ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಬದುಕಿನಲ್ಲಿ ಕೇಡು ಬಂದಾಗ ಯಾರ್ಯಾರನ್ನೋ ಹೊಣೆ ಮಾಡ್ತೇವೆ. ನಿನ್ನ ಸುಖಕ್ಕೂ ದುಃಖಕ್ಕೂ ನೀನೇ ಕಾರಣ. ~ಶ್ರೀಸೂಕ್ತಿ.

ರಾಮ ಕಾಡಿಗೆ ಹೋಗಿ 6ನೇ ದಿನ. ದಶರಥನ ಪಾಲಿಗೆ ಕಾಲರಾತ್ರಿ. ರಾಮ ಹಿಂದಿರುಗುವ ಕನಸು ಕಮರಿತು. ವಿಪರೀತ ದುಃಖದಲ್ಲಿದ್ದ ದಶರಥನಿಗೆ ತನ್ನ ಪಾಪವು ನೆನಪಾಗಿ ಕೌಸಲ್ಯೆಯ ಬಳಿ ಹೇಳಿಕೊಳ್ಳುತ್ತಾನೆ. “ಶುಭವಾಗಲಿ, ಅಶುಭವಾಗಲಿ, ನಾವೇನು ಮಾಡ್ತೇವೆ? ಅದನ್ನೇ ನಾವು ಪಡೆಯುತ್ತೇವೆ. ದೇವಿ, ನಿನ್ನ ಮದುವೆಯ ಮೊದಲೇ, ಯುವರಾಜ, ಮಳೆಗಾಲ, ದಕ್ಷಿಣಾಯನ, ಧಗೆಯು ಕಡಿಮೆಯಾಗಲು, ಕಪ್ಪೆ, ಚಾಟಕಪಕ್ಷಿ, ನವಿಲುಗಳು ಸಂತೋಷಪಟ್ಟವು. ಒದ್ದೆಯಾದ ಪಕ್ಷಿಗಳು ವಾಲಾಡುವ ಮರಗಳನ್ನು ಸೇರುತ್ತಿರಲು, ಚಲನವಿಲ್ಲದ ಪರ್ವತಗಳು ಜಲರಾಶಿಯಂತೆ ಕಾಣುತ್ತಾ ಇತ್ತು.

ದಶರಥ ವ್ಯಾಯಾಮದ ಸಂಕಲ್ಪಕ್ಕೋಸ್ಕರ (ಮೃಗಬೇಟೆ) ಸರಯೂ ನದಿಗೆ ಹೋಗುತ್ತಾನೆ. ನೀರು ಕುಡಿಯುವ ಅನುಕೂಲವಿರುವ ಸ್ಥಳದಲ್ಲಿ ಕಣ್ಣಿಟ್ಟು ಅವಿತುಕೊಂಡಿದ್ದ. ನೀರು ಕುಡಿಯಲು ಬಂದ ಪ್ರಾಣಿಯನ್ನು ವಧೆಮಾಡಲು. ಶಬ್ದವೇಧಿಯ ಗರ್ವದಿಂದ ಅಂಧಕಾರದ ಸಮಯದಲ್ಲಿ ಕುಂಭದಲ್ಲಿ ನೀರು ತುಂಬುವ ಶಬ್ಧ ಆನೆಯ ಶಬ್ಧವೆಂದು ತಿಳಿದು ಬಾಣವನ್ನು ಎತ್ತಿ ಶಬ್ದದ ಕಡೆಗೆ ಪ್ರಯೋಗಿಸಿದ. ಹಾ!ಹಾ! ಸ್ವರ ಕೇಳಿತು. ಯಾರೋ ಮನುಷ್ಯನು ನೀರಿನಲ್ಲಿ ಬಿದ್ದಿದ್ದನು. ಆತನು, ” ನನ್ನಂತಹ ತಪಸ್ವಿಯ ಮೇಲೆ ಬಾಣಪ್ರಯೋಗವೇ? ನೀರು ತರಲು ಬಂದವನು, ಯಾರು ನನ್ನ ಮೇಲೆ ಬಾಣಪ್ರಯೋಗಿಸಿದವರು? ಇದರ ಫಲ ಅನರ್ಥಕ. ನನಗೆ ಒಂದೇ ಚಿಂತೆ ನನ್ನ ಸಾವಿನ ಬಗ್ಗೆ ಚಿಂತೆಯಿಲ್ಲ, ನನ್ನ ತಂದೆ ತಾಯಿಯರನ್ನು ನೋಡುವವರು ಯಾರು?”
ಇದನ್ನು ಕೇಳಿದ ಯುವರಾಜನ ಕೈಯಿಂದ ಧನುರ್ಬಾಣಗಳು ಬಿದ್ದವು. ಶೋಕವುಂಟಾಯಿತು. ಆ ಸ್ವರದತ್ತ ಧಾವಿಸಿದಾಗ ಅಲ್ಲೊಬ್ಬ ಋಷಿಕುಮಾರ ರಕ್ತ ಕೇಸರಿನಿಂದ ಆವೃತವಾಗಿ ನೆಲದ ಮೇಲೆ ಬಿದ್ದಿದ್ದ. ‘ನಿನಗೇನು ಅಪಕಾರ ಮಾಡಿದೆ’ ಎಂದು ಪ್ರಶ್ನಿಸಿ, “ನನ್ನ ತಂದೆ ತಾಯಿಯರು ವೃದ್ದರು, ಅಂಧರು, ದುರ್ಲಬರು. ನನ್ನನ್ನೇ ಕಾಯುತ್ತಾ ಇದ್ದಾರೆ. ನೀನು ಹೋಗಿ ನನ್ನ ಸ್ಥಿತಿಯನ್ನು ಹೇಳು. ಇಲ್ಲೇ ಒಂದು ಹೆಜ್ಜೆ, ತಂದೆತಾಯಿಯರನ್ನು ಪ್ರಸನ್ನಗೊಳಿಸು” ಎಂದನು.

ದಶರಥನಿಗೆ ಚಿಂತೆಯಾಯಿತು. ಅತ್ತ ಇತ್ತ ಹೊರಲಾಡುತ್ತ ಇದ್ದ ಋಷಿಕುಮಾರ, “ನಿನಗೆ ಬ್ರಹ್ಮಹತ್ಯೆಯ ಪಾಪ ಬರುವುದಿಲ್ಲ. ಶೂದ್ರಸ್ತ್ರೀಯಿಂದ ಹುಟ್ಟಿದವನು ನಾನು. ಹೃದಯದಲ್ಲಿದ್ದ ಬಾಣವನ್ನು ಕಿತ್ತ ದಶರಥನನ್ನು ಒಂದು ನೋಟ ನೋಡಿ ಪ್ರಾಣಬಿಟ್ಟನು.

ಕುಂಭದಲ್ಲಿ ನೀರನ್ನು ಕೈ ತೆಗೆದುಕೊಂಡು ಆಶ್ರಮಕ್ಕೆ ಹೋದನು. ದುರ್ಲಭ, ಅಂಧರೂ ಆದ ತಂದೆತಾಯಿಯರನ್ನು ಕಂಡ ದಶರಥನು ದುಃಖಿಸಿದನು. ಏಕೆ ಇನ್ನೂ ಮಗ ಬರಲಿಲ್ಲ ಎಂದು ಯೋಚಿಸುತ್ತಿರುವಾಗ ದಶರಥನು ಈ ದೃಷ್ಟಾಂತವನ್ನು ವಿವರಿಸಿದನು.” ನಿಮ್ಮನ್ನು ನೆನೆಯುತ್ತಾ ಸ್ವರ್ಗಸ್ಥನಾದನು” ಎಂದನು.

ಅಗತ್ಯವಿಲ್ಲದ ಯಾವುದನ್ನೂ ಮಾಡಲೇಬಾರದು ~ಶ್ರೀಸೂಕ್ತಿ.

ತಡೆಯಲಾರದ ಸಂಕಟದಿಂದ ಋಷಿಕುಮಾರನ ತಂದೆ ಕಣ್ಣೀರಿನಿಂದ “ನೀನಾಗಿ ನೀನು ಬಂದು ಹೇಳದಿದ್ದರೆ ಲಕ್ಷ ಚೂರಾಗಿ ಹೋಗುತ್ತಿತ್ತು. ತಿಳಿದು ಮಾಡಿದ್ರೆ ನಿನ್ನ ತಲೆ ಏಳು ಚೂರು ಆಗುತ್ತಿತ್ತು. ಅಜ್ಞಾನದಿಂದ ಮಾಡಿದೆ, ಬದುಕಿದೆ. ಕೊನೆಯ ದರ್ಶನಕ್ಕೋಸ್ಕರ ಕರೆದುಕೊಂಡು ಹೋಗು” ಎಂದು ಹೇಳಿದಾಗ, ದಶರಥನು ಕರೆದುಕೊಂಡು ಹೋಗುತ್ತಾನೆ. ಆ ಶವದ ಮೇಲೆ ತಂದೆ ತಾಯಿಯರು ಬಿದ್ದುಬಿಟ್ಟರು. ಪುತ್ರಶೋಕದಿಂದ ಆತನಲ್ಲಿ “ಯಮಲೋಕಕ್ಕೆ ಒಟ್ಟಿಗೆ ಹೋಗೋಣ”ಎಂದೆಲ್ಲಾ ನುಡಿಯುತ್ತಾರೆ. ಕೊನೆಗೆ ಆತನಿಗೆ ಆಶೀರ್ವದಿಸುತ್ತಾನೆ, “ನೀನು ನಿಷ್ಪಾಪ, ನಿನ್ನನ್ನು ಕೊಂದವನು ಪಾಪಕರ್ಮಿ. ಶಸ್ತ್ರದಿಂದ ಶ್ರೇಷ್ಠಸಾವು ಬಂದ ಲೋಕಕ್ಕೆ ಹೋಗು. ಶೂರರಿಗೆ ಯೋಗಿಗಳಿಗೆ ಸಿಗುವ ಲೋಕ ಸಿಗಲಿ. ದೇಹಪ್ರಸ್ಥಾನ, ಗುರುಸೇವೆ, ಶೂರರು, ಏಕಪತ್ನೀವೃತಸ್ಥರಿಗೆ ಸಿಗುವ ಫಲವೆಲ್ಲವೂ ಸಿಗಲಿ” ಎಂದು ಹೇಳುತ್ತಿರುವಾಗ, ಆ ಋಷಿಕುಮಾರ ಎದ್ದನಂತೆ. ಆತನನ್ನು ಕರೆದುಕೊಂಡು ಹೋಗಲು ಇಂದ್ರನು ವಿಮಾನವನ್ನು ಕರೆತಂದನು. ತಂದೆ ತಾಯಿಯರ ಸೇವೆಯಿಂದ ಸ್ವರ್ಗಪ್ರಾಪ್ತವಾಗುತ್ತದೆ. “ನೀವು ಬಹುಬೇಗ ನಾನಿದ್ದಲ್ಲಿಗೆ ಬರುತ್ತೀರಿ” ಎಂದು ಆತನು ಹೇಳಿ ವಿಮಾನವನ್ನು ಏರಿ ಸ್ವರ್ಗ ಸೇರುತ್ತಾನೆ.
ತಂದೆ ತಾಯಿಯರ ಉತ್ತಮ ಸೇವೆಯಿಂದ ಮಕ್ಕಳು ಉನ್ನತೋನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ~ಶ್ರೀಸೂಕ್ತಿ

ತಂದೆ ಆತನಿಗೆ ತರ್ಪಣ ಕೊಟ್ಟರು. “ನನ್ನನ್ನೂ ಕೊಂಡು ಬಿಡು. ಏಕಪುತ್ರಕನಾದ ನಾನು ಅಪುತ್ರಕನಾದೆ. ತಿಳಿಯದೇ ಮಾಡಿದ ತಪ್ಪಿಗೂ ನಿನಗೆ ಶಾಪ ಕೊಡುತ್ತೇನೆ. ನನ್ನ ಪುತ್ರಶೋಕದ ನೋವು ನಿನಗೆ ಬರುತ್ತದೆ, ಅದರಿಂದ ನೀನು ಅಸುನೀಗುತ್ತೀಯ. ಬ್ರಹ್ಮಹತ್ಯೆಯ ಶಾಪವಿಲ್ಲ.” ವೃದ್ಧ ತಾಪಸ ತಾಪಸಿಯರು ಚಿತೆಗೆ ಹಾರಿ ಪ್ರಾಣಬಿಟ್ಟರು. ಸ್ವರ್ಗಪ್ರಾಪ್ತವಾಯಿತು.

ದಶರಥನಿಗೆ ಆ ಘಟನೆ ನೆನಪಾಯಿತು. “ಆ ಕರ್ಮದ ಫಲ ಬಂತು. ಪುತ್ರಶೋಕದಿಂದ ಪ್ರಾಣತ್ಯಾಗ ಮಾಡುತ್ತೇನೆ. ಕಣ್ಣುಗಳು ಕಾಣಿಸುವುದಿಲ್ಲ. ಭಯದಿಂದ ಹೀಗೆ ಹೇಳುವಾಗ ಕೌಸಲ್ಯೆಯಿಂದ ಉತ್ತರ ಬರಲಿಲ್ಲ.

ಸಾಯುವ ಭಯವಿಲ್ಲ. ಆದರೆ ರಾಮನನ್ನು ನೋಡಲಿಲ್ಲವೆಂಬುದೇ ದುಃಖ.

15ನೇ ವರ್ಷದಲ್ಲಿ ರಾಮನನ್ನು ಕಾಣುವವರು ಮನುಷ್ಯರಲ್ಲ, ದೇವತೆಗಳು. ರಾಮನ ಅಂದವಾದ ಹುಬ್ಬುಗಳು, ಶರತ್ಕಾಲದ ಮುಖದಂತೆ ಕಾಣುವ, ಉತ್ತಮದಂತ ಪಂಕ್ತಿಯುಳ್ಳವನು. ಶುಕ್ರನು ಮತ್ತೆ ಉದಿಸುವಾಗ ಕಾಣುವ ಜನರು ಸುಖಿಗಳು. ಇಂದ್ರಿಯಗಳೆಲ್ಲವೂ ಅಸ್ತವಾಗುತ್ತಿದೆ. ಮನಸ್ಸು ನಶಿಸುತ್ತಿದೆ” ಎಂದು ಹೇಳಿ ಕೊನೆಗೆ, “ಹೇ ರಾಘವ! ಮಹಾನುಭಾವನೇ, ನನ್ನ ಶೋಕವನ್ನು ದೂರಮಾಡುವವನು ಎಲ್ಲಿ ಹೋದೆಯೋ; ಕೌಸಲ್ಯೆ, ಸುಮಿತ್ರೆ ಹಾಗೂ ಶತ್ರು ಕೈಕೆಯಿಯೇ ಸಾಯುತ್ತಿದ್ದೇನೆ” ಎಂದು ಹೇಳಿ ದೇಹಾಂತ್ಯ ಹೊಂದಿದನು ದಶರಥ. ಆಗಲೇ ಅರ್ಧರಾತ್ರಿಯಾಗಿತ್ತು, ಅತಿಶಯ ಶೋಭೆಯಿಂದ ಕೂಡಿತ್ತು ದಶರಥನ ಮೃತದೇಹ.

ಜೀವನವಿಡೀ ಮಾಡಿದ್ದು ಜೀವನದ ಕೊನೆಗೆ ಬರದಿರಲಾರದು. ~ಶ್ರೀಸೂಕ್ತಿ

ಕೊನೆಗೆ ಕೈಕೆಯಿಯೂ ಬಂದಳು. ರಾತ್ರಿ ಕಳೆದು ಬೆಳಕಾಯಿತು. ಸೂತ- ಮಾಗಧರು ಪ್ರತಿನಿತ್ಯ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಪಾಣಿವಾದಕರ, ಬ್ರಾಹ್ಮಣೋತ್ತಮರು, ಕೋವಿದರು, ಸ್ತ್ರೀಯರು ನಪುಂಸಕರು ಎಂದಿನಂತೆ ಮಾಡುವ ಕೆಲಸವನ್ನು ಮಾಡಿದರು.
ಬಂಗಾರದ ಕುಂಭಗಳಲ್ಲಿ ನೀರನ್ನು, ಮಂಗಳದ್ರವ್ಯಗಳಿತ್ಯಾದಿಗಳನ್ನು ಸಿದ್ಧಪಡಿಸಲು, ದೊರೆಯು ಎದ್ದು ಬರುತ್ತಾ ಇಲ್ಲ. ಸೂರ್ಯೋದಯದವರೆಗೆ ಕಾದು, ದೊರೆಯನ್ನು ಎಬ್ಬಿಸುವ ಸ್ತ್ರೀಯರು ಎಬ್ಬಿಸುವ ಸಲುವಾಗಿ ಹೋದಾಗ ದೊರೆಯ ಪ್ರಾಣದ ಬಗ್ಗೆ ಸಂಶಯ ಬಂತು. ಕೌಸಲ್ಯೆ, ಸುಮಿತ್ರೆಯರು ಬೋಧತಪ್ಪಿ ಬಿದ್ದಿದ್ದರು. ಆದರೆ ದೊರೆ ದಶರಥ ಚಿರನಿದ್ರೆಗೆ ಜಾರಿದ್ದನು.
ಅಯೋಧ್ಯೆ ಅನಾಥವಾಯಿತು.

ಅನಾಥ ಅಯೋಧ್ಯೆಯಲ್ಲಿ ಮುಂದೇನು?? ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಹರೇ ರಾಮ

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments