ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನಾಲ್ಕು ಬಗೆಯ ಜನರುಂಟು.
* ಕೆಲವರು ದೂರದವರಿಗೆ ಒಳ್ಳೆಯವರು, ಹತ್ತಿರದವರಿಗೆ ಕೆಟ್ಟವರು.
* ಇನ್ನು ಕೆಲವರು ಹತ್ತಿರದವರಿಗೆ ಒಳ್ಳೆಯವರು, ದೂರದವರಿಗೆ ಕೆಟ್ಟವರು.
* ಕೆಲವರು ದೂರದವರಿಗೂ ಒಳ್ಳೆಯವರು, ಹತ್ತಿರದವರಿಗೂ ಒಳ್ಳೆಯವರು.
* ಕೆಲವರು ಹತ್ತಿರದವರಿಗೂ ಕೆಟ್ಟವರೇ, ದೂರದವರಿಗೂ ಕೆಟ್ಟವರೇ. ಒಳ್ಳೇದು ಮಾಡಿದ್ದು ಯಾರಿಗೂ ಇಲ್ಲ.

ಸಾಧ್ಯವಾದರೆ ನಾವು ದೂರದವರಿಗೂ ಒಳ್ಳೆಯವರಾಗಬೇಕು, ಹತ್ತಿರದವರಿಗೂ ಒಳ್ಳೆಯವರಾಗಬೇಕು. ಅಪರೂಪಕ್ಕೆ ನೋಡುವವರಿಗೆ ಒಳ್ಳೆಯವರಾಗಿರುವುದು ಕಷ್ಟವಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಥರ ಆಗಬಾರದು.
ದೂರದವರಿಗೂ ನಾವು ಒಳ್ಳೆಯವರಾಗಿ ಇರಬೇಕು. ಇದು ಸಾಧ್ಯವಾಗಲಿಲ್ಲ ಅಂದರೆ ಮುಂದಿನ ಆಯ್ಕೆ ಹತ್ತಿರದವರಿಗೆ ಒಳ್ಳೆಯವರಾಗಿರಬೇಕು.
ಹತ್ತಿರದವರು, ನಮ್ಮವರು, ಜೀವಮಾನದ ಒಡನಾಡಿಗಳು, ಅಂಥವರಿಗೆ ನಾವು ಒಳ್ಳೆಯವರಾಗಿರಬೇಕು. ಯಾರು ಹತ್ತಿರದವರಿಗೆ ಒಳ್ಳೆಯವನೋ ಅವನು ನಿಜವಾಗಿ ಒಳ್ಳೆಯವನು. ನಿತ್ಯ ಜೊತೆಗೆ ಇರುವವರಿಗೆ ಒಳ್ಳೆಯವನು ಅಂತ ಅನಿಸಲು ಅವನು ಒಳ್ಳೆಯವನೇ ಆಗಿರಬೇಕಾಗ್ತದೆ. ಯಾಕಂದ್ರೆ ಬಹಳಕಾಲ ಮುಖವಾಡ ಧರಿಸಲು ಸಾಧ್ಯವಿಲ್ಲ.

ಕೈಕೇಯಿ ಮತ್ತೆ ಯಾರಿಗೂ ಒಳ್ಳೆಯವಳಾಗದಿದ್ದರೂ ಚಿಂತೆಯಿಲ್ಲ, ಭರತನ ಪಾಲಿಗಾದರೂ ಒಳ್ಳೆಯವಳಾಗಿ ಇರಬೇಕಾಗಿತ್ತು. ಗಂಡನ ಮನಸ್ಸಿಗಂತೂ ಒಳ್ಳೆಯವಳಾಗಿ ಉಳಿಯಲಿಲ್ಲ ಅವಳು. ದಶರಥ ತನ್ನ ಪ್ರೀತಿ ಪೂರ್ತಿ ಸುರಿಸಿದ್ದಾನೆ ಆಕೆಗೆ. ಆದರೆ ಸಾಯುವಾಗ ಕೊನೆಯ ಬಾರಿಗೆ ಇವಳನ್ನ ‘ಕ್ರೂರಿ, ಶತ್ರು’ ಅಂತ ನೆನಪು ಮಾಡ್ಕೊಂಡು ಸಾಯೋ ತರಹ ಪರಿಸ್ಥಿತಿ ಕೊನೆಯುಸಿರಿನಲ್ಲಿ.
ಇನ್ನು ಮಗ ಭರತ. ಇವಳು ತನ್ನ ಮೋಹವನ್ನ ಪೂರ್ತಿ ಸುರಿಸಿದ್ದಾಳೆ ಅವನ ಮೇಲೆ.
ಭರತನಿಗೆ ರಾಜ್ಯ ಕೊಡಿಸಬೇಕು ಅಂತ ತಾನೆ ಇಷ್ಟೆಲ್ಲಾ ಮಾಡಿದ್ದು ಕೈಕೇಯಿ! ಆದರೆ ಭರತನಿಗೆ ಏನು ಅಭಿಪ್ರಾಯ ಇದೆ ಅವಳಲ್ಲಿ? ಅಂದರೆ, ದೂತರ ಮುಂದೆ ಆರೋಗ್ಯವಾಗಿದ್ದಾಳಾ ಅಂತ ಕೇಳ್ಬೇಕಾದ್ರೆ ಕೊಡುವ ವಿಶೇಷಣಗಳು, “ಸದಾ ಚಂಡಿ, ಸ್ವಾರ್ಥಿ, ಸದಾ ಹಠಮಾರಿ, ಸಿಡುಕಿ, ನಿಜವಾಗಿ ಪ್ರಾಜ್ಞಳಲ್ಲ.. ಆದರೆ ತನ್ನನ್ನು ತಾನು ಪ್ರಾಜ್ಞಳು ಎಂದುಕೊಂಡವಳು” ಎಂಬುದಾಗೆಲ್ಲ ಭರತ ಹೇಳಬೇಕಾದ್ರೆ, ನೋಡಿ ಎಂಥಾ ಸ್ಥಿತಿ! ಕೇಕಯಾಧಿಪತಿ ಅಶ್ವಪತಿಯ ಮಗಳು, ಸೂರ್ಯವಂಶಿ ಚಕ್ರವರ್ತಿ ದಶರಥನ ಮೋಹದ ಮಡದಿ, ಕೊನೆಗೆ ಯಾರಿಗೂ ಒಳ್ಳೆಯವಳಾಗಿರಲಿಲ್ಲ. ಇಂಥವರು ಕೊನೆಗೆ ಎಲ್ಲಿಯೂ ಸಲ್ಲದವರಾಗಿ ಇರ್ತಾರೆ. ಕೊನೆಗೊಂದು ದಿನ ಅವರು ಯಾರಿಗೂ ಒಳ್ಳೆಯವರಲ್ಲ, ಯಾರಿಗೂ ಬೇಕಾದವರಲ್ಲ, ಎಲ್ಲೂ ಸಲ್ಲುವವರಲ್ಲ ಅನ್ನೋ ತರಹ ಆಗ್ಬಿಡ್ತಾರೆ ಅನ್ನೋದಕ್ಕೆ ಕೈಕೇಯಿಯೇ ದೊಡ್ಡ ದೃಷ್ಟಾಂತ. ಅವಳಿಗೆ ಕೊನೆಗೆ ಆಶ್ರಯವಾಗಬೇಕಾಗಿ ಬಂದಿದ್ದು ರಾಮ ಮಾತ್ರ.

ದೂತರಲ್ಲಿ ಎಲ್ಲರ ಕುಶಲಪ್ರಶ್ನೆ ಮಾಡಿದ ಭರತನಿಗೆ ಒಂದೇ ಉತ್ತರದಲ್ಲಿ, ‘ನೀನು ಕೇಳಿದವರೆಲ್ಲ ಕುಶಲ. ಇದೀಗ ಲಕ್ಷ್ಮೀ ನಿನಗೆ ಒಲಿದಿದ್ದಾಳೆ, ರಥವೇರು’ ಎಂದು ಅವಸರಿಸಿದರು. ದೂತರ ಅವಸರವು ಅರ್ಥವಾಗದೇ, ಹೊರಡಲು ಅನುವಾಗುತ್ತಾನೆ ಭರತ ಶತ್ರುಘ್ನನೊಡಗೂಡಿ. ಮೊದಲು ಅಜ್ಜ ಅಶ್ವಪತಿಯ, ಮಾವ ಯುಧಾಚಿತ್ ರ ಬಳಿ ತೆರಳಿ, ‘ಹೋಗಿ‌ ಬರುತ್ತೇನೆ’ ಎಂದು ಹೇಳುವಾಗ ಕೇಕಯಾಧಿಪತಿಯು ‘ತಂದೆಯನ್ನು, ಪುರೋಹಿತ ವಸಿಷ್ಠರಿಗೆ, ರಾಮ-ಲಕ್ಷ್ಮಣರಿಗೆ ನಾನು ಕುಶಲವನ್ನು ಪ್ರಶ್ನಿಸಿದ್ದೇನೆಂದು ತಿಳಿಸು’ ಎಂದು ಹೇಳಿ ಉಡುಗೊರೆಯನ್ನು ಕೊಡ್ತಾರೆ. ಉತ್ತಮೋತ್ತಮ ಆನೆಗಳು, ಉಣ್ಣೆಯ ಉತ್ತಮೋತ್ತಮ ವಸ್ತ್ರಗಳು, ಶ್ರೇಷ್ಠ ಮೃಗಚರ್ಮಗಳು, 2000 ಸ್ವರ್ಣ ನಾಣ್ಯಗಳು, 1600 ಒಳ್ಳೆಯ ಕುದುರೆಗಳು, ಭರತ ಇಷ್ಟಪಡುವಂಥಾ ವಿಶ್ವಾಸಯೋಗ್ಯ, ಗುಣಸಂಪನ್ನರಾದ ಅಮಾತ್ಯರನ್ನು ಕೊಟ್ಟ ಅಶ್ವಪತಿ. ಮುಂದೆ ಯುಧಾಚಿತ್ ಶ್ರೇಷ್ಠ ಆನೆ, ಕತ್ತೆ, ಸಮೃದ್ಧ ನಾಯಿಗಳನ್ನು ಉಡುಗೊರೆಯಾಗಿ ಕೊಡುತ್ತಾನೆ. ಆದರೆ ಭರತನಿಗೆ ಆ ಕಡೆ ದೃಷ್ಟಿಯಿಲ್ಲ. ಹೊರಡುವ ಅವಸರ! ಹಿಂದೆ ದುಃಸ್ವಪ್ನ, ಇತ್ತ ದೂತರು!

ಆತ ರಾಜಮಾರ್ಗವನ್ನು ಸೇರಿ ಅಂತಃಪುರದಿ ಸೋದರಮಾವ, ಅಜ್ಜ ಎಲ್ಲರಿಂದ ಬೀಳ್ಕೊಂಡು ಶತ್ರುಘ್ನ ಸಹಿತನಾಗಿ ರಥವೇರಿ ಹೊರಟ. ಅವನ ಹಿಂದೆ ಬಹುದೊಡ್ಡ ಮೆರವಣಿಗೆ! ಅದೆಲ್ಲ ಉಡುಗೊರೆ!
ಅಶ್ವಪತಿ ಕೊಟ್ಟ ಆ ಸೈನ್ಯದೊಂದಿಗೆ ರಾಜಗೃಹದಿಂದ ಪೂರ್ವಾಭಿಮುಖವಾಗಿ ಹೊರಟನು ಭರತ ಇಂದ್ರಲೋಕದಿಂದ ಹೊರಟ ಸಿದ್ಧಪುರುಷನಂತೆ!

ಮೊದಲು ಸುಧಾಮ, ಹ್ಲಾದಿನಿ ನದಿಗಳನ್ನು ದಾಟಿ, ಬಳಿಕ ಶತದ್ರು ನದಿ ದಾಟಿ ಎಲಾದಾನ ಎಂಬ ಗ್ರಾಮಕ್ಕೆ ಬರುತ್ತಾರೆ. ಅಪರಪರ್ಪಟದಲ್ಲಿ ವಿಶ್ರಮಿಸಿ ಶಿಲಾವಹ ನದಿ ದಾಡಿ ಶಲ್ಯಕರ್ತನವೆಂಬ ಊರು ಸೇರುತ್ತಾನೆ. ಅಲ್ಲಿ ಶುಚಿಯಾದ.

ಚೈತ್ರರಥ ವನದಲ್ಲಿ ಜೋಡಿ ನದಿಗಳನ್ನು, ವೀರಮತ್ಸದ ಉತ್ತರದಲ್ಲಿ ಭಾರುಂಡ ವನ ಸೇರಿ ಕುಲಿಂಗ, ಹ್ಲಾದಿನಿ ದಾಟಿ ಯಮುನೆಯನ್ನು ಸೇರ್ತಾನೆ. ಬಳಲಿದ ಸೈನ್ಯವನ್ನು ಸಂತೈಸಿದ.

ಎಲ್ಲರೂ ಮಿಂದು, ಬಳಲಿದ ಕುದುರೆಗಳನ್ನು ಸಮಾಧಾನಿಸಿ ಮೈ ತಂಪು ಮಾಡಿ, ಸ್ನಾನ ಮಾಡಿದ ನಂತರ ತೃಪ್ತಿಯಾಗುವಷ್ಟು ನೀರು ಕುಡಿದು, ತೆಗೆದುಕೊಂಡು ಹೋಗ್ತಾನೆ. ಬಳಲಿದರೂ ಪದ್ಧತಿಗಳನ್ನು ಬಿಡಲಿಲ್ಲ. ಸ್ನಾನದ ನಂತರವೇ ನೀರು ಕುಡಿದಿದ್ದು!.

ಭರತ ಕಾಡು ಸೇರ್ತಾನೆ. ಆನೆಯನ್ನೇರಿ ಸಂಚಾರ ಮಾಡಿದ. ಬಳಿಕ ಅಂಶುಧಾನ ನಗರದಲ್ಲಿ ಗಂಗಾನದಿಯನ್ನು ಕಂಡ. ಮುಂದೆ ಧರ್ಮವರ್ಧನ ಗ್ರಾಮಕ್ಕೆ ಬಂದು ಅಲ್ಲಿಂದ ವರೂತವೆಂಬ ರಮಣೀಯ ಗ್ರಾಮ ಸೇರಿದ. ಅಲ್ಲಿ ವಾಸಮಾಡಿ ಪುನಃ ಪೂರ್ವಾಭಿಮುಖವಾಗಿ ಸಂಚರಿಸಿದ. ಉಜ್ಜಿಹಾನ ನಗರಿ, ಬಂಧುಕ-ಕದಂಬ ವೃಕ್ಷಗಳನ್ನು ದಾಟಿ, ಸೈನ್ಯವನ್ನು ಬಿಟ್ಟು ರಥವೇರಿ ಪ್ರಯಾಣಿಸಿದ. ಸರ್ವತೀರ್ಥ ಗ್ರಾಮ ನದಿಗಳನ್ನು ದಾಟಿ ಮಾರ್ಗದ ದೃಷ್ಟಿಯಿಂದ ಪರ್ವತಸಂಚಾರಿ ಕುದುರೆಗಳನ್ನು ರಥಕ್ಕೆ ಕಟ್ಟಿ ಮುಂದೆ ಗೋಮತಿ ನದಿ ದಾಟಿ ಕಳಿಂಗ ನಗರಕ್ಕೆ ಬಂದ. ಅತ್ಯಂತ ಬಳಲಿದ್ದಾನೆ. ಆದರೂ ಬಿಡದೆ ಅರುಣೋದಯದ ಹೊತ್ತಿಗೆ ಅಯೋಧ್ಯಾ ನಗರಿಯನ್ನು ಕಂಡ.
ದಾರಿಯಲ್ಲಿ 7 ರಾತ್ರಿ ಕಳೆದು ಎಂಟನೇ ದಿನ ಅರುಣೋದಯದ ಹೊತ್ತಿಗೆ ಅಯೋಧ್ಯಾನಗರಿ ಸೇರಿದ. ಅಯೋಧ್ಯೆಯನ್ನು ಕಂಡ ಕೂಡಲೇ ಸಾರಥಿಗೆ ಭರತನಾಡಿದ ಮಾತುಗಳೇನು?
‘ಯಾವಾಗಿನಂತಿಲ್ಲ ಅಯೋಧ್ಯೆ! ಆ ಸಂತೋಷವು ಇಂದು ಆಗುತ್ತಿಲ್ಲ. ಅಯೋಧ್ಯೆ ಎಂದಿನಂತೆ ಕಾಣುತ್ತಿಲ್ಲ. ಪುಣ್ಯೋದ್ಯಾನಗಳಿಂದ ಕೂಡಿದ 3 ಲೋಕದಲ್ಲಿ ಕೀರ್ತಿಯುಳ್ಳ ನಗರಿ ಅಯೋಧ್ಯೆ. ‘ಯಶಸ್ವಿನೀ’ ಅದು. ಬಿಳಿಯ ಮಣ್ಣುಳ್ಳ ‘ಬ್ರಹ್ಮಭೂಮಿ’ ಅದು. ಸ್ವಲ್ಪ ಒಳಗೆ ಹೋದರೆ ಮಣ್ಣಿನಲ್ಲಿ ತುಪ್ಪದ ಪರಿಮಳ! ಬಿಳಿಯ ಕಲ್ಲುಗಳು.
ಆದರೆ ಈಗಿನ ಸ್ಥಿತಿ! ಸಮಾಧಾನವಾಗುತ್ತಿಲ್ಲ. ಅಯೋಧ್ಯೆ ರಾಜರ್ಷಿಗಳಿಂದ ಪರಿಪಾಲಿತ, ಯಜ್ಞಭೂಮಿ, ಜ್ಞಾನ, ವೇದ ಸಮೃದ್ಧ ಬ್ರಾಹ್ಮಣೋತ್ತಮರಿಂದ ಕೂಡಿದ ರಾಜೋತ್ತಮರಿಂದ ಪಾಲಿತ ಅಯೋಧ್ಯೆ ಕಳೆಯನ್ನು ಕಳೆದುಕೊಂಡಿದೆ. ಶೋಕದ ಕಳೆಯೇಕೆ ಈ ಉದ್ಯಾನಗಳಲ್ಲಿ? ನರನಾರಿಯರ ಸಂಚಾರದ ಶಬ್ದವೇ ಇಲ್ಲ. ಇದೂ ಕಾಡಿನಂತೆ ಕಾಣುತ್ತಿದೆಯಲ್ಲ! ಮರಗಿಡಗಳು ಆನಂದ ಶೂನ್ಯ‌.
ಮೃಗಪಕ್ಷಿಗಳ ಮಧುರ ನಿನಾದ ಬರಬೇಕಾಗಿತ್ತು. ಇಲ್ಲವದು!
ನಗರದೊಳಗೆ ಕಾಲಿಡುತ್ತಿದ್ದಂತೆ, ‘ ಊರಿನ ಪರಿಮಳವೆಲ್ಲಿ?’ ಎಂದಿನಂತೆ ಪರಿಮಳದ ಗಾಳಿ ಬೀಸುತ್ತಿಲ್ಲ. ಭೇರಿ-ಮೃದಂಗ-ವೀಣೆಗಳ ಧ್ವನಿ ಕೇಳಿಬರುತ್ತಿಲ್ಲ. ಮಂಗಳವಾದ್ಯಗಳಿಗೆ ದೈನ್ಯ ಬಂದಿದೆ‌.

ಭರತನಿಗೆ ಹೆಜ್ಜೆಹೆಜ್ಜೆಗೂ ಅಪಶಕುನಗಳು ಗೋಚರಿಸಿದವು. ದುರ್ನಿಮಿತ್ತಗಳು. ಭರತನ ಹೃದಯ ಸೀಳಿ ಹೋಯಿತು.

ಅಯೋಧ್ಯೆಯನ್ನು ಪ್ರವೇಶಿಸಿದ. ದ್ವಾರಪಾಲಕರು ಎದ್ದು ಜೀವವಿಲ್ಲದ ಜಯಕಾರ ಮಾಡಿದರು. ಅಲ್ಲಿದ್ದವರಿಗೆ, ‘ರಾಜ ಸ್ವರ್ಗಸ್ಥ, ರಾಮ ವನಸ್ಥ; ಭರತನೆಂದರೆ ‘ಕೈಕೇಯಿಯ ಮಗ’ ಎಂಬ ಭಾವ!’

ಮುಂದುವರೆದ, ಮನಸ್ಸು ಅನೇಕಾಗ್ರ. ದ್ವಾರಪಾಲಕರನ್ನು ಬೀಳ್ಕೊಟ್ಟು ಸೂತನೊಡನೆ, ‘ಏಕೆ ಇಷ್ಟವಸರದಲ್ಲಿ ಬಂದಿದ್ದು? ಕಾರಣವೇನು? ಇಲ್ಲಿ‌ಕಂಡುಬರುವ ಲಕ್ಷಣಗಳು ಬೇರೇನೋ ಹೇಳುತ್ತಿವೆ. ದೊರೆಯು ಗತಿಸಿದಾಗ ಕಂಡುಬರುವ ಚಿಹ್ನೆಗಳು ಕಾಣುತ್ತಿವೆ. ಯಾರ ಮುಖದಲ್ಲೂ ಪ್ರಭೆಯಿಲ್ಲ. ದೇವಸ್ಥಾನಗಳಲ್ಲಿಯೂ ಶೋಭೆಯಿಲ್ಲ. ಜನರೋ, ಮಲಿನ‌. ಯಾರನ್ನು ನೋಡಿದರೂ ಕಣ್ಣಿನಲ್ಲಿ ನೀರು.

ದೀನಮಾನಸನಾಗಿ ಭರತ ಅಯೋಧ್ಯೆಯ ತುಂಬಾ ಅನಿಷ್ಟವನ್ನು ಕಾಣುತ್ತಾ ಅಂತಃಪುರವನ್ನು ಪ್ರವೇಶಿಸಿದ. ಎಲ್ಲಿ ನೋಡಿದರೂ ಧೂಳು. ಏನಾಯಿತೋ ಎಂಬ ಭಯದಲ್ಲಿ ತಂದೆಯ ಸ್ಥಾನವನ್ನು ಪ್ರವೇಶಿಸ್ತಾನೆ. ಯಾರೂ ಏನೂ ಮಾತನಾಡಲಿಲ್ಲ. ಭರತನಿಗೆ ಏನೂ ಹೇಳುವ ಆಸಕ್ತಿಯೂ ಅವರಿಗಿಲ್ಲ.
ಏನೂ ವಿಷಯವೇ ಗೊತ್ತಿರದೆ ಎಲ್ಲರ ಕಣ್ಣಲ್ಲಿ ಖಳನಾಯಕನಾಗಿದ್ದ ಭರತ.

ತಾಯಿಯ ಮನೆಗೆ ಹೋದ. ಕೈಕೇಯಿ ಇದ್ದಳು. ಭರತನನ್ನು ಕಂಡೊಡನೆಯೇ ಸಂತೋಷವಾಗಿ ಆಸನವನ್ನು ಬಿಟ್ಟೆದ್ದಳು. ಭರತ ನೋಡ್ತಾನೆ, ಇರಬೇಕಾದ ‘ಶ್ರೀ’ ಇಲ್ಲ. ‘ಸ್ತ್ರೀ’ ಅಂದರೆ ‘ಶ್ರೀ’, ಇರಬೇಕಾದಂತೆ ಇದ್ದರೆ.
ತಾಯಿಯ ಕಾಲು ಹಿಡಿದನಂತೆ ಭರತ. ಮಡಿಲಲ್ಲಿ ಕುಳ್ಳಿರಿಸಿ, ‘ಎಷ್ಟು ದಿವಸವಾಯಿತು ಹೊರಟು? ಆಯಾಸವಾಗಲಿಲ್ಲವಾ? ಅಜ್ಜ, ಮಾವ ಕುಶಲವೇ? ಪ್ರವಾಸವು ಸುಖವಾಯಿತೇ?’ ಕೇಳ್ತಾಳೆ.

ಇದೆಲ್ಲ ಕೇಳುವ ಪರಿಸ್ಥಿತಿ ಇಲ್ಲವಲ್ಲ! ಉಮ್ಮಳಿಸಿ ಬರಬೇಕು ದುಃಖ. ಆದರೆ ಇಲ್ಲೇನೂ ಪರಿಣಾಮವಿಲ್ಲ. ಭರತನು ಪ್ರಶ್ನೆಗಳಿಗೆಲ್ಲ ಉತ್ತರಿಸಿ, ನಂತರ, “ಹೇಳಮ್ಮಾ, ಈಗ ನನಗೆ ಬೇಕಾದದ್ದನ್ನು ಹೇಳು, ಅಮ್ಮಾ.. ಈ ಪರ್ಯಂಕವೇಕೆ‌ ಶೂನ್ಯವಾಗಿದೆ? ಇಕ್ಷ್ವಾಕು ಜನರು, ರಾಜವಂಶ ನಿಷ್ಠರು, ಯಾರೂ ಸಂತೋಷದಲ್ಲಿಲ್ಲ ಯಾಕೆ? ನೀನೊಬ್ಬಳು ಬಿಟ್ಟರೆ ಬೇರಾರೂ ಸಂತೋಷದಲ್ಲಿಲ್ಲ, ಏಕೆ? ಅಪ್ಪ‌ ಇಲ್ಲಿಲ್ಲವೇಕೆ? ನಾನು ಬಂದಿದ್ದು ತಂದೆಯನ್ನು ಕಾಣುವ ಸಲುವಾಗಿ. ಪಾದಾಭಿವಂದನೆ ಮಾಡಬೇಕು. ಎಷ್ಟೋ ಕಾಲದ ಬಳಿಕ ಕೇಕಯದಿಂದ ಮರಳಿ‌ ಬಂದಿದ್ದೇನೆ. ಎಲ್ಲಮ್ಮಾ ತಂದೆಯವರು? ಅಥವಾ ದೊಡ್ಡಮ್ಮ ಕೌಸಲ್ಯೆಯ ಮನೆಗೆ ಹೋಗಿರುವರೇ?’ ಅದನ್ನ ಕೇಳ್ತಾನೆ.

ಯಾವುದು ಹೇಳಬೇಕು, ಯಾವುದು ಹೇಳಬಾರದು ಅನ್ನೋ ವಿವೇಚನೆ ಅವಳಿಗೆ ಎಷ್ಟಿದೆ ಅಂತ ಗೊತ್ತಾಗ್ತದೆ ನಿಮಗೆ.
” ಮಹಾತ್ಮನಾದ, ತೇಜಸ್ವಿಯಾದ ದೊರೆ, ಯಜ್ಞಶೀಲನಾದ, ಲೋಕದ ಸತ್ಪುರುಷರಿಗೆ ಗತಿಯಾದ ದೊರೆ ಎಲ್ಲರೂ ಕೊನೆಗೆ ಎಲ್ಲಿ ಹೋಗುತ್ತಾರೋ, ಅಲ್ಲೇ ಹೋದ” ಎಂದು ನಿಲ್ಲಿಸಿದಳು.

ಸದ್ಯ ನಾವೂ ನಿಲ್ಲಿಸೋಣ‌, ಮುಂದಿನ ಮಹಾಘಟ್ಟವನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments