ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ತನ್ನ ಬಾಹುಬಲದಿಂದ, ಪರಾಕ್ರಮದಿಂದ, ಮುಖ್ಯವಾಗಿ ವರಬಲದಿಂದ ಪ್ರಪಂಚಕ್ಕೇ ದೊಡ್ಡವನು ಎನಿಸಿಕೊಂಡವನು ಅಣ್ಣ. ವಾಸ್ತವವಾಗಿ ಅವನಿಗಿಂತ ದೊಡ್ಡವನು ತಮ್ಮ. ಗಾತ್ರದಲ್ಲಿಯೂ, ಬಲದಲ್ಲಿಯೂ, ವ್ಯಕ್ತಿತ್ವದಲ್ಲಿಯೂ. ಪ್ರಪಂಚವನ್ನೆಲ್ಲ ಗೆದ್ದವನು ಕಷ್ಟದಲ್ಲಿದಾನೆ. ರಾವಣ. ರಾವಣನಾಗಿ ಉಳಿದಿಲ್ಲ ಇವತ್ತು. ನಿಸ್ತೇಜನಾಗಿದ್ದಾನೆ. ನಿಸ್ಸಹಾಯಕನಾಗಿದಾನೆ. ಭವಿಷ್ಯ ಕತ್ತಲಾಗಿ ಕಾಣ್ತಾಯಿದೆ. ರಾಮನನ್ನು ಗೆಲ್ಲುವ ಛಲ ಉಳಿದಿಲ್ಲ. ರಾಮನ ಕೈಯಲ್ಲಿ ಪೆಟ್ಟುತಿಂದು ರಾಮನು ಮಾಡಿದ ಜೀವದಾನ ಹಾಗೆ ಬದುಕಿ ಲಂಕೆಗೆ ಮರಳಿದಾನೆ.

ಅಂಥವನು ತನ್ನ ತಮ್ಮನನ್ನು ಎಬ್ಬಿಸ್ತಾ ಇದಾನೆ. ಸಕಾಲದಲ್ಲಿ ಎಬ್ಬಿಸಿದಾನೆ. ಬೇರೆ ದಾರಿಯಿಲ್ಲ. ಎದ್ದ ಮೇಲೆ ಅವನಿಗೆ ವಾರ್ತೆ ಗೊತ್ತಾಗಿದೆ. ಲಂಕೆಯ ಮೇಲೆ ಆಕ್ರಮಣವಾಗಿದೆ. ರಾಮನ ಸೇನೆ ಲಂಕೆಯನ್ನು ಮುತ್ತಿದೆ. ರಾಕ್ಷಸವೀರರನೇಕರು ಹತರಾಗಿದ್ದಾರೆ. ಅಣ್ಣನನ್ನು ಕಂಡು ಯುದ್ಧಕ್ಷೇತ್ರಕ್ಕೆ ಹೋಗುವ ಸಲುವಾಗಿ ಅಣ್ಣನ ಮನೆಗೆ ಹೋಗ್ತಿದಾನೆ ಕುಂಭಕರ್ಣ. ಒಂದು ಕಡೆಯಿಂದ ನಿದ್ದೆ ಒಂದು ಕಡೆಯಿಂದ ಅಮಲು ಅವನನ್ನ ಬಾಧಿಸ್ತಾ ಇದೆ. ರಾಜಮಾರ್ಗದಲ್ಲಿ ಅಣ್ಣನ ಮನೆಗೆ ಹೋಗ್ತಿರಬೇಕಾದ್ರೆ ಅವನ ಮೇಲೆ ಪುಷ್ಪವೃಷ್ಟಿಯಾಯಿತು. ಲಂಕಾ ನಿವಾಸಿಗಳು ಅವನ ಮೇಲೆ ಪುಷ್ಪವೃಷ್ಟಿ ಮಾಡಿದರು. ನಡೆದು ಹೋಗಿ ಅಣ್ಣನ ಮನೆಯನ್ನು ಕಂಡ ಕುಂಭಕರ್ಣ ಅಣ್ಣನ ಮನೆಯನ್ನು ಪ್ರವೇಶ ಮಾಡ್ತಾನೆ. ದೂರದಿಂದ ಆಸನದಲ್ಲಿ ಕುಳಿತಿರುವ ರಾವಣನನ್ನು ಕಂಡ. ಸಹಜವಾಗಿ ನಡೆದುಹೋಗುತ್ತಿರುವಾಗ ಭೂಮಿ ನಡುಗಿತು. ಮನೆಯಲ್ಲಿಲ್ಲ ರಾವಣ.
ಉದ್ವಿಗ್ನನಾಗಿ ಪುಷ್ಪಕವಿಮಾನದಲ್ಲಿ ಉತ್ತಮಾಸನದಲ್ಲಿ ಕುಳಿತಿದ್ದಾನೆ. ಕುಂಭಕರ್ಣನನ್ನು ಕಂಡಾಗ ರಾವಣನಿಗೆ ಬಹಳ ಸಂತೋಷವಾಯಿತು. ತಾನು ಕುಳಿತ ಆಸನದಿಂದೆದ್ದು ಕುಂಭಕರ್ಣನನ್ನು ಬಹಳ ಆದರದಿಂದ ಬರಮಾಡಿಕೊಳ್ತಿದಾನೆ. ಬಳಿಕ ಕುಂಭಕರ್ಣನು ತನ್ನ ಅಣ್ಣನ ಚರಣಗಳಿಗೆ ವಂದಿಸಿದನು. ಏನಾಗಬೇಕಿತ್ತು ಅಂತ ಸೀದಾ ವಿಷಯಕ್ಕೆ ಬರ್ತಾನೆ. ರಾವಣ ಮತ್ತೊಮ್ಮೆ ಎದ್ದುಬಂದು ಕುಂಭಕರ್ಣನನ್ನು ತಬ್ಬಿಕೊಂಡು ದಿವ್ಯಾಸನದಲ್ಲಿ ಕುಳ್ಳಿರಿಸಿ ತನ್ನ ಆಸನದಲ್ಲಿ ಕುಳಿತುಕೊಳ್ತಾನೆ. ಮತ್ತೆ ಕೇಳ್ತಾನೆ ಕುಂಭಕರ್ಣ. ದೊರೆಯೆ ಏಕೆ ನನ್ನನ್ನು ಅಸಮಯದಲ್ಲಿ ಎಬ್ಬಿಸಿದೆ? ಏನಾಪತ್ತು ಬಂತು? ಯಾರಿಂದ ಭಯ ನಿನಗೆ? ಯಾರ ಆಯಸ್ಸು ಮುಗಿದಿದೆ? ಎಂದಾಗ ರಾವಣ ಮಾತು ಪ್ರಾರಂಭ ಮಾಡ್ತಾನೆ. ಕೊಂಚ ತಿರುಗಿ ಹೇಳಿದನು ಕುಂಭಕರ್ಣನಿಗೆ. ನೀನು ಆರಾಮಾಗಿ ನಿದ್ದೆ ಮಾಡ್ತಿದೀಯೆ. ನನಗೆ ರಾಮನಿಂದ ಎಂತಹಾ ಆಪತ್ತು ಬಂದಿದೆ. ಈ ದಾಶರಥಿಯು ಸುಗ್ರೀವನ ಸೇನೆಯನ್ನು ಕೂಡಿಕೊಂಡು ಲಂಕೆಗೆ ಬಂದು ನಮ್ಮ ಬೇರುಗಳನ್ನು ಕತ್ತರಿಸ್ತಾ ಇದ್ದಾನೆ. ಹೊರಗೆ ಹೋದರೆ ನೋಡು ಯಾವ ಕಡೆ ನೋಡಿದರೂ ಸಾವಿರದಷ್ಟು ಕಪಿಸೇನೆ ಕಾಣ್ತಾಯಿದೆ. ಸಮುದ್ರಕ್ಕೆ ಸೇತುವೆಕಟ್ಟಿ ಸಮುದ್ರವನ್ನು ದಾಟಿ ಬಂದಿದಾರೆ. ನಮ್ಮ ಅನೇಕ ವೀರರನ್ನು ವಾನರರೇ ಸಂಹರಿಸಿದ್ದಾರೆ. ಆದರೆ ಈ ವಾನರ ನಾಯಕರು ಒಬ್ಬರೂ ಸಾಯುತ್ತಿಲ್ಲ. ಲಂಕೆಗೂ ನಿಮ್ಮಣ್ಣನಿಗೂ ದೊಡ್ಡ ಭಯ ಬಂದಿದೆ. ಕಾಪಾಡು. ಈ ಅನರ್ಥವನ್ನು ದೂರಮಾಡು. ಅದಕ್ಕಾಗಿಯೇ ನಾನು ನಿನ್ನನ್ನು ಎಬ್ಬಿಸಿದ್ದು. ಲಂಕೆಯ ಖಜಾನೆ ಬರಿದಾಗಿದೆ. ನನ್ನನ್ನೂ ಲಂಕೆಯನ್ನೂ ಕಾಪಾಡು. ನೀನಲ್ಲದೇ ಇನ್ನಾರೂ ಮಾಡಲು ಶಕ್ತರಿಲ್ಲದ ಈ ಕಾರ್ಯವನ್ನು ಮಾಡು. ನಾನು ಹೀಗೆ ಎಂದೂ ನಿನ್ನನ್ನು ಕೇಳಿದ್ದಿಲ್ಲ. ಕುಂಭಕರ್ಣ ನಿನ್ನ ಮೇಲಿರುವಷ್ಟು ಪ್ರೀತಿ ನನಗೆ ಇನ್ಯಾರ ಮೇಲೂ ಇಲ್ಲ. ಸಮಸ್ತ ಪ್ರಪಂಚದಲ್ಲಿ ನಿನಗೆ ಸಮನಾದವರಾರಿದ್ದಾರೆ? ಹಾಗಾಗಿ ಈ ಯುದ್ಧವನ್ನು ಗೆದ್ದುಕೊಡು. ನಿಮ್ಮಣ್ಣನಿಗೆ ಇದು ನಿಜವಾಗಿಯೂ ಒಳ್ಳೆಯದು. ಶತ್ರು ಸೇನೆಯನ್ನು ನಾಶಮಾಡು. ಅಣ್ಣನ ಗೋಳಾಟವನ್ನು ಕೇಳಿದ ಕುಂಭಕರ್ಣ ದೊಡ್ಡದಾಗಿ ನಕ್ಕನು. ಆಮೇಲೆ ಹೇಳಿದ. ನಾವು ಹಿಂದೆ ಲಂಕೆಯ ಪ್ರಮುಖರೆಲ್ಲ ಕುಳಿತು ಮಂತ್ರಾಲೋಚನೆ ಮಾಡಿದಾಗ ನಾವು ಹೇಳಿದ್ದೆವು. ನೀನಾಗ ಕೇಳಲಿಲ್ಲ. ನೋಡು ಅದರ ಫಲ ಈಗ ಬಂದಿದೆ. ಮಾಡಿದ್ದುಣ್ಢೋ ಮಹರಾಯ. ಅಣ್ಣ ನಿನಗೆ ನೀನು ಮಾಡಿದ ಪಾಪಕ್ಕೆ ಫಲ ಬೇಗ ಬಂತು. ಸೀತಾಪಹರಣದ ಫಲ. ಮಹಾಪಾತಕಿಗೆ ನರಕಪತನ ನಿಶ್ಚಿತ. ಸೀತಾಪಹರಣದ ಕೃತ್ಯವನ್ನು ಆ ಪಾಪಕಾರ್ಯವನ್ನು ಏಕೆ ಮಾಡಿದೆ? ಹೇಳು. ಆಗ ಆಲೋಚಿಸಿದೆಯ? ನಮ್ಮನ್ನು ಕೇಳಿದೆಯ? ನಮ್ಮೊಡನೆ ಸಮಾಲೋಚನೆ ಮಾಡಿದೆಯ? ನಾನೊಬ್ಬ ವೀರ. ದಕ್ಕಿಸಿಕೊಳ್ಳಬಲ್ಲೆ ಎಂಬ ಭಾವದಲ್ಲಿ ತಾನೆ ಮಾಡಿದ್ದು. ಈ ಕರ್ಮವನ್ನು ಮಾಡಿದರೆ ಏನು ಫಲ ಬರಬಹುದು ಅಂತ ವಿಚಾರ ಮಾಡಿದೆಯ ನೀನು? ಇಲ್ಲ ತಾನೆ. ಮೊದಲು ಮಾಡಬೇಕಾದ ಕೆಲಸವನ್ನು ಕೊನೆಗೆ ಮಾಡುವವನು. ಕೊನೆಗೆ ಮಾಡಬೇಕಾದ ಕೆಲಸವನ್ನು ಮೊದಲು ಮಾಡುವವನು. ಅವನಿಗೆ ಬುದ್ಧಿ ಇದೆ ಅಂತ ಹೇಳ್ತಾರ? ನೀನು ಸೀತಾಪಹರಣ ಮೊದಲು ಮಾಡಿದೆ. ನಂತರ ನಮ್ಮನ್ನು ಸಮಾಲೋಚನೆಗೆ ಕರೆದೆ. ಆಪತ್ತೇ ಬಂದಮೇಲೆ ಸಭೆ ಕರೆದೆ. ಸಾಮಾನ್ಯ ಮನುಷ್ಯನೂ ಮಾಡಬಾರದು ಈ ಕಾರ್ಯವನ್ನು. ಇನ್ನು ಅಧಿಕಾರದಲ್ಲಿರುವವನಂತೂ ಮಾಡಲೇಕೂಡದು. ರಾಜನೀತಿಯನ್ನು ಹೇಳ್ತಾನೆ ಕುಂಭಕರ್ಣ. ತಾನು ಸ್ಥಿರನಾಗಿದ್ದು ವೈರಿ ಕ್ಷೀಣವಾಗಿದ್ದರೆ ಯುದ್ಧ ಮಾಡ್ಬೇಕು. ಶತ್ರುವೇ ಬಲಿಷ್ಟನಾಗಿದ್ದು ತಾನು ದುರ್ಬಲನಾಗಿದ್ದರೆ ಕಾಲಕ್ಕಾಗಿ ಕಾಯಬೇಕು. ಅದಕ್ಕೆ ವೃದ್ಧಿ ಎಂದು ಹೆಸರು. ತಾನು ಮತ್ತು ಶತ್ರು ಇಬ್ಬರೂ ಸಮಬಲರಾದರೆ ಸಂಧಿ ಮಾಡಿಕೊಳ್ಳಬೇಕು.
ಪ್ರೀತಿಮಾತಿನಿಂದ ಕಾರ್ಯಸಾಧನೆ ಮಾಡು. ಕೊಟ್ಟು ಕಾರ್ಯಸಾಧನೆ ಮಾಡು ಅಥವಾ ಪೆಟ್ಟುಕೊಟ್ಟು ಕಾರ್ಯಸಾಧನೆ ಮಾಡು. ಸಾಮ, ದಾನ, ದಂಡ ಈ ಮೂರನ್ನು ಒಂದುಕಡೆ ನಿರೂಪಣೆ ಮಾಡಿ ಯಾವುದೇ ಕೆಲಸವನ್ನು ಪ್ರಾರಂಭ ಮಾಡೋದು ಹೇಗೆ ಅಂತ ಹೇಳ್ತಾನೆ. ಕಾರ್ಯಸಾಧನೆಗೆ ಜನಸಹಕಾರ ಮತ್ತು ಸಾಮಗ್ರಿಗಳು ಏನು ಬೇಕು? ಯಾವಾಗ, ಎಲ್ಲಿ ಮಾಡಬೇಕು? ಏನು ತೊಂದರೆ ಬರಬಹುದು? ಅದಕ್ಕೆ ಪರಿಹಾರವೇನು? ಕಾರ್ಯವು ಹೇಗೆ ಸಿದ್ಧಿಯಾಗ್ತದೆ ಎನ್ನುವುದರ ಅರಿವು ಇರಬೇಕು. ಹಾಗೆ ಮಾಡಿದರೆ ಅವನು ದಾರಿಯಲ್ಲಿದ್ದಾನೆ ಎಂದು ಅರ್ಥ. ಈ ರಾಜ್ಯಶಾಸ್ತ್ರವನ್ನು ಅನುಷ್ಟಾನ ಮಾಡಿದ್ದೀಯಾ ನೀನು? ರಾಜನೀತಿಯ ಪ್ರಕಾರ ಮುಂದುವರೆಯಬೇಕು. ಪೂರ್ವಜರು ಮಾಡಿದ ಕಾರ್ಯಕಾರಣ ನಿಶ್ಚಯವನ್ನು ಪಾಲಿಸಬೇಕು. ಯಾರು ಹಿತವರು ಯಾರು ಹಿತವರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜನಾದವನು ಸಚಿವನನ್ನು ಬುದ್ಧಿಯಿಂದ ನೋಡಬೇಕು. ಧರ್ಮಾರ್ಥಕಾಮದ ಬಗ್ಗೆ ಹೇಳ್ತಾನೆ. ಇವುಗಳನ್ನು ಒಂದೊಂದಾಗಿ ಅಥವಾ ಜೊತೆಯಾಗಿ ಸಮಯಕ್ಕನುಸಾರವಾಗಿ ಮಾಡಬೇಕು. ಮೂರರಲ್ಲಿ ಮುಖ್ಯವಾದದ್ದು ಧರ್ಮ. ಸಮಯ ಬಂದರೆ ಅರ್ಥಕಾಮಗಳನ್ನು ತ್ಯಜಿಸಿಯಾದರೂ ಧರ್ಮವನ್ನು ಆಚರಿಸಬೇಕು. ಇಲ್ಲದಿದ್ದರೆ ಅವನು ಓದಿದ್ದು ನಿಷ್ಪ್ರಯೋಜಕ. ಯಾವ ಕಾರ್ಯಕ್ಕೆ ಮುಂದೆ ಒಳ್ಳೆಯ ಫಲವಿದೆ ಅದನ್ನ ಯೋಚಿಸಿ ಮಾಡಿದವನು ಬದುಕ್ತಾನೆ. ಐದಾರು ಮಾತುಗಳಿಂದ ಚಾಡಿಕೋರರ ಬಗ್ಗೆ ನಿನಗೆ ಸಲಹೆ ಕೊಟ್ಟವರು ಸರಿ ಇಲ್ಲ ಎಂಬುದನ್ನು ನಿರೂಪಿಸ್ತಾನೆ ಕುಂಭಕರ್ಣ. ಅಣ್ಣ ನೀನು ದೊರೆಯಾದವನು ಯಾರನ್ನು ಹತ್ತಿರ ಇಟ್ಟುಕೊಳ್ಳಬೇಕು ಎಂಬ ಪರಿಜ್ಞಾನ ನಿನಗಿರಬೇಕು. ಶಾಸ್ತ್ರಾರ್ಥಗಳನ್ನು ತಿಳಿಯದ ಚಪಲ ಮಾತುಗಳನ್ನಾಡುವವರು ಸೀತಾಪಹರಣದ ಸಲಹೆ ಕೊಟ್ಟಿದಾರೆ ನಿನಗೆ. ಅವರ ಸಲಹೆಯನ್ನು ಏಕೆ ನೀನು ಪಾಲಿಸಿದೆ? ಸೀತಾಪಹರಣವನ್ನೇ ನಿಮಿತ್ತವಾಗಿ ಮಾಡಿಕೊಂಡು ದೇವತೆಗಳು ವಾನರರಾಗಿ ಬಂದು ರಾವಣನನ್ನು ನಾಶ ಮಾಡ್ತಿದಾರೆ.

ಇಷ್ಟನ್ನೂ ಹೇಳಿದ ರಾವಣ. ಮೊದಲು ಶತ್ರು ಯಾರು? ಶತ್ರು ಎಂಥವನು ಎಂಬುದನ್ನು ತಿಳಿದುಕೊಂಡರೆ ಕೆಲಸ ಸುಲಭವಾಗ್ತದೆ. ತಿಳಿಯದಿದ್ದರೆ ಅಂಥವನು ಅನರ್ಥವನ್ನು ಹೊಂದುತ್ತಾನೆ ಎಂದು ಹೇಳಿ ಕೊನೆಯಲ್ಲಿ ತನ್ನ ನಿರ್ಣಯ ಹೇಳಿದ. ನಾನೇ ಮೊದಲು ಹೇಳಿದ್ದೆ ಮಂತ್ರಾಲೋಚನೆ ಸಮಯದಲ್ಲಿ. ನನ್ನ ತಮ್ಮ ವಿಭೀಷಣ ಸಾದ್ಯಂತವಾಗಿ ಹೇಳಬೇಕಾದ್ದನ್ನು ಹೇಳಿದ. ಅದೇ ನಮಗೆ ಹಿತ. ಅದನ್ನೇ ನಾವು ಮಾಡಬೇಕಾದ್ದು. ಸೀತೆಯನ್ನು ಕೊಟ್ಟು, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ತಪ್ಪುಕಾಣಿಕೆಯನ್ನೂ ಕೊಟ್ಟು ಯುದ್ಧದಿಂದ ತಪ್ಪಿಸಿಕೋ ಎಂಬ ಮಾತನ್ನು ವಿಭೀಷಣ ಹೇಳಿದ್ನಲ್ಲ ಅದೇ ಒಳ್ಳೆಯದು, ಮಾಡಬೇಕಾದ್ದು ಅದೇ. ಇಷ್ಟು ಹೇಳಿ ನಿನಗೇನು ತೋಚುತ್ತದೋ ಅದನ್ನೇ ಮಾಡು ಎಂದು ನಿಲ್ಲಿಸಿದ ಕುಂಭಕರ್ಣ.

ಕುಂಭಕರ್ಣನ ಮಾತನ್ನು ಕೇಳಿದ ರಾವಣನಿಗೆ ಬಹಳ ಕಷ್ಟವಾಯಿತು. ಹುಬ್ಬು ಗಂಟಿಕ್ಕಿದ. ಕೋಪದಿಂದ ಈ ಮುಂದಿನ ಮಾತುಗಳನ್ನಾಡಿದ. ನೀನು ನನ್ನ ಗುರುವಾ? ನನಗೇ ಆಚಾರ್ಯನಂತೆ ಉಪದೇಶ ಮಾಡ್ತಿದೀಯಲ? ಕುಂಭಕರ್ಣ ನೀನು ಈ ವಿಷಯದಲ್ಲಿ ಏನು ಹೇಳಿದರೂ ವ್ಯರ್ಥ. ಈಗೇನು ಮಾಡಬೇಕು ಅದನ್ನು ಮಾಡು. ಆಯ್ತು ಕುಂಭಕರ್ಣ ನಾನು ಸೀತಾಪಹರಣ ಮಾಡಿ ತಪ್ಪನ್ನೇ ಮಾಡಿದೆ. ಭ್ರಮೆಯಿಂದಲೋ, ಚಿತ್ತ ಮೋಹದಿಂದಲೋ, ಬಲ ವೀರ್ಯಗಳ ದರ್ಪದಿಂದಲೋ ಮಾಡಿರಬಹುದು. ಈಗ ಅದನ್ನು ಮಾತನಾಡಿ ಪ್ರಯೋಜನವಿಲ್ಲ. ಈಗ ಏನು ಮಾಡೋದು ಸರಿ ಅದನ್ನು ಮಾಡು. ತಪ್ಪೇ ಆಗಿರಬಹುದು. ಪ್ರಾಜ್ಞರಾದವರು ಗತದ ಬಗ್ಗೆ ಚಿಂತಿಸುವುದಿಲ್ಲ. ನಾನು ದೋಷವನ್ನೇ ಮಾಡಿದೆ. ನಿಜ. ನಿನ್ನ ವಿಕ್ರಮದಿಂದ ಆ ತಪ್ಪು ಸರಿಯಾಗುವಂತೆ ಮಾಡು. ಕುಂಭಕರ್ಣ ನಿನಗೆ ನನ್ನಲ್ಲಿ ನಿಜವಾಗಿ ಪ್ರೀತಿಯಿದೆಯಾ? ನಿನ್ನಲ್ಲಿ ಪರಾಕ್ರಮವಿದೆಯಾ? ಲಂಕೆ ಉಳಿಯಬೇಕು ಎನ್ನುವುದಿದೆಯಾ? ಹಾಗಿದ್ದರೆ ಯುದ್ಧ ಮಾಡು. ಈ ಕಥೆಯನ್ನು ನೀನು ಹೇಳಬೇಡ. ನಾನಿದಕ್ಕೆ ಉತ್ತರ ಕೊಡುವವನೂ ಅಲ್ಲ. ನಮಗೆ ಪ್ರೀತಿಪಾತ್ರರೇ ಆಗಿರಲಿ, ತಪ್ಪು ಮಾಡಿರಲಿ, ತಾನು ಮಾಡಿದ ತಪ್ಪಿನಿಂದಲೇ ಕಷ್ಟಕ್ಕೆ ಸಿಲುಕಿಕೊಂಡಿರಲಿ ಸಹಾಯ ಮಾಡ್ತಾರೋ ಇಲ್ವೋ? ಅಂದ್ಮೇಲೆ ನಿನಗೇನು?

ಕುಂಭಕರ್ಣ ನೋಡಿದ ಇವನಿಗೆ ಸಿಟ್ಟು ಬಂದಿದೆ ಅಂತ ಗೊತ್ತಾಯ್ತು. ಧ್ವನಿ ಸಣ್ಣವಾಯಿತು ಕುಂಭಕರ್ಣನದು. ಕ್ಷೋಭೆಯಾಗಿದೆ ರಾವಣನಿಗೆ. ಆಗ ರಾವಣನನ್ನು ಸಮಾಧಾನ ಮಾಡ್ತಾ ಮೆಲ್ಲನೆ ಮಾತಾಡ್ತಾನೆ. ಕೋಪ ಮಾಡಿಕೊಳ್ಳಬೇಡ. ಸಮಾಧಾನದಲ್ಲಿರು. ನಾನು ಹೇಳಿದ್ದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ. ಏನೂ ಚಿಂತೆ ಮಾಡಬೇಡ. ನಾನಿದ್ದೇನೆ. ಯಾರಿಂದ ನಿನಗೆ ಸಂತಾಪವೋ ಅವರೆಲ್ಲರನ್ನೂ ನಾಶಪಡಿಸುವೆ. ನಾನು ಯಾಕೆ ಹೇಳಿದೆನೆಂದರೆ ಕರ್ತವ್ಯ ಅದು. ನೀನು ದೊರೆ ನಾನು ಪ್ರಜೆ. ಆ ನೇರದಲ್ಲಿ ನನ್ನಲ್ಲಿ ಕೇಳಿದಾಗ ಯಾವುದು ಹಿತವೋ, ಯಾವುದು ಒಳ್ಳೆಯದೋ ಹೇಳಬೇಕು ಅದನ್ನು. ಹಾಗಾಗಿ ಹೇಳಿದೆ. ನನ್ನ ಬಂಧು ನೀನು. ಆ ಕಾರಣಕ್ಕಾಗಿ ನಿನಗೇನು ಒಳ್ಳೆಯದು ಅನ್ನಿಸ್ತೋ ಅದನ್ನ ಹೇಳಿದೆ ನಾನು. ಬೇಡ ಅಂದ್ರೆ ಬಿಡು. ಈಗ ನಾನು ಯುದ್ಧ ಮಾಡ್ಬೇಕಲ್ವಾ? ಮಾಡ್ತೇನೆ. ಒಬ್ಬ ಬಾಂಧವ, ಹಿತೈಷಿ ಎಂತಹಾ ಒಂದು ತ್ಯಾಗ ಮಾಡಬಹುದೋ, ಎಂತಹ ಹೋರಾಟ ಮಾಡಬಹುದೋ ಅಂತಹ ಹೋರಾಟ ನಾನು ಯುದ್ಧದಲ್ಲಿ ಮಾಡುವುದು ನೀನು ನೋಡಬಹುದು ಎಂಬುದಾಗಿ ಹೇಳ್ತಾನೆ. ಆಮೇಲೆ ರಾವಣನ ಭಾಷೆಯ ಧಾಟಿಯಲ್ಲಿ ಮಾತಾಡೋದಕ್ಕೆ ಶುರು ಮಾಡ್ತಾನೆ. ಇಂದೇ ಹೋಗಿ ರಣಕಣದಲ್ಲಿ ಯುದ್ಧಕ್ಕೆ ನಿಂತಾಗ ರಾಮ-ಲಕ್ಷ್ಮಣರ ಸಂಹಾರವಾದ ಬಳಿಕ ದಿಕ್ಕಾಪಾಲಾಗಿ ಓಡುವ ಕಪಿಸೇನೆಯನ್ನು ನೋಡ್ಲಿಕ್ಕೆ ಬಾ. ಯುದ್ಧಭೂಮಿಯಿಂದ ರಾಮನ ಶಿರಸ್ಸನ್ನು ನಾನೇ ತರ್ತೇನೆ. ಅದನ್ನು ಕಂಡು ನೀನು ಸುಖಿಯಾಗು. ಸೀತೆಗೆ ದುಃಖವಾಗಲಿ ತೊಂದರೆಯಿಲ್ಲ. ಲಂಕೆಯ ಸರ್ವರಾಕ್ಷಸರು ರಾಮನ ನಿಧನದ ವಾರ್ತೆಯನ್ನು ಕೇಳಿ ಸಂತೋಷಪಡಲಿ. ಯಾರ್ಯಾರ ನೆಂಟರು, ಇಷ್ಟರು, ಅಣ್ಣ, ತಮ್ಮ, ಬಂಧು-ಬಾಂಧವರು ಸತ್ತಿದಾರೋ ಅವರಿಗೆಲ್ಲ ಪ್ರತೀಕಾರ ಮಾಡ್ತೇನೆ ನಾನು. ನೋಡು ಇವತ್ತು ನನ್ನಿಂದ ಪೆಟ್ಟು ತಿಂದು ಧರೆಗುರುಳುವ ಸುಗ್ರೀವನನ್ನು ನೀನು ನೋಡಬಹುದು. ಚಿಂತೆ ಮಾಡಬೇಡ. ನಿನ್ನ ಜೊತೆಗೆ ನಾನಿದ್ದೇನೆ. ಇಷ್ಟೆಲ್ಲ ರಾಕ್ಷಸರಿದ್ದಾರೆ. ಲಕ್ಷ್ಮಣನ, ಕಪಿಸೇನೆಯ ಸಂಹಾರಕ್ಕೆ ಪಣತೊಟ್ಟವರು. ನಿನಗ್ಹೇಗೆ ತೊಂದರೆ ಆಗ್ಲಿಕ್ಕೆ ಸಾಧ್ಯ? ಎಂಬುದಾಗಿ ಹೇಳಿ ತಟ್ಟನೆ ಬಾಯಿಗೆ ಬಂದ ಮಾತನ್ನ ಹೇಳ್ತಾನೆ. ಸರಿಬಿಡು. ಯುದ್ಧಕ್ಕೆ ಹೊರಟೆ, ರಾಮ ಮೊದಲು ನನ್ನನ್ನ ಕೊಲ್ತಾನೆ. ಆಮೇಲೆ ನಿನ್ನನ್ನ ಕೊಲ್ತಾನೆ. ನನ್ನ ಸಾವಿನ ಬಗ್ಗೆ ನನಗೇನು ಬೇಜಾರಿಲ್ಲ. ಬಳಿಕ ಮತ್ತೆ ರಾವಣನಿಗೆ ಸರಿಯಾಗಿ ಮಾತಾಡ್ತಾನೆ. ನನಗೇ ಅಪ್ಪಣೆ ಮಾಡು. ನಾನೇ ನಿನ್ನ ಕಾರ್ಯಸಾಧನೆ ಮಾಡ್ತೇನೆ. ನಿನ್ನ ಶತ್ರುಗಳನ್ನು ನಾನೇ ಧ್ವಂಸ ಮಾಡ್ತೇನೆ. ಇಂದ್ರ, ಅಗ್ನಿ, ವರುಣ, ವಾಯು, ಕುಬೇರನೇ ಬರಲಿ ನಾನು ಈ ಕೆಲಸ ಮಾಡ್ತೇನೆ. ಪರ್ವತ ಗಾತ್ರ ಶರೀರದ, ತೀಕ್ಷ್ಣ ಶೂಲವನ್ನು ಹಿಡಿದಿರುವಂತಹ ನಾನು ಕೋರೆದಾಡೆಗಳನ್ನ ತೋರಿಸಿ ಘರ್ಜನೆ ಮಾಡಿದರೆ ಇಂದ್ರನೂ ಹೆದರಿ ಓಡಿಯಾನು. ಶೂಲವೂ ಬೇಡ. ಬರಿಗೈಯಲ್ಲಿ ನಾನು ಯುದ್ಧಕ್ಕೆ ಹೋದರು ನನ್ನ ಮುಂದೆ ಯುದ್ಧಕ್ಕೆ ಬಂದು ನಿಂತ ಯಾರು ಬದುಕಿಯಾನು? ಗದೆಯಲ್ಲ, ಕತ್ತಿಯಲ್ಲ, ಕೇವಲ ನನ್ನ ಕೈಗಳಿಂದ ಇಂದ್ರನನ್ನು ಕೊಂದೇನು ಎಂಬುದಾಗಿ ಹೇಳಿ, ಮತ್ತೆ ಈ ಮುಷ್ಠಿಯನ್ನು ರಾಮನು ಸಹಿಸುವನಾದರೆ ಆಮೇಲೆ ರಾಮನ ಬಾಣಗಳು ನನ್ನ ರಕ್ತವನ್ನು ಕುಡಿದು ನನ್ನನ್ನು ಕಳುಹಿಸಿ ಕೊಡ್ತವೆ. ಇಷ್ಟು ಹೇಳಿದರೂ ರಾವಣನಿಗೆ ಬುದ್ಧಿ ಬಂದಿಲ್ಲ. ಮತ್ತೆ ಹೇಳ್ತಾನೆ. ನಾನಿದ್ದಾಗ ನಿನಗೆ ಯಾವ ಚಿಂತೆ? ಇದೋ ಹೊರಟೆ ಶತ್ರು ನಾಶಕ್ಕಾಗಿ. ನಿನಗೆ ದೊಡ್ಡ ಕೀರ್ತಿಯನ್ನು, ಯಶಸ್ಸನ್ನು ತಂದುಕೊಡ್ತೇನೆ. ಇಂದ್ರನಿಂದ, ಬ್ರಹ್ಮನಿಂದ ನಿನಗೆ ಭಯವಿರಲಿ, ದೇವತೆಗಳನ್ನು ಕೊಂದು ಧರೆಗುರುಳಿಸ್ತೇನೆ. ಯಮನನ್ನು ಕೊಲ್ಲುವೆ, ಅಗ್ನಿಯನ್ನು ತಿನ್ನುವೆ, ಆದಿತ್ಯನನ್ನು ಭೂಮಿಗೆ ಉರುಳಿಸುವೆ, ಇಂದ್ರನನ್ನೂ ಕೊಲ್ಲುವೆ, ಸಮುದ್ರವನ್ನು ಕುಡಿಯುವೆ. ಪರ್ವತಗಳನ್ನು ನುಚ್ಚುನೂರು ಮಾಡುವೆ, ಭೂಮಿಯನ್ನು ಸೀಳುವೆ. ಬಹುಕಾಲ ಮಲಗಿದ ಕುಂಭಕರ್ಣನ ಪರಾಕ್ರಮವನ್ನು ಪ್ರಪಂಚವು ಇಂದು ಕಾಣಲಿ. ನಾನು ತಿನ್ನುವವರೆಗೆ ನನ್ನನ್ನು ಅವರು ನೋಡ್ತಾ ಇರಲಿ. ಎಂದು ಹೇಳಿ ನೀನು ಸುಖವಾಗಿರು. ನನ್ನಿಂದ ರಾಮಾದಿಗಳ ಸಂಹಾರವಾದ ಬಳಿಕ ಸೀತೆ ನಿನ್ನ ವಶವಾಗ್ತಾಳೆ ಎಂದು ಹೇಳಿ ರಾವಣನನ್ನು ನಂಬಿಸಿದ. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಮಹೋದರನೆಂಬ ರಾಕ್ಷಸ ಹೇಳಿದ್ನಂತೆ. ಕುಂಭಕರ್ಣ ನೀನು ದೊಡ್ಡ ಕುಲದಲ್ಲಿ ಹುಟ್ಟಿದ್ದು ಹೌದು ಆದರೆ ದಾಷ್ಟ್ಯ ಹೆಚ್ಚಾಯಿತು ನಿನ್ನದು. ಗಮಾರನ ಹಾಗಿದೀಯೆ ನೀನು. ನೀನು ಗರ್ವಿಷ್ಟನಾದ್ದರಿಂದ ಯಾರು ಏನು ಎನ್ನುವುದನ್ನು ನಿನಗೆ ಅರ್ಥ ಮಾಡಿಕೊಳ್ಳಲಿಕ್ಕೆ ಆಗ್ತಾಯಿಲ್ಲ. ರಾವಣನಿಗೆ ನೀತಿ ಅನೀತಿಗಳೆಲ್ಲ ಗೊತ್ತಿದೆ. ಶರೀರ ದೊಡ್ಡದಾದರೂ ಬಾಲ್ಯ ನಿನಗೆ. ಹಾಗಾಗಿ ಸುಮ್ನೆ ಹಲುಬ್ತಾ ಇದೀಯೆ. ನೀನು ಹೇಳಿದ ರಾಜ್ಯಶಾಸ್ತ್ರವೆಲ್ಲ ರಾವಣನಿಗೆ ಗೊತ್ತಿಲ್ಲವಾ? ತನ್ನದೂ ಗೊತ್ತು, ಬೇರೆಯವರದೂ ಗೊತ್ತು. ಸುಮ್ಮನಿರು ಸಾಕು ಎಂಬುದಾಗಿ ಮಹೋದರನು ರಾವಣನ ಪ್ರೀತ್ಯರ್ಥವಾಗಿ ಹೇಳಿ, ಆಮೇಲೆ ಹೇಳ್ತಾನೆ ಕುಂಭಕರ್ಣನಿಗೆ. ನೀ ಹೇಳಿದ್ಯಲ್ಲ ಒಬ್ಬನೇ ಹೋಗ್ತೇನೆ ಯುದ್ಧಕ್ಕೆ ಅಂತ ಹಾಗೆ ಮಾಡಬೇಡ. ಏನು ಅಂದ್ಕೊಂಡಿದೀಯೆ ನೀನು? ರಾಮ ಅಂದ್ರೇನು ಅಂತ ಶುರುಮಾಡಿದ ಅವ್ನು. ಗೊತ್ತಾ ನಿನಗೆ? ಜನಸ್ಥಾನದಲ್ಲಿ 14,000ರಾಕ್ಷಸರನ್ನು ಒಂದೂವರೆ ಮುಹೂರ್ತದಲ್ಲಿ ಕೊಂದು ಕಳೆದವನು. ಒಬ್ಬನೇ ಹೋಗುವುದು ಅಂದ್ರೇನು. ಅಲ್ಲಿ ಜನಸ್ಥಾನದಲ್ಲಿ ಪೆಟ್ಟು ತಿಂದು ಲಂಕೆಯಲ್ಲಿ ಈಗಲೂ ಸಾಯದೇ ಉಳಿದಿರುವವರು ಹೆದರಿ ಹೆದರಿ ಬದುಕ್ತಾ ಇದಾರೆ. ಹಾಗಾಗಿ ಸಂಕ್ರುದ್ಧನಾದ ಸಿಂಹನಂತೆ ಇರುವ ರಾಮನ ಜೊತೆಗೆ ಯುದ್ಧಕ್ಕೆ ನೀನೊಬ್ಬನೇ ಹೋಗ್ತೀಯಾ? ಮಲಗಿರುವ ಸರ್ಪವನ್ನು ಎಬ್ಬಿಸ್ತೀಯಾ? ರಾಮನೆಂದರೆ ಹೊತ್ತಿಯುರಿಯುವ ಮೃತ್ಯು? ಅವನ ತಂಟೆಗೆ ನೀನೊಬ್ಬನೇ ಹೋಗ್ತೀಯಾ? ಅಲ್ವೋ, ನಾವೆಲ್ಲಾ ಸೇರಿಕೊಂಡರೂ ಸಂಶಯ ಅವನನ್ನು ಸಾಗಿಹಾಕ್ತೇವೋ ಅಂತ. ರಾಮನ ಸ್ಥಿತಿಯೇನು? ಎಷ್ಟೋ ಯುದ್ಧಗಳನ್ನು ಗೆದ್ದು ಅವನು ವಿಜೃಂಭಿಸ್ತಾ ಇದ್ದಾನೆ. ನಾವು ಸೋತವರು. ಹಾಗಾಗಿ ಇಂಥದ್ದರಲ್ಲಿ ನಾವು ಎಷ್ಟುಕ್ಕೋ ಅಷ್ಟಕ್ಕೆ ಇರಬೇಕು ಹೊರತು ಹೋಗಿ ಅವನನ್ನು ಕೆಣಕುವುದು ಅಂದ್ರೆ ಏನರ್ಥ? ಸಾವಿನ ನಿರ್ಣಯ ಮಾಡಿಕೊಂಡರೆ ಮಾಡುವಂಥ ಕೆಲಸ ಅದು. ನೋಡು ಮನುಷ್ಯಕೋಟಿಯಲ್ಲಿ ಯಾವ ರಾವನಿಗೆ ಸಮನಾದವರು ಯಾರೂ ಇಲ್ಲವೋ, ಯಾರು ಯುದ್ಧದಲ್ಲಿ ಇಂದ್ರನಿಗೂ, ಯಮನಿಗೂ ಮಿಕ್ಕಿದವನೋ ಅಂಥವನ ತಂಟೆಗೆ ಯುದ್ಧದಲ್ಲಿ ಒಬ್ಬರೇ ಹೋಗುವುದು ಮೂರ್ಖತನ. ಇಷ್ಟು ಹೇಳಿ ಒಂದು ಮೂರ್ಖ ಸಲಹೆ ಕೊಡ್ತಾನೆ ಮಹೋದರ ರಾವಣನಿಗೆ. ನೀನಾದರೂ ಯಾಕೆ ಸೀತೆಯನ್ನು ತಂದು ಇಲ್ಲಿಟ್ಟುಕೊಂಡು ಕೂತಿದೀಯೆ? ಸೀತೆಯನ್ನು ವಶಪಡಿಸಿಕೊಳ್ಬೇಕು ಅಂದ್ರೆ ನನ್ನ ಹತ್ತಿರ ಉಪಾಯವಿದೆ. ಕೇಳು. ಸುಲಭವಿದೆ. ನಾನು (ಮಹೋದರ), ವಿಜಿಹ್ವ, ಸಂಘ್ರಾದಿ, ಕುಂಭಕರ್ಣ, ವಿದರ್ಧನ ಯುದ್ಧಕ್ಕೆ ಹೋಗಿ ಅಂತ ಅಪ್ಪಣೆ ಮಾಡು. ರಾಮನ ಮೇಲೆ ಯುದ್ಧ ಮಾಡ್ತಾರೆ ಅಂತ ಘೋಷಣೆ ಮಾಡು. ನಾವು ಹೋಗ್ತೇವೆ ಯುದ್ಧಕ್ಕೆ. ನಾವು ನಮ್ಮ ಕೈಲಾದಷ್ಟು ಯುದ್ಧ ಮಾಡ್ತೇವೆ. ನಾವು ಗೆದ್ದುಬಿಟ್ಟರೆ ಮತ್ತೆ ಉಪಾಯವೇನೂ ಬೇಡ ನಿನಗೆ. ಗೆಲ್ಲಲಿಲ್ಲ ಅಂದ್ರೆ ಹೇಗಾದರೂ ತಪ್ಪಿಸಿಕೊಂಡು ಬರ್ತೇವೆ ನಾವು. ಒಂದಷ್ಟು ಗಾಯವಾಗಿರ್ತದೆ. ಬಂದು ನಾವು ನಿನ್ನ ಮುಂದೆ ಹೇಳ್ತೇವೆ. ನಾವು ರಾಮನನ್ನು ತಿಂದೆವು. ಲಕ್ಷ್ಮಣನನ್ನೂ ಕೂಡ ತಿಂದುಬಿಟ್ಟೆವು ನಾವು ಎಂಬುದಾಗಿ ನಿನ್ನ ಮುಂದೆ ವರದಿ ಕೊಡ್ತೇವೆ ನಾವು. ನೀನು ಸಂತೋಷಪಡು. ನಿನ್ನ ಕಾಲು ಹಿಡಿದುಕೊಳ್ತೇವೆ ನಾವು. ನೀನು ನಮಗೆ ಬೇಕಾದ್ದೆಲ್ಲ ಕೊಟ್ಟುಬಿಡು. ಆಮೇಲೆ ಆನೆ ಮೇಲೆ ಜನರನ್ನು ಕೂರಿಸಿ ಇಡೀ ನಗರವನ್ನು ಘೋಷಣೆ ಮಾಡಿಸಿಬಿಡು. ರಾಮ ಮತ್ತು ಲಕ್ಷ್ಮಣರು ಹತರಾದರು ಸೈನ್ಯವೂ ಕೂಡ ಧ್ವಂಸವಾಗಿದೆ. ಅಷ್ಟಕ್ಕೇ ಬಿಡಬೇಡ. ನಿನ್ನ ಸೈನಿಕರಿಗೆ ಬೇಕಾದಷ್ಟು ದಾನಮಾನಗಳನ್ನು ಮಾಡು. ಆಮೇಲೆ ನೀನು ಒಳ್ಳೊಳ್ಳೆ ಬಟ್ಟೆ ಹಾಕಿಕೋ. ಮಾಲೆಗಳನ್ನು ಹಾಕಿಕೋ. ಸರಿಯಾಗಿ ಕುಡಿ. ಇವೆಲ್ಲವನ್ನೂ ಸೈನಿಕರಿಗೂ ಕೊಡು. ಇಷ್ಟೆಲ್ಲ ಆದಾಗ ಎಲ್ಲ ಕಡೆ ಸುದ್ದಿ ಹರಡ್ತದೆ. ರಾಮ-ಲಕ್ಷ್ಮಣರ ವಧೆಯಾಗಿದೆ. ಕಪಿಸೇನೆಯ ನಾಶವಾಗಿದೆ ಎಂದು ಎಲ್ಲಾ ಕಡೆ ಸುದ್ದಿ ಹರಡಿದ ಮೇಲೆ ಏಕಾಂತದಲ್ಲಿ ಸೀತೆಯನ್ನು ಕರೆಸಿಕೊಂಡು ಅವಳನ್ನು ಪುಸಲಾಯಿಸು. ಧನಧಾನ್ಯಗಳನ್ನು, ಒಡವೆ ವಸ್ತ್ರಗಳನ್ನು, ಅವಳು ಕೇಳಿದ್ದೆಲ್ಲವನ್ನೂ ಕೊಡು. ಭಯ-ಶೋಕಗಳೂ ಸೇರಬೇಕು. ಮುತ್ತು-ರತ್ನಗಳೂ ಸೇರಬೇಕು. ನಿನ್ನ ಮೇಲೆ ಇಷ್ಟವಿಲ್ಲದಿದ್ದರೂ ಬೇರೆ ದಾರಿಯಿಲ್ಲದೇ ಬಂದು ನಿನ್ನ ವಶವಾಗ್ತಾಳೆ. ಅವಳು ಯಾಕೆ ನಿನ್ನನ್ನ ಒಪ್ಕೊಳ್ತಾ ಇಲ್ಲ ಅಂದ್ರೆ ಎಲ್ಲಾ ರೀತಿಯಲ್ಲೂ ರಾಮ ನಿನಗಿಂತ ಶ್ರೇಷ್ಠ ಪತಿ. ಅವನು ಇರೋದ್ರಿಂದ ಅವಳು ನಿನನ್ನ ಒಪ್ಕೊಳ್ತಾ ಇಲ್ಲ. ಅವನು ಇಲ್ಲ ಅಂತಾದ್ಮೇಲೆ ಅವಳು ಅನಿವಾರ್ಯವಾಗಿ ನಿನ್ನ ವಶವಾಗ್ತಾಳೆ. ಅವಳು ಎಳವೆಯಲ್ಲೇ ಅರಮನೆಯಲ್ಲಿದ್ದವಳು, ಅರಮನೆಗೇ ಬಂದು ಸೇರಿದವಳು. ಸುಖವೇ ಅಭ್ಯಾಸ. ಈಗ ಸ್ವಲ್ಪ ದುಃಖ, ಕಷ್ಟಗಳು ಬಂದಿದೆ. ನಿನ್ನಲ್ಲಿ ಸುಖವಿದೆ ಅಂತ ಗೊತ್ತಾದರೆ ಸರ್ವಥಾ ಅವಳು ಬಂದು ನಿನ್ನನ್ನು ಒಪ್ಪಿಕೊಳ್ತಾಳೆ ಎಂದು ಸಲಹೆ ಕೊಟ್ಟ. ನೋಡು ನಾನು ಹೇಳಿದ್ದನ್ನು ಮಾಡೋದು ಒಳ್ಳೆಯದು. ಅಪ್ಪಿತಪ್ಪಿಯೂ ರಾಮನ ಕಣ್ಣಿಗೆ ಕಾಣಿಸಿಕೊಳ್ಳಬೇಡ. ಹಾಗಾಗಿಬಿಟ್ಟರೆ ಅನರ್ಥ. ಅದೇನೂ ಮಾಡದೆ ನಿನ್ನ ಕಾರ್ಯಸಿದ್ಧಿಯಾಗ್ತದೆ. ಏನೂ ತೊಂದರೆಯಿಲ್ಲ. ಹಾಗಾಗಿ ಸುಳ್ಳುಹೇಳಿ ಹೀಗೆ ನಾವು ಸೀತೆಯನ್ನು ವಶಪಡಿಸಿಕೊಳ್ಳಬಹುದು ಎಂಬುದಾಗಿ ಹೇಳ್ತಾನೆ ಮಹೋದರ.

ಹೀಗೆಲ್ಲಾ ಹಲುಬುವ ಮಹೋದರನನ್ನು ಗದರಿದನಂತೆ ಕುಂಭಕರ್ಣ. ಕೂರು ತೆಪ್ಪಗೆ ಅಂತ. ರಾವಣನಿಗೆ ಹೇಳಿದ್ನಂತೆ. ನಿನ್ನ ಸಮಸ್ಯೆಯನ್ನು ನಾನು ಪರಿಹಾರ ಮಾಡ್ಬೇಕು ತಾನೇ? ಚಿಂತೆಯನ್ನು ಬಿಡು. ಹೊರಟೆ ಎಂಬುದಾಗಿ ಹೇಳಿ ಪುನಃ ಮಹೋದರನಿಗೆ ಬೈದನಂತೆ. ಶೂರರಾದವರು ನಿನ್ನಹಾಗೆ ಸುಮ್ಮನೆ ಘರ್ಜನೆ ಮಾಡೋದಿಲ್ಲ. ಮಾಡಿ ತೋರಿಸ್ತಾರೆ. ಮಹೋದರ ನಿನ್ನಂಥ ಬುದ್ಧಿಯಿಲ್ಲದವರ ಮಾತು ಕೇಳಿಯೇ ಹಾಳಾಗಿದ್ದು ಇವನು ಅಂತ ಶುರುಮಾಡಿ ಇದರಿಂದಲೇ ಲಂಕೆ ನಾಶವಾಗಿದ್ದು ಅಂತ ಹೇಳಿ. ಕಾಪುರುಷರು, ಹೇಡಿಗಳು ರಾವಣನಿಗೆ ಏನು ಇಷ್ಟವೋ ಅದನ್ನೇ ಹೇಳ್ತಾಬಂದ್ರಿ ಉದ್ದಕ್ಕೂ. ಸತ್ಯವನ್ನು ಹೇಳಲಿಲ್ಲ, ಸುಳ್ಳನ್ನೇ ಹೇಳ್ತಾಬಂದ್ರಿ ಅವನಿಗೆ ಪ್ರಿಯವಾಗುವಂತೆ. ಪರಿಣಾಮ ಏನು? ಲಂಕೆಯಲ್ಲಿ ಸರ್ವನಾಶ ಕಣ್ಣ ಮುಂದೆ ಬಂದು ನಿಂತಿದೆ. ನೀನು ಮಾಡಿದ ಸಾಧನೆ ಏನು ಹೇಳು? ಲಂಕೆಯಲ್ಲಿ ರಾವಣನೊಬ್ಬನೇ ಉಳಿದಿದ್ದಾನೆ. ಅಷ್ಟು ಮಾಡಿದ್ರಿ ತಾನೆ? ಖಜಾನೆ ಬರಿದಾಯಿತು, ಸೇನೆ ನಾಶವಾಯಿತು. ನೀವು ರಾಜನಿಗೆ ಹಿತರಲ್ಲ. ಹಿತಶತ್ರುಗಳು. ಅದಲ್ಲದಿದ್ದರೆ ಈ ದೊರೆ ಲಂಕೆಗೆ ಪಿಡುಗಾಗಿ ಪರಿಣಮಿಸಿದಾಗ ಮಂತ್ರಿಗಳಿಗೆ ಕರ್ತವ್ಯ ಇರಲಿಲ್ವ? ಮಂತ್ರಿಗಳು ರಾಜನನ್ನು ಸರಿದಾರಿಗೆ ತರಬೇಕಲ್ವ? ಕೊನೆಗೆ ಎಲ್ಲಾ ಸೇರಿ ರಾಜನನ್ನು ನಿಗ್ರಹಿಸಿಯಾದರೂ ಸರಿದಾರಿಗೆ ತರಬೇಕು ಎನ್ನುತ್ತದೆ ರಾಜ್ಯಶಾಸ್ತ್ರ. ನೀವು ಮಾಡಿದ್ದೇನು? ಈವರೆಗೆ ನೀವು ಮಾಡಿದ ದುರ್ನೀತಿ ಏನಿದೆಯೋ ಅದನ್ನು ನಾನು ನನ್ನ ಪರಾಕ್ರಮದಿಂದ ಸರಿಮಾಡ್ಲಿಕ್ಕೆ ಪ್ರಯತ್ನ ಮಾಡ್ತೇನೆ. ಹೊರಟೆ ನಾನು ಎಂಬುದಾಗಿ ಕುಂಭಕರ್ಣ ಹೇಳಿದಾಗ ಸರಿಯಾಗಿ ಹೇಳಿದೆ ಅಂತ ಹೇಳಿದ್ನಂತೆ ರಾವಣ. ತಮ್ಮ ಇವನು ಹೇಡಿ. ಯುದ್ಧಕ್ಕೆ ಹೆದರ್ತಾನೆ. ನಿನಗೆ ಯಾರು ಸಮಾನ? ನನ್ನ ಮೇಲೆ ನಿನಗಿರುವ ಪ್ರೀತಿ ಯಾರಿಗೂ ಇಲ್ಲ. ನಿನಗಿರುವ ಬಲ ಕೂಡ ಯಾವುದೂ ಇಲ್ಲ. ಹಾಗಾಗಿ ನೀನು ಯುದ್ಧ ಮಾಡುವುದು ಸರಿ. ನೀನು ಯುದ್ಧ ಮಾಡಿ ಗೆದ್ದು ಬಂದರೆ ಅದು ಸೂಕ್ತವಾಗಿರುವಂಥದ್ದು. ಹಾಗಾಗಿ ಭಯವನ್ನು ದೂರಮಾಡು. ರಾಕ್ಷಸರು, ನಿನ್ನ ಸ್ನೇಹಿತರು ಅವರು. ಹಾಗಾಗಿ ಅವರ ಮತ್ತು ನಿಮ್ಮಣ್ಣನ ಭಯವನ್ನು ದೂರಮಾಡು. ಆ ನಿನ್ನ ಮಹಾಶೂಲವನ್ನು ಕೈಗೆತ್ತಿಕೊಂಡು ಅಂತಕನಂತೆ ಯುದ್ಧಕ್ಕೆ ಹೊರಡು. ರಾಮ-ಲಕ್ಷ್ಮಣರನ್ನು ಮತ್ತು ವಾನರರನ್ನು ಭಕ್ಷಿಸು. ನಿನ್ನನ್ನು ಕಂಡೊಡನೆಯೇ ವಾನರ ಸೇನೆಯು ಓಡುವುದು. ರಾಮ-ಲಕ್ಷ್ಮಣರ ಎದೆಯೊಡೆಯುವುದು. ಅಂಥಾ ಭಯಂಕರ ರೂಪ ನಿನ್ನದು ಎಂದು ಹೇಳಿ ಖುಷಿಪಟ್ಟನಂತೆ. ಸತ್ತೆ ಎಂದುಕೊಂಡಿದ್ದ ಆದರೆ ಈಗ ಮತ್ತೆ ಹುಟ್ಟಿದೆ ಅನ್ನಿಸಿಬಿಡ್ತಂತೆ ಯಾಕೆಂದರೆ ಕುಂಭಕರ್ಣ ಯುದ್ಧಕ್ಕೆ ಸಿದ್ಧನಾದ. ಇವನು ಕಾರ್ಯಸಾಧನೆ ಮಾಡಿಕೊಂಡು ಬರ್ತಾನೆ ಎಂಬ ಭಾವ ಬಂದಿದ್ದರಿಂದಲಾಗಿ. ಇದ್ದಕಿದ್ದಂತೆ ಚಂದ್ರನಂತೆ ನಿರ್ಮಲನಾದನಂತೆ. ಯುದ್ಧಕ್ಕೆ ಸಿದ್ಧನಾದ ಕುಂಭಕರ್ಣ ಶೂಲವನ್ನು ಕೈಗೆತ್ತಿಕೊಂಡಿದಾನೆ. ರಾವಣನಿಗೆ ಹೇಳಿದನಂತೆ. ಒಬ್ಬನೇ ಹೊರಟೆ. ಇವರ್ಯಾರೂ ಬೇಡ. ಈ ಹೇಡಿಗಳನ್ನೆಲ್ಲ ಕರೆದುಕೊಂಡು ಮಾಡುವುದೆಂತು? ತಿಂದು ಬಿಡ್ತೇನೆ ಎಲ್ಲರನ್ನೂ ಎಂದಾಗ ರಾವಣ ಹೇಳಿದನಂತೆ. ಅವೆಲ್ಲಾ ಬೇಡ. ಸೈನ್ಯವನ್ನು ಕೂಡಿಕೊಂಡು,ಆಯುಧಗಳನ್ನು ತೆಗೆದುಕೊಂಡು ಹೋಗು. ನೀನಂದುಕೊಂಡಷ್ಟು ಸುಲಭವಲ್ಲ ವಾನರರು. ನಿನ್ನ ಗಾತ್ರ ದೊಡ್ಡದು ಅವರ ಗಾತ್ರ ಚಿಕ್ಕದು. ಅಸಂಖ್ಯಾತ ಇರುವೆಗಳು ಒಂದು ದೊಡ್ಡ ಪ್ರಾಣಿಯನ್ನು ಒಟ್ಟಿಗೆ ಮುತ್ತಿದರೆ ಕಚ್ಚಿ ಕೊಂದುಬಿಡ್ತವೆ. ಹಾಗಾಗಿ ಈ ವಾನರರು ಚುರುಕು ಮತ್ತು ಕಾರ್ಯಸಮರ್ಥರು. ನೀನೊಬ್ಬನೆ ಆದಾಗ ನೀನು ಮೈಮರೆತಾಗ ಕಚ್ಚಿಯೇ ಕೊಲ್ಲಬಹುದು ನಿನ್ನನ್ನು. ಹಾಗಾಗಿ ದೊಡ್ಡ ಸೈನ್ಯವನ್ನು ಕೂಡಿಕೊಂಡು ಹೋಗು. ಶತ್ರು ಸೈನ್ಯವನ್ನು ಧ್ವಂಸಮಾಡು ಹೋಗು ಎಂದು ಹೇಳಿ ಅವನಿಗೊಂದು ರತ್ನಗಳ ಮಾಲೆಯನ್ನು ಕಟ್ಟಿದನಂತೆ. ಅಂಗದಗಳು, ಉಂಗುರಗಳು, ಚಂದ್ರವಿಮಲವಾದ ಇನ್ನೊಂದು ಹಾರ, ಸುಗಂಧಭರಿತ ಮಾಲೆಗಳನ್ನು ಹಾಕಿ, ಕಿವಿಗಳಿಗೆ ಒಳ್ಳೆಯ ಕುಂಡಲಗಳನ್ನು ಹಾಕಿದಾಗ ಸರ್ವಾಲಂಕಾರ ಭೂಷಿತನಾಗಿ ಶೋಭಿಸಿದನಂತೆ ಕುಂಭಕರ್ಣ. ಅವನಿಗೆ ಸೊಂಟಕ್ಕೆ ಕಟ್ಟಿದ ದಾರ ಸಮುದ್ರಮಥನದ ಸಮಯದಲ್ಲಿ ಮಂದರ ಪರ್ವತಕ್ಕೆ ಕಟ್ಟಿದ ವಾಸುಕಿಯಂತೆ ಕಾಣ್ತಿತ್ತಂತೆ. ಒಂದು ಕವಚವನ್ನೂ ಹಾಕಿಕೊಂಡು ಸರ್ವಾಭರಣಭೂಷಿತನಾಗಿ, ಶೂಲಪಾಣಿಯಾದ ಕುಂಭಕರ್ಣನು ತ್ರಿವಿಕ್ರಮನಂತೆ ಕಂಡ. ಅಣ್ಣನನ್ನು ಮೆಲ್ಲನೆ ತಬ್ಬಿ ಪ್ರದಕ್ಷಿಣೆ ಬಂದು ಶಿರಸಾ ನಮಸ್ಕಾರ ಮಾಡಿ ಹೊರಟ. ಅಣ್ಣನಾಗಿ ತಮ್ಮನಿಗೆ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟನಂತೆ ರಾವಣ. ಹೊರಟ ಕುಂಭಕರ್ಣ. ಅವನ ಜೊತೆಯಲ್ಲಿ ದೊಡ್ಡ ಸೈನ್ಯವು ಕೂಡ ಹೊರಟಿತು.

ಯಾವ ಶರೀರವನ್ನು ಅವನು ಸ್ವೀಕಾರ ಮಾಡ್ತಾನೆ ಯುದ್ಧಕ್ಕೆ ಹೊರಟಾಗ? ಅವನ ಸ್ವರೂಪ ಹೇಗಿತ್ತು? ವಾನರರು ಅವನನ್ನು ಹೇಗೆ ಎದುರಿಸಿದರು? ಮತ್ತು ಕೊಟ್ಟಕೊನೆಯಲ್ಲಿ ರಾಮನಿಗೂ ಕುಂಭಕರ್ಣನಿಗೂ ಎಂತಹ ದೊಡ್ಡ ಯುದ್ಧ ನಡೆಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments