ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಅಯೋಧ್ಯಾ ಕಾಂಡದ ಮುಂದುವರೆದ ಭಾಗವಾಗಿ ‘ಅಂತಃಪುರಾಕ್ರಂದನ’.
ಜಗತ್ತು ಪರಿಣಾಮ ಶೀಲ. ಇದ್ದ ಹಾಗೆ ಇರದು, ಬದಲಾವಣೆ ಸಹಜ. ಈಗ ಅಯೋಧ್ಯೆಯನೇ ನೋಡಿ; ನಿನ್ನೆ ಇದ್ದ ದಶರಥ ಇಂದು ಇಲ್ಲ. ಅರವತ್ತು ಸಾವಿರ ವರ್ಷಗಳ ಕಾಲ ರಾಜ್ಯವನಾಳಿದ ದಶರಥನನ್ನು ಅವನ ಮನದೊಳಗಿನ ನೋವು ಅಂತ್ಯಗೊಳಿಸಿತು.

ಇತ್ತ ಬೆಳಗ್ಗೆ ದೂತರು, ವಾದ್ಯದವರು, ನರ್ತಕರು, ಸೇವಕರು ದಶರಥನು ಎದ್ದು ಬರುವುದನ್ನು ಕಾದು-ಕುಳಿತಿದ್ದರು. ಆದರೆ ದಶರಥ ಎದ್ದು ಬರುವುದು ಕಾಣದಿದ್ದಾಗ ಅರಮನೆಯಲ್ಲಿರುವ ಸ್ತ್ರೀಯರಿಗೆ ಯಾವ ಕೇಡಿನ ಬಗ್ಗೆ ಶಂಕೆ ಇತ್ತೋ ಅಂದರೆ ದೊರೆಯ ಪ್ರಾಣದ ಕುರಿತಾದ ಯಾವ ಶಂಕೆಯು ಬಂದಿತ್ತೋ ; ಅದು ನಡೆದಿತ್ತು. ದೊರೆ ಕೊಟ್ಟ ವರ ; ದೊರೆಯನ್ನೇ ನುಂಗಿತ್ತು. ಆದರೆ ಪಕ್ಕದಲ್ಲಿಯೇ ಇರುವವರಿಗೆ ತಿಳಿಯಲಿಲ್ಲ.

ಅಂದು ಉತ್ಪಾತ ಕಾಲದಲ್ಲಿ ನಕ್ಷತ್ರಗಳನ್ನು ಮೋಡಗಳು ಮುತ್ತಿಕ್ಕುವಂತೆ ಕೌಸಲ್ಯೆಯ ಮುಖದ ಕಾಂತಿಯನು ಕಣ್ಣೀರು ತೆಗೆದಿತ್ತು. ಕಳೆಗುಂದಿದ ಕೌಸಲ್ಯೆ, ಎಂದಿನಂತೆ ಶೋಭಿಸುತ್ತಿರಲಿಲ್ಲ, ಸತ್ತಂತೆ ಮಲಗಿದ್ದ ಕೌಸಲ್ಯೆ ಅವಳ ಪಕ್ಕ ಮಲಗಿದ್ದ ಸುಮಿತ್ರೆಯು ಸಹ ಶೋಭಿಸುತ್ತಿರಲಿಲ್ಲ. ಆದರೆ ದಶರಥನು ಸತ್ತೇ ಹೋಗಿದ್ದನ್ನು ಕಂಡು ದಶರಥನ ರಾಣಿಯರು ಸಸ್ವರದಲ್ಲಿ ಅತ್ತರು. ಆ ಆಕ್ರಂದನವನು ಕೇಳಿ ಎಚ್ಚೆತ್ತು ನೋಡಿದಾಗ ದಶರಥನ ಪ್ರಾಣ ಹೋಗಿರುವುದನು ನೋಡಿ ನಭದಿಂದ ತಾರೆಗಳು ಉರುಳಿದಂತೆ ಕೌಸಲ್ಯೆ ಮತ್ತು ಸುಮಿತ್ರೆಯು ನೆಲಕ್ಕೆ ಬಿದ್ದರು. ಇತ್ತ ದೊರೆಯ ಸಾವಿನ ವಾರ್ತೆಯನ್ನು ಕೇಳಿ ಕೈಕೇಯಿಯು ಅತ್ತಳು. ಇಡೀ ಭವನವೇ ಪ್ರತಿಧ್ವನಿಸಿತು. ಮತ್ತು ಗಾಬರಿಗೊಂಡರು.

ಇವೆಲ್ಲದರ ನಡುವೆ ಅರಮನೆಯಲ್ಲಿ ಏನಾಯಿತೆಂದು ತಿಳಿಯದೇ ವಿಷಯವನು ತಿಳಿಯಲು ಪರಿಯುತ್ಸುಕರಾದ ಜನರು, ಸಂಪೂರ್ಣ ಅರಮನೆಯೇ ಸ್ಮಶಾನವಾಯಿತು. ದೊರೆ ದಶರಥನು ಆರಿದ ಅಗ್ನಿಯಂತೆ, ಶುಷ್ಕವಾದ ಸಾಗದಂತೆ, ಬೆಳಕನ್ನು ಕಳೆದುಕೊಂಡ ಸೂರ್ಯನಂತೆ ಇದ್ದನು. ಕೌಸಲ್ಯೆಯು ದಶರಥನ ತಲೆಯನ್ನು ತನ್ನ ತೊಡೆಯಲಿ ಇರಿಸಿಕೊಂಡು ; ಕೈಕೇಯಿಯ ಬಳಿ “ನಿನ್ನ ಆಸೆಯನು ತೀರಿಸಿಕೋ ಎಂದು ಹೇಳಿದಳು.

ಇತ್ತ ಪತಿಯೂ ಇಲ್ಲ; ಅತ್ತ ಮಗ ರಾಮನೂ ಇಲ್ಲ. ಇಂತಹ ಸ್ಥಿತಿ ಕೌಸಲ್ಯೆಯದು, ಒಂದು ಕುಬ್ಜೆಯಿಂದಾಗಿ ರಘುವಂಶ ಹತವಾಯಿತು. ಜನಕ ಪುತ್ರಿ ಸೀತೆ ಎಂತಹ ಸ್ಥಿತಿಯಲ್ಲಿ ಇರುವಳೋ ಎಂದೆಲ್ಲಾ ಮನಸು ಎಲ್ಲೆಲ್ಲೋ ಹೋಯಿತು. ಜನಕನು ತನ್ನನಂತೆಯೇ ಇಳಿ ವಯಸ್ಸು , ವಿಷಯವು ತಿಳಿದರೆ ತಾನು ದುಃಖಿಸುವನೆಂದು ಕೌಸಲ್ಯೆಯು ಜನಕನನ್ನು ನೆನಪುಮಾಡಿಕೊಳ್ಳುವಳು.

ನಾನು ಪತಿವ್ರತಾ ಧರ್ಮವನ್ನು ಪಾಲಿಸುವೆ ಪತಿಯ ಶವದೊಂದಿಗೆ ನಾನು ಚಿತೆಯೇರುವೆ ಎಂದು ಹೇಳಿದಳು. ಆಗ ಅಯೋಧ್ಯೆಯ ಅಮಾತ್ಯರು ಕಷ್ಟಪಟ್ಟು ಆಕೆಯನ್ನು ದೊರೆಯ ಶವದ ಬಳಿಯಿಂದ ಬೇರ್ಪಡಿಸಿದರು.

ನಂತರ ದಶರಥನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲಿ ಅಯೋಧ್ಯೆಯ ಅಮಾತ್ಯರು ಮಲಗಿಸುವರು. ವನಸ್ಪತಿಗಳನ್ನು ಬಳಸಿ ಶವ ಕೆಡದಂತೆ ವ್ಯವಸ್ಥೆಯನ್ನು ಮಾಡಿದರು. ಯಾವಾಗ ರಾಜನ ಶವವನ್ನು ಎಣ್ಣೆಯ ಕೊಪ್ಪರಿಗೆಯೊಳಗಿಟ್ಟರೋ; ಆಗ ಅರಮನೆಯ ಸ್ತ್ರೀಯರು ಹಾ! ದಶರಥ, ರಾಮನಿಂದ ವಿಹೀನರಾದ ನಮ್ಮನ್ನು ಬಿಟ್ಟು ಎಲ್ಲಿಗೆ ಹೋದೆ?
ಇನ್ನು ಪತಿ ಧ್ವಂಸಿನಿಯಾದ ಕೈಕೇಯಿಯೊಂದಿಗೆ ಹೇಗಿರಲಿ??

ಅಯೋಧ್ಯಾ ಪುರಿಯು ವ್ಯಾಕುಲವಾಯಿತು, ಶೂನ್ಯ, ಶೋಭೆಯಿಲ್ಲದ ರಾಜ್ಯವಾಯಿತು. ರಾಜ ದಿವಿಯನ್ನೇರಿದ, ರಾಣಿಯರು ನೆಲವನ್ನು ಸೇರಿದರು. ಆ ದಿನ ರಾತ್ರಿಯು ಚಂದ್ರಹೀನವಾದ ರಾತ್ರಿಯಂತೆ ಆಯಿತು. ಹೀಗೆ ಶತ ವರ್ಷಗಳು ಕಳೆದಂತೆ ಶೋಕದಲ್ಲಿ ರಾತ್ರಿಯನ್ನು ಕಳೆದರು. ಮರುದಿನ ಬೆಳಗಾಯಿತು ಧರ್ಮಜ್ಞರು, ರಾಜಕರ್ತರು ಅರಮನೆಯಲ್ಲಿ ಸೇರಿದರು. ವಸಿಷ್ಠರಿಗೆ ಅಭಿಮುಖರಾಗಿ, ದೊರೆ ಸ್ವರ್ಗದಲ್ಲಿ, ರಾಮ ಕಾಡಿನಲ್ಲಿ, ಭರತ-ಶತ್ರಘ್ನರು ಅಜ್ಜನ ಮನೆಯಲ್ಲಿರುವಾಗ ರಾಜನಿಲ್ಲದ ರಾಜ್ಯವು ಅರಾಜಕತ್ವದಲ್ಲಿ ನಾಶವಾದೀತು. ಆಗ ಅವರುಗಳು ದೊರೆಯಿಲ್ಲದ ರಾಜ್ಯದಲ್ಲಿ ಆಗುವ ಪರಿಣಾಮಗಳನ್ನು ತಿಳಿಸುವರು.

ಅರಾಜಕವಾದ ರಾಜ್ಯದಲ್ಲಿ ಉತ್ತಮವಾದ ಮಳೆ-ಬೆಳೆ, ಉತ್ತನೆ-ಬಿತ್ತನೆಗಳು ಇರುವುದಿಲ್ಲ. ನ್ಯಾಯಾಲಯಗಳು ಸರಿಯಾಗಿ ನಡೆಯುವುದಿಲ್ಲ, ರಾಜ್ಯವು ದುರ್ಭಿಕ್ಷದಿಂದ ಕೂಡಿರುವುದು, ಕಾಲ ಕಾಲಕ್ಕೆ ಯಜ್ಞ – ಯಾಗಾದಿಗಳು ನಡೆಯುವುದಿಲ್ಲ. ವ್ಯವಸ್ಥೆ-ರಕ್ಷಣೆಗಳು ಇರುವುದಿಲ್ಲ. ಜನಪದರು ಅರಾಜಕರಾದಾಗ, ಧನಿಕರು ಬಾಗಿಲು ತೆರೆದು ಮಲಗುವಂತಿಲ್ಲ, ಕೃಷಿ ಚಟುವಟಿಕೆಗಳಿಲ್ಲ, ಅಸ್ತ್ರ – ಶಸ್ತ್ರಗಳ ಅಭ್ಯಾಸವಿಲ್ಲ, ಯಾರೂ ಯಾರ ಮಾತನೂ ಕೇಳರು, ವಾಣಿಜ್ಯೋದ್ಯಮಗಳ ಪ್ರವಾಸ ಇಲ್ಲ, ಸೇನೆಯು ಶತ್ರುಗಳನ್ನು ಎದುರಿಸಲಾಗದು, ದೇವತಾ-ಪೂಜೆಗಳಿಲ್ಲ, ದೊರೆಯಿಲ್ಲದ ರಾಜ್ಯವೆಂದರೆ : ಅದು ನೀರಿಲ್ಲದ ನದಿ, ಹುಲ್ಲಿಲ್ಲದ ಕಾಡು ಇದ್ದಂತೆ, ಅಲ್ಲಿ ಬಲಿಷ್ಠರು ದುರ್ಬಲರನ್ನು ನಾಶ ಮಾಡುತ್ತಾರೆ. ಹಾಗಾಗಿ ದೊರೆಯಿಲ್ಲದ ರಾಜ್ಯ ಕಣ್ಣಿಲ್ಲದ ಶರೀರವಿದ್ದಂತೆ.

ದೊರೆ ಎಂದರೆ ಹಾಗೆ ಮಾತಾ, ಪಿತ, ಬಂಧು ಎಲ್ಲವೂ ಕೂಡ. ದೊರೆಯಿಲ್ಲದಿದ್ದರೆ ಎಲ್ಲವೂ ಕತ್ತಲೆ, ದೊರೆ ಲೋಕ-ಪಾಲಕ ಎಂದು ವಸಿಷ್ಠರು ಹೇಳಿದರು.

ಇಕ್ಷ್ವಾಕು ಕುವರನೋರ್ವನನ್ನು ಕುಳ್ಳಿರಿಸಿ, ಇಲ್ಲದಿದ್ದರೆ ನಾಡು ಕಾಡಾದೀತು, ನಿಮ್ಮ ಮಾತನ್ನು ಮೀರುವವರಲ್ಲ ನಾವು, ನೀವೇ ಪರಿಹಾರ ನೀಡಿರೆಂದು ಮಂತ್ರಿ ವರೇಣ್ಯರು ಹೇಳಿದರು.
ಆಗ ವಸಿಷ್ಠರು ಹೇಳುವುದೇನಿದೆ ; ದಶರಥನು ರಾಜ್ಯವನ್ನು ಭರತನಿಗೆ ಕೊಟ್ಟು ಹೋಗಿದ್ದಾನಲ್ಲ, ಈಗ ಭರತನು ರಾಜ್ಯವನ್ನು ಪಡೆದುಕೊಂಡಿದ್ದಾನಲ್ಲ. ಆದ್ದರಿಂದ ಇನ್ನು ಮೊದಲನೆಯದಾಗಿ ಭರತನ ಆಗಮನವು ಆಗಬೇಕು.ವಸಿಷ್ಠರು ಆಗ ಉತ್ತಮೋತ್ತಮರಾದ ಶೀಘ್ರರಾದ ದೂತರನ್ನು ಬರ ಹೇಳಿ, ರಾಜ- ಗೃಹಕ್ಕೆ ತೆರಳಿ, ಆದರೆ ತೆರಳುವಾಗ ಸಂದೇಶದಲ್ಲಿ ಶೋಕವಿರಲಿ,ಭರತ ಕುಮಾರ…, ಗುರುಗಳು, ಮಂತ್ರಿಗಳು ನಿನ್ನ ಕುಶಲವನ್ನು ಕೇಳಿದ್ದಾರೆ. ನೀನು ಕೂಡಲೇ ಅಯೋಧ್ಯೆಗೆ ಹೊರಡು ಎಂದು ಹೇಳಿ. ಆದರೆ ರಾಮನ ವನವಾಸದ ಬಗ್ಗೆ ಹಾಗೂ ತಂದೆಯ ನಿಧನದ ಕುರಿತಾಗಿ ಏನನ್ನೂ ತಿಳಿಸದಿರಲು ಸೂಚಿಸುವರು.ಉತ್ತಮವಾದ ರೇಷ್ಮೆ ವಸ್ತ್ರಗಳನ್ನು ತೆಗೆದುಕೊಂಡು ಹೋಗಿ. ಕಾರಣವೇನೆಂದರೆ – ನೀವು ಕುಮಾರ ಭರತನನ್ನು ಕರಕೊಂಡು ಬರಲು ತೆರಳುತ್ತಿದ್ದೀರ, ಅದು ರಾಜ ಮರ್ಯಾದೆ. ಹೀಗೆ ಅಯೋಧ್ಯೆಯಿಂದ ಪ್ರಯಾಣ ಆರಂಭವಾಗುವುದು.

ವಸಿಷ್ಠರ ಆದೇಶದ ಮೇರೆಗೆ ಶೀಘ್ರ ಕುದುರೆಗಳೊಂದಿಗೆ ರಾತ್ರಿ ಹೊತ್ತಿನಲ್ಲಿ ಭರತನಿರುವ ರಾಜಗೃಹವನ್ನು ಸೇರುವರು.

ಇತ್ತ ಬೆಳಗಾಗುವ ಸಮೀಪದಲ್ಲಿ ಭರತನು ತನಗೆ ಗೋಚರಿಸಿದ ದುಃಸ್ವಪ್ನದಿಂದ ಪರಿತಪಿಸಿದ. ಆಗ ಅವನ ಶೋಕ ನಿವಾರಣೆಗೆಂದು ಬಗೆ ಬಗೆಯ ರಂಜಕದ ಕಥೆ, ವಾದ್ಯ, ನಾಟಕ, ನೃತ್ಯಗಳನ್ನು, ಹಾಸ್ಯಗಳನ್ನು ಮಾಡಿದರೂ ಭರತ ಪ್ರಸನ್ನನಾಗಲಿಲ್ಲ.
ಆಗ ಪ್ರೀತಿಯ ಗೆಳೆಯ ಏನು ನಗಲಿಲ್ಲ?? ಎಂದು ಕೇಳಿದಾಗ ಮಿತ್ರ, ನಾನು ಯಾಕೆ ಹೀಗಿದ್ದೇನೆಂದರೆ….

ಸ್ವಪ್ನದಲ್ಲಿ ತಂದೆಯನು ಕಂಡೆ, ಅಂದರೆ ಮಲಿನನಾಗಿ ಬಿಚ್ಚಿ ಹರಡಿದ್ದ ಕೂದಲುಗಳು, ಪರ್ವತಾಕಾರದಿಂದ ಕೆಳಗೆ ಕೊಳಕಿನ ಹೊಂಡದಲಿ ಆತ ಬೀಳುತ್ತಿದ್ದಾನೆ, ಕೊಳಕಿನ ಹೊಂಡದೊಳು ಈಜುವಂತೆ, ಎಣ್ಣೆಯನು ಕುಡಿಯುತ್ತಿರುವವನಂತೆ, ಇವೆಲ್ಲವೂ ಕೂಡ ಮೃತ್ಯು ಲಕ್ಷಣಗಳು, ಎಳ್ಳನ್ನು ತಿಂದಂತೆ ಮಾತ್ರವಲ್ಲದೇ ಸಮುದ್ರವೇ ಒಣಗಿದಂತೆ, ಗಗನ ಶೋಭೆಯಿಂದ ಚಂದ್ರನು ಉರುಳಿ ಬಿದ್ದಂತೆ, ಪಟ್ಟದಾನೆಯ ದಂತ ಮುರಿದು ಹೋದಂತೆ,ಭೂಮಿ ಕುಸಿದಂತೆ, ಮರಗಳು ಒಣಗಿದಂತೆ, ದಶರಥನನ್ನು ಕಬ್ಬಿಣದ ಆಸನದಲ್ಲಿ ಕುಳ್ಳಿರಿಸಿದಂತೆ, ಕೆಂಪು ಮಾಲೆಯನು ಹಾಕಿರುವ ದೊರೆ ಕತ್ತೆ ಕಟ್ಟಿದ ರಥದಲ್ಲಿ ದಕ್ಷಿಣ ದಿಕ್ಕಿಗೆ ಹೋದಂತೆ ಭಯಾನಕ ರಾತ್ರಿಯ ಈ ಸ್ವಪ್ನ ಶಾಸ್ತ್ರವನು ಬಲ್ಲವನಾಗಿದ್ದ ಭರತನು ಫಲವನ್ನು ಅರಿತಿದ್ದ.

ಯಾವ ಮನುಷ್ಯನು ಕತ್ತೆಯ ರಥದಲ್ಲಿ ಕುಳಿತು ಪ್ರಯಾಣ ಮಾಡುತ್ತಿರುವಂತೆ ಗೋಚರಿಸುವುದು ಆ ವ್ಯಕ್ತಿಯ ಮರಣ ಖಚಿತ ಎಂದರ್ಥ ಎಂದು ಭರತ ನುಡಿವನು.

ನನ್ನೀ ಭಯಕ್ಕೆ ಕಾರಣವಿಲ್ಲ, ಭಯವಿಲ್ಲ ನನಗೆ, ಯಾಕೋ ಗೊತ್ತಿಲ್ಲ, ಭರತನದ್ದು ಸ್ವರವು ಬಿದ್ದು ಹೋಯಿತು, ಗಂಟಲು ಒಣಗಿದೆ, ನನಗೆ ನನ್ನ ಮೇಲೆಯೇ ಜಿಗುಪ್ಸೆ… ಎಂದಾಗ ಅಯೋಧ್ಯೆಯ ದೂತರು ಪ್ರವೇಶಿಸುವರು.

ದೊರೆಗೂ ಮತ್ತು ಸೋದರಮಾವನಿಗೂ ಈ ಸುವಸ್ತು ಹಾಗೂ ರೇಷ್ಮೆ ವಸ್ತ್ರಗಳನ್ನು ನೀಡು ಲಗು ಬಗೆಯಲಿ ಹೊರಡು ಎಂದರು.

ಆಗ ಭರತನು ದೊರೆ, ರಾಮ, ಲಕ್ಷ್ಮಣ ಹೇಗಿದ್ದಾರೆ? ಆರ್ಯೆ, ಧರ್ಮ ಮೂರ್ತಿಯಾದ ಧೀಮಂತ ರಾಮನ ತಾಯಿ ಕೌಸಲ್ಯೆ ಆರೋಗ್ಯವೇ? ನಮ್ಮ ಮಧ್ಯಮಾಂಬೆ ಲಕ್ಷ್ಮಣ-ಶತ್ರುಘ್ನರ ತಾಯಿ ಸುಮಿತ್ರೆ ಆರೋಗ್ಯವೇ? ಆತ್ಮ ಕಾಮಾತ್, ಸದಾ ಚಂಡಿ, ಸಿಡುಕಿ, ಪ್ರಾಜ್ಞ-ಮಾಲಿನಿಯಾದ ತಾಯಿ ಆರೋಗ್ಯವೇ? ಏನೆಂದಳು?? ಎಂದು ಭರತನು ದೂತರಲ್ಲಿ ಪ್ರಶ್ನಿಸುವನು.

ಭರತನ ಈ ಪ್ರಶ್ನೆಗಳಿಗೆ ದೂತರ ಪ್ರತಿಕ್ರಿಯೆ ಮತ್ತು ಮತ್ತದಕೆ ಭರತನ ಪ್ರತಿಕ್ರಿಯೆಗಳೇನು? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments