ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಒಬ್ಬರನ್ನು ಕುರಿತು, ನೀನು ಮೇಲಿನವನು ನಾನು ಕೆಳಗಿನವನು ಎನ್ನುವುದನ್ನು ಸರಿಯಾಗಿ ತೋರ್ಪಡಿಸುವುದು ಹೇಗೆ? ಭರತನ ಹಾಗೆ. ರಾಮನ ಪಾದುಕೆಯನ್ನು ತನ್ನ ತಲೆಯ ಮೇಲೆ ಭರತ ಇಟ್ಟುಕೊಂಡಿದ್ದಾನೆ. ಪಾದವೆಂಬುದು ನಮ್ಮ ಅವಯವಗಳ ಪೈಕಿಯಲ್ಲಿ ಎಲ್ಲಕ್ಕಿಂತ ಕೆಳಗಿದೆ. ಅದರ ಕೆಳಗೆ ಪಾದುಕೆ ಇದೆ. ತಲೆ ಎಂಬುದು ನಮ್ಮ ಅವಯವಗಳ ಪೈಕಿಯಲ್ಲಿ ಎಲ್ಲಕ್ಕಿಂತ ಮೇಲಿದೆ. ಅದರ ಮೇಲೆ ಪಾದುಕೆಯನ್ನು ಭರತ ಇಟ್ಟುಕೊಂಡಿದ್ದಾನೆ. ರಾಮನ ಕಾಲ ಕೆಳಗೆ ಇರುವುದನ್ನು ಭರತ ತನ್ನ ತಲೆಯ ಮೇಲೆ ಇಟ್ಟುಕೊಂಡಾಗ ಆ ಕ್ರಿಯೆಯ ಮೂಲಕ ಭರತ ಹೇಳಿದ್ದೇನು? ನೀನು ಅಷ್ಟು ಮೇಲಿನವನು. ನಾನು ಇಷ್ಟು ಕೆಳಗಿನವನು. ಉತ್ಕೃಷ್ಟ ನೀನು ಅಪಕೃಷ್ಟ ನಾನು ಎಂಬುದನ್ನು ಬಲು ಸುಂದರವಾಗಿ ಯಾವುದೇ ಚರ್ಚೆಗೆ ಜಿಜ್ಞಾಸೆಗೆ ಎಡೆ ಇಲ್ಲದಂತೆ ಸ್ಥಾಪಿಸಿದ್ದಾನೆ ಭರತ. ನೀನು ದೊರೆಯಾಗು ಸಿಂಹಾಸನವನ್ನು ಏರು ಎಂದು ಹೇಳಿದರೆ ಅದರ ಬದಲು ರಾಮನ ಪಾದುಕೆಯನ್ನು ಸಿಂಹಾಸನದ ಮೇಲೆ ಇಡ್ತೇನೆ ಅಂತ ಹೇಳುವಂತಹದ್ದು.

ಈ ಸಂವಾದದಲ್ಲಿ ಯಾರು ಗೆದ್ದರು, ಗೆದ್ದರೆ ಆ ಪ್ರಶ್ನೆಗೆ ಉತ್ತರ ಕೊಡುವುದು ಬಹಳ ಕಷ್ಟ. ಭರತನ ಹಠವೇನು? ನಾನು ದೊರೆಯಾಗುವುದಿಲ್ಲ. ನಮ್ಮ ಅಣ್ಣ ದೊರೆಯಾಗಬೇಕು. ರಾಮನ ಹಠ? ನಾನು ದೊರೆಯಾಗುವುದಿಲ್ಲ ಭರತ ದೊರೆಯಾಗಲಿ. ಯಾರು ಗೆದ್ದರು? ಭಕ್ತನೋ ಭಗವಂತನೋ. ಮೇಲ್ನೋಟಕ್ಕೆ ಭಗವಂತನೇ ಗೆದ್ದ ಹಾಗೇ ಕಾಣ್ತದೆ ನಮಗೆ. ಯಾಕೆಂದ್ರೆ ರಾಮನು ಮರಳಿ ನಾಡಿಗೆ ಬರಲಿಲ್ಲ. ಹದಿನಾಲ್ಕು ವರ್ಷದ ಮೊದಲು ರಾಮ ನಾಡಿಗೆ ಮರಳಲಿಲ್ಲ. ಸಿಂಹಾಸನದ ಮೇಲೆ ಕುಳಿತುಕೊಳ್ಳಲಿಲ್ಲ. ಚಕ್ರವರ್ತಿ ಆಗಲಿಲ್ಲ. ಇಷ್ಟು ಮೇಲ್ನೋಟಕ್ಕೆ ನಮಗೆ ಕಾಣುವಂತಹದ್ದು. ಆದರೆ ಭರತನೂ ದೊರೆಯಾಗಲಿಲ್ಲ. ತಾನು ದೊರೆಯಾಗಲಾರ ಎನ್ನುವುದು ಭರತನ ನಡೆ. ಅವನು ದೊರೆಯಾಗಲಿಲ್ಲ. ಸಿಂಹಾಸನದ ಮೇಲೆ ರಾಮನ ಪಾದುಕೆ ಇದೆ. ಪಾದುಕೆ ತಾನೇ ರಾಮನಲ್ಲ ಎನ್ನುವಂತಿಲ್ಲ. ಭರತ ರಾಮನಿಗೆ ವಿನಂತಿ ರೂಪದ ಆದೇಶವನ್ನು ಮಾಡಿದ್ದಾನೆ. ಅಣ್ಣ ಪಾದುಕೆಯನ್ನು ಏರು. ಈ ಪಾದುಕೆಗಳೇ ಲೋಕದ ಯೋಗಕ್ಷೇಮಗಳನ್ನು ನೋಡಿಕೊಳ್ತವೆ. ವಿನಂತಿ ರೂಪದ ಆದೇಶ ಅಂದ್ರೆ, ಪ್ರೀತಿಗೆ ಆ ಶಕ್ತಿ ಇದೆ. ಪ್ರೀತಿಯಿಂದ ನಾವು ದೊಡ್ಡವರಿಗೂ ಆದೇಶವನ್ನು ಮಾಡಲಿಕ್ಕೆ ಸಾಧ್ಯ ಇದೆ. ಹಠ ಮಾಡೋಕೆ ಸಾಧ್ಯ ಇದೆ. ರಾಮ ಮರು ಮಾತನಾಡದೇ ಯಾವ ಚರ್ಚೆಯನ್ನೂ ಮಾಡದೆ, ಇವುಗಳು ಲೋಕದ ಯೋಗಕ್ಷೇಮ ನೋಡಿಕೊಳ್ತದೆ ಅಂದಕೂಡಲೇ ಒಪ್ಪಿ ಆ ಪಾದುಕೆಗಳನ್ನ ಏರಿ ಭರತನಿಗೆ ಕೊಟ್ಟನಲ್ಲ. ಅಂದ ಮೇಲೆ ಪಾದುಕಾ ರಾಜ್ಯಕ್ಕೆ ರಾಮನ ಒಪ್ಪಿಗೆ ಇದೆ. ಅದರ ಹಿಂದೆ ರಾಮನ ಸಂಕಲ್ಪ ಇದೆ. ಸ್ಪರ್ಶದೊಂದಿಗೆ ರಾಮನ ಚೈತನ್ಯ ಹರಿದಿದೆ ಪಾದುಕೆಯಲ್ಲಿ.

ರಾಮನದ್ದೇ ಪಾದುಕೆ ಅದು. ಹೊಸದಾಗಿ ಮಾಡಿಸಿಕೊಂಡು ತಂದಿರೋದಲ್ಲ. ರಾಮನದ್ದೇ ಪಾದುಕೆಯನ್ನು ಅಯೋಧ್ಯೆಯಿಂದ ಭರತನು ತಂದಿದ್ದಾನೆ. ಹೇಮಭೂಷಿತ ಪಾದುಕೆ ಅದು. ಹಾಗಾಗಿ ರಾಮನ ಜೊತೆಗೆ ರಾಮ ಹಾಕಿಕೊಂಡು ಬಂದಂತಹ ಪಾದುಕೆ ಅಲ್ಲ ಅದು. ಅಯೋಧ್ಯೆಯಿಂದ ರಾಮನ ರತ್ನಭೂಷಿತ ಪಾದುಕೆಯನ್ನು, ರಾಮನ ಹೇಮಭೂಷಿತ ಪಾದುಕೆಯನ್ನ ಭರತ ತಂದಿದ್ದಾನೆ. ಸಾಕಲ್ವಾ! ರಾಮನದ್ದೇ ಅಲ್ವಾ ಅದು ಅಂದ್ರೆ, ಹಿಂದೆ ರಾಮನ ಸಂಪರ್ಕ ಆಗಿದೆ. ಹಾಗೆ ನೋಡಿದರೆ ಸಾಕದು. ಆದ್ರೆ ಇದು ದೊಡ್ಡ ವಿಷಯ. ಪ್ರಪಂಚದ ಪಾಲನೆ ಆಗಬೇಕಾಗಿದೆ. ಆ ಪಾದುಕೆಗಳು ಪ್ರಪಂಚದ ಪಾಲನೆಯನ್ನು ಮಾಡಬೇಕಾಗಿದೆ. ನೀನೇ ನಿನ್ನನ್ನು ಈ ಪಾದುಕೆಗಳಲ್ಲಿ ಪ್ರತಿಷ್ಠಾಪಿಸು ಎಂದು ಭರತನು ಹೇಳಿದನು. ಅದಕ್ಕೆ ರಾಮ ಒಪ್ಪಿ, ಆ ಪಾದುಕೆಗಳನ್ನು ಏರಿ, ತನ್ನ ಚೈತನ್ಯವನ್ನು ಆ ಪಾದುಕೆಗಳಲ್ಲಿ ಹರಿಸಿ, ಸಂಕಲ್ಪವನ್ನು ಕೂಡ ಪಾದುಕೆಯಲ್ಲಿ ಇಟ್ಟನು. ಸಂಕಲ್ಪಕ್ಕೆ ಬಹಳ ಮಹತ್ವ ಇದೆ. ಎಂದೋ ಮಾಡಿದ್ರೆ ಮಹಾಪುರುಷರು, ಉದಾಹರಣೆಗೆ ಈ ಪೀಠ. ಎಂದೋ ಶಂಕರಾಚಾರ್ಯರು ಸಂಕಲ್ಪ ಮಾಡಿದ್ರು ರಾಮಚಂದ್ರಾಪುರಮಠವನ್ನು. ಹೇಗೆ ನಡೀತಾ ಇದೆ ನೋಡಿ ಇವತ್ತಿಗೂ ಕೂಡ. ಹಾಗೇ ಭರತ ಗೆದ್ದ ಯಾಕೆಂದ್ರೆ ಅವನು ದೊರೆಯಾಗಲಿಲ್ಲ, ಮಾತ್ರವಲ್ಲ ಸಿಂಹಾಸನದ ಮೇಲೆ ರಾಮನದ್ದೇ ಪಾದುಕೆಗಳು ಬಂದ್ವು. ಮಾತ್ರವಲ್ಲ ಪಾದುಕೆಗಳಲ್ಲಿ ರಾಮನಿದ್ದ. ರಾಜ್ಯಭಾರವನ್ನ ರಾಮನೇ ಮಾಡಿದ್ದು. ಭಗವಂತ ಧರ್ಮಕ್ಕೆ ವ್ಯತ್ಯಾಸ ಮಾಡದೇ ಭಕ್ತನಿಗೆ ಬೇಕಾದದ್ದನ್ನು ಮಾಡಿ ಕೊಟ್ಟಿದ್ದಾನೆ. ಧರ್ಮ ಪಾಶವದು. ರಾವಣ ವಧೆಯ ಕರ್ತವ್ಯವೂ ಕೂಡ ಇದೆ. ಆದರೆ ಬರಿಗೈಯಲ್ಲಿ ಕಳುಹಿಸಿಕೊಡಲಿಲ್ಲ. ಪಾದುಕೆಯನ್ನು ಕೊಟ್ಟು ಕಳುಹಿಸಿದ. ಪಾದುಕೆಯಲ್ಲಿ ತನ್ನನ್ನು ಇಟ್ಟು ಕಳುಹಿಸಿದ ರಾಮ.
ಆ ರಾಮ ಪಾದುಕೆಯನ್ನು ಮೊಟ್ಟಮೊದಲಾಗಿ, ಪಟ್ಟದಾನೆಯ ನೆತ್ತಿಯ ಮೇಲಿಟ್ಟು ಗೌರವಿಸುತ್ತಾನೆ. ಪಟ್ಟದಾನೆ ಅಂದ್ರೆ ಏನು? ದೊರೆ ಏರಲೇ ಬೇಕು, ಪಟ್ಟದಾನೆಯನ್ನು. ಅದು ಪಟ್ಟದಾನೆ. ರಾಜಾಧಿರಾಜನು ಏರಬೇಕು. ಹಾಗಾಗಿ ಪಾದುಕೆಯನ್ನು ಯಾವಾಗ ಇಟ್ಟನೋ ಪಟ್ಟದಾನೆಯ ಮೇಲೆ ರಾಜಾಧಿರಾಜತ್ವವನ್ನು ಪಾದುಕೆಗಳಿಗೆ ಬಿಟ್ಟುಕೊಟ್ಟ. ಪಾದುಕೆಗಳಿಗೆ ಸಮರ್ಪಿಸಿದ ಭರತ. ಬಳಿಕ ಆ ಪಾದುಕೆಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು, ಆನೆಯ ಮೇಲೆ ಇಟ್ಟು ಆದಮೇಲೆ ಆ ವರ ಪಾದುಕೆಗಳನ್ನು, ಶ್ರೀರಾಮ ಪಾದುಕೆಗಳನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಶತ್ರುಘ್ನರೊಡಗೂಡಿ ರಥವನ್ನು ಏರಿದ. ರಥದಲ್ಲಿ ಒಂದು ಕಡೆ ಇಟ್ಟುಕೊಂಡಿದ್ದಲ್ಲ ಪಾದುಕೆಯನ್ನ! ತಲೆಯ ಮೇಲೆ ಇಟ್ಟುಕೊಂಡನು.

“ಪಾದುಕಾಕಿರೀಟಿ” ಪಾದುಕೆಗಳೇ ಕಿರೀಟವಾದವು ಭರತನಿಗೆ. ಮುಂದೆ ವಸಿಷ್ಠರು, ವಾಮದೇವರು, ಜಾಬಾಲಿಗಳು ಮತ್ತಿತರ ಮಂತ್ರಿಗಳು ಇದ್ದರು. ಚಿತ್ರಕೂಟಕ್ಕೆ ಪ್ರದಕ್ಷಿಣೆ ಬರಬೇಕು ಎನ್ನುವ ಕಾರಣಕ್ಕೆ ಪೂರ್ವಾಭಿಮುಖವಾಗಿ ಪ್ರಯಾಣ ಮಾಡಿದ್ರು. ಚಿತ್ರಕೂಟದ ಪ್ರದಕ್ಷಿಣೆ ಮಾತ್ರವಲ್ಲ! ಅಲ್ಲೇ ರಾಮನ ಪ್ರದಕ್ಷಿಣೆ ಮಾಡಿದ್ದಾನೆ ಭರತ. ಕೊಂಚ ಸಮಯದಲ್ಲಿ ಭರದ್ವಾಜ ಆಶ್ರಮವನ್ನು ಕಂಡರು. ಭರದ್ವಾಜ ಆಶ್ರಮ ಗೋಚರಿಸಿದಾಗ, ಆಶ್ರಮವನ್ನು ಗೌರವಿಸಿ, ಆಶ್ರಮದ ಒಳಹೊಕ್ಕು ಭರದ್ವಾಜನನ್ನು ವಂದಿಸುತ್ತಾನೆ. ಉತ್ಸುಕತೆ ಭರದ್ವಾಜರಿಗೆ. ಅವರು ಕೇಳ್ತಾರೆ ಹೋದ ಕೆಲಸವಾಯಿತೇ ಭರತ? ರಾಮನೊಡನೆ ಸೇರಿದೆಯಾ? ನಿನ್ನ ರಾಮನ ಸಮಾಗಮವಾಯಿತೇ? ಎಂದು ಕೇಳಿದರು. ರಾಮನನ್ನು ಕರೆದುಕೊಂಡು ಬರೋದು, ಅದು ಆಗುವಂತಹ ವಿಷಯ ಅಲ್ಲ ಅಂತ ಗೊತ್ತು ಭರದ್ವಾಜರಿಗೆ. ಭ್ರಾತೃವತ್ಸಲನಾದ ಭರತನು ಭರದ್ವಾಜರಿಗೆ ನಡೆದುದನ್ನ ವಿವರಿಸಿ ಹೇಳ್ತಾನೆ. ಏನೊಂದು ಚೂರು ಬೇಸರ ಮಾಡಿಕೊಳ್ಳಲಿಲ್ಲ. ಕೋಪಮಾಡಿಕೊಳ್ಳಲಿಲ್ಲ. ಆದರೆ ಬರಲಿಲ್ಲ. ಹದಿನಾಲ್ಕು ವರ್ಷದ ವನವಾಸದ ಪಿತೃವಚನವನ್ನು ನಾನು ಪಾಲಿಸ್ತೇನೆ ಎಂಬುದಾಗಿ ನಮ್ಮಣ್ಣ ಹೇಳಿದನು.

ಈ ಕಥೆಯೆಲ್ಲ ಕೇಳಿದಾಗ ಭರದ್ವಾಜರಿಗೆ ಭರತನ ಕುರಿತಾದ ಸದ್ಭಾವ ಆದರವು ನೂರ್ಮಡಿ ಆಯಿತು. ಪಾಪ, ಶಂಕೆ ಮಾಡಿದರಲ್ವಾ ಇವರೇ. ರಾಮ ಇರುವಾಗ ಕೂಡ ಭರತನನ್ನು ಎತ್ತಿ ಹೇಳ್ತಾರೆ ಭರದ್ವಾಜರು ನಿನ್ನಂತಹ ಮಗನನ್ನು ಪಡೆದ ದಶರಥ ಧನ್ಯ. ನೀರು ಹರಿದು ಹೋದರೆ ಎಲ್ಲಿ ತಗ್ಗಿದೆಯೋ ಅಲ್ಲಿ ಸಂಗ್ರಹವಾಗುವಂತೆ, ಆರ್ಯ ಎಂಬುದು, ಒಳಿತೆಂಬುದು ಏನಿದ್ದರೂ ಸಂಗ್ರಹವಾಗುವಂತೆ ಇದೆ ನಿನ್ನ ವ್ಯಕ್ತಿತ್ವ ಎನ್ನುವುದಾಗಿ ಪ್ರಶಂಸೆ ಮಾಡಿದಾಗ ಅದೆಲ್ಲ ಕೇಳಿಕೊಂಡ ಭರತ ಹೊರಡಲಿಕ್ಕೆ ಅಪ್ಪಣೆ ಕೇಳ್ತಾನೆ. ಭರದ್ವಾಜರು ಅಪ್ಪಣೆ ಕೊಟ್ಟರು. ಅಯೋಧ್ಯೆ ಎಡೆಗೆ ಭರತ ಪ್ರಯಾಣಿಸುತ್ತಾನೆ. ಮೇನೆಗಳು, ಬಂಡಿಗಳು, ಕುದುರೆಗಳು, ಆನೆಗಳು ರಥಗಳು ಇವುಗಳೆಲ್ಲದರ ಮೂಲಕವಾಗಿ ಭರತನ ಸೇನೆ, ಭರತನ ಬಳಗ ಅಯೋಧ್ಯೆ ಕಡೆಗೆ ಹೊರಟಿತು. ಯಮುನೆಯನ್ನು ಮೊದಲು ದಾಟಬೇಕು. ಗಂಗೆಯನ್ನು ಮತ್ತೆ ದಾಟಬೇಕು.

ಅಯೋಧ್ಯೆಯನ್ನು ಸೇರಿದಾಗ ಭರತನಿಗೆ ಆಗಿದ್ದು ನೋವು. ತಂದೆ ಇಲ್ಲ, ಅಣ್ಣ ಇಲ್ಲ ಅಯೋಧ್ಯೆಯಲ್ಲಿ. ಇಬ್ಬರೂ ಇದ್ದ ಆ ಅಯೋಧ್ಯೆಯಲ್ಲಿ ಆ ವೈಭವವನ್ನು ಅದರ ಕಳೆಯನ್ನು ಕಂಡವನು ಭರತ. ಆ ಕಳೆ ಕಳೆದುಹೋಗಿದೆ. ಸಾರಥಿಗೆ ಭರತ ಹೇಳ್ತಾನೆ. ನೋಡು ಸಾರಥಿ. ಅಯೋಧ್ಯೆಯು ಧ್ವಂಸ ವಿಧ್ವಂಸವಾಗಿ ಹೋಗಿದೆ. ಹಾಳಾಗಿ ಹೋಗಿದೆ. ಒಂದು ಕಾಲದಲ್ಲಿ ಮಂಗಲ ಶಬ್ದದಲ್ಲಿ ಇರುತ್ತಿದ್ದ ಅಯೋಧ್ಯೆ ಇಂದು ನಿಶಬ್ದ. ಸ್ಮಶಾನ ಮೌನ…! ಭರತ ಅಯೋಧ್ಯೆಯನ್ನು ಪ್ರವೇಶ ಮಾಡಿದರೆ ಹೇಗೆ ಸ್ವಾಗತ ಮಾಡಬೇಕಿತ್ತು ಅಯೋಧ್ಯೆ ಭರತನನ್ನು. ಆ ವಾತಾವರಣ ಇದು. ಭರತನು ಧರ್ಮವನ್ನೇ ಗೆದ್ದಿದ್ದಾನೆ, ಅಣ್ಣನ ಹೃದಯವನ್ನು ಗೆದ್ದಿದ್ದಾನೆ. ಸತ್ಪುರುಷರ ಹೃದಯವನ್ನು ಗೆದ್ದಿದ್ದಾನೆ. ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾನೆ. ತ್ಯಾಗವನ್ನು ಮೆರೆದಿದ್ದಾನೆ. ಭರತನನ್ನು ಶೂನ್ಯ ನಿಶಬ್ಧ ಅಯೋಧ್ಯೆ ಸ್ವಾಗತಿಸಿತು ಅಥವಾ ಸ್ವಾಗತಿಸಲಿಲ್ಲ. ಈ ಪಂಕ್ತಿಗಳನ್ನ ಅವಲೋಕಿಸುವಾಗ ಬೇಸರವಾಗುತ್ತದೆ. ಯಾವಾಗಲೂ ಕಂಡು ಬರುವಂತಹ ಮನುಷ್ಯರು ಯಾರೂ ಇಲ್ಲ ಬೀದಿಗಳಲ್ಲಿ. ಆನೆಗಳೂ ಇಲ್ಲ. ಅಯೋಧ್ಯೆಯ ಬೀದಿಗಳ ಸಹಜತೆ ಅದು. ಆನೆಗಳು ಸಂಚಾರ ಮಾಡಬೇಕು ಮತ್ತು ಮನುಷ್ಯ ಶ್ರೇಷ್ಠರು ಸಂಚಾರ ಮಾಡಬೇಕು. ಕಾಳರಾತ್ರಿಯಂತೆ ಅಯೋಧ್ಯೆ ಗೋಚರಿಸಿತು ಭರತನಿಗೆ. ಅಯೋಧ್ಯೆ ಕದಡಿದೆ, ಅಯೋಧ್ಯೆ ಕ್ಷೀಣಿಸಿದೆ. ಹಾಲಿನಿಂದ ದ್ರವ್ಯಗಳಿಂದ ಮಾಡಲ್ಪಟ್ಟ ಶಿಖೆಯು ಅದು ಆರಿ ಹೋಗುವಂತೆ, ಮಂಕಾಗುವಂತೆ ಅಯೋಧ್ಯೆ ಇದೆ. ದೊಡ್ಡ ಗಾಳಿ ಬಂದಾಗ, ಆ ಗಾಳಿ ಶಾಂತವಾದ ಮೇಲೆ, ನಿಶಬ್ದವಾಗಿ ಹಾಗೇ ತರಂಗ ಅಡಗಿಹೋಗುತ್ತೆ. ಅಯೋಧ್ಯೆಯು ಶಾಂತವಾಗಿ ಹೋಗಿದೆ. ಯಜ್ಞವೇಧಿ, ಮೊದಲು ಕಂಗೊಳಿಸುತ್ತಾ ಇತ್ತು … ಹೊತ್ತಿನಲ್ಲಿ. ಈಗ ಸೋಮಹರಣದ ಕಾಲ, ಯಜ್ಞದಲ್ಲಿ ಸೋಮಹರಣದ ಕಾಲ ಮುಗಿದಿದೆ. ಹಾಗಾಗಿ ಅಲ್ಲಿ ಯಜ್ಞ ಪಾತ್ರಗಳೂ ಇಲ್ಲ, …. ಋತ್ವಿಜರೂ ಇಲ್ಲ. ಎಲ್ಲ ಬಿಟ್ಟು ಹೋಗಿದ್ದಾರೆ. ಹಾಳು ಸುರಿದಿದೆ ಯಜ್ಞ ಭೂಮಿ. ಗೋವು – ವೃಷಭದಿಂದ ಪರಿತ್ಯಕ್ತವಾಗಿದೆ. ಗೋವಿಗೆ ಅತ್ಯಂತ ಪ್ರೀತಿಪಾತ್ರನಾದ ವೃಷಭ ಬಿಟ್ಟು ಹೋಗಿದೆ ಗೋವನ್ನು. ಅದೂ ಗೋಷ್ಠದಲ್ಲಿ. ರಾಮ ಬಿಟ್ಟು ಹೋದ ಅಯೋಧ್ಯೆಯಂತೆ. ಮುತ್ತಿನ ಮಾಲೆ ಅಯೋಧ್ಯೆ. ಮುತ್ತು ರತ್ನಗಳ ಮಾಲೆ ಆದರೆ ಮಾಣಿಕ್ಯವೇ ಮೊದಲಾದ ಮಣಿಗಳು ಜಾರಿ ಹೋಗಿದ್ದಾವೆ. ಸರವು ಎಷ್ಟು ಶೋಭಿಸಿತು? ರತ್ನಗಳೆಲ್ಲ ಕಳಚಿ ಹೋದಮೇಲೆ ಹೇಗೆ ಕಂಡಿತಪ್ಪ! ರಾಮನಿಲ್ಲದ ಅಯೋಧ್ಯೆಯಂತೆ. ಅಂಬರದಿಂದ ಚ್ಯುತವಾಗಿ ಉರುಳಿದ ತಾರೆಯಂತೆ.

ಅಂಗಡಿ ಮತ್ತು ಅಂಗಡಿ ಪೇಟೆ ಎಲ್ಲ ಮಡಿಸಿದೆ, ಮುಚ್ಚಿದೆ. ಹೇಗಿದೆ ಅಯೋಧ್ಯೆ? ಸ್ತಬ್ಧಾ! ಸ್ತಬ್ಧವಾಗಿದೆ ಅಯೋಧ್ಯೆ. ಹೇಗೆಂದ್ರೆ ಶಶಿಯನ್ನು, ನಕ್ಷತ್ರಗಳನ್ನು ಮೋಡಗಳು ಮುಚ್ಚಿದಾಗ ಆ ರಾತ್ರಿಯಂತೆ ಅಥವಾ ಆ ಗಗನದಂತೆ ಅಯೋಧ್ಯೆ ಇದೆ. ಪಾನ ಪಾತ್ರೆಗಳು ಖಂಡತುಂಡವಾಗಿ ಹರಿದು ಮುರಿದು ಬಿದ್ದಿದ್ದಾವೆ ಅಲ್ಲಿ ಇಲ್ಲಿ. ಪೇಯವನ್ನು ತಯಾರಿಸುವವನು ಬಿಟ್ಟು ಹೋಗಿದ್ದಾನೆ ಆ ಪಾನ ಭೂಮಿಯನ್ನು. ಅಲಂಕಾರಗಳು ಇಲ್ಲ, ಸಂಸ್ಕಾರಗಳೂ ಇಲ್ಲ. ಅವ್ಯವಸ್ಥಿತವಾಗಿದೆ. ಇಂತಹ ಪಾನಭೂಮಿಯಂತೆ, ಧ್ವಂಸವಾದ ಪಾನಭೂಮಿಯಂತಿದೆ ಅಯೋಧ್ಯೆ.

ಉತ್ತಮವಾದ ಧನಸ್ಸಿಗೆ ಕಟ್ಟುವಂತಹ ಹೆದೆ, ಅದು ಕುಶಲರಾದ ವೀರರಾದ ಬಾಣಗಳಿಂದ …. ನೆಲಕ್ಕೆ ಬಿದ್ದ ಹಾಗಿದೆ ಅಯೋಧ್ಯೆಯ ಸ್ಥಿತಿ. ಬಾವಿ ಅಂದ್ರೆ ಬಾವಿ ಅಲ್ಲ, ಅಗಲವಾದ ಕೊಳದಂತಹ ಬಾವಿಯ ಬಗ್ಗೆ ಈ ಮಾತು ಇರತಕ್ಕಂತಹದ್ದು. ನೀರು ಒಣಗಿದೆ. ಆದರೆ ಇನ್ನೂ ದೊಡ್ಡ ದೊಡ್ಡ ಮಿನುಗಳೋ ಕೂರ್ಮಗಳೋ ಇದಾವೆ ಆದರೆ ಅದಕ್ಕೆ ಹೊರಗೆ ಬರೋಕೆ ಜಾಗ ಇಲ್ಲ. ಎಲ್ಲೋ ಒಳಗಿನ ಕೆಸರಿನೊಳಗೆ ಸೇರಿಕೊಂಡಿದ್ದಾವೆ, ದಂಡೆ ಒಡೆದಿದೆ, ಕಮಲಗಳನ್ನು ಕೀಳಲಾಗಿದೆ. ಇಂತಹ ಸರೋವರ ಗಾಡವಾದ ಮಳೆಗಾಲದಲ್ಲಿ ಮೇಘಮಂಡಲದಲ್ಲಿ ಸೇರಿದ ಸೂರ್ಯನ ಪ್ರಭೆ ಮಂಕಾಗಿದೆ, ಹಾಗಿತ್ತು ಅಯೋಧ್ಯೆ. ಪ್ರೀತಿಯಿಂದ ಪಾಲಿಸಿದ ಹೆಣ್ಣು ಕುದುರೆ ಸತ್ತು ಸೇನೆಯಿಂದ ಪತಿತವಾಗಿ ಉರುಳಿಸಲ್ಪಟ್ಟಂತೆ ಇತ್ತು ಅಯೋಧ್ಯೆ. ಇಂತಹ ಅಯೋಧ್ಯೆಯನ್ನು ಕಂಡ ಭರತ ಸಾರಥಿಗೆ ಹೇಳ್ತಾನೆ. ಏನು ಸಾರಥಿ ಇದು. ಏನಾಯಿತು ನಮ್ಮ ಅಯೋಧ್ಯೆ? ಶವಪ್ರಾಯ, ಕಾಂತಿಹೀನ, ನಿಸ್ತೇಜ.

ವಾರುಣೀ ಮದಗಂಧ. ವಾರುಣೀ ಎನ್ನುವ ಉತ್ಸಾಹ ವರ್ಧಕವಾದ ಒಂದು ಪೇಯ ಅದು. ಅದರ ಗಂಧವು ಅಯೋಧ್ಯೆಯ ಬೀದಿಗಳಲ್ಲಿ ವ್ಯಾಪಿಸಿರ್ತಾ ಇತ್ತು. ಈ ಹೂಮಾರಿಗಳ ಪರಿಮಳ ಮತ್ತು ಅಗರು – ಧೂಪಗಳ ಚಂದನದ ಗಂಧ. ಈ ಮೂರು ಬಗೆಯ ಸುಗಂಧಗಳು ಸೇರಿ ಗಾಳಿ ಬೀಸಬೇಕು ಅಯೋಧ್ಯೆಯಲ್ಲಿ. ಯಾವ ಒಂದೂ ಇಲ್ಲ. ಅಯೋಧ್ಯೆಯಲ್ಲಿ ಕೇಳಿ ಬರಬೇಕು ರಥ ಘೋಷ. ಆಮೇಲೆ ಆನೆಗಳ ಘೀಂಕಾರ. ಕುದುರೆಗಳ ಹೇಶಾರವ. ಅಲ್ಲಿ ಕೇಳಿಬರಬೇಕು. ಅದು ಯಾವುದೂ ಇಲ್ಲ. ನಿಶಬ್ದ. ತರುಣರು ಮೈಗೆ ಚಂದನವನ್ನೋ ಅಗರಬತ್ತಿಯನ್ನೋ ಲೇಪಿಸಿಕೊಂಡು ಒಳ್ಳೊಳ್ಳೇ ಮಾಲೆಯನ್ನು ಹಾಕಿಕೊಂಡು, ಒಳ್ಳೇ ಆಭರಣಗಳನ್ನು ಹಾಕಿಕೊಂಡು ನಡೆದಾಡುತ್ತಾ ಇದ್ದರು ಅಯೋಧ್ಯೆಯಲ್ಲಿ. ಸಾಲಂಕೃತವಾಗಿ ತರುಣರು ಸಂಚಾರ ಮಾಡುತ್ತಾರೆ ಅಯೋಧ್ಯೆಯಲ್ಲಿ. ಆದರೆ ಯಾರೂ ಕಾಣಲಿಲ್ಲ ಇಲ್ಲಿ, ಇವತ್ತು ಮಾಲೆಯೂ ಇಲ್ಲ, ಆಭರಣವೂ ಇಲ್ಲ. ಜೋಲು ಬಿದ್ದ ಮುಖ. ಉತ್ಸಾಹ ಶೂನ್ಯವಾಗಿರುವಂತಹ ಮುಖ. ಯಾರೂ ಹೊರಗೆ ಹೋಗ್ತಾ ಇಲ್ಲ. ಚಿತ್ರ ವಿಚಿತ್ರವಾದ ಮಾಲೆಗಳನ್ನು ಧರಿಸಿ, ಉತ್ಸವಕ್ಕಾಗಿ ಹೊರಗೆ ಹೋಗತಕ್ಕಂಹ ಆ ಒಂದು ಮಾಮೂಲಿ ದೃಶ್ಯ. ಯಾವಾಗಲೂ ಕಾಣುವಂತಹ ದೃಶ್ಯ. ಅದು ಇವತ್ತು ಇಲ್ಲ. ಭರತ ಹೇಳ್ತಾನೆ ಸಾರಥಿ, ನಮ್ಮ ಅಣ್ಣನೊಡನೆ ನಮ್ಮ ಶೋಭೆಯೂ ಹೊರಟು ಹೋಯಿತು. ಅಯೋಧ್ಯೆಯ ಕಳೆ, ಅಯೋಧ್ಯೆಯ ಕಾಂತಿ, ಅದು ರಾಮನೊಡನೆಯೇ ಹೊರಟು ಹೋಗಿದೆ. ಚಿತ್ರಕೂಟಕ್ಕೆ ಬಂದಿದೆ ಕಾಂತಿ ಅದೀಗ. ಈ ಸ್ಥಿತಿಯನ್ನು ಕಳೆಯಲಿಕ್ಕೆ ನಮ್ಮಣ್ಣ ಯಾವಾಗ ಬರ್ತಾನೋ? ಬಂದರೆ ಮಹೋತ್ಸವದಂತೆ ಬರ್ತಾನೆ. ಈ ನಗರಕ್ಕೆ ನಗರವೇ ಸಿಂಗರಿಸಲ್ಪಡುತ್ತದೆ. ಎಲ್ಲರೂ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಅಲಂಕಾರ ಮಾಡಿ ಸಿಹಿ ತಿಂಡಿಯನ್ನು ಹಂಚುತ್ತಾ ಎಷ್ಟು ಸಂಭ್ರಮದಲ್ಲಿ ಓಡಿ ಆಡ್ತಾರೆ. ಯಾವಾಗ ಅಂದ್ರೆ ಅಣ್ಣ ಮತ್ತೆ ಮರಳಿ ಬಂದಾಗ. ನಮ್ಮ ತರುಣರು ಉನ್ನತಗಾಮಿಯಾಗಿ ತಲೆ ಏತ್ತಿ ಭುಜವೇರಿಸಿ ಎದೆಯನ್ನು ಮುಂದೆ ಮಾಡಿ ಅಲಂಕೃತರಾಗಿ ನಡೆಯೊದು ಯಾವಾಗ ಅಂದ್ರೆ ನಮ್ಮ ಅಣ್ಣ ಮರಳಿಬಂದಾಗ. ಬಿರು ಬೇಸಿಗೆಯಲ್ಲಿ ಮಳೆಗಾಲ ಬಂದ ಹಾಗೇ. ಮಳೆಬಂದ ಹಾಗೆ ನಮ್ಮಣ್ಣ ಯಾವಾಗ ಬರ್ತಾನೋ ಅಯೋಧ್ಯೆಗೆ?

ರಾಜಭವನವನ್ನು ಪ್ರವೇಶ ಮಾಡ್ತಾನೆ. ಸಿಂಹವಿಲ್ಲದ ಗುಹೆ. ಸಿಂಹವು ಇಲ್ಲ, ವೃದ್ಧ ಸಿಂಹವೂ ಇಲ್ಲ, ಅರುಣ ಸಿಂಹವೂ ಇಲ್ಲ. ದೊರೆಯೂ ಇಲ್ಲ ಮತ್ತು ರಾಮನೂ ಇಲ್ಲ. ಅಂತಹ ರಾಜಭವನವನ್ನು ಪ್ರವೇಶ ಮಾಡ್ತಾನೆ. ಒಂದಿಷ್ಟೂ ಕಾಂತಿ ಇಲ್ಲ. ಇರಲಿಕ್ಕೆ ಎಲ್ಲ ಚಿನ್ನ ಮುತ್ತು ರತ್ನ ಆಭರಣಗಳು ಇದಾವೆ. ಇದೇ ಬದುಕಲ್ಲ ಅಂತ! ಇದೇ ಬದುಕಾ? ಒಳ್ಳೊಳ್ಳೇ ಬಟ್ಟೆಗಳು ಒಳ್ಳೊಳ್ಳೇ ಆಭರಣಗಳು, ಒಳ್ಳೊಳ್ಳೇ ಅನುಲೇಪನಗಳೂ ಅಲಂಕಾರ ಇದೇ ಬದುಕಾದ್ರೆ ಈಗ ಚೆನ್ನಾಗಿ ಕಾಣಬೇಕಾಗಿತ್ತು ರಾಜಭವನ. ಎಲ್ಲ ಇದೆ. ಪ್ರಪಂಚದಲ್ಲೇ ಶ್ರೇಷ್ಠವಾಗಿರತಕ್ಕಂತಹ ಭವನ ಎಲ್ಲ ಇದೆ. ಇರತಕ್ಕಂತಹ ವಸ್ತುಗಳು ಇವೆ. ಆದ್ರೆ ಕಾಂತಿಹೀನವಾಗಿದೆ. ದೇವತೆಗಳಿಂದ ತ್ಯಜಿಸಲ್ಪಟ್ಟಂತೆ ಇದೆ. ದೇವತೆಗಳು ಬಿಟ್ಟು ಹೋಗಿದ್ದಾವೆ ಎನ್ನುವಂತೆ ಇದಾವೆ. ದೇವತೆಗಳು ಸೋತಾಗ ಸೂರ್ಯನು ಸ್ಥಾನಚ್ಯುತನಾಗ್ತಾನೆ. ಏಳು ದಿನಗಳ ಕಾಲ ಸೂರ್ಯನಿಲ್ಲದ ಪ್ರಪಂಚವದು. ಆಗ ಅತ್ರಿಮಹರ್ಷಿಗಳು, ಅವರಿಗೆ ಬಂದ ಸೂಚನೆ ಪ್ರಕಾರ ಸೂರ್ಯನ ಸ್ಥಾನವನ್ನ ಅವರು ನಿರ್ವಹಿಸುತ್ತಾರೆ. ಮುಂದೆ ಕೂಡ ಇನ್ನೊಂದು ಬಗೆಯ ಪ್ರಸ್ತಾಪವನ್ನು ಕಾಣ್ತೇವೆ ನಾವು ಆ ಕಾಲವನ್ನ ಅಭಾಸ್ಕರ ಕಾಲ ಅಂತ ಕರೀತಾರೆ. ಸೂರ್ಯ ರಹಿತ ಕಾಲ. ಹಾಗಿದೆ ಪರಿಸ್ಥಿತಿ ರಾಜಭವನದ್ದು. ಅದೆಲ್ಲವನ್ನೂ ನೋಡಿ ಕಣ್ಣೀರು ಬಿಟ್ಟನು ಭರತ ದುಃಖಿತನಾಗಿ.

ಅತಿಯಾಗಿ ದುಃಖಿತನಾಗಿ ತಾಯಂದಿರನ್ನು, ಕೌಸಲ್ಯೆ ಕೈಕೇಯಿ ಹಾಗೂ ಸುಮಿತ್ರೆಯರನ್ನು ಅಂತಃಪುರದಲ್ಲಿ ಅಯೋಧ್ಯೆಯಲ್ಲಿ ನೆಲೆಗೊಳಿಸಿ ಶೋಕ ಸಂತಪ್ತನಾದ ಭರತನು ಗುರುಗಳನ್ನು ಕುರಿತು ಹೀಗೆ ಹೇಳಿದನು ” ಇಲ್ಲಿರಲಾರೆ. ಅಯೋಧ್ಯೆಯಲ್ಲಿ ನಾನಿರಲಾರೆ. ನಂದಿಗ್ರಾಮಕ್ಕೆ ಹೋಗುತ್ತೇನೆ. ಅಯೋಧ್ಯೆಯಿಂದ ಕೊಂಚ ಹೊರಗಿರತಕ್ಕಂತಹ ಗ್ರಾಮ ಅದು. ನಿಮಗೆಲ್ಲರಿಗೂ ನನ್ನ ವಿದಾಯವಿದು. ಹದಿನಾಲ್ಕು ವರ್ಷಗಳ ಕಾಲ ನಾನಿನ್ನು ದುಃಖವನ್ನು ನುಂಗಬೇಕು ನಾನಿನ್ನು ದುಃಖವನ್ನು ಉಣ್ಣುವುದು, ನಾನಿನ್ನು ದುಃಖವನ್ನು ಉಡುವುದು ದುಃಖವನ್ನೇ ಹಾಸಿ ಹೊದೆಯುವುದು. ಅಂತಹ ಹದಿನಾಲ್ಕು ವರ್ಷಗಳು ಮುಂದಿವೆ. ಇಲ್ಲಿ ಸಾಧ್ಯವಿಲ್ಲ. ಅಯೋಧ್ಯೆ ನನ್ನ ಶೋಕವನ್ನು ನೂರ್ಮಡಿ ಮಾಡೀತು. ನಂದಿಗ್ರಾಮಕ್ಕೆ ಹೋಗ್ತೇನೆ. ರಾಮನಿಲ್ಲದ ಬದುಕನ್ನ ನಂದಿಗ್ರಾಮದಲ್ಲಿ ಬದುಕುತ್ತೇನೆ. ರಾಜನೋ ಸ್ವರ್ಗವನ್ನು ಸೇರಿದ. ನನ್ನ ಗುರುವೋ ವನವನ್ನು ಸೇರಿದ. ರಾಮನನ್ನ ಗುರು ಎಂಬುದಾಗಿ ಕರೀತಾನೆ ಭರತ. ಮಹಾ ಕೀರ್ತಿಶಾಲಿಯೇ ಆ ರಾಮಚಂದ್ರನೇ ಅಯೋಧ್ಯೆಗೆ ದೊರೆ” ಎಂದು ಹೇಳಿದಾಗ, ವಸಿಷ್ಠರು ಮತ್ತು ಮಂತ್ರಿಗಳು ತಲೆದೂಗಿದರು. ಸರಿ ಇದೆ. ಪ್ರಶಂಸೆ ಮಾಡದೇ ಬೇರೆ ಮಾರ್ಗವಿಲ್ಲ. ನಿನಗಿದು ಸರಿ ಇದೆ. ಭರತನಲ್ಲದೇ ಬೇರೆಯವರು ಈ ಮಾತನ್ನು ಹೇಳುವಂತೆಯೆ ಇಲ್ಲ. ಭರತನಿಗೆ ಸರಿ. ಈ ಪರಿಯ ಭ್ರಾತೃ ಪ್ರೇಮ. ಈ ಪರಿಯ ಸ್ವಾಮಿನಿಷ್ಠೆ. ಈ ಪರಿಯ ಗುರುನಿಷ್ಠೆ. ಈ ಪರಿಯ ನಿಸ್ಪ್ರಹತೆ. ನಿರಪೇಕ್ಷತೆ. ಇದು ಸ್ವಾಮಿಯದ್ದು. ದೇವರಿಗೆ ಇಟ್ಟ ನೈವೇದ್ಯ. ಅದರ ಪರಿಮಳವನ್ನು ತೆಗೆದುಕೊಳ್ಳದಿರುವ ಹಾಗೆ. ನೈವೇದ್ಯದ ಭಾವವು ಹೊರಗೆ, ಪರಿಮಳವನ್ನೂ ತೆಗೆದುಕೊಳ್ಳದಿರುವ ಒಂದು ಸ್ಥಿತಿ.

ವಸಿಷ್ಠರಾದಿಯಾಗಿ ಆಯ್ತು ಭರತ, ಅಸ್ತು ಭರತ. ಹಾಗಾಗಿ ತಾನು ಏನು ಇಷ್ಟ ಪಟ್ಟನೋ ಆ ಪ್ರಿಯಕ್ಕೆ ಎಲ್ಲರೂ ಒಪ್ಪಿದ ಕಾರಣ ಭರತನಿಗೆ ಸಂತೋಷವಾಯಿತು. ಸಾರಥಿಗೆ ಭರತ ಅಪ್ಪಣೆ ಮಾಡಿದ. ರಥವನ್ನು ಹೂಡು. ತಾಯಂದಿರಿಗೆಲ್ಲ ನಮಸ್ಕಾರ ಮಾಡಿ ಒಪ್ಪಿಗೆ ಸಿಕ್ಕ ಸಂತೋಷದಲ್ಲಿ ಶತ್ರುಘ್ನನೊಡಗೂಡಿ ರಥವನ್ನು ಏರುತ್ತಾನೆ ಭರತ. ಇಬ್ಬರೂ ಕೂಡ ಭರತ ಶತ್ರುಘ್ನರು ನಂದಿಗ್ರಾಮಕ್ಕೆ ಪ್ರಯಾಣಿಸಿದರು. ಅವರು ಯಾರನ್ನೂ ಬರಲಿಕ್ಕೆ ಹೇಳಲಿಲ್ಲ. ಭರತ ಅವನಷ್ಟಕ್ಕೆ ನಂದಿಗ್ರಾಮಕ್ಕೆ ಹೊರಟದ್ದು, ಶತ್ರುಘ್ನನೂ ಜೊತೆಗೆ ಬಂದ. ಅದೂ ಹಾಗೆ. ಇವನೂ ಎಲ್ಲೆಲ್ಲಿ ಹೋಗ್ತಾನೋ ಅವನೂ ಅಲ್ಲಲ್ಲಿ ಬರ್ತಾನೆ. ಅರುಣೋದಯದ ಬಳಿಕ ಸೂರ್ಯೋದಯ ಇದ್ದೇ ಇದೆ ಎನ್ನುವ ಹಾಗೆ, ಭರತನ ಹಿಂದೆ ಅವನು. ಶತ್ರುಘ್ನ ಯಾವಾಗಲೂ, ಲಕ್ಷ್ಮಣನ ಹಾಗೇ. ರಾಮನ ಹಿಂದೆ ಲಕ್ಷ್ಮಣ ಇರ್ತಾನಲ್ಲ ಹಾಗೇ. ವಸಿಷ್ಠರು ಮಂತ್ರಿಗಳು ಮುಂತಾದವರೆಲ್ಲ ಮುಂದಾಗಿ ಭರತನ ಪ್ರಯಾಣ ನಂದೀಗ್ರಾಮದ ಕಡೆಗೆ. ಮತ್ತೆ ಉಳಿದವರು? ಯಾರ ಕರೆಯೂ ಇಲ್ಲದೇ, ಯಾವ ಸೂಚನೆಯೂ ಇಲ್ಲದೇ, ಯಾವುದೇ ಪರಸ್ಪರ ಸಮಾಲೋಚನೆ ಸೂಚನೆ ಇಲ್ಲದೇ ಇಡೀ ಚದುರಂಗ ಸೇನೆ ಭರತನ ಹಿಂದೆ ಹೊರಟಿತು ತಾನೇ ತಾನಾಗಿ. ಮಾತ್ರವಲ್ಲ ಪುರವಾಸಿಗಳು, ಅಯೋಧ್ಯ ನಗರ ವಾಸಿಗಳು ಭರತನನ್ನು ಹಿಂಬಾಲಿಸಿದರು. ಯಾಕೆಂದ್ರೆ ರಾಮನ ಸಾನಿಧ್ಯವು ಈಗ ಇರುವುದಾದರೆ ಅದು ಭರತನಲ್ಲಿದೆ. ಅವನೇ ರಾಮ. ಹಾಗಾಗಿ ಭರತನನ್ನು ಪುರವಾಸಿಗಳೆಲ್ಲವೂ ಹಿಂಬಾಲಿಸಿದರು. ಆ ಧರ್ಮಾತ್ಮನು ಭ್ರಾತೃ ವತ್ಸಲನು ಭರತನು ರಥವನ್ನು ಏರಿ ತ್ವರಿತಗತಿಯಲ್ಲಿ ಧಾವಿಸಿದನಂತೆ ನಂದಿಗ್ರಾಮಕ್ಕೆ ತಲೆಯ ಮೇಲೆ ಪಾದುಕೆಯನ್ನು ಹೊತ್ತು.

ನಂದಿಗ್ರಾಮವನ್ನು ಸೇರಿ ರಥದಿಂದ ಇಳಿದು ತನ್ನ ಗುರುಗಳಿಗೆ ಅದನ್ನೇ ಮತ್ತೆ ಹೇಳ್ತಾನೆ ಭರತ. “ನನಗೆ ನಮ್ಮಣ್ಣ ಈ ರಾಜ್ಯವನ್ನು ನ್ಯಾಸವಾಗಿ ಕೊಟ್ಟಿರುವುದು. ನ್ಯಾಸ ಅಂದ್ರೆ ಇಟ್ಟುಕೊಳ್ಳಲಿಕ್ಕೆ ಕೊಡುವುದು. ನೋಡಿಕೊಳ್ಳಲಿಕ್ಕೆ ಕೊಡುವಂತಹದ್ದು. ನನಗೆ ಅಂತ ಅಲ್ಲ. ಅವನು ಮರಳಿ ಬರುವುದರೊಳಗೆ ಇದನ್ನು ನೋಡಿಕೊ ಅಂತ. ಹಾಗೆ ಕೊಟ್ಟಿರುವಂತಹದ್ದು. ಇದು ಸಂನ್ಯಾಸ – ಸಮ್ಯಕ್ ನ್ಯಾಸ – ಸುಮ್ಮನೆ ನ್ಯಾಸ ಕೂಡ ಅಲ್ಲ. ನಾನಿದನ್ನ ಏನೂ ಹಾಳುಮಾಡದೇ, ನಾನು ಸುಖವನ್ನು ಸೂರೆಗೊಳ್ಳದಂತೆ ಆಗುವ ಸಣ್ಣ ಭಾವವನ್ನೂ ತೊರದೆ ಜತನವಾಗಿ ಕಾಪಾಡುವುದಕ್ಕೆ ನಾನಿರುವಂತಹದ್ದು. ನೋಡಿಕೊಳ್ಳುವುದು ನನ್ನ ಕಾರ್ಯ ಎಂಬುದಾಗಿ ಭರತ ಹೇಳುವಂತಹದ್ದು. ಹೇಮಭೂಷಿತವಾದ ಅಥವಾ ರಾಮಭೂಷಿತವಾದ, ಒಂದು ಕಾಲದಲ್ಲಿ ರಾಮನಿಂದ ವಿಭೂಷಿತವಾದಂತಹ ಪಾದುಕೆಗಳು ರಾಜ್ಯದ ಯೋಗಕ್ಷೇಮವನ್ನು ನೋಡಿಕೊಳ್ಳುವಂತಹದ್ದು. ಹೀಗೆ ಹೇಳಿ ಆ ಪಾದುಕೆಯನ್ನು ತಲೆಯ ಮೇಲೆ ಇಟ್ಟುಕೊಂಡು ಇದೂ ನ್ಯಾಸವೇ ಅಂತ ಹೇಳ್ತಾನೆ. ಬಳಿಕ ದುಃಖ ಸಂತಪ್ತನಾಗಿ ಎಲ್ಲ ಪ್ರಜಾಸ್ತೋಮಕ್ಕೆ ಮಂತ್ರಿಗಳು ಮೊದಲಾದಂತಹ ಅಧಿಕಾರಿಗಳಿಗೆ ಭರತ ಹೇಳ್ತಾನೆ. “ಛತ್ರವನ್ನು ಹಿಡಿಯಿರಿ. ಕ್ಷಿಪ್ರವಾಗಿ ಛತ್ರವನ್ನು ಹಿಡಿಯಿರಿ. ಇದು ಮರವಲ್ಲ, ಇದು ಲೋಹವಲ್ಲ, ಇದು ನಮ್ಮಣ್ಣನ ಪಾದ. ನಿಜವಾಗಿ ಪಾದಗಳಿವು ನಮ್ಮಣ್ಣನ ಪಾದಗಳು. ಹಾಗಾಗಿ ಈ ಪಾದಗಳಿಗೆ, ರಾಮನಿಗೆ ನೀವು ಹೇಗೆ ಛತ್ರವನ್ನು ಹಿಡಿಯುತ್ತಿದ್ದೀರೋ ಅದೇ ರೀತಿಯಲ್ಲಿ ನೀವು ಛತ್ರವನ್ನು ಹಿಡಿಯಬೇಕು. ಇವುಗಳಿಂದಾಗಿ ನಮ್ಮ ರಾಜ್ಯದಲ್ಲಿ ಧರ್ಮ ಉಳಿಯುವಂತಹದ್ದು. ಈ ಪಾದುಕೆಗಳು ನ್ಯಾಸ ನನಗೆ. ಪ್ರೀತಿಯಿಂದ ನನ್ನ ಮೇಲೆ ವಿಶ್ವಾಸ ಇಟ್ಟು ಕೊಟ್ಟಿದ್ದಾನೆ ನಮ್ಮಣ್ಣ. ನನಗೆ ಇದು ನ್ಯಾಸ ಯಾಕೆ ಅಂದ್ರೆ ಅವನು ಮರಳಿ ಬರುವವರೆಗೆ ನಾನು ಇದನ್ನು ಇಟ್ಟುಕೊಂಡು ಪೂಜೆ ಮಾಡಬೇಕು. ಮರಳಿ ಬಂದಾಗ ಅವನಿಗೆ ಪಾದುಕೆ ತೊಡಿಸಬೇಕು. ಹಾಗಾಗಿ ನ್ಯಾಸ. ಕೊಂಕಾಗದಂತೆ, ಕುಂದದಂತೆ ಪಾದುಕೆಯನ್ನು ನೋಡಿಕೊಳ್ಳಬೇಕು ನಾನು. ಪಾದುಕೆಗಳು ರಾಜ್ಯಭಾರ ಮಾಡ್ತವೆ. ಪಾದುಕೆಗಳ ನೋಡಿಕೊಳ್ಳುವ ಕೆಲಸ ನನ್ನದು. ರಾಮಾಗಮನದವರೆಗೆ ಈ ಪಾದುಕೆಗಳನ್ನು ಪಾಲಿಸುವ ಕಾರ್ಯ ನನ್ನದು. ರಾಮನು ಎಂದು ಮರಳಿ ಬರುವನೋ ಮತ್ತೆ ಈ ಪಾದುಕೆಗಳನ್ನು ತೊಡಿಸುತ್ತೇನೆ. ಆಗ ನೋಡಬೇಕು ನನಗೆ ಆ ಪಾದಗಳು ಹೇಗೆ ಕಾಣ್ತವೆ… ಹದಿನಾಲ್ಕು ವರ್ಷ ಕಳೆದು ರಾವಣನ ವಧೆ ಪೂರೈಸಿ ರಾಮ ಮರಳಿಬಂದಾಗ ಭರತ ಮಾಡಿದ ಮೊದಲ ಕಾರ್ಯ ಅಂದ್ರೆ ಪಾದುಕೆಗಳನ್ನು ತೊಡಿಸಿದ್ದು ರಾಮನ ಪಾದಗಳಿಗೆ. ಅದ್ಭುತ ಅದು…! ಹಿಡಿದುಕೊಂಡೇ ನಿಂತುಕೊಂಡಿದ್ದನಂತೆ. ಪುಷ್ಪಕ ವಿಮಾನ ಇಳಿಯುವಾಗ ಭರತನ ಕೈಯಲ್ಲಿ ಪಾದುಕೆ ಇತ್ತು. ಈ ಮೊದಲ ದಿನದ ಭಾವದಲ್ಲೇ ಕೊನೆಯ ದಿನ ಕೂಡ ಇದ್ದನು ಭರತ. ರಾಮನು ಇಳಿದಾಗ, ಇಳಿಯುವುದೇನು ಇಳಿಯುವ ಮೊದಲೇ ಪಾದುಕೆಗಳನ್ನು ತೊಡಿಸುತ್ತಾನೆ ಅವನು. ತೊಡಿಸಿದಾಗ ಕೃತಕೃತ್ಯ. ಇಳಿಯಿತು ಭಾರ ಎನ್ನುವ ಭಾವ…! ಯಾವಾಗ ರಾಮನು ಮರಳಿ ಈ ಪಾದುಕೆಯನ್ನು ತೊಡುವನೋ, ಯಾವಾಗ ನಾನು ಮರಳಿ ರಾಮ ಪಾದಗಳಿಗೆ ಈ ಪಾದುಕೆಯನ್ನು ತೋಡಿಸ್ತೇನೋ ಆಗ ನನ್ನ ಭಾರ ಇಳಿಯುತ್ತದೆ. ಭಾರ ಅಂದ್ರೆ ರಾಜ್ಯದ ಭಾರ ಅಂತ ಅಲ್ಲ, ಪಾಪದ ಭಾರ. ನನ್ನ ಗುರುವಿಗೆ, ಮತ್ತೆ ಮತ್ತೆ ಆ ಪದ ಬಳಸುತ್ತಾನೆ. ನನ್ನ ಗುರುವಿಗೆ ಅವನದನ್ನು ಒಪ್ಪಿಸಿ ನಾನು ನನ್ನ ಗುರುವಿನ ಸೇವಕನಾಗಿ ಇರುತ್ತೇನೆ. ಅವನ ಚರಣದಾಸನಾಗಿ ಇರುತ್ತೇನೆ. ಈ ರಾಜ್ಯವನ್ನೂ, ಈ ಅಯೋಧ್ಯೆಯನ್ನೂ ಈ ಪಾದುಕೆಯನ್ನೂ ಮೂರೂ ಒಟ್ಟಿಗೆ ಕೊಡಬೇಕು.

ರಾಮನಿಗೆ ರಾಜ್ಯಾಭಿಷೇಕವಾಗಿರಲು ಎಲ್ಲರಿಗೂ ಸಂತೋಷವಾಗಿರಲು, ಜನಸ್ತೋಮವೆಲ್ಲ ಆನಂದದಿಂದ ತುಂಬಿರಲು ನನಗಾಗುವ ಪ್ರೀತಿ ಜನರಿಗೆ ಆಗುವುದಕ್ಕಿಂತ ನಾಲ್ಕು ಪಟ್ಟು ದೊಡ್ಡದು. ಅಂದು ನನಗೆ ಸಿಗುವ ಸಮಾಧಾನ, ಅಂದು ನನಗೆ ಸಿಗುವ ಸತ್ಕೀರ್ತಿ ರಾಜ್ಯಕ್ಕಿಂತ ನಾಲ್ಕು ಪಟ್ಟು ದೊಡ್ಡದು. ಅಳೆಯಲಿಕ್ಕೆ ವಿವೇಚನೆ ಬೇಕಾಗುತ್ತದೆ. ಯಾವುದು ದೊಡ್ಡದು? ಯಾವುದು ಸಣ್ಣದು ಅಂತ ಅಳೆಯಲಿಕ್ಕೆ ಭರತನ ಬುದ್ಧಿ ಬೇಕಾಗುತ್ತದೆ.”

ಹೀಗೆಲ್ಲ ವಿಲೇಪಿಸುತ್ತಾ ಭರತನು ದುಃಖಿತನಾಗಿ ಮಂತ್ರಿಗಳ ಒಡಗೂಡಿ ನಂದೀಗ್ರಾಮದಲ್ಲಿ ಅಣ್ಣನ ಪರವಾಗಿ ಪಾದುಕೆಗಳ ಪ್ರತಿನಿಧಿಯಾಗಿ ರಾಜ್ಯಭಾರವನ್ನು ಮಾಡಿದನು. ಹೇಗೆ? ಮುನಿವೇಷಧರನಾಗಿದ್ದನಂತೆ. ಒಬ್ಬ ಸಾಮಾನ್ಯ ಮುನಿ ಕಾಡಲ್ಲಿ ಯಾವ ಧಿರಸ್ಸನ್ನು ಧರಿಸುತ್ತಾನೋ ಆ ತರಹ ಇದ್ದ ಭರತ. ಮುನಿವೇಷಧರನಾದ ಪ್ರಭುವು ಶರೀರಕ್ಕೆ ವಲ್ಕಲ ದಿರಿಸಿನಲ್ಲಿ ಜಟೆ. ಜಟವೇ ಕಿರೀಟ, ವಲ್ಕಲವೇ ಪೀತಾಂಬರ. ನಂದೀಗ್ರಾಮದಲ್ಲಿ ಸೇನಾ ಸಹಿತನಾಗಿ ವಾಸ ಮಾಡಿದ. ಏಕಾಗ್ರವಾದ ಮನಸ್ಸು ರಾಮಾಗಮನದಲ್ಲಿದೆ. ರಾಮ ಮರಳಿ ಬರ್ತಾನೆ. ಶಬರಿ ಕಾದ ಹಾಗೇ. ಶಬರಿಗಿಂತ ಚೂರು ಹೆಚ್ಚು ಭರತ ಕಾದಿದ್ದಾನೆ. ಚಿತ್ರಕೂಟಕ್ಕೆ ರಾಮ ಬಂದಾಗ ಶಬರಿಯ ಪ್ರತೀಕ್ಷೆ ಆರಂಭವಾಗ್ತದೆ. ಭರತ ಚಿತ್ರಕೂಟಕ್ಕೆ ಹೋಗವಾಗಲೇ ಅದೇ ಅಪೇಕ್ಷೆಯಿಂದ ಹೋಗಿರುವಂತಹದ್ದು. ರಾಮನನ್ನ ಮರಳಿ ಅಯೋಧ್ಯೆಗೆ ಕರೆದುಕೊಂಡು ಬರಬೇಕು ಎನ್ನುವ ಭಾವದಲ್ಲೆ ಹೋಗಿದ್ದು. ಶಬರಿಯ ಗುರುಗಳು ಮುಕ್ತರಾಗಿದ್ದು ರಾಮ ಚಿತ್ರಕೂಟದಲ್ಲಿ ಇದ್ದಾಗ. ಅವರಿಗೂ ಆಸೆ ಆಯಸ್ಸು ಮುಗಿದಿದೆ. ಹಾಗಾಗಿ ಅವರು ಹೊರಟು ಹೋಗ್ತಾರೆ. ಶಬರಿಗೆ ಹೇಳ್ತಾರೆ ನೀನು ರಾಮನನ್ನು ಕಾಣು. ನೀನು ನಮ್ಮೆಲ್ಲರ ಪರವಾಗಿ ರಾಮನನ್ನು ಉಪಚರಿಸು ಎಂಬುದಾಗಿ ಶಬರಿಗೆ ಹೇಳಿ ಹೋಗಿದ್ದಾರೆ. ಆಕೆಯ ಗುರುಗಳು ಹಾಗಾಗಿ ಅವಳೂ ಕಾಯ್ತಾ ಇರ್ತಾಳೆ. ದಕ್ಷಿಣದಲ್ಲಿ ಶಬರಿ ಕಾಯ್ತಾಳೆ, ಉತ್ತರದಲ್ಲಿ ಭರತ ಕಾಯ್ತಾನೆ. ಕಾಯುವಿಕೆಯಲ್ಲಿ ಏನೂ ವ್ಯತ್ಯಾಸವಿಲ್ಲ. ಹಾಗಾಗಿ ನಿಜವಾಗಿಯೂ ರಾಮಾಗಮನವನ್ನು ಬಯಸಿ ಭ್ರಾತೃವತ್ಸಲನಾದ ಭರತನು ಅಣ್ಣನ ಮಾತಿಗೋಸ್ಕರವಾಗಿ ಮಾತ್ರ, ಇಲ್ಲಂದ್ರೆ ಮಾಡ್ತಿರಲಿಲ್ಲ. ಖಂಡಿತವಾಗಿಯೂ ಮಾಡ್ತಿರಲಿಲ್ಲ. ಕೇವಲ ಅಣ್ಣನ ಮಾತನ್ನು ಪಾಲಿಸಬೇಕು ಎಂಬ ಕಾರಣಕ್ಕಾಗಿ ನಂದಿಗ್ರಾಮದಲ್ಲಿ ಇದ್ದು ಭರತ ರಾಜ್ಯಭಾರ ಮಾಡ್ತಾ ಇದ್ದಾನೆ. ತನ್ನ ಪ್ರತಿಜ್ಞೆಯನ್ನು ದೃಢವಾಗಿ ಆಶ್ರಯಿಸಿ ಪ್ರತಿಜ್ಞೆಯನ್ನು ಪೂರ್ಣ ಮಾಡಲಿಕ್ಕೆ ದೃಢನಿಶ್ಚಯದಲ್ಲಿ ಭರತನಿದ್ದನು.

ಚಿತ್ರಕೂಟ ಪುಣ್ಯ ಪರ್ವತ, ಮಂದಾಕಿನಿ ಪುಣ್ಯನದಿ ವಸಿಷ್ಠರು ಮಹಾಗುರು ಅವರು ಮತ್ತು ಅನೇಕ ತಪಸ್ವಿ ಶ್ರೇಷ್ಠರು. ಋಷಿ ಶ್ರೇಷ್ಠರು, ಮಂತ್ರಿಗಳು, ಸೇನೆ ಮತ್ತು ಪ್ರಜೆಗಳ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡ್ತಾನೆ ಭರತ. “ಹದಿನಾಲ್ಕು ವರ್ಷಗಳ ಕಾಲವೂ ಕೂಡ ನಾನು ಜಟಾ ಚೀರಗಳನ್ನು, ನಾರು ಬಟ್ಟೆಯನ್ನು ಧಾರಣೆ ಮಾಡಿ ಹಣ್ಣು ಹಂಪಲು ಗೆಡ್ದೆ ಗೆಣಸುಗಳನ್ನು ತಿಂದು ಇರ್ತೇನೆ. ನಿನ್ನ ಆಗಮನವನ್ನು ಪ್ರತೀಕ್ಷೆ ಮಾಡ್ತಾ ನಗರದಿಂದ ಹೊರಗೆ ಉಳಿಯುತ್ತೇನೆ. ರಾಜ್ಯಭಾರವನ್ನು ನಿನ್ನ ಪಾದುಕೆಗಳಿಗೆ ಒಪ್ಪಿಸಿ ನಾನು ಕಾಯ್ತೇನೆ. ಹದಿನಾಲ್ಕು ವರ್ಷದ ಬಳಿಕ ಒಂದು ದಿನವೂ ಕಾಯಲಾರೆ. ಒಂದು ಹೊತ್ತೂ ಕಾಯಲಾರೆ. ಮರುದಿನ, ಮರು ಹಗಲು ಬಂದಿದೆ, ಅಂದು ನಿನ್ನನ್ನು ಕಾಣದಿದ್ದರೆ ಅಗ್ನಿಗೆ ಹಾರುತ್ತೇನೆ. ಅಗ್ನಿಪ್ರವೇಶವನ್ನು ಮಾಡ್ತೇನೆ. ಪ್ರಜ್ವಲಿಸುವ ಯಜ್ಞೇಶ್ವರನಲ್ಲಿ ಭರತನು ಹುತನಾಗ್ತಾನೆ. ನಿನಗೇ ಬಿಟ್ಟಿದ್ದು. ನೀನು ಬರ್ತಿಯೋ ಇಲ್ವೋ. ನಾನಂತು ಇದನ್ನು ಮಾಡುವವನು.” ಎಷ್ಟು ಗಟ್ಟಿಯಾಗಿ ಹೇಳಿದ್ದಾನೆ ರಾಮನಿಗೆ ಭರತ. ಇಷ್ಟು ಗಟ್ಟಿಯಾಗಿ…..!

ರಾಮನು ಒಂದು ಚಕಾರವೂ ಮಾತನಾಡಲಿಲ್ಲ. ಆಯ್ತು ಅಂತ ಒಪ್ಪಿಕೊಂಡ. ಬಂದೇ ಬರ್ತೇನೆ. ಹದಿನಾಲ್ಕನೇ ವರ್ಷ. ಹದಿನಾಲ್ಕು ವರ್ಷ ಮುಗಿದು ಹದಿನೈದನೇಯ ವರ್ಷದ ಮೊದಲನೆಯ ದಿನ ಮೊದಲ ಹಗಲು ನಿನ್ನ ಕಣ್ಣ ಮುಂದೆ ನಾನು ಇದ್ದೇನೆ. ಹಾಗಾಗಿ ಅವನು ರಾವಣ ವಧೆಯ ನಂತರ ಓಡೋಡಿ ಓಡೋಡಿ ಅಲ್ಲ, ಗಗನದಲ್ಲಿ ಹಾರಿ ಬರ್ತಾನೆ, ಪುಷ್ಪಕ ವಿಮಾನದಲ್ಲಿ ಹಾರಿ ಬರ್ತಾನೆ. ಬಂದು ಭರದ್ವಾಜನ ಆಶ್ರಮದಲ್ಲಿ ತಂಗಿ ಮರುದಿನ ಹದಿನೈದನೇಯ ದಿನ. ಹದಿನಾಲ್ಕನೇ ದಿನ ಹೋಗುವ ಹಾಗಿಲ್ಲ. ಅಲ್ಲೇ ತಂಗಿ ಹನುಮಂತನನ್ನು ಕಳುಹಿಸಿ ಕೊಡ್ತಾನೆ. ಅವನಿಗೆ ಹೇಳು ರಾಮ ಬಂದಿದ್ದಾನೆ ಅಂತ ಹೇಳು. ಬೆಳಗಾಮುಂಚೆ ಮತ್ತೆ ಬೆಂಕಿಗೆ ಹಾರೋದು ಬೇಡಾ ಅವನು. ಯಾರಿಗ್ಗೊತ್ತು, ಸೂರ್ಯೋದಯ ಆಗ್ತಾ ಇರುವ ಹಾಗೆ ಹಾರಿಬಿಡೋದು ಬೇಡಾ ಅವನು. ಗಾಬರಿ ರಾಮನಿಗೆ. ಹಾಗೇ ಮತ್ಯಾರೂ ಅಲ್ಲ. ಕೋಟಿ ಕೋಟಿ ಕಪಿಗಳಿದ್ದಾವೆ ಅವನ ಜೊತೆಯಲ್ಲಿ ಲಕ್ಷ್ಮಣ ಎಲ್ಲ ಇದ್ದಾರೆ ಹನುಮಂತನ ಮೆಲಿನ ನಂಬಿಕೆಯ ನೋಡಿ!! ಭರತನ ಹತ್ತಿರಕ್ಕೆ ನೀನು ಹೋಗು. ಹೋಗಿ ಭರತನಿಗೆ ಹೇಳು. ರಾಮನು ಯುದ್ಧವನ್ನು ಗೆದ್ದು ರಾವಣನನ್ನು ಸಂಹಾರ ಮಾಡಿ ದೊಡ್ಡ ಬಳಗದ ಜೊತೆಗೆ ಬರ್ತಾ ಇದ್ದಾನೆ ಅಂತ ಹೇಳು ಅವನಿಗೆ. ಒಂದೇ ಕಾರಣಕ್ಕೆ, ಯಾಕೆಂದ್ರೆ ಎಷ್ಟು ಹೊತ್ತು ಇರ್ತಾನೋ ಏನು ಮಾಡ್ತಾನೋ ಗೊತ್ತಿಲ್ಲ. ಇವನು ಮೊದಲೇ ಹೋಗುವ ಹಾಗಿಲ್ಲ. ಸೂರ್ಯೋದಯಕ್ಕೆ ಮುಂಚೆ ಹೋಗುವ ಹಾಗಿಲ್ಲ ರಾಮ ಅಯೋಧ್ಯೆಗೆ. ಸೂರ್ಯೋದಯದ ಬಳಿಕವೇ ಹೋಗಬೇಕು. ಆ ಅಂತರ ಇದೆಯಲ್ಲ ಅದರ ಬಗ್ಗೆ ಚಿಂತೆ ರಾಮನಿಗೆ. ಅಷ್ಟು ಹೊತ್ತಿಗೆ ಅವನು ಹೆಚ್ಚು ಕಡಿಮೆ ಮಾಡಿದ್ರೆ ಅಂತ. ಹಾಗಾಗಿ ಹನುಮಂತನನ್ನು ಕಳುಹಿಸಿ ನೀನು ಹೋಗಿ ಹೇಳಿಬಾ ಅಂತ ರಾಮ ಹೇಳಿದ್ದು.
ಭರತ ಹನುಮಂತನನ್ನು ಬಿಡಲೇ ಇಲ್ಲ. ನೀನು ಇಲ್ಲೇ ಇರು. ಯಾರಿಗೊತ್ತು. ಅವನು ಬಂದ ಮೇಲೆ ನಾನು ಆ ಕಡೆ ಈ ಕಡೆ ಹೋಗುವಂತಹದ್ದು. ಹನುಮಂತನನ್ನು ಹಿಡಿದಿಟ್ಟುಕೊಂಡಿದ್ದಾನೆ ಅಲ್ಲಿ. ಹನುಮಂತ ರಾಮನ ಮಾತನ್ನು ಪೂರ್ತಿ ಮಾಡದ ಸಂದರ್ಭವೇ ಇಲ್ಲ. ಇಲ್ಲಿ ಮಾತ್ರ ಭರತ ಬಿಡಬೇಕಲ್ಲ. ಅವನನ್ನು ಬಾರಿ ಬಾರಿಗೆ ಪರೀಕ್ಷೆ ಮಾಡ್ತಾ, ಕಪಿ ಬುದ್ಧಿ ತೋರಿಸಬೇಡ ನೀನು ನಿಜವಾಗಿ ಹೇಳು ಬರ್ತಾ ಇರೋದು ಹೌದಾ? ಅಂತೆಲ್ಲ ಕೇಳಿ. ಅಂತೂ ರಾಮ ಬಂದ ಮೇಲೆ ಹನುಮಂತನಿಗೆ ಬಿಡುಗಡೆ. ಅಲ್ಲಿಯವರೆಗೆ ಹನುಮಂತನಿಗೆ ಬಿಡುಗಡೆ ಕೂಡ ಇಲ್ಲ. ಹಾಗೆ ಹಿಡಿದು ಇಟ್ಟುಕೊಳ್ಳುತ್ತಾನೆ ಭರತ.

ಪಾದುಕೆಗಳಿಗೆ ಪಟ್ಟಾಭಿಷೇಕವನ್ನು ಮಾಡಿ ಸಿಂಹಾಸನದ ಮೇಲೆ ಪಾದುಕೆಗಳನ್ನು ಇಟ್ಟು ಪಾದುಕೆಗಳು ರಾಜ್ಯವಾಳಿದ್ದು ಎಲ್ಲೂ ಇಲ್ಲ. ಭರತನು ಮಾತ್ರ. ಇಂತಹ ಒಂದು ಅಭೂತಪೂರ್ವ ಹಿಂದೂ ಇಲ್ಲ ಮುಂದೂ ಇಲ್ಲ. ಅಂತಹದ್ದೊಂದು ಸಾಹಸವನ್ನು, ಇಂತಹ ಒಂದು ಅಪರೂಪದ ಸಂಗತಿಯನ್ನು ಮಾಡಿದ್ದು ಭರತ. ಛತ್ರವನ್ನು ತಾನೇ ಹಿಡಿತಾನೆ. ಮಾತ್ರವಲ್ಲ ಸಂಪೂರ್ಣ ಆಡಳಿತದ ವರದಿಯನ್ನು ಪಾದುಕೆಗಳಿಗೆ ಒಪ್ಪಿಸುತ್ತಾನೆ. ಏನು ಮಾಡುವುದಾದರೂ ಪಾದುಕೆಗಳ ಒಪ್ಪಿಗೆ ಬೇಕು. ಏನು ಮಾಡುವುದಾದರೂ ಪಾದುಕೆಗಳಿಗೆ ವರದಿ ಸಲ್ಲಬೇಕು. ಅಂತಹದ್ದು ನೋಡಿ. ಸಂಭಾಷಣೆ ಮಾಡ್ತಾ ಇದ್ದ ಅಂತ್ಲೇ ಅರ್ಥ ಪಾದುಕೆಗಳೊಡನೆ. ಅಂದ್ರೆ ಅಲ್ಲಿ ರಾಮ ಕಾಣ್ತಾ ಇದ್ದ ಅಂತ್ಲೇ ಅರ್ಥ. ಸ್ವತಂತ್ರವಾಗಿ ಭರತ ರಾಜ್ಯಭಾರ ಮಾಡಲೇ ಇಲ್ಲ. ಯಾವುದಾದರೂ, ಚಿಕ್ಕದೋ ದೊಡ್ಡದೊ ಕಾರ್ಯ ಬಂತು ಅಂದ್ರೆ ಭರತ ನೇರವಾಗಿ ಪಾದುಕೆಗಳ ಹತ್ತಿರ ಹೋಗ್ತಾ ಇದ್ದ. ಅಲ್ಲಿ ಹೋಗಿ ನಿವೇದನೆ ಮಾಡ್ತಾ ಇದ್ದ. ಒಂದು ಉಡುಗೊರೆ ಬಂದರೂ ಪಾದುಕೆಗಳ ಮುಂದೆ ಇಡ್ತಾ ಇದ್ದ. ಯಾವುದೇ ಒಂದು ಬೆಲೆಬಾಳುವ ಉಡುಗೊರೆ ಬಂದರೂ ಪಾದುಕೆಗಳ ಮುಂದೆ ಇಟ್ಟು ಪಾದುಕೆಗಳಿಗೆ ಸಮರ್ಪಣೆ ಮಾಡಿ ಮತ್ತೆ ಅದನ್ನು ಹೇಗೆ ವಿನಿಯೋಗಿಸಬೇಕು ಏನು ಮಾಡಬೇಕು ಮುಂದೆ ಅದನ್ನು ಮಾಡ್ತಾ ಇದ್ದ. ಮೊದಲು ಪಾದುಕೆಗಳಿಗೆ. ಹೀಗೆ ಭರತನು ಹದಿನಾಲ್ಕು ವರ್ಷವೂ ರಾಜ್ಯಭಾರವನ್ನು ನಡೆಸಿದ. ರಾಜ್ಯಭಾರವನ್ನು ನಡೆಸಿದ ಎನ್ನುವುದೂ ಕಷ್ಟ, ಪಾದುಕೆಗಳು ರಾಜ್ಯಭಾರ ಮಾಡ್ತಾ ಇದ್ದದ್ದು. ಎಂತಹ ಯೋಗಿ ಅವನು…! ಪಾದುಕೆಗೆ ಹೇಳದೇ ಕೇಳದೇ ಏನೂ ಮಾಡುವುದಿಲ್ಲ. ಒಂದು ಅದ್ಭುತ ಭರತ ರಾಜ್ಯಭಾರ. ಪಾದುಕಾ ರಾಜ್ಯಭಾರ. ಪಾದುಕಾ ರಾಜ್ಯವೂ ರಾಮರಾಜ್ಯಕ್ಕಿಂತಲೂ ಶ್ರೇಷ್ಠವಾದವು. ಅನ್ಯಾನ್ಯ ಕಾರಣಗಳಿಗೆ ರಾಮರಾಜ್ಯಕ್ಕಿಂತ ಉತ್ಕೃಷ್ಟವಾಗಿರತಕ್ಕಂತಹದ್ದು. ಯಾಕೆಂದ್ರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಮನಿಲ್ಲದೆ ಇರತಕ್ಕಂತಹ ರಾಜ್ಯ ಅದು. ಶೂನ್ಯ ರಾಜ್ಯವನ್ನು ಭರತ ನಡೆಸಿದ್ದು. ಆದರೆ ಅದ್ಭುತವಾಗಿ ನಡೆಸುತ್ತಾನೆ. ಎಲ್ಲವೂ ವೃದ್ಧಿಯಾಯಿತು. ಸಂಪತ್ತು ಅಂತ ಏನಿದಿಯೋ ಅಯೋಧ್ಯೆಯಲ್ಲಿ ಕೋಸಲದಲ್ಲಿ ಎಲ್ಲವೂ ವೃದ್ಧಿಯಾಗ್ತದೆ. ಆದರೆ ಯಾವುದನ್ನೂ ಯಾರೂ ಮುಟ್ಟುವಹಾಗಿಲ್ಲ ರಾಮಬರುವವರೆಗೆ. ಎಲ್ಲವೂ ನೈವೇದ್ಯದ ವಸ್ತುಗಳ ಹಾಗೇ. ಹೀಗೆ ಹದಿನಾಲ್ಕು ವರ್ಷ ರಾಜ್ಯಭಾರ ನಡೆಸಿದ ಭರತ. ನಮ್ಮೆಲ್ಲರಿಗೆ ಆರಾಧ್ಯ ಅವನು. ನಮ್ಮೆಲ್ಲರ ಹೃದಯ ಮಂದಿರದಲ್ಲಿ ಸ್ಥಾಪಿತವಾಗಬೇಕು ಭರತನ ಮೌಲ್ಯಗಳು. ಭರತನ ತತ್ವ, ಭರತನ ಸಂದೇಶ. ಅವನೇನೂ ನಮಗೆ ಪಾಠ ಮಾಡಲಿಲ್ಲ. ಅವನೇನೂ ಪುಸ್ತಕ ಬರಿಯಲಿಲ್ಲ. ಅವನೇನೂ ಗುರುಪೀಠ ಗುರು ಪರಂಪರೆ ಸ್ಥಾಪನೆ ಮಾಡಲಿಲ್ಲ. ಆದರೆ ಕೇವಲ ನಡವಳಿಕೆಯಿಂದ ಅವನು ಕೊಟ್ಟ ಸಂದೇಶವನ್ನು. ಅದೆಲ್ಲ ಗ್ರಾಹ್ಯ. ರಾಮನಾಗುವ ಸಂಭವವು ಇದೆಯೋ ಇಲ್ಲವೋ ಭರತನಾಗಲಿಕ್ಕೆ ಸಾಧ್ಯ ಇದೆ. ಹಾಗೆ ನಾವೆಲ್ಲರೂ ಭರತನಾಗಬೇಕು. ಅನುಕರಣೆಗೆ ಭರತ ವಿಷಯ. ಹಾಗಾಗಿ ಭರತ, ಅಯೋಧ್ಯೆಯನ್ನ ರಾಮ ಆಳಲಿ, ನಮ್ಮನ್ನು ಭರತನು ಆಳಲಿ. ಭರತನ ಈ ಭಾವ, ರಾಮ ಪ್ರೇಮ ಭಾವ ನಮ್ಮೆಲ್ಲರನ್ನೂ ಆಳಲಿ ಎಂಬಲ್ಲಿಗೆ ಈ ಪಾದುಕಾ ಪಟ್ಟಾಭಿಷೇಕವು ಮಂಗಲವನ್ನು ಕಂಡಿದೆ. ಮುಂದಿನ ಭಾಗದಲ್ಲಿ ಅಯೋಧ್ಯಾ ಕಾಂಡ ಮುಕ್ತಾಯವಾಗುವುದು.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments