ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಪ್ರೀತಿಗೊಂದು ವಿಶೇಷ ಗುಣವಿದೆ ಅದು ವಿಷಮವನ್ನು ಸಮವನ್ನಾಗಿಸುತ್ತದೆ. ವಯಸ್ಸು , ಅಂತಸ್ತು , ಸಂಪತ್ತು ಬೇರೆಯಾಗಿರಬಹುದು ಆದರೆ ಎರಡು ಚೇತನಗಳ ನಡುವೆ ಪ್ರೀತಿ ಅಂಕುರಿಸಬೇಕೆಂದಾದರೆ ಎಲ್ಲಾ ಸಮಗೊಂಡು ಇಬ್ಬರೂ ಒಂದಾಗಬೇಕು.

ಉದಾಹರಣೆಗೆ 80 ವರ್ಷದ ಅಜ್ಜ ಮತ್ತು 3 ವರ್ಷದ ಮೊಮ್ಮಗು ಇಬ್ಬರು ಸೇರಿ ಆಟವಾಡುತ್ತಾರೆ. ಹೇಗದು? ಏನದು? ಅದು ಪ್ರೀತಿ. ಮನುಷ್ಯನ ಅಂತಸ್ತು , ಸಂಪತ್ತು, ಲಿಂಗ , ಜಾತಿ ಬೇರೇಬೇರೆಯಾದಾಗ ಅವನು ಬೇರೆ ಇರುತ್ತಾನೆ ಹೊರತು ಒಂದಾಗುವುದಿಲ್ಲ. ಒಂದೇ ರೇಖೆಗೆ ಇಬ್ಬರು ಬರುವುದಿಲ್ಲ ಏಕೆಂದರೆ ಇಬ್ಬರ ನೆಲೆ ಬೇರೆಯಾಗಿರುತ್ತದೆ. ಆದರೆ ಪ್ರೀತಿ ವಿಷಮಗಳನ್ನು ಸಮಗೊಳಿಸುತ್ತದೆ. ಪ್ರೀತಿ ಎಲ್ಲಿ ಅಂಕುರಿಸಿದರೂ ಅದು ಮಾಡುವ ಕೆಲಸ ಇದು. ಅದನ್ನು ನಾವು ಈ ಪ್ರಕರಣದಲ್ಲಿ ಕಾಣುತ್ತೇವೆ.

ಒಬ್ಬ ಗೆಳೆಯ ರಾಮನನ್ನು ಬಂದು ಭೇಟಿಯಾದ. ಯಾರದು? ಅವನು ಕ್ಷತ್ರಿಯನಲ್ಲ , ಚಕ್ರವರ್ತಿಯಲ್ಲ , ರಾಜಾಧಿರಾಜನಲ್ಲ , ರಾಮನ ಕುಲಕ್ಕೂ ಆತನ ಕುಲಕ್ಕೂ , ವಿದ್ಯೆಗೂ ಹಾಗೂ ವಯಸ್ಸಿನಲ್ಲಿಯೂ ತುಂಬಾ ವ್ಯತ್ಯಾಸವಿದೆ , ಜಾತಿ ಸಂಪೂರ್ಣ ಬೇರೆ. ವಯಸ್ಸಿನಲ್ಲಿ ಆತ ತುಂಬಾ ದೊಡ್ಡವನು ರಾಮ ಇನ್ನೂ ಎಳೆ ಚಿಗುರು. ಆದರೆ ಅವರಿಬ್ಬರ ಮಧ್ಯೆ ಅದ್ಭುತವಾದ ಪ್ರೀತಿಯಿತ್ತು, ಎಷ್ಟರಮಟ್ಟಿಗೆ ಎಂದರೆ ಅವನೊಬ್ಬನನ್ನು ಮಾತ್ರ ರಾಮ “ಆತ್ಮಸಮಃ ಸಖಃ” ಎಂದು ಕರೆದಿದ್ದಾನೆ. ಅಂದರೆ ನಮ್ಮ ಆತ್ಮ ನಮಗೆ ಎಷ್ಟು ಹತ್ತಿರವೋ ಅಷ್ಟೇ ಹತ್ತಿರವಿರುವಂತಹ ಸ್ನೇಹಿತ. ಅವನೇ ಗುಹ. ಗುಹ ಕೇವಲ ಅಂಬಿಗ ಮಾತ್ರ ಅಲ್ಲ , ಅವನ ರಾಜ್ಯ ಜಲ ಹಾಗೂ ವನದಲ್ಲಿ ವಿಸ್ತರಿಸಿತ್ತು. ಅವನು ನಿಷಾದಜಾತಿಗೆ ಸೇರಿದವನು. ನಿಷಾದಾಧಿಪತಿ. ರಾಮನ ಪ್ರೀತಿಗೆ ಅಂತಸ್ತು, ಸಂಪತ್ತು , ಇದ್ಯಾವುದೂ ಅಡ್ಡಿ ಅಲ್ಲ. ಪ್ರೀತಿ ಕೊಡುವಾಗ ಪ್ರೀತಿಯನ್ನೇ ಕೇಳುತ್ತಾನೆ ರಾಮ ಅದಕ್ಕೆ ಭಕ್ತಿ ಎಂದುಹೆಸರು. ದೇವರಲ್ಲಿ , ಗುರುವಿನಲ್ಲಿ ಪ್ರೀತಿ ಇಟ್ಟಾಗ ಅದಕ್ಕೆ ಭಕ್ತಿ ಎಂಬ ಅಭಿದಾನಬರುತ್ತದೆ.

ತನ್ನ ರಾಜ್ಯಕ್ಕೆ ರಾಮಬಂದಿದ್ದಾನೆಂದು ಗುಹನಿಗೆ ಗೊತ್ತಾಗಿದೆ. ಅಮಾತ್ಯರೊಂದಿಗೆ , ಕುಲಬಾಂಧವರೊಂದಿಗೆ ರಾಮನನ್ನು ಕಾಣಲು ಬಂದ. ದೂರದಲ್ಲಿ ಗುಹನನ್ನು ಕಂಡು ರಾಮ ಸಂತೋಷಪಡುತ್ತಾನೆ. ಗುಹನು ಆರ್ತನಾಗಿದ್ದ , ಹೋಗಿ ರಾಮನನ್ನು ತಬ್ಬಿಕೊಂಡ. ಜೀವಹೋಗಿ ದೇವನಲ್ಲಿ ಒಂದಾಯಿತು. ಗುಹ ಹೇಳಿದ್ದೇನೆಂದರೆ ಈ ನನ್ನ ರಾಜ್ಯವೇ ಅಯೋಧ್ಯೆ . ನಿನಗಾಗಿ ಏನೂ ಮಾಡಲು ಸಿದ್ಧ , ಇಂತಹ ಅತಿಥಿ ಎಲ್ಲಿ ಸಿಗುತ್ತಾನೆ? ಕೂಡಲೇ ರಾಮನಿಗೆ ಆತಿಥ್ಯವಾಗಬೇಕೆಂದು ಬಗೆ ಬಗೆಯಾದ ರಾಜಯೋಗ್ಯ , ರಾಮಯೋಗ್ಯವಾದ ಆಹಾರವನ್ನು ತಂದ. ರಾಮನನ್ನು ಸ್ವಾಗತಿಸಿದ. ಮಹಾಬಾಹುವೇ ಸ್ವಾಗತ ನಿನ್ನದೀನಾಡು , ನಾವೆಲ್ಲಾ ನಿನ್ನ ಸೇವಕರು , ನೀನು ದೊರೆ. ಈ ನಮ್ಮ ರಾಜ್ಯವನ್ನಾಳು. ಗುಹನ ಭಾವವೇನೆಂದರೆ ನನ್ನಲ್ಲಿ ಏನುಂಟು ಅದು ರಾಮನಿಗೆ. ಇದೇ ನಿಜವಾದ ಭಕ್ತಿ , ಭಾವ. ಬಗೆ ಬಗೆಯ ಭೋಜ್ಯ , ಭಕ್ಷ್ಯ , ಪೇಯ , ಲೇಹ್ಯಾ , ಚೋಷ್ಯಾ , ಚರ್ವ್ಯಗಳನ್ನು ತಂದು ರಾಮನಿಗೆ ಒಪ್ಪಿಸಿದ. ಉತ್ತಮೋತ್ತಮವಾದ ಮಲಗುವ ಸಾಮಗ್ರಿಗಳು ಮತ್ತು ಕುದುರೆಗಳಿಗೆ ಆಹಾರವನ್ನು ತಂದಿದ್ದ.

ರಾಮನು ಗುಹನಿಗೆ ಹೇಳಿದ ನಿನ್ನ ಈ ಆದರ , ಸತ್ಕಾರ , ಪೂಜೆ ಸಂದಿದೆ , ತುಂಬಾ ಸಂತೋಷವಾಗಿದೆ. ನಿನ್ನ ಆಗಮನ , ಸ್ನೇಹಸಂದರ್ಶನ , ಪ್ರೀತಿತೋರಿದ್ದು ಇದರಲ್ಲಿ ತೃಪ್ತನಾದೆ ನಾನು ಎಂದು ಗುಹನನ್ನು ಗಾಢವಾಗಿ ತಬ್ಬಿಕೊಂಡ ರಾಮ. ದೇವರು ದೊಡ್ಡವನು , ಯಾವರೀತಿಯ ಬಾಧೆಯೂ ಇಲ್ಲದಂತಹ ನಿನ್ನನ್ನು ನಾನು ಕಾಣುತ್ತಿದ್ದೇನೆ. ನಿನ್ನ ರಾಷ್ಟ್ರದಲ್ಲಿ ಎಲ್ಲವೂ ಕುಶಲವೇ? ನಿನ್ನ ಮಿತ್ರರೆಲ್ಲರೂ ಕ್ಷೇಮವೇ? ನೀನು ತಂದುಕೊಟ್ಟೆಯಲ್ಲಾ ಅವೆಲ್ಲವನ್ನೂ ನಿನ್ನೆಯೇ ಬಿಟ್ಟಾಗಿದೆ ಆದರೆ ಭಾವದಿಂದ ಸ್ವೀಕರಿಸಿದ್ದೇನೆ. ಈಗ ನಾರುಬಟ್ಟೆ ಮತ್ತು ಚರ್ಮ ಇವೇ ನನಗೆ ಆಭರಣ , ನಾನು ಈಗ ದೊರೆಯಲ್ಲ. ವನವಾಸಿ , ತಾಪಸಿ ನಾನು ಇದು ನನ್ನ ಈಗಿನ ಸ್ಥಿತಿ. ಏನೂ ಬೇಡ ಅಂತಲ್ಲ ಕುದುರೆಗಳಿಗೆ ತಿನ್ನಿಸು. ಅವುಗಳು ತೃಪ್ತಿಯಿಂದ ಇರಬೇಕು ಆಗ ನನಗೆ ತೃಪ್ತಿ. ಎತ್ತರವಾದವರು ಹತ್ತಿರವಾಗಿರಬೇಕು. ಎಷ್ಟು ಎತ್ತರವೋ ಅಷ್ಟೇ ಹತ್ತಿರ. ಇದು ರಾಮ. ನನ್ನ ತಂದೆ ದಶರಥನ ಪ್ರೀತಿಯ ಕುದುರೆಗಳಿವು ಅವುಗಳಿಗೆ ಸಂತೃಪ್ತಿಯಾದರೆ ನನಗೆ ಪರಮಾತಿಥ್ಯವಾದಂತೆ. ಆಗ ಲಘುಬಗೆಯಲ್ಲಿ ಗುಹ ಕುದುರೆಗಳನ್ನು ಸಂತೃಪ್ತಿಗೊಳಿಸುವಂತೆ ಸೇವಕರಿಗೆ ಆಜ್ಞೆ ಮಾಡಿದ. ಬಳಿಕ ರಾಮ ನಾರುಮಡಿಯನ್ನು ಹೊದ್ದು ಸಂಧ್ಯಾವಂದನೆಯನ್ನು ಮಾಡಿದ, ಲಕ್ಷ್ಮಣ ತಂದುಕೊಟ್ಟ ನೀರನ್ನು ಸ್ವೀಕರಿಸಿ ನೆಲದಮೇಲೆ ಮಲಗಿದ. ಮಲಗಿದ ರಾಮನ ಪಾದಗಳನ್ನು ತೊಳೆದು ಲಕ್ಷ್ಮಣ ವೃಕ್ಷಮೂಲಕ್ಕೆ ಬಂದ. ಅಲ್ಲಿಗೆ ಗುಹ ಹಾಗೂ ಸುಮಂತ್ರನೂ ಬಂದರು . ಒಂದು ಕ್ಷಣವೂ ನಿದ್ದೆಮಾಡದೆ ರಾಮನ ರಕ್ಷಣೆಗೆ ಸಿದ್ಧನಾಗಿದ್ದಾನೆ ಗುಹ. ಲಕ್ಷ್ಮಣನಿಗೆ ಗುಹ ಹೇಳುತ್ತಾನೆ, ನಿನಗಾಗಿ ಹಾಸಿಗೆ ಮಾಡಿದ್ದೇನೆ ಮಲಗು ಎಂದು ಒತ್ತಾಯಿಸಿದ ಮತ್ತು ಒಂದು ಮಾತು ಹೇಳಿದ ‘ನಾವು ಕ್ಲೇಶಕ್ಕೆ ಯೋಗ್ಯರು ನೀವು ಸುಖಕ್ಕೆ ಯೋಗ್ಯರು’ ಎಂದ. ರಾಮನನ್ನು ಕಾಯುವುದು ನಮ್ಮ ಕೆಲಸ ನೀನು ವಿಶ್ರಮಿಸು, ಸತ್ಯಕ್ಕೆ ಆಣೆಮಾಡಿ ಹೇಳುತ್ತೇನೆ ರಾಮನಿಗಿಂತ ಪ್ರಿಯರು ಈ ಭೂಮಂಡಲದಲ್ಲಿ ಬೇರೊಬ್ಬರಿಲ್ಲ. ಈ ಕಾಡಿನ ಇಂಚು ಇಂಚನ್ನೂ ನಾವು ಬಲ್ಲವರು, ಚತುರಂಗ ಬಲವನ್ನು ಸಹ ಎದುರಿಸಬಲ್ಲೆವು.

ಲಕ್ಷ್ಮಣ ಹೇಳುತ್ತಾನೆ ನಾನು ರಾಮನ ರಕ್ಷಣೆಗಾಗಿ ಎಚ್ಚರ ಇರುವುದಲ್ಲ, ನನಗೇನು ಭಯವಿಲ್ಲ ಏಕೆಂದರೆ ನೀನು ಇದ್ದೀಯೆ . ಆದರೆ ನಾನು ಮಲಗಿದರೂ ಕೂಡ ನಿದ್ದೆಬರಲು ಹೀಗೆ ಸಾಧ್ಯ? ಯಾವ ರಾಮನನ್ನು ದೇವಾಸುರರು ಜೊತೆಗೂಡಿ ಎದುರಿಸಲಾರರೊ ಅಂತಹ ನನ್ನ ಅಣ್ಣ ರಾಮ ಸೀತೆಯೊಡಗೂಡಿ ನೆಲದಮೇಲೆ ಮಲಗಿರುವಾಗ ನನಗೆ ನಿದ್ದೆ ಬರುವುದಾದರೂ ಹೇಗೆ? ನನ್ನ ತಂದೆಗೆ ರಾಮ ಸುಲಭವಾಗಿ ಜನಿಸಿದವನಲ್ಲ. ಮಂತ್ರ , ವ್ರತ , ಯಜ್ಞಯಾಗಾದಿಗಳ ನಂತರ ಜನಿಸಿದವನು. ರಾಮ ಹೊರಟನಂತರ ನನ್ನ ಅಪ್ಪನಿಗೆ ಹೆಚ್ಚು ಕಾಲವಿಲ್ಲ. ಮೇಧಿನಿಯು ವಿಧವೆಯಾಗುತ್ತಾಳೆ. ಅಯೋಧ್ಯೆಯ ಚಕ್ರವರ್ತಿಗೆ ಸಾವುಕಾದಿದೆ. ಆ ಮಾತೆಯರು ಎಷ್ಟು ಅತ್ತರೂ ದುಃಖಭಾರ ಕಡಿಮೆಯಾಗಲಿಲ್ಲ ಕೊನೆಗೆ ಸ್ವರವಿಲ್ಲದೇ ಸುಮ್ಮನಾಗಿರಬಹುದು ಹೊರತು ಸಮಾಧಾನವಾಗಿ ಸುಮ್ಮನಾಗಿಲ್ಲ. ಕೌಸಲ್ಯೇ , ದಶರಥ , ನನ್ನ ಅಮ್ಮ ಒಂದು ರಾತ್ರಿ ಬದುಕಿದರೆ ಹೆಚ್ಚು. ನನ್ನ ಅಮ್ಮ ಶತ್ರುಘ್ನನ ಮುಖನೋಡಿ ಬದುಕಿಯಾಳು ಆದರೆ ವೀರಮಾತೆ ಕೌಸಲ್ಯೆ ಬದುಕುವುದಿಲ್ಲ. ದೊರೆಯ ಮಹದಾಪತ್ತನ್ನು ಕಂಡು ಅಯೋಧ್ಯೆಗೆ ವಿಪತ್ತು ಬಂದೀತು. ಆಸೆಪಟ್ಟ ಕಾರ್ಯ , ರಾಮನನ್ನು ದೊರೆಯಾಗಿಸುವ ಕಾಲ ಕಳೆದುಹೋಗಿದೆ. ತನ್ನಾಸೆ ನೆರವೇರದೆ ನಮ್ಮ ಅಪ್ಪ ಸಾವನ್ನಪ್ಪುತ್ತಾನೆ. ಆ ಸಮಯದಲ್ಲಿ ನಮ್ಮ ತಂದೆಯ ಅಪರಕಾರ್ಯಗಳನ್ನು ಯಾರು ಮಾಡುತ್ತಾರೋ ಅವರು ಭಾಗ್ಯವಂತರು. ಮೊದಲ ಅಯೋಧ್ಯೆಯನ್ನು ಅಲ್ಲಿಯ ವೈಭವ , ರಾಜಭವನ , ರಸ್ತೆ , ಸೈನ್ಯ, ಜನ, ಆನೆ , ಕುದುರೆ, ಸಂಗೀತ ,ನೃತ್ಯ ಎಲ್ಲವನ್ನು ನೆನಪಿಸಿಕೊಳ್ಳುತ್ತಾನೆ. ನಮಗೆ ಅದೃಷ್ಟವಿದ್ದು ನಾವು ವನವಾಸ ಪೂರೈಸಿ ಮತ್ತೆ ನಮ್ಮ ತಂದೆಯನ್ನು , ಅಯೋಧ್ಯೆಯನ್ನು ಸೇರುವುದಾದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳುವಾಗಲೇ , ಗೋಳಾಡುವಾಗಲೇ ಬೆಳಗಾಯಿತು. ಈ ಮಾತನ್ನು ಕೇಳುತ್ತಾ ಮೂವರೂ ಕಣ್ಣೀರಿಟ್ಟರು.

ರಾಮ ಲಕ್ಷ್ಮಣನಿಗೆ ಹೇಳಿದ ಭಗವತೀರಾತ್ರಿ ಅದು ಕಳೆದಾಯಿತು. ಕೋಗಿಲೆ ಮಧುರವಾಗಿ ಕೂಜನಮಾಡುತ್ತಿದೆ , ನವಿಲುಗಳ ನಾದ ಕಾಡಿನಲ್ಲಿ ಕೇಳಿಬರುತ್ತಿದೆ ನೋಡು , ಇದು ನಮಗೆ ಕರ್ತವ್ಯದಕಾಲ. ಸಾಗರತೀರದ ಗಂಗೆಯನ್ನು ದಾಟೋಣ ಎಂದಾಗ ಸೀತೆ, ಲಕ್ಷ್ಮಣ ಅದಕ್ಕೆ ಒಪ್ಪಿದರು. ಗುಹನಿಗೆ ಸೂಚನೆ ನೀಡಿದ ಕೊಂಚಹೊತ್ತಿನಲ್ಲಿಯೇ ಗುಹ ಎಲ್ಲರನ್ನೂ ಕರೆದು ಅಪ್ಪಣೆ ಮಾಡಿದ. ಸುಖವಾಗಿ ನದಿಯನ್ನು ದಾಟಬೇಕು ಅಂತಹ ನಾವೆಯನ್ನು ಸಿದ್ದಪಡಿಸಿ ಎಂದ. ಗುಹನ ಮಹಾಅಮಾತ್ಯಗಣವು ಉತ್ತಮವಾದ ನಾವೆಯನ್ನು ಸಿದ್ಧಪಡಿಸಿತು. ಆಗ ಗುಹ ರಾಮನ ಬಳಿಬಂದು ಕೈಮುಗಿದು ಹೇಳಿದ ನಾವೆ ಸಿದ್ಧವಾಗಿದೆ , ನನಗೆ ಇನ್ನೇನು ಅಪ್ಪಣೆ? ರಾಮ ಹೇಳಿದ ಇಷ್ಟೇ ಬೇಕಾಗಿದ್ದು ಎಂದ. ತಮ್ಮ ಆಯುಧಗಳನ್ನು ಕಟ್ಟಿ , ಸೀತೆಯೊಡನೆ ನಾವೆಯನ್ನೇರಲು ಸಿದ್ಧರಾದರು. ಆಗ ಸುಮಂತ್ರ ಕೇಳುತ್ತಾನೆ ನನಗೇನು ಅಪ್ಪಣೆ? ರಾಮ ಪ್ರೀತಿಯಿಂದ ಹೇಳಿದ ನೀನು ಶೀಘ್ರವಾಗಿ ಅಯೋಧ್ಯೆಗೆ ಮರಳು. ರಾಜನನ್ನು ನೋಡಿಕೊ ಹಿಂದಿರುಗು ನೀನು. ರಥದಸೇವೆ ಮುಗಿಯಿತು ಇನ್ನು ಕಾಲ್ನಡಿಗೆಯಲ್ಲೇ ಸಾಗುತ್ತೇವೆ ಎಂದಾಗ ಸಾರಥಿಗೆ ಸಂಕಟವಾಗಿತು. ಆಗ ಸುಮಂತ್ರನು ರಾಮನಿಗೆ ಹೇಳಿದ್ದೇನೆಂದರೆ ನೀನು ಧನ್ಯ ಆದರೆ ನಾವು ಸತ್ತೆವು. ನೀನು ನಮ್ಮನ್ನು ಬಿಟ್ಟರೆ ನಾವು ಕೈಕೇಯೀಯ ವಶವಾಗುತ್ತೇವೆ ಎಂದು ಬಹುಕಾಲ ಅತ್ತನಂತೆ. ನಂತರ ಮುಖತೊಳೆದು ಶುಚಿಯಾದ ಸುಮಂತ್ರನಿಗೆ ರಾಮ ಹೇಳಿದ ಇಕ್ಷ್ವಾಕುಗಳಿಗೆ ನಿನ್ನಂತಹ ಮಿತ್ರರಿಲ್ಲ. ಈ ಕುಲಕ್ಕೆ ನೀನು ಪರಮಬಂಧು ಹಾಗಾಗಿ ದಶರಥನನ್ನು ಉಳಿಸುವ ಭಾರ ನಿನಗಿದೆ. ನನಗೆ ತೊಂದರೆ ಇಲ್ಲ , ಆದರೆ ದೊರೆಗೆ ನಿನ್ನ ಅಗತ್ಯವಿದೆ. ದೊರೆ ಏನುಕೇಳಿದರೂ ನೀನು ಮಾಡಿಬಿಡು , ಬೇಸರಪಡಬೇಡ. ಮತ್ತೆ ನನ್ನ ಪರವಾಗಿ ನೀನು ಸಂದೇಶವನ್ನು ತಲುಪಿಸು. ನಾನು , ಲಕ್ಷ್ಮಣ , ಮೈಥಿಲಿ ಸುಖವಾಗಿದ್ದೇವೆ , ಯಾವ ದುಃಖವೂ ಇಲ್ಲ , ಹದಿನಾಲ್ಕು ವರ್ಷ ಬೇಗ ಮುಗಿದುಹೋಗುತ್ತದೆ ಆಗ ನಾವು ಬಂದು ನಿನ್ನನ್ನು ಕಾಣುತ್ತೇವೆ ಏನೂ ಚಿಂತೆ ಮಾಡಬೇಡ ಎಂಬ ಸಂದೇಶವನ್ನು ತಂದೆಗೆ ತಿಳಿಸು. ನಾನು ನನ್ನ ಎಲ್ಲಾ ತಾಯಂದಿರನ್ನು ಕೇಳಿದ್ದೇನೆ ಎಂದು ತಿಳಿಸು ಹಾಗೆಯೇ ಕೈಕೇಯೀಯನ್ನು ಬಿಡಬೇಡ ಆಕೆಗೂ ತಿಳಿಸು. ಹಾಗೆ ಕೌಸಲ್ಯೆಗೆ ನನ್ನ ಪಾದನಮಸ್ಕಾರವನ್ನು ತಿಳಿಸು , ನಾನು ಆರೋಗ್ಯವಾಗಿದ್ದೇನೆಂದು ಹೇಳು. ಹಾಗೆ ಭರತನನ್ನು ಬಹುಬೇಗ ಕರೆಸಿ ಪಟ್ಟದ ಯುವರಾಜನಾಗಿ ಕುಳ್ಳಿರಿಸಬೇಕು. ಭರತನಿಗೆ ತಂದೆಯನ್ನು , ಎಲ್ಲಾ ತಾಯಂದಿರನ್ನೂ ಚೆನ್ನಾಗಿ ನೋಡಿಕೊಳ್ಳಬೇಕೆಂಬುದಾಗಿ ಹೇಳು. ಹೇಗೆಲ್ಲಾ ಹೇಳಿ ಸುಮಂತ್ರನಿಗೆ ಹೋಗಿ ಬಾ ಎಂದಾಗ ಆತ ಹೇಳಿದ ನಿನ್ನನ್ನು ಬಿಟ್ಟು ನಾನು ಹೇಗೆ ಮರಳಲಿ? ರಾಮನಿಲ್ಲದ ರಥ ಅಯೋಧ್ಯೆಗೆ ಮರಳಿದಾಗ ನಗರವೇ ಸೀಳಿಹೋಗಬಹುದು. ಇಡೀ ನಗರವೇ ದುಃಖದಲ್ಲಿದ್ದಾಗ ಶೂನ್ಯರಥದಲ್ಲಿ ನಾನು ಹೋದರೆ ದುಃಖ ನೂರುಪಟ್ಟು ಹೆಚ್ಚಾದೀತು. ಕೌಸಲ್ಯೆಗೆ ಏನು ಹೇಳಲಿ ಈ ಬಾಯಿಂದ? ಈ ಕುದುರೆಗಳು ನಿನ್ನನ್ನು ಬಿಟ್ಟು ಮರಳಲಾರವು. ಹಾಗಾಗಿ ಅಯೋಧ್ಯೆಗೆ ಮರಳುವುದು ಅಸಂಭವ. ನನಗೂ ಅಪ್ಪಣೆಕೊಡು ನಾನು ನಿನ್ನೊಡನೆ ಬರುತ್ತೇನೆ. ಇಷ್ಟಾದರೂ ನನ್ನನ್ನು ಬಿಟ್ಟು ಹೋಗುವುದಾದರೆ ರಥದೊಡನೆ ಅಗ್ನಿಪ್ರವೇಶ ಮಾಡುತ್ತೇನೆ. ಹಾಗಾಗಿ ಅಪ್ಪಣೆಕೊಡು ಕಾಡಿಗೆ ನಿನ್ನೊಡನೆ ನಾನೂ ಬರುತ್ತೇನೆ. ಒಂದು ಆಸೆಯೇನೆಂದರೆ ಹದಿನಾಲ್ಕು ವರ್ಷದ ಬಳಿಕ ನಿನ್ನೊಡನೆ ಅಯೋಧ್ಯೆಗೆ ಮರಳಬೇಕು. ನಿನ್ನ ಭಕ್ತಿಯ ನೆಲೆಯಲ್ಲಿ ನಿಂತಿದ್ದೇನೆ , ನನ್ನನ್ನು ಬಿಡಬೇಡ ಎಂದು ಬೇಡಿದಾಗ ಮತ್ತೆ ಸುಮಂತ್ರನ ಮನವೊಲಿಸಿದ. ನೀನು ಮರಳಿಹೋದರೆ ಕೈಕೇಯಿಗೆ ರಾಮ ಕಾಡಿಗೆ ಹೋದನೆಂದು ವಿಶ್ವಾಸ ಬರಬಹುದು , ರಾಜನಿಗೆ ನೆಮ್ಮದಿಯಾಗಬಹುದು ಎಂದು ಸಮಾಧಾನಪಡಿಸಿ ಅಯೋಧ್ಯೆಗೆ ಹೋಗುವಂತೆ ಮಾಡುತ್ತಾನೆ.

ಗುಹನಿಗೆ ಹೇಳಿದ ವನವಾಸ ಕಾರ್ಯಕ್ಕೆ ಒಂದು ಕೆಲಸ ಬಾಕಿ ಇದೆ. ನಾನು ಜಟಾಧಾರಣೆ ಮಾಡಬೇಕು ಆಲದ ಹಾಲನ್ನು ತಾರೆಂದ. ರಾಮಲಕ್ಷ್ಮಣರಿಬ್ಬರೂ ಜಟಾಧಾರಣೆಯನ್ನು ಮಾಡಿದರು. ಆಗ ಇಬ್ಬರೂ ಋಷಿಗಳಂತೆ ಕಂಡರು. ಗುಹನಿಗೆ ಹಿತವಾದ ಮಾತನ್ನು , ಜಾಗ್ರತೆ ಎಂದು ಹೇಳಿ ಅಪ್ಪಣೆಕೊಟ್ಟು ತೆರಳಿದ. ನಾವೆಯನ್ನು ಏರಲು ಸೀತೆಗೆ ಸಹಾಯಮಾಡು ಎಂದು ಲಕ್ಷ್ಮಣನಿಗೆ ಹೇಳಿದ. ಸೀತೆಯನ್ನು ಮೊದಲು ಏರಿಸಿ ನಂತರ ಲಕ್ಷ್ಮಣ ನಾವೆಯನ್ನು ಏರಿದ. ಬಳಿಕ ಗುಹ ತನ್ನ ಜ್ಞಾತಿಗಳಿಗೆ ಹೊರಡುವುದಾಗಿ ಅಪ್ಪಣೆ ನೀಡುತ್ತಾನೆ. ರಾಮ ಜಪ , ಆಚಮ್ಯ ಮಾಡಿ , ನದಿಗೆ ನಮಸ್ಕಾರ ಮಾಡಿ ನಾವೆಯನ್ನೇರಿ ನಾವಿಕರಿಗೆ ಹೊರಡುವಂತೆ ಅಪ್ಪಣೆನೀಡಿದ. ವೇಗವಾಗಿ ನಾವೆ ಪ್ರಯಾಣ ಮಾಡುತ್ತದೆ.

ನಾವೆ ನದಿಯ ಮಧ್ಯಭಾಗಕ್ಕೆ ಬಂದಾಗ ಸೀತೆ ಪ್ರಾರ್ಥನೆ ಮಾಡುತ್ತಾಳೆ. ದಶರಥ ಸುಕುಮಾರ ರಾಮ ನಿನ್ನ ರಕ್ಷೆಯಲ್ಲಿ ವನವಾಸ ಪೂರೈಸಬೇಕು , ನಮ್ಮೆಲ್ಲರನ್ನೂ ರಕ್ಷಿಸು. ವನವಾಸ ಪೂರೈಸಿ ಮರಳಿ ಬಂದು ರಾಮ ಅಯೋಧ್ಯೆಯ ರಾಜನಾದರೆ ನಿನ್ನ ಸೇವೆಯನ್ನು ಮಾಡುತ್ತೇವೆ , ಯಜ್ಞಯಾಗಗಳನ್ನು ಮಾಡುತ್ತೇವೆ, ಅನ್ನದಾನ , ಸಹಸ್ರ ಸಹಸ್ರ ಗೋವುಗಳನ್ನು ದಾನಮಾಡುತ್ತೇವೆ , ಕೃಪೆತೋರು ಎಂದು ಹಲವು ಹರಕೆಗಳನ್ನು ಮಾಡಿಕೊಂಡಳು. ಗಂಗೆಯೇ ನಿನ್ನಷ್ಟೇ ಪವಿತ್ರ ರಾಮ, ಅಂಥವನಿಗೆ ಮರಳಿ ರಾಜ್ಯಾಪ್ರಾಪ್ತಿಯಾಗುವಂತೆ ಮಾಡು ಎಂದು ಕೇಳುವಾಗಲೇ ನದಿಯ ತೀರವನ್ನು ತಲುಪಿದರು. ಅಲ್ಲಿ ರಾಮ, ಲಕ್ಷ್ಮಣ, ಸೀತೆ ಇಳಿದರು. ರಾಮ ನಾವಿಕರಿಗೆ ಶುಲ್ಕ ನೀಡಿದಾಗ ಅವರು ಬೇಡವೆಂದರು. ನಾವು ನಿಮ್ಮನ್ನು ನದಿಯ ತೀರಕ್ಕೆ ತಲುಪಿಸಿದ್ದೇವೆ ಆದರೆ ನೀನು ನಮ್ಮನ್ನು ಭವಸಾಗರದಿಂದ ದಾಟಿಸುತ್ತಿಯೇ ಎಂದರು.

ಮುಂದೇನಾಯಿತು ಎಂದು ನಾಳೆಯ ಪ್ರವಚನದಲ್ಲಿ ನಿರೀಕ್ಷಿಸೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments