ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಪ್ರಿಯರಾದವರಿಗೆ ಪ್ರಿಯ ವಾರ್ತೆ ಹೇಳುವುದು ಸುಲಭ. ಅಪ್ರಿಯರಾದವರಿಗೆ ಅಪ್ರಿಯ ವಾರ್ತೆ ಹೇಳುವುದು ಸುಲಭ.

ಆದರೆ ಅಪ್ರಿಯರಾದವರಿಗೆ ಪ್ರಿಯವಾರ್ತೆಯನ್ನು ಹೇಳಲು ದೊಡ್ಡ ಮನಸ್ಸು ಬೇಕು. ಮತ್ತೂ ಕಷ್ಟ, ಪ್ರಿಯರಾದವರಿಗೆ ಅಪ್ರಿಯ ವಾರ್ತೆ ಹೇಳುವುದು. ಅದಕ್ಕೆ ಗಟ್ಟಿಮನಸ್ಸು ಬೇಕು. ಆ ಕಷ್ಟವನ್ನು ರಾಮ ಅನುಭವಿಸ್ತಾ ಇದ್ದಾನೆ.
ತನಗದು ಅಪ್ರಿಯವಲ್ಲ, ‘ಸತ್ಯ’ವಷ್ಟೆ. ಆದರೆ ತಾಯಿಗೆ? ಅದು ಹಾಲಾಹಲ!

ಅಷ್ಟು ಸಂತೋಷದಲ್ಲಿದ್ದಾಳೆ ಕೌಸಲ್ಯೆ. ಮಗನಿಗಾಗಿಯೇ ದೇವತಾ ತರ್ಪಣ ನೀಡುತ್ತಿದ್ದಾಳೆ. ವ್ರತವನ್ನು ಆಚರಿಸುತ್ತಿದ್ದಾಳೆ. ಹವನವು ನಡೆಯುತ್ತಿದೆ. ಆ ಸಂದರ್ಭ ರಾಮನಾಗಮನದಿಂದ ಮತ್ತಷ್ಟು ಸಂತುಷ್ಟಳಾಗಿ ಕುಳಿತುಕೊಳ್ಳಲಿಕ್ಕೆ ರತ್ನಪೀಠದ ವ್ಯವಸ್ಥೆ ಮಾಡುತ್ತಾಳೆ, ಊಟಕ್ಕೆ ಕರೆಯುತ್ತಾಳೆ! ಈಗ ರಾಮನು ಆ ಅಪ್ರಿಯ ವಾರ್ತೆಯನ್ನು ನುಡಿಯಬೇಕು.

ರತ್ನಪೀಠವನ್ನು ‘ಸ್ವೀಕರಿಸಿದೆ’ ಎಂಬಂತೆ ಮುಟ್ಟಿದನಂತೆ, ಊಟದ ಬಗ್ಗೆ ಉತ್ತರಿಸುವ ಮೊದಲು ವಿಷಯ ಹೇಳಬೇಕಾಗಿದೆ. ರಾಮನ ಸ್ವಭಾವವೇ ವಿನಯ. ವಿನಯದಿಂದ, ದೇವರಂಥಾ ಅಮ್ಮನ ಕುರಿತಾದ ಗೌರವದಿಂದ ಮತ್ತಷ್ಟು ಬಾಗಿ,
‘ ಅಮ್ಮಾ, ನೀನರಿಯೆ, ದೊಡ್ಡ ಭಯವೊಂದು ಕಾದಿದೆ ನಿನ್ನನ್ನು. ನಾನು ಮುಂದೆ ಹೇಳುವ ಮಾತುಗಳು ನಿನಗೆ, ಸೀತೆಗೆ, ಲಕ್ಷ್ಮಣನಿಗೆ ಕೇಳಲಿಕ್ಕೆ ಕಷ್ಟವಾಗುವಂತವು..’
ನೇರವಾಗಿ ಹೇಳ್ತಾನೆ. ‘ದಂಡಕಾರಣ್ಯಕ್ಕೆ ಹೊರಟೆನಮ್ಮಾ. ದರ್ಭಾಸನದಲ್ಲಿ ಕುಳಿತುಕೊಳ್ಳುವ ಕಾಲವಿದು. 14 ವರ್ಷ ನಾನು ನಿರ್ಜನ ವನದಲ್ಲಿರಬೇಕು, ಮುನಿಗಳ ಜೀವನದಂತೆ. ಯೌವರಾಜ್ಯವನ್ನು ಭರತನಿಗೆ ರಾಜನು ಕೊಡಲಿದ್ದೇನೆ’. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ದೊಪ್ಪನೆ ಉರುಳಿ ಬಿದ್ದಳು ಕೌಸಲ್ಯೆ. ಬೋಧವೇ ತಪ್ಪಿ ಹೋಯಿತು.

ಅವಳು‌ ಆ ದುಃಖಕ್ಕೆ ಅರ್ಹಳಲ್ಲವೆಂದನಿಸಿತು ರಾಮನಿಗೆ. ಎಬ್ಬಿಸಿ ಕೂರಿಸ್ತಾನೆ, ಆದರೆ ಆಕೆಗೆ ಎಚ್ಚರವಿಲ್ಲ. ಆಕೆಯ ಮೈಗೆ ಹಿಡಿದ ಧೂಳನ್ನು ವರೆಸಿ ತುಂಬ ಪ್ರೀತಿಯಿಂದ ಅಮ್ಮನನ್ನು ನೇವರಿಸ್ತಾನೆ. ಇರುವಷ್ಟು ಹೊತ್ತು ಪ್ರೀತಿ ಮಾಡುವುದು ಬಿಟ್ಟು ಬೇರೆ ಅವಕಾಶವಿಲ್ಲ ರಾಮನಿಗೆ.

ಮುಂದೆ ಕೌಸಲ್ಯೆ ಹೇಳ್ತಾಳೆ, ‘ ಮಗನೇ, ನೀನು ಹುಟ್ಟದಿದ್ದರೆ ನನಗೆ ಒಂದೇ ಶೋಕ; ಭಂಜೆ ಕೌಸಲ್ಯೆ! ಅದು ಬಹಳ ಸಮಯ ಇತ್ತು. ಆದರೆ ಈ ಶೋಕದ ಮುಂದೆ ಅದೇನೂ ಅಲ್ಲ. ಪಟ್ಟ ಏರುವ ಹೊತ್ತಿನಲ್ಲಿ ಬೆಟ್ಟ (ಕಾಡು) ಏರುವೆಯಾದರೆ ಅದೇ ದುಃಖ ಒಳ್ಳೆಯದಿತ್ತು..’
ನೀನು ಹುಟ್ಟಿರದಿದ್ದರೇ ಚೆನ್ನಾಗಿರ್ತಿತ್ತು ಎಂಬರ್ಥದ ಮಾತುಗಳು. ಪಡೆದುಕೊಂಡು ಕಳೆದುಕೊಳ್ಳುವ ದುಃಖದ ಮುಂದೆ ಇಲ್ಲದಿರುವ ದುಃಖವೇ ಒಳ್ಳೆಯದು.
‘ಪತಿಯಲ್ಲಿ ಕಾಣದ ಸುಖವನ್ನು ಸುತನಲ್ಲಿ ಕಂಡೇನು ಎಂಬ ಆಸೆಯೂ ಇಲ್ಲದಾಯಿತೇ? ಸುಖವನ್ನು ಕಾಣದ ಬದುಕಿದು. ಪಟ್ಟದರಾಣಿ, ಯಜ್ಞಭಾಗಿನಿಯಾಗಿದ್ದುಕೊಂಡು ನನಗಿಂತ ಚಿಕ್ಕವರಾದ ಕೈಕೇಯಿ ಮತ್ತು ಅವಳ ಪರಿವಾರದಿಂದ ದಾಸಿಗಿಂತ ಕಡೆಯಾಗಿ ನೋವನುಭವಿಸಿರುವೆ. ಇನ್ನಂತೂ ತುಂಬ ಕೇಳಲಿಕ್ಕೆ ಇದೆ! ಸವತಿಯರಿಂದ ಕಿರುಕುಳಕ್ಕೊಳಗಾಗಿ ಬಾಳುವುದು ತುಂಬ ಕಷ್ಟ. ನನ್ನ ಶೋಕ, ವಿಲಾಪಕ್ಕೆ ಇನ್ನು ದಡವೇ ಇಲ್ಲ. ಅದು ಅನಂತ. ರಾಮನಿರುವಂತೆ ನಿರಾಕೃತೆ ನಾನಿಲ್ಲಿ. ಕೊನೆಪಕ್ಷ ನೀನು ಬಳಿಬಂದಾಗ ಸುಖವಿತ್ತು. ಇನ್ನು ನನಗೆ ಮರಣವೊಂದೇ ಗತಿ’.

‘ಇನ್ನು ಮುಂದೆ? ಕೈಕೇಯಿಯ ಮಗನ ಮುಖ ನೋಡಿದವರು ನನ್ನ ಕಡೆ ತಿರುಗಿಯೂ ನೋಡರು. ನಿನ್ನ ಮುಖ ನೋಡಲಾರೆ, ಕೈಕೇಯಿಯ ಸಿಡುಕು ಮೋರೆ, ಅಲ್ಲಿ ಬೇರೆ ಭಾವವೇ ಇಲ್ಲ. ಕ್ರೋಧ ಮಾತ್ರ ಅಕ್ಕನ ಬಳಿ! ಸಿಡುಕು-ಕೆಡುಕು ಇಷ್ಟೇ. ಎದೆಸೀಳುವ ಮಾತುಗಳೇ. ಆ ಮುಖವನ್ನ ಹೇಗೆ ನೋಡಲಿ ಈ ದೌರ್ಭಾಗ್ಯವಂತೆ? ಹತ್ತೇಳು ವರ್ಷಗಳು ನಿನ್ನಿಂದಾಗಿ ಬೆಳಕು ಬಂತು. ಮುಪ್ಪಿನಲ್ಲಿ ಸ್ವಲ್ಪವಾದರೂ ಸುಖದಿಂದ ಬಾಳುವೆನೆಂದು ಭಾವಿಸಿದೆ‌. ನನ್ನ ದುಃಖ ಅಕ್ಷಯವೆಂದು ಈಗ ತಿಳಿಯಿತು. ಈ ಅವಮಾನ, ತಿರಸ್ಕಾರದ ಮಧ್ಯೆ ಹೇಗೆ ಬದುಕಲಿ?’

‘ಅದು ಬಿಡು, ನಿನ್ನ ಮುಖವನ್ನೇ ನೋಡದೆ ಈ ಹಾಳು ಬಾಳನ್ನು ದೌರ್ಭಾಗ್ಯವತಿ ನಾನು ಹೇಗೆ ಬಾಳಲಿ? ಈ ನನ್ನ ಹೃದಯ ಎಷ್ಟು ಕಲ್ಲಾಗಿದೆ! ಒಡೆದಿದ್ರೆ ಚೆನ್ನಾಗಿತ್ತು. ನಾನೀಗ ಸಾಯಬೇಕಿತ್ತಲ್ಲ, ಯಮಲೋಕದಲ್ಲಿಯೂ ನನಗೆ ಜಾಗವಿಲ್ಲವೇನೋ. ನನ್ನ ಸಂಯಮದ ಬದುಕು, ದಾನ, ವ್ರತ, ತಪಸ್ಸೆಲ್ಲವೂ ವ್ಯರ್ಥ. ಬಯಸಿದಾಗ ಮರಣಕ್ಕೂ ಅವಕಾಶವಿಲ್ಲವೇ?’
ಇಲ್ಲಿರಲು ಸಾಧ್ಯವಿಲ್ಲ, ಸಾವೂ ಇಲ್ಲ. ದುಃಖಿಸ್ತಾಳೆ ತಾಯಿ. ಮುದಿ ಬಡಕಲು ಹಸುವು ತನ್ನ ಕರುವನ್ನು ಹಿಂಬಾಲಿಸುವಂತೆ ನಾನು ನಿನ್ನ ಹಿಂದೆ ಕಾಡಿಗೆ ಬರುತ್ತೇನೆಂದು ಎನ್ನುತ್ತಾ ದಿವ್ಯಸ್ತ್ರೀ ಗೋಳಾಡಿದಳು.

ರಾಮ ಸುಮ್ಮನಿದ್ದ, ಲಕ್ಷ್ಮಣ ಸುಮ್ಮನಿರಲಿಲ್ಲ. ‘ ಅಮ್ಮಾ, ನಿಮ್ಮ ಮಾತಿಗೆ 100 ಕ್ಕೆ 100 ಸಹಮತ ನನ್ನದು. ಅಣ್ಣ ಯಾಕೆ ಕಾಡಿಗೆ ಹೋಗಬೇಕು? ಒಂದು ಹೆಣ್ಣಿನ ಮಾತು ಕೇಳಿ ಅಣ್ಣ ರಾಜ್ಯವನ್ನು ಕಳೆದುಕೊಂಡು ಕಾಡಿಗೆ ಹೋಗಬೇಕಾ? ತಂದೆ ಹಿಂದು-ಮುಂದಾಗಿ ಆ ಹೆಣ್ಣಿಗೆ ವಶನಾಗಿದ್ದಾನೆ. ಅಂತಹ ದೊರೆ ಬಾಯಿಗೆ ಬಂದಿದ್ದನ್ನ ಹೇಳಿದರೆ ಪಾಲಿಸಬೇಕಾ? ಇದು ವಿವೇಕವಾ?’ ಎಂದು ಕೇಳುತ್ತಾನೆ.

ಕಾಡಿಗೆ ಕಳುಹಿಸುವುದು ಆಗಿನ ಕಾಲದ ಕಠಿಣ ಶಿಕ್ಷೆಯಾಗಿತ್ತು. ‘ ಅಂತಹ ಅಪರಾಧವೇನಿದೆ ಅಣ್ಣನದು? ಕಾಡಿಗಟ್ಟುವಂಥದ್ದಿರಲಿ, ಸಣ್ಣ ದೋಷವಾದರೂ ಏನಿದೆ? ಇಡೀ ಲೋಕದಲ್ಲಿ ರಾಮನಲ್ಲಿ‌ ದೋಷವಿದೆ ಎನ್ನುವವರು ಒಬ್ಬರೂ ಇಲ್ಲ, ರಾಮನ ವೈರಿಯೂ ಇಲ್ಲ! ಯಾಕೀಪರಿ ಶಿಕ್ಷೆ? ಸರಳನೀತ, ಕಪಟವಿಲ್ಲ. ಗುರುಹಿರಿಯರು ಹೇಳಿದ್ದೆಲ್ಲವನ್ನೂ ಕೇಳುವವನು. ಶತ್ರುಗಳಲ್ಲಿಯೂ ವಾತ್ಸಲ್ಯ ತೋರುವವನು. ಧರ್ಮದಲ್ಲಿ ದೃಷ್ಟಿ ನೆಟ್ಟವನು. ಚೂರೂ ದೋಷವಿಲ್ಲದ ಮಗನನ್ನು ಕಾಡಿಗಟ್ಟಲು ರಾಜನಿಗೆ ಮತ್ತೆ ಬಾಲ್ಯ ಬಂದಿದೆ. ಯಾವ ಮಗನೂ ತಂದೆಯ ಇಂತಹ ಅರಳು ಮರುಳಿನ ಮಾತನ್ನು ನಡೆಸಬೇಕಿಲ್ಲ’ ಎಂದು ತಾಯಿಯ ಬಳಿ ನುಡಿಯುತ್ತಾನೆ ಲಕ್ಷ್ಮಣ.

ಬಳಿಕ ಅಣ್ಣನಿಗೆ, ‘ಇನ್ನೊಬ್ಬನಿಗೆ ಈ ವಿಷಯ ಗೊತ್ತಾಗುವುದರ ಮೊದಲು ಪಟ್ಟವನ್ನೇರು‌. ಕೈಗೆ ತೆಗೆದುಕೋ ಆಡಳಿತವನ್ನು. ನಾನಿರುವೆ ಜೊತೆಯಲ್ಲಿ. ಪಟ್ಟಾಭಿಷೇಕಕ್ಕೆ ವಿಪ್ಲವ ಬಂದರೆ ನನ್ನ ಧನುಸ್ಸು ಉತ್ತರ ಕೊಡುತ್ತದೆ. ನನಗೆ ನೀನೊಬ್ಬನೇ, ಮತ್ಯಾರೂ ನನ್ನವರಲ್ಲ. ನಾವು ಮೃದುವಾಗಿದ್ದುದರ ಫಲವಿದು. ದಂಡವೊಂದೇ ಇಂಥಾ ಅನ್ಯಾಯಕ್ಕೆ ಫಲ’ ಎನ್ನುತ್ತಾ ತಂದೆಯ ಬಗ್ಗೆಯೂ ಕ್ರುದ್ಧನಾಗಿ ಬೈಯ್ಯುತ್ತಾನೆ.

ಯಾವ ಆಪತ್ತಿಗಾದರೂ ನನ್ನ ಪ್ರವೇಶ ಮೊದಲು, ಆಮೇಲೆ ರಾಮ. ಅಣ್ಣನೇ ನನ್ನ ಸರ್ವಸ್ವವೆನ್ನುತ್ತಾನೆ ಕೌಸಲ್ಯೆಗೆ.

ಕೌಸಲ್ಯೆಗೂ ಸ್ವಲ್ಪ ಉತ್ಸಾಹ ಬಂತು. ದಿಕ್ಕೇ ಕಾಣದಾದಾಗ ಒಂದು ಸಣ್ಣ ದಿಶೆ. ‘ಸರಿಯಾಗಿ ಆಲೋಚಿಸಿ ನಿನಗೆ ಸರಿಯೆನ್ನಿಸಿದ್ದನ್ನು ಮಾಡು. ಮಾತೃಶುಶ್ರೂಷೆ ನಿನಗೆ ಧರ್ಮ. ತಾಯಿಯ ಸೇವೆಯೇ ದೊಡ್ಡ ತಪಸ್ಸು. ಮಾತೃವಚನಪರಿಪಾಲನೆಯೂ ಮುಖ್ಯ’ ಎನ್ನುತ್ತಾ ಧರ್ಮಪಾಶದಿಂದ ರಾಮನನ್ನು ಕಟ್ಟಿಹಾಕುವ ಪ್ರಯತ್ನ ಮಾಡ್ತಾಳೆ.

ರಾಮನ ಭಾವ, ‘ ನಿನ್ನ ಮಾತನ್ನು ಪಾಲನೆ ಮಾಡುವೆನು, 14 ವರ್ಷಗಳು ಕಳೆದ ಮೇಲೆ. ಇದು ಮೊದಲು. ಪ್ರತಿಜ್ಞೆಗಳಿದ್ದಾವೆ ಅಲ್ಲಿ. ಈ ಸಮಯದಲ್ಲಿ ಆ ವಾಕ್ಯವನ್ನು ಆಕ್ರಮಿಸುವ ಶಕ್ತಿ ನನ್ನಲ್ಲಿಲ್ಲ‌. ಅಮ್ಮಾ, ಪ್ರಸನ್ನಗೊಳಿಸು‌. ನಿನ್ನನ್ನು ನೋಯಿಸುವ ಸಲುವಾಗಿ ಅಲ್ಲಮ್ಮಾ, ತಂದೆಯ ಮಾತನ್ನು ಕೇಳಿ ಹಾಳಾದವರುಂಟೇ? ನನ್ನಾಸೆಯೂ ಅದೇ, ಕಾಡಿಗೆ ಹೋಗಲಿಕ್ಕೆ ಬಯಸುವೆನು.’ ಎಂದು ತನ್ನ ತಲೆಯನ್ನು ಆಕೆಯ ಕಾಲ ಮೇಲಿಟ್ಟು ಕಾಡಿಗೆ ಹೋಗಲು ಅಪ್ಪಣೆಕೊಡು, ನನ್ನ ಪ್ರಾಣಗಳ ಮೇಲಾಣೆ. ಮಂಗಲಾಶೀರ್ವಾದ ಮಾಡು. ಈ ಪ್ರತಿಜ್ಞೆ ಮುಗಿದ ಬಳಿಕ ನಿನ್ನ ಮಾತನ್ನು ನೆರವೇರಿಸುವೆನಮ್ಮಾ. ನನ್ನ ನಿನ್ನ ಪ್ರೀತಿ ಬಂಧ ಕಡಿಮೆಯಲ್ಲ’ ಎಂದು ಹೇಳುವನು.

ಕೌಸಲ್ಯೆ ಸುಲಭದಲ್ಲಿ ಬಿಟ್ಟು ಕೊಡುವವಳಲ್ಲ. ‘ಈ ಸ್ಥಿತಿಯಲ್ಲಿ ನನ್ನನ್ನು ನೀನು ಬಿಟ್ಟುಹೋಗಬಾರದು. ನಿನ್ನ ಸಾನಿಧ್ಯಕ್ಕಿಂತ ಹೆಚ್ಚು ಅಮೃತವೂ ಬೇಡ, ನಿನ್ನ ಸಂಗ ಮಾತ್ರ ಬೇಕು ನನಗೆ’ ಎಂದಳು.
ಆ ಕ್ಷಣದಲ್ಲಿ ರಾಮ ವಿಚಲಿತನಾಗಲಿಲ್ಲ. ತನ್ನದೇ ದಾರಿಯಲ್ಲಿ ಮುಂದುವರೆದ, ತನ್ನ ನಿರ್ಧಾರದಲ್ಲಿ ನೆಲೆನಿಂತ.

ಮತ್ತೆ ಲಕ್ಷ್ಮಣನಿಗೆ, ನಿನಗೆ ತುಂಬ ಪ್ರೀತಿ ನನ್ನಲ್ಲಿ‌, ಗೊತ್ತು ನನಗೆ. ನೀನು ಮಹಾಪರಾಕ್ರಮಿ. ಆದರೆ ಅದಿರಲಿ ಬಿಡು, ಈಗ ಕರ್ತವ್ಯವಿದೆ. ನೀನೂ ಅಮ್ಮನ ಜೊತೆ ಸೇರಿ ಏಕೆ ದಾರಿ ತಪ್ಪಿಸುವೆ? ಕಷ್ಟವಾಗೋದಿಲ್ವ? ನಾನು ಸತ್ಯ-ಧರ್ಮದಲ್ಲಿ ಇರಬೇಡವೇ? ನಾನು ಹೇಳಿದ್ದನ್ನು ಕೇಳುವುದೇ ಈಗ ನಿನ್ನ ಕರ್ತವ್ಯ. ತಂದೆ ಯಾವ ಭಾವದಿಂದಾರೂ ಹೇಳಿರಲಿ, ಆ ಮಾತನ್ನು ಪಾಲಿಸಬೇಕು. ವಿವೇಚನೆ ಮಾಡಲು ಅಧಿಕಾರವಿಲ್ಲ. ತಂದೆಯ ಪ್ರತಿಜ್ಞೆ ಮೀರುವುದು ನನ್ನಿಂದ ಸಾಧ್ಯವಿಲ್ಲ.

ಬಳಿಕ ಅಮ್ಮನಿಗೆ, ‘ಅಪ್ಪ‌ ಬದುಕಿರುವಾಗಲೇ ಅವನ ಪತ್ನಿಯಾದ ನೀನು ನನ್ನೊಡನೆ ಕಾಡಿಗೆ ಬರುವುದು ಎಷ್ಟು ಸರಿ? ಅದು ಪಾತಿವ್ರತ್ಯ ಧರ್ಮಕ್ಕೆ ಸಲ್ಲುವುದೇ?’ ಎಂದು ಪ್ರಶ್ನಿಸುತ್ತಾನೆ. ರಾಜ್ಯಕ್ಕಾಗಿ ಸತ್ಯ ಧರ್ಮವನ್ನು ಬಿಡುವುದು ರಾಮನ ಕೆಲಸವಲ್ಲ. ಈ ಜನ್ಮ ನಶ್ವರ. ಇಲ್ಲಿ ಅಧರ್ಮದಿಂದ ಪಡೆದುದಾವುದೂ ನನಗೆ ಬೇಡ ಎನ್ನುತ್ತಾನೆ.

ರಾಮನ ಪರಾಕ್ರಮ ಅವನ ಚಿತ್ತಸ್ಥೈರ್ಯ ಮತ್ತು ಸತ್ಯನಿಷ್ಠೆಯಲ್ಲಿದೆ.

ತಾಯಿಯನ್ನು ಪ್ರಸನ್ನಗೊಳಿಸಿ ಲಕ್ಷ್ಮಣ ಶಾಸನ ವಿಧಿಸುತ್ತಾನೆ. ಅವನು ತಮ್ಮ, ಪ್ರಿಯ, ಸ್ನೇಹಿತ, ಒಡನಾಡಿ, ರಾಮನ ಎರಡನೇ ಅಂತರಾತ್ಮ. ‘ರೋಷವನ್ನೂ ಶೋಕವನ್ನೂ ನಿಗ್ರಹಿಸು, ಧೈರ್ಯವನ್ನಾಶ್ರಯಿಸು. ಅಭಿಷೇಕದ ಸಿದ್ಧತೆಗಳನ್ನು ವಿಸರ್ಜಿಸು. ಕೈಕೇಯಿ, ದಶರಥರ ಮೇಲೆ‌ ಬೇಸರಿಸಬೇಡ. ಇದು ವಿಧಿ, ನಮ್ಮ ಚಿಂತನೆಗೆ ನಿಲುಕದ್ದು, ಅದಕ್ಕೆ ಹೀಗಾಯ್ತು. ವಿಧಿ ಅಗೋಚರ, ಅದರ ಫಲ ಮಾತ್ರ ಸಿಗುವಂಥದ್ದು. ಹಾಗಾಗಿ ವಿಧಿಗೆ ಶರಣಾಗು’ ಎಂದು ರಾಮ ಹೇಳುತ್ತಾನೆ.

ರಾಮನ ಚಿಂತನೆಯ ರೀತಿಯೇ ಅದ್ಭುತ. ರಾಮನ ಕಡಿವಾಣವೇ ಲಕ್ಷ್ಮಣನಿಗೆ ದೊಡ್ಡ ಸಮಸ್ಯೆ.
‘ರಾಜ್ಯ ಬರುವ ಹಾಗೆ ಬಂದರೆ ತೆಗೆದುಕೊಳ್ಳತ್ತೇನೆ. ಅಧರ್ಮದಲ್ಲಿ‌ ಬರುವುದಾದರೆ ಬೇಡ.’ ಇದು ರಾಮನ ಮಾತು.

ಇಲ್ಲಿ, ನಾವು ಕೌಸಲ್ಯೆ, ಲಕ್ಷ್ಮಣನ ಪ್ರೀತಿಯನ್ನು‌ ನೋಡ್ಬೇಕು. ಆ ತಾಯ್ತನದ ಪ್ರೀತಿ, ಈ ರಾಮನ ಸ್ಥೈರ್ಯ, ಅದು ಆದರ್ಶ. ಇದು ರಾಮನ ರಾಮತ್ವ‌. ಧೀರೋದ್ಧಾತ್ತ, ಅಚಲ ರಾಮನ ಸ್ಮರಣೆಯನ್ನು ಮಾಡುತ್ತಾ ರಾಮ-ಲಕ್ಷ್ಮಣರ ಸಂವಾದವನ್ನು ಮುಂದಿನ ಪ್ರವಚನದಲ್ಲಿ ತಿಳಿಯೋಣ

ಪ್ರವಚನವನ್ನು ಇಲ್ಲಿ ಕೇಳಿರಿ:


 

 

ಪ್ರವಚನವನ್ನು ನೋಡಲು:

Facebook Comments