ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಅಯೋಧ್ಯಾಕಾಂಡದ ಪ್ರಥಮ ಸರ್ಗ:

ತನ್ನ ಸ್ಥಾನವಾಗಲಿ, ತಾನು‌ ಬೆಳೆಸಿದ ಧನ
ತನ್ನ ಕಾಲಾನಂತರ ಇಂತವರಿಗೆ ಸಿಗಲಿ ಎನ್ನುವವರು ಬಹಳ ಮಂದಿ. ಆದರೆ ತಾನು ಊರ್ಜಿತವಾಗಿರುವಾಗಲೇ ತನ್ನ ಸಂಪತ್ತು ಅಧಿಕಾರವು ಇವನಿಗೆ ಹೋಗಲಿ ಎಂದು ಬಯಸುವುದು ಉತ್ಕೃಷ್ಟ ಭಾವ. ಅಲ್ಲಿ ತ್ಯಾಗದ ಭಾವ ಇರ್ತದೆ. ತಂದೆಯೇ ಮಗನಿಗೆ ಕೊಡುವುದಾದರೂ..!

ಆದರೆ ಇಲ್ಲಿ ವಾತಾವರಣ ಬೇರೆ ಇದೆ;
ದಶರಥ ಏನು ಬಯಸ್ತಾ ಇದ್ದಾನೆ?
ನಾನು ಬದುಕಿರುವಾಗಲೇ ರಾಮನು ದೊರೆಯಾದರೆ ಎಷ್ಟು ಸಂತೋಷ ಕೊಡಬಹುದು ಆ ಸಂಗತಿ! ಆ ವೃದ್ಧ ದೊರೆ ಚಿರಜೀವಿ. ಬಹಳ ಹಳೆ ಮನುಷ್ಯ ಅವನು. ಅವನಿಗೆ ಯಾಕೆ ಹೀಗೆ ಆಲೋಚನೆ ಹುಟ್ಟಿಕೊಂಡಿತು ಅಂದರೆ,
ರಾಮನ ಗುಣಗಳು ಹಾಗಿದ್ದವು. ಪ್ರಪಂಚಕ್ಕೆ ಒಳಿತನ್ನು ಉಂಟು ಮಾಡುವಂಥದ್ದು ಆಗಿತ್ತದು‌. ಅದಕ್ಕಿಂತ ಬಹು ದೊಡ್ಡ ಸಂತೋಷ ಇನ್ನಿಲ್ಲ ; “ರಾಮನು ಪಟ್ಟಾಭಿಷಿಕ್ತನಾಗಿ ಕಂಗೊಳಿಸುವುದನ್ನು ಯಾವಾಗ ಕಾಣುವೆನು..?” ಎಂದು.

ದಶರಥ ಕಾರಣ ಹೇಳ್ತಾನೆ: ಯಾಕೆ ಇಷ್ಟ ರಾಮ?
ನನಗಿಂತ ಹೆಚ್ಚು ಗುಣವಂತ, ಶ್ರೇಷ್ಠ, ಹಾಗಾಗಿ ಪ್ರಪಂಚಕ್ಕೆ ಇಷ್ಟ. ಹಾಗಾಗಿ ಜಗತ್ತನ್ನೆಲ್ಲ ಆಳುವ ನನ್ನ ಮಗನನ್ನು ನೋಡಿದರೆ ಸಾಕು, ಹೊರಟೆ ಸ್ವರ್ಗಕ್ಕೆ.
ರಾಮನಿಗೆ ಯೋಗ್ಯತೆಯಿದೆ. ರಾಮನ ಒಂದೊಂದು ಗುಣವೂ ಅಳತೆಗೆ ಒಳಗೊಡುವುದಲ್ಲ ಅದು, ಲೋಕೋತ್ತರವದು! ಸಾಮಾನ್ಯವಾಗಿ ಪ್ರಪಂಚಕ್ಕೆ ಕಾಣಸಿಗುವಂಥದ್ದಲ್ಲ, ಮೇಲಿದೆ ~ ಅಂಥದ್ದು.

ಬಳಿಕ ದೊರೆ, ಸುಮಂತ್ರನೇ ಮೊದಲಾಗಿರತಕ್ಕಂತಹ ಅಷ್ಟಸಚಿವರ ಜೊತೆ ಸಮಾಲೋಚನೆ ಮಾಡ್ತಾನೆ. ಎಲ್ಲರೂ ಅದೇ ಸರಿ ಎಂದರಂತೆ.
ಎಂಟೂ ಸಚಿವರು ಏಕಾಭಿಪ್ರಾಯದಲ್ಲಿ ‘ಸರಿ, ಯೋಗ್ಯ’ ಎಂದರಂತೆ. ರಾಮನನ್ನು ಯುವರಾಜನನ್ನಾಗಿ ಮಾಡುತ್ತೇನೆಂಬ ನಿಶ್ಚಯಕ್ಕೆ ಬಂದ.

ತ್ವರೆ ಮಾಡಿದ ದಶರಥ, ವಿಘ್ನ ಬರುವ ಮೊದಲೇ ಕಾರ್ಯ ಮಾಡಬೇಕು.
ಪ್ರಧಾನರಾದ ದೊಡ್ಡ ದೊಡ್ಡ ರಾಜರು; ಕೋಸಲದ ಮಿತ್ರರನ್ನು ಕರೆಯಿಸಿ, ದೊರೆಗಳನ್ನು ಬರಮಾಡಿದ ದಶರಥ. ಅವರಿಗೆಲ್ಲ ಸತ್ಕಾರ ನಡೆಯಿತು, ಪ್ರಜೆಗಳಿಗೂ ಕೂಡ.

ದಶರಥನು ಉನ್ನತಾಸನದಲ್ಲಿ ಕುಳಿತು. ಪ್ರಸ್ತಾಪಿಸಿದ. ದಶರಥ ಹೇಳಿದ್ದು ಅಲ್ಲಿದ್ದವರಿಗೂ ಇಲ್ಲದವರಿಗೂ ಎಲ್ಲರಿಗೂ ಹಿತವಾಗುವಂಥದ್ದನ್ನು!

ಇಕ್ಷ್ವಾಕು ವಂಶಜರ ಆಳ್ವಿಕೆಯಿಂದ ಕೂಡಿದ ಜಗತ್ತಿಗೆ ಮಹದಾದ ಒಳಿತನ್ನು ನೀಡಬಯಸುತ್ತಿದ್ದೇನೆಂದ ದಶರಥ. ಲೋಕಚಿಂತನೆಯಿಂದ
ಯಥಾಶಕ್ತಿ ಒಳಿತನ್ನು ನನ್ನ ಪ್ರಜೆಗಳಿಗೆ ಧಾರೆ ಎರೆದಿದ್ದೇನೆ. ಈ ನನ್ನ ಶರೀರವು ಮುಪ್ಪಾಯಿತು. ದೊಡ್ಡ ಆಯಸ್ಸು, ಶರೀರವು ಜೀರ್ಣವಾಗಿದೆ. ಈ ಶರೀರಕ್ಕಿನ್ನು ವಿಶ್ರಾಂತಿ ಬೇಕು.
ನನ್ನ ಸ್ಥಾನದಲ್ಲಿ ರಾಮನನ್ನು ನಿಲ್ಲಿಸಿ ನಾನು ವಿಶ್ರಾಂತನಾಗುತ್ತೇನೆ. ಅವನಲ್ಲಿ ಎಲ್ಲ ಗುಣಗಳಿದೆ, ನನಗೇನು ಕಡಿಮೆಯಿಲ್ಲ ಅವನು, ನನಗಿಂತ ಮಿಗಿಲು. ಅವನಿಗೆ ಸಲ್ಲಲಿ ಯುವರಾಜ್ಯ ಎಂದು ಹೇಳಿ, ಎಲ್ಲರನ್ನೂ ಕೇಳ್ತಾನೆ.

ಪುಷ್ಯ ನಕ್ಷತ್ರದ ಬಳಿಸಾರುವ ಚಂದ್ರ ಹೇಗೆ ಶೋಭೆಯನ್ನು ಪಡೆಯುವಂತೆ, ಯುವರಾಜ್ಯವನ್ನು ಪಡೆದು ಅತಿಶಯ ಶೋಭೆಯಿಂದ ಕಂಗೊಳಿಸುತ್ತಾನೆ ಪುರುಷ ಪುಂಗವ ರಾಮ.
ಮೂರುಲೋಕಕ್ಕೂ ಅನುಪಮನಾದ ದೊರೆಯಾಗಬಲ್ಲ. ಈಗಿರುವುದಕ್ಕಿಂತ ಒಳ್ಳೆಯ ಆಡಳಿತ ಕೊಡಬಲ್ಲ.
ಭೂಮಂಡಲಕ್ಕೆ ಒಳಿತುಂಟುಮಾಡುವಂತ ಈ ಕಾರ್ಯವನ್ನು ಮಾಡಿ ನಾನು ಕೆಳಗಿಳಿಯುತ್ತಾನೆ.

ಸಭೆಯಲ್ಲಿ ದೊಡ್ಡ ಹರ್ಷೋದ್ಘಾರ
ದಶರಥನನ್ನು ಅಭಿನಂದಿಸಿದರು. ಒಂದು ಆನಂದದ ಕೇಕೆ ಹೊಮ್ಮಿತು ಸಭೆಯಿಂದ.
ಏಕಾಭಿಪ್ರಾಯ ಬಂತು ಮತ್ತೆ. ಎಲ್ಲರ ಮನಸ್ಸು ಒಂದೇ ಆಗಿ ದಶರಥನಿಗೆ ಹೇಳ್ತಾರೆ, ‘ನಿನಗೆ ವಯಸ್ಸಾಗಿದೆ ಹೌದು, ನಿನಗೆ ಶ್ರಮವಾಗಿರುವುದು ಸಹಜ, ನೀನು ಒಂದು ವೇಳೆ ಯುವರಾಜನಾಗಿ ಪಟ್ಟಾಭಿಷೇಕ ಮಾಡ್ತೀಯಂತ ಆದ್ರೆ ನಾವು ಸಮ್ಮತಿಸುತ್ತೇವೆ. ರಾಮನನ್ನು ರಾಜನಾಗಿ ನೋಡುವ ಆಸೆ ನಮಗೆ.

ರಾಮನ ಗುಣಗಳನ್ನು ಹೇಳಿದರು.
ದೇವರಂತವನು, ಪ್ರೀತಿ~ ಸಂತೋಷ ಉಂಟಾಗ್ತದೆ ಅವನನ್ನು ನೋಡಿದಾಗ. ದಿವ್ಯ ಗುಣಗಳು ಇವೆ ಅವನಲ್ಲಿ. ಒಂದೇ‌ಮಾತಿನಲ್ಲಿ ಹೇಳುವುದಾದರೆ ಈ ವಂಶದಲ್ಲಿ ಆಗಿಹೋದ ರಾಜರುಗಳು ಎಲ್ಲರಿಗಿಂತಲೂ ಶ್ರೇಷ್ಠನು ರಾಮ. ಸತ್ಪುರುಷ ರಾಮನೆಂದರೆ‌. ಅದೇ ಸರ್ವೋಪರಿ ಅವನಿಗೆ. ರಾಮನಿಂದ ಧರ್ಮ ಮತ್ತು ಸಂಪತ್ತುಗಳು ಹೊರಹೊಮ್ಮುತ್ತವೆ..

ಧರ್ಮಜ್ಞ, ಸತ್ಯಸಂಧ, ಶೀಲವಂತ, ಗುಣಕೆ ಮತ್ಸರವಿಲ್ಲ, ಸಮಾಧಾನ ಮಾಡ್ತಾನೆ, ಕೋಪ ತಣಿಸ್ತಾನೆ, ಪ್ರೀತಿ ಮಾತುಗಳನ್ನು ಆಡುವವ, ಜಿತೇಂದ್ರಿಯ, ಅಸೂಯೆ ಇಲ್ಲದವ, ಮಾತಿನಿಂದ ಇನ್ನೊಬ್ಬರಿಗೆ ನೋವನ್ನು ಮಾಡದವನು.
ಮಾತಿನಿಂದ ಇನ್ನೊಬ್ಬರಿಗೆ ನೋವು ಮಾಡಬಾರದು ~ #ಶ್ರೀಸೂಕ್ತಿ.
ಸತ್ಯವನ್ನೇ ಹೇಳ್ತಾನೆ, ಪ್ರಿಯವಾಗುವಂತೆ ಹೇಳ್ತಾನೆ. ಹಿರಿಯರ ಸೇವೆ ಮಾಡ್ತಾನೆ, ಸರ್ವಾಸ್ತ್ರ ವಿಶಾರದ, ಸಂಪೂರ್ಣ ವಿದ್ಯಾಭ್ಯಾಸ ಪಡೆದವನು.

ಗಾಂಧರ್ವ ವಿದ್ಯೆ (ಸಂಗೀತ ಶಾಸ್ತ್ರದಲ್ಲಿ) ಯಲ್ಲಿ ಭೂಮಿಗೇ ಶ್ರೇಷ್ಠ. ಅವನೊಳಗಿನಿಂದ ಶುಭಗಳನ್ನು ಹೊರಚೆಲ್ಲುವವನು.ಈ ಹೊತ್ತಿಗೇ ಅದೆಷ್ಟೋ ಯುದ್ಧಗಳನ್ನ ಮಾಡಿದ್ದ ರಾಮ. ಯುದ್ಧಕ್ಕೆ ಹೋದರೆ ಗೆದ್ದೇ ಬರುವ ರಾಮ ~ ನಿಶ್ಚಿತವದು.
ಆದರೆ ಯುದ್ಧ ಭೂಮಿಯಿಂದ ಅರಮನೆಗೆ ಹೋಗುವ ಮೊದಲು ಪೌರರನ್ನು ಭೇಟಿ ಮಾಡಿ ತನ್ನವರಂತೆ ಪ್ರೀತಿಯಿಂದ ವಿಚಾರಿಸುವವ, ಮಾತಾನಾಡುವವ ರಾಮ. ತಂದೆಯಂತೆ ಪ್ರಜೆಗಳಿಗೆ.

ಭಾವ ಹೇಗಿದೆ ನೋಡಿ! ಅಷ್ಟರ ಮಟ್ಟಿಗೆ ಕಾಳಜಿ.
ಒಂದೇ ಮಾತಿನಲ್ಲಿ ಹೇಳುವುದಾದರೆ : ನಮ್ಮ ದುಃಖ ಅವನ ದುಃಖ, ನಮ್ಮ ಸುಖ ಅವನ ಸುಖ.

ಸಣ್ಣವನಾದರೂ ತಂದೆಯಂತಿದ್ದಾನೆ ಪ್ರಜೆಗಳಿಗೆ.
ಮೊದಲು ಮಂದಹಾಸ, ತಾನೇ ಮೊದಲಾಗಿ ಮಾತನಾಡುವ ಪ್ರಕ್ರಿಯೆ ~ ಸ್ಮಿತ ಪೂರ್ವಾಭಿಭಾಷಿ.
ಧರ್ಮವೇ ಮೂರ್ತಿವೆತ್ತಂತೆ.

ಹೇ ರಾಜೋತ್ತಮನೇ, ಈಗ ಸದ್ಯ ನಿನ್ನ ಮಗ ಯುವರಾಜನಾಗಲಿ! ರಾಮರಾಜ್ಯಾಭಿಷೇಕ ನಡೆಸು ಎಂದು ಅಪೇಕ್ಷೆ ಪಟ್ಟು ಸಾವಿರಾರು ಜನರು ಕೈಮುಗಿದಿದ್ದಾರೆ ಒಟ್ಟಿಗೆ, ಸಹಸ್ರಪದ್ಮದಂತೆ..

ಅವರೆಲ್ಲರ ಪ್ರಣಾಮವನ್ನ ಸ್ವೀಕರಿಸಿ ದಶರಥ;
ವಸಿಷ್ಠರು, ವಿಶ್ವಾಮಿತ್ರರನ್ನು ಕರೆದು ಚೈತ್ರಮಾಸವಾದ ಈ ಕಾಲದಲ್ಲಿಯೇ ರಾಜ್ಯಾಭಿಷೇಕ ಮಾಡೋಣವೆಂದು ಸೂಚಿಸಿದಾಗ, ಆಗ ಹೊರಹೊಮ್ಮಿದ ಖುಷಿಯ ಜನಘೋಷವು ಶಾಂತವಾಗಲು ಕೆಲ ಸಮಯವೇ ಹಿಡಿಯಿತು.
ವಸಿಷ್ಠರು ಆಜ್ಞೆ ಮಾಡ್ತಾರೆ, ಬೇಕಾದ ವಸ್ತುಗಳನ್ನು ರಾಜನ ಅಗ್ನಿಹೋತ್ರ ಗೃಹದಲ್ಲಿ ತಂದಿಡುವ ವ್ಯವಸ್ಥೆ ಆಗುತ್ತದೆ.

ರಾಜ ರಾಮನನ್ನು ಕರೆಯಲು ಸುಮಂತ್ರನನ್ನು ಕರೆದ. ಯೋಗ್ಯರಥವನ್ನು ತೆಗೆದುಕೊಂಡು ರಾಜಭವನದಿಂದ ರಾಮಭವನದೆಡೆಗೆ ಸುಮಂತ್ರ ಹೊರಟ.

ಹೇಗೆ ಕರೆದುಕೊಂಡು ಬರ್ತಾನೆ ರಾಮನನ್ನ; ರಾಮನ ಪ್ರತಿಕ್ರಿಯೆ ಹೇಗಿರಬಹುದು..?
ಮುಂದಿನದನ್ನು ಗ್ರಹಣ ಮುಗಿದ ಬಳಿಕ ನೋಡೋಣ!!!

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments