ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ರಾವಣನು ಸೀತೆಯನು ಅಪಹರಿಸುವುದನು ನೋಡಿದ ಜಟಾಯುವು ಸೀತೆಯನು ರಕ್ಷಿಸಲು ಮುಂದಾಗಿ ; ರಾವಣನ ಜೊತೆ ಹೋರಾಡಿ ; ಸ್ಡಲ್ಪ ಹೊತ್ತಿನವರೆಗೆ ಸೀತೆಯನು ಪಾರುಮಾಡುವುದರಲ್ಲಿ ಸಫಲನಾಗಿ, ರಾವಣನಿಗೆ ಇನ್ನಿಲ್ಲದ ಕ್ಲೇಶಗಳನು ಉಂಟುಮಾಡಿ, ಅವನೊಂದಿಗೆ ಕಾದಾಡಿ, ಕೊನೆಗೆ ಮೋಸದಿಂದ ಹತನಾದ. ಇದನ್ನು ಜಟಾಯುವು ಮಾತ್ರವಲ್ಲದೇ ಬೇರೆ ಹತ್ತು ಕಣ್ಣುಗಳು ವೀಕ್ಷಿಸಿದವು. ರಾಮನಿಗೆ ಹತ್ತಿರವಾದ ಕಣ್ಣುಗಳು ನೋಡಿದರೂ ಕೂಡ ಏನೂ ಮಾಡಲಾಗಲಿಲ್ಲ ಮತ್ತು ಮಾಡಲಿಲ್ಲ.

ದಶಮುಖನನ್ನು ದಶನೇತ್ರಗಳು ಪಂಚವಟಿಯಿಂದ ಹೋಗುವುದನು ನೋಡಿದವು. ತನ್ನನ್ನು ಯಾರಾದರೂ ಕಾಪಾಡುವರೆಂಬ ಸಲುವಾಗಿ ಭೂಮಿಯನ್ನಿಡೀ ಸೀತೆ ಕಣ್ಣು ಹಾಯಿಸಿ ನೋಡುವಳು. ಪಂಚವಟಿಯಿಂದ ನೇರವಾಗಿ ಲಂಕೆಗೆ ಹೋಗುವಲ್ಲಿ ೫ ವಾನರ ಪುಂಗವರನ್ನು ಸೀತೆಯು ಕಂಡಳು. ಋಷ್ಯಮೂಕ ಪರ್ವತದ ಭಾಗದಲ್ಲಿ ಕಂಡಾಗ ಇವರು ನನ್ನವರೆಂಬ ಭಾವನೆಯು ಸೀತೆಯಲ್ಲಿ ಮೂಡಿತೇನೋ ತಿಳಿಯದು, ಆದರೆ ಆಗ ತನ್ನ ಉತ್ತರೀಯವನು ತೆಗೆದು ಒಂದಷ್ಟು ಆಭರಣವನು ಕಟ್ಟಿ ವಾನರರಿಗೆ ಸಿಗುವಂತೆ ಎಸೆದಳು. ರಾಮನಿಗೆ ಹೇಳಿಯಾರು, ಹೇಳಲಿ ಎಂಬ ಅಪೇಕ್ಷೆಯಿಂದ ಪರ್ವತಕ್ಕೆ ಎಸೆದಳು. ಅದು ರಾವಣನಿಗೆ ಗೊತ್ತಾಗಲಿಲ್ಲ. ಏಕೆಂದರೆ ಅವನಿಗೆ ರಾಮ-ಲಕ್ಷ್ಮಣರ ಕಣ್ಣಿಗೆ ಬೀಳದಂತೆ ಲಂಕೆಗೆ ತಲುಪುವುದೊಂದೇ ಗುರಿಯಾಗಿತ್ತು. ಈ ಪಿಂಗಾಕ್ಷರು ರಾವಣನು ಸೀತೆಯನ್ನು ಅಪಹರಿಸಿ ಕರೆದೊಯ್ಯುವುದನು ರೆಪ್ಪೆ ಮುಚ್ಚದೇ ನೋಡುವರು.

ಅತ್ತ ರಾವಣ ಪಂಪಾ ಸರೋವರವನು ದಾಟಿ, ಅಳುವ ಸೀತೆಯನು ಹಿಡಿದುಕೊಂಡು ಮುಂದೆ ಸಾಗುವನು. ಸಾಕಷ್ಟು ಮುಂದೆ ಹೋದ ಬಳಿಕ ಅವನಿಗೆ ನಿರಾಳವಾಯಿತು. ಆದರೆ ಮುಂದೆ ಹೋದರು ರಾಮ-ಲಕ್ಷ್ಮಣರ ದೃಷ್ಟಿಯ ಬಗ್ಗೆಯೇ ಯೋಚನೆಯು ರಾವಣನಿಗೆ ಕಾಡಿತ್ತು. ಆತ ತನ್ನ ಜೊತೆಗೆ ನಿಜವಾಗಿಯೂ ಮೃತ್ಯುವನ್ನೇ ಕರೆದೊಯ್ಯಿದಿದ್ದ. ಹೀಗೆ ಕಾಡು, ಪರ್ವತ, ಸರೋವರಗಳನು ದಾಟುತ್ತಾ ಬಿಲ್ಲಿನಿಂದ ಬಿಟ್ಟ ಬಾಣದಂತೆ ಲಂಕೆಯತ್ತ ಅಂದರೆ ಸಮುದ್ರ ತೀರದತ್ತ ತೆರಳಿದ. ರಾವಣನು ಸಮುದ್ರದ ಹತ್ತಿರ ಬಂದಾಗ ಅಲೆಗಳು ಅಡಗಿ ಶಾಂತಗೊಂಡವು, ನೀರಿನಲ್ಲಿದ್ದ ಮೀನು, ಮಹಾಸರ್ಪಗಳು ಮತ್ತು ಉಳಿದ ಜಲಚರಗಳು ಗಾಬರಿಯಿ0ದ ಹಿಂಜರಿದವು. ಸೀತೆಯನು ಕರೆದೊಯ್ದದುದನು ನೋಡಿ ಒಮ್ಮೆಗೆ ಸಮುದ್ರವೇ ಮಂಕಾಯಿತು. ಆಗ ಆಕಾಶ ಪುರುಷರು/ ಚಾರಣರು ದಶಗ್ರೀವನ ಕಥೆ ಇಲ್ಲಿಗೆ ಮುಗಿಯಿತೆಂದು ಮೂರು ಶಬ್ಧಗಳನ್ನು ನುಡಿವರು.

ಹೀಗೆ ರಾವಣನು ಚಡಪಡಿಸುತ್ತಿರುವ ಸೀತೆಯನು ಹಿಡಿದುಕೊಂಡು ಲಂಕಾ ಪ್ರವೇಶವನು ಮಾಡುವನು. ಲಂಕೆಗೆ ಮೃತ್ಯುವಿನ ಪ್ರವೇಶವಾಯಿತು. ಲಂಕೆ ಎಂಬುದು ಮಹಾ ನಗರಿ, ಮಹಾಪಥಗಳು, ರಾಜಮಾರ್ಗಗಳನ್ನು ದಾಟುತ್ತಾ, ತನ್ನ ಅಂತಃ ಪುರವನ್ನು ಪ್ರವೇಶಮಾಡಿ, ಶೋಕ, ಮೋಹ ಪರಾಯಾಸವಾದ ಸೀತೆಯನು ಮಯನು ಮಾಯೆಯನು ಇರಿಸಿದಂತೆ ಅಂತಃಪುರದಲಿ ಇರಿಸಿದನು. ನಂತರ ನೋಡಿದರೆ ಎದೆನಡುಗುವಂತಿರುವ ಪಿಶಾಚಿಯಂತೆ ಇರುವ ಘೋರ ಕುರೂಪಿಯಂತಿರುವ ರಾಕ್ಷಸಿಯರನು ಕಾಯಲು ಹೇಳಿದ. ನನಗೆ ಒಪ್ಪಿಗೆಯಿಲ್ಲದೇ ಯಾರೂ ನೋಡುವಂತಿಲ್ಲ. ಯಾವುದನ್ನು ಸೀತೆ ಕೇಳುವಳೋ ಕೂಡಲೇ ಒದಗಿಸಿ; ಆಕೆಗೆ ಬಟ್ಟೆ, ಆಭರಣ ಮುಂತಾದವುಗಳನು ನೀಡಿ, ಯಾರೂ ಸೀತೆಯನ್ನು ಬೇಸರಿಸ ಕೂಡದು. ಬೇಸರಿಸಿದರೆ ಕೊಂದು ಬಿಡುವೆನು. ಆದರೆ ಇದೆಲ್ಲವೂ ಸೀತೆಯನ್ನು ಒಲಿಸುವ ಪ್ರಯತ್ನಗಳಾಗಿದ್ದವು. ಹೀಗೆ ಅಪ್ಪಣೆಯನು ಮಾಡಿ ಮುಂದೇನು ಮಾಡಲಿ ಎಂದು ಯೋಚಿಸುತ್ತಾ ಹೊರಗಡೆ ಬಂದವನೇ ೮ ಘೋರ ರಾಕ್ಷಸರನು ಕಂಡನು. ಇಚ್ಛೆಯಿದ್ದದನು ಪಡೆದುಕೊಳ್ಳ ಬಲ್ಲವನು ಎಂಬ ಅಹಂನಿಂದ ಅವರೆಲ್ಲರನ್ನು ಹೊಗಳಿದ ಬಳಿಕ ನೀವು ಆಯುಧಗಳನ್ನು ಕೈಗೆತ್ತಿಕೊಳ್ಳಿ, ಖರನ ಜನ್ಮ ಸ್ಥಾನಕ್ಕೆ ಹೋಗಿ, ಈಗ ರಾಕ್ಷಸ ಶೂನ್ಯವಾಗಿದೆ. ಭಯ ತಾಳದೇ ಹೋಗಿ ಖರದೂಷಣರ ವೈರಿಯಾದ ರಾಮನನ್ನು ನಿಗ್ರಹಿಸಿ, ಅವನನ್ನು ನಿಗ್ರಹಿಸದೇ ನನಗೆ ನಿದ್ದೆಯಿಲ್ಲ. ನೀವು ಗೂಢಾಚಾರ್ಯವನು ಮಾಡಿ. ಸದಾ ರಾಮನ ವಧೆಗಾಗಿ ಪ್ರಯತ್ನಿಸಿ. ಜಾಗ್ರತೆ!!! ಆದರೆ… ಹೆದರದಿರಿ, ಹೋಗಿ ಎಂದು ಹೇಳಿದನು. ಇದನ್ನು ಕೇಳಿದ ರಾಕ್ಷಸರು ರಾವಣನ ಅಭಿದಾನವರಾಗಿ, ಸಂತೋಷದಿಂದ ತೆರಳುವರು.
ಅತ್ತ ರಾವಣನು ಸೀತೆಯನ್ನು ಲಂಕೆಗೆ ತಂದಿಟ್ಟವನಾಗಿ ಭಾರಿ ಸಂತೋಷವನ್ನು ತಾಳುವನು. ಮುಗಿಯದ ವೈರವನ್ನು ಕಟ್ಟಿಕೊಂಡ ರಾವಣನು ಅವಿವೇಕದಿಂದ ಭ್ರಮೆಪಟ್ಟನು.

ಮುಂದೆ ವೈದೇಹೀಯಲ್ಲಿ ಮೋಹ ಹೆಚ್ಚಿದವನಾಗಿ ಆಕೆಯನು ನೋಡುವ ಸಲುವಾಗಿ ಅರಮನೆಗೆ ಹೋದನು. ಅಲ್ಲಿ ರಾಕ್ಷಸಿಯರ ಮಧ್ಯೆ ಅಶ್ರುಮುಖಿಯಾಗಿರುವ ದೈನ್ಯಮೂರ್ತಿ, ಶೋಕದ ಭಾರವನು ಹೊತ್ತ ಸೀತೆಯಿರುವಳು. ಚಂಡಮಾರುತಕ್ಕೆ ಸಿಲುಕಿ ದುಃಖ ತಾಳಲಾರದೆ ಮುಳುಗಿಹೋಗುತ್ತಿರುವ ನೌಕೆಯಂತೆ, ಕಾಡುನಾಯಿಗಳಿಂದ ಸುತ್ತುವರೆದ ಜಿಂಕೆಯಂತೆ ಇದ್ದ ಸೀತೆಯನು ಕಂಡನು. ಆಕೆಯ ಕಣ್ಣು ಭೂಮಿಯನ್ನು ನೆಟ್ಟಿತ್ತು. ಬಲಾತ್ಕಾರವಾಗಿ ಕರೆದುಕೊಂಡು ಹೋಗಿ ತನ್ನ ಅರಮನೆಯನು ತೋರಿಸುವನು. ಮನೆಯು ಹೇಗಿತ್ತೆಂದರೆ ದೇವ ಭವನದಂತಿದ್ದ ಹಲವು ಬಗೆಯ ಭವನಗಳು, ಭವನಗಳಲ್ಲಿ ಹಲವಾರು ಸ್ತ್ರೀಯರು, ಬಗೆ ಬಗೆಯ ಪಕ್ಷಿಗಳು, ನಾನಾ ರತ್ನಗಳು, ದಂತದ ಸ್ತಂಭಗಳು, ದೃಷ್ಟಿ ಮನೋಹರವಾದ ಸ್ತಂಭಗಳು. ಹೀಗೆ ಬಂಗಾರದ ಮೆಟ್ಟಿಲುಗಳನೇರುತ್ತಾ ಸೀತೆಯನು ಕರೆದುಕೊಂಡು ಹೋಗುವನು, ದಂತ, ಬೆಳ್ಳಿಗಳಿಂದಾದ ಕಿಟಕಿಗಳು, ಭವನಗಳ ಸಾಲಿತ್ತು. ಉತ್ತಮ ಮಣ್ಣಿನಿಂದಾದ ನೆಲ, ಸರೋವರ, ಕೆರೆ ಏನೇ ತೋರಿಸಿದರೂ ಆಕೆ ನೋಡಲಿಲ್ಲ. ಆಕೆಯ ಮನಸ್ಸು ಸ್ಥಿರ, ಅದು ದೃಢ ಮನಸ್ಸು.

ನಂತರ ಸೀತೆಯನು ಲೋಭಿಸುವ ದೃಷ್ಟಿಯಿಂದ ಇಂತೆಂದನು- ಲಂಕೆಯಲ್ಲಿ ವೃದ್ಧರು, ಮಕ್ಕಳನ್ನು ಬಿಟ್ಟು ಯುದ್ಧ ಮಾಡಲು ಸಶಕ್ತರಾಗಿರುವ ರಾಕ್ಷಸರ /ಜನರ ಮುಕ್ಕೋಟಿ ಒಡೆಯ ನಾನು, ಈ ಸಾಮ್ರಾಜ್ಯ ನಿನಗೆ ಸಮರ್ಪಿತ , ನನ್ನ ಜೀವವು ನಿನಗೆ, ಪ್ರಾಣಕ್ಕಿಂತ ಮೇಲೆ, ನನ್ನ ಬಹುಪಾಲು ಸ್ತ್ರೀಯರ ಒಡತಿಯಾಗುತ್ತೀಯ, ಪ್ರಸನ್ನಳಾಗು. ನಿನ್ನನ್ನು ಇಲ್ಲಿ ಕಾಪಾಡಲು ಯಾರೂ ಬರುವುದಿಲ್ಲ ಕಾರಣ- ಇದು ಸಮುದ್ರದಿಂದ ಸುತ್ತುವರಿದ ದೇಶ.

ನನನ್ನು ಸೋಲಿಸುವವರು ಯಾರೂ ಇಲ್ಲ, ಇಂದ್ರ, ದೇವತೆ, ಕಿನ್ನರ, ಋಷಿ, ಗಂಧರ್ವರಲ್ಲಿ ನನಗೆ ಸಮನಾದ ವೀರರಿಲ್ಲ. ರಾಮನನ್ನು ನಂಬಿ ಏನು ಮಾಡುತ್ತೀಯ, ಅವನು ಸಾಮಾನ್ಯ ಮನುಜ, ಅಲ್ಪ ಸದೃಶಿ, ರಾಜ್ಯ, ಕಾಲಾಳು, ಕುದರೆ, ರಥ ಯಾವುದೂ ಇಲ್ಲ. ಈ ಯೌವ್ವನ ಶಾಶ್ವತವಲ್ಲ, ನನ್ನೊಡನೆ ರಮಿಸು, ಅವನ ಆಸೆಯನು ಬಿಟ್ಟುಬಿಡು, ಅವನು ಲಂಕೆಗೆ ಬರುವುದು ಕನಸು, ನಿನ್ನ ಕಲ್ಪನೆ ಅದು. ಲಂಕೆಯನು ನೀನು ಏಕೆ ಆಳಬಾರದು??? ನಾನು ನಿನ್ನ ಸೇವಕನಾಗಿರುವೆ. ಚರಾಚರ ಜಗತ್ತು ನಿನ್ನದು, ಈವರೆಗೆ ನೀನು ಮಾಡಿದ ಪಾಪಗಳೆಲ್ಲವೂ ವನವಾಸದಲ್ಲಿ ಮುಗಿದಿವೆ. ಈ ಪುಣ್ಯಕಾರ್ಯ ಮಾಡಿದ ಕಾರಣ ಈ ಪುಣ್ಯ ಪಡೆದುಕೋ.

ಪುಷ್ಪಕ ವಿಮಾನ ನನ್ನ ಬಳಿ ಇದೆ. ನನ್ನೊಡನೆ ಕುಳಿತು ವಿಹರಿಸಬಹುದು ಎಂದು ಹೇಳಿದಾಗ ಸಾಮಾನ್ಯ ಹೆಣ್ಣು ಮಕ್ಕಳು ಒಪ್ಪುತ್ತಿದ್ದರು. ಆದರೆ ಸೀತೆ ಒಪ್ಪಲಿಲ್ಲ. ನೀನು ಸಂತುಷ್ಟಳಾಗು ಎಂದೆಲ್ಲಾ ಸೀತೆ ಹೇಳಿದಾಗ ತನ್ನ ವಸ್ತ್ರದ ಅಂಚಿನಿಂದ ಮುಖ ಮುಚ್ಚಿ ಕಣ್ಣೀರನು ಒರೆಸಿಕೊಂಡಳು. ಆದರೆ ಮೂರ್ಖ ರಾವಣನು ಈಕೆಗೆ ಲಜ್ಜೆಯಾಗಿದೆಯೆಂದು ಅಂದುಕೊಂಡು ಮುಂದುವರೆದು- ಸಂಕೋಚ ಪಡಬೇಡ, ಧರ್ಮದ ಚಿಂತೆ ಬೇಡ, ಏಕೆಂದರೆ ಇದು ಋಷ್ಯ/ಆರ್ಷವಾದ ದೈವ ಪ್ರವಾಹ, ನೀನು ಸೇರಿದರೆ ದೈವಪುರುಷನನ್ನು ಸೇರಿದಂತೆ, ಯಾವುದೇ ದೋಷವಿಲ್ಲ ಎಂದು ಹೇಳಿದ ನಂತರ ಈ ಎಲ್ಲಾ ಅಸಂಬದ್ಧಕ್ಕೆ ತಿಲಕವಿಟ್ಟಂತೆ ರಾವಣನು ಸೀತೆಯ ಕಾಲಿಗೆ ಬಿದ್ದು, ನಾನು ನಿನ್ನ ವಶ್ಯ, ದಾಸ ಎಂದು ಹಲುಬಿದ. ದುರಾಸೆಯನು ತುಂಬಿದ ರಾಕ್ಷಸ ಯಾವ ಮಟ್ಟದವರೆಗೆ ಹೋಗುವ ಎಂಬುದನ್ನು ಇಲ್ಲಿ ನಾವು ಕಾಣಬಹುದು. ಆರ್ತನಾಗಿ ಪ್ರಸನ್ನಳಾಗು ಎಂದು ಕಾಲಿಗೆ ಬಿದ್ದ. ನಿನ್ನ ವಶ್ಯದಲ್ಲಿರುವ ನಾನು ಒಣಗಿ ಹೋಗಿದ್ದೇನೆ. ಹೀಗೆ ಹೇಳಿದವನು ಸೀತೆ ತನ್ನವಳಾಗಿಯಾಯಿತು ಎಂದು ಭ್ರಮಿಸಿದ.

ಆಗ ಸೀತೆಯು ನಿರ್ಭೀತಳಾಗಿ ಶೋಕದಿಂದ ಹುಲ್ಲುಕಡ್ಡಿಯನು ಇಟ್ಟು -ಧರ್ಮ ಸೇತುವಾದ ದಶರಥನ ಸೊಸೆ ನಾನು, ಧರ್ಮದೇವನಾದ ರಾಮ ನನ್ನ ಪತಿ, ದೇವರು. ರಾಮನದು ಮಹಾಕಾಂತಿಮತವಾದ ಶರೀರ ಆತ ಲಕ್ಷ್ಮಣನೊಡಗೂಡಿ, ಬಂದು ನಿನ್ನ ಸಂಹರಿಸಿ ನನ್ನನು ಬಿಡಿಸುವ, ೩೨ ಕೋಟಿ ರಾಕ್ಷಸರು ಅವನ ಮುಂದೆ ವಿಷವಿಲ್ಲದ ಹಾವುಗಳು, ಅವನ ಬಾಣಗಳು ಗಂಗೆಯ ದಂಡೆಯಿಂದ ಉಕ್ಕಿಬರುವಂತೆ ನಿನ್ನನು ಬಂದು ನಾಶ ಮಾಡುವವು, ನೀನು ಯಾರಿಂದ ಅಭೇಧ್ಯನಾಗಿದ್ದರು ಅದು ರಾಮನೊಂದಿಗೆ ನಡೆಯದು. ನಿನ್ನ ಸ್ಥಿತಿ ಹೇಗೆಂದರೆ- ಯಜ್ಞಯೂಪಕ್ಕೆ ಕಟ್ಟಿದ ಪಶುವಿನಂತೆ, ರಾಮನು ರುದ್ರನು ನೋಡಿದಂತೆ ನೋಡಿದರೆ ನೀನು ಬೂದಿಯಾಗುವೆ. ಸಮುದ್ರವನು ಮಲಗಿಸಿಯಾನು, ನೀನು ಸತ್ತವನು, ಆಯುಸ್ಸು ಮುಗಿದವನು, ನೀನು ಸತ್ತು ಈ ಲಂಕೆ ವಿಧವೆಯಾಗುವುದು, ನಿನ್ನ ಕುರಿತಾಗಿ ನನಗೆ ಯಾವ ಅಪೇಕ್ಷೆಯೂ ಇಲ್ಲ. ನನ್ನನು ನನ್ನ ಪತಿಯ ಬಳಿಯಿಂದ ಅಪಹರಿಸಿ ತಂದೆಯಲ್ಲಾ, ನನ್ನ ಪತಿ ನನ್ನ ಮೈದುನನೊಡನೆ ಬಂದು ನನ್ನನು ಬಿಡಿಸಿಕೊಂಡು ಹೋಗುತ್ತಾರೆ. ಅವರಿಗೆ ದಂಡಕಾರಣ್ಯದಲ್ಲಿ ಯಾವ ಭಯವೂ ಇಲ್ಲ. ನಿನ್ನ ಸೊಕ್ಕನ್ನು ಇಳಿಸುವನು. ಯಜ್ಞದ ವೇದಿಕೆಯನು ಚಂಡಾಲನು ಹೇಗೆ ಮುಟ್ಟಲು ಸಾಧ್ಯವಿಲ್ಲವೋ ಅದೇ ರೀತಿ ಮಹಾಮಹಿಮ ರಾಮನ ಪತಿವ್ರತೆಯಾದ ನನ್ನನ್ನು ನೀನು ಏನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಹೇಳಿ, ರಾಜ ಹಂಸದೊಂದಿಗೆ ಕಮಲದ ಕೊಳದಲ್ಲಿ ವಿಹರಿಸುವ ಹಂಸಿಯು ನೀರು ಕಾಗೆಯೊಂದಿಗೆ ಹೋಗಲು ಸಾಧ್ಯವಿಲ್ಲ. ನೀನು ಬೇಕಾದರೆ ಈ ಜಡ ಶರೀರವನು ಕೊಲ್ಲಬಹುದು, ಈ ಶರೀರವು ನನಗೆ ಬೇಡ. ಆದರೆ ರಾಮನ ಪತಿವ್ರತೆಯಾದ ಪತ್ನಿ ಸೀತೆಯು ರಾಮನನ್ನು ಬಿಟ್ಟಳು ಎಂಬುದಾಗಿ ಗುರಿಯಾಗಲಾರೆ ಎಂದು ಕಠೋರವಾದ ಮಾತನು ಹೇಳಿ ಸೀತೆ ಮೌನವಾದಳು.

ಆಗ ರಾವಣನ ರೋಮ ರೋಮಗಳು ಕುಪಿತಗೊಂಡವು, ಮುಂದುವರೆದು “ಕೇಳು ಮೈಥಿಲಿ, ಇನ್ನು ೧೨ ತಿಂಗಳು ನಿನಗೆ ಗಡುವು; ಅದರ ಒಳಗಾಗಿ ನೀನು ನನ್ನ ವಶವಾಗದಿದ್ದರೆ, ನಿನ್ನನ್ನು ನನ್ನ ಅಡಿಗೆ ಮನೆಗೆ ಕರೆದುಕೊಂಡು ಹೋಗಿ, ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಬೆಳಗಿನ ತಿಂಡಿಯನ್ನಾಗಿ ತಿನ್ನುವೆನು. ಯಾಕೆಂದರೆ- ಒಪ್ಪದ ಸ್ತ್ರೀಯನ್ನು ಮುಟ್ಟಿದರೆ ಆತನ ತಲೆ ಚೂರಾಗುವುದು ಎಂಬ ಶಾಪವಿದೆ. ಹಾಗಾಗಿ ಪ್ರೀತಿಯಿಂದ ಒಪ್ಪದಿದ್ದರೆ ಭಯಪಡಿಸಿ ಒಪ್ಪಿಸುವುದು. ಆದ್ದರಿಂದ ರಾಕ್ಷಸಿಯರನು ಕರೆದು ಇವಳ ಸೊಕ್ಕಿಳಿಸಿ, ನೀವಂತು ರಕ್ತ, ಮಾಂಸಗಳನು ಕುಡಿದು ತಿನ್ನುವವರು. ಆ ರೀತಿ ಹೇಳುತ್ತಿದ್ದಂತೆ ಆ ಘೋರ ರಾಕ್ಷಸಿಯರು ಸೀತೆಯನು ಸುತ್ತುವರೆದರು. ರಾವಣನು ನೆಲ ನಡುಗುವಂತೆ ತನ್ನ ಕಾಲನ್ನು ನೆಲಕ್ಕೆ ಬಡಿದನು ಹೇಳಿದನು. ಇವಳನು ಅಶೋಕವನಕ್ಕೆ ಕರೆದುಕೊಂಡು ಹೋಗಿ, ರಕ್ಷಣೆ ನೀಡಿ, ಅವಳನ್ನು ಹುಡುಕಿಕೊಂಡು ಬಂದರೂ ಕಷ್ಟ. ಘೋರ, ಕಠಿಣ ಮಾತುಗಳಿಂದ ಕೆಲವೊಂದು ಬಾರಿ ಸಮಾಧಾನದಿಂದ ದಾರಿಗೆ ತನ್ನಿ, ಕಾಡಿನಿಂದ ತಂದ ಹೆಣ್ಣಾನೆಯನ್ನು ಪಳಗಿಸುವಂತೆ ಪಳಗಿಸಿ ಎಂದು ಹೇಳಿದನು.

ಸೀತೆಯನು ಅಶೋಕವನಕ್ಕೆ ಕರೆದುಕೊಂಡು ಹೋಗಲಾಯಿತು. ಆ ವನವು ಬಗೆ ಬಗೆಯ ಹೂ-ಹಣ್ಣುಗಳಿಂದ ತುಂಬಿತ್ತು, ಆದರೆ ಶೋಕ ತಪ್ತಳಾದ ಸೀತೆ ಸದಾ ತನ್ನ ಪತಿಯೂ ಹಾಗು ದೇವರೇ ಆದ ರಾಮನನ್ನು ಎಡೆಬಿಡದೆ ಸ್ಮರಣೆ ಮಾಡುತ್ತಿದ್ದಳು. ಇತ್ತ ರಾಮನು ಸೀತಾನ್ವೇಷಣೆಗೆ ಆರಂಭವನ್ನು ಮಾಡಿದ್ದಾನೆ. ಮಾರೀಚ ರಾಕ್ಷಸರ ಸಂಹಾರದ ಬಳಿಕ ಒಂದಡಿಯನು ಇಟ್ಟಾಗ ನಡೆದ ಘಟನೆಯು ಸೀತೆಯು ಏನಾದಳೆಂಬುದನ್ನು ಸಾರಿ ಹೇಳಿದವು.
ಆ ಘಟನೆ ಏನು ಎಂಬುದನ್ನು ನಾವು ಮುಂದಿನ ಕಥಾ ಭಾಗದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments