ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಭೀಮಬಲನಾದ ವಿರಾಧ ರಾಕ್ಷಸನನ್ನು ಆ ದಂಡಕಾವನದಲ್ಲಿ ಸಂಹರಿಸಿದ ರಾಮನು ಸೀತೆಯನ್ನು ಸಂತೈಸಿದ. ಅವಳನ್ನು ಆಲಿಂಗಿಸಿ, ಸಮಾಧಾನಪಡಿಸಿ, ಆ ವೀರನು, ಪ್ರಭು ಶ್ರೀರಾಮಚಂದ್ರನು ತನ್ನ ತಮ್ಮನಾದ ಲಕ್ಷ್ಮಣನನ್ನು ಕುರಿತು ಹೀಗೆಂದನು. ಈ ಕಾಡು ಕಷ್ಟ. ಪ್ರಯಾಣವೂ ಕೂಡ ಕಷ್ಟಸಾಧ್ಯ, ಸುಲಭವಲ್ಲ. ನಿಮ್ನೋನ್ನತಗಳು, ಕಂಟಕಗಳು, ದುಷ್ಟಮೃಗಗಳು ಮತ್ತು ದುಷ್ಟರಾಕ್ಷಸರು. ಹಾಗಾಗಿ ಈ ವನದಲ್ಲಿ ಪ್ರಯಾಣ ಸುಲಭವಲ್ಲ. ನಾವು ವನವಾಸಿಗಳಲ್ಲ. ಖಾಯಂ ವನವಾಸಿಗಳಾದರೆ, ಕಾಡಿನಲ್ಲಿಯೇ ಹುಟ್ಟಿ,ಬೆಳೆದವರಾಗಿದ್ದರೆ ಕಾಡು ಅಷ್ಟು ಕಷ್ಟವೆನಿಸುವುದಿಲ್ಲ. ಆದರೆ ಅಪರೂಪಕ್ಕೆ ಕಾಡಿಗೆ ಬಂದವರಿಗೆ ಬಹಳ ಕಷ್ಟವೆನ್ನಿಸಬಹುದು. ನಾವು ಜನ್ಮತಃ ವನವಾಸಿಗಳಲ್ಲ. ಆದುದರಿಂದ ಕಾಡು ನಮಗೆ ಇನ್ನೂ ಕಷ್ಟ. ಹಾಗಾಗಿ ನಾವು ಯಾವುದಾದರೂ ಆಶ್ರಮಕ್ಕೆ ಹೋಗೋಣ. ಶರಭಂಗನ ಆಶ್ರಮ. ಈ ಆಶ್ರಮವನ್ನು ವಿರಾಧನೇ ಉಲ್ಲೇಖಿಸಿದ್ದಾನೆ. ಸಾಯುವಾಗ ವಿರಾಧನು ತುಂಬುರುವಾಗುತ್ತಾನೆ. ಅಂದರೆ ಶರೀರವಿನ್ನೂ ವಿರಾಧನದೇ. ಆದರೆ ಮನಸ್ಸು ತುಂಬುರುವಿನದ್ದಾಗಿದೆ. ಅವನೊಳಗಿನ ಶಾಪಗ್ರಸ್ಥ ತುಂಬುರು. ಆ ತುಂಬುರುವು ಶರಭಂಗನು ನಿನ್ನನ್ನು ಕಾಯುತ್ತಿದ್ದಾನೆ ಎಂದ. ವಿರಾಧನೆಂಬ ಘೋರ ರಾಕ್ಷಸನಿಗೂ, ಋಷಿಗಳಿಗೂ ಏನು ಸಂಬಂಧವೆಂದರೆ, ಅವನು ಋಷಿಮಾಂಸ ಭಕ್ಷಕನೆಂಬುದು ಮಾತ್ರ. ಬೇರಾವ ಸಂಬಂಧವೂ ಇಲ್ಲ. ಮುಂದೆ ನಿನ್ನನ್ನು ಶರಭಂಗನು ಕಾಯುತ್ತಿದ್ದಾನೆ ಎಂಬ ಪರಿಜ್ಞಾನ ಅಂತಹ ವಿರಾಧನಿಗೆ. ಇದು ವಿರಾಧನ ಮೂಲರೂಪವಾದ ತುಂಬುರುವಿನ ದಿವ್ಯಜ್ಞಾನದ ಪ್ರಭಾವ. ಹಾಗಾಗಿ ಅರ್ಧ ಯೋಜನ ದೂರದಲ್ಲಿ, ಇದೇ ದಾರಿಯಲ್ಲಿ ಮುಂದೆ ಶರಭಂಗಾಶ್ರಮವಿದೆ. ಅಲ್ಲಿ ಶರಭಂಗನೆಂಬ ಮಹಾತಪೋನಿಷ್ಠ ನಿನ್ನ ಪ್ರತೀಕ್ಷೆಯಲ್ಲಿದ್ದಾನೆ. ಹಾಗಾಗಿ ಈ ಆಶ್ರಮಕ್ಕೆ ಹೋಗಲು ರಾಮನಿಗೆ ಉತ್ಸುಕತೆ. ಸೀತಾರಾಮ-ಲಕ್ಷ್ಮಣರು ಶರಭಂಗನ ಆಶ್ರಮಕ್ಕೆ ಮುನ್ನಡೆದರು. ಸ್ವಲ್ಪ ದೂರದಲ್ಲಿ ಆಶ್ರಮ ಕಾಣಿಸುತ್ತಿದೆ. ಅದರ ಪರಿಸರದಲ್ಲಿ ಅದ್ಭುತವೊಂದು ಗೋಚರಿಸುತ್ತಿತ್ತ್ತು. ಶರಭಂಗನೆಂದರೆ ದೇವಪ್ರಭಾವ. ದೇವನಲ್ಲ, ಮನುಷ್ಯನೇ. ಆದರದು ಶರೀರ ಮತ್ತು ಜನ್ಮದಿಂದ ಮಾತ್ರ. ಪ್ರಭಾವವೆಲ್ಲ ದೇವತೆಗಳದ್ದು. ಅವನು ಆತ್ಮಭಾವವುಳ್ಳವನು. ತಪಸ್ಸು ಆ ಮಹಾಮುನಿಗೆ ಆತ್ಮಭಾವವನ್ನು ಕೊಟ್ಟಿದೆ. ನಾವೆಲ್ಲ ಇಂದ್ರಿಯಭಾವದಲ್ಲಿ, ಮನೋಭಾವದಲ್ಲಿ ಇದ್ದೇವೆ, ಆತ್ಮಭಾವಕ್ಕೆ ತಲುಪಿಲ್ಲ. ಭಾವವೆಂದರೆ ಸ್ಥಿತಿ. ಆ ಸ್ಥಿತಿಗೆ ನಾವು ತಲುಪಿಲ್ಲ. ಆದರೆ ಶರಭಂಗನು ಆತ್ಮಭಾವವನ್ನು ತಲುಪಿದವನು. ಅಂತಹ ಶರಭಂಗನ ಆಶ್ರಮದಲ್ಲಿ, ಅವನ ಸಮೀಪದಲ್ಲಿಯೇ ಒಂದು ಅದ್ಭುತ ನಡೆಯುತ್ತಿದೆ. ಒಬ್ಬ ಮಹಾಪುರುಷ, ಅವನ ಶರೀರವು ವಿಭ್ರಾಜಮಾನ. ಸೂರ್ಯನಂತೆ, ಅಗ್ನಿಯಂತೆ ಅವನ ತೇಜಸ್ಸು. ಅವನು ರಥದಿಂದ ಇಳಿದು ಬಂದಿದ್ದಾನೆ. ರಥವಿನ್ನೂ ಆಕಾಶದಲ್ಲಿಯೇ ಇದೆ. ಅದು ನೆಲವನ್ನು ತಲುಪಿಲ್ಲ. ಆ ಗಗನಗೋಚರವಾದ ರಥದಿಂದ ಕೆಳಗಿಳಿದು ಬಂದಿದ್ದಾನೆ ಆ ಮಹಾಪುರುಷ, ಆದರೂ ಅವನ ಕಾಲುಗಳು ಭೂಮಿಯನ್ನು ಸ್ಪರ್ಶಿಸುತ್ತಿಲ್ಲ. ಕಾಲುಗಳು ಭೂಮಿಗಿಂತ ಕೊಂಚ ಮೇಲಿದೆ. ಈ ಲಕ್ಷಣ ದೇವತೆಗಳದ್ದು. ಅವನ ಹಿಂದೆ ಅನೇಕ ದಿವ್ಯಪುರುಷರಿದ್ದಾರೆ. ಅವನೇ ದೇವತೆಗಳ ರಾಜ. ಅವನ ದೇಹದಲ್ಲಿ ವಿಚಿತ್ರವಾದ ಆಭರಣಗಳು. ಒಂದೊಂದು ಆಭರಣದಲ್ಲಿಯೂ ಅತಿಶಯವಾದ ಪ್ರಭೆ. ಅವನ ವಸ್ತ್ರಗಳಲ್ಲಿ ಧೂಳಿನ ಸೋಂಕೇಯಿಲ್ಲ. ಇದು ದೇವಸ್ವರೂಪ, ಧೂಳಿನ ಸ್ಪರ್ಶವಿರುವುದಿಲ್ಲ, ಕಣ್ಣು ಮುಚ್ಚುವುದಿಲ್ಲ, ಕಾಲು ಭೂಮಿಗೆ ತಾಗುವುದಿಲ್ಲ. ಅವನಂತೆ ಇರುವ ಅನೇಕರು ಅವನನ್ನು ಪೂಜಿಸುತ್ತಿದ್ದಾರೆ. ಆಕೃತಿಯಲ್ಲಿ, ಆಭರಣಗಳಲ್ಲಿ, ವಸ್ತ್ರಗಳಲ್ಲಿ ಅವನನ್ನೇ ಹೋಲುವ ಅನೇಕರಿಂದ ಅವನು ಗೌರವಿಸಲ್ಪಡುತ್ತಿದ್ದಾನೆ. ಅಲ್ಲೇ ಕೊಂಚ ದೂರದಲ್ಲಿ, ಗಗನದಲ್ಲಿ ಅವನ ರಥವಿದೆ. ಆ ರಥದ ಕುದುರೆಗಳು ಹಸಿರು ಬಣ್ಣದವು. ಅವು ಈ ಲೋಕದ್ದಲ್ಲ. ಅಂತಹ ಸಸ್ಯಬಣ್ಣದ ಕುದುರೆಗಳಿಂದ ಶೋಭಿಸುತ್ತಿತ್ತು ಆ ರಥ. ಅದು ಉದಯಿಸುವ ಸೂರ್ಯನ ಪ್ರಭೆಯನ್ನು ಹೊಂದಿತ್ತು. ಶ್ವೇತಛತ್ರವು ಚಂದ್ರಮಂಡಲದಂತೆ ಇತ್ತು. ಅದು ವಿಮಲ. ಆ ಛತ್ರವನ್ನು ಬಗೆಬಗೆಯ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಆಚೆ-ಈಚೆ ಈರ್ವರು ಶ್ರೇಷ್ಠರಾದ ದಿವ್ಯನಾರಿಯರು ಚಿನ್ನದ ದಂಡವನ್ನು ಹೊಂದಿದ ಚಾಮರವನ್ನೂ, ವ್ಯಜನವನ್ನೂ ದೇವರಾಜನ ನೆತ್ತಿಗೆ ಗಾಳಿ ಬರುವಂತೆ ಬೀಸುತ್ತಿದ್ದರು. ಗಂಧರ್ವರೂ, ದೇವತೆಗಳೂ, ಸಿದ್ಧರೂ ಮತ್ತನೇಕರು ಉತ್ತಮೋತ್ತಮವಾದ ವಚನಗಳಿಂದ ಆ ದೇವನನ್ನು ಸ್ತೋತ್ರ ಮಾಡುತ್ತಿದ್ದರು. ಮಹಾಮುನಿ ಶರಭಂಗನೊಡನೆ ದೇವತೆಗಳ ದೊರೆ ಸಂಭಾಷಣೆ ನಡೆಸುತ್ತಿದ್ದನು. ಅವನನ್ನು ಕಂಡ ರಾಮನು ಲಕ್ಷ್ಮಣನಿಗೆ ಆ ರಥವನ್ನು ತೋರಿಸಿ ಹೀಗೆ ಹೇಳಿದನು. ನೋಡು ಲಕ್ಷ್ಮಣ, ಬೆಳಕಿನಿಂದಲೇ ಆ ರಥವನ್ನು ಮಾಡಿದಂತಿದೆ. ಎಷ್ಟು ಶೋಭೆ ಅದಕ್ಕೆ. ಭೂಮಿಯಲ್ಲಿ ಕಾಣಸಿಗದ ಈ ಅದ್ಭುತ ರಥವನ್ನು ನೋಡು, ಅಂತರಿಕ್ಷದಲ್ಲಿ ಇನ್ನೊಮ್ಮೆ ಸೂರ್ಯೋದಯವಾದಂತಿದೆ ಈ ರಥ. ಆ ಕುದುರೆಗಳನ್ನು ನೋಡು, ನಮ್ಮ ವಿದ್ಯಾಭ್ಯಾಸವನ್ನು ನೆನಪಿಸಿಕೊ, ಈ ಬಣ್ಣದ ಕುದುರೆಗಳು ಇಂದ್ರನವು. ಅವೇ ಈ ದಿವ್ಯಾಶ್ವಗಳು. ಬಂದವನು ಇಂದ್ರನೇ. ಅವನ ಸುತ್ತ ನಿಂತಿರುವ ಖಡ್ಗಪಾಣಿಗಳಾದ, ಸ್ವರ್ಣಕುಂಡಲಧಾರಿಗಳಾದ ಅನೇಕ ಯುವಕರನ್ನು ಪುರುಷವ್ಯಾಘ್ರರು ಎನ್ನಬಹುದು. ಅಗಲವಾದ ವಕ್ಷಸ್ಥಲ, ಪರಿಘಾಯುಧವನ್ನು(ಪರಿಘವೆಂದರೆ ಲೋಹದ ದಂಡ) ಹೋಲುವ ಬಾಹುಗಳು, ಕೆಂಪು ಬಣ್ಣದ ಬಟ್ಟೆ, ಹೆಬ್ಬುಲಿಯ ಪರಾಕ್ರಮ ಅವರದ್ದು. ಅವರು ಅಗ್ನಿಪ್ರಭೆಯ ಹಾರಗಳನ್ನು ಧರಿಸಿದ್ದಾರೆ. ಎಲ್ಲರಿಗೂ 25 ವರ್ಷದ ಪ್ರಾಯ. ಅದನ್ನು ರಾಮ ಗುರುತಿಸಿದ. ಅವನ ಕಣ್ಣುಗಳು ಅಷ್ಟು ಸೂಕ್ಷ್ಮ. ದೇವತೆಗಳಿಗೆ ಸದಾ 25 ವರ್ಷವೆನ್ನುವಂತೆಯೇ ಇರುತ್ತಾರೆ. ಹಾಗಾಗಿ ಇವರೆಲ್ಲಾ ದೇವತೆಗಳು. ಇಲ್ಲವಾದರೆ ಎಲ್ಲರೂ ಇದೇ ವಯಸ್ಸಿನವರಾಗಿರುವುದಿಲ್ಲ. ಇದು ರಾಮನ ವಿದ್ಯಾಭ್ಯಾಸ. ವಯಸ್ಸ್ಥಾಪನೆ ಎನ್ನುವ ವಿಷಯ ಆಯುರ್ವೇದದಲ್ಲಿದೆ. ಅಂದರೆ ಈಗಿರುವ ವಯಸ್ಸನ್ನು ಅಲ್ಲಿಯೇ ನಿಲ್ಲಿಸಿಬಿಡುವುದು ಎಂದು. ಅಂತರ್ಭೂಮ ಗೃಹವನ್ನು ಮಾಡಿ, ಹೊರಗಿನ ಸಂಪರ್ಕವಿಲ್ಲದೇ, ಒಂಭತ್ತು ತಿಂಗಳು ಕಳೆಯುವುದು. ಇಷ್ಟುಕಾಲ ವಿಧಿ-ವಿಧಾನದಂತೆ ಅಲ್ಲಿದ್ದು ಹೊರಗೆ ಬಂದರೆ ವಯಸ್ಸು ಅಲ್ಲೇ ನಿಂತುಬಿಡುವುದು, ಮುಂದುವರಿಯುವುದಿಲ್ಲ. ಹಾಗೇ ದೇವತೆಗಳಿಗೆ ನಿತ್ಯವೂ 25 ವಯಸ್ಸು. ಸೀತೆಯ ರಕ್ಷಣೆಯ ಎಚ್ಚರ ರಾಮ-ಲಕ್ಷ್ಮಣರಲ್ಲಿ ಸದಾ ಇತ್ತು. ಹಾಗಾಗಿ ಲಕ್ಷ್ಮಣನಿಗೆ ಸೀತೆಯ ಬಳಿ ನಿಂತಿರಲು ಹೇಳಿ, ರಾಮನು ಆ ತೇಜಸ್ವಿಯು ಇಂದ್ರನೇ ಎಂಬುದನ್ನು ದೃಢಪಡಿಡಿಸಿಕೊಳ್ಳುವುದಾಗಿ ಹೊರಟ.
ಶರಭಂಗಾಶ್ರಮವನ್ನು ಸಮೀಪಿಸುತ್ತಿದ್ದ ರಾಮನನ್ನು, ದೇವರಾಜನು ಗಮನಿಸಿದನು. ಕೂಡಲೇ ಅವನು ಶರಭಂಗನನ್ನು ಕುರಿತು ನಾನು ಹೋಗಿಬರುವೆ ಎಂದು ಹೇಳಿ, ದೇವತೆಗಳಿಗೆ ಇಂತೆಂದನು. ನೋಡಿ ರಾಮ ಬರುತ್ತಿದ್ದಾನೆ. ಅವನು ಬಂದು ಮಾತನಾಡುವ ಮೊದಲು ನಾನು ಹೊರಡುತ್ತೇನೆ. ರಾಮನು ನನ್ನನ್ನು ಭೇಟಿಯಾಗುವುದು ಹೀಗಲ್ಲ, ಅವನು ದೊಡ್ಡ ಕಾರ್ಯವೊಂದನ್ನು ಮಾಡಬೇಕಿದೆ, ಅದಾದ ಬಳಿಕ. ಅವನು ದೇವಲೋಕದಲ್ಲಿ ಮಾಡಿದ ಪ್ರತಿಜ್ಞೆ ಪೂರ್ತಿಯಾದ ಬಳಿಕ.

ರಾಮನ ದೇವತ್ವವು ಈಗಲೇ ಪ್ರಕಟವಾಗಬಾರದೆಂದು, ವಿಷ್ಣುವು ರಾವಣನನ್ನು ಸಂಹರಿಸುತ್ತೇನೆಂದು ಮಾಡಿದ ಪ್ರತಿಜ್ಞೆಯನ್ನುಲ್ಲೇಖಿಸಿ ಮೇಲಿನಂತೆಂದನು. ರಾಮನ ಬದುಕು ಮನುಷ್ಯರ ಬದುಕಿಗೆ ಬಹಳ ಹತ್ತಿರ. ಕೃಷ್ಣಾವತಾರದಲ್ಲಿ ಹೆಜ್ಜೆಹೆಜ್ಜೆಗೂ ದೇವತ್ವ ಪ್ರಕಟವಾಗುತ್ತದೆ. ಆದರೆ ರಾಮನು ಮನುಷ್ಯರಂತೆಯೇ ಇರುತ್ತಾನೆ. ಈಗ ದೇವತ್ವ ಪ್ರಕಟವಾಗುವ ಸಂದರ್ಭ ಬಂದಿಲ್ಲವೆಂದು, ಯದ್ಧವನ್ನು ಗೆದ್ದ ರಾಮನನ್ನು, ಕಾರ್ಯವನ್ನು ಪೂರ್ತಿಮಾಡಿದ ಬಳಿಕ ನೋಡುವುದಾಗಿ, ಅದೇನು ಬಹಳ ದೂರವೇನಿಲ್ಲವೆಂದು, ಯಾರಿಂದಲೂ ಆಗದ ಕೆಲಸವನ್ನು ರಾಮ ಮಾಡಲಿದ್ದಾನೆ, ಅದು ಆಗಲಿ ಎಂದು ಹೇಳಿ, ಶರಭಂಗನಿಗೆ ವಂದಿಸಿ, ಹಸಿರು ಕುದುರೆಗಳ ರಥವನ್ನೇರಿ ದಿವಿಯನ್ನೇರಿದನು ದೇವೇಂದ್ರ. ಅವನೊಡನೆ ಅವನ ಪರಿವಾರವೂ ತೆರಳಿತು. ಬಂದುಹೋದ ಕುರುಹೂ ಇರಲಿಲ್ಲ. ತಪಸ್ವಿಯ ಮಹಿಮೆ. ಮೂರುಲೋಕದ ಒಡೆಯ ಅವರಿದ್ದಲ್ಲಿ ಬಂದಿದ್ದ. ಇದೆಲ್ಲವೂ ಪೂರ್ವಯೋಜಿತ.

ಅಗ್ನಿಹೋತ್ರದ ಅಗ್ನಿಯ ಬಳಿಯಲ್ಲಿ ಆಸೀನನಾಗಿದ್ದ ಶರಭಂಗನ ಬಳಿ ರಾಮ ಬಂದ. ಜೊತೆಯಲ್ಲಿ ಸೀತೆ, ಲಕ್ಷ್ಮಣರೂ ಇದ್ದಾರೆ. ಅವರೆಲ್ಲರೂ ಮುನಿಗೆ ನಮಸ್ಕರಿಸಿದರು. ಅವರನ್ನು ತುಂಬಾ ಪ್ರೀತಿಯಿಂದ ಉಪಚರಿಸಿದನು ಶರಭಂಗ. ಅವರನ್ನು ಅಂದು ಅಲ್ಲಿಯೇ ಉಳಿಯುವಂತೆ ಹೇಳಿದನು. ಅವನಲ್ಲಿ ರಾಮನು ಕುತೂಹಲದಿಂದ ಬಂದವರು ಯಾರು, ಏಕೆ ಬಂದಿದ್ದರು ಎಂದು ಕೇಳಿದನು. ಶರಭಂಗನು ರಾಮನಿಗೆ ಎಲ್ಲವನ್ನೂ ಹೇಳಿದನು. ಬಂದವನು ಇಂದ್ರನೇ. ನನ್ನನ್ನು ಬ್ರಹ್ಮಲೋಕಕ್ಕೆ ಕರೆದೊಯ್ಯುವ ಸಲುವಾಗಿ ಸಪರಿವಾರನಾಗಿ ಬಂದಿದ್ದ. ನಾನು ಮಾಡ್ಡಿದ ತಪಸ್ಸು, ಸಾಧನೆಯ ಫಲವಾಗಿ ನನಗೆ ಸತ್ಯಲೋಕವು ಪ್ರಾಪ್ತವಾಗಿದೆ. ಆದರೆ ನಾನು ಹೋಗಲಿಲ್ಲ. ಏಕೆಂದರೆ ಅನತಿ ದೂರದಲ್ಲಿ ನೀನಿರುವುದು ನನಗೆ ತಿಳಿಯಿತು. ಬಳಿಸಾರುವ ರಾಮನನ್ನು ಅಂತಃಕರಣದಿಂದ ಕಂಡಿದ್ದ ಮುನಿ. ಹಾಗಾಗಿ ಇಂದ್ರನಿಗೆ ತಾನು ಬರುವುದಿಲ್ಲವೆಂದು ತಿಳಿಸಿದ. ಅವನಿಗೆ ರಾಮನ ಬೆಲೆ ಗೊತ್ತಿದೆ. ಅದಕ್ಕಾಗಿಯೇ ಬ್ರಹ್ಮಲೋಕವನ್ನು, ಈ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಸುಖ ಯಾವುದೋ ಅದರ ಕೋಟಿಪಾಲು ಮಿಗಿಲಾದ ಆ ಲೋಕವನ್ನು ಸೇರಲು ಆಮಂತ್ರಣ ಬಂದರೂ, ಕರೆದುಕೊಂಡು ಹೋಗಲು ದೇವತೆಗಳ ದೊರೆ ಬಂದಿದ್ದರೂ ತಾನು ಬರುವುದಿಲ್ಲವೆಂದ. ಅವನಿಗೆ ಬ್ರಹ್ಮಲೋಕಕ್ಕಿಂತ ರಾಮ ದೊಡ್ಡವನೆಂಬುದು ಗೊತ್ತು. 14 ಲೋಕಗಳಲ್ಲಿ, ಕೆಳಗೆ 7 ತಮೋಲೋಕಗಳು-ಅತಳ, ವಿತಳ,ಸುತಳ,ತಳಾತಳ, ರಸಾತಳ, ಮಹಾತಳ, ಪಾತಾಳ. 7 ತೇಜೋಲೋಕಗಳು- ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯಂ. ಆ ಸತ್ಯ ಲೋಕಕ್ಕೆ ಕರೆದೊಯ್ಯಲು ದೇವರಾಜ ಬಂದಿದ್ದ. ಆದರೆ ಶರಭಂಗನು ರಾಮ ಬರುವುದನ್ನು ತಿಳಿದಿದ್ದರಿಂದ, ನಿನ್ನ ದರ್ಶನವಾದ ನಂತರ ಅಲ್ಲಿ ಹೋಗುತ್ತೇನೆ ಎಂದು ರಾಮನಿಗೆ ಹೇಳಿದ. ರಾಮ ಸಾಮಾನ್ಯನಂತೆ ಇದ್ದರೂ ಕೂಡಾ ಇಂತಹವರಿಗೆ ಅವನ ಗುರುತು ಸಿಕ್ಕಿದೆ. ನಿನ್ನ ಜೊತೆಗೆ ಕಳೆಯುವ ಕೊಂಚಕಾಲ ನನ್ನ ಬದುಕಿನ ಸ್ವರ್ಣಕಾಲ. ಅದು ಕಳೆದ ಮೇಲೆ ಬ್ರಹ್ಮಲೋಕಕ್ಕೆ ಹೋಗುತ್ತೇನೆ. ಪ್ರಭು, ನನ್ನ ತಪಸ್ಸಿನಿಂದ ನಾನು ಗಳಿಸಿದ ಅನೇಕ ಲೋಕಗಳಿವೆ. ಸ್ವರ್ಗಲೋಕದಲ್ಲೂ ಬೇರೆ ಬೇರೆ ಲೋಕಗಳನ್ನೂ ಸಂಪಾದಿಸಿದ್ದೇನೆ. ಅದೆಲ್ಲ ನಿನಗಿರಲಿ. ನಿನಗೇ ಸಮರ್ಪಣೆ ಎಂದಾಗ ರಾಮನು ಬೇಡ , ನನಗೆ ಬೇಕಾದ ಲೋಕವನ್ನು ನಾನೇ ಸಂಪಾದಿಸಿಕೊಳ್ಳುತ್ತೇನೆ, ಪ್ರತಿಗ್ರಹ ನನಗೆ ಬೇಡ ಎಂದ. ಇದು ರಾಮನ ಸ್ವಭಾವ. ನನ್ನದು ನನಗೆ, ನಿನ್ನದು ನಿನಗೆ ಇದು ಕೆಲವರ ಸ್ವಭಾವವಾದರೆ, ಇನ್ನು ಕೆಲವರು ನನ್ನದು ನಿನಗೆ, ನಿನ್ನದು ನನಗೆ ಎಂದು ವಿನಿಮಯ ಮಾಡುವವರು. ಮತ್ತೆ ಕೆಲವರು ನನ್ನದು ನನಗೆ, ನಿನ್ನದೂ ನನಗೆ ಎನ್ನುವವರು. ನಿನ್ನದು ನಿನಗೆ, ನನ್ನದನ್ನೂ ಬೇಕಾದರೆ ನಿನಗೇ ಕೊಡುತ್ತೇನೆಂಬುದು ರಾಮನ ವ್ಯಕ್ತಿತ್ವ. ತನ್ನ ರಾಜ್ಯವನ್ನು ಭರತನಿಗೆ ಕೊಟ್ಟ ರಾಮ. ಹಾಗಾಗಿ ನನಗೆ ವನವಾಸ ಕಳೆಯಲು ಒಳ್ಳೆಯ ಜಾಗ ತೋರಿಸಿಕೊಡಿ ಸಾಕು ಎಂದ. ಶುಕ್ರನಿಗೆ ಸಮವಾದಂತಹ ಪ್ರಭಾವ, ಬಲವುಳ್ಳವನಾದ ರಾಮನನ್ನು ಕುರಿತು ಶರಭಂಗನು, ಇಲ್ಲಿಂದ ಅನತಿ ದೂರದಲ್ಲಿ, ಸುತೀಕ್ಷ್ಣನೆಂಬ ಋಷಿ ವಾಸಮಾಡುತ್ತಾನೆ. ಮಹಾತಪಸ್ವಿ ಅವನು. ನೀನು ಅವನನ್ನು ಹೋಗಿ ಸೇರು. ಬಹಳ ರಮಣೀಯ ತಪೋಭೂಮಿ ಅದು. ಆತನು ನಿನಗೆ ವಾಸದ ವ್ಯವಸ್ಥೆಯನ್ನು ಮಾಡುತ್ತಾನೆ. ಮಂದಾಕಿನೀ ನದಿಗೆ ಇದಿರಾಗಿ ಸಾಗು, ನದಿಯಲ್ಲಿ ಅನೇಕ ಹೂಗಳು ತೇಲಿಬರುತ್ತವೆ. ಅದನ್ನು ನೋಡುತ್ತಾ ಸುತೀಕ್ಷ್ಣನ ಆಶ್ರಮವನ್ನು ಸೇರಿ. ಅಲ್ಲಿ, ಅವನು ತೋರಿದಲ್ಲಿ ನೀವು ವಾಸಮಾದಬಹುದು. ಆದರೆ ಈಗಲೇ ಹೊರಡಬೇಡ. ನನ್ನನ್ನೊಮ್ಮೆ ನೋಡು. ನಿನ್ನ ಅಮೃತ ದೃಷ್ಟಿ ನನ್ನ ಮೇಲೆ ಬೀಳಲಿ. ದೇಹ, ಮನಸ್ಸು, ಆತ್ಮ ತಂಪಾಗುವುದು. ನಾನು ದೇಹವನ್ನು ಬಿಡುತ್ತೇನೆ, ಹಾವು ಪೊರೆಬಿಡುವಂತೆ ಎಂದು ಹೇಳಿ, ಅವನ ಮುಂದಿದ್ದ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಿ ಅದನ್ನು ಸರಳವಾಗಿ ಪ್ರವೇಶಿಸಿದನು. ಸೀತಾರಾಮ, ಲಕ್ಷ್ಮಣರ ಮುಂದೆ ಅಗ್ನಿಯು ಶರಭಂಗನನ್ನು ದಹಿಸಿತು. ಅವರು ನೋಡುನೋಡುತ್ತಿದ್ದಂತೆಯೇ ಆ ಅಗ್ನಿಯಿಂದ ಕುಮಾರನೊಬ್ಬ ಬಂದ.

ದಿವ್ಯಶರೀರ ಅವನದು. ಶರಭಂಗನೇ ಅವನು. ಆದರೆ ವೃದ್ಧನಲ್ಲ. ನಮಗೆ ಮೃತ್ಯುವೆಂದರೆ ಭಯ. ಆದರೆ ಶರಭಂಗನು ಅದನ್ನು ಪ್ರಿಯಸಖನಂತೆ, ಹಳೆಯ ಬಟ್ಟೆ ತೆಗೆದು ಹೊಸದನ್ನು ತೊಟ್ಟಂತೆ ಸುಖವಾಗಿ, ಸಹಜವಾಗಿ ಬರಮಾಡಿಕೊಂಡ. ರಾಮನು ಇದನ್ನು ವಿಸ್ಮಿತನಾಗಿ ನೋಡುತ್ತಿದ್ದ. ಸುಕುಮಾರನಾದ ಶರಭಂಗನು, ಅಗ್ನಿಹೋತ್ರ ನಡೆಸಿದವರಿಗೆ ಯಾವ ಲೋಕ ಸಿಗುವುದೋ ಆ ಲೋಕವನ್ನು ಸೇರಿದನು. ದೇವಲೋಕಗಳನ್ನೂ, ಯಕ್ಷ,ಗಂಧರ್ವ, ಕಿನ್ನರ-ಕಿಂಪುರುಷರ ಲೋಕಗಳನ್ನು ದಾಟಿ, ಬ್ರಹ್ಮಲೋಕವನ್ನು ಸೇರಿದನು. ಸಾಕ್ಷಾತ್ ಬ್ರಹ್ಮದೇವನೇ ಬಂದು ಅವನನ್ನು ಸ್ವಾಗತಿಸಿದ. ಅದೇ ಸಮಯದಲ್ಲಿ, ದೊಡ್ಡ ಋಷಿಗಳ ಗುಂಪೊಂದು ರಾಮನನ್ನು ನೋಡಲು ಶರಭಂಗಾಶ್ರಮಕ್ಕೆ ಬಂದಿತು. ತೇಜೋಮೂರ್ತಿಯಾದ ರಾಮನನ್ನು ಕಾಣಲು, ಅಂತಃಕರಣ ತೋರಿದ ದಾರಿಯಲ್ಲಿ ಅನೇಕ ಮಹರ್ಷಿಗಳು ಬಂದರು. ಇವರೆಲ್ಲರೂ ಯೋಗದಲ್ಲಿ ದೃಢವಾಗಿ ನೆಲೆನಿಂತವರು, ಏಕಾಗ್ರತೆಯುಳ್ಳವರು. ಅವರು ರಾಮನನ್ನು ಕುರಿತು ಹೇ ಮಹಾರಥನೇ, ನೀನು ಇಕ್ಷ್ವಾಕುವಂಶಕ್ಕೆ, ಇಡೀ ಭೂಮಂಡಲಕ್ಕೇ ಪ್ರಧಾನನಾಗಿರುವವನು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ನೀನಾರೆಂಬುದು ಮೂರುಲೋಕಕ್ಕೇ ಗೊತ್ತಿದೆ. ನಿನ್ನ ಸತ್ಯ,ಧರ್ಮ ಎಲ್ಲರಿಗೂ ಗೊತ್ತು. ಧರ್ಮಜ್ಞನಾದ ನಿನ್ನನ್ನು ಸಂಧಿಸಿ, ನಿನ್ನನ್ನುದ್ದೇಶಿಸಿ ಈ ಮಾತುಗಳನ್ನು ಹೇಳುತ್ತೇವೆ. ನಾವು ಯಾಚಕರು, ಹಾಗಾಗಿ ನಮ್ಮ ಮಾತನ್ನು ಮನ್ನಿಸಬೇಕು. ಪ್ರಜೆಗಳ 1/6 ನೇ ಭಾಗವನ್ನು ಸ್ವೀಕರಿಸಿ ಅವರನ್ನು ಪಾಲಿಸಬೇಕಾದ್ದು ರಾಜನ ಧರ್ಮ. ಇಲ್ಲದಿದ್ದರೆ ದೋಷವದು. ಅವನು ತನ್ನ ಪ್ರಾಣದಂತೆ ಪ್ರಜೆಗಳನ್ನು ರಕ್ಷಿಸಬೇಕು. ಮಕ್ಕಳಂತೆ ಅವರನ್ನು ನೋಡಿಕೊಳ್ಳಬೇಕು. ಪ್ರಜೆಗಳೊಡನೆ ನಿತ್ಯ ಸೇರಿರಬೇಕು. ಅವರನ್ನು ಮರೆಯಬಾರದು. ಇಂತಹ ದೊರೆ ಈ ಲೋಕದಲ್ಲಿ ಕೀರ್ತಿಯನ್ನು, ಮುಂದೆ ಬ್ರಹ್ಮಲೋಕವನ್ನು ಪಡೆಯುತ್ತಾನೆ. ಊರಿನಲ್ಲಿರುವ ಋಷಿಗಳು ತಮ್ಮ ಪುಣ್ಯದ 1/6 ನೇ ಭಾಗವನ್ನು ರಾಜನಿಗೆ ಕೊಡಬೇಕು. ಅರಣ್ಯದ ಋಷಿಗಳ ತಪಸ್ಸಿನ 1/4 ನೇ ಭಾಗವು ದೊರೆಗೆ ಸೇರುತ್ತದೆ. ಪ್ರಜೆಗಳ ಪಾಪದಲ್ಲೂ ರಾಜನ ಪಾಲಿದೆ. ಹಾಗಾಗಿ ರಾಜ್ಯದಲ್ಲಿ ಅಧರ್ಮವಿದೆಯೋ ಆ ರಾಜ ಮಹಾಪಾಪಿಯಾಗುತ್ತಾನೆ. ಎಲ್ಲಿ ಋಷಿಗಳಿರುತ್ತಾರೆ, ತಪಸ್ಸು ಮಾಡುತ್ತಾರೆ ಆ ರಾಜ ರಾಜರ್ಷಿಯಾಗುತ್ತಾನೆ. ಆದ್ದರಿಂದ ತನ್ನ ರಾಜ್ಯದಲ್ಲಿ ತಪಸ್ವಿಗಳಿರುವಂತೆ ನೋಡಿಕೊಳ್ಳುವುದು ರಾಜನಿಗೆ ಒಳ್ಳೆಯದು. ಇದು ವ್ಯವಸ್ಥೆ. ನಾವು 1/4 ನೇ ಭಾಗವನ್ನು ರಾಜನಿಗೆ ಕೊಡುವವರು, ಆದರೆ ನಮ್ಮ ಸ್ಥಿತಿ ಅನಾಥರಂತೆ ಇದೆ. ರಾಕ್ಷಸರು ನಮ್ಮನ್ನು ಪೀಡಿಸುತ್ತಿದ್ದಾರೆ, ಕಂಡಲ್ಲಿ ಕಂಡಂತೆ ಕೊಲ್ಲುತ್ತಿದ್ದಾರೆ. ಬಾ ರಾಮ, ನೋಡು, ಆತ್ಮಭಾವದಲ್ಲಿ ಇರುವ ಮುನಿಗಳನ್ನು ರಾಕ್ಷಸರು ಕೊಂದು, ತಿಂದುಳಿದ ಮೂಳೆಗಳ ರಾಶಿ. ಪಂಪಾನದಿ ತೀರದಲ್ಲಿರುವವರ ಸ್ಥಿತಿ ಘೋರವಾಗಿದೆ.ಈ ಅಪಚಾರವನ್ನು ನಾವು ಸಹಿಸಲಾರೆವು. ರಾಕ್ಷಸರವು ಭೀಮಕರ್ಮಗಳು. ಹಾಗಾಗಿ ನಾವು ನಿನ್ನ ಬಳಿ ರಕ್ಷಣೆ ಕೇಳಿ ಬಂದೆವು. ನಮ್ಮನ್ನು ಕಾಪಾಡು ರಾಮ. ನೀನೇ ನಮಗೆ ಅಭಯ ಕೊಡಬೇಕು. ದೊರೆಯೇ ಪಾಲಿಸು ನಮ್ಮನ್ನು.
ಅವರ ದೃಷ್ಟಿಯಿಂದ ರಾಮನೇ ದೊರೆ. ಅವನು ಅರಮನೆಯಲ್ಲಿದ್ದರೂ, ಕಾಡಿನಲ್ಲಿದ್ದರೂ, ಅವರಿಗೆ ಅವನೇ ರಾಜ. ಆ ಋಷಿಸಂಘಗಳನ್ನು ಕುರಿತು ರಾಮನು ಹೀಗೆಂದನು. ಹೀಗೆ ಹೇಳಬೇಡಿ ನೀವು. ನನಗೆ ನೀವು ಆಜ್ಞೆಮಾಡಬೇಕು, ನಿಮ್ಮಿಂದ ನಾನು ಯಾಚನೆಗೆ ಅರ್ಹನಲ್ಲ. ಅಪ್ಪಣೆ ಮಾಡಿ ನನಗೆ. ಇದು ಆಗಿನ ಕಾಲದ ಭಾವ. ಆತ್ಮಕಾರ್ಯಕ್ಕಾಗಿ ಬಂದ ನನಗೆ, ಇಷ್ಟು ದೊಡ್ಡ ಕಾರ್ಯದ ಅವಕಾಶ ಒದಗಿ ಬಂದಿದೆ. ನನ್ನ ವನವಾಸಕ್ಕೆ ದೊಡ್ಡ ಫಲ ಬಂತು, ತಪಸ್ವಿಗಳ ಶತ್ರುಗಳನ್ನು ಯುದ್ಧದಲ್ಲಿ ಕೊಲ್ಲುವೆ, ನೋಡಿ, ಕಾಲ ಬಂದಾಗ ರಾಮನೇನು, ಲಕ್ಷ್ಮಣನೇನು ಎಂಬುದನ್ನು, ನಮ್ಮ ಪರಾಕ್ರಮವನ್ನು. ಅವರಿಗೆ ಅಭಯವನ್ನಿತ್ತು, ಆ ಎಲ್ಲಾ ಋಷಿಗಳನ್ನು ಕೂಡಿಕೊಂಡು ರಾಮನು ಮುಂದೆ ಪ್ರಯಾಣಿಸಿದನು.

ಧರ್ಮದಲ್ಲಿ ಯಾರ ಆತ್ಮನೆಲೆಸಿದೆಯೋ, ಅಂಥವನು ರಾಮ. ಧರ್ಮಕ್ಕೆ ಕಂಟಕ ಬಂದಾಗ ಧನುಸ್ಸನ್ನೆತ್ತುವ ರಾಮ ಋಷಿಗಳೊಡಗೂಡಿ ಸುತೀಕ್ಷ್ಣನ ಆಶ್ರಮದ ಕಡೆ ಹೊರಟ. ಅನೇಕ ಹೊಳೆಗಳನ್ನು ದಾಟಿಹೋದ ನಂತರ ಶೈಲವೊಂದನ್ನು ಕಂಡ.

ಆ ಘೋರವಾದ ಕಾಡಿನಲ್ಲಿ ಬಗೆಬಗೆಯ ಹೂ-ಹಣ್ಣುಗಳಿದ್ದವು. ಆ ಪರಿಸರದಲ್ಲಿ, ಏಕಾಂತದಲ್ಲಿ ನಾರುಬಟ್ಟೆಗಳನ್ನು ಒಣಗಿಸಿದ್ದ ಆಶ್ರಮದಲ್ಲಿ ಸುತೀಕ್ಷ್ಣನನ್ನು ರಾಮ ಕಂಡ. ಆ ತಾಪಸನು ಸುಖಾಸೀನನಾಗಿದ್ದ. ಅವನ ಮೈಗೆ ಧೂಳು ಮೆತ್ತಿತ್ತು. ನಾರುಬಟ್ಟೆ ಹಳೆಯದಾಗಿತ್ತು. ದೇಹ ಮಲಿನವಾಗಿತ್ತು. ಅವನಿಗೆ ತಪಸ್ಸೇ ಸಂಪತ್ತು. ಅಂತಹ ಸುತೀಕ್ಷ್ಣನನ್ನು ಕುರಿತು, ನಾನು ರಾಮ. ನಿಮ್ಮನ್ನು ಕಾಣಲು ಇಲ್ಲಿಗೆ ಬಂದೆ. ಆಶೀರ್ವದಿಸಿ ನನ್ನನ್ನು ಎಂದು ಪ್ರಣಾಮ ಮಾಡಿದನು. ಆಗ ಸುತೀಕ್ಷ್ಣನು ಸಣ್ಣದಾಗಿ ಕಣ್ಣು ತೆಗೆದು, ಅಂತರಂಗದಲ್ಲಿ ಕಂಡ ರಾಮನನ್ನು ಕಣ್ಣಾರೆ ನೋಡಿದ. ಎದ್ದು ರಾಮನನ್ನು ತಬ್ಬಿಕೊಂಡು, ಅವನನ್ನು ಸ್ವಾಗತಿಸಿದ. ನಿನ್ನ ಸೇವಕ ನಾನು, ಬಹುಕಾಲದಿಂದ ನಿನಗಾಗಿ ಕಾದಿದ್ದೆ, ಒಡೆಯ ನೀನು ಇವತ್ತು ಬಂದೆ. ಇಂದ್ರ ಇಲ್ಲಿಯೂ ಕೂಡ ಬಂದಿದ್ದ. ತಪಸ್ಸಿನ ಫಲವಾಗಿ ದೊರೆತ ಬ್ರಹ್ಮಲೋಕಕ್ಕೆ ನನ್ನನ್ನು ಕರೆದೊಯ್ಯುವ ಸಲುವಾಗಿ. ಆದರೆ ನಾನು ಹೋಗಲಿಲ್ಲ. ಏಕೆಂದರೆ ನಾನು ನಿನ್ನನ್ನು ಕಾಯುತ್ತಿದ್ದೆ ಎಂದ. ಅವನ ಅಂತರಂಗ ಬೆಳಕಾಗಿದ್ದರಿಂದ ರಾಮ ಬರುವುದು ಮೊದಲೇ ತಿಳಿದಿತ್ತು ಸುತೀಕ್ಷ್ಣನಿಗೆ. ನೀನು ಚಿತ್ರಕೂಟಕ್ಕೆ ಬಂದ ವಿಷಯ ನನಗೆ ಇಂದ್ರನಿಂದ ಗೊತ್ತಾಯಿತು, ನನ್ನ ಪುಣ್ಯದಿಂದ ಬ್ರಹ್ಮಲೋಕ ಪ್ರಾಪ್ತವಾಗಿದೆ ಎಂದು ಅವನು ಹೇಳಿದ. ಆದರೆ ನನಗೆ ಅದಾವ ಲೋಕವೂ ಬೇಡ. ನಿನಗೇ ಕೊಟ್ಟುಬಿಡಲೇ ಎಂದು ಕೇಳಿದಾಗ ರಾಮನು ಅದು ಬೇಡ, ವಸತಿ ವ್ಯವಸ್ಥೆ ಬೇಕಾಗಿದೆ, ನನಗೆ ಗೌತಮವಂಶದ ಶರಭಂಗರಿಂದ ತಮ್ಮ ಬಗ್ಗೆ ತಿಳಿಯಿತು ಎಂದ. ಸುತೀಕ್ಷ್ಣನು ಹರ್ಷದಿಂದ ನೀನಿಲ್ಲಿಯೇಯಿರು, ಇದು ನಿನ್ನದೇ, ಅನೇಕ ಋಷಿಗಳು ಇಲ್ಲಿ ಬರುತ್ತಾರೆ. ಆದರೆ ಕಾಡು ಜಿಂಕೆಗಳು ಮಾತ್ರ ಬಂದು ಹೋಗುತ್ತಿರುತ್ತವೆ, ಅವುಗಳಿಗೆ ಇಲ್ಲಿ ಭಯವಿಲ್ಲ ಎಂದ. ಆಗ ರಾಮ ತನ್ನ ಧನುಸ್ಸನ್ನು ಎಳೆದು, ಅವುಗಳನ್ನು ಕ್ಷಣದಲ್ಲಿ ಸಂಹಾರ ಮಾಡಿಬಿಡುತ್ತೇನೆ ಎಂದ ಆದರೆ ಏನೂ ಮಾಡಲಿಲ್ಲ, ಅದರಿಂದ ಅವನಿಗೆ ನೋವಾಗಬಹುದೆಂಬುವುದು ರಾಮನಿಗೆ ಗೊತ್ತು. ತಪಸ್ಸಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕ್ಷತ್ರಿಯನಾದ ನನ್ನ ಕರ್ತವ್ಯ ಆದರೆ ಹಾಗೆ ಮಾಡಿದರೆ ನಿಮಗೆ ಸಮಾಧಾನ ಇರುವುದಿಲ್ಲ. ಹಾಗಾಗಿ ನಾನು ಬೇರೆಯೆಲ್ಲಾದರೂ ಹೋಗುತ್ತೇನೆ ಎಂದು ಹೇಳಿ, ಸಂಧ್ಯಾವಂದನೆಗೆ ಕುಳಿತನು. ಆ ರಾತ್ರಿ ಅಲ್ಲಿಯೇ ವಾಸಮಾಡಿದನು. ರಾಮ, ಸೀತೆ, ಲಕ್ಷ್ಮಣರನ್ನು ಸುತೀಕ್ಷ್ಣನು ಬಗೆಬಗೆಯಾಗಿ ಉಪಚರಿಸಿದನು. ಅವನು ದೇಹತ್ಯಾಗ ಮಾಡಲಿಲ್ಲ. ಏಕೆಂದರೆ ಅವನಿಗೆ ಮುಂದೆ ಕರ್ತವ್ಯವಿದೆ. ಮುಂದೆ ಕಥೆಗೆ ತಿರುವು ಕೊಡುವವನಿವನು. ಸಂಧ್ಯಾಕಾಲದ ನಂತರ ರಾಮನಿಗೆ ಒಳ್ಳೆಯ ಮುನಿಭೋಜನವಾಯಿತು. ಸಂಧ್ಯಾಕಾಲದಲ್ಲಿ ಆಹಾರಸೇವನೆ ವರ್ಜ್ಯ. ಆ ಸಮಯದಲ್ಲಿ ರಜೋಗುಣ ಮತ್ತು ತಮೋಗುಣದ ಕೆಲಸ ಮಾಡಬಾರದು. ರಾತ್ರಿ ಕಳೆದು ಬೆಳಗಾಗಿ, ರಾಮನು ಕಮಲಗಂಧದ ತಂಪಾದ ನೀರಿನಲ್ಲಿ ಸೀತೆಯ ಜೊತೆ ಸ್ನಾನ ಮಾಡಿದನು. ಬಳಿಕ ದೇವ, ಅಗ್ನಿಪೂಜೆಯನ್ನು ಸೀತಾರಾಮರು ಮತ್ತು ಲಕ್ಷ್ಮಣನೂ ಮಾಡಿದರು. ಸೂರ್ಯನ ದರ್ಶನದ ನಂತರ ಸುತೀಕ್ಷ್ಣನ ಬಳಿ ಹೋಗಿ ಸುಖವಾಗಿ ರಾತ್ರಿ ಉಳಿದೆವು, ತಮ್ಮಿಂದ ದೊಡ್ಡ ಆತಿಥ್ಯ ನಮಗಾಯಿತು, ಹೋಗಿಬರುತ್ತೇವೆ ಎಂದರು. ನಮಗೆ ಅವಸರವಿಲ್ಲ. ಈ ಎಲ್ಲ ಋಷಿಗಳಿಗೆ ಆಶ್ರಮಗಳನ್ನೆಲ್ಲಾ ತೋರಿಸಬೇಕಂತೆ, ಅವರು ಅವಸರಿಸುತ್ತಿದ್ದಾರೆ. ನಾವಿನ್ನು ಹೋಗಿಬರುತ್ತೇವೆ. ಇನ್ನು ಸ್ವಲ್ಪ ಹೊತ್ತಿನಲ್ಲಿ, ಸೂರ್ಯನು ಅನ್ಯಾಯದ ಹಾದಿಯಲ್ಲಿ ಸಂಪಾದನೆ ಮಾಡಿದವರು ಉರಿಯುವಹಾಗೆ ಉರಿಯುತ್ತಾನೆ ಎಂಬ ಉದಾಹರಣೆಯನ್ನೂ ನೀಡಿ, ಅಪ್ಪಣೆಕೊಡಿ ಎಂದಾಗ ಸುತೀಕ್ಷ್ಣನು ಅವರನ್ನು ಆಲಿಂಗಿಸಿ, ಮುಂದಿನ ದಾರಿ ತೋರಿಸಿ ಮತ್ತೆ ಬರಬೇಕೆಂದು ಹೇಳಿ ಆ ಪ್ರದೇಶದ ವರ್ಣನೆಯನ್ನು ಮಾಡಿ, ಅವರನ್ನು ಕಳುಹಿಸಿಕೊಟ್ಟ. ಆಗ ಸೀತೆ ರಾಮ-ಲಕ್ಷ್ಮಣರ ಧನುಸ್ಸು, ಖಡ್ಗ, ಬತ್ತಳಿಕೆಗಳನ್ನು ತಂದುಕೊಟ್ಟಳು. ತಮ್ಮ ತೇಜಸ್ಸಿನಿಂದಲೇ ಅಲಂಕೃತರಾಗಿ, ರಾಮ, ಲಕ್ಷ್ಮಣ, ಸೀತೆಯರು ಮುಂದಿನ ಆಶ್ರಮದ ಕಡೆಗೆ ಹೊರಟರು. ಹೊರಟ ಸ್ವಲ್ಪ ಹೊತ್ತಿನಲ್ಲಿ ಸೀತೆ ರಾಮನಿಗೆ ಒಂದು ಮಾತನ್ನು ಹೇಳಿದಳು. ಪ್ರಭು, ನೀನು ಮಾಡಿದ್ದು ನನಗೆ ಸರಿಯೆನಿಸಲಿಲ್ಲ. ರಾಮನ ಯಾವುದೋ ಒಂದು ಕಾರ್ಯವನ್ನು ಕುರಿತು ಅವಳು ನನಗೆ ಸರಿಕಾಣಲಿಲ್ಲ ಎಂಬುದಾಗಿ ಹೇಳಿದಳು. ರಾಮನ ನಡೆಯನ್ನು ಸೀತೆ ಪ್ರಶ್ನಿಸಿದಳು. ಅದು ಏನೆಂಬುದನ್ನು ಮುಂದಿನ ಕಥೆಯಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments