ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಯಾವುದೇ ನಿರ್ಮಾಣಕ್ಕೆ‌ ಎರಡು ಸಂಗತಿಗಳು ತುಂಬಾ ಮುಖ್ಯವಾಗ್ತವೆ. ಅದು ಭದ್ರವಾಗಿರಬೇಕು ಮತ್ತು ಅದು ಸುಂದರವಾಗಿರಬೇಕು. ಈಗ ಒಂದು ಮನೆಯನ್ನು ಕಟ್ಟಿದ್ರೆ, ಮೊದಲು ಮನೆ ಭದ್ರವಾಗಿರಬೇಕು‌, ಹಾಗೆಯೇ ಚೆಂದವಾಗಿರಬೇಕು. ಹಾಗೆಯೇ ‘ಕಲ್ಪಕ್ಕೊಂದು’ ಎನ್ನಬಹುದಾಗಿರತಕ್ಕಂತ ಸಾಗರ ಸೇತು ಅದು ಭದ್ರವಾಗಿಯೂ ಇತ್ತು, ಮತ್ತು ಸುಂದರವಾಗಿಯೂ ಕೂಡ ಇತ್ತು. ಮಹಾವೃಕ್ಷಗಳು, ಮಹಾಶಿಲೆಗಳು, ಮಹಾ ಪರ್ವತಗಳು, ಇವುಗಳಿಂದಲಾಗಿ ಆ ಸೇತುವು ತುಂಬ ಭದ್ರವಾಗಿತ್ತು. ಅಡಿಯಿಂದ ಸಮುದ್ರರಾಜ ಆತು ಹಿಡಿದಿದ್ದ. ಆತನೇ ಆಧಾರವಾಗಿ ಪರಿಣಮಿಸಿದ್ದ. ಇನ್ನು ಸುಂದರವಾಗಿತ್ತು ಎಂದರೆ, ಬಿದಿರುಗಳಿಂದ, ಚಿಗುರುಗಳಿಂದ, ಹೂವುಗಳಿಂದ ಮತ್ತು ಮೃದುವಾದ ಮಣ್ಣಿನಿಂದ ಚೆಂದವಾಗಿಯೂ ಮಾಡಲಾಗಿತ್ತು ಆ ಸೇತುವೆಯನ್ನು. ನಡೆದುಕೊಂಡು ಹೋಗುವವರಿಗೆ ಸುಖಾನುಭವ ಬರುವಂತೆ ಅದನ್ನು ಹಿತವಾಗಿಯೂ, ಚೆಂದವಾಗಿಯೂ ಮಾಡಲಾಗಿತ್ತು.

ಆದರೆ, ಇಂತಹಾ ಸೇತುವೆಯ ಮೇಲೆ ರಾಮ ಹಾರಿ‌ಹೋಗುವ ಏರ್ಪಾಡಾಗ್ತದೆ. ಯಾಕಂದ್ರೆ, ಸುಗ್ರೀವ ರಾಮನಿಗೆ ಪ್ರಾರ್ಥನೆ ಮಾಡ್ತಾ ಇದ್ದಾನೆ. ಹನುಮಂತನನ್ನು ನೀನು ಏರು, ಅಂಗದನನ್ನು ಲಕ್ಷ್ಮಣನು ಏರಲಿ. ಕಿಷ್ಕಿಂಧೆಯಿಂದ ಇಲ್ಲಿಯವರೆಗೆ ಬಂದ ರೀತಿಯಲ್ಲಿಯೇ ನೀವೀರ್ವರೂ ಲಂಕೆಗೆ ಪ್ರಯಾಣಿಸುವಿರಂತೆ ಎಂಬುದಾಗಿ ಸುಗ್ರೀವನು ಎರಡು ಅದ್ಭುತವಾದ ವಾಹನಗಳನ್ನು ರಾಮನಿಗೆ ಒದಗಿಸ್ತಾ ಇದ್ದಾನೆ! ಮೊದಲೇ ರಾಮನಿಗೆ ತನ್ನ ಚಿಂತೆಯಿಲ್ಲ. ಅವನ ಆಶಯ ಕಪಿಸೇನೆ ದಾಟಬೇಕು ಎಂಬುದಾಗಿ ಹೊರತು ತನ್ನ ಬಗ್ಗೆ ಎನ್ನುವ ಪ್ರಸ್ತಾಪವೇ ಎಲ್ಲಿಯೂ ಇಲ್ಲ. ಯಾಕಂದ್ರೆ ಆತ್ಮವಿಶ್ವಾಸದ ಪ್ರತಿಮೂರ್ತಿ ಅವನು. ಇನ್ನೊಂದು, ಹೇಗೂ ಹನುಮಂತನಿದ್ದಾನಲ್ಲ, ಯೋಚನೆ ಮಾಡಬೇಕಾಗಿಯೂ ಕೂಡ ಇಲ್ಲ. ಅಂತೆಯೇ ಆಯಿತು. ಸೇನೆಯ ಮುಂಭಾಗದಲ್ಲಿ ರಾಮ, ಪಕ್ಕದಲ್ಲಿ ಲಕ್ಷ್ಮಣ. ಹಿಂದೆ ಸುಗ್ರೀವ, ಅದರ ಹಿಂದೆ ಕಪಿಸೇನೆ. ರಾಜನು ಮುಂದೆ ನಿಂತು ಹೋರಾಡ್ತಾನೆ!

ಕಪಿಸೇನೆ ಹೇಗೆ ದಾಟಿತು? ಅಂದ್ರೆ, ಕೆಲವರು ಮಧ್ಯೆ ರಾಜರಂತೆ ನಡೆದು ಹೋಗ್ತಾ ಇದ್ದಾರೆ, ಇನ್ನು ಕೆಲವರು ಅಕ್ಕಪಕ್ಕದಲ್ಲಿ ನಡೆದು ಹೋಗ್ತಾ ಇದ್ದರು. ಕೆಲವರು ಅಲ್ಲೂ ಜಾಗ ಇಲ್ಲ‌ ಅಂತ ಸಮುದ್ರಕ್ಕೆ ಹಾರಿದರು, ಈಜಿಕೊಂಡು ಬರ್ತೇವೆ ಅಂತ, ಹಾಗೇ ಕೆಲವರಿಗೆ ದಾರಿಯೇ ಸಿಗಲಿಲ್ಲ!! ಯಾಕಂದ್ರೆ, ಮಧ್ಯೆ ಜನ, ಅಕ್ಕಪಕ್ಕದಲ್ಲಿಯೂ ಜನ, ನೀರಲ್ಲೂ ಜನ ಇದ್ದಾರೆ. ಅವರು ಅನಿವಾರ್ಯವಾಗಿ ಕಾಯಲೇಬೇಕು! ಸೇತುವೆ ಸಣ್ಣದಲ್ಲ, ಸೈನ್ಯ ದೊಡ್ಡದು. ದಶಯೋಜನ ವಿಸ್ತಾರ, ನೂರುಯೋಜನ ಉದ್ದದ ಸೇತುವೆ ಅದು. ಇನ್ನು ಕೆಲವರು ಜಾಗ ಸಿಗಲಿಲ್ಲ ಅಂತ ಬೇಜಾರು ಮಾಡಿಕೊಳ್ಳಲಿಲ್ಲ, ಆಕಾಶದಲ್ಲಿ ಹಾರಿ ಕೂಡ ಬಂದರು. ಅಂತೂ ಸೇನೆ ಬಂತು. ಸೇನೆಯ ಸದ್ದಿಗೆ ಸಮುದ್ರದ ಸದ್ದಡಗಿತು! ಒಂದು ಹಂತ ದಾಟಿದೆ. ದಕ್ಷಿಣ ತೀರದಲ್ಲಿ ನೆಲೆಗೊಂಡಿದೆ. ಗೆಡ್ಡೆಗೆಣಸು, ಹಣ್ಣುಹಂಪಲು, ನೀರು ಬೇಕಾದಷ್ಟಿದೆ. ಹಾಗಾಗಿ ಅಂತಹ ಸಮೃದ್ಧವಾದ ಸುವೇಲ ಪರ್ವತದ ಪರಿಸರದಲ್ಲಿ ವಾನರ ಸೇನೆಯು ಬೀಡುಬಿಟ್ಟಿತು.

ಶ್ರೀರಾಮನು ಸಮುದ್ರದ ದಕ್ಷಿಣ ತೀರಕ್ಕೆ ದಾಟಿದ್ದಾನೆ. ಅಲ್ಲಿ ಒಂದ ವಿಶೇಷ ಘಟನೆ ನಡೆಯಿತು. ರಾಮಾಭಿಷೇಕ! ದೇವತೆಗಳು, ಮಹರ್ಷಿಗಳು ಮತ್ತು ಸಿದ್ಧಚಾರಣರು ರಾಮನಿಗೆ ಪುಣ್ಯಜಲಗಳಿಂದ ಅಭಿಷೇಕ ಮಾಡಿದರಂತೆ. ಈ ರಾಮಕಾರ್ಯ ಅವರನ್ನು ಬೆರಗುಗೊಳಿಸಿದೆ. ಅವರ ಪ್ರಕಾರ ಯುದ್ಧ ಮುಗಿದಿದೆ, ಗೆದ್ದಾಗಿದೆ ರಾಮ. ನರರಿಗಿಂತ ಮೊದಲು ಸುರರಿಗೆ ಅವಕಾಶ ಸಿಕ್ಕಿದೆ. ಬಹುಷಃ ಇನ್ನು ಕಾಯಲಾರೆವೆಂಬ ಭಾವ! ರಾಮನ ಪಟ್ಟಾಭಿಷೇಕಕ್ಕೆ ಮೂಜಗವೇ ಕಾದಿದೆ ಎಂಬ ಹಾಗೆ ಬಹಳ ಮೊದಲೇ ಅಭಿಷೇಕ ಮಾಡಲಾಯಿತು‌. ‘ಮಾನವ ದೇವ, ಶತ್ರುಗಳನ್ನು ಜಯಿಸು. ಸಾಗರ ಸಹಿತವಾದ ಭೂಮಿಯನ್ನು ಶಾಶ್ವತವಾಗಿ ಪಾಲಿಸು. ಸೂರ್ಯ ಚಂದ್ರರಿರುವವರೆಗೆ ರಾಜ್ಯಭಾರ ಮಾಡು’ ಎಂಬುದಾಗಿ ಹಾರೈಸಿ ಲೋಕಪೂಜ್ಯನಾದ ರಾಮನಿಗೆ ಅಭಿಷೇಕವನ್ನು ಮಾಡಿ, ವಿವಿಧವಾದ ಸ್ತುತಿಗಳನ್ನು ಮಾಡ್ತಾರೆ. ದೇವತೆಗಳಿಗೆ, ಈಗಲೇ ಅವನು ದೊರೆ.

ಏತನ್ಮಧ್ಯೆ, ರಾಮನು ಈ ಅಭಿಷೇಕದ ಕಾರ್ಯಕ್ರಮದ‌ ಕೆಲಹೊತ್ತಿನ ಬಳಿಕ ಪ್ರಕೃತಿಯನ್ನು ಗಮನಿಸ್ತಾನೆ, ನಿಮಿತ್ತಗಳು ಗೋಚರಿಸ್ತಾ ಇದ್ದಾವೆ. ರಾಮ ನಿಮಿತ್ತಜ್ಞ. ಪ್ರಕೃತಿ ನಮಗೆ ಮುಂದಾಗುವುದನ್ನು ಸೂಚಿಸ್ತದೆ. ಸೌಮಿತ್ರಿಯನ್ನು ತಬ್ಬಿ ರಾಮನು ಹೇಳಿದನಂತೆ, ‘ನಾವು ನಮ್ಮ ಸೇನಾ ಪ್ರವಾಹವನ್ನು ಸರಿಯಾಗಿ ವಿಭಾಗ ಮಾಡಿ ವ್ಯೂಹ ರಚನೆ ಮಾಡಿ ಸ್ಥಿರವಾಗಿ ನಿಲ್ಲೋಣ ಲಕ್ಷ್ಮಣ. ಸುವೇಲ ಪರ್ವತದ ಶೀತಜಲ ಮತ್ತು ಮಧುರ ಫಲಗಳು ಉಳ್ಳಂತಹ ಕಾಡನ್ನಾಶ್ರಯಿಸಿ, ಸೇನೆಯನ್ನು ಸರಿಯಾಗಿ ವಿಭಾಗಿಸಿ ವ್ಯೂಹ ರಚಿಸಿ ನಾವು ಮುಂದುವರಿಯೋಣ. ಯಾಕಂದ್ರೆ, ಲೋಕವನ್ನೇ ವಿನಾಶಗೊಳಿಸುವ ಭಯಾನಕವಾದ ಸಂಗ್ರಾಮವು ನಮ್ಮ ಮುಂದೆ ಇದೆ. ಆ ಮಹಾಯುದ್ಧದಲ್ಲಿ ನಮ್ಮ ಕಡೆಯ ಕಪಿ-ಕರಡಿಗಳು, ಆ ಕಡೆಯ ರಾಕ್ಷಸರಲ್ಲಿ ಅನೇಕರು ಪ್ರಾಣಾರ್ಪಣೆಯನ್ನು ಮಾಡ್ತಾರೆ. ನೋಡು ಲಕ್ಷ್ಮಣ, ಗಾಳಿ ಬೀಸ್ತಾ ಇದೆ. ಎಂದಿನ ಹಾಗೆ ಅಲ್ಲ, ಧೂಳಿನಂತೆ ಗಾಳಿಯು ಬೀಸುವುದು ನೋಡು, ಮೆಲ್ಲನೆ ಭೂಮಿಯು ಕಂಪಿಸುವುದನ್ನು ನೋಡು, ಪರ್ವತಾಗ್ರಗಳು‌ ನಡುಗುವುದನ್ನು ನೋಡು. ಮರಗಳು ದೊಪದೊಪನೆ ಬೀಳುವುದನ್ನು ನೋಡು! ಇನ್ನು, ಮೋಡಗಳು‌ ರಕ್ತಮಿಶ್ರಿತವಾದ ನೀರಿನ ಮಳೆಗರೀತಾ ಇದ್ದಾವೆ. ಕೆಂಪಾದ ಸಂಧ್ಯಾಕಾಲ ಪರಮಧಾರುಣವಾಗಿದೆ. ಅದೋ ಅದೋ, ಆಕಾಶದಿಂದ ಅಗ್ನಿಪಿಂಡವೊಂದು‌ ಭೂಮಿಗೆ ಬೀಳ್ತಾ ಇದೆ. ಕ್ರೂರ ಮೃಗ ಪಕ್ಷಿಗಳು ಸೂರ್ಯನತ್ತ ಮುಖಮಾಡ್ತಾ ದೀನವಾಗಿ ಕೂಗ್ತಾ ಇದ್ದಾವೆ, ಮಹಾಭಯವನ್ನು ಅವು ಸೂಚಿಸ್ತಾ ಇವೆ. ಚಂದ್ರಕಿರಣಗಳು ಬಿಸಿಯನ್ನು ಉಂಟುಮಾಡ್ತಾ ಇದ್ದಾವೆ ಮತ್ತು ಚಂದ್ರಮಂಡಲದ ಸುತ್ತ ಒಂದು ಕಪ್ಪು ಮಂಡಲ, ಇನ್ನೊಂದು ಕೆಂಪು ಮಂಡಲ ಸೇರಿದೆ. ಚಂದ್ರನು ತ್ರಿಮಂಡಲವಾದರೆ ರಾಜನ ಅವಸಾನ! ಯಾರು ಈಗ ರಾಜನು? ಅವನು ಸಾಯ್ತಾನೆ.

ಸೂರ್ಯನ ಮಂಡಲ ಚಿಕ್ಕದಾಗಿದೆ, ಕೆಂಪು ಬಣ್ಣದಿಂದ ಕೂಡಿದೆ, ಅಮಂಗಲಕರವಾಗಿ ಅನಿಷ್ಟಕರವಾಗಿದೆ. ಆ ಒಂದು ಪರಿವೇಶ ಒಳ್ಳೆಯ ಲಕ್ಷಣವಲ್ಲ. ಮತ್ತು, ಸೂರ್ಯನ ಮಧ್ಯದಲ್ಲಿ‌ ಏನೋ ಒಂದು ಕಪ್ಪು ಚಿಹ್ನೆ. ಈ ಸೂರ್ಯಚಂದ್ರದ ಮುಂದೆ ವರ್ತುಲಾಕಾರಗಳು ಕಾಣಿಸಿಕೊಂಡರೆ ಶುಭ-ಅಶುಭಗಳ‌ ಪ್ರತೀಕವಾಗ್ತದೆ ಅದು. ದಿನದ ಮೊದಲ ಯಾಮದಲ್ಲಿ ಸೂರ್ಯನ ಸುತ್ತ ಪರಿವೇಶ ಕಂಡರೆ ‘ಪೀಡೆ’ ಅಂತ ಅರ್ಥ. ಎರಡನೇ ಯಾಮದಲ್ಲಿ ಕಂಡರೆ ‘ಮಳೆ’ ಅಂತರ್ಥ. ಮೂರನೇ ಯಾಮದಲ್ಲಿ ಕಂಡರೆ ‘ಕ್ಷೇಮ’ ಅಂತ ಅರ್ಥ. ನಾಲ್ಕನೇ ಯಾಮದಲ್ಲಿ ಸೂರ್ಯನ ಸುತ್ತ ಪರಿವೇಶ ಕಂಡರೆ, ಭಯಂಕರವಾದ ಹತ್ಯಾಕಾಂಡ ನಡೀತದೆ. ಲಕ್ಷಾಂತರ ಕೋಟ್ಯಂತರ ಜೀವಗಳು ಸಾಯುವಾಗ ಹೀಗೆ ನಾಲ್ಕನೇ ಯಾಮದಲ್ಲಿ ಸೂರ್ಯನಿಗೆ ಪರಿವೇಶವು ಕಾಣಿಸಿಕೊಳ್ಳುತ್ತದೆ. ಅಷ್ಟೊತ್ತಿಗೆ ಅಲ್ಲಿ ಸಂಜೆಯಾಗಿತ್ತು. ಜೀವ ನಾಶದ ಸೂಚನೆಯನ್ನು ಅರಿತನು ರಾಮ. ರಾಮನು ಮಾತನಾಡುತ್ತಿರುವುದು ಸಂಜೆ ಹೊತ್ತಾದ್ದರಿಂದ ಭಯಂಕರ ನಾಶ ಜೀವಹಾನಿಯ ಫಲವನ್ನು ಹೇಳುತ್ತಿದ್ದಾನೆ. ನಕ್ಷತ್ರಗಳು ಸರಿಯಾಗಿ ಗೋಚರಿಸುತ್ತಿಲ್ಲ. ಯುಗಾಂತ ಪ್ರಳಯವೋ ಎನ್ನುವಂತೆ ಸೂಚನೆ ಕೊಡುತ್ತಿದೆ. ಕಾಗೆಗಳು, ಗಿಡುಗಗಳು, ಹದ್ದುಗಳು ತುಂಬ ಕೆಳಸ್ತರದಲ್ಲಿ ಬಂದು ಹಾರಾಡುತ್ತಿದ್ದಾವೆ. ಪ್ರಾಣಿ-ಪಕ್ಷಿಗಳಿಗೆ ಎಲ್ಲವೂ ಮೊದಲೇ ಗೊತ್ತಾಗುತ್ತದೆ. ಭೂಕಂಪ ಆಗುವುದಿದ್ದರೂ ಅವಕ್ಕೆ ಮೊದಲೇ ಗೊತ್ತಾಗುತ್ತದೆ. ಮಹಾಭಯವನ್ನು ಸೂಚನೆಕೊಡ್ತಾ ಇದ್ದಾವೆ. ಕಪಿ ಸೈನಿಕರ ಸಾವು ಭೂಮಿಯನ್ನು ಮುಚ್ಚುತ್ತವೆ ಎಂದು ಹೇಳಿ ರಾಮ, ಲಂಕೆಗೆ ಅಭಿಮುಖವಾಗಿ ತಾನೇ ಮುಂದೆ ಹೋದನು. ಹಿಂದೆ ಕಪಿಸೈನ್ಯ ಬರ್ತಾ ಇದೆ. ಜೊತೆಯಲ್ಲಿ ವಿಭೀಷಣ, ಸುಗ್ರೀವ, ಹಾಗೂ ಇತರ ವಾನರ ನಾಯಕರು. ರಾಕ್ಷಸ ಸರ್ವನಾಶದಲ್ಲಿ ಬದ್ಧನಿಷ್ಠರಾಗಿ, ಘರ್ಜಿಸುತ್ತಾ ಬರುತ್ತಿದ್ದಾರೆ. ರಾಮನು ಸೇನೆಯನ್ನು ಗಮನಿಸುತ್ತಾನೆ. ರಾಮನಿಗೆ ಹಿತವಾಗಬೇಕು, ರಾಮಕಾರ್ಯ ಸಾಧನೆಯಾಗಬೇಕು ಎಂದು ಬರುತ್ತಿರುವ ಕಪಿವೀರರ ಚೇಷ್ಟೆಗಳು ರಾಮನಿಗೆ ಸಂತೋಷವನ್ನು ತಂದವು.

ಬಹಿರಂಗವು ಅಂತರಂಗಕ್ಕೆ ಹಿಡಿದ ಕನ್ನಡಿ. ಆ ಕಪಿಗಳ ಹಾವಭಾವಗಳ, ಚಲನವಲನಗಳು ರಾಮ ಭಕ್ತಿಯನ್ನು ಹೇಳುತ್ತಾ ಇದ್ದವು. ರಾಮನಿಗಾಗಿ ಪ್ರಾಣ ಕೊಡಲು ಸಿದ್ಧರಿದ್ದಾರೆ ಎನ್ನುವುದನ್ನು ಅವರ ಹಾವಭಾವಗಳು ಸೂಚಿಸುತ್ತಿದ್ದವು. ಯುದ್ಧಹರ್ಷ ಶುಭಸೂಚಕ. ಶೋಭಿಸಿತು ಸೇನೆ. ಸೇನೆಗೆ ಸೇನೆ ಮುನ್ನಡೆದು ಸಾಗುವಾಗ ಭೂಮಿ ಕಂಪಿಸಿತು. ಬೆದರಿ ನಡುಗಿದಳು ಭೂಮಿತಾಯಿ. ಲಂಕೆಗೆ ಸಮೀಪಿಸುತ್ತಿರುವಂತೆ ಭಾರಿ ಶಬ್ದಗಳು ಕೇಳಿತಂತೆ ಕಪಿಗಳಿಗೆ. ಲಂಕೆಯಲ್ಲಿ ಮೃದಂಗ ಭೇರಿಗಳ ಘೋಷ. ಯುದ್ಧಕ್ಕೋಸ್ಕರವಾಗಿ ರಣವಾದ್ಯಗಳ ಘೋಷ ಆಗ್ತಾ ಇದೆ ಲಂಕೆಯಲ್ಲಿ. ಆಗ ವಾನರರಿಗೆ ಬಹಳ ಖುಷಿಯಾಯಿತಂತೆ. ಭೇರಿ ವಾದ್ಯಗಳ ಶಬ್ದ ಕೇಳದಂತೆ ಜೋರಾಗಿ ಕೂಗಿಕೊಂಡರು ಕಪಿಗಳು. ಬೊಬ್ಬೆ ಹಾಕಿದರು. ಪ್ರತಿಯಾಗಿ ವಾನರರ ಘರ್ಜನೆ ಲಂಕೆಯಲ್ಲಿ ಪ್ರತಿಧ್ವನಿಸಿತಂತೆ. ಕೇಳಿ ರಾಕ್ಷಸರು ತಣ್ಣಗಾದರಂತೆ. ರಾವಣನ ಕರ್ಮಕ್ಕಾಗಿ ಈ ಯುದ್ಧ.

ರಾಮನು ಲಂಕೆಯೆಡೆಗೆ ದೃಷ್ಟಿಯನ್ನು ಬೀರಿದನು. ವೈಭವವಾಗಿ ಕಾಣ್ತಾ ಇದೆ. ಆದರೆ ರಾಮನಿಗೆ ಆ ವೈಭವ ಕಾಣಲಿಲ್ಲ. ಅದರೊಳಗೆ ಸೀತೆ ಶೋಕಿಸುತ್ತಿರುವ ಚಿತ್ರಣ ಕಂಡುಬಂತು ರಾಮನಿಗೆ. ಭಾರವಾದ ಮನಸ್ಸಿನಿಂದ ಸೀತೆಯನ್ನು ನೆನೆದನು. ಈ ಲಂಕೆಯಲ್ಲಿ ರಾವಣನು ಸೀತೆಯನ್ನು ಬಂಧಿಸಿ ಇಟ್ಟಿದ್ದಾನೆ. ಲಂಕೆಯ ಸೌಂದರ್ಯದಲ್ಲಿ ರಾಮನಿಗೆ ಕಂಡಿದ್ದು ಸೀತೆಯ ನೋವು. ಸೀತೆಯ ಬಗೆಗಿನ ಭಾವ, ಪ್ರೀತಿ ಎಲ್ಲ ಇಲ್ಲಿ ಸ್ಪಷ್ಟ. ಸೀತೆಯ ನೆನಪಲ್ಲಿ ದೀರ್ಘವಾಗಿ ನಿಟ್ಟುಸಿರಿಟ್ಟು ರಾಮನು ಲಕ್ಷ್ಮಣನಿಗೆ ಹೇಳಿದನು, ನೋಡು ಲಕ್ಷ್ಮಣ, ತನ್ನ ಉನ್ನತಗಳು, ಶಿಖರಗಳಿಂದ ಆಕಾಶದಲ್ಲಿ ಗೆರೆ ಎಳೆಯುವಂತಿದೆ ಲಂಕೆ. ವಿಶ್ವಕರ್ಮ ಸಂಕಲ್ಪದಿಂದ ನಿರ್ಮಿಸಿರಬೇಕು. ಗಗನವನ್ನು ಬೆಳ್ಳಿ ಮೋಡಗಳು ಆವರಿಸುವಂತೆ ಮನೆಗಳು. ಕುಬೇರನ ಚೈತ್ರವನವನ್ನು ನೆನಪಿಸುವಂತಹ ಉದ್ಯಾನಗಳು, ಎಲ್ಲ ಹೂಬಿಟ್ಟಿವೆ. ಪಕ್ಷಿಗಳ ನಾದ, ಫಲಗಳು ಇವೆಲ್ಲ ನೋಡು ಲಕ್ಷ್ಮಣ. ಮಕರಂದವನ್ನು ಆಸ್ವಾದಿಸುವ ಚಿಟ್ಟೆಗಳು, ಮಂಗಲವಾದ ಗಾಳಿ, ಕೋಗಿಲೆಗಳ ನಾದ ಎಲ್ಲವೂ ಇದೆ ಎಂದು ಲಂಕೆಯ ಸೌಂದರ್ಯದ ಬಗ್ಗೆ ಹೇಳಿ, ವ್ಯೂಹರಚನೆಯ ಕಾರ್ಯಕ್ಕೆ ತೊಡಗುತ್ತಾನೆ ರಾಮ. ಅಂಗದ, ನೀಲರು ಸೇನೆಯ ವಕ್ಷಸ್ಥಲದಲ್ಲಿರಬೇಕು. ತನ್ನ ಸೇನೆಯನ್ನೂ ಕೂಡಿಕೊಂಡು, ವಾನರವಾಹಿನಿಯ ದಕ್ಷಿಣ ಭಾಗವನ್ನು ವೃಷಭನೆಂಬ ವಾನರ ಶ್ರೇಷ್ಠನು ರಕ್ಷಿಸಬೇಕು. ಗಂಧಮಾದನನು ವಾನರವಾಹಿನಿಯ ಎಡಭಾಗವನ್ನು ರಕ್ಷಿಸಲಿ. ನಾನು ಸೇನೆಯ ನೆತ್ತಿಯಲ್ಲಿರುತ್ತೇನೆ, ಅಂದರೆ, ಮುಂಚೂಣಿಯಲ್ಲಿ ಎಲ್ಲರಿಗಿಂತ ಮುಂದೆ ನಾನಿರ್ತೇನೆ ಮತ್ತು ನನ್ನ ಜೊತೆಗೆ ಲಕ್ಷ್ಮಣ. ಜಾಂಬವಂತ, ಸುಷೇಣ ಮತ್ತು ವೇಗದರ್ಶಿ ಈ ಮೂವರು ಸೇನೆಯ ಹೊಟ್ಟೆಯನ್ನು ರಕ್ಷಿಸಲಿ. ಇನ್ನೂ ಸೇನೆಯ ಹಿಂಭಾಗದಲ್ಲಿ ಕಪಿರಾಜ ಸುಗ್ರೀವನಿರಲಿ ಎಂದು ರಾಮನು ಅಪ್ಪಣೆ ಮಾಡಿದಾಗ, ಅಂತೆಯೇ ಎಂದು ಎಲ್ಲರೂ ಅನುಸರಿಸುತ್ತಾರೆ. ಹೀಗೆ ಮಹಾವಾನರರಿಂದ ಮಹಾವ್ಯೂಹದಿಂದೊಡಗೂಡಿದ ಸೇನೆಯು ಅದ್ಭುತವಾಗಿ ಶೋಭಿಸಿತು. ಸೇನೆಯ ವ್ಯವಸ್ಥೆ ವ್ಯೂಹರಚನೆಯಾಗಿದೆ. ಲಂಕೆಯನ್ನು ನೋಡಿ ಕಪಿಗಳಂದುಕೊಂಡರಂತೆ, ಬೆಟ್ಟಗಳಿಂದ ಅಥವಾ ಮುಷ್ಟಿಗಳಿಂದ ಲಂಕೆಯನ್ನು ಪುಡಿಮಾಡೋಣ ಎಂಬ ನಿಶ್ಚಯಮಾಡಿದರು ಕಪಿಗಳು. ಲಂಕೆಯನ್ನು ಮರ್ದಿಸುವ ಮನಸ್ಸು ಕಪಿಗಳದ್ದು. ಅನೇಕ ಕಪಿಗಳ ಕೈಯಲ್ಲಿ ಪರ್ವತಗಳು, ವೃಕ್ಷಗಳೂ ಇದ್ದವು.

ಆಗ ರಾಮನು ಸುಗ್ರೀವನಿಗೆ ಹೇಳಿದನು, ಸೇನೆಯ ವ್ಯವಸ್ಥೆಯಾಗಿದೆ. ಇನ್ನು ಶುಕನನ್ನು ಬಿಡು. ಮನಸ್ಸಿಲ್ಲದಿದ್ದರೂ, ರಾಮನಾಜ್ಞೆಯ ಪ್ರಕಾರ ಬಿಟ್ಟನಂತೆ ಸುಗ್ರೀವ. ಅದು ಹೋಗುತ್ತಿರುವಾಗ ಮತ್ತೆ ಬಡಿದರಂತೆ ಮೂರ್ನಾಲ್ಕು ಕಪಿಗಳು. ಹೇಗೋ ಬಚಾವಾಗಿ, ಭಯವೇ ತಾನಾಗಿ ಓಡ್ತಾ ರಾವಣನನ್ನು ಸೇರ್ತಾನೆ ಶುಕ. ಅವನನ್ನು ನೋಡಿ ರಾವಣನಿಗೆ ನಗುವೇ ಬಂತಂತೆ, “ಹೋಗುವಾಗ ಸರಿ ಹೋಗಿ, ಬರುವಾಗ ಹೀಗೆ ಬಂದಿರುವೆಯಲ್ಲ! ಏನೋ ನಿನ್ನ ರೆಕ್ಕೆ ಕಟ್ಟಿದ್ರಾ ಅವರು? ನಿನ್ನ ರೆಕ್ಕೆಗಳೆಲ್ಲ ಹರಿದು ಹೋಗಿದೆಯಲ್ಲ! ಆ ಕಪಿಗಳ ಚಪಲಚಿತ್ತರ ಕೈವಶ ಆಗಿ ಹೋದೆಯಾ?” ಶುಕನ ಮೈತುಂಬಾ ಕಪಿಗಳ ಚಿಹ್ನೆ ಕಾಣ್ತಾ ಇದೆ. ಹಗ್ಗ ಕಟ್ಟಿದ ಗುರುತು, ಹರುಕು ಮುರುಕು ರೆಕ್ಕೆ. ಶುಕನಿಗೆ ಪ್ರಾಣ ಸಂಕಟ, ರಾವಣನಿಗೆ ಅಟ್ಟಹಾಸ. ಶುಕನಿಗೆ ಮಾತನಾಡಬೇಕು ಅಂತ ಆದ್ರೆ ಭಯವೋ ಭಯ. ರಾವಣನ ಭಯ ಅಲ್ಲ. ಮೆಲ್ಲನೆ ರಾವಣನಿಗೆ ವರದಿ ಒಪ್ಪಿಸಿದ, “ಅಲ್ಲಿವರೆಗೆ ತಲುಪಿ ನಿನ್ನ ಸಂದೇಶವನ್ನು ಹೇಳಲಿಕ್ಕೆ ಶುರುಮಾಡಿದೆ, ಅಷ್ಟೋತ್ತಿಗೆ, ಕಪಿಗಳು ಆಕಾಶಕ್ಕೆ ನೆಗೆದು ನನ್ನನ್ನು ಹಿಡಿದುಕೊಂಡ್ರು. ಹಿಡಿದು, ರೆಕ್ಕೆ ಪುಕ್ಕ ಕೀಳಿದ್ರು, ಮುಷ್ಟಿಯಿಂದ ಹೊಡೆದ್ರು, ಬಡಿದ್ರು ನನ್ನನ್ನು. ದೊರೆಯೇ, ಅಲ್ಲಿ ಮಾತುಕತೆಗೆಲ್ಲ ಅವಕಾಶ ಇಲ್ಲ. ರಾಮ ಇದ್ದ ಕಾರಣ ನಾನು ಬದುಕಿ ಬಂದೆ ಇಲ್ಲದಿದ್ದರೇ ನನ್ನ ಶ್ರಾದ್ಧವೇ ಆಗ್ತಿತ್ತು. ಸಂಭಾಷಣೆ ಆಮೇಲೆ, ಕೇಳುದಕ್ಕೂ ಅವಕಾಶ ಇಲ್ಲ. ಅಂತಹ ಪರಿಸ್ಥಿತಿ. ಅವರನ್ನು ನೋಡಿದರೇ ಅವರ ಸ್ವಭಾವವೇ ಹಾಗೆ ಅನ್ನಿಸುತ್ತಾ ಇದೆ. ಅವರು ಹುಟ್ಟಾ ಕೋಪಿಷ್ಠರು ಅಂತ ಅನ್ನಿಸಿದೆ.” ಎಂದು ತನ್ನ ಸ್ವಾನುಭಾವದ ಕಥೆಯನ್ನು ಹೇಳಿದ. ಆಮೇಲೆ ಮಾತನ್ನು ಮುಂದುವರಿಸಿ ಹೇಳ್ತಾನೆ,”ಆ ಸುಗ್ರೀವನು ಸೀತೆಯನ್ನು ಹುಡುಕಿಕೊಂಡು ಸೇತುವೆಯನ್ನು ದಾಟಿ, ಸಮುದ್ರವನ್ನು ದಾಟಿ, ಲಂಕೆಯ ಬಳಿಗೆ ಬಂದುಬಿಟ್ಟಿದ್ದಾನೆ. ರಾಕ್ಷಸರನ್ನು ನಗಣ್ಯ ಎಂಬುದನ್ನು ಭಾವಿಸಿ, ತನ್ನ ಧನಸ್ಸನ್ನು ಎತ್ತಿ ನಿಂತಿದ್ದಾನೆ. ಇನ್ನು ಕಪಿ ಕರಡಿಗಳ ನಾಯಕರುಗಳೇ ಭಾರಿ ಸಂಖ್ಯೆಯಲ್ಲಿದ್ದಾರೆ. ವಾನರರ ಲೆಕ್ಕವನ್ನಂತೂ ಬಿಟ್ಟು ಬಿಡು. ಅವರ ಸಂಖ್ಯೆ ಸುತ್ತ ಮುತ್ತ ಭೂಮಿಯನ್ನೇ ಮುಚ್ಚುತ್ತಾ ಇದೆ. ಎಲ್ಲ ಬೆಟ್ಟದ ಗಾತ್ರದವರು. ನಮ್ಮ ರಾಕ್ಷಸ ಸೈನ್ಯ ಮತ್ತು ಕಪಿಸೈನ್ಯ ಒಟ್ಟಾದರೇ ಈ ಭೂಮಂಡಲದಲ್ಲಿ ಅಳತೆ ಮಾಡಲಿಕ್ಕೆ ಸಾಧ್ಯ ಇಲ್ಲದಂತಾಗಬಹುದು.”

ಕೊನೆಗೆ ಹೇಳಿದ,” ಮೊದಲನೆಯದಾಗಿ ಸೀತೆಯನ್ನು ಕೊಟ್ಟು ಬಿಡು, ಇಲ್ಲ ಅಂದ್ರೆ ಯುದ್ಧ ಆದರೂ ಮಾಡು. ಕೋಟೆಯ ಹತ್ತಿರ ಬರುವುದರೊಳಗೆ ಏನಾದರು ಮಾಡು.” ರಾವಣದ್ದೇ ಖಾಸಾ ಗುಪ್ತಚರ ಈ ಮಾತನ್ನು ಹೇಳ್ತಾ ಇದ್ದಾನೆ. ವಿಭೀಷಣನ ಮಾತಿಗೆ ಇನ್ನೊಂದು ಅನುಮೋದನೆ ಬಂದು ಬಿಡ್ತು. ಆಗ ರಾವಣನ ಕಣ್ಣು ಕೆಂಪಾಗಿ ಅವನನ್ನು ಸುಟ್ಟು ಬಿಡುವಂತೆ ನೋಡಿದ ರಾವಣ. ಹೇಳಿದ, “ದೇವ ಗಂಧರ್ವ ಇಡೀ ಲೋಕವೇ ಎಲ್ಲ ಸೇರಿ ನನ್ನ ಮೇಲೆ ಯುದ್ಧ ಮಾಡಿದರೂ ಸೀತೆಯನ್ನು ಕೊಡುವುದಿಲ್ಲ. ಹೂಬಿಟ್ಟ ವೃಕ್ಷವನ್ನು ದುಂಬಿಗಳು ಹೋಗಿ ಸೇರುವ ಹಾಗೆ ನನ್ನ ಬಾಣಗಳು ರಾಮನ ಕಡೆಗೆ ಎಂದು ಧಾವಿಸುತ್ತದೆ ಎಂದು ಕಾಯ್ತಾ ಇದ್ದೇನೆ. ಊರಿಗೆ ಬಂದ ಆನೆಯನ್ನು ಬೆಂಕಿ ಕೊಳ್ಳಿಗಳನ್ನು ಹಿಡಿದು ಹೆದರಿಸಿ ಕಾಡಿಗೆ ಓಡಿಸುವ ಹಾಗೆ, ನಾನು ರಾಮನಿಗೆ ಈ ಬಾಣಗಳನ್ನು ಹಿಡಿದು ಆಕಡೆ ಈಕಡೆ ಓಡಿಸುವಂತಹ ಆಸೆ. ಅವನ ಬಲ, ರಾಮನ ಸೈನ್ಯ ಎಲ್ಲ ಸೇನೆಯನ್ನು ಸ್ವೀಕಾರ ಮಾಡ್ತೇನೆ ಹೇಗೆಂದ್ರೆ ಉದಯಿಸುವ ಸೂರ್ಯ ನಕ್ಷತ್ರಗಳ ಪ್ರಭೆಯನ್ನು ಮಾಸುವಂತೆ. ನಾನು ರಣರಂಗದಲ್ಲಿ ಉದಯಿಸುತ್ತಿದ್ದಂತೆ, ವಾನರರು ಅಸ್ತರಾಗುತ್ತಾರೆ. ಗೊತ್ತಿಲ್ಲ ರಾಮನಿಗೆ ನನ್ನ ಬಗ್ಗೆ, ಹಾಗಾಗಿ ಯುದ್ಧಕ್ಕೆ ಬಂದಿದ್ದಾನೆ ರಾಮನು. ಹಿಂದೊಂದು ಸರ್ತಿ ಯುದ್ಧ ಮಾಡಿದಿದ್ರೆ ನನ್ನ ತಂಟೆಗೆ ಅವನು ಬರ್ತಿರಲಿಲ್ಲ. ಸೀತೆಯನ್ನು ರಾಮನ ಎದುರಿಗೇ ಅಪಹರಿಸಲು ಪ್ರಯತ್ನ ಪಟ್ಟಿದ್ದರೇ ಆ ಅನುಭವ ಆಗ್ತಿತ್ತು.” ಅಂತ ಹೇಳಿ ಒಂದು ಕವಿತಾ ವಾಚನ ಮಾಡ್ತಾನೆ ಸಂಗೀತದಲ್ಲಿ, ಸಾರಂಶ, ಅವನ ಧನುಸ್ಸೇ ಸುಂದರವಾದ ವೀಣೆಯಂತೆ. ರಾವಣನ ಬಾಣಗಳು ಕೋಣಗಳಂತೆ. ಕೋಣ ಅಂದ್ರೆ ವೀಣೆ ನುಡಿಸುವಾಗ ಬೆರಳಿಗೆ ಹಾಕುವ ಸಾಧನೆ. ಅದು ಅವನ ಬಾಣದ ತುದಿ. ಹೆದೆಯ ಶಬ್ದ ಅದೇ ಅವನ ಸ್ವರ. ಆರ್ತನಾದವೇ ತಾರಕ ಸ್ವರದ ಗಾಯನ. ಇನ್ನು, ಬಾಣ ಬಿಲ್ಲಿನಿಂದ ಹೊರಡುವಾಗಿನ ಶಬ್ದ, ಠಂಕಾರವೇ, ಕೈತಾಳ. ರಣರಂಗವನ್ನು ಪ್ರವೇಶ ಮಾಡಿ ಘೋರವಾದ ವೀಣೆಯನ್ನು ನುಡಿಸಿದರೇ ಅದೇ ಯುದ್ಧ. ಸಾವಿರ ಕಣ್ಣಿನ ಇಂದ್ರ ಬರಲಿ, ಜಲದೇವತೆ ವರುಣ ಬರಲಿ, ವೈಶ್ರವಣ ನನ್ನ ಅಣ್ಣ ಬರಲಿ, ಯಾರಿಗೂ ನಾನು ಬಗ್ಗುವವನಲ್ಲಿ ಅಂತ ಬಡಾಯಿ ಕೊಚ್ಚಿಕೊಂಡ.

ಸ್ವಲ್ಪ ಹೊತ್ತಿನಲ್ಲಿ ಪುನಃ ವಿಚಾರ ಮಾಡಿ ಕೇಳಿದನಂತೆ ಶುಕ ಮತ್ತು ಸಾರಣರಿಗೆ, ಇಬ್ಬರ ಜೋಡಿ. ಅವರಿಬ್ಬರಿಗೂ ಹೇಳಿದನಂತೆ, “ಈಗಾಗಲೇ ಸೈನ್ಯ ಸಮುದ್ರ ದಾಟಿ ಬಂದಿದೆ. ರಾಮನಿಂದ ಸಮುದ್ರಕ್ಕೆ ಸೇತು ಬಂಧವಾಗಿದೆಯಲ್ಲ! ಅದ್ಬುತ ಅದು.” ರಾವಣನಿಗೆ ಗೊತ್ತು ಮೊದಲೂ ಯಾರೂ ಹೀಗೆ ಮಾಡಿರಲಿಲ್ಲ ಮತ್ತು ಮುಂದೂ ಮಾಡುವವರಿಲ್ಲ ಎಂದು. ಹೀಗೆ ಹೇಳಿ ಪುನಃ ಹೇಳಿದನಂತೆ,”ಹೌದಾ ಸೇತು ಬಂಧವಾದದ್ದು, ನನಗೇನೋ ನಂಬಿಕೆ ಇಲ್ಲ. ಹೇಗೆ ಸಾಧ್ಯ ಅದು? ಮುಳುಗಿ ಹೋಗಲಿಲ್ಲವಾ? ಕೆಳಗಿನಿಂದ ಕಟ್ಟಿಕೊಂಡು ಬಂದ್ರಾ? ಹಾಗಾದರೆ ನನಗೆ ಈ ವಾನರ ಸೈನ್ಯ ಎಷ್ಟಿದೆ ಎಂದು ಒಂದು ಲೆಕ್ಕ ಬೇಕಾಗಿದೆ. ಹಾಗಾಗಿ ನೀವಿಬ್ಬರೂ ಮತ್ತೆ ಹೋಗಿ ತಿಳಿದು ಬನ್ನಿ. ವಾನರ ರೂಪವನ್ನು ತಾಳಿ, ಯಾರಿಗೂ ಗೊತ್ತಾಗದಂತೆ ಸೈನ್ಯವನ್ನು ಪ್ರವೇಶ ಮಾಡಿಬಿಡಿ. ಒಟ್ಟು ಎಷ್ಟು ಸಂಖ್ಯೆಯಲ್ಲಿ ಇದೆ ಸೈನ್ಯ ಮತ್ತು ಅದರ ಸಾಮರ್ಥ್ಯ ಏನು? ಯಾರ್ಯಾರು ಮುಖ್ಯ ವಾನರರು, ರಾಮನಿಗೂ ಸುಗ್ರೀವನಿಗೂ ಹತ್ತಿರದ ಮಂತ್ರಿಗಳು ಯಾರು? ರಾಮನು ಯಾರನ್ನು ಹತ್ತಿರ ಇಟ್ಟುಕೊಂಡಿದ್ದಾನೆ? ಸುಗ್ರೀವನು ಯಾರನ್ನು ಹತ್ತಿರ ಇಟ್ಟುಕೊಂಡಿದ್ದಾನೆ? ಮೊದಲು ಯುದ್ಧಕ್ಕೆ ಬರುವವರು ಯಾರು? ಯಾರು ಶೂರರು ಆ ಪೈಕಿಯಲ್ಲಿ. ಮತ್ತು ಆ ಸೇತುವೆಯನ್ನು ಹೇಗೆ ಕಟ್ಟಿದರು? ರಾಮನ ಆಯುಧ ಯಾವುದು? ಅವನ ಸಾಮರ್ಥ್ಯವೇನು? ಏನು ಕಾರ್ಯಶೈಲಿ? ಲಕ್ಷ್ಮಣನ ಸಾಮರ್ಥ್ಯ? ಇವರ ಸೇನಾಪತಿ ಯಾರು? ಎಂದೆಲ್ಲ ತಿಳಿದುಕೊಂಡು ಬೇಗ ಬನ್ನಿ.” ಎಂದು ಹೇಳಿದ. ಇದರಿಂದ ಅವನ ಮನಸ್ಸಿನ ವಿಪ್ಲವ ತೋರಿಸುತ್ತದೆ. ಭಯವೇ ಕುತೂಹಲದ ಮೂಲ. ಪಾಪ ಶುಕ ಸಾರಣರು ಕಪಿ ಸೈನದ ಕಡೆಗೆ ಕಪಿಯರಲ್ಲಿ ಒಂದಾಗಿ ಕಪಿಯರಾಗಿ ಹೊರಟರು. ಅಂತಹ ರೂಪ ತಾಳಿ ಸೇನೆಯನ್ನು ಪ್ರವೇಶ ಮಾಡಿದರು. ಅವರಿಗೆ ಈ ಸೈನ್ಯ ಅಚಿಂತ್ಯ ಅಂತ ಅನ್ನಿಸತೊಡಗಿತು. ಸೈನ್ಯದ ವಿಸ್ತಾರ, ಅಗಾಧತೆಯನ್ನು ನೋಡಿ ಶುಕ ಸಾರುಣರ ರೋಮಗಳು ನಿಂತವು. ಕಪಿಗಳ ಸಾಮರ್ಥ್ಯ ಮತ್ತು ಸೈನ್ಯವನ್ನು ನೋಡಿ ರಾಕ್ಷಸರಿಗೆ ರೋಮಾಂಚನವಾಯಿತು. ಲೆಕ್ಕ ಮಾಡಲು ಸಾಧ್ಯವಾಗಲಿಲ್ಲ. ಕೆಲವು ಸೇನೆ ಪರ್ವತದ ತುದಿಯಲ್ಲಿತ್ತು, ಕೆಲವು ಸೇನೆ ಗಿರಿ–ನದಿಗಳ ತೀರದಲ್ಲಿತ್ತು, ಕೆಲವು ಸೇನೆಯು ಗುಹೆಯೊಳಗೆ ಸೇರಿತ್ತು, ಕೆಲವು ಸೇನೆ ವನಗಳಲ್ಲಿ ಹಾಗೂ ಉದ್ಯಾನವನಗಳಲ್ಲಿತ್ತು, ಕೆಲವು ದಾಟಿ ಬರುತ್ತಿತ್ತು, ಇನ್ನು ಕೆಲವು ಸಮುದ್ರದ ಆಚೆಯೇ ಇತ್ತು. ಕೆಲವು ಸೇನೆಯು ಅಲ್ಲಿಯೇ ಬಿಡು ಬಿಟ್ಟಿತ್ತು. ಇದನ್ನೆಲ್ಲ ಗಮನಿಸಿದ ಶುಕ–ಸಾರುಣರಿಗೆ ಲೆಕ್ಕ ಮಾಡಲು ಸಾಧ್ಯವಾಗಲಿಲ್ಲ. ರಾಕ್ಷಸರೀರ್ವರಿಗೂ ಸೈನ್ಯವು ಸಾಗರದಂತೆ ಗೋಚರಿಸಿತು.

ವಿಭೀಷಣನು ಶುಕ–ಸಾರುಣರನ್ನು ನೋಡಿದನು. ಮಾಯೆಯನ್ನು ಪತ್ತೆ ಹಚ್ಚುವುದರಲ್ಲಿ, ಅದರಲ್ಲಿಯೂ ಇಂದ್ರಜಿತುವಿನ ಮಾಯೆಯನ್ನು ಪತ್ತೆ ಹಚ್ಚುವುದರಲ್ಲಿ ವಿಭೀಷಣನಿಗೆ ಅತ್ಯದ್ಭುತ ಕೌಶಲವಿತ್ತು. ಇಂದ್ರಜಿತುವಿನ ಮಾಯೆಯನ್ನು ವಿಭೀಷಣನು ತನ್ನ ಮಾಯೆಯಿಂದಲೇ ಕಂಡುಹಿಡಿದ ಎಂಬುದನ್ನು ವಾಲ್ಮೀಕಿ ರಾಮಾಯಣವು ವರ್ಣಿಸಿದೆ. ವಿಭೀಷಣನು ಹೋಗಿ ಇಬ್ಬರನ್ನು ಹಿಡಿದುಕೊಂಡನು. ವಿಭೀಷಣನಿಗೆ ಮಾಯೆಯನ್ನು ಬಯಲಿಗೆಳೆಯುವುದರಲ್ಲಿ ವಿಶೇಷವಾದ ಪರಿಣಿತಿ ಇತ್ತು. ವಿಭೀಷಣನು ಶುಕ–ಸಾರುಣರಿಬ್ಬರನ್ನು ಕಟ್ಟಿ ರಾಮನ ಮುಂದೆ ಎಳೆದು ತಂದನು. ಸೇನೆಯ ಪರಿಚಯವನ್ನು ರಾವಣನಿಗೆ ಕೊಡುವುದು ಶುಕ–ಸಾರುಣರ ಕೆಲಸವಾಗಿತ್ತು. ಆದರೆ ತದ್ವಿರುದ್ಧವಾಗಿ ಶುಕ–ಸಾರುಣರ ಪರಿಚಯವನ್ನು ವಿಭೀಷಣನು ರಾಮನಿಗೆ ನೀಡಿದನು. ಶುಕ–ಸಾರುಣ ಇವರೀರ್ವರು ಕೂಳ ರಾವಣನ ಮಂತ್ರಿಗಳು, ಗುಪ್ತಚರರು, ನಮ್ಮ ಸೇನೆಯ ಬಲವನ್ನು ಮತ್ತು ಪ್ರಮಾಣವನ್ನು ತಿಳಿದುಕೊಂಡು ಹೋಗಿ ಹೇಳಲು ಬಂದಿದ್ದಾರೆ, ಇವರು ಚಾರರು ಎಂದು ರಾಮನ ಮುಂದೆ ಹೇಳಿದನು. ಶುಕ–ಸಾರುಣರು ನಮ್ಮ ಆಯಸ್ಸು ಇಲ್ಲಿಗೆ ಮುಗಿಯಿತು ಎಂದು ನಿರಾಶರಾದರು. ರಾಮನು ಶುಕ–ಸಾರುಣರನ್ನು ಯಾರು ನೀವು..? ಎಂದು ಪ್ರಶ್ನಿಸಿದನು. ರಾಕ್ಷಸರೀರ್ವರು ತಲೆಬಾಗಿ ಕೈಮುಗಿದು, ಹೆದರಿ ಹೆದರಿ ಎಲ್ಲ ವಿಷಯವನ್ನು ರಾಮನ ಮುಂದೆ ಹೇಳಿದರು. ನಾವು ರಾವಣನು ಕಳುಹಿಸಿ ಬಂದವರು, ಸೇನೆಯನ್ನೆಲ್ಲ ತಿಳಿದುಕೊಳ್ಳಲು ಬಂದವರು ಎಂದು ಹೇಳಿದರು. ರಾಮನ ಮುಂದೆ ಸತ್ಯವನ್ನು ಹೇಳದಿರಲು ಸಾಧ್ಯವಿಲ್ಲ. ರಾಮನೆಂದರೇ ಸತ್ಯದ ಮೂರ್ತಿ.

ರಾಮನಿಗೆ ಶುಕ–ಸಾರುಣರು ಹೇಳಿದ್ದನ್ನು ಕೇಳಿ ನಗುವೆ ಬಂದಿತು. ರಾಮನು ಜೋರಾಗಿ ನಕ್ಕುಬಿಟ್ಟನು. ಆಗ ಎಲ್ಲ ಜೀವಗಳ ಹಿತವನ್ನು ಬಯಸುವ ಮನಸ್ಸು ರಾಮನದ್ದಾಗಿತ್ತು.

ರಾಕ್ಷಸರಿಗೂ ಹಿತವನ್ನು ಬಯಸುವ ಮನಸ್ಸಾಗಿತ್ತು. ಸಕಲ ಜೀವ ರಾಶಿಗಳ ಮೇಲೆ ಕರುಣೆಯನ್ನು ಚೆಲ್ಲುವ, ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ, ಕೆಟ್ಟವರಲ್ಲಿಯೂ ಒಳ್ಳೆಯದನ್ನು ಕಾಣುವ ಮನಸ್ಸು ರಾಮನದ್ದಾಗಿತ್ತು. ರಾಕ್ಷಸರೀರ್ವರು ಇದ್ದ ವಿಷಯವನ್ನು ಇದ್ದ ಹಾಗೆ ಹೇಳಿದ್ದಕ್ಕೆ ರಾಮನು ಕ್ಷಮಿಸಿದನು. ರಾಮನು ಶುಕ–ಸಾರುಣರನ್ನು ಮಾತನಾಡಿಸುತ್ತಾ ಎಲ್ಲ ನೋಡಿದ್ದಿರಾ? ಸಂಪೂರ್ಣ ಸೇನೆಯನ್ನು ನೋಡಿದ್ದಿರಾ? ನಮ್ಮನ್ನು ಸರಿಯಾಗಿ ಪರೀಕ್ಷೆ ಮಾಡಿದಿರಾ? ನಾವು ಏನು ? ನಾವು ಎಷ್ಟು ಎಂಬುದನ್ನೆಲ್ಲ ಸರಿಯಾಗಿ ನೋಡಿದ್ದಿರಾ ಎಂದು ರಾಮನು ಕೇಳಿದನು. ರಾವಣ ಹೇಳಿದ ಕೆಲಸ ಮುಗಿಯಿತಾ ? ರಾಜನ ಅಪ್ಪಣೆ ಪೂರ್ತಿ ಪಾಲನೆ ಆಯಿತಾ? ಬಂದ ಕೆಲಸ ಆದರೆ ನಿಷ್ಚಿಂತೆಯಿಂದ ಹೊರಟು ಹೋಗಿ, ಬಂದ ಕೆಲಸ ಆಗದಿದ್ದರೆ ಸಂಪೂರ್ಣ ಸೇನೆಯನ್ನು ನೋಡಿಕೊಂಡು ಹೋಗಿ ಎಂದು ಹೇಳಿದ ರಾಮನು ವಿಭೀಷಣನ ಬಳಿ ರಾಕ್ಷಸರೀರ್ವರಿಗೂ ತೋರಿಸಲು ಹೇಳಿದನು. ಆ ಸಮಯದಲ್ಲಿ ರಾಮನ ಧೈರ್ಯ ಮತ್ತು ಸ್ಥೈರ್ಯ ಅದ್ಭುತವಾಗಿತ್ತು. ಇತಿಹಾಸದಲ್ಲಿ, ವರ್ತಮಾನದಲ್ಲಿ, ಭವಿಷ್ಯದಲ್ಲಿ ರಾಮನಂತಹ ವ್ಯಕ್ತಿತ್ವ ಕಾಣಲು ಸಿಗುವುದಿಲ್ಲ. ರಾಮನು ಅಷ್ಟು ದೊಡ್ಡವನಾಗಿದ್ದರಿಂದ ಇದೆಲ್ಲ ಅವನಿಗೆ ಚಿಕ್ಕದಾಗಿ ಕಾಣಿಸಿತು. ರಾವಣ ರಾಮನ ಬಗ್ಗೆ ಎಷ್ಟೇ ತಿಳಿದುಕೊಂಡರೂ ರಾಮನಿಗೆ ತಾನು ಯುದ್ಧಕ್ಕೆ ನಿಂತರೆ ಏನು ಮಾಡಬಹುದು ಎಂದು ತಿಳಿದಿತ್ತು. ಏನು ಹೆದರಬೇಡಿ, ವಿಭೀಷಣನಿಂದ ಬಂದಿಸಲ್ಪಟ್ಟಿದ್ದಕ್ಕೆ ಹೆದರಬೇಡಿ, ನಮ್ಮಲ್ಲಿ ಶಸ್ತ್ರ ಇಲ್ಲದೆ ಇದ್ದವರನ್ನು ಕೊಲ್ಲುವುದಿಲ್ಲ ಎಂದು ರಾಮನು ಹೇಳಿದನು. ಕೈಯಲ್ಲಿ ಶಸ್ತ್ರ ಇಲ್ಲದೆ ಇದ್ದವರ ಮೇಲೆ ಶಸ್ತ್ರ ಪ್ರಯೋಗ ಮಾಡುವುದಿಲ್ಲ. ಯಾರು ಶರಣಾಗತರಾಗುವರೋ ಅಂಥವರನ್ನು ವಧಿಸಿವುದಿಲ್ಲ ಎಂದು ರಾಮನು ಹೇಳಿದನು. ರಾಜನೀತಿಯ ಪರಮೋಚ್ಛರ್ಯ ಆದರ್ಶ ರಾಮನ ಸೇನೆಯಲ್ಲಿತ್ತು. ಬಂಧನಕ್ಕೆ ಒಳಗಾದವರನ್ನು ವಧಿಸುವ ಪ್ರಶ್ನೆ ಇಲ್ಲ, ಯಾವುದೇ ಬಗೆಯ ದೂತರನ್ನು ಕೊಲ್ಲುವುದಿಲ್ಲ ಎಂದ ರಾಮನು ವಿಭೀಷನಿಗೆ ರಾಕ್ಷಸರೀರ್ವರನ್ನು ಬಿಡಲು ಹೇಳಿದನು. ಇವರೀರ್ವರು ಹೋಗಿ ಹೇಳಿದರೆ ನಮಗೆ ತೊಂದರೆ ಏನು ಇಲ್ಲ ಆದರೆ ರಾವಣನಿಗೆ ಭಯವೇ ಆಗಬಹುದು ಎಂದು ರಾಮನು ವಿಭೀಷಣನಿಗೆ ಹೇಳಿದನು.

ಕೊನೆಗೂ ರಾಮ ಹೇಳಿದ ಹಾಗೆ ಗುಪ್ತಚರರ ಮಾತು ರಾವಣನಿಗೆ ಭಯಕ್ಕೆ ಕಾರಣವಾಗುತ್ತದೆ. ರಾಮನದ್ದು ಔದಾರ್ಯದ ಪರಮಾವಧಿಯಾಗಿತ್ತು. ಮತ್ತೆ ಔದಾರ್ಯ ಏನು ಇರಲಿಲ್ಲ. ರಾಕ್ಷಸರ ಮನಸ್ಸಲ್ಲಿ ಅಥವಾ ಆ ಮಾತನ್ನು ಕೇಳಿದವರ ಮನಸ್ಸಲ್ಲಿ ರಾಮನ ಬಗ್ಗೆ ಅತೀ ಭವ್ಯ ಚಿತ್ರ ಬರದಿರಲು ಸಾಧ್ಯವಿರಲಿಲ್ಲ. ನಿಮಗೆ ಜೀವ ಕೊಟ್ಟಿದ್ದಕ್ಕೆ ನನ್ನ ಕೆಲಸವೊಂದನ್ನು ಮಾಡಿ ಎಂದು ರಾಮನು ಶುಕ–ಸಾರುಣರ ಬಳಿ ಹೇಳಿದನು. ನೇರವಾಗಿ ರಾವಣನಿಗೆ ನನ್ನ ಸಂದೇಶವನ್ನು ಹೇಳಿ, ಏ ರಾವಣ! ಯಾವ ಬಲದಿಂದ ನೀನು ನನ್ನ ಸೀತೆಯನ್ನು ಅಪಹರಿಸಿದಿಯೋ ತೋರಿಸು ಅದನ್ನು, ನೀನು ಬಾ, ನಿನ್ನ ಸೈನ್ಯವು ಬರಲಿ , ಎಲ್ಲರೂ ಬರಲಿ, ನಾಳೆ ಬೆಳಗಾದರೆ ಲಂಕಾ ನಗರಿ ಮಹಾಯುದ್ದಕ್ಕೆ ಒಳಗಾಗುತ್ತದೆ, ನಿನ್ನ ಸೈನ್ಯ ಇರಬಹುದು, ಎಲ್ಲ ಧ್ವಂಸವಾಗುವುದನ್ನು ಕಾಣುತ್ತಿಯೇ, ಭೀಮ ಕ್ರೋಧವನ್ನು ನಿನ್ನ ಸೈನ್ಯದ ಮೇಲೆ ಪ್ರಯೋಗ ಮಾಡುವವನಿದ್ದೇನೆ, ವಜ್ರಧರನು ವಜ್ರಾಯುಧವನ್ನು ಪ್ರಯೋಗ ಮಾಡುವಂತೆ ಇಷ್ಟು ಕಾಲ ಹಿಡಿದಿಟ್ಟ ನನ್ನ ಮಹಾಕ್ರೋಧವನ್ನು ನಿನ್ನ ಮತ್ತು ನಿನ್ನ ಸೈನ್ಯದ ಮೇಲೆ ಪ್ರಯೋಗ ಮಾಡುತ್ತೇನೆ ಎಂದು ತನ್ನ ಸಂದೇಶವನ್ನು ಶುಕ–ಸಾರುಣರ ಬಳಿ ರಾಮನು ಹೇಳಿದನು. ಆಸಮಯದಲ್ಲಿ ಶುಕ–ಸಾರುಣರಿಗೆ ರಾಮನು ಧರ್ಮ ವತ್ಸಲನಂತೆ ಕಂಡನು. ರಾವಣನ ಖಾಸಾ ಗುಪ್ತಚರೀರ್ವರು ರಾಮನಿಗೆ ಜಯ ಜಯಕಾರ ಹೇಳಿ ಹೊರಟರು. ಗುಪ್ತಚರರು ಯಾವಾಗಲೂ ಅತ್ಯಂತ ವಿಶ್ವಾಸ ಪಾತ್ರರಾಗಿರುತ್ತಾರೆ. ರಾಮನ ವ್ಯಕ್ತಿತ್ವವನ್ನು ಕಂಡ ಶುಕ ಸಾರುಣರು ರಾಮನಿಗೆ ಜಯವಾಗಲಿ ಎಂದು ಹೇಳಿ ಅಲ್ಲಿಂದ ಹೊರಟು ರಾವಣನ ಬಳಿಗೆ ಹೋದರು. ಶುಕ–ಸಾರುಣರು ಮೊದಲು ತಮ್ಮ ಕಥೆಯನ್ನು ಹೇಳಲಾರಂಭಿಸಿದರು. ನಿನ್ನ ತಮ್ಮ ವಿಭೀಷಣ ನಮ್ಮನ್ನು ಹಿಡಿದು, ಎಳೆದುಕೊಂಡು ಹೋಗಿ ರಾಮನ ಮುಂದೆ ನಿಲ್ಲಿಸಿದ್ದ. ಆಗ ನಾವೀಬ್ಬರು ನಿಜವಾಗಿಯೂ ಸತ್ತೆವು ಎಂದು ಅನಿಸಿತು. ಧರ್ಮಾತ್ಮನಾದ , ಅಮಿತ ತೇಜಸ್ವಿಯಾದ ರಾಮನು ಕೃಪೆಗೊಂಡು ನಮ್ಮನ್ನು ಬಿಟ್ಟು ಬಿಟ್ಟನು ಎಂದು ಶುಕ–ಸಾರುಣರು ರಾವಣನ ಮುಂದೆ ಹೇಳಿದರು.

ರಾವಣನು ನೋಡಿಕೊಂಡು ಬಂದದ್ದು ಹೇಳಿ ಎಂದಾಗ, ಯಾವ ಒಂದು ಸ್ಥಾನದಲ್ಲಿ ನಾಲ್ಕು ಪುರುಷ ಶ್ರೇಷ್ಠರು ( ರಾಮ, ಲಕ್ಷ್ಮಣ, ಸುಗ್ರೀವ ಮತ್ತು ವಿಭೀಷಣ) ಒಟ್ಟಿಗೆ ಇದ್ದಾರೋ ಅವರು ಲೋಕಪಾಲಕರಿಗೆ ಸಮಾನರು, ಶೂರರು, ದೃಢ ವಿಕ್ರಮರು ಎಂದು ಹೇಳಿದರು. ನಮ್ಮ ಲಂಕಾಪುರಿ, ಕೋಟೆ, ಬಾಗಿಲನ್ನೆಲ್ಲ ಕಿತ್ತು ಸಮುದ್ರದಲ್ಲಿ ಮುಳುಗಿಸಲು ಈ ನಾಲ್ಕೇ ಜನ ಸಾಕು ಎಂದು ಶುಕ–ಸಾರುಣರು ರಾವಣನಿಗೆ ವರದಿಯನ್ನು ಕೊಟ್ಟರು. ವಾನರರು ಬೇರೆ ಯಾರೋ ಬೇಡ, ಆ ಸೈನ್ಯ ಅಲ್ಲೇ ಇದ್ದರೂ ಈ ನಾಲ್ವರು ಲಂಕಾ ನಗರಿಯನ್ನು ಕಿತ್ತೆತ್ತಿ ಸಮುದ್ರದಲ್ಲಿ ಮುಳುಗಿಸಿ ಸಮಾಧಿ ಮಾಡುತ್ತಾರೆ ಎಂದು ಹೇಳಿದರು. ರಾಮನ ರೂಪ, ಆಯುಧ, ಆ ತೇಜಸ್ಸನ್ನು ನೋಡಿದರೆ ಉಳಿದ ಮೂರು ಜನರು ಬೇಡ, ಲಂಕೆಯ ಸರ್ವ ಸಂಹಾರಕ್ಕೆ ರಾಮನೊಬ್ಬನೇ ಸಾಕು ಎಂದು ಕಾಣುತ್ತದೆ ಎಂದು ಹೇಳಿದರು. ಹೀಗಿರಲು ರಾಮ–ಲಕ್ಷ್ಮಣ, ಸುಗ್ರೀವರಿಂದ ಸುರಕ್ಷಿತವಾಗಿರುವಂತಹ ಆ ಸೇನೆಯು ಸುರಾಸುರರನ್ನು ಮೀರಿ ನಿಂತಿತು ಎಂದು ಹೇಳಿ ರಾವಣನನ್ನು ಬೆದರಿಸುವ ಕಾರ್ಯವನ್ನೇ ಶುಕ–ಸಾರುಣರು ಮಾಡಿದರು. ಸೇತುವೆ ಕಟ್ಟಿದ್ದು ಹೌದು, ನಿಜವಾಗಿ ಕಣ್ಣಿಂದ ನೋಡಿ ಬಂದೆವು, 10 ಯೋಜನ ಅಗಲ ಮತ್ತು 100 ಯೋಜನ ಉದ್ದ ಇದೆ, ರಾಮನು ಸೇನಾ ಸಮೇತನಾಗಿ ದಕ್ಷಿಣ ತೀರಕ್ಕೆ (ಲಂಕೆಯ ತೀರ) ಬಂದು ಬೀಡು ಬಿಟ್ಟಿದ್ದಾನೆ, ದಾಟುತ್ತಾ ಇರುವ , ದಾಟಿದ, ದಾಟಲಿಕ್ಕಿರುವ ಸೇನೆಗೆ ಅಂತ್ಯವಿಲ್ಲ, ಸೇನೆ ತುಂಬಾ ಹರ್ಷದಲ್ಲಿ ಯುದ್ಧದ ತವಕದಲ್ಲಿದೆ, ವಾನರರೆಲ್ಲರೂ ಯುದ್ಧದ ತವಕದಲ್ಲಿ ಇದ್ದಾರೆ ಎಂದು ಹೇಳಿದ ಶುಕ–ಸಾರುಣರು ಕೊನೆಯಲ್ಲಿ ವಿರೋಧ ಸಾಕು, ಶಾಂತಿ ಮಾಡೋಣ, ಸೀತೆಯನ್ನು ರಾಮನಿಗೆ ಕೊಟ್ಟು ಬಿಡೋಣ ಎಂದು ತಮ್ಮ ಸಲಹೆಯನ್ನು ರಾವಣನಿಗೆ ಹೇಳಿದರು. ರಾವಣನಿಗೆ ಎಲ್ಲೆಡೆಯಿಂದ ಅದೇ ಧ್ವನಿ ಬಂದಿತ್ತು. ಕೊನೆಯ ಮಾತನ್ನು ಸಾರಣನು ಅತ್ಯಂತ ಧೈರ್ಯದಿಂದ ಹೇಳಿದನು. ಇದನ್ನೆಲ್ಲ ಕೇಳಿಸಿಕೊಂಡ ರಾವಣನು ದೇವ, ಗಂಧರ್ವರೆಲ್ಲರೂ ಸೇರಿ ಬಂದು ಮೈಮೇಲೆ ಬಿದ್ದರೂ ಸೀತೆಯನ್ನು ಬಿಟ್ಟು ಕೊಡುವುದಿಲ್ಲ ಎಂದು ಕೂಗಿದನು. ಸಾರಣನಿಗೆ ರಾವಣನು ನೀನು ಹೆದರಿದ್ದಿಯೇ, ಆ ಕಪಿಗಳು ಚೆನ್ನಾಗಿ ಪೀಡಿಸಿರಬೇಕು, ಯಾರಿಗೆ ನನ್ನನ್ನು ಗೆಲ್ಲಲು ಸಾಧ್ಯ ಎಂದು ಒರಟಾಗಿ ಹೇಳಿ ಹಲವು ತಾಳೆ ಮರದಷ್ಟು ಎತ್ತರದ ಸೌಧವನ್ನು ಏರಿದನು. ರಾವಣನು ಶುಕ–ಸಾರುಣರನ್ನು ಮೇಲೆ ಕರೆದುಕೊಂಡು ಹೋದನು. ಅದೇ ಚಿಂತೆಯಲ್ಲಿ ಮೇಲಿನಿಂದ ಸೇನೆಯನ್ನು ನೋಡಲು ರಾವಣನು ಮೇಲೆರಿದನು. ಭವನದ ನೆತ್ತಿಯ ಮೇಲೆ ಬಗ್ಗಿ ನಿಂತು ನೋಡಿದಾಗ ರಾವಣನಿಗೆ ನೆಲವೇ ಕಾಣಲಿಲ್ಲ. ರಾವಣನಿಗೆ ಎಲ್ಲ ಕಡೆ ಕಪಿಗಳೇ ಕಂಡರು. ಲಂಕೆಯ ಹೊರವಲಯವು ಕಪಿಗಳಿಂದ ಆವರಿಸಲ್ಪಟ್ಟಿತ್ತು.

ದಡವಿಲ್ಲದ ಸಾಗರದಂತೆ ಇರುವ ರಾಮನಸೇನೆಯನ್ನು ನೋಡಿ ರಾವಣನು ಇಲ್ಲಿಂದ ನನಗೆ ಎಲ್ಲ ಕಪಿಗಳನ್ನು, ಅವರ ಕುಲ ಮತ್ತು ಸಾಮರ್ಥ್ಯವನ್ನು ಹೇಳು ಸಾರಣನನ್ನು ಕೇಳಿದನು. ನಂತರ ರಾವಣನು ಸೇನೆಯಲ್ಲಿ ಮುಂದಾಗಿ ಬರುವವರು ಯಾರು ? ಸುಗ್ರೀವನಲ್ಲಿ ಯಾರ ಮಾತು ನಡೆಯುತ್ತದೆ ಎಂದು ಕೇಳಿದನು. ರಾವಣನಲ್ಲಿ ಹೇಗಾದರೂ ಮಾಡಿ ಸುಗ್ರೀವನನ್ನು ರಾಮನಿಂದ ಬೇರೆ ಮಾಡಬಹುದಾ ಎಂಬ ಚಿಂತೆ ಇತ್ತು. ಕಪಿ ಪರಿಚಯ ಮಾಡಿಸು ಎಂದು ಸಾರುಣನಲ್ಲಿ ರಾವಣನು ಅಪ್ಪಣೆ ಮಾಡಿದಾಗ, ಶುಕ–ಸಾರುಣರು ಕಪಿಸೇನೆಯ ವರ್ಣನೆಯನ್ನು ಮಾಡಿದರು.
ಒಂದೊಂದು ಕಪಿಯ ಉದ್ದ, ಅಗಲ, ಅವರು ಏನು ಮಾಡುತ್ತಿದ್ದರು ಎಂಬುದನ್ನು ಶುಕ– ಸಾರುಣರು ರಾವಣನಿಗೆ ವರ್ಣನೆ ಮಾಡಿದರು.

ಮುಂದೇನಾಯಿತು ? ಶುಕ–ಸಾರಣರು ಮಾಡಿದ ವಾನರರ ವರ್ಣನೆಯನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ..

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments