ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಒಮ್ಮೊಮ್ಮೆ ದೊಡ್ಡವರಿಗೂ ಸಣ್ಣವರಿಂದ ಕೆಲಸ ಆಗಬೇಕಾದ್ದಿರ್ತದೆ. ಆಗ ಸಣ್ಣವರು ಸಣ್ಣತನ ಮಾಡಬಾರದು, ದೊಡ್ಡತನವನ್ನು ಮೆರೆಯಬೇಕು. ಯಾಕೆ ಈ ಪ್ರಸಕ್ತಿ? ರಾಮನಿಗೆ ಸಮುದ್ರದಿಂದ ಆಗಬೇಕಾದ ಕಾರ್ಯವಿದೆ. ಸಮುದ್ರ ಅಂದ್ರೆ ಎಷ್ಟು ದೊಡ್ಡದು! ರಾಮ ಮನುಷ್ಯನಲ್ವೇ, ಯಾರು ದೊಡ್ಡವರು? ಎನ್ನುವ ಜಿಜ್ಞಾಸೆಯನ್ನೇ ಮಾಡಬೇಡಿ. ಮನುಷ್ಯತ್ವದ ನೆಲೆಯಲ್ಲಿ ಕೂಡ, ಸಾಗರವು ಸಾಗರವಾಗಲಿಕ್ಕೆ ಕಾರಣವಾಗಿರ್ತಕ್ಕಂತಾ ವಂಶಸಂಜಾತ ರಾಮ. ಸಮುದ್ರವನ್ನು ತೋಡಿದ್ದು ಸಗರನ ಮಕ್ಕಳು, ಆದ್ದರಿಂದ್ಲೇ ಸಾಗರ ಅದು. ಮತ್ತು ಅಲ್ಲಿಗೆ ಗಂಗೆಯನ್ನು ಹರಿಸಿದ್ದು ಭಗೀರಥ, ಹಾಗಾಗಿ ಸಾಗರವು ಸಾಗರವಾಗುವಲ್ಲಿ ರಘುವಂಶದ ಕೊಡುಗೆ ದೊಡ್ಡದಿದೆ. ಇದು ಮಾನವತೆಯ ನೆಲೆಯಾದರೆ, ರಾಮನು ಅದಕ್ಕಿಂತ ಎಷ್ಟೋ ಮೇಲಿನವನು. ಮೇಲ್ನೋಟಕ್ಕೆ ಮನುಷ್ಯನಂತೆ ಕಂಡರೂ, ಮನುಷ್ಯನು ಹೌದಾದರೂ, ಮನುಷ್ಯ ಮಾತ್ರನಲ್ಲ. ಮನುಷ್ಯತ್ವದಾಚೆಗೆ ಬಹುದೊಡ್ಡ ವ್ಯಾಪ್ತಿ ಇರ್ತಕ್ಕಂತಾ ಚೇತನವದು. ಆ ನೆಲೆಯಲ್ಲಿ, ರಾಮನ ಆ ಸಿಂಧು ವ್ಯಕ್ತಿತ್ವದೆದುರು ಸಮುದ್ರರಾಜನು ಬಹಳ ಸಣ್ಣವನಾಗ್ತಾನೆ.

ರಾಮನು ಹೇಳಿ ಕೇಳಿ ಮರ್ಯಾದಾ ಪುರುಷೋತ್ತಮ, ಲೋಕದ ಮರ್ಯಾದೆಗಳನ್ನು ಅವನು ಸ್ಥಾಪಿಸ್ತಾನೆ ಮತ್ತು ಪಾಲಿಸ್ತಾನೆ. ‘ಹೀಗಿರಬೇಕು’ ಎನ್ನುವುದನ್ನು ತನ್ನ ಬದುಕಿನ ಮೂಲಕ ನಿರೂಪಿಸ್ತಕ್ಕಂತವನು, ತಾನೂ ಪಾಲಿಸ್ತಕ್ಕಂತವನು ಅವನು. ಹಾಗಾಗಿ, ಲೋಕಮರ್ಯಾದೆಯನ್ನು ಪಾಲಿಸ್ತಾ ಸಮುದ್ರರಾಜನ ಉಪಾಸನೆಯನ್ನು ಮಾಡ್ತಾನೆ ರಾಮ. ಈಚೆಯಿಂದ ಆಚೆಗೆ ವಾನರ ಸೇನೆ ದಾಟಿ ಹೋಗಲಿಕ್ಕೆ ದಾರಿ ಮಾಡು ಎನ್ನುವ ಆಶಯದಲ್ಲಿ. ಲಂಕೆಯನ್ನು ಸೇರಬೇಕಾಗಿದೆ, ರಾವಣನನ್ನು ಗೆಲ್ಲಬೇಕಾಗಿದೆ, ಸೀತೆಯನ್ನು ಬಿಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಉತ್ತರ ತೀರದಿಂದ ದಕ್ಷಿಣ ತೀರಕ್ಕೆ ಹೋಗುವ ಸಲುವಾಗಿ ಅವಕಾಶ ಮಾಡುವ ಒಂದು ಆಶಯದ ಪ್ರಾರ್ಥನೆ ಇದೆ ರಾಮನದ್ದು. ಹಾಗೇ, ಸಮುದ್ರತೀರದಲ್ಲಿ ದರ್ಭೆಗಳನ್ನು ಹಾಸಿ, ಸಮಸ್ತ ದಿವ್ಯಶಕ್ತಿಗಳ ಸಮೂಹಕ್ಕೆ ಕೈಮುಗಿದು, ಆ ದರ್ಭೆಗಳಲ್ಲಿ ಅವನು‌ ಪವಡಿಸ್ತಾನೆ. ಅದು ವಿಶ್ರಾಂತಿಯಲ್ಲ, ನಿದ್ರೆಯಲ್ಲ, ಅದೊಂದು ಉಪಾಸನೆ, ಸಮುದ್ರದ ಸಾಧನೆಗೋಸ್ಕರವಾಗಿ. ಸ್ಥೂಲವಾದ ಬಲ ಭುಜವು ತಲೆದಿಂಬಾಗಿದೆ. ಭೂಮಂಡಲಕ್ಕೇ ಆಶ್ರಯ ನೀಡುವ ಯೋಗ್ಯತೆವುಳ್ಳ ಭುಜ ಅದು. ಸವ್ಯಸಾಚಿಯವನು ~ ಅಪರೂಪದಲ್ಲಿ ಅಪರೂಪವಾಗಿ ಸಾಧ್ಯವಾದ ಎರಡೂ ಕೈಯಿಂದ ಬಾಣ-ಪ್ರಯೋಗ ಮಾಡಬಲ್ಲವನಾಗಿದ್ದ ರಾಮ. ರಾಮನ ಧನುರ್ವಿದ್ಯಾ ಪ್ರಾವೀಣ್ಯದ ಮುಂದೆ ಬೇರೆ ಯಾರೂ ಇಲ್ಲ. ಆ ಭುಜದಲ್ಲಿ ಬಾಣಪ್ರಯೋಗ ಮಾಡುವಾಗ ಆದ ಗುರುತುಗಳೂ ಇವೆ. ಸಹಸ್ರ ಸಹಸ್ರ ಗೋದಾನ ಮಾಡಿರತಕ್ಕಂತಹ‌ ಭುಜ. ಅಂತಹಾ ದಕ್ಷಿಣ ಬಾಹುವನ್ನು ತಲೆದಿಂಬಾಗಿ ಇಟ್ಟುಕೊಂಡು ಸಮುದ್ರವನ್ನು ಕುರಿತಾಗಿ ಉಪಾಸನೆಯಲ್ಲಿ ಪ್ರಯತನಾಗಿ, ನಿರತನಾಗಿ ಮುನಿಯಾಗಿ ಮಲಗಿದ್ದಾನೆ ರಾಮ.

ಅಪ್ರಮತ್ತನಾಗಿದ್ದಾನೆ. ಎಲ್ಲಿಯೂ ತೂಕಡಿಸಿಲ್ಲ, ನಿದ್ದೆ ಮಾಡಿಲ್ಲ, ಏನೂ ಸ್ವೀಕರಿಸಿಲ್ಲ, ಆಕಡೆ-ಈಕಡೆ ತನ್ನ ಮನಸ್ಸನ್ನು ಕೊಟ್ಟಿಲ್ಲ. ಮನಸ್ಸೆಲ್ಲವೂ ಅಲ್ಲಿಯೇ ನೆಟ್ಟಿದೆ. ಮೂರು ದಿನದ ಏಕಾಗ್ರತೆ! ಇಡೀ ದೇಹದ ಸಮಸ್ತ ಕ್ರಿಯೆಗಳನ್ನೂ ಸಂಯಮ ಮಾಡಿ ಸಮುದ್ರವನ್ನು ಸೇವಿಸಿದನಂತೆ ರಾಮ. ಮೂರು ರಾತ್ರಿಗಳು ಕಳೆದವು, ಸಾಗರನ ಸುಳಿವಿಲ್ಲ. ಸಮುದ್ರನು ತನ್ನನ್ನು ತಾನು ಪ್ರಕಟಗೊಳಿಸಲಿಲ್ಲ. ಮೊದಲೇ ಬಂದು ಏನಾಗಬೇಕು ಅಂತ ಕೇಳಬೇಕಿತ್ತು. ಆದರೆ, ಮೂರು ಹಗಲು – ಮೂರು ರಾತ್ರಿ ಉಪವಾಸ, ಮೌನ, ನಿಶ್ಚಲತೆ, ಏಕಾಗ್ರಚಿತ್ತದಲ್ಲಿ ಭಾವಿಸಿದರೂ ಕೂಡ ಮೂರ್ಖ ಸಮುದ್ರರಾಜನು ಪ್ರಕಟನಾಗಲಿಲ್ಲ. ಲೋಕಮರ್ಯಾದೆಗೋಸ್ಕರ ಮಾಡಿದ್ದು ರಾಮ. ಆ ಭಾಷೆ ಅರ್ಥವಾಗದಿದ್ದಾಗ ಅನಿವಾರ್ಯ, ಬೇರೆ ಭಾಷೆ ಬೇಕಾಯಿತು.

ಕ್ರುದ್ಧನಾದನು ರಾಮನು ಇಷ್ಟು ಮಾಡಿದ ಬಳಿಕ, ಸಮುದ್ರರಾಜನಿಗೆ ಗತ್ತು ಬಂದುಬಿಡ್ತು. ಅವನು ಬರದೇ ಸಣ್ಣತನ ತೋರಿದಾಗ ರಾಮನ ಕಣ್ಣುಗಳು ಕೆಂಪಾದವು. ಅಲ್ಲೇ ಬಳಿಯಿದ್ದ ಲಕ್ಷ್ಮಣನನ್ನು ಕರೆದು ರಾಮ‌ ಬೇಸರದಲ್ಲಿ ಕೆಲವು ಮಾತುಗಳನ್ನು ಹೇಳ್ತಾನೆ, ‘ ಸಮುದ್ರನ ಗರ್ವ ನೋಡು! ದರ್ಶನವನ್ನೂ ಕೊಡ್ತಾ ಇಲ್ಲ. ನೋಡು ಲಕ್ಷ್ಮಣ, ಸತ್ಪುರುಷರ ಸಮಾಧಾನ, ಕ್ಷಮೆ, ಸರಳತೆ, ಪ್ರಿಯವಾದಿತ್ವದ ಗುಣಗಳು ಗುಣಹೀನರಲ್ಲಿ ವ್ಯರ್ಥ. ಇವನು ಅಸಮರ್ಥ. ತಮ್ಮನ್ನು ತಾವೇ ಹೊಗಳಿಕೊಳ್ಳುವವರು, ಗರ್ವಿಷ್ಟರು, ಎಲ್ಲರ ಮೇಲೆ ದಂಡ ಪ್ರಯೋಗಿಸುವವರು, ಇಂಥವರನ್ನೇ ಅಂಥವರು ಸತ್ಕರಿಸ್ತಾರೆ, ನಮ್ಮಂಥವರನ್ನು‌ ಅನಾದರಿಸ್ತಾರೆ. ಲಕ್ಷ್ಮಣ, ಇದು‌ ನೋಡಿದರೆ ಸಾಮದಿಂದ ಕೀರ್ತಿಯಿಲ್ಲ, ಜಯವೂ ಇಲ್ಲ, ಸಾಮಕ್ಕೆ‌ ಬೆಲೆಯೂ ಇಲ್ಲ. ಹಾಗಾಗಿ ಲಕ್ಷ್ಮಣ, ಸಮುದ್ರರಾಜನಿಗೆ ಸರಿಯಾಗುವ, ಅರ್ಥವಾಗುವ ಭಾಷೆಯಲ್ಲಿ ಮಾತನಾಡ್ತೇನೆ ನಾನು. ಯಾವ ಭಾಷೆಯದು? ಅಂದರೆ, ಬಾಣದ ಭಾಷೆ, ದಿವ್ಯಾಸ್ತ್ರಗಳ ಭಾಷೆ’

ಕೆಲವು ಸಾರಿ ಲೋಕ‌ ಹೇಗೆ ನಡ್ಕೊಂಡು ಬಿಡ್ತದೆ ಅಂದರೆ, ದೇವರಿಗೂ ಒಳ್ಳೆಯತನಕ್ಕೆ ಬೆಲೆ ಇಲ್ಲ‌ ಅಂತ ಅನ್ನಿಸಿಬಿಡ್ತದೆ!

ಸಮುದ್ರದ ಸತ್ವಗಳೆಲ್ಲ‌ ಚೂರುಚೂರಾಗಿ ನೀರನ್ನು ಮುಚ್ಚುವುದನ್ನು ಕಾಣು. ಸಮುದ್ರನೊಳಗೆ ಏನೇನಿವೆ ಅವೆಲ್ಲವೂ ತುಂಡು ತುಂಡಾಗ್ತವೆ. ಮೀನು ಮಕರಗಳನ್ನು, ಶಂಖ – ಚಿಪ್ಪುಗಳನ್ನು ಕೂಡಿರ್ತಕ್ಕಂತ ಸಮುದ್ರನನ್ನು ಮಹಾಯುಧದಿಂದ ಒಣಗಿಸ್ತೇನೆ. ಕ್ಷಮಾಗುಣದಿಂದ ಕೂಡಿದ ನನ್ನನ್ನು ಸಮುದ್ರನು ಅಸಮರ್ಥನೆಂದು ತಿಳಿಯುವುದಾದರೆ, ಇಂಥವರಿಗೆ ತೋರ್ತಕ್ಕಂಥಾ ಕ್ಷಮೆಗೆ ಧಿಕ್ಕಾರ! ಸೌಮಿತ್ರೇ, ತಾ ನನ್ನ ಧನುಸ್ಸನ್ನು, ತಾ ನನ್ನ ಸರ್ಪಸದೃಶ ಬಾಣಗಳನ್ನು. ಸೇತುವೆಯೂ ಬೇಡ, ನೌಕೆಯೂ ಬೇಡ, ಕಪಿಗಳು ಕಾಲ್ನಡಿಗೆಯಲ್ಲಿ ದಾಟಿ ಹೋಗಲಿ ಲಂಕೆಗೆ‌. ಇಳಿದು ಹತ್ತಲಿ, ಅಂಥಾ ದಾರಿಯನ್ನು ನನ್ನ ಸಾಮರ್ಥ್ಯದಿಂದ ಮಾಡ್ತೇನೆ. ಸಮುದ್ರವನ್ನು ಒಣಗಿಸಿಬಿಡ್ತೇನೆ. ಇವನಿಗೆ ಅಕ್ಷೋಭ್ಯ ಎಂಬುದಾಗಿ ಹೆಸರಲ್ವಾ? ಆದರೆ ಇವನ ಅಕ್ಷೋಭ್ಯತ್ವವನ್ನು ನಾನಿವತ್ತು ಇಲ್ಲ ಅಂತ ಮಾಡಿ ತೋರಿಸ್ತೇನೆ. ಸಮುದ್ರವನ್ನು ಕ್ಷೋಭೆಗೊಳಿಸ್ತೇನೆ. ಸಮುದ್ರವನ್ನು ನಿರ್ಮರ್ಯಾದವಾಗುವಂತೆ ಮಾಡ್ತೇನೆ’ ಎಂಬುದಾಗಿ ಧನುಸ್ಸನ್ನು ಕೈಯಲ್ಲಿ ಹಿಡಿದು, ಕೋಪದಿಂದ ಅದುರುವ ಕಣ್ಣುಗಳುಳ್ಳವನಾಗಿ ರಾಮನು ಪ್ರಳಯ ಕಾಲದ ಅಗ್ನಿಯಂತೆ ದುರ್ದರ್ಶನಾದನು.

ತನ್ನ ಘೋರವಾದ ಧನುಸ್ಸನ್ನು ಬಾಗಿಸಿ, ಭೂಮಂಡಲವನ್ನು ಕಂಪಿಸಿ ಅಸ್ತ್ರಯುಕ್ತವಾದ ಬಾಣಗಳನ್ನು ಸಮುದ್ರದ ಮೇಲೆ ಪ್ರಯೋಗ‌ ಮಾಡ್ತಾನೆ. ಬರೀ ಆ ಬಾಣಗಳು ಸಮುದ್ರದೊಳಗೆ ಹೋಗ್ತವೆ ಅಷ್ಟೇ, ಮತ್ತೇನೂ ಮಾಡೋದಿಲ್ಲ. ಆದರೆ ಅಸ್ತ್ರಯುಕ್ತವಾಗಿ ಬಂದಾಗ ಅವುಗಳಿಗೆ ಬೇರೆಯೇ ಶಕ್ತಿಯಿದೆ, ಅವುಗಳು ಏನೂ ಮಾಡಬಲ್ಲವು. ಇಂದ್ರನು ಸಿಡಿಲುಗಳನ್ನು ಪ್ರಯೋಗ ಮಾಡುವಂತೆಯೇ ರಾಮನು ಸಿಡಿಲಿಗೆ ಕಡಿಮೆಯಲ್ಲದ ಬಾಣಗಳನ್ನು ಸಮುದ್ರದ ಮೇಲೆ ಪ್ರಯೋಗ ಮಾಡ್ತಾನೆ. ಆ ಬಾಣಗಳು ಸಮುದ್ರವನ್ನು ಪ್ರವೇಶ ಮಾಡ್ತಾ ಇದ್ದಾವೆ. ಮಹಾಸರ್ಪಗಳು ಬೆದರಿದವು. ಇದ್ದಕ್ಕಿದ್ದಂತೆ ಸಮುದ್ರದ ವೇಗವು ಹೆಚ್ಚಿತು. ಜಲಜಂತುಗಳು ಅಸ್ತವ್ಯಸ್ತಗೊಂಡವು. ಮಹಾಘೋರವಾಗಿರತಕ್ಕಂತ ಒಂದು ಸದ್ದು ಅಲ್ಲಿ ಕೇಳಿ ಬಂತು. ಗಾಳಿಯ ವೇಗವೂ ಹೆಚ್ಚಿತು, ದೊಡ್ಡ ದೊಡ್ಡ ಅಲೆಗಳು ಎದ್ದವು. ಸಮುದ್ರದಿಂದ ಹೊಗೆಯೆದ್ದಿತು. ರಾಮನಾಡಿದ ಮಾತು ಸುಮ್ಮನೆಯಲ್ಲ, ಏನೋ ಬೆಂಕಿಯಂಥದ್ದು ಕೆಲಸ ಮಾಡ್ತಾ ಇದೆ. ಹಾಗಾಗಿ, ಸಮುದ್ರದಿಂದ ದೊಡ್ಡ ಹೊಗೆಯೆದ್ದಿತು. ಸಮುದ್ರತಳದಲ್ಲಿ ವಾಸ ಮಾಡುತ್ತಿದ್ದ ಪನ್ನಗರು, ದಾನವರು ಗಾಬರಿಗೊಂಡರು.

ಏತನ್ಮಧ್ಯೆ, ಇನ್ನೂ ದೊಡ್ಡ ದೊಡ್ಡ ಪರ್ವತಾಕಾರದ ಅಲೆಗಳು ಸಮುದ್ರ ಮಧ್ಯದಲ್ಲಿ ಏಳ್ತಾ ಇದ್ದಾವೆ. ಸುಮ್ನೆ ಬಾಣಗಳಲ್ಲ‌ ಅವು. ಆಗ ತರಂಗಗಳ‌ ಪ್ರವಾಹ, ಉರಗ-ರಾಕ್ಷಸರ ಗಾಬರಿ, ಅಲೆಗಳು ಮೇಲೆದ್ದಾಗ ಮೇಲೆ‌ ಎಸೆಯಲ್ಪಡ್ತಾ ಇದ್ದ ಜಲಜಂತುಗಳು, ಹಾಗೆ ಇಡೀ ಸಮುದ್ರವು ಅಸ್ತವ್ಯಸ್ತವಾಗ್ತಾ ಇದೆ. ಆಗ, ಓಡಿ ಬಂದನಂತೆ ಲಕ್ಷ್ಮಣ. ಅಪ್ರಮೇಯನಾದಂತ ತನ್ನ ಧನುಸ್ಸನ್ನು ತೆಗೀತಾ ಇದ್ದಾನೆ ರಾಮ.
ನಮ್ಮ ಕಲ್ಪನೆಗಳಿಗೂ, ಊಹೆಗೂ ಮೀರಿದ ವ್ಯಕ್ತಿತ್ವ ಅದು, ಏನೂ ಮಾಡಬಲ್ಲದು.
ಹಾಗಾಗಿ, ಅವನು ಉಗ್ರವೇಗದಲ್ಲಿ ಧನುಸ್ಸನ್ನು ಸೆಳೀತಾ ಇದ್ದಾಗ ಓಡಿ ಬಂದ ಲಕ್ಷ್ಮಣನು, ‘ಬೇಡ, ಬೇಡ, ಬೇಡಾ’ ಎಂದು ಕೂಗಿದೊಡನೆ ರಾಮನ ಧನುಸ್ಸನ್ನು ಹಿಡಿದುಕೊಂಡನು. ಅದು ಅವನು ಮಾತ್ರ ಮಾಡಬಹುದು! ಆ ಸಮಯದಲ್ಲಿ ಇನ್ಯಾರೂ ಮಾಡಲಿಕ್ಕೆ ಸಾಧ್ಯ ಇಲ್ಲ‌ ಅದನ್ನು.

‘ಅಣ್ಣಾ, ಇದರ ಹೊರತಾಗಿಯೂ ನಿನ್ನ ಕಾರ್ಯವು ಸಾಧನೆಯಾಗ್ತದೆ. ವೀರತಮ ನೀನು. ನಿನ್ನಂಥವನು ಕೋಪಗೊಂಡರೆ ಜಗತ್ತಿನ ಕಥೆಯೇನು? ಅಣ್ಣಾ, ದೀರ್ಘದರ್ಶನನಾಗು. ಮತ್ತು ನಿನ್ನ ಬದುಕನ್ನು‌ ನೋಡು, ನೀನು ಹೀಗೆಲ್ಲ ಮಾಡಿದವನಲ್ಲ ಯಾವತ್ತೂ. ನೀನು ವಿಶ್ವಕಲ್ಯಾಣಕಾರಿ. ಹಾಗಿರುವಾಗ, ನೀನೇ ಹೀಗೆ ಮಾಡಿದರೆ ಹೇಗೆ ಎಂಬುದಾಗಿ ಲಕ್ಷ್ಮಣ ಹೇಳಿದರೆ, ರಾಮನ ಕಿವಿಗೆ ಬೀಳಲಿಲ್ಲ ಅದು. ಏತನ್ಮಧ್ಯೆ, ಬ್ರಹರ್ಷಿಗಳು, ದೇವರ್ಷಿಗಳು, ಅಂತರ್ಧಾನರಾಗಿ “ಕಷ್ಟಂ” ಎಂಬುದಾಗಿ ಕೂಗಿಕೊಂಡಿದ್ದಾರೆ. ಸೃಷ್ಟಿಗೇ ಕಷ್ಟ ಬಂತು, ಏನಾಗ್ತದೋ‌ ಇನ್ನು! ಅಂದ್ರೆ ಸಮುದ್ರವು ಸೃಷ್ಟಿಯ ಬಹುಮುಖ್ಯವಾದ ಅಂಗ. ಅದು ಈ ಪ್ರಮಾಣದಲ್ಲಿ ಅಸ್ತವ್ಯಸ್ತವಾಗುವಾಗ, ಆ ರಭಸದಲ್ಲಿ ಏನಕ್ಕೆ ಏನಾದ್ರೂ ಆಗಬಹುದು. ಮಾತ್ರವಲ್ಲ, ‘ಬೇಡ, ಬೇಡ’ ಎಂಬ ಅವರ ಧ್ವನಿ ಆಗಸದಲ್ಲಿ‌ ಕೇಳಿ ಬಂತು‌.

ಆದರೆ, ಅದು ಯಾವುದೂ ರಾಮನ‌ ಗಮನದಲ್ಲಿಲ್ಲ. ಸೀತೆಯನ್ನು ಮರಳಿ‌ ಪಡೀಬೇಕು, ಸೀತೆಗಾದ ಅನ್ಯಾಯ, ಅಲ್ಲಿಂದ ಸೀತೆಯನ್ನು ವಿಮೋಚನೆ ಮಾಡಬೇಕು ಎನ್ನುವ ರಾಮನ ತೀವ್ರತೆಯಲ್ಲಿ ‌ಮತ್ತಾವುದೂ ಅವನ ಮನಸ್ಸಿಗೆ ಬರಲಿಲ್ಲ. ದಾರುಣವಾದ ಈ ಮಾತುಗಳನ್ನು ಮತ್ತೆ ಹೇಳಿದನಂತೆ ರಾಮ, ‘ಇಂದು ನಿನ್ನನ್ನು ಒಣಗಿಸಿಬಿಡ್ತೇನೆ. ನೀನು ಇಲ್ಲದಂತೆ ಮಾಡ್ತೇನೆ. ಪಾತಾಳದ ವರೆಗೆ ನೀನು ಬರಿಯ ನೆಲವಾಗಿ ಮಾರ್ಪಡ್ತೀಯೇ. ದಿವ್ಯಾಸ್ತ್ರಪೂರ್ಣವಾಗಿರತಕ್ಕಂತ ಶರಗಳಿಂದ ನಿನ್ನ ಮೇರನ್ನು ಸುಡುವೆ. ನಿನ್ನ ಒಡಲನ್ನು ಒಣಗಿಸುವೆ. ನೀನು ಇರುವಲ್ಲಿಯೇ ದೊಡ್ಡ ಧೂಳೇಳುವಂತೆ ಮಾಡುವೆ. ಕಪಿಗಳ ಕಾಲ್ನಡಿಗೆಯಲ್ಲಿ ಸಾಗಲಿ. ನಾನು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ವಾ ನೀನು? ಹಾಗಿದ್ರೆ, ಇದೋ ನನ್ನ ಧನುಸ್ಸು, ನನ್ನ ದಿವ್ಯಾಸ್ತ್ರಗಳು, ನಿನಗೆ ನನ್ನ ಪರಿಚಯವನ್ನು ಮಾಡಿಕೊಡ್ತವೆ. ನಿನ್ನನ್ನು ದಾಟಿ ಕಪಿಗಳು ಲಂಕೆಯನ್ನು ಸೇರುವುದಂತೂ ನಿಶ್ಚಯ. ನೀನು ಸಹಕರಿಸು ಅಥವಾ ಪ್ರತಿಕೂಲಿಸು. ರಾಮನ ಪೌರುಷ, ರಾಮನ ವಿಕ್ರಮ, ನಿನಗೆ ತಿಳಿಯದಾಗಿ ಹೋಯಿತಲ್ಲ, ಎಲೈ ದಾನವಾಲಯ!

ಹನುಮಂತ ಗಗನ ಮಾರ್ಗದಲ್ಲಿ ಸಾಗುವಾಗ ಬುದ್ಧಿ ಸರಿ ಇತ್ತು. ಆಗ ಇದೇ ಸಮುದ್ರ ಮೈನಾಕ ಪರ್ವತನನ್ನು ಎಬ್ಬಿಸಿ, ‘ನಾವು ರಾಮನಿಗೆ ಕೃತಜ್ಞರು, ಇಲ್ಲಿ ವಿಶ್ರಾಂತಿ ಪಡೆದು ಹೋಗಲಿ ಹನುಮಂತ’ ಎಂದವನಿಗೆ ಏನಾಯಿತೀಗ?’
ರಾಮನೇ ಬಂದ. ಸತ್ಯದ ಕಿರಣ ಬಂದಾಗ ನಾವು ಒಳ್ಳೆಯವರಾಗಿದ್ದುಕೊಂಡು, ಪರಮಸತ್ಯವೇ ಬಂದು ನಿತ್ತಾಗ ಮೈಮರೆತರೆ ಹೇಗೆ…?

‘ನಿನಗೆ ಸಂತಾಪ‌ ಅಂದರೆ ಏನು ಅಂತ ಗೊತ್ತಾ? ಗೊತ್ತಾಗ್ತದೆ. ಅದರ ಪರಿಚಯವನ್ನು ನಾನು ಮಾಡಿಕೊಡ್ತೇನೆ. ವಿಶ್ವಕ್ಕೇ ಗೋಚರವಾದ ನನ್ನ ಪೌರುಷ, ವಿಕ್ರಮಗಳು ನಿನಗೆ ಕಾಣದಾದರೆ, ದಾನವರ ಸಹವಾಸದಿಂದ ಬುದ್ಧಿಗೆಟ್ಟರೆ, ಇದೋ‌ ನಿನಗೆ ತಕ್ಕ‌ ಮದ್ದರೆಯುವ ಕಾರ್ಯವನ್ನು ಈಗ ನಾನು ಮಾಡ್ತೇನೆ’ ಎಂಬುದಾಗಿ ಹೇಳಿ ಬ್ರಹ್ಮದಂಡವನ್ನು ಹೋಲುವ ಘೋರವಾದ ಬಾಣವೊಂದನ್ನು ಬತ್ತಳಿಕೆಯಿಂದ ಹೊರಗೆ ಸೆಳೆದನು. ಆ ಬಾಣಕ್ಕೆ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಧನುಸ್ಸಿನಲ್ಲಿ‌ ಹೂಡಿ ಸೆಳೆದನು. ಉಪಾಸನೆಗೆ ಒಲಿದು ಬರಲಿಲ್ಲ. ಉಪಾಸನೆಗೆ ಒಲಿದು ಬರಲಿಲ್ಲ. ಈ ಮೊದಲು ಪ್ರಯೋಗ ಮಾಡಿದ ಬಾಣಗಳಿಂದಲೂ ಕೂಡ ಬುದ್ಧಿ ಬರಲಿಲ್ಲ, ಹಾಗಾಗಿ ಕೊಟ್ಟಕೊನೆಯದಾಗಿ ಬ್ರಹ್ಮಾಸ್ತ್ರ ಪ್ರಯೋಗ. ಈಗ ಎರಡರಲ್ಲಿ ಒಂದು ಆಗ್ತದೆ. ಯಾವಾಗ ರಾಮನು ಆ ಘೋರವಾದ ಬಾಣವನ್ನು ಬತ್ತಳಿಕೆಯಿಂದ ತೆಗೆದು, ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ಧನಸ್ಸಿನಲ್ಲಿ ಹೂಡಿ ಸೆಳೆದನೋ ಭೂಮ್ಯಾಕಾಶಗಳು ಬಿರಿದಂತೆ, ಪರ್ವತಗಳು ಕಂಪಿಸಿದವು, ಲೋಕವನ್ನು ಕತ್ತಲು ಆವರಿಸಿತು. ಪೂರ್ವ ಯಾವುದು ಪಶ್ಚಿಮ ಯಾವುದು ದಿಕ್ಕುಗಳು ಗೊತ್ತಾಗಲಿಲ್ಲ. ಸರೋವರಗಳು ಮತ್ತು ನದಿಗಳು ಕ್ಷುಬ್ದವಾದವು. ಚಂದ್ರ, ಸೂರ್ಯ ನಕ್ಷತ್ರ ಎಲ್ಲ ಒಟ್ಟಿಗೆ ಅಡ್ಡಲಾಗಿ ನಿಂತಂತೆ ಭಾಸವಾಯಿತು. ಅಲ್ಲಿ ಸೂರ್ಯನ ಬೆಳಕೂ ಇತ್ತಂತೆ. ಕತ್ತಲೂ ಇತ್ತಂತೆ. ಯಾವುದು ಕತ್ತಲೆ? ಯಾವುದು ಬೆಳಕು ಅಂತ ಗೊತ್ತಾಗ್ತಾ ಇಲ್ಲ. ನೂರಾರು ಉಲ್ಕೆಗಳು ಉರಿದುರಿದು ಉದುರಿದವು. ನಿರ್ಘಾತ ( ಚಂಡಮಾರುತವೊಂದು ಚಂಡಮಾರುತಕ್ಕೆ ಅಪ್ಪಳಿಸಿ ಎರಡೂ ಸೇರಿ ಭೂಮಿಗೆ ಬಂದು ಅಪ್ಪಳಿಸುವುದು. ) ಇದು ತುಂಬಾ ಅಶುಭ. ಒಂದಲ್ಲ, ಅನೇಕ ನಿರ್ಘಾತಗಳು ಆ ಸಮಯದಲ್ಲಿ ಭುವಿಗೆ ಅಪ್ಪಳಿಸಿದವು. ಗಗನದಲ್ಲಿ ದಿವ್ಯಮಾರುತರ ಸಂಚಾರ ಪ್ರಾರಂಭವಾಯ್ತಂತೆ. ಗಾಳಿಯಲ್ಲಿ ಅನೇಕ ಪ್ರಭೇದಗಳಿವೆ. ಏಳು ಪ್ರಕಾರದ ವಾತಪ್ರಭೇಗಳಿವೆ ದಿವಿಯಲ್ಲಿ ಸಂಚಾರ ಮಾಡುವಂತಹವುಗಳು. ಮರುದ್ಗಣಗಳು ಅಂತ ಕರೀತಾರೆ. ಅವು ರಭಸವಾಗಿ ಬೀಸಲಿಕ್ಕೆ ಆರಂಭ ಮಾಡಿದವು. ನಮಗಿಲ್ಲಿ ಗೊತ್ತಾಗುವುದು ಏನು ಅಂದ್ರೆ ಮನುಷ್ಯಾಕೃತಿ ಅದು ಮನುಷ್ಯ ಮಾತ್ರ ಅಲ್ಲ. ಇಡೀ ಸೃಷ್ಟಿಯನ್ನು ಮೀರಿರುವ ಮಹಾಚೇತನ ಎಂದು ಇದರಿಂದ ಗೊತ್ತಾಗುವಂಥದ್ದು. ಚಂಡಮಾರುತವು ವೃಕ್ಷಗಳನ್ನು ಬುಡಮೇಲು ಮಾಡಿತು. ಮೋಡಗಳನ್ನು ಎಲ್ಲಿಂದ ಎಲ್ಲಿಗೋ ಸೆಳೆದೊಯ್ದಿತು. ಪರ್ವತಗಳಿಗೆ ಬಂದು ಬಡಿಯಿತು. ಕೆಲವು ಶಿಖರಗಳು ಮುರಿದವು. ಮಹಾಮೇಘಗಳು ಆಕಾಶವನ್ನು ಆವರಿಸಿದವು. ದೊಡ್ಡ ಪ್ರಮಾಣದ ಶಬ್ಧ ಆಕಾಶದಲ್ಲಿ ಉಂಟಾಯ್ತಂತೆ. ಕೋಲ್ಮಿಂಚುಗಳು ಮಿಂಚಿದವು. ಸಿಡಿಲುಗಳು ಬಿದ್ದವಂತೆ. ಕಣ್ಣಿಗೆ ಕಾಣುವ ಎಲ್ಲಾ ಪ್ರಾಣಿಗಳು ಸಿಡಿಲಿನ ಶಬ್ಧದ ಮೊರೆತದ ಜೊತೆಗೆ ಒಟ್ಟಿಗೆ ಕೂಗಿಕೊಂಡವಂತೆ. ಹಾಗೇ ಅದೃಶ್ಯವಾದ ಭೂತಗಳು, ಪಿಶಾಚಗಳೇ ಮೊದಲಾದ ಅದೃಶ್ಯವಾದ ಭೂತಗಳು ಕೂಗಿಕೊಂಡವು. ಉಳಿದ ಜೀವರಾಶಿಗಳಿಗೆ ಏನಾಯ್ತು ಅಂತನೇ ಗೊತ್ತಾಗ್ಲಿಲ್ಲ. ಅವುಗಳು ಬೆದರಿದವು. ತತ್ತರಿಸಿದವು. ನೆಲದ ಮೇಲೆ ಮಲಗಿದವು. ಅಲ್ಲಾಡಲಿಲ್ಲ. ಹೀಗೆ, ಚರಾಚರ ಜಗನ್ನಾಥನ ಕ್ರೋಧಕ್ಕೆ ಚರಾಚರ ಜಗತ್ತು ಕಂಪಿಸಿದರೆ ಅದು ಸಹಜ. ಅಲ್ಲೇ ಗೊತ್ತಾಗ್ತದೆ ನಮಗೆ ಅವನ್ಯಾರು ಅಂತ.

ಏತನ್ಮಧ್ಯೆ ಸಮುದ್ರವು ಭಯಂಕರ ವೇಗವನ್ನು ಹೊಂದಿತು. ಅದರೊಳಗಿನ ಭೂತಗಳು, ನಾಗರಾಕ್ಷಸರು, ಮತ್ತು ಅಲೆಗಳು ಎಲ್ಲಾ ಸೇರಿ ಇಡೀ ಸಮುದ್ರವೇ ಭಯಂಕರವಾದ ವೇಗವನ್ನು ಹೊಂದಿ ಒಂದು ಯೋಜನ ಹಿಂದೆ ಸರಿಯಿತು. ಬೆದರಿ ಹಿಮ್ಮೆಟ್ಟಿದನು ಸಾಗರ. ಇನ್ನೇನು ಬಾಣ ಪ್ರಯೋಗ ಮಾಡುವಂತಹ ಸ್ಥಿತಿ ರಾಮನದ್ದು. ಆಗ ಹೆದರಿ ಹಿಮ್ಮೆಟ್ಟುವ ಸಾಗರನನ್ನು ಕಂಡಾಗ ಬಾಣವನ್ನು ಬಿಡಲಿಲ್ಲ. ಉದ್ಧಟತನವನ್ನೇ ತೋರಿದ್ದು ಹೌದಾದರೂ ಬೆದರಿ ಹಿಮ್ಮೆಟ್ಟುವ ಸಾಗರನನ್ನು ಕಂಡಾಗ ಯುದ್ಧಧರ್ಮವನ್ನ ನೆನಪಿಸಿಕೊಂಡು ಬಾಣವನ್ನು ಪ್ರಯೋಗಿಸಲಿಲ್ಲ. ಕೋಪದ ಕೋಪದಲ್ಲಿಯೂ ಕೂಡ ರಾಮನನ್ನು ವಿವೇಕವು ಬಿಟ್ಟುಹೋಗೋದಿಲ್ಲ. ಎದ್ದು ಬಂದನಂತೆ ಸಮುದ್ರ. ಆ ಸಾಗರ ಜಲದ ಮಧ್ಯದಿಂದ ಮೂರ್ತೀಭೂತನಾಗಿ ದೇವತಾತ್ಮಕವಾಗಿ ಸಮುದ್ರನು ಮೇಲೆದ್ದು ಬಂದನು. ಮೇರು ಪರ್ವತದ ಮರೆಯಿಂದ ಸೂರ್ಯನು ಮೇಲೆದ್ದು ಬರುವಂತೆ ಸಮುದ್ರರಾಜನು ಮೇಲೆದ್ದು ಬರ್ತಾ ಇದಾನೆ. ಅವನ ಅಕ್ಕಪಕ್ಕದಲ್ಲಿ ಪನ್ನಗೇಂದ್ರರು, ನೋಡುವುದಕ್ಕೆ ಸ್ನಿಗ್ಧವಾದ ವೈಢೂರ್ಯ ಮಣಿಯ ಬಣ್ಣ, ನೀಲವರ್ಣ, ಅಲಂಕಾರವನ್ನು ಕೂಡಾ ಮಾಡ್ಕೊಂಡಿದಾನೆ. ಸ್ವರ್ಣಾಭರಣಗಳಿಂದ ಭೂಷಿತನಾಗಿದಾನೆ. ತನ್ನೊಳಗಿನ ಅನೇಕ ರತ್ನಗಳಿಂದ ತಾನೇ ಭೂಷಿತನಾಗಿದಾನೆ. ಹಿಮಾಲಯ ಪರ್ವತವು ನಾನಾ ವರ್ಣ ಧಾತುಗಳಿಂದ ಮಂಡಿತವಾಗಿರುವಂತೆ ವಿಧವಿಧವಾದ ಆಭರಣಗಳಿಂದ, ತನ್ನದೇ ರತ್ನಗಳಿಂದ ಮಂಡಿತನಾಗಿದಾನೆ. ಒಂದು ಏಕಾವಲೀ ಮಾಲೆ. ಆ ಮಾಲೆಯ ಮಧ್ಯದಲ್ಲಿ ದೊಡ್ಡದೊಂದು ರತ್ನ. ಅದು ಕೌಸ್ತುಭದ ಸಹೋದರನಂತೆ. ಒಂದೆಡೆಯಲ್ಲಿ ಅಲೆಗಳು ಏಳ್ತಾ ಇದಾವೆ. ಭೂತಾಕಾರದ ಚಂಡಮಾರುತಗಳು ಬೀಸ್ತಾ ಇದೆ. ಜಲಜಂತುಗಳೆಲ್ಲ ಪ್ರಕಟವಾಗಿದಾವೆ. ಉರಗ ರಾಕ್ಷಸರು ಕಂಗಾಲಾಗಿದಾರೆ. ಏತನ್ಮಧ್ಯೆ ಸಮುದ್ರರಾಜನು ಮೇಲೆದ್ದು ಬಂದಿದಾನೆ. ಅವನ ಪಕ್ಕದಲ್ಲಿ ಗಂಗೆ, ಸಿಂಧು ಮೊದಲಾದ ನದಿಗಳು. ಗಂಗೆಯೇ ಮೊದಲಾಗಿರತಕ್ಕಂತಹ ನದಿಗಳು ಸಾಗರನ ಪತ್ನಿಯರು.

ನದಿಗಳು, ಸಾಗರನ ಪತ್ನಿಯರು. ಪರಂಪರೆ ಇರುವುದು ಹೇಗೆ ಅಂದ್ರೆ ಗಂಗೆ ಈಶ್ವರನ ಹೆಂಡತಿ ಅಂತ ಆಮೇಲೆ ಹುಟ್ಟಿಕೊಂಡಿದ್ದು. ಪಾರಂಪರಿಕವಾಗಿ ಸಾಗರನ ಪತ್ನಿಯರು. ಅವರೆಲ್ಲ ರೂಪತಾಳಿ ಬಂದಿದ್ದಾರೆ. ಸಾಗರನು ಎದ್ದು ಬಂದು ಶರಪಾಣಿ ರಾಮನಿಗೆ ಕೈಮುಗಿದು, ತಾನು ಮೊದಲೇ ಯಾಕೆ ಎದ್ದು ಬರಲಿಲ್ಲ ಅಂತ ವಿವರಣೆ ಕೊಟ್ಟನಂತೆ. ವಿವರಣೆ ಏನು ಅಂದ್ರೆ, “ಇದು ನನ್ನ ಪ್ರಕೃತಿ. ನಾನು ಇರುವುದೇ ಹೀಗೆ, ಹಾಗಾಗಿ ಏನು ಮಾಡುವುದು ಅಂತ ಗೊತ್ತಾಗಲಿಲ್ಲ ನನಗೆ. ಪೃಥ್ವಿ, ವಾಯು, ಆಕಾಶ, ಜಲ, ಅಗ್ನಿ ಇದೇಲ್ಲ ತಮ್ಮ ತಮ್ಮ ಸ್ವಭಾವದಲ್ಲಿ ಇರ್ತವೆ. ಅಗ್ನಿಯ ಸ್ವಭಾವ ಮುಟ್ಟಿದ ಕೂಡಲೇ ಸುಡಬೇಕು. ವಾಯುವಿನ ಸ್ವಭಾವ ಬೀಸುವುದು. ಆಕಾಶದ ಸ್ವಾಭಾವ ಅಂಟಿಕೊಳ್ಳಬಾರದು. ನೀರಿನ ಸ್ವಭಾವ ಹರಿಯಬೇಕು. ಹಾಗೇ ಸಮುದ್ರದ ಸ್ವಭಾವ ಏನೂಂದ್ರೆ ಅಗಾಧ. ಗಾಧ ಅಂದ್ರೆ ನಿಮ್ನ ಸೀಮಾ ಅಂದ್ರೆ ಗಡಿ ಇದೆ ಅಂತ ಅರ್ಥ. ಕಾಲಿಟ್ರೆ ಆಧಾರ ಅಥವಾ ನೆಲ ಸಿಗಬೇಕು. ಅದಕ್ಕೆ ಗಾಧ ಅಂತ ಹೆಸರು. ಸಿಗದಿದ್ರೆ ಅಗಾಧ ಅಂತ ಹೆಸರು. ಅದು ಸಮುದ್ರದ ಸ್ವಭಾವ. ಹೀಗಾಗಿ ನನಗೆ ಏನು ಮಾಡಬೇಕು ಅಂತ ಅರ್ಥ ಆಗಲಿಲ್ಲ. ಕಾಮದಿಂದಾಗಲೀ, ಭಯದಿಂದಲಾಗಲೀ, ಲೋಭದಿಂದಾಗಲೀ ನಾನು ಈ ನೀರನ್ನು ಸ್ಥಂಭಿಸಲಾರೆ. ನನ್ನೊಳಗೆ ಬಹಳಷ್ಟು ಜಂತು ಪ್ರಾಣಿಗಳಿದಾವೆ. ಅವುಗಳ ದೃಷ್ಟಿಯಿಂದ ನೀರನ್ನು ಸ್ಥಂಭಿಸಲಿಕ್ಕೆ ಸಾಧ್ಯ ಇಲ್ಲ ನನಗೆ. ಇದು ನನ್ನ ಪರಿಮಿತಿ. ಆದರೆ ಈಗ, ಅಂದ್ರೆ ಬ್ರಹ್ಮಾಸ್ತ್ರ ಹೊರಗೆ ಬಂದದ್ದರಿಂದ, ನಾನು ಏನಾದರೂ ಮಾಡ್ತೆನೆ. ಸೇನೆ ದಾಟಿ ಹೋಗಲಿಕ್ಕೆ ಏನೇನು ಬೇಕೋ ಆ ವ್ಯವಸ್ಥೆಯನ್ನು ನಾನು ಮಾಡ್ತೇನೆ. ಅದಕ್ಕೆ ತಕ್ಕ ಹಾಗೆ ನೀನು ಏನು ಬೇಕಾದರೂ ಹಾಕು, ಅದನ್ನು ನಾನು ಮುಳಿಗಿಸುವುದಿಲ್ಲ. ಮಾತ್ರವಲ್ಲ, ನಿನ್ನ ಸೇನೆ ದಾಟುವವರೆಗೆ, ನನ್ನ ಯಾವ ಜಲ ಜಂತುಗಳೂ ಆಕ್ರಮಣ ಮಾಡುವುದಿಲ್ಲ. ಅದೆಲ್ಲ ಸೇರಿಯೇ ಸಮುದ್ರ. ಆ ಸಮಷ್ಠಿಗೇ ಒಂದು ಆತ್ಮ ಇದೆ, ಅದೇ ಸಾಗರ. ನೀನು ಏನು ಆದೇಶಿಸುತ್ತೀಯೋ ಅದನ್ನು ನಾನು ಧರಿಸುತ್ತೇನೆ ಮತ್ತು ಸಹಿಸುತ್ತೇನೆ. ದಾಟಿ ಹೋಗಲಿಕ್ಕೆ ನೆಲದಂತಿರುವ ಜಲ, ಅಂತಹ ವ್ಯವಸ್ಥೆಯನ್ನು ನಾನು ಮಾಡಿಕೊಡ್ತೆನೆ.” ಎಂದಾಗ ರಾಮನು ಸಮಾಧಾನವನ್ನು ಹೊಂದಿದನು. ಆದರೆ ಬ್ರಹ್ಮಾಸ್ತ್ರ ಶಮನವನ್ನ ಹೊಂದಲಿಲ್ಲ. ಅದು ಎದ್ದಿದೆ, ಅಭಿಮಂತ್ರಿತವಾಗಿದೆ. ತನ್ನ ಯುಗ ಯುಗದ ನಿದ್ರೆಯಿಂದ ಆ ಬ್ರಹ್ಮಾಸ್ತ್ರ ಎಚ್ಚೆತ್ತಿದೆಯಲ್ಲ, ಅದು ಸುಮ್ಮನೆ ಹಿಂದಕ್ಕೆ ಹೋಗುವುದಿಲ್ಲ. ರಾಮ ಹೇಳಿದ, “ನಾನು ಒಪ್ಪಿಕೊಂಡೆ ಆದರೆ ಬ್ರಹ್ಮಾಸ್ತ್ರ ಒಪ್ಪಬೇಕಲ್ಲ!” ಅದಕ್ಕೆ ಸಾಗರ ಕಕ್ಕಾಬಿಕ್ಕಿ ಆದ. ಆಗ ರಾಮನೇ ದಾರಿ ಹೇಳ್ತಾನೆ,”ಎಲ್ಲಿ ಪ್ರಯೋಗ ಮಾಡಲಿ ಅಂತ ಜಾಗ ತೋರಿಸು. ನಿನ್ನ ಮೇಲೆ ಪ್ರಯೋಗ ಮಾಡುವುದಿಲ್ಲ ಆದರೆ ಪ್ರಯೋಗ ಮಾಡಲು ತಕ್ಕ ಜಾಗ ತೋರಿಸು. ಈ ಬಾಣ ಅಮೋಘ. ಮೋಘ ಅಂದ್ರೆ ವ್ಯರ್ಥ, ಅಮೋಘ ಅಂದ್ರೆ, ಇದು ವ್ಯರ್ಥವಾಗಬಾರದು. ಈ ಬಾಣವು ಪ್ರಯೋಗವಾಗಲೇ ಬೇಕು, ಸಾರ್ಥಕವಾಗಲೇ ಬೇಕು. ” ಆಗ ಸಮುದ್ರರಾಜ ತನ್ನ ಶತ್ರುವನ್ನು ನೆನಪು ಮಾಡಿಕೊಂಡ. ಅವನಿಗೆ ಆಗದೇ ಇದ್ದವರು ಯಾರು? ಆಮೇಲೆ ಹೇಳಿದ, “ನನ್ನ ಉತ್ತರ ದಿಕ್ಕಿನಲ್ಲಿ ಒಂದು ಸ್ಥಳ ಇದೆ. ಧ್ರುಮಕುಲ್ಯ. ಅದು ತುಂಬಾ ಉತ್ತಮವಾದ ಸ್ಥಳ. ಅದು ಒಂದು ಕಾಲದಲ್ಲಿ ಪ್ರಪಂಚದಲ್ಲೇ ಖ್ಯಾತವಾಗಿತ್ತು. ಹೇಗೆ ಇವತ್ತು ನೀನು ಲೋಕವಿಖ್ಯಾತನೋ ಹಾಗೇ ಅದೂ ಕೂಡ ಒಂದು ಕಾಲದಲ್ಲಿ ತನ್ನ ಪುಣ್ಯಕ್ಕೊಸ್ಕರವಾಗಿ ಲೋಕವಿಖ್ಯಾತವಾಗಿತ್ತು. ಆದರೆ ಈಗ ಪಾಪಿಗಳು ಸೇರಿಕೊಂಡಿದ್ದಾರೆ. ಅವರು ನೋಡಲಿಕ್ಕಂತೂ ಭಯಂಕರರು, ಅವರು ಮಾಡೋ ಕೆಲಸ ಕೂಡ ಬಹಳ ಭಯಂಕರ. ದಸ್ಯುಗಳು, ದರೋಡೆಕೋರರು, ಪಾಪಿಗಳು ಅಲ್ಲಿ ವಾಸ ಮಾಡ್ತಾರೆ. ಅಲ್ಲಿ ಸಿಹಿ ನೀರಿದೆ. ಅದೇ ನನಗೆ ದುಃಖ ಆಗ್ತದೆ. ಕುಡಿಯೋದಿರಲಿ ಅವರು ನನ್ನನ್ನು ಮುಟ್ಟಿದರೇ ಅಸಹ್ಯವಾಗುತ್ತದೆ. ಹಾಗಾಗಿ ಅಲ್ಲಿ ಈ ಬಾಣ ಪ್ರಯೋಗ ಮಾಡಿದರೆ ಅವರೆಲ್ಲ ಸತ್ತುಹೋಗುತ್ತಾರೆ. ಆಗ ನನಗೆ ಸಮಾಧಾನ.

ಆಗಲಿ ಎಂದು ರಾಮನು ಆ ಬಾಣವನ್ನು ಧ್ರುಮಕುಲ್ಯದ ಮೇಲೆ ಪ್ರಯೋಗ ಮಾಡ್ತಾನೆ. ಧ್ರುಮಕುಲ್ಯವು ಕ್ಷಣಮಾತ್ರದಲ್ಲಿ ಮರಳುಗಾಡಾಯಿತು. ಸುಟ್ಟಿ ಉರಿದು ಹೋಯಿತು. ಮುಂದೆ ಭೂಮಿಯಲ್ಲಿ ಅದು ಮರುಕಾಂತಾರ ಎಂಬ ಹೆಸರು ಬರುವಂತೆ, ಅಂದ್ರೆ ಮರಳುಗಾಡು, ಕಾಂತಾರ ಅಂದ್ರೆ ಕಾಡು, ಮರಳುಗಾಡು ಆಗಿ ಮಾರ್ಪಟ್ಟಿತು. ಆ ಶಬ್ದಕ್ಕೆ ಭೂಮಿ ಕೂಗಿಕೊಂಡಳಂತೆ. ಓಳಗಿನಿಂದ, ಆ ರಸಾತಲದಿಂದ, ನೀರು ಉಕ್ಕಿತಂತೆ. ಬಾಣ ಅಷ್ಟು ಆಳಕ್ಕೆ ಹೋಗಿತ್ತು. ಆ ಬಾಣ ಹೋದ ಜಾಗದಲ್ಲಿ ಬಾವಿಯಂತೆ ಆಯಿತು. ಅದಕ್ಕೆ ರಣ ಅಂತ್ಲೇ ಹೆಸರಾಯಿತು. ರಣ ಅಂದ್ರೆ ಗಾಯ ಅಂತ. ಗಾಯವಾಯಿತು ಅಲ್ಲಿ. ಸಮುದ್ರದಲ್ಲಿ ನೀರು ಹೇಗೆ ಬತ್ತುವುದಿಲ್ಲವೋ, ಹಾಗೇ ಅಲ್ಲಿ ನೀರು ನಿರಂತರವಾಯಿತು. ಆ ಚೋರರ ಸಂಹಾರವಾಗಿ ಅಗ್ನಿಶುದ್ಧಿ ಏರ್ಪಟ್ಟ ಬಳಿಕ, ರಾಮನು ಆ ಭೂಮಿಗೆ ವರ ಕೊಡ್ತಾನೆ. ಇದ್ದಕ್ಕಿದ್ದಂತೆ ತನ್ನ ದೇವತ್ವವನ್ನು ಪ್ರಕಟಪಡಿಸಿದನು ರಾಮ. ಕೃಷ್ಣನ ಹಾಗೇ ಪದೇ ಪದೇ ವ್ಯಕ್ತ ಪಡಿಸುವುದಿಲ್ಲ. ಏನು ವರ ಕೊಟ್ಟ ಅಂದ್ರೆ,”ನೀನು ಬಹಳ ಸಮೃದ್ಧವಾಗು. ಪಶುಗಳು, ಪಕ್ಷಿಗಳು ನಿನ್ನಲ್ಲಿ ಆಶ್ರಯ ಪಡುವಂತಹ ಸ್ಥಿತಿ ಬರಲಿ. ನಿನ್ನ ಗಾಳಿಗೆ ರೋಗ ಪರಿಹಾರವಾಗುವಂತಹ ಶಕ್ತಿ ಬರಲಿ. ಹಣ್ಣು, ಫಲಗಳು ಸಮೃದ್ಧವಾಗಲಿ. ಬೇಕಾದಷ್ಟು ಗೋವುಗಳು ಆ ಪರಿಸರದಲ್ಲಿ ಬೇಕಾದಷ್ಟು ಹಾಲು, ತುಪ್ಪ ಸುಗಂಧ ದ್ರವ್ಯಗಳು, ದಿವ್ಯೌಷಧಗಳಿಂದ ಸಮೃದ್ಧವಾಗಲಿ. ಮಾತ್ರವಲ್ಲ ಈ ನಿನ್ನ ದಾರಿ ಶುಭವಾಗಲಿ.” ಬ್ರಹ್ಮಾಸ್ತ್ರ ಪ್ರಯೋಗ ಮಾಡಲೇ ಬೇಕಾಗಿತ್ತು, ಈಗ ವರ ಕೊಡ್ತಾನೆ. ಮೊದಲು ಚೋರರು, ದರೋಡೆಕೋರರು ಇದ್ರು, ಈಗ ಪ್ರಾಣಿ ಪಕ್ಷಿಗಳು ಅಲ್ಲಿ ವಿಹಾರ ಮಾಡ್ತವೆ. ಅಂತಹ ವರ ಕೊಟ್ಟು ಆ ಭೂಮಿಯನ್ನು ಪುಣ್ಯಭೂಮಿಯಾಗಿ ಮಾರ್ಪಡಿಸುತ್ತಾನೆ. ಮಹಾಪುರಷರು ಬ್ರಹ್ಮಾಸ್ತ್ರ ಕೈಗೆತ್ತಿಕೊಂಡರೂ ಆಗುವುದು ನಂದನವನ. ಅದನ್ನು ನೋಡಿ ಸಮುದ್ರರಾಜನೂ ಸಂತೋಷಗೊಂಡ.

ಆಗ ಸರ್ವಶಾಸ್ತ್ರಜ್ಞನಾದ ರಾಮನಿಗೆ ಸಮುದ್ರರಾಜ ಹೇಳ್ತಾನೆ,”ಪ್ರಭು! ನಿನ್ನ ಸೇವಕರೊಲ್ಲಿ ಒಬ್ಬ, ನಲ ಎಂಬುವವನಾದ ಈ ಮಹಾಕಪಿಯು, ವಿಶ್ವಕರ್ಮನ ಮಗ. ವಾನರರೆಲ್ಲ ದೇವರ ಅಂಶ ಸಂಭೂತರು. ಇವನಿಗೆ ಇವನ ಅಪ್ಪನ ವರ ಇದೆ. ಶಿಲ್ಪಶಾಸ್ತ್ರ ಇವನಿಗೆ ಸಿದ್ಧ. ನಿರ್ಮಾಣ ಶಾಸ್ತ್ರ ಗೊತ್ತಿದೆ ಅವನಿಗೆ. ಇವನು ನನ್ನ ಮೇಲೆ ಸೇತುವೆಯನ್ನು ಕಟ್ಟಲಿ. ಅವನು ಕಟ್ಟಿದ ಸೇತುವನ್ನು ನಾನು ಧರಿಸುತ್ತೇನೆ. ಬೀಳಲಿಕ್ಕೆ ಕೊಡುವುದಿಲ್ಲ.” ರಾಮನು ವೈಕುಂಠದಿಂದ ಬರುವಾಗ ಸಾಮಾಗ್ರಿಯನ್ನೆಲ್ಲ ತಂದಿದ್ದಾನೆ. ಎಲ್ಲರೂ ಇದ್ದಾರೆ ಅವನ ಸೈನ್ಯದಲ್ಲಿ. commander ಗಳಿಂದ ಶುರುಮಾಡಿ engineer, architect ಗಳೂ ಇದ್ದಾರೆ. ಮನೆ ಕಟ್ಟುವ engineer ಅಲ್ಲ. ಸಮುದ್ರದಲ್ಲಿ ಸೇತುವೆ ನಿರ್ಮಾಣ ಮಾಡುವಂತಹ engineer ಗಳು. ಇಷ್ಟು ಹೇಳಿ, ಸಮುದ್ರ ರಾಜನು ಮರೆಯಾಗಿ ಹೋದ. ಆಗ ನಲ ಮೇಲೆದ್ದ. ಆ ವಾನರ ಶ್ರೇಷ್ಠನು ಹೇಳಿದ,”ನಾನು ಸೇತುವೆಯನ್ನು ಕಟ್ಟಲಿಕ್ಕೆ ಬೇಕಾದಂತಹ ಎಲ್ಲ ಪರಿಣಿತಿ, ಎಲ್ಲ ಜ್ಞಾನ ನನ್ನಲ್ಲಿದೆ. ನನ್ನ ಅಪ್ಪನ ಕರುಣೆ. ಈ ಸಮುದ್ರ ಹೇಳಿದ್ದು ಸತ್ಯ.” ಮಧ್ಯದಲ್ಲೇ ಏನೋ ನೆನಪಾಗಿ ಸಮುದ್ರಕ್ಕೆ ಸ್ವಲ್ಪ ಬೈದ, ನಲ. “ಸಾಮ, ದಾನ, ದಂಡ ಮತ್ತು ಭೇದ ಎನ್ನುವ ನಾಲ್ಕು ಉಪಾಯಗಳಲ್ಲಿ ದಂಡವೇ ಶ್ರೇಷ್ಠ. ಈ ಘಟನೆ ನೋಡಿದ ಮೇಲೆ ನನಗಂತೂ ಖಾತ್ರಿ ಆಗಿದೆ. ಕೃತಜ್ಞರಲ್ಲದವರಲ್ಲಿ ಕ್ಷಮೆಗೆ ಧಿಕ್ಕಾರ. ಕೃತಜ್ಞನಾಗಿರಬೇಕಾಗಿತ್ತು ಸಮುದ್ರ. ಈ ಸಮುದ್ರರಾಜನು ಗಾಧವನ್ನು ಕೊಟ್ಟ ಆದರೆ ದಂಡದ ಭಯದಿಂದ. ರಾಮನ ಬ್ರಹ್ಮಾಸ್ತ್ರದಿಂದ ಹೆದರಿ ಗಾಧವನ್ನು ಕೊಟ್ಟ. ಅವನು ತಾನಾಗಿ ಬಂದು ಈ ಕೆಲಸವನ್ನು ಮಾಡಬೇಕಾಗಿತ್ತು. ನನ್ನ ಪ್ರಭುವಿಗೆ ಬಿಲ್ಲೆತ್ತುವಂತೆ ಮಾಡಬೇಕಿತ್ತಾ?” ಹೀಗೆ ಸಮುದ್ರಕ್ಕೆ ಬೈದು ಮುಂದುವರಿಸುತ್ತಾನೆ ನಲ,”ನನ್ನ ಅಮ್ಮನಿಗೆ ನನ್ನ ಅಪ್ಪ ವಿಶ್ವಕರ್ಮ ಮಂದರ ಪರ್ವತದಲ್ಲಿ ವರ ಕೊಟ್ಟಿದ್ದು ಇದೆ. ನಿನ್ನಲ್ಲಿ ಹುಟ್ಟುವ ಮಗನು ನನ್ನಂತೆ ಆಗ್ತಾನೆ. ನನ್ನ ಎಲ್ಲ ಶಕ್ತಿ ಸಾಮರ್ಥ್ಯಗಳು ಅವನಿಗೆ ಬರ್ತವೆ. ಈಗ ನನಗೆ ನನ್ನ ಸಾಮರ್ಥ್ಯ ನೆನಪಾಯಿತು. ನೆನಪಾದರೂ ಕೂಡ ನಾನಾಗಿ ಹೇಳಲಾರೆ. ಹೇಳಿದ ಕೂಡಲೇ ಮಾಡ್ತೇನೆ ಕೆಲಸ. ಆದರೆ ನಾನಾಗಿ ನನ್ನ ಬಗ್ಗೆ ಹೇಳುವ ಸ್ವಭಾವ ನನ್ನದಲ್ಲ. ನೀನು ಈ ವಾನರರಿಗೆ ಅಪ್ಪಣೆ ಕೊಡು. ನಾನೇ ನಿಂತು ಸೇತುವೆ ಕಟ್ಟಿಸುತ್ತೇನೆ.” ಎಂದಾಗ ರಾಮನು ಕೂಡಲೇ ವಾನರರಿಗೆ ಸೇತುವೆ ಕಟ್ಟಲು ಆಜ್ಞೆಯನ್ನು ಮಾಡ್ತಾನೆ. ತಡವೇ ಇಲ್ಲ. ನೂರಲ್ಲ, ಸಾವಿರ ಅಲ್ಲ, ಲಕ್ಷ ಲಕ್ಷ ಕಪಿಗಳು ಕಾಡಿಗೆ ಓಡಿದರು. ಯಾಕೆಂದ್ರೆ, ಸೇತುವೆಯ ಮೊದಲ ಹಂತ ಮರ. ಈಗಲೂ ವಿಜ್ಞಾನಿಯರು, ರಾಮಸೇತುವೆಯನ್ನು ನೋಡಿದವರು ಆ ಸೇತುವೆಯಲ್ಲಿ ಕೆಳಗೆ ಮರ ಇದೆ ಅಂತಲೇ ಹೇಳ್ತಾ ಇದ್ದಾರೆ. ವರ್ಣನೆ ಕೂಡ ಅದೇ ರೀತಿ ಇದೆ.

ದೊಡ್ಡ ದೊಡ್ಡ ಮರಗಳು. ಕೆಲವರು ಹೊತ್ತು ತಂದರೇ, ಕೆಲವು ಮರಗಳು ಎಷ್ಟು ದೊಡ್ಡದಿತ್ತು ಅಂದ್ರೆ, ಎಳೆದುಕೊಂಡು ಬಂದ್ರು. ಸಾಲ, ಅಶ್ವಕರ್ಣ, ಧವ, ವಂಶ (ಬಿದಿರು), ಪುಟಜ, ಅರ್ಜುನ, ತಾಲ, ತಿಲಕ, ತಿನಿಷಾ, ಬಿಲ್ವ, ಸಪ್ತಪರ್ಣ, ಕರ್ಣೀಕಾರ, ಚೂತ, ಅಶೋಕ ಇವೆಲ್ಲವನ್ನೂ ತಂದರು. ಕೆಲವುದಕ್ಕೆ ಬೇರಿತ್ತು, ಕೆಲವಕ್ಕೆ ಇಲ್ಲ. ಕೆಲವನ್ನು ಮುರಿದು ತಂದಿದ್ದಾರೆ, ಕೆಲವನ್ನು ಕಿತ್ತು ತಂದಿದ್ದಾರೆ. ತಂದು ತಂದು ಹಾಕ್ತಾ ಇದ್ದಾರೆ ಸಮುದ್ರದಲ್ಲಿ. ದಾಳಿಂಬೆಯ ಪೊದರು, ತೆಂಗಿನ ಮರಗಳು, ವಿಭೀತಕ ವೃಕ್ಷ, ಬಕುಲ, ಕದಿರ, ನಿಂಬ( ಕಹಿಬೇವು ) ಎಲ್ಲ ತಂದೊಟ್ಟಿದಾರಂತೆ. ಆಮೇಲೆ ಬಂಡೆಗಳು ಹೀಗೆ ಇದೆಯಂತೆ ಅಲ್ಲಿಯ ಕ್ರಮಗಳೂ ಕೂಡ. ರಾಮಸೇತುವೆ ಈಗೇನು ಸಿಗ್ತದೆ ಅದನ್ನು ಪರಿಶೀಲಿಸಿದರೆ, ಹೀಗೆ ಇದೆಯೆಂದು ಹೇಳುತ್ತದೆ ಮೂಲ ರಾಮಾಯಣ. ಆನೆ ಗಾತ್ರದ ಬಂಡೆಗಳು ಮತ್ತು ಪರ್ವತಗಳು, ಕಷ್ಟಪಟ್ಟು ಹೊತ್ತು ತರುತ್ತಿದ್ದಾರೆ. ಸಮುದ್ರವನ್ನು ಶೋಭೆಗೊಳಿಸಿದರು ವಾನರರು. ನಲನ ಮಾರ್ಗದರ್ಶನದಲ್ಲಿ ಕೆಲವರು ಸೂತ್ರವನ್ನು ಹಿಡ್ಕೊಳ್ಳೋರು. ಈ ತುದಿಯಿಂದ ಆ ತುದಿಯವರೆಗೆ ಸೂತ್ರವನ್ನು ಹಿಡ್ಕೊಂಡಿದಾರಂತೆ. ನಲನು ಸೇತುವೆಯನ್ನು ಕಟ್ಟಿದ. ಹತ್ತು ಯೋಜನ ಅಗಲ, ನೂರು ಯೋಜನ ಉದ್ದದ ಸೇತುವೆಯನ್ನು ಸಮುದ್ರಮಧ್ಯದಲ್ಲಿ..! ಕೆಲವರು ದಂಡಗಳನ್ನು ಹಿಡಿದುಕೊಂಡಿದ್ದರು. ಕೆಲವರು ಸಾಧನಗಳನ್ನು ಹುಡುಕುತ್ತಿದ್ದರು. ಮಣ್ಣು, ಕಲ್ಲು, ಮರ, ಈ ತರದ ಸಾಮಗ್ರಿಗಳನ್ನು ಹುಡುಕುವವರು ಕೆಲವರು. ಹೀಗೆ ರಾಮನ ಆಜ್ಞೆಯನ್ನು ಪಾಲಿಸುವ ಕಪಿಗಳು ಸಾಮಗ್ರಿಗಳನ್ನು ತಂದು ತಂದು ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಪರ್ವತಾಗ್ರಗಳಿಂದ ಸೇತುವೆಯನ್ನು ಕಟ್ತಾ ಇದ್ದಾರೆ. ಕಟ್ಟಿಗೆಗಳನ್ನು ಕೊಟ್ಟು, ಹುಲ್ಲುಗಳನ್ನು ಬಳಸಿ ಕಟ್ತಾ ಇದಾರೆ. ಕೆಲವು ಕಡೆ ಮೆತ್ತಗಿರಬೇಕಾದ ಜಾಗದಲ್ಲಿ ಹೂವುಗಳಿಂದ ಕೂಡಿದ ವೃಕ್ಷಗಳನ್ನು ತಂದು ಹಾಕ್ತಾ ಇದಾರೆ. ಆನೆಗಾತ್ರದ ಕಪಿಗಳು ಇನ್ನೂ ದೊಡ್ಡ ಪರ್ವತಗಳನ್ನು ಹೊತ್ತು ತರುತ್ತಾ ಇದ್ದಾರೆ. ದೊಡ್ಡ ಶಬ್ದವಾಗುತಿತ್ತಂತೆ. ಕಪಿಗಳೆಲ್ಲರಿಗೂ ಕರುಣಾಸಾಗರ ರಾಮನೇ ಸಾಗರದಲ್ಲಿ ಕಂಡು ಬಂದ.

ಸೇತುವೆ ಕಟ್ಟಲು ಎಷ್ಟು ಸಮಯಬೇಕಾಯಿತು… ? ಅಂದರೆ ಮೊದಲನೇ ದಿನದಲ್ಲಿ ಹದಿನಾಲ್ಕು ಯೋಜನ ಕಟ್ಟಿದರಂತೆ. ಬಹಳ ಸಂತೋಷದಲ್ಲಿ, ಅತೀ ಅವಸರದಲ್ಲಿ ಕೆಲಸ ಮಾಡುತ್ತಿದ್ದರು. ಎರಡನೇ ದಿವಸದಲ್ಲಿ ಇಪ್ಪತ್ತು ಯೋಜನ, ಮೂರನೇಯ ದಿನ ಇಪ್ಪತೊಂದು ಯೋಜನ, ನಾಲ್ಕನೇಯ ದಿನ ಇಪ್ಪತ್ತೆರಡು ಯೋಜನ, ಕೊನೆಯ ದಿನ ಇಪ್ಪತ್ಮೂರು ಯೋಜನ ಕಟ್ಟಿದರು. ನೂರು ಯೋಜನವಾಯಿತು. ಐದು ದಿನದಲ್ಲಿ ನಿರ್ಮಿತವಾದ ಸೇತುವೆ. ಸಂಖ್ಯೆ, ಸಾಮರ್ಥ್ಯ ಎರಡೂ ಸೇರಿದರೆ, ಆಗುವುದು ಅದ್ಭುತ. ಕೋಟ್ಯನುಕೋಟಿ ಕಪಿಗಳು ಸೇರಿದಾವೆ ಅಲ್ಲಿ. ನಮ್ಮ ಬುದ್ಧಿ, ಕಲ್ಪನೆ, ಊಹೆಗೂ ಮೀರಿರುವಂತಹ ಸಂಖ್ಯೆಯಲ್ಲಿ ಇದ್ದಾರೆ ಕಪಿಗಳು. ಸಾಮರ್ಥ್ಯವಿದೆ ಅವರಲ್ಲಿ. ನಲನಂತಹ ವಿಶ್ವಕರ್ಮನಿದ್ದಾನೆ. ಇದರಿಂದ ಅವರ ಭಕ್ತಿ, ರಾಮನ ಶಕ್ತಿ ಇದೆಲ್ಲ ಸೇರಿ ಐದು ದಿನದಲ್ಲಿ ಸೇತುವೆಯನ್ನು ಕಟ್ಟಿದರು. ನಲ ತನ್ನ ತಂದೆಯನ್ನು ಮೀರಿಸಿದನು. ಅಂಬರದಲ್ಲಿ ಸ್ವಾತಿಪಥ (milky way) ಇರುವಂತೆ ಸಾಗರದ ಮಧ್ಯದಲ್ಲಿ ಶೋಭಿಸುತ್ತಿತ್ತು. ದೇವತೆಗಳೂ, ಗಂಧರ್ವರು, ಯಕ್ಷರು ಈ ಕೌತಕವನ್ನು ನೋಡಲು ಬಂದರಂತೆ. ಹಿಂದಾಗಲಿ ಮುಂದಾಗಲಿ ಯಾರು ಮಾಡಲಿಕ್ಕೆ ಸಾಧ್ಯವಿಲ್ಲದಂತಹ ಸೇತುವೆ ಇದು. ರಾಮಸೇತು ನಾವು ಈಗ ಕರೆಯುವಂತದ್ದು. ನಲಸೇತು ಎಂದು ಈ ಸೇತುವೆಯ ಹೆಸರು.

ಏತನ್ಮಧ್ಯೆ ಕಪಿಗಳು ಹಾರುತ್ತಿದ್ದರು, ಘರ್ಜಿಸುತ್ತಿದ್ದರು ಯಾಕೆಂದರೆ ಕೆಲಸವಾಗಿಬಿಟ್ಟಿದೆ. ಸರ್ವ ಭೂತಗಳು ಆ ಸೇತುವೆಯನ್ನು ನೋಡಿದರು. ಹಾರುವ ಪಕ್ಷಿಗಳು, ಜಲಜಂತುಗಳು, ಆಕಡೆ ಈಕಡೆ ವಾಸವಾಗಿರುವಂತಹ ಮನುಷ್ಯರೋ ಪ್ರಾಣಿಗಳೋ ಇರಬಹುದು ಎಲ್ಲರೂ ಬೆರಗಾಗಿ ಸೇತುವೆಯನ್ನು ನೋಡಿದರು. ಯಾರು ಆ ಸೇತುವೆಯನ್ನು ನೋಡುತ್ತಾರೋ, ಅವರ ರೋಮಗಳು ನಿಮಿರಿ ನಿಲ್ಲುವಂತೆ ಇದ್ದವು. ಅದ್ಭುತ…! ಕೋಟಿ ಸಹಸ್ರ ವಾನರರು ಸೇತುವೆಯನ್ನು ಕಟ್ತಾ ಕಟ್ತಾ, ಲಂಕೆಯನ್ನು ತಲುಪಿದರಂತೆ. ಚೆನ್ನಾಗಿ ನಿರ್ಮಿಸಿದ ಸೇತುವೆ ಶೋಭಿಸಿತಂತೆ. ಸಮುದ್ರದ ಮಧ್ಯದಲ್ಲಿ ಬೈತಲೆಯಂತೆ ಶೋಭಿಸಿತು. ವಿಭೀಷಣ ಎಚ್ಚರಗೊಂಡನಂತೆ. ಕೂಡಲೆ ವಿಭೀಷಣ ಆ ಕಡೆ ದಾಟಿ, ವಾನರರ ರಕ್ಷಣೆಗೆ ನಿಂತ. ರಾಕ್ಷಸರು ಯಾರಾದರೂ ಬಂದರೆ ಮೊದಲ ಯುದ್ಧ ವಿಭೀಷಣನ ಜೊತೆಗಾಗಬೇಕು ಎಂದು. ಹಾಗಾಗಿ, ಮೊದಲು ತಾನು ಎದೆಯೊಡ್ಡಬೇಕೆಂದು ಆಚೆ ನಿಂತ. ಲಂಕೆಯಲ್ಲಿ ವಿಭೀಷಣ ಅನ್ಯಾಯದ ಯಾವುದೇ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಯುದ್ಧ ಧರ್ಮಕ್ಕಾಗಿ ಅವನ ತತ್ವ. ಮೊದಲು ತನ್ನವರೇ ಆದರೂ, ಈಗ ಅದೇ ರಾಕ್ಷಸರ ವಿರುದ್ಧ ನಿಂತಿದಾನೆ ವಿಭೀಷಣ. ಸುಗ್ರೀವ ಸೇತುವೆಗೆ ಚಾಲನೆ ಕೊಟ್ಟನು. ಸುಗ್ರೀವ ರಾಮಲಕ್ಷ್ಮಣರಿಗೆ ಪ್ರಾರ್ಥಿಸಿನು, ಹನುಮಂತನ ಮೇಲೆ ರಾಮ, ಅಂಗದನ ಮೇಲೆ ಲಕ್ಷ್ಮಣ ವಾಯುಮಾರ್ಗದಲ್ಲಿ ಬನ್ನಿ ಎಂದು.

ಮುಂದೆ ರಾಮಾಭಿಷೇಕ…! ಮುಂದಿನ ಪ್ರವಚನದಿಂದ ಲಂಕೆಯಲ್ಲಿ ರಾಮ. ಹರೇರಾಮ

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments