ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಅವಸರದಲ್ಲಿ ಯಾವುದಾದರೊಂದು ವ್ಯಕ್ತಿಯನ್ನು, ವಸ್ತುವನ್ನು ನಾವು ತಿರಸ್ಕರಿಸಿ ಬಿಡಬಾರದು. ‘ಇವನೇನು ಪ್ರಯೋಜದನವಲ್ಲ, ಇವನಿಂದ ಸ್ವಲ್ಪವೇ ಹೌದು..’ ಎಂಬ ಭಾವನೆಯನ್ನು ನಾವು ಬಹುಬೇಗ ತಾಳಬಾರದು, ವಿವೇಚನೆ ಬೇಕು. ವಿಭೀಷಣ ಬಂದು ಶರಣಾದ ದಿನ ಕಪಿಸೇನೆಗೆ ಇವನ್ಯಾಕೆ? ಇವನಿಂದ ಆಪತ್ತೇ ಆಗಬಹುದು ಎಂದೆನಿಸಿತ್ತು. ಆದರೆ, ಒಂದೇ ಬಾರಿ ನೋಡಿದ ಮಾತ್ರಕ್ಕೆ ಹನುಮಂತನಿಗೆ ವಿಭೀಷಣನ ಮೇಲೆ‌ ತುಂಬ ವಿಶ್ವಾಸವಿತ್ತು. ಒಂದು ಬಾರಿಯೂ ನೋಡದೆ ರಾಮನಿಗೆ ವಿಭೀಷಣನ ಆತ್ಮ ಕಂಡಿತ್ತು! ವಿಭೀಷಣನನ್ನು ಸ್ವೀಕರಿಸಲೇಬೇಕು ಎಂಬ ತೀರ್ಮಾನವನ್ನು ರಾಮನು ತೆಗೆದುಕೊಂಡು ವಿಭೀಷಣನಿಗೆ ಪ್ರವೇಶವನ್ನು ಕೊಡ್ತಾನೆ. ಬರ್ತಾ ಬರ್ತಾ, ವಿಭೀಷಣನ ಮಹತ್ವವೇನು ಎನ್ನುವುದು ಕಪಿಗಳಿಗೆ ಚೆನ್ನಾಗಿ ಅರ್ಥವಾಯ್ತು. ಈಗ, ವಿಭೀಷಣ ತುಂಬ ದೊಡ್ಡ ಕೊಡುಗೆಯನ್ನು ಕೊಡ್ತಾ ಇದ್ದಾನೆ. ಬಾಣದಯುದ್ಧದ ಮೊದಲು ಇಂದ್ರಜಿತು ಮತ್ತು ವಿಭೀಷಣರ ವಾಗ್ಯುದ್ಧ ನಡೀತದೆ. ವಿಭೀಷಣ ಇಂದ್ರಜಿತನ ಮಾತಿಗೆ ತಕ್ಕ ಪ್ರತ್ಯುತ್ತರವನ್ನು ಕೊಡ್ತಾ ಇಂದ್ರಜಿತನಿಗೆ ಅವನಪ್ಪನ ಗುಣ, ದೋಷಗಳ ಪರಿಚಯ ಮಾಡಿಕೊಡ್ತಾನೆ. ಲಕ್ಷ್ಮಣ ಮುಂದೆ ನಿಂತು ಯುದ್ಧಾಹ್ವಾನ ಮಾಡಿದಾಗ ಲಕ್ಷ್ಮಣನ ಜೊತೆ ಸೋಲ್ತೇನೇಂತಾಗಿ ಈಕಡೆ ತಿರುಗಿ ವಿಭೀಷಣನ ಜೊತೆಗೆ ಮಾತಾಡ್ತಾ ಇದ್ದಾನೆ. ಯಾವಾಗ ವಿಭೀಷಣನ ಮಾತುಗಳಿಗೆ ಉತ್ತರ ಕೊಡ್ಲಿಕ್ಕೆ ಸಾಧ್ಯ ಆಗಲಿಲ್ವೋ, ಅದನ್ನು ಬಿಟ್ಟು ಲಕ್ಷ್ಮಣನ ಕಡೆ ತಿರುಗಿದ.

ಯುದ್ಧದ ಮೊದಲು ಒಂದಷ್ಟು ಬಡಾಯಿ ಕೊಚ್ಚಿಕೊಂಡ, ತನ್ನ ಪರಾಕ್ರಮದ ಬಗ್ಗೆ ಹೇಳಿ ಎಚ್ಚರಿಕೆ ಕೊಟ್ಟ. ಆಮೇಲೆ ಲಕ್ಷ್ಮಣನಿಗೆ ನೆನಪು ಮಾಡ್ತಾನೆ, ‘ಯುದ್ಧಾರಂಭದಲ್ಲಿ ನಾನು ನಿಮ್ಮಿಬ್ಬರನ್ನೂ ಎಚ್ಚರ ತಪ್ಪಿಸಿ ಮಲಗಿಸಲಿಲ್ವಾ! ಮರೆತು ಹೋಯ್ತಾ? ಅಥವಾ ಯಮಪುರಿಗೆ ಹೋಗಬೇಕೆಂಬ ಆಸೆಯಾ? ಅದಿಲ್ಲದಿದ್ರೆ ನನ್ನೆದುರು ಬಂದು ನಿಂತೆ ಯಾಕೆ ಯುದ್ಧಕ್ಕೆ?’ ಅಂತ ಹೇಳಿದ. ಲಕ್ಷ್ಮಣನ ಮುಖದಲ್ಲಿ ಭಯದ ಯಾವ ಸುಳಿವೂ ಕೂಡ ಇಲ್ಲ‌. ಲಕ್ಷ್ಮಣ ಧೀರೋದಾತ್ತವಾಗಿ ಇಂದ್ರಜಿತನಿಗೆ ಹೇಳ್ತಾನೆ, ‘ದೂರದ ತೀರದ ಮಾತಾಡಿದೆ. ನೀನು ಈಜಿ ಹೋಗಿ ತಲುಪ್ತಕ್ಕಂತಾ ತೀರ ಅಲ್ಲ ಅದು. ಇಷ್ಟೆಲ್ಲ ಮಾತಾಡಿದವನು, ಅಂದು ನೀನು ಮಾಡಿದ್ದು ಕಳ್ಳರ ದಾರಿ ಹೊರತು ವೀರರ ದಾರಿಯಲ್ಲ. ವೀರ ಪುರುಷನಾದವನು ನೇರವಾಗಿ ಯುದ್ಧವನ್ನು ಮಾಡ್ತಾನೆ. ಇಂದು ಮಾಯಾ ಯುದ್ಧಕ್ಕೆ ಅವಕಾಶ ಕೊಡೋದಿಲ್ಲ. ಈಗ ತೋರಿಸು ನಿನ್ನ ನಿಜವಾದ ಸಾಮರ್ಥ್ಯವನ್ನು’ ಎಂಬುದಾಗ ಹೇಳಿದಾಗ ತನ್ನ ಭಯಂಕರವಾದ ಧನುಸ್ಸನ್ನು ಮೇಲೆತ್ತಿ ತೀಕ್ಷ್ಣವಾದ ಬಾಣಗಳನ್ನು ಲಕ್ಷ್ಮಣನ ಮೇಲೆ ಪ್ರಯೋಗ ಮಾಡ್ತಾನೆ. ಆ ಬಾಣಗಳು ಲಕ್ಷ್ಮಣನನ್ನು ಭೇದಿಸಿದವು, ರಕ್ತ ಚಿಮ್ಮಿತು. ಇಂದ್ರಜಿತು ನಾಲ್ಕು ಬಾಣಗಳನ್ನು ಬಿಟ್ಟು ಲಕ್ಷ್ಮಣನ ಬಗ್ಗೆಯೂ ರಾಮನ ಬಗ್ಗೆಯೂ ಹಗುರ ಮಾತುಗಳನ್ನಾಡಿದ. ಆಗ ಲಕ್ಷ್ಮಣ ಹೇಳಿದನಂತೆ, ‘ನಿನ್ನ ಭಾಷಣ ಕೇಳಲಿಕ್ಕೆ ನಾನಿಲ್ಲಿ ಬಂದವನಲ್ಲ, ನಿನ್ನ ಕೈಚಳಕವನ್ನು ಕಾಣಲಿಕ್ಕೆ ಬಂದವನು. ನೂರು ಮಾತಾಡುವ ಮೊದಲು ನಾಲ್ಕು ಜೆಲಸ ಮಾಎಇ ತೋರಿಸು. ನಾನು ಯಾವ ಕೆಟ್ಟ ಮಾತನ್ನೂ ಆಡೋದಿಲ್ಲ ನಿನ್ನ ವಿಷಯದಲ್ಲಿ, ಬಾಣದ ಮೂಲಕ ಮಾತಾಡ್ತೇನೆ.’ ಎಂದು ಐದು ಬಾಣಗಳನ್ನು ಇಂದ್ರಜಿತುವಿನ ಎದೆಯಲ್ಲಿ ನೆಟ್ಟ ಲಕ್ಷ್ಮಣ. ಪ್ರತ್ಯುತ್ತರವಾಗಿ ಲಕ್ಷ್ಮಣನಿಗೆ ಮೂರು ಬಾಣಗಳನ್ನು ಪ್ರಯೋಗಿಸಿದ. ಇಬ್ಬರೂ ಬಲಸಂಪನ್ನರು, ವಿಕ್ರಮಶಾಲಿಗಳು, ಸರ್ವ ಶಸ್ತ್ರಾಸ್ತ್ರ ಕೋವಿದರು. ಎರಡು ಸಿಂಹಗಳಂತೆ ಯುದ್ಧ ಮಾಡ್ತಾರೆ! ಒಬ್ಬರ ಮೇಲೊಬ್ಬರು ಬಾಣದ ಮಳೆಗರೀತಾ ಇದ್ದಾರೆ.

ಏತನ್ಮಧ್ಯೆ ಒಂದು ತೀಕ್ಷ್ಣವಾದ ಬಾಣವನ್ನು ಆಕರಣಾಂತ ಸೆಳೆದು ಇಂದ್ರಜಿತನ ಮೇಲೆ ಪ್ರಯೋಗ ಮಾಡ್ತಾನೆ ಲಕ್ಷ್ಮಣ. ಆಗ ಸರ್ಪದಂತೆ ಬುಸುಗುಟ್ಟಿದನಂತೆ ಲಕ್ಷ್ಮಣ. ಮೇಘನಾದ ಬಾಣದ ಪೆಟ್ಟನ್ನು ತಿಂದ. ಲಕ್ಷ್ಮಣನ ಧನುಷ್ಠೇಂಕಾರದ ನಾದ ಯಾಕೋ ಅಪಶಕುನದಂತೆ ಕೇಳಿತು ಇಂದ್ರಜಿತುವಿಗೆ. ನಿಸ್ತೇಜನಾಗಿ ಅರಳು ಕಣ್ಗಳಿಂದ ಲಕ್ಷ್ಮಣನನ್ನು ನೋಡಿದನು ಇಂದ್ರಜಿತು. ಅವನನ್ನು ನೋಡಿದ ವಿಭೀಷಣ ಹೇಳ್ತಾನೆ, ‘ಲಕ್ಷ್ಮಣಾ, ಇವನ ಮುಖ, ದೇಹದ ಲಕ್ಷಣಗಳನ್ನು ನೋಡು, ತ್ವರೆ ಮಾಡು.. ಈಗ ನೀನು ಸರಿಯಾಗಿ ಯುದ್ಧ ಮಾಡಿದರೆ ಇಂದ್ರಜಿತು ಮುರಿದು ಬೀಳ್ತಾನೆ, ಸಂಶಯವಿಲ್ಲ. ಪೂರ್ಣಶಕ್ತಿಯಿಂದ ಯುದ್ಧಮಾಡು’ ಎಂದಾಗ ಸೌಮಿತ್ರಿ ಆ ಮಾತನ್ನು ಸ್ವೀಕಾರ ಮಾಡಿ ಬೆಂಕಿಯ ಜ್ವಾಲೆಗಳನ್ನು ಹೋಲುವ ಬಾಣಗಳನ್ನು ಪ್ರಯೋಗ ಮಾಡ್ತಾನೆ. ಆ ಬಾಣಗಳನ್ನು ಎದುರಿಸಲು ಸಾಧ್ಯವಾಗದ ಇಂದ್ರಜಿತು ಎಚ್ಚರ ತಪ್ಪಿ ಬಿದ್ದ. ಕೊಂಚ ಹೊತ್ತಿನ ಬಳಿಕ ಎದ್ದು ನೋಡಿದ. ಸೋಲು ರೋಷವನ್ನು ತರಿಸಿತು. ಲಕ್ಷ್ಮಣನ ಬಳಿಸಾರಿ ಒಂದಷ್ಟು ಕಠೋರ ಮಾತುಗಳನ್ನು ಆಡಿ ಏಳು ಬಾಣಗಳಿಂದ ಲಕ್ಷ್ಮಣನನ್ನು ಭೇದಿಸಿದ. ಹತ್ತು ಬಾಣಗಳಿಂದ ಹನುಮಂತನನ್ನು (ಹನುಮಂತನ ಮೇಲೆ ಕುಳಿತು ಯುದ್ಧ ಮಾಡ್ತಾ ಇದ್ದ ಲಕ್ಷ್ಮಣ) ಭೇದಿಸಿದ. ಮಾತ್ರವಲ್ಲ, ನೂರು ಬಾಣಗಳಿಂದ ವಿಭೀಷಣನನ್ನೂ ಭೇದಿಸಿದ ಇಂದ್ರಜಿತು. ಅದನ್ನು ಕಂಡ ಲಕ್ಷ್ಮಣ, ಕೆಲವು ಘೋರ ಬಾಣಗಳನ್ನು ಕೈಗೆತ್ತಿಕೊಂಡು ಇಂದ್ರಜಿತುವಿನ ಮೇಲೆ ಬಾಣಗಳ ಮಳೆಗರೆದ. ಪರಿಣಾಮ, ಇಂದ್ರಜಿತುವಿನ ಅಭೇದ್ಯ ಕವಚವು ತುಂಡು ತುಂಡಗಾಗಿ ಬಿದ್ದುಬಿಟ್ಟಿತು; ಗಾಯಗಳೂ ಆದವು.‌

ಮೇಘನಾದನು ಕೋಪದಿಂದ, ನಾನೂ ಇದನ್ನೇ ಮಾಡ್ತೇನೆ ಎಂಬುದಾಗಿ ಹೇಳಿ ಸಾವಿರ ಬಾಣಗಳಿಂದ ಲಕ್ಷ್ಮಣನನ್ನು ಪ್ರಹರಿಸಿದ. ಪರಿಣಾಮವಾಗಿ ದಿವ್ಯವಾದ ಲಕ್ಷ್ಮಣನ ಕವಚವೂ ಕೂಡ ಕಡಿದು ಬಿತ್ತು. ಇಬ್ಬರೂ ಯುದ್ಧ ಮಾಡ್ತಾರೆ, ಇಬ್ಬರಿಗೂ ನಖಶಿಖಾಂತ ಗಾಯಗಳಾಗಿವೆ. ಸುದೀರ್ಘಕಾಲ ಇಬ್ಬರೂ ಪರಸ್ಪರರನ್ನು ಬಾಣಗಳಿಂದ ಕೆತ್ತಿದರು. ಮೂರು ಹಗಲು ಮೂರು ರಾತ್ರಿ ಈ ಯುದ್ಧ ನಡೆದಿದೆ, ಮಧ್ಯೆ ವಿಶ್ರಾಂತಿಯಿಲ್ಲ. ನಡೆಯುತ್ತಲೇ ಇದೆ ಯುದ್ಧ, ಇಬ್ಬರೂ ಹಿಮ್ಮೆಟ್ಟಲಿಲ್ಲ. ಪರಸ್ಪರ ಬಗೆಬಗೆಯ ಅಸ್ತ್ರಗಳನ್ನೂ, ಉತ್ತಮೋತ್ತಮ ಬಾಣಗಳೂ ಪ್ರಯೋಗಿಸ್ತಾರೆ. ದೋಷವಿಲ್ಲದ ಯುದ್ಧವೈಖರಿ. ಇಬ್ಬರೂ ಲಘುವಾಗಿ, ವಿಚಿತ್ರವಾಗಿ ಮತ್ತು ಚೆನ್ನಾಗಿ ಯುದ್ಧ ಮಾಡ್ತಾ ಇದ್ದಾರೆ. ಬಾಣಗಳ ರಾಶಿ ಬಿದ್ದಿದೆ, ದೇಹಗಳು ಕೆಂಪಾಗಿವೆ. ಸಮರಾಯಾಸವೂ ಇಲ್ಲ, ಯುದ್ಧ ವೈಮುಖ್ಯವೂ ಇಲ್ಲ. ಮತ್ತಷ್ಟು ಕಾಲ ಕಳೆದು ಹೋಯಿತು.
ಏತನ್ಮಧ್ಯೆ, ವಿಭೀಷಣ ಲಕ್ಷ್ಮಣನ ಹತ್ತಿರ ಬಂದು ನಿಂತುಕೊಂಡನಂತೆ, ಲಕ್ಷ್ಮಣನ ಸಮರದ ಶ್ರಮವನ್ನು ಪರಿಹಾರ ಮಾಡುವ ಸಲುವಾಗಿ. ಮಾತ್ರವಲ್ಲ, ತನ್ನ ನಾಲ್ವರು ಸಚಿವರ ಸಹಿತನಾಗಿ ತಾನೂ ರಾಕ್ಷಸರೊಡನೆ ಘನಘೋರ ಯುದ್ಧವನ್ನೇ ಮಾಡ್ತಾ ಇದ್ದಾನೆ. ಧನುಷ್ಠೇಂಕರಿಸಿ ಹರಿತವಾದ ಸಾವಿರ ಸಾವಿರ ಬಾಣಗಳನ್ನು ರಾಕ್ಷಸರ ಮೇಲೆ ಪ್ರಯೋಗಿಸಿ ಒಂದೊಂದು ಬಾಣದಿಂದಲೂ ಸಾವಿರಾರು ರಾಕ್ಷಸರನ್ನು ಉರುಳಿಸಿದ. ವಿಭೀಷಣನ ಅನುಚರರೂ ಕೂಡ ರಾಕ್ಷಸರನ್ನು ಕಡಿದು ಚೆಲ್ಲಿದರು. ಸಮಯೋಚಿತವಾಗಿ ಇಂದ್ರಜಿತುವಿನ ಅನುಚರರರನ್ನು ಸಂಹರಿಸುವಂತೆ ವಾನರ ಸೇನೆಯನ್ನು ಬಡಿದೆಬ್ಬಿಸಿದನು ವಿಭೀಷಣ.

ವಾನರ ನಾಯಕರು ಸಿದ್ಧರಾಗಿ ರಾಕ್ಷಸರ ಮೇಲೆ‌ ಮುಗಿಬಿದ್ದರು. ಜಾಂಬವಂತ ಮುಂದೆ ನಿಂತು ಕರಡಿಗಳನ್ನು ಕೂಡಿಕೊಂಡು ಕಲ್ಲು-ಬಂಡೆ, ಹಲ್ಲುಗಳು, ಉಗುರುಗಳಿಂದ ರಾಕ್ಷಸಸೇನೆಯನ್ನು ಧ್ವಂಸ ಮಾಡ್ತಾನೆ. ಎಲ್ಲಾ ರಾಕ್ಷಸರು ಜಾಂಬವಂತನನ್ನು ಸುತ್ತುವರೆದು ಬಾಣ ಪ್ರಯೋಗ ಮಾಡ್ತಾರೆ. ಜಾಂಬವಂತ ಹೆದರದೆ ತನ್ನ ತಾಕತ್ತೇನೆಂದು ರಾಕ್ಷಸರಿಗೆ ತೋರಿಸಿಕೊಡ್ತಾನೆ. ಇಂದ್ರಜಿತು ಲಕ್ಷ್ಮಣನ ಬಿಟ್ಟು ವಿಭೀಷಣನ ಕಡೆಗೆ ಹೋಗಿ ಯುದ್ಧ ಮಾಡ್ತಾನೆ. ಹನುಮಂತ ಲಕ್ಷ್ಮಣನನ್ನು ಇಳಿಸಿ ತಾನೂ ಯುದ್ಧಕ್ಕೆ ಹೊರಟು ಘನಘೋರ ಯುದ್ಧ ಮಾಡಿ ರಾಕ್ಷಸ ಸೇನೆಯನ್ನು ಧ್ವಂಸ ಮಾಡ್ತಾ ಇದ್ದಾನೆ. ಅತ್ತ ವಿಭೀಷಣ ಘೋರ ಯುದ್ಧವನ್ನೇ ಮಾಡಿದ್ದಾನೆ ಇಂದ್ರಜಿತುವಿನೊಂದಿಗೆ. ಅವನನ್ನು ಬಿಟ್ಟು ಮತ್ತೆ ಲಕ್ಷ್ಮಣನ ಕಡೆಗೆ ಬಂದ ಇಂದ್ರಜಿತು. ಇಬ್ಬರೂ ಒಬ್ಬರನ್ನೊಬ್ಬರು ತಮ್ಮ ಕೈಚಳಕದಿಂದ ಬಾಣ ಜಾಲದ ಮೂಲಕ ಮರೆಮಾಡಿಬಿಟ್ಟರು ತುಂಬ ವೇಗದಲ್ಲಿ. ಕೊಂಚ ಹೊತ್ತಿನಲ್ಲಿ ಯುದ್ಧಭೂಮಿಯಲ್ಲಿ ಬಾಣಗಳು ಮಾತ್ರ ಕಂಡವು. ಮುಂದೇನಾಗ್ತದೋ ಎಂಬ ಕಾತುರ ಯುದ್ಧದಲ್ಲಿ. ಸ್ವಲ್ಪ ಹೊತ್ತಿನಲ್ಲಿ ಆಕಾಶವನ್ನು ಬಾಣಗಳು ಮುಚ್ಚಿ ಕತ್ತಲು ಕವಿಯಿತು. ರಕ್ತದ ಹೊಳೆ ಹರಿಯಿತು, ವಿಶ್ವವು ಭೀತವಾಯಿತು, ಗಾಳಿ ಬೀಸಲಿಲ್ಲ, ಅಗ್ನಿ ಜ್ವಲಿಸಲಿಲ್ಲ. ಬ್ರಹ್ಮರ್ಷಿಗಳು ಪ್ರಪಂಚಕ್ಕೆ ಶುಭವಾಗಲಿ ಎಂದು ಆಶೀರ್ವಚನ ಮಾಡ್ತಾರೆ. ಗಂಧರ್ವ ಚಾರಣರು ಯುದ್ಧ ನೋಡಲಿಕ್ಕೆ ಬಂದವರು ಹೆದರಿ ಪಲಾಯನ ಮಾಡಿದರು!

ಏತನ್ಮಧ್ಯೆ ಲಕ್ಷ್ಮಣನು ಮೇಘನಾದನ ನಾಲ್ಕು ಕುದುರೆಗಳನ್ನು ಪ್ರಹರಿಸ್ತಾನೆ. ಇನ್ನೊಂದು ಕೊಂಕು ಬಾಣದಿಂದ ಇಂದ್ರಜಿತ‌ನ ಸಾರಥಿಯ ತಲೆಯನ್ನು ಹಾರಿಸಿದ‌ನು. ಆಗ ಇಂದ್ರಜಿತು ತಾನೇ ಸಾರಥ್ಯವನ್ನು ಮಾಡ್ತಾ ಯುದ್ಧವನ್ನು ಮಾಡ್ತಾನೆ. ಲಕ್ಷ್ಮಣ ಕುದುರೆಗಳನ್ನು ನಡೆಸುವಾಗ ಇಂದ್ರಜಿತನ ಮೇಲೆ ಬಾಣಪ್ರಯೋಗ ಮಾಡ್ತಾನೆ. ಇಂದ್ರಜಿತು ಧನುಸ್ಸನ್ನು ಹಿಡಿದಾಗ ಕುದುರೆಗಳ ಮೇಲೆ ಬಾಣಪ್ರಯೋಗ ಮಾಡ್ತಾನೆ. ಹೀಗೆ ರಾಶಿ ರಾಶಿ ಬಾಣಗಳನ್ನು ಪ್ರಯೋಗಿಸಿದಾಗ ಒಂದು ಹಂತದಲ್ಲಿ ಮೇಘನಾದನು ಮತ್ತೆ ಸಪ್ಪೆಯಾದನು. ಯುದ್ಧ ಹರ್ಷವು ಕಳೆಯಿತು. ವಿಷಾದ ಆವರಿಸಿ, ಹಿಮ್ಮೆಟ್ಟಿದ. ಅದನ್ನು ಕಂಡು ವಾನರನಾಯಕರು ಮತ್ತು ವಿಭೀಷಣ ಲಕ್ಷ್ಮಣನನ್ನು ಅಭಿನಂದಿಸ್ತಾರೆ. ಏತನ್ಮಧ್ಯೆ ನಾಲ್ವರು ವಾನರನಾಯಕರು ವೇಗವನ್ನು ತಾಳಿ ಮುನ್ನುಗ್ಗಿದರು, ಮೇಘನಾದನ ಕುದುರೆಯ ಮೇಲೆ ಹತ್ತಿ ಕುಳಿತುಕೊಂಡ್ರು. ಆ ಕಪಿನಾಯಕರು ಹತ್ತಿ ಕುಳಿತು ಅಮುಕಿದಾಗ ಆ ಕುದುರೆಗಳು ರಕ್ತಕಾರಿ ಸತ್ತುಹೋದವು. ರಥವನ್ನು ಮುರಿದರು. ಮತ್ತೆ ಲಕ್ಷ್ಮಣನ ಪಕ್ಕ ಬಂದು ನಿಂತರು. ಬೇರೆ ದಾರಿಯಿಲ್ಲದೆ ಇಂದ್ರಜಿತ‌ನು ರಥದಿಂದ ಭೂಮಿಗೆ ಧುಮುಕಿದ. ಅಲ್ಲಿಂದ ಬಾಣಗಳ ಪ್ರಯೋಗ ಮಾಡ್ತಾನೆ ಲಕ್ಷ್ಮಣನ ಮೇಲೆ. ಅವುಗಳನ್ನು ತುಂಡರಿಸಿ ಎಸೆದ ಲಕ್ಷ್ಮಣ.

ಕಪಿಗಳು ಲಕ್ಷ್ಮಣನನ್ನು ಬಿಟ್ಟುಕೊಡಲಿಲ್ಲ, ರಾಕ್ಷಸರು ಮೇಘನಾದನನ್ನು ಬಿಟ್ಟುಕೊಡಲಿಲ್ಲ. ಪ್ರಾಣದ ಹಂಗು ತೊರೆದು ಹೋರಾಡಿದರು ಎರಡೂ ಕಡೆಯ ಸೈನಿಕರು. ಇಂದ್ರಜಿತು ತನ್ನ ಸೈನಿಕರನ್ನು ವಾನರರೊಡನೆ ಘನಘೋರ ಯುದ್ಧ ಮಾಡುವಂತೆ ಪ್ರಚೋದಿಸ್ತಾನೆ, ಹೊಸ ರಥವನ್ನು ತಂದುಕೊಳ್ಳುವ ಸಲುವಾಗಿ. ರಾಕ್ಷಸರನ್ನು ಮುಂದಿಟ್ಟು ಮೆಲ್ಲನೆ ಪರಾರಿಯಾದ. ಲಂಕೆಯೆಡೆಗೆ ಹೋಗಿ ಹೊಸ ರಥವನ್ನು ತಜ್ಞನಾದ ಸಾರಥಿಯೊಂದಿಗೆ ತೆಗೆದುಕೊಂಡು ಲಂಕೆಯಿಂದ ಹೊರಗೆ ಬಂದ. ಬೆರಗಾದರು ಲಕ್ಷ್ಮಣ ವಿಭೀಷಣರು! ಇಂದ್ರಜಿತು ನೂರಾರು ಸಾವಿರಾರು ಕಪಿಗಳನ್ನು ಕೊಂದು ಕಳೆದ. ಕಪಿಗಳಿಗೆ ಬಹಳ ಕ್ಲೇಶವಾಗಿ ರಕ್ಷಣೆಗಾಗಿ ಲಕ್ಷ್ಮಣನ ಕಡೆಗೆ ಓಡಿ ಶರಣಾದರು. ಲಕ್ಷ್ಮಣ ತನ್ನ ಕೈಚಳಕವನ್ನು ತೋರಿಸ್ತಾ ಕ್ಷಣಮಾತ್ರದಲ್ಲಿ ಇಂದ್ರಜಿತುವಿನ ಧನುಸ್ಸನ್ನು ಕಡಿದೊಗೆದ. ಬೇರೆ ಧನುಸ್ಸನ್ನು ತೆಗೆದುಕೊಂಡು ಹೆದೆಯೇರಿಸಿದ, ಅದನ್ನೂ ತುಂಡು ಮಾಡಿದ ಲಕ್ಷ್ಮಣ ಐದು ಘೋರ ಬಾಣಗಳಿಂದ ಇಂದ್ರಜಿತನನ್ನು ಭೇದಿಸಿದ. ಬಾಯಿಂದ ರಕ್ತ ಕಾರುತ್ತಲೇ ಮತ್ತೊಂದು ಬಲವಾದ ಧನುಸ್ಸನ್ನು ಕೈಗೆತ್ತಿಕೊಂಡು ಬಾಣಗಳ ಮಳೆಗೆರೆದ ಇಂದ್ರಜಿತು ಲಕ್ಷ್ಮಣನ ಮೇಲೆ. ಅದನ್ನು ತಡೆದು ತುಂಡರಿಸಿದ ಲಕ್ಷ್ಮಣ. ಲಕ್ಷ್ಮಣ ತನ್ನ ಮುಂದಿದ್ದ ಎಲ್ಲಾ ರಾಕ್ಷಸರಿಗೆ ಮೂರು ಮೂರು ಬಾಣಗಳನ್ನು ಪ್ರಯೋಗಿಸ್ತಾನೆ. ಅನೇಕಾನೇಕ ಬಾಣಗಳಿಂದ ಇಂದ್ರಜಿತುವನ್ನೂ ಪ್ರಹರಿಸ್ತಾನೆ‌. ಆಗ ಇಂದ್ರಜಿತನ ಮತ್ತೊಂದು ಸಾರಥಿಯ ತಲೆಯನ್ನೂ ಕತ್ತರಿಸಿದ ಲಕ್ಷ್ಮಣ ಕುದುರೆಗಳನ್ನು ಕಂಗೆಡಿಸ್ತಾನೆ. ಇಂದ್ರಜಿತು ಹತ್ತು ಬಾಣಗಳನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸ್ತಾನೆ, ಆ ಬಾಣಗಳು ಸೌಮಿತ್ರಿಯ ಕವಚಕ್ಕೆ ತಾಗಿ ಬಿದ್ದವು. ಆಗ ಇಂದ್ರಜಿತು ಲಕ್ಷ್ಮಣನ ಹಣೆಗೆ ಮೂರು ಬಾಣಗಳನ್ನು ಪ್ರಯೋಗಿಸ್ತಾನೆ. ಐದು ಬಾಣಗಳನ್ನು ಲಕ್ಷ್ಮಣನು ಇಂದ್ರಜಿತನ ಮುಖದಲ್ಲಿ ಬೇರೆ ಬೇರೆ ಕಡೆಗಳಲ್ಲಿ ನೆಡ್ತಾನೆ.

ಇಂದ್ರಜಿತುವು ಮೂರು ಬಾಣಗಳಿಂದ ವಿಭೀಷಣನ ಮುಖಕ್ಕೆ ಪ್ರಹರಿಸ್ತಾನೆ. ಆಮೇಲೆ ಎಲ್ಲ ವಾನರರ ಮೇಲೆ ಒಂದೊಂದು ಬಾಣ ಪ್ರಯೋಗಿಸ್ತಾನೆ‌. ವಿಭೀಷಣ ಸಿಟ್ಟಿನಿಂದ ತನ್ನ ಗಧೆಯನ್ನು ಮೇಲೆತ್ತಿ ನಾಲ್ಕು ಕುದುರೆಗಳನ್ನು ಕೊಂದ. ಮತ್ತೆ ರಥದಿಂದ ಭೂಮಿಗೆ ಧುಮುಕಿದ ಇಂದ್ರಜಿತು ರಥಶಕ್ತಿ ಎಂಬ ಆಯುಧ ಕೈಗೆತ್ತಿ ತನ್ನ ಚಿಕ್ಕಪ್ಪನನ್ನು ಪ್ರಯೋಗಿಸ್ತಾನೆ. ಆಗ ಲಕ್ಷ್ಮಣ ಮುಂದೆ ಬಂದು ತನ್ನ ಬಾಣಗಳಿಂದ ರಥಶಕ್ತಿಯನ್ನು ಹತ್ತು ಚೂರುಗಳಾಗಿ ಕೆಡವ್ತಾನೆ. ವಿಭೀಷಣ ಅವನ ಎದೆಯ ಮೇಲೆ ಘೋರವಾದ ಐದು ಬಾಣಗಳನ್ನು ಪ್ರಯೋಗಿಸ್ತಾನೆ.
ಈಗ ಅಸ್ತ್ರ ಯುದ್ಧ ಪ್ರಾರಂಭ! ಇಂದ್ರಜಿತು ವಿಭೀಷಣನ ಮೇಲೆ ಯಮದತ್ತವಾದ ಬಾಣ ಪ್ರಯೋಗಿಸ್ತಾನೆ. ಪ್ರತಿಯಾಗಿ ಕುಬೇರದತ್ತವಾದ ಬಾಣವೊಂದನ್ನು ಲಕ್ಷ್ಮಣ ಪ್ರಯೋಗ ಮಾಡ್ತಾನೆ. ಎರಡೂ ಭಗ್ನಗೊಂಡವು. ಹೀಗೆ ಅಸ್ತ್ರ-ಪ್ರತ್ಯಸ್ತ್ರಗಳ ಪ್ರಯೋಗವಾಗ್ತವೆ. ಈ ಸಮಯದಲ್ಲಿ ಲಕ್ಷ್ಮಣನ ರಕ್ಷೆಗಾಗಿ ಗಗನದಲ್ಲಿ ಅವನ ಸುತ್ತ ದಿವ್ಯಶಕ್ತಿಗಳು ನೆಲೆದವು. ಈಗ ಒಂದು ವಿಶೇಷವಾದ, ಬೆಂಕಿಯಂತಿದ್ದ ಬಾಣವನ್ನು ತೆಗೆದು ಧನುಸ್ಸಿನಲ್ಲಿ ಹೂಡಿದ ಲಕ್ಷ್ಮಣ. ತಡೆಯಲಾರದ, ಸಹಿಸಲಾರದ, ರಾಕ್ಷಸರ ಪಾಲಿಗೆ ಭಯಂಕರವಾದ, ಸರ್ಪದ ವಿಷದಂತಿದ್ದ ಆ ಬಾಣಕ್ಕೆ ಐಂದ್ರಾಸ್ತ್ರವನ್ನು ಅಭಿಮಂತ್ರಿಸಿದ ಲಕ್ಷ್ಮಣ ಬಾಣವನ್ನು ಸಂಭೋದಿಸಿ, ‘ಎಲೈ ಬಾಣವೇ, ನಮ್ಮ ಪ್ರಭು ದಾಶರಥೀ ರಾಮನು ಧರ್ಮಾತ್ಮನಾಗಿ, ಸತ್ಯಸಂಧನಾಗಿ ಇರುವುದೇ ಹೌದಾದರೆ, ಪುರುಷೋತ್ತಮ ಹೌದಾದರೆ, ಕೊಲ್ಲು ಇಂದ್ರಜಿತುವನ್ನು’ ಎಂದು ಹೇಳಿ ಕಿವಿಯ ವರೆಗೆ ಸೆಳೆದು ಇಂದ್ರಜಿತನ ಮೇಲೆ ಪ್ರಯೋಗಿಸಿದನು. ಐಂದ್ರಾಸ್ತ್ರ ಯುಕ್ತವಾದ ಆ ಬಾಣವು ಅತಿಶಯದ ವೇಗದಲ್ಲಿ ಮುಂದೆ ಚಲಿಸಿ ಇಂದ್ರಜಿತುವಿನ ಎಲ್ಲ ಪ್ರತಿಕ್ರಿಯೆಗಳನ್ನು ನಿಷ್ಕ್ರಿಯಗೊಳಿಸಿ ಆ ಬಾಣವು ಇಂದ್ರಜಿತುವಿನ ಶಿರಸ್ಸನ್ನು ಅಪಹರಿಸಿ ಧರೆಯಲ್ಲಿ ಬೀಳಿಸಿತು. ಶರೀರವೂ ಉರುಳಿ ಬತ್ತು. ವಾನರರೆಲ್ಲ ಒಮ್ಮೆಲೆ ದೊಡ್ಡದಾಗಿ ಕೂಗಿಕೊಂಡರಂತೆ. ಆಕಾಶದಲ್ಲಿಯೂ ದೇವತೆಗಳ ಜಯಕಾರ! ರಾಕ್ಷಸ ಸೈನ್ಯವಿಡೀ ದಿಕ್ಕು ದಿಕ್ಕಿಗೆ ಪಲಾಯನ ಮಾಡಿತು.

ಶಾಂತವಾಯಿತು ಲೋಕ, ಒಂದು ದೊಡ್ಡ ಪೀಡೆ ತೊಲಗಿತು. ಸ್ವಯಂ‌ ಇಂದ್ರನೇ ಸಂತೋಷಪಡ್ತಾನೆ. ದೇವ ದುಂದುಭಿಗಳು ಮೊಳಗಿದವು, ಅಪ್ಸರೆಯರು ನೃತ್ಯ ಮಾಡಿದರು, ಗಂಧರ್ವರು ಹಾಡಿದರು, ಪುಷ್ಪವೃಷ್ಟಿಯಾಯಿತು. ಇತರೆಡೆಯ ದೈತ್ಯ ದಾನವರೂ ಇವನ ಸಾವಿನಿಂದ ಸಂತೋಷ ಪಡ್ತಾರೆ. ಹೀಗೆ ಪ್ರಪಂಚವೇ ನಿರ್ಮಲವಾಯಿತು. ದೇವತೆಗಳು ‘ಇನ್ನು ಬ್ರಾಹ್ಮಣರು ನಿಶ್ಚಿಂತೆಯಿಂದ ಜಗತ್ತನ್ನು ಸಂಚರಿಸಲಿ’ ಎಂದು ಉದ್ಘರಿಸಿದರು. ವಾನರ ನಾಯಕರು, ವಿಭೀಷಣ, ಜಾಂಬವಂತರೆಲ್ಲರೂ ಮೆಚ್ಚಿ ಹೊಗಳಿದರು ಲಕ್ಷ್ಮಣನನ್ನು. ಕಪಿಸೇನೆ ತನ್ನ ಬಾಲವನ್ನು ಬಡಿದು, ಲಕ್ಷ್ಮಣನಿಗೆ ಜಯಕಾರ ಮಾಡುತ್ತಾ ಆಚರಿಸಿತು ಲಕ್ಷ್ಮಣನ ವಿಜಯವನ್ನು. ಸೇನೆಯು ರಾಮನಿರುವಲ್ಲಿಗೆ ಮರಳಿದರು. ಬೇಗಬೇಗನೆ ರಾಮನ ಬಳಿಸಾರಿ ರಾಮನ ಬಳಿ ಹೋಗಿ ನಿಂತುಕೊಂಡನಂತೆ ಲಕ್ಷ್ಮಣ. ಏನಾಯ್ತು ಎಂಬುದನ್ನು ಅಸ್ಪಷ್ಟವಾಗಿ ಹೇಳಿದ. ಆಗ ಹೃಷ್ಟನಾದ ವಿಭೀಷಣ ಏನಾಯಿತೆಂದು ವಿವರಿಸಿ ಸ್ಪಷ್ಟವಾಗಿ ಹೇಳ್ತಾನೆ. ಆಗ ಹೋಲಿಕೆ ಮಾಡಲಾಗದ ಆನಂದವು ರಾಮನಿಗೆ ಉಂಟಾಯಿತು. ‘ಲಕ್ಷ್ಮಣಾ, ಸಂತುಷ್ಟನಾದೆ ಈ ನಿನ್ನ ಕಾರ್ಯದಿಂದ. ಯುದ್ಧವನ್ನು ನೀನೇ ಗೆದ್ದುಬಿಟ್ಟೆ. ಇಂದ್ರಜಿತುವಿನ ನಾಶವೆಂದರೆ ಅದು ರಾಮನ ಗೆಲುವೇ’ ಹೀಗೆಂದು ಹೇಳಿ ಲಕ್ಷ್ಮಣನನ್ನು ಬಳಿ ಕರೆದು ನೆತ್ತಿಯನ್ನು ಆಘ್ರಾಣಿಸಿ ತೊಡೆಯಲ್ಲಿ ಕೂರಿಸಿಕೊಂಡ. ಲಕ್ಷ್ಮಣನನ್ನು ಗಾಢವಾಗಿ ಆಲಿಂಗಿಸ್ತಾನೆ. ಮತ್ತೆ ಮತ್ತೆ ಪ್ರೀತಿಯಿಂದ ನೋಡ್ತಾನೆ ರಾಮ‌. ಆಗ ಕಂಡವು ಗಾಯಗಳು ಮೈತುಂಬಾ. ಬೇಸರವಾಯ್ತು ರಾಮನಿಗೆ, ನಿಟ್ಟುಸಿರು ಬಿಟ್ಟ. ಬಳಿಕ ಮತ್ತೊಮ್ಮೆ ನೆತ್ತಿಯನ್ನು ಆಘ್ರಾಣಿಸಿ, ಮೈಯೆಲ್ಲಾ ಮುಟ್ಟಿ ಹೇಳಿದನಂತೆ, ‘ಅಸಾಧ್ಯವಾದ ಕಾರ್ಯವನ್ನು ಮಾಡಿದೆ. ಮಹಾಮಂಗಲವನ್ನೇ ಮಾಡಿದೆ. ರಾವಣಪುತ್ರನ ವಧೆಯಾಯಿತು, ಗೆದ್ದೆ ನಾನು!’ ಏಕೆಂದರೆ ರಾವಣನಿಗಿಂತ ದೊಡ್ಡ ಕಂಟಕ ಇಂದ್ರಜಿತುವೇ ಎಂಬ ಭಾವ ಇದೆ. ‘ರಾವಣನ ಬಲಗೈ ಕತ್ತರಿಸಲ್ಪಟ್ಟಿತು. ವಿಭೀಷಣ-ಹನುಮಂತರು ದೊಡ್ಡಕಾರ್ಯವನ್ನೇ ಮಾಡಿದ್ದಾರೆ. ಅಂತೂ ಇಂತು ಹೇಗೋ ಮಾಡಿ ಮೂರು ಹಗಲು, ಮೂರು ರಾತ್ರಿ ಸೇರಿ ಕೊಂದು ಕೆಡವಿದಿರಿ, ನಾನು ನಿಶ್ಶತ್ರುವಾದೆ. ಇನ್ನು ರಾವಣ ಬರ್ತಾನೆ. ಬರಲಿ, ಅವನನ್ನು ನಾನೇ ಸಂಹಾರ ಮಾಡ್ತೇನೆ’ ಎಂಬುದಾಗಿ ಹೇಳಿದ.

ನಂತರ, ‘ಲಕ್ಷ್ಮಣಾ, ನೀನಿರುವಾಗ ನನಗೆ ಭೂಮಿಯೂ ದುರ್ಲಭವಲ್ಲ, ಸೀತೆಯೂ ದುರ್ಲಭಳಲ್ಲ’ ಎಂಬುದಾಗಿ ಲಕ್ಷ್ಮಣನನ್ನು ಮಾತನಾಡಿಸಿ ಕಪಿವೈದ್ಯ ಸುಷೇಣನನ್ನು ಕರೆದು ಲಕ್ಷ್ಮಣ, ವಿಭೀಷಣರಿಗೆ ಮತ್ತು ಇಡೀ ಸೇನೆಗೆ ಚಿಕಿತ್ಸೆ ಮಾಡಲು ಆಜ್ಞೆ ಮಾಡಿದ. ಸುಷೇಣ ಔಷಧ ಪ್ರಾರಂಭಿಸಿದ. ಲಕ್ಷ್ಮಣನಿಗೆ ಪರಮೌಷಧಿಯನ್ನು ಮೂಗಿನ ಮೂಲಕ ಕೊಡ್ತಾನೆ. ಆಗ ಆ ಗಂಧವನ್ನು ಆಘ್ರಾಣಿಸಿದ ಲಕ್ಷ್ಮಣ. ವೇದನೆ ಕಡಿಮೆಯಾಯಿತು, ಗಾಯ ಮಾಗಿತು. ಎಲ್ಲರಿಗೂ ಚಿಕಿತ್ಸೆ ಮಾಡ್ತಾನೆ ಸುಷೇಣ. ಕೊಂಚ ಹೊತ್ತಿನಲ್ಲಿಯೇ ಎಲ್ಲರೂ ಮತ್ತೆ ಮೊದಲಿನಂತೆ ಆಗ್ತಾರೆ‌. ಹೀಗೆ ಸೌಮಿತ್ರಿಯ ಅಪೂರ್ವ ಸ್ಥಿತಿಯನ್ನು ಕಂಡಾಗ ಎಲ್ಲರೂ ಸಂತೋಷ ಪಡ್ತಾರೆ, ಇಂದ್ರಜಿತುವಿನ ಸಂಹಾರವನ್ನು ಮೆಲುಕಿ ಹಾಕಿ ಭಾರೀ ಸಂತೋಷಪಡ್ತಾರೆ.
ಅಲ್ಲಿ ರಾವಣನ ಕಥೆ ಏನಾಗಿದೆ? ಸುದ್ದಿ ಕೇಳಿ ಪ್ರಜ್ಞೆ ತಪ್ಪಿ ಎಷ್ಟು ಹೊತ್ತಾದರೂ ಎಚ್ಚರವಾಗ್ಲಿಲ್ಲ.

ಮುಂದೇನಾಯಿತು…? ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments