ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಗುರಿಯನ್ನು ಬೇಗ, ಸುಖವಾಗಿ, ಸುರಕ್ಷಿತವಾಗಿ ತಲುಪಬೇಕಾದರೆ ಮಾರ್ಗವನ್ನು ಪ್ರಶಸ್ತಗೊಳಿಸಬೇಕು ― ಶ್ರೀಸೂಕ್ತಿ.
ರಾಮನು ಅಯೋಧ್ಯೆಯಿಂದ ಗಂಗಾನದಿಯನ್ನು ತಲುಪಲು ಎರಡು ದಿನಗಳು ಬೇಕಾಯಿತು. ಒಂದನೇ ದಿನದ ರಾತ್ರಿಯನ್ನು ತಮಸಾ ನದಿ ತೀರದಲ್ಲಿ ಕಳೆದು, ಎರಡನೇ ದಿನದ ಸಂಜೆ ಗಂಗಾನದಿಯನ್ನು ತಲುಪಿದನು. ಸುಮಂತ್ರನು ಗಂಗೆಯಿಂದ ಅಯೋಧ್ಯೆಗೆ ಹಿಂದಿರುಗಿ ಬರಲು ತೆಗೆದುಕೊಂಡ ಅವಧಿ ಸಹ ಎರಡು ದಿನ. ಆದರೆ ಭರತ ಒಂದೇ ದಿನದಲ್ಲಿ ಗಂಗೆಯನ್ನು ತಲುಪಿದನು.ಇದಕ್ಕೆ ಕಾರಣ ಭರತನು ಪ್ರಯಾಣ ಆರಂಭಿಸುವಾಗ ಮಾರ್ಗವನ್ನು ಪ್ರಶಸ್ತಗೊಳಿಸಲಾಗಿತ್ತು. ಜೀವನದಲ್ಲಿಯೂ ನಮಗೆ ಎಲ್ಲಿಗೆ ತಲುಪಬೇಕು ಎನ್ನುವ ಗುರಿ ಇರಬೇಕು. ಗುರಿ ಸೇರಲು ಮಾರ್ಗವನ್ನು ಸರಿ ಮಾಡಿಕೊಳ್ಳಬೇಕು. ಕಾಲಿಡುವ ಮೊದಲು ಕಣ್ಣಿಡಬೇಕು.

ದೂರದ ದಾರಿಯನ್ನು ಕ್ರಮಿಸಿ, ಸಾಯಂಕಾಲದ ಹೊತ್ತಿಗೆ ಭರತ ಮತ್ತು ಅವನ ಬಳಗದವರು ಗಂಗಾತೀರವನ್ನು ಸೇರಿದರು. ಇವರ ಪ್ರಯಾಣವು ರಥ, ಯಾನ, ಅಶ್ವ, ಕುಂಜರ(ಆನೆ)ಗಳ ಮೇಲೆ ಆಗಿತ್ತು.
ಗಂಗಾತೀರದಲ್ಲಿ ವೀರನಾದ, ರಾಮನ ಸಖನಾದ ಗುಹನಿದ್ದ. ಗುಹನಿದ್ದಲ್ಲಿಗೆ ಬಂದು ತಲುಪಿದ ಭರತನ ಸೇನೆ ರಾತ್ರಿ ಅಲ್ಲಿಯೇ ನೆಲೆಸಿತು. ಗಂಗೆಯ ಪುಣ್ಯ ಜಲವನ್ನು ಕಂಡಾಗ ಭರತನಿಗೆ ಮತ್ತೆ ಮುಂದೆ ಹೋಗಲು ಮನಸ್ಸಾಗಲಿಲ್ಲ. ಸೇನೆಯನ್ನು ನೆಲೆಗೊಳಿಸಲು ಸೈನಿಕರಿಗೆ ಭರತನು ಅಪ್ಪಣೆ ಮಾಡುತ್ತಾನೆ. ಪಾವಿತ್ರ್ಯಕ್ಕೆ ಇನ್ನೊಂದು ಹೆಸರು ಗಂಗೆ. ಗಂಗೆಯೆಂದರೆ ಪರಮಾತ್ಮನೇ ದ್ರವವಾಗಿ ಹರಿದಿದ್ದು ―ಶ್ರೀಸೂಕ್ತಿ. ಗಂಗೆಯಲ್ಲಿ ತನ್ನ ತಂದೆಗೆ ತರ್ಪಣ ಕೊಡಬೇಕುನ್ನುವ ಆಸೆ ಭರತನದ್ದಾಗಿತ್ತು. ಗಂಗೆ ಬ್ರಹ್ಮದ್ರವವಾಗಿದ್ದರಿಂದ ಗಂಗಾಜಲದಿಂದ ತರ್ಪಣ ಕೊಟ್ಟರೆ ಜೀವಕ್ಕೆ ಶಾಂತಿ ನಿಶ್ಚಿತ. ತರ್ಪಣ ಎಂದರೆ ತೃಪ್ತಿಯನ್ನು ಉಂಟುಮಾಡುವಂತಹದ್ದು.

ಭರತನಿಗೆ ರಾಮನನ್ನು ಮರಳಿ ಅಯೋಧ್ಯೆಗೆ ಕರೆ ತರುವುದು ಹೇಗೆ ಎನ್ನುವ ಚಿಂತೆಯಾಗಿತ್ತು. ಗಂಗಾತೀರದಲ್ಲಿ ಭರತನ ಸೇನೆಯು ಆಶ್ರಯಿಸಿತ್ತು. ಸೇನೆ ಇರುವುದು ಎರಡು ಕಾರಣಕ್ಕಾಗಿ 1)ರಕ್ಷಣೆ 2)ಆಕ್ರಮಣ
ಆಗ ಗುಹನಿಗೆ ಸೇನೆ ಬಂದಿದ್ದರಿಂದ ಚಿಂತೆಯಾಯಿತು.
ಸಣ್ಣ ಪುಟ್ಟ ರಾಜ್ಯಗಳಲ್ಲಿ ಕಾಣಸಿಗದ, ಸಮುದ್ರದ ನೆನಪನ್ನು ತರುವ ಸೇನೆ ಭರತನದ್ದಾಗಿತ್ತು. ಎಷ್ಟೇ ಕಣ್ಣೆತ್ತಿ , ಕೊರಳೆತ್ತಿ ನೋಡಿದರೂ ಸೇನೆಯ ತುದಿ ಕಾಣದು ಎಂದು ಗುಹ ಹೇಳಿದನು.ಕಣ್ಣಿಗೆ ಮಾತ್ರವಲ್ಲ, ಮನಸ್ಸಿಗೂ ನಿಲುಕದಂತಹ ವಿಶಾಲವಾದ ಸೇನೆ. ಸೇನೆಯನ್ನು ಗುರುತಿಸಲು ಧ್ವಜಗಳು ಸಾಧನ. ಒಬ್ಬೊಬ್ಬ ವೀರರಿಗೂ ಬೇರೆ ಬೇರೆ ಧ್ವಜ ಇರುತ್ತದೆ. ಧ್ವಜವನ್ನು ನೋಡಿ, ದೊರೆ ಯಾರು ಮತ್ತು ಯಾರ ಸೈನ್ಯ ಎಂದು ಗುರುತಿಸುತ್ತಿದ್ದರು ಎಂದು ರಾಮಯಣವು ವರ್ಣಿಸುತ್ತದೆ. ಗುಹನಿಗೆ ಕೋವಿಧಾರ ಧ್ವಜ ಗೋಚರಿಸಿತು. ಕೋವಿಧಾರ ಎಂದರೆ ಕೇಂಗಂಚಾಳ / ಪಾರಿಜಾತ ವೃಕ್ಷದ ಧ್ವಜ. ಧ್ವಜವನ್ನು ನೋಡಿದಾಗ ಭರತನು ಬಂದಿದ್ದು ಎಂದು ತಿಳಿದು ಗುಹನು ಕೋಪಗೊಂಡನು.

ನಮ್ಮ ಪ್ರಭುವಿಗೆ ರಾಜ್ಯವನ್ನು ತಪ್ಪಿಸಿ ತಾನಿಟ್ಟುಕೊಂಡಂತ ಭರತನ ಮೇಲೆ ಗುಹನಿಗೆ ಸಿಟ್ಟು ಬಂತು. ಭರತನು ಬರುತ್ತಿರುವ ಕಾರಣ ತಿಳಿಯದೇ ದುರ್ಬುದ್ಧಿಯಿಂದ ಬರುತ್ತಿದ್ದಾನೆ , ಅಣ್ಣನ ದರ್ಶನ ಪಡೆಯಲು ಬರುವುದಾದರೆ ಸೈನ್ಯ ಯಾಕೆ ಬೇಕಿತ್ತು?? ಎಂದೆಲ್ಲ ಚಿಂತಿಸಿದನು. ನಾವು ರಾಮನ ಕಡೆಯವರು ಎಂದು ಬಂಧಿಸಿ, ವಧಿಸಬಹುದು ಅಥವಾ ರಾಮನು ಮತ್ತೆ ಅಯೋಧ್ಯೆಗೆ ಮರಳಬಾರದು ಎಂದು ಸಂಹಾರ ಮಾಡಲು ಬಂದಿರಬಹುದು ಎಂದು ಭಯಗೊಂಡನು ಗುಹ. ಗುಹನು ತಾನು ಮಾತ್ರ ರಾಮನನ್ನು ಬಿಟ್ಟುಕೊಡಲಾರೆ, ರಾಮನು ನನ್ನ ಹೃದಯದೊಳಗೆ ಇದ್ದಾನೆ ಎಂದು ತೀರ್ಮಾನಿಸಿ ತನ್ನವರನ್ನೆಲ್ಲ ಕರೆದು ಯುದ್ಧಕ್ಕೆ ಸನ್ನದ್ದರಾಗಲು ಸೂಚಿಸಿದನು. ನದಿಯನ್ನು ದಾಟಿ ಭರತನು ಹೋಗದಂತೆ ನೋಡಲು ಹೇಳಿದನು. ಗುಹನ ಸೈನ್ಯದಲ್ಲಿ ಐದುನೂರು ಮಹಾ ನೌಕೆಗಳು, ಒಂದೊಂದು ನೌಕೆಯಲ್ಲಿ ನೂರು ಜನ ಯೋಧರು ಇದ್ದರು.

ಭರತ ಮತ್ತು ಸೇನೆಯು ರಾಮನಲ್ಲಿ ಒಳ್ಳೆಯ ಭಾವವನ್ನು ಹೊಂದಿದ್ದರೆ ಮಾತ್ರ ಗಂಗಾನದಿಯನ್ನು ದಾಟಿಸಬೇಕು. ಇಲ್ಲ ಎಂದಾದಲ್ಲಿ ಯುದ್ದ ಮಾಡಿ ಭರತನ ಸೈನ್ಯವನ್ನು ಗಂಗಾನದಿಯಲ್ಲೇ ಬಲಿ ಹಾಕೋಣ ಎಂದು ಗುಹನು ಅಪ್ಪಣೆ ಮಾಡಿದನು. ಸೂಚನೆಯನ್ನು ತನ್ನವರಿಗೆ ಕೊಟ್ಟ ಗುಹನು ಉಡುಗೊರೆಗಳೊಡನೆ ಭರತನನ್ನು ಕಾಣಲು ಹೊರಟನು.
ಕೃತಿ ಮೊದಲು ಮತಿ ಆಮೇಲೆ ಎನ್ನುವುದು ಅಪಾಯಕಾರಿ .―ಶ್ರೀಸೂಕ್ತಿ.

ವಿವೇಕಿಗಳಾದವರು ವಿಚಾರ ಮಾಡಿ ಪ್ರಹಾರ ಮಾಡುತ್ತಾರೆ . ― ಶ್ರೀಸೂಕ್ತಿ.

ದೂರದಲ್ಲಿ ಗುಹ ಬರುತ್ತಿರುವುದನ್ನು ಸುಮಂತ್ರ ನೋಡುತ್ತಾ ನೆ. ಭರತನಿಗೆ ನಿಷಾದದ ದೊರೆಯಾದ ಗುಹನ ಪರಿಚಯವನ್ನು ಸುಮಂತ್ರನು ಹೇಳುತ್ತಾನೆ.

ಪ್ರೀತಿಯು ವಿಷಮವನ್ನು ಸಮಗೊಳಿಸುತ್ತದೆ . ― ಶ್ರೀಸೂಕ್ತಿ.

ಗುಹನಿಗೆ ರಾಮ–ಲಕ್ಷ್ಮಣರು ಎಲ್ಲಿದ್ದಾರೆಂದು ಗೊತ್ತು ಮತ್ತು ನಾವು ರಾಮನನ್ನು ತಲುಪಲು ಇವನು ಸಾಧನ ಎಂದು ತಿಳಿದ ಸುಮಂತ್ರನು ಗುಹನಿಗೆ ಭರತನನ್ನು ಭೇಟಿ ಮಾಡಲು ಆರಂಭಿಸುತ್ತಾನೆ. ಗುಹನು ತನ್ನ ಬಳಗದೊಡನೆ ಭರತನ ಬಳಿ ಸಾಗುತ್ತಾನೆ.

ಗುಹನು ಭರತನಿಗೆ ಅತ್ಯಂತ ವಿನಯದಿಂದ ನಮ್ಮ ರಾಜ್ಯ ನಿಮ್ಮ (ಅಯೋಧ್ಯೆಯ) ಅರಮನೆಯ ಹೂದೋಟ , ನಿನ್ನದೇ ದಾಸರ ಕುಲವಾದ ನಮ್ಮ ಅರಮನೆಯಲ್ಲಿ ವಿಶ್ರಾಂತಿ ಮಾಡು, ನಾವು ಆತಿಥ್ಯ ಮಾಡುತ್ತೇವೆ ಎಂದು ಹೇಳಿದನು.

ಗುಹನ ಮಾತುಗಳಿಂದ ಆಶ್ಚರ್ಯಚಕಿತನಾದ ಭರತನು ಗುಹನು ರಾಮನ ಸ್ನೇಹಿತ ಹೌದು ಎಂದು ಒಪ್ಪಿಕೊಳ್ಳುತ್ತಾನೆ. ಭರತನಿಗೆ ರಾಮ―ಲಕ್ಷ್ಮಣರು ಗಂಗಾನದಿಯನ್ನು ದಾಟಿ ಭರದ್ವಾಜರ ಆಶ್ರಮವನ್ನು ತಲುಪಿದ್ದಾರೆ ಎನ್ನುವ ಮಾಹಿತಿಯನ್ನು ಸುಮಂತ್ರನು ನೀಡಿದ್ದ. ಅದಕ್ಕಾಗಿ ಭರದ್ವಾಜರ ಆಶ್ರಮದ ದಾರಿಯನ್ನು ತೋರಿಸಲು ಭರತನು ಗುಹನಲ್ಲಿ ಕೇಳುತ್ತಾನೆ.

ಗುಹನಿಗೆ ಸೈನ್ಯವು ಬಂದಿದ್ದು ಯಾಕೆ ?? ಎನ್ನುವ ಸಂಶಯ ಕಾಡಿತ್ತು. ಗುಹನು ಭರತನಿಗೆ ತನ್ನ ಬಳಗದವರು ನಿನ್ನನ್ನು ಹಿಂಬಾಲಿಸುತ್ತಾರೆ. ನಿನ್ನ ಉದ್ದೇಶ ಕೇಡಲ್ಲದೆ ಇದ್ದರೆ, ರಾಮನಿಗೆ ನೀನು ಕೇಡು ಬಗೆಯಲು ಹೋಗುವುದಲ್ಲ ಎಂದಾದರೆ ಮಾತ್ರವೇ ನಮ್ಮ ಸಹಕಾರ ಇದೆ ಎಂದು ಧೈರ್ಯದಿಂದ ಸ್ಪಷ್ಟವಾಗಿ ಹೇಳಿದನು ಗುಹ.

ರಾಮನನ್ನು ಕಾಣಲು ಇಷ್ಟು ದೊಡ್ಡ ಸೈನ್ಯ ಏಕೆ ?? ಎಂದು ಭರತನನ್ನು ಪ್ರಶ್ನಿಸಿದನು ಗುಹ.

ಆಕಾಶಕ್ಕೆ ಕಲಂಕ ಇಲ್ಲ. ಆಕಾಶಕ್ಕೆ ಉಗಿದರೆ ನಮ್ಮ ಮುಖಕ್ಕೆ ಎಂಜಲಾಗುವುದು ಹೊರತು ಆಕಾಶಕ್ಕೆ ಏನು ಆಗುವುದಿಲ್ಲ
ಭರತನು ತನಗೆ ರಾಮನಲ್ಲಿ ಪ್ರೀತಿ ಮತ್ತು ನಿಷ್ಠೆ ಇರುವುದನ್ನು ತೋರಿಸಿದನು. ಗುಹನಿಗೆ ಭರತನು, “ರಾಮನೆಂದರೆ ನನ್ನ ಅಣ್ಣ, ನನ್ನ ಉದ್ದೇಶ ರಾಮನನ್ನು ಮರಳಿ ಅಯೋಧ್ಯೆಗೆ ಕರೆತರುವುದು ಮತ್ತು ಅಯೋಧ್ಯೆಯ ಸಿಂಹಾಸನಾಧೀಶ್ವರನನ್ನಾಗಿ ಮಾಡುವುದು ಎಂದು ಹೇಳಿದನು. ನನ್ನ ಉದ್ದೇಶವೇ ಈಡೀ ಸೈನ್ಯದ ಉದ್ದೇಶ. ಅದಕ್ಕಾಗಿಯೇ ಸೈನ್ಯ , ಮಾತೆಯರು, ವಸಿಷ್ಠರೆಲ್ಲ ಬಂದಿದ್ದು ಎಂದಾಗ ಗುಹನಿಗೆ ಸಂತೋಷವಾಯಿತು.

ತಾನಾಗಿ ಬಂದ ರಾಜ್ಯವನ್ನು ತ್ಯಾಗ ಮಾಡುವ ನಿನ್ನಂತವರು ಭೂಮಂಡಲದಲ್ಲಿ ಯಾರೂ ಇಲ್ಲ. ಲೋಕಾಂತರದಲ್ಲಿ ನಿನ್ನ ಕೀರ್ತಿ ಪಸರಿಸತ್ತದೆ ಎಂದು ಗುಹನು ಭರತನಿಗೆ ಹೇಳಿದನು.
ಸಂಜೆಯಾದಾಗ ಭರತನು ವಿಶ್ರಾಂತಿಗೆ ಹೊರಟ.
ಭರತನು ವಿಶ್ರಾಂತಿಯಲ್ಲಿದ್ದಾಗ ರಾಮನ ವಿರಹದ ಶೋಕದ ಬಿಸಿ ಒಳಗಿನಿಂದಲೇ ಕಾಡಿತು. ರಾಮನ ಬಗ್ಗೆ ಇರುವ ಚಿಂತೆ ಭರತನ ಮೇಲೆ ಮಹಾಪರ್ವತದಂತೆ ಬಂದು ಬಿತ್ತು.

ದುಃಖ ಒಬ್ಬಂಟಿಯಾಗಿ ಇದ್ದಾಗ ಕಾಡುವುದು .―ಶ್ರೀಸೂಕ್ತಿ.

ಭರತನ ಭ್ರಾತೃವಾತ್ಸಲ್ಯವನ್ನು ಅರ್ಥಮಾಡಿಕೊಂಡ ಗುಹನು ಭರತನನ್ನು ಸಮಾಧಾನ ಮಾಡಿದನು. ರಾಮನು ನಿಷಾದಕ್ಕೆ ಬಂದಾಗ ನಡೆದ ಕಥೆಯನ್ನೆಲ್ಲ ಗುಹನು ಭರತನಿಗೆ ವಿವರಿಸಿದನು.
ಗುಹನು ಸೀತಾ, ರಾಮ, ಲಕ್ಷ್ಮಣರು ಕಾಡಿನಲ್ಲಿ ಮುಂದುವರೆದರು ಎಂದಾಗ ಭರತನಿಗೆ ಮತ್ತೆ ಚಿಂತೆಯಾಯಿತು. ಭರತನು ಸುಕುಮಾರನಂತೆ ಇದ್ದರೂ ಮಹಾಬಲಶಾಲಿಯಾಗಿದ್ದ. ರಾಮನ ವಿರಹದ ನೋವು ಭರತ ಪ್ರಜ್ಞೆ ತಪ್ಪುವಂತೆ ಮಾಡಿತು. ಆಗ ಶತ್ರುಘ್ನ ಭರತನನ್ನು ಅಪ್ಪಿಕೊಂಡು ಅಳಲು ಆರಂಭಿಸಿದ.

ಭಾವದಲ್ಲಾಗಲಿ, ಕಾರ್ಯದಲ್ಲಾಗಲಿ ತೀವ್ರತೆ ಬೇಕು. ಭಾವದಲ್ಲಿ ತೀವ್ರತೆ ಇದ್ದಾಗಲೇ ಮುಕ್ತಿ ―ಶ್ರೀಸೂಕ್ತಿ.

ಕೌಸಲ್ಯೆಯು ರಾಮನನ್ನು ತಬ್ಬಿಕೊಳ್ಳವ ಹಾಗೆ ಭರತನನ್ನು ತಬ್ಬಿಕೊಂಡು ಅಳಲು ಆರಂಭಿಸಿದಳು. ನೀನಿಲ್ಲದೆ ಯಾರೂ ಬದುಕಲಾರರು, ನಮ್ಮ ವಂಶಕ್ಕೆ ನೀನೇ ಗತಿ ಎಂದು ಕೌಸಲ್ಯೆಯು ಭರತನಿಗೆ ಹೇಳಿದಳು. ಗುಹನನ್ನು ಭರತನು ರಾತ್ರಿ ಅಣ್ಣ ಮಲಗಿದ್ದು ಎಲ್ಲಿ? ರಾತ್ರಿ ಏನನ್ನು ಸೇವಿಸಿದ?? ಎಂದು ಕೇಳಿದನು.

ಯಾವುದು ಹಿತವೋ ಅದನ್ನು ಇಷ್ಟಪಡಿ. ಯಾವುದು ಕೇವಲ ಹಿತವೋ ಅದನ್ನು ನಿಯಂತ್ರಿಸಿ . ―ಶ್ರೀಸೂಕ್ತಿ.

ರಾಮನು ಬಂದಾಗ ಬಗೆಬಗೆಯ ಭಕ್ಷ ಬೋಜ್ಯಗಳನ್ನು ತಂದಿಟ್ಟರೂ ಸ್ವೀಕರಿಸಲಿಲ್ಲ, ಲಕ್ಷ್ಮಣ ತಂದು ಕೊಟ್ಟ ನೀರನ್ನು ಕುಡಿದು ರಾತ್ರಿಯನ್ನು ಕಳೆದ ಎಂದು ಭರತನಿಗೆ ಹೇಳಿದನು.

ಸಂಧ್ಯಾಕಾಲ ದೇವರ ಜೊತೆಗಿರುವ ಸಮಯ . ―ಶ್ರೀಸೂಕ್ತಿ.

ಲಕ್ಷ್ಮಣನು ರಾಮ―ಸೀತೆಯರ ಪ್ರದಕ್ಷಿಣೆ ಬರುತ್ತಾ , ರಕ್ಷಣಾ ಕಾರ್ಯದಲ್ಲಿ ಮಗ್ನನಾಗಿದ್ದ ಎಂದೆಲ್ಲ ಗುಹ ಭರತನಿಗೆ ವಿವರಿಸಿದನು. ಭರತ ರಾಮ ಮಲಗಿದ ಸ್ಥಳವನ್ನು ವೀಕ್ಷಿಸಿ, ತಾಯಂದರಿಗೆ ತೋರಿಸಿದನು. ಚಕ್ರವರ್ತಿಯ ಕುಲದಲ್ಲಿ ಜನಿಸಿದ ರಾಮನು ಕಾಡಿನ ನೆಲದ ಮೇಲೆ ಮಲಗಿದ್ದನ್ನು ನೋಡಿದ ಎಲ್ಲರೂ ದುಃಖಪಟ್ಟರು.
ಕಾಲಕ್ಕಿಂತ ದೊಡ್ಡ ದೇವರಿಲ್ಲ
ರಾಮನ ಕಷ್ಟದಲ್ಲಿ ಅವನ ಜೊತೆಗಿದ್ದ ಲಕ್ಷ್ಮಣ, ಸೀತೆ ಧನ್ಯರು ಎಂದು ಭರತನು ಹೇಳುತ್ತಾನೆ. ಅಯೋಧ್ಯೆಯ ನೆನಪಾದಾಗ ಭರತನು ರಾಜ್ಯದ ರಕ್ಷಣೆಗೆ ಯಾರೂ ಇಲ್ಲ ಎಂದು ಶೋಕಿಸಿದನು. ರಕ್ಷಣೆ ಇಲ್ಲದೆ ಇದ್ದರೂ ಯಾವ ರಾಜ್ಯದ ರಾಜರೂ ಅಯೋಧ್ಯೆಯನ್ನು ಆಕ್ರಮಿಸುವ ಪ್ರಯತ್ನ ಮಾಡಿಲ್ಲ. ಏಕೆಂದರೆ ರಾಮ ಕಾಡಿನಲ್ಲಿ ಇದ್ದರೂ ಅವನ ಬಾಹುಬಲದ ಭಯ ಎಲ್ಲರಿಗೂ ಇತ್ತು.

ಇಂದೇ ಮೊದಲುಗೊಂಡು ನನಗೆ ಹಾಸಿಗೆ, ಮಂಚ ಬೇಡ, ನಾನು ಕೂಡ ನೆಲದಲ್ಲೇ ಮಲಗಿ, ಗೆಡ್ಡೆ–ಗೆಣಸನ್ನು ತಿನ್ನುತ್ತೇನೆ, ಕಿರೀಟ ಧಾರಣೆ ಮಾಡುವುದಿಲ್ಲ ಎಂದು ವನವಾಸ ವ್ರತವನ್ನು ಭರತನು ಸ್ವೀಕರಿಸಿದನು. ರಾಮ ಮಾಡಿದ ಪ್ರತಿಜ್ಞೆಯನ್ನು ನಾನು ಪೂರೈಸುತ್ತೇನೆ ಎಂದು ಹೇಳಿದನು.

ಬ್ರಹ್ಮರ್ಷಿಗಳು ರಾಮನಿಗೆ ಅಭಿಷೇಕ ಮಾಡಲಿ, ದೇವತೆಗಳು ನನ್ನಿಷ್ಟವನ್ನು ನೆರವೇರಿಸಲಿ ಎಂದು ಭರತನು ಪ್ರಾರ್ಥಿಸಿದನು.

ಮುಂದೇನಾಯಿತು?? ಜಯ ಗಂಗೆ ಜಯ ಭಾಗೀರಥಿ… ಜಯ ಜಯ ರಾಮ ದಾಶರಥಿ…. ಎನ್ನುವ ಗಂಗಾವತರಣದ ಕಥೆಯನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments