ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಮುಕ್ತಿಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಶಬರಿ ಕಾಯುತ್ತಿದ್ದಾಳೆ. ಆಕೆಯ ಕುಟೀರಕ್ಕೆ ಮುಕ್ತಿಪುರುಷನೇ ಬಂದು ಅವಳ ಸಾಧನೆಗೆ ಮುಕ್ತಿಯ ಮುದ್ರೆಯನ್ನೊತ್ತಲು ಕಾಯುತ್ತಿದ್ದಾಳೆ. ಕಾಯುವುದೆಂದರೆ ತಪಸ್ಸು.
ನಮ್ಮಲ್ಲಿ ವಿಶ್ವಾತ್ಮಚೈತನ್ಯವು ಬಂದಿಳಿಯುವುದಾದರೆ ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪನೆ ಮಾಡಿಕೊಂಡು ಕಾಯಬೇಕು. ಅವನು ಬರುವುದು ಅವನ ಕೆಲಸ, ನಮ್ಮ ಕೆಲಸವಲ್ಲ. ಶಬರಿಯೇನು ಉತ್ತಮ ಕುಲದವಳಲ್ಲ, ಯಾವುದೋ ಸಾಮ್ರಾಜ್ಯದ ಸಾಮ್ರಾಜ್ಞಿಯಲ್ಲ, ಅವಳಲ್ಲಿ ಕುಲವೂ ಇಲ್ಲ, ಧನವೂ ಇಲ್ಲ. ರೂಪವತಿಯೋ ಎಂದರೆ ಮುಪ್ಪಿನ ಮುದುಕಿ, ರಾಮ ಬರುವ ಕಾರಣಕ್ಕೆ ಜೀವ ಹಿಡಿದುಕೊಂಡಿದ್ದಾಳೆ. ಜಾತಿ, ಕುಲ, ಅಧಿಕಾರ, ಧನಸಂಪತ್ತು, ಜನಸಂಪತ್ತು ಯಾವುದೂ ಇಲ್ಲ. ಪಂಪಾತೀರದಲ್ಲಿ ಕಟ್ಟಿದ ಆಶ್ರಮದಲ್ಲಿ ಒಬ್ಬಳೇ ಇದ್ದಾಳೆ. ಹಾಗಿದ್ದರೆ ಈ ಮುಕ್ತಿಯ ಸಾಧನಗಳು ಆಕೆಗೆ ಎಲ್ಲಿಂದ ದೊರೆತವು? ರಾಮ ಎಂದರೆ ಮುಕ್ತಿಯೆ. ಅವಳಲ್ಲಿಗೆ ಬರುವಲ್ಲಿಗೆ ಹೇಗೆ ಆಯಿತೆಂದರೆ ಗುರುಕೃಪೆಯಿಂದ. ಶಬರಿ ಆವರೆಗೆ ಬದುಕಿನಲ್ಲಿ ಮಾಡಿದ ಒಂದೇ ಒಂದು ಕೆಲಸವೆಂದರೆ ಗುರುಸೇವೆ. ಮತಂಗ ಮುನಿಗಳ ಶಿಷ್ಯರ ಸೇವೆ ಮಾಡ್ತಾಳೆ. ಅದು ಇಲ್ಲಿಯವರೆಗೆ ಆಕೆಯನ್ನು ಕರೆದುಕೊಂಡು ಬಂದಿದ್ದು.

ಶಬರಿಗೆ ರಾಮನು ಬಂದೊದಗುವಂಥದ್ದು ಅವರ ಕೃಪೆ. ರಾಮ ಬರ್ತಾನೆ, ನೀನು ಕಾಯಿ ಎಂದು ಅವರೇ ಹೇಳಿದ್ದು ಶಬರಿಗೆ. ಶಬರಿಯ ಆಶ್ರಮಕ್ಕೆ ರಾಮ ಬರ್ತಾನೆ ಎನ್ನುವುದಕ್ಕೆ ಕಾರಣವೇ ಇಲ್ಲ. ಆದರೆ ಶಬರಿಯ ಗುರುಗಳ ಕಣ್ಣು ಅದು ಭವಿಷ್ಯ ನೋಡುವ ಕಣ್ಣು. ರಾಮ ನಿನ್ನಾಶ್ರಮಕ್ಕೆ ಬರುವಂತಾಗ್ತದೆ ಅಂತ ಅವರೇ ಹೇಳಿದ್ದು. ಮತಂಗ ಮುನಿಗಳ ಶಿಷ್ಯರು ಶಬರಿಗೆ ರಾಮ ನಿನ್ನಲ್ಲಿಗೆ ಬರ್ತಾನೆ ಕಾಯಿ ಎನ್ನುವಾಗ ರಾಮ ಚಿತ್ರಕೂಟದಲ್ಲಿದ್ದ.

ಶಬರಿಯೇನು ಜ್ಞಾನಿಯಲ್ಲ, ಆಕೆಯ ಬಳಿಯಲ್ಲಿ ಯಾವ ಅಧಿಕಾರವೂ ಇಲ್ಲ. ಭಗವಂತ ಯಾರನ್ನು ಆರಿಸಿಕೊಳ್ತಾನೋ ಅವರಿಗೆ ಆತ ಲಭ್ಯವಾಗ್ತಾನೆ. ಶಬರಿಯನ್ನು ಆತ ಆರಿಸಿದ್ದಾನೆ.
ಕಬಂಧ ತೋರಿದ ದಾರಿಯಲ್ಲಿ ರಾಮ ಲಕ್ಷ್ಮಣರು ಮುಂದುವರೆದರು. ದಾರಿಯಲ್ಲಿ ಸಿಗುವ ಫಲವೃಕ್ಷಗಳ ಬಗ್ಗೆ ಬಹುವಾಗಿ ವರ್ಣಿಸಿದ್ದ ಕಬಂಧ. ಅದೇ ಪಂಪಾ ಸರೋವರದ ದಾರಿಯಲ್ಲಿ ಮುಂದುವರಿತಾರೆ. ಅವನು ಹೇಳಿದ್ದನ್ನು ಕೇಳಿಸಿಕೊಂಡ ರಾಮ ಲಕ್ಷ್ಮಣರು ಆ ಎಲ್ಲಾ ಫಲ ವೃಕ್ಷಗಳನ್ನ ನೋಡ್ತಾರೆ. ಆದರೆ ಯಾವುದನ್ನೂ ತಿನ್ನುವುದಿಲ್ಲ. ಮಾರೀಚ ಬಂದಾಗಿನಿಂದ ಆರಂಭಿಸಿ ಅವರ ಪಾಲಿಗಿದ್ದಿದ್ದು ಹಸಿವು, ಬಾಯಾರಿಕೆ, ದುಃಖ ಮಾತ್ರ. ದಾರಿಯಲ್ಲಿ ಇಷ್ಟೆಲ್ಲ ಹಣ್ಣುಗಳು ಕಂಡರೂ ಯಾಕೆ ತಿನ್ನಲಿಲ್ಲ ಅಂದ್ರೆ ಲಕ್ಷ್ಯ ಮುಂದೆಲ್ಲೋ ಇದೆ. ಸೀತೆಯಲ್ಲಿ ರಾಮ ತನ್ನ ಮನಸ್ಸನ್ನು ನೆಟ್ಟಿದಾನೆ. ರಾಮನಲ್ಲಿ ತನ್ನ ಮನಸ್ಸನ್ನು ಲಕ್ಷ್ಮಣ ನೆಟ್ಟಿದಾನೆ. ಹಾಗಾಗಿ ಜೇನಿನಂತ ಫಲಗಳು ಅವರನ್ನ ಆಕರ್ಷಿಸಲಿಲ್ಲ.

ರಾತ್ರಿಯಾಯ್ತು. ಒಂದು ಬೆಟ್ಟದ ತಪ್ಪಲಿನಲ್ಲಿ ರಾತ್ರಿ ವಾಸಮಾಡ್ತಾರೆ. ಬೆಳಗಾಯಿತು. ಮತ್ತೆ ಪ್ರಯಾಣವನ್ನ ಮುಂದುವರೆಸ್ತಾರೆ. ಸುಗ್ರೀವನನ್ನು ನೋಡುವ ತ್ವರೆ. ಸುಗ್ರೀವನೆ ಮುಂದಿನ ದಾರಿ. ಪಂಪೆಯ ಪಶ್ಚಿಮ ತೀರಕ್ಕೆ ಬಂದರು. ಬದುಕಿನ ಪಶ್ಚಿಮಾವಸ್ಥೆಯಲ್ಲಿ ಶಬರಿಯ ಜೀವ ಕಾದು ಕುಳಿತಿದೆ ಅಲ್ಲಿ. ಹಾಗಾಗಿ ಪಶ್ಚಿಮ ತೀರಕ್ಕೆ ಬಂದರು. ದಾರಿಯಲ್ಲಿ ಯಾಕೆ ಹಣ್ಣುಗಳನ್ನ ತಿನ್ನಲಿಲ್ಲ ಅಂದ್ರೆ ಶಬರಿ ಕೊಡುವ ಹಣ್ಣುಗಳು ಕಾಯ್ತಾ ಇದಾವೆ. ಶಬರಿ ಹಣ್ಣು ತಿಂದರೆ ದೋಷವಿಲ್ಲ ಏಕೆಂದರೆ ಅದು ಭಾವದ್ದು.

ಪಂಪಾ ತೀರಕ್ಕೆ ಬರ್ತಾರೆ ಅಲ್ಲಿ ಶಬರಿಯ ರಮ್ಯ ಆಶ್ರಮವಿತ್ತು. ಸುತ್ತಮುತ್ತ ಅನೇಕ ಪೊದೆಗಳು, ಲತೆಗಳು. ಅವುಗಳನ್ನೆಲ್ಲ ಅವಲೋಕಿಸ್ತಾ ಶಬರಿಯನ್ನು ಬಂದು ಸೇರಿದರು ರಾಮ ಲಕ್ಷ್ಮಣರು. ವಾಲ್ಮೀಕಿ ಮಹರ್ಷಿಗಳು ಆಕೆಯನ್ನು ಸಿದ್ಧಾ ಅಂತ ವರ್ಣಿಸಿದ್ದಾರೆ. ಸಿದ್ಧಾ ಎನ್ನುವಾಗ ಸಾಧನೆ ಅವಳಿಗೆ ಫಲಿಸಿದೆ. ಈಗಂತೂ ಖಂಡಿತವಾಗಿ ಫಲಿಸಿದೆ. ಇನ್ನೊಂದು ಅರ್ಥ ಮುಕ್ತಿ ಬಂದು ಕರೆದರೆ ಹೋಗುವುದಕ್ಕೆ ಸಿದ್ಧಳಾಗಿದಾಳೆ. ಪ್ರತಿದಿನವು ಆಶ್ರಮವನ್ನು ಸ್ವಚ್ಛಮಾಡಿ, ಬೇಕಾದ ಸಿದ್ಧತೆಗಳನ್ನ ಮಾಡಿಕೊಂಡು ಅದೆಷ್ಟೋ ಕಾಲ ಕಾದ ಶಬರಿ ರಾಮ ಲಕ್ಷ್ಮಣರು ಬಂದ ಕೂಡಲೆ ಎದ್ದಳು. ಕೈಮುಗಿದಳು.

ನಮಸ್ಕಾರ ಮಾಡುವುದು ಜೀವ-ದೇವರ ಅದ್ವೈತದ ಪ್ರತೀಕ

ಆಕೆ ರಾಮನ ಪಾದಗಳನ್ನು ಹಿಡಿದಳು. ಹಿಡಿದಳು ಎಂದರೆ ಬಿಡುವುದಿಲ್ಲ ಅಂತ ಅರ್ಥ. ಪರಮಾಶ್ರಯ ಅದು. ಲಕ್ಷ್ಮಣನ ಪಾದಗಳನ್ನೂ ಕೂಡ ಹಿಡಿದಳು. ಪಾದವನ್ನು ತೊಳೆದಳು. ಪೂಜೆ ಎಂದರೆ ಹೇಗೆ ಮಾಡಬೇಕೋ ಹಾಗೆ ಯಥಾ ಕ್ರಮವಾಗಿ ಮಾಡ್ತಾ ಇದಾಳೆ ಶಬರಿ. ಅವಳೇನು ಮಾಡಿದಳೋ ಅದು ಶಾಸ್ತ್ರ. ನಿಜವಾದ ಭಕ್ತಿಯನ್ನನುಸರಿಸಿ ಶಾಸ್ತ್ರ ಬರುವಂಥದ್ದು. ಆ ತಪಸ್ವಿನಿಯನ್ನು ಕುರಿತು ರಾಮ ಕುಶಲ ಪ್ರಶ್ನೆಗಳನ್ನು ಕೇಳ್ತಾನೆ. ಶಬರಿ ತಪೋವಿಘ್ನಗಳನ್ನು ಜಯಿಸಿದೆಯೇನು? ನಿನ್ನ ನಿಯಮಗಳು ಫಲಿಸಿದವೇನು? ನಿನ್ನ ಮನಸ್ಸಿಗೆ ಸುಖವಿದೆಯೇನು? ನೀನು ಮಾಡಿದ ಗುರುಶುಶ್ರೂಷೆಯು ಸಫಲವಾಯಿತೇನು? ಸಾರ್ಥಕವಾಯಿತೇನು? ಎಂದು ರಾಮನು ಆ ತಾಪಸಿಯನ್ನು ಕೇಳಿದಾಗ ಶಬರಿ ರಾಮನಲ್ಲಿ ಪೂರ್ಣವಾಗಿ ನೆಲೆಗೊಂಡು ನನ್ನ ತಪಸ್ಸಿಗೆ ಸಿದ್ಧಿಯು ಇಂದು ಪ್ರಾಪ್ತವಾಯಿತು. ನೀನು ಕಣ್ಮುಂದೆ ಬಂದು ನಿಂತ ಮೇಲೆ ಸಿದ್ಧಿಬಂತು ಎಂದು ನೇರವಾಗಿ ಹೇಳ್ತಾಳೆ. ಯಾರಿಗೆ ಗುರುವುಂಟೋ ಅವರಿಗೆ ದೇವರುಂಟು. ಗುರುವಿದ್ದರೆ ಎಲ್ಲ ಶುಭಗಳೂ ಉಂಟು.

ದ್ವಾರವಿಲ್ಲದೇ ದೇವರಿಲ್ಲ. ದ್ವಾರವು ತೆರೆದರೆ ದೇವರು. ದ್ವಾರವೇ ಗುರು.

ದೇವಶ್ರೇಷ್ಠನಾದ ನಿನ್ನನ್ನು ನಾನು ಪೂಜಿಸಿದ ಮೇಲೆ ತಪಸ್ಸಿಗೆ ಫಲಬಂತು, ಜನ್ಮ ಸಾರ್ಥಕವಾಯಿತು ಅಂತ ಶಬರಿ ಹೇಳ್ತಾಳೆ. ರಾಮನ ದೃಷ್ಟಿ ಶಬರಿಯ ಮೇಲೆ ಬಿದ್ದಿದೆ. ಅವಳಿಗೆ ತಂಪಿನ ಅನುಭವವಾಗ್ತಾಯಿದೆ. ತನ್ನ ಅನುಭವವನ್ನ ಶಬರಿ ಹೇಳಿಕೊಳ್ತಾಳೆ ನಿನ್ನ ದೃಷ್ಟಿ ಬಿದ್ದೆ ಪವಿತ್ರಳಾದೆ ಹಾಗಾಗಿ ಕ್ಷಯವಿಲ್ಲದ ಲೋಕಕ್ಕೆ ನಾನು ಹೋಗ್ತೇನೆ. ಪ್ರಭೂ! ನೀನು ಚಿತ್ರಕೂಟಕ್ಕೆ ಬಂದ ಸಮಯ ನನ್ನ ಗುರುಗಳು ಈ ಭೂಮಿಯನ್ನು ಬಿಟ್ಟು ಹೋದರು. ಹೊರಟು ಹೋಗುವ ಮೊದಲು ಆ ಮಹರ್ಷಿಗಳು ಆ ಧರ್ಮಜ್ಞರು ನನಗೆ ಹೇಳಿದರು – ಈ ಆಶ್ರಮ ಇನ್ನು ನಿನ್ನದು, ನೀನು ಇಲ್ಲೇ ಇರು. ನಾವಿನ್ನು ಇಲ್ಲಿ ಇರುವಂತಿಲ್ಲ, ಈ ದೇಹದ ಅವಧಿ ಮುಗಿದಿದೆ ಆದ್ದರಿಂದ ನಾವು ಹೋಗಬೇಕಾಗಿದೆ. ಆದರೆ ನಮಗಿಲ್ಲದ ಯೋಗ ನಿನಗಿದೆ ಶಬರಿ. ನೀನು ಕಾಯಿ. ಪಾವನವಾದ ಈ ನಿನ್ನ ಆಶ್ರಮಕ್ಕೆ ರಾಮ ಬರ್ತಾನೆ.

ಶಬರಿಯ ಗುರುಗಳು ಮುಂದುವರೆದು ಹೇಳ್ತಾರೆ ಲಕ್ಷ್ಮಣ ಸಹಿತ ರಾಮ ಬಂದಾಗ ನೀನು ಆ ರಾಮನನ್ನು ಸ್ವಾಗತಿಸಬೇಕು, ಪೂಜಿಸಬೇಕು, ಸತ್ಕರಿಸಬೇಕು, ಆರಾಧಿಸಬೇಕು. ಎಲ್ಲವೂ ಆಗಿದೆ ನೀನಿನ್ನು ಮಾಡಬೇಕಾಗಿರುವುದು ಏನೂ ಇಲ್ಲ. ನಿನಗಿನ್ನಾವ ಕರ್ತವ್ಯವೂ ಇಲ್ಲ. ಉಳಿದಿರುವುದು ರಾಮನ ಪ್ರತೀಕ್ಷೆ ಮಾತ್ರ. ರಾಮನು ಬಂದಾಗ ನೀನು ಅವನನ್ನು ನೋಡುತ್ತಿದ್ದಂತೆಯೇ ನಿನ್ನ ಮುಕ್ತಿ ಸಿದ್ಧವಾಯಿತು. ಯಾವುದನ್ನು ಪಡೆದ ಮೇಲೆ ಹುಟ್ಟು ಸಾವುಗಳಿಲ್ಲವೋ ಅಂತಹ ಅಮೃತತ್ವ ಪ್ರಾಪ್ತವಾಗ್ತದೆ ಎಂದು ರಾಮನ ಮುಂದೆ ಗುರುಸ್ಮರಣೆಯನ್ನ ಮಾಡ್ತಾಳೆ ಶಬರಿ. ಆಕೆ ರಾಮನಿಗೆ ಹೇಳ್ತಾಳೆ. ಬಗೆಬಗೆಯ ಹಣ್ಣುಗಳನ್ನು ನಿನಗಾಗಿ ಆರಿಸಿ ತಂದೆ. ಅವುಗಳನ್ನು ಸ್ವೀಕರಿಸು. ಆ ಧರ್ಮಮೂರ್ತಿಯು ಶಬರಿಯನ್ನ ನೋಡ್ತಾನೆ. ಅರಿವಿನ ಲೋಕಕ್ಕೆ ಬಂದರೆ ಆಕೆಯೆಂದೂ ದೂರವಲ್ಲ. ಆತ್ಮಚೈತನ್ಯವೇ ಆಕೆಯನ್ನ ಪರಿಗ್ರಹಿಸಿದ ಮೇಲೆ ಹೊರಗೆಲ್ಲಿ? ಆಕೆ ಎಂದಿದ್ದರೂ ಒಳಗೆ. ಶಬರಿಯ ಕುರಿತಾದ ರಾಮನ ಭಾವವನ್ನು ರಾಮಾಯಣ ಈ ರೀತಿಯಾಗಿ ವರ್ಣಿಸಿದೆ.

ರಾಮನಿಗೆ ಶಬರಿಯನ್ನು ಕೂಡಲೇ ಕಳುಹಿಸಲು ಇಷ್ಟವಿಲ್ಲ. ಶಬರಿಗೆ ಇನ್ನು ಮುಂದೆ ಮುಕ್ತಿಯ ಹೊರತು ಏನೂ ಇಲ್ಲ. ರಾಮನು ಶಬರಿಯನ್ನು ಕೊಂಚಕಾಲ ಉಳಿಸಿಕೊಳ್ತಾನೆ. ರಾಮ ಹೇಳ್ತಾನೆ ಶಬರಿ, ಕಬಂಧ ಹೇಳಿದ್ದ ನಿನ್ನ ಗುರುಗಳು ಮತಂಗ ಮುನಿಗಳು ಬಹಳ ಪ್ರಭಾವಶಾಲಿಗಳಂತಲ್ಲ, ಅವರ ಪ್ರಭಾವವನ್ನು ನಾನು ಒಂದುಸಾರಿ ನೋಡ್ಬೇಕು. ಸುತ್ತಮುತ್ತಯೆಲ್ಲ ಅವರ ಪ್ರಭಾವ ಇದೆಯಂತಲ್ಲ, ಈಗಲೂ ಅವರ ಕುರುಹುಗಳು ಉಂಟಂತಲ್ಲ. ತೋರಿಸ್ತೀಯಾ, ನಾನು ನೋಡಬಹುದ? ಎಂದು ಕೇಳಿದಾಗ ಶಬರಿ ಆಶ್ರಮದ ಪರಿಸರವನ್ನು ತೋರಿಸ್ತಾಳೆ. ಆ ವನವು ಮೃಗಪಕ್ಷಿಗಳಿಂದ, ಧನ್ಯಜೀವಗಳಿಂದ ಕೂಡಿದೆ. ಮತಂಗ ಋಷಿಗಳು ಬಂದು ಉಳಿದಿದ್ದರಿಂದ ಮತಂಗ ವನವೆಂದೇ ಹೆಸರು. ಶಬರಿ ಒಂದು ಸ್ಥಳವನ್ನು ತೋರಿಸಿ ಹೇಳ್ತಾಳೆ, ರಾಮ ಈ ಸ್ಥಾನದಲ್ಲಿ ನನ್ನ ಗುರುಗಳು ಮಂತ್ರಪೂಜಿತವಾದ ತಮ್ಮ ಶರೀರವನ್ನು ಹೋಮ ಮಾಡಿದರು. ಇದು ಅವರಿಗಾಗಿ ಪಶ್ಚಿಮದಲ್ಲಿ ನಿರ್ಮಿಸಿದ ದೇವಪೂಜಾ ಸ್ಥಾನ. ನಾನು ಕೊಯ್ದು ತಂದ ಹೂಗಳಿಂದ ಅರ್ಚಿಸುತ್ತಿದ್ದರು. ಅವರು ಹೋಗಿ ಬಹಳ ಕಾಲವಾಗಿದೆ ಆದರೆ ಆ ಹೂವುಗಳು ಇಂದಿಗೂ ಬಾಡದೇ ಹಾಗೆಯೇ ಇವೆ. ಅವರ ತಪಸ್ಸು ಆ ವೇದಿಕೆಯಲ್ಲಿ ಇನ್ನು ಹಾಗೆಯೇ ಇದೆ. ದಿಕ್ಕು ದಿಕ್ಕುಗಳಿಗೆ ಆ ವೇದಿಕೆಗಳು ಬೆಳಕು ಹೊಮ್ಮಿಸುವುದನ್ನು ನೋಡು. ಒಂದು ತೀರ್ಥವನ್ನು ತೋರಿಸಿ ಹೇಳ್ತಾಳೆ : ನನ್ನ ಗುರುಗಳಿಗೆ ಸಪ್ತ ಸಾಗರಗಳಲ್ಲಿ ಸ್ನಾನ ಮಾಡಬೇಕು ಅನ್ನಿಸ್ತು ಆದರೆ ಅಷ್ಟು ದೂರ ಹೋಗುವ ಶಾರೀರಿಕ ಶಕ್ತಿ ಅವರಿಗಿರಲಿಲ್ಲ, ಅವರಿಗನ್ನಿಸಿದ ಮಾತ್ರಕ್ಕೆ ಆ ಸಮುದ್ರಗಳು ಇಲ್ಲಿ ಬಂದು ನೆಲೆಸಿವೆ. ಅವರ ಮುಕ್ತಿಯ ದಿನ ಇಲ್ಲಿ ಸ್ನಾನ ಮಾಡಿ ಒಣಹಾಕಿದ ಬಟ್ಟೆಗಳು ಇನ್ನೂ ಒದ್ದೆಯಾಗಿಯೇ ಇವೆ. ಹೀಗೆ ತನ್ನ ಗುರುಗಳನ್ನ ಸ್ತುತಿ ಮಾಡ್ತಾಳೆ ಶಬರಿ. ಗುರುವನ್ನು ಕುರಿತು ಹೆಚ್ಚು ಹೆಚ್ಚು ಹೇಳಿದಂತೆ ದೇವರಿಗೆ ಹತ್ತಿರವಾಗ್ತಾರೆ ಶಬರಿ ಆ ಕೆಲಸವನ್ನ ಮಾಡ್ತಾ ಇದಾಳೆ.

ಬಳಿಕ ರಾಮನಿಗೆ ಹೇಳ್ತಾಳೆ : ಪ್ರಭು ನೀನೇನು ಕೇಳಿದೆಯೋ ನಾನು ಅದನ್ನು ಹೇಳಿದೆ, ನೀನು ಕೇಳಿದೆ. ಇನ್ನು ನನಗೆ ಅಪ್ಪಣೆ ಕೊಡು ನಿನ್ನಲ್ಲಿ ಕರಗಿ ಒಂದಾಗುವುದಕ್ಕೆ. ಅದನ್ನೂ ಕೂಡ ಆಕೆ ಗುರುವಿನ ಮೂಲಕವೇ ಹೋಗಬೇಕು. ಶರೀರವನ್ನು ತ್ಯಜಿಸಿ, ಗುರುಗಳು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಬಳಿಕ ರಾಮನನ್ನು, ಪರಂಧಾಮವನ್ನು ಸೇರಬೇಕಾಗಿದೆ. ಮತ್ತೊಮ್ಮೆ ಗುರುವಿನ ಮೂಲಕ ನಿನ್ನನ್ನು ಸೇರುವ ದಾರಿ ಮಾಡು ಎಂದು ಆಕೆ ಹೇಳಿದಾಗ ರಾಮನಿಗೆ ತುಂಬಾ ಸಂತೋಷವಾಗಿ ಹೇಳ್ತಾನೆ. ಭಕ್ತಿಯಿಂದ ನೀನು ಮಾಡಿದ ಪೂಜೆ ನನಗೆ ತಲುಪಿದೆ. ಸಂತೃಪ್ತನಾದೆ. ಹೋಗಿ ಬಾ ಎಂದಾಗ ಆ ಮುಪ್ಪಾದ ಶರೀರವನ್ನು ತ್ಯಜಿಸುವ ಮನಸ್ಸು ಆಕೆಗೆ ಬಂತು. ಬಳಿಕ ತನ್ನ ಗುರುಗಳು ಕೊಟ್ಟ ಅಗ್ನಿಯಲ್ಲಿ ತನ್ನನ್ನು ತಾನು ಹೋಮ ಮಾಡುತ್ತಿದ್ದಂತೆಯೇ ಅಗ್ನಿಯಾದಳು ಮರುಕ್ಷಣದಲ್ಲಿಯೇ ಅಗ್ನಿಪ್ರಭೆಯ ದಿವ್ಯ ರೂಪವು ಆಕೆಗೆ ಪ್ರಾಪ್ತವಾಯಿತು.
ಒಂದು ಕ್ಷಣ ಆಕೆಯ ದಿವ್ಯಪ್ರಭೆಯಲ್ಲಿ ಮತಂಗ ವನವು ಬೆಳಗಿತು. ಬಳಿಕ ಆಕೆಯ ಗುರುಗಳು ಯಾವ ಸ್ಥಾನವನ್ನು ಸೇರಿದ್ದರೋ ಆ ಸ್ಥಾನವನ್ನು ಆತ್ಮಸಮಾಧಿಯಿಂದ ಏರಿದಳು ಎನ್ನುವಲ್ಲಿಗೆ ಶಬರಿಯ ಒಂದು ಸರ್ಗ.

ನೀವು ಶಬರಿಯನ್ನು ಭಾವಿಸಿದರೆ ರಾಮನಿಗೆ ಹತ್ತಿರವಾಗ್ತೀರಿ. ಯಾಕೆಂದರೆ ಶಬರಿ ರಾಮನಿಗೆ ಅತ್ಯಂತ ಹತ್ತಿರ ಇದಾಳೆ. ಶಬರಿ-ರಾಮರ ಒಂದು ಘಳಿಗೆಯ ಸಮಾಗಮ ಏನಾಗಬೇಕಿತ್ತೋ ಅದೆಲ್ಲ ಆಯಿತು. ಶಬರಿಯ ಅಂತರಂಗದಲ್ಲಿ ರಾಮ, ಅಂತಹ ಶಬರಿಯನ್ನು ನಮ್ಮ ಅಂತರಂಗದಲ್ಲಿ ಧಾರಣೆ ಮಾಡಿದಾಗ ನಾವೂ ರಾಮನಲ್ಲಿ ಒಂದಾಗ್ತೇವೆ.

ಹೀಗೆ ಶಬರಿಗೆ ಮೂಲತೇಜಸ್ಸು ಪ್ರಾಪ್ತಿಯಾದ ಮೇಲೆ ಲಕ್ಷ್ಮಣನಿಗೆ ಹೇಳ್ತಾನೆ ರಾಮ. ಲಕ್ಷ್ಮಣ, ನಾನಾ ಪ್ರಕಾರಗಳಿಂದ ಕೂಡಿದ ಪುಣ್ಯ ಆಶ್ರಮವನ್ನು ಕಂಡೆವು, ಸಪ್ತಸಮುದ್ರದ ತೀರ್ಥದಲ್ಲಿ ಸ್ನಾನ ಮಾಡಿದೆವು. ಇಲ್ಲಿಗೆ ಅಶುಭವೆಲ್ಲ ಸಂಪೂರ್ಣವಾಗಿ ಹೋಯ್ತು. ಬದುಕಿನಲ್ಲಿ ಮಂಗಲ ಪರ್ವವು ಬಂದು ನಿಂತಿದೆ. ಅದೇನೋ ನನ್ನ ಮನಸ್ಸು ಆನಂದದಿಂದ ತುಂಬಿದೆ. ಲಕ್ಷ್ಮಣಾ ನನ್ನೆದೆಯಲ್ಲಿ ಶುಭವು ಅವತರಿಸುವುದನ್ನು ನೋಡು ಎನ್ನುವಾಗ ಆ ಶಬರಿಯ ಭಕ್ತಿ ಎಂತಹದ್ದಾಗಿರಬೇಕು. ಹೀಗೆಲ್ಲ ಹೇಳಿ ರಾಮನು ಮುಂದಿನ ಕರ್ತವ್ಯಕ್ಕೆ ಅಭಿಮುಖವಾಗ್ತಾನೆ.
ನೋಡು ನಾವು ಪಂಪಾ ಸರೋವರವನ್ನು ಸೇರಬೇಕಾಗಿದೆ. ಹತ್ತಿರದಲ್ಲಿ ಋಷ್ಯಮೂಕ ಪರ್ವತವಿದೆ. ಅಲ್ಲಿ ಸೂರ್ಯಸುತನಾದ, ಧರ್ಮಾತ್ಮನಾದ ಸುಗ್ರೀವನು ನಾಲ್ವರು ವಾನರರ ಜೊತೆಯಲ್ಲಿ ಇದಾನೆ. ಹಾಗಾಗಿ ಅಲ್ಲಿ ಹೋಗಲು ನನ್ನ ಮನಸ್ಸು ತ್ವರೆ ಮಾಡ್ತಾ ಇದೆ. ಸೀತೆಯ ಅನ್ವೇಷಣೆ ಮಾಡಬೇಕು ತಾನೆ ನಾವು. ಸೀತಾನ್ವೇಷಣೆ ಎನ್ನುವುದು ಸುಗ್ರೀವನ ಅಧೀನ. ಲಕ್ಷ್ಮಣಾ ಹೋಗೋಣ ಎನ್ನುವಾಗ ಲಕ್ಷ್ಮಣ ಹೇಳ್ತಾನೆ; ನನ್ನ ಮನಸ್ಸೂ ಕೂಡ ತ್ವರೆ ಮಾಡ್ತಾ ಇದೆ. ಬೇಗ ನಾವು ಹೋಗಿ ಸುಗ್ರೀವನನ್ನು ಕಾಣೋಣ ಎಂದ.

ಆಶ್ರಮದಿಂದ ಹೊರಬಂದ ರಾಮನು ಪಂಪೆಯನ್ನು ಅವಲೋಕಿಸ್ತಾನೆ. ಪದ್ಮಗಳು, ಸೌಗಂಧಿಕಾ ಪುಷ್ಪಗಳು, ಕುಮುದಗಳು, ಕುವಲಯಗಳು ಅರಳಿವೆ. ಪಂಪಾ ಸರೋವರದ ದಾರಿಯಲ್ಲಿ ಮತಂಗ ಸರೋವರ. ಅದರಲ್ಲಿ ಮಿಂದು ಬಳಿಕ ಪಂಪಾ ಸರೋವರಕ್ಕೆ ಹೋಗ್ತಾನೆ. ಸುತ್ತ ರಮಣೀಯವಾದ ಗಿಡಮರಗಳು, ಮೃಗಪಕ್ಷಿಗಳ ದಿವ್ಯನಾದವನ್ನು ನೋಡಿ ಬಳಿಕ ಸುಗ್ರೀವನನ್ನು ಕಾಣಲು ಹೋಗು ಎಂದು ಲಕ್ಷ್ಮಣನಿಗೆ ಅಪ್ಪಣೆ ಕೊಟ್ಟ ರಾಮ ಸೀತೆಯ ಸ್ಮರಣೆಯನ್ನು ಮಾಡಿಕೊಳ್ತಾನೆ. ಲಕ್ಷ್ಮಣನಿಗೆ ಹೇಳ್ತಾನೆ, ನೋಡು ರಾಜ್ಯ ಕಳೆದುಕೊಂಡವನು ನಾನು, ಬಂಧುಮಿತ್ರರಿಂದ ದೂರವಾದವನು, ಜಟಾಯುವನ್ನೂ ಕಳೆದುಕೊಂಡವನು, ನನ್ನ ಮನಸ್ಸೆಲ್ಲವೂ ಸೀತೆಯಲ್ಲಿ ನೆಲೆಸಿದೆ. ನಾವಿಬ್ಬರೂ ಎರಡಲ್ಲ ಒಂದು. ಲಕ್ಷ್ಮಣ, ಸೀತೆಯಿಲ್ಲದೇ ನಾನು ಬದುಕಬಲ್ಲೆನೇನೋ? ನನಗೆ ಬದುಕುಂಟೇನೋ? ಸೀತೆಯ ಸ್ಮರಣೆಮಾಡಿ ಶೋಕವಿಷಾದಗಳಿಂದ ಕೂಡಿ, ಸೀತೆಯಲ್ಲಿ ಪರಮಪ್ರೇಮವನ್ನು ತುಂಬಿಕೊಂಡು ಪಂಪಾ ಪರಿಸರವನ್ನು ಪ್ರವೇಶಿಸಿದನು ಎಂಬಲ್ಲಿಗೆ ಅರಣ್ಯಕಾಂಡದ ಮುಕ್ತಾಯ.

ಮುಂದಿರುವುದು ಕಿಷ್ಕಿಂದಾ ಕಾಂಡ. ಒಂದು ಹೆಜ್ಜೆ ಮುಂದಿಟ್ಟರೆ ಹನೂಮಂತ ಇದಾನೆ. ಅವನ ಪ್ರವೇಶ. ಈ ಕಥೆಗೆ ಜೀವಕಳೆ ಬರುವುದೇ ಹನುಮಂತನಿಂದ. ಪಟ್ಟಾಭಿಷೇಕವು ತಪ್ಪಿದಲ್ಲಿನಿಂದ ಅವರೋಹಣ ಪರ್ವ. ರಾಮನ ಜೀವನದಲ್ಲಿ ಹನುಮಂತನ ಪ್ರವೇಶದಿಂದ ಆರೋಹಣ ಪರ್ವ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments