ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸೇರಲೆಂದು ಬೇರೆಯಾಗುವುದು ಉಂಟು, ಬೇರೆಯಾಗಲೆಂದು ಸೇರುವುದು ಉಂಟು. ಬೇರೆಯಾಗಲೆಂದೆ ಬೇರೆಯಾಗುವುದು ಉಂಟು. ಸೇರಲೆಂದೇ ಸೇರುವುದು ಉಂಟು. ಮುಕ್ತಿಯಲ್ಲಿ ನಾವು ದೇವರನ್ನು ಸೇರುತ್ತೇವೆ. ಸೇರಲೆಂದೆ ಸೇರುವುದು ಮತ್ತೆ ಬೇರೆಯಾಗಲಲ್ಲ. ಅದು ಅದ್ವೈತ ಶಾಶ್ವತ.

ಈಗ ರಾಮ ದಶರಥನನ್ನು ಭೇಟಿಯಾಗುತ್ತಿದ್ದಾನೆ. ಈ ಸೇರುವಿಕೆ ಬೀಳ್ಕೊಡುವ ಸಲುವಾಗಿ. ಹೋಗಿ ಬರುವೆನೆಂದು ಹೇಳುವುದಕ್ಕಾಗಿ ಭೇಟಿಯಾಗುತ್ತಿರುವುದು. ಈ ಭೇಟಿ ಅವರಿಬ್ಬರ ಕೊನೆಯ ಭೇಟಿಯಾಗಲಿದೆ.

ರಾಜಭವನದ ದ್ವಾರದಲ್ಲಿ ಬಂದು ನಿಂತ ರಾಮ ಅಲ್ಲಿ ನಿಂತಿರುವ ದಶರಥನ ಪ್ರಿಯ ಸಾರಥಿಯೂ, ಪ್ರಧಾನ ಸಚಿವನೂ ಆದ ಸುಮಂತ್ರನಲ್ಲಿ ನಾನು ಬಂದ ವಿಷಯವನ್ನು ತಂದೆಗೆ ತಿಳಿಸು ಎಂದು ಹೇಳಿದ. ಚಿಕ್ಕವಯಸ್ಸಿನಲ್ಲಿಯೇ ಆತ್ಮದಿಂದ, ಅಂತರಂಗದಿಂದ, ಗುಣಗಣಗಳಿಂದ ಬಹುದೊಡ್ಡವನಾಗಿ ಮುಗಿಲೆತ್ತರಕ್ಕೆ ಬೆಳೆದುನಿಂತ ರಾಮನನ್ನು ನೋಡಿ, ನಿಶ್ಚಿತವಾದ ರಾಮ ವಿಯೋಗದಿಂದ ದುಃಖಿತನಾಗಿ ಒಳಗೆ ಹೋಗಿ ದಶರಥನನ್ನು ಕಾಣುತ್ತಾನೆ ಸುಮಂತ್ರ. ಜಗತೀನಾಥನೇ ಹೌದು ದಶರಥ ಆದರೀಗ ಅನಾಥ. ಅವನಿಗೆ ರಾಮನೇ ಸರ್ವಸ್ವ.ಅಂತಹ ರಾಮನ ಕುರಿತಾಗಿ ಶೋಕಿಸುತ್ತಿದ್ದಾನೆ.

ಅಂತಹ ದಶರಥನಿಗೆ ಜಯಕಾರ ಹಾಕಿ ವಂದಿಸಿ ರಾಮ ಬಂದ ವಿಷಯ ಹೇಳಲು ಹೊರಟಾಗ ಸುಮಂತ್ರನ ಧ್ವನಿ ಕಂಪಿಸಿದೆ, ಭಯದಿಂದ ನಡುಗಿದೆ. ಪುರುಷಸಿಂಹನಾದ, ರಾಜಗುಣಗಳೆಲ್ಲವೂ ಇರುವ ನಿನ್ನ ಮಗ ಸಂಪೂರ್ಣವಾದ ತನ್ನ ಸಂಪತ್ತನ್ನು ದಾನ ಮಾಡಿ, ತನ್ನೆಲ್ಲ ಸುಹೃದರನ್ನು ಕಂಡು ಕೊನೆಯದಾಗಿ ನಿನ್ನನ್ನು ನೋಡಿ ಹೇಳಿಹೋಗಲು ಬಂದಿದ್ದಾನೆ ಎನ್ನುವಾಗ ಸುಮಂತ್ರನಿಗೆ ಹೊಟ್ಟೆಯುರಿದಿದೆ.

ಯಾರು ಊರಿನಲ್ಲಿದ್ದರೆ ಊರಿಗೆ ಕ್ಷೇಮವೋ, ಊರಿಗೆ ಊರೋ ಬಯಸುತ್ತದೆಯೋ, ಯಾರಿಲ್ಲದಿದ್ದರೆ ಅಸಂಖ್ಯ ಹೃದಯಗಳಿಗೆ ನೋವಾಗುತ್ತದೆಯೋ, ಊರಿಗೆ ಕತ್ತಲಾವರಿಸುತ್ತದೆಯೋ ಅಂತಹವನು ಕಾಡಿಗೆ ಹೋಗುತ್ತಿದ್ದಾನೆ. ಸಿಂಹಾಸನಕ್ಕೆ ಅವನಿಗಿಂತ ಅರ್ಹರಿಲ್ಲ ಆದರೆ ಅವನಿಗೆ ಸಿಂಹಾಸನವಿಲ್ಲ. ಹೊಟ್ಟೆಯುರಿಯದೇ ಇನ್ನೇನು? ಸುಮಂತ್ರನಿಗೆ ಎಲ್ಲ ತಾಯಂದಿರನ್ನು ಕರೆ ತಾ ಎಂದಾಗ ಹೋಗಿ ಅವನ ರಾಣಿಯರಿಗೆ ಹೇಳಿ ಕರೆತಂದ. ಹೋಗಿಬಾರೆಂದು ಹೇಳಲು ಅವರಿಗೂ ಅವಕಾಶ. ದಶರಥನ ಅಂತಃಪುರದ ಸ್ತ್ರೀಯರೆಲ್ಲ ಕೌಸಲ್ಯೆಯನ್ನು ಮುಂದಿಟ್ಟುಕೊಂಡು ಬಂದರು.

ಎಲ್ಲರೂ ಬಂದಮೇಲೆ ದೊರೆ ಸುಮಂತ್ರನಿಗೆ ರಾಮನನ್ನು ಕರೆ ಎಂದಾಗ ಕ್ಷಿಪ್ರವಾಗಿ ರಾಮ, ಲಕ್ಷ್ಮಣ, ಸೀತೆಯನ್ನು ಕರೆತರುತ್ತಿದ್ದಾನೆ. ರಾಮ ಅಲ್ಲಿಂದಲೇ ಕೈಮುಗಿದು ಬರುತ್ತಿದ್ದಾನೆ. ಅವನನ್ನು ಅಷ್ಟು ದೂರದಿಂದ ನೋಡಿದ ದಶರಥನಿಗೆ ತಡೆಯಲಾಗಲಿಲ್ಲ, ಮುಪ್ಪಿನ ದಶರಥ ಅತಿವೇಗವಾಗಿ ಸಾಗಿ ಅವನನ್ನು ತಲುಪುವ ಮೊದಲೇ ಮೂರ್ಛೆತಪ್ಪಿ ಅಲ್ಲಿಯೇ ಬಿದ್ದ. ಧರೆಗುರುಳಿದ ದಶರಥನ ಬಳಿ ಧಾವಿಸಿದರು ರಾಮ ಲಕ್ಷ್ಮಣರು. ಸಾವಿರ ಸ್ತ್ರೀಯರ ಆರ್ತನಾದ ಪ್ರತಿಧ್ವನಿಸಿತು ಅರಮನೆಯಲ್ಲಿ. ಸೀತೆಯೊಡಗೂಡಿ ರಾಮಲಕ್ಷ್ಮಣರು ದಶರಥನನ್ನು ಕರೆತಂದು ಪರ್ಯಂಕದಲ್ಲಿ ಕೂರಿಸಿದಾಗ ದಶರಥನ ಪರಿಸ್ಥಿತಿಗೆ ಕಣ್ಣೀರು ಹಾಕಿದ ರಾಮ. ಸೀತೆ ಲಕ್ಷ್ಮಣರೂ ಸಹ. ದಶರಥ ಹಾಗೂ ಕೌಸಲ್ಯೆ ಇಬ್ಬರಿಗೂ ಪ್ರೀತಿಯ ಸೊಸೆ ಸೀತೆ. ಮಗಳಂತೆಯೇ ಆಕೆ.

ಸ್ವಲ್ಪ ಸಮಯದ ಬಳಿಕ ಎಚ್ಚರವಾದಾಗ ಮತ್ತೆ ಶೋಕಸಾಗರದಲ್ಲಿ ಮುಳುಗಿದ ದಶರಥನಿಗೆ ಹೀಗೆಂದನಂತೆ ರಾಮ, ಮಹಾಪ್ರಭುವೆ ಹೋಗಿಬರುವೆ ನಾನು, ದಂಡಕಾರಣ್ಯಕ್ಕೆ ಹೊರಟೆ, ಲಕ್ಷ್ಮಣ ಮತ್ತು ಸೀತೆಯರ ಒಡಗೂಡಿ. ಅವರಿಗೆ ಬೇಡವೆಂದರೂ ಕೇಳಲಿಲ್ಲ ಹಾಗಾಗಿ ನಮ್ಮೆಲ್ಲರನ್ನೂ ಹರಸು. ದಶರಥ ರಾಮನ ನೋಡಿ ನುಡಿದನಂತೆ ಒಂದು ಮಾತು ನಡೆಸಿಕೊಡು ನನ್ನನ್ನು ನಿಗ್ರಹಿಸಿ ಸೆರೆಗೆತಳ್ಳಿ ನೀನೇ ಅಯೋಧ್ಯೆಗೆ ರಾಜನಾಗು. ರಾಮ ಮತ್ತೆ ಕೈಮುಗಿದು ಹೇಳಿದನಂತೆ ನಾನು ವನವಾಸಕ್ಕೆ ಹೋಗುತ್ತೇನೆ, ನಿನ್ನ ಮಾತು ಸುಳ್ಳಾಗಲು ನಾ ಬಿಡಲಾರೆ, ಕೇವಲ 9 ಮತ್ತು 5 ವರ್ಷ ವನದಲ್ಲಿ ವಿಹರಿಸಿ ಮರಳಿಬಿಡುವೆ ಎನ್ನುವಾಗ ಕೈಕೇಯಿ ಹಿಂದಿನಿಂದ ದಶರಥನನ್ನು ತಿವಿಯುತ್ತಿದ್ದಾಳೆ. ಅವನಿಗೆ ಹೋಗಿ ಬಾ ಎನ್ನಲೂ ಸ್ವರ ಬರುತ್ತಿಲ್ಲ.ಆರ್ದನಾಗಿ ಹೇಳಿದನಂತೆ ಶ್ರೇಯಸ್ಸಿಗಾಗಿ ಬೇಗ ಪುನರಾಗಮನವಾಗುವಂತೆ ಹೋಗಿ ಬಾ. ನಿನಗೇನೂ ತೊಂದರೆ ಬಾರದಿರಲಿ ಅಲ್ಲಿ. ಆದರೆ ಇದೊಂದು ರಾತ್ರಿ ಉಳಿದು ಹೊರಡು.ನಾನು ಹಾಗೂ ಕೌಸಲ್ಯೆ ಇಂದು ರಾತ್ರಿಯಿಡೀ ನಿನ್ನನೋಡುವ ಅವಕಾಶ ಕೊಡು, ಆಗಲಾದರೂ ಬದುಕಿಯೇನು. ಸತ್ಯದ ಮೇಲಾಣೆ ನೀನು ಹೋಗುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ವಂಚನೆಯಾಗಿದೆ ನನಗೆ. ನನ್ನ ಮನೆಯೊಳಗಿದ್ದು ಶತ್ರುವೇ ಪತ್ನಿಯಾಗಿದ್ದು ಮೋಸ ಮಾಡಿದಳು. ರಘುಕುಲದ ಚರಿತ್ರೆ ನಾಶ ಮಾಡಲೆಂದೇ ಬಂದವಳು. ನನಗಾದ ಮೋಸಕ್ಕೆ ನೀನು ಪರಿಹಾರ ಮಾಡುತ್ತಿರುವೆ. ಇವಳಿಂದಾಗಿ ನಿನ್ನನ್ನು ವನವಾಸಕ್ಕೆ ಕಳುಹಿಸಬೇಕಾಗಿ ಬಂದಿದೆ ಎಂದಾಗ ರಾಮನಿಗೆ ಬಂದದ್ದು ಒಂದೇ ವಿಷಯ, ಇದೊಂದು ರಾತ್ರಿ ಉಳಿದು ಹೋಗು.

ದೈನ್ಯದಿಂದ ಹೇಳಿದನಂತೆ ರಾಮ,ಸತ್ಯವಚನದ ಗುಣ ಸಿದ್ಧಿಸಬೇಕಾದರೆ ಇಂದೇ ಹೋಗಬೇಕು. ಇಂದು ರಾತ್ರಿಯಿಂದ ನಾಳೆ ಬೆಳಗ್ಗಿನವರೆಗೆ ಏನೇನು ಪ್ರೀತಿಯಿಂದ ಮಾಡಬೇಕೆಂದುಕೊಂಡಿದ್ದೆಯೋ ಅದೆಲ್ಲ ಸೇರಿಸಿ ಪ್ರೀತಿಯಿಂದ ಕೇಳುವೆ ವನಪರಿಕ್ರಮಣಕ್ಕೆ ಅಪ್ಪಣೆ ಕೊಡು. ನಾನು ತ್ಯಜಿಸಿದ ಈ ಜನಪೂರ್ಣ ಧನಪೂರ್ಣ ಅಯೋಧ್ಯೆಯನ್ನು ಭರತನಿಗೆ ನೀಡು. ಇದೇ ನನ್ನಿಷ್ಟ. ದುಃಖವನ್ನು ದೂರಮಾಡು. ನನ್ನ ಪುಣ್ಯದ ಮೇಲಾಣೆ ನನ್ನಂತರಂಗದ ಮಾತಿದು ಒಂದು ಕ್ಷಣವೂ ಇಲ್ಲಿರಲಾರೆ. ಕೈಕೇಯಿಗೆ ನಾನು ಮಾತು ಕೊಟ್ಟಿದ್ದೇನೆ ವನಕ್ಕೆ ಹೋಗುವೆನೆಂದು ಹಾಗಾಗಿ ಬೇಸರಿಸಬೇಡ. ತಂದೆಯೆಂದರೆ ದೇವರು. ಈ ವಾಕ್ಯವನ್ನು ದೇವರವಾಕ್ಯವೆಂದೆ ಭಾವಿಸುವೆ. ಮತ್ತು ಇವರೆಲ್ಲರನ್ನೂ ಸಂತೈಸುವ ಹೊಣೆ ನಿನ್ನ ಮೇಲಿದೆ. ನೀನೆ ಅತ್ತರೆ ಇವರಿಗೆ ಸಮಾಧಾನ ಹೇಳುವರಾರು? ಹಾಗಾಗಿ ಶೋಕಿಸದಿರು ಎಂದಾಗ ದೊರೆ ದುಃಖ ಶೋಕದಿಂದ ಕೂಡಿ ಮಗನನ್ನು ಅಪ್ಪಿ ಮೂರ್ಛೆ ತಪ್ಪಿದ. ಅದನ್ನು ಕಂಡ ಸುಮಂತ್ರನೂ ಮೂರ್ಛೆತಪ್ಪಿದ. ಹಾಹಾಕಾರ ಆವರಿಸಿತು.

ಮತ್ತೆ ಎಚ್ಚರವಾದಾಗ ಕ್ರೋಧ ಬಂತಂತೆ ಸುಮಂತ್ರನಿಗೆ , ಮುಖ ಕೆಂಪಾಯಿತು ಅಶುಭವಾದ ಸಂತಾಪಕ್ಕೆ ಒಳಗಾಗಿ ಕೈಕೇಯಿಗೆ ವಾಗ್ಬಾಣಗಳ ಮೂಲಕ ಆಕೆಯನ್ನು ಕತ್ತರಿಸುವಂತೆ ನುಡಿದನಂತೆ, ಪತಿಯನ್ನು ಬಿಟ್ಟೆ ಸೂರ್ಯನಂಥವನನ್ನು ಬಿಟ್ಟೆ ಪತಿಘಾತಿನಿ, ಕುಲಘಾತಿನಿ. ಇನ್ನು ನೀನು ಮಾಡಬಾರದ್ದು ಯಾವುದೂ ಇಲ್ಲ. ಮಹೇಂದ್ರನಂತೆ ಅಜೇಯನು, ಮಹಾಪರ್ವತದಂತೆ ಅಕಂಪನೂ ಮಹಾಸಮುದ್ರದಂತೆ ಅಕ್ಷೋಭನೂ ಆದಂತಹ ದೊರೆಯನ್ನು ನಿನ್ನ ಪಾಪಕೃತ್ಯದಿಂದ ನೋಯಿಸುತ್ತಿರುವೆ. ನಿನಗೆ ಅಶನ ವಸನ ಭವನ ಕೊಟ್ಟವನು ಕೇಳಿದ ವರಗಳ ಕೊಟ್ಟವನು. ಕೋಟಿ ಮಕ್ಕಳಿಗಿಂತ ಪತಿಯ ಇಚ್ಛೆ ದೊಡ್ಡದು ಸತಿಯಾದವಳಿಗೆ ಮಹತ್ವ ಅಲ್ಲಿ ಕೊಡಬೇಕು. ಇಕ್ಷ್ವಾಕುವಂಶಕ್ಕನುಸಾರವಾಗಿ ಹಿರಿಯ ಪುತ್ರ ದೊರೆಯಾಗುತ್ತಾನೆ. ಇಷ್ಟಕ್ಕೂ ಮೀರಿ ನಿನ್ನ ಮಗನೇ ದೊರೆಯಾಗುವುದಾದರೆ ಆಗಲಿ ನಾವೆಲ್ಲ ರಾಮನೊಡನೆ ಹೋಗುವೆವು. ನಾನು ಮಾತ್ರವೇನು ಈ ರಾಜ್ಯದ ಯಾವೊಬ್ಬ ಬ್ರಾಹ್ಮಣನೂ ಇರಲಾರ, ಯಜ್ಞಯಾಗಗಳು ನಡೆಯಲಾರವು, ಇದು ಅಮಂಗಲಭೂಮಿಯಾದೀತು. ಮರ್ಯಾದೆ ಮೀರಿದ ಕೆಲಸ ಮಾಡುತ್ತಿರುವೆ ನೀನು. ಇಷ್ಟೆಲ್ಲ ಮಾಡಿದರೂ ಭೂಮಿಯೇಕೆ ಬಾಯ್ಬಿಡಲಿಲ್ಲ, ಮಹಾಬ್ರಹ್ಮರ್ಷಿಗಳ ವಾಗ್ದಂಡಗಳು ನಿನ್ನನ್ನೇಕೆ ದಹಿಸಲಿಲ್ಲ ಎಂದು ಹೇಳಿ ಅವಳ ಕುಲದ ಉಲ್ಲೇಖ ಮಾಡುತ್ತಾನೆ. ಮಾವಿನ ಮರ ಕಡಿದು ಬೇವು ನೆಟ್ಟು, ಅದಕ್ಕೆ ಹಾಲು, ಸಕ್ಕರೆ, ಜೇನು ಹಾಕಿ ಬೆಳೆಸಿದರೂ ಅದು ಬದಲಾಗದು. ಏಕೆಂದರೆ ಅದರ ತಾಯಿಯೂ ಬೇವು. ನಿನ್ನ ತಾಯಿಯೂ ಇಂಥವಳೇ ಆಗಿರುವಾಗ ನೀನು ಹಾಗೆಯೇ ಇರಬೇಕಲ್ಲ. ಒಂದು ಗಾದೆ ಹೇಳಿದ. ಬೇವಿನ ಮರದಿಂದ ಜೇನು ಸುರಿಯಲು ಸಾಧ್ಯವಿಲ್ಲ. ನಿನ್ನ ತಾಯಿಯ ದುರ್ಬುದ್ಧಿಯನ್ನು ಬಿಚ್ಚಿಡುವೆ ನೆಂದು ಹೇಳಿದ.

ಕೈಕೇಯಿಯ ತಂದೆ ಅಶ್ವಪತಿಗೆ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳ ಭಾಷೆ ತಿಳಿಯುವ ವರವಿತ್ತು. ಒಂದು ದಿನ ಅಂತಃಪುರದಲ್ಲಿ ಅಶ್ವಪತಿ ಹಾಗೂ ಅವನ ಹೆಂಡತಿ, ಕೈಕೇಯಿಯ ತಾಯಿ ಇಬ್ಬರೇ ಇದ್ದಾಗ ಹಕ್ಕಿಯೊಂದು ಕೂಗಿತಂತೆ ಅದನ್ನು ಕೇಳಿ ಜೋರಾಗಿ ನಕ್ಕುಬಿಟ್ಟನಂತೆ. ರಾಣಿಗೆ ಕೋಪಬಂದು ದೊರೆಯೇ ನಕ್ಕ ಕಾರಣ ಹೇಳು ಎಂದಾಗ ರಾಣಿ ನಾನು ಕಾರಣ ಹೇಳಿದ್ದೇ ಹೌದಾದರೆ ಕೂಡಲೆ ನಾನು ಸಾಯುತ್ತೇನೆ ಎಂದನಂತೆ. ”ಏಕೆಂದರೆ ನನಗೆ ವರ ಕೊಟ್ಟ ಸಾಧು ನಿನಗೆ ಎಲ್ಲ ಪ್ರಾಣಿ ಪಕ್ಷಿಗಳ ಭಾಷೆ ತಿಳಿಯುತ್ತದೆ ಅದನ್ನು ಬೇರೆಯವರಿಗೆ ಹೇಳಿದರೆ ಕೂಡಲೇ ಸಾಯುವೆ ಎಂದಿದ್ದರು” ಸಾವು ಬರುತ್ತದೆ ಎಂದರೂ ನನ್ನ ಕುರಿತಾಗಿ ನಗಲು ಕಾರಣವೇನು ನನಗೆ ವಿಷಯ ತಿಳಿಯಲೇಬೇಕೆಂದು ಆಕೆ ಹಠಹಿಡಿದಳಂತೆ. ಸಂದಿಗ್ಧ ಸ್ಥಿತಿ ದೊರೆಗೆ. ಆತ ಹೇಳಿದ ಒಮ್ಮೆ ಆ ಗುರುವನ್ನು ಕೇಳಿ ಹೇಳುವೆನೆಂದು ಹೇಳಿ ಗುರುವಿನ ಬಳಿ ವಿಷಯ ಹೇಳಿದಾಗ ಅವರು ವಿಷಯ ಹೇಳುವುದಾದರೆ ನಿನಗೆ ಸಾವು ನಿಶ್ಚಿತ. ಪತಿಯ ಜೀವಕ್ಕಿಂತ ವಿಷಯ ತಿಳಿಯುವುದೇ ಹೆಚ್ಚಾದರೆ ಏನು ಬೇಕಾದರೂ ಮಾಡಿಕೊಳ್ಳಲಿ ಆಕೆಯ ಯೋಚನೆ ಬಿಡು ಎಂದರಂತೆ. ನೇರವಾಗಿ ಮನೆಗೆ ಹೋಗಿ ಹೊರಗೆ ಹಾಕಿದನಂತೆ ಅಶ್ವಪತಿ. ನಿನ್ನಮ್ಮನನ್ನು ಕಳಿಸಿದ ನಂತರ ಕುಬೇರನಂತೆ ವಿಹರಿಸಿದ ಅಶ್ವಪತಿ. ಹಾಗೆಯೇ ನೀನೂ ಕೂಡ.ದುರ್ಜನರ ಮಾತು ಕೇಳಿ ರಾಜನಿಂದ ಬೇಡದ ಕೆಲಸ ಮಾಡಿಸುತ್ತಿರುವೆಯಲ್ಲ ಪಾಪದರ್ಶಿನಿ ಗಾದೆ ಸತ್ಯವಾಯಿತು ನಿನ್ನ ತಾಯಿಯಂತೆಯೇ ಆದೆ. ಹೀಗೆ ಮಾಡದಿರು. ದೊರೆಯ ಇಚ್ಛೆ ನಡೆಸು. ಜನರಿಗೆ ಗತಿಯಾಗು. ಪಾಪಿಗಳ ಪ್ರಚೋದನೆಗೊಳಗಾಗಿ ದೇವತೆಗಳ ದೊರೆಯಂತಹ ನಿನ್ನ ಪತಿಯನ್ನು ಕೆಟ್ಟ ಕೆಲಸಕ್ಕೆ ಮಾತಿನಲ್ಲಿ ಕಟ್ಟಿಹಾಕದಿರು. ರಾಮ ಪಟ್ಟಾಭಿಷಿಕ್ತನಾಗಿ ರಾಜನಾಗಲಿ ಇಲ್ಲವಾದರೆ ನಿನಗೆ ಶಾಶ್ವತ ಅಪವಾದ ಬಂದೀತು, ಲೋಕ ನಿಂದಿಸೀತು, ದಾರಿಹೋಕರು ನಿನ್ನನ್ನು ನೋಡಿ ಅಸಹ್ಯಪಟ್ಟಾರು, ಕೋಸಲ ಮಾತ್ರವಲ್ಲ ವಿಶ್ವವ್ಯಾಪಿ ನಿನ್ನ ನಿಂದೆ ಪಸರಿಸೀತು. ಹಾಗಾಗಿ ರಾಮ ಕಾಡಿಗೆ ಹೋಗುವಂತೆ ಮಾಡದಿರು, ರಾಮನದ್ದೇ ರಾಜ್ಯವಿದು, ನ್ಯಾಯತಃ, ಧರ್ಮತಃ ಅವನಿಗೇ ಸಲ್ಲಬೇಕು, ಸಲ್ಲಲಿ. ನೀನು ನಿಶ್ಚಿಂತೆಯಿಂದಿರು. ರಾಮನನ್ನುಳಿದು ಇನ್ನಾರೂ ಅಯೋಧ್ಯೆಯನ್ನು ರಕ್ಷಿಸಲು ಸಮರ್ಥರಲ್ಲ, ಅವನಿಗಿಂತ ಬೇರೆಯಾರೂ ಪಾಲಿಸಲು ಸಾಧ್ಯವಿಲ್ಲ. ರಾಮ ಬಿಟ್ಟು ಹೋದರೆ ಜನರು ಸಹಕರಿಸುವುದಿಲ್ಲ, ಸೇನೆಯಾಗಲಿ, ಪ್ರಜೆಗಳಾಗಲಿ ಒಪ್ಪುವುದಿಲ್ಲ. ರಾಮನು ಯುವರಾಜನಾದಮೇಲೆ ದಶರಥ ವಾನಪ್ರಸ್ಥಕ್ಕೆ ಹೋಗಲಿ. ಇಕ್ಷ್ವಾಕು ವಂಶದ ಪೂರ್ವಜರ ನಡೆಯಿದು. ವಯಸ್ಸಾದ ನಂತರ ಮಕ್ಕಳಿಗೆ ಪಟ್ಟಕಟ್ಟಿ ತಾನು ವಾನಪ್ರಸ್ಥಕ್ಕೆ ಹೋಗುವುದು.
ಮುಕ್ತವಾಗಿ ನುಡಿದ ಸುಮಂತ.ಕೆಲವು ಮಾತುಗಳನ್ನು ಸಮಾಧಾನದಿಂದ ಹಾಗೂ ಕೆಲವೊಮ್ಮೆ ದಂಡಸದೃಶ ಮಾತುಗಳಿಂದ ರಾಜಸಭೆಯ ಮಧ್ಯೆ ಕೈಕೇಯಿಯನ್ನು ಕ್ಷೋಭೆಗೊಳಿಸಿದ ಸುಮಂತ್ರ. ಕೈಕೇಯಿ ಕೊಂಚವೂ ವಿಚಲಿತಳಾಗಲಿಲ್ಲ, ಬೇಸರವೂ ಇಲ್ಲ, ಮುಖವರ್ಣವೂ ಬದಲಾಗಲಿಲ್ಲ. ರಾಮ ಹೇಗೆ ವನವಾಸಕ್ಕೆ ಹೋಗುವೆನೆಂದು ದೃಢನಿಶ್ಚಯ ಮಾಡಿದ್ದಾನೋ ಹಾಗೆಯೇ ಇವಳೂ ರಾಮನನ್ನು ಕಳಿಸಲು ದೃಢನಿಶ್ಚಯ ಮಾಡಿದ್ದಾಳೆ.

ಒಳ್ಳೆಯದಕ್ಕೆ ಹಠ ಬೇಕು. ಕೆಟ್ಟದ್ದಕ್ಕೆ ಹಠ ಬಂದರೆ ಆಗುವ ಅನಾಹುತ ಅಪಾರ.

ಆಗ ದಶರಥ ಕಣ್ಣೀರು, ನಿಟ್ಟುಸಿರಿನೊಂದಿಗೆ ಹೀಗೆಂದ. ಸುಮಂತ್ರನೇ ರಾಮ ವನವಾಸಕ್ಕೆ ಹೋಗುವುದಾದರೆ ಹೋಗಲಿ ಅವನೊಡನೆ ಮುತ್ತು ರತ್ನಗಳೊಡನೆ ಕೂಡಿದ ಚತುರಂಗ ಸೈನ್ಯವೂ ಹೋಗಲಿ, ಇದು ನನ್ನ ಆಜ್ಞೆ. ತಯಾರಿ ಮಾಡು.
ಕಲಾವಿದರು ಹೊರಡಲಿ, ಅಯೋಧ್ಯೆಯ ಮಹಾಧನಿಕರಾದ ವೈಶ್ಯಶ್ರೇಷ್ಠರೆಲ್ಲ ಹೋಗಲಿ. ರಾಮನ ಸೇವಕರೆಲ್ಲ ಹೋಗಲಿ. ಶ್ರೇಷ್ಠವಾದ ಆಯುಧಗಳು, ಅಯೋಧ್ಯೆಯ ಪ್ರಜಾಪ್ರಮುಖರು, ಬೇಡರು ಹೋಗಲಿ. ಇಡಿಯ ಧನಕೋಶ ಧಾನ್ಯಕೋಶವೂ ರಾಮನ್ನು ಹಿಂಬಾಲಿಸಲಿ. ಹೀಗೆ ಕಾಡನ್ನು ವಿಹರಿಸುತ್ತಾ ರಾಮ ನಮ್ಮನ್ನು ಮರೆಯಲಿ. ಕಾಡಿನಲ್ಲಿ ವಿಹರಿಸುತ್ತ, ಪ್ರಕೃತಿಯನ್ನು ಈಕ್ಷಿಸುತ್ತಾ ಯಜ್ಞಗಳನ್ನು ಮಾಡಲಿ. ಭರತ ಅಯೋಧ್ಯೆಯನ್ನು ಪಾಲಿಸಲಿ. ದಶರಥ ಕಾಡಿನಲ್ಲಿಯೇ ನಾಡನ್ನು ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾನೆ. ಇಷ್ಟಾಗುವಾಗ ಕೈಕೇಯಿಗೆ ಮುಖ ಒಣಗಿತು, ಗಂಟಲು ಕಟ್ಟಿತು, ಭಯವಾಯಿತು.
ಏಕೆಂದರೆ ವರದೊಳಗೆ ಇದು ಬಂದಿಲ್ಲ, ಪ್ರತಿಜ್ಞೆಯ ಕಟ್ಟಿನೊಳಗಿಲ್ಲ.ಇಡೀ ಅಯೋಧ್ಯೆಯೆ ರಾಮನ ಜೊತೆಯಿದೆ. ಕೈಕೇಯಿಗೆ ಮುಂದೇನು ಎಂಬ ಚಿಂತೆಯಾಯಿತು.

ಕೈಕೇಯಿ ಹೇಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾಳೆ? ರಾಮನ ವನವಾಸದ ಹಾದಿ ಹೇಗೆ ತೆರೆದುಕೊಳ್ಳುತ್ತದೆ? ಎಂಬುದನ್ನು ನಾಳೆಯ ಪ್ರವಚನದಲ್ಲಿ ನೋಡೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments