ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕೈಕೇಯಿ ಇಲ್ಲಿ ಕಾರ್ಯಸಾಧನೆಗಾಗಿ ಪತಿಯಲ್ಲಿ ಕ್ರೋಧದ ಅಭಿನಯ ಮಾಡ್ತಾ ಇರುವಳು. ಕ್ರೋಧಾಗಾರದ ದುರುಪಯೋಗವಾಗ್ತಾ ಇದೆ.
ಸ್ವಂತ ಬುದ್ಧಿಯಲ್ಲ, ಮಂಥರೆ ಪ್ರೋತ್ಸಾಹಿಸಿ ಮಾಡ್ತಾ ಇರುವಂಥದ್ದು ಕೈಕೇಯಿ. ಮಾಡಿದ ಮೊದಲ ಕೆಲಸ ಯಾವುದು ಅಂದ್ರೆ, ದಶರಥ ಪ್ರೀತಿಯಿಂದ ಕೊಟ್ಟಿದ್ದ ‘ಮುಕ್ತಾಹಾರ’ – ಮುತ್ತಿನ ಹಾರ, ಲಕ್ಷ ಲಕ್ಷ ಸ್ವರ್ಣ ಮುದ್ರೆಗಳ ಬೆಲೆಯುಳ್ಳಂಥಾ ಆ ಮುಕ್ತಾಹಾರವನ್ನ ಕಿತ್ತೆಸೆದಳು.

ಕೈಕೇಯಿಯ ಸಿಟ್ಟು ತುಟ್ಟತುದಿಗೆ ತಲುಪಿದೆ. ಅದರ ಪರಿಣಾಮ ರಾಮನಿಗೂ, ರಾಜ್ಯಕ್ಕೂ ಎಲ್ಲರಿಗೂ ತೊಂದರೆಯಾಗಬೇಕು. ಕೈಕೇಯಿ ತನ್ನ ಅಸಹನೆಯ ಸ್ಥಿತಿಯನ್ನು ದಿಕ್ಕುದಿಕ್ಕುಗಳಿಗೆ ಆಭರಣಗಳನ್ನು ಎಸೆಯುವುದರ ಮೂಲಕ ತೋರಿಸಿಕೊಳ್ಳಲಾರಂಭಿಸಿದಳು. ಅದೆಲ್ಲ ದಶರಥ ಮಾಡ್ಸಿ ಕೊಟ್ಟದ್ದು. ಅದಕ್ಕೆ ಚಿನ್ನದ ಬೆಲೆ ಮಾತ್ರ ಅಲ್ಲ, ಭಾವದ ಬೆಲೆ ಕೂಡ ಇದೆ.

ಈ ಕಡೆಗೆ, ರಾಮಾಭಿಷೇಕವನ್ನ ರಾಜಾಜ್ಞೆ ಮೂಲಕ ಹೊರಡಿಸಿ ಎಲ್ಲರನ್ನೂ ಬೀಳ್ಕೊಟ್ಟು ದಶರಥ ತನ್ನ ಅಂತಃಪುರವನ್ನು ಪ್ರವೇಶಿಸಿದ. ಅದರಲ್ಲಿ ಕೈಕೇಯಿ ಮನೆ ಬೇರೆ ಇದೆ. ಹಾಗಾಗಿ, ಆ ಭವನವನ್ನ ಪ್ರವೇಶ ಮಾಡಿದ. ಏನಿತ್ತು ಮನಸ್ಸಿನಲ್ಲಿ? ಅಂದ್ರೆ ಎಲ್ಲರಿಗೂ ರಾಮಾಭಿಷೇಕದ ವಿಷಯ ಗೊತ್ತಾಗಿದೆ, ಇನ್ನು ಕೈಕೇಯಿಗೆ ಹೇಳಿ ಬಿಡುವುದು ಒಳ್ಳೆಯದು. ಹೇಳುವ ಸಲುವಾಗಿಯೇ ಹೊರಟಿದ್ದಾನೆ.
ಮಂಥರೆಯ ಪ್ರವೇಶವಾಗದೇ ಇದ್ದರೆ, ಇದು ಪ್ರಿಯವಾರ್ತೆ ಕೈಕೇಯಿಗೆ. ಹಾಗಾಗಿ, ಖುಷಿಯಾಗುವ ವಿಷಯವೊಂದನ್ನ ಹೇಳ್ತೇನೆ ಅಂತ ಭಾವಿಸಿ ದಶರಥ ಅಂತಃಪುರ ಪ್ರವೇಶ ಮಾಡ್ತಾ ಇದ್ದಾನೆ.
ಅತ್ಯಂತ ವೈಭವದ ಮನೆ ನಿರ್ಮಿಸಿಕೊಟ್ಟಿದ್ದ ದಶರಥ ಕೈಕೇಯಿಗೆ.

ಮನೆಗೆ ತಕ್ಕ ಮನ ಬೇಕು ~ #ಶ್ರೀಸೂಕ್ತಿ

ತನ್ನ ಸಮೃದ್ಧಿಯಿಂದ ಕೂಡಿದ ಅಂತಃಪುರವನ್ನ ಮಹಾರಾಜ ಪ್ರವೇಶ ಮಾಡ್ತಾನೆ, ಅಲ್ಲಿರಬೇಕಿತ್ತವಳು, ಶಯನೋತ್ತಮೆ! ಅಲ್ಲಿ‌ ಅವಳನ್ನ ಕಾಣಲಿಲ್ಲ.
ತುಂಬಾ ಪ್ರೀತಿಯಿಂದ ಬಂದಿದ್ದಾನೆ ದಶರಥ. ಅವಳು ಯಾವಾಗಲೂ ಕಾಣುವಲ್ಲಿ ಕಾಣಲಿಲ್ಲ ಅಂದ ಮಾತ್ರಕ್ಕೆ ವಿಷಾದಗೊಂಡ ದಶರಥ.

ಈಗ ಪತಿ ಪತ್ನಿಯ ಮಧ್ಯ ಭಾವನಾಶವಾಗಿದೆ! ಅದರಿಂದಲೇ ಕೈಕೇಯಿಯ ಗೃಹಶೂನ್ಯವಾಗಿದೆ.

‘ಎಲ್ಲಿ ಹೋದಳು?’ ಅಂತ ಪ್ರತೀಹಾರಿಯನ್ನ ಕೇಳ್ತಾನೆ ದಶರಥ. ಆಕೆ ಗಡಗಡ ನಡುಗ್ತಾ ಕೈಮುಗಿದು ದಶರಥನಿಗೆ ಹೇಳ್ತಾಳೆ, ‘ಹೇ ದೇವನೆ, ದೇವಿಯು ಭಯಂಕರವಾಗಿ ಕ್ರೋಧಗೊಂಡು ಕ್ರೋಧಾಗಾರಕ್ಕೆ ಧಾವಿಸಿದ್ದಾಳೆ. ರಾಜನಿಗೆ ಅತ್ಯಂತ ದುಃಖವಾಯಿತು ಇದನ್ನು ಕೇಳಿ. ಮನಸ್ಸು ಪೂರ್ತಿ ಕೆಟ್ಟು ಹೋಯಿತು‌. ಏನಾಯಿತು ಅಂಥದ್ದು? ಮತ್ತೆ ವಿಷಾದ, ಮತ್ತಷ್ಟು ವಿಷಾದ. ಅವನ ಇಂದ್ರಿಯಗಳು ಕ್ಲೇಶಗೊಂಡವು. ಕ್ರೋಧಾಗಾರಕ್ಕೆ ಹೋಗ್ತಾನೆ ದಶರಥ.

ಅಲ್ಲಿ ಹೋಗಿ ನೋಡಿದರೆ ನೆಲದಲ್ಲಿ ಬಿದ್ದುಕೊಂಡಿದ್ದಾಳೆ. ತುಂಬ ಪ್ರೀತಿಯಿಂದ ತನ್ನ ಕೈಯನ್ನು ಆಕೆಯ ಮೇಲಿಟ್ಟು ನೇವರಿಸ್ತಾನೆ. ಎದೆ ನಡುಗಿದೆ. ದಶರಥ ಕೇಳ್ತಾನೆ, ‘ಇದೇನು ಕ್ರೋಧವಿದು? ಯಾರಾದ್ರೂ ಅವಮಾನ ಮಾಡಿದ್ರ? ಏನಾದರೂ ಕ್ಲೇಶವಾಯಿತಾ ನಿನಗೆ? ಯಾಕೆ ನನ್ನೊಳಗೆ ಈ ಪರಿಯ ದುಃಖವನ್ನು ಉಂಟುಮಾಡಿ ನೀನು ಧೂಳಿನಲ್ಲಿ ಬಿದ್ದು ಒದ್ದಾಡ್ತಾ ಇದ್ದೀಯೇ? ನಾನು ಜೀವಿಸಿರ್ತಾ ನೀನು ಹೀಗಿರ್ಬೇಕಾ? ಇನ್ನೂ ದಶರಥ ಬದುಕಿದ್ದಾನೆ. ನೀನು ಮಲಿನ ವಸ್ತ್ರಧಾರಿಣಿ, ಏಕವೇಣೀಧಾರಿಣಿಯಾಗಿ ಭೂಮಿಯಲ್ಲಿ ಈ ರೀತಿ ಬಿದ್ದು ಹೊರಳಾಡಬೇಕಾ? ಏನಾಯಿತು? ಅಯೋಧ್ಯೆಯಲ್ಲಿ ಕುಶಲರಾದ ವೈದ್ಯರಿದ್ದಾರೆ. ಅವರ ಮೂಲಕ ಚಿಕಿತ್ಸೆ ಮಾಡಿ ನಿನಗೆ ಸುಖ ಉಂಟಾಗುವಂತೆ ಮಾಡ್ತೇನೆ, ಹೇಳು.. ಶಾರೀರಿಕವಾದ ಕ್ಲೇಶವಾದರೆ ಅದನ್ನು ಬಿಡಿಸಿ ಹೇಳು’ ಅಂತ. ಈವರೆಗೆಲ್ಲ ಸರೀ ಇದೆ.

ಮುಂದೆ ಒಂಚೂರು ಧಾಟಿ ತಪ್ಪಿತು. ನಿನ್ನನ್ನು ಸಮಾಧಾನ ಪಡಿಸಲು ಯಾರಿಗೆ ಪ್ರಿಯವನ್ನ ಮಾಡಲಿ, ಯಾರಿಗೆ ಅಪ್ರಿಯವನ್ನ ಮಾಡಲಿ?
ಅಳಬೇಡ, ಶರೀರ ಶೋಷಣೆಯನ್ನ ಮಾಡಬೇಡ. ಯಾಕೇಂದ್ರೆ ಏನು ಬೇಕಾದ್ರೂ ಮಾಡ್ತೇನೆ ನಿನಗಾಗಿ. ಮಾಡಬಾರದ್ದನ್ನೂ ಮಾಡ್ತೇನೆ!!
ದೊರೆ ಸುಳ್ಳಾಗಿಯೂ ಇದನ್ನಾಡೋ ಹಾಗಿಲ್ಲ.

ಕೇಳಿಲ್ಲಿ, ನಾನಾಗಲೀ ನನ್ನವರಾಗಲೀ, ಎಲ್ಲರೂ ನಿನ್ನ ವಶ. ನಿನ್ನ ಯಾವ ಇಚ್ಛೆಯನ್ನು ನಾವು ಇಲ್ಲಾಂತ ಮಾಡುವವರಲ್ಲ. ಜೀವ ಕೊಟ್ಟೇನು. ನನ್ನ ಸಾಮರ್ಥ್ಯವೇನು, ಗೊತ್ತಲ್ಲ ನಿನಗೆ.. . ನಿನ್ನಿಷ್ಟವನ್ನು ನೆರವೇರಿಸ್ತೇನೆ. ಪುಣ್ಯದ ಮೇಲಾಣೆ!!
ಪ್ರಪಂಚದ ಯಾವ ದ್ರವ್ಯ ಬೇಕಾದ್ರೂ ಕೇಳು, ಕೊಟ್ಟೆ. ಯಾಕೆ ಸುಮ್ಮನೆ ಕಷ್ಟ ಪಡ್ತೀಯೆ? ಏಳು.. ಏನು ಭಯ/ತೊಂದರೆ ನಿನಗೆ ಹೇಳು’ ಎಂದಾಗ ಅವಳು ಮಾತಾಡ್ಲಿಕ್ಕೆ ಸುರುಮಾಡಿದಳು ಅನ್ನುವುದಕ್ಕಿಂತ ವಾಲ್ಮೀಕಿಗಳು ಏನು ಹೇಳಿದಾರೆ ಅಂದರೆ ತನ್ನ ಪತಿಯನ್ನು ಪರಿಪೀಡಿಸಲು ಪ್ರಾರಂಭ ಮಾಡಿದಳು.

ಅವನೋ, ಈಕೆಯ ಬಗ್ಗೆ ಮೃದುಭಾವನೆಯುಳ್ಳವನು. ಈಕೆ ಮಾಡ್ಲಿಕ್ಕೆ ಹೊರಟಿರುವಂಥದ್ದು ಅವನ ಎದೆ ಕತ್ತರಿಸತಕ್ಕಂಥ ಮಾತನ್ನು.

ಅವಳು ಹೇಳಿದ್ದು ಸತ್ಯವೇ.
‘ನನಗೆ ಯಾವ ಅಪಕಾರವೂ ಆಗಿಲ್ಲ, ಯಾವ ಅವಮಾನವೂ ಆಗಿಲ್ಲ. ಏನೋ ನನ್ನ ಮನಸ್ಸಲ್ಲಿ ಇದೆ ಒಂದು ವಿಷಯ. ಅದನ್ನ ಮಾಡಿಕೊಡಬೇಕು ನೀನು’.

ಅದಕ್ಕಾಗಿ ಕ್ರೋಧಾಗಾರ ಪ್ರವೇಶ ಮಾಡುವ ಹಾಗಿಲ್ಲ. ತಪ್ಪದು.
‘ಹೇಳು’ ಅಂತ ದಶರಥ ಮುಖ ಮಾಡೋ ಹೊತ್ತಿಗೆ ಆಕೆ ಹೇಳಿದಳು, ‘ದಶರಥ, ನನಗೇನು ಬೇಕೆಂದು ಹೇಳಬೇಕಿದ್ದರೆ ಪ್ರತಿಜ್ಞೆ ಮಾಡಬೇಕು.’
ನಕ್ಕನಂತೆ ದಶರಥ‌. ‘ನನಗೆಷ್ಟು ಪ್ರೀತಿಯಿದೆ ನಿನ್ನ ಮೇಲೆ ಅಂತ ನೀನರಿಯೆ. ಎಷ್ಟು ಪ್ರೀತಿಯಿದೆ? ರಾಮನೊಬ್ಬನನ್ನುಳಿದು, ನಿನಗಿಂತ ಹೆಚ್ಚು ಪ್ರೀತಿ ಯಾರ ಮೇಲೂ ಇಲ್ಲ’ ಅಂದ.

ಆ ರಾಮನ ಮೇಲಾಣೆ. ಹೇಳು ಏನು ಬೇಕು ನಿನಗೆ. ಯಾವ ರಾಮನನ್ನು ಒಂದು ಮುಹೂರ್ತವೂ ಬಿಟ್ಟು ನನಗೆ ಬದುಕಿರಲಾರದೋ, ಆ ರಾಮನ ಮೇಲಾಣೆ’.

ಒಂದು ವೇಳೆ ನಾನೋ ರಾಮನೋ ಅಂತ ಆಯ್ಕೆ ಬಂದರೆ ನಾನು ನನ್ನನ್ನು ಆರಿಸಿಕೊಳ್ಳೋದಿಲ್ಲ, ರಾಮನನ್ನು ಆರಿಸಿಕೊಳ್ತೇನೆ‌. ಇನ್ನು ಮೂರು ಮಕ್ಕಳು ಮತ್ತು ರಾಮ ಅಂತ ತಕ್ಕಡಿ ಹಾಕೋ ಸಂದರ್ಭ ಬಂದರೆ ನಾನು ರಾಮನನ್ನು ಆರಿಸಿಕೊಳ್ತೇನೆ. ಅಂತ ರಾಮನ ಮೇಲಾಣೆ’ ಅಂತ ಕೈಕೇಯಿಗೆ ಹೇಳ್ತಿದ್ದಾನೆ.

ಆಡುವುದಕ್ಕಿಂತ ಮೊದಲು ಪ್ರತಿಜ್ಞೆ ಮಾಡ್ತಾ ಇದ್ದೀಯೆ; ವರ ಕೊಡ್ತಾ ಇದ್ದೀಯೆ ನನಗೆ. ಇದನ್ನ 33 ಕೋಟಿ ದೇವತೆಗಳು ಕೇಳಿಸಿಕೊಳ್ಳಲಿ, ಅವರೆಲ್ಲ ಸಾಕ್ಷಿ, ಪ್ರಪಂಚದೊಳಗಿನ ಭೂತಗಳೆಲ್ಲವೂ ಸಾಕ್ಷಿ. ಬಳಿಕ ವರವನ್ನು ಕೇಳ್ತಾಳೆ.

ಹಿಂದಿನದನ್ನು ನೆನಪು ಮಾಡಿಕೊಡ್ತಾಳೆ ಪುನಃ. ದೈವಾಸುರ ಯುದ್ಧದಲ್ಲಿ ನಡೆದದ್ದು. ಪ್ರಾಣವೊಂದೇ ಉಳಿದಿತ್ತು ನಿನಗಂದು. ಅಂತಹ ಸಂದರ್ಭ ನಾನು ನಿನ್ನ ರಕ್ಷಣೆ ಮಾಡಿದ್ದು. ಆಗ ಕೊಟ್ಟ ಎರಡು ವರಗಳನ್ನ ಈಗ ನಿನ್ನ ಕೈಯಿಂದ ಕೇಳ್ತಾ ಇದ್ದೇನೆ. ನೀನು ಪುನಃ ಪ್ರತಿಜ್ಞೆ ಮಾಡದಿದ್ದರೆ ಈಗಲೇ ನಾನು ಪ್ರಾಣತ್ಯಾಗವನ್ನು ಮಾಡ್ತೇನೆ. ಹೀಗೆ ಹೇಳಿ ವರ ಕೇಳ್ತಾಳೆ.

ಒಂದನೇಯದೇನು?
ರಾಮನಿಗಾಗಿ ಕಲ್ಪಿತವಾದಂತಹ ಅಭಿಷೇಕದ ಸಿದ್ಧತೆಗಳೇನಿದೆ, ಈ ಅಭಿಷೇಕ ರಾಮನಿಗಾಗದೇ, ಭರತನಿಗಾಗಬೇಕು. ಇದು ಒಂದು.

ಇನ್ನೊಂದು, 14 ವರ್ಷಗಳ ಕಾಲ ನಾರು, ಜಟೆ, ಇದನ್ನೆಲ್ಲ ಧಾರಣೆ ಮಾಡಿ ತಾಪಸ್ಯದ ವ್ರತವನ್ನಾಶ್ರಯಿಸಿ ರಾಮ ಕಾಡಿನಲ್ಲಿರಬೇಕು. ಇದು ನನ್ನ ಕರ್ಮಾಪೇಕ್ಷೆ. ಮತ್ತೆ ಯಾವತ್ತೋ ಅಲ್ಲ. ಮರುದಿನ ಬೆಳಗಾದ ಕೂಡಲೇ, ಸೂರ್ಯೋದಯವಾದಾಗಲೇ ರಾಮ ಕಾಡಿಗೆ ಹೋಗಬೇಕು. ಕೊಡು ಈ ವರವನ್ನ’ ಎಂಬುದಾಗಿ ಹೇಳಿ, ನೀನು ರಾಜಾಧಿರಾಜ, ನೀನು ಸತ್ಯಪ್ರತಿಜ್ಞ. ನಿನ್ನ ಕುಲ ಇಕ್ಷ್ವಾಕು ವಂಶ. ನಿನ್ನ ಶೀಲ, ಜನ್ಮ ಎಂಥದ್ದು ಎಂದು ನೆನಪಿಸಿಕೊಂಡು ವ್ಯವಹರಿಸು’ ಎಂದು ಕೈಕೇಯಿ ಉವಾಚ ದಶರಥನಿಗೆ.

ಹೇಗಾಗಿರಬಹುದು ದಶರಥನಿಗೆ?
ದಶರಥ ಬೆಂದ, ಅಕ್ಷರಶಃ ಬೆಂಕಿಯಲ್ಲಿಟ್ಟು ಬೇಯಿಸಿದ ಹಾಗೆ ಬೆಂದ ದಶರಥ. ದುಃಖದ ಕಡಲೊಳಗೇ ಈಜ್ತಾ ಇದ್ದಾನೆ. ಎಷ್ಟು ಈಜಿದರೂ ಸುಖದ ತೀರ ಕಾಣಲಿಲ್ಲ ದಶರಥನಿಗೆ. ಅವನಿಗೆ ಪುನಃ ‘ಎಚ್ಚರ’ ಆಗ್ಬೇಕಾದ್ರೆ ಸಮಯ ತಗೋಳ್ತಾನೆ. ಎಲ್ಲೋ ಹೋಗ್ಬಿಟ್ಟಿದ್ದ‌, ಏನೂಂತಲೇ ಗೊತ್ತಾಗಲಿಲ್ಲ. ಆ ಪ್ರಮಾಣದಲ್ಲಿ, ಅಷ್ಟು ದೊಡ್ಡ ಆಘಾತವಾಗಿದೆ ಅವನಿಗೆ.

ಮೋಹದ ಮಡದಿ ಈಗ ಬಾಯ್ತೆರೆದ ಹೆಬ್ಬುಲಿ. ನುಂಗಲು ಕಾಯುತ್ತಿದೆ. ಎಷ್ಟು ಹೊತ್ತು ಆಯಸ್ಸೋ, ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಇವನಿಗೆ ಮೃಗಾವಸ್ಥೆ, ಆಕೆಗೆ ಹೆಬ್ಬುಲಿಯ ಸ್ಥಿತಿ ಬಂದುಬಿಡ್ತು ಕ್ಷಣಮಾತ್ರದಲ್ಲಿ.
ಕುಸಿದು ನೆಲದಲ್ಲಿ ಕುಳಿತು ನಿಟ್ಟುಸಿರು ಬಿಡುತ್ತಾ ಇದ್ದಾನೆ ರಾಜಾಧಿರಾಜ. ಆಗಲಿಕ್ಕೆ ಸೂರ್ಯವಂಶದ ಚಕ್ರವರ್ತಿ, ಮಹಾಸಾಮ್ರಾಜ್ಯ ಸಂಪನ್ನನೇ ಹೌದು. ಕೈಕೇಯಿ ಏನು ಅವನ ಮುಂದೆ? ಅವನು‌ ನಿರ್ಧಾರ ಮಾಡಿದರೆ ಕೈಕೇಯಿಯನ್ನು ತ್ಯಾಗ ಮಾಡಬಹುದು‌. ಆದರೆ ಈಗ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಯಾಕಂದ್ರೆ, ಆ ಪ್ರತಿಜ್ಞೆ, ಈ ಪ್ರತಿಜ್ಞೆ ಎಲ್ಲ ಸೇರಿ ಅವನನ್ನ ಬಂಧಿಸಿದೆ. ಕರ್ಮಪಾಶದಿಂದ ಬದ್ಧನಾಗಿದ್ದಾನೆ.

ಏನು ಮಾಡಬೇಕೆಂದು ಗೊತ್ತಾಗ್ತಾ ಇಲ್ಲ. ‘ಅಯ್ಯೋ ಧಿಕ್ಕಾರ’ ಅಂತ ಹೇಳಿ ಎಚ್ಚರ ತಪ್ಪಿದ ಮತ್ತೆ. ಯಾಕೆ ಮೂರ್ಛೆ ಬಂತು? ಎಂದರೆ, ದುಃಖವಾಗಲಿ ಸುಖವಾಗಲಿ ಅದಕ್ಕೊಂದು ಮಿತಿಯಿದೆ. ಆ ಮಿತಿಯೊಳಗೆ ಮಾತ್ರವೇ ಮನಸ್ಸು ರಕ್ಷಿತವಾಗಿರ್ತದೆ. ಅದರಾಚೆಗೆ ನೋವಾದಾಗ ಮನುಷ್ಯನಿಗೆ ಎಚ್ಚರ ತಪ್ಪಬಹುದು. ಸಾವೂ ಬರಬಹುದು. ಸುಮಾರು ಹೊತ್ತಾಯ್ತಂತೆ ಮತ್ತೆ ಪ್ರಜ್ಞೆ ಬರಬೇಕಿದ್ರೆ ಅವನಿಗೆ. ಎಚ್ಚರವಾದರೆ ಮತ್ತದೇ ನರಕದಲ್ಲಿದ್ದಾನೆ ಅವನು‌. ಅದೇ ಕೈಕೇಯಿ. ಅದೇ ಕ್ರೋಧಾಗಾರ.ಎಲ್ಲಿತ್ತೋ ಸಿಟ್ಟು! ಕ್ರುದ್ಧನಾದ ದಶರಥ. ಕಣ್ಣಿಂದಲೇ ಸುಡುವಂತೆ ಕೈಕೇಯಿಯನ್ನು ಬೈಯುತ್ತಾನೆ, ‘ ನಮ್ಮ ಕುಲವನ್ನೇ ನಾಶ ಮಾಡಲು ಹೊರಟವಳೇ, ಕ್ರೂರಿ, ರಾಮ ನಿನಗೆ ಮಾಡಿದ್ದಾದರೂ ಏನು? ನಾನಾದರೂ ನಿನಗೇನು ಮಾಡಿದ್ದೇನೆ?
ರಾಮ ತನ್ನ ಹೆತ್ತ ತಾಯಿಯಂತೆ ನಿನ್ನನ್ನು ನೋಡಿದ್ದಾನೆ. ಅವನ ಸರ್ವನಾಶಕ್ಕೆ ಹೊರಟೆಯಾ ನೀನು? ನಿನಗೆ ಧಿಕ್ಕಾರ, ನಿನ್ನನ್ನು ನಾನು ಸಾಕಿದೆನಲ್ಲ ಇಲ್ಲಿ, ಎಷ್ಟು ವರ್ಷ ನಿನಗೆ ಸ್ಥಾನಮಾನ ಕೊಟ್ಟು ಪೋಷಣೆ ಮಾಡಿದೆನಲ್ಲ, ಹಾವು ಸಾಕಿದಂತಾಯಿತು, ವಿಷ ನಿನ್ನೊಳಗಿತ್ತೆಂದು ಗೊತ್ತಾಗಲಿಲ್ಲ ನನಗೆ‌. ಸಮಸ್ತ ಪ್ರಪಂಚವೇ ಯಾರ ಗುಣಗಳನ್ನ ಕೊಂಡಾಡ್ತದೋ, ಅಂಥಾ ರಾಮನನ್ನ ಯಾವ ತಪ್ಪಿಗಾಗಿ ತ್ಯಾಗ ಮಾಡಲಿ ಹೇಳು. ಯಾವ ಅಪರಾಧಕ್ಕಾಗಿ? ರಾಮ ಮಾಡಿದ ತಪ್ಪೇನು? ಏಕೆ ರಾಮನನ್ನು ಬಿಡಲಿ ನಾನು? ಇಷ್ಟಪುತ್ರ. ಕೌಸಲ್ಯೆಯನ್ನು ಬಿಟ್ಟೇನು, ಸುಮಿತ್ರೆಯನ್ನು ಬಿಟ್ಟೇನು, ಸಂಪತ್ತೆಲ್ಲವನ್ನೂ ಬಿಟ್ಟೇನು. ಪ್ರಾಣವನ್ನೇ ಬಿಟ್ಟೇನು, ರಾಮನನ್ನು ಬಿಡಲಾರೆ. ಯಾರನ್ನ ನೋಡಿದ ಮಾತ್ರದಿಂದ ಎಲ್ಲಿಲ್ಲದ ಸಂತೋಷ ನನ್ನಲ್ಲಿ ಉಂಟಾಗುತ್ತದೋ, ಯಾರನ್ನು ಸ್ವಲ್ಪ ಹೊತ್ತು ಕಾಣದಿದ್ರೆ ಉಸಿರೇ ನಿಂತ ಹಾಗಾಗ್ತದೋ, ಅಂತವನನ್ನು ಬಿಡಲಾ? ಸೂರ್ಯ ಇಲ್ಲದೇ ಲೋಕವಿರಬಹುದು, ರಾಮನಿಲ್ಲದೆ ನಾನಿರಲಾರೆ‌’. ಹೀಗೇ ಕ್ರೋಧದ ತುಟ್ಟತುದಿಗೆ ಹೋಗಿ ಅವಳನ್ನ ಬೈದು ಭಂಗಿಸಿದವನು, ಹಾಗೇ ಬಂದು ಕಾಲು ಹಿಡಿದುಕೊಂಡು ಬಿಟ್ಟನಂತೆ. ಈ ನನ್ನ ನೆತ್ತಿಯಿಂದ ನಿನ್ನ ಕಾಲನ್ನು ಮುಟ್ಟುತ್ತೇನೆ. ಈ ಪಾಪ ನಿಶ್ಚಯವನ್ನ ಬಿಟ್ಟುಬಿಡು, ಪ್ರಸನ್ನಳಾಗು. ಎಂಥಾ ಕೆಡುಕನ್ನು ಚಿಂತನೆ ಮಾಡಿಬಿಟ್ಟೆ ನೀನು! ಪಾಪಿ!! ಮತ್ತೆ ಅವತ್ತೆಲ್ಲ ಹೇಳಿದ್ದೆಯಲ್ಲ, ನನಗೆ ರಾಮ ಭರತನಿಗಿಂತ ಹೆಚ್ಚು, ಪ್ರೀತಿಯಿಂದ ನೋಡಿಕೊಳ್ತಾನೆ, ಸೇವೆ ಮಾಡ್ತಾನೆ ಮಾಡ್ಲಿ ಅಂತ ಸುಮ್ಮನೆ ಹೇಳಿದ್ದ ಅದು? ನಿಜವಲ್ವಾ ಅವೆಲ್ಲ? ಅದೇನೆ ಇರಲಿ, ಇಕ್ಷ್ವಾಕು ವಂಶಕ್ಕೆ ಬಹುದೊಡ್ಡ ಅನೀತಿ ನಿನ್ನಿಂದಲಾಗಿ.
ಅಲ್ಲ ನೀನ್ಯಾಕೆ ಹೀಗಾದೆ? ಇಷ್ಟು ದಿನವೂ ಪ್ರತಿದಿನ ನಿನಗೆ ಬೇಕು ಬೇಕಾದಂತೆ ಸೇವೆ ಮಾಡಿದ್ದಾನೆ. ಅವನು ಕಾಡಿಗೆ ಹೋಗ್ಬೇಕಾ? ನೀನೇ ಕಳುಹಿಸಿ ಕೊಡುವವಳಾ? ಸಾವಿರಾರು ಸ್ತ್ರೀಯರು ಇದ್ದಾರೆ ಅಂತಃಪುರದಲ್ಲಿ. ಒಬ್ಬರು ಒಂದು ಮಾತು ರಾಮನ ಬಗ್ಗೆ ಹೇಳಿದ್ರೆ ಹೇಳು. ಪರಿವಾದವೂ ಇಲ್ಲ, ಅಪವಾದವೂ ಇಲ್ಲ ರಾಮನ ಬಗ್ಗೆ. ಶುದ್ಧ ಮನಸ್ಸಿನಿಂದ ಎಲ್ಲರನ್ನೂ ಪ್ರೀತಿ ಮಾಡುವಂಥವನು‌ ಅವನು. ಅವನಲ್ಲಿ ಸತ್ಯವಿದೆ, ತ್ಯಾಗವಿದೆ, ತಪಸ್ಸಿದೆ, ಮೈತ್ರಿಯಿದೆ, ಶೌಚವಿದೆ, ಋಷಿತ್ವವಿದೆ, ವಿದ್ಯೆ ಇದೆ. ಅಂತಹ ಮಹರ್ಷಿತಮ ತೇಜಸ್ವಿಯಾಗಿರತಕ್ಕಂಥಾ ದೇವತೆಯಂತವನಿಗೆ ಕೆಡುಕನ್ನು ಮಾಡಲು ಹೊರಟೆಯಾ?

ಈ ವರೆಗಿನ ಬದುಕಿನಲ್ಲಿ ಒಂದು ಮಾತು ನನಗೆ ನೋವಾಗುವಂತೆ ಆಡದಿದ್ದವನನ್ನು ಈಗ ನಾನು ಹೇಗೆ ಕಾಡಿಗೆ ಹೋಗುವಂತೆ ಹೇಳಲಿ? ಯಾವುದಕ್ಕೆ ಯಾವುದು ಪ್ರತಿಕ್ರಿಯೆ? ನಿನಗಾಗಿ ಈ ಮಾತನ್ನು ಹೇಳೋ ಪರಿಸ್ಥಿತಿ ನನಗೆ ಬಂತಲ್ಲಾ! ಅವನನ್ನುಳಿದು ನಾಳೆಯಿಂದ ಯಾರು ಗತಿ ನನಗಿನ್ನು? ದೀನನಾಗಿ, ‘ ಕೈಕೇಯಿ, ಮುಪ್ಪಿನಲ್ಲಿ ಸಾಯಬೇಕಾದ್ರೆ ನೆಮ್ಮದಿಯಿಂದ ಬಿಟ್ಟುಬಿಡು, ಕರುಣೆ ತೋರು’. ಈ ಭೂಮಂಡಲದಲ್ಲಿ ಏನು ಬೇಕಾದ್ರೂ ಕೇಳು. ಕ್ಷಮಿಸು, ಈ ಒಂದು ವಿಷಯ ಬಿಟ್ಟುಬಿಡು. ರಾಮನಿಗೆ ಆಶ್ರಯ ಕೊಡು, ರಾಮನ ರಕ್ಷಣೆ ಮಾಡು. ನನಗೆ ಪಾಪ ತಟ್ಟದಿರಲಿ. ಮಾಡಿದ್ರೂ ಮಹತ್ತಾದ ಅನ್ಯಾಯ, ಮಾಡದಿದ್ರೆ ಮಾತಿಗೆ ತಪ್ಪಿದ ಪಾಪ. ಹೀಗೆ ದುಃಖಸಂತಪ್ತನಾಗಿ ವಿಲಪಿಸ್ತಾ ಇದ್ದಾನೆ. ಶೋಕಸಾಗರದ ದಡ ಸೇರಲಿಕ್ಕೆ ಹಾತೊರೀತಾ ಇದ್ದಾನೆ‌.

ಅಂತಹ ರಾಜನ ಮಾತುಗಳಿಗೆ ರೌದ್ರಾವತಾರ ತಾಳಿದ ಕೈಕೇಯಿ , ‘ನೀನೀಗ ಮಾತಿಗೆ ತಪ್ಪಿದರೆ ನಿನ್ನ ಧಾರ್ಮಿಕತ್ವವೇ ಹೋಗಿಬಿಡುತ್ತದೆ‌. ರಾಜರ್ಷಿಗಳ ಮಧ್ಯೆ ಹೇಗೆ ಕೂರುವೆ? ಯಾರು ನನ್ನನ್ನು ರಕ್ಷಿಸಿದಳೋ, ಅಂಥವಳಿಗೆ ಕೊಟ್ಟ ಮಾತನ್ನು ತಪ್ಪಿದೆನೆಂದು ಹೇಳುವೆಯಾ? ರಾಜಕುಲಕ್ಕೆ ಕಳಂಕವಾಗಬೇಡ. ನಾನು ಕೇಳಿದ್ದನ್ನು ಮಾಡು ಅಂತ ಹೇಳಿ ಶಿಬಿ ಚಕ್ರವರ್ತಿ, ರಾಜಾ ಅಲರ್ಕ, ಮತ್ತು ಸಮುದ್ರದ ದೃಷ್ಟಾಂತವನ್ನ ಕೊಡ್ತಾಳೆ. ರಾಮನಿಗೆ ರಾಜ್ಯಾಭಿಷೇಕ ಮಾಡಿ ಕೌಸಲ್ಯೆಯ ಜೊತೆ ವಿಹರಿಸಲು ಹೊರಟೆಯಾ, ದುರ್ಮತಿ ನೀನು!

ಮೂಲವಿಷಯ ಅಲ್ಲಿದೆ. ಧರ್ಮವಾಗಲೀ ಅಧರ್ಮವಾಗಲೀ, ಸತ್ಯವಾಗಲೀ ಅಸತ್ಯವಾಗಲೀ, ನನಗೆ ಕೊಟ್ಟ ಮಾತನ್ನು ನಡೆಸು. ಇಲ್ಲಾಂದ್ರೆ ಈಗಲೇ ವಿಷ ಕುಡಿದು ಸಾಯ್ತೇನೆ ನಿನ್ನ ಮುಂದೆ‌. ನನ್ನ ಬದುಕಿನಲ್ಲಿ ಒಂದು ದಿನವಾದರೂ ಕೌಸಲ್ಯೆಗೆ ಗೌರವ ಸಲ್ಲಿಸುವ ದಿನ ಬರದಿರಲಿ. ಭರತನ ಮೇಲಾಣೆ, ನನ್ನ ಮೇಲಾಣೆ‌. ಎಂದು ಹೇಳಿ ಸುಮ್ಮನಾದಳು ಕೈಕೇಯಿ. ದಶರಥ ಬೆಪ್ಪನಂತೆ ನೋಡ್ತಾ ಇದ್ದು ಬಿಟ್ಟ ಕೈಕೇಯಿಯನ್ನೇ‌. ಆಮೇಲೆ ದೊಪ್ಪನೆ ಬಿದ್ದುಬಿಟ್ಟ ಉರುಳಿ ಧರೆಯಲ್ಲಿ. ರಾಮಾ ಎಂಬೊಂದು ಉದ್ಘಾರ, ನಿಟ್ಟುಸಿರು. ಅಷ್ಟೇ, ಬಿದ್ದುಹೋದ. ಮತ್ತೆ ಏಳುವಾಗ ‘ಯಾರು ಹೇಳಿಕೊಟ್ಟಿದ್ದು ನಿನಗೆ ಹೇಳು. ಅವಳು ಹೇಳಲಿಲ್ಲ.

‘ರಾಮನನ್ನುಳಿದು ಖಂಡಿತವಾಗಿಯೂ ಭರತ ರಾಜ್ಯವಾಳಲಾರ, ನೆನಪಿಡು’. ಗುರುಹಿರಿಯರ ಜೊತೆ ಕೂತು ನಿಶ್ಚಯ ಮಾಡಿದ ನಿರ್ಣಯವನ್ನು ಹೇಗೆ ಬಿಟ್ಟು ಬಿಡಲಿ? ಕೌಸಲ್ಯೆ ನನಗೇನೆಂದಾಳು? ಇಂಥಾ ಕೇಡನ್ನು ಮಾಡಿ ಏನೆನ್ನಲಿ?
ನಾನೂ ಸಾಯುತ್ತೇನೆ. ವಿಧವಾ ರಾಜ್ಯವನ್ನಾಳು ನೀನು! ಇಷ್ಟು ಪ್ರೀತಿ ಮಾಡಿದ್ದೆಲ್ಲ ಸುಳ್ಳು ಅಲ್ವಾ? ಇನ್ನು ನಾಳೆ ನನ್ನ ಕಥೆಯೇನು? ನಾಳೆ ನಡುರಸ್ತೆಯಲ್ಲಿ ನನಗೆ ಧಿಕ್ಕಾರ ಕೂಗ್ತಾರೆ ಜನರು. ಅಯ್ಯೋ ಕಷ್ಟವೇ! ನಿನ್ನ ಮಾತನ್ನು ಕೇಳುತ್ತಾ ಇನ್ನೂ ಬದುಕಿರುವೆನಲ್ಲಾ ನಾನು! ಅಂತ ಹೇಳಿ, ‘ಇಂಥಾ ಕಾಡಿಗಟ್ಟುವ ತಂದೆ ಬೇಕಾ ರಾಮನಿಗೆ? ಇಲ್ಲಿಯ ವರೆಗೂ ಅವನಿಗೆ ಗುರುಕುಲವಾಸದ, ಬ್ರಹ್ಮಚರ್ಯವಾಸದ ಕಷ್ಟ, ಅದು ಮುಗಿಸಿ ಬಂದಿರುವನಷ್ಟೇ”.

ರಾಮ ಒಪ್ಪದೇ ಇದ್ದು ಬಿಟ್ಟಿದ್ದರೇ? ಎನ್ನುವ ತೋಚನೆ ಬಂತು ದಶರಥನಿಗೆ‌. ಅವನು ನನ್ನ ಮಾತನ್ನು ಧಿಕ್ಕರಿಸಿದ್ರೇ ಸುಖವಾಗ್ತಿತ್ತು ನನಗೆ. ಆದರೆ ಅವನು ಹಾಗೆ ಮಾಡೋದಿಲ್ಲ.

ನಾನು ಸತ್ತ ಮೇಲೆ, ರಾಮ ಕಾಡಿಗೆ ಹೋದ ಮೇಲೆ ಇನ್ನುಳಿದವರಿಗೆ ನೀನು ಏನೇನು ಮಾಡ್ತೀಯೋ? ಕೌಸಲ್ಯೆಯನ್ನು, ಸುಮಿತ್ರೆಯನ್ನೂ, ಭರತನುಳಿದು ನನ್ನ 3 ಮಕ್ಕಳನ್ನೂ ನರಕಕ್ಕೆ ಹಾಕಿ ನೀನು ಸುಖವಾಗಿರು.

ಈ ಘಟನೆ ಭರತನಿಗೆ ಪ್ರಿಯವಾದರೆ ಅವನಿತ್ತ ಪಿಂಡ ನನಗೆ ತಲುಪದಿರಲಿ ಎನ್ನುವ ಪ್ರತಿಜ್ಞೆ ಮಾಡ್ತಾನೆ.
ನನ್ನ ಮಗು ಹೇಗೆ ನಡೆಯುತ್ತಾನೆ ಕಾಡಿಗೆ? ಆ ವಗರೆಯನ್ನ ಹೇಗೆ ಸೇವಿಸಿಕೊಂಡಿರ್ತಾನೆ? ನಾಳೆಯಿಂದ ನಾರುಮುಡಿಯನ್ನು ಉಡಬೇಕು! ಯಾರು ಈ ಕೆಡುಕನ್ನು ಚಿಂತನೆ ಮಾಡಿದರು? ಕುತೂಹಲ! ಕೈಕೇಯಿಗೆ ಧಿಕ್ಕಾರ..!

ಕೊನೆಗೆ ಹೇಳ್ತಾನೆ, ನಾನು ಮಗನನ್ನು ತ್ಯಾಗ ಮಾಡ್ತಿದ್ದ ಹಾಗೇ ಏನೇನಾಗಬಹುದೋ.. ಜಗತ್ತೆಲ್ಲವೂ ಕುಪಿತವಾಗಬಹುದು ಎಂಬುದಾಗಿ ಹೇಳಿ ನನ್ನ ಶತ್ರುಗಳಿಗೆ ನೀನೊಂದು ವರದಾನವಾಗಿ ಬಂದೆ ಎಂದು ಹೇಳಿ ಪರಿಪರಿಯಾಗಿ ಹಳಿದು ನಿನ್ನ ಮಾತನ್ನು ನಡೆಸೋದಿಲ್ಲ ನಾನು, ನೀನು ಸತ್ತುಹೋದರೂ ಚಿಂತೆಯಿಲ್ಲ ಅಂದರೂ.. ನಡೆಸಲೇಬೇಕು, ಅನ್ಯಮಾರ್ಗವಿಲ್ಲ. ಮತ್ತೆ ಆಕೆಯ ಕಾಲಿಗೆ ಬಿದ್ದುಬಿಟ್ಟ, ಕಾಲನ್ನ ತಲುಪದೆ ಬಿದ್ದುಬಿಟ್ಟ ದಶರಥ ಮುಂದಿನ ದಾರಿಕಾಣದೆ…

ಯಾರನ್ನು ತುಂಬಾ ಪ್ರೀತಿ ಮಾಡಿರ್ತೇವೋ ಅವರೇ ಇಷ್ಡು ದೊಡ್ಡ ಅನ್ಯಾಯ ಮಾಡಿದ್ರೆ ಆಗುವ ಆಘಾತ ತುಂಬಾ, ತುಂಬಾ ದೊಡ್ಡದು ~ #ಶ್ರೀಸೂಕ್ತಿ

ಆದರೆ ಅನಿವಾರ್ಯ ವಿಧಿಗದು. ಹಾಗಾಗಿ ವಿಧಿ ಇಂಥಾ ದೊಡ್ಡ ಆಟವನ್ನ ಆಡಿದೆ. ನೋಡೋಣ ಎಲ್ಲಿಯವರೆಗೆ ಹೋಗ್ತದೆ ಇದು, ದಶರಥನಿಗೆ ಎಲ್ಲಿಯಾದರೂ ನೆಮ್ಮದಿ ಇದೆಯಾ? ಎಲ್ಲಿದೆ? ಎನ್ನುವುದನ್ನ ಮುಂದಿನ ಪ್ರವಚನದಲ್ಲಿ ನೋಡೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:


 

 

ಪ್ರವಚನವನ್ನು ನೋಡಲು:

Facebook Comments