಶ್ರಯಿಸುವಂಥದ್ದು ಅದು ತುಂಬಾ ಮುಖ್ಯವಾಗಿ ಬೇಕಾಗಿರತಕ್ಕಂಥದ್ದು.

ಎಲ್ಲವನ್ನೂ ನಿನ್ನದು ಎನ್ನುವ ಭಾವದಲ್ಲಿ ಹನುಮಂತ ಸಮರ್ಪಣೆ ಮಾಡ್ತಾನೆ ನೋಡಿ ಭಗವಂತನಿಗೆ. ಮುಖ್ಯವಾಗಿ ಶರಣಾಗತಿ ಭಾವದಲ್ಲಿ ರಕ್ಷಿಸು ಎಂದು ಜೀವವು ಹೋಗುವಂಥದ್ದು, ರಕ್ಷಿಸ್ತೇನೆ ಅಂತ ದೇವರು ಅಭಯ ಕೊಡ್ತಕ್ಕಂಥದ್ದು. ಇದೇ ಶರಣಾಗತಿ ಭಾವದಲ್ಲಿ ಇರತಕ್ಕಂಥದ್ದು.

ಈ ವಿಭೀಷಣನ ಸಂಗ್ರಹದ ಪ್ರಕರಣ ಏನಿದೆ ಅದು ಶರಣಾಗತಿ ಭಾವವನ್ನ ಪ್ರತಿಪಾದನೆ ಮಾಡುವಂತಹ ಒಂದು ಪ್ರಕರಣ. ಅವನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬಿಟ್ಟುಬಂದಿದಾನೆ, ಲಂಕೆಯನ್ನು, ತನ್ನ ಸಚಿವ ಪದವಿಯನ್ನೂ, ತನ್ನ ಮನೆ, ಹೆಂಡತಿ, ಮಕ್ಕಳನ್ನೂ ಬಿಟ್ಟುಬಂದಿದಾನೆ ಎಲ್ಲವನ್ನೂ. ಘೋರ ರಾಕ್ಷಸ ಇವನ ಅಣ್ಣನೇ ಹೌದು. ಅವನನ್ನ ಎದುರು ಹಾಕ್ಕೊಂಡಿದಾನೆ ಸಂಪೂರ್ಣವಾಗಿ. ಈಗ ಆವರೆಗೆ ಲಂಕೆಗೆ ಯಾರು ಶತ್ರು ಅನ್ನೋ ಭಾವನೆ ಇದೆಯೋ ಆ ರಾಮನಿಗೆ ಬಂದು ಶರಣಾಗ್ತಾ ಇದಾನೆ. ಹಿಂದೆ, ಮುಂದೆ ಗೊತ್ತಿಲ್ಲ. ಅವನೇನು ಸ್ವೀಕರಿಸ್ತಾನೋ, ಇಲ್ವೋ ರಾಮ ಎನ್ನುವ ಬಗ್ಗೆ ಯಾವ ಕಲ್ಪನೆಯೂ ಇಲ್ಲ. ಒಂದು ವೇಳೆ ರಾಮನಿಗೆ ಸ್ವೀಕರಿಸಬೇಕು ಅಂತಿದ್ರೂ ಬೇರೆಯವರು ಏನ್ಹೇಳ್ತಾರೆ ಎನ್ನುವ ಕಲ್ಪನೆಯಿಲ್ಲ. ಹಾಗೇ ಬಂದಿದಾನೆ. ಸಹಜವಾಗಿಯೇ ವಾನರ ಸೇನೆ ವಿರೋಧ ಮಾಡಿದೆ. ಸುಗ್ರೀವನೇ ಮುಂದಾಗಿ ವಾನರಸೇನೆಯಲ್ಲಿ ಬಹ್ವಂಶ ಹಾಗೇ ಸ್ವೀಕರಿಸಲಿಕ್ಕೇ ಯಾರೂ ಸಿದ್ಧರಿಲ್ಲ, ಕೆಲವರು ದಂಡಿಸಿ ಅಂತ, ವಧಿಸಿ ಅಂತ, ಇನ್ನು ಕೆಲವರು ಗುಪ್ತಚರರನ್ನಿಡಿ ಅಂತ, ಇನ್ನೂ ಕೆಲವರು ಪ್ರಶ್ನೆ ಮಾಡಿ ಎಂಬುದಾಗಿ. ಸ್ವೀಕರಿಸಲಿಕ್ಕೆ ಯಾರೂ ತಯಾರಿಲ್ಲ ಜಾಂಬವಂತನವರೆಗೆ. ಸುಗ್ರೀವ ಮತ್ತು ಜಾಂಬವಂತ ಒಂದು ಅಭಿಪ್ರಾಯಕ್ಕೆ ಬಂದ್ರು ಅಂದ್ರೆ ಮಹಾರಾಜ ಮತ್ತು ಪ್ರಧಾನಮಂತ್ರಿ. ಯುವರಾಜ ಅಂಗದನೂ ಕೂಡ ಅದೇ ಅಭಿಪ್ರಾಯದಲ್ಲಿದಾನೆ. ಇಂಥಾ ಒಂದು ವಿಕಟ ಸನ್ನಿವೇಶ.

ಆಗ ಹನುಮಂತ ಒಂದು ದೊಡ್ಡ ಪ್ರಯತ್ನವನ್ನ ಮಾಡ್ತಾನೆ ವಿಭೀಷಣನ ಪರವಾಗಿ. ಲಂಕೆಯ ಆಸ್ಥಾನದಲ್ಲಿ ರಾವಣನು ಹನುಮಂತನಿಗೆ ಮೃತ್ಯುದಂಡವನ್ನು ವಿಧಿಸಿದಾಗ ಹನುಮಂತನ ಪರವಾಗಿ ವಾದ ಮಾಡಿದ್ದು ವಿಭೀಷಣ ತಾನೇ? ತಿರುಗಿ ಬಂತು ಇಲ್ಲಿ. ಇಲ್ಲಿ ಹನುಮಂತನ ಅಗತ್ಯ ವಿಭೀಷಣನಿಗೆ ತುಂಬಾ ಇದೆ. ವಿಭೀಷಣನನ್ನ ನಾವು ಸ್ವೀಕಾರ ಮಾಡಬೇಕು ಎಂಬುದಾಗಿ ಆ ಸಂದರ್ಭದಲ್ಲಿ ಗಟ್ಟಿಯಾಗಿ ವಾದ ಮಾಡಿದ್ದು ಹನುಮಂತ. ಅದನ್ನೇ ರಾಮ ಸ್ವೀಕಾರ ಮಾಡ್ತಾನೆ. ಮಿತ್ರಭಾವದಿಂದ ಬಂದವರನ್ನು ನಾನು ಬಿಡಲಾರೆ. ಎಂತಹಾ ದೋಷಿಯಾದರೂ, ಪಾಪಿಯಾದರೂ ಯಾರು ಮೈತ್ರಿಯನ್ನು ಅರಸಿ ಬರ್ತಾನೋ ಅವನನ್ನು ಬಿಟ್ಟುಕೊಡೋದಿಲ್ಲ. ಅದರ ಮೇಲೆ ಸುಗ್ರೀವ ಪುನಃ ಪ್ರತಿವಾದ ಮಾಡ್ತಾನೆ. ಎರಡನೇ ಬಾರಿ. ಅಣ್ಣನನ್ನ ಬಿಟ್ಟವನು ನಾಳೆ ಯಾರನ್ನ ತಾನೇ ಬಿಡೋದಿಲ್ಲ? ಅದಕ್ಕೂ ಉತ್ತರ ಕೊಡ್ತಾನೆ ಮತ್ತು ಅವನಿಗೆ ತಿಳಿಸಿ ಹೇಳಬೇಕಾದ ಹಾಗೆ ತಿಳಿಸಿ ಹೇಳ್ತಾನೆ ರಾಮ. ಮೂರನೇ ಬಾರಿಗೆ ಸುಗ್ರೀವ ಎದ್ದುನಿಂತು ನಮಸ್ಕಾರ ಮಾಡಿ ಹೇಳಿದ್ದೇನು ಅಂದ್ರೆ ಇವನು ರಾವಣನ ಗುಪ್ತಚರನೇ ಹೌದು. ಮೈಮರೆತಾಗ ನಮಗೆ ಕೇಡು ಮಾಡಿಯಾನು. ಜೀವಕ್ಕೇ ಕುತ್ತು ತಂದಾನು. ಹಾಗಾಗಿ ವಿಭೀಷಣನನ್ನು ನಿಗ್ರಹಿಸುವುದೇ ಸರಿ ಎಂದು ಮೂರನೇ ಬಾರಿ ಹೇಳಿದ. ರಾಮ ಮತ್ತು ಹನುಮಂತ ಸಾಮಾನ್ಯಮೇಧೆಯನ್ನು ಮೀರಿ ಅದರಾಚೆಗೆ ಹೃದಯದಾಳವನ್ನು ತಲುಪಿ ವಿಭೀಷಣ ಯೋಗ್ಯ ಎನ್ನುವುದನ್ನು ತೀರ್ಮಾನ ಮಾಡಿರತಕ್ಕಂಥದ್ದು. ಕೇವಲ ಭೌತಿಕವಾಗಿರತಕ್ಕಂತಹ ನಿರ್ಣಯ ಅಲ್ಲ ಅದು. ಹಾಗೇ ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ಅಂತರಾತ್ಮದಿಂದ ಕಣ್ಣಮುಂದೆ ಕಂಡ ವ್ಯಕ್ತಿತ್ವವನ್ನು ಅರಿತು ಆ ಒಂದು ನಿರ್ಣಯವನ್ನು ಪ್ರಕಟಿಸ್ತಾ ಇರತಕ್ಕಂಥದ್ದು. ಸುಗ್ರೀವನ ವಿರೋಧವನ್ನಿಟ್ಟುಕೊಂಡೂ ಮಾಡಲು ಸರಿಯಾಗದು. ಬಾಹ್ಯದೃಷ್ಟಿಯಿಂದ ನೋಡಿದಾಗ ಸುಗ್ರೀವ ರಾಜ. ಕಪಿಸೇನೆಯ ಬೆಂಬಲದಿಂದಲೇ ರಾಮನು ಕಾರ್ಯಸಾಧನೆ ಮಾಡಬೇಕಾಗಿದೆ. ಹಾಗಾಗಿ ಸುಗ್ರೀವನನ್ನು ತೀರಾ ನೋಯಿಸುವಂತೆಯೂ ಕೂಡ ಇಲ್ಲ. ಹಾಗಂತ ವಿಭೀಷಣನನ್ನು ಬಿಡಲಿಕ್ಕೆ ರಾಮ ತಯಾರಿಲ್ಲ. ಇದೆಲ್ಲ ಬಹುಮತದ ಮೇಲೆ ನಿರ್ಣಯವಾಗುವಂತಹ ವಿಷಯಗಳು. ಸುಗ್ರೀವನ ಮಾತನ್ನು ಸರಿಯಾಗಿ ಕೇಳಿಸಿಕೊಂಡ ರಾಮನು ವಿಮರ್ಶಿಸಿ ಸುಗ್ರೀವನ ಮಾತಿಗಿಂತಲೂ ಮೇಲಿನ ಮಾತನ್ನು ರಾಮನು ಆಡ್ತಾನೆ. ಅದು ಆತ್ಮವಿಶ್ವಾಸದ ಆಕಾರದಂತಿತ್ತು.

ಸುಗ್ರೀವ! ವಿಭೀಷಣನು ಸುದುಷ್ಟನೇ ಆಗಿರಲಿ ಅದುಷ್ಟನೇ ಆಗಿರಲಿ ( ಅತ್ಯಂತ ಕೆಟ್ಟವನೇ ಆಗಿರಲಿ ಅಥವಾ ಬಹಳ ಒಳ್ಳೆಯವನೇ ಆಗಿರಲಿ ) ನನಗೇನು ಮಾಡಿಯಾನು? ಏನು ಮಾಡಲಿಕ್ಕಾದರೂ ಸಾಧ್ಯವಿದೆ? ಅತಿ ಚಿಕ್ಕ ಕೇಡನ್ನಾದರೂ ನನಗೆ ವಿಭೀಷಣ ಮಾಡಲಿಕ್ಕೆ ಸಾಧ್ಯವಿದೆಯಾ? ಎಂಬುದಾಗಿ ಹೇಳಿ ಇದ್ದಕಿದ್ದಂತೆ ಗಂಭೀರವಾಗ್ಬಿಡ್ತಾನೆ.

ಪಿಶಾಚರನ್ನು, ಯಕ್ಷರನ್ನು, ಪೃಥಿವಿಯ ಸರ್ವರಾಕ್ಷಸರನ್ನೂ ಮನಸ್ಸು ಮಾಡಿದರೆ ಬೆರಳ ತುದಿಯಿಂದ ಕೊಂದೇನು ಕಪಿರಾಜನೇ ಎಂದು ತನ್ನ ದೈವತ್ವವನ್ನು ಪ್ರಕಟಮಾಡ್ತಾನೆ ಅಲ್ಲಿ. ಬಳಿಕ ಮತ್ತೆ ಸರಳತೆಗೆ ಬಂದು ಕೆಲವು ತಿಳಿ ಮಾತುಗಳನ್ನು ಸುಗ್ರೀವನಿಗೆ ಹೇಳ್ತಾನೆ. ಆಶ್ರಯದಾನವೆಂಬುದು ಮಹಾಧರ್ಮ. ಆಶ್ರಯ ಬೇಡಿ ಬಂದವರಿಗೆ ಆಶ್ರಯ ಕೊಡಬೇಕು. ಒಂದು ಪಾರಿವಾಳದ ಉದಾಹರಣೆ ಕೊಡ್ತಾನೆ. ಜೋಡಿ ಪಾರಿವಾಳಗಳು. ಅದರಲ್ಲಿ ಪಾರಿವಾಳದ ಹೆಂಡತಿಯನ್ನು ಅಪಹಾರ ಮಾಡಿದ ಶತ್ರು ಶರಣಾಗತನಾಗಿ ಮತ್ತೆ ಬಂದಾಗ ಆ ಪಾರಿವಾಳ ಆತಿಥ್ಯ ಧರ್ಮವನ್ನ ಪಾಲನೆ ಮಾಡಿ ತನ್ನನ್ನೇ ಊಟವಾಗಿ ಕೊಟ್ಟಿತಂತೆ. ತನ್ನ ಮಾಂಸವನ್ನು ತನ್ನ ಪತ್ನಿ ಅಪಹರಣ ಮಾಡಿದವರಿಗೆ ಕೊಟ್ಟು ಆತಿಥ್ಯ ಧರ್ಮವನ್ನು ಪಾಲನೆ ಮಾಡಿತಂತೆ. ಅಂತಹ ಒಂದು ಪಕ್ಷಿ ಈ ಬಗೆಯ ಆಶ್ರಯದಾನ ಧರ್ಮವನ್ನು ಪಾಲನೆ ಮಾಡ್ಬೇಕಿದ್ರೆ, ನಾವು ಧರ್ಮರಕ್ಷಕರು ಅಂತ ಹೇಳಿಕೊಳ್ಳುವಂಥವರು ಹೇಗಿರ್ಬೇಕು ಸುಗ್ರೀವ? ನಾನು ಹೇಗಿರಬೇಕು? ಬಳಿಕ ಕಂಡು ಮಹರ್ಷಿ ಹಾಡಿದ ಹಾಡನ್ನು ಉಲ್ಲೇಖ ಮಾಡ್ತಾನೆ ರಾಮ. ಕಣ್ವ ಮಹರ್ಷಿಗಳ ಪುತ್ರ ಕಂಡು ಎಂಬ ಪರಮರ್ಷಿ ಈ ಗಾದೆಯನ್ನು ಈ ರೀತಿಯಲ್ಲಿ ಹಾಡಿದ್ದಾನೆ. ಆತ ಸುಳ್ಳನ್ನಾಡುವುದಿಲ್ಲ, ಹೇಳಿದ್ದು ಸುಳ್ಳಾಗುವುದಿಲ್ಲ. ಆ ಹಾಡಿನ ತಾತ್ಪರ್ಯ ಹೀಗಿದೆ;
ಕೈಮುಗಿದು ಹತ್ತಿರ ಬಂದಿದಾನೆ, ದೀನನಾಗಿದಾನೆ, ಶರಣಾಗತನಾಗಿದಾನೆ (ನೀನೇ ರಕ್ಷಕ ಎಂಬುದಾಗಿ ಬಂದವನು ) ರಕ್ಷಣೆಯನ್ನು ಬೇಡ್ತಾ ಇದಾನೆ. ಅಂಥವನನ್ನು ಕೊಲ್ಲಕೂಡದು. ಶತ್ರುವೇ ಆಗಿರಲಿ ಶರಣಾಗತನಾಗಿ ಬಂದಾಗ ಕೊಲ್ಲಕೂಡದು. ಯಾಕೆ ಅಂದ್ರೆ ಕರುಣೆಗಾಗಿ. ಅದೇ ಸ್ಥಿತಿ ಇಲ್ಲಿದೆ. ವಿಭೀಷಣ ಶತ್ರು ಪಕ್ಷದಿಂದ ಬಂದಿರಬಹುದು, ಕೈಮುಗಿದಿದಾನೆ, ಶರಣಾಗತನಾಗಿ ಬಂದಿದಾನೆ, ಅಭಯವನ್ನು ಬೇಡಿದಾನೆ, ಕೊಲ್ಲು ಕೊಲ್ಲು ಅಂದ್ರೆ ಹೇಗೆ ಕೊಲ್ಲೋದು? ಗರ್ವವಿರಲಿ ಅಥವಾ ದೈನ್ಯವಿರಲಿ, ಶರಣಾಗತನಾದಮೇಲೆ ಅವನನ್ನು ರಕ್ಷಣೆ ಮಾಡ್ಬೇಕು. ಎಲ್ಲಿಯವರೆಗೆ ಅಂದ್ರೆ ಪ್ರಾಣಕೊಟ್ಟಾದರೂ ಕೂಡ ಉಳಿಸಬೇಕು. ಒಂದು ವೇಳೆ ಹಾಗೆ ಮಾಡದೇ ಇದ್ರೆ ಭಯದಿಂದಲೋ, ಮೋಹದಿಂದಲೋ, ಇನ್ಯಾವುದೋ ಆಸೆಯಿಂದಲೋ ಶರಣಾಗತನಾಗಿ ಬಂದವನನ್ನು ರಕ್ಷಣೆ ಮಾಡದೇ ಇದ್ರೆ ಅದು ಪಾಪ. ಲೋಕದ ನಿಂದೆಗೆ ಒಳಗಾಗತಕ್ಕಂತದ್ದು ಅದು. ಹಾಗಾಗಿ ಶಕ್ತಿಯಿರುವಷ್ಟು, ಪ್ರಾಣ, ತ್ರಾಣ ಇರುವಷ್ಟು ಹೋರಾಡಿ ಶರಣಾಗತನಾಗಿ ಬಂದವನನ್ನು ರಕ್ಷಿಸಬೇಕು. ಹಾಗೆ ಮಾಡದಿದ್ದರೆ ಪಾಪ ಅದು. ಒಂದು ವೇಳೆ ಶರಣಾಗತನಾಗಿ ಬಂದವನನ್ನು ರಕ್ಷಣೆ ಮಾಡೋದಿಲ್ಲ ಅವನೇ ಕೊಲ್ಲದಿದ್ರೂ ಯಾರ ಅಭಯವನ್ನು ಬೇಡಿ ಬಂದಿದಾನೆ ಅವನ ಕಣ್ಣೆದುರೇ ಅಭಯ ಬೇಡಿ ಬಂದವನು ಸತ್ತರೆ ಅವನು ಈ ಲೋಕವನ್ನು ಬಿಟ್ಟು ಹೋಗುವಾಗ ಇವನ ಇಡೀ ಪುಣ್ಯ ಅವನಿಗೆ ಹೋಗ್ತದೆ. ಇವನಿಗೆ ಪಾಪವೇ ಉಳಿಯುವಂಥದ್ದು. ಮತ್ತೆ ಸುಖದ ಮಾತಿಲ್ಲ ಅದರ ನಂತರ. ಶರಣಾಗತರನ್ನ ರಕ್ಷಣೆ ಮಾಡದಿದ್ರೆ ಇಂತಹ ದೋಷ ಇದೆ. ಇತ್ತು ಸತ್ತು ಸ್ವರ್ಗಕ್ಕೂ ಒಳ್ಳೆಯದಲ್ಲ, ಬದುಕಿರುವಾಗ ಕೀರ್ತಿಗೂ ಒಳ್ಳೆಯದಲ್ಲ. ನಮ್ಮ ಇರುವ ಬಲವನ್ನೂ ನಾಶ ಮಾಡ್ತದೆ.

ನಾವು ಅಂಥದ್ದೊಂದು ತಪ್ಪು ಕೆಲಸ ಮಾಡಿದ್ರೆ ನಮ್ಮ ಬಲಕ್ಕೆ ಏನರ್ಥ? ನಮ್ಮ ವೀರತ್ವಕ್ಕೇನರ್ಥ? ಅದು ಉಳೀತದಾ ಆಮೇಲೆ? ವೀರತ್ವವಾಗಲು, ಬಲವಾಗಲಿ, ಉಳಿಯೋದು ಇಂಥಾದ್ದೊಂದು ಸದುದ್ದೇಶಕ್ಕಾಗಿ. ಹಾಗಾಗಿ ಸುಗ್ರೀವ, ಈ ಕಂಡು ಮಹರ್ಷಿಯ ವಚನವನ್ನು ನಾನು ಪಾಲಿಸ್ತೇನೆ. ಅದು ಧರ್ಮಿಷ್ಠ, ಯಶಸ್ಯ, ಅದು ಸ್ವರ್ಗ್ಯ. ಇದಿಷ್ಟು ಹೇಳಿ, ರಾಮಾವತಾರದ ಸಾರವಾದ ಈ ಮಾತುಗಳನ್ನು ಹೇಳ್ತಾನೆ. ಎಲ್ಲ ಸಮಸ್ಯೆಗಳಿಗೆ ಈ ಒಂದೇ ಮಾತು ಪರಿಹಾರ. ಇದನ್ನು ದೇವರಾಗಿಯೇ ಆಡ್ತಾನೆ ರಾಮ. ಹೇಳಿದ್ದೇನು ಪ್ರಭು? “ಒಂದೇ ಒಂದು ಬಾರಿ ಶರಣಾಗತನಾದರೆ, ಆತ್ಮದಿಂದ ‘ನಾ ನಿನ್ನವನು’ ಎಂದು ಬೇಡಿದರೆ, ಅವನು ಯಾರೇ ಆಗಿರಲಿ, ಅವನನ್ನು ಈ ಜಗತ್ತಿನ ಸಕಲ ವ್ಯಕ್ತಿಗಳಿಂದ, ಸಕಲ ಶಕ್ತಿಗಳಿಂದ ನಾನು ರಕ್ಷಿಸ್ತೇನೆ. ಅವನಿಗೆ ಅಭಯವನ್ನು ಕೊಡ್ತೇನೆ. ಇದು ನನ್ನ ವ್ರತ”. ಇದು ವಿಭೀಷಣನಿಗೆ ಮಾತ್ರವಲ್ಲ, ನಮಗೆಲ್ಲರಿಗೂ ಅನ್ವಯವಾಗುವಂತಹ ಮಾತು! ನಮ್ಮ ಹೃದಯದಲ್ಲಿ ಈ ವಾಕ್ಯವಿದ್ದರೆ ಮತ್ತೆ ಭಯ ಅಂತಲೇ ಇಲ್ಲ ಜೀವನದಲ್ಲಿ. ಭರವಸೆಯ ಒಂದು ವಾಕ್ಯ. ಈ ಮಾತನ್ನು ಸಾಮಾನ್ಯ ಮನುಷ್ಯ ಹೇಳೋಕ್ಕೆ ಸಾಧ್ಯವಾ? ‘ಯಾರೂ ತೊಂದರೆ ಮಾಡದಂತೆ ರಕ್ಷಿಸ್ತೇನೆ’ ಎಂದರೆ ಅವನು ದೇವರೇ ಆಗಿರಬೇಕು. ಮತ್ತೆ ಯಾರೂ ಈ ಮಾತನ್ನ ಹೇಳೋಕ್ಕೆ ಸಾಧ್ಯ ಇಲ್ಲ.

ಇಷ್ಟು ಹೇಳಿಸಿದ ಸುಗ್ರೀವ ರಾಮನ ಬಾಯಿಂದ. ಕೊಟ್ಟ ಕೊನೆಯಲ್ಲಿ ಆದೇಶವನ್ನೇ ಮಾಡ್ತಾನೆ. ‘ಸುಗ್ರೀವ, ವಿಭೀಷಣನಿಗೆ ನಾನು ಅಭಯವನ್ನು ಕೊಟ್ಟಾಯಿತು. ಕರ್ಕೊಂಡು ಬಾ, ಬಂದವನು ವಿಭೀಷಣನಾಗಿರಲಿ, ಸ್ವಯಂ ರಾವಣನೇ ಆಗಿರಲಿ‌’ ಎಂದ ಮೇಲೆ ಮತ್ತೆ ಯಾರಾದರೂ ಮಾತಾಡೋದಕ್ಕೆ ಸಾಧ್ಯವಿದೆಯ? ಈ ಮಟ್ಟಕ್ಕೆ ಹೋಗ್ತಾನೆ ರಾಮ ತನ್ನ ಒಬ್ಬ ಶರಣನಿಗೆ ಅಭಯವನ್ನು ಕೊಡುವ ಸಲುವಾಗಿ!! ರಾಮನು ವಿಭೀಷಣನನ್ನು ಪರಂಜ್ಯೋತಿಯ ದೃಷ್ಟಿಯಿಂದ ನೋಡಿದ! ದೇವರು ರಕ್ಷಿಸಬೇಕೆಂದು ಹೊರಟಾಗ ತಡೆಯಲಿಕ್ಕೆ ಯಾರಿಗೂ ಸಾಧ್ಯವಿಲ್ಲ. ದೇವರು ಸಂಹರಿಸಲು ಹೊರಟಾಗಲೂ ತಡೆಯಲಿಕ್ಕೆ ಯಾರಿಗೂ ಸಾಧ್ಯವಿಲ್ಲ.

ಆಗ ಸುಗ್ರೀವನು ವಿಭೀಷಣನ ಮೇಲೆ ರಾಮನಿಟ್ಟ ಪ್ರೀತಿಯಿಂದ ಪ್ರಚೋದಿತನಾದನಂತೆ. ಇದು ಯಾವ ಬಗೆಯ ವಾತ್ಸಲ್ಯ! ಆವೊಂದು ಭಾವಕ್ಕೆ ಮಾರುಹೋದನಂತೆ ಸುಗ್ರೀವ. ಅವನು ರಾಮನಿಗೆ ಹೇಳಿದನಂತೆ, ‘ ಪ್ರಭೂ ನೀನು ಹೀಗೆ ಮಾಡಿದರೆ ಆಶ್ಚರ್ಯವೇನಿದೆ? ಮತ್ಯಾರೂ ಹೀಗೆ ಮಾಡೋದಕ್ಕೆ ಸಾಧ್ಯ ಇಲ್ಲ. ನಮ್ಮಂತವರಿಗಲ್ಲ, ನಿನಗೇ ಸರಿ ಇದು. ಎಲೈ ಧರ್ಮಜ್ಞನೇ, ಎಲೈ ಲೋಕನಾಥನೇ, ಎಲೈ ಸುಖಾವಹನೇ, ಇಂತಹ ಮಾತು ನಿನಗೇ ಸರಿ! ಇನ್ಯಾರೂ ಹೀಗೆ ಹೇಳ್ತಿರಲಿಲ್ಲ. ಈಗ ಹೇಳ್ತಾನೆ, ನನ್ನ ಅಂತರಾತ್ಮಕ್ಕೂ ವಿಭೀಷಣನು ಶುದ್ಧ ಅಂತ ಅನ್ನಿಸ್ತಾ ಇದೆ. ನೀನು ಹನುಮಂತ ಇಬ್ಬರೂ ಎರಡೂ ರೀತಿಯಲ್ಲಿ ಪರೀಕ್ಷೆ ಮಾಡಿದ್ದೀರಿ ತಾನೇ! ಯುಕ್ತಿಯಿಂದಲೂ ಪರೀಕ್ಷೆ ಮಾಡಿದ್ದೀರಿ ಮತ್ತು ಭಾವನೆಯಿಂದಲೂ ಪರೀಕ್ಷೆ ಮಾಡಿದ್ದೀರಿ. ಮತ್ತಿನ್ನೇನು? ಕೂಡಲೇ ಈ‌ ವಿಭೀಷಣನು ನಮ್ಮೆಲ್ಲರಿಗೆ ಸಮಾನನಾಗಲಿ. ನಮಗೆ ಯಾವ ಸ್ಥಾನವಿದೆಯೋ ಅದೇ ಸ್ಥಾನ ಅವನಿಗೂ ಪ್ರಾಪ್ತವಾಗಲಿ. ನಮ್ಮನ್ನು ಹೇಗೆ ನೋಡಲಾಗ್ತಾ ಇದೆಯೋ ಅದೇ ರೀತಿಯಲ್ಲಿ ವಿಭೀಷಣನನ್ನೂ ನೋಡುವಂತಾಗಲಿ. ಮಹಾಪ್ರಾಜ್ಞನಾದ ವಿಭೀಷಣನು ನಮಗೆಲ್ಲ ಸಖನಾಗಲಿ ಎಂಬುದಾಗಿ ಸುಗ್ರೀವನು ಒಪ್ಪಿದನಂತೆ. ಒಪ್ಪಿಸಿಯೇ ಬಿಡುವುದು ರಾಮ.

ಹೀಗೆ ಹರಿರಾಜ ಸುಗ್ರೀವನು ಒಪ್ಪಿದ ಮೇಲೆ ರಾಮನು ವಿಭೀಷಣನೊಡನೆ ಮೈತ್ರಿಗೆ ಮುಂದಾದನು. ರಾಮನಿಂದ ಅಭಯವು ನೀಡಲ್ಪಟ್ಟಿರಲಾಗಿ ವಿಭೀಷಣನು ಬಗ್ಗಿ ನಮಸ್ಕಾರ ಮಾಡುವ ಭಂಗಿಯಲ್ಲಿಯೇ ಕೆಳಗಿಳಿತಾನೆ. ಒಮ್ಮೆ ಭೂತಲವನ್ನು ಅವಲೋಕನ ಮಾಡ್ತಾನೆ ವಿಭೀಷಣ. ಹೃಷ್ಟನಾಗಿ, ಅವನಿಂದ ಎಂದೂ ವಿಭಕ್ತರಲ್ಲದ ತನ್ನ ನಾಲ್ವರು ಅನುಚರರೊಡಗೂಡಿ ಧರೆಗಿಳಿದನು. ಧರ್ಮಾತ್ಮನಾದ ವಿಭೀಷಣ ಶರಣಾಗತನಾಗಿ ಹೋಗಿ ರಾಮನ ಕಾಲಿಗೆ ಬಿದ್ದನು. ಅವನ ಜೊತೆಗೆ ಅವರೂ ನಾಲ್ಕು ಜನರು ಬಿದ್ದುಬಿಟ್ಟರು ರಾಮನ ಕಾಲಿಗೆ. ನೀನೇ ಎನ್ನ ಸರ್ವಸ್ವ ಎಂಬ ಭಾವ. ಧರ್ಮಯುಕ್ತವಾದ ಮಾತುಗಳನ್ನು ವಿಭೀಷಣನು ಆಡಿದನಂತೆ ರಾಮನಿಗೆ.

‘ನಾನು ಖಳ ರಾವಣನ ತಮ್ಮ. ಆದರೆ ಅವನಿಗೆ ನಾನು ಬೇಡ. ನನ್ನ ಲೆಕ್ಕ ಅವನಿಗಿಲ್ಲ. ನನ್ನನ್ನು ಅವನು ಅರ್ಥ ಮಾಡಿಕೊಳ್ಳಲಿಲ್ಲ. ಹಾಗಾಗಿ ಅವನನ್ನು ತ್ಯಜಿಸಿ, ಈ ಪ್ರಪಂಚದ ಸಕಲ ಜೀವಗಳಿಗೆ ಯಾರು ಶರಣ್ಯನೋ, ಸಮುದ್ರದಂತೆ ಎಲ್ಲರಿಗೂ ಆಶ್ರಯನಾದ ನಿನಗೆ ನಾನು ಶರಣಾಗತನಾಗಿ ಬಂದೆ. ಲಂಕೆಯನ್ನು, ನನ್ನ ಮಿತ್ರರನ್ನು, ನನ್ನ ಸಂಪತ್ತನ್ನು, ನನ್ನ ರಾಜ್ಯವನ್ನು, ಜೀವಿತವನ್ನು, ಸುಖವನ್ನು, ಎಲ್ಲವನ್ನೂ ಬಿಟ್ಟು ನಿನಗರ್ಪಿಸಿದೆ. ಇನ್ನು ನನ್ನದೆಲ್ಲವೂ ನಿನ್ನದು, ನನ್ನ ಜೀವ ನಿನ್ನ ಕೈಯಲ್ಲಿ, ನನ್ನ ಭವಿಷ್ಯ ನಿನ್ನ ಕೈಯಲ್ಲಿ. ನಾನು ಹೇಗಿರಬೇಕು, ಹೇಗಿರಬಾರದು ನಿನಗೆ ಬಿಟ್ಟಿದ್ದು’. ಇದು ಆ ಶರಣಾಗತಿಯ ಭಾವ. ಶರಣಾಗತಿಯ ಭಾವದಲ್ಲಿ ತಕರಾರು‌ ಅಂತ ಇರೋದಿಲ್ಲ. ಅಂತವನಿಗೆ ಇರುವ ನೆಮ್ಮದಿ ಈ ಪ್ರಪಂಚದಲ್ಲಿ ಯಾರಿಗೂ ಇರೋದಿಲ್ಲ. ಅಂಥವನನ್ನು ಎಂದೂ ದೇವರು ಕೈ ಬಿಡೋದಿಲ್ಲ. ಅಂಥವರನ್ನು ಸರ್ವಥಾ ಕಾಪಾಡ್ತಾನೆ. ಇಡೀ ಕಪಿಸೈನ್ಯ ಒಂದು ಕಡೆಗಿದ್ದರೆ, ರಾಮ ಒಂದು ಕಡೆಗೆ ಅನ್ನುವ ಪರಿಸ್ಥಿತಿ ಅಲ್ಲಿ; ಅಭಯ ಕೊಟ್ಟೇ ಕೊಡ್ತಾನೆ ಹೊರತು ಕೊಡದೇ ಇರೋದಿಲ್ಲ. ದೈವತ್ವ ಅದು. ವಿಭೀಷಣನ ಮಾತನ್ನು ರಾಮನು ಕೇಳ್ತಾನೆ, ವಿಭೀಷಣನನ್ನು ಸಂತೈಸ್ತಾನೆ. ‘ಭಯ ಪಡಬೇಡ, ಬೇಸರವನ್ನೂ ಮಾಡಿಕೊಳ್ಳಬೇಡ. ನಿನ್ನ ಮನೆಗೇ ನೀನು ಬಂದಿದ್ದೀಯೆ’ ಅಂತ ಸಂತೈಸ್ತಾನೆ. ಬಳಿಕ ವಿಭೀಷಣನನ್ನು ರಾಮನು ಪ್ರೇಮದೃಷ್ಟಿಯಿಂದ ನೋಡಿದನಂತೆ.

ಹೇಗೆ ನೋಡಿದನಂತೆ ಎಂದರೆ ಕಂಗಳಿಂದಲೇ ಕುಡಿಯುವವನಂತೆ. ಅಷ್ಟು ಪ್ರೇಮ ತುಂಬಿದ ದೃಷ್ಟಿಯಿಂದ ವಿಭೀಷಣನನ್ನು ನೋಡಿದ. ರಾಮನ ಅಪೇಕ್ಷೆಯ ಮೇರೆಗೆ ಲಂಕೆಯ ಪ್ರಮುಖ ವೀರರ ಪರಿಚಯವನ್ನು ವಿಭೀಷಣ ಕೊಡುತ್ತಾನೆ. ಮೊದಲು ರಾವಣನ ಪರಿಚಯ. ‘ರಾವಣನು ದೇವ, ದಾನವ, ರಾಕ್ಷಸರಿಗೆ ವರದ ಕಾರಣದಿಂದಾಗಿ ಅವಧ್ಯ. ಕುಂಭಕರ್ಣ ರಾವಣನ ನಂತರದವನು. ನನ್ನ ಮೇಲಿನವನು. ವೀರ, ಮಹಾತೇಜಸ್ವಿ. ಯುದ್ಧದಲ್ಲಿ ದೇವರಾಜನಿಗೆ ಪ್ರತಿಬಲ. ಪ್ರಹಸ್ತ ರಾವಣನ ಸೇನಾಪತಿ. ಕೈಲಾಸದಲ್ಲಿ ರಾವಣ ಮತ್ತು ಕುಬೇರನ ಮಧ್ಯೆ ಯುದ್ಧ ನಡೆದಾಗ ಮಾಣಿಭದ್ರನನ್ನು (ಕುಬೇರನ ಸೇನಾಪತಿ, ಯುವರಾಜ ಎಂದೂ ಹೇಳುತ್ತಾರೆ) ಸೋಲಿಸಿದ್ದ. ಇಂದ್ರಜಿತು ಯುದ್ಧಸಿದ್ಧತೆ ಮಾಡುವಾಗ ಒಂದು ಯಜ್ಞಮಾಡಿದರೆ ರಥ, ಕುದುರೆಗಳು, ಕವಚ, ಧನುಸ್ಸು, ಬಾಣ ಇನ್ನುಳಿದ ಯುದ್ಧಸಾಮಾಗ್ರಿಗಳೆಲ್ಲಾ ಅಗ್ನಿಕುಂಡದಿಂದ ಮೇಲೆದ್ದು ಬರುತ್ತವೆ. ಅವನು ಅಂಗುಲಿತ್ರಾಣ ಹಾಕಿಕೊಂಡು, ಕವಚ ಧರಿಸಿದರೆ ಮಾಯವಾಗುತ್ತಾನೆ. ಹಾಗಾಗಿ ಶತ್ರುವು ಏನೂ ಮಾಡಲಾಗುವುದಿಲ್ಲ. ಇವನು ಶಸ್ತ್ರಪ್ರಯೋಗ ಮಾಡುತ್ತಿರುತ್ತಾನೆ. ಹಾಗಾಗಿ ಅವನು ಅಜೇಯ. ಅವನ ಕವಚವು ಅವಧ್ಯಕವಚ. ಇದನ್ನೆಲ್ಲಾ ಅವನು ಯುಜ್ಞಮಾಡಿದರೆ ಮಾಡಬಲ್ಲ ಅಷ್ಟೇ. ಮಹೋದರ, ಮಹಾಪಾರ್ಶ್ವ, ಅಕಂಪನ ಎನ್ನುವವರು ಸೇನಾನಾಯಕರು. ಅವರೆಲ್ಲಾ ಲೋಕಪಾಲಕರಿಗೆ ಸಮಾನರು’. ಸೈನ್ಯದ ಬಗ್ಗೆ ಹೇಳುತ್ತಾನೆ. ‘ಕೋಟಿಯ ಸಂಖ್ಯೆಯಲ್ಲಿ ಕಾಮರೂಪಿಗಳಾದ ರಾಕ್ಷಸರಿದ್ದಾರೆ. ಎಲ್ಲಾ ಮಾಂಸ ತಿಂದು ರಕ್ತ ಕುಡಿಯುವವರು. ಇವರೆಲ್ಲರೊಡಗೂಡಿ ರಾವಣನು ಇಂದ್ರ, ಕುಬೇರ, ಯಮರನ್ನು ಎದುರಿಸಿ ಯುದ್ಧ ಮಾಡಿದ್ದಾನೆ.ಅವರನ್ನು ಭಗ್ನಗೊಳಿಸಿದ್ದಾನೆ. ರಾವಣನನ್ನು ಗೆಲ್ಲಲು ದೇವತೆಗಳಿಗೂ ಸಾಧ್ಯವಾಗಿಲ್ಲ’. ಹೀಗೆಲ್ಲ ಪರಿಚಯ ಹೇಳಿದ ವಿಭೀಷಣ.

ರಾಮನು ಇಡೀ ವಿಷಯವನ್ನು ಮನಸ್ಸಿಗೆ ತೆಗೆದುಕೊಂಡು, ಸಮಾಧಾನವಾಗಿ ವಿಭೀಷಣನಿಗೆ ಹೇಳುತ್ತಾನೆ. ‘ರಾವಣ ಏನನ್ನೆಲ್ಲಾ ಮಾಡಿದ್ದಾನೆ, ಯಾರನ್ನೆಲ್ಲಾ ಗೆದ್ದಿದ್ದಾನೆ ಎಂದು ಕೇಳಿದೆ, ಅರಿತೆ. ಗೊತ್ತಿರುವುದನ್ನು ಇನ್ನೂ ವಿವರವಾಗಿ ಹೇಳುತ್ತಿದ್ದೀಯೆ. ಆದರೆ ಒಂದು ಮಾತನ್ನು ಹೇಳುತ್ತೇನೆ ಕೇಳು. ಪ್ರಹಸ್ತ, ಕುಂಭಕರ್ಣ, ಇಂದ್ರಜಿತು ಮೊದಲಾದವರ ಸಹಿತನಾಗಿರುವ ರಾವಣನನ್ನು ಸಂಹರಿಸಿ ಲಂಕೆಗೆ ನಿನ್ನನ್ನು ರಾಜನನ್ನಾಗಿ ಮಾಡುತ್ತೇನೆ. ಇದು ಸತ್ಯ’ ಎಂದು ಘೋಷಿಸಿದ. ಇನ್ನೂ ಸೇವೆ ಪ್ರಾರಂಭ ಮಾಡುತ್ತಿದ್ದಾಗಲೇ ಫಲ ಬಂತು ವಿಭೀಷಣನಿಗೆ. ‘ರಾವಣನು ರಸಾತಲ ಪ್ರವೇಶ ಮಾಡಿದರೂ, ಪಾತಾಳದಲ್ಲಿ ಅಡಗಿದರೂ, ಸತ್ಯಲೋಕದಲ್ಲಿ ಬ್ರಹ್ಮನ ಆಶ್ರಯಪಡೆದರೂ ಅವನನ್ನು ನಾನು ಬಿಡುವುದಿಲ್ಲ. ಇದೋ ವಿಭೀಷಣ, ಪುತ್ರ ಮತ್ತು ಅಮಾತ್ಯ, ಸೇನೆ, ಬಂಧು-ಬಾಂಧವರ ಸಹಿತನಾದ ರಾವಣನನ್ನು ಸಂಹರಿಸದೇ ಅಯೋಧ್ಯೆಯನ್ನು ಪ್ರವೇಶಮಾಡುವುದಿಲ್ಲ. ಲಕ್ಷ್ಮಣ, ಭರತ, ಶತ್ರುಘ್ನನ ಮೇಲೆ ಆಣೆ’ ಎಂಬುದಾಗಿ ಪ್ರತಿಜ್ಞೆಮಾಡಿದ. 14 ವರ್ಷ ವನವಾಸದಲ್ಲಿ 13 ವರ್ಷ 10 ತಿಂಗಳು ಆಗಿದೆ. ಈ ಸಮಯದಲ್ಲಿ ರಾವಣನ ಸಂಹಾರಮಾಡದೇ ಅಯೋಧ್ಯೆಯನ್ನು ಪ್ರವೇಶಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಿದ್ದಾನೆ . ಬಂದಿರುವುದೇ ಅದಕ್ಕಾಗಿ. ಅಕ್ಲಿಷ್ಟಕರ್ಮ ರಾಮ. ಈ ಮಾತುಗಳನ್ನು ಕೇಳಿದ ವಿಭೀಷಣನು ರಾಮನ ಪಾದಕ್ಕೆ ಹಣೆಹಚ್ಚಿದ.

ಶಿರಬಾಗಿ ವಂದಿಸಿ ‘ಜೊತೆಯಲ್ಲಿ ನಾನೂ ಇದ್ದೇನೆ. ಲಂಕೆಯನ್ನು ವಶಪಡಿಸುವ ಕಾರ್ಯದಲ್ಲಿ ನಾನೂ ಇದ್ದೇನೆ. ಪ್ರಾಣವಿರುವವರೆಗೆ ನಿನಗಾಗಿ ಹೋರಾಡುತ್ತೇನೆ’ ಎಂದು ಅವನೂ ಪ್ರತಿಜ್ಞೆ ಮಾಡಿದ. ದೇಹದಲ್ಲಿ ಏನು ಶಕ್ತಿಯಿದೆ, ಬುದ್ಧಿಶಕ್ತಿ, ಜೀವಶಕ್ತಿ ಏನು ಅದೆಲ್ಲವನ್ನು ರಾಮಕಾರ್ಯಕ್ಕೆರೆದ ಭರತ. ಅದೇ ಬಗೆಯ ಪ್ರತಿಜ್ಞೆಯನ್ನು ವಿಭೀಷಣ ಮಾಡುತ್ತಿದ್ದಾನೆ. ರಾಮನಿಗೆ ಸಂತೋಷವಾಯಿತು. ವಿಭೀಷಣನನ್ನು ಬರಸೆಳೆದು ಬಾಚಿ ತಬ್ಬಿದ. ಲಕ್ಷ್ಮಣನಿಗೆ ಹೀಗೆಂದ. ‘ಸಮುದ್ರದಿಂದ ನೀರನ್ನು ತೆಗೆದುಕೊಂಡು ಬಾ. ಇಲ್ಲಿಯೇ ಈಗಲೇ ವಿಭೀಷಣನನ್ನು ಲಂಕಾಧಿಪತಿಯಾಗಿ ಅಭಿಷೇಕಮಾಡೋಣ’. ಅಭಿಷೇಕವನ್ನು ಪುಣ್ಯಜಲದಿಂದ ಮಾಡುತ್ತಾರೆ. ಸಮುದ್ರದಲ್ಲಿ ಎಲ್ಲಾ ನದಿಗಳು ಸೇರಿರುವುದರಿಂದ ಅಲ್ಲಿ ಎಲ್ಲ ಬಂತು. ಅಭಿಷೇಕ ಮಾಡಲು ಯಾರನ್ನೂ ಕೇಳಲಿಲ್ಲ. ವಿಶ್ವನಾಯಕನಿಗೆ ಯಾರಪ್ಪಣೆ ಯಾಕೆ? ಲಂಕೆಯು ಸಮುದ್ರದಾಚೆ ಬೆಟ್ಟದ ಮೇಲಿದೆ. ಎಲ್ಲಾ ಅಲ್ಲಿದ್ದಾರೆ. ಇಲ್ಲಿ ಲಂಕೆಯ ದೊರೆಯ ತೀರ್ಮಾನವಾಗುತ್ತಿದೆ. ಹೃದಯದಿಂದ ನೋಡುತ್ತಾನೆ ರಾಮ. ಸುಗ್ರೀವ ಬಂದು ತನ್ನ ಕಥೆಯನ್ನು ಹೇಳಿದಾಗಲೂ ಹಾಗೆಯೇ. ಸತ್ಯವೋ ಸುಳ್ಳೋ ಎಂದು ಹೃದಯದಿಂದ ತೀರ್ಮಾನಿಸಿದ್ದ. ವಿಭೀಷಣ ಯೋಗ್ಯ ಎಂದು ತಿಳಿಯಲು ಅವನ ಕಣ್ಣೇ ಸಾಕಾಯ್ತು. ಲಕ್ಷ್ಮಣನಿಗೆ ಅಪ್ಪಣೆ ಮಾಡಿದ. ‘ಸಮುದ್ರದಿಂದ ನೀರು ತಂದು ವಿಭೀಷಣನನ್ನು ರಾಕ್ಷಸರ ದೊರೆಯಾಗಿ ಅಭಿಷೇಕ ಮಾಡು. ನಾನು ಪ್ರಸನ್ನನಾಗಿದ್ದೇನೆ’. ಪ್ರಸನ್ನತೆಯ ಅಭಿವ್ಯಕ್ತಿ ಹೀಗೆ. ಸೇವೆಗೆ ತೊಡಗುವ ಮುನ್ನವೇ ಫಲ ಬಂದಾಯಿತು. ರಾಮನ ಸೇವೆಯ ಫಲವಿದು. ಅದನ್ನು ಕಂಡ ಕಪಿಗಳು ಸಂತೋಷತಾಳಲಾರೆದೇ ಕೂಗಿಕೊಂಡರು. ಹರ್ಷವು ಮುಗಿಲುಮುಟ್ಟಿತು. ವಿಭೀಷಣನನ್ನು ಎತ್ತರದಲ್ಲಿ ಕೂರಿಸಿ, ಸಮುದ್ರದಿಂದ ಜಲ ತಂದು, ವಾನರರ ಮಧ್ಯದಲ್ಲಿ, ರಾಮಶಾಸನದ ಪ್ರಕಾರ ಅಭಿಷೇಕ ಮಾಡಿದ ಲಕ್ಷ್ಮಣ. ಆಗ ಹರ್ಷೋದ್ಗಾರ. ರಾಕ್ಷಸರು ಯಾರೂ ಇಲ್ಲ ಅಲ್ಲಿ. ರಾಮನ ಕೃಪೆಯೇ ಹಾಗೆ. ಏನಾದರೂ ಆಗಬಹುದು. ಎಲ್ಲ ಕಪಿಗಳೂ ಸಾಧು! ಸಾಧು! ಎಂದು ಕೂಗಿದರು. ಬಳಿಕ ಕಾರ್ಯಕ್ಕಿಳಿಯುತ್ತಾರೆ.

ಹನುಮಂತ ಸುಗ್ರೀವ ನೇರವಾಗಿ ವಿಭೀಷಣನನ್ನು ಭೇಟಿಮಾಡುತ್ತಾರೆ. ‘ಈ ಸಮುದ್ರವನ್ನು ದಾಟುವುದು ಹೇಗೆ? ಸೇನೆಯೆಲ್ಲಾ ಸೇರಿ ದಾಟಬೇಕು ದಾರಿ ತಿಳಿಯುತ್ತಿಲ್ಲ. ಏನು ಮಾಡಬೇಕು?’ ಎಂದು ವಿಭೀಷಣನನ್ನು ಕೇಳಿದರು. ಅವನು ಒಂದು ಕ್ಷಣವೂ ಆಲೋಚಿಸಲಿಲ್ಲ. ಸಮುದ್ರಕ್ಕೆ ಋಣವಿದೆ ರಾಮನದ್ದು. ರಾಮನ ಪೂರ್ವಜನಾದ ಸಗರನ ಮಕ್ಕಳು ಸಮುದ್ರವನ್ನು ಬೆಳೆಸಿದರು. ಅಲ್ಲಿಗೆ ಗಂಗೆಯನ್ನು ಹರಿಸಿದ್ದು ರಾಮನ ಪೂರ್ವಜನಾದ ಭಗೀರಥ. ‘ರಾಮನು ಸಮುದ್ರವನ್ನು ಧ್ಯಾನಮಾಡಲಿ’ ಎಂದು ಸಲಹೆಕೊಡುತ್ತಾನೆ ವಿಭೀಷಣ. ‘ಹಾಗೆ ರಘುಕುಲದ ಋಣವನ್ನು ಸಮುದ್ರನು ತೀರಿಸಲಿ’. ಸುಗ್ರೀವ ಮತ್ತು ಹನುಮಂತ ರಾಮನಿರುವಲ್ಲಿಗೆ ಹೋದರು. ಅಲ್ಲಿ ವಿಭೀಷಣನ ಮಾತನ್ನು ಸುಗ್ರೀವ ಹೇಳುತ್ತಾನೆ. ‘ನೀನು ಸಮುದ್ರದ ಉಪಾಸನೆ ಮಾಡಬೇಕಂತೆ. ಸಮುದ್ರಕ್ಕೆ ನಿಮ್ಮ ಋಣವಿದೆಯಂತೆ’ ಎಂದಾಗ ಆ ಸಲಹೆ ರಾಮನಿಗೆ ಹಿಡಿಸಿತು. ಏಕೆಂದರೆ ಅವನಿಗೆ ಧ್ಯಾನ ಮಾಡುವುದು ಇಷ್ಟ. ಧರ್ಮವು ಅವನಿಗೆ ಸ್ವಭಾವ. ಆದರೂ ಗೌರವಪೂರ್ವಕವಾಗಿ ಮತ್ತೆ ಸುಗ್ರೀವ-ಲಕ್ಷ್ಮಣರನ್ನು ಕೇಳುತ್ತಾನೆ. ಮುಖದಲ್ಲಿ ಮಂದಹಾಸವಿತ್ತು. ಕ್ರಿಯಾದಕ್ಷತೆ ಇತ್ತು ಮಾತಿನಲ್ಲಿ. ‘ನನಗೆ ವಿಭೀಷಣನ ಸಲಹೆ ಇಷ್ಟವಾಗುತ್ತಿದೆ. ಏನು ಮಾಡಲಿ ಎಂದು ನೀವು ಹೇಳಿ. ಸುಗ್ರೀವನು ಪಂಡಿತೆ. ನೀನು ಮಂತ್ರಾಲೋಚನೆಗೆ ಸಲ್ಲುವಂಥವನು. ನೀವಿಬ್ಬರೂ ಆಲೋಚಿಸಿ ಹೇಳಿ’ ಎಂದ. ಆಗ ಅವರಿಬ್ಬರೂ ‘ನಮಗೆ ಹೇಗೆ ತಾನೆ ಇಷ್ಟವಾಗುವುದಿಲ್ಲ. ಇದು ಸರಿಯಿದೆ. ಸಮುದ್ರರಾಜನ ಸಹಕಾರ ಬೇಕು. ಹಾಗಾಗಿ ಆ ಸಲಹೆಯಂತೆ ಮಾಡೋಣ. ತಡಮಾಡದೇ ಸಮುದ್ರನನ್ನು ಪ್ರಾರ್ಥಿಸೋಣ’ ಎಂದಾಗ ರಾಮನು ದರ್ಭೆ ಹರಡಿ ಸಮುದ್ರ ತೀರದಲ್ಲಿ ಪವಡಿಸಿದನು. ನಿದ್ರೆಗಾಗಿ ಅಲ್ಲ. ಯೋಗನಿದ್ರೆಗಾಗಿ. ಆ ದರ್ಭೆಯ ನಡುವೆ ರಾಮನು ಯಜ್ಞವೇದಿಕೆಯಲ್ಲಿ ಯಜ್ಞೇಶ್ವರನಂತೆ ಕಾಣುತ್ತಿದ್ದ.

ಇನ್ನೊಂದೆಡೆ ಶಾರ್ದೂಲ ಬಂದು ಕಪಿಸೇನೆಯನ್ನು ನೋಡಿದ. ಅವನು ರಾವಣನ ಗುಪ್ತಚರ. ಅವರ ಪೈಕಿಯಲ್ಲಿ ಪ್ರಮುಖ. ಅವನು ಆಕಾಶದಲ್ಲಿ ಬಂದು ದೂರದಿಂದ ನೋಡಿದ. ಸೈನ್ಯ ಹರಡಿದೆ. ತುದಿ, ಮೊದಲು ಕಾಣುತ್ತಿಲ್ಲ. ಪರ್ವತಾಕಾರದ ಕೋಟ್ಯಂತರ ಕಪಿಗಳು. ಅವನಿಗೆ ಗಾಬರಿಯಾಯಿತು. ಒಂದೇ ಉಸಿರಿನಲ್ಲಿ ಲಂಕೆಯನ್ನು ಸೇರಿ, ರಾವಣನ ಬಳಿ ಹೋದ. ಅವನಿಗೆ ಪ್ರವೇಶವಿದೆ.

ಶಾರ್ದೂಲ ರಾವಣನಲ್ಲಿ ಹೋಗಿ ಉಸಿರನ್ನೂ ತೆಗೆದುಕೊಳ್ಳದೇ, ಒಂದೇ ಉಸಿರಿನಲ್ಲಿ, ವಾನರರ ಮತ್ತು ಭಲ್ಲೂಕಗಳ ಅಂದ್ರೆ ಕಪಿ ಕರಡಿಗಳ ದೊಡ್ಡ ಸೈನ್ಯ ಈ ಕಡೆ ಬರ್ತಾ ಇದೆ. ಆ ಸೈನ್ಯ ಕಲ್ಪನೆಗೂ ಮೀರಿದ್ದು. ಸಮುದ್ರದಷ್ಟು ದೊಡ್ಡ ಸೈನ್ಯ ಮತ್ತು ಅದರ ಉದ್ದ ಆಳ ಮತ್ತು ಅಗಲ ಗೊತ್ತಾಗುತ್ತಾ ಇಲ್ಲ. ಅದನ್ನು ದಶರಥಪುತ್ರರು, ರಾಮ ಲಕ್ಷ್ಮಣರು ಸೀತೆಯನ್ನು ಹುಡುಕಿಕೊಂಡು ಬರ್ತಾ ಇದ್ದಾರೆ. ಧನಸ್ಸು ಬಾಣ ಹಿಡಿದುಕೊಂಡು ಪ್ರಜ್ವಲಿಸುತ್ತಾ ಇದ್ದಾರೆ. ಆ ಸೈನ್ಯ ನಿಂತ ಜಾಗ ಸುಮಾರು ಹತ್ತು ಯೋಜನೆಯಷ್ಟು ಇರಬಹುದು. ಅಥವಾ ಆಕಾಶವನ್ನೇ ಮುಚ್ಚುವಂತೆ ಸೈನ್ಯ ಬಂದು ವ್ಯಾಪಿಸಿದೆ. ನಿಮ್ಮ ಗಮನಕ್ಕೆ ತರ್ತಾ ಇದ್ದೆನೆ. ಸಾಮ ದಾನ ಅಥವಾ ಭೇದ ಯಾವುದಾದರೂ ಒಂದು ಉಪಾಯವನ್ನು ಆದಷ್ಟು ಬೇಗ ಮಾಡಿ ಅಂತ ರಾವಣನಿಗೆ ಹೇಳಿ ಉಸಿರು ನಿಲ್ಲಿಸಿದ. ಇಷ್ಟು ಹೇಳಿದ ಶಾರ್ದೂಲ ದಂಡದ ವಿಷಯವನ್ನೇ ಎತ್ತಲಿಲ್ಲ. ಯಾಕೆಂದ್ರೆ ಭಯ ಕೆಲಸ ಮಾಡ್ತಾ ಇದೆ. ಎಷ್ಟು ಯುದ್ಧಗಳನ್ನು, ರಾಜ್ಯಗಳನ್ನು, ವೀರರುಗಳನ್ನು ಗೆದ್ದಿದ್ದಾರೋ ರಾಕ್ಷಸರು ಅದಕ್ಕೆ ಲೆಕ್ಕ ಇಲ್ಲ. ಆದರೆ ಭಯದ ಅನುಭವ ಈಗ ಆಗ್ತಾ ಇದೆ. ವ್ಯಘ್ರನಾದಾನಂತೆ ರಾವಣ. ಮೊದಲೆ ಚಿಂತೆಯಲ್ಲಿ ಇದ್ದಾನೆ ಅದರ ಮೇಲೆ ಶಾರ್ದೂಲ ಅದೇ ಹೊತ್ತಿನಲ್ಲಿ ಬಂದು ಅದನ್ನು ಇನ್ನಷ್ಟು ಹೆಚ್ಚು ಮಾಡ್ತಾ ಇದ್ದಾನೆ. ಒಂದು ಕ್ಷಣ ಆಲೋಚನೆ ಮಾಡಿ ಶುಕನನ್ನು ಕರೆದ. ಶುಕ ಶಬ್ದದ ಅರ್ಥ ಗಿಳಿ ಅಂತ ಆದರೆ ಇಲ್ಲಿ ಒಂದು ರಾಕ್ಷಸ. ಅವನು ವೀರನೂ ಹೌದು ಅವನ ಪರಿಣಿತಿ ದೌತ್ಯದಲ್ಲಿ, ಗುಪ್ತಚರ ಮಾಡುವಲ್ಲಿ ಮತ್ತು ರಾಯಭಾರ ಮಾಡುವಲ್ಲಿ. ಅವನನ್ನು ಕರೆದು ನೀನು ವಾನರ ಸೈನ್ಯ ಮತ್ತು ರಾಮ ಲಕ್ಷ್ಮಣ ಇದ್ದಲ್ಲಿ ಹೋಗು, ಹೋಗಿ ಸುಗ್ರೀವನಲ್ಲಿ ಕೆಲವು ಮಾತುಗಳನ್ನು ನೀನು ಹೇಳು. ರಾಮನಿಗೂ ಅಲ್ಲ ಲಕ್ಷ್ಮಣನಿಗೂ ಅಲ್ಲ. ಒಡೆದು ಆಳುವ ನೀತಿಯನ್ನು ರಾವಣ ವಿಚಾರ ಮಾಡ್ತಾ ಇದ್ದಾನೆ. ಯುದ್ಧನೀತಿಗಿಂತ ಹೆಚ್ಚು ಕುಟಿಲೋಪಾಯಗಳೇ ಮನಸ್ಸಿಗೆ ಬರ್ತಾ ಇದೆ. ರಾವಣ ಏನು ಹೇಳಲಿಕ್ಕೆ ಹೇಳಿದ ಅಂದ್ರೆ ನಿನಗೆ ಬರುವಷ್ಟು ಚೆಂದ ಮಾಡಿ ಮಾತನಾಡು. (ಇಂಗ್ಲೀಷಿನಲ್ಲಿ ಹೇಳುವುದಾದರೆ “your best of” ಕೊಡು.), ಸ್ವಲ್ಪ ಗಂಡಸುತನ ಇರಲಿ ಮಾತಿನಲ್ಲಿ. ಸಂದೇಶ ಏನು ಅಂದ್ರೆ, “ಸುಗ್ರೀವ, ನೀನು ಮಹಾರಾಜರ, ಚಕ್ರವರ್ತಿಯ ಕುಲದಲ್ಲಿ ಹುಟ್ಟಿದವನು. ಮಹಾ ಬಲಿಷ್ಥನು. ವೃಕ್ಷ ರಜಸ್ಸಿನ ಸುತ ನೀನು. ವೃಕ್ಷ ರಜಸ್ಸು ಅಂದ್ರೆ ವಾಲಿ ಸುಗ್ರೀವರ ತಂದೆ. ಅಂತವರ ಪುತ್ರ ನೀನು. ಈ ಯುದ್ಧದಲ್ಲಿ ನಿನಗೆ ಮತ್ತು ಕಿಷ್ಕಿಂಧೆಗೆ ಆಗುವ ಲಾಭವಾದರೂ ಏನು? ನಷ್ಟವಾದರೂ ಏನು? ಎಲೈ ಕಪಿರಾಜನೇ ನೀನು ನನಗೆ ಒಡ ಹುಟ್ಟಿದ ಸೋದರ ಸಮಾನ. ನಿನ್ನ ಮೇಲೆ ಹೇಗೆ ಯುದ್ಧ ಮಾಡಲಿ ನಾನು. ರಾಮನಿಗೆ ವಿಭೀಷಣನ ಮೇಲೆ ಪ್ರೀತಿ ಬಂದ ಹಾಗೆ ಇವನಿಗೆ ಸುಗ್ರೀವನ ಮೇಲೆ ಪ್ರೀತಿ ಬಂದಿದೆ. ನಾನು ರಾಮನ ಪತ್ನಿ ಸೀತೆಯನ್ನು ಕದ್ದು ತಂದರೇ ನಿಂದು ಹೋಗಿದ್ದೇನು? ನಿನ್ನ ಪತ್ನಿಗೆ ರಾಜ್ಯಕ್ಕೆ ತೊಂದರೆ ಮಾಡಿದ್ದೇನಾ ನಾನು? ಕಿಷ್ಕಿಂಧೆಗೆ ಮರಳು. ನೀನು ಒಂದು ವೇಳೆ ಪ್ರಯತ್ನ ಪಟ್ಟರೂ ಲಂಕೆಯನ್ನು ತಲುಪಲಿಕ್ಕೆ ಸಾಧ್ಯವಿಲ್ಲ. ನೀನೇನು ದೇವ ಗಂಧರ್ವರಿಂದಲೇ ಆಗಲಿಲ್ಲ ಇನ್ನು ನರಮಾನವರಿಂದ ಸಾಧ್ಯವಾ?” ಎಂದು ಶುಕನಿಗೆ ಸುಗ್ರೀವನಿಗೆ ಹೇಳುವ ಮಾತನ್ನು ಹೇಳಿದ.

ಶುಕ ಅಂತೂ ಆಕಾಶ ಮಾರ್ಗದಲ್ಲಿ ಪಕ್ಷಿಯ ರೂಪದಲ್ಲಿ ಹೋದ. ಅಲ್ಲಿ ಹೋಗಿ ಸುಗ್ರೀವ ಇರುವ ಸ್ಥಳವನ್ನು ನೋಡಿ ರಾವಣ ಹೇಳಲಿಕ್ಕೆ ಹೇಳಿದ ಮಾತನ್ನು ಅಂತೂ ಹೇಳಲು ತೊಡಗಿದ. ಈ ಸಲ ವಾನರರು ರಾಮನ ಅಪ್ಪಣೆ ಕೇಳಲಿಲ್ಲ. ಒಂದಷ್ಟು ಕಪಿಗಳು ಆಕಾಶಕ್ಕೆ ಹಾರಿ, ಅವನನ್ನು ಭೂಮಿಗೆ ಎಳೆದು ತಂದು ಬಡಿದಿದ್ದೇ ಬಡಿದಿದ್ದು. ಒಬ್ಬ ಕಾಲೆಳೆದ, ಒಬ್ಬ ರೆಕ್ಕೆ ಎಳೆದ ಇನ್ನೊಬ್ಬ ಮೂತಿ ಎಳೆದ, ಒಬ್ಬ ಗುದ್ದಿದ. ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಶುಕ ರಾಮನಲ್ಲಿ ಮೊರೆ ಇಟ್ಟ, “ಕಾಕುತ್ಸನೇ, ದೂತರನ್ನು ಕೊಲ್ಲುವ ಕ್ರಮ ಇಲ್ಲ. ಕಾಪಾಡು” ಈ ರಾಕ್ಷಸರಿಗೆ ಮತ್ತು ಅಧರ್ಮ ಮಾಡುವವರಿಗೆ ಕಾನೂನು ನೆನಪಾಗೋದು ಅವರ ಮೇಲೆ ಕಷ್ಟ ಬಂದಾಗ. ನೂರೆಂಟು ಬಾರಿ ಕಾನೂನು ಭಂಗ ಮಾಡಿರ್ತಾರೆ ಆದರೆ ಅವರದ್ದೇ ರಕ್ಷಣೆಯ ವಿಷಯ ಬಂದಾಗ ಅವರಿಗೆ ನೆನಪಾಗೋದು ಧರ್ಮ ಕಾನೂನು ಎಲ್ಲ. ಮಹಾಭಾರತದ ಯುದ್ಧದಲ್ಲಿ ಕರ್ಣನ ರಥಚಕ್ರ ಭೂಮಿ ನುಂಗಿದಾಗ ಕರ್ಣ ಅರ್ಜುನನಿಗೆ ಹೇಳ್ತಾನೆ. ನಾನು ಚಕ್ರವನ್ನು ಮೇಲೆತ್ತುವಾಗ ನೀನು ನನ್ನ ಮೇಲೆ ಬಾಣ ಪ್ರಯೋಗ ಮಾಡಬಾರದು. ಯಾಕೆಂದ್ರೆ ಯುದ್ಧ ಧರ್ಮ ಅಲ್ಲ. ಆವಾಗ ಕೃಷ್ಣ ಕೇಳ್ತಾನೆ. ಈಗ ನೀನು ಧರ್ಮದ ಮಾತು ಹೇಳ್ತಾ ಇದ್ದೀಯಾ, ದ್ರೌಪದಿಯ ವಸ್ತ್ರಾಪಹರಣ ಆಗ್ತಾ ಇರುವಾಗ ಎಲ್ಲಿ ಹೋಗಿತ್ತು ನಿನ್ನ ಧರ್ಮ? ದ್ರೌಪದಿಯ ಹತ್ತಿರ ಹೋಗಿ “ಹಸು ಹಸು” ಅಂತ ಅಪಹಾಸ್ಯ ಮಾಡುವಾಗ ಎಲ್ಲಿ ಹೋಗಿತ್ತು ನಿನ್ನ ಧರ್ಮ? ಬಾಲ ಅಭಿಮನ್ಯುವನ್ನು ನೀವೆಲ್ಲ ಸೇರಿ ಕೊಂದರಲ್ವಾ ಆಗ ಎಲ್ಲಿ ಹೋಗಿತ್ತು ನಿನ್ನ ಧರ್ಮ? ಎಂದು ಕೇಳಿದಾಗ ಕರ್ಣನ ಬಾಯಿ ಕಟ್ಟಿ ಹೋಗಿತ್ತು. ಅಂತಹ ನೂರು ಸಂದರ್ಭಗಳನ್ನು ಕೃಷ್ಣ ಕರ್ಣನ ಮುಂದಿಡುತ್ತಾನೆ. ಬದುಕಿನುದ್ದಕ್ಕೂ ಅಧರ್ಮ ಮಾಡಿ ಈಗ ನಿನಗೆ ಧರ್ಮ ಬೇಕಾಯಿತಾ?

ಹಾಗೇ ಶುಕ ಮೊರೆ ಇಡ್ತಾ ಇದ್ದಾನೆ ರಾಮನಲ್ಲಿ. “ವಾನರನ್ನು ತಡೆದು ನನ್ನನ್ನು ರಕ್ಷಿಸು. ನಾನು ನನ್ನ ಸ್ವಂತ ಶಬ್ದಗಳಲ್ಲಿ ಏನೂ ಹೆಳಲಿಲ್ಲ, ರಾವಣ ಹೇಳಿದ್ದನ್ನು ಮಾತ್ರ ಹೇಳ್ತಾ ಇದ್ದೇನೆ.” ರಾಮನಿಗೆ ವಿಷಯವೇ ಗೊತ್ತಿಲ್ಲ. ಇವನ ಗೋಳಾಟ ಕೇಳಿ ಅವನನ್ನು ಬಿಟ್ಟು ಬಿಡಿ ಅಂತ ರಾಮ ಆದೇಶ ಕೊಟ್ಟ. ಬಿಡಿಸಿದಾಗ ಮೊಟ್ಟ ಮೊದಲ ಕೆಲಸ ಮಾಡಿದ್ದು ಏನೆಂದ್ರೆ ರೆಕ್ಕೆ ಬಡಿದು ಆಕಾಶಕ್ಕೆ ಹಾರಿದ. ಆಮೆಲೆ ಸ್ವಲ್ಪ ಸುಧಾರಿಸಿಕೊಂಡು ಸುಗ್ರೀವನಿಗೆ ಕೇಳ್ತಾನೆ, “ನಾನು ಏನುತ್ತರ ಕೊಡಲಿ ರಾವಣನಿಗೆ? “. ಉತ್ತರ ತೆಗೆದುಕೊಂಡು ಹೋಗದಿದ್ದರೇ ರಾವಣ ಇವನನ್ನು ಕೊಂದು ಹಾಕಿ ಬಿಡ್ತಾನೆ. ಆಗ ಸುಗ್ರೀವ ಹೇಳಿದ,”ರಾವಣನಿಗೆ ಹೇಳು. ಅವನು ನನಗೆ ಮಿತ್ರನಲ್ಲ ಮತ್ತು ಅವನಲ್ಲಿ ನನಗೆ ಯಾವ ಅನುಕಂಪವೂ ಇಲ್ಲ. ನನಗೆ ಅವನು ಯಾವ ಉಪಕಾರವನ್ನೂ ಮಾಡಲಿಲ್ಲ ಆದರೆ ರಾಮ ಮಾಡಿದ್ದಾನೆ. ರಾಮ ನನಗೆ ಮಿತ್ರ. ಅವನು ನನಗೆ ಶತ್ರು ಯಾಕೆಂದ್ರೆ ನನ್ನ ಅಣ್ಣ ವಾಲಿಯ ಮಿತ್ರ. ಅದರ ಮೇಲೆ ರಾಮನಿಗೆ ಅವನು ಶತ್ರು. ಬಂಧು ಬಳಗ ಸಹಿತ ಅವನು ನನಗೆ ವಧ್ಯ. ನನಗೆ ಇರುವ ಒಂದೇ ಉದ್ದೇಶ ಅವನನ್ನು ಕೊಲ್ಲುವುದು. ವಾಲಿಯ ಮೇಲೆ ಇರುವ ರೋಷವೇ ರಾವಣನ ಮೇಲೆ ಇರುವುದು. ವಾಲಿ ನನಗೆ ಮಾಡಿದ್ದನ್ನೇ ರಾವಣ ರಾಮನಿಗೆ ಮಾಡಿದ್ದಾನೆ. ಹಾಗಾಗಿ ರಾವಣನನ್ನು ಕೊಲ್ಲುವುದೇ ನನ್ನ ಉದ್ದೇಶ. ರಾಮನ ಭಾವ ಏನೋ ಅದೇ ನನ್ನ ಭಾವ. ಹೋಗಿ ರಾವಣನಿಗೆ ಹೇಳು ಅವನ್ನನ್ನು, ಅವನ ಮಕ್ಕಳನ್ನು, ಅವನ ಬಂಧುಗಳನ್ನು, ಅವನ ಪೀಳಿಗೆಯನ್ನೇ ಉಳಿಸುವುದಿಲ್ಲ. ಲಂಕೆಯನ್ನೆ ಸುಟ್ಟು ಭಸ್ಮ ಮಾಡ್ತೇನೆ. ಅವನು ಯಾರ ರಕ್ಷಣೆ ಬೇಕಾದರೂ ಪಡೆದುಕೊಳ್ಳಲಿ ಆದರೆ ಅವನು ರಾಮನಿಂದ ಬಚಾವಾಗಲಾರ. ಶಿವನ ಪಾದವನ್ನು ಹಿಡಿದರೂ ಕೂಡ ಶಿವ ಅವನಿಗೆ ಒದೆಯುತ್ತಾನೆ. ಯಾಕೆಂದ್ರೆ ಶಿವನೇ ರಾಮ, ರಾಮನೇ ಶಿವ. ಅವನನ್ನು ಪಾರು ಮಾಡುವವರು ಈ ಮೂರು ಲೋಕದಲ್ಲಿ ಯಾರೂ ಇಲ್ಲ. ಪಿಶಾಚರಿರಲಿ, ರಾಕ್ಷಸರಾಗಲೀ, ಸುರರಿರಲಿ ಅಥವಾ ಅಸುರರಿರಲಿ ಯಾರೂ ಅವನನ್ನು ಪಾರುಮಾಡಲು ಸಾಧ್ಯ ಇಲ್ಲ. ಆದಿನ ಅವನು ಜಟಾಯುವನ್ನು ಕೊಂದ. ಮುಪ್ಪಿನ ಮುದುಕ ಜಟಾಯುವನ್ನು ಅನ್ಯಾಯವಾಗಿ ಕೊಂದ.

ಹೇಳು ರಾಮನ ಸನ್ನಿಧಿಯಲ್ಲಿ ಸೀತಾಪಹರಣ ಮಾಡಿದ್ದಾನೆ, ಕಳ್ಳನಂತೆ ಬಂದು ಸೀತಾಪಹರಣ ಮಾಡಿದ್ದಾನೆ. ರಾಮ ಏನು, ಅವನ ಪ್ರಜ್ಞೆ ಯಾವ ಮಟ್ಟದ್ದು ಮತ್ತು ಅವನ ಸತ್ವ ಶಕ್ತಿ ಅರ್ಥಮಾಡಿಕೊಳ್ಳುತ್ತಿಲ್ಲ ಇವತ್ತಿಗೂ. ಹಾಗಾಗಿ ರಾಮನಿಂದಲೇ ಪ್ರಾಣ ಆಪತ್ತು ಅಂತ ಹೇಳು ಹೋಗಿ ನೀನು ರಾವಣನಿಗೆ.” ಅಷ್ಟು ಹೊತ್ತಿಗೆ ಅಂಗದ ಹೇಳಿದನಂತೆ, “ಮಹಾರಾಜ ಅವನು ದೂತನಂತೆ ಕಾಣ್ತಾ ಇಲ್ಲ, ಇವನು ಗುಪ್ತಚರ. ಅವನ ಕಣ್ಣು ನೋಡು. ನೀನು ಹೇಳಿದ್ದನ್ನು ಕೇಳುವುದು ಬಿಟ್ಟು ಎಲ್ಲ ಕಡೆ ನೋಡ್ತಾ ಇದ್ದಾನೆ. ನೋಟದಲ್ಲೇ ಸೇನೆಯ ಬಲವನ್ನು ಅಳೀತಾ ಇದ್ದಾನೆ. ಅವನು ಗುಪ್ತಾಚರ ಹೊರತು ರಾವಣ ಹೇಳಿದ್ದನ್ನು ಹೇಳಲು ಬಂದವನಲ್ಲ! ಇವನನ್ನು ಬಂಧಿಸುವುದು ಒಳ್ಳೆಯದು ಇಲ್ಲದಿದ್ದರೇ ಇವನು ಸೈನ್ಯದ ಬಗ್ಗೆ ಲಂಕೆಗೆ ವರದಿ ಕೊಡ್ತಾನೆ. ನನಗೆ ಹಾಗೆ ಅನ್ನಿಸ್ತಾ ಇದೆ”. ಸುಗ್ರೀವ ಅಂಗದ ಹೇಳಿದ್ದನ್ನು ಕೂಡಲೇ ಒಪ್ಪಿ ಶುಕನನ್ನು ಹಿಡಿಯಲಿಕ್ಕೆ ಆದೇಶ ಮಾಡಿದ. ವಾನರರು ಮತ್ತೆ ಹಿಡಿಸುಕೊಂಡರು. ಅವನು ಆಕಾಶದಲ್ಲಿ ಇದ್ದರೂ, ವಾನರರು ಆಕಾಶಕ್ಕೆ ನೆಗೆದು ಅವನನ್ನು ಹಿಡಿದು ಭೂಮಿಗೆ ತಂದು ಕಟ್ಟಿ ಹಾಕಿ ಭಯಂಕರ ಪೀಡೆ ಕೊಟ್ಟರಂತೆ. ವಾನರರಿಗೋ ಬೇರೆ ಆಯುಧವೇ ಬೇಡ. ಕೈ, ಕಾಲು, ಉಗುರು ಇವೇ ಸಾಕು. ಪುನಃ ಶುಕ ರಾಮನ ಕುರಿತು ಬೊಬ್ಬೆ ಇಟ್ಟ, “ನನ್ನ ರೆಕ್ಕೆಗಳನ್ನು ಕೀಳ್ತಾ ಇದ್ದಾರೆ, ನನ್ನ ಕಣ್ಣುಗಳನ್ನು ಸೀಳ್ತಾ ಇದ್ದಾರೆ. ಸತ್ತೆ”. ಶುಕ ಬದುಕಬೇಕು ಅಂದ್ರೆ ಒಂದೇ ದಾರಿ ರಾಮನಿಗೆ ಶರಣು ಹೋಗುವುದು. ಅದೂ ಅಲ್ಲದೇ ಬೆದರಿಕೆ ಹಾಕ್ತಾನೆ ರಾಮನಿಗೆ, “ನನ್ನ ಜೀವ ಹೋದರೇ, ನಾನು ಯಾವ ರಾತ್ರಿ ಹುಟ್ಟಿದೆ ಮತ್ತು ಯಾವ ರಾತ್ರಿ ಸತ್ತೆ ಈ ಮಧ್ಯದಲ್ಲಿ ನಾನು ಮಾಡಿದ ಪಾಪ ಎಲ್ಲ ನಿನಗೆ ಬಂದು ಬಿಡ್ತದೆ.”

ರಾಮ ವಾನರರಿಗೆ ಇದು ನಮ್ಮ ಕ್ರಮ ಅಲ್ಲ, ದೂತನನ್ನು ಕೊಲ್ಲುವುದು ನಮ್ಮ ಕ್ರಮ ಅಲ್ಲ ಅಂತ ವಾನರರಿಂದ ಬಿಡಿಸಿದ. ಪ್ರಾಣ ಒಂದು ಉಳಿಸಿ ಶುಕನನ್ನು ಬಿಟ್ಟರು. ರಾಮನೆಂದರೆ ಶತ್ರುವತ್ಸಲ. ರಾಮನ ವರ್ತನೆ ಎಷ್ಟು ವಿಚಿತ್ರವಾಗಿದೆ ಅಂದ್ರೆ, ಎಷ್ಟೋ ಸಲ ರಾಮ ಔದಾರ್ಯ ತೋರಿಸ್ತಾನೆ. ನಮಗೇ ಅನ್ನಿಸುತ್ತದೆ ರಾಮ ಹೀಗೆ ಮಾಡುವುದು ಬೇಡ ಅಂತ ಆದರೆ ಅವನು ಬುದುಕಿಕೋ ಎಂಬ ಭಾವ. ಶುಕ ರಾವಣನ ಪಕ್ಷದಲ್ಲೇ ಇದ್ದರೂ ರಾಮನ ಬಗ್ಗೆ ಒಂದು ಪೂಜ್ಯ ಭಾವ. ಒಂದು ರೀತಿಯ ಋಣದ ಭಾವ. ಎರಡು ಸಲ ಜೀವ ಕೊಟ್ಟವನು. ಕೆಲವರು ಪುತ್ರವತ್ಸಲರಿರ್ತಾರೆ, ಕೆಲವರು ಮಿತ್ರವತ್ಸಲರಿರ್ತಾರೆ, ಕೆಲವರು ಭೃತ್ಯವತ್ಸಲರಿರ್ತಾರೆ. ಆದರೆ ಶತ್ರುವತ್ಸಲರು ರಾಮನನ್ನು ಬಿಟ್ಟರೇ ಇನ್ಯಾರೂ ಇಲ್ಲ. ರಾಮ ಒಂದು ವಾತ್ಸಲ್ಯ ನಿಧಿ. ಶೂರ್ಪನಖಿಯನ್ನು ಕೊಲ್ಲದೇ ಇದ್ದಿದ್ದರೇ ಮುಂದಿನ ಕಥೆಯೇ ನಡೆಯುತ್ತಿರಲಿಲ್ಲ. ಆದರೆ ರಾಮ ಶೂರ್ಪನಖಿಯನ್ನು ಕೊಂದಿಲ್ಲ. ಹೋಗಿ ಬದುಕು. ಆದರೆ ಅವಳು ಏನು ಅನಾಹುತ ಮಾಡಿದ್ಲು. ರಾಮನ ಭಾವವೇ ಔದಾರ್ಯ, ಆ ವಾತ್ಸಲ್ಯ, ಅಂತಹ ವಿಶಾಲ ಹೃದಯ ರಾಮನಿಗೆ ಮಾತ್ರ ಇರುವಂತಹದ್ದು. ಹೀಗೆ ಶುಕನನ್ನು ಬದುಕಿಸಿದ ಮೇಲೆ ರಾಮನು ತನ್ನ ಕರ್ತವ್ಯದ ಬಗ್ಗೆ ಗಮನ ಕೊಡ್ತಾನೆ. ಸಮುದ್ರಕ್ಕೆ ಸೇತುವೆಯನ್ನು ಕಟ್ಟಬೇಕು ಅದಕ್ಕೆ ಸಮುದ್ರನು ಅನುವು ಮಾಡಿಕೊಡಬೇಕು. ಸಮುದ್ರ ರಾಜನಿಗೆ ಪ್ರಾರ್ಥನೆಯನ್ನು ಮಾಡುವ ಸಲುವಾಗಿ ದರ್ಭೆಗಳನ್ನು ಹರಡಿ ರಾಮನು ದರ್ಭಶಯನನಾಗಿ ಸಾಗರತೀರದಲ್ಲಿ ರಾಮನು ಇದ್ದಾನೆ. ಸಮುದ್ರರಾಜನಲ್ಲಿ ಪ್ರಾರ್ಥನೆಯನ್ನು ಮಾಡ್ತಾ ಇದ್ದಾನೆ. ಮುಂದೆ ಏನು ಎಂಬುದನ್ನು ಮುಂದಿನ ಪ್ರವಚನದಲ್ಲಿ ನೋಡೊಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments