ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಪವಿತ್ರ ಸ್ಥಾನದಲ್ಲಿ ಇದ್ದುಕೊಂಡು ನಮ್ಮ ಮನಸ್ಸಿನ ಮೈಲಿಗೆಯನ್ನು, ಅಪವಿತ್ರತೆಯನ್ನು ಅಲ್ಲಿಗೆ ಚೆಲ್ಲಬಾರದು. ನಮ್ಮ ಬಳಿಯಿರುವ ಪವಿತ್ರಸ್ಥಾನವು, ಪುಣ್ಯಸ್ಥಾನವು ನಮ್ಮ ಮೈಲಿಗೆಯಿಂದ ತಾನು ಮೈಲಿಗೆಯಾಗಬಾರದು. ಈ ಎಚ್ಚರವು ಪ್ರತಿಯೊಂದು ಜೀವಕ್ಕೂ ಬೇಕು. ಈ ಎಚ್ಚರ ಇದ್ದಿದ್ದರೆ ವಾಲಿಗೆ ಶಾಪ ಬರುತ್ತಿರಲಿಲ್ಲ ಮತ್ತು ವಾಲಿ ಈ ರೀತಿಯಾಗಿ ಪತನ ಹೊಂದುತ್ತಿರಲಿಲ್ಲ. ತಾನು ಕೊಂದ ಅಸುರನ ಶವವನ್ನು ಎತ್ತಿ ಬಿಸಾಡುವಾಗ ತಾನು ಎಲ್ಲಿ ಬಿಸಾಡುತ್ತಿದ್ದೇನೆ ಎಂಬ ಪ್ರಜ್ಞೆ ವಾಲಿಗೆ ಇರಬೇಕಾಗಿತ್ತು. ದುಂದುಭಿ ಕಿಷ್ಕಿಂಧೆಯ ಬಾಗಿಲಿಗೆ ಬಂದು ವಾಲಿಯನ್ನ ಕೆಣಕಿದ, ವಾಲಿ ದುಂದುಭಿಯೊಂದಿಗೆ ಯುದ್ಧ ಮಾಡಿ ದುಂದುಭಿಯನ್ನು ಸಂಹಾರ ಮಾಡಿದ. ಇಲ್ಲಿ ಎಲ್ಲೂ ತಪ್ಪಿಲ್ಲ, ಆದರೆ ಸತ್ತ ಬಳಿಕವೂ ದ್ವೇಷವನ್ನು ಮುಂದುವರಿಸುವುದು, ತನ್ನ ಬಲದ ದರ್ಪವನ್ನು ಪ್ರಪಂಚಕ್ಕೆ ತೋರಿಸುವ ಭರದಲ್ಲಿ ತಾನು ಬಿಸಾಡಿದ ಶವ ಎಲ್ಲಿ ಹೋಗಿ ಬಿದ್ದೀತು? ರಕ್ತ ಯಾರ ಮೇಲೆ ಚೆಲ್ಲಿತು? ಎಂಬುದನ್ನು ಲೆಕ್ಕಿಸದೆ ಶವವನ್ನು ಬಿಸಾಡಿದರೆ ಏನಾದೀತು?

ಮತಂಗ ಮುನಿಗಳು ತಾವು ಪವಿತ್ರವಾಗಿರುವುದಲ್ಲದೆ ತಾವಿರುವ ವನವನ್ನು ಪವಿತ್ರಗೊಳಿಸಿದ್ದರು. ಅದು ಮತಂಗವನ ಎಂದೇ ಹೆಸರಾಗಿತ್ತು. ಅದು ಮಾತ್ರವಲ್ಲ ಆ ಇಡೀ ಪರಿಸರದಲ್ಲಿ ಪಾವಿತ್ರ್ಯತೆಯನ್ನು ಬೀರಿದ್ದರು ಮತಂಗರು. ಅಂತಹ ಶುದ್ಧಾತ್ಮರ ಮೇಲೆ , ಪವಿತ್ರ ಶರೀರಗಳ ಮೇಲೆ ರಕ್ತ ಸೇಚನ. ಏನಿದು? ಎಂದು ಆಶ್ರಮದಿಂದ ಹೊರಗೆ ಬಂದು ನೋಡಿದರೆ ಆಶ್ರಮದ ಅವರ ಪ್ರೀತಿಯ ವೃಕ್ಷಗಳೆಲ್ಲಾ ಮುರಿದು ಬಿದ್ದಿದೆ. ಏಕೆಂದರೆ ಅವುಗಳ ಮೇಲೆ ಪರ್ವತಾಕಾರದ ಕೋಣದ ರೂಪದ ಅಸುರನ ಶವವೊಂದು ಬಿದ್ದಿದ್ದನ್ನು ನೋಡಿ ನೋವಾಯಿತು. ಮಕ್ಕಳಂತೆ ಬೆಳಸಿದ್ದ ಮರಗಳನ್ನು ಯಾವ ಪುರುಷಾರ್ಥಕ್ಕಾಗಿ ನಾಶಮಾಡಿದ್ದು? ಮತ್ತು ನನ್ನ ಮೇಲೆ, ಆಶ್ರಮದಮೇಲೆ, ಆಶ್ರಮವಾಸಿಗಳ ಮೇಲೆ ರಕ್ತವನ್ನು ಚೆಲ್ಲುವುದು ಯಾವ ಪುರುಷಾರ್ಥಕ್ಕಾಗಿ? ಯಾರಿವನು? ಎಂಬ ಪ್ರಶ್ನೆ ಬಂತು ಮತಂಗಮುನಿಗಳ ಮನಸ್ಸಿನಲ್ಲಿ. ಅವರು ಕಣ್ಮುಚ್ಚಿ ನೋಡಿದಾಗ ಆ ಅಕಾರ್ಯವನ್ನು ಮಾಡಿದವನು ಕಂಡ, ಅದು ವಾಲಿ. “ಕಣ್ತೆರೆದ ಕುರುಡರು ನಾವು, ಕಣ್ಮುಚ್ಚಿ ಜಗತ್ತಿನ ಸತ್ಯವನ್ನು, ತತ್ವವನ್ನು ಕಾಣುವವರು ಋಷಿಗಳು”. ವಾಲಿ ಕಿಷ್ಕಿಂಧೆಗೆ ದೊಡ್ಡವನಾಗಿರಬಹುದು ಮತಂಗ ಮುನಿಗಳೆದುರು ಅಲ್ಲ. ಅವನಾಗಲಿ , ಅವನ ರಾಜ್ಯದ ವೀರವಾನರರಾಗಲೀ ಮತಂಗ ಮುನಿಗಳ ಆಶೀರ್ವಾದಕ್ಕೆ ಯಾವಾಗಲೂ ಬರುವವರೇ ಹೌದು. ಮತಂಗ ಮುನಿಗಳಿಗೆ ಸರಿಯೆನಿಸಲಿಲ್ಲ. ಮಹಾಶಪವನ್ನು ಕೊಟ್ಟರು. ಯಾರು ಈ ಶವವನ್ನು ಇಲ್ಲಿಗೆ ಬಿಸಾಡಿರುವರೋ ಅವರು ಈ ಆಶ್ರಮಕ್ಕೆ ಬರಬಾರದು, ನಮ್ಮ ಆಶ್ರಮ ಅವರ ಪಾಲಿಗೆ ಇಲ್ಲ. ಮತಂಗವನದ ಒಂದು ಯೋಜನಾ ವ್ಯಾಪ್ತಿಯನ್ನು ಪ್ರವೇಶಿಸಬಾರದು. ಒಂದು ವೇಳೆ ಪ್ರವೇಶಿಸಿದರೆ ಅವರು ಶವವಾಗುತ್ತಾರೆ. ಅವನಷ್ಟೇ ಅಲ್ಲ ಅವನಕಡೆಯರು ಯಾರು ಇಲ್ಲಿರಕೂಡದು. ನಾಳೆ ಸೂರ್ಯೋದಯದ ಹೊತ್ತಿಗೆ ವಾಲಿಯ ಕಪಿ ಸೈನ್ಯದ ಕಪಿಗಳು ಕಂಡುಬಂದಲ್ಲಿ ಅವುಗಳು ಕಲ್ಲಾಗಿಹೋಗುತ್ತವೆ. ಸಾವಿರವರ್ಷಗಳ ಕಾಲ ಶಿಲೆಯಾಗಿರುತ್ತಾರೆ. “ಗುರುಕಾರುಣ್ಯ , ಗುರುರಕ್ಷೆ , ಗುರುದೃಷ್ಠಿ ಇಲ್ಲದಿದ್ದರೆ ಪ್ರಪಂಚದ ಎಲ್ಲಾ ತೊಂದರೆಗಳು ಬರುತ್ತವೆ.” ಮತಂಗಮುನಿಗಳ ಶಾಪವು ಅಲ್ಲಿರುವ ಕೆಲವು ಕಪಿಗಳಿಗೆ ಗೊತ್ತಾದ ತಕ್ಷಣವೇ ಎಲ್ಲರೂ ಅಲ್ಲಿಂದ ಹೊರಟು ನೇರವಾಗಿ ವಾಲಿಯ ಬಳಿಗೆ ಬಂದರು. ವಾಲಿಗೆ ಆಶ್ಚರ್ಯವಾಯಿತು. ಏನು ಮತಂಗವನವಾಸಿಗಳೆಲ್ಲಾ ಇಲ್ಲಿ ಬಂದಿದ್ದೀರಿ? ಅಲ್ಲಿ ಎಲ್ಲವೂ ಕ್ಷೇಮವೇ? ಏನಾದರೂ ತೊಂದರೆಯೇ? ಎಂದು ಕೇಳಿದಾಗ ಅವರು ಹೇಳಿದರು; ತೊಂದರೆ ನಮಗಷ್ಟೇ ಅಲ್ಲ ನಿನಗೂ ಇದೆ. ಅದೇನು ಎಂದು ಕೇಳಿದ ವಾಲಿ. ಆಗ ಮತಂಗಮುನಿಗಳು ನೀಡಿದ ಶಾಪದ ಕುರಿತು ಹೇಳಿದರು. ನೀನು ಮತಂಗವನಕ್ಕೆ ಬರಬಾರದಂತೆ ನಾವು ಅಲ್ಲಿ ಇರಬಾರದು ಎಂಬುದಾಗಿ ಹೇಳಿದರು. ನೀನು ಬಂದರೆ ಸಾವು , ನಾವು ಅಲ್ಲಿದ್ದರೆ ಕಲ್ಲಾಗುತ್ತೇವೆ. ವಾಲಿ ಕೂಡಲೇ ಮತಂಗಮುನಿಗಳ ಆಶ್ರಮಕ್ಕೆ ಹೋದ. ಅವರನ್ನು ಕಂಡು ಕಾಲಿಗೆ ಬಿದ್ದು, ಕೈಮುಗಿದು ಶಾಪಕ್ಕೆ ಪರಿಹಾರ ಹೇಳಿ ಎಂದು ಬೇಡಿಕೊಂಡ. ಮತಂಗರು ಪ್ರತ್ಯುತ್ತರವನ್ನೂ ಕೊಡಲಿಲ್ಲ, ಅವನ ಮುಖವನ್ನೂ ನೋಡಲೇ ಇಲ್ಲ. ಅವನನ್ನು ಅನಾವರಿಸಿ ಆಶ್ರಮವನ್ನು ಪ್ರವೇಶಮಾಡುತ್ತಾರೆ. ಮುಗಿಯಿತು ಈ ಶಾಪಕ್ಕೆ ನಿನಗೆ ಪರಿಹಾರವಿಲ್ಲ ಎಂಬುದೇ ನಿಶ್ಚಯ. ಇಂತಹ ಆಪತ್ತು ಬೇರೊಂದಿಲ್ಲ. ಮತಂಗರು ದೈವಸ್ವರೂಪಿ, ಅವರಿಂದ ಆ ಪರಿಸರಕ್ಕೆಲ್ಲಾ ಒಳಿತಾಗಿದೆ. ಇಂತಹ ಮತಂಗಮುನಿಗಳನ್ನ ಕಳೆದುಕೊಂಡ ವಾಲಿ. ಹೀಗಿದ್ದಾಗ ಎಷ್ಟು ದೊಡ್ಡ ಸೈನ್ಯವಿದ್ದರೇನು? ಯಾವ ಕಾಂಚನ ಮಾಲೆಯಿದ್ದರೇನು?
ಹೀಗೆ ವಾಲಿಗೆ ಏನನ್ನು ಹೇಳದೆ, ಅವನನ್ನು ನೋಡದೇ ಮತಂಗಮುನಿಗಳು ಹೊರಟು ಹೋದರು. ಮತಂಗರ ಶಾಪದಿಂದ ಭಯಭೀತನಾದ ವಾಲಿ ಋಷ್ಯಮೂಕ ಮಹಾಪರ್ವತವನ್ನು ಪ್ರವೇಶಿಸಲು ಮಾತ್ರವಲ್ಲ ನೋಡಲೂ ಇಲ್ಲ . ಏಕೆಂದರೆ ಮೃತ್ಯು ಭಯ, ಋಷಿ ಶಾಪ ಭೀತಿ. ಪಾಪಿಗಳು ಆ ಪರ್ವತವನ್ನು ಏರಲು ಸಾಧ್ಯವಿಲ್ಲ.

ಸುಗ್ರೀವ ರಾಮನಿಗೆ ಹೇಳಿದ; ವಾಲಿ ಇಲ್ಲಿಗೆ ಬರುವ ಹಾಗಿಲ್ಲ. ಅದಕ್ಕಾಗಿ ಅವನ ಅಪ್ರವೇಶವನ್ನು ತಿಳಿದುಕೊಂಡು ನಾನು ಈ ಋಷ್ಯಮೂಕ ಮಹಾಪರ್ವತದಲ್ಲಿ ನನ್ನ ಅಮಾತ್ಯರೊಡನೆ ಇದ್ದೇನೆ. ರಾಮಾ ಇದೋ ನೋಡು ಅಂದು ವಾಲಿ ಎಸೆದಿದ್ದ ದುಂದುಭಿಯ ಶವದ ಅಸ್ಥಿಪಂಜರ ಇಲ್ಲಿಯೇ ಇದೆ. ಇದು ವಾಲಿಯ ಪರಾಕ್ರಮಕ್ಕೆ ನಿದರ್ಶನ. ಅದೋ ನೋಡು ಸಪ್ತ ಸಾಲ ಮಹಾವೃಕ್ಷಗಳು, ಅದನ್ನು ನಾಶಮಾಡಲು ವಾಲಿಗೆ ಆಗಲಿಲ್ಲ. ಆದರೆ ಪ್ರಯತ್ನ ಮಾಡಿದ್ದಾನೆ ವಾಲಿ. ಆಗ ಮರಗಳ ಎಲೆಗಳು ಉದುರಿದವು. ಅಷ್ಟೇ ವಾಲಿಯ ವ್ಯಾಪ್ತಿ. ವಾಲಿಯನ್ನೂ ಮೀರಿದ್ದ ಕಾರಣದಿಂದಾಗಿ ಆ ವೃಕ್ಷಗಳು ಇಂದೂ ಇವೆ. ರಾಮಾ ಇಂತಹ ವಾಲಿಯನ್ನು ನೀನು ಹೇಗೆ ಕೊಲ್ಲಬಲ್ಲೆ? ಅದು ನಿನಗೆ ಸಾಧ್ಯವೇ? ಎಂಬುದು ಸುಗ್ರೀವನ ಸಂದೇಹ. ಹೀಗೆ ಸುಗ್ರೀವ ಹೇಳಿದಾಗ ಲಕ್ಷ್ಮಣ ನಕ್ಕು ಕೇಳಿದ; ಏನು ಮಾಡಿದರೆ ವಾಲಿಯನ್ನು ರಾಮ ಸಂಹಾರ ಮಾಡುತ್ತಾನೆ ಎಂದು ನಂಬುತ್ತೀಯ? ಆಗ ಸರಿಯಾಗಿ ಯೋಚಿಸಿ ಸುಗ್ರೀವ ಹೇಳಿದ; ಅದೋ ಆ ಸಪ್ತಸಾಲ ವೃಕ್ಷಗಳನ್ನು ರಾಮ ಒಂದೇ ಬಾಣದಿಂದ ಒಮ್ಮೆಲೆ ತರಿಯುವುದಾದರೆ ವಾಲಿ ಸತ್ತ ಎಂದು ತಿಳಿಯುತ್ತೇನೆ ನಾನು. ಮತ್ತು ದುಂದುಭಿಯ ಈ ಅಸ್ಥಿಪಂಜರವನ್ನು ಒಂದೇ ಬಾರಿಗೆ ಕಾಲಿನಿಂದ ಇನ್ನೂರು ಧನುಸ್ಸು ದೂರಕ್ಕೆ ಎಸೆದರೆ ನಾನು ನಂಬುತ್ತೇನೆ. ಇಷ್ಟು ಹೇಳಿದಾಗ ರಾಮನ ಕಣ್ಣು ಕೆಂಪಾಗಿದೆ. ಇದನ್ನು ನೋಡಿದ ವಾಲಿ ಬೇರೆ ವರಸೆಯಲ್ಲಿ ಮಾತನಾಡಲು ಆರಂಭಿಸಿದ. ವಾಲಿ ಅತಿ ಪರಾಕ್ರಮಿ ಮತ್ತು ಅವನು ಸಂಹಾರ ಮಾಡಿದವರೆಲ್ಲರೂ ಅಷ್ಟೇ ಶೂರರು, ನಾನು ಅವನು ಸೋತಿದ್ದನ್ನು ನೋಡಲೇ ಇಲ್ಲ. ಈ ಸಮಯದಲ್ಲಿ ಸನ್ಮಿತ್ರನಾಗಿ ನೀನು ಸಿಕ್ಕಿದ್ದೀಯ. ಹೇ ಮಿತ್ರವತ್ಸಲ, ಹಿಮಾಲಯದಂತವನು ನೀನು ಹಾಗಾಗಿ ನಿನ್ನನ್ನು ಆಶಯಿಸಿದ್ದೇನೆ ನಾನು. ಆದರೆ ಈ ಪ್ರಶ್ನೆ , ಪರೀಕ್ಷೆಯೆಲ್ಲಾ ಏಕೆಂದರೆ ನನಗೆ ವಾಲಿಯ ಬಲ ಏನೆಂಬುದು ಪ್ರತ್ಯಕ್ಷ ನಿನ್ನ ಪರಾಕ್ರಮ ಅಪ್ರತ್ಯಕ್ಷ. ಮತ್ತೆ ವಾಲಿಯೊಡನೆ ನಿನ್ನನ್ನು ತುಲನೆ ಮಾಡುತ್ತಿಲ್ಲ. ನಾನು ವಾಲಿಯನ್ನು ಎದಿರು ಹಾಕಿಕೊಂಡ ಮೇಲೆ ಅವನ ಪರಾಕ್ರಮವನ್ನು ನೋಡಿ ಹೇಡಿಯಾಗಿದ್ದೇನೆ. ಕೊನೆಯದಾಗಿ ಹೇಳಿದ; ನಿನ್ನ ವಾಣಿಯೇ ಪ್ರಮಾಣ ನನಗೆ. ನಿನ್ನ ಆಕೃತಿ , ನಿಲುವು ನೋಡಿದರೆ ನೀನು ಏನು ಎಂಬುದು ತಿಳಿಯುತ್ತದೆ. ಮಹಾಪುರುಷರು ಮಾತ್ರ ಹೀಗಿರಲು ಸಾಧ್ಯ, ಬೂದಿ ಮುಚ್ಚಿದ ಕೆಂಡ ನೀನು, ನಿನ್ನೊಳಗೆ ಪರಮ ತೇಜಸ್ಸಿದೆ. ಆಗ ಪ್ರಭು ಶ್ರೀರಾಮ ಹೇಳಿದ; ನಮ್ಮ ವಿಕ್ರಮದಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ ಇರಲಿಬಿಡು. ಉಂಟುಮಾಡೋಣ ವಿಶ್ವಾಸವನ್ನು. ಎಂತಹ ನಂಬಿಕೆಯನ್ನು ಉಂಟುಮಾಡುತ್ತೇನೆ ಎಂದರೆ ನೀನೇ ಹೇಳಬೇಕು ಎಂದು ಹೇಳಿ ಹೆಚ್ಚು ಮಾತಾಡದೇ ದುಂದುಭಿಯ ಅಸ್ಥಿಪಂಜರವನ್ನು ಕಾಲಿನ ಒಂದೇ ಬೆರಳಿನಿಂದ ಎತ್ತಿ ಹಿಡಿದ ನಂತರ ಎಸೆದಾಗ ಅದು ಹತ್ತು ಯೋಜನ ದೂರಹೋಗಿ ಬಿತ್ತು. ಆಗ ಸುಗ್ರೀವ ಹೇಳಿದ; ಇದು ಹೌದು ಆದರೆ ನಮ್ಮ ಅಣ್ಣ ಎತ್ತಿದ್ದಾಗ ಅದು ಶವ ಈಗ ಇದು ಹಗುರವಾಗಿದೆ ಮಾಂಸ ಇಲ್ಲ ಎಂದ. ನನ್ನ ಸಂಶಯ ಪರಿಹಾರಕ್ಕಾಗಿ ಒಂದು ಸಾಲವೃಕ್ಷವನ್ನು ಭೇದಿಸು. ನಿನ್ನ ವೀರ ಧನುಸ್ಸನ್ನು ಎತ್ತಿ ಬಾಣ ಬಿಟ್ಟರೆ ಸಾಕು ಅದು ಸಾಲವೃಕ್ಷ ಭೇದಿಸುತ್ತದೆ. ಅದರಲ್ಲಿ ನನಗೆ ಸಂಶಯವಿಲ್ಲ ಎಂದ. ಆದರೆ ನನಗಾಗಿ, ನನ್ನ ಸಮಾಧಾನಕ್ಕಾಗಿ ಬಾಣ ಬಿಡು ಎಂದ. ಜ್ಯೋತಿಗಳಲ್ಲಿ ಸೂರ್ಯಜ್ಯೋತಿ ಹೇಗೆ ಶ್ರೇಷ್ಠವೋ , ಪರ್ವತಗಳಲ್ಲಿ ಹಿಮಾಲಯ ಹೇಗೆ ಶ್ರೇಷ್ಠವೋ ಹಾಗೆ ಮನುಷ್ಯರ ಮಧ್ಯೆ ನೀನು ಸರ್ವಶ್ರೇಷ್ಠ ಎಂದ. ರಾಮ ಒಂದೂ ಮಾತನಾಡದೆ ಧನುಸ್ಸನ್ನು ಕೈಗೆತ್ತಿಕೊಂಡು ಒಂದು ಘೋರವಾದ ಶರದಿಂದ ಗುರಿಯಿಟ್ಟು ಹೊಡೆದಾಗ ಆ ಧನುಸ್ಸು ಶಬ್ಧ ಮಾಡಿತು. ದಿಕ್ಕುಗಳು ಮುಚ್ಚಿಹೋದವು ಆ ಶಬ್ಧದಲ್ಲಿ. ಮುಂದೇನಾಯಿತು? ರಾಮನು ಪ್ರಯೋಗಿಸಿದ ಒಂದು ಬಾಣವು ಒಂದಲ್ಲ, ಏಳೂ ಸಾಲವೃಕ್ಷಗಳನ್ನು ಭೇದಿಸಿತು, ಬಳಿಕ ಪರ್ವತದ ತಪ್ಪಲನ್ನು ಕೂಡಾ ಭೇದಿಸಿತು. ಕಂಗಾಲಾಗಿ ಹೋದ ಸುಗ್ರೀವ. ರಾಮನ ಶರವೇಗದಿಂದಾಗಿ ತಲ್ಲಣಗೊಂಡ ಸುಗ್ರೀವನು ರಾಮನ ಮುಂದೆ ಬಿದ್ದುಬಿಟ್ಟನು. ಸುಗ್ರೀವ ಬಹಳ ಸಂತೋಷಗೊಂಡು ಹೇಳಿದ; ವಾಲಿಯನ್ನು ಬಿಡು ನಿನ್ನ ಈ ಬಾಣವು ಸ್ವರ್ಗ ಲೋಕವನ್ನು ಭಗ್ನಮಾಡಬಹುದು ಎಂದ. ವಾಲಿ ಯಾವ ಲೆಕ್ಕ, ನಿನ್ನ ಮುಂದೆ ಯಾರೂ ನಿಲ್ಲಲಾರರು. ನನ್ನ ಶೋಕವೆಲ್ಲಾ ಹೊರಟುಹೋಯಿತು. ಎಲ್ಲಿಲ್ಲದ ಸಂತೋಷ ನನಗೆ. ಮಹೇಂದ್ರನು, ವರುಣನೂ ನಿನ್ನ ಮುಂದೆ ಅಲ್ಲ ಅಂತಹ ಮಿತ್ರ ನೀನು ನನಗೆ. ರಾಮ, ಆದರೆ ನೀನು ನನಗಾಗಿ ಈಗಲೇ, ಇವತ್ತೇ ವಾಲಿಯ ಮೇಲೆ ಬಾಣ ಪ್ರಯೋಗಮಾಡಿ ಸಂಹಾರ ಮಾಡಬೇಕು. ಇದೋ ಮತ್ತೊಮ್ಮೆ ಪ್ರಣಾಮ ಮಾಡುತ್ತೇನೆ ನಿನಗೆ ನನ್ನ ಕೆಲಸ ಇಂದೇ ಮಾಡಿಕೊಡು ಎಂದು ರಾಮನ ಬಳಿ ಅಂಗಲಾಚಿದ. ಲಕ್ಷ್ಮಣನೂ ಒಪ್ಪಿದ. ರಾಮನು ಸುಗ್ರೀವನನ್ನು ತಬ್ಬಿ ಹೇಳಿದ; ಈಗಲೇ ಹೊರಡು ಕಿಷ್ಕಿಂಧಕ್ಕೆ ನಿನ್ನ ಭ್ರಾತೃಗಂಧಿಯನ್ನು ಕರೆ ಯುದ್ಧಕ್ಕೆ ಎಂದ. ಅಂತೆಯೇ ತ್ವರಿತವಾಗಿ ಎಲ್ಲರೂ ಕಿಷ್ಕಿಂಧೆಗೆ ಪ್ರಯಾಣ ಮಾಡುತ್ತಾರೆ.

ಕಿಷ್ಕಿಂಧೆಗೆ ಹೋದಮೇಲೆ ಎಲ್ಲರೂ ಮರಗಳ ಮರೆಯಲ್ಲಿ ಹುದುಗಿದ್ದರು, ವಾಲಿಯ ಬಾಗಿಲಿಗೆ ಸುಗ್ರೀವ ಮಾತ್ರ ಹೋಗುತ್ತಾನೆ. ರಾಮನಿದ್ದಾನೆ ಎಂಬ ಬಲವನ್ನು ತಿಳಿದ ಸುಗ್ರೀವ ಘೋರವಾದ ಘರ್ಜನೆಯನ್ನು ಮಾಡಿ ವಾಲಿಯನ್ನು ಕರೆದನಂತೆ. ತನ್ನ ಘರ್ಜನೆಯಿಂದ ಗಗನವೇ ಒಡೆಯುವಂತೆ ಅಬ್ಬರಿಸಿದಾಗ ವಾಲಿ ಹೊರಗೆ ಬಂದ. ವಾಲಿ ಹೊರಬಂದಿದ್ದು ಹೇಗೆ ಕಂಡುಬಂತು ಎಂದರೆ ಸೂರ್ಯನೇ ತನ್ನ ತಟದಿಂದ ಹೊರಬಂದಂತೆ ಇತ್ತು. ಕೂಡಲೇ ಘೋರ ಯುದ್ಧ ಶುರುವಾಯಿತು. ಆಕಾಶದಲ್ಲಿ ಕ್ರೂರರಾದ ಅಂಗಾರಕ ಮತ್ತು ಬುಧರ ಮಧ್ಯೆ ಯುದ್ಧ ನಡೆಯುವಹಾಗೆ ವಾಲಿ ಮತ್ತು ಸುಗ್ರೀವರ ನಡುವೆ ಯುದ್ಧ ನಡೆಯಿತು. ಸಿಡಿಲಿನಂತಹ ತಮ್ಮ ತಲಗಳಿಂದ, ವಜ್ರಾಯುಧದಂತಹ ಮುಷ್ಠಿಗಳಿಂದ ಒಬ್ಬರನ್ನೊಬ್ಬರು ಗುದ್ದಿಕೊಂಡರು. ಭಯಂಕರವಾಗಿ ಯುದ್ಧನಡೆಯಿತು ಆಗ ರಾಮ ಧನುಸ್ಸನ್ನು ಹಿಡಿದು ಬಾಣ ಪ್ರಯೋಗಿಸಬೇಕೆಂದು ನೋಡಿದರೆ ವಾಲಿ-ಸುಗ್ರೀವರಲ್ಲಿ ವ್ಯತ್ಯಾಸ ಕಾಣಲೇ ಇಲ್ಲ. ಇಬ್ಬರೂ ಒಂದೇ ರೀತಿ ಕಂಡರು. ಯಾರು ವಾಲಿ? ಯಾರು ಸುಗ್ರೀವ ? ಎಂಬುದು ತಿಳಿಯದೆ ಇದ್ದಾಗ ಬಾಣಪ್ರಯೋಗ ಮಾಡಲು ಮನಸ್ಸಾಗಲಿಲ್ಲ. ಅದರ ಪರಿಣಾಮವಾಗಿ ಸುಗ್ರೀವ ಭಗ್ನನಾದ. ತನ್ನೊಡೆಯ ರಾಮನನ್ನು ಕಾಣದೆ ಋಷ್ಯಮೂಕಕ್ಕೆ ಓಡಿದನು ಸುಗ್ರೀವ, ಮೈಯೆಲ್ಲಾ ರಕ್ತವಾಗಿತ್ತು. ಅವನ ಬೆನ್ನಟ್ಟಿಬಂದ ವಾಲಿ. ಭಯದಿಂದ ಸುಗ್ರೀವ ಮತಂಗವನಕ್ಕೆ ಹಾರಿದನಂತೆ. ಸುಗ್ರೀವನಿಗೆ ವಾಲಿ ಹೇಳಿದ; ಬಚಾವದೇ ಇಂದು ನೀನು ಎಂದು ಬಾಯಲ್ಲಿ ಹೇಳಿದರೂ ಅವನೊಳಗೆ ಶಾಪದ ಭಯವಿತ್ತು. ವಾಲಿ ಹಿಂದಿರುಗಿದನು ಕಿಷ್ಕಿಂಧಕ್ಕೆ. ಆಗ ಮೆಲ್ಲನೆ ಸುಗ್ರೀವನಿರುವಲ್ಲಿಗೆ ಹನುಮಂತ ಮತ್ತು ಲಕ್ಷ್ಮಣನ ಜೊತೆ ರಾಮ ಬಂದನು. ಸುಗ್ರೀವ ಒಂದು ಬಾರಿ ರಾಮನನ್ನು ನೋಡಿ ದೀನನಾಗಿ ಭೂಮಿಯತ್ತ ಮುಖಮಾಡಿ ನಿಂತು ಹೇಳಿದ; ನನಗೆ ವಿಶ್ವಾಸ ನೀಡಿ, ವಾಲಿಯನ್ನು ಕರೆ, ಸಂಹಾರ ಮಾಡುತ್ತೇನೆ ಎಂದು ಹೇಳಿ, ನನಗೆ ಪೆಟ್ಟು ತಿನ್ನಿಸಿದೆಯೆಲ್ಲಾ ಎಂದು ಮೆಲ್ಲಗೆ ಹೇಳಿದ. ಆಮೇಲೆ ನೀನು ಎಲ್ಲಿ ಹೋದೆ ಎಂದು ಕೇಳಿದ. ನೀನು ಹೀಗೆಮಾಡುತ್ತೀಯ ಎಂದು ತಿಳಿದಿದ್ದರೆ ನಾನು ಕಿಷ್ಕಿಂಧೆಗೆ ಹೋಗುತ್ತಲೇ ಇರಲಿಲ್ಲ ಎಂದ.

ಆಗ ರಾಮ ಹೇಳಿದ; ಕೇಳು ಸುಗ್ರೀವ ನಾನು ಏಕೆ ಬಾಣಪ್ರಯೋಗ ಮಾಡಲಿಲ್ಲ ಎಂದು ಹೇಳುವೆ, ಕೇಳು ಎಂದ. ಆ ಬಾಣ ನಿನ್ನನ್ನು ಕೊಂದರೆ? ಹೇಗೆ ಬಾಣ ಬಿಡಲಿ ನಾನು? ಕೇಳು ಸುಗ್ರೀವ ನಿಮ್ಮಿಬ್ಬರ ಎತ್ತರ ಒಂದೇ, ಮುಖದಲ್ಲಿ ವ್ಯತ್ಯಾಸವಿಲ್ಲ, ನಿಮ್ಮಿಬ್ಬರ ವಸ್ತ್ರ, ಆಭರಣಗಳ ಅಭಿರುಚಿಯೂ ಒಂದೇ, ಎಲ್ಲವೂ ಒಂದೇ, ನಿಮ್ಮಿಬ್ಬರ ಸ್ವರವೂ ಒಂದೇ, ನಿಮ್ಮಿಬ್ಬರ ಹೆಜ್ಜೆ, ನೋಟ, ಪ್ರಮಾಣ, ನಡಿಗೆ, ವರ್ಚಸ್ಸು , ಶಬ್ಧಗಳು ಹಾಗೂ ನಿಮ್ಮಿಬ್ಬರ ವಾಕ್ಯಪ್ರಯೋಗಗಳೂ ಒಂದೇ. ನಿಮ್ಮಿಬ್ಬರಲ್ಲಿ ವ್ಯತ್ಯಾಸ ತಿಳಿಯಲಿಲ್ಲ. ಆದ್ದರಿಂದ ಬಾಣಪ್ರಯೋಗ ಮಾಡಲಿಲ್ಲ. ನಿನ್ನನ್ನು ಬಾಣ ಭೇದಿಸಿಬಿಟ್ಟರೆ ಎಂಬ ಶಂಕೆಯಾಯಿತು ನನಗೆ. ನೋಡು ನಿನಗೆ ವಾಲಿಯನ್ನು ಸಂಹಾರ ಮಾಡುವುದಾಗಿ ಮಾತು ಕೊಟ್ಟು ನನ್ನ ಅಜ್ಞಾನ, ಮೌಢ್ಯದಿಂದ ನಿನಗೆ ಏನಾದರೂ ಆಗಿದ್ದರೆ ಆಗ ನನ್ನ ಪಾಪಕ್ಕೆ ಯಾವ ಪರಿಹಾರವೂ ಇಲ್ಲ. ನನ್ನ ಜೀವನದಲ್ಲಿ ಇಲ್ಲಿಯವರೆಗೂ ಪಾಪವನ್ನು ಮಾಡದೆ ಇದ್ದವನು ಇಂತಹ ಪಾಪವನ್ನು ಮಾಡುವುದಾ? ಮತ್ತೆ ನೋಡು; ನಾನು, ಲಕ್ಷ್ಮಣ, ಸೀತೆ ನಿನ್ನನ್ನು ನಂಬಿದ್ದೇವೆ. ಈ ಕಾಡಿನಲ್ಲಿ ನೀನೇ ನಮಗೆ ಆಶ್ರಯ, ಹಾಗಾಗಿ ಈ ರೀತಿ ಆಗಿದ್ದು. ಹೋಗು ಮತ್ತೆ ಯುದ್ಧ ಮಾಡು, ನನ್ನನ್ನು ಶಂಕೆ ಮಾಡಬೇಡ.ಒಂದು ಕ್ಷಣದಲ್ಲಿ ಒಂದೇ ಬಾಣದಿಂದ ನಿನ್ನ ಅಣ್ಣನನ್ನು ಸಂಹಾರ ಮಾಡುತ್ತೇನೆ ಎಂದು ಹೇಳಿದ. ಸುಗ್ರೀವ ಕೇಳಿದ ; ಮತ್ತೆ ನಿನಗೆ ನಮ್ಮಿಬ್ಬರ ವ್ಯತ್ಯಾಸ ತಿಳಿಯದಿದ್ದರೆ? ಎಂದ. ಆಗ ರಾಮ ಹೇಳಿದ; ಅದಕ್ಕೆ ಪರಿಹಾರ ಇದೆ. ಇದೋ ಗಜಪುಷ್ಪೀ ಎಂಬ ಲತೆ. ಇದನ್ನು ನಿನ್ನ ಕೊರಳಿಗೆ ಹಾಕುತ್ತೇನೆ. ಇದು ನೀನು ಯಾರು? ವಾಲಿ ಯಾರು? ಎಂದು ಕಂಡು ಹಿಡಿಯಲು ಗುರುತು. ರಾಮ ಲಕ್ಷ್ಮಣನಿಗೆ ಕೂಡಲೇ ಗಜಪುಷ್ಪೀ ಲತೆಯನ್ನು ಸುಗ್ರೀವನಿಗೆ ಹಾಕಲು ಅಪ್ಪಣೆ ಮಾಡಿದ. ಲಕ್ಷ್ಮಣ ಸುಗ್ರೀವನಿಗೆ ಲತೆಯನ್ನು ಹಾಕಿದ. ಆಗ ಸುಗ್ರೀವ ಸೂರ್ಯಾಸ್ತ ಸಂದರ್ಭದಲ್ಲಿ ಕೆಂಪಾದ ಮೋಡಗಳ ಮಧ್ಯೆ ಗೂಡಿಗೆ ಮರಳುವ ಬೆಳ್ಳಕ್ಕಿಗಳಿಂದ ಕೂಡಿದ ಮಾಲೆ ಧರಿಸಿರುವಂತೆ ಶೋಭಿಸಿದ. ರಾಮನನ್ನು ಶಂಕಿಸಿದರೆ ಏನಾಗುವುದು ಎಂದು ತಿಳಿದಿತ್ತು.

“ನಂಬಿಕೆಯೇ ದೊಡ್ಡ ಶಕ್ತಿ, ಅದಕ್ಕಿಂತ ದೊಡ್ಡ ಶಕ್ತಿ ಬೇರೊಂದಿಲ್ಲ”.

ಮರಳಿ ಕಿಷ್ಕಿಂಧೆಯ ಕಡೆಗೆ ಹೊರಟರು. ರಾಮನ ಕೈಯಲ್ಲಿ ಶಕ್ತಿಯುತವಾದ ಬಾಣಗಳಿದ್ದವು. ಮುಂದೆ ಸುಗ್ರೀವ, ಹಿಂದೆ ರಾಮ. ರಾಮನ ಹಿಂದೆ ಹನುಮಂತ ಅವನಿಗಿಂತ ಮೇಲೆ ಯಾವ ವಾನರರೂ ಇಲ್ಲ, ಜೀವಿಗಳೂ ಇಲ್ಲ, ನಲ ಕಪಿಗಳ ವಿಶ್ವಕರ್ಮ, ನೀಲ ಕಪಿ ಸೇನಾಪತಿ ,ತಾರ ಬೃಹಸ್ಪತಿಯ ಮಗ, ಇವನಿಗಿಂತ ಬುದ್ಧಿವಂತರಿಲ್ಲವಂತೆ. ಹನುಮಂತ, ನಲ, ನೀಲ, ತಾರ ಈ ನಾಲ್ವರು ವಾನರರು ರಾಮನ ಹಿಂದೆ ಬರುತ್ತಿದ್ದರು. ಹೀಗೆ ರಾಮ ಕಿಷ್ಕಿಂಧೆಯ ಕಡೆಗೆ ಹೊರಟ. ದಾರಿಯಲ್ಲಿ ಮರಗಳನ್ನು, ನದಿ, ಕಂದರ, ಗುಹೆ, ಶಿಖರ, ಆನೆಗಳು ಹೀಗೆ ನಾನಾ ಪ್ರಕಾರದ ಪಶುಪಕ್ಷಿಗಳನ್ನು ನೋಡುತ್ತಾ ಹೋಗುತ್ತಿದ್ದಾರೆ. ಅಲ್ಲೊಂದು ವೃಕ್ಷಗಳ ಕೋಟೆಯೊಂದನ್ನು ನೋಡಿ ರಾಮನಿಗೆ ಕುತೂಹಲ ಉಂಟಾಯಿತು. ಸುಗ್ರೀವನನ್ನು ಏನದು ಎಂದು ಕೇಳಿದ. ಸುಗ್ರೀವ ಹೇಳಿದ; ಇದರ ಹೆಸರು ಸಪ್ತಜನಾಶ್ರಮ. ಇದರೊಳಗೆ ಏಳು ಮುನಿಗಳಿದ್ದರು ಅವರು ತಲೆ ಕೆಳಗಾಗಿ ತಪಸ್ಸು ಮಾಡಿದ್ದಾರೆ, ಏಳು ರಾತ್ರಿಗೆ ಒಂದು ಆಹಾರ ಏನದು ಎಂದರೆ ಗಾಳಿ. ಹೀಗೆ ಬದುಕಿದವರು ಅವರು ನೂರಾರು ಕಾಲ ತಪಸ್ಸುಮಾಡಿ ಶರೀರ ಸಹಿತವಾಗಿ ಸ್ವರ್ಗವನ್ನೇರಿದರು. ಅದಕ್ಕಾಗಿ ಪ್ರಕೃತಿಯೇ ಮರಗಳ ಕೋಟೆಯನ್ನು ಕಟ್ಟಿದೆ. ಈಗ ಈ ಮರಗಳ ಕೋಟೆಯೊಳಗೆ ಯಾರು ಪ್ರವೇಶ ಮಾಡುವುದಿಲ್ಲ , ಪ್ರವೇಶ ಮಾಡಿದಲ್ಲಿ ಮರಳಿ ಬರುವುದಿಲ್ಲ. ಇಲ್ಲಿ ಕೆಲವು ಬಾರಿ ಮಂಗಳ ವಾದ್ಯಗಳ ಶಬ್ಧ ಮೊಳಗುತ್ತದೆ, ದಿವ್ಯಪರಿಮಳ , ಹಾಗೂ ಒಳಗೆ ಈಗಲೂ ಅಗ್ನಿ ಉರಿಯುತ್ತಲೇ ಇರುತ್ತದೆ, ಇದು ಸಪ್ತಜನಾಶ್ರಮ. ರಾಮ ನಾವು ಈ ಕಡೆ ಬಂದರೆ ಇಲ್ಲಿ ನಮಸ್ಕಾರ ಮಾಡಿಯೇ ತೆರಳುತ್ತೇವೆ. ನೀನು ಕೂಡ ಪದ್ಧತಿಯಂತೆ ಪ್ರಣಾಮ ಮಾಡು. ಯಾರು ಇಲ್ಲಿ ನಮಸ್ಕರಿಸುತ್ತಾರೋ ಅವರಿಗೆ ಶರೀರದಲ್ಲಿ ಯಾವ ಅಶುಭವೂ ಉಳಿಯುವುದಿಲ್ಲ ಎಂದ. ಆಗ ಎಲ್ಲರೂ ಸಪ್ತಜನಾಶ್ರಮಕ್ಕೆ ನಮಸ್ಕಾರಮಾಡಿ, ಸಂತೋಷದಿಂದ ಮುಂದುವರೆದು ಕಿಷ್ಕಿಂಧೆಯನ್ನು ಸೇರಿದರು. ಆಯುಧ ಪಾಣಿಗಳಾಗಿ , ಬೆಳಗುವ ಮುಖಕಾಂತಿ ಉಳ್ಳವರಾಗಿ, ವಾಲಿಯ ಸಂಹಾರ ಮಾಡಲು ಕಿಷ್ಕಿಂಧೆಯನ್ನು ಸೇರಿದರು. ಈಗ ಮತ್ತೊಮ್ಮೆ ವಾಲಿ ಸುಗ್ರೀವರ ಯುದ್ಧ ಪುನರಾರಂಭವಾಗುತ್ತದೆ. ಮುಂದೇನಾಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ….

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments