ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಧರ್ಮಕ್ಕೆ ಧರ್ಮವೇ ಮೂಲ. ಅಧರ್ಮದಿಂದ ಧರ್ಮ ಜನಿಸದು , ಧರ್ಮದಿಂದ ಅಧರ್ಮವೂ ಜನಿಸದು. ತುಳಸಿ ಗಿಡದ ಬೀಜದಿಂದ ಕಳ್ಳಿ ಗಿಡ ಹುಟ್ಟಲು ಸಾಧ್ಯವಿಲ್ಲ. ಕಳ್ಳಿ ಗಿಡದ ಹಾಗೆ ತುಳಸಿಗಿಡ ಇರಲು ಸಾಧ್ಯವಿಲ್ಲ. ಹಾಗೆಯೇ ಅಧರ್ಮ ಕಾರ್ಯವೊಂದನ್ನು ಮಾಡಿ ಅದರಿಂದ ಧರ್ಮ ಸಾಧನೆ ಮಾಡಲು ಸಾಧ್ಯವಿಲ್ಲ. ರಾಮನ ಸುದೀರ್ಘ ಪ್ರಶ್ನೆಗೆ ಭರತನ ಏಕಾಂಶ ಉತ್ತರದ ಸಾರಾಂಶವಿದು. ಭರತನ ಮಾತು; ಧರ್ಮವನ್ನೇ ನಾನು ಕಳೆದುಕೊಂಡಮೇಲೆ ರಾಜಧರ್ಮ ನನಗೆ ಮಾಡುವುದಾದರೂ ಏನು? ಇಕ್ಷ್ವಾಕು ಕುಲದಲ್ಲಿ ಜ್ಯೇಷ್ಠ ಪುತ್ರನು ರಾಜನಾಗುವಂತದ್ದು. ಈಗ ನಾನು ರಾಜನಾಗಬೇಕು ಎಂದಾದರೆ ನಮ್ಮ ಕುಲಧರ್ಮವನ್ನು ನಾಶ ಮಾಡಿಯೇ ರಾಜನಾಗಬೇಕು. ಅಣ್ಣನಾಗಿ , ಸಮರ್ಥನಾಗಿ ನೀನು ಇರುವಾಗ ನಾನು ರಾಜನಾದರೆ ನಮ್ಮ ಕುಲಧರ್ಮಕ್ಕೆ ಹಾನಿಯಾಗುತ್ತದೆ. ಆ ಧರ್ಮಕ್ಕೆ ಹಾನಿಯದಮೇಲೆ ರಾಜಧರ್ಮ ನನಗೆ ಮಾಡುವುದಾದರೂ ಏನು? ಕುಲಧರ್ಮವನ್ನು ಹಾಳುಮಾಡಿದ ಪಾಪದಿಂದಾಗಿ ಧರ್ಮ ಹುಟ್ಟಲಿಕ್ಕೆ ಸಾಧ್ಯವೇ? ಸಾಧ್ಯವಿಲ್ಲ.

ಬೀಜ ಮುಖ್ಯ. ತೆಂಗಿನ ಬೀಜದಿಂದ ತೆಂಗಿನಮರ, ಮಾವಿನ ಬೀಜದಿಂದ ಮಾವಿನಮರವೇ ಹುಟ್ಟಬೇಕು. ಹಾಗೆಯೇ ಭರತನಿಗೆ ರಾಜ್ಯ ಪ್ರಾಪ್ತಿಯಾಗುವುದಲ್ಲಾ ಅದರ ಬೀಜ ಅಧರ್ಮವಾಗಿದ್ದರೆ ಮುಂದೆ ಧರ್ಮವು ಉಂಟಾಗಲಿಕ್ಕೆ ಹೇಗೆ ಸಾಧ್ಯ?ಎನ್ನುವ ಒಂದೇ ಮಾತಿನಿಂದ ರಾಮನ ಸಹಸ್ರ ಪ್ರಶ್ನೆಗಳಿಗೆ ಭರತ ಉತ್ತರ ನೀಡಿದ್ದಾನೆ. ನಮ್ಮ ವಂಶದಲ್ಲಿ ದೊಡ್ಡವನು ಇರಲಾಗಿ ಕಿರಿಯನು ದೊರೆಯಾಗಲಾರ, ದೊರೆಯಾಗಬಾರದು.

ಹೀಗೆ ಹೇಳುವಾಗ ಭರತ ರಾಮನನ್ನು ಅಣ್ಣಾ ಅಥವ ರಾಮಾ ಎಂದು ಸಂಭೋದನೆ ಮಾಡಲಿಲ್ಲ ಬದಲಾಗಿ ‘ರಾಜನ್’ ಎಂದು ಸಂಭೋದಿಸಿದ. ಭರತನ ದೃಷ್ಟಿಯಿಂದ ತನ್ನ ಅಣ್ಣ ರಾಮನೇ ದೊರೆ. ಇದರಿಂದ ದೊರೆಯಾಗುವ ಆಸೆ ಭರತನಿಗೆ ಇಲ್ಲ ಎಂಬುದು ತಿಳಿಯುತ್ತದೆ.

‘ದೊರೆಯೇ’ ಎಂದು, ಭರತ ಹೇಳಿದ; ಬಾ ನನ್ನೊಡನೆ, ನೀನಿಲ್ಲದೆ ಬಡವಾದ ಅಯೋಧ್ಯೆಗೆ ಹೋಗೋಣ, ಅಲ್ಲಿ ನೀನು ರಾಜ್ಯಾಭಿಷೇಕಕ್ಕೆ ಒಳಪಡು. ಇದರಿಂದಾಗಿ ನಮ್ಮ ವಂಶ ಉಳಿಯಲಿ ಇಲ್ಲವೇ ನಮ್ಮ ವಂಶಕ್ಕೆ ಉಳಿಗಾಲವಿಲ್ಲ. ರಾಜನನ್ನು ಕೇವಲ ಮನುಷ್ಯ ಎಂದು ಭಾವಿಸುವವರು ಬಹಳ ಮಂದಿ ಇದ್ದಾರೆ ಆದರೆ ನಾನು ಆ ಗುಂಪಿಗೆ ಸೇರಿದವನಲ್ಲ. ನನ್ನ ಪ್ರಕಾರ ರಾಜನು ದೇವರು. ದೇವರೇ ರಾಜನಾಗಬೇಕು ಹೊರತು ನನ್ನಂತ ಮನುಷ್ಯನಲ್ಲ. ನಿನ್ನಂತ ದೇವರು ದೊರೆಯಾಗಬೇಕು. ರಾಜನು ಧರ್ಮಪೂರ್ಣ ಮತ್ತು ಅರ್ಥಪೂರ್ಣ ಎಂದು ಉತ್ತರಿಸಿ ಬಳಿಕ ಒಂದಿಷ್ಟು ವಿದ್ಯಮಾನಗಳನ್ನು ತಿಳಿಸುತ್ತಾನೆ; ನಾನು ಕೇಕಯದಲ್ಲಿರಲಾಗಿ ನೀನು ಅರಣ್ಯಸೇರಿರಲಾಗಿ ಅಯೋಧ್ಯೆಯಲ್ಲಿ ಅನರ್ಥವೊಂದು ಸಂಘಟಿಸಿತು. ನಮ್ಮ ಆರ್ಯನು , ರಾಜ ದಶರಥನು ಸ್ವರ್ಗವನ್ನೇರಿದ. ಯಾವ ದಶರಥನು ಸತ್ಪುರುಷರಿಗೆ ಸನ್ಮತನಾಗಿದ್ದನೋ , ಯಜ್ಞಶೀಲನಾಗಿದ್ದನೋ ಅಂತಹ ನನ್ನ , ನಿನ್ನ ತಂದೆ ದಶರಥನು ದಿವಿಯನ್ನೇರಿದ್ದಾನೆ.

ಹೇಗೆ ಸ್ವರ್ಗವನ್ನು ಸೇರಿದ್ದು? ಯಾವಾಗ? ಎಂದರೆ
ನೀನು ಹೊರಟುಹೋದ ಮಾತ್ರದಿಂದಾಗಿ, ನೀನು ಹೊರಟ ಕೆಲವೇ ಸಮಯದಲ್ಲಿ, ದುಃಖಶೋಕಾಭಿಹೋತನಾಗಿ ದೊರೆಯು ಸ್ವರ್ಗವನ್ನೇರಿದನು. ಹಾಗಾಗಿ ; ಅಣ್ಣಾ ಏಳು , ಹೇ ಪುರುಷಸಿಂಹನೇ ಅಪ್ಪನಿಗೆ ತರ್ಪಣ ನೀಡು. ನಾನು , ಶತ್ರುಘ್ನ ಮೊದಲೇ ತರ್ಪಣ ನೀಡಿದ್ದೇವೆ. ಅದರಿಂದ ನಮ್ಮ ತಂದೆಗೆ ತೃಪ್ತಿಯಾಗಲಿಲ್ಲ ಅದು ನನಗೆ ಗೊತ್ತು. ಏಕೆಂದರೆ ಪ್ರಿಯರಾದವರು ನೀಡಿದ ತರ್ಪಣ, ಅವರು ನೀಡಿದ ಪಿಂಡ ಪಿತೃಗಳಿಗೆ ಅತಿಶಯವಾದ ತೃಪ್ತಿಯನ್ನು ನೀಡುತ್ತದೆ. ನಮ್ಮ ತಂದೆಗೆ ಪ್ರಿಯನಾದವನು ನೀನು ಹಾಗಾಗಿ ನೀನು ತರ್ಪಣ ನೀಡಬೇಕು. ತಂದೆಯ ನಿಧನ ಹೀಗಾಯಿತು ಎಂದು ಇನ್ನೊಂದು ಬಾರಿ ವರ್ಣಿಸಿದ; ನಿನ್ನನ್ನೇ ಕುರಿತು ಶೋಕಿಸುತ್ತಾ, ನಿನ್ನ ದರ್ಶನವನ್ನೇ ಬಯಸಿದವನಾಗಿ, ಬುದ್ದಿ, ಮನಸ್ಸು ಸ್ಥಿರವಾಗಿ ಮತ್ತೆ ಹಿಂದಿರುಗದೇ, ನೀನಿಲ್ಲದ ಶೋಕವೇ ರೋಗವಾಗಿ ಪರಿಣಮಿಸಿ, ನಿನ್ನನ್ನೇ ಎಡಬಿಡದೇ ಸ್ಮರಿಸುತ್ತಾ ನಮ್ಮ ತಂದೆ ಅಸುನೀಗಿದರು.

ದಶರಥ ನಿಧನದಿಂದ ಸರ್ವತ್ರರಾಮಮಯ. ದಶರಥನ ಎಲ್ಲಾ ಭಾವವೂ ರಾಮನಲ್ಲಿ ಹೋಗಿ ನಿಲ್ಲುವಂತದ್ದು. ಆ ದೃಷ್ಟಿಯಿಂದ ದಶರಥ ಧನ್ಯ. ಸಾಯುವಾಗ ಏನನ್ನು ನೆನೆಸುತ್ತಾರೋ ಅದೇ ಆಗುತ್ತಾರೆ. ರಾಮನಲ್ಲಿಯೇ ಅನವರತವೂ ನೆಲೆಸಿ ಅಸ್ತಂಗತನಾದನು ದಶರಥ.

ಈ ಮಾತನ್ನು ಕೇಳಿದಾಗ ರಾಮನಿಗೆ ಮೈಮರೆಯಿತು. “ದುಃಖವಾಗಲಿ , ಸುಖವಾಗಲಿ ಅತಿಶಯವಾದಾಗ ಮೈಮರೆಯುವಂತೆ ಮಾಡುತ್ತದೆ”. ಹೇಗೆ ದಶರಥ ರಾಮನನ್ನು ಪ್ರೀತಿಸುತ್ತಿದ್ದನೋ ಹಾಗೆಯೇ ರಾಮನೂ ದಶರಥನನ್ನು ಪ್ರೀತಿಸುತ್ತಿದ್ದ. ದಶರಥನ ಪ್ರೀತಿಗಿಂತಲೂ ರಾಮನ ಪ್ರೀತಿ ದೊಡ್ಡದು. ಆದರೆ ಅದು ಪ್ರೀತಿ ಮಾತ್ರ ಮೋಹ ಅಲ್ಲ. ವಜ್ರಾಯುಧ ಪ್ರಯೋಗವಾದಂತೆ , ಬುಡಕತ್ತರಿಸಿದ ಮರದಂತೆ ಧರೆಗುರುಳಿದ ರಾಮ. ಸೋದರರೆಲ್ಲರೂ ಸುತ್ತೊರೆದರು. ಕಣ್ಣೀರು ಸುರಿಸುತ್ತಾ ತಣ್ಣೀರು ಸಿಂಪಡಿಸಿದರು , ಸೀತೆಯೂ ಸೇರಿದಳು. ಬಳಿಕ ರಾಮನೂ ಕಣ್ಣೀರಿಟ್ಟು ತಂದೆಯ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ. ಅವನು ಹೇಳಿದ್ದೇನೆಂದರೆ; ಇನ್ನೇನು ಮಾಡಲಿ ನಾನು ಅಯೋಧ್ಯೆಗೆ ಮರಳಿ. ತಂದೆ ಇಲ್ಲದ , ಶೂನ್ಯವಾಗಿರುವ ಅಯೋಧ್ಯೆಗೆ ಮರಳಿ ಏನು ಮಾಡಲಿ? ಆ ರಾಜವರನಿಲ್ಲದ ಅಯೋಧ್ಯೆಯನ್ನು ಇನ್ನು ಪಾಲಿಸುವವರು ಯಾರು? ನಾನೊಬ್ಬ ತಂದೆಗೆ ಸತ್ಪುತ್ರನಾಗಲಿಲ್ಲ, ಸಂಜಾತನಾಗಲಿಲ್ಲ, ದುರ್ಜಾತನಾದೆ ಏಕೆಂದರೆ ನನ್ನ ಶೋಕದಿಂದ ಸಾವಾಯಿತು, ಸಂಸ್ಕಾರ ಮಾಡಲಿಲ್ಲ. ಹಾಗಾಗಿ ನನ್ನಂತಹ ಮಗನಿಂದ ನನ್ನ ತಂದೆ ಪಡೆದುಕೊಂಡಿದ್ದಾದರೂ ಏನು? ಇದೇ ಮಾತನ್ನು ಬೇರೆ ರೀತಿಯಲ್ಲಿ ದಶರಥನು ಹೇಳಿದ್ದ. ಸತ್ಪುತ್ರ ರಾಮನು ನನ್ನ ಒಂದು ಮಾತಿಗೆ ಕಾಡಿಗೆ ಹೋದ. ದುಷ್ಪಿತ ನಾನು, ಅವನನ್ನು ಕಾಡಿಗೆ ಅಟ್ಟಿದೆ, ರಾಜ್ಯವನ್ನು ತಪ್ಪಿಸಿದೆ. ಇತ್ತ ರಾಮನು ಕೂಡಾ ಇದೇ ದಾಟಿಯಲ್ಲಿ ಮಾತನಾಡುತ್ತಿದ್ದಾನೆ. ಅವನೆಂತಹ ತಂದೆ ಎಂದರೆ ನಾನಿಲ್ಲದ ವಿರಹದಲ್ಲಿ ಪ್ರಾಣವನ್ನೇ ಬಿಟ್ಟವನು, ನಾನೆಂತಹ ಮಗನೆಂದರೆ ಆತನಿಗೆ ಬೆಂಕಿಯನ್ನೂ ಇಡಲಿಲ್ಲ, ಅಂತ್ಯಸಂಸ್ಕಾರ ಕೂಡಾ ಮಾಡಲಿಲ್ಲ ಇಂತಹ ಮಗನಾಗಿ ಹೋದೆ ಎಂದು ತನ್ನ ಮೇಲೆ ತಾನೇ ಬೇಸರಿಸಿಕೊಂಡ. ಭರತ, ಶತ್ರುಘ್ನ ನೀವು ಧನ್ಯರು. ಕೊನೆಯಲ್ಲಿ ತಂದೆಯ ಸಂಸ್ಕಾರಮಾಡುವ ಅವಕಾಶ ನಿಮಗೆ ದೊರಕಿತು. ತಂದೆ ಇಲ್ಲದ ಅಯೋಧ್ಯೆಗೆ ಇನ್ನು ಏಕೆ ಹೋಗಬೇಕು? ವನವಾಸ ಮುಗಿದಮೇಲೂ ಅಯೋಧ್ಯೆಗೆ ತೆರಳುವ ಮನಸ್ಸು ನನಗೆ ಬರುತ್ತಿಲ್ಲ. ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಯಾವ ಸಾಂತ್ವನದ ಮಾತು, ಪ್ರೀತಿಯ ಮಾತುಗಳನ್ನು ತಂದೆ ಹೇಳುತ್ತಿದ್ದರೋ ಅದನ್ನು ಹೇಳುವವರು ಯಾರು? ಅಂದೊಂದು ದಿನ ನನ್ನನ್ನು ಮೆಚ್ಚಿ ಹೇಳಿದ , ಕರ್ಣಸುಖಕರವಾದ ಮಾತನ್ನು , ಹೆಮ್ಮೆಯ ಮಾತನ್ನು ಹೇಳುವವರು ಯಾರು? ಹೀಗೆ ಬೇಸರ ವ್ಯಕ್ತಪಡಿಸಿ ಸೀತೆಯನ್ನು ಕರೆದು ಹೇಳಿದ; ಸೀತೆ ನಿನ್ನ ಮಾವ ಇನ್ನಿಲ್ಲ. ಲಕ್ಷ್ಮಣ ನೀನಿನ್ನು ಪಿತೃವಿಹೀನ.

ಭರತನು ದುಃಖದ ಮಾತುಗಳನ್ನು ಆಡಿದನು. ತಂದೆಯು ಸ್ವರ್ಗಕ್ಕೆಸೇರಿದ ಮಾತನ್ನು ಹೇಳಿದಾಗ ಎಲ್ಲರೂ ರೋದಿಸಿದರು. ಅವರಿಗೆ ಪಿತೃವಿಯೋಗದ ಶೋಕ ಮತ್ತು ರಾಮಶೋಕ ಎರಡೂ ಇತ್ತು. ಕೊನೆಗೆ ಎಲ್ಲರೂ ಸೇರಿ ರಾಮನನ್ನು ಸಂತೈಸಿ ರಾಮನಿಗೆ ಹೇಳಿದರು; ಅಣ್ಣಾ ಕರ್ತವ್ಯವಿದೆ ನಿನಗೆ. ತರ್ಪಣ ನೀಡಬೇಕಿದೆ ನೀನು ಎಂದಾಗ ಕೊಂಚ ಕರ್ತವ್ಯಾಭಿಮುಖನಾಗುತ್ತಾನೆ ರಾಮ. ಆದರೆ ಸೀತೆಗಿನ್ನೂ ಸಮಾಧಾನವಾಗಿಲ್ಲ. ತನ್ನ ಮಾವನನ್ನು ಕಳೆದುಕೊಂಡ ದುಃಖ ಹಾಗೂ ತನ್ನ ಪತಿಯ ಸ್ಥಿತಿಯನ್ನು ನೋಡಿ ಕಣ್ಣು ತುಂಬಾ ನೀರು ತುಂಬಿ ಬಂತು. ಸೀತೆಯನ್ನು ಸಂತೈಸಿ , ರಾಮ ಲಕ್ಷ್ಮಣನಿಗೆ ಹೇಳುತ್ತಾನೆ; ತರ್ಪಣ ಕೊಡಲು ಎಲ್ಲವನ್ನೂ ಸಿದ್ಧಗೊಳಿಸು, ತಂದೆಯ ಜಲಕ್ರಿಯೆಗಳನ್ನು ಮಾಡಲು ಮಡಿವಸ್ತ್ರಗಳನ್ನು ಸಿದ್ಧಗೊಳಿಸು. ಸೀತೆ ಮುಂದೆ ಹೋಗಲಿ, ಬಳಿಕ ನೀನು, ನಿನ್ನ ಹಿಂದೆ ನಾನು ಬರುತ್ತೇನೆ. ಪಿತೃಕಾರ್ಯದಲ್ಲಿ ಕಿರಿಯರು ಮುಂದೆ ಹಿರಿಯರು ಹಿಂದೆ ಇರಬೇಕಾಗುತ್ತದೆ. ದಾರುಣವಾದ ಅಂತ್ಯಯಾತ್ರೆ ನಮಗಿದು ಎನ್ನುವಾಗ ಸುಮಂತ್ರ ಬರುತ್ತಾನೆ ರಾಜಕುಮಾರರೊಡನೆ ಸೇರಿ ರಾಮನನ್ನು ಸಂತೈಸಿ ಕೈ ಹಿಡಿದು ಮಂದಾಕಿನಿ ನದಿಗೆ ಇಳಿಸಿದನು. ಸಹೋದರರೆಲ್ಲರೂ ಆ ಮಂಗಳಕರವಾದ ನದಿಯಲ್ಲಿ ತಂದೆಗೆ ತರ್ಪಣ ನೀಡಿದರು. ಶ್ರೀರಾಮ ಮಹಿಪಾಲ, ವರ್ತಮಾನದ ಭೂಪತಿಯು ಗತಿಸಿದ ಭೂಪತಿಗೆ ತರ್ಪಣ ನೀಡಿದನು. ಜಲಪೂರಿತವಾದ ಅಂಜಲಿಯನ್ನು ಕೈಯಲ್ಲಿ ಹಿಡಿದು ದಕ್ಷಿಣದಿಕ್ಕಿಗೆ ಮುಖಮಾಡಿ ಹೇಳಿದ; ಹೇ ರಾಜಶಾರ್ದೂಲನೇ, ರಾಜಸಿಂಹನೇ ನನ್ನಿಂದ ನಿನಗೆ ನೀಡಲ್ಪಡುವ ಈ ವಿಮಲವಾದ ಜಲವು ಪಿತೃಲೋಕವನ್ನು ಸೇರಲಿ ಎಂಬುದಾಗಿ ಹಾರೈಸಿ ತರ್ಪಣವನ್ನಿತ್ತು ಮೇಲೆ ಹತ್ತಿಬಂದು ಸಮಸ್ಥಳದಲ್ಲಿ ಕುಳಿತು ರಾಮನು ತನ್ನ ಸೋದರರೊಡನೆ ತಂದೆಗೆ ಪಿಂಡಪ್ರಧಾನವನ್ನು ಮಾಡುತ್ತಾನೆ. ದರ್ಬೆಹಾಸಿನಲ್ಲಿ ಹಿಪ್ಪೆಕಾಯಿಯ ಹಿಂಡಿಗೆ ಏಲಕ್ಕಿಕಾಯಿಯನ್ನು ಬೆರೆಸಿದ ಪಿಣ್ಯಾಕ ಇದನ್ನು ನೀಡುವಾಗ ರಾಮನಿಗೆ ದುಃಖವಾಯಿತು. ಯಾವತ್ತೂ ಮೃಷ್ಟಾನ್ನವನ್ನು ಸೇವಿಸಿದ ತಂದೆಗೆ ಕಾಡಿನ ಆಹಾರ ನೀಡುವಾಗ ದುಃಖವಾಯಿತು. ನಾವು ಏನನ್ನು ಉಣ್ಣುತ್ತೇವೋ ಅದನ್ನೇ ದೇವರಿಗೂ ಕೊಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಹೀಗೆ ನಾವು ವನದಲ್ಲಿ ಸೇವಿಸುತ್ತಿರುವುದನ್ನೇ ನಿಮಗೂ ನೀಡಬೇಕಾಯಿತು ಎಂದು ಹೇಳಿ ಪಿಂಡವನ್ನು ನೀಡಿ ಮರಳಿ ಬೆಟ್ಟವನ್ನೇರಿ ಪರ್ಣಕುಟೀರಕ್ಕೆ ಬಂದು ತನ್ನ ಸಹೋದರರನ್ನು ಎರಡು ಬಾಹುಗಳಿಂದ ತಬ್ಬಿ ತಂದೆಯನ್ನು ನೆನೆದು ರೋದಿಸಿದ.

ಇತ್ತ ಭರತನ ಸೈನಿಕರು ಗುಡ್ಡದಕೆಳಗೆ ಕಾಯುತ್ತಾ ಇದ್ದಾರೆ. ರೋದನೆಯ ಶಬ್ದ ಅವರಿಗೂ ತಲುಪಿತು. ಅವರಿಗೆ ತಿಳಿಯಿತು ಇದು ರಾಮ ಸಹೋದರರು ತಂದೆಯ ನಿಧನ ಸುದ್ದಿ ತಿಳಿದು ರೋದಿಸುತ್ತಿರುವ ಶಬ್ದ. ಭರತನಿಗೆ ರಾಮಸಿಕ್ಕಾಗಿದೆ ಎಂದು ತಿಳಿದಾಗ ಇವರಿಗೆ ಇನ್ಯಾರ ಅಪ್ಪಣೆಯೂ ಬೇಕಾಗಿಲ್ಲ. ಅಲ್ಲಿಂದ ತಕ್ಷಣವೇ ಧ್ವನಿಬಂದ ಕಡೆಗೆ ಧಾವಿಸಿದರು. “ಲಕ್ಷ ಜನ ಏಕ ಮನ” ಎಲ್ಲರೂ ರಾಮನೆಡೆಗೆ ಧಾವಿಸಿದರು. ರಾಮ ಅಯೋಧ್ಯೆಯಿಂದ ಹೊರಟು ಹೆಚ್ಚು ಕಾಲವಾಗಿಲ್ಲ ಆದರೆ ಪ್ರಜೆಗಳಿಗೆ ಜನ್ಮ ಜನ್ಮಗಳೇ ಕಳೆದು ಹೋದಂತೆ ಆಗಿತ್ತು. ಏಕೆಂದರೆ , ದುಃಖದಲ್ಲಿ ಕ್ಷಣವು ದಿನವಾಗುತ್ತದೆ, ಸುಖದಲ್ಲಿ ದಿನವು ಕ್ಷಣವಾಗುತ್ತದೆ. ಪ್ರಜೆಗಳಿಗೆ ರಾಮಸಹೋದರರು ಹೇಗೆ ಸೇರಿದರು ಎಂದು ತಿಳಿಯುವ ಕಾತುರ, ಹಾಗಾಗಿ ಧಾವಿಸಿದರು ರಾಮನೆಡೆಗೆ ಅದು ಹೇಗಿತ್ತು ಎಂದರೆ , ಗಗನದಲ್ಲಿ ಎರಡು ಮೋಡ ಘಟಿಸಿದಾಗ ಉಂಟಾಗುವ ಶಬ್ದದಹಾಗೆ ದೊಡ್ಡ ಶಬ್ದ ಉಂಟಾಯಿತು. ಶಬ್ದವನ್ನು ಕೇಳಿ ಕಾಡಿನಲ್ಲಿದ್ದ ಆನೆ, ತೋಳ , ಹಂದಿ , ಕಾಡುಕೋಣ , ಸರ್ಪಗಳು, ವಾನರ , ಜಿಂಕೆ ಇತ್ಯಾದಿ ಪ್ರಾಣಿಗಳು ಹೆದರಿ ಕಾಡುಬಿಟ್ಟವು. ಪಕ್ಷಿಗಳು ಹಾರಿಹೋದವು. ಹೀಗೆ ಭೂಮಿಯಲ್ಲಿ ಮನುಷ್ಯ ಸಂಕುಲ , ಗಗನದಲ್ಲಿ ಪಕ್ಷಿ ಸಂಕುಲ ಸಂಭವಿಸಿತು.

ಎಲ್ಲರೂ ರಾಮನಿರುವ ಪರ್ಣಕುಟೀರಕ್ಕೆ ಬರುತ್ತಾರೆ, ರಾಮನು ನೆಲದಲ್ಲಿ ಕುಳಿತಿರುತ್ತಾನೆ. ಒಂದಿಷ್ಟೂ ಕಲ್ಮಶವಿಲ್ಲದವನು, ನಿಷ್ಪಾಪ ರಾಮ ನೆಲದಮೇಲೆ ಕುಳಿತ್ತಿದ್ದನ್ನು ನೋಡಿ ಪ್ರಜೆಗಳು ಕೈಕೆಯಿಗೂ, ಮಂಥರೆಗೂ ಚೆನ್ನಾಗಿ ಬೈದರು. ರಾಮನೆದುರು ಬಂದು ನಿಂತು ಕಣ್ಣೀರಿಟ್ಟರು. ಮಕ್ಕಳಂತೆ ಪೋಷಿಸಿದ ತನ್ನ ಪ್ರಜೆಗಳನ್ನು ನೋಡಿ ರಾಮ ಬಂದು ಒಬ್ಬೊಬ್ಬರನ್ನೂ ತಬ್ಬಿ ಕೊಂಡ. ಪ್ರೀತಿಯಿಂದ, ಪಿತೃವಾತ್ಸಲ್ಯದಿಂದ , ಮಾತೃವಾತ್ಸಲ್ಯದಿಂದ ಪ್ರಜೆಗಳನ್ನು ತಬ್ಬಿದಾಗ ದೊರೆಯಾಗಿ ಕಂಡನು ರಾಮ. ಮೊದಲು ರಾಮ, ಲಕ್ಷ್ಮಣ, ಭರತ, ಶತ್ರುಘ್ನ, ಗುಹ, ಸುಮಂತ್ರ ರೋದಿಸುತ್ತಿದ್ದರು ಈಗ ಅದು ವೃದ್ಧಿಯಾಗಿ ಲಕ್ಷಾಂತರ ಜನರು ರೋದಿಸಿದರು ಹಾಗಾಗಿ ಆ ಪರ್ವತದ ಗುಹೆಗಳು ರೋದನ ಧ್ವನಿಯಲ್ಲಿ ಪ್ರತಿಧ್ವನಿಸಿದವು. ಈ ಮಧ್ಯೆ ರಾಮನ ತಾಯಂದಿರನ್ನು ವಸಿಷ್ಠರು ಕರೆದುಕೊಂಡು ಬರುತ್ತಿದ್ದಾರೆ. ರಾಜಮಾತೆಯರು ಮೆಲ್ಲ ಮೆಲ್ಲನೆ ಬಂದು ಮಂದಾಕಿನಿ ಘಟ್ಟವನ್ನು ತಲುಪಿದಾಗ ಕೌಸಲ್ಯೆಯ ಮುಖಒಣಗಿ, ಕಣ್ಣೀರು ಬಂತು. ಕೌಸಲ್ಯೇ ದೀನಳಾಗಿ ಸುಮಿತ್ರೆಗೆ ಹೇಳಿದಳು; ಇದು ಆ ಅನಾಥರ ತೀರ್ಥಘಟ್ಟ. ಅವರಾದರೋ ಸರಳ ಜೀವಿಗಳು. ನಿನ್ನ ಮಗ ನನ್ನ ಮಗನಿಗಾಗಿ ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾನೆ ನೋಡು. ಇಂದು ಭರತ ಮಾಡುವ ಕಾರ್ಯದಲ್ಲಿ ಯಶಸ್ಸು ದೊರೆತರೆ ನಿನ್ನ ಮಗನಿಗೆ ಚಾಕರಿ ಕೆಲಸ ತಪ್ಪುವುದು ಎಂಬುದಾಗಿ ತಮ್ಮಿಬ್ಬರ ಮಕ್ಕಳ ಬಾಂಧವ್ಯವನ್ನು ನಿರೂಪಣೆ ಮಾಡುತ್ತ ಮುಂದೆ ಸಾಗಿದಾಗ ಪಿಂಡವನ್ನು ಕಂಡಳು. ದೇವಸಮಾನನಾಗಿ ಬದುಕಿದ ರಾಜೋತ್ತಮನಿಗೆ ತನ್ನ ಹಿರಿಯ ಮಗನಿಂದ ಇಂತಹ ಪಿಂಡದಾನವೇ? ಎಂದು ಕಣ್ಣೀರಿಟ್ಟಳು. ಯಾಕೆ ನನ್ನ ಹೃದಯ ಒಡೆದು ಸಾವಿರ ಚೂರಾಗಲಿಲ್ಲ ಇದನ್ನು ಕಂಡು ಎಂದು ರೋದಿಸಿದಳು. ಹಾಗಾಗಿ ವನವಾಸದ ಫಲ ದಶರಥನಿಗೂ ಬಂತು. ಹೀಗೆ ದುಃಖಿತರಾದ ಮಾತೆಯರು ರಾಮಶ್ರಮವನ್ನು ಸೇರಿದರು, ಅಲ್ಲಿ ಸ್ವರ್ಗಲೋಕದಿಂದ ಚ್ಯುತನಾದ ದೇವತೆಯಂತೆ ತೋರಿದನು ರಾಮ. ಮೃಷ್ಟಾನ್ನ ಭೋಜನ, ಉತ್ತಮ ವಸ್ತ್ರಗಳು, ಪರಿಚಾರಕರು ಯಾವುದೂ ಇಲ್ಲದೆ, ಎಲ್ಲಾ ಭೋಗಗಳನ್ನು ತ್ಯಜಿಸಿದ ರಾಮನನ್ನು ನೋಡಿ ಕಣ್ಣೀರಿಟ್ಟರು. ರಾಮಲಕ್ಷ್ಮಣರು ತಮ್ಮ ಎಲ್ಲಾ ತಾಯಂದಿರ ಚರಣಗಿಳಿಗೆ ವಂದಿಸಿದರು, ತಮ್ಮ ಮೃದುಹಸ್ತದಿಂದ ರಾಮಲಕ್ಷ್ಮಣರ ಬೆನ್ನಿನ ಧೂಳನ್ನು ಒರೆಸಿದರು. ಬಳಿಕ ಸೀತೆ ಎಲ್ಲರಿಗೂ ನಮಸ್ಕರಿಸಿ ನಿಂತಳು, ಅವಳ ಕಣ್ತುಂಬ ನೀರಿದೆ. ಕೌಸಲ್ಯೆಗೆ ಕರುಳು ಚುರ್ ಎಂದಿತು, ಸೀತೆಯನ್ನು ಬಾಚಿ ತಬ್ಬಿದಳು. ಕೌಸಲ್ಯೇ ಹೇಳಿದಳು; ವಿದೇಹರಾಜನ ಮಗಳು, ದಶರಥನ ಸೊಸೆ, ವಿಶ್ವಕ್ಕೊಬ್ಬನೇ ರಾಮ ಅಂತಹ ರಾಮನ ಮಡದಿ. ಅಂತಹ ಸೀತೆಗೆ ಇಂತಹ ದುಃಖ. ಬಿಸಿಲಿಗೊಡ್ಡಿದ ಕಮಲದಂತೆ, ಧೂಳುಮುಸುಕಿದ ಚಿನ್ನದಂತೆ ,ಮೋಡಮುಸುಕಿದ ಚಂದ್ರನಂತೆ ಕಂಡಳು ಸೀತೆ. ಬಾಡಿದ ನಿನ್ನ ಮುಖವನ್ನು ಕಂಡಾಗ ನನ್ನೊಳಗೆ ಶೋಕಾಗ್ನಿ ತುಳುಕ್ಕುತ್ತಿದೆ. ಹೀಗೆ ಹೇಳುವ ಹೊತ್ತಿಗೆ ವಸಿಷ್ಠರ ಕಾಲುಗಳಿಗೆ ರಾಮ ನಮಸ್ಕರಿಸುತ್ತಾನೆ. ಬಳಿಕ ವಸಿಷ್ಠರೊಡಗೂಡಿ ರಾಮ ಕುಳಿತುಕೊಂಡ. ಎಲ್ಲರಿಗೂ ಈಗ ಭರತ ರಾಮನಿಗೆ ಏನು ಹೇಳುತ್ತಾನೆ ಎಂಬ ಉತ್ತಮಕುತೂಹಲ. ಭರತ ಸುಮ್ಮನಿದ್ದ. ರಾಮನೇ ಪ್ರಾರಂಭಿಸಿದ; ನೀನು ಈ ರೂಪದಲ್ಲಿ ಇಲ್ಲಿಗೆ ಯಾಕೆ ಬಂದೆ? ಜಟಾಧಾರಣೆ , ನಾರುಮಡಿ, ಮೃಗಚರ್ಮ ಇದು ನನ್ನ ತಂದೆ ನನಗೆ ಕೊಟ್ಟಿದ್ದು ನೀನು ಕಿರೀಟ, ಸಿಂಹಾಸನ, ಪೀತಾಂಬರಧಾರಿಯಾಗಿ ದೊರೆಯಾಗಿ ಇರುವುದನ್ನು ಬಿಟ್ಟು ನಾರುಮಡಿಯುಟ್ಟು, ಜಟಾಧರನಾಗಿ ಯಾಕೆ ಬಂದೆ? ಎಂದು ಕೇಳಿದರೆ ಭರತ ಏನೂ ಹೇಳಲಿಲ್ಲ. ಅಣ್ಣಾ ರಾಮ ಬಿಡಲೇ ಇಲ್ಲ. ಮತ್ತೆ ಮತ್ತೆ ತಬ್ಬಿ ಕೇಳಿದನಂತೆ ಹೇಳು ಕಾರಣವನ್ನು ಹೇಳು ಎಂದು ಕೇಳಿದ. ಆಗ ಕೈಮುಗಿದು ಭರತ ಹೇಳಿದ; ಅಣ್ಣಾ….ಅಪ್ಪ ಮಾಡಲಾಗದ, ಮಾಡಬಾರದ ಕಾರ್ಯವನ್ನು ಮಾಡಿ ಕೊನೆಗೆ ಪುತ್ರಶೋಕದಿಂದ ಸ್ವರ್ಗವನ್ನು ಸೇರಿದ್ದಾರೆ. ಕೈಕೇಯಿ ನನ್ನ ಅಮ್ಮ ಹೌದು ಆದರೆ ಈ ವಿಷಯದಲ್ಲಿ ಒಂದು ಹೆಣ್ಣು ಅಷ್ಟೇ. ಒಂದು ಹೆಣ್ಣಿನ ಮಾತನ್ನು ಕೇಳಿ ದೊಡ್ಡ ತಪ್ಪನ್ನು ಮಾಡಿದ್ದಾರೆ ನಮ್ಮ ಅಪ್ಪ. ನಮ್ಮ ತಂದೆ ಈ ಕಾರ್ಯವನ್ನು ಮಾಡುವಂತೆ ಮಾಡಿದ ಕೈಕೇಯಿ ಈಗ ವಿಧವೆ. ಯಾವುದಕ್ಕಾಗಿ ಆಕೆ ಈ ಕಾರ್ಯವನ್ನು ಮಾಡಿದಳೋ ಆ ರಾಜ್ಯ ಆಕೆಗೆ ಸಿಗುವುದಿಲ್ಲ. ಇರುವುದೆಲ್ಲವನ್ನೂ ಕಳೆದುಕೊಂಡು ಈಗ ವಿಧವೆಯಾಗಿದ್ದಾಳೆ. ಕೊನೆಗೆ ಮಹಾಘೋರವಾದ ನರಕದಲ್ಲಿ ಬೀಳುತ್ತಾಳೆ. ಇನ್ನು ನಾನು ಯಾವ ದೊರೆಯೂ ಅಲ್ಲ ನಿನ್ನ ಚರಣದಾಸ. ಈ ದಾಸನಮೇಲೆ ಕೃಪೆಮಾಡು. ನನ್ನ ಒಂದು ಮಾತನ್ನು ನಡೆಸಿಕೊಡು ಅದೇನೆಂದರೆ ರಾಜ್ಯಾಭಿಷೇಕಕ್ಕೆ ಒಪ್ಪು. ಅಯೋಧ್ಯೆಯ ಚಕ್ರವರ್ತಿ ಸಿಂಹಾಸನದಲ್ಲಿ ನಿನಗೆ ರಾಜ್ಯಾಭಿಷೇಕವಾಗಲಿ. ಈ ನಿನ್ನ ಪ್ರಜೆಗಳು, ಸೈನಿಕರು, ಮಂತ್ರಿಗಳು, ವಿಧವೆ ತಾಯಂದಿರು ನಿನ್ನನ್ನು ಬಂದು ಸೇರಿದ್ದಾರೆ ಏಕೆಂದರೆ ಪಟ್ಟವನ್ನು ನೀನು ಒಪ್ಪಬೇಕು. ವಂಶದ ಹಾಗೂ ಯೋಗ್ಯತೆಯ ದೃಷ್ಟಿಯಿಂದ ಇದು ನಿನಗೆ ಸಲ್ಲಬೇಕು. ರಾಜ್ಯವನ್ನು ಸ್ವೀಕರಿಸು ಇದು ನಮ್ಮೆಲರ ಇಚ್ಛೆ. ಭೂಮಿ ವಿಧವೆಯಾಗದಿರಲಿ ನೀನು ಭೂಪತಿಯಾಗು. ಗಗನಕ್ಕೆ ಚಂದ್ರನಂತೆ ನಮ್ಮ ರಾಜ್ಯಕ್ಕೆ ದೊರೆಯಾಗಿ ಶೋಭಿಸು. ನೋಡು ನನ್ನೊಡನೆ ಈ ಎಲ್ಲಾ ಅಷ್ಟಸಚಿವರು ಕೇಳುತ್ತಿದ್ದಾರೆ, ನಾನಂತೂ ನಿನ್ನ ಕಾಲುಗಳಮೇಲೆ ನನ್ನ ತಲೆಯನ್ನು ಇಟ್ಟಿದ್ದೇನೆ ಪ್ರಸನ್ನನಾಗು. ನಿನ್ನ ತಮ್ಮನಾಗಿ, ಶಿಷ್ಯನಾಗಿ , ನಿನ್ನ ದಾಸನಾಗಿ ಕೇಳಿಕೊಳ್ಳುತ್ತಿದ್ದೇನೆ ಒಲಿದು ಬಾ, ಪ್ರಸನ್ನನಾಗು ಎಂದು ಹೇಳುತ್ತಾ, ಅಳುತ್ತಾ ಕೈಕೇಯಿಸುತ ರಾಮನ ಪಾದಗಳಲ್ಲಿ ತಲೆಯಿಟ್ಟ. ಹೀಗೆ ಪರಿಪರಿಯಾಗಿ ಬೇಡಿಕೊಳ್ಳುತ್ತಾ , ನಿಟ್ಟುಸಿರು ಬಿಡುತ್ತಿದ್ದ ತಮ್ಮನನ್ನು ತಬ್ಬಿ, ಪ್ರೀತಿತೋರಿಸಿ ರಾಮ ಹೇಳಿದ್ದೇನೆಂದರೆ; ನಿನ್ನ ತಪ್ಪೇನಿದೆ ಭರತ? ತಪ್ಪು ಮಾಡುವ ಕುಲದಲ್ಲಿ ನೀನು ಹುಟ್ಟಿಲ್ಲ. ನೀನು ಸೂರ್ಯ ವಂಶದವನು, ಸತ್ವಸಂಪನ್ನನು ನೀನು, ತೇಜಸ್ವಿ ನೀನು, ನಿನ್ನಂತವನು ರಾಜ್ಯಕ್ಕಾಗಿ ತಪ್ಪು ಮಾಡುವ ಸಂಭವವೇ ಇಲ್ಲ, ನೀನು ಪಾಪಿಯಲ್ಲ. ನೀನು ದೊಡ್ಡವನು ಬಾಲನಲ್ಲ ಹಾಗಾಗಿ ಪದೇ ಪದೇ ತಾಯಿಯನ್ನು ನಿಂದಿಸಬಾರದು. ಅವರು ಮಾಡಿದ್ದರಲ್ಲಿ ತಪ್ಪೇನು? ಹೇ ಮಹಾಪ್ರಾಜ್ಞನೇ ಗುರುವಿಗೆ ಶಿಷ್ಯನ ಮೇಲೆ, ತಂದೆತಾಯಿಯರಿಗೆ ಮಕ್ಕಳ ಮೇಲೆ ಕಾಮಕಾರವಿರುತ್ತದೆ. ಅದು ಅವರ ಹಕ್ಕು. ದೊರೆ ಮಾಡಿದ್ದು ತಪ್ಪಾಗಲಿ, ಸರಿಯಾಗಲಿ ಅದನ್ನು ವಿಮರ್ಶೆಮಾಡುವ ಸ್ಥಿತಿಯಲ್ಲಿ ನಾವಿಲ್ಲ. ನಾವು ಹೇಳಿದ್ದನು ಕೇಳುವವರ ಸ್ಥಾನದಲ್ಲಿ ಇರುವವರು. ನಾವು ಯಾವ ಗೌರವವನ್ನು ತಂದೆಯಲ್ಲಿ ಇಟ್ಟಿರುವೆವೋ ಅದನ್ನೇ ತಾಯಿಯಲ್ಲಿಯೂ ಇಡಬೇಕಲ್ಲವೇ? ಧರ್ಮಶೀಲರಾದ ಅವರಿಬ್ಬರೂ ಕಾಡಿಗೆ ಹೋಗು ಎಂದಾಗ ಅದನ್ನು ಬಿಟ್ಟು ನಾನೇನು ಮಾಡಲಿ ಹೇಳು? ನೋಡು ನೀನು ಅಯೋಧ್ಯೆಗೆ ದೊರೆಯಾಗಬೇಕು, ನಾನು ನಾರುಮಡಿಯುಟ್ಟು ವನವಾಸಿಯಾಗಬೇಕು. ಇದು ನಮ್ಮ ತಂದೆ ನಮ್ಮಿಬ್ಬರಿಗೆ ಮಾಡಿಕೊಟ್ಟ ವಿಭಾಗ. ನಿನಗೆ ಸಿಂಹಾಸನ, ಕಿರೀಟ. ನನಗೆ ನಾರುಬಟ್ಟೆ, ವನವಾಸ ಸುಮ್ಮನೆ ಚರ್ಚೆ ಯಾಕೆ? ಅಪ್ಪ ನೀಡಿದ್ದನ್ನು ಸ್ವೀಕರಿಸೋಣ. ಯಾವುದು ಯಾರಿಗೆ ಸೇರಬೇಕು ಎಂಬುದು ದೊರೆಗಿರುವ ಹಕ್ಕು ಅದನ್ನು ತಿದ್ದುಪಡಿಮಾಡಲು ಸಾಧ್ಯವಿಲ್ಲ. ಹಾಗಾಗಿ ಕಾಡನ್ನು ನಾನು ಸ್ವೀಕರಿಸುತ್ತೇನೆ, ನಾಡನ್ನು ನೀನು ಸ್ವೀಕರಿಸು. ಕೊನೆಯದಾಗಿ ಹೇಳಿತ್ತಾನೆ; ತಂದೆಯು ನನಗಾಗಿ ನೀಡಿದ ಕಾಡು ಬಿಟ್ಟು ಬೇರೆಯವುದೂ ನನಗೆ ಬೇಡ ಎನ್ನುವಾಗಲೇ ಸಂಜೆಯಾಯಿತು. ಶೋಕದಲ್ಲಿಯೇ ರಾತ್ರಿಯೆಲ್ಲಾ ಕಳೆದರು. ಬೆಳಗಾಯಿತು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ, ವಸಿಷ್ಠರು ಪ್ರಾತಃಕಾರ್ಯವನ್ನು ಮುಗಿಸಿ ಬಂದು ಕುಳಿತಿದ್ದಾರೆ ಆಗ ಯಾರೂ ಮಾತನಾಡಲಿಲ್ಲ. ನಿಶಬ್ದ ಸಂವಾದ ನಡೆಯಿತು. ಕೊನೆಗೆ ಮೌನಮುರಿದು ಭರತ ಹೇಳಿದ; ಹೌದು ನಿನ್ನ ಮಾತಿನಂತೆಯೇ ನಿನಗೆ ವನವಾಸ ನನಗೆ ಸಿಂಹಾಸನ ದೊರೆತ್ತಿದ್ದಾಗಿದೆ. ಅದರಿಂದ ನನ್ನ ತಾಯಿಗೂ ಸಂತೋಷವಾಗಿದೆ. ಆದರೆ ಈಗ ನಾನು ನನ್ನ ಸ್ವಂತ ಇಚ್ಛೆಯಿಂದ , ಸಂತೋಷದಿಂದ ಈ ಪಟ್ಟವನ್ನು ನಿನಗೆ ನೀಡುತ್ತೇನೆ ಎಂಬ ಮಾತನ್ನು ಹೇಳಿದ.
ಮುಂದೇನಾಯಿತು ಎಂದು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ…..

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments