ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಕೊಳ್ಳಿಯನ್ನು ಕೆದರಿದರೆ ಅದು ಹೊತ್ತಿ ಉರಿಯುತ್ತದೆ. ಹಾಗೆಯೇ ಮನುಷ್ಯನ ಪೌರುಷವನ್ನು ಕೆದಕಿದರೆ ಆತ ಹೊತ್ತಿ ಉರಿಯುತ್ತಾನೆ.
ಈ ತತ್ವವನ್ನು ಶೂರ್ಪಣಖಿ ಖರನ ಮೇಲೆ ಬಳಸಿದ್ದಾಳೆ. ರಾಮನ ಮುಂದೆ ನೀನೇನೂ ಅಲ್ಲ, ದುರ್ಬಲ, ರಾಮನ ಮುಂದೆ ನೀನು ಒಂದು ಕ್ಷಣವೂ ನಿಲ್ಲಲಾರೆ, ಧ್ವಂಸವಾಗಿ ಹೋಗ್ತೀಯೆ. ಹೀಗೆಲ್ಲ ಯಾಕೆ ಹೇಳಿದ್ದು ಅಂದ್ರೆ ಖರನನ್ನು ಕೆರಳಿಸುವ ಸಲುವಾಗಿ. ಅದು ಕೆಲಸ ಮಾಡಿತು. ಏಕೆಂದರೆ, ರಾಕ್ಷಸರು ರಜೋಗುಣ, ತಮೋಗುಣ ಪ್ರಧಾನರು. ಅವರಲ್ಲಿ ಮುಖ್ಯವಾಗಿರುವಂಥದ್ದು ಒಂದು ಗರ್ವ ಇನ್ನೊಂದು ಕ್ರೌರ್ಯ. ಗರ್ವವನ್ನು ಕೆದರಿದ ಕೂಡಲೆ ಕ್ರೌರ್ಯ ಪ್ರಕಟವಾಗ್ತದೆ. ಖರನ ಕ್ರೌರ್ಯ ಪ್ರಕಟವಾಯ್ತು. ಅದರಲ್ಲೂ ರಾಕ್ಷಸರ ಸಭೆಯ ಮಧ್ಯೆ, ಖರನ ಸೈನಿಕರು, ಆಶ್ರಯದಲ್ಲಿರುವವರ ಮಧ್ಯೆ ಈ ಮಾತನ್ನು ಶೂರ್ಪಣಖಿ ಖರನಿಗೆ ಹೇಳಿದಾಳೆ. ಹೊತ್ತಿ ಉರಿದ ಖರ ಮತ್ತು ಈ ಕಠೋರವಾದ, ಕ್ರೂರವಾದ ಮಾತುಗಳನ್ನಾಡಿದ. ಶೂರ್ಪಣಖಿ, ನಿನ್ನ ಅವಮಾನದಿಂದಾಗಿ ನನ್ನಲ್ಲಿ ಅತುಲವಾದ ಕ್ರೋಧವುಂಟಾಗಿದೆ.

ಶೂರ್ಪಣಖಿಯನ್ನು ರಾಮ ಅವಮಾನಿಸಿದರೆ, ಖರನನ್ನು ಶೂರ್ಪನಖಿ ಅವಮಾನಿಸ್ತಾಳೆ.

ಖರ ಹೇಳಿದ ಯಾರವನು ರಾಮ? ಯಾವಾಗ ನಮ್ಮ ತಂಟೆಗೆ ಬಂದನೋ ಆಯಸ್ಸು ಮುಗಿದಿದೆ ಆತನದ್ದು. ತನ್ನದೇ ತಪ್ಪುಗಳಿಂದ ರಾಮ ಹತನಾಗಿ ಇಂದು ಯುದ್ಧದಲ್ಲಿ ಪ್ರಾಣತ್ಯಾಗ ಮಾಡುತ್ತಾನೆ. ಅಳಬೇಡ, ಗಾಬರಿ ಪಡಬೇಡ. ನಾನು ರಾಮ, ಲಕ್ಷ್ಮಣರೀರ್ವರನ್ನೂ ಯಮಪುರಿಗೆ ಕಳುಹಿಸಿ ಕೊಡ್ತೇನೆ. ನಿನ್ನ ಅಪೇಕ್ಷೆಯಂತೆ ರಾಮನ ಪ್ರಾಣ ಹೋಗುವ ಸಮಯದಲ್ಲಿ ನೀನು ರಾಮನ ಕೆಂಪಾದ, ಬಿಸಿಯಾದ ರಕ್ತವನ್ನು ಕುಡಿಯುವಿಯಂತೆ. ಎಲೈ ರಾಕ್ಷಸಿಯೇ, ನಮ್ಮ ರಾಕ್ಷಸತ್ವಕ್ಕೆ ಭೂಷಣವಾಗುವಂತೆ, ಶತ್ರು ಸಾಯುವ ಮೊದಲು ಬಿಸಿರಕ್ತ ಕುಡಿಯುವ ನಿನ್ನ ಅಪೇಕ್ಷೆ ಸಾಧುವಾದದ್ದು. ಅದನ್ನು ನಾನು ಈಡೇರಿಸುತ್ತೇನೆ ಎಂದನು ಖರ. ಶೂರ್ಪಣಖಿಗೆ ಸಂತೋಷವಾಯಿತು. ಮೂರ್ಖತನದಿಂದಾಗಿ ಖರನನ್ನು ಮತ್ತೆ ಪ್ರಶಂಸಿಸಿದಳು. ಘಳಿಗೆ ಮೊದಲು ಅವಮಾನಿಸಿದವಳು, ಹೊರಟೆ, ರಾಮನ ಸಂಹರಿಸುವೆ ಎಂದಾಗ ಅದೇ ಸಭೆಯ ಮಧ್ಯೆ ಪ್ರಶಂಸಿಸುತ್ತಾಳೆ. ಶೂರ್ಪಣಖಿಗೆ ಮೊದಲು ರಾಮನ ಕುರಿತಾಗಿ ಕಾಮ ಬಂತು, ಸೀತೆಯ ಕುರಿತಾಗಿ ಮತ್ಸರ ಬಂತು, ಲಕ್ಷ್ಮಣನ ಕುರಿತಾಗಿ ಮೋಹ ಬಂತು, ರಾಮ ನಿರಾಕರಿಸಿದಾಗ ಲೋಭ ಬಂತು. ಷಡ್ವೈರಿಗಳಲ್ಲಿ ಒಂದು ಬಂದರೆ ಜೊತೆಯಲ್ಲಿಯೇ ಉಳಿದೆಲ್ಲವೂ ಬರುತ್ತವೆ.

ಖರನು ತನ್ನ ಸೇನಾಪತಿಯಾದ ದೂಷಣನನ್ನು ಕರೆದು ಅಪ್ಪಣೆ ಮಾಡಿದ. ನನ್ನ ಚಿತ್ತಾನುವರ್ತಿಗಳಾದ ಘೋರರು, ಕ್ರೂರಿಗಳು, ಲೋಕಹಿಂಸಾವಿಹಾರರಾದ ಹದಿನಾಲ್ಕು ಸಾವಿರ ರಾಕ್ಷಸರಿಗೆ ಅಪ್ಪಣೆಮಾಡು. ಸರ್ವೋಪಾಯದಿಂದ, ಸರ್ವಸನ್ನದ್ಧರಾಗಿ ಯುದ್ಧಕ್ಕೆ ಹೊರಡಲಿ ಅವರು. ಹಾಗೇ, ನನ್ನ ಧನುಸ್ಸುಗಳು, ಬಾಣಗಳು, ಖಡ್ಗಗಳು, ಶಕ್ತ್ಯಾಯುಧಗಳನ್ನು ಸಿದ್ಧಗೊಳಿಸು. ಈ ಪೌಲಸ್ತ್ಯರ ಸೇನೆಯ ಮುಂಚೂಣಿಯಲ್ಲಿ ನಾನಿರಬಯಸುತ್ತೇನೆ. ದುರ್ವಿನೀತನಾದ ರಾಮನ ವಧೆಗಾಗಿ ನಾನು ಸರ್ವಸನ್ನದ್ಧನಾದೆ ಎಂದು ಖರ ಹೇಳುತ್ತಿರುವಂತೆಯೇ ಚಿತ್ರವರ್ಣದ ಕುದುರೆಗಳ, ಬಂಗಾರವರ್ಣದ ಮಹಾರಥವನ್ನು ದೂಷಣ ತಂದಿರಿಸಿದಾಗ ರಥವೇರಿದ ಖರ.

ಖರ ರಥವೇರಿದಾಗ ಭೀಮವಿಕ್ರಮರಾದ ಘೋರಧ್ವಜವಿರುವ ಅವನ ಸೇನೆಯ ರಾಕ್ಷಸರೆಲ್ಲ ಬಂದು ಖರ, ದೂಷಣರನ್ನು ಸುತ್ತುವರಿದರು. ಹೊರಡಿ ಎಂದು ಖರ ಅಪ್ಪಣೆ ಮಾಡುತ್ತಿದ್ದಂತೆ ಜನಸ್ಥಾನದಿಂದ ಹೊರಟಿತು ಸೇನೆ ಮಹಾವೇಗ ಮತ್ತು ಮಹಾನಾದದಿಂದ. ರಾಕ್ಷಸರ ಕೈಯಲ್ಲಿ ಖಡ್ಗಗಳು, ಮುಸಲಗಳು, ಪಟ್ಟಿಶ, ತೋಮರ, ವಜ್ರ ಮುದ್ಗರಗಳಾದಿಯಾಗಿ ಅನೇಕ ಆಯುಧಗಳನ್ನೊಳಗೊಂಡು ರಾಕ್ಷಸರು ಹೊರಟಿದ್ದಾರೆ. ಅವರಿಂದ ಸ್ವಲ್ಪ ಹಿಂದೆ ಖರ ಹೊರಟನಂತೆ. ಖರನ ಮನಸ್ಸನ್ನನುಸರಿಸಿ ಸಾರಥಿ ರಥವನ್ನು ಚಾಲನೆ ಮಾಡಿದ. ರಥ ಹೊರಟಿತು. ಅದರ ಶಬ್ಧ ದಿಕ್ಕು ದಿಕ್ಕುಗಳನ್ನಾವರಿಸಿತು. ಮತ್ತೆ ಮತ್ತೆ ಸಾರಥಿಯನ್ನು ಪ್ರಚೋದಿಸಿದ ಖರ. ಖರ ಹೊರಟಾಗ ಪ್ರಕೃತಿಯ ಶಕುನಗಳ ಮೂಲಕ ಸೂಚನೆ ಕೊಟ್ಟಿತು.

ಜೀವಸಂಕುಲದ ಮೇಲಿನ ಮಮತೆಯಿಂದ ಮುಂದಾಗುವ ಶುಭ ಅಶುಭಗಳ ಬಗೆಗೆ ಪ್ರಕೃತಿಯು ನೀಡುವ ಸೂಚನೆಯೇ ಶಕುನ

ರಕ್ತದ ಮಳೆ ಬಂತು, ಕತ್ತೆಯ ಕೆಂಪು ವರ್ಣದ ಮೋಡ, ಸಮತಟ್ಟಾದ ಜಾಗದಲ್ಲಿಯೇ ಖರನ ಕುದುರೆಗಳು ಮುಗ್ಗರಿಸಿದವು, ಸೂರ್ಯನನ್ನು ಪರಿವೇಶವು ಆವರಿಸಿತು(ಕಪ್ಪು ಬಣ್ಣದ ಕೆಂಪು ತುದಿಯ ಮಂಡಲ), ದೊಡ್ಡದೊಂದು ಹದ್ದು ಬಂದು ಖರನ ಧ್ವಜದ ಮೇಲೆ ಕೂತಿತು, ಜನಸ್ಥಾನದ ಬಳಿ ಕ್ರೂರ ಮೃಗಪಕ್ಷಿಗಳು ಬಂದು ಕ್ರೂರ ಸ್ವರವನ್ನು ಹೊರಡಿಸಿದವು, ನರಿಗಳು ಊಳಿಟ್ಟವು, ಆಕಾಶವನ್ನು ರಕ್ತವರ್ಣದ ಮೋಡಗಳು ಆವರಿಸಿದ ಪರಿಣಾಮ ಗಾಡಾಂಧಕಾರ ಆವರಿಸಿತು, ಆ ಕ್ರೂರ ಮೃಗಪಕ್ಷಿಗಳು ಖರನ ಎದುರು ಬಂದು ಸ್ವರ ಹೊರಡಿಸಿದವು, ರಕ್ತದಲ್ಲಿ ಅದ್ದಿ ಎತ್ತಿದ ಬಣ್ಣ ಆಕಾಶಕ್ಕೆ ಬಂತು, ನರಿಗಳು ತೀವ್ರ ಅಮಂಗಲಕರ ಸೂಚನೆಯನ್ನು ಕೊಟ್ಟವು, ಸೂರ್ಯನ ಅನತಿ ದೂರದಲ್ಲಿ ರುಂಡವಿಲ್ಲದ ಮುಂಡ ಗೋಚರಿಸಿತು, ರಾಹು ಬಂದು ಸೂರ್ಯನನ್ನು ಆವರಿಸಿದ, ಬಿರುಗಾಳಿ ಬೀಸಿತು, ರಾತ್ರಿಯಾಗದೆಯೂ ನಕ್ಷತ್ರಗಳು ಉದಯಿಸಿದವು ಅದು ಅಧಿಪತಿಯ ಅಂತ್ಯದ ಸೂಚನೆ. ಕಮಲದ ಕೊಳಗಳಲ್ಲಿ ಕಮಲಗಳು ಬಾಡಿದವು, ಮರಗಳು ಎಲೆ ಹೂವುಗಳನ್ನು ಉದುರಿಸಿ ಬೋಳಾದವು, ಉಲ್ಕೆಗಳು ಬಿದ್ದವು, ಶಾಲಿಕೆಗಳು ಜೋರಾಗಿ ಚೀರಿದವು, ಖರನಿರುವ ಪ್ರದೇಶದ ಭೂಮಿ ನಡುಗಿತು ಇದಲ್ಲದೇ ಖರನಲ್ಲಿಯೇ ಸೂಚನೆಗಳು ಗೋಚರಿಸಿತು. ಘರ್ಜಿಸುವ ಖರನ ಸ್ವರವೇ ಉಡುಗಿತು, ಎಡಭುಜ ಅದುರಿತು, ಇದ್ದಕಿದ್ದಂತೆಯೇ ಕಣ್ಣಿನಲ್ಲಿ ನೀರು ತುಂಬಿತು, ಹಣೆಯಲ್ಲಿ ವೇದನೆ ಉಂಟಾಯಿತು. ಇಷ್ಟಾದರೂ ತನ್ನ ಕೇಡು ಸಂಕಲ್ಪದಿಂದ ಆತ ಹಿಂದೆ ಸರಿಯಲಿಲ್ಲ ಖರ.
ಸಮೂಹಸಂಹಾರವನ್ನು ಆ ನಿಮಿತ್ತಗಳು ಸೂಚಿಸಿದರೂ ಖರನಿಗೆ ಬುದ್ಧಿ ಬರಲಿಲ್ಲ. ಗಹಗಹಿಸಿ ನಕ್ಕು ಹೇಳಿದನಂತೆ ಈ ಅಪಶಕುನಗಳು ನನಗೆ ಲೆಕ್ಕಕ್ಕಿಲ್ಲ, ನನಗೆ ಶಕ್ತಿಯಿದೆ. ನಾನು ಇವುಗಳನ್ನು ಅವಗಣನೆ ಮಾಡುತ್ತೇನೆ ಏಕೆಂದರೆ ತೀಕ್ಷ್ಣವಾದ ಶರಗಳಿಂದ ನಕ್ಷತ್ರ ಮಂಡಲವನ್ನೇ ಚೂರುಚೂರಾಗಿಸಬಲ್ಲೆ, ಮೃತ್ಯುವನ್ನೇ ಸಾಯಿಸಬಲ್ಲೆ, ಇನ್ನು ರಾಮ ಲಕ್ಷ್ಮಣರೇನು? ಅವರಿಬ್ಬರನ್ನೂ ಸಂಹರಿಸದೇ ಹಿಂದಿರುಗಿ ಬರಲಾರೆ. ನನ್ನ ತಂಗಿಯ ಅವರಿಬ್ಬರ ರಕ್ತಕುಡಿಯುವ ಇಚ್ಛೆ ಈಡೇರಲಿ ಎಂದು ಅಬ್ಬರಿಸಿದಾಗ ಸೈನ್ಯಕ್ಕೆ ಉತ್ಸಾಹ ಬಂತು.

ಸೇನಾನಾಯಕನ ಉತ್ಸಾಹವೇ ಸೈನ್ಯದ ಉತ್ಸಾಹ.

ದೇವೇಂದ್ರನನ್ನೇ ಸಂಹರಿಸಬಲ್ಲೆ ಇನ್ನು ಈ ರಾಮ ಲಕ್ಷ್ಮಣರೆಂಬ ಹುಲುಮಾನವರು ಯಾವ ಲೆಕ್ಕ ಎಂದಾಗ ಇಡೀ ಸೈನ್ಯಕ್ಕೆ ಬಹಳ ಉತ್ಸಾಹ ಬಂತು.

ಆಕಾಶದಲ್ಲಿ ದೇವತೆಗಳೆಲ್ಲ ಬಂದು ಸೇರಿದ್ದಾರೆ. ರಾಮ ಮತ್ತು ಖರಸೇನೆಯ ಯುದ್ಧ ನೋಡುವ ಇಚ್ಛೆಯಿಂದ ಅವರೆಲ್ಲರೂ ಸೇರಿ ಗೋವು ಮತ್ತು ಬ್ರಾಹ್ಮಣರಿಗೆ ಶುಭವಾಗಲಿ ಎಂದು ಆಶೀರ್ವಾದದ ನುಡಿಗಳನ್ನಾಡುತ್ತಾರೆ – ಶ್ರೀರಾಮನು ಯುದ್ಧದಲ್ಲಿ ಪೌಲಸ್ತ್ಯರನ್ನು ಜಯಿಸಲಿ.

ಸಾರಥಿ ಖರನನ್ನು ಸೇನಾಗ್ರಕ್ಕೆ ಕರೆದುಕೊಂಡು ಬಂದಿದ್ದಾನೆ. ಅವನನ್ನು ಪೃಥುಗ್ರೀವ, ಯಜ್ಞಶತ್ರು, ವಿಹಂಗಮ, ದುರ್ಜಯ, ಕರವೀರಾಕ್ಷ, ಪರುಷ, ಕಾಲಕಾರ್ಮುಕ, ಮೇಘಮಾಲಿ, ಮಹಾಮಾಲಿ, ರುಧಿರಾಶನ ಮುಂತಾದ ಹನ್ನೆರಡು ಸೇನಾನಾಯಕರು ಖರನನ್ನು ಸುತ್ತುವರೆದರು ಹಾಗೂ ನಾಲ್ವರು ದೂಷಣನ ಸಹಚರರು ಹೀಗೆ ಯುದ್ಧೋತ್ಸುಕ ಸೇನೆ ರಾಮ ಲಕ್ಷ್ಮಣರತ್ತ ಧಾವಿಸಿತು.

ಪಂಚವಟಿಯ ರಾಮಾಶ್ರಮದಲಿ ರಾಮನು ಈ ಉತ್ಪಾತಗಳನ್ನು ನೋಡಿ ಲಕ್ಷ್ಮಣನಿಗೆ ಹೇಳುತ್ತಾನೆ. ಇವು ಜೀವ ತೆಗೆಯುವ ಉತ್ಪಾತಗಳು. ನೋಡು ಲಕ್ಷ್ಮಣ, ಸಂಹಾರ ಕಾಂಡವೇ ನಡೆಯಲಿಕ್ಕಿದೆ. ಇವುಗಳನ್ನು ಸರಿಯಾಗಿ ಪರಿಶೀಲಿಸಿದರೆ ರಾಕ್ಷಸರಿಗೆ ಅನ್ವಯವಾಗುತ್ತವೆ ಇವು. ಸರ್ವರಾಕ್ಷಸರ ಸಂಹಾರ ಕಾದಿದೆ. ರಾಮನ ಸುತ್ತಮುತ್ತಲೂ ನಿಮಿತ್ತಗಳು ಆಗುತ್ತಿವೆ. ರಾಮನ ಬಾಣಗಳು ಹೊಗೆ ಉಗುಳಲು ಆರಂಭಿಸಿವೆ. ನೋಡು ಲಕ್ಷ್ಮಣ ನನ್ನ ಬಾಣಗಳಿಗೆ ಯುದ್ಧದ ತವಕ, ಬಿಲ್ಲುಗಳು ಯಾರೂ ಏನೂ ಮಾಡದೇ ಇರುವಲ್ಲಿಯೇ ಹೊರಳಾಡುತ್ತಿವೆ. ಪಕ್ಷಿಗಳು ಬೇರೆ ಬೇರೆ ಸೂಚನೆ ಕೊಡುತ್ತಿವೆ. ಇದರ ಅರ್ಥ ನಮಗೆ ಮುಂದೆ ದೊಡ್ಡ ವಿಪತ್ತು ಕಾದಿದೆ. ಜೀವನ್ಮರಣದ ಸಂಶಯವಾಗುವ ಮಹಾಕದನ ಕಾದಿದೆ. ಆದರೆ ಅದುರುವ ನನ್ನ ಬಲತೋಳು ಶತ್ರುಗಳ ಸೋಲನ್ನು ಸೂಚಿಸುತ್ತಿದೆ. ನಿನ್ನ ಮುಖ ಪ್ರಸನ್ನವಾಗಿದೆ. ಯಾವಾಗ ಜಯಲಕ್ಷ್ಮಿ ನಮಗೆ ಒಲಿಯುತ್ತಾಳೋ ಆಗ ಮುಖದಲ್ಲಿ ಕಳೆ ಬರುತ್ತದೆ. ನಿನ್ನ ಮುಖದ ಕಳೆ ಜಯವನ್ನು ಸೂಚಿಸುತ್ತಿದೆ. ಕೇಳು ಲಕ್ಷ್ಮಣ, ರಾಕ್ಷಸರ ಬೊಬ್ಬೆ, ಕ್ರೂರಕರ್ಮಿಗಳು ರಣದುಂದುಭಿಯನ್ನು ಬಡಿಯುತ್ತಿದ್ದಾರೆ. ನಾವು ತಯಾರಾಗಬೇಕಿದೆ. ಆಪತ್ತು ಬರುವ ಮುನ್ನದ ಸಿದ್ಧತೆ ಮಾಡಬೇಕಿದೆ. ನಾನು ಕವಚ ಬಿಲ್ಲುಬಾಣ ಎತ್ತಬೇಕು. ಬಿಲ್ಲುಬಾಣಗಳನ್ನು ತೆಗೆದುಕೊಂಡು ಸಿದ್ಧನಾಗಿ ಹೇಳಿದನು ರಾಮಾ ಲಕ್ಷ್ಮಾಣನಿಗೆ, ಈ ಬೆಟ್ಟದ ದುರ್ಗಮ ಗುಹೆಯನ್ನು ನೀನು ವೈದೇಹಿಯನ್ನು ಕರೆದುಕೊಂಡು ಆಶ್ರಯಿಸು. ಏಕೆಂದರೆ ವೈದೇಹಿಗೆ ಆಪತ್ತು ಬರಬಾರದು. ಆಗ ಲಕ್ಷ್ಮಣನ ಮುಖದ ಬಣ್ಣ ಬದಲಾಗಿದೆ. ನಾನು ಯುದ್ಧ ಮಾಡುವೆನೆಂದು ಹೇಳಲು ಹೊರಟಾಗ ರಾಮ ಹೇಳಿದನಂತೆ ಈ ನನ್ನ ಮಾತಿಗೆ ಎದಿರಾಡಬೇಡ. ನನ್ನ ಪಾದಗಳ ಮೇಲಾಣೆ ಸೀತೆಯನ್ನು ಕರೆದುಕೊಂಡು ಹೋಗು ಮಗು ಎಂದಾಗ ಬಿಲ್ಲುಬಾಣಗಳನ್ನು ತೆಗೆದುಕೊಂಡು ಸೀತೆಯನ್ನು ಕರೆದುಕೊಂಡು ಹೊರಟನಂತೆ ಲಕ್ಷ್ಮಣ. ಲಕ್ಷ್ಮಣ ಹೊರಟ ಮೇಲೆ ಸರಿಯಾಯಿತು ಎಂದು ಒಮ್ಮೆ ಉದ್ಗರಿಸಿ ಕವಚ ಧರಿಸಿದ ರಾಮ ಹೊಗೆ ಇಲ್ಲದ ಜ್ವಾಲಾಮಾತ್ರದ ಅಗ್ನಿಯಂತೆ ಬೆಳಗಿದನು. ತನ್ನ ಬಿಲ್ಲು ಬಾಣಗಳನ್ನು ಎತ್ತಿ ಧನುಸ್ಸಿನ ಠೇಂಕಾರ ಮಾಡಿ ಅಲ್ಲಿಯೇ ಸ್ಥಿರವಾಗಿ ನಿಂತ ರಾಮ. ಆ ಠೇಂಕಾರ ದಿಕ್ಕದಿಕ್ಕುಗಳಲ್ಲಿ ವಿಸ್ತರಿಸಿತು. ಆಗ ರಾಮನು ದೇವತೆಗಳು, ಋಷಿಗಳು, ಗಂಧರ್ವ ಸಿದ್ಧಚಾರಣರನ್ನು ಗಮನಿಸುತ್ತಾನೆ. ಅದನ್ನೇ ಪುನರುಚ್ಛರಿಸುತ್ತಾರೆ ದೇವತೆಗಳು “ರಾಮನಿಗೆ ಜಯವಾಗಲಿ” ಎಂದು.
ಕೆಳಗೆ ನೋಡಿದಾಗ ದೇವತೆಗಳಿಗೆ ಭಯವಾಯಿತು. ಅತ್ತಕಡೆ ಹದಿನಾಲ್ಕು ಸಾವಿರ ಘೋರ ರಾಕ್ಷಸರು ಇತ್ತಕಡೆ ಒಬ್ಬನೇ ರಾಮ. ರಾಕ್ಷಸರು ಭೀಮಕರ್ಮರು, ರಾಮ ಧರ್ಮಾತ್ಮ. ಜ್ಞಾನಿಗಳೇ ಆದರೂ ಒಂದು ಕ್ಷಣ ಆತಂಕಗೊಂಡರು
ಯುದ್ಧದಲ್ಲಿ ಏನಾಗಬಹುದೆಂದು..?

ಪ್ರೀತಿ ಇರುವಲ್ಲಿ ಆತಂಕವೂ ಇರುತ್ತದೆ

ಹಾಗಾಗಿ ಪರಮಕುತೂಹಲದಲ್ಲಿ ನೋಡುತ್ತಿದ್ದಾರೆ. ಇತ್ತ ರಾಮ ಮಹಾತೇಜಸ್ಸನ್ನು ಆವಾಹನೆ ಮಾಡಿಕೊಳ್ಳುತ್ತಿದ್ದಾನೆ. ಆ ಕ್ಷಣದಲ್ಲಿ ರಾಮನನ್ನು ನೋಡಿದ ಜೀವರಾಶಿಗಳು ಭಯಗೊಂಡವು. ಯುದ್ಧದ ತೇಜಸ್ಸನ್ನು ಆವಾಹನೆ ಮಾಡಿಕೊಂಡ ರಾಮನು ಪ್ರಳಯಕಾಲದ ಅಗ್ನಿಯಂತೆ ಗೋಚರಿಸಿದ. ಎಂತಹ ಕ್ಲಿಷ್ಟಕಾರ್ಯವನ್ನು ಸುಲಭವಾಗಿ ಮಾಡಿಮುಗಿಸುವ ರಾಮನ ರೂಪ ಅಪ್ರತಿಮವಾಗಿತ್ತು. ಹೇಗಿತ್ತೆಂದು ಹೇಳುವುದಾದರೆ ಕ್ರುದ್ಧನಾದ ಧನುವೆತ್ತಿದ ಪ್ರಳಯರುದ್ರನಂತಿತ್ತು. ಅಲ್ಲಿ ದೇವತೆಗಳೂ ರಾಮನ ಯುದ್ಧರೂಪದ ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ.

ಆಗ ಬಂದು ಮುತ್ತಿದರು ರಾಕ್ಷಸರು. ಸೇನೆಯಾಗಿ ಹೊರಟವರು, ವ್ಯೂಹ ಮಾಡಿಕೊಂಡು ಎಲ್ಲಾ ಕಡೆಯಿಂದ ರಾಮನನ್ನು ಮುತ್ತಿದರು. ಅವರ ಉದ್ಘೋಷಗಳು, ದುಂದುಭಿಗಳ ಶಬ್ದ ಕಾಡಿನಲ್ಲಿ ಮಾರ್ಮೊಳಗಿಸಿತು. ಪರಿಣಾಮ, ವನಚಾರಿಗಳಾದ ಎಲ್ಲ ಪ್ರಾಣಿಗಳು ನಿಶಬ್ದವಿರುವಲ್ಲಿಗೆ ಓಡಿಹೋದವು. ಆದರೆ ರಾಮ ಮಾತ್ರ ಅಚಲವಾಗಿ, ಧೈರ್ಯವಾಗಿ, ಸ್ಥೈರ್ಯವಾಗಿ ಮಹಾಪರ್ವತದಂತೆ ನಿಂತಿದ್ದಾನೆ.

ರಾಮನಾದರೇನು? ಕದನ ವಿಶಾರದನಲ್ಲವೇ ಅತ? ರಾಮನ ಸೂಕ್ಷ್ಮದೃಷ್ಟಿ ಎಲ್ಲವನ್ನೂ ಅಳೆಯುತ್ತಿದೆ. ಯಾರಿದ್ದಾರೆ? ಹೇಗೆ ಎದುರಿಸಬೇಕು? ಎಂಬ ಯೋಜನೆ ರಾಮನಲ್ಲಿ ಸಿದ್ಧವಾಗುತ್ತಿದೆ. ರಜೋಗುಣವಿಲ್ಲದ ಸತ್ವಮೂರ್ತಿ ತೀವ್ರವಾದ ಕ್ರೋಧವನ್ನು ತಂದುಕೊಂಡು ಧನುಸ್ಸನ್ನು ಮೇಲೆತ್ತಿದ.

ಕ್ರೋಧವು ಬುದ್ಧಿಯ ನಿಯಂತ್ರಣದಲ್ಲಿರಬೇಕು.

ತೀಕ್ಷ್ಣವಾದ ರಾಮನ ರೂಪವನ್ನು ಕಂಡು ವನದೇವತೆಗಳು ಬೆಚ್ಚಿ ಓಡಿಹೋದರು. ರಾಮನನ್ನು ಕಂಡ ಖರ ಸೂತನಿಗೆ ಹೇಳಿದನಂತೆ ರಥವನ್ನು ರಾಮನ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸು. ಹಾಗೇ ಮಾಡುತ್ತಾನೆ ಸೂತ. ರಥವು ರಾಮನ ಅಭಿಮುಖವಾಗಿ ಸಾಗುತ್ತಿದೆ. ಇತ್ತ ರಾಮ ಧನುಸ್ಸಿನ ಠೇಂಕಾರ ಮಾಡುತ್ತಾ ನಿಂತಿದ್ದಾನೆ. ಖರನನ್ನು ಕಂಡೊಡನೆಯೇ ಅವನ ಸಚಿವರು ಓಡಿದರು ಅವನೊಟ್ಟಿಗೆ. ಆ ಎಲ್ಲಾ ರಾಕ್ಷಸರ ಮಧ್ಯೆ ಖರ ತಾರೆಗಳ ಮಧ್ಯೆ ಮಂಗಳ ಗ್ರಹದಂತೆ ಕಂಡ.

ಯುದ್ಧ ಪ್ರಾರಂಭವಾಯಿತು. ಒಂದುಸಾವಿರ ಬಾಣಗಳಿಂದ ರಾಮನನ್ನು ಮುಚ್ಚಿದನಂತೆ ಖರ. ಅವನೇ ಯುದ್ಧವನ್ನು ಆರಂಭಿಸುತ್ತಾನೆ. ಅಸಂಖ್ಯಾತ ಬಾಣಗಳಿಂದ ರಾಮನನ್ನು ಮುಚ್ಚಿ ಬಳಿಕ ಘರ್ಜಿಸಿದನಂತೆ ಹೇಗಿದೆ ನನ್ನ ಯುದ್ಧಕೌಶಲ? ನನ್ನ ಸಾಮರ್ಥ್ಯ? ಖರನನ್ನು ನೋಡಿ ಸೈನಿಕರೂ ಕೂಡ ತಮ್ಮ ಬಾಣಗಳನ್ನು ಪ್ರಯೋಗಿಸುತ್ತಾರೆ. ಆದರೆ ಅವರಿಗೂ ರಾಮನ ಧನುಸ್ಸನ್ನು ನೋಡಿದಾಗ ಭಯವಾಯಿತಂತೆ. ಆದರೂ ಕ್ರೋಧದಿಂದ ರಾಮನ ಮೇಲೆ ಅಕ್ಷರಶಃ ಬಾಣಗಳ ಮಳೆಗರೆದರು. ಮುದ್ಗರಗಳು, ಪಟ್ಟಿಶಗಳು, ಶೂಲಗಳು, ಖಡ್ಗಗಳು, ಇವುಗಳೆಲ್ಲವನ್ನು ಪ್ರಯೋಗಿಸಿದರು. ರೋಷಗೊಂಡ ರಾಕ್ಷಸರು ರಾಮನನ್ನು ಪ್ರಹರಿಸಿದರು. ಅವರ ರಥಗಳು, ಕುದುರೆಗಳು, ಆನೆಗಳು ರಾಮನೆಡೆಗೆ ಧಾವಿಸುತ್ತಲೇ ಇವೆ. ಪರ್ವತದ ಮೇಲೆ ಮೋಡಗಳು ಮಳೆ ಸುರಿಸುವಂತೆ ಅಚಲನಾದ ರಾಮನ ಮೇಲೆ ರಾಕ್ಷಸರು ಶಸ್ತ್ರಗಳ ಮಳೆಗರೆಯುತ್ತಿದ್ದಾರೆ. ಆ ಸಮಯದಲ್ಲಿ ರಾಮ ಹೇಗೆ ಕಂಡ ಎಂದರೆ ಭೂತಗಣಗಳಿಂದ ಸುತ್ತುವರೆಯಲ್ಪಟ್ಟ ಪರಶಿವನಂತೆ. ಭೂತಗಣಗಳಂತೆ ರಾಕ್ಷಸರು, ಶಿವನಂತೆ ರಾಮ. ಅವರೆಲ್ಲರ ಶಸ್ತ್ರಗಳನ್ನು ತನ್ನ ಬಾಣಗಳಿಂದ ಸ್ವೀಕರಿಸಿದ ರಾಮ. ನದಿಗಳು ಬಂದು ಸಮುದ್ರವನ್ನು ಸೇರುವಂತೆ ಅಸ್ತ್ರ ಶಸ್ತ್ರಗಳು ಬಂದು ರಾಮನನ್ನು ಸೇರುತ್ತಿವೆ. ಮೈತುಂಬ ಗಾಯಗಳು. ಘೋರ ಆಯುಧಗಳು ಕೆಲವು ಕಡೆ ಅವನನ್ನು ಸೀಳಿವೆ, ಕೆಲವು ಕಡೆ ಗಾಯ ಮಾಡಿವೆ. ನಖಶಿಖಾಂತ ಗಾಯವಾಗಿದೆ ರಾಮನಿಗೆ. ಒಂದು ಪರ್ವತವನ್ನು ನೂರಾರು ವಜ್ರಾಯುಧಗಳಿಂದ ಬೇಧಿಸುವಂತೆ ನೂರಾರು ಸಾವಿರಾರು ಆಯುಧಗಳು ರಾಮನನ್ನು ಬಂದು ಸೇರುತ್ತಿವೆ. ರಕ್ತದಿಂದ ರಾಮನ ಮೈಯೆಲ್ಲ ಕೆಂಪಾಯಿತು. ಆ ಸಮಯದಲ್ಲಿ ಸಂಜೆಯ ಸೂರ್ಯನಂತೆ ಕಂಡನಂತೆ ರಾಮ. ಮೇಲಿನಿಂದ ದೇವತೆಗಳು, ಋಷಿಗಳು, ಸಿದ್ಧ-ಚಾರಣರು, ಗಂಧರ್ವರು, ಕಿನ್ನರರು, ಕಿಂಪುರುಷರು ನೋಡುತ್ತಿದ್ದಾರೆ. ಅವರಂದು ಕೊಂಡಂತೆ ಆತಂಕದ ಸನ್ನಿವೇಶ ಬಂದಿದೆ ಅಲ್ಲಿ. ಶಸ್ತ್ರಾಸ್ತ್ರಗಳನ್ನು ರಾಕ್ಷಸರು ಪ್ರಯೋಗಿಸುತ್ತಿದ್ದಾರೆ. ರಾಮನಿಗೆ ಗಾಯಗಳು ಆಗುತ್ತಲೇ ಇವೆ. ರಕ್ತದಿಂದ ನೆನೆದು ಕೆಂಪಾದ ರಾಮನನ್ನು ನೋಡಿದ ದೇವ- ಗಂಧರ್ವರು, ಋಷಿಗಳು ವಿಷಣ್ಣರಾದರು.

ದುಃಖಿತರಾದರು. ಆತಂಕಗೊಂಡರು. ಅವರ ಆತಂಕ ಹೇಗೆ ಪರಿಹಾರವಾಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ನೋಡೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments