ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಆಕಸ್ಮಿಕವಾಗಿ ಕೊಂಚ ಬಿಡುವು ಸಿಕ್ಕಿದರೆ ಅದನ್ನು ಹೇಗೆ ವಿನಿಯೋಗ ಮಾಡಬೇಕು ಮತ್ತು ಹೇಗೆ ಮಾಡಬಾರದು ಎನ್ನುವುದಕ್ಕೆ ಎರಡು ಉದಾಹರಣೆ ಇಲ್ಲಿದೆ. ರಾಮ-ರಾವಣರ ಘೋರ ಸಮರ ನಡಿತಾ ಇದೆ. ಆಕಸ್ಮಾಕವಾಗಿ ಒಂದು ಬಿಡುವು ಪ್ರಾಪ್ತವಾಯಿತು. ರಾಮನ ಭೀಷಣವಾದ ಬಾಣಪ್ರಯೋಗಗಳ ಮುಂದೆ ರಾವಣ ಕುಸಿದು ಬಿದ್ದ ರಥದಲ್ಲಿ. ಬಿದ್ದವನು ಪುನಃ ರಾಮನ ಮೇಲೆ ಧನುಸನ್ನು ಎತ್ತಲಿಲ್ಲ. ಆ ಸಾರಥಿ ರಥವನ್ನು ಯುದ್ಧಕ್ಷೇತ್ರದಿಂದ ಹಿಂದಕ್ಕೆ ಕರೆದೊಯ್ದ. ಈಗ ಇಬ್ಬರಿಗೂ ಬಿಡುವು ಸಿಕ್ಕಿದೆ. ರಾಮನ ಸನ್ನಿಧಿಗೆ ಅಗಸ್ತ್ಯ ಮಹರ್ಷಿಗಳು ಬರ್ತಾರೆ. ರಾಮ ಅಗಸ್ತ್ಯರ ದರ್ಶನ ಮಾಡ್ತಾನೆ. ಅವರಿಂದ ಆದಿತ್ಯಹೃದಯವನ್ನ ಪಡೆದುಕೊಳ್ತಾನೆ. ಅದರ ಅನುಸಂಧಾನವನ್ನ ಮಾಡ್ತಾನೆ. ಸೂರ್ಯನ ಜೊತೆಗೆ ಸಂಬದ್ಧನಾಗ್ತಾನೆ. ಸೂರ್ಯತೇಜಸ್ಸನ್ನೊಳಗೊಂಡು ಯುದ್ಧಕ್ಕೆ ಸಿದ್ಧನಾಗ್ತಾನೆ. ಆ ಕಡೆ ರಾವಣ ಎಚ್ಚರವಾದ ಕೂಡಲೇ ಸಾರಥಿಗೊಂದಿಷ್ಟು ಬೈದು, ನೀನು ಶತ್ರುಗಳಿಂದ ಲಂಚ ತಿಂದಿದ್ದೀಯೆ, ನನಗೆ ತೊಂದರೆ ಮಾಡಲಿಕ್ಕಾಗಿಯೇ ರಥವನ್ನು ಯುದ್ಧಕ್ಷೇತ್ರದಿಂದ ದೂರಕ್ಕೆ ಕೊಂಡೊಯ್ದಿದೀಯೆ ಎಂದು ಅವನನ್ನು ಬೈದು ಭಂಗಿಸಿದ. ಹೀಗೆ ಇಬ್ಬರು ಸಿಕ್ಕಿದ ಬಿಡುವನ್ನು ಉಪಯೋಗಿಸಿಕೊಂಡಿದ್ದು.

ರಾವಣನ ರಥವು ರಣರಂಗಕ್ಕೆ ಮರಳಿತು. ರಾಮನು ರಥವನ್ನು ಗಮನಿಸ್ತಾನೆ. ಗಂಧರ್ವನಗರದಂತೆ ಇದ್ಯಂತೆ ರಥ. ಆ ರಾಕ್ಷಸರಾಜನ ರಥವನ್ನು ಮನುಷ್ಯೇಂದ್ರನು ಕಂಡ. ತನ್ನ ಧನುಸ್ಸನ್ನು ಠೇಂಕರಿಸುತ್ತಾ ಸಾರಥಿ ಮಾತಲಿಗೆ ರಾಮನು ಸೂಚನೆಗಳನ್ನು ಕೊಡ್ತಾನೆ. ನೋಡು ಮಾತಲಿ! ರಿಪುವಿನ ರಥವು ನಮ್ಮೆಡೆಗೆ ಧಾವಿಸಿ ಬರುವುದನ್ನು ನೋಡು. ಇವನು ಬರುವ ಕ್ರಮವನ್ನು ನೋಡಿದರೆ ಸಾಯುವ ತೀರ್ಮಾನವನ್ನು ಮಾಡೇ ಬಿಟ್ಟಿದಾನೆ. ಅಪಸವ್ಯ ಮಾರ್ಗದಲ್ಲಿ ಬರ್ತಿದಾನೆ. ನೀನು ಮಾತ್ರ ಎಚ್ಚರವಾಗಿರು. ಪ್ರಮಾದಕ್ಕೆ ಎಡೆಕೊಡದೇ ರಾವಣನ ರಥವನ್ನು ಎದುರಿಸು. ಈ ಗಂಧರ್ವನಗರವನ್ನು ಧ್ವಂಸಗೊಳಿಸಬಯಸುವೆ. ನೀನು ಬೆದರದಿರು, ಗಾಬರಿಗೊಳ್ಳದಿರು. ನಿನ್ನ ಹೃದಯ, ನಿನ್ನ ಕಣ್ಣು ಏಕಾಗ್ರವಾಗಿರಲಿ. ವೇಗವಾಗಿ ನಡೆಸು ಎಂಬುದಾಗಿ ಹೇಳಿ ಅವನಿಗೆ ಒಂದು ಗೌರವವನ್ನು ಕೊಡ್ತಾನೆ. ನಿನಗೆ ನಾನು ಹೇಳಬೇಕಾದ್ದಿಲ್ಲ. ಏಕೆಂದರೆ ನೀನು ದೇವರಾಜನ ಸಾರಥಿ. ನನಗೆ ಯುದ್ಧ ಮಾಡುವ ತವಕ. ಹಾಗಾಗಿ ನನ್ನ ಮನಸ್ಸಿಗೆ ಏನು ಬರ್ತಾ ಇದೆ ಅದನ್ನ ನಿನ್ನ ಜೊತೆ ಹಂಚಿಕೊಳ್ತಾ ಇದ್ದೇನೆ. ಆದರೆ ನಿನಗೆ ನಾನು ಬುದ್ಧಿ ಹೇಳ್ತಿದೇನೆ, ಪಾಠ ಹೇಳ್ತಿದೇನೆ ಎಂದು ಭಾವಿಸ್ಬೇಡ. ನಿನಗೆ ನಾನು ನೆನಪಿಸ್ತಾ ಇರೋದೆ ಹೊರತು ನಿನಗೆ ನಾನು ಹೊಸದಾಗಿ ಶಿಕ್ಷಣ ಕೊಡ್ತಾ ಇರುವಂಥದ್ದಲ್ಲ. ಸುಶಿಕ್ಷಿತನೇ ಹೌದು ನೀನು. ಮಾತಲಿಗೆ ತನ್ನೊಡೆಯನನ್ನು ಕುರಿತು ಪರಮಸಂತೋಷವಾಯ್ತಂತೆ.

ಆ ರಥವನ್ನು ಮಾತಲಿಯು ಪ್ರಚೋದಿಸಿದನು ರಾವಣನ ಕಡೆಗೆ. ಹೇಗೆ ಅಂದ್ರೆ, ತಾನು ಪ್ರದಕ್ಷಿಣಾಕಾರದಲ್ಲಿ ಹೋಗ್ತಾನೆ ಆದ್ರೆ ರಾವಣನಿಗೆ ಅಪಸವ್ಯವಾಗುವಂತೆ. ರಥಚಕ್ರಗಳಿಂದ ಧೂಳೆಬ್ಬಿಸಿ ರಾವಣನ ಕಣ್ಣಿಗೆ ಎರಚ್ತಾನೆ. ಧೂಳಿನಿಂದಾಗಿ ಏನೂ ಕಾಣಿಸದಂತೆ ಮಾಡ್ತಾನೆ. ಸಿಟ್ಟು ಬಂತು ದಶಗ್ರೀವನಿಗೆ. ರಾಮನು ಸಮೀಪ ಬಂದ ಹೊತ್ತನ್ನು ನೋಡಿ ಬಾಣಗಳ ಅಭಿಷೇಕ ಮಾಡ್ತಾನೆ ರಾಮನಿಗೆ. ರಾಮನು ಧೈರ್ಯರೋಷಗಳನ್ನು ಬೆರೆಸಿದನು. ಇಂದ್ರ ಧನುಸ್ಸನ್ನು, ಸೂರ್ಯಕಿರಣಗಳಂಥ ಬಾಣಗಳನ್ನು ಕೈಗೆತ್ತಿಕೊಂಡ. ಮಹಾಯುದ್ಧ ಮತ್ತೆ ಆರಂಭವಾಯಿತು. ಏತನ್ಮಧ್ಯೆ ರಾವಣನಿಗೆ ಸಾಲುಸಾಲು ಅಪಶಕುನಗಳು ಇನ್ನೊಮ್ಮೆ ಆದವು. ಮೊಟ್ಟಮೊದಲು ರಾವಣನ ರಥದ ಮೇಲೆ ರಕ್ತದ ಮಳೆಯಾಯಿತು. ವಿಚಿತ್ರವಾಗಿ ಚಕ್ರಾಕಾರವಾಗಿ ರಾವಣನಿದ್ದಷ್ಟೇ ಪ್ರದೇಶದಲ್ಲಿ ಬೀಸಿತು. ಆದರೆ ರಾವಣನಿಗೆ ಅಪ್ರದಕ್ಷಿಣವಾಗಿ ಸುತ್ತಿತು ತೀಕ್ಷ್ಣಗಾಳಿ. ಗಗನದಲ್ಲಿ ಗೃಧ್ರಮಂಡಲ. ರಾವಣನ ರಥ ಎಲ್ಲೆಲ್ಲಿ ಹೋಗ್ತದೆಯೋ ಅದರ ಹಿಂದೆಯೇ ಅವುಗಳು ಮೇಲೆ ಹೋಗೋದು. ಸಮಯವಲ್ಲದಿದ್ದರೂ ಕೂಡ ಸಂಧ್ಯಾಕಾಲದಲ್ಲಾಗುವಂತೆ ಲಂಕೆಯು ಕೆಂಪಾಯಿತು. ದೊಡ್ಡದೊಡ್ಡ ಉಲ್ಕೆಗಳು ಬಿದ್ದವಂತೆ. ನಿರ್ಘಾತಗಳು ಉಂಟಾದವು. ರಾಕ್ಷಸರಿಗೆ ದುಃಖವುಂಟಾಯಿತು. ರಾವಣನ ಶರೀರದ ಮೇಲೆ ಬಿದ್ದ ಸೂರ್ಯಕಿರಣಗಳು ಬಣ್ಣಬಣ್ಣವಾದವು. ಬೆವತಿದಾನೆ ರಾವಣ. ಹೆಣ್ಣು ನರಿಗಳು ಮುಖದಿಂದ ಜ್ವಾಲೆಯನ್ನು ಹೊರಹಾಕುತ್ತಾ ರಾವಣನ ಮುಖವನ್ನು ನೋಡುತ್ತಾ ಊಳಿಟ್ಟವಂತೆ. ಗಾಳಿಯು ಪ್ರತಿಕೂಲವಾಗಿ ಬೀಸಿ ರಾವಣನಿಗೆ ಧೂಳೆರಚಿತು. ರಾವಣನ ಸೈನ್ಯದ ಸುತ್ತ ಸಿಡಿಲುಗಳು ಬಿದ್ದವು, ದಿಕ್ಕುಗಳು ಕತ್ತಲಾದವು. ಶಾರಿಕಾ ಪಕ್ಷಿಗಳು ಪರಸ್ಪರ ಜೋರಾಗಿ ಕಲಹ ಮಾಡ್ತಾ ರಥದ ಬಳಿ ಬಂದು ಬಿದ್ದವು. ರಾವಣನ ಕುದುರೆಗಳು ಮುಂದೆ ಕಣ್ಣೀರು, ಹಿಂಭಾಗದಲ್ಲಿ ಕಿಡಿ ಕಾರಿದವು. ಹೀಗೆ ಬಹುಪ್ರಕಾರದ ಉತ್ಪಾತಗಳು ರಾವಣನ ವಿನಾಶವನ್ನು ಸೂಚನೆ ಮಾಡಿದವು.

ಅದೇ ಸಮಯದಲ್ಲಿ ರಾಮನಿಗೆ ವಿಜಯಸೂಚಕವಾದ ಶುಭನಿಮಿತ್ತಗಳುಂಟಾದವು. ಸಂತೋಷವಾಯಿತು ರಾಮನಿಗೆ. ಈ ಯುದ್ಧದಲ್ಲಿ ರಾವಣ ಸತ್ತಿದ್ದೇ ಹೌದು ಎಂಬ ನಿಶ್ಚಯಕ್ಕೆ ರಾಮ ಬರ್ತಾನೆ. ಎರಡು ರಥಗಳ ಯುದ್ಧ ಪ್ರಪಂಚಕ್ಕೇ ಭಯವಾಗುವಂತೆ ನಡಿತಾ ಇದೆ. ರಾಕ್ಷಸರ ಕೈಯಲ್ಲಿ ಕತ್ತಿ, ಕೊಡಲಿ ಆಯುಧಗಳಿವೆ. ವಾನರರ ಕೈಯಲ್ಲಿ ಮರ, ಕಲ್ಲು, ಪರ್ವತ ಶೃಂಗಗಳು ಇದಾವೆ. ಆದರೆ ರಾಮ-ರಾವಣರ ಯುದ್ಧವನ್ನು ನೋಡ್ತಾ ಯುದ್ಧ ಮಾಡೋದನ್ನೇ ಮರೆತು ಹೋಯಿತು ಸೈನಿಕರಿಗೆ. ಸೈನ್ಯಗಳು ಚಿತ್ರದಂತೆ ಕಂಡವು.

ಇಬ್ಬರೂ ನಿಮಿತ್ತಗಳನ್ನು ಗಮನಿಸಿದಾರೆ. ನಿಮಿತ್ತಗಳನ್ನು ಕಂಡ ಬಳಿಕ ಇಬ್ಬರೂ ಸ್ಥಿರಬುದ್ಧಿಗಳಾಗಿ ಯಾವ ಚಿಂತೆಯೂ ಇಲ್ಲದೆ ಯುದ್ಧ ಮಾಡ್ತಿದಾರೆ. “ಜೇತವ್ಯಂ ಇತಿ ಕಾಕುತ್ಸ್ಥಃ, ಮರ್ತವ್ಯಂ ಇತಿ ರಾವಣಃ” ಗೆಲ್ಲಬೇಕು ಎಂದು ರಾಮ, ಸಾಯಬೇಕು ಎಂದು ರಾವಣ. ನಿರ್ಭೀತ ಸ್ಥಿತಿಗೆ ಯಾಕೆ ಬಂದ ರಾವಣ ಅಂದ್ರೆ ಸಾಯುವಾಗ ಅದೇನು ಪರಾಕ್ರಮವಿದೆಯೋ ಅದನ್ನು ಪ್ರಕಟಪಡಿಸ್ತೇನೆ ಎಂಬ ಭಾವವಿತ್ತು. ಹೊರತು ಜೀವಿತಾಶಯ ಉಳಿದಿರಲಿಲ್ಲ ಎಂಬುದಾಗಿ ಈ ಶ್ಲೋಕ ಹೇಳ್ತದೆ. ಹಾಗೆ ಇಬ್ಬರೂ ಕೂಡ ತಮ್ಮ ಪರಾಕ್ರಮ ಸರ್ವಸ್ವವನ್ನು ಪ್ರಕಟಪಡಿಸಿದರು ಯುದ್ಧದಲ್ಲಿ. ಏತನ್ಮಧ್ಯೆ ರಾವಣನು ರಾಮನ ರಥದ ಧ್ವಜವನ್ನು ಭಂಗಿಸುವ ಸಲುವಾಗಿ ಬಾಣವನ್ನು ರಾಮನ ರಥದ ಧ್ವಜದೆಡೆಗೆ ಪ್ರಯೋಗಿಸ್ತಾನೆ. ಆದರೆ ಆ ಬಾಣಗಳು ಧ್ವಜವನ್ನು ತಲುಪಲೇ ಇಲ್ಲ. ಕೋಪಗೊಂಡ ರಾಮ. ರಾವಣನ ಧ್ವಜವನ್ನು ಗುರಿಮಾಡಿ ಒಂದು ಬಾಣವನ್ನು ಪ್ರಯೋಗ ಮಾಡ್ತಾನೆ. ಆ ಬಾಣವು ದಶಗ್ರೀವನ ಧ್ವಜವನ್ನು ಕತ್ತರಿಸಿ ಉರುಳಿಸಿತು. ಬಹಳ ಬಹಳ ಕೋಪ ಬಂತು ರಾವಣನಿಗೆ. ಬಾಣದ ಮಳೆಯನ್ನೇ ಉಗುಳುತ್ತಾ ರಾಮನ ಅಶ್ವಗಳನ್ನು ಪ್ರಹರಿಸಿದನು ರಾವಣ. ಆದರೆ ಅವುಗಳಿಗೆ ಏನೂ ಆಗಲೇ ಇಲ್ವಂತೆ. ಸ್ವಲ್ಪ ಗಾಬರಿಯೂ ಆಗಲಿಲ್ವಂತೆ ಕುದುರೆಗಳಿಗೆ. ರಾವಣನಿಗೆ ಗಾಬರಿಯೂ ಆಯ್ತಂತೆ, ಕ್ರೋಧವೂ ಬಂತಂತೆ. ಬಾಣಗಳ ಮಳೆಗರೆದ ಮತ್ತೆ. ಮಾತ್ರವಲ್ಲ ಗದೆಗಳು, ಪರಿಘಗಳು, ಚಕ್ರಗಳು, ಮುಸಲಗಳು, ಬೆಟ್ಟದ ಶೃಂಗಗಳು, ವೃಕ್ಷಗಳು, ಶೂಲ-ಪರಶ್ವರಗಳನ್ನು ರಾಮನ ಮೇಲೆ ಎಸಿತಾ ಇದಾನೆ. ಒಂದೊಂದಾಗಿ ಅಲ್ಲ. ಅದೊಂದು ಅಸ್ತ್ರ. ಅವೆಲ್ಲ ಬೀಳ್ತಾ ಇದಾವೆ ರಾಮನ ಮೇಲೆ.

ಭಯಂಕರವಾದ ಶಸ್ತ್ರವರ್ಷ, ಒಂದು ಆಯುಧದ ರೀತಿ ಮತ್ತೊಂದು ಆಯುಧವಿಲ್ಲ. ನಾನಾ ಪ್ರಕಾರದ ಆಯುಧಗಳು ರಾಮನ ಮೇಲೆ ಪ್ರಯೋಗವಾಗ್ತಾ ಇವೆ. ಆದ್ರೆ, ಆ ಅಸ್ತ್ರಶಸ್ತ್ರಗಳು ರಾಮನ ರಥದ ಮೇಲೆ ಬೀಳಲೇ ಇಲ್ವಂತೆ. ಆಗ ರಾವಣನು ಸಾವಿರಾರು ಬಾಣಗಳನ್ನು ಪ್ರಯೋಗ ಮಾಡ್ತಾನೆ. ಅವನ ಹೃದಯಕ್ಕೆ ಶ್ರಮವೇ ಇಲ್ವಂತೆ ಆ ಸಮಯದಲ್ಲಿ! ಅವನ ಅಂತರಾತ್ಮ ಯಾವ ಅಂಟೂ ಇಲ್ಲದಾಯ್ತು ಆ ಸಮಯದಲ್ಲಿ. ರಾಮನೂ ಸಾಕಷ್ಟು ಬಾಣಗಳನ್ನು ಪ್ರಯೋಗ ಮಾಡ್ತಾನೆ. ರಾವಣನು ತನ್ನ ಬಾಣದಿಂದ ಆಕಾಶದಲ್ಲಿ ಸ್ಥಳವಿಲ್ಲದಂತೆ ಮಾಡ್ತಾನೆ. ಪ್ರತಿಯೊಂದು ಬಾಣವೂ ಲಕ್ಷ್ಯವನ್ನು ಅನುಸರಿಸಿಯೇ ಪ್ರಯೋಗಿಸಲ್ಪಟ್ಟಿದೆ. ಇಷ್ಟೂ ಬಾಣಗಳು ಒಂದಕ್ಕೊಂದು ಘಟ್ಟಿಸಿ ಭಗ್ನವಾಗಿ ಬೀಳ್ತಾ ಇದ್ದಾವೆ. ರಾವಣನಿಗೆ ತನ್ನ ಧ್ವಜದ ಹರಣವಾದ್ದರಿಂದ ತುಂಬ ಕೋಪ ಬಂದಿದೆ.

ಈ ಯುದ್ಧವನ್ನು ಸರ್ವಜೀವಿಗಳು ವಿಸ್ಮಿತರಾಗಿ ನೋಡಿದವು. ಎರಡೂ ರಥಗಳು ಚಲಿಸ್ತಾ ಇದ್ದಾವೆ, ಎರಡೂ ಸೂತರ ಸಾರಥ್ಯವು ಪ್ರಕಟವಾಗ್ತಾ ಇದೆ. ಚಿತ್ರವಿಚಿತ್ರವಾಗಿ ಸಂಚರಿಸಿದ ರಥಗಳು ಕೊನೆಯಲ್ಲಿ ಒಂದಕ್ಕೊಂದು ಇದಿರಾಗಿ ನಿಂತವು. ಆಗ ರಾಮನು ನಾಲ್ಕು ಬಾಣಗಳನ್ನು ರಾವಣನ ಕುದುರೆಗಳ ಮೇಲೆ ಪ್ರಯೋಗ ಮಾಡಿದಾಗ ರಾವಣನ ರಥ ಹಿಮ್ಮೆಟ್ಟಿತು. ರಾವಣನಿಗೆ ಸಿಟ್ಟು ಬಂತು. ರಾಮನ ಮೇಲೆ‌ ನಿಶಿತವಾದ ಬಾಣಗಳನ್ನು ಪ್ರಯೋಗ ಮಾಡ್ತಾನೆ, ಆ ಬಾಣಗಳು ರಾಮನಿಗೆ ತಗುಲಿದೆ. ಅದ್ರೆ ರಾಮನಿಗೆ ವ್ಯಥೆಯೂ ಆಗಲಿಲ್ಲ, ವಿಕಾರವೂ ಆಗಲಿಲ್ಲ. ಆಗ ಸಾರಥಿ ಮಾತಲಿಯ ಮೇಲೆ ತೀಕ್ಷ್ಣ ಬಾಣಗಳ ಮಳೆಗರೀತಾನೆ ದಶಾನನ. ಆಶ್ಚರ್ಯವೆಂದರೆ ಅವುಗಳಿಂದ ಸಣ್ಣ ವ್ಯತ್ಯಾಸವೂ ಮಾತಲಿಗಾಗಲಿಲ್ಲ. ರಾಮನಿಗೆ ಸಿಟ್ಟು ಬಂತು. ತನ್ನ ಬಾಣಗಳ ಜಾಲದಿಂದ ರಾವಣನನ್ನು ಸೋಲಿಸಿದನು. ರಾವಣ ಗಧೆಗಳ, ಮುಸಲಗಳ ಮಳೆಗರೀತಾನೆ ರಾಮನ ಮೇಲೆ‌. ಭಯಂಕರ ಶಬ್ದ! ಏತನ್ಮಧ್ಯೆ, ದಿವಿಯಲ್ಲಿ ಸೇರಿದ ದೇವತೆಗಳು ಚಿಂತಾಕ್ರಾಂತರಾದರು. ‘ಎಷ್ಟು ಹೊತ್ತು ಇದು? ಮುಗಿಯೋದೇ ಇಲ್ವಲ್ಲ!? ಗೋಬ್ರಾಹ್ಮಣರಿಗೆ ಶುಭವಾಗಲಿ, ‌ಲೋಕಗಳು ಶಾಶ್ವತವಾಗಿ ನೆಲೆಗೊಂಡಿರಲಿ, ಯುದ್ಧದಲ್ಲಿ ರಾಮನು ರಾಕ್ಷಸೇಶ್ವರ ರಾವಣನನ್ನು ಜಯಿಸಲಿ’ ಎಂಬ ವಾಕ್ಯಗಳು ಅವರ ಬಾಯಿಂದ ಹೊರಬೀಳ್ತಾ ಇವೆ. ಗಂಧರ್ವ ಅಪ್ಸರೆಯರು ಹಾಡಿದರು, ‘ಗಗನಕ್ಕೆ ಗಗನವೇ ಸಾಟಿ, ಸಮುದ್ರಕ್ಕೆ ಸಮುದ್ರವೇ ಸಾಟಿ. ಹಾಗೆಯೇ, ರಾಮ ರಾವಣರ ಯುದ್ಧಕ್ಕೆ ರಾಮ ರಾವಣರ ಯುದ್ಧವೇ ಸಾಟಿ’ ಎಂದ.

ಈಗ ರಾಮನು ವಂಶದ ಕೀರ್ತಿಯನ್ನೇ ವೃದ್ಧಿಸುವಂತಾ ಸರ್ಪದಂತಿರುವ ‘ಕ್ಷುರ’ ಎಂಬ ಬಾಣವನ್ನು ಕೈಗೆತ್ತಿಕೊಂಡು ಆಕರಣಾಂತವಾಗಿ ಸೆಳೆದು ಪ್ರಯೋಗಿಸಿ ರಾವಣನ ತಲೆಯನ್ನು ಕತ್ತರಿಸಿ ಕೆಡವಿದ. ಆದರೆ ತಲೆಬಿದ್ದ ಸ್ಥಳದಲ್ಲಿ ಮತ್ತೊಂದು ಶಿರವು ಬಂತು! ರಾಮ ಮತ್ತೊಂದು ಬಾಣದಿಂದ ಆ ತಲೆಯನ್ನೂ ಕಡಿದು ಕೆಡವಿದ. ಇನ್ನೊಂದ ಹುಟ್ಟಿ ಬಂತಂತೆ ಆಗ! ರಾಮ ಬೇಸರಿಸದೆ ತಲೆ ಕಡಿತಲೇ ಇದ್ದ, ಹೊಸ ತಲೆ ಹುಟ್ಟಿ ಬರುತ್ತಲೇ ಇತ್ತಂತೆ. ನೂರು ತಲೆಗಳಾದವು! ರಾವಣ ಸಾಯಲಿಲ್ಲ. ಆಗ ರಾಮ ಚಿಂತಿಸ್ತಾನೆ, ‘ಏನಪ್ಪಾ ಇದು? ಯುದ್ಧದಲ್ಲಿ ಭರವಸೆಯಾಗಿರುವ ನನ್ನ ಬಾಣಗಳು ಯಾಕೆ ರಾವಣನಲ್ಲಿ ನಿರೀಕ್ಷಿಸಿದ ಫಲವನ್ನು ಕೊಡ್ತಾ ಇಲ್ಲ!’ ಎಂಬುದಾಗಿ. ಆದರೆ ಯುದ್ಧವನ್ನು ಮಾಡ್ತಾನೇ ಇದ್ದ. ಆಗ, ತಲೆಯನ್ನು ಬಿಟ್ಟು ವಕ್ಷಸ್ಥಳದಲ್ಲಿ ಪ್ರಯೋಗ ಮಾಡ್ತಾನೆ ರಾಮ. ತಿರುಗಿ ಗಧೆ, ಮುಸಲಗಳ ಮಳೆಯನ್ನು ರಾಮನ ಮೇಲೆ ಗರೆದ. ಆಗ ಉಪಕ್ರಮಿಸಿದ ಯುದ್ಧವು ಅದ್ಭುತವಾಗಿ ನಡೆದಿದೆ. ಎಲ್ಲ ಕಡೆ ಬಹುದೊಡ್ಡ ಪ್ರೇಕ್ಷಕ ಸ್ತೋಮ ಆಗಿಬಿಟ್ಟಿತಂತೆ. ರಾತ್ರಿಯಿಡೀ ಯುದ್ಧ ನಡೆಯಿತು. ಹಗಲಿಡೀ ಯುದ್ಧ ಕ್ಷಣಮಾತ್ರವೂ ನಿಂತ ಸಂದರ್ಭವೇ ಇಲ್ಲ. ಬಿರುಸಿನಿಂದ ನಡೀತಲೇ ಇದೆ. ಆಗ ಮಾತಲಿ ಗಮನಿಸ್ತಾನೆ. ಜಯ-ಅಪಜಯಗಳು ನಿಶ್ಚಯವಾಗ್ತಾ ಇಲ್ಲ. ಅದನ್ನು ಕಂಡು ಮಾತಲಿಯು ರಾಮನಿಗೆ ನೆನಪಿಸಿದ, ‘ಪ್ರಭುವೆ, ಏನು ಗೊತ್ತಿಲ್ಲದವನಂತೆ ಏಕೆ ಅವನನ್ನು ಆಟವಾಡಲು ಬಿಡ್ತಾ ಇದ್ದೀಯಾ? ಇವನ ವಧೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸು. ದೇವತೆಗಳು ಹೇಳಿದ ರಾವಣನ ವಿನಾಶದ ಸಮಯ ಬಂದಿದೆ’ ಎಂಬುದಾಗಿ ನೆನಪಿಸಿದ ಮಾತಲಿ. ರಾಮನಿಗೆ ನೆನಪಾಯ್ತು. ಬುಸುಗುಡುವ ಸರ್ಪದಂತಿದ್ದ ಪ್ರಜಲ್ವಿಸುವ ಆ ಶರವನ್ನು ರಾಮನು ಕೈಗೆತ್ತಿಕೊಳ್ತಾನೆ. ರಾಮನಿಗೆ ವನವಾಸ ಸಮಯದಲ್ಲಿ ಅಗಸ್ತ್ಯರು ಕೊಟ್ಟಿದ್ದ ಬಾಣವದು. ಇಂದ್ರನಿಗಾಗಿ ಬ್ರಹ್ಮನೇ ನಿರ್ಮಿಸಿದ್ದ ಆ ಬಾಣವನ್ನು ಅಗಸ್ತ್ಯರಿಗೆ ಪಿತಾಮಹ ಬ್ರಹ್ಮನೇ ಕೊಟ್ಟಿದ್ದ. ಎಲ್ಲ‌ ಯೋಜಿತ!!

ನೋಡಲಿಕ್ಕೆ ಬಾಣ. ಆದರೆ ಅದರೊಳಗೆ ಯಾರಾರೋ ಇದ್ದಾರೆ. ಆ ಬಾಣದ ರೆಕ್ಕೆಯಲ್ಲಿ ವಾಯುದೇವ, ಅಲುಗಿನಲ್ಲಿ ಅಗ್ನಿ ಮತ್ತು ಸೂರ್ಯ. ಆಕಾಶ ತತ್ತ್ವವೇ ಬಾಣದ ಶರೀರವಾಗಿದೆ. ಮೇರು ಮಂದರ ಪರ್ವತಗಳು ಆ ಬಾಣಕ್ಕೆ ಒಂದು ತೂಕವನ್ನು ಕೊಟ್ಟಿವೆ. ಹೊಗೆಯುಗುಳುವ ಪ್ರಳಯ ಕಾಲದ ಅಗ್ನಿಯಂತೆ, ವಿಷ ಕಾರುವ ಸರ್ಪದಂತಿದ್ದ ಬಾಣ. ಶತ್ರು ಸೈನ್ಯಗಳನ್ನು ಧ್ವಂಸ ಮಾಡುವ, ಅತ್ಯಂತ ವೇಗವಾಗಿ ತನ್ನ ಕೆಲಸ ಮಾಡುವ ಬಾಣವದು. ಮಹಾಪರ್ವತಗಳನ್ನೇ ಭೇದಿಸಿಬಲ್ಲ ಬಾಣವದು. ಆ ಬಾಣವು ತಾನು ಹಿಂದೆ ಮಾಡಿದ ಕಾರ್ಯದ ಗುರುತುಗಳನ್ನು ಇಟ್ಕೊಂಡಿದೆ. ಲೋಕಕಂಟಕರ ರಕ್ತದ ಕುರುಹಿದೆ ಅಲ್ಲಿ. ಅತ್ಯಂತ ಧಾರುಣ ಬಾಣವದು. ವಜ್ರದಂತೆ ಗಟ್ಟಿ, ಸ್ವಯಂ ನಾದವುಳ್ಳದ್ದು. ಎಲ್ಲರನ್ನೂ ಬೆದರಿಸಬಲ್ಲದು. ಆ ಬಾಣ ಹೊರಗೆ ಬಂದರೆ ಕಾಗೆಗಳು ಹದ್ದುಗಳು, ಬಕ ಪಕ್ಷಿಗಳು, ನರಿಗಳಿಗೆಲ್ಲ ದೊಡ್ಡ ಔತಣಕೂಟ ಕೊಡುವ ಬಾಣವದು. ಹೆಚ್ಚೇನು? ಯಮನೇ ಅದು. ಆ ಬಾಣವು ವಾನರ ನಾಯಕರ ಪಾಲಿಗೆ ಆನಂದನ, ರಾಕ್ಷಸರ ಪಾಲಿಗೆ ಅವಸಾಧನ.

ಸಕ್ಷಾತ್ ಗರುಡನ ಗರಿಗಳಿಂದ ಶೋಭಿತವಾಗಿದೆ. ಲೋಕಲೋಕಾಂತರಗಳಲ್ಲಿ ಈ ಬಾಣದಂತಹ ಮತ್ತೊಂದು ಬಾಣ ಇಲ್ಲ. ಮೂರು ಲೋಕದಲ್ಲೇ ಸರ್ವೋತ್ಕೃಷ್ಟ ಬಾಣ, ಸೀತಾಪಹಾರದಿಂದ ಒದಗಿದಂತಹ ಇಕ್ಷ್ವಾಕು ವಂಶಕ್ಕೆ ಬಂದ ಆಪತ್ತು ಒದಗಿದೆಯೋ ಅದನ್ನು ಪರಿಹಾರ ಮಾಡಬಲ್ಲ ಬಾಣ, ಶತ್ರುಗಳ ಕೀರ್ತಿಯನ್ನು ದೂರಮಾಡುವಂತಹ ಬಾಣ, ಆತ್ಮಾನಂದವನ್ನು ಉಂಟುಮಾಡುವಂತಹ ಬಾಣ. ಅಂತಹ ಬಾಣವನ್ನು ಬತ್ತಳಿಕೆಯಿಂದ ಹೊರತೆಗೆದು, ಅಭಿಮಂತ್ರಿಸಿ ಧನಸ್ಸಿನಲ್ಲಿ, ಧನುರ್ವೇದೋಕ್ತ ವಿಧಿಯಿಂದ ಹೂಡುತ್ತಾನೆ ರಾಮ. ಧನುಸ್ಸಿನಲ್ಲಿ ರಾಮ ಬಾಣವನ್ನು ಇಟ್ಟಿದ್ದೇ ಸಮಸ್ತ ಜೀವಕೋಟಿಗಳು ಕಂಪಿಸಿದವು. ಭೂಮಿ ನಡುಗಿತು. ಅಷ್ಟು ಶಕ್ತಿ ಇದೆ ಆ ಬಾಣದಲ್ಲಿ. ರಾಮನು ಕ್ರುದ್ಧನಾಗಿ, ತನ್ನ ಇಡೀ ಸಾರ್ಮಥ್ಯವನ್ನು ಇಟ್ಟು ತನ್ನ ಎದೆಯವರೆಗೆ ಎಳೆದು ಬಾಣವನ್ನು ಬಿಟ್ಟಿದ್ದಾನೆ. ಬಿಟ್ಟ ಬಾಣ ಒಂದು ಕ್ಷಣ ತಡಮಾಡದೇ ರಾವಣನ ಎದೆಯನ್ನು ಹೊಕ್ಕಿತು. ಅದು ಹೊರಟಿತು ಹೋಗ್ತಾ ಇತ್ತು ತಲುಪಿತು ಎನ್ನುವ ಹಂತವೇ ಇಲ್ಲ. ಹೊರಟಿದ್ದು ಮತ್ತು ಮುಟ್ಟಿದ್ದರ ಮಧ್ಯದಲ್ಲಿ ಸಮಯ ವ್ಯತ್ಯಾಸವೇ ಇಲ್ಲ. ಬಾಣ ಬಿಟ್ಟ ಮೇಲೆ ಅದರ ಗುರಿ ಮುಟ್ಟಲು ಸ್ವಲ್ಪವಾದರೂ ಸಮಯ ಬೇಕು. ಶತ್ರು ಅದನ್ನು ಧ್ವಂಸಮಾಡಲು ಅಥವಾ ಅದಕ್ಕೆ ಪ್ರತ್ಯುತ್ತರ ಕೊಡಲು ಸಾಮಾನ್ಯವಾಗಿ ಸಮಯ ಇರುತ್ತದೆ. ಆದರೆ ಇಲ್ಲಿ ಮಾತ್ರ ಬಿಡಲು ಮತ್ತು ಮುಟ್ಟಲು ಯಾವ ಸಮಯವೂ ಇಲ್ಲ. ವಜ್ರಪಾಣಿಯು ಪ್ರಯೋಗಿಸಿದ ವಜ್ರದಂತೆ, ತಡೆಯಲಿಕ್ಕೇ ಸಾಧ್ಯವಾಗದ ಯಮನಂತೆ ಆ ಬಾಣ ಗುರಿ ಮುಟ್ಟಿತು. ಯಾವ ಅಸ್ತ್ರಗಳಿಂದಲೂ, ಯಾವ ಮಂತ್ರಗಳಿಂದಲೂ, ಯಾವ ಬಾಣಗಳಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ.

ಮಹಾವೇಗದ ಆ ಬಾಣ ರಾವಣನ ಎದೆಗೇ ಬಿತ್ತು. ದುರಾತ್ಮಕನಾದ ರಾವಣನ ಎದೆಯನ್ನು ಭೇದಿಸಿ ಶುದ್ಧಮಾಡಿತು. ಇನ್ನೊಂದು ಕಡೆಯಿಂದ ಹೊರ ಬಂತು. ಬಂದಾಗ ಇಡೀ ಬಾಣ ಕೆಂಪಾಗಿದೆ, ರಾವಣನ ರಕ್ತದಿಂದ. ಹೊರಬಂದಾಗ ರಾವಣನ ಜೀವವನ್ನೂ ತಂದಿದೆ. ಹೊರಬಂದು ಎಲ್ಲಿ ಹೋಯಿತೋ ಗೊತ್ತಾಗಲಿಲ್ಲ. ಸ್ವಲ್ಪ ಸಮಯದಲ್ಲಿ, ತನಗೆ ಕೊಟ್ಟ ಕಾರ್ಯವನ್ನು ಮುಗಿಸಿ, ವಿನೀತನಾಗಿ, ಬಂದು ರಾಮನ ಬತ್ತಳಿಕೆಯನ್ನು ಸೇರಿತು. ಒಂದು ಪ್ರದಕ್ಷಿಣೆ ಹಾಕಿ, ಹೀಗೆ ಹೋಗಿ ರಾವಣನ ಜೀವವನ್ನು ತೆಗೆದುಕೊಂಡು, ಹಾಗೇ ಬಂದು ರಾವಣನ ಜೀವದೊಡನೆ, ರಾಮನ ಬತ್ತಳಿಕೆಯನ್ನು ಸೇರಿತು. ಈಕಡೆಗೆ ಅಸುರಪತಿ ಬಿದ್ದ. ಅವನು ಬೀಳುವ ಮೊದಲು ಬಾಣರಹಿತ ಧನಸ್ಸು ಬಿತ್ತಂತೆ. ಎಲ್ಲರೂ, ದಿವಿಯಿಂದ, ಭುವಿಯಿಂದ ನೋಡುನೋಡುತ್ತಿದ್ದಂತೆಯೇ ರಾಕ್ಷಸೇಂದ್ರ ರಥದಿಂದ ಭೂಮಿಗೆ ಬಿದ್ದ. ವಾನರರು ಹರ್ಷೋದ್ಗಾರ ಮಾಡಿ, ರಾಮನನ್ನು ಹಾಡಿ ಹೋಗಳಿದರು. ಆಕಾಶದಲ್ಲಿ ದೊಡ್ಡ ಮಹೋತ್ಸವವೇ ಪ್ರಾರಂಭವಾಗಿದೆ. ದೇವದುಂದುಭಿ ಮೊಳಗಿತು, ಪರಿಮಳಯುಕ್ತವಾದ ಗಾಳಿ ಬೀಸಿತು.

ಬಹು ಸಮಯದ ನಂತರ ಗಾಳಿಯು ಬಹು ಹಿತವಾಗಿ ಸಂತೋಷವಾಗಿ ಬೀಸಿದೆ. ಗಗನದಿಂದ ಪುಷ್ಪವೃಷ್ಟಿ ರಾಮ ಮತ್ತು ರಥದ ಮೇಲೆ ಬೀರಿತು. ಆಕಾಶದಲ್ಲಿ ರಾಮನ ಸ್ತುತಿ ಕೇಳಿಬಂತು. ರಾವಣನ ಪತನವಾಯಿತು. ಸುಗ್ರೀವ ಮತ್ತು ಅಂಗದನ ಉಲ್ಲೇಖ ಮಾಡ್ತಾರೆ ವಾಲ್ಮೀಕಿಗಳು. ಅವರು ಈಗ ಪೂರ್ಣಕಾಮರು. ರಾವಣ ಸಾಯಬೇಕು ಎನ್ನುವ ಇಚ್ಛೆ ಪೂರ್ತಿಯಾಯಿತು. ದೇವತೆಗಳು ಸಮಾಧಾನ ಹೊಂದಿದರು, ದಿಕ್ಕುಗಳು ನಿರ್ಮಲವಾಯಿತು, ಆಕಾಶವು ನಿರ್ಮಲವಾಯಿತು, ಭೂಮಿ ತನ್ನ ಕಂಪನವನ್ನು ನಿಲ್ಲಿಸಿ ಸ್ಥಿರವಾಯಿತು, ಗಾಳಿ ಹಿತವಾಗಿ ಬೀಸಿತು, ಮಂಕಾದ ಸೂರ್ಯ ಪುನಃ ತನ್ನ ಪ್ರಭೆಯನ್ನು ಬೆಳಗಿದ. ಅದರ ಅರ್ಥ ಪ್ರಕೃತಿ ತನ್ನ ಸ್ವಸ್ಥಿತಿಗೆ ಮರಳಿತು. ಅಲ್ಲಿಯವರೆಗೆ ಪ್ರಕೃತಿ, ವಿಕೃತಿ ಆಗಿತ್ತು. ಎಲ್ಲರೂ ರಾಮನನ್ನು ಪೂಜಿಸ್ತಾ, ಆದರಿಸುತ್ತಾ, ಗೌರವಿಸ್ತಾ ಇದ್ದಾರೆ. ರಾಮನೂ ಕೂಡ ಪರಮಾನಂದ ಸ್ಥಿತಿಯಲ್ಲಿದ್ದಾನೆ. ಎತ್ತ ನೋಡು ಅತ್ತ ಸಂಭ್ರಮ. ಆ ಸ್ಥಿತಿ ಕಳೆದ ಬೆಳಿಕ ವಿಭೀಷಣನಿಗೆ ದುಃಖ ಆವರಿಸಿತು, ಎಷ್ಟೇಂದರೂ ಸ್ವಂತ ಅಣ್ಣ. ಒಳ್ಳೆಯ ದಾರಿಗೆ ತರಲಿಕ್ಕೆ ಪ್ರಯತ್ನ ಮಾಡಿದ್ದಾನೆ. ಬಿದ್ದ ಅಣ್ಣನನ್ನು ಕಂಡು ನಿಜವಾಗಿ ದುಃಖಿಸಿದ. ಅವನಲ್ಲಿ ಇದ್ದ ಒಳ್ಳೆಯ ಗುಣಗಳನ್ನು, ಸಕಾರಾತ್ಮಕವಾದ ಬಲವನ್ನು ನೆನಪುಮಾಡಿಕೊಂಡು ದುಃಖಿಸಿದ. ದುಃಖ ಪಟ್ಟು ಹೇಳಿದ, “ಅಣ್ಣ ನಿನಗೆ ಸಾರಿ ಸಾರಿ ಹೇಳಿದೆ ನಾನು. ಮೋಹಗಳನ್ನು ನಿನ್ನ ಆವರಿಸಿದ್ದ ಕಾರಣ ನನ್ನ ಮಾತುಗಳು ನಿನಗೆ ರುಚಿಸಲಿಲ್ಲ. ಹೋಗಲಿ ಪ್ರಹಸ್ತನೋ, ಇಂದ್ರಜಿತುವೋ, ಅತಿಕಾಯನೋ, ಕುಂಭಕರ್ಣನು ಒಪ್ಪಿಕೊಳ್ಳಬಹುದಾಗಿತ್ತು. ಯಾರು ಮಾಡಲಿಲ್ಲ. ಅದರ ಫಲ ಇದು.

ಆಗ ರಾಮ ಸಂತೈಸಿದ, “ಇದು ಕ್ಷತ್ರಿಯ ಧರ್ಮದ ವಿಷಯ. ಯಾರು ಧರ್ಮ ಯುದ್ಧದಲ್ಲಿ ಹೋರಾಡುತ್ತಾ ಹೋರಾಡುತ್ತಾ ಮರಣ ಹೊಂದುತ್ತಾರೆಯೋ ಅವರ ಬಗ್ಗೆ ದುಃಖಿಸಬಾರದು. ಯಾಕೆಂದ್ರೆ ಅವನಿಗೆ ಒಳ್ಳೆಯದಾಗಿರ್ತದೆ. ಶರೀರ ನಶಿಸಿ ಹೋದರೂ ಕೂಡ ಜೀವಕ್ಕೆ ಒಳ್ಳೆಯದಾಗಿರ್ತದೆ. ರಾವಣ ವಿಷಯದಲ್ಲಿ ಇದು ಹೌದು. ರಾಮ ಕೈಯಲ್ಲಿ, ರಾಮನ ಕಣ್ಮುಂದೆ, ರಾಮ ಸಂಕಲ್ಪಮಾಡಿದ ಬಾಣದಿಂದ ಪ್ರಾಣ ಕಳೆದುಕೊಂಡವನು ಅವನಿಗೆ ಒಳ್ಳೆಯದೇ ಆಗುತ್ತದೆ. ಕೆಟ್ಟದಾಗಲು ಸಾಧ್ಯವೇ ಇಲ್ಲ. ರಾಮನಿಗೆ ಸಂಬಂಧಪಟ್ಟಂತಹ ಜೀವ, ಅವನಿಗೇ ಸಮರ್ಪಣೆ. ಇಲ್ಲಿ ರಾಮ ರಾವಣ, ಅಲ್ಲಿ ಶ್ರೀಮನ್ನಾರಾಯಣ ಮತ್ತು ಜಯ, ಅವನದ್ದೇ ದ್ವಾರಪಾಲ, ಅವನದ್ದೇ ಒಂದು ಅಂಶ, ಒಂದು ಕಿರಣ. ಅಲ್ಲದೇ ಈ ಲೋಕದ ಮರ್ಯಾದೆಯನ್ನು ಅನುಸರಿಸಿದರೂ ಕೂಡ ಯುದ್ಧದಲ್ಲಿ ಹೋರಾಡಿ ಹೋರಾಡಿ ಮೃತನಾದವನು ಬ್ರಹ್ಮಲೋಕವನ್ನು ಸೇರ್ತಾನೆ ಎಂದು ಶಾಸ್ತ್ರ ಹೇಳ್ತದೆ. ದೇಹ ದೋಡ್ಡದಲ್ಲ ಜೀವ ದೊಡ್ಡದು. ದೇಹ ಶಾಶ್ವತ ಅಲ್ಲ. ಜೀವಕ್ಕೆ ಒಳ್ಳೆಯದಾಗಬೇಕು. ಮುಂದೆ ಏನು ಅಂತ ಆಲೋಚನೆ ಮಾಡು”.

ಆಗ ವಿಭೀಷಣನು ಆ ಜೀವಕ್ಕೆ ಇನ್ನೇನು ಒಳ್ಳೆಯದಾಗಬಹುದು ಎಂದು ಆಲೋಚನೆ ಮಾಡ್ತಾ ಮಾಡ್ತಾ ರಾಮನಿಗೆ ಹೇಳಿದ, “ಅಣ್ಣನು ಯಾವಾಗಲೂ ಸೋತವನಲ್ಲ. ಆದರೆ ನಿನ್ನ ಎದುರು ಬಂದದ್ದೇ ಭಗ್ನನಾದ. ಬೇಕಾದಷ್ಟು ದಾನವನ್ನು, ಪೂಜೆಯನ್ನೂ ಮಾಡಿದ್ದಾನೆ ಜೀವನದಲ್ಲಿ. ಬಹಳ ಸುಖವನ್ನೂ ಪಟ್ಟಿದ್ದಾನೆ. ತನ್ನ ಸೇವಕರಿಗೆ ಬೇಕಾದ ವಸ್ತ್ರ, ವಾಹನ ಕೊಟ್ಟು ಅವರನ್ನು ಪೋಷಣೆ ಮಾಡಿದ್ದಾನೆ. ತನ್ನ ಸ್ನೇಹಿತರಿಗೆ ಬೇಕಾದಷ್ಟು ಒಳ್ಳೆಯದನ್ನು ಮಾಡಿದ್ದಾನೆ. ಶತ್ರುಗಳ ಮೇಲೆ ಹಗೆ ತೀರಿಸಿದ್ದಾನೆ. ಕ್ಷಾತ್ರ ಧರ್ಮವನ್ನು ಆಶ್ರಯಿಸಿ, ಶತ್ರುಗಳ ಜೊತೆಗೆ ಹೋರಾಡಿ ಹಗೆ ತೀರಿಸಿದ್ದಾನೆ. ಅವನು ಆಹಿತಾಗ್ನಿ, ಅಗ್ನಿಹೋತ್ರ ಇಟ್ಟವನು. ದಕ್ಷಿಣಾಗ್ನಿ ಅವಹಾನಾಗ್ನಿ ತ್ರೇತಾಗ್ನಿಯನ್ನಿಟ್ಟು ನಿತ್ಯ ಅಗ್ನಿಹೋತ್ರ ಇಟ್ಟವನು. ವೇದಾಂತ ಬಲ್ಲವನು. ಕರ್ಮಗಳಲ್ಲಿ ನಿಪುಣ. ಒಂದು ಕಾರ್ಯ ಮಾಡುವ ದಕ್ಷತೆ ಇದೆ. ಇಂತವನು ಹೋಗಿದ್ದಾನೆ. ಹಾಗಾಗಿ ಅವನ ಪ್ರೇತಕೃತ್ಯ ಮತ್ತು ಅಪರಕ್ರಿಯೆಯನ್ನು ಮಾಡಲು ಅಪ್ಪಣೆ ಕೊಡು.” ರಾಮನಿಗೂ ಕರುಣೆ ಬಂತು. ರಾಮನು ವಿಭೀಷಣನಿಗೆ ಮುಂದಿನ ಕ್ರಿಯೆಯನ್ನು ಮಾಡಲು ಅಪ್ಪಣೆ ಕೊಟ್ಟ. “ಉತ್ತರಕ್ರಿಯೆ ಸರಿಯಾಗಿ ಮಾಡು. ಅಳ್ತಾ ಅಳ್ತಾ ಮಾಡಬೇಡ. ವ್ಯವಸ್ಥಿತವಾಗಿ ಮಾಡು. ಅಪ್ಪಣೆ ಕೇಳುವುದೇತಕ್ಕೆ, ಈ ಕಾರ್ಯವನ್ನು ಮಾಡಲೇ ಬೇಕು ತಾನೇ. ಮರಣವೇ ಗಡಿ ವೈರಕ್ಕೆ. ಸತ್ತ ಮೇಲೆ ವೈರತ್ವ ಇಲ್ಲ. ಜೀವದ ಮೇಲೆ ವೈರ ಇಲ್ಲ. ಯಾವುದೇ ಜೀವಕ್ಕೆ ಯಾವಾಗಲೂ ಒಳ್ಳೆಯದನ್ನು ಬಯಸಬೇಕು. ಇದು ಭಾರತೀಯತೆ. ವಿದೇಶದಲ್ಲಿ ಕೆಲವುಕಡೆ ಶರೀರವನ್ನು ದಫನ್ ಮಾಡ್ತರೆ. ಮುಂದೆ ಯಾವಾಗಲೋ ದೇವರು ಬಂದು ಅವರನ್ನು ಜೀವಂತ ಮಾಡ್ತಾರೆ ಅಂತ. ಹಾಗಾಗಿ ಕೆಲವೊಂದು ಕಡೆ ಶರೀರವನ್ನು ತುಂಡು ತುಂಡು ಮಾಡಿ ಬೇರೆ ಬೇರೆ ಕಡೆ ಹಾಕಿ ಬಿಡ್ತಾರೆ, ಜೀವ ಬಂದು ಎದ್ದು ಬರಬಾರದು ಎಂದು. ಆದರೆ ಭಾರತೀಯತೆಯಲ್ಲಿ, ಶತ್ರುವಾದರೂ ಕೂಡ, ಆ ಜೀವ ಮುಕ್ತಿ ಹೊಂದುವಂತೆ ಹೊಡೆಯಬೇಕು. ರಾಮಭದ್ರಾಚಾರ್ಯರು ಹೇಳ್ತಾ ಇದ್ದರು. ನಿನ್ನ ಕೊನೇ ಕ್ಷಣ ಬಂತು ಅಂತ ಪ್ರತಿಯೊಬ್ಬರನ್ನೂ ಎಚ್ಚರಿಸಬೇಕು. ಇದೋ ಈ ಪ್ರಹಾರ ಮಾಡ್ತಾ ಇದ್ದೇನೆ, ನಿನ್ನ ಕೊನೇ ಕ್ಷಣ ಬಂತು ದೇವರ ಸ್ಮರಣೆ ಮಾಡು ಎಂದು ಅವನನ್ನು ಎಚ್ಚರಿಬೇಕು. ಆ ಜೀವಕ್ಕೆ ಶ್ರೇಯಸ್ಸನ್ನು ಹಾರೈಸುವಂತಹ ಭಾರತ ಹೃದಯ ಇನ್ನೇಲ್ಲೂ ಇಲ್ಲ. ಹೇಗೇಗೋ ಕೊಲ್ಲುವ ಹಾಗಿಲ್ಲ, ಮುಕ್ತಿಯಾಗುವಂತೆಯೇ ಕೊಲ್ಲಬೇಕು.

ರಾವಣನಲ್ಲಿ ಇನ್ನು ವೈರವಿಲ್ಲ. ನಮಗೆ ಬೇಕಾಗುವ ಕೆಲಸ, ಸೀತೆ, ಆಯಿತು ತಾನೇ, ಇನ್ಯಾಕೆ ವೈರ ನಮಗೆ. ರಾವಣನ ಅಪರಕ್ರಿಯೆಯನ್ನು ಮಾಡು. ನಿನಗೆ ಹೇಗೋ ಅವನು, ನನಗೂ ಹಾಗೇ. ನನಗೂ ಸೋದರ. ರಾಮನು ಜಗತ್ತಿಗೆ ಕೊಟ್ಟ ಸಂದೇಶ ಏನು ಈ ಮೂಲಕ? ಅಷ್ಟರಲ್ಲಿ ರಾವಣನ ಸತಿಯರು ಧಾವಿಸಿ ಬರ್ತಾ ಇದ್ದಾರೆ. ಯುದ್ಧ ಭೂಮಿಗೆ ಅವರು ಹೋಗಬಾರದೆಂದು, ಅವರನ್ನು ಎಷ್ಟು ತಡೆದರೂ, ಯಾರು ತಡೆದರೂ ಕೇಳ್ತಾ ಇಲ್ಲ. ರಾಕ್ಷಸಿಯರು ಶೋಕದಿಂದ ಓಡಿ ಬರ್ತಾ ಇದ್ದಾರೆ. ಮಧ್ಯ ಮಧ್ಯದಲ್ಲಿ ದುಃಖ ತಡೆಯಲಾರದೇ ಬಿದ್ದು ಹೊರಳಾಡುತ್ತಿದ್ದಾರೆ. ರಾಕ್ಷಸಿಯರು ಉತ್ತರ ದ್ವಾರದಿಂದ ಬಂದು ಯುದ್ಧ ಭೂಮಿಗೆ ಬರ್ತಾರೆ. ಯುದ್ಧಭೂಮಿಯಲ್ಲಿ ಶವಗಳ ರಾಶಿ ತಾನೇ. ತುಂಡು ತುಂಡಾದ ಅಂಗಾಂಗಗಳು, ಹರಿಯುವ ರಕ್ತ. ಅಲ್ಲಿ ಬಿದ್ದ ಶವಗಳ ಮಧ್ಯದಲ್ಲಿ ರಾವಣ ಎಂದು ಆಕ್ರಂದನ ಮಾಡ್ತಾ ಹುಡುಕುತ್ತಾ ಇದ್ದಾರೆ. ಎಲ್ಲಿ ರಾವಣ ಸತ್ತು ಬಿದ್ದಿದ್ದನೋ ಅಲ್ಲಿಗೆ ಬಂದರು. ಆ ಮಹಾವೀರ್ಯ, ಮಹಾಕಾಯ, ಮಹಾತೇಜಸ್ವಿ ಬಿದ್ದು ಬಿಟ್ಟಿದ್ದಾನೆ ಕೆಳಗೆ. ಅವನನ್ನು ಕಂಡು ದುಃಖದಿಂದ ಬಿದ್ದು ಬಿಟ್ಟರಂತೆ ಆ ರಾಕ್ಷಸಿಯರು. ಯಾರೋ ಒಬ್ಬಳು ಹಾಗೇ ಆಲಂಗಿಸಿಕೊಂಡಳು, ಇನ್ಯಾರೋ ಕಾಲನ್ನು ಆಲಂಗಿಸಿದಳು. ಇನ್ಯಾರೋ ಕಂಠವನ್ನು ಹಿಡಿದಿಕೊಂಡಳು. ಇನ್ನೊಬ್ಬಳು ಅವನ ಮುಖವನ್ನು ಕಂಡು ಮೂರ್ಚೆ ತಪ್ಪಿದಳು. ವಿಧಿ ಇದು, ಪರಿಹಾರವಿಲ್ಲ.

ಒಂದು ಹಂತದಲ್ಲಿ ಅವರು ಗೋಳಾಡುವಾಗ ಕೂಡ ಸರಿ ತಪ್ಪಿನ ಬಗ್ಗೆ ವಿವೇಚನೆ ಮಾಡ್ತಾರೆ. ಏನೆಂದರು? “ನಿನ್ನ ಹಿತೈಷಿಗಳು ನಿನಗೆ ಎಷ್ಟು ಒಳ್ಳೆಯ ಮಾತನಾಡಿದರೂ ಕೇಳಲಿಲ್ಲ ನೀನು. ರಾಕ್ಷಸರನ್ನು ಕೊಂದೆ. ಮಾತ್ರವಲ್ಲ, ನೀನು ಬಿದ್ದೆ, ನಮ್ಮನ್ನೂ ಕೆಡವಿದೆ. ಸಾರಿ ಸಾರಿ ಹೇಳಿದರೂ ಸೀತೆಯನ್ನು ತಂದೆ. ವಿಭೀಷಣ, ನಿನಗೆ ಇಷ್ಟವಾದ ತಮ್ಮನೇ ಹೌದು. ದುಷ್ಟ ಅಲ್ಲ ನಿನಗೆ, ಇಷ್ಟ ಅವನು. ಅವನೂ ನಿನಗೆ ಹೇಳಲಿಲ್ಲವಾ? ಅವನಿಗೆ ಎಷ್ಟು ಕೆಟ್ಟಮಾತನಾಡಿದೆ, ನೋಯಿಸಿದೆ ನೀನು. ಅದು ಮೂರ್ಖತನದಿಂದ ಮಾಡಿದ ಕೆಲಸ. ಸಾವಿಗಾಗಿ, ಮುಕ್ತಿಗಾಗಿ ಈ ಕೆಲಸ ಮಾಡಿದೆ ನೀನು. ಒಂದು ವೇಳೆ ಸೀತೆಯನ್ನು ನೀನು ಮರಳಿ ಕೊಟ್ಟಿದ್ದರೇ ನಾವೆಲ್ಲ ಚೆನ್ನಾಗಿ ಇರ್ತಿದ್ದೆವು ನಾವು. ನಿನ್ನ ತಮ್ಮನಿಗೂ ಸಂತೋಷ ಆಗ್ತಾ ಇತ್ತು. ರಾಮನು ಮಿತ್ರನಾಗ್ತಾ ಇದ್ದ. ನಾವು ವಿಧವೆಯರಾಗ್ತಾ ಇರಲಿಲ್ಲ. ನಮ್ಮ ಶತ್ರುಗಳು ಅವರು ಸಂತೋಷ ಪಡ್ತಾ ಇದ್ದಾರೆ ಇವತ್ತು, ಅದು ಆಗ್ತಾ ಇರಲಿಲ್ಲ. ಸೀತೆಯನ್ನು ಕರೆತಂದು ನಮ್ಮನ್ನು, ರಾಕ್ಷಸರನ್ನು, ನಿನ್ನನ್ನೂ ನಾಶ ಮಾಡಿದೆ.” ಇದೆಲ್ಲ ದೈವ, ಇದು ವಿಧಿ ಎಂದು ಅಳ್ತಾರೆ. ಇವರ ಮಧ್ಯೆ ಇದ್ದ ಪಟ್ಟದರಾಣಿ ಮಂಡೋದರಿ ತನ್ನ ಪತಿಯ ಮುಖವನ್ನು ವೀಕ್ಷಿಸಿದಳು. ಹೇಳ್ತಾಳೆ, “ರಾಮ ಏನು ಎಂದು ನಮ್ಮ ಚಿಂತನೆಗೂ ಮೀರಿದ್ದು, ಅಂತಹ ರಾಮನಿಂದ ನೀನು ಹತನಾದೆ.”

ರಾಮನೇನು? ರಾಮನ ಕಾರ್ಯವೇನು ಎನ್ನುವಂಥದ್ದು ನಮ್ಮ ಚಿಂತನೆಗೂ ಮೀರಿರುವಂಥದ್ದು. ಅಂತಹ ರಾಮನಿಂದ ಹತನಾಗಿ ಧರೆಗೊರಗಿದ ರಾವಣನನ್ನು ಕಂಡು ವಿಲಪಿಸಿದಳು ಮಂಡೋದರಿ. ಅದು ಹೀಗೆ ಶುರುವಾಗ್ತದೆ. ನಿನ್ನ ಮುಂದೆ ನಿಲ್ಲಲಿಕ್ಕೆ ಇಂದ್ರನೂ ಬೆದರುತ್ತಾನೆ. ದೇವತೆಗಳು ನಡುಗುತ್ತಾರೆ. ದೊಡ್ಡ ದೊಡ್ಡ ಋಷಿಗಳು, ಬ್ರಾಹ್ಮಣೋತ್ತಮರು, ಗಂಧರ್ವರು, ಚಾರಣರು ನಿನಗೆ ಬೆದರಿ ದಿಕ್ಕುದಿಕ್ಕುಗಳಿಗೆ ಓಡಿ ಹೋಗಿದಾರೆ. ಜಗತ್ತಿನಲ್ಲಿ ಯಾರಿಂದಲೂ ಗೆಲ್ಲಲಾಗದಿರುವಂತಹ ಅಜೇಯನಾದ ನೀನು ಒಬ್ಬ ಮನುಷ್ಯ ಮಾತ್ರನಿಂದ ಹೇಗೆ ವಧಿಸಲ್ಪಟ್ಟೆ? ನಾಚಿಕೆಯಾಗೋದಿಲ್ವಾ ನಿನಗೆ? ಮೂರು ಲೋಕವನ್ನೂ ಗೆದ್ದವನು, ಸಂಪತ್ತಿನಿಂದ, ಪರಾಕ್ರಮದಿಂದ ಕೂಡಿದವನು ಅಂತಹ ನಿನ್ನನ್ನು ಒಬ್ಬ ಮನುಷ್ಯ, ವನವಾಸಿ ಹೇಗೆ ಕೊಂದ? ಮನುಷ್ಯರಿಗೆ ಮೀರಿದವನು ನೀನು. ಮನುಷ್ಯರು ನಿನಗೆ ಲೆಕ್ಕವೇ ಅಲ್ಲ. ಅಂತಹ ಕಾಮರೂಪಿಯಾದ ನಿನ್ನನ್ನು ಒಬ್ಬ ಮನುಷ್ಯ ಕೊಂದ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಕೇವಲ ಒಬ್ಬ ಮನುಷ್ಯ ಕೊಂದಿದ್ದಲ್ಲ ನಿನ್ನನ್ನು ಎನ್ನುವುದಾಗಿ ಪ್ರಾರಂಭ ಮಾಡಿ ಅವ್ಳು

ಹೀಗೆ ಮುಂದುವರೆಸ್ತಾಳೆ – ಪಂಚವಟಿಯಲ್ಲಿ ಯಾವಾಗ ಖರನ ವಧೆಯಾಯಿತೋ, ಹದಿನಾಲ್ಕು ಸಾವಿರ ರಾಕ್ಷಸರ ವಧೆಯಾಯಿತೋ, ದೂಷಣ, ತ್ರಿಷಿರರ ವಧೆಯಾಯಿತೋ ಆ ಕ್ಷಣದಲ್ಲಿ ನನ್ನ ಮನಸ್ಸಿಗೆ ಬಂದಿದೆ ‘ರಾಮನು ಮನುಷ್ಯ ಮಾತ್ರನಲ್ಲ’. ಯಾವ ಲಂಕೆಯನ್ನು ಪ್ರವೇಶ ಮಾಡಲು ದೇವತೆಗಳಿಗೂ ಸಾಧ್ಯವಿಲ್ಲವೋ ಅಂತಹ ಲಂಕೆಯನ್ನು ಹನುಮಂತ ಪ್ರವೇಶ ಮಾಡಿದ. ಆಗಲೇ ನನಗೆ ಆತಂಕವಾಯಿತು. ಇವನ ಹಿಂದೆ ಯಾವುದೋ ಶಕ್ತಿ ಇದೆ. ಅದಿಲ್ಲದಿದ್ದರೆ ಸಮುದ್ರವನ್ನು ಲಂಘಿಸಿ ಲಂಕೆಯನ್ನು ಪ್ರವೇಶ ಮಾಡಲು ಒಂದು ಕಪಿಗೆ ಸಾಧ್ಯವಾಗ್ತಾ ಇರ್ಲಿಲ್ಲ. ವಾನರರು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು. ಆಗಲೇ ಆತ್ಮದಾಳದಿಂದ ಶಂಕೆ ಬಂತು ನನಗೆ. ರಾಮನು ಮನುಷ್ಯ ಮಾತ್ರನಲ್ಲ ಎಂದು ನನಗನ್ನಿಸಿತು. ಹಾಗಿದ್ದರೆ ಯಾರು? ರಾಮನ ರೂಪದಲ್ಲಿ ಯಮನೇ ಬಂದನೇ? ನಿನ್ನನ್ನು ನಾಶಪಡಿಸುವ ಸಲುವಾಗಿ ಸೀತೆಯ ರೂಪದಲ್ಲಿ ಕಲ್ಪನೆಗೂ ಮೀರಿದ ಒಂದು ಮಾಯೆಯನ್ನು ನಿರ್ಮಿಸಿ ಯಮನೇ ಬಂದನೇ? ವಿಧಿಯೇ ಬಂದಿತೇ? ಅಥವಾ ರಾಮನ ರೂಪದಲ್ಲಿ ಇಂದ್ರ ಬಂದನೇ? ಯಾಕಂದ್ರೆ ಇಂದ್ರನಿಗೆ ನೀನು ಮೊದಲು ತುಂಬಾ ತೊಂದರೆ ಮಾಡಿದೀಯೆ. ನಿನ್ನಿಂದ ಅಪಚಾರವಾಗಿದೆ ಇಂದ್ರನಿಗೆ. ಅದನ್ನೆಣಿಸಿ ಇಂದ್ರ ಈ ರೂಪವನ್ನು ತಾಳಿ ಬಂದನೇ ಎಂದರೆ ಇಲ್ಲ! ಇಂದ್ರನಿಗೆ ನಿನ್ನನ್ನು ನೋಡಲೂ ಶಕ್ತಿಯಿಲ್ಲ. ಇಂದ್ರನಲ್ಲ ಎಂದು ಹೇಳಿ. ಸ್ಪಷ್ಟ ಇದು: ಈ ರಾಮನು ಮಹಾ ಯೋಗೇಶ್ವರ. ಹುಟ್ಟು-ಸಾವುಗಳಿಲ್ಲದ ಸನಾತನ, ಸದಾತನ ಎನಿಸಿಕೊಳ್ಳುವ ಪರಮಾತ್ಮ. ಅನಾದಿನಿಧನ. ಮಹತ್ತತ್ವವನ್ನು ದಾಟಿದವನು. ತಮಸ್ಸಿನ ಆಕಡೆ ಮಾಯೆಯ ಆಕಡೆ ಇರುವಂಥವನು. ಜಗತ್ತನ್ನು ಪಾಲಿಸಿ ಪೋಷಿಸುವವನು. ಶಂಖ, ಚಕ್ರ, ಗದೆಗಳನ್ನು ಹಿಡಿದಿರತಕ್ಕಂತಹ ಶ್ರೀಮನ್ನಾರಾಯಣ. ಅವನೇ ಇವನು. ಯಾರ ಹೃದಯದಲ್ಲಿ ನಿತ್ಯವೂ ಶ್ರೀವತ್ಸವು ರಾರಾಜಿಸ್ತದೆಯೋ, ಲಕ್ಷ್ಮಿ ಯಾರನ್ನು ಬಿಟ್ಟಿ ಕ್ಷಣವೂ ಇರುವುದಿಲ್ಲವೋ ಅಂತಹ ಶ್ರೀಮನ್ನಾರಾಯಣ. ಅಜೇಯ. ಸಾವಿಲ್ಲದವನು. ಇಂತಹ ಸತ್ಯಪರಾಕ್ರಮನಾದ ವಿಷ್ಣುವು ಮಾನುಷ ರೂಪವನ್ನು ಧರಿಸಿ ಬಂದಿದಾನೆ. ಮಾತ್ರವಲ್ಲ. ಅವನ ಜೊತೆಗೆ ವಾನರರ ರೂಪವನ್ನು ತಾಳಿ ದೇವತೆಗಳು ಬಂದಿದಾರೆ. ಸರ್ವಲೋಕೇಶ್ವರನು ಲೋಕಕ್ಕೆಲ್ಲ ಒಳ್ಳೆಯದಾಗಬೇಕು ಎನ್ನುವ ಕಾರಣಕ್ಕಾಗಿ ಇಳಿದು ಬಂದು ಪರಿವಾರ ಸಹಿತನಾದ ನಿನ್ನನ್ನು ಹತಗೊಳಿಸಿದ.

ಮೊದಲು ನೀನು ಇಂದ್ರಿಯಗಳನ್ನು ಗೆದ್ದು ತಪಸ್ಸು ಮಾಡಿದೆ. ಆ ಇಂದ್ರಿಯಗಳು ನಿನ್ನ ದಿಕ್ಕು ತಪ್ಪಿಸಿ, ಸೀತೆಯ ಹಿಂದೆ ನೀನು ಹೋಗುವಂತೆ ಮಾಡಿ ನಿನ್ನನ್ನು ಮುಗಿಸಿದವು. ಎಂಬುದಾಗಿ ಹೇಳ್ತಾಳೆ ಮಂಡೋದರಿ. ಹೇಳಿದೆ ನಾನು ರಾಮನ ಜೊತೆಗೆ ವಿರೋಧ ಬೇಡ ಎಂಬುದಾಗಿ ನೀನು ಕೇಳಿದೆಯಾ? ಇಲ್ಲ. ಫಲ ಬಂತು. ಅಕಸ್ಮಾತ್ ಸೀತೆಯ ಹಿಂದೆ ಬಿದ್ದೆಯಲ್ಲ ನೀನು, ಯಾಕಾಗಿ ಆಕೆಯನ್ನು ಬಯಸಿದೆ? ಪ್ರಭುತ್ವವನ್ನು ಹಾಳು ಮಾಡಿಕೊಳ್ಳಲು. ಇಡೀ ನಿನ್ನ ಪರಿವಾರ ಬಳಗವನ್ನು ನಾಶಮಾಡಲು. ಯಾರು ಸೀತೆ? ಅರುಂಧತಿಗಿಂತ ದೊಡ್ಡವಳು. ದುರ್ಬುದ್ಧಿ ಎಂಬುದಾಗಿ ಶವಕ್ಕೆ ಹೇಳ್ತಾಳೆ ಮಂಡೋದರಿ. ಜಗತ್ತಿನಲ್ಲಿ ಪಾತಿವ್ರತ್ಯಕ್ಕೆ ಈರ್ವರು ತುಂಬ ಪ್ರಸಿದ್ಧಿ. ವಸಿಷ್ಠರ ಮಡದಿ ಅರುಂಧತಿ, ಚಂದ್ರನ ಮಡದಿ ರೋಹಿಣಿ. ಅವರಿಗಿಂತ ಶ್ರೇಷ್ಠ ಎಂದು ಹೇಳುವಾಗ ಮಂಡೋದರಿಯು ಸೀತೆಯನ್ನು ಸರ್ವಶ್ರೇಷ್ಠ ಎಂಬುದಾಗಿ ಹೇಳಿಬಿಟ್ಟಳು. ಅಂಥವಳನ್ನು ಹೋಗಿ ಕೆಣಕಿದೆಯಲ್ಲ ನೀನು. ಮಾಡಬಾರದ್ದನ್ನು ಮಾಡಿದೆ. ಯಾರು ಸೀತೆ? ಭೂಮಿಗೆ ಭೂಮಿತಾಯಿ ಅವಳು. ಲಕ್ಷ್ಮಿಗೆ ಲಕ್ಷ್ಮಿ ಅವಳು. ತನ್ನ ಗಂಡನನ್ನು ಪ್ರೀತಿ ಮಾಡ್ತಿದ್ಲು ಅವಳು. ನೀನ್ಯಾಕೆ ಹೋದೆ ಮಧ್ಯದಲ್ಲಿ? ಅಂತಹ ಯಾವ ದೋಷವಿಲ್ಲದ ಮೈ-ಮನಸ್ಸಿನವಳು ನಿರ್ಜನವಾದ ವನದಲ್ಲಿ ಏಕಾಂಗಿಯಾಗಿದ್ದಾಗ ಆ ಪರಮಪವಿತ್ರೆಯನ್ನು ಎಳೆದುಕೊಂಡು ಬಂದೆಯಲ್ಲ ನೀನು, ನಿನಗೆ ನೀನೇ ಕಲಂಕ. ಕೊನೆಗೂ ಸೀತೆಯನ್ನು ವಶಪಡಿಸಿಕೊಳ್ಳಬೇಕೆಂಬ ಸಂಕಲ್ಪ ಈಡೇರದೆ ಆಕೆಯ ತಪಸ್ಸಿನಲ್ಲಿ ಸುಟ್ಟುಹೋದೆ ನನ್ನೊಡೆಯನೇ.

ಇನ್ನೊಂದು ಮಾತನ್ನು ಹೇಳ್ತಾಳೆ ಮಂಡೋದರಿ – ಆಶ್ಚರ್ಯ! ನೀನ್ಯಾಕೆ ಆಗಲೇ ಸತ್ತುಹೋಗಲಿಲ್ಲ!? ಯಾವಾಗ ಸೀತೆಯನ್ನು ಕೆಣಕಿದೆಯೋ ಅಲ್ಲೇ ಸುಟ್ಟು ಹೋಗಬೇಕಿತ್ತು ನೀನು. ಆಕೆಯ ಪ್ರಭಾವ ಅಂಥದ್ದು, ತೇಜಸ್ಸು ಅಂಥದ್ದು, ಸತ್ವ ಅಂಥದ್ದು. ನಿನ್ನ ಹಳೆಯ ತಪಸ್ಸು ನಿನ್ನನ್ನು ಉಳಿಸಿರಬಹುದು. ಎಂದು ಹೇಳಿ ಇದು ಕರ್ಮದ ಫಲ. ಪಾಪ ಮಾಡಿದವನಿಗೆ ಕೆಟ್ಟದಾಗ್ತದೆ. ಪುಣ್ಯ ಮಾಡಿದವನಿಗೆ ಒಳ್ಳೆಯದಾಗ್ತದೆ. ನೀನು ಪಾಪ ಮಾಡಿದ್ದೆ, ಸತ್ತೆ. ಪುಣ್ಯ ಮಾಡಿದ ವಿಭೀಷಣ ಲಂಕಾಧಿಪತಿಯಾಗ್ತಾನೆ ಎಂಬುದಾಗಿ ಹೋಲಿಕೆಯನ್ನು ಕೊಡ್ತಾಳೆ. ಇನ್ನೊಂದು ಮಾತನ್ನ ಆಡ್ತಾಳೆ. ನನ್ನಲ್ಲಿ ಏನು ಕಡಿಮೆಯಾಗಿತ್ತು ಅಂತ ಸೀತೆಯ ಹಿಂದೆ ಹೋದೆ? ಮತ್ತೆ ಹೇಳ್ತಾಳೆ – ರಾಮನ ಪತ್ನಿಯಾದ್ದರಿಂದ ಸೀತೆ ಸುಖಭಾಗಿನಿಯಾಗ್ತಾಳೆ. ರಾವಣನ ಪತ್ನಿಯಾದ್ದರಿಂದ ನಾನು ದುಃಖಸಾಗರದಲ್ಲಿ ಮುಳುಗಿಹೋಗ್ತೇನೆ ಎಂಬುದಾಗಿ ಹೇಳಿ ವ್ಯಥೆ ಪಡ್ತಾಳೆ. ಕೊನೆಗೂ ನಾನು ವಿಧವೆಯಾದೆ. ಹೇಗಿದ್ದೆ ನಾನು? ಸೌಭಾಗ್ಯವತಿಯಾಗಿ. ಹೇಗಾಗ್ತಾ ಇದ್ದೇನೆ? ಅಳಿಸಿ ಹೋಯಿತು ಕುಂಕುಮ. ಎಂದೂ ಎಣಿಸಿರಲಿಲ್ಲ ನಾನು ವಿಧವೆಯಾಗ್ತೇನೆ ಅಂತ. ಹೇಗಿತ್ತು ನನ್ನ ಬದುಕು? ತಂದೆ ದಾನವ ರಾಜಮಯ. ಪತಿ ರಾಕ್ಷಸೇಂದ್ರ ರಾವಣ. ಪುತ್ರ ಇಂದ್ರನನ್ನೇ ಗೆದ್ದ ಇಂದ್ರಜಿತು. ಇಂಥವರ ಮಧ್ಯೆ ನಾನಿದ್ದಿದ್ದು. ಅನಾಥೆಯಾಗಿಹೋದೆ ಎಂಬುದಾಗಿ ಹೇಳಿ ಮತ್ತೆ ಕೊನೆಯಲ್ಲಿ ಯಾರನ್ನೆಲ್ಲ ರಾವಣ ಎಳೆದುಕೊಂಡು ಬಂದನೋ ಗಂಡಂದಿರನ್ನು ಕೊಂದು, ಮಕ್ಕಳನ್ನು ಕೊಂದು, ತಂದೆಯರನ್ನು ಕೊಂದು ಅದರಲ್ಲಿಯೂ ಕೂಡ ಪತಿವ್ರತೆಯರು ಅವರಿಗೆ ಮಾಡಿದ ಅನ್ಯಾಯವನ್ನೆಣಿಸಿ ಅವರೆಲ್ಲ ಸುಮ್ಮನೆ ಕಣ್ಣೀರು ಹಾಕ್ತಾರ? ಅವರ ಕಣ್ಣೀರೆ ನಿನ್ನನ್ನು ಕೊಂದಿದೆ. ಅನೇಕ ಪತಿವ್ರತೆಯರು ವಿಧವೆಯರಾದರು. ಅವರು ಹಾಕಿದ ಕಣ್ಣೀರು ನಿನ್ನ ಸಾವಿನಲ್ಲಿ ಪರ್ಯವಸಾನವಾಗಿದೆ. ಪತಿವ್ರತೆಯರ ಕಣ್ಣೀರು ವ್ಯರ್ಥವಾಗೋದಿಲ್ಲ. ಯಾರು ಕಣ್ಣೀರಿಡುವಂತೆ ಮಾಡಿದನೋ ಅವನ ಸರ್ವನಾಶವನ್ನು ಮಾಡ್ತದೆ. ಸತ್ಯವಾಯ್ತು ಗಾದೆ ಅದು ಎಂದು ಹೇಳಿ ಧಿಕ್ಕರಿಸಿಬಿಡ್ತಾಳೆ ರಾವಣನನ್ನು.

ಮೂರು ಲೋಕವನ್ನು ಪರಾಕ್ರಮದಿಂದ ಗೆದ್ದು ವೀರನೆನ್ನಿಸಿಕೊಂಡು ಕ್ಷುದ್ರವಾದ ನಾರಿ ಚೌರ್ಯವನ್ನು ಮಾಡಿಬಿಟ್ಟೆಯಲ್ಲ. ಧಿಕ್ಕಾರ. ಮಾಯಾಮೃಗದ ಮೂಲಕ ರಾಮನನ್ನು ದೂರ ಕಳುಹಿಕೊಟ್ಟು ನೀನು ಸೀತೆಯನ್ನು ಕದ್ದು ತಂದೆಯಲ್ಲ ಭಯದ ಚಿನ್ಹೆ ಅದು. ಎಲ್ಲಿ ಭಯ ಇತ್ತು ನಿನಗೆ? ಆದರೆ ನಾನು ಗಮನಿಸಿದ್ದು ಆ ನಿನ್ನ ಭಯ ಅಲ್ಲಿಂದಲೇ ಪ್ರಾರಂಭವಾಗುವಂಥದ್ದು. ಮಾಯಾಮೃಗದ ಅಗತ್ಯ ಯಾಕೆ ಬಂತು ನಿನಗೆ? ರಾಮನಿಲ್ಲದ ಹೊತ್ತು ಯಾಕೆ ಬೇಕಾಯ್ತು ನಿನಗೆ? ರಾಮನೆದುರು ನಿಲ್ಲಲಿಕ್ಕೆ ಭಯವಾಯ್ತು ನಿನಗೆ. ಅದೇ ಮುಂದೆ ಸಾವಿದೆ ಎನ್ನುವ ಭಯದ ಲಕ್ಷಣ. ವಿಭೀಷಣನನ್ನು ತ್ರಿಕಾಲಜ್ಞಾನಿ ಎಂಬುದಾಗಿ ಹೇಳ್ತಾಳೆ ಮಂಡೋದರಿ. ಹಿಂದೆ ನಡೆದಿದ್ದು, ಮುಂದೆ ಬರುವಂಥದ್ದು ಭವಿಷ್ಯ, ವರ್ತಮಾನ ಈ ಮೂರನ್ನೂ ಬಲ್ಲ ನನ್ನ ಮೈದುನ ವಿಭೀಷಣ. ಅವನು ಸುಳ್ಳಾಡುವವನಲ್ಲ, ಅವನಾಡಿದ್ದು ಸುಳ್ಳಾಗುವುದಿಲ್ಲ. ಅವನಿಗೆ ಸೀತಾಪಹರಣದ ವಿಷಯ ಮುಟ್ಟಿದಾಗ ದೀರ್ಘವಾದ ನಿಟ್ಟುಸಿರಿಟ್ಟು ತುಂಬ ಹೊತ್ತು ಧ್ಯಾನದಲ್ಲಿ ಕುಳಿತಿದ್ದ ಅವನು. ಚಿಂತೆಯಲ್ಲಿ ಮುಳುಗಿದ್ದ. ಕೊನೆಗೆ ಅವನು ಹೇಳಿದ್ದೇನು? ರಾಕ್ಷಸರೆಲ್ಲ ಮುಗಿದು ಹೋಗ್ತಾರೆ. ರಾಕ್ಷಸರ ಸರ್ವನಾಶವಾಗಿ ಹೋಗ್ತದೆ. ಎಂದು ಏನು ಹೇಳಿದ್ದ ನನ್ನ ಮೈದುನ ಅದು ಆಯಿತು. ಅವನು ಮಾತ್ರವಲ್ಲ ಕುಂಭಕರ್ಣ ಹೇಳಿದ್ದ ನೀನು ಕೇಳಲಿಲ್ಲ, ಮಾರೀಚ ಹೇಳಿದ್ದ ನೀನು ಕೇಳಲಿಲ್ಲ, ನನ್ನ ತಂದೆ ಮಯ ಹೇಳಿದ್ದ ಕೇಳಲಿಲ್ಲ. ಯಾರು ಹೇಳಿದ್ದನ್ನೂ ಕೇಳದೆ ಕೊನೆಗೂ ಇಷ್ಟು ಮಾಡಿಕೊಂಡೆಯಲ್ಲ ಎಂಬುದಾಗಿ ಪರಿಪರಿಯಲ್ಲಿ ವ್ಯಥಿಸಿ ಹಾಗೆಯೇ ಎಚ್ಚರತಪ್ಪಿಬಿಡ್ತಾಳೆ ಮಂಡೋದರಿ.

ಸವತಿಯರು ಕಷ್ಟಪಟ್ಟು ಎಬ್ಬಿಸ್ತಾರೆ, ಸಮಾಧಾನ ಮಾಡ್ಲಿಕ್ಕೆ ಪ್ರಯತ್ನಿಸ್ತಾರೆ. ಆಗ ರಾಮನು ವಿಭೀಷಣನಿಗೆ ಅಪ್ಪಣೆ ಮಾಡ್ತಾನೆ. ತಡಮಾಡಬಾರದು, ಸಂಸ್ಕಾರ ಮಾಡು, ಸಂತೈಸು ಸ್ತ್ರೀಯರನ್ನು ಎಂಬುದಾಗಿ ಸಂಸ್ಕಾರಕ್ಕೆ ಅಪ್ಪಣೆ ಮಾಡಿದಾಗ ವಿಭೀಷಣ ಹೇಳೋದು: ನಾ ಮಾಡೋದಿಲ್ಲ. ಯಾಕೆ ಹಾಗಂದ ಅಂದ್ರೆ ಅವನಿಗಾಗ ತಾನು ರಾವಣನ ತಮ್ಮ ಎನ್ನುವುದಕ್ಕಿಂತ ರಾಮನ ಭಕ್ತ, ಸೇವಕ ತಾನು ರಾಮನಿಗೆ ಇಂತಹ ಕೇಡು ಮಾಡಿರತಕ್ಕಂಥವನು, ರಾಮನ ವೈರಿ. ನಾನು ಮಾಡೋದಿಲ್ಲ. ಧರ್ಮ ಬಿಟ್ಟವನು, ಯಾವ ವ್ರತವೂ ಇಲ್ಲ ಅವನಿಗೆ. ಕ್ರೂರಿ, ಸುಳ್ಳ, ಪರಸತಿಯರನ್ನು ಕೆಣಕಿದವನು, ಕೆಡಿಸಿದವನು. ನಾನು ಮಾಡೋದಿಲ್ಲ ಅವನ ಸಂಸ್ಕಾರವನ್ನು. ನನ್ನಣ್ಣ ಅಲ್ಲ ಶತ್ರು ಇವನು. ನನಗೆ ಮಾತ್ರವಲ್ಲ, ಪ್ರಪಂಚಕ್ಕೇ ಶತ್ರು. ಯಾರ ಒಳ್ಳೆಯದನ್ನು ಹಾರೈಸಿದಾನೆ ಅವನು? ಎಲ್ಲರಿಗೂ ಕೆಟ್ಟದ್ದೇ ಮಾಡಿದ್ದು, ಕೆಟ್ಟದ್ದೇ ಹಾರೈಸಿದ್ದು. ಅಣ್ಣ ಇರಬಹುದು. ಆದರೆ ನನಗವನು ಅಣ್ಣನಲ್ಲ. ನನಗವನೂ ಏನೂ ಆಗಬೇಡ. ನಾನವನ ಕ್ರಿಯೆ ಮಾಡೋದಿಲ್ಲ. ನಾಳೆ ಪ್ರಪಂಚ ನನ್ನನ್ನೇ ನಿಂದಿಸಬಹುದು. ಸತ್ತವರ ಗುಣಗಳನ್ನು ಹೊಗಳುವುದು ಪ್ರಪಂಚದ ಸ್ವಭಾವ. ನಾನು ಬದುಕಿದೀನಲ್ಲ. ನನ್ನನ್ನು ಬೈತದೆ ಪ್ರಪಂಚ. ನನಗ್ಗೊತ್ತು. ಆದ್ರೂ ನಾನದನ್ನ ಮಾಡೋದಿಲ್ಲ. ಪ್ರಪಂಚ ನನ್ನನ್ನು ನಿಂದಿಸಿದರೂ ಚಿಂತೆಯಿಲ್ಲ, ನಾನಿವನ ಅಂತ್ಯಕ್ರಿಯೆ ಮಾಡೋದಿಲ್ಲ ಎಂದು ಕೂತುಬಿಟ್ಟನಂತೆ ವಿಭೀಷಣ.

ಆಗ ರಾಮನೇ ಸಂತೈಸಿ ಮುಗೀತು ವಿಭಿಷಣ. ಯಾವಾಗ ಮರಣವಾಯಿತೋ ಇನ್ನೇನು ವೈರ? ಇನ್ನೇನು ಜುಗುಪ್ಸೆ? ಜೀವ ನೋಡಬೇಕು, ದೇಹವನ್ನಲ್ಲ. ಜೀವಕ್ಕೆ ಒಳ್ಳೆಯದಾಗ್ಬೇಕು. ನಮ್ಮ ಕೆಲಸ ಆಗಿದೆಯೋ ಇಲ್ಲವೋ? ನೀ ನನ್ನ ಭಕ್ತ ಹೌದು, ಸೇವಕ ಹೌದು. ನನ್ನ ಕೆಲಸ ಆಗಿದೆ ಈಗ. ಸೀತೆ ಪ್ರಾಪ್ತವಾಗಿದಾಳೆ ನನಗೆ. ಸಂಸ್ಕಾರ ಮಾಡು. ಇಲ್ಲದಿದ್ದರೆ ನಾನು ಮಾಡಬೇಕಾಗ್ತದೆ. ಹೀಗೆ ರಾಮನ ಅಪ್ಪಣೆಯನ್ನು ಪಾಲಿಸಿ ತ್ವರೆಯಿಂದ ರಾವಣನ ಅಂತ್ಯಸಂಸ್ಕಾರವನ್ನು ನೆರವೇರಿಸಿದರು. ಚಂದನ ಕಾಷ್ಠಗಳ ಚಿತೆ ಮಾಡಿ, ಸುಗಂಧದ್ರವ್ಯಗಳು, ಬ್ರಾಹ್ಮಿ ಮತ್ತು ಲಾವಂಚದ ಬೇರನ್ನು ಹರಡಿ, ರಂಕು ಎಂಬ ಜಾತಿಯ ಚಿಗರೆಯ ಚರ್ಮವನ್ನು ಹಾಸಿ ಅದರ ಮೇಲೆ ರಾವಣನನ್ನು ಮಲಗಿಸಿ ವೇದಪ್ರೋಕ್ತ ವಿಧಿಯಲ್ಲಿ ಅಂತ್ಯಕ್ರಿಯೆಯನ್ನು ಮಾಡಿದರು. ವಿಭೀಷಣನೇ ಸ್ನಾನ ಮಾಡಿ, ಒದ್ದೆ ಬಟ್ಟೆಯನ್ನುಟ್ಟು, ದೂರ್ವಾಜಲದಿಂದ ಮಿಶ್ರಿತವಾದ ತಿಲದಿಂದ ಅವನಿಗೆ ತರ್ಪಣ ಕೊಟ್ಟು, ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಅಂತ್ಯಕ್ರಿಯೆಯನ್ನು ಪೂರ್ತಿಮಾಡಿ, ಅವನ ಸತಿಯರನ್ನು ಸಮಾಧಾನ ಮಾಡಿ ಪುನಃ ನಗರಕ್ಕೆ ಕಳುಹಿಕೊಟ್ಟು ರಾಮನ ಪಕ್ಕದಲ್ಲಿ ಬಂದು ನಿಂತ ವಿಭೀಷಣ.

ಮುಂದಿನ ಪ್ರವಚನದಲ್ಲಿ ವಿಭೀಷಣಾಭಿಷೇಕ. ಮತ್ತು ಸೀತೆಯೇನು ರಾಮನೇನು ಎನ್ನುವುದನ್ನು ಬಹಳ ಸೂಕ್ಷ್ಮಮತಿಯಿಂದ ಅರ್ಥಮಾಡಿಕೊಳ್ಳಬೇಕಾದ ಸಂದರ್ಭ ಅದು. ಇಂದು ರಾವಣನ ಮೋಕ್ಷ ಮತ್ತು ಮಂದೋದರಿಯ ಮಹತಿ, ವಿಭೀಷಣನ ದೊಡ್ಡತನ, ಅದಕ್ಕಿಂತಲೂ ದೊಡ್ಡದಾದ ರಾಮನ ದೊಡ್ಡತನ ಈ ಚಿತ್ರವನ್ನು ಹೃದಯದಲ್ಲಿಟ್ಟುಕೊಂಡು ಮುಂದಿನ ವಿಭೀಷಣಾಭಿಷೇಕದ ಪ್ರತೀಕ್ಷೆ ಮಾಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments