ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಲಕ್ಷ್ಮಣನು ಬಾಣಕ್ಕೆ ಹೇಳಿದ ಮಾತು. ಯಾವ ಬಾಣದಿಂದ ಲಕ್ಷ್ಮಣನು ಮೇಘನಾದನನ್ನು ಸಂಹರಿಸಿದನೋ ಆ ಬಾಣವನ್ನು ಧನುಸ್ಸಿಗೆ ಹೂಡಿದಾಗ ಬಾಣವನ್ನೇ ಸಂಬೋಧಿಸಿ ಈ ಮಾತನ್ನು ಹೇಳ್ತಾನೆ. ಎಲೈ ಬಾಣವೇ! ಮೇಘನಾದನನ್ನು ಕೊಲ್ಲು. ರಾಮನು ಧರ್ಮಾತ್ಮ ಹೌದಾದರೆ, ಸತ್ಯಸಂಧ ಎಂಬುದು ಹೌದಾದರೆ, ರಾಮನು ಪೌರುಷದಲ್ಲಿ ಪ್ರತಿದ್ವಂದ್ವ ಇಲ್ಲದೇ ಇರತಕ್ಕಂತವನು ಎನ್ನುವುದು ಹೌದಾದರೆ ಇಂದ್ರಜಿತುವನ್ನು ಕೊಲ್ಲು. ಒಂದು ಬಗೆಯಲ್ಲಿ ರಾಮನ ಧರ್ಮಾತ್ಮತ್ವವನ್ನು ಪಣಕ್ಕೊಡ್ಡಿದಂತೆ, ಸತ್ಯತ್ವವನ್ನು ಪಣಕ್ಕೊಡ್ಡಿದಂತೆ, ಪೌರುಷವನ್ನೇ ಪಣಕ್ಕೊಡ್ಡಿದಂತಾಗಿದೆ. ಹಾಗೆ ಒಡ್ಡಬಹುದಾದರೆ ನಂಬಿಕೆ ಅದು. ಲಕ್ಷ್ಮಣನಿಗೆ ಅದು ಹೌದು ಅಂತ ಗೊತ್ತು. ಹಾಗಾಗಿ ಈ ವಾಕ್ಯವೇ ಲಕ್ಷ್ಮಣನ ಕಾರ್ಯಸಾಧನೆ ಮಾಡಿಕೊಟ್ಟಿತು. ಬಾಣವು ಇಂದ್ರಜಿತುವನ್ನು ಕೊಲ್ಲಲಿಕ್ಕೆ ಈ ವಾಕ್ಯವು ಕಾರಣವಾಯಿತು. ಜೀವವೆಲ್ಲ ಕೊನೆಯಲ್ಲಿ ಎಲ್ಲಿ ಹೋಗಿ ತಲುಪಬೇಕು ಅದು ಸತ್ಯ. ಆ ಸತ್ಯವನ್ನು ಸೇರಲು ಯಾವುದು ಮಾರ್ಗವಾಗ್ತದೋ ಅದು ಧರ್ಮ. ರಾಮನೆಂದರೆ ಸತ್ಯವೂ ಹೌದು. ಧರ್ಮವೂ ಹೌದು. ಅವನೇ ಲಕ್ಷ್ಯ, ಅವನೇ ಮಾರ್ಗ. ಪೌರುಷ ಪುರುಷಭಾವ. ಪರಮಪುರುಷ ಅವನೊಬ್ಬನೇ. ಚೇತನವಲ್ಲ ಮಹಾಚೇತನ ಹೌದಾದರೆ, ಆತ್ಮವಲ್ಲ ಪರಮಾತ್ಮ ಎಂಬುದು ಹೌದಾದರೆ ಇಂದ್ರಜಿತುವನ್ನು ಕೊಲ್ಲು. ಆ ಬಾಣ ಕೆಲಸ ಮಾಡಿದೆ. ಹಾಗಾಗಿ ರಾಮನ ಈ ಸ್ವರೂಪವನ್ನು ಇಂದ್ರಜಿತುವನ್ನು ಕೊಂದ ಲಕ್ಷ್ಮಣನ ಬಾಣವು ಸ್ಥಾಪಿಸಿದೆ. ಈ ಬಾಣದ ಮೂಲಕವಾಗಿ ಲಕ್ಷ್ಮಣನು ರಾವಣಿ(ರಾವಣನ ಮಗ) ಇಂದ್ರಜಿತುವನ್ನು ಕೊಂದ. ರಾವಣನ ಮಗನನನ್ನು ರಾಮನ ತಮ್ಮ ಸಂಹಾರ ಮಾಡಿದ. ಅದಕ್ಕೆ ರಾವಣನ ತಮ್ಮನೇ ದಾರಿಯಾದ. ಇಂದ್ರಜಿತುವಿನ ವಧೆ. ಕಾರಣ ವಿಭೀಷಣ. ಪರಿಣಾಮ ಭಯಂಕರವಾಯಿತು. ರಾವಣನಿಗೆ ಇಂದ್ರಜಿತುವಿನ ವಧೆಯ ವಾರ್ತೆ ತಲುಪಿತು. ರಾವಣನ ಸಚಿವರು ಇಂದ್ರಜಿತುವಿನ ವಧೆಯನ್ನು ವ್ಯಥೆಯಿಂದ ಒಡಗೂಡಿ ಹೇಳಿದವರಾದರು. ಲಕ್ಷ್ಮಣನು ನಿನ್ನ ಮಗನನ್ನು ಸಂಹಾರ ಮಾಡಿದನು. ನಿನ್ನ ತಮ್ಮ ವಿಭೀಷಣನ ಸಹಾಯದಿಂದ. ರಾವಣನ ಪಾಲಿಗದು ಅತ್ಯಂತ ಭಯಾನಕ ವಾಕ್ಯವಾಯಿತು. ದಾರುಣವಾದ ಇಂದ್ರಜಿತುವಿನ ವಧೆಯು ರಾವಣನು ಕತ್ತಲ ಲೋಕವನ್ನು ಪ್ರವೇಶ ಮಾಡುವಂತಾಯಿತು. ಕಣ್ಣು ಕತ್ತಲಿಟ್ಟಿತು. ಪ್ರಪಂಚ ಕಾಣಲಿಲ್ಲ. ಎಷ್ಟೋ ಹೊತ್ತು ಈ ಲೋಕದ ಬೋಧವೇ ಇಲ್ಲದೆ ರಾವಣನು ಹಾಗೇ ಬಿದ್ದಿದ್ದ. ಎಚ್ಚೆತ್ತಾಗ ಆ ಪುತ್ರಶೋಕವು ಮತ್ತೆ ಅವನನ್ನು ಕಾಡಿತು. ಇಂದ್ರಜಿತುವಿನ ಕುರಿತು ರಾವಣನು ಬಹಳವಾಗಿ ವಿಲಪಿಸಿದನು. ಕಾಲಾಂತಕರನನ್ನು ಭೇಧಿಸಬಲ್ಲವನು, ಮಂದರದ ಶೃಂಗಗಳನ್ನು ಚೂರು ಚೂರು ಮಾಡಬಲ್ಲಂತವನು ಹೇಗೆ ಲಕ್ಷ್ಮಣನನ್ನು ಏನೂ ಮಾಡಲಾರದಾದ? ಎಂದು ಹೇಳಿ ವೈವಸ್ವತ ಯಮ ನಿಜಕ್ಕೂ ದೊಡ್ಡವನು. ಯಮಲೋಕಕ್ಕೆ ಹೋಗಿ ಧಾಳಿ ಮಾಡಿ ಯಮನನ್ನು ಸೋಲಿಸಿ ಅಲ್ಲಿರುವ ಪ್ರೇತಗಳನ್ನೆಲ್ಲ ಸೋಲಿಸಿದವನು ಅವನಿಂದು ಯಮನ ಶ್ರೇಷ್ಟತ್ವವನ್ನು ಒಪ್ಪಿಕೊಳ್ತಾ ಇದಾನೆ. ಯಮನು ನಿನ್ನನ್ನು ಸೆಳೆದೊಯ್ದ ಎಂದ ಮೇಲೆ ಯಮನು ದೊಡ್ಡವನೇ ಹೌದು ಎಂಬುದಾಗಿ ಹೇಳಿ, ದೇವತೆಗಳು ಸುಖವಾಗಿ ನಿದ್ದೆ ಮಾಡ್ತಾರೆ ಇವತ್ತು, ದೇವತೆಗಳಿನ್ನು ನಿರ್ಭಯರಾದರು. ಋಷಿಗಳು ನಿಶ್ಚಿಂತರಾದರು, ನಿರ್ಭೀತರಾದರು. ನನಗೆ ಪ್ರಪಂಚ ಶೂನ್ಯ. ಒಬ್ಬ ಇಂದ್ರಜಿತನೂ ಇಲ್ಲದಾದ ಮೇಲೆ ಈ ಜಗತ್ತೇ ಇಲ್ಲದಂತೆ ಆಗ್ತಾ ಇದೆ ನನಗೆ ಎಂಬುದಾಗಿ ಹೇಳಿ, ಕಲ್ಪಿಸ್ಕೊಳ್ತಾನೆ. ಅಂತಃಪುರದಲ್ಲಿ ರಾಕ್ಷಸಿಯರ ಕಣ್ಣೀರ ಹೊಳೆ ಹೇಗೆ ಹರಿಯಬಹುದು ಎಂದು. ಎಲ್ಲ ಬಿಟ್ಟು ಹೋದೆ ಮಗನೇ.. ಯೌವ್ವರಾಜ್ಯವನ್ನು, ಲಂಕೆಯನ್ನು, ರಾಕ್ಷಸರನ್ನು, ತಾಯಿಯನ್ನು, ನಿನ್ನ ಪತ್ನಿಯನ್ನು, ನನ್ನನ್ನು ಬಿಟ್ಟು ಎಲ್ಲಿ ಹೊರಟುಹೋದೆ? ನಾನು ಸತ್ತ ಬಳಿಕ ನನ್ನ ಪ್ರೇತಕಾರ್ಯವನ್ನು ನೀನು ಮಾಡಬೇಕಿತ್ತು, ಈಗ ನಿನ್ನ ಪ್ರೇತಕಾರ್ಯವನ್ನು ನಾನು ಮಾಡುವ ಪರಿಸ್ಥಿತಿ. ಹೀಗಾಯ್ತಲ್ಲ. ಸುಗ್ರೀವ ಇನ್ನೂ ಜೀವಂತ ಇದ್ದಾಗ, ಲಕ್ಷ್ಮಣ ಇನ್ನೂ ಜೀವಂತ ಇದ್ದಾಗ, ರಾಮನೂ ಇನ್ನೂ ಜೀವಂತ ಇದ್ದಾಗ ನನ್ನ ಸಮಸ್ಯೆಯನ್ನು ಪರಿಹಾರ ಮಾಡದೇ ಎಲ್ಲಿಗೆ ಹೊರಟುಹೋದೆ? ಎಂಬುದಾಗಿ ಶೋಕಿಸಿದ. ಬಳಿಕ ಅವನ ಮಹಾಶೋಕವು ಮಹಾಕ್ರೋಧವಾಗಿ ಪರಿವರ್ತಿತವಾಯಿತು.

ಹುಬ್ಬುಗಳನ್ನು ಗಂಟಿಕ್ಕಿದ. ಪ್ರಳಯಕಾಲದಲ್ಲಿ ಲೋಕವನ್ನು ಮುಳುಗಿಸಿ ಮೇಲೆದ್ದ ಮಹಾಸಾಗರದ ಮೊಸಳೆಗಳು ಮತ್ತು ಅಲೆಗಳಂತೆ. ಇವನು ಮಹಾಸಾಗರದಂತೆ, ಹುಬ್ಬುಗಳು ಮೊಸಳೆಗಳಂತೆ ಮತ್ತು ಅಲೆಗಳಂತೆ ಕಂಡುಬಂದವು. ಕೋಪದಿಂದ ಬಾಯ್ದೆರೆದಾಗ ಹೊಗೆಸಹಿತವಾದ ಬೆಂಕಿ ಹೊರಬಂತು. ಕೋಪದ ಪರಾಕಾಷ್ಟೆಯಲ್ಲಿ ರಾಮನನ್ನಂತೂ ಸಂಹಾರ ಮಾಡಲಾಗದು ಸೀತೆಯನ್ನೇಕೆ ಸಂಹರಿಸಬಾರದು ಅನ್ನಿಸಿಬಿಡ್ತಂತೆ ರಾವಣನಿಗೆ. ಕಣ್ಣುಗಳು ಇನ್ನಷ್ಟು ಕೆಂಪಾದವು. ಕೋಪಾಶ್ರು ಬಂತಂತೆ. ದಂತಗಳನ್ನು ಕಟಕಟನೆ ಕಡಿದನಂತೆ. ಹೀಗೆ ಪ್ರಳಯಾಗ್ನಿಯಂತೆ ಕ್ರುದ್ಧನಾಗಿ ರಾವಣನು ಯಾವ ಯಾವ ದಿಕ್ಕಿನ ಕಡೆ ನೋಡಿದನೋ ಅಲ್ಲಿದ್ದ ರಾಕ್ಷಸರೆಲ್ಲ ಅಡಗಿದರಂತೆ. ಲೋಕತ್ರಯವನ್ನು, ಚರಾಚರಪ್ರಪಂಚವನ್ನು ತಿನ್ನಹೊರಟ ಅಂತಕನು ಹೇಗೆ ಕ್ರುದ್ಧನಾಗಿರ್ತಾನೋ ಹಾಗೆ ಕ್ರುದ್ಧನಾಗಿದಾನೆ ರಾವಣ. ಅವನ ಹತ್ತಿರ ಯಾರೂ ಸುಳಿಯಲೇ ಇಲ್ಲ. ಈ ರಾವಣ ರಾಕ್ಷಸರಿಗೆ ಕೆಲವು ಮಾತುಗಳನ್ನು ಹೇಳ್ತಾನೆ. ಸಾವಿರಸಾವಿರ ವರ್ಷ ತಪಸ್ಸು ಮಾಡಿದೇನೆ ನಾನು. ಬ್ರಹ್ಮನನ್ನು ಸಂತೋಷಪಡಿಸಿದ್ದೇನೆ. ಆ ತಪಸ್ಸಿನ ಫಲವಾಗಿ ಬ್ರಹ್ಮನು ಸಂತೃಪ್ತನಾಗಿ ನನಗೆ ವರ ಕೊಟ್ಟಿದಾನೆ. ಅಸುರರಿಂದಲೂ, ದೇವತೆಗಳಿಂದಲೂ ನಿನಗೆ ಭಯವಿಲ್ಲ. ಬ್ರಹ್ಮ ಕೊಟ್ಟ ಅಭೇದ್ಯ ಸೂರ್ಯಪ್ರಭೆಯ ಕವಚ, ಎಷ್ಟೋ ಸಾರಿ ದೇವತೆಗಳ ಜೊತೆಗೆ, ರಾಕ್ಷಸರ ಜೊತೆಗೆ ಸೆಣಸಾಡಿದಾಗಲೂ ಕೂಡ ಅವರ ಅಸ್ತ್ರ-ಶಸ್ತ್ರಗಳಿಂದಲೂ ಕೂಡ ಆ ಕವಚವು ಭಿನ್ನವಾಗಿಲ್ಲ. ಆ ಕವಚವನ್ನು ತೊಟ್ಟು ನಾನಿಂದು ಯುದ್ಧಕ್ಕೆ ನಿಂತರೆ ನನ್ನ ಮುಂದೆ ಯಾರು ನಿಲ್ಲುವವನು? ಇಂದ್ರನಿಗೂ ಸಾಧ್ಯವಿಲ್ಲ. ಆ ನನ್ನ ಧನುಸ್ಸು ಮತ್ತು ಬಾಣ ಅದು ಬ್ರಹ್ಮ ಕೊಟ್ಟಿದ್ದು. ಇಲ್ಲಿವರೆಗೆ ಮುಟ್ಟಿಲ್ಲ. ಇಂದು ನೂರು ತೂರಿಗಳನ್ನು ಊದಿ ಆ ಧನುಸ್ಸನ್ನು ಮೇಲೆತ್ತಿ ಅದನ್ನು ಹಿಡಿದು ಯುದ್ಧ ಮಾಡ್ತೇನೆ. ರಾಮ-ಲಕ್ಷ್ಮಣರ ಸಂಹಾರಕ್ಕಾಗಿ ಪರಮಸಮರಕ್ಕೆ ಮುಂದಾಗ್ತೇನೆ ಎಂಬುದಾಗಿ ಹೇಳ್ತಿದಾನೆ. ಆದರೆ ಮನಸ್ಸು ಮಾತ್ರ ಅಶೋಕವನಕ್ಕೆ ಹೋಗಿ ಸೀತೆಯನ್ನು ವಧಿಸಿದರೆ ಹೇಗೆ ಎನ್ನುವುದರಲ್ಲಿಯೇ ಇದೆ. ಸುತ್ತಮುತ್ತಲಿರುವ ರಾಕ್ಷಸರನ್ನು ನೋಡ್ತಿದಾನೆ. ಕಣ್ಣುಗಳು ಕ್ರೋಧದಿಂದ ಕೆಂಪಾಗಿವೆ. ಸ್ವರ ದೀನವಾಗಿದೆ. ನನ್ನ ಮಗ ಕಪಿಗಳನ್ನು ವಂಚಿಸುವ ಸಲುವಾಗಿ ಸುಮ್ಮನೇ ಸೀತೆಯನ್ನು ಸಂಹರಿಸಿದಂತೆ ತೋರಿಸಿದ. ನಿಜವಲ್ಲ ಅದು ಮಾಯೆ. ನಾನು ನಿಜವಾದ ಸೀತಾವಧೆಯನ್ನು ಮಾಡ್ತೇನೆ. ಆ ಕ್ಷತ್ರಿಯನನ್ನು ಬಿಟ್ಟು ನನ್ನನ್ನು ತಿರುಗಿಯೂ ನೋಡ್ತಿಲ್ಲ ಎಂಬುದಾಗಿ ಹೇಳಿ ಖಡ್ಗವನ್ನು ಹಿಡಿದ. ಅಶೋಕವನದ ಕಡೆಗೆ ಧಾವಿಸಿದ. ಅವನ ಹಿಂದೆ ಅವನ ಹೆಂಡತಿಯರೂ ಓಡಿಬಂದರು. ಸಚಿವರೂ ಓಡಿಬಂದರು. ಆಗ ಉಳಿದ ರಾಕ್ಷಸರು ಸಿಂಹನಾದ ಮಾಡಿದರಂತೆ. ಈ ಮಹಾಕ್ರೋಧಕ್ಕೆ ಏನಾದರೂ ಆಗಬಹುದು. ಇವನನ್ನು ನೋಡಿ ರಾಮಲಕ್ಷ್ಮಣರು ಇವತ್ತು ಭಯಪಡ್ತಾರೆ. ವ್ಯಥಿಸ್ತಾರೆ. ಒಂದು ಕಾಲದಲ್ಲಿ ಲೋಕಪಾಲಕರನ್ನ ಗೆದ್ದವನು, ಎಷ್ಟೆಲ್ಲ ಶತ್ರುಗಳನ್ನು ಧ್ವಂಸ ಮಾಡಿದವನು, ಮೂರು ಲೋಕದ ಉತ್ತಮೋತ್ತಮ ವಸ್ತುಗಳನ್ನು ತಂದು ಅನುಭವಿಸ್ತಾ ಇದಾನೆ. ವಿಕ್ರಮದಲ್ಲಿ, ಬಲದಲ್ಲಿ ರಾವಣನಿಗೆ ಯಾರು ಸಾಟಿ? ಅವನು ಕೋಪಗೊಂಡು ಎದ್ದ ಎಂದಾದರೆ ಇವತ್ತು ಏನಾದರೂ ಆಗುವುದು ಖಂಡಿತ. ಹೀಗೆ ಹೇಳುವ ಹೊತ್ತಿಗೆ ರಾವಣ ಅಶೋಕವನಕ್ಕೆ ಧಾವಿಸಿದ. ಸೀತೆಯ ಮುಂದೆ ಮೊದಲು ಪರಾಕ್ರಮ ತೋರಿಸ್ಬೇಕಲ್ಲ. ಹಾಗೆ ಅವನು ಅಶೋಕವನಕ್ಕೆ ಹೋಗುವಾಗ ಅವನ ಹಿತೈಷಿಗಳು, ಆಪ್ತರು ರಾವಣನನ್ನು ಮತ್ತೆ ಮತ್ತೆ ತಡೆದರು. ಬೇಡ. ಸ್ತ್ರೀ ಹತ್ಯೆ ಮಾಡಬಾರದು ಎಂಬುದಾಗಿ ಮತ್ತೆ ಮತ್ತೆ ತಡೀತಾರೆ. ಆದರೆ ಇವನು ನುಗ್ಗಿ ಹೋಗ್ತಿದಾನೆ. ಅತ್ತ ಸೀತೆ ಅಶೋಕವನದಲ್ಲಿ ರಾಕ್ಷಸರ ಮಧ್ಯದಲ್ಲಿ ಇದಾಳೆ. ನೋಡ್ತಾಳೆ. ಕೈಯಲ್ಲಿ ಕತ್ತಿ ಹಿಡಿದು ಬರ್ತಿದಾನೆ. ಸೀತೆಗೆ ಅರ್ಥವಾಯಿತು. ಈ ಕತ್ತಿ ತನಗಾಗಿ ಎಂದು. ಅವಳ ಕಣ್ಣಮುಂದೆಯೇ ರಾವಣನ ಪತ್ನಿಯರು, ಸಚಿವರು ತಡಿತಾ ಇದ್ರು ಬೇಡ ಎಂಬುದಾಗಿ. ಕೇಳ್ತಾ ಇಲ್ಲ ಅವನು.

ಸೀತೆಯ ಮನಸ್ಸಿನಲ್ಲಿ ಬೇರೆ ಬೇರೆ ಭಾವಗಳು ಸುಳಿದು ಹೋದವು. ಜಗನ್ನಾಥನ ಮಡದಿ ನಾನು. ನನಗೆ ಹೇಳಿಕೇಳುವವರಿದಾರೆ. ಆದರೆ ಅನಾಥೆಯಂತೆ ಇವನು ನನ್ನನ್ನು ಕೊಂದುಹಾಕ್ತಾನೆ ಈಗ. ಅದೆಷ್ಟೋ ಬಾರಿ ನನ್ನನ್ನು ಬಂದು ಯಾಚನೆ ಮಾಡಿದ. ನೀನು ನನ್ನನ್ನು ಒಪ್ಪಿಕೋ. ನನ್ನ ಪತ್ನಿಯಾಗು ಎಂದು. ನಾನು ಒಪ್ಪಲಿಲ್ಲ. ನಿರಾಶನಾಗಿ, ಕ್ರೋಧ, ಮೋಹ ಸಮಾವಿಷ್ಟನಾಗಿ ನನ್ನನ್ನು ಕೊಲ್ಲಲು ಬಂದಿರಬೇಕು. ಅಥವಾ ರಾಮ-ಲಕ್ಷ್ಮಣರಿಗೇನಾದರೂ ಮಾಡಿಬಿಟ್ಟನಾ ಇವನು? ಅವರಿಗೇನಾದರೂ ಆಗಿರಬಹುದಾ? ಛೇ! ನನ್ನಿಂದಾಗಿ ಅವರಿಬ್ಬರಿಗೆ ಹೀಗಾಗಿಬಿಡ್ತಾ? ಅಥವಾ ಪುತ್ರಶೋಕದಿಂದ, ಇಂದ್ರಜಿತುವಿನ ಮರಣದ ಶೋಕದಿಂದ ರಾಮ-ಲಕ್ಷ್ಮಣರ ತಂಟೆಗೆ ಹೋಗದೇ ನನ್ನನ್ನು ಕೊಲ್ಲಲಿಕ್ಕೆ ಬರ್ತಿದಾನಾ? ಇದೇ ಸರಿಯಾದ ವಿಷಯ. ಕೇಡುಮನಸ್ಸಿನ, ಕೇಡುನಿಶ್ಚಯದ ಈ ಕೇಡಿ ಇಂದ್ರಜಿತುವಿನ ಸಂಹಾರದ ಬಳಿಕ ರಾಮ-ಲಕ್ಷ್ಮಣರನ್ನು ಮುಟ್ಟಲಾಗದೇ ನನ್ನನ್ನು ಕೊಲ್ಲಲಿಕ್ಕೆ ಬರ್ತಿದಾನಾ? ಛೇ! ಹನುಮಂತನ ಮಾತನ್ನು ನಾನೇಕೆ ಕೇಳಲಿಲ್ಲ. ಹೇಳಿದ್ದ ಹನುಮಂತ. ಬೆನ್ನ ಮೇಲೆ ಕುಳಿತುಕೋ, ನಾನು ಇವತ್ತೇ ನಿನ್ನನ್ನ ರಾಮನ ಸನ್ನಿಧಿಗೆ ಮುಟ್ಟಿಸಿ ಬಿಡ್ತೇನೆ, ನಿಮ್ಮಿಬ್ಬರನ್ನೂ ಒಟ್ಟಿಗೇ ಕೂರಿಸಿ ನೋಡ್ತೇನೆ ಎಂಬುದಾಗಿ ಹನುಮಂತ ಹೇಳಿದ್ದ. ನನಗೆ ಬುದ್ಧಿ ಇಲ್ಲದೇ ಅವನ ಮಾತನ್ನು ಮೀರಿದೆ ನಾನು. ಇಷ್ಟೊತ್ತಿಗೆ ರಾಮನೊಟ್ಟಿಗೆ ಇರುತ್ತಿದ್ದೆ ಹನುಮಂತನ ಮಾತು ಕೇಳಿದ್ದರೆ.. ಎಂದು ಕೊನೆಯಲ್ಲಿ ಕೌಸಲ್ಯೆ ನೆನಪಿಗೆ ಬಂದಳು. ಕೌಸಲ್ಯೆ ಹೇಗೆ ತಡೆದುಕೊಳ್ತಾಳೆ. ರಾಮನ ಹುಟ್ಟಿನಿಂದ ಆರಂಭಿಸಿ, ರಾಮ ಧರ್ಮವೀರನಾಗಿದ್ದ ಎಂದು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾಳೆ. ಗತಿಸಿದ ಮಗನ ನೆನೆದು ಮುಂದೆ ಆತ್ಮಹತ್ಯೆ ಮಾಡಿಕೊಳ್ಬಹುದು ಕೌಸಲ್ಯೆ ಎಂದುಕೊಂಡಳು. ಎಂಥಹ ಪ್ರೀತಿ ನೋಡಿ ಅತ್ತೆಯ ಮೇಲೆ…!

ಅಷ್ಟೊತ್ತಿಗೆ ರಾವಣ ಸೀತೆಯ ಹತ್ತಿರ ಬಂದಿದ್ದ. ಆಗ ಒಬ್ಬ ಅಮಾತ್ಯ ಸುಪಾರ್ಶ್ವ ಹೇಳಿದನು. “ಹೇ ದಶಗ್ರೀವ, ಕುಬೇರನ ತಮ್ಮ ನೀನು. ಹೇಗೆ ನೀನು ಧರ್ಮವನ್ನು ಬಿಟ್ಟು ಸೀತೆಯನ್ನು ಕೊಲ್ಲುತ್ತೀಯೆ…?! ಸರಿಯಲ್ಲ. ವೇದಾಧ್ಯಯನ ಮಾಡಿದ ನೀನು ಸ್ತ್ರೀಹತ್ಯೆಯನ್ನು ಯಾಕೆ ಮಾಡ್ತೀಯ. ಎಂತಹ ರೂಪಸಂಪನ್ನೆ ಸೀತೆ, ಕೊಲ್ಲಬಾರದು. ರಾಮನ ವಿರುದ್ಧ ಯುದ್ಧ ಮಾಡಿ ನೀನು ಗೆದ್ದರೆ, ಸೀತೆ ನಿನ್ನ ವಶವಾಗ್ತಾಳಲ್ಲ…! ಇಂದು ಯುದ್ಧಕ್ಕೆ ಸಿದ್ಧತೆ ಮಾಡಿಕೊ. ನಾಳೆ ಯುದ್ಧಕ್ಕೆ ಹೋಗು. ನಾಳೆ ಅಮವಾಸ್ಯೆ, ಯುದ್ಧಕ್ಕೆ ಒಳ್ಳೆಯ ದಿವಸ” ಎಂದನು.

ವ್ಯಾಖ್ಯಾನಕಾರರು ಹೇಳ್ತಾರೆ, ಈವರೆಗೆ ಒಟ್ಟೂ ಹದಿಮೂರುದಿನದ ಯುದ್ಧವಾಗಿದೆ ಎಂದು. ಫಾಲ್ಗುಣ ಪೂರ್ಣಿಮೆಗೆ ರಾಮ ಸುವೇಲ ಪರ್ವತೆಯನ್ನೇರಿದ್ದನು. ಪಾಡ್ಯಕ್ಕೆ ಯುದ್ಧಾರಂಭ, ಅಂದೇ ರಾತ್ರಿ ನಾಗಪಾಶಬಂಧ ಮತ್ತು ಮೋಕ್ಷ. ಬಿದಿಗೆಗೆ ದುಮ್ರಾಕ್ಷನ ವಧೆ, ತದಿಗೆಗೆ ವಜ್ರದಂಷ್ಟ್ರನ ವಧೆ, ಚತುರ್ಥಿಗೆ ಅಕಂಪನನ ವಧೆ. ಪಂಚಮಿಗೆ ಪ್ರಹಸ್ತನ ವಧೆ, ಷಷ್ಟಿ ರಾವಣನ ಸೋಲು, ರಾವಣನ ಕಿರೀಟಭಂಗ, ಸಪ್ತಮಿ ಕುಂಭಕರ್ಣ ವಧೆ, ಅಷ್ಟಮಿಗೆ ರಾವಣನ ಮಕ್ಕಳಾದ ತ್ರಿಶಿರ, ಅತಿಕಾಯ ಮುಂತಾದವರ ವಧೆ, ನವಮಿಯಂದು ಇಂದ್ರಜಿತನ ಯುದ್ಧ, ಅದೇ ರಾತ್ರಿ ಹನುಮಂತ ಓಷಧಪರ್ವತವನ್ನು ತಂದು, ಎಲ್ಲ ಕಪಿಸೇನೆ ಎದ್ದು, ಲಂಕೆಗೆ ಬೆಂಕಿ ಹಚ್ಚಿ ಕುಂಭ ನಿಕುಂಭರ ವಧೆಯಾದದ್ದು ಅಂದೇ. ದಶಮಿಯಂದು ಮಕರಾಕ್ಷನ ವಧಾ. ಏಕಾದಶಿ, ದ್ವಾದಶಿ, ತ್ರಯೋದಶಿ ಈ ಮೂರು ದಿನ ಇಂದ್ರಜಿತನ ಯುದ್ಧ. ಚತುರ್ದಶಿಯ ಬೆಳಗಿನ ಜಾವ ಇಂದ್ರಜಿತುವಿನ ವಧೆ. ಚತುರ್ದಶಿಯಂದು ರಾವಣ ಸಿದ್ಧತೆ ಮಾಡಿ, ಅಮವಾಸ್ಯೆಯಂದು ಯುದ್ಧಕ್ಕೆ ತೆರಳಲಿ ಎಂದು ಸುಪಾರ್ಶ್ವ ಹೇಳುತ್ತಿರುವುದು. ಆ ದುರಾತ್ಮ ರಾವಣನಿಗೆ ಸುಪಾರ್ಶ್ವನ ಮಾತು ಒಪ್ಪಿಗೆಯಾಯಿತು. ಸಭೆಯಲ್ಲಿ ಕುಳಿತ ರಾಕ್ಷಸ ಸೈನಿಕರಿಗೆ ಕೈಮುಗಿದು, ಇಂದು ನೀವು ಯುದ್ಧ ಮಾಡಿ, ನಾಳೆ ನಾನು ಬರ್ತೇನೆ ಎಂದನು. ಇದು ಈ ಸೈನ್ಯ ರಾವಣನ ಮೂಲಬಲ. ನೀವೆಲ್ಲ ಹೋಗಿ ಕಪಿಗಳೊಂದಿಗೆ ಯುದ್ಧ ಮಾಡಬೇಡಿ. ನೇರ ರಾಮನನ್ನೇ ಕೇಂದ್ರವಾಗಿಸಿ ಸುತ್ತುವರಿದು, ಯುದ್ಧ ಮಾಡಿ. ಕೊಂದರೆ ಮುಗಿಯಿತು, ಇಲ್ಲದಿದ್ದರೆ ಸಾಧ್ಯವಾದಷ್ಟು ಗಾಯಮಾಡಿ. ಅಂತಹ ಗಾಯಗೊಂಡ ರಾಮನ ಮೇಲೆ ನಾಳೆ ನಾನು ಯುದ್ಧಮಾಡ್ತೇನೆ ಎಂದನು ರಾವಣ.

ಮೂಲಬಲ ಸಮೂಹಯುದ್ಧವನ್ನು ಮಾಡುವಂಥದ್ದು. ಅಂದರೆ, ಒಬ್ಬೊಬ್ಬರೆ ಯುದ್ಧ ಮಾಡುವಂಥದ್ದಲ್ಲ. ಸಮೂಹದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಯುದ್ಧ ಮಾಡುವಂಥದ್ದು, ಚಕ್ರವ್ಯೂಹದಂತೆ. ರಾಮನನ್ನು ಕಪಿಗಳು ಬಿಟ್ಟುಕೊಡಲಿಲ್ಲ. ಆದರೆ ವಾನರಸೇನೆಯು ಯುದ್ಧದಲ್ಲಿ ಹಿಂದೆಬಿದ್ದಿತು, ಕಪಿಗಳು ಹೋಗಿ ರಾಮನಿಗೆ ಶರಣಾದರು. ಮಹಾತೇಜಸ್ವಿ ರಾಮನನ್ನು ಸುತ್ತುವರಿಯಿತು ಕೋಟ್ಯಂತರ ರಾಕ್ಷಸರ ಸೇನೆಯು ಅಥವಾ ರಾಮನೇ ಸೇನೆಯ ಒಳಹೊಕ್ಕನು ಎನ್ನಬಹುದು. ಇಷ್ಟೂ ರಾಕ್ಷಸರ ಮೇಲೆ ಅದ್ಭುತವಾದ ಬಾಣಪ್ರಯೋಗ ಮಾಡುತ್ತಾನೆ. ತನ್ನ ಬಾಣಗಳ ಅಗ್ನಿಯಿಂದ ಸುಡುವ ರಾಮನನ್ನು ಮುಟ್ಟಲಿಕ್ಕೂ ರಾಕ್ಷಸರಿಗೆ ಸಾಧ್ಯವಾಗಲಿಲ್ಲ. ರಾಮನ ಹತ್ತಿರ ಬರಲೂ ಸಾಧ್ಯವಾಗಲಿಲ್ಲ. ರಾಮನ ಕಾರ್ಯಗಳೇನು ಗೊತ್ತಾಗುತ್ತಿರಲಿಲ್ಲ. ಪರಿಣಾಮ ಮಾತ್ರ ಕಾಣುತ್ತಿತ್ತು, ಕಾರ್ಯವು ಕಾಣುತ್ತಿರಲಿಲ್ಲ.

ಅಂತೂ ಊಹಾತೀತವಾದ ಸಂಖ್ಯೆ ಅಲ್ಲಿ ವಧೆಗೊಂಡ ರಾಕ್ಷಸರದ್ದು! ಈವರೆಗೆ ಇಡೀ ವಾನರಸೇನೆ ಮಾಡಿದ ರಾಕ್ಷಸರ ವಧೆಗಿಂತ ಬಹುದೊಡ್ಡ ಪ್ರಮಾಣದಲ್ಲಿ ರಾಮನೊಬ್ಬನೇ ರಾಕ್ಷಸರನ್ನು ವಧಿಸ್ತಾನೆ. ಇದಕ್ಕಾಗಿಯೇ ಮಾರೀಚನ ವಧೆ ಯುದ್ಧರಕ್ಷಣೆಯ ಸಮಯದಲ್ಲಿ ಆಗಲಿಲ್ಲ, ಇದಕ್ಕಾಗಿಯೇ ರಾವಣನಿಗೆ ಸೀತೆಯನ್ನು ಅಪಹರಣ ಮಾಡ್ಲಿಕ್ಕೆ ಸಾಧ್ಯವಾಯಿತು. ಹೀಗಾಗಿಯೇ ರಾವಣನು ರಾಮನನ್ನು ತನ್ನೂರಿಗೇ ಕರೆಸಿ ದೊಡ್ಡ ಹಬ್ಬ ಮಾಡ್ಕೊಂಡ! ಎಂದೂ ಸೋಲದ ಮೂಲಬಲವು ಸರ್ವನಾಶವಾಗಿದೆ. ಈ ಯುದ್ಧದಲ್ಲಿ ಇಡೀ ಲಂಕೆಗೆ ಲಂಕೆಯೇ ವಿಧವೆಯಾಯಿತು. ಅಳಿದುಳಿದವರು ಪೂರ್ತಿ ಅಸ್ತವ್ಯಸ್ತರಾಗಿ ಲಂಕೆಗೆ ಮರಳಿದರು. ರಣಭೂಮಿ ರುದ್ರಭೂಮಿಯಾಯ್ತು. ಯುದ್ಧ ಮುಗಿದ ಮೇಲೆ ರಾಮನು ಸುಗ್ರೀವ, ವಿಭೀಷಣ, ಜಾಂಬವಂತ, ಉಳಿದ ಕಪಿನಾಯಕರಿಗೆ ಹೇಳಿದ್ನಂತೆ, ‘ಈ ಸಾಮರ್ಥ್ಯ ನನಗೆ, ಇಲ್ಲ ಮುಕ್ಕಣ್ಣ ಶಿವನಿಗೆ ಮಾತ್ರ ಮಾಡಲಿಕ್ಕೆ ಸಾಧ್ಯ, ಮೂರನೇಯವನಿಗೆ ಸಾಧ್ಯವಿಲ್ಲ’.

ರಾಕ್ಷಸರ ಬಹುದೊಡ್ಡ ಬಳಗ ಧ್ವಂಸವಾಗಿದೆ. ಬದುಕಿರುವ ರಾಕ್ಷಸರು ತಮ್ಮೆಲ್ಲ ಸಾಮರ್ಥ್ಯವನ್ನು ಕಳೆದುಕೊಂಡು ಹಿಂದಿರುಗಿದ್ದಾರೆ. ಲಂಕೆಯಲ್ಲಿ ಘಟನೆಯನ್ನು ನೋಡಿದ ರಾಕ್ಷಸರು, ಕೇಳಿದ ರಾಕ್ಷಸಿಯರ ವಿಲಾಪ ನಡೆಯಿತು. ಅವರು ರಾಮನ ಬಗ್ಗೆ ಮಾತಾಡೋದಿಲ್ಲ, ಇದಕ್ಕೆ ಕಾರಣಾಗಿರುವವರಿಗೆ, ಮೊದಲು ಇದಕ್ಕೆ ಕಾರಣಳಾದ ಶೂರ್ಪಣಖಿಯನ್ನು ಹೇಳ್ತಾರೆ. ಇವಳನ್ನು ಎಲ್ಲರೂ ಸೇರಿ ಹೊಡೆದು ಸಾಯಿಸಬೇಕು! ಅಂತ ಹೇಳ್ತಾರೆ. ರಾಮನ ಬಗ್ಗೆ ಒಳ್ಳೆಯ ಭಾವನೆಯೇ ಇದೆ ಅವರಲ್ಲಿ. ನಮ್ಮ ದುರದೃಷ್ಟದಿಂದಾಗಿ ಅವಳು ಈ ಅಕಾರ್ಯವನ್ನು ಮಾಡಿದಳು’ ಅಂತ. ಹಾಗೇ, ರಾವಣನನ್ನೂ ಹಳೀತಾರೆ. ‘ ಅದಕ್ಕಾಗಿ ಬಂತು ವೈರ ಇದು. ರಾವಣನಿಗೆ ಸೀತೆ ಸಿಕ್ಕೋದೇ ಇಲ್ಲ. ಯಾತಕ್ಕಾಗಿ ಅವಳನ್ನು ಅಪಹರಿಸಿ ತಂದನೋ, ಆ ಕಾರ್ಯ ಆಗೋದೇ ಇಲ್ಲ. ಆದರೆ ವೈರ, ಯುದ್ಧ, ಸಾವು-ನೋವು! ನಷ್ಟ ಆಗುವಷ್ಟೆಲ್ಲ ಆಯ್ತು. ಎಷ್ಟು ನಿದರ್ಶನಗಳು ರಾಮನೇನು ಎನ್ನುವುದಕ್ಕೆ! ವಿರಾಧ, ಕಬಂಧ, ವಾಲಿ ಅದೆಷ್ಟು ಜನ ಬಲಶಾಲಿ, ವೀರರನ್ನು ರಾಮನೊಬ್ಬನೇ ಸಂಹರಿಸಿದ! ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಾಗಿ ಇಡೀ ಸೇನೆ ಆ ಸೇತುವೆ ದಾಟಿ ಬಂದಾಗಲಾದ್ರೂ ತಿಳ್ಕೊಳ್ಳಬೇಡ್ವಾ ಆಗಲಾದ್ರೂ ಇವನು ಸಾಮನ್ಯನಲ್ಲ, ಏನು ಬೇಕಾದ್ರೂ ಮಾಡ್ಬಹುದು ಎಂದು? ಅಷ್ಟು ನಿದರ್ಶನಗಳನ್ನು ಕೊಡ್ತಾರೆ, ಈ ಒಂದೊಂದರಲ್ಲಿಯೂ ಕೂಡ ರಾವಣ ತಿಳ್ಕೊಳ್ಳಬೇಕಿತ್ತು, ಶರಣಾಗಬೇಕಿತ್ತು. ‌‌

ಮತ್ತೆ ವಿಭೀಷಣನನ್ನು ಹೊಗಳ್ತಾರೆ. ‘ವಿಭೀಷಣ ಹೇಳಿದ್ರಲ್ಲಿ ಧರ್ಮ ಇತ್ತು, ಅರ್ಥ ಇತ್ತು, ಇಡೀ ರಾಕ್ಷಸರ ಹಿತ ಇತ್ತು. ಅದು ಅವಿವೇಕ ರಾವಣನಿಗೆ ಅರ್ಥವೇ ಆಗಲಿಲ್ಲ. ವಿಭೀಷಣನ ಮಾತನ್ನು ರಾವಣ ಕೇಳಿದ್ರೆ ಲಂಕೆ ಸ್ಮಶಾನವಾಗ್ತಿರಲಿಲ್ಲ. ಕುಂಭಕರ್ಣ, ಅತಿಕಾಯ, ಇಂದ್ರಜಿತರ ಸಂಹಾರದ ಉದಾಹರಣೆಗಳಿಂದ ರಾವಣನ ತಲೆಗೆ ಹೋಗ್ಬೇಕಾಗಿತ್ತು! ಆದರೂ ರಾವಣನಿಗೆ ಬುದ್ಧಿಯೇ ಇಲ್ಲ..’ ಮನೆಮನೆಯಲ್ಲಿ ರಾಕ್ಷಸಿಯರು ಗೋಳಾಡಿದರಂತೆ, ‘ನನ್ನ ಮಗ ಸತ್ತ, ನನ್ನ ಗಂಡ ಸತ್ತ, ನನ್ನ ಅಪ್ಪ ಸತ್ತ..’ ಯಾರು ರಾಮನೆಂದರೆ? ರುದ್ರನಿರಬಹುದು, ವಿಷ್ಣುವಿರಬಹುದು, ದೇವರಾಜನಿರಬಹುದು, ಸ್ವಯಂ ಅಂತಕನಿರಬಹುದು! ಸಾಮಾನ್ಯ ಮನುಷ್ಯನಂತೂ ಅಲ್ಲ. ಸಾವು ಮುಂದಿದೆ, ಅರ್ಥವೇ ಆಗ್ತಾ ಇಲ್ಲ ದಶಗ್ರೀವನಿಗೆ. ರಾಮ ಸಂಹರಿಸಲು ನಿಶ್ಚಯಿಸಿದ್ರೆ, ಯಾರೂ ಕಾಪಾಡ್ಲಿಕ್ಕೆ ಸಾಧ್ಯ ಇಲ್ಲ. ಎಷ್ಟು ಅಪಶಕುನಗಳು ಲಂಕೆಯಲ್ಲಿ! ಈ ಒಂದೊಂದು ಉತ್ಪಾತಕ್ಕೂ ರಾಮನಿಂದ ರಾವಣನ ಸಂಹಾರವಾಗ್ತದೆ ಅಂತಲೇ ಅರ್ಥ. ತಿಳ್ಕೊಳ್ತಾ ಇಲ್ವಲ್ಲ!

ರಾವಣನ ವರ, ಇನ್ನೆರಡು ಘಟನೆಗಳನ್ನು ನೆನಪು ಮಾಡ್ಕೊಳ್ತಾರೆ ರಾಕ್ಷಸಿಯರು. ರಾವಣ ಮಿತಿಮೀರಿ ಪೀಡೆ ಕೊಟ್ಟಾಗ ದೇವತೆಗಳು ಬ್ರಹ್ಮನನ್ನು ಸೇರಿ ಪ್ರಾರ್ಥನೆ ಮಾಡ್ತಾರೆ, ಆಗ ಬ್ರಹ್ಮ,’ಇನ್ನು ಮುಂದೆ ನೀವು ನಿಶ್ಚಿಂತರಾಗಿ, ರಾವಣನ ವಧೆಯ ಪ್ರಕ್ರಿಯೆ ಪ್ರಾರಂಭವಾಗಿದೆ’ ಅಂತ ಅಭಯ ಕೊಟ್ಟಿದ್ನಂತೆ. ಹಾಗೇ ದೇವತೆಗಳು ಶಿವನನ್ನು ಸೇರಿ ಪ್ರಾರ್ಥನೆ ಮಾಡಿದಾಗ, ಆ ಮಹಾದೇವ ‘ಒಂದು ನಾರಿ ಹುಟ್ಟಿ ಬರ್ತಾಳೆ, ಅವಳೊಬ್ಬಳೇ ಎಲ್ಲ ರಾಕ್ಷಸರನ್ನು ಸಂಹಾರ ಮಾಡಿಸ್ತಾಳೆ. ಅದೇ ಸೀತೆ’ ಅಂತ ವರ ನೀಡಿದ್ನಂತೆ. ದುರ್ಮತಿ ರಾವಣನ ನಾಶ ನಿಶ್ಚಿತ ಎಂಬುದಾಗಿ ರಾವಣನ ರಾಜ್ಯದ ಪ್ರಜೆಗಳೆಲ್ಲ ನೊಂದು, ಬೆಂದು ರಾವಣನನ್ನು ಹಳೀತಾರೆ, ಶಪಿಸ್ತಾರೆ. ಮತ್ತೆ ವ್ಯಥಿಸ್ತಾರೆ. ವಿಭೀಷಣನೇ ಧನ್ಯ, ನಮಗೆ ಆ ಯೋಗ ಎಲ್ಲಿಂದ ಬಂತು? ಎಂದು ಆ ಪ್ರಜೆಗಳು ಹೇಳುವ ಹಾಗೆ ಆಗಿದೆ ಪರಿಸ್ಥಿತಿ. ಹೀಗೆ, ರಾಕ್ಷಸ ಸ್ತ್ರೀಯರು ಒಬ್ಬರನ್ನೊಬ್ಬರು ತಬ್ಬಿಕೊಂಡು ವಿಷಣ್ಣರಾಗಿ ಆಕ್ರಂದಿಸಿದರು. ರಾವಣನಿಗೆ ಎಲ್ಲಿ ಹೋದರೂ ಅವನ ಬಗ್ಗೆ ಶಾಪ, ನಿಂದನೆಯೇ ಕೇಳಿಸ್ತದೆ. ದೀರ್ಘವಾಗಿ ನಿಟ್ಟುಸಿರು ಬಿಟ್ಟನಂತೆ, ಜೋರು ಸಿಟ್ಟು ಬಂತು. ರಾಕ್ಷಸರಿಗೆ ಅಪ್ಪಣೆ ಮಾಡಿದ್ನಂತೆ, ‘ಹೊರಡಿ ಎಲ್ಲಾ ಯುದ್ಧಕ್ಕೆ, ನಾನೂ ಬರ್ತೇನೆ’. ಸಮೀಪವಿದ್ದ ರಾಕ್ಷಸರನ್ನು ದುರುಗುಟ್ಟಿ ನೋಡಿದ್ನಂತೆ‌. ಆದರೆ ಹಾಗೆ ಹೇಳುವಾಗ ಸಾವಿನ ಭಯ ಕಾಡಿತು, ಮಾತುಗಳು ತೊದಲಿದವು, ಏನು ಹೇಳ್ತಾನೆ ಅಂತ ಅರ್ಥ ಆಗಲಿಲ್ಲ.

ಭಯದಿಂದಲಾಗಿ ಮಾತೇ ಅಸ್ಪಷ್ಟವಾಗುವಂತೆ ಇತ್ತಂತೆ ಪರಿಸ್ಥಿತಿ. ರಾಕ್ಷಸರು ಭಯದಿಂದಲೇ ಸೇನೆಯನ್ನು ಸಿದ್ಧಪಡಿಸಿದರಂತೆ. ರಾಕ್ಷಸರೆಲ್ಲ ಒಟ್ಟಾದರು. ರಾವಣನನ್ನ ಗೌರವಿಸಿದರು. ಇವತ್ತು ಯುದ್ಧಕ್ಕೆ ಹೋದರೆ ಏನು ಮಾಡ್ತೇನೆ ನಾನು ಎಂಬುದನ್ನು ಒಂದಿಷ್ಟು ಬಡಾಯಿ ಕೊಚ್ಚಿಕೊಂಡನಂತೆ ರಾವಣ. ಒಂದು ಬಾಣಕ್ಕೆ ನೂರು ಕಪಿಗಳು ಅಂತ. ಯಾರ್ಯಾರ ಗಂಡ ಸತ್ತಿದಾನೆ, ಮಗ ಸತ್ತಿದಾನೆ, ತಂದೆ ಸತ್ತಿದಾನೆ, ನೆಂಟರು ಸತ್ತಿದಾರೆ ಅವರೆಲ್ಲರ ಕಣ್ಣೀರು ಒರೆಸ್ತೇನೆ ಅಂತ ಏನೇನೋ ಒಂದಿಷ್ಟು ಬಡಾಯಿ ಕೊಚ್ಚಿ, ರಥವನ್ನು ಸಿದ್ಧಪಡಿಸಿ, ಧನುಸ್ಸನ್ನು ತನ್ನಿ ಎಂದು ಹೇಳಿ ಅಳಿದುಳಿದ ರಾಕ್ಷಸರು ನನ್ನ ಜೊತೆಗೆ ಬರ್ಲಿ ಎಂದನಂತೆ. ಬಲಾಧ್ಯಕ್ಷನಿಗೆ ಸೂಚನೆ ಹೋಯ್ತು. ಸೇನೆಯನ್ನು ಸಜ್ಜುಗೊಳಿಸಲಾಯಿತು. ಒಂದು ಸ್ವಲ್ಪ ಹೊತ್ತಿನಲ್ಲಿ ಆಯುಧಗಳನ್ನೆತ್ತಿಕೊಂಡು ಸೇನಾಸಮೇತರಾಗಿ ರಾಕ್ಷಸರು ಬಂದ್ರು. ರಾವಣನ ರಥವೂ ಸಿದ್ಧವಾಗಿದೆ. ಸಾವಿರ ಕಲಶಗಳ ಸ್ತಂಭವಿದ್ದಂತಹ ರಥ. ನೋಡಿದ ರಾಕ್ಷಸರಿಗೆ ರಥ ಹೀಗೂ ಇರತ್ತಾ ಅಂತ ಆಶ್ಚರ್ಯಪಡುವ ಹಾಗೆ ಆಯ್ತಂತೆ. ಎಂಟು ಕುದುರೆಗಳನ್ನು ಕಟ್ಟಿದ ಆ ರಥವನ್ನು ರಾವಣನು ಏರ್ತಾನೆ. ಯುದ್ಧಕ್ಕಾಗಿ ಮುನ್ನುಗ್ಗಿ ಹೋಗ್ತಾನೆ. ಅವನ ಹಿಂದೆ ಅವನ ಅನುಮತಿ ಪಡೆದು ಮಹೋದರ, ಮಹಾಪಾರ್ಶ್ವ, ವಿರೂಪಾಕ್ಷ ರಥವನ್ನೇರ್ತಾರೆ. ರಾಮ ಯಾವ ದ್ವಾರದಲ್ಲಿದಾನೋ ಅದೇ ದ್ವಾರದಲ್ಲಿ ಹೊರಗೆ ಬರ್ತಿದಾನೆ. ಉತ್ತರ ದ್ವಾರ. ಸಾಲಾಗಿ ಅಪಶಕುನಗಳಾದವು ; ಸೂರ್ಯ ಮಂಕಾದ, ದಿಕ್ಕುಗಳಿಗೆ ಕತ್ತಲೆ ಹೆಚ್ಚಿದಂತಾಯಿತು, ಕ್ರೂರ ಪಕ್ಷಿಗಳು ಸಾವನ್ನು ಸೂಚಿಸಿ ವಿಚಿತ್ರ ಸದ್ದನ್ನು ಮಾಡಿದವು. ಆ ಪ್ರದೇಶದ ಭೂಮಿ ಕಂಪಿಸಿತು. ರಕ್ತದ ಮಳೆ ಬಂತು. ಕುದುರೆಗಳು ಎಡವಿದವು. ಧ್ವಜದ ಮೇಲೆ ಹದ್ದೊಂದು ಬಂದು ಕೂತಿತು. ನರಿಗಳು ಅಮಂಗಲಕರವಾಗಿ ಊಳಿಟ್ಟವು. ರಾವಣನ ಎಡಗಣ್ಣು ಅದುರಿತು. ಎಡಭುಜ ಅದುರಿತು. ಮುಖ ವಿವರ್ಣವಾಯಿತು. ಸ್ವರ ಬಿತ್ತು. ಯುದ್ಧದಲ್ಲಿ ಸಾವನ್ನು ಸೂಚಿಸುವ ನಿಮಿತ್ತಗಳು ರಾವಣನಿಗೆ ಉಂಟಾಗಿದಾವೆ. ದೊಡ್ಡ ಸದ್ದು ಮಾಡ್ತಾ ಆಕಾಶದಿಂದ ಉಲ್ಕೆಯೊಂದು ಬಿತ್ತು. ಮತ್ತೆ ನರಿಗಳು ಊಳಿಟ್ಟವು. ಹದ್ದು-ಕಾಗೆಗಳು ಸದ್ದು ಮಾಡ್ತಾ ಇದಾವೆ. ಯಾವುದನ್ನೂ ಲೆಕ್ಕಿಸದೇ ಸಾವನ್ನೇ ಬಯಸಿ, ಕಾಲದ ಕರೆಗೆ ಓಗೊಟ್ಟು ಮುನ್ನಡೆದ ರಾವಣ.

ರಾಕ್ಷಸರ ರಥಘೋಷ ಕೇಳಿದಾಗಲೇ ವಾನರ ಸೇನೆ ಸಿದ್ಧವಾಗಿದೆ. ರಾಕ್ಷಸರಿಗೂ ವಾನರರಿಗೂ ತುಮುಲ ಯುದ್ಧ ನಡೀತು. ತನ್ನ ಪರಾಕ್ರಮದಿಂದ ವಾನರರನ್ನು ಕಾರಗೆಡಿಸಿದನು ರಾವಣ. ರಾವಣನ ಕಡೆಯಿಂದ ವಾನರ ಸೇನೆಯಲ್ಲಿ ತುಂಬಾ ಸಾವುನೋವುಗಳಾಗ್ತಿದಾವೆ. ಕ್ರೋಧದಿಂದ ಅರಳಿದ ಕಣ್ಣುಗಳುಳ್ಳವನಾಗಿ ರಾವಣ ಯಾವ ಯಾವ ಕಡೆ ಹೋಗ್ತಾನೋ ಆಯಾ ಕಡೆಗಳಲ್ಲಿ ಅವನ ಬಾಣದ ವೇಗವನ್ನು ಸಹಿಸಲಾರದೆ ವಾನರರು ಓಡಿದರು, ಬಿದ್ದರು. ವಾನರ ಸೇನೆಯನ್ನು ಚದುರಿಸಿ ರಾಮನೆಡೆಗೆ ಧಾವಿಸ್ತಾನೆ. ಸುಗ್ರೀವ ನೋಡ್ತಾನೆ. ನನ್ನ ಸೇನೆ ಪರಾಭವಗೊಂಡಿದೆಯಲ್ಲ! ಏನಾದರೂ ಮಾಡಬೇಕು ಎಂದು ನಿಶ್ಚಯಿಸಿ ತಾನಿರುವ ಜವಾಬ್ದಾರಿಯಲ್ಲಿ ಕಪಿನಾಯಕನಾದ ಸುಷೇಣನನ್ನೇರಿಸಿ ಒಂದು ಮರವನ್ನು ಕೈಗೆತ್ತಿಕೊಂಡು ಯುದ್ಧಕ್ಕೆ ಮನಸ್ಸು ಮಾಡ್ತಾನೆ. ಅವನ ಹಿಂದೆ ಮತ್ತು ಅಕ್ಕಪಕ್ಕದಲ್ಲಿ ಅನೇಕ ಕಪಿನಾಯಕರುಗಳು ಕಲ್ಲು, ಮರ, ಪರ್ವತ ಶಿಖರಗಳನ್ನು ಹೊತ್ತು ಬಂದ್ರಂತೆ. ಹೋಗಿ ರಾಕ್ಷಸಸೇನೆಯನ್ನು ಹತಗೊಳಿಸಿದ ಸುಗ್ರೀವ. ಅದನ್ನು ಕಂಡ ವಿರೂಪಾಕ್ಷ ರಥವನ್ನು ಬಿಟ್ಟು ಆನೆಯನ್ನೇರಿದ. ಸುಗ್ರೀವನಿಗು ವಿರೂಪಾಕ್ಷನಿಗೂ ದೊಡ್ಡ ಯುದ್ಧವೇ ನಡೀತು. ಸುಗ್ರೀವ ತನ್ನ ಕೈಲಿದ್ದ ಮರದಿಂದ ವಿರೂಪಾಕ್ಷನ ಆನೆಯನ್ನು ಸಂಹಾರ ಮಾಡಿದ. ಅದಾದ ಬಳಿಕವೂ ಸಾಕಷ್ಟು ಯುದ್ಧ ನಡೀತು. ಕೊಟ್ಟಕೊನೆಯಲ್ಲಿ ಶಂಖದೇಶದಲ್ಲಿ (ಕಿವಿ ಮತ್ತು ಕಣ್ಣಿನ ಮಧ್ಯದಲ್ಲಿ ) ಸರಿಯಾಗಿ ಪ್ರಹಾರ ಮಾಡಿದನಂತೆ ಸುಗ್ರೀವ.. ಸತ್ತೇಹೋದ ವಿರೂಪಾಕ್ಷ. ಬಳಿಕ ಮಹೋದರ.

ರಾವಣನಿಗೆ ತುಂಬಾ ಸಿಟ್ಟೂ ಬಂದಿದೆ, ದುಃಖವೂ ಆಗಿದೆ ವಿರೂಪಾಕ್ಷನ ವಧೆಯಿಂದ. ಭಾಗ್ಯಚಕ್ರ ತಿರುಗಿದೆ, ದೈವ ಮುನಿದಿದೆ. ಅದನ್ನು ಕಂಡು ವ್ಯಥೆಗೊಂಡನಂತೆ ರಾವಣ. ಬಳಿಕ ಮಹೋದರನನ್ನು ಕರೆದು ಹೇಳ್ತಾನೆ: ಮಹೋದರ, ಈ ಹೊತ್ತಿನಲ್ಲಿ ನನ್ನ ಗೆಲುವಿನ ಆಸೆ ನಿನ್ನಲ್ಲಿದೆ. ಹೋಗು ಶತ್ರುಸೈನ್ಯವನ್ನು ಧ್ವಂಸ ಮಾಡು, ಪರಾಕ್ರಮವನ್ನು ಮೆರೆ, ನಿನ್ನೊಡೆಯನ ಪಿಂಡಕ್ಕೆ (ರಾವಣ ಮಹೋದರನಿಗೆ ತುತ್ತು ಹಾಕಿದ್ದಕ್ಕೆ ಅದರ ಋಣ ತೀರಿಸಬೇಕು ನೀನು) ಇದು ಸಕಾಲ ಎಂದ. ಮಹೋದರ ಹೊರಟ ಯುದ್ಧಕ್ಕೆ. ಹೋಗಿ ಸುಗ್ರೀವನನ್ನ ಕೆಣಕ್ತಾನೆ. ಮಹೋದರನಿಗೂ ಸುಗ್ರೀವನಿಗೂ ಘನಘೋರ ಕದನ ನಡೆಯಿತು. ಕೊನೆಯಲ್ಲಿ ಖಡ್ಗಯುದ್ಧವಾಯಿತು. ಮಹೋದರ ಖಡ್ಗವನ್ನು ತಂದಾಗ ಅಲ್ಲಿಯೇ ಬಿದ್ದಿದ್ದ ಯಾವುದೋ ಖಡ್ಗವನ್ನು ತಗೊಂಡ ಸುಗ್ರೀವ. ಯುದ್ಧದಲ್ಲಿ ಮಹೋದರ ಸುಗ್ರೀವನಿಗೆ ಖಡ್ಗದಿಂದ ಹೊಡೆದನಂತೆ. ಗುರಾಣಿಯನ್ನು ಅಡ್ಡ ಹಿಡಿದ ಸುಗ್ರೀವ. ಆ ಖಡ್ಗ ಸುಗ್ರೀವನ ಗುರಾಣಿಯಲ್ಲಿ ಸಿಕ್ಕಿಹಾಕಿಕೊಂಡಿತು. ಆ ಖಡ್ಗವನ್ನು ತೆಗೆಯುವುದರೊಳಗೆ ಸುಗ್ರೀವ ಮಹೋದರನ ತಲೆ ಕಡಿದ. ಬಳಿಕ ಮಹಾಪಾರ್ಶ್ವ. ಇವನು ಹೋಗಿ ಅಂಗದನ ಸೈನ್ಯವನ್ನು ಕೆಣಕಿದ. ಅಂಗದನಿಗೂ ಮಹಾಪಾರ್ಶ್ವನಿಗೂ ದೊಡ್ಡ ಯುದ್ಧವೇ ನಡೀತು. ಯುದ್ಧದ ಕೊನೆಯಲ್ಲಿ ಸರಿಯಾಗಿ ಮಹಾಪಾರ್ಶ್ವನ ಹೃದಯ ಎಲ್ಲಿದೆ ನೋಡಿ ಅದಕ್ಕೆ ಮುಷ್ಠಿಯಿಂದ ಗುದ್ದಿದಾಗ ಹೃದಯ ಛಿದ್ರವಾಗಿ ಹೋಯಿತು. ಮಹಾಪಾರ್ಶ್ವ ಕೂಡ ಕುಸಿದು ಬಿದ್ದ. ರಾಕ್ಷಸನಾಯಕರೆಲ್ಲರೂ ಧ್ವಂಸವಾಗಿ ಹೋಗಿದಾರೆ. ಉಳಿದಿರುವುದು ರಾವಣನೊಬ್ಬನೇ. ಸಿಟ್ಟು ಬಂತು ರಾವಣನಿಗೆ. ಸೂತನಿಗೆ ಹೇಳಿದನಂತೆ: ಗತಿಸಿದ ಅಮಾತ್ಯರಿಗೆ ಮತ್ತು ಮುತ್ತಿಗೆ ಹಾಕಲ್ಪಟ್ಟಂತಹ ನಗರದ, ಅವರಿವರ ಎಲ್ಲರ ದುಃಖವನ್ನು ದೂರ ಮಾಡ್ತೇನೆ ರಾಮ-ಲಕ್ಷ್ಮಣರ ಸಂಹಾರ ಮಾಡಿ. ರಾಮವೃಕ್ಷವನ್ನು ಯುದ್ಧದಲ್ಲಿ ಕಡಿದು ಉರುಳಿಸ್ತೇನೆ. ರಾಮ ವೃಕ್ಷ ಯಾಕೆ ಅಂದ್ರೆ ಅದು ಸೀತೆ ಎಂಬ ಫಲವನ್ನು ಕೊಡ್ತದೆಯಂತೆ. ಸುಗ್ರೀವ, ಜಾಂಬವಂತ, ಕುಮುದ, ನಲ, ಮೈಂದ, ದ್ವಿವಿದ, ಅಂಗದ, ಗಂಧಮಾದನ, ಹನುಮಂತ, ಸುಷೇಣ, ಇವರೆಲ್ಲ ಕೊಂಬೆಗಳಂತೆ. ಹೀಗೆ ರಾವಣಕೃತ ರಾಮವರ್ಣನೆ ಅಂತ. ಹೀಗೆಲ್ಲಾ ಹೇಳಿ ತನ್ನ ರಥನಾದದಿಂದ ದಿಕ್ಕುದಿಕ್ಕುಗಳನ್ನು ಮೊರೆದು ರಾಮನ ಕಡೆಗೆ ಹೋಗ್ತಿದಾನೆ ರಾವಣ. ರಾವಣನಿಗೂ ರಾಮನಿಗೂ ಮಧ್ಯ ದೊಡ್ಡ ಕಪಿಸೇನೆ ಇದೆ. ನೇರವಾಗಿ ರಾಮನ ಬಳಿಗೇ ಹೋಗ್ಬೇಕು. ಏನು ಮಾಡೋದು? ತಾಮಸಾಸ್ತ್ರವನ್ನು ಪ್ರಯೋಗ ಮಾಡಿದ. ನಡುವೆಯಿದ್ದ ಕಪಿಸೇನೆಯನ್ನು ಸುಟ್ಟುಬಿಟ್ಟನಂತೆ ರಾವಣ ತಾಮಸಾಸ್ತ್ರದ ಪ್ರಯೋಗದಿಂದ. ಆಗ ರಾವಣನಿಗೆ ರಾಮ ಕಂಡ. ಹೇಗೆ ಕಂಡ? ನೋಡಿದ ಕೂಡಲೆ ಮನಸಿಗೆ ಬರುವ ಭಾವ ಅಪರಾಜಿತ (ಸೋಲರಿಯದವನು). ಪಕ್ಕದಲ್ಲಿ ಲಕ್ಷ್ಮಣ. ಇಂದ್ರೋಪೇಂದ್ರರಂತೆ ಇದಾರೆ. ಧನುಸ್ಸನ್ನು ನೆಲಕ್ಕೂರಿ ನಿಂತಿದಾನೆ. ಆ ಧನುಸ್ಸಿನ ಕೋಟಿ ಆಕಾಶವನ್ನು ಮುಟ್ಟಿದಂತೆ ಕಾಣ್ತಾ ಇದೆ. ಪದ್ಮದಳವಿಶಾಲ ನಯನ, ದೀರ್ಘಬಾಹು, ಶತ್ರುಘಾತಿ ರಾಮನನ್ನು ರಾವಣ ಕಂಡ.

ಅತ್ತ ಸೌಮಿತ್ರಿ ಸಹಿತನಾಗಿರುವ ರಾಮ ಗಮನಿಸಿದ. ಮುಂದಿರುವ ವಾನರ ಸೇನೆ ಭಗ್ನವಾಯಿತು. ರಾವಣ ಮುಂದಕ್ಕೆ ಬರ್ತಾ ಇದಾನೆ. ಸಂತೋಷದಿಂದ ಧನುಸ್ಸನ್ನು ಎತ್ತಿ ಹಿಡಿದುಕೊಂಡನಂತೆ ರಾಮ. ಧನುಸ್ಸಿನ ಮಧ್ಯದಲ್ಲಿ ಮುಷ್ಠಿಯನ್ನು ಹಿಡಿದುಕೊಂಡ. ಧನುಷ್ಠೇಂಕಾರ ಮಾಡಿದ. ನಿರಂತರವಾಗಿ ಧನುಸ್ಸನ್ನು ಠೇಂಕಾರ ಮಾಡ್ತಿದಾನೆ ರಾಮ. ವೇಗ ಭೂಮಿಯನ್ನೇ ಸೀಳುವಂತಿತ್ತು. ರಾಮನ ಧನುಷ್ಠೇಂಕಾರದಿಂದಲೇ ರಾಕ್ಷಸರೆಲ್ಲ ತೊಪತೊಪನೆ ಬಿದ್ದರಂತೆ. ಬಾಣ ಬಿಡುವ ಭರಾಟೆಯಲ್ಲಿ ಕೆಲವು ರಾಕ್ಷಸರನ್ನು ರಾವಣನೇ ಸಂಹಾರ ಮಾಡಿಬಿಟ್ಟಿದಾನೆ.

ಹೀಗೆ ರಾಮ-ಲಕ್ಷ್ಮಣರ ಹತ್ತಿರದಲ್ಲಿ ರಾವಣ ಬಂದಾಗ ಹೇಗಿತ್ತು ದೃಶ್ಯ ಅಂದ್ರೆ ಸೂರ್ಯ-ಚಂದ್ರರ ಹತ್ತಿರದಲ್ಲಿ ರಾಹುವಿದ್ದಂತೆ. ಲಕ್ಷ್ಮಣನಿಗೆ ತಾನು ಮೊದಲು ಯುದ್ಧ ಮಾಡುವ ಬಯಕೆ ಹಾಗಾಗಿ ಮೊದಲು ತಾನು ಪ್ರಯೋಗ ಮಾಡ್ತಾನೆ ರಾವಣನ ಮೇಲೆ. ಅಗ್ನಿಜ್ವಾಲೆಯಂತೆ ರಾವಣನ ಮೇಲೆ ಬಾಣಪ್ರಯೋಗ ಮಾಡ್ತಿದಾನೆ ಲಕ್ಷ್ಮಣ. ಆ ಬಾಣಗಳನ್ನು ಹತ್ತಿರ ಬರೋದಕ್ಕೂ ಬಿಟ್ಟಿಲ್ಲ ರಾವಣ. ಬಾಣ ಹೊರಗೆ ಬರ್ತಿದ್ದ ಹಾಗೇ ತುಂಡರಿಸ್ತಾನೆ ರಾವಣ. ಕೊನೆಗೆ ಲಕ್ಷ್ಮಣನನ್ನು ದಾಟಿ ರಾಮನೆಡೆಗೆ ಬಂದ ರಾವಣ. ರಾಮನನ್ನು ಕಂಡಾಗ ರಾವಣನಿಗೆ ಒಂದು ಅಚಲವಾಗಿ ನಿಂತ ಮಹಾಪರ್ವತದಂತೆ ಕಂಡ ರಾಮ.

ಇನ್ನು ರಾಮ-ರಾವಣರ ಸಮರ ಪ್ರಾರಂಭವಾಗ್ತದೆ. ಆ ಕೊನೆಯ ಸಮರಕ್ಕಿದು ಪೀಠಿಕೆ. ಇಬ್ಬರೂ ಮುಖಾಮುಖಿಯಾಗಿದಾರೆ. ಆ ಕೊನೆಯ ಸಮರಕ್ಕೆ ಸಜ್ಜಾಗಿದೆ ಯುದ್ಧವೇದಿಕೆ. ರಾವಣನ ಪರಾಕ್ರಮವನ್ನೂ ರಾಮನ ಮಹಿಮೆಯನ್ನೂ ಕಾಣುವ ಒಂದು ಘಟ್ಟ. ರಾಮ ರಾವಣರ ಅಂತಿಮ ಯುದ್ಧ. ಅದಕ್ಕೆ ಹೋಲಿಕೆಯೇ ಇಲ್ವಂತೆ. ಸಾಗರಕ್ಕೆ ಸಾಗರವೇ ಹೋಲಿಕೆ, ಆಕಾಶಕ್ಕೆ ಆಕಾಶವೇ ಹೋಲಿಕೆ, ರಾಮ-ರಾವಣರ ಯುದ್ಧಕ್ಕೆ ರಾಮ-ರಾವಣರ ಯುದ್ಧವೇ ಹೋಲಿಕೆ.

ರಾಮಾಯಣದ್ದೇ ಮಾತು : ಗಗನಂ ಗಗನಾಕಾರಂ, ಸಾಗರಃ ಸಾಗರೋಪಮಃ, ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ. ಅಂತಹ ಯುದ್ಧ ರಾಮನಿಗೂ ರಾವಣನಿಗೂ ನಡೆಯಿತು. ಆ ಸನ್ನಿವೇಶವನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments