ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಹಿಂದಿನ ಪ್ರವಚನದಲ್ಲಿ ರಾಮ ರಾವಣ ಯುದ್ಧವನ್ನು ಕೇಳಿದ್ದೇವೆ. ರಾಮರಾವಣಯುದ್ಧವು ಆರಂಭದಲ್ಲಿ ನಡೆದಿದೆ. ಕೊನೆಯಲ್ಲಿ ನಡೆಯುವಂಥದ್ದು ಇದೇ. ಆದರೆ ಕೊನೆಯಲ್ಲಿ ಮಾತ್ರವಲ್ಲ, ಯುದ್ಧಾರಂಭದ ಸ್ವಲ್ಪ ಮುಂದುವರೆದ ಭಾಗದಲ್ಲಿ ರಾವಣ ಸೋತಿದ್ದು, ರಾಮನ ಮುಂದೆ ರಾವಣ ನಿಶ್ಚೇತನನಾಗಿ, ನಿಸ್ಸತ್ವನಾಗಿ, ನಿರಾಯುಧನಾಗಿ ಬಿದ್ದಿದ್ದು. ಮನಸ್ಸು ಮಾಡಿದರೆ ರಾವಣನ ಸಂಹಾರವನ್ನೇ ಮಾಡಿ ಬಿಡುವಂಥದ್ದು ರಾಮ, ಆದರೆ ಹಾಗೇ ಬಿಟ್ಟದ್ದು. ಯಾಕೆಂದರೆ, ಅಸಹಾಯಕನನ್ನು ಕೊಲ್ಲಲಾರೆ ಇದು ವೀರಕ್ಷತ್ರಿಯ ರಾಮನ ನಿಲುವು. ಈ ಸ್ಥಿತಿಯಲ್ಲಿ ಕೊಲ್ಲೋದಿಲ್ಲ ಎನ್ನುವ ಭಾವ. ಕನಿಕರವೂ, ಧರ್ಮವೂ ಹೌದು. ನೀತಿಯೂ ಇದೆ. ಶತ್ರುವಿನ ಕೈಯಲ್ಲಿ ಸಿಕ್ಕಿ, ಹೋಗಿ ಬದುಕಿಕೋ ಎನ್ನುವುದೂ ಸಿಕ್ಕಿದೆ ರಾವಣನಿಗೆ. ಇದು ಬದುಕಿಯೂ ಸತ್ತಂತೆ….! ರಾವಣನ ಇನ್ನುಳಿದ ಆಯಸ್ಸು ರಾಮ ಕೊಟ್ಟ ಭಿಕ್ಷೆ. ಋಷಿವಾಕ್ಯವು ಎಂದೂ ಮಿಥ್ಯೆಯಾಗುವುದಿಲ್ಲ ಎನ್ನುವುದು ಅರ್ಥವಾಗಿದೆ ರಾವಣನಿಗೆ. ಹಿಂದಿನದೆಲ್ಲವನ್ನೂ ನೆನಪಿಸಿಕೊಂಡಿದ್ದಾನೆ ರಾವಣ. ಮುಂದೇನು ಗತಿ ಎಂದು ಆಲೋಚಿಸಿದಾಗ, ರಾವಣನಿಗೆ ನೆನಪಾದದ್ದು ಕುಂಭಕರ್ಣ. ದೊಡ್ಡ ಆಕಾರ, ದೊಡ್ಡ ಬುದ್ಧಿ.

ಕುಂಭಕರ್ಣ ಅಂದರೆ, ಒಂದಿಷ್ಟು ರಾವಣ. ಇನ್ನೊಂದಿಷ್ಟು ವಿಭೀಷಣ. ರಾವಣನ ಬುದ್ಧಿ ಅಂದರೆ ರಾವಣನ ಹಾಗೆ ಅಂತಲ್ಲ, ಕೊಟ್ಟ ಕೊನೆಯಲ್ಲಿ ರಾವಣನ ಮಾತನ್ನು ಕೇಳ್ತಾನೆ. ಅವನ ಹೃದಯದಂತೆ ನಡೆಯುವುದಿದ್ದರೆ, ರಾವಣ ಮಾಡಿದ ಯಾವ ಅನರ್ಥಗಳಿಗೂ ಅವಕಾಶ ಇರ್ತಿರ್ಲಿಲ್ಲ. ಬೃಹದಾಕಾರ ಕಪಿಗಳನ್ನು ಸುಲಭವಾಗಿ ನುಂಗುವವನು ಕುಂಭಕರ್ಣ. ಕಪಿಗಳು ಪರ್ವತಾಕಾರರು, ಆದರೆ ಕುಂಭಕರ್ಣನ ಮುಂದೆ ವಾಮನರು. ಇವನದು ಬಹುದೊಡ್ಡ ರೂಪ, ಆರುನೂರು ಧನುಸ್ಸಿನ ಎತ್ತರ, ಒಂದು ನೂರು ಧನುಸ್ಸಿನ ಸುತ್ತಳತೆ. ಇದು ಯುದ್ಧಶರೀರ. ಒಂದು ಧನುಸ್ಸು ಅಂದರೆ ನಾಲ್ಕು ಮೊಳ ಅಂತ ಲೆಕ್ಕ. ಇಂತಹದ್ದೊಂದು ಬೃಹದ್ರೂಪಿ ಕುಂಭಕರ್ಣ. ಅಪ್ರತಿಮ ಗಂಭೀರ ಎಂದು ಕುಂಭಕರ್ಣನನ್ನು ಹೊಗಳುತ್ತಾನೆ ರಾವಣ. ದೇವದಾನವರ ದರ್ಪವನ್ನು ಇಳಿಸಿದವನು. ಬೃಹ್ಮನ ಶಾಪವಿದೆ, ನಿದ್ದೆ ಮಾಡು ಎನ್ನುವುದು. ಪ್ರಪಂಚದ ಪಾಲಿಗೆ ಇದು ಬಹುದೊಡ್ಡ ವರ. ರಾವಣ ಕುಂಭಕರ್ಣನನ್ನು ಎಬ್ಬಿಸಿ ಎಂದು ಹೇಳಿದನು ಸೈನಿಕರ ಹತ್ತಿರ. ಸೃಷ್ಟಿಯ ವಿರುದ್ಧದ ನಡೆಗೆ ನೂರುಪಟ್ಟು ವಿಫಲತೆ ಸಿಗುವುದು. ರಾಮನ ಮುಂದೆ ಯುದ್ಧಮಾಡಿ, ಸೋತು, ಕುಂಭಕರ್ಣನನ್ನು ನೆನಪಿಸಿಕೊಂಡಿದ್ದು. ಲಂಕೆಯ ದ್ವಾರಗಳಲ್ಲಿ, ಕೋಟೆಗಳಲ್ಲಿ ಹೀಗೆ ಎಲ್ಲ ಕಡೆಯಲ್ಲಿ ಕಾವಲು ಕಾಯಿರಿ ಎಂದನು ರಾವಣ. ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದಾನೆ ಕುಂಭಕರ್ಣ. ಒಂಭತ್ತು ಆರು ಏಳು ಎಂಟು ತಿಂಗಳು ನಿದ್ದೆ ಮಾಡ್ತಾನೆ ಕುಂಭಕರ್ಣ. ಅಂದರೆ ನೂರ ಎಂಭತ್ತು ದಿನಗಳು, ಅಂದರೆ ಆರು ತಿಂಗಳು ನಿದ್ದೆ ಮಾಡ್ತಾನೆ ಕುಂಭಕರ್ಣ.

ಕುಂಭಕರ್ಣ ಎದ್ದು ಬಂದರೆ ರಾಮಲಕ್ಷ್ಮಣರನ್ನು, ಕಪಿಗಳನ್ನು ಕೊಲ್ಲಬಲ್ಲನು. ಇಂಥಹ ಕುಂಭಕರ್ಣ ಮೂಢ, ನಿದ್ದೆಮಾಡುತ್ತಿದ್ದಾನೆ. ದಾರುಣವಾಗಿ ರಾಮನ ಕೈಯಲ್ಲಿ ಸೋತ ನನ್ನ ದುಃಖವನ್ನು ದೂರಮಾಡಬೇಕೆಂದರೆ, ಕುಂಭಕರ್ಣ ಏಳಬೇಕು. ಅದಲ್ಲದಿದ್ದರೆ, ಇಂಥಹ ಸಂಕಟ ನನಗೆ ಬಂದಾಗ ಕುಂಭಕರ್ಣನ ಉಪಯೋಗವಾಗದಿದ್ದರೆ ಹೇಗೆ… ಎಂದು ಹೇಳಿ ರಾಕ್ಷಸರಿಗೆ ಹೇಳಿದ, ಹೋಗಿ ಅವನನ್ನು ಎಬ್ಬಿಸಿ. ಗಾಬರಿ ಗಾಬರಿಯಿಂದ ಓಡಿದರು ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಲು. ಒಂದು ರಾಶಿ ಮಾಂಸ, ರಕ್ತವನ್ನು, ಭಕ್ಷ್ಯಗಳನ್ನು ತೆಗೆದುಕೊಂಡು ಹೋದರು ಕುಂಭಕರ್ಣನ ತಿಂಡಿಗಾಗಿ. ಚಂಡಮಾರುತ ಬೀಸುತ್ತಿತ್ತು, ಒಳಗೆ ಪ್ರವೇಶಿಸಲು ಕಷ್ಟವಾಯಿತು ರಾಕ್ಷಸರಿಗೆ. ಅಂದರೆ, ಉಸಿರು ಬಿಡುವಾಗ ಅವರು ಹೋಗಲು ಸಾಧ್ಯವಾಗಲಿಲ್ಲ, ಉಸಿರು ಒಳತೆಗೆದುಕೊಳ್ಳುವಾಗ ಪ್ರವೇಶಿಸಿದರು. ರಮಣೀಯವಾದ, ಬಂಗಾರದ ನೆಲದ ಗುಹೆಯಲ್ಲಿ ಮಲಗಿದ್ದನು ಕುಂಭಕರ್ಣ. ವಿಕೃತವಾದ ಆಕಾರ, ಸ್ವರೂಪ. ಅಡ್ಡಬಿದ್ದ ಪರ್ವತದಂತವನು ಗಾಢ ನಿದ್ದೆಯಲ್ಲಿದ್ದಾನೆ. ಅವನನ್ನು ಎಬ್ಬಿಸಲು ಆರಂಭಿಸಿದರು ರಾಕ್ಷಸರು. ಕುಂಭಕರ್ಣನ ಮಹಾಶ್ವಾಸವೇ ಭಯವನ್ನು ಹುಟ್ಟಿಸುತ್ತಿತ್ತು. ನಿದ್ದೆ ಮಧ್ಯದಲ್ಲಿ ಬಾಯಿ ತೆರೆದರೆ, ಪಾತಾಳದರ್ಶನದ ಆಕಾರ. ಅಂಥಹ ಒಂದು ರೂಪ.

ಅವನ ಹತ್ತಿರ ಹೋದರೆ, ಕೊಬ್ಬು ಮತ್ತು ರಕ್ತದ ವಾಸನೆ.. ಅಂಗದ, ಕೇಯೂರ, ಕಿರೀಟ ಎಲ್ಲವೂ ಹಾಗೇ ಇದೆ. ಎಲ್ಲದಕ್ಕಿಂತ ಮೊದಲು, ರಾಕ್ಷಸರು ತಾವು ತಂದ ಆಹಾರವನ್ನು ಒಡ್ಡಿದರು. ಮೇರುಪರ್ವತದಂತಹ ಮಾಂಸದ ರಾಶಿಯನ್ನು, ಅನ್ನದ ರಾಶಿಯನ್ನು, ರಕ್ತ ತುಂಬಿದ, ಮಧ್ಯ ತುಂಬಿದ ಗಡಿಗೆಗಳನ್ನಿಟ್ಟರು. ಚಂದನದ ರಾಶಿಯನ್ನು ಅವನ ಮೈಮೇಲೆ ಬಳಿದರು, ತಂಪಾಗಿ ಏಳಲಿ ಎಂದು. ಮೂಗಿನ ಹತ್ತಿರ ಸುಗಂಧಭರಿತ ಮಾಲೆಗಳನ್ನು, ಧೂಪಗಳನ್ನು ಇಟ್ಟರು. ಕುಂಭಕರ್ಣನ ಸ್ತೋತ್ರಗಳನ್ನು ಮಾಡಿದರು. ಬಳಿಕ ಮಳೆಗಾಲದ ಮೋಡಗಳಂತೆ ಘರ್ಜಿಸಿದರು, ಶಂಖಗಳನ್ನು ಊದಿದರು, ಒಬ್ಬೊಬ್ಬರಾಗಿ ಕೂಗಿದರು, ಗುಂಪಾಗಿ ಕೂಗಿದರು, ಒಂದೇ ರೀತಿಯಲ್ಲಿ ಎಲ್ಲರೂ ಸೇರಿ ಕೂಗಿದರು. ಏನೂ ಪ್ರಯೋಜನ ಆಗಲಿಲ್ಲ. ಕುಂಭಕರ್ಣನ ಕೈಕಾಲುಗಳನ್ನು ಎಳೆದಾಡಿದರು, ಅವನ ಮೇಲೆ ಬಿದ್ದರು. ದೊಡ್ಡ ಶಬ್ದವನ್ನು ಮಾಡಿದರು. ಶಂಖ, ಭೇರಿ, ಪಣವ, ಕೊಟ್ಟಿಗೆ, ಆ ಘರ್ಜನೆ ಮಾಡಿದರು. ಎಷ್ಟರಮಟ್ಟಿಗೆ ಅಂದರೆ, ಪಕ್ಷಿಗಳು ತಡೆಯಲಾರದೇ ಆಕಾಶದಿಂದ ಬಿದ್ದವು. ಶಬ್ದದ ತುಟ್ಟತುದಿಗೆ ಹೋದರೂ, ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ. ನಂತರ ವೃಕ್ಷಗಳು, ಪರ್ವತಗಳು, ಆಯುಧಗಳನ್ನು, ಮುದ್ಗರಗಳನ್ನು ಕೈಗೆತ್ತಿಕೊಂಡರು ರಾಕ್ಷಸರು. ಆತನನ್ನು ಬಡಿತಾ ಇದ್ದಾರೆ. ಇದೆಲ್ಲದರಿಂದ ಬಡಿದರೂ, ಅವನಿಗೆ ಏನೂ ಆಗಲಿಲ್ಲ, ಸ್ವಲ್ಪವೂ ಅಲ್ಲಾಡಲಿಲ್ಲ. ಇನ್ನು ದೊಡ್ಡ ಪ್ರಯತ್ನ ಮಾಡಬೇಕು ಎಂದುಕೊಂಡು ಹತ್ತು ಸಾವಿರ ರಾಕ್ಷಸರು ಒಟ್ಟಿಗೆ ಶಂಖ, ಭೇರಿ, ಮೃದಂಗಗಳನ್ನು ಬಡಿದುಕೊಂಡರು. ಎಲ್ಲವೂ ಒಟ್ಟಿಗೆ ಪ್ರಯೋಗಮಾಡಿದರೂ, ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ. ಒಂದಷ್ಟು ಒಂಟೆಗಳನ್ನು, ಕುದುರೆಗಳನ್ನು, ಕತ್ತೆಗಳನ್ನು, ಆನೆಗಳನ್ನೂ ತಂದರಂತೆ. ಕುಂಭಕರ್ಣನಿಗೆ ಅಭಿಮುಖವಾಗಿ ನಿಂತು, ಇವೆಲ್ಲ ಪ್ರಾಣಿಗಳಿಗೆ ಛಾಟಿಯಿಂದ ಹೊಡೆದರು ಅವು ಕೂಗಿಕೊಂಡವು, ಇದರ ಜೊತೆ ಇವರ ಭೇರಿ ಶಬ್ದ ಹಾಗೂ ಘರ್ಜನೆಯ ಶಬ್ದವೂ ಇದೆ. ಶಬ್ದಮಾಲಿನ್ಯವಾಗಿದೆ. ಸರ್ವಪ್ರಾಣಿಗಳ ಕೂಗು, ವಾದ್ಯದ ಶಬ್ದ, ಹಾಗೂ ಆಯುಧಗಳಿಂದ ಇದ್ದಷ್ಟೂ ಶಕ್ತಿ ಬಳಸಿ ಆತನಿಗೆ ಹೊಡೆದರು, ತಿವಿದರು. ಆದರೆ ಎಚ್ಚರವಾಗಲಿಲ್ಲ. ಈ ಶಬ್ದ ಇಡೀ ಲಂಕೆಯನ್ನೇ ವ್ಯಾಪಿಸಿತು.

ಶಾಪದಿಂದ ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ. ಸಹಜತೆ ಯಾವಾಗಲೂ ಸುಲಭ. ರಾಕ್ಷಸರು ಕ್ರುದ್ಧರಾದರು. ಎಲ್ಲಾ ಸೇರಿ ಏನೇನು ಮಾಡಬಹುದೋ ಅದನ್ನು ಮಾಡಿದರು. ಕೆಲವರು ಕೂದಲನ್ನು ಹಿಡಿದು ಎಳೆದರು, ಕಿವಿಗಳನ್ನು ಕಚ್ಚಿದರು, ನೂರಾರು ಕೊಡ ನೀರನ್ನು ಕಿವಿಗೆ ಹಾಕಿದರು, ಕುಂಭಕರ್ಣ ಅಲುಗಾಡಲೂ ಇಲ್ಲ. ಮಹಾನಿದ್ರೆಯಲ್ಲಿದ್ದಾನೆ. ದೊಡ್ಡದೊಡ್ಡ ಸುತ್ತಿಗೆಯಿಂದ ಎದೆಯ ಹಾಗೂ ತಲೆಯ ಭಾಗಕ್ಕೆ ಹೊಡೆದರು. ಕುಂಭಕರ್ಣ ಏಳಲಿಲ್ಲ. ಕುಂಭಕರ್ಣ ಕೊನೆಗೆ ಎದ್ದಿದ್ದು ಹೇಗೆ ಅಂದರೆ, ಅವನ ಮೈಮೇಲೆ ಒಂದು ಸಾವಿರ ಯುದ್ಧದ ಆನೆಗಳನ್ನು ಓಡಿಸಿದಾಗ…..! ಆಗ ಸ್ಪರ್ಷವಾಯಿತಂತೆ ಕುಂಭಕರ್ಣನಿಗೆ. ಅಕಾಲದಲ್ಲಿ ಎಬ್ಬಿಸಿದ ಪೀಡೆ ಹಾಗೂ ಹಸಿವು ಅವನ ಗಮನಕ್ಕೆ ಬಂದವಂತೆ. ಇನ್ಯಾವುದೂ ಅರ್ಥವಾಗಲಿಲ್ಲ ಕುಂಭಕರ್ಣನಿಗೆ. ಆಕಳಿಸಿದನಂತೆ, ಆ ಬಾಯಿ ಮಹಾಪಾತಾಳದಂತಿದೆ. ಎದ್ದು ಕೂರುತ್ತಿದ್ದಾನೆ. ಕಣ್ಣು ಬಿಟ್ಟನು. ಕೂತಾಗ, ಎದುರಿಗಿದ್ದ ಊಟವನ್ನು ಮಾಡಿದನು. ನಡುನಡುವೆ ರಕ್ತವನ್ನು, ಮಧ್ಯವನ್ನು, ಕೊಬ್ಬನ್ನು ಕುಡೀತಾ ಇದಾನೆ ಕುಂಭಕರ್ಣ. ಒಂದು ಹಂತಕ್ಕೆ ತೃಪ್ತಿಯಾಯಿತು ಎಂದು ಕುಂಭಕರ್ಣನಿಗನ್ನಿಸಿದಾಗ, ರಾಕ್ಷಸರು ಅವನ ಎದುರು ಬಂದು ನಿಂತರಂತೆ. ಸುತ್ತ ನೋಡಿದಾಗ, ರಾಕ್ಷಸರು ಕಂಡರಂತೆ, ಮಾತನಡಿಸಿದನಂತೆ. ಆಮೇಲೆ ಗೊತ್ತಾಯಿತು, ನನ್ನನ್ನು ಎಬ್ಬಿಸುವ ಪ್ರಯತ್ನವಾಗಿದೆ ಎಂದು. ಈವರೆಗೆ ಎಬ್ಬಿಸಿದ್ದಿಲ್ಲ. ಯಾಕೆ ಎಬ್ಬಿಸಿದರು ಎಂದು ಆಲೋಚಿಸಿದನು ಕುಂಭಕರ್ಣ ಹಾಗೂ ಕೇಳಿದನಂತೆ, ಲಂಕೆಗೆ ಏನೋ ದೊಡ್ಡ ಆಪತ್ತಿದೆಯಾ, ಅಂಥದ್ದೇನಾಯಿತು, ಏನು ಭಯ ಎಂದು ತಿಳಿಸಿ. ಅದನ್ನು ಒಂದು ಕ್ಷಣದಲ್ಲಿ ಇಲ್ಲವಾಗಿಸುತ್ತೇನೆ. ಹೇಳಿ ಎಂದು ಹೇಳಿದನು.

ಆಗ ವಿರೂಪಾಕ್ಷ ಎಂಬ ಸಚಿವ ಹೇಳಿದನು, ನಮಗೆ ದೇವತೆಗಳಿಂದ ಯಾವ ಭಯವೂ ಇಲ್ಲ. ಮನುಷ್ಯರಿಂದ ಭಯ. ಆಶ್ಚರ್ಯವಾಯಿತು ಕುಂಭಕರ್ಣನಿಗೆ. ದೇವತೆಗಳಿಂದಲೂ ಬರದ ದೊಡ್ಡ ಕಷ್ಟ ಮನುಷ್ಯರಿಂದ ಲಂಕೆಗೆ ಬಂದಿದೆ. ದೊಡ್ಡ ದೊಡ್ಡ ವಾನರರು ಲಂಕೆಯನ್ನು ಮುತ್ತಿದಾರೆ. ಸೀತಾಪಹರಣದಿಂದ ಖತಿಗೊಂಡ ರಾಮನಿಂದ ಭಯ. ಒಬ್ಬನೇ ಒಬ್ಬ ವಾನರ ಲಂಕೆಯನ್ನು ಸುಟ್ಟ, ಅದು ಹನುಮಂತ. ರಾವಣನ ಮಗ ಅಕ್ಷನನ್ನು ಕೊಂದ. ಇದು ಒಬ್ಬ ವಾನರನ ಸಾಮರ್ಥ್ಯ. ನಡೆದ ಯುದ್ಧದಲ್ಲಿ ರಾಮನು ರಾವಣನನ್ನು ನಿಶ್ಶಕ್ತನನ್ನಾಗಿ ಮಾಡಿ, ನಿರಾಯುಧನನ್ನಾಗಿ ಮಾಡಿ, ಹೋಗು ಬದುಕಿಕೋ ಎಂದು ಬಿಟ್ಟಿದಾನೆ. ಸೂರ್ಯತೇಜಸ್ವಿಯಾದ ರಾಮನು ಯುದ್ಧದಲ್ಲಿ ರಾವಣನ ಹತ್ತಿರ ಹೋಗಿ ಬದುಕಿಕೋ ಎಂದನು. ಈವರೆಗೆ ಯಾವ ದಾನವರು, ದೇವತೆಗಳೂ, ಗಂಧರ್ವರೂ ಈ ತರ ಹೇಳಿರಲಿಲ್ಲ. ಸತ್ತೇ ಹೋಗಬೇಕಿತ್ತು ರಾವಣ. ರಾಮ ಬಿಟ್ಟಿದ್ದರಿಂದ ರಾವಣ ಉಳಿದದ್ದು ಈಗ ಎಂದು ವಿರೂಪಾಕ್ಷ ಹೇಳಿದನು.

ಆಗ ಕುಂಭಕರ್ಣ ರಾಮಲಕ್ಷ್ಮಣರ ರಕ್ತವನ್ನು ನಾನೇ ಕುಡಿತೇನೆ. ರಾಕ್ಷಸರಿಗೆ ರಕ್ತವನ್ನು ಕೊಡುತ್ತೇನೆ. ಇಲ್ಲಿಂದ ಯುದ್ಧಭೂಮಿಗೇ ಹೋಗಿ, ನಂತರ ರಾವಣನನ್ನು ಕಾಣುತ್ತೇನೆ ಎಂದನು. ಆಗ ವಿರೂಪಾಕ್ಷ, ಮುಂದೇನು ಮಾಡಬೇಕೆಂದು ರಾವಣನೊಂದಿಗೆ ವಿಮರ್ಶಿಸಿ ಮುಂದುವರಿ, ಮೊದಲು ಸಂವಾದವಾಗಲಿ ಎಂದು ರಾವಣನಲ್ಲಿಗೆ ಕರೆದುಕೊಂಡು ಹೋದರು. ರಾವಣನಿಗೆ ಕೈಮುಗಿದು ಕುಂಭಕರ್ಣ ಎದ್ದಿದ್ದಾನೆ ಎಂದರು ರಾಕ್ಷಸರು. ಅಣ್ಣನ ಅಪ್ಪಣೆಯಾದ್ದರಿಂದ, ಎದ್ದು ಮುಖತೊಳೆದು, ಸ್ನಾನಮಾಡಿದನಂತೆ. ಎರಡು ಸಾವಿರ ಗಡಿಗೆಗಳ ಮಧ್ಯವನ್ನು ಕುಡಿದು, ಹೊರಟನಂತೆ. ಕಾಲನಂತೆ, ಅಂತಕನಂತೆ ಕಂಡನು ಕುಂಭಕರ್ಣ. ಆತ ನಡೆದುಕೊಂಡು ಹೋಗುವಾಗ, ಭೂಮಿ ಕಂಪಿಸಿತು. ಕೋಟೆಯ ಆಚೆ ಇರುವ ಕಪಿಗಳಿಗೆ ಇವನು ಕಂಡನು. ಕುಂಭಕರ್ಣನ ಆಕಾರವನ್ನು ಕಂಡು ನಡುಗಿದರು. ರಾಮನನ್ನು ಆಶ್ರಯಿಸಿದರಂತೆ. ದರ್ಶನಮಾತ್ರದಿಂದ ಕಪಿಗಳು ಕುಂಭಕರ್ಣನನ್ನು ನೋಡಿ, ಹೆದರಿ ಪಲಾಯನ ಮಾಡತೊಡಗಿದರು. ರಾಮನೂ ನೋಡಿದನು ಆತನನ್ನು. ತ್ರಿವಿಕ್ರಮನ ರೂಪ ನೆನಪಾಯಿತಂತೆ ರಾಮನಿಗೆ.. ಅತ್ತ ಕುಂಭಕರ್ಣ ಬೆಳಿತಾ ಇದಾನೆ, ಇತ್ತ ವಾನರರು ಪಲಾಯನ ಮಾಡ್ತಿದ್ದಾರೆ.

ಯಾರಿವನು, ಯಾರಿದು ಎಂದು ವಿಭೀಷಣನನ್ನು ಕೇಳಿದನು ರಾಮ. ಇಂಥದ್ದನ್ನು ಕಂಡೇ ಇಲ್ಲ, ಇವನಾರು ಎಂದು ರಾಮನು ಕೇಳಿದಾಗ, ವಿಭೀಷಣ ಹೇಳಿದನು. ಯಾರು ಇಂದ್ರನನ್ನು, ಯಮನನ್ನು ಯುದ್ಧದಲ್ಲಿ ಸೋಲಿಸಿದನೋ, ವಿಶ್ರವಸರ ಪುತ್ರ ನಮ್ಮ ಅಣ್ಣ, ಪ್ರತಾಪಶಾಲಿ ಕುಂಭಕರ್ಣ ಇವನು. ಇವನ ಆಕೃತಿಗೆ ಹೋಲುವ ರಾಕ್ಷಸರಿಲ್ಲ. ಈತನಿಗೆ ಸಮಾನ ರಾಕ್ಷಸರೂ ಇಲ್ಲ. ಇವನು ಸಹಜ ಬಲವಂತ. ಹುಟ್ಟಿದಾಗ ಹಸಿದವನು ಸಾವಿರ ಪ್ರಾಣಿಗಳನ್ನು ತಿಂದವನು ಇವನು. ಆಗ ಇಂದ್ರನಿಗೆ ರಾಕ್ಷಸರು ಶರಣಾದರು. ಇಂದ್ರನಿಗೆ ಕೋಪಬಂದು ಇವನಿರುವಲ್ಲಿಗೆ ಬಂದು, ವಜ್ರಾಯುಧವನ್ನು ಪ್ರಯೋಗಿಸಿದನು ಇಂದ್ರ. ಆಗ ಕುಂಭಕರ್ಣನ ಘರ್ಜನೆಗೆ ಭೂಕಂಪವೇ ಆಯಿತು. ಇಂದ್ರನ ಐರಾವತದ ದಂತವನ್ನು ಕಿತ್ತು, ಇಂದ್ರನಿಗೇ ಹೊಡೆದನು ಕುಂಭಕರ್ಣ. ಇಂದ್ರ ಪ್ರಜ್ಞೆ ತಪ್ಪಿದ. ದೇವರ್ಷಿಗಳು, ರಾಕ್ಷಸರು ಎಲ್ಲರೂ ಹೆದರಿದರು. ಎಲ್ಲ ಸೇರಿ ಬ್ರಹ್ಮನ ಬಳಿ ಹೋದರು. ನಡೆದದ್ದೆಲ್ಲವನ್ನೂ ಹೇಳಿದರು, ಹೀಗೆ ಕುಂಭಕರ್ಣ ಊಟ ಮಾಡಿದರೆ, ಜಗತ್ತೇ ಶೂನ್ಯವಾದೀತು ಎಂದರು. ಎಲ್ಲ ರಾಕ್ಷಸರನ್ನೂ ಕರೆಸಿದನು ಬ್ರಹ್ಮ. ಕುಂಭಕರ್ಣನನ್ನು ಕಂಡು, ಬ್ರಹ್ಮನೇ ಹೆದರಿದನು. ಪ್ರಪಂಚಪ್ರಳಯಕ್ಕಾಗಿ ನಿನ್ನ ಜನನವಾಗಿದೆ. ಇಂದಿನಿಂದಲೇ ಸತ್ತವನಂತೆ ನೀನು ನಿದ್ದೆ ಮಾಡುತೀಯ ಎಂದು ಶಾಪಕೊಟ್ಟನು ಬ್ರಹ್ಮ. ನಿನ್ನ ಮೊಮ್ಮಗನ ಮಗನಿಗೆ ಇಂತಹ ಶಾಪವೆ… ಎಂದನು ರಾವಣ. ಕೊನೆಯ ಪಕ್ಷ ಎಚ್ಚರ, ನಿದ್ದೆಗಳ ಪರಿಚಯ ಹೇಳು ಎಂದಾಗ ಆರು ತಿಂಗಳು ನಿದ್ದೆ ಹಾಗೂ ಒಂದು ದಿನ ಎಚ್ಚರವಾಗಿರಲಿ ಎಂದನು ಬ್ರಹ್ಮ. ಆ ಒಂದು ದಿನದಲ್ಲಿ ಸರ್ವಭಕ್ಷ ಮಾಡ್ತಾನೆ.

ವಿಭೀಷಣ ರಾಮನಿಗೆ ಹೇಳಿದನು, ನಿನ್ನ ಪರಾಕ್ರಮಕ್ಕೆ ಹೆದರಿ ರಾವಣ ಕುಂಭಕರ್ಣನನ್ನು ಎಬ್ಬಿಸಿದ್ದು. ಇವನೇನಾದರೂ ಹೊರಗೆ ಬಂದರೆ, ವಾನರರನ್ನು ತಿನ್ನುತ್ತಾ ಹೋಗ್ತಾನೆ. ಯುದ್ಧ ಮಾಡುವುದಿಲ್ಲ. ಅದು ರಾಕ್ಷಸನಲ್ಲ, ಯಂತ್ರ ಎಂದು ಹೇಳಿ ವಾನರರಿಗೆ. ನೀಲನಿಗೆ ಹೇಳಿದನು ರಾಮ, ಯುದ್ಧಕ್ಕೆ ಸಿದ್ಧತೆ ಮಾಡು. ವಾನರರನ್ನು ಒಟ್ಟುಗೂಡಿಸು. ಇಡೀ ವಾನರರ ಸೇನೆ ಮತ್ತೆ ಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ. ಕುಂಭಕರ್ಣನ ಸ್ಥೂಲಾಂಶ, ಶರೀರದ ಪರಿಚಯ ಆಗಿದೆ. ಕುಂಭಕರ್ಣ ಮಹಾಮತಿಯಾ, ಅವನ ಒಳನೋಟ ಏನು ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments