ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಜಗನ್ನಾಥ ಪಂಡಿತರು ಮತ್ತು ಅಪ್ಪಯ್ಯ ದೀಕ್ಷಿತರು ಇಬ್ಬರೂ ಒಂದೇ ಕಾಲದಲ್ಲಿ ಇದ್ದವರು. ಪರಸ್ಪರ ಸ್ಪರ್ಧೆಯೂ ಇವರ ನಡುವೆ ಇತ್ತು. ಒಮ್ಮೆ ಅಪ್ಪಯ್ಯ ದೀಕ್ಷಿತರು ಗಂಗಾ ತೀರಕ್ಕೆ ಹೋದಾಗ ಅಲ್ಲಿ ಜಗನ್ನಾಥ ಪಂಡಿತರು ನಿದ್ದೆಮಾಡುತ್ತಿದ್ದರು. ಬೆಳಗಾಗಿದ್ದರೂ ಸಹ ಮಲಗಿದ್ದರು. ಅಪ್ಪಯ್ಯ ದೀಕ್ಷಿತರು ಸಂಪ್ರದಾಯ , ಶಾಸ್ತ್ರಗಳನ್ನು ಪಾಲನೆಮಾಡುವವರು. ಜಗನ್ನಾಥ ಪಂಡಿತರು ಮಲಗಿದ್ದನ್ನು ನೋಡಿ ಹೇಳಿದರು; ಸ್ವಲ್ಪವೂ ಶಂಕೆ ಇಲ್ಲದೆ ಈ ಹೊತ್ತಿನಲ್ಲಿ ಮಲಗಿದ್ದೀಯಲ್ಲ ಇದು ಶಾಸ್ತ್ರ ನಿಷಿದ್ಧ. ಅಲ್ಲದೆ ನಿನಗೆ ವಯಸ್ಸಾಗಿದೆ. ಆರಂಭವಲ್ಲ ಶೇಷವಯಸ್ಸು ನಿನ್ನದು, ಮೃತ್ಯು ಹತ್ತಿರದಲ್ಲಿದೆ ಹೆಚ್ಚು ಸಮಯವೇನಿಲ್ಲ. ಈ ಸಮಯದಲ್ಲಿ ಪುಣ್ಯಸಂಪಾದನೆ ಮಾಡುವ ಬದಲು ಪಾಪಸಂಪಾದನೆ ಮಾಡುತ್ತಾರಾ? ಎಂದಾಗ ಜಗನ್ನಾಥ ಪಂಡಿತರು ಕೆಕ್ಕರಿಸಿ ನೋಡಿದರು. ಮತ್ತೆ ಏನಾದಿತೂ ಎಂದು ಅಪ್ಪಯ್ಯ ದೀಕ್ಷಿತರು ಅರ್ಥ ಬದಲಿಸಿ ಹೇಳಿದರು; ಅಥವಾ ಸುಖವಾಗಿ ಮಲಗಿಬಿಡು. ಗಂಗೆ ಹತ್ತಿರದಲ್ಲಿಯೇ ಜಾಗೃತಳಾಗಿ ಇದ್ದಾಳೆ, ನಿನ್ನ ಎಲ್ಲಾ ಪಾಪಗಳು ಪರಿಹಾರವಾದೀತು.

ಗಂಗೆಯ ಪಾವಿತ್ರ್ಯ ಯಾವ ಮಟ್ಟದ್ದು ಎಂದರೆ ಆಕೆ ಬಳಿ ಇದ್ದರೆ ನಾವು ಯಾವ ಪಾಪಕ್ಕೂ ಕೂಡ ಅಂಜಬೇಕಾಗಿಲ್ಲ. ಸ್ಮರಣ, ದರ್ಶನ, ಸ್ಪರ್ಶ, ಪ್ರೋಕ್ಷಣ ಮಾತ್ರದಿಂದ ಪಾಪನಾಶವಾಗುತ್ತದೆ.

ಭರತ ಮತ್ತು ಪರಿವಾರ ರಾತ್ರಿ ಬಂದು ಗಂಗಾ ತೀರದಲ್ಲಿ ಉಳಿದಿದೆ. ಬೆಳಗಾಗಿದೆ. ಭರತ, ಶತ್ರುಘ್ನ ಮಲಗಿದ್ದಾರೆ. ಭರತ ಎದ್ದು ಶತ್ರುಘ್ನನನ್ನು ಎಬ್ಬಿಸುತ್ತಾನೆ. ಏಳು ಶತ್ರುಘ್ನ ಏಕಿನ್ನೂ ಮಲಗಿದ್ದೀಯ? ನಮ್ಮ ಕರ್ತವ್ಯವಿನ್ನೂ ಬಾಕಿ ಇದೆ, ರಾಮನಿಗೋಸ್ಕರ ಮುಂದುವರಿಯಬೇಕಿದೆ. ಆಗ ನೋಡಿದರೆ ಶತ್ರುಘ್ನ ನಿದ್ದೆ ಮಾಡಿಯೇ ಇಲ್ಲ, ಸುಮ್ಮನೆ ಮಲಗಿದ್ದ. ಯಾಕೆಂದರೆ ಆತನಿಗೆ ರಾಮನದೇ ಭಾವ, ರಾಮನದೇ ಆಲೋಚನೆ. ಎಚ್ಚರವಾಗಿಯೇ ಇದ್ದೇನೆ, ನಿದ್ದೆ ನನ್ನ ಕಣ್ಣಲ್ಲಿ ಸುಳಿದಿಲ್ಲ. ಎಡೆಬಿಡದ ರಾಮ ಚಿಂತೆ , ರಾಮಧ್ಯಾನ, ರಾಮ ಭಾವ, ರಾಮ ಶೋಕದಿಂದಾಗಿ ನಿದ್ದೆ ಮಾಡಿರಲಿಲ್ಲ. ಹಾಗಾಗಿ ಭರತ ಎಬ್ಬಿಸಿದ್ದು ಎಚ್ಚರ ಇದ್ದವನನ್ನು. ಭರತ , ಶತ್ರುಘ್ನರ ಚರ್ಚೆಯ ನಡುವೆಯೇ ಗುಹ ಬಂದು ನಿಂತ. ಅವರಿಬ್ಬರಿಗೂ ನಮಸ್ಕರಿಸಿ ಕೇಳಿದ; ನಿದ್ದೆ ಚೆನ್ನಾಗಿ ಆಯಿತೇ? ಸುಖವಾಗಿ ನಿದ್ದೆಮಾಡಿದಿರಾ? ಸೇನೆಗೆ ಎಲ್ಲಾ ಸುಖವಾ? ಎಂದು ಕೇಳಿದಾಗ ಭರತ ಹೇಳಿದ; ನಿಷಾದಾಧಿಪತಿಯೇ ಸುಖವಾಗಿ ನಮಗೆ ರಾತ್ರಿ ಕಳೆದಿದೆ, ನಿನ್ನ ಸತ್ಕಾರ ಅದ್ಭುತವಾಗಿರ್ತಕ್ಕಂತದ್ದು. ಈ ಮಾತುಗಳನ್ನು ಹೇಳುವಾಗ ಭರತನ ಮನಸ್ಸು ಎಲ್ಲೋ ಇತ್ತು, ನೆಪಮಾತ್ರಕ್ಕೆ ಇಲ್ಲಿ ಇದ್ದಾನೆ. ಆತನ ಮನಸ್ಸು ರಾಮಚರಣಗಳಲ್ಲಿ ಇತ್ತು. ಗುಹನಿಗೆ ಹೇಳಿದ ಮುಂದೆ ಹೋಗಬೇಕಲ್ಲಾ ಹಾಗಾಗಿ ಹೆಚ್ಚು ಬೆಸ್ತರು, ನೌಕೆಯನ್ನು ತರಿಸಿ ದಾಟಿಸು ನಮ್ಮನ್ನು ಎಂದ. ಗುಹ ತನ್ನ ಊರನ್ನು ಪ್ರವೇಶಮಾಡಿ ತನ್ನವರನ್ನೆಲ್ಲಾ ಎಬ್ಬಿಸುತ್ತಾನೆ. ಏಳಿ , ಚೆನ್ನಾಗಿ ಎಚ್ಚರಗೊಳ್ಳಿ ನಾವೆಗಳನ್ನು ಎಳೆದುತನ್ನಿ, ನಾವೆಲ್ಲಾ ಸೇರಿ ಸೇನೆಯನ್ನು ದಾಟಿಸೋಣ. ಅವರೆಲ್ಲರೂ ತಮ್ಮ ದೊರೆಯ ಅಪ್ಪಣೆಯಂತೆ ಐದುನೂರು ವಿಶೇಷ ನೌಕೆಯನ್ನು ಎಳೆದು ತಂದರು. ಸ್ವಸ್ತಿಕಾ ನೌಕೆಗಳೆಂದು ಹೆಸರಿತ್ತು, ದೊಡ್ಡ ದೊಡ್ಡ ಘಂಟೆಗಳನ್ನು ಕಟ್ಟಲಾಗಿತ್ತು, ಶ್ರೇಷ್ಠವಾದ ನೌಕೆಗಳು ಅವು ತುಂಬಾ ಶೋಭೆಯನ್ನು ಹೊಂದಿತ್ತು, ಒಳ್ಳೆಯ ಪತಾಕೆಗಳನ್ನು ಕಟ್ಟಲಾಗಿತ್ತು, ಬೇಕಾದಷ್ಟು ಗಾಳಿ ಅವಶ್ಯವಾಗಿ ಬರುವಂತೆ ಇತ್ತು ಆ ನೌಕೆಗಳು. ಅಂತಹ ನೌಕೆಗಳನ್ನು ತರಿಸಿ ಅವುಗಳ ಪೈಕಿ ಯಾವುದು ಉತ್ಕೃಷ್ಟ ನೌಕೆಯೋ ಅದನ್ನು ಪ್ರತ್ಯೇಕವಾಗಿ ಗುರುತಿಸಿ ಅದರಲ್ಲಿ ಭರತ ಹೋಗಬೇಕೆಂದು ಸಿದ್ಧಗೊಳಿಸಿದ. ಬಿಳಿಯ ಕಂಬಳಿಗಳನ್ನು ಹಾಸಿದ್ದರು, ಆನಂದ ತರುವಂತಹ ನಾದ ಆ ನಾವೆಯಲ್ಲಿತ್ತು. ಎಲ್ಲರಿಗಿಂತ ಮೊದಲು ವಸಿಷ್ಠ ಮೊದಲಾದಂತಹ ಪುರೋಹಿತರು ನೌಕೆಯನ್ನು ಏರಿದರು. ಭರತ ಶತ್ರುಘ್ನನೊಡನೆ ನೌಕೆಯನ್ನು ಏರುತ್ತಾನೆ. ಕೌಸಲ್ಯೆ, ಸುಮಿತ್ರೆ ಮೊದಲಾದ ರಾಜಮಾತೆಯರು , ಮತ್ತಿತರ ಗುರುಗಳು, ಬ್ರಾಹ್ಮಣೋತ್ತಮರು ನೌಕೆಯನ್ನೇರುತ್ತಾರೆ. ಇನ್ನುಳಿದ ಅಂತಃಪುರದ ರಾಣಿಯರು, ಎತ್ತಿನಬಂಡಿಗಳು, ಅಂಗಡಿಗಳು ಹಾಗೂ ಅಂಗಡಿ ಸರಕುಗಳು ಇವೆಲ್ಲವನ್ನೂ ಆ ಉತ್ತಮೋತ್ತಮವಾದ ನೌಕೆಗೆ ಏರಿಸಲಾಯಿತು. ನೌಕೆಯೇರುವ ತಯಾರಿಯ ಸದ್ದು ಮುಗಿಲುಮುಟ್ಟಿತ್ತು. ಸೈನಿಕರು ತಾವಿದ್ದ ಬಿಡಾರಗಳಿಗೆ ಬೆಂಕಿಹಚ್ಚುತ್ತಿದ್ದರು ಅದು ಸೇನಾಧರ್ಮ, ಇನ್ನು ಗಂಗಾಸ್ನಾನ, ತಮ್ಮ ತಮ್ಮ ವಸ್ತುಗಳನ್ನು ಜೋಡಿಸಿಕೊಳ್ಳುವ ಶಬ್ದ ಮುಗಿಲುಮುಟ್ಟಿತ್ತು. ಅತ್ತ ನೌಕೆಗಳು ಪ್ರಯಾಣವನ್ನು ಆರಂಭಿಸಿವೆ. ಪತಾಕೆಗಳಿಂದ ಕೂಡಿರುವ ನೌಕೆಯನ್ನು ಬೆಸ್ತರು ನಡೆಸಿದರು. ಬಹಳಷ್ಟು ಜನ ನೌಕೆಯನ್ನೇರಿ ಗಂಗೆಯನ್ನು ದಾಟುತ್ತಿದ್ದರು. ಕುದುರೆ, ರಥ, ಬಂಡಿಗಳು ಪ್ರತ್ಯೇಕ ನೌಕೆಗಳಿದ್ದವು. ಈ ನೌಕೆಗಳೆಲ್ಲಾ ಸೇರಿ ಎಲ್ಲರನ್ನೂ, ಎಲ್ಲಾ ವಸ್ತುಗಳನ್ನೂ ದಾಟಿಸುತ್ತಿದ್ದವು. ಅವರನ್ನು ದಡಸೇರಿಸಿ ಹಿಂದಿರುವುವಾಗ ಜಲಪ್ರದರ್ಶನ ಅಂದರೆ ನಾನಾ ರೀತಿಯಲ್ಲಿ ನೌಕೆಗಳನ್ನು ಚಲಿಸುವುದರ ಮೂಲಕ ಎಲ್ಲರನ್ನೂ ಮನರಂಜಿಸಿದರು. ಆನೆಗಳು ಮಾವುತನೊಡನೆ ಈಜಿಕೊಂಡು ದಾಟುತ್ತಿತ್ತು. ಆನೆಗಳಿಗೆ ಧ್ವಜವನ್ನು ಹಾಕಿದ್ದರು ಅದು ಪರ್ವತಗಳಿಗೆ ಧ್ವಜಹಾಕಿದಂತೆ ಕಾಣುತ್ತಿತ್ತು. ಹೀಗೆ ಭರತನ ಸೇನೆಯೆಲ್ಲವೂ ಪವಿತ್ರಗಂಗೆಯನ್ನು ದಾಟಿ ಪ್ರಯಾಗವನ್ನು ತಲುಪಿದರು. ಸೇನೆ ಮೈತ್ರ ಮುಹೂರ್ತದಲ್ಲಿ ಆಚೆ ದಡವನ್ನು ತಲುಪಿತ್ತು. ಬಳಿಕ ಸೇನೆಯನ್ನು ಯೋಚಿತವಾಗಿ ನೆಲೆಗೊಳಿಸಿ ಭರತ ರಾಮನ ಬಳಿಗೆ ಹೊರಟ. ಆದರೆ ಅದಕ್ಕೂ ಮೊದಲು ಅಲ್ಲಿಯೇ ಹತ್ತಿರವಿರುವ ಭರದ್ವಾಜರ ಆಶ್ರಮಕ್ಕೆ ಹೋಗಬೇಕಿದೆ, ಏಕೆಂದರೆ ರಾಮನು ಎಲ್ಲಿದ್ದಾನೆ ಎಂಬುದು ಅವರಿಗೆ ತಿಳಿದಿದೆ. ಅವರು ಸೂಚಿಸಿದ ಜಾಗದಲ್ಲಿ ರಾಮನಿದ್ದಾನೆ ಎಂಬುದು ಭರತನಿಗೆ ತಿಳಿದಿದೆ. ಹಾಗಾಗಿ ಸೇನೆಯನ್ನು ಅಲ್ಲಿಯೇ ಬಿಟ್ಟು, ಬ್ರಾಹ್ಮಣೋತ್ತಮರು ಹಾಗೂ ಮಂತ್ರಿಗಳ ಜೊತೆ ಹೊರಟ.

ದೇವಪುರೋಹಿತರಾದಂತ ಬೃಹಸ್ಪತಿಯ ಸುಪುತ್ರ ಭರದ್ವಾಜರು. ಅವರ ಆಶ್ರಮ ರಮಣೀಯವಾಗಿದೆ. ಸುಂದರವಾದಂತಹ ಕುಟೀರ , ವೃಕ್ಷಗಳಿರುವಂತಹ ವನವನ್ನು ಪ್ರವೇಶಮಾಡುತ್ತಾರೆ. ಭರತ ಭರದ್ವಾಜರ ಆಶ್ರಮವನ್ನು ನೋಡಿದ ಕೂಡಲೇ ಕ್ಷತ್ರಿಯೋಚಿತವಾದ ಪರಿಕರಗಳನ್ನು ಬಿಟ್ಟು, ಮಡಿ ಉಟ್ಟು, ಗುರುಗಳು, ಬ್ರಹ್ಮಣೋತ್ತಮರ ಜೊತೆ ಬರಿಗಾಲಿನಲ್ಲಿ ಹೋಗುತ್ತಾನೆ. ಏಕೆಂದರೆ ಇದು ಗುರುಗಳಿಗೆ ತೋರುವ ಗೌರವ. ವಸಿಷ್ಠರು , ಪುರೋಹಿತರ ಹಿಂದೆ ಭರತ ಹೋಗುತ್ತಾನೆ. ಗುರುವಸಿಷ್ಠರನ್ನು ನೋಡಿ ಭಾರದ್ವಾಜರು ಆಸನದಿಂದ ಎದ್ದರು, ಏಳುವಾಗಲೇ ವಸಿಷ್ಠರನ್ನು ಸ್ವಾಗತಿಸಬೇಕಿದೆ ಅರ್ಘ್ಯ ಇತ್ಯಾದಿ ಪರಿಕರಗಳನ್ನು ತನ್ನಿ ಎಂದರು. ಭರದ್ವಾಜರು ಮತ್ತು ವಸಿಷ್ಠರು ಸೇರಿದರು. ಭರತ ನಮಸ್ಕರಿಸುತ್ತಾನೆ ಭರದ್ವಾಜರಿಗೆ , ಅವರಿಗೆ ಗೊತ್ತಾಯಿತು ಈತ ದಶರಥನ ಮಗ ಎಂದು. ಆದರೆ ಯಾರಿಗಾಗಿ ರಾಮ ರಾಜ್ಯವನ್ನು ಬಿಟ್ಟು ವನವಾಸಕ್ಕೆ ಬಂದನೋ ಆತನೇ ಇವನು , ಭರತನಾಗಿರಬಹುದು ಎನ್ನುವ ಭಾವ ಆಗಲೇ ಭರದ್ವಾಜರಿಗೆ ಬಂದಿತ್ತು. ವಸಿಷ್ಠರಿಗೂ, ಭರತನಿಗೂ ಅವರ ಗೌರವಕ್ಕೆ ತಕ್ಕಂತೆ ಪಾದ್ಯವನ್ನು , ಅರ್ಘ್ಯವನ್ನು , ಹಣ್ಣುಹಂಪಲುಗಳನ್ನು ಕೊಟ್ಟು ಆತಿಥ್ಯಮಾಡಿದರು. ಅಯೋಧ್ಯೆ, ಸೇನೆ, ಕೋಶ, ಕೋಸಲಮಿತ್ರರು, ಮಂತ್ರಿಗಳು ಕ್ಷೇಮವೇ? ಎಂದು ಎಲ್ಲವನ್ನೂ ಕೇಳಿದರು, ಆದರೆ ದಶರಥನ ಬಗ್ಗೆ ಕೇಳಲೇ ಇಲ್ಲ. ದಶರಥನ ಅವಸನದ ಪರಿಜ್ಞಾನ ಇದ್ದಿದ್ದರಿಂದ ಆತನ ಬಗ್ಗೆ ಕೇಳಲೇ ಇಲ್ಲ. ಆಗ ವಸಿಷ್ಠರು ಹಾಗೂ ಭರತರಿಬ್ಬರೂ ಸೇರಿ ಹೇಳಿದರು ; ಅಯೋಧ್ಯೆಯಲ್ಲಿ ಎಲ್ಲವೂ ಕ್ಷೇಮ. ಹಾಗೆಯೇ ಅವರಿಬ್ಬರೂ ಭರದ್ವಾಜರ ಕ್ಷೇಮವನ್ನೂ ಕೇಳಿದರು. ಶರೀರದಬಗ್ಗೆ, ಯಜ್ಞಯಾಗದಿಗಳ ಬಗ್ಗೆ, ಶಿಷ್ಯರು, ವೃಕ್ಷಗಳು , ಮೃಗಪಕ್ಷಿಗಳ ಕ್ಷೇಮಸಮಾಚಾರವನ್ನು ಕೇಳಿದರು. ಭರದ್ವಾಜರು ಹೇಳುತ್ತಾರೆ; ಅವೆಲ್ಲವೂ ಕ್ಷೇಮವಾಗಿದೆ.

ರಾಮನ ಮೇಲಿನ ಪ್ರೇಮದಿಂದ ಭರದ್ವಾಜರು ಭರತನನ್ನು ಪ್ರಶ್ನಿಸುತ್ತಾರೆ. ಭರತ ನೀನು ಇಲ್ಲಿಗೆ ಅದೂ ಈ ಕಾಡಿಗೆ ಏಕೆ ಬಂದೆ? ರಾಜ್ಯವನ್ನಾಳುವವನಿಗೆ ಇಲ್ಲೇನು ಕೆಲಸ? ಏನನ್ನೂ ಮರೆಮಾಚದೇ ಎಲ್ಲವನ್ನೂ ಹೇಳಬೇಕು. ನಿನ್ನನ್ನು ಈ ಸಮಯದಲ್ಲಿ ಇಲ್ಲಿ ನೋಡಿ ನನಗೆ ಸಮಾಧಾನ ಇಲ್ಲ, ತಿಳಿಯಾದ ನನ್ನ ಮನಸ್ಸು ಕದಡಿದೆ. ನೇರವಾಗಿ ಕೇಳಿದರು; ಕೌಸಲ್ಯೆಯು ಯಾವ ವಿಜಯೀವೀರನನ್ನು , ಲೋಕದ ಆನಂದ ವರ್ಧನನನ್ನು ಪ್ರಸವಿಸಿದಳೋ , ಯಾವನನ್ನು ಅಕಾರಣವಾಗಿ ಪತ್ನಿಯೊಡನೆ ಕಾಡಿಗೆ ಕಳುಹಿಸಲಾಯಿತೋ ಅದು ಹೇಗೆ? ರಾಮನಿಗೆ ದಶರಥನ ಆದೇಶ, ಆತನಿಗೆ ಕೈಕೇಯಿಯ ಆದೇಶ ಹೀಗೆ ಹೋಗಿದ್ದು ಕಾಡಿಗೆ. ರಾಮನಿಗೆ ಕಾಡಿಗೆ ಹೋಗುವುದಾಗಿ ಮಂತ್ರಿಯೋ, ಸೇನಾಪತಿಯೋ ಹೇಳಿದ್ದಾ? ಯಾವುದೂ ಅಲ್ಲ. ಕಾಡಿಗೆ ಹೋಗು ಎಂಬ ತಂದೆಯ ಮಾತಿಗೆ ಬದ್ಧನಾಗಿ ತನ್ನ ಪತ್ನಿಯೊಡನೆ ಹದಿನಾಲ್ಕು ವರ್ಷಗಳ ಕಾಲ ಕಾಡಿಗೆ ಹೋದನೋ ಅಂತಹ ರಾಮ ಪಾಪವಿಲ್ಲದವನು, ಕೇಡರಿಯದವನು, ಯಾರಿಗೂ ಕೇಡು ಬಯಸದ ರಾಮನಿಗೆ ಕೇಡು ಬಗೆಯಲು ಹೊರಟೆಯಾ ನೀನು? ನೀನು ಅಧಿಪತಿಯಾಗಿ ಶಾಶ್ವತವಾಗಿ ಮೆರೆಯುವುದಕ್ಕೆ ರಾಮನೇ ಕಂಟಕ ಎನ್ನುವ ಭಾವದಲ್ಲಿ, ಆ ಕಂಟಕವನ್ನು ಕಿತ್ತೊಗೆಯಬೇಕು ಎನ್ನುವ ದೃಷ್ಟಿಯಿಂದ, ರಾಮನನ್ನು ಪೀಡಿಸುವುದರ ಸಲುವಾಗಿ, ಕೊಲ್ಲುವಸಲುವಾಗಿ ಕಾಡಿಗೆ ಹೊರಟೆಯಾ? ಎಂದು ಕಠೋರವಾಗಿ ಕೇಳುತ್ತಾರೆ ಭರದ್ವಾಜರು.

ಆಗ ಭರತನಿಗೆ ಕಣ್ತುಂಬ ನೀರುಬಂತು, ಮಾತೇ ಬರಲಿಲ್ಲ, ಗಂಟಲು ಒಣಗಿತು. ತೊದಲು ಮಾತಿನಲ್ಲಿ ಭರತ ಹೇಳಿದ; ಸತ್ತೆ ನಾನು. ನನಗಿನ್ನು ಬದುಕು ಉಂಟೇ? ಭಗವಾನ್ ಸ್ವರೂಪರಾದ ನೀವೂ ನನ್ನನ್ನು ಶಂಕಿಸಿದರೆ ನಾನು ಸತ್ತೆ. ನಾನು ಕೇಡಿಯಲ್ಲ, ನನ್ನಿಂದ ಯಾರಿಗೂ ಕೇಡಾಗದು. ತಾವು ನನಗೆ ಹೀಗೆನ್ನ ಬಾರದು. ನನ್ನ ಅಮ್ಮ ನಾನಿಲ್ಲದ ಸಮಯದಲ್ಲಿ ಯಾವ ವರಗಳನ್ನು ಕೇಳಿದಳೋ , ಯಾವ ಕೆಲಸವನ್ನು ಮಾಡಿದ್ದಳೋ ನನಗದು ಇಷ್ಟವಲ್ಲ. ಅಮ್ಮ ಮಾಡಿದ ಕಾರ್ಯದಿಂದ ನನಗೆ ಯಾವ ಸಂತೋಷವೂ ಆಗ್ಲಿಲ್ಲ, ನಾನು ಅಮ್ಮನ ಮಾತನ್ನು ಸ್ವೀಕಾರಮಾಡಿಲ್ಲ, ತಿರಸ್ಕರಿಸಿದ್ದೇನೆ. ಇಂತವನು ನಾನು. ನಾನು ಕೆಡುಕನಲ್ಲ , ನನ್ನನ್ನು ಅರಿತುಕೊಳ್ಳಿ , ದಯವಿಟ್ಟು ಪ್ರಸನ್ನರಾಗಿ. ನನಗೆ ಒಂದು ತೊಟ್ಟು ನೀರು ಕೂಡಾ ಬೇಡ ಅಯೋಧ್ಯಾಧಿಪತಿ ರಾಮ ಎಲ್ಲಿದ್ದಾನೆ ಹೇಳಿ ಗುರುಗಳೇ ಎಂದು ಕೇಳಿದ. ಭರದ್ವಾಜರು ಹೇಳಲಿಲ್ಲ. ಹೇಗೆಲ್ಲಾ ಅಂಗಲಾಚಿ ಬೇಡಿದರೂ ಹೇಳಲೇ ಇಲ್ಲ ಏಕೆಂದರೆ ಮುಂದೇನು ಆದೀತೋ ಎಂದು ಏನನ್ನೂ ಹೇಳಲಿಲ್ಲ ಭರದ್ವಾಜರು.

ಹಾಗಾದರೆ ಮುಂದೇನಾಯಿತು?
ಮೊದಲು ಯಾರು ಶಂಕಿಸಿದರೋ ಅವರು ಸಹಾಯಕ್ಕೆ ಬಂದರು. ಭರದ್ವಾಜರಲ್ಲಿ ಭರತನ ಬದಲು ವಸಿಷ್ಠರು ಬಂದು ಕೇಳಿದರು ಅಲ್ಲದೇ ಅಷ್ಟಗುರುಗಳು , ಬ್ರಾಹ್ಮಣೋತ್ತಮರು ಅವರೆಲ್ಲರೂ ಹೋಗಿ ಯಾಚಿಸುತ್ತಾರೆ. ಆಗ ಭರದ್ವಾಜರು ಪ್ರಸನ್ನರಾಗಿ ಹೇಳಿದರು. ನೀನು ಇಂತವನು ಎಂದರೆ ಸರಿ. ಸೂರ್ಯವಂಶದವರು ಕೇಡಿಗಳಾಗಬಾರದು. ನಿನ್ನ ಗುರುವೃತ್ತಿ, ಇಂದ್ರೀಯ ನಿಗ್ರಹ , ಸಾಧು ಸತ್ಪುರುಷರ ಅನುಸರಣೆ ಈ ಮೂರು ಗುಣಗಳು ಸೂರ್ಯವಂಶಕ್ಕೆ ಸಲ್ಲುವಂತದ್ದು. ನಿನ್ನ ಮನಸಲ್ಲಿ ಕೆಡುಕಿಲ್ಲಯೆಂದು ಗೊತ್ತು. ಆದರೆ ಖಾತರಿಗೊಳಿಸುವುದಕ್ಕಾಗಿ ಕೇಳಿದ್ದು. ಸೀತಾಲಕ್ಷ್ಮಣರೊಡಗೂಡಿದ ರಾಮನು ಚಿತ್ರಕೂಟದಲ್ಲಿ ಇದ್ದಾನೆ ಎನ್ನುವಾಗಲೇ ಭರತ ಹೊರಟಾಗಿತ್ತು. ಆಗ ಭರದ್ವಾಜರು ನಿಲ್ಲು ನಿಲ್ಲು, ಈಗಲೇ ಹೋಗುವ ಹಾಗಿಲ್ಲ. ನಾಳೆ ಹೋಗು. ನಿನ್ನ ಮಂತ್ರಿ , ಗುರುಗಳೊಡನೆ ಇಲ್ಲಿಯೇ ಇದ್ದು ನಾಳೆ ಹೋಗು ಇದು ನನ್ನ ಅಪೇಕ್ಷೆ ಎಂದಾಗ ಬೇರೆ ದಾರಿಯೇ ಇಲ್ಲದೆ ಅಲ್ಲಿಯೇ ಉಳಿಯುವುದಾಗಿ ನಿಶ್ಚಯಮಾಡಿದ. ಭರದ್ವಾಜರು ಮುಂದಿನ ಪ್ರಸ್ತಾಪವನ್ನು ಇಟ್ಟರು. ಭರತ ಅಪರೂಪದ ಅತಿಥಿ ನೀನು, ನಿನಗೆ ಆತಿಥ್ಯ ಮಾಡಬೇಕಲ್ಲಾ ಎಂದಾಗ ಭರತ ಆಯಿತಲ್ಲಾ ಎಂದ. ಕಾಡಿನಲ್ಲಿ ಏನು ಆತಿಥ್ಯ ಮಾಡಬಹುದೋ ಅದನ್ನು ನೀವು ಮಾಡಿದ್ದೀರಿ ಎನ್ನುವಾಗ ಭರದ್ವಾಜರು ನಗು ನಗುತ್ತಾ ಹೇಳಿದರು; ನೀನು ಏನನ್ನು ಕೊಟ್ಟರೂ, ಕೊಡದಿದ್ದರೂ ಸಂತೋಷಪಡುತ್ತೀಯ. ನಿನ್ನ ಸಂತೋಷಕ್ಕಲ್ಲ ನನ್ನ ಸಂತೋಷಕ್ಕೆ ಎಂದು ಭಾವಿಸು. ದೊಡ್ದ ಆತಿಥ್ಯವನ್ನು ನಿನಗೆ ನೀಡಬೇಕಿದೆ ಎಂದರು. ನಿನ್ನ ಸೇನೆಗೆ ನಾನು ಆತಿಥ್ಯ ಮಾಡಬೇಕು. ಯಾಕೆ ಸೇನೆಯನ್ನು ದೂರದಲ್ಲೇ ಬಿಟ್ಟುಬಂದೆ ಎಂದು ಪ್ರಶ್ನಿಸಿದರು. ನಿಮ್ಮ ಭಯದಿಂದಾಗಿ ಸೇನೆಯನ್ನು ಅಲ್ಲಿಯೇ ಬಿಟ್ಟು ಬಂದೆ ಎಂದ ಭರತ. ಕಾರಣಗಳೂ ಇವೆ, ಅದು ರಾಜಧರ್ಮ. ರಾಜನಾಗಲೀ, ರಾಜಪುತ್ರನಾಗಲೀ ತಪಸ್ವಿಗಳ ಆಶ್ರಮಕ್ಕೆ ಬರುವಾಗ ಸೇನಾಸಮೇತರಾಗಿ ಬರಬಾರದು. ಅದೆಲ್ಲವನ್ನೂ ದೂರ ಇಟ್ಟು ಬರಬೇಕು.

ಉತ್ತಮೋತ್ತಮವಾದ ಕುದುರೆಗಳು, ಆನೆಗಳು, ಯೋಧರು ಇವೆಲ್ಲಾ ಭೂಮಿಯನ್ನು ಮುಚ್ಚಿವೆ, ಭೂಮಿಯು ಕಾಣುವುದಿಲ್ಲ. ಸೇನೆಯನ್ನು ಇಲ್ಲಿ ತಂದರೆ ಉಪದ್ರವ, ವೃಕ್ಷಗಳು, ನೀರು, ಭೂಮಿ, ಕುಟೀರಗಳು ಹಾಳಾಗಬಹುದು. ಆಶ್ರಮಕ್ಕೆ ಕ್ಲೇಶವಾಗುತ್ತದೆ ಎಂದು ಎಲ್ಲವನ್ನೂ ಬಿಟ್ಟುಬಂದೆ. ಆದರೆ ಭರದ್ವಾಜರು ಬಿಡಲೇ ಇಲ್ಲ. ಸೇನೆಯನ್ನು ಕರೆಸೆಂದು ಒತ್ತಾಯಿಸಿದರು. ಆಗ ಭರತ ಅನಿವಾರ್ಯವಾಗಿ ಸೇನೆಯನ್ನು ಕರೆಸಿದನು.

ಸೇನೆಯನ್ನು ಆತಿಥ್ಯಮಾಡಬೇಕೆಂದು ಭರದ್ವಾಜರು ನೇರವಾಗಿ ಅಗ್ನಿಶಾಲೆಗೆ ಹೋಗಿ ಆಚಮನ ಮಾಡಿದರು. ಆತಿಥ್ಯದ ವ್ಯವಸ್ಥೆಯ ಸಲುವಾಗಿ ದೇವಶಿಲ್ಪಿ ವಿಶ್ವಕರ್ಮನಿಗೆ ಬರುವುದಕ್ಕೆ ಅಪ್ಪಣೆ ಮಾಡುತ್ತಾರೆ. ಲೋಕಪಾಲಕರನ್ನು ಆಹ್ವಾನ ಮಾಡಿದರು. ಬಳಿಕ ಭುವಿಯಲ್ಲಿ, ದಿವಿಯಲ್ಲಿ ನೆಲೆಸಿರುವಂತಹ ನದಿಯ ದೇವತೆಗಳಿಗೆ ಅಪ್ಪಣೆ ಮಾಡುತ್ತಾರೆ, ಬಂದು ಸುರೆಯನ್ನು ಸ್ರವಿಸಿ, ಬಗೆಬಗೆಯ ಪೇಯಗಳನ್ನು ಸುರಿಸಿ, ಕಬ್ಬಿನ ಹಾಲಿನಂತಹ ನೀರನ್ನು ಹರಿಸಿ ಎಂದರು. ದೇವಗಂಧರ್ವರೇ ಬನ್ನಿ. ವಿಶ್ವವಸು ಮತ್ತು ಹಾಹಾ , ಹುಹೂ ಎಂಬ ಗಂಧರ್ವರು. ಹಾಗೆಯೇ ಅಪ್ಸರೆಯರು, ಇಂದ್ರ ಮತ್ತು ಬ್ರಹ್ಮನನ್ನು ಸೇವೆಮಾಡುವಂತಹ ನಾರಿಯರು ನೃತ್ಯ , ಗೀತೆಗಳಿಗೆ ಬೇಕಾದಂತಹ ಎಲ್ಲಾ ಪರಿಕರಗಳನ್ನು ತೆಗೆದುಕೊಂಡು ಬನ್ನಿ. ಉತ್ತರಕುರು ಎನ್ನುವಂತಹ ದಿವ್ಯದೇಶ. ಅಲ್ಲಿ ಅದ್ಭುತವಾದ ವನವಿದೆ. ಅಲ್ಲಿನ ವೃಕ್ಷಗಳಿಗೆ ಒಳ್ಳೆಯ ವಸ್ತ್ರ, ಆಭರಣಗಳೇ ಎಲೆಗಳು ಹಾಗೂ ದಿವ್ಯನಾರಿಯರು ಫಲ, ಆ ವನವೇ ಇಲ್ಲಿ ಬರಲಿ ಎಂದರು. ಭಗವಾನ್ ಚಂದ್ರ ಅನ್ನ, ಭಕ್ಷ್ಯ, ಭೋಜ್ಯ ಇತ್ಯಾದಿಗಳನ್ನು ಸೃಷ್ಠಿಮಾಡಲಿ. ಬಗೆ ಬಗೆಯ ಹೂವು , ಮಾಲೆ, ಪೇಯ ಬರಬೇಕು ಎಂಬುದಾಗಿ ಅಪ್ರತಿಮರಾಗಿ ಅವೆಲ್ಲವನ್ನೂ ಉಚ್ಚರಿಸಿದರು. ವೇದಾಕ್ಷರವನ್ನು ಹೇಳಬೇಕಾದ ರೀತಿಯಲ್ಲಿ ಹೇಳಿದರೆ ಅಲ್ಲಿಯೇ ಅದಕ್ಕೆ ಫಲವಿದೆ. ಯಾವ ಕ್ಷಣದಲ್ಲಿ ಪೂರ್ವಾಭಿಮುಖವಾಗಿ, ಧ್ಯಾನಮಾಡಿ , ಶಿಕ್ಷಾಸ್ವರಸಮಾಯುಕ್ತರಾಗಿ ಉಚ್ಚರಿಸಿದರೋ ಆಗಲೇ ದೇವತೆಗಳು ಬಂದರು. ಪರಿಣಾಮಗಳು ಪ್ರಾರಂಭವಾಯಿತು. ಮಲೆಯಾ ಮತ್ತು ದರ್ದುರಾ ಎಂಬ ಎರಡು ಪರ್ವತಗಳು ಅವುಗಳ ಗಾಳಿ ಪರಿಮಳಯುಕ್ತವಾಗಿರುತ್ತದೆ. ಆ ಗಾಳಿಯೂ ಬೀಸತೊಡಗಿತು, ಹೂವುಗಳ ಮಳೆ ಬಂತು, ಎಲ್ಲಾ ಕಡೆಗಳಿಂದ ದಿವ್ಯದುಂದುಭಿಯ ನಾದ ಕೇಳಿಬಂತು. ಅಪ್ಸರೆಯರು ನರ್ತಿಸಿದರು, ದೇವಗಂಧರ್ವರು ಗಾಯನ ಮಾಡಿದರು, ವೀಣೆಗಳು ಮಿಡಿದವು ಆ ಶಬ್ದ ಸಕಲಜೀವಿಗಳ ಹೃದಯವನ್ನು ತುಂಬಿತು. ಆ ನಾದವು ಶಾಂತವಾಗುತ್ತಿರುವಂತೆಯೇ ಭರತನ ಸೇನೆಯು ಅದ್ಭುತವನ್ನು ಕಂಡಿತು. ವಿಶ್ವಕರ್ಮನ ವಿಧಾನ, ಸೃಷ್ಟಿ. ಅವರು ನೋಡುತ್ತಿದ್ದಂತೆಯೇ ಐದು ಯೋಜನದಷ್ಟು ದೂರ ಭೂಮಿ ಸಮತಲವಾಯಿತು. ಅಲ್ಲಿ ಹುಲ್ಲು ಚಿಗುರಿತು, ಬಿಲ್ವ, ಬೇಲ, ಹಲಸು , ದಾಳಿಂಬೆ , ನೆಲ್ಲಿ , ಮಾವು ಇತ್ಯಾದಿ ಮರಗಳು ಕಂಡಿತು. ಉತ್ತರಕುರುವಿನಿಂದ ಚೈತ್ರವನ ಬಂತು, ದಿವ್ಯ ನದಿಯೂ ಪ್ರಕಟವಾಯಿತು. ಚೌಕದ ಕೈಸಾಲೆಗಳು ಇದ್ದಕ್ಕಿದ್ದ ಹಾಗೆಯೇ ಪ್ರಕಟವಾದವು, ಗಜಶಾಲೆ, ಅಶ್ವಶಾಲೆಗಳು ಸಾಕ್ಷಾತ್ಕಾರಗೊಂಡವು, ದೊಡ್ಡ ದೊಡ್ಡ ಭವನಗಳು ಪ್ರತ್ಯಕ್ಷಗೊಂಡವು, ತಳಿರು ತೋರಣಗಳು ಪ್ರಕಟವಾಯಿತು. ಬೆಳ್ಳಿಮೋಡದಂತೆ ಕಂಗೊಳಿಸುವ ಒಂದು ರಾಜಭವನ ಅದಕ್ಕೊಂದು ಚಂದದ ತೋರಣ, ಬೇರೆ ಬೇರೆ ಪುಷ್ಪಗಳ ಮಾಲೆ ಇವೆಲ್ಲಾ ದಿವ್ಯಗಂಧವನ್ನು ಸೂಸುತ್ತಿತ್ತು. ಪರಿಮಳಭರಿತವಾಗಿತ್ತು ಆ ರಾಜಭವನ. ಅಲ್ಲಿ ಶಯನ, ಆಸನ, ಯಾನ, ಪಲ್ಲಕ್ಕಿಗಳು ಇದ್ದವು. ದಿವ್ಯ ವಸ್ತ್ರಗಳು, ದಿವ್ಯ ಭೋಜನ, ಮೃಷ್ಟಾನ್ನ , ಬಿಸಿ ಬಿಸಿಯಾದ ಊಟ ತಯಾರಿತ್ತು. ನಿರ್ಮಲವಾದ ಪಾತ್ರೆಗಳು ತಯಾರಿತ್ತು.

ಭರದ್ವಾಜರ ಅಪ್ಪಣೆಯ ಮೇರೆಗೆ ರಾಜಭವನವನ್ನು ಭರತ ಪ್ರವೇಶಮಾಡುತ್ತಾನೆ. ಭರತನ ಹಿಂದೆ ಮಂತ್ರಿಗಳು, ಪುರೋಹಿತರು ಬಂದರು. ಅವರು ಅತ್ಯಾಶ್ಚರ್ಯ ಪಟ್ಟರು ಹಾಗೂ ಸಂತೋಷಗೊಂಡರು. ಅಲ್ಲಿ ಉನ್ನತೋನ್ನತವಾದ ರಾಜ ಸಿಂಹಾಸನ ರಾರಾಜಿಸುತ್ತಿತ್ತು, ಪಕ್ಕದಲ್ಲಿ ವ್ಯಜನ ಮತ್ತು ಛತ್ರ ಇತ್ತು. ಭರತ ಮಂತ್ರಿಗಳ ಜೊತೆ ಅಲ್ಲಿಗೆ ತೆರಳಿದ, ರಾಜನಂತೆ ಗೋಚರಿಸಿದ. ಸಿಂಹಾಸನದ ಕಡೆಗೆ ಸಾಗಿ ತಲುಪಿದ, ಆಸನವನ್ನು ಪೂಜಿಸಿದ, ಆಸನದಲ್ಲಿ ರಾಮನನ್ನು ಭಾವಿಸಿ ಪ್ರಣಾಮಿಸಿದ. ಬಳಿಕ ವ್ಯಜನವನ್ನು ತೆಗೆದುಕೊಂಡು ಸಚಿವಾಸನದಲ್ಲಿ ಕೂತು ಚಾಮರವನ್ನು ಬೀಸಲಾರಂಭಿಸಿದ. ನಂತರ ಮಂತ್ರಿಗಳು, ಸೇನಾಧಿಪತಿ ಇನ್ನಿತರು ಕ್ರಮವಾಗಿ ಅವರವರ ಸ್ಥಾನದಲ್ಲಿ ಕುಳಿತರು. ಭರದ್ವಾಜರ ಕೌತುಕ ಆಗ ಪ್ರಾರಂಭವಾಯಿತು. ಅತ್ಯದ್ಭುತವಾದ ಆತಿಥ್ಯ ಪ್ರಾರಂಭವಾಯಿತು. ಮೊದಲಿಗೆ ಒಂದು ನದಿ ಬಂತು, ಅದು ಎಂತದ್ದು? ಅದು ಪಾಯಸವನ್ನೇ ಕೆಸರಾಗಿ ಉಳ್ಳ ನದಿ. ಇಂತಹ ಸ್ವರ್ಗವನ್ನೂ ಮೀರಿಸುವ ಆತಿಥ್ಯವೊಂದು ಅಲ್ಲಿ ಪ್ರಾರಂಭವಾಯಿತು.
ಮುಂದೇನಾಯಿತು ಎಂದು ಮುಂದಿನ ಪ್ರವಚನದಲ್ಲಿ ತಿಳಿಯೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments