ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಆಕಳ ಬಳಿಗೆ ಅದರ ಕರುವು ಓಡೋಡಿ ಬರುವಂತೆ ಭರತನು ರಾಮನ ಬಳಿಗೆ ಓಡೋಡಿ ಬಂದಿದ್ದಾನೆ. ಶ್ರೀರಾಮನು ಅಯೋಧ್ಯೆಯಿಂದ ಚಿತ್ರಕೂಟಕ್ಕೆ ಬಂದವನು, ಭರತನು ಕೇಕಯದಿಂದ ಚಿತ್ರಕೂಟಕ್ಕೆ ಬಂದವನು. ಕೇಕಯದಿಂದ ಅಯೋಧ್ಯೆ, ಅಯೋಧ್ಯೆಯಿಂದ ಚಿತ್ರಕೂಟ. ಬಹುದೂರದ ಪ್ರಯಾಣ. ಅಷ್ಟು ದೂರದಿಂದ ಬಂದಿದಾನೆ ಭರತ, ರಾಮನ ಮುಂದೆ ಬಿದ್ದುಬಿಟ್ಟಿದ್ದಾನೆ. ಮುಖವೆಲ್ಲ ಬೆವರಿದೆ. ಅಣ್ಣ ಎಂಬ ಒಂದು ಬಾರಿಯ ಆಕ್ರಂದನದ ಹೊರತು ಬೇರೇನೂ ಬಾಯಿಂದ ಹೊರಡುತ್ತಿಲ್ಲ, ಮಾತು ಬರುತ್ತಿಲ್ಲ. ದೈನ್ಯಾವಸ್ಥೆ ಭರತನದ್ದು. ರಾಮನಿಗೆ ಹೇಗಾಗಿರಬೇಡ, ಏಕೆಂದರೆ ಭರತನ ಕುರಿತಾದ ರಾಮನ ಪ್ರೀತಿ ಅದು ಪ್ರಾಮಾಣಿಕವಾದದ್ದು. ಅದು ತೋರಿಕೆಯ ಪ್ರೀತಿಯಲ್ಲ. ನಿಜವಾದ ಪ್ರೀತಿ. ಬಹುಕಾಲದ ಬಳಿಕ ಭರತನನ್ನು ರಾಮ ಕಾಣ್ತಾ ಇದಾನೆ. ಆದರೆ ಅವನು ಬಂದು ಬಿದ್ದ ರೀತಿ ಯಾರಿಗಾದರೂ ಒಂದು ಕ್ಷಣ ದಿಗಿಲನ್ನು ಹುಟ್ಟಿಸುವಂಥದ್ದು. ಏತನ್ಮಧ್ಯೆ ಶತ್ರುಘ್ನನೂ ಬಂದು ರಾಮನಿಗೆ ನಮಸ್ಕರಿಸಿದ್ದಾನೆ. ಕಣ್ಣೀರಿಡುತ್ತಾ ರಾಮನ ಚರಣವಂದನೆಯನ್ನು ಮಾಡಿದ್ದಾನೆ. ಅವರಿಬ್ಬರನ್ನೂ ಎಬ್ಬಿಸಿ, ಸ್ವಲ್ಪ ಮುಂದೆ ಬಿದ್ದ ಭರತ, ಕಾಲ ಬಳಿಯಲ್ಲಿ ಬಾಗಿದ ಶತ್ರುಘ್ನ ಇಬ್ಬರನ್ನೂ ಎಬ್ಬಿಸಿ ರಾಮ ಬರಸೆಳೆದು ತಬ್ಬಿಕೊಂಡಿದ್ದಾನೆ. ರಾಮನ ಕಣ್ಣಲ್ಲೂ ನೀರು. ತನ್ನ ತಮ್ಮಂದಿರ ಸಲುವಾಗಿ ರಾಮನಲ್ಲಿಯೂ ಕೂಡ ಅಶ್ರುಧಾರೆ. ಹೀಗೆ ಭರತ-ಶತ್ರುಘ್ನರು ರಾಮ-ಲಕ್ಷ್ಮಣರ ಜೊತೆ ಸೇರಿದರು. ಭರತ ಹೋಗಿ ರಾಮನನ್ನು ಸೇರಿದ.

ಸೀಮೆಯನು ಮುಟ್ಟಿತಲ ಬಾಂಧವ್ಯ ಸೌಂದರ್ಯ ಎಂಬುದಾಗಿ ಕನ್ನಡದ ಕಗ್ಗದ ಕವಿ ವರ್ಣಿಸಿದ್ದಾರೆ. ಬಾಂಧವ್ಯಕ್ಕೆ ಚರಮಸೀಮೆಯದು. ಇನ್ನೂ ಹತ್ತಿರದ ಬಾಂಧವ್ಯ ಇರಲು ಸಾಧ್ಯವಿಲ್ಲ. ಬಂಧುಗಳ ಮಧ್ಯೆ ಇನ್ನಷ್ಟು ಪ್ರೀತಿ ಅಂತ ಇರಲಿಕ್ಕೆ ಸಾಧ್ಯ ಇಲ್ಲ. ಕೊನೆಯ ಸೀಮೆ. ಸೀಮೆಯನು ಮುಟ್ಟಿತಲ ಬಾಂಧವ್ಯ ಸೌಂದರ್ಯ ಕ್ಷೇಮವದು ಜೀವಕ್ಕೆ. ಯಾವ ಜೀವಕ್ಕಾದರೂ ಕ್ಷೇಮವಾಗಬೇಕು ಎಂದಾದರೆ ಇಂತಹದ್ದೊಂದು ಬಾಂಧವ್ಯ ಇರಬೇಕು. ಮಧ್ಯ ಅಂತರವೇ ಇಲ್ಲ ಎನ್ನುವಷ್ಟು ನಿಕಟವಾಗಿರತಕ್ಕಂತಹ ಬಾಂಧವ್ಯ, ಅದು ಜೀವಕ್ಕೆ ಹಿತ.

ಅದರ ಬಳಿಕ ಸುಮಂತ್ರ ಮತ್ತು ಗುಹ ಅಲ್ಲಿದ್ದಾರೆ. ಭರತ, ಶತ್ರುಘ್ನರ ಹಿಂದಿನಿಂದ ಸುಮಂತ್ರ ಮತ್ತು ಗುಹ. ಅವರಿಬ್ಬರ ಜೊತೆಗೆ ರಾಮ ಲಕ್ಷ್ಮಣರು ಸೇರುತ್ತಿದ್ದಾರೆ. ಅದು ಹೇಗಿದೆಯೆಂದರೆ ಗಗನಾಂಗಣದಲ್ಲಿ ಸೂರ್ಯ ಚಂದ್ರರ ಜೊತೆ ಶುಕ್ರ ಬೃಹಸ್ಪತಿಗಳು ಸೇರಿದಂತೆ. ಸೂರ್ಯ ಚಂದ್ರರು ಪ್ರಜ್ವಲಿಸುವಂತಹ ಆಕಾಶಕಾಯಗಳು , ಭೂಮಿಯಿಂದ ನೋಡುವಾಗ ಅವೆರಡೂ ಅತ್ಯಂತ ಪ್ರಜ್ವಲಿಸುವಂತಹ ಆಕಾಶಕಾಯಗಳು. ಹಾಗೇ ಗುರು ಮತ್ತು ಶುಕ್ರರೂ ಕೂಡ ಪ್ರಜ್ವಲಿಸುವ ಆಕಾಶಕಾಯಗಳೇ. ಸೂರ್ಯಚಂದ್ರರಷ್ಟಲ್ಲ ಆದರೂ ಕೂಡ ಅಲ್ಲಿಯೂ ತೇಜಸ್ಸಿದೆ. ಹಾಗೆ ಗುಹ ಸುಮಂತ್ರರಲ್ಲಿಯೂ ತೇಜಸ್ಸಿದೆ. ಅತಿಶಯವಾದ ತೇಜಸ್ಸು ರಾಮ ಲಕ್ಷ್ಮಣರಲ್ಲಿದೆ. ಹಾಗೆ ಅವರಿಬ್ಬರು ಕೂಡ ಬಂದು ರಾಮ ಲಕ್ಷ್ಮಣರನ್ನು ಸೇರುತ್ತಾರೆ. ಆ ನಾಲ್ವರು ಸಹೋದರರು ಸೇರಿದ್ದನ್ನು ಕಂಡಾಗ ಕಾಡಿನಲ್ಲಿ ವಾಸಮಾಡುವ ಜೀವಗಳೂ ಕಣ್ಣೀರಿಟ್ಟವು. ಮೃಗಪಕ್ಷಿಗಳೂ ಕೂಡ… ಅವುಗಳಿಗೆ ಏನರ್ಥವಾಯಿತೋ ಬಿಟ್ಟಿತೋ ಆದರೆ ಕಣ್ಣೀರಿಟ್ಟಿದ್ದಂತೂ ಸತ್ಯ. ಆ ಸಮಾಗಮವನ್ನು ಕಂಡು, ರಾಮ ಲಕ್ಷ್ಮಣ ಭರತ ಶತ್ರುಘ್ನರ ಸಮಾಗಮವನ್ನು ರಾಮ ಭರತರ ಸಮಾಗಮವನ್ನು ಕಂಡು ಕಾಡು ಅತ್ತಿತು. ರಾಮ ಭರತನನ್ನು ನೋಡುತ್ತಿದ್ದಾನೆ ಗುರುತು ಸಿಗಲಿಲ್ಲ ಮೊದಲು. ಯಾಕೆಂದರೆ ಭರತ ಈಗ ಬರುವ ಎಂದು ರಾಮನಿಗೆ ಗೊತ್ತಿದೆ ಲಕ್ಷ್ಮಣ ನೋಡಿ ಹೇಳಿದ್ದಾನೆ. ಭರತನ ಸೈನ್ಯ ಬರುತ್ತಿದೆ, ಭರತನೂ ಬರುತ್ತಿದ್ದಾನೆ ಎಂದು. ಭರತ ಬರುವ ನಿರೀಕ್ಷೆ ರಾಮನಿಗಿದೆ. ಭರತನ ಭಾವದ ನಿರೀಕ್ಷೆ ಕೂಡ ರಾಮನಿಗಿದೆ. ಭರತನ ಮನಸ್ಸೇನು? ಭರತನ ಭಾವ ಏನು? ಎಂಬುದು ರಾಮನಿಗೆ ಗೊತ್ತು. ಆದರೆ ಅವನ ಈ ರೂಪ ಹೊಸರೂಪ. ಜಟೆಯನ್ನು ಧಾರಣೆ ಮಾಡಿದ್ದಾನೆ ಭರತ. ರಾಮನಿಗೆ ಆ ನಿರೀಕ್ಷೆ ಇಲ್ಲ. ಬಂದರೂ ಕೂಡ ರಾಜಕುಮಾರ ಭರತ, ಯುವರಾಜ ಭರತ ಕಿರೀಟಧಾರಣೆ ಮಾಡಿ ಬರಬೇಕು ಅವನು. ಸರ್ವಾಭರಣಭೂಷಿತನಾಗಿ ಬರಬೇಕು. ಆದರೆ ರಾಮ ಕಂಡ ಭರತ ಅದು ಜಟಿಲ ಜಟಾಧಾರಿ, ತನ್ನಹಾಗೇ ನಾರುಡೆಯನ್ನು ಉಟ್ಟಿದಾನೆ, ವನವಾಸದ ಆದೇಶ ಭರತನಿಗೇನು ಆಗಿಲ್ಲ ತಾನೆ.? ರಾಮನಿಗಾಗಿರುವಂಥದ್ದು. ಆದರೆ ರಾಮ ಕಂಡ ಭರತ ನಾರುಡಿಯನ್ನು ಉಟ್ಟವನು, ಮೃಗಚರ್ಮವನ್ನು ಹೊದ್ದವನು, ಜಟೆಯನ್ನು ಧಾರಣೆ ಮಾಡಿರುವಂಥವನು. ಇದೊಂದು ಕಾರಣ ಅವನ ವೇಷ. ಇನ್ನೊಂದು ರೂಪ. ಬಣ್ಣವೇ ಮಾಸಿದೆ.

ಒಂದು ತಿಂಗಳಾಗಿರಬಹುದು ಭರತನಿಗೆ ದುಃಸ್ವಪ್ನ ಬಿದ್ದು. ಏಕೆಂದರೆ ಏಳೆಂಟು ದಿನದ ಪ್ರಯಾಣ ರಾಜಗೃಹದಿಂದ ಅಯೋಧ್ಯೆಗೆ, ಹದಿನೈದು ದಿನದ ಕಾರ್ಯಕ್ರಮವಿದೆ ಅಲ್ಲಿ. ಅಪ್ಪನ ಅಂತ್ಯಕಾರ್ಯ, ಅಲ್ಲಿಂದ ಸ್ವಲ್ಪ ತಯಾರಿ, ಮತ್ತೆ ಅಲ್ಲಿಂದ ಚಿತ್ರಕೂಟಕ್ಕೆ ಪ್ರಯಾಣ. ಹತ್ತಿರತ್ತಿರ ಒಂದು ತಿಂಗಳು. ಒಂದು ತಿಂಗಳಿನಲ್ಲಿ ಭರತ ಇಳಿದು ಹೋಗಿದ್ದಾನೆ. ಮಾಗಿ ಹೋಗಿದ್ದಾನೆ. ಹದಿನಾಲ್ಕು ವರ್ಷಕ್ಕೆ ಹೇಗಾಗಬಹುದು? ಹದಿನಾಲ್ಕು ವರ್ಷದ ಬಳಿಕ ಪೂರ್ತಿ ಋಷಿಯಾಗಿಬಿಟ್ಟಿದ್ದನಂತೆ ಭರತ. ಸಂಪೂರ್ಣ ಋಷಿಗಳು ಹೇಗಿರ್ತಾರೋ ಹಾಗಾಗಿಬಿಟ್ಟಿದ್ದ ಭರತ ಅಂತ ರಾಮಾಯಣ ವರ್ಣನೆ ಮಾಡುತ್ತದೆ. ಬ್ರಹ್ಮರ್ಷಿ ತೇಜಸ್ಸು ಬಂದಿತ್ತು ಅವನಿಗೆ. ಹಾಗಾಗಿ ಅಂತಹ ಭರತನನ್ನು ರಾಮ ಹೇಗೋ ಗುರುತಿಸಿದ. ಸರಳವಾಗಿ ಗುರುತಿಸಲಿಕ್ಕೆ ಸಾಧ್ಯವಾಗಲಿಲ್ಲ. ಸೀದಾಸೀದ ಭರತ ಅಂತ ಗುರುತಿಸಲು ಸಾಧ್ಯವಾಗುವಂತಿರಲಿಲ್ಲ. ಏಕೆಂದರೆ ವೇಷ ಬೇರೆಯಾಗಿದೆ, ಬಣ್ಣ ಮಾಸಿದೆ, ದೇಹ ಸೊರಗಿದೆ. ಮುಖದಲ್ಲಿ ಎಂದಿನ ಕಳೆಯಿಲ್ಲ. ಪ್ರಳಯಕಾಲ ಬಂದಾಗ ಸ್ಥಾನಚ್ಯುತನಾಗಿ ಪತನಗೊಳ್ಳುವ ಭಾಸ್ಕರನಂತೆ ಕಂಡುಬಂದ ಭರತ ಆ ಸಮಯದಲ್ಲಿ. ಭರತನನ್ನು ರಾಮನ ಬಾಹುಗಳು ಸ್ವಾಗತಿಸಿದವು. ತನ್ನ ನೀಳಬಾಹುಗಳನ್ನು ನೀಡಿ ಭರತನನ್ನು ಬಳಿಗೆ ಬರಮಾಡಿಕೊಂಡಿದ್ದಾನೆ ರಾಮ. ಅವನ ನೆತ್ತಿಯನ್ನು ಆಘ್ರಾಣಿಸಿದ. ಬಲವಾಗಿ ತಬ್ಬಿದಾನೆ. ಚಿಕ್ಕ ಮಕ್ಕಳು ಹೇಗೋ ಹಾಗೆ ಭರತನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡಿದ್ದಾನೆ. ಏನಾದರೂ ಒಂದು ಚೂರು ಬೇರೆಯಿದ್ದರೆ, ಬಾಂಧವ್ಯದಲ್ಲಿ ಅಂತರ ಇದ್ದರೆ ಹೀಗಿರಲಿಕ್ಕೆ ಸಾಧ್ಯವಿಲ್ಲ. ಮಡಿಲಲ್ಲಿ ಕೂರಿಸಿಕೊಂಡು ವಿಸ್ತಾರವಾಗಿ ಕೇಳ್ತಾನೆ. ಕೇಳುವುದಕ್ಕೆ ರಾಮನಿಗೆ ಬಹಳ ಇದೆ. ತಂದೆ ತಾಯಂದಿರು ಹೇಗಿದಾರೆ? ಅವನಿಗೇನೂ ಗೊತ್ತಿಲ್ಲ ಇನ್ನು. ನಾಡು ಹೇಗಿದೆ ಎಲ್ಲ ಕೇಳಬೇಕು ರಾಮನಿಗೆ. ಒಂದೊಂದಾಗಿ ಕೇಳ್ತಾನೆ ರಾಮ. ಎಲ್ಲಿ ನಿನ್ನ ತಂದೆ? ಕಾಡಿಗೆ ಬಂದುಬಿಟ್ಟೆಯಲ್ಲ. ತಂದೆ ಬದುಕಿದ್ದರೆ ನೀನು ಹೀಗೆ ಕಾಡಿಗೆ ಬರುವ ಸಾಧ್ಯತೆಯಿಲ್ಲ. ತೊಂದರೆಯಾಯಿತ ಏನಾದರೂ? ತಂದೆ ಇದ್ದರೆ ತಂದೆಯ ಸೇವೆ ಮಾಡುವ ಸಲುವಾಗಿ ನೀನು ಅಲ್ಲಿರಬೇಕಾಗಿತ್ತು.ಇಲ್ಲಿ ಬಂದೆಯಲ್ಲ, ಏನು ಕಥೆ? ಅದೇನೇ ಇರಲಿ ಬಹುಕಾಲದ ಬಳಿಕ ಭರತನನ್ನು ಕಾಣುತ್ತಿದ್ದಾನೆ. ಅಯೋಧ್ಯೆಯಿಂದ ಬಹಳ ಮೊದಲೆ ರಾಜಗೃಹಕ್ಕೆ ಹೋದವನು ಆಗಿನಿಂದಲೆ ರಾಮ ನೋಡಿಲ್ಲ ಭರತನನ್ನು. ಭರತ ಬಂದಿದ್ದು ಬಹಳ ದೂರದಿಂದ, ಕಾಲವೂ ದೂರ, ದೇಶವೂ ದೂರ. ಗುರುತು ಸಿಗಲಿಲ್ಲವಲ್ಲ ನಿನ್ನದು. ಹೀಗೇಕಾದೆ ಎಂದು ಕೇಳಿ ಕಾಡಿಗೇಕೆ ಬಂದೆ? ದೊರೆ ಬದುಕಿರುವನೇ? ಅಥವಾ ಶೋಕದ ಫಲವಾಗಿ ದೊರೆ ಈ ಲೋಕವನ್ನು ಬಿಟ್ಟು ಆ ಲೋಕಕ್ಕೆ ಹೋದನೇ? ಯಾವುದೋ ಪಿತೂರಿಯಿಂದ ಅಯೋಧ್ಯೆ ನಿನ್ನ ಕೈತಪ್ಪಿ ಹೋಯಿತೇ? ತಂದೆಯ ಶುಶ್ರೂಷೆಯನ್ನು ಸರಿಯಾಗಿ ಮಾಡಬೇಕು ಭರತ, ಸರಿಯಾಗಿ ಮಾಡುತ್ತಿರುವೆಯಲ್ಲ? ತಂದೆಯ ಆರೋಗ್ಯ ಹೇಗಿದೆ? ಧರ್ಮದಲ್ಲಿ ದೃಢನಿಶ್ಚಯವುಳ್ಳ ನಮ್ಮ ತಂದೆಯು ಕ್ಷೇಮವೇ? ಇಕ್ಷ್ವಾಕು ಕುಲದ ಗುರು ವಸಿಷ್ಠರು ಅವರನ್ನು ನಮ್ಮ ಪೂರ್ವಜರು ಹೇಗೆ ಪೂಜಿಸಿಕೊಂಡು ಬಂದಿದ್ದರೋ ಹಾಗೆಯೇ ಪೂಜಿಸಿಕೊಂಡು ಹೋಗುತ್ತಿರುವೆಯಲ್ಲ? ತಾಯಂದಿರಾದ ಕೌಸಲ್ಯೆ, ಸುಮಿತ್ರೆಯರು ಹೇಗಿದ್ದಾರೆ? ಕೈಕೇಯಿ ಸುಖಿಯೇ? ಪುರೋಹಿತ ವಸಿಷ್ಠರ ಪುತ್ರ ಸುಯಜ್ಞ, ಪರಮಜ್ಞಾನಿ. ಕುಲಗುರು ಪುತ್ರರಿಗೆ ಸರಿಯಾದ ಸತ್ಕಾರ, ಗೌರವ ಸಲ್ಲುತ್ತಿದೆಯಲ್ಲ? ಅಗ್ನಿಹೋತ್ರಗಳನ್ನು ಕಾಲಕಾಲಕ್ಕೆ ಸರಿಯಾಗಿ ಸುಯಜ್ಞ ನೆರವೇರಿಸಿಕೊಡುತ್ತಿರುವನಲ್ಲ? ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ ರಾಮ.

ಅವನ ಒಂದು ಆಸೆ ಭರತ ಯಶಸ್ವೀ ರಾಜನಾಗಬೇಕೆಂಬುದು. ತಾನಿಲ್ಲದ ಕೊರತೆ ಬಾಧಿಸಬಾರದು. ಇನ್ನೊಂದು, ರಾಜ್ಯದ ಮೇಲಿನ ಕಾಳಜಿ. ದೊರೆ ತಾನಾದರೂ, ಭರತನಾದರೂ ಪ್ರಜೆಗಳಿಗೆ ತೊಂದರೆಯಾಗಬಾರದು ಎಂಬ ಮನಸ್ಥಿತಿ. ಹಾಗಾಗಿ ರಾಜ್ಯದ ಬಗ್ಗೆಯೂ, ರಾಜ್ಯಭಾರದ ಬಗ್ಗೆಯೂ ಕೇಳುತ್ತಿದ್ದಾನೆ. ಭರತ ರಾಮ ಕೇಳುವಷ್ಟು ಕೇಳುವವರೆಗೂ ಕೇಳಿದ. ದೇವತೆಗಳು, ಪಿತೃಗಳು, ಸೇವಕರು, ಗುರುಗಳು, ಪಿತೃಸಮಾನರಾದವರು, ವೃದ್ಧರು, ವೈದ್ಯರು, ಬ್ರಾಹ್ಮಣರನ್ನು ಹೇಗೆ ನೋಡಬೇಕೋ ಹಾಗೆಯೇ ನೋಡುತ್ತಿರುವೆಯಲ್ಲ? ಆಚಾರ್ಯ ಸುಧನ್ವರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿದೆಯಲ್ಲ? ನಿನ್ನದೇ ವಯಸ್ಸಿನ, ತಿಳಿದ, ಶೂರರಾದ, ಜಿತೇಂದ್ರಿಯರಾದ, ಕೇವಲ ಇಂಗಿತದಿಂದ, ಶತ್ರುಗಳ ಚಹರೆ ಮಾತ್ರದಿಂದ ಅವರ ಕಾರ್ಯ ಊಹಿಸಬಲ್ಲ ಮಂತ್ರಿಗಳನ್ನು ಆರಿಸಿರುವೆಯಲ್ಲ? ರಾಜ್ಯಕ್ಕೆ ಮಂತ್ರಿಗಳೊಡನೆಯ ಸಮಾಲೋಚನೆಯೇ ಮುಖ್ಯ. ವಿಜಯದ ಮೂಲ ಮಂತ್ರ. ಕಾರ್ಯಸಿದ್ಧಿಗೆ ಸಮಾಲೋಚನೆ ಮೊದಲಾಗಬೇಕು. ಆ ಸಮಾಲೋಚನೆ ಗುಟ್ಟಾಗಿರಬೇಕು. ಅದು ಹೊರಗೆ ಹೋಗಕೂಡದು. ಭರತ ನಿದ್ರೆಗೆ ವಶನಾಗುತ್ತಿಲ್ಲ ತಾನೇ? ತುಂಬಾ ಎಚ್ಚರಿಕೆ ಬೇಕು. ಏಳುವ ಹೊತ್ತಿಗೇ ಏಳುತ್ತಿದ್ದೀಯ ತಾನೇ? ಅಪರ ರಾತ್ರಿಗಳಲ್ಲಿ ರಾಜ್ಯದ ಹಿತಚಿಂತನೆ ಮಾಡಬೇಕು. ಸಮಾಲೋಚನೆ ಹೇಗೆ ಮಾಡುತ್ತೀಯ ಎನ್ನುವುದೂ ಬಹಳ ಮುಖ್ಯ. ಒಬ್ಬನೇ ತೀರ್ಮಾನ ಮಾಡುತ್ತಿಲ್ಲ ತಾನೆ? ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಕರೆಯಬಾರದು ಸಮಾಲೋಚನೆಗೆ. ನೀನು ತೆಗೆದುಕೊಂಡ ನಿರ್ಧಾರಗಳು ಕಾರ್ಯಗತವಾಗುವ ಮೊದಲೇ ಜನರಿಗೆ ತಿಳಿಯುತ್ತಿಲ್ಲವಲ್ಲ? ಬಂಡವಾಳ ಕಡಿಮೆ ಫಲ ಹೆಚ್ಚು ಇಂತಹ ವಿಷಯಗಳನ್ನು ನಿರ್ಧರಿಸಬೇಕು. ನಿರ್ಧಾರ ಮಾಡಿಯಾದ ಮೇಲೆ ಕಾರ್ಯರೂಪಕ್ಕೆ ತರಲು ವಿಳಂಬ ಮಾಡಬಾರದು. ಅನ್ಯ ರಾಜರಿಗೆ ನಿನ್ನ ಕಾರ್ಯಗಳ ಕುರಿತು ತಿಳಿಯುವುದು ತೊಂದರೆ. ಕೆಲವು ಕಾರ್ಯಗಳು ಮಾಡಿ ಮುಗಿದ ಮೇಲೆಯೇ ತಿಳಿಯುವಂತೆ ನಿರ್ವಹಿಸಬೇಕು.

ಸಾವಿರ ಮೂರ್ಖರಿಗಿಂತ ಒಬ್ಬ ಜ್ಞಾನಿಯ ಸಂಗ ಒಳ್ಳೆಯದು.

ಅರಿತವರನ್ನು ಪಕ್ಕದಲ್ಲಿಟ್ಟುಕೊಳ್ಳಬೇಕು. ಉತ್ತಮರಿಗೆ ಉತ್ತಮ ಕಾರ್ಯ, ಮಧ್ಯಮದವರಿಗೆ ಮಧ್ಯ ಕಾರ್ಯ, ಅಧಮರಿಗೆ (ಸಾಮರ್ಥ್ಯ ಕಡಿಮೆ) ಅಧಮ ಕಾರ್ಯ ಕೊಡಬೇಕು.

ಕಾರ್ಯದ ಯೋಗ್ಯತೆಗೂ, ಕಾರ್ಯಕರ್ತನ ಯೋಗ್ಯತೆಗೂ ತಾಳ ಮೇಳವಿರಬೇಕು.

ಮಂತ್ರಿಗಳು ಉಪಧಾತೀತರಾಗಿರಬೇಕು (ಲಂಚ). ಅವರ ರಕ್ತದಲ್ಲಿ ಆ ಸಂಸ್ಕಾರವಿರಬೇಕು. ದೊರೆಯಾದವನು ದಾರಿ ತಪ್ಪಿದಾಗ ಇದು ಸರಿಯಲ್ಲ ಎನ್ನುವ ಛಾತಿ ಇರಬೇಕು. ನಿನಗೆ ಸಲ್ಲಬೇಕಾದ ಗೌರವ ಸಲ್ಲಿಸುತ್ತಿದ್ದಾರಲ್ಲವೇ?

ಉಪಾಯಕುಶಲನಾದ ವೈದ್ಯ ಹಾಗೂ ಸೇವಕ, ಶೂರನಾಗಿ ನಿನ್ನ ಪದವಿಯ ಮೇಲೆ ಕಣ್ಣಿಟ್ಟವನು.. ಇಂಥವರನ್ನು ಉಳಿಸಬಾರದು. ರಾಜನೀತಿಯಿದು. ಶೂರ, ಬುದ್ಧಿವಂತ, ಶುದ್ಧಹಸ್ತ, ಕುಲೀನ, ನಿನ್ನ ಹಾಗೂ ರಾಜ್ಯದ ಬಗ್ಗೆ ಪ್ರೀತಿಯಿರುವ ದಕ್ಷನನ್ನು ಸೇನಾಪತಿಯನ್ನಾಗಿಸಿರುವೆಯಾ? ಹಿಂದಿನ ಯುದ್ಧಗಳಲ್ಲಿ ಪರಾಕ್ರಮ ಮೆರೆದವರನ್ನು ಕರೆದು ಸಂತೋಷದಿಂದ ಸತ್ಕರಿಸುತ್ತಿರುವೆಯಲ್ಲ? ಸೈನ್ಯಕ್ಕೆ ಸಲ್ಲಬೇಕಾದ ವೇತನ ಸಕಾಲಕ್ಕೆ ಸಲ್ಲಿಸುತ್ತಿದ್ದೀಯಲ್ಲ? ನಿನ್ನವರಿಗೆ ನಿನ್ನ ಮೇಲೆ ಸರಿಯಾದ ಪ್ರೀತಿಯಿದೆತಾನೆ? ದೂತನ ನೇಮಕವಾಗಿದೆಯೆ? ನಮ್ಮ ಚಿಂತನಾಲಹರಿ ತಿಳಿದಿರುವವರು ದೂತರಾಗಿರಬೇಕು. ನಮ್ಮ ದೇಶದವರೇ ಆಗಿರಬೇಕು. ಸಮಯಸ್ಫೂರ್ತಿಯಿರಬೇಕು. ಪಂಡಿತನಾದ ಜ್ಞಾನಿಯಾದ ದೂತನನ್ನು ನೇಮಕ ಮಾಡಿರುವೆಯಲ್ಲ? ಆ ಕಡೆ ಹದಿನೆಂಟು ಜನರಿಗೆ ನಮ್ಮ ಕಡೆ ಹದಿನೈದು ಜನರಿಗೆ ಗುಪ್ತಚಾರರನ್ನು ನೇಮಿಸಬೇಕು. ಶತ್ರುಪಕ್ಷದಲ್ಲಿ ಅವನ ಮಂತ್ರಿ, ಪುರೋಹಿತ, ಯುವರಾಜ, ದೌಹಾಳಿಕ, ಅಂತಃಪುರಾಧ್ಯಕ್ಷ, ಕೋಶಾಧ್ಯಕ್ಷ, ಕಾರ್ಯನಿಯೋಜಕ, ಪ್ರಾಗ್ಮಿವಾಕ್, ಧರ್ಮಾಧ್ಯಕ್ಷ, ಸೇನಾದಾನಾಧ್ಯಕ್ಷ, ವೇತನಗ್ರಾಹಿ, ನಗರಾಧ್ಯಕ್ಷ, ರಾಷ್ಟ್ರಾಂತಪಾಲ, ದಂಡಪಾಲ, ದುರ್ಗಪಾಲ, ಹೀಗೆ ಹದಿನೆಂಟು ಜನರ ಹಿಂದೆ ತಲಾ ಮೂವರು ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಗುಪ್ತಚಾರರು, ತನ್ನ ಪಕ್ಷದಲ್ಲಿ ಮಂತ್ರಿ, ಯುವರಾಜ, ಪುರೋಹಿತ ಈ ಮೂವರನ್ನು ಬಿಟ್ಟು ಹದಿನೈದು ಜನರಿಗೆ. ಒಳಗಿನ ಶತ್ರುಗಳನ್ನು ಉಪೇಕ್ಷಿಸದಿರು, ಬ್ರಾಹ್ಮಣರಲ್ಲಿ ನಾಸ್ತಿಕರನ್ನು ಹತ್ತಿರ ಸೇರಿಸಬೇಡ ಎಂದು ಹೇಳಿ ನಮ್ಮ ಪೂರ್ವಜರು ಬಾಳಿ ಬದುಕಿ ಆಳಿದ ಯುದ್ಧದಿಂದ ಗೆಲ್ಲಲಾಗದ ನಮ್ಮ ನಗರಿ ಅಯೋಧ್ಯೆ ಎಂದು ಹೇಳಿ ಅಯೋಧ್ಯೆಯನ್ನು ವರ್ಣಿಸಿ ಅದನ್ನು ಚೆನ್ನಾಗಿ ರಕ್ಷಿಸುತ್ತಿರುವೆಯಲ್ಲ? ರಾಜಧಾನಿ ಕೋಸಲ ಸುಖವಾಗಿದೆಯಲ್ಲ? ಕೃಷಿ ಮತ್ತು ಗೋಪಾಲನೆ ಮಾಡುವವರಿಗೆ ಆದ್ಯತೆ ನೀಡು. ದೊರೆಯ ಬಗ್ಗೆ ಪ್ರಜೆಗಳಲ್ಲಿ ಒಳ್ಳೆಯ ಚಿತ್ರ ಇರಬೇಕು. ಸೇವಕರು ನೀನು ಕರೆದರೆ ವಿನಯದಿಂದ ಬರುವ ಹಾಗಿರಬೇಕು. ಬೇರೆಬೇರೆ ಕೂಟಗಳಲ್ಲಿ ಧನ, ಧಾನ್ಯ, ಆಯುಧ, ಯಂತ್ರಗಳು, ಶಿಲ್ಪಿಗಳು, ಧನುಷ್ಪಾಣಿಗಳು, ಯಾವಾಗಲೂ ಕೋಟೆಯ ಮೇಲಿರಬೇಕು. ಎಂದು ಹೇಳಿ ಆಯ ವಿಪುಲ ವ್ಯಯ ಅಲ್ಪತರವಿರಬೇಕು. ಅಪಾತ್ರರಿಗೆ ದಾನ ಮಾಡಕೂಡದು. ಅಭ್ಯಾಗತರು, ಯೋಧರು, ವಿಶ್ವಕ್ಷೇಮಕ್ಕಿರುವವರಿಗೆ ಸಲ್ಲಬೇಕು ಎಂದು ಹೇಳಿ ದಂಡನೀತಿಯ ಬಗ್ಗೆ ವಿವರಿಸುತ್ತಾನೆ.

ನಿರಪರಾಧಿಗೆ ದಂಡನೆ ಆಗಕೂಡದು, ಅಪರಾಧಿ ತಪ್ಪಿಸಿಕೊಳ್ಳಬಾರದು.

ಬಡವ ಶ್ರೀಮಂತರ ನಡುವಿನ ಪ್ರಕರಣದಲ್ಲಿ ನ್ಯಾಯಾಧೀಶರು ಶ್ರೀಮಂತರಿಂದ ಪ್ರಭಾವಿತರಾಗಿ ತಪ್ಪು ತೀರ್ಪು ನೀಡುತ್ತಿಲ್ಲವಲ್ಲ? ನಿರಪರಾಧಿಗಳು ಕಣ್ಣೀರಿಡದಂತೆ ನೋಡಿಕೋ. ಬಾಲರಿಗೆ, ವೃದ್ಧರಿಗೆ ಯಾವ ರೀತಿ ಉಪಚರಿಸಬೇಕು ಹಾಗೆ ಉಪಚರಿಸುತ್ತಿರುವೆಯಲ್ಲ? ಧರ್ಮದಿಂದ ಅರ್ಥವನ್ನು, ಅಥವಾ ಅರ್ಥದಿಂದ ಧರ್ಮವನ್ನು ಬಾಧಿಸಬೇಡ. ಎಲ್ಲಕ್ಕಿಂತ ಮುಖ್ಯವಾಗಿ ಸುಖಲೋಭಕ್ಕೆ ವಶವಾಗಿ ಧರ್ಮ ಅರ್ಥವನ್ನು ಕಳೆದುಕೊಳ್ಳಬಾರದು. ನಾಸ್ತಿಕ್ಯ, ಸುಳ್ಳು, ಕ್ರೋಧ, ಪ್ರಮತ್ತತೆ, ವಿಳಂಬಪ್ರವೃತ್ತಿ, ತಿಳಿದವರನ್ನು ನೋಡದಿರುವುದು, ಇಂದ್ರಿಯ ಲಂಪಟತನ, ಆಲಸ್ಯ, ಅಯೋಗ್ಯರೊಂದಿಗೆ ಮಂತ್ರಾಲೋಚನೆ ಇವುಗಳನ್ನು ಮಾಡಕೂಡದು. ಮಂಗಲಮಯ ಸಂಗತಿಗಳನ್ನು ಮಾಡುತ್ತಿರಬೇಕು.

ಮುಂದಾಲೋಚನೆ ಮಾಡಿ ನಿರ್ಧಾರ ಮಾಡಿದ ಕಾರ್ಯ ಮಾಡಲು ನಿಧಾನಿಸಬಾರದು, ಒಂದೇ ಸಾರಿ ಎಲ್ಲರ ಮೇಲೂ ಯುದ್ಧ ಮಾಡಕೂಡದು, ರಾಜನಾದವನು ಅಯೋಗ್ಯರು ಬಂದಾಗ ಎದ್ದು ನಿಲ್ಲಕೂಡದು.
ಈ ಹದಿನಾಲ್ಕು ರಾಜದೋಷಗಳನ್ನು ವರ್ಜಿಸಬೇಕು.

ದಶವರ್ಗ, ಪಂಚವರ್ಗ, ಚತುರ್ವರ್ಗ, ಸಪ್ತವರ್ಗ, ಅಷ್ಟವರ್ಗ, ತ್ರಿವರ್ಗ, ವಿದ್ಯಾತ್ರಯ, ಇಂದ್ರಿಯಜಯ, ಷಾಡ್ಗುಣ್ಯ, ದೈವಮಾನುಷ, ವಿಂಶತಿವರ್ಗ, ಕೃತ್ಯ, ಪ್ರಕೃತಿಮಂಡಲ, ಯಾತ್ರಾದಂಡವಿಧಾನ, ಸಂಧಿವಿಗ್ರಹ ಇದೆಲ್ಲವನ್ನೂ ಸರಿಯಾಗಿ ನೋಡುತ್ತಿರುವೆಯಲ್ಲ ಎಂದು ಕೇಳುತ್ತಾನೆ. ದಶವರ್ಗ ಎಂದರೆ ರಾಜ ತ್ಯಜಿಸಬೇಕಾದ ದಶದೋಷಗಳು, ಪಂಚವರ್ಗ ಎಂದರೆ ಪಂಚದುರ್ಗ ರಾಜ್ಯಕ್ಕಿರಬೇಕಾದ ಐದು ದುರ್ಗಗಳು, ಮತ್ತು ಐದು ಬಗೆಯ ವೈರಗಳು, ಚತುರ್ವರ್ಗ ಎಂದರೆ ಸಾಮ, ದಾನ, ಭೇದ,ದಂಡ. ನಾಲ್ಕುಬಗೆಯ ಮಿತ್ರರು, ನಾಲ್ಕು ಬಗೆಯ ಹಣಕಾಸು ವ್ಯವಸ್ಥೆ, ಸಪ್ತವರ್ಗ ಎಂದರೆ ಸಪ್ತಾಂಗಗಳು, ರಾಜ, ಮಂತ್ರಿ, ರಾಷ್ಟ್ರ, ಕೋಟೆ, ಕೋಶ, ಸೈನ್ಯ ಮತ್ತು ಮಿತ್ರರು. ಅಷ್ಟವರ್ಗ ಎಂದರೆ ಬಿಡಬೇಕಾದ ಎಂಟು ಸಂಗತಿಗಳು ಇತರರಲ್ಲಿ ದೋಷಾರೋಪಣೆ, ದುಡುಕು, ದ್ರೋಹ, ಅಪಕಾರ, ಹೊಟ್ಟೆಕ್ಕಿಚ್ಚು, ವಾಗ್ದಂಡ, ಕಠೋರ ಕೃತಿ ಇವನ್ನೆಲ್ಲ ಬಿಡಬೇಕು.
ಅಷ್ಟವರ್ಗದಲ್ಲಿ ಇನ್ನೊಂದು ಕೃಷಿ ಮತ್ತು ವಾಣಿಜ್ಯ ಲೋಪ ಮಾಡಬಾರದು.
ತ್ರಿವರ್ಗ ಎಂದರೆ ಧರ್ಮ, ಅರ್ಥ, ಕಾಮ. ಮೂರು ವಿದ್ಯೆಗಳು ತ್ರಯೀ, ವಾರ್ತಾ, ದಂಡನೀತಿ. ಷಾಡ್ಗುಣ್ಯ ಎಂದರೆ ಆರು ಗುಣಗಳು ಸಂಧಿ, ವಿಗ್ರಹ, ಯಾನ, ಆಸನ, ದ್ವೈದಿಭಾವ, ಸಮಾಶ್ರಯ. ಎರಡು ಬಗೆಯ ವ್ಯಸನಗಳು ಬರಬಹುದು ಒಂದು ದೈವವ್ಯಸನ, ಇನ್ನೊಂದು ಮಾನುಷ ವ್ಯಸನ.
ಕೃತ್ಯ ಎಂದರೆ ಬೇಧನೀತಿ, ವಿಂಶತಿವರ್ಗ ಎಂದರೆ ಬಾಲ, ವೃದ್ಧ, ದೀರ್ಘರೋಗಿ, ಬಂಧುಗಳಿಂದ ದೂರಾಗಿದ್ದರೆ, ಪುಕ್ಕಲ, ಭೀರು ಪರಿವಾರ, ಲೋಭಿ, ವಿಷಯಸುಖಾಭಿಲಾಷಿ, ಅಸ್ಥಿರಬುದ್ಧಿ, ದೇವ ಬ್ರಾಹ್ಮಣ ನಿಂದಕ, ದುರದೃಷ್ಟಶಾಲಿ, ದೈವವನ್ನೇ ನಂಬಿ ಪ್ರಯತ್ನ ಕೈಬಿಟ್ಟವನು, ದುರ್ಭಿಕ್ಷ, ಸೈನ್ಯದಲ್ಲಿ ಒಗ್ಗಟ್ಟಿಲ್ಲ, ದೇಶಾಂತರದಲ್ಲಿರುವ ದೊರೆ ಹಾಗೂ ಶತ್ರುಗಳು ಬಹಳ, ಸತ್ಯ-ಧರ್ಮ ಬಿಟ್ಟವರು ಇವರನ್ನು ಸ್ವಾಧೀನಪಡಿಸಿಕೊಳ್ಳಬೇಕು.

ಪರರಾಜ್ಯ, ಪರಸ್ತ್ರೀ, ಪರಾಧಿಕಾರ, ಪರಧನ, ಪರದೇಶ, ಪರಬಂಧು, ಪರಸ್ಥಾನ ಇವುಗಳನ್ನು ಅಪಹರಿಸಿದವನು, ಅಮಲಿನವನು, ವಿಷಯಲೋಲುಪ, ಮಿತ್ರಾಪಮಾನ ಮಾಡುವವನು, ದಯಾಶೂನ್ಯ, ಪಾಪದ ಬಗ್ಗೆ ಹಠವುಳ್ಳವನು, ಜ್ಞಾನ, ಶಕ್ತಿ, ದೈವ, ಅರ್ಥ, ಧರ್ಮವನ್ನು ವಿರೋಧಿಸುವವರು ಇವರೊಂದಿಗೆ ಸಂಧಿ ಮಾಡಿಕೊಳ್ಳಬಾರದು. ಪಂಚಪ್ರಕೃತಿ ಎಂದರೆ ಮಂತ್ರಿ, ರಾಷ್ಟ್ರ, ದುರ್ಗ, ಭಂಡಾರ, ಸೇನೆ. ದ್ವಾದಶಮಂಡಲ ಎಂದರೆ ಹನ್ನೆರಡು ಬಗೆಯ ರಾಜರನ್ನು ಕೂಡಿಕೊಂಡು ಯುದ್ಧಮಾಡಬೇಕು. ದಂಡವಿಧಾನ ಎಂದರೆ ಸೈನ್ಯದ ವ್ಯವಸ್ಥೆ, ಸಂಧಿ ವಿಗ್ರಹ ಎಂದರೆ ಯಾವ ಸಮಯದಲ್ಲಿ ಸಂಧಿ ಮಾಡಿಕೊಳ್ಳಬೇಕು ಯಾವಾಗ ಮಾಡಬಾರದು. ಮಂತ್ರಿಗಳ ಜೊತೆ ಸಮಾಲೋಚನೆ. ಯಾವುದನ್ನು ಯಾರೊಡನೆ ಸಮಾಲೋಚಿಸಬೇಕು ಎಂದು ತಿಳಿದು ಮಾಡಬೇಕು ಎಂದು ಈ ರೀತಿಯಾಗಿ ರಾಜನೀತಿಯನ್ನು ಭರತನಿಗೆ ಹೇಳಿ ವೇದಾಧ್ಯಯನ ಸಂಪನ್ನ ನೀನು ಅಧ್ಯಯನ ಮಾಡಿದ ವಿದ್ಯೆ ಸಾರ್ಥಕವಾಗುತ್ತಿದೆಯಲ್ಲವೇ? ಅನೇಕ ಬಗೆಯ ಕರ್ಮನಿಪುಣ ನೀನು; ಆ ಕರ್ಮಗಳೆಲ್ಲ ಸಫಲವಾಗುತ್ತಿವೆ ಅಲ್ಲವೇ? ಗೃಹಸ್ಥಾಶ್ರಮ ಸಫಲವಾಗುತ್ತಿದೆ ತಾನೆ? ವೇದಸಾಫಲ್ಯ, ಕ್ರಿಯಾಸಾಫಲ್ಯ, ಗೃಹಸ್ಥಾಶ್ರಮ ಸಾಫಲ್ಯ, ಶೃತಸಾಫಲ್ಯ ಈ ನಾಲ್ಕು ಬಗೆಯ ಸಾಫಲ್ಯಗಳನ್ನು ಪ್ರಶ್ನಿಸಿ, ಇದೇ ರೀತಿಯಾಗಿ ನಿನ್ನ ಬುದ್ಧಿ ಇದೆಯಲ್ಲವೇ? ಯಾವ ವೃತ್ತಿಯನ್ನು ನಮ್ಮ ತಂದೆ ಹಾಗೂ ಪೂರ್ವಜರು ಆಶ್ರಯಿಸಿದ್ದರೋ ಅದೇ ಸದ್ವೃತ್ತಿಯನ್ನು ಆಶ್ರಯಿಸಿರುವೆ ತಾನೇ ಎಂದು ಕೇಳಿ ರುಚಿಯಾದದ್ದು ಸಿಕ್ಕಿದಾಗ ಹಂಚಿ ತಿನ್ನುತ್ತಿರುವೆಯಲ್ಲ? ಉತ್ತಮವಾದದ್ದು ಒಂದು ಸಿಕ್ಕಿದಾಗ ಅದನ್ನು ಹಂಚಬೇಕು ಅದು ಧರ್ಮ ಹೀಗೇ ನಡೆದುಕೊಳ್ಳುತ್ತಿರುವೆಯಲ್ಲ ಎಂದು ಹೇಳುತ್ತಾನೆ.

ಇಷ್ಟೆಲ್ಲ ಕೇಳುವಾಗ ರಾಮನಲ್ಲಿ ಯಾವುದೇ ಅಸೂಯೆಯಿಲ್ಲ. ಭರತನ ಕುರಿತಾದ ಕಾಳಜಿ ಅದು. ಕೊನೆಯದಾಗಿ, ರಾಜನು ಮಹಾಮತಿಯಾಗಿ, ದಂಡಧರನಾಗಿ ಈ ರೀತಿಯಲ್ಲಿ ರಾಜ್ಯವನ್ನು ಧರ್ಮದಿಂದ ಪಾಲಿಸಿದರೆ ಭೂಮಿಯೂ ಸ್ವರ್ಗವಾಗುತ್ತದೆ ಹಾಗೂ ಗತಿಸಿದ ಬಳಿಕ ಅವನಿಗೂ ಸ್ವರ್ಗ ಸಿದ್ಧಿಸುತ್ತದೆ ಇದು ರಾಜನೀತಿ ಹೀಗೇ ರಾಜ್ಯ ಆಳುತ್ತಿರುವೆಯಲ್ಲವೇ? ಎಂದು ಕೇಳಿದಾಗ ಭರತ ಒಂದೇ ವಾಕ್ಯದಲ್ಲಿ ಸೂಕ್ತ ಉತ್ತರ ನೀಡುತ್ತಾನೆ. ಏನದು? ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments