ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಜಿಜ್ಞಾಸೆ ತಪ್ಪಲ್ಲ. ಅರಿವಿನ ಬಯಕೆ ಅಪರಾಧವಲ್ಲ. ಎಷ್ಟು ಒಳ್ಳೆಯವರಾದರೂ, ದೊಡ್ಡವರಾದರೂ ನಮಗೆ ಅರ್ಥವಾಗದಿದ್ದರೆ ಕೇಳಬಾರದು ಅಂತಿಲ್ಲ. ಕೇಳುವ ಸ್ಥಾನದಲ್ಲಿದ್ದರೆ ಸರಿ, ಇಲ್ಲದಿದ್ದರೆ ಕೇಳುವ ಭಾಷೆಯಲ್ಲಿ, ಶೈಲಿಯಲ್ಲಿ, ರೀತಿಯಲ್ಲಿ ಹಿತೈಷಿಗಳಾಗಿ ಹೇಳಬಹುದು.

ಸುತೀಕ್ಷ್ಣನ ಆಶ್ರಮದಿಂದ ರಾಮ ಲಕ್ಷ್ಮಣ ಸೀತೆಯರು ಹೊರಟಿದ್ದಾರೆ. ಸ್ವತಃ ಸೀತೆಯೇ ರಾಮ ಲಕ್ಷ್ಮಣರಿಗೆ ಅವರ ಶಸ್ತ್ರಗಳನ್ನು ತಂದು ಕೊಟ್ಟಿದ್ದಾಳೆ. ಪ್ರಯಾಣದ ಮಧ್ಯೆ ಅವುಗಳ ಕುರಿತಾಗಿ ಕೆಲವು ಮಾತುಗಳನ್ನಾಡುತ್ತಾಳೆ ಸೀತೆ. ಕಾಮಜ ವ್ಯಸನಗಳು ಎಂಬುದಾಗಿ ಬಯಕೆಯೇ ಬೀಜವಾಗಿ ಹುಟ್ಟುವ ಮೂರು ವ್ಯಸನಗಳನ್ನು ಸೀತೆ ಉಲ್ಲೇಖಿಸುತ್ತಾಳೆ. ಮಿಥ್ಯಾವಾಕ್ಯ, ಪರದಾರಾಭಿಗಮನ, ವೈರವಿಲ್ಲದ ರೌದ್ರತೆ.

ಪರಸ್ವತ್ತುಗಳ ಮೇಲಿನ ಅಭಿಲಾಷೆ ಧರ್ಮನಾಶಕ್ಕೆ ಕಾರಣವಾಗುತ್ತದೆ.

ಮಿಥ್ಯಾವಾಕ್ಯವು ನಿನ್ನಲ್ಲಿ ಬಂದಿಲ್ಲ, ಬರುವುದೂ ಇಲ್ಲ. ಪರಸ್ತ್ರೀಯರ ಅಭಿಲಾಷೆ ನಿನ್ನಲ್ಲದು ಬಂದಿಲ್ಲ. ನಿನ್ನ ಮನಸ್ಸಿನಲ್ಲಿಯೂ ಈ ಭಾವ ಸುಳಿದಿಲ್ಲ. ನಿನ್ನ ಇಂದ್ರಿಯಗಳು ನಿನ್ನ ವಶದಲ್ಲಿವೆ. ನಾನು ಹೇಳಿದ ಮೂರು ಪಾಪಗಳ ಪೈಕಿ ಮೊದಲ ಮೂರು ನಿನ್ನಲ್ಲಿಲ್ಲ. ಮೂರನೆಯದರ ಬಗ್ಗೆ ಆತಂಕ ನನಗೆ. ಅಕಾರಣವಾದ ರೌದ್ರತೆ. ನಿನ್ನ ಮುಂದಿದು ಬಂದು ನಿಂತಿದೆ. ದಂಡಕಾರಣ್ಯ ವಾಸಿಗಳಾದ ಋಷಿಗಳ ರಕ್ಷಣೆಗಾಗಿ ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸುವ ಪ್ರತಿಜ್ಞೆ ಮಾಡಿರುವುದು ನನಗೆ ತಿಳಿದಿದೆ. ಅನವರತ ನಿನ್ನ ಹಿತ ಬಯಸುವ ನನಗೆ ರಾಕ್ಷಸರ ಕೋಟೆಯ ಮಧ್ಯೆ ಹೋಗುವುದು ಇಷ್ಟವಾಗುತ್ತಿಲ್ಲ. ಕಾರಣವಿದೆ, ಬಾಣ ಧನುಷ್ಪಾಣಿಯಾಗಿ ಸಹೋದರನೊಡನೆ ವಿಹರಿಸುವ ನೀನು ವನಚರರನ್ನು ನೋಡಿದೊಡನೆ ಶರವ್ಯಯ ಮಾಡೀಯೆ..ಎಂದು ಹೇಳಿ ಕಥೆಯೊಂದನ್ನು ಹೇಳುತ್ತಾಳೆ.

ಹಿಂದೊಮ್ಮೆ ಸತ್ಯವಂತನಾದ ತಪಸ್ವಿ ತಪೋವನದಲ್ಲಿ ತಪಸ್ಸು ಮಾಡುತ್ತಿದ್ದ. ಇವನ ತಪಸ್ಸಿಗೆ ವಿಘ್ನ ಮಾಡಲು ಖಡ್ಗಪಾಣಿಯಾಗಿ ಇಂದ್ರ ಆಶ್ರಮಕ್ಕೆ ಬಂದ. ಸತ್ಕಾರಗಳನ್ನು ಸ್ವೀಕರಿಸುವಾಗ ಖಡ್ಗವನ್ನು ಋಷಿಯ ಕೈಯಲ್ಲಿಟ್ಟು ಇದನ್ನು ಇಟ್ಟುಕೊಂಡಿರು ನಾನು ಮತ್ತೆ ಬಂದು ತೆಗೆದುಕೊಳ್ಳುವೆನೆಂದು ನ್ಯಾಸವಾಗಿ ಕೊಟ್ಟು ಹೋದ. ಜಾಗ್ರತೆಯಾಗಿ ಕಾಪಾಡಬೇಕೆಂಬ ಉದ್ದೇಶದಿಂದ ಮುನಿಯು ಖಡ್ಗವನ್ನು ಜೊತೆಯಲ್ಲಿಯೇ ಇಟ್ಟುಕೊಂಡು ವನದಲ್ಲಿಯೂ ಸಂಚರಿಸಲು ಆರಂಭಿಸಿದ. ಮೊದಮೊದಲು ಸಸ್ಯಗಳ ಮೇಲೆ ಪ್ರಯೋಗಿಸಿ ನಂತರ ಪ್ರಾಣಿಗಳ ಮೇಲೂ ಉಪಯೋಗಿಸಿ ಕೊನೆಗೊಮ್ಮೆ ಇದೇ ಖಡ್ಗದ ಕಾರಣದಿಂದ ಮುನಿ ಹಿಂಸಾವೃತ್ತಿಗೆ ಹೋಗಿ ನರಕಕ್ಕೆ ಹೋದ.

ನಮ್ಮ ಮನಸ್ಸು ನಮ್ಮ ಕೈಯಲ್ಲಿರಬೇಕು

ನನ್ನಲ್ಲಿ ನಿನಗೆ ಪ್ರೀತಿಯಿಂದಾಗಿ, ಆದರದಿಂದಾಗಿ ಹೇಳುತ್ತಿರುವೆ ಇದು ನಿನಗೆ ನೆನಪಿಸುತ್ತಿರುವುದು. ನಮಗೂ ರಾಕ್ಷಸರಿಗೂ ಇರುವ ವೈರವಾದರೂ ಏನು? ನಮಗೇನು ಅಪರಾಧ ಮಾಡಿದ್ದಾರೆ ಅವರು? ಕ್ಷತ್ರಿಯರಾದವರು ಯಾರಿಗಾದರೂ ಆಪತ್ತು ಬಂದಾಗ ಶಸ್ತ್ರವೆತ್ತಬೇಕು. ಆದರೆ ನಾವೀಗ ವನವಾಸಿಗಳು, ದೇಶಧರ್ಮವಾದ ತಪಸ್ಸು, ಅನುಷ್ಠಾನ, ಹೋಮವನ್ನು ಆಚರಿಸೋಣ. ಶಸ್ತ್ರಗಳನ್ನು ಸದ್ಯಕ್ಕೆ ದೂರವಿಡುವುದೇ ಒಳ್ಳೆಯದು. ಮರಳಿ ಅಯೋಧ್ಯೆಗೆ ಹೋದಾಗ ಅದನ್ನು ಉಪಯೋಗಿಸೋಣ. ನೀನು ಸಂಪೂರ್ಣ ಮುನಿಭಾವ ತಾಳಿದರೆ ನೀನು ವಸವಾಸಮಾಡಿದ್ದು ಸಾರ್ಥಕವಾಗುತ್ತದೆಯಲ್ಲ. ಧರ್ಮದಿಂದ ಸಂಪತ್ತು, ಸುಖ ಎಲ್ಲವೂ. ಆದ್ದರಿಂದ ಇಲ್ಲಿಯ ಧರ್ಮವನ್ನಾಚರಿಸೋಣ.
ಸುಖದಿಂದ ಸುಖ ಲಭ್ಯವಿಲ್ಲ. ಕಷ್ಟಪಟ್ಟರೆ ಸುಖ ಸಿಗುವುದು. ಹಾಗಾಗಿ ವನವಾಸದ ತಾಪಸ ಮಾರ್ಗದಲ್ಲಿ ಕಷ್ಟಪಟ್ಟು ತಪಸ್ಸಾಚರಿಸೋಣ ಎಂದು ಹೇಳಿ ಮೂರು ಲೋಕಗಳೂ, ಅವುಗಳ ಒಂದೊಂದು ಸಂಗತಿಯೂ, ಅವುಗಳ ಆಳ, ಬೇರು ಬುಡದ ಸಹಿತ ನಿನಗೆ ಗೊತ್ತು. ನಿನಗೆ ಧರ್ಮೋಪದೇಶ ಮಾಡುವ ಯೋಗ್ಯತೆ ಯಾರಿಗೂ ಇಲ್ಲ. ಇದು ಹೇಳಿದ್ದಷ್ಟೆ. ನೀನು ವಿಚಾರ ಮಾಡಿ, ಲಕ್ಷ್ಮಣನೊಡನೆ ಚರ್ಚಿಸಿ ಯಾವುದು ನಿನಗೆ ಸರಿ ತೋರುತ್ತದೆಯೋ ಅದನ್ನು ಮಾಡು ಎಂದಳು ಸೀತೆ.

ಸೀತೆಯ ಅಂತರಂಗವೂ ಅವಳಷ್ಟೇ ಕೋಮಲ. ರಾಕ್ಷಸರ ಮೇಲೆ ಕತ್ತಿಎತ್ತುವಾಗಲೂ ಎತ್ತಬೇಕ ಎಂಬ ಪ್ರಶ್ನೆಯಿದೆ ಅವಳಲ್ಲಿ. ಯಾವ ಹಿಂಸೆಗೂ ಆಕೆ ಸಿದ್ಧಳಿಲ್ಲ. ಯಾವುದನ್ನೂ ಆಕೆ ಮುಚ್ಚಿಡುವುದಿಲ್ಲ. ತನ್ನ ಮನಸ್ಸಿನಲ್ಲಿ ಯಾವ ಪ್ರಶ್ನೆ ಬಂತು, ಯಾವ ಜಿಜ್ಞಾಸೆ ಬಂತು ಎಲ್ಲವನ್ನೂ ಮುಕ್ತವಾಗಿ ಬಿಚ್ಚಿಡುತ್ತಾಳೆ ಅವಳು. ತನಗನ್ನಿಸಿದ್ದನ್ನು ಮುಕ್ತವಾಗಿ ಮಾಡನಾಡುತ್ತಾಳೆ.

ನಮಗಿಷ್ಟವಾಗಲಿ, ಆಗದೇ ಇರಲಿ ಸರಿಕಂಡಿದ್ದನ್ನು ಹೇಳುವವರು ಜೊತೆಯಿದ್ದರೆ ನಾವು ಸುರಕ್ಷಿತ.

ಧರ್ಮದಲ್ಲಿ ನೆಲೆನಿಂತ ರಾಮ ಸೀತೆಗೆ ಉತ್ತರಿಸುತ್ತಾನೆ. “ದೇವಿ ನೀನು ನನ್ನ ಹಿತವನ್ನಾಲೋಚಿಸಿ ಈ ಮಾತನ್ನಾಡಿದ್ದು. ಹಾಗಾಗಿ ನಿನ್ನ ವ್ಯಕ್ತಿತ್ವಕ್ಕೂ ನನ್ನ ಮೇಲಿನ ಪ್ರೀತಿಯಿಂದಲೂ ಸರಿಯಾದುದನ್ನೇ ಆಡಿದ್ದೀಯೆ. ಆದರೆ, ನಾನು ಕೆಲವು ಮಾತುಗಳನ್ನು ಹೇಳುವೆ. ನೀನೇ ಹೇಳಿದೆ; ಕ್ಷತ್ರಿಯರು ಧನುಸ್ಸನ್ನು ಎತ್ತುವ ಉದ್ದೇಶ ಪ್ರಪಂಚದಲ್ಲಿ ಆರ್ತನಾದ ಕೇಳಿಬರಬಾರದು. ಯಾರಿಗೂ ಅನ್ಯಾಯವಾಗಬಾರದು. ಈಗ ಆಲೋಚಿಸು. ದಂಡಕಾರಣ್ಯದ ಮಹಾತಪಸ್ವಿಗಳು ಬಂದು ನನಗೆ ಶರಣಾಗತರಾಗಿದ್ದಾರೆ. ವಾಸ್ತವವಾಗಿ ಅವರೇ ಶರಣಾಗತ ಪರಿಪಾಲಕರು. ಅವರಿಗೆ ನಾವು ಶರಣಾಗಬೇಕು. ಅಂಥವರು ನನಗೆ ಬಂದು ಶರಣಾಗಿದ್ದಾರೆ. ಯಾರು ಆರ್ತರಾಗಿದ್ದರೂ ಅವರ ರಕ್ಷಣೆ ನಮ್ಮ ಹೊಣೆ. ಅಂತಹದರಲ್ಲಿ ಯಾರು ವಿಶ್ವಕ್ಷೇಮಕಾಮಿಗಳು, ನಿರ್ವೈರಿಗಳು ಅಂಥವರಿಗೆ ಕಷ್ಟ ಬಂದಾಗ ಸುಮ್ಮನಿರಲು ಸಾಧ್ಯವೇ? ಧರ್ಮನಿರತರವರು ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಕ್ರೂರಕರ್ಮಿಗಳಾದ ರಾಕ್ಷಸರು ನಿತ್ಯ ಪೀಡಿಸುತ್ತಿದ್ದಾರೆ. ಹಾಗೆ ರಾಕ್ಷಸರಿಂದ ಪೀಡೆಗೊಳಗಾಗಿ ಬಂದವರು ರಕ್ಷಣೆ ಮಾಡು ಎಂದಾಗ ನಾನೇನು ಮಾಡಲಿ? ಅವರ ಚರಣ ಶುಶ್ರೂಷೆ ಮಾಡಿ ಈ ಮಾತನ್ನು ಹೇಳಿದೆ. ನನಗೆ ನಾಚಿಕೆಯಾಗುತ್ತಿದೆ ನೀವು ಬಂದು ಕೇಳುವಂತಾಯಿತು. ಆಜ್ಞಾಪಿಸಬಹುದಿತ್ತು ನೀವು ಆದರೆ ಯಾಚಿಸಿದಿರಿ. ನಿಮ್ಮಿಂದ ಯಾಚನೆಗೊಳಗಾದ ನನಗೆ ನಾಚಿಕೆಯಾಗುತ್ತಿದೆ. ಏನು ಮಾಡಲಿ ನಾನು? ಕೇಳಿದಾಗ ಹೇಳಿದರು, ಧರ್ಮಕಾರ್ಯಗಳನ್ನು ಮಾಡಲು ಸಾಧ್ಯವಾಗದಷ್ಟು ತೊಂದರೆ ಕೊಡುತ್ತಿದ್ದಾರೆ ರಾಕ್ಷಸರು. ನಮಗೆ ಪ್ರತೀಕಾರ ಸಾಧ್ಯವಿಲ್ಲವೆಂದಲ್ಲ. ಶಪಿಸಬಹುದು ಆದರೆ ಶಪಿಸಲಾರೆವು. ಯಾಕೆಂದರೆ ಕಷ್ಟಪಟ್ಟು ಮಾಡಿದ ತಪಸ್ಸು ವ್ಯರ್ಥವಾಗುತ್ತದೆ. ನಿನಗಿದು ಧರ್ಮ, ನೀನು ರಕ್ಷಿಸು ಎಂದಾಗ ನಾನು ನಿಮ್ಮ ರಕ್ಷಣೆ ನನ್ನ ಹೊಣೆ ಎಂದು ಪ್ರತಿಜ್ಞೆ ಮಾಡಿದೆ. ರಾಮ ಯಾರಿಗೇ ಮಾತು ಕೊಟ್ಟರೂ ಅದನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಾಣತೆತ್ತೇನು ಆದರೆ ಮಾತಿಗೆ ತಪ್ಪಲಾರೆ. ಬದುಕಿನಲ್ಲಿ ನನಗೆ ಸತ್ಯವು ಸದಾ ಇಷ್ಟ. ನನಗೆ ಪ್ರಿಯವಾದುದೆಲ್ಲವನ್ನೂ ಬಿಟ್ಟೇನು, ಪ್ರಾಣ ಬಿಟ್ಟೇನು, ಪ್ರಾಣಕ್ಕಿಂತ ನೀನಿಷ್ಟ ನಿನ್ನನ್ನು ತ್ಯಜಿಸಿಯೇನು, ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನು ಬಿಟ್ಟೇನು ಆದರೆ ಪ್ರತಿಜ್ಞಾಭಂಗ ಮಾಡಲಾರೆ. ನೀನು ನನಗೆಷ್ಟು ಇಷ್ಟ ಎಂಬ ಧ್ವನಿ ನೋಡಬೇಕು ಅಲ್ಲಿ. ಧರ್ಮದ ಸತ್ಯದ ರೇಖೆ ಮೀರಲಾರೆ” ಎಂದ ರಾಮ ಎಷ್ಟು ದೊಡ್ಡವನು..

ಸತ್ಯ-ಧರ್ಮಗಳ ಮೇರೆ ಮೀರಿದ ರಾಮ ಮನುಕುಲಕ್ಕೆ ಆದರ್ಶ

“ನೀನು ನಿನಗನ್ನಿಸಿದ್ದನ್ನು ಹೇಳಿರುವುದು ಸರಿ ಇದೆ. ನನ್ನಲ್ಲಿಯ ಪ್ರೇಮ, ಸೌಹಾರ್ದ ಕಾರಣ ನಿನ್ನ ಈ ನುಡಿಗಳಿಗೆ. ಅನಘಳೇ ನಿನ್ನ ನುಡಿಗಳಿಂದ ಸಂತೋಷವಾಯಿತು ನನಗೆ. ನಮಗೆ ಯಾರ ಹಿತ ಮುಖ್ಯವಲ್ಲವೋ ಅವರಿಗೆ ನಾವು ಈ ರೀತಿಯಾಗಿ ಹೇಳುವುದಿಲ್ಲ. ನಿನ್ನ ಕುಲಕ್ಕೂ, ವ್ಯಕ್ತಿತ್ವಕ್ಕೂ ಸರಿಹೊಂದುವಂತಹ ಮಾತುಗಳನ್ನೇ ಆಡಿದ್ದೀಯೆ. ನನ್ನ ಸಹಧರ್ಮಚಾರಿಣಿ, ನನ್ನ ಪ್ರಾಣಕ್ಕಿಂತ ಮಿಗಿಲು ನೀನು. ಪ್ರೀತಿಗೆ ಕಡಿಮೆಯಿಲ್ಲ, ಹೇಳಿದ್ದು ತಪ್ಪಲ್ಲ” ಎಂದನು ರಾಮ. ಹಾಗಾಗಿ ಹೇಳಬೇಕಾದ್ದನ್ನು ಸೀತೆಗೆ ಹೇಳಿ ರಮ್ಯವಾದ ತಪೋವನದೆಡೆಗೆ ಸಾಗುತ್ತಾರೆ. ಮುಂದೆ ರಾಮ, ಮಧ್ಯೆ ಸೀತೆ, ಹಿಂದೆ ಧನುಷ್ಪಾಣಿಯಾದ ಲಕ್ಷ್ಮಣ. ದೂರ ಪ್ರಯಾಣ ಮಾಡಿ ಸೂರ್ಯಾಸ್ತ ಸಮಯಕ್ಕೆ ರಮಣೀಯವಾದ ಒಂದು ತಟಾಕವನ್ನು ನೋಡುತ್ತಾರೆ.

ವಿಶೇಷವೇನೆಂದರೆ ಕೊಳದ ಒಳಗಿನಿಂದ ಸಂಗೀತ ಕೇಳಿಸುತ್ತಿತ್ತು. ನೀರಿನ ಒಳಗಿನಿಂದ ಯಾರೋ ಹಾಡುತ್ತಿದ್ದಾರೆ, ವಾದ್ಯಗಳು ನುಡಿಯುತ್ತಿವೆ. ಕುತೂಹಲವಾಯಿತು ರಾಮ ಲಕ್ಷ್ಮಣರಿಗೆ. ಧರ್ಮಭೃಂಗನೆಂಬ ಮುನಿಯನ್ನು ರಾಮ ಪ್ರಶ್ನಿಸುತ್ತಾನೆ. ಮಹತ್ತಾದ ಕುತೂಹಲವಾಗುತ್ತಿದೆ ಏನಿದು? ವಿಷಯ ಏನು? ರಾಮ ಹೇಳುತ್ತಾನೆ ಹೇಳಬಹುದಾದರೆ ಹೇಳಿ. ತುಂಬ ಕುತೂಹಲವಿದೆ ಹೇಳಬಾರದ್ದಾದರೆ ಬೇಡ. ಹೇಳಲು ಆಗುವುದಾದರೆ ಮಾತ್ರ ಹೇಳಿ ಎಂದಾಗ ಆ ಮುನಿ ಹೇಳಲು ತೊಡಗುತ್ತಾನೆ. ಸರೋವರದ ಹೆಸರು ಪಂಚಾಪ್ಸರ. ಸಾರ್ವಕಾಲಿಕ ಸರೋವರ. ಇಲ್ಲಿ ವಾದ್ಯ ಗೀತಗಳು ಕೇಳಿಸುತ್ತವೆ. ಆದರೆ ಯಾರೂ ಇಲ್ಲ. ಇದು ಮಾಂಡಕರ್ಣಿ ಮುನಿ ನಿರ್ಮಿಸಿದ ಸರೋವರ . ಆ ಮಹಾಮುನಿ ನೀರಿನಲ್ಲಿ ಮುಳುಗಿ ಗಾಳಿಯನ್ನು ಮಾತ್ರ ಸೇವಿಸಿ ಹತ್ತುಸಾವಿರ ವರ್ಷ ತಪಸ್ಸಾಚರಿಸಿದಾಗ ಎಲ್ಲಾ ದೇವತೆಗಳಿಗೂ ಚಿಂತೆಯಾಯಿತು. ಮುಂದೊಮ್ಮೆ ನಮ್ಮ ಯಾವುದೋ ಪದವಿ ಕೇಳಿದರೆ ಎಂಬ ಚಿಂತೆಯಾಯಿತು. ಎಲ್ಲ ಸೇರಿ ಸಭೆ ನಡೆಸಿ ಮುನಿಯ ತಪೋಭಂಗ ಮಾಡಲು ಐದು ಅಪ್ಸರೆಯರನ್ನು ಆರಿಸಿ ಹೋಗಿ ಮುನಿಯ ತಪಸ್ಸನ್ನು ಕೆಡಿಸಿ ಎಂದು ಕಳುಹಿಸಿದರು. ಆ ಅಪ್ಸರೆಯರು ಬಹಳ ಕಷ್ಟಪಟ್ಟು ಮುನಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ದೇವತೆಗಳ ಕಾರ್ಯಸಿದ್ಧಿಯಾಯಿತು ಆದರೆ ಅಪ್ಸರೆಯರಿಗೆ ಬಿಡುಗಡೆ ಸಿಗಲಿಲ್ಲ. ಆ ಮುನಿಯ ಪತ್ನಿಯರಾದರು ಈ ಅಪ್ಸರೆಯರು. ಆಗ ಮುನಿ ತಪಃಶಕ್ತಿಯಿಂದ ಈ ತಟಾಕದೂಳಗೆ ಭವನವೊಂದನ್ನು ನಿರ್ಮಿಸಿದ. ಅಲ್ಲಿ ಐವರು ಪತ್ನಿಯರೊಡನೆ ಆ ಮುನಿ ವಾಸಿಸುತ್ತಾನೆ. ತನ್ನ ತಪೋಬಲದಿಂದ ಮತ್ತೆ ಯುವಕನಾದ. ಅವನನ್ನು ಸಂತಸಪಡಿಸುವ ಸಲುವಾಗಿ ಆ ಅಪ್ಸರೆಯರು ವಾದ್ಯ ನುಡಿಸುತ್ತಾರೆ. ಹಾಡುತ್ತಾರೆ. ಅದೇ ಕೇಳಿಸುತ್ತಿರುವುದು. ಕಾಮ ಕ್ರೋಧ ಮುಸುಕಿದಾಗ ತಪಸ್ಸು ಭಂಗವಾಗುತ್ತದೆ. ಈಗಲೂ ನುಡಿಯುತ್ತಿದೆ ಆ ವಾದ್ಯಗಳು. ರಾಮ ಸ್ವೀಕರಿಸಿದನಂತೆ ಆ ಋಷಿಯ ಮಾತಿನ ಸಾರವನ್ನು.
ಅಷ್ಟೊತ್ತಿಗೆ ಆಶ್ರಮಮಂಡಲ ಗೋಚರಿಸಿತಂತೆ ರಾಮನಿಗೆ. ಕ್ರಮವಾಗಿ ಅನೇಕಾನೇಕ ಋಷಿಗಳ ಆಶ್ರಮದಲ್ಲಿ ಸಂತೋಷದಿಂದ ಅಷ್ಟಷ್ಟು ಕಾಲ ವಾಸಮಾಡಿದನಂತೆ. ಹೀಗೆ ವಾಸ ಮಾಡುತ್ತ ವನವಾಸದ ಹತ್ತು ವರ್ಷಗಳೇ ಕಳೆದು ಹೋದವಂತೆ.

ಹೀಗೆ ಬೇರೆ ಬೇರೆ ಆಶ್ರಮಗಳಲ್ಲಿ ವಾಸ ಮಾಡಿದ ರಾಮ ಮರಳಿ ಸುತೀಕ್ಷ್ಣ ಮುನಿಗಳ ಆಶ್ರಮಕ್ಕೆ ಮರಳಿ ಬಂದನಂತೆ. ಅವರ ಅಪೇಕ್ಷೆಯಂತೆ ಕೆಲವು ಕಾಲ ವಾಸಮಾಡಿದ ಬಳಿಕ ರಾಮ ಕೇಳಿದನಂತೆ. ಇಲ್ಲೇ ಹತ್ತಿರದಲ್ಲಿ ಎಲ್ಲೋ ಅಗಸ್ತ್ಯ ಮುನಿಗಳು ವಾಸಿಸುತ್ತಿದ್ದಾರಂತೆ. ನಾನು ಅವರನ್ನು ಕಾಣಬೇಕು. ನಾನು ತಮ್ಮ ಹಾಗೂ ಪತ್ನಿಯೊಡನೆ ಅವರಿಗೆ ಅಭಿವಾದನ ಮಾಡಬೇಕು, ನನ್ನ ಬದುಕಿನ ಬಹುದೊಡ್ಡ ಆಸೆ ಅದು ಎಂದನಂತೆ. ಅಗಸ್ತ್ಯರು ದೊಡ್ಡವರು ಮಾತ್ರರಲ್ಲ ಅಲ್ಲಿಂದಲೇ ನಿಜವಾದ ರಾಮಾಯಣ ಆರಂಭ. ಅವರು ಏನೋ ಇಟ್ಟುಕೊಂಡು ರಾಮನಿಗಾಗಿ ಕಾಯುತ್ತಿದ್ದಾರೆ ಅದು ರಾಮನಿಗೆ ಸಿಗಬೇಕು. ಅಲ್ಲಿಂದಲೇ ರಾಮಾಯಣಕ್ಕೆ ತಿರುವು. ನಾನು ಸ್ವಯಂ ಸೇವೆ ಮಾಡಬೇಕೆಂಬ ಆಸೆ ಎಂದಾಗ ಸುತೀಕ್ಷ್ಣ ಮುನಿಗಳು ನಾನು ಅದನ್ನೇ ಹೇಳಬೇಕೆಂದಿದ್ದೆ. ನೀನು ಅಗಸ್ತ್ಯರನ್ನು ಕಾಣಬೇಕು. ಅದು ವಿಶ್ವಕ್ಕೇ ಒಳಿತು.

ರಾಮ ಏಕೆ ಬಂದನೋ ಆ ಕಾರ್ಯವಾಗಬೇಕಾದರೆ ರಾಮ ಅಗಸ್ತ್ಯರನ್ನು ಕಾಣಬೇಕು. ಅವರು ಹೇಳಿದಲ್ಲಿ ವಾಸಿಸಿದರೆ, ಕೊಟ್ಟಿದ್ದನ್ನು ಉಪಯೋಗಿಸಿದರೆ ರಾಮ ಬಂದ ಅವತಾರ ಕಾರ್ಯವಾಗುತ್ತದೆ.

ತಡಮಾಡದಿರು, ಇಂದೇ ಹೊರಡು. ಇಲ್ಲಿಂದ ನಾಲ್ಕು ಯೋಜನದಲ್ಲಿ ಅಗಸ್ತ್ಯರ ಸಹೋದರರ ಆಶ್ರಮವಿದೆ. ಗರ್ಭದಲ್ಲಿದ್ದಾಗಲೇ ಬ್ರಹ್ಮಜ್ಞಾನಿಗಳಂತೆ ಅವರು. ಹಾಗಾಗಿ ಹೆಸರು ವಿಷಯವೇ ಅಲ್ಲ. ಸುದರ್ಶನ ಅವರ ಹೆಸರು. ಪಿಪ್ಪಲೀ ವನದ ಪರಿಸರದಲ್ಲಿ ಅಗಸ್ತ್ಯ ಸೋದರರ ಆಶ್ರಮವಿದೆ. ಅಲ್ಲಿ ಒಂದು ರಾತ್ರಿ ವಾಸ ಮಾಡಿ ಬೆಳಗ್ಗೆ ಎದ್ದು ದಕ್ಷಿಣದಿಕ್ಕಿಗೆ ಒಂದು ಯೋಜನ ಹೋದರೆ ಅಗಸ್ತ್ಯರ ಆಶ್ರಮವಿದೆ. ರಮಣೀಯವಾದ ಸ್ಥಳ. ಅಲ್ಲಿ ಹೋದರೆ ನಿನಗೆ, ಸೀತೆ, ಲಕ್ಷ್ಮಣರಿಗೂ ಸಂತೋಷವಾಗುತ್ತದೆ. ಆ ವಾತಾವರಣವೇ ದಿವ್ಯ, ಮನೋಜ್ಞ. ಹಾಗಾಗಿ ನಿನಗೆ ಅಗಸ್ತ್ಯರನ್ನು ಕಾಣಬೇಕಾದರೆ ತಡಮಾಡದೇ ಪ್ರಯಾಣಮಾಡು ಅತ್ತಕಡೆಗೆ ಎನ್ನುತ್ತಾರೆ. ಹಾಗೆ ಸಾಗಿದಾಗ ಒಂದು ಪರಿಸರದಲ್ಲಿ ರಾಮನಿಗೆ ಬಹಳ ಸಂತೋಷವಾಯಿತಂತೆ. ಲಕ್ಷ್ಮಣ ಇದೇ ಅಗಸ್ತ್ಯಭ್ರಾತರ ಆಶ್ರಮ. ಆ ಹಿಪ್ಪಲಿಯ ಕಟು ಪರಿಮಳ ಬರುತ್ತಿದೆ. ಅಗ್ನಿಹೋತ್ರದ ಹೊಗೆ ಬರುತ್ತಿದೆ, ಬ್ರಾಹ್ಮಣರು ಪೂಜೆ ಮಾಡುತ್ತಿದ್ದಾರೆ ಎಂದು ಹೇಳಿ ಅಗಸ್ತ್ಯರೆಂದರೆ ಯಾರು? ಮೃತ್ಯುವನ್ನೇ ಗೆದ್ದವರು. ದಕ್ಷಿಣ ಯಮನ ದಿಕ್ಕು. ದಕ್ಷಿಣದಲ್ಲಿಯೇ ವಾಸ ಅಗಸ್ತ್ಯರದ್ದು. ಅವರು ಇಲ್ಲಿಯೇ ಇದ್ದಾರೆ. ರಾಕ್ಷಸರಿಂದ ತಾಪಸರಿಗೆ ಪದೇಪದೇ ಮೃತ್ಯುಬರುವಾಗ ಅಂತಹ ರಾಕ್ಷಸರನ್ನು ನಿಗ್ರಹಿಸಿ ಮೃತ್ಯುವನ್ನೇ ಗೆದ್ದವರು ಅವರು.

ಅಗಸ್ತ್ಯರ ಬಗ್ಗೆ ಅತ್ಯಾದರ ರಾಮನಿಗೆ. ಅವರ ಬಗ್ಗೆ ಒಂದು ಕಥೆ ಹೇಳುತ್ತಾನೆ. ಇಲ್ವಲ ಮತ್ತು ವಾತಾಪಿ ಎಂಬ ರಾಕ್ಷಸರಿಗೆ ಬ್ರಾಹ್ಮಣರನ್ನು ಕೊಲ್ಲುವುದೇ ನಿತ್ಯದ ಕಾಯಕ. ವಾತಾಪಿ ಮೇಕೆ ರೂಪ ತಾಳಿ ಇಲ್ವಲ ಅದರ ಅಡಿಗೆ ಮಾಡಿ ಶ್ರಾದ್ಧಭೋಜನಕ್ಕೆ ಬ್ರಾಹ್ಮಣರನ್ನು ಕರೆದು ಇದನ್ನು ಬಡಿಸುವುದು. ಊಟದ ನಂತರ ಇಲ್ವಲ ವಾತಾಪಿ ಬಾ ಎಂದಾಗ ಅವನು ಅವರ ಒಳಗಿನಿಂದಲೇ ಮೇಕೆ ರೂಪ ತಾಳಿ ಮತ್ತೆ ಹೊರಬರುವುದು. ಹೀಗೆ ಅದೆಷ್ಟೋ ಸಾವಿರ ಬ್ರಾಹ್ಮಣರನ್ನು ಕೊಂದಾಗ ದೇವತೆಗಳು ಅಗಸ್ತ್ಯರಿಗೆ ಪ್ರಾರ್ಥಿಸಿ ಇದನ್ನು ಕೊನೆಗಾಣಿಸದಿದ್ದರೆ ಬ್ರಾಹ್ಮಣರಿಗೆ ಉಳಿಗಾಲವಿಲ್ಲ ಎಂದಾಗ ಅಗಸ್ತ್ಯರು ಸಂದರ್ಭ ಸೃಷ್ಠಿಸಿಕೊಂಡು ಹೋದರು. ಎಂದಿನಂತೆ ಊಟ ತಯಾರಿಸಿ ಬಡಿಸಿದ್ದಾನೆ ಇಲ್ವಲ, ಎಲ್ಲವನ್ನೂ ತೆಗೆದುಕೊಂಡರಂತೆ ಅಗಸ್ತ್ಯರು. ಎಲ್ಲವೂ ಆದಮೇಲೆ ಉತ್ತರಾಪೋಶನದ ನಂತರ ತೃಪ್ತಿಯಾಯಿತೇ ಎಂದನಂತೆ ಇಲ್ವಲ. ಆಗ ಇಲ್ವಲ ವಾತಾಪಿ ಹೊರಗೆ ಬಾ ಎಂದಾಗ ನಾನು ಜೀರ್ಣಮಾಡಿದ ಮೇಲೆ ಮತ್ತೆ ಬರುವುದು ಹೇಗೆ ಎಂದರಂತೆ. ನೀನವನನ್ನು ಭೇಟಿಯಾಗಬೇಕೆಂದರೆ ಹಾಗೆಯೇ ದಕ್ಷಿಣಕ್ಕೆ ಸಾಗಿ ಯಮನೂರನ್ನು ತಲುಪಿದರೆ ಸಿಗಬಹುದು ಎಂದರಂತೆ.

ಗುರುವೆಂದರೆ ಹಾಗೆಯೇ. ಶಿಷ್ಯನ, ಭಕ್ತನ ದೋಷವನ್ನು ಪರಿಗ್ರಹಿಸುವ ಶಕ್ತಿ ಸಾಮರ್ಥ್ಯ ಎರಡೂ ಇರಬೇಕು. ಶಿಷ್ಯರ ದೋಷಗಳನ್ನು ಸ್ವೀಕರಿಸಿ, ಪರಿಹರಿಸುವುದು ಗುರುವಿನ ಶ್ರೇಷ್ಠತೆ

ಅವನು ಜೀರ್ಣವಾಗಿಯಾಗಿದೆ ಎಂದಾಗ ಕೋಪದಿಂದ ಅಗಸ್ತ್ಯರ ಮೇಲೇರಿ ಹೋದಾಗ ಅಗಸ್ತ್ಯರ ಕಣ್ಣುಗಳು ಕೆಂಡಕಾರಿದವು. ಇಲ್ವಲ ಸುಟ್ಟು ಬೂದಿಯಾದ. ಬ್ರಾಹ್ಮಣರ ಮೇಲಿನ ಅನುಕಂಪದಿಂದ ಇನ್ನಾರಿಗೂ ಅಂತಹ ಗತಿ ಬರಬಾರದು ಎಂದು ಅಗಸ್ತರು ಹಾಗೆ ಮಾಡಿದ್ದು. ಅಂತಹ ಅಗಸ್ತ್ಯರ ಸೋದರರ ಆಶ್ರಮ ಇದು ಎನ್ನುವಾಗ ಸಂಧ್ಯಾಕಾಲವಾಯಿತು, ರಾಮ ಸಂಧ್ಯಾವಂದನೆ ಮಾಡಿದ. ಮುಂದೇನಾಯಿತು ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments