ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಮಣ್ಣೆಂದರೆ ತಾಯಿಗಿಂತ ಮೀಗಿಲು. ಹುಟ್ಟುವ ಮೊದಲು ನಾವು ತಾಯಿಯ ಹೊಟ್ಟೆಯಲ್ಲಿ ವಾಸಮಾಡುತ್ತೇವೆ. ಮಾತೃ ಗರ್ಭದಿಂದ ಹುಟ್ಟಿ ಬರುತ್ತೇವೆ. ಆದರೆ ಮಣ್ಣೆಂಬ ತಾಯಿಯ ವೈಶಿಷ್ಟ್ಯ ಏನೆಂದರೆ ನಾವು ಹುಟ್ಟಿ ಅಲ್ಲಿಯೇ ಬೆಳೆಯುತ್ತೇವೆ. ಚಿರ ವಿಶ್ರಾಂತಿಯನ್ನು ಅದೇ ಮಣ್ಣಿನಲ್ಲಿ ಪಡೆಯುತ್ತೇವೆ.

ಎಲ್ಲಿಂದ ನಾವು ಹುಟ್ಟಿ ಬರುತ್ತೇವೋ, ಎಲ್ಲಿ ನಾವು ಬದುಕಿ ಬಾಳುತ್ತೇವೋ, ಕೊನೆಗೆ ಎಲ್ಲಿ ಸೇರುತ್ತೇವೋ ಅದು ಭಗವಂತ. ― ಉಪನಿಷತ್

ಈ ಮೇಲಿನ ಮಾತುಗಳು ಭೂಮಿಗೆ ಅನ್ವಯವಾಗುತ್ತದೆ. ಯಾವ ಕಿಷ್ಕಿಂಧೆಯ ಮಣ್ಣಿನಲ್ಲಿ ಹುಟ್ಟಿದನೋ, ಯಾವ ಕಿಷ್ಕಿಂಧೆಯ ಮಣ್ಣಿನಲ್ಲಿ ರಾಜನಾಗಿ ಆಳಿದನೋ, ಅದೇ ಮಣ್ಣಿನಲ್ಲಿ ಆರಿ ಹೋಗುವ ಬೆಂಕಿಯಂತೆ, ಪ್ರಳಯ ಕಾಲ ಬಂದಾಗ ತನ್ನ ಸ್ಥಾನದಿಂದ ಚ್ಯುತನಾದ ಭಾಸ್ಕರನಂತೆ ಕಿಷ್ಕಿಂಧೆಯ ವೀರನಾದ ವಾಲಿಯು ಭೂಮಿಯಲ್ಲಿ ಮಲಗಿದ್ದನು. ಬಾಣದಿಂದ ವಾಲಿಯ ಪ್ರಜ್ಞೆ ತಪ್ಪಿತ್ತು. ದೃಷ್ಟಿ ಮಂದವಾಗಿತ್ತು. ಅಂತಹ ವಾಲಿಯನ್ನು ಆದರಿಸಿದನು ರಾಮ. ಸುಗ್ರೀವನ ಸಖನಾಗಿ ಧರ್ಮ ರಕ್ಷಣೆಯ ಹೊಣೆ ಹೊತ್ತು ವಾಲಿಯ ಚೈತನ್ಯಕ್ಕೆ ರಾಮನು ತನ್ನ ಬಾಣಗಳಿಂದ ಸಂಸ್ಕಾರವನ್ನು ನೀಡಿದ ಮೇಲೆ ರಾಮನಿಗೆ ವಾಲಿಯ ಮೇಲೆ ಹಗೆ ಇರಲಿಲ್ಲ. ನಂತರ ವಾಲಿಯನ್ನು ರಾಮನು ಸಮೀಪಿಸಿದನು. ದೊಡ್ಡ ದೊಡ್ಡ ಬಾಹುಗಳು, ಬೆಳಗುವ ಮುಖ, ಹಳದಿ ಕಣ್ಣುಗಳುಳ್ಳ ವಾಲಿಯನ್ನು ರಾಮನು ಕಂಡನು. ರಾಮನು ವಾಲಿಯ ಜಿಜ್ಞಾಸೆಯನ್ನು ಪರಿಹರಿಸಿ, ವಾಲಿಯ ಚೈತನ್ಯಕ್ಕೆ ತಂಪನ್ನು ಮಾಡಲು ಮುಂದಾಗುತ್ತಾನೆ. ವಾಲಿಯು ಮಹಾಬಲಶಾಲಿಯಾದ ರಾಮ – ಲಕ್ಷ್ಮಣರನ್ನು ನೋಡುತ್ತಾನೆ. ವಾಲಿಯು ಧರ್ಮ ಸಮ್ಮಿತವಾಗಿ ವಿನಯದಿಂದ ಮಾತಾಡಬೇಕು ಎಂದು ರಾಮ ಲಕ್ಷ್ಮಣರ ಜೊತೆ ಮಾತನ್ನಾರಂಭಿಸಿದಾಗ ಮಾತು ಒರಟಾಯಿತು. ವಾಲಿಯು ಕೊನೆಯ ಬಾರಿಗೆ ತನ್ನೊಳಗಿರುವ ನಂಜನ್ನು ಕಾರುವ ರೀತಿಯಲ್ಲಿ ರಾಮನ ಮುಂದೆ ಮಾತನಾಡುತ್ತಾನೆ.

ವಾಲಿಯು ರಾಮನಿಗೆ ಚಕ್ರವರ್ತಿಯ ಮಗ ನೀನು, ಒಳ್ಳೆಯ ಕುಲದಲ್ಲಿ ಜನಿಸಿದವನು, ಸತ್ವ ಉಳ್ಳವನು, ಅನೇಕಾನೇಕ ನಿಯಮ ಮತ್ತು ವ್ರತಗಳನ್ನು ಪಾಲಿಸಿದವನಾದ ನೀನು, ನಿನ್ನೊಡನೆ ಯುದ್ಧ ಮಾಡದವನನ್ನು ಕೊಂದೆಯಲ್ಲ. ಏನು ಹೆಚ್ಚುಗಾರಿಕೆಯನ್ನು ಪಡೆದೆ..? ನಾನು ಸುಗ್ರೀವನೊಡನೆ ಯುದ್ಧ ಮಾಡುತ್ತಿರುವಾಗ ನನ್ನನ್ನು ಸಂಹರಿಸಿದೆಯಲ್ಲ. ಇದು ಸರಿಯೇ…?? ನಿನ್ನ ಬಗ್ಗೆ “ರಾಮನಿಗೆ ಇನ್ನೊಬ್ಬರ ಕಷ್ಟ ಅರ್ಥ ಆಗುತ್ತದೆ, ಕಷ್ಟಕ್ಕೆ ಕರಗುವವನು, ಸಮಯಜ್ಞ, ತಾನು ಒಪ್ಪಿದ ನಿಯಮಗಳನ್ನು ತಪ್ಪದೇ ಪಾಲಿಸುವವನು ಮತ್ತು ಪ್ರಜೆಗಳಿಗೆಲ್ಲ ಹಿತವನ್ನು ಮಾಡುವವನು” ಎಂದು ಎಲ್ಲರೂ ಹೇಳುತ್ತಾರೆ. ರಾಜ ವಂಶದ ಪ್ರತಿನಿಧಿ ನೀನು, ರಾಜ ಕುಮಾರರಿಗೆ ಇಂದ್ರಿಯ ನಿಗ್ರಹವಿರವೇಕು. ಮನಸ್ಸಿನ ನಿಗ್ರಹ ಇರಬೇಕು. ಕಣ್ಣು, ಕಿವಿ, ಮೂಗು, ನಾಲಿಗೆ ಹತೋಟಿಯಲ್ಲಿರಬೇಕು. ಪರಾಕ್ರಮ, ಧರ್ಮ ಮತ್ತು ದೃತಿ ಇರಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ರಾಜನಾದವನು ಅಪರಾಧಿಗಳಿಗೆ ಮಾತ್ರ ದಂಡ ವಿಧಿಸಬೇಕು. ಅಪರಾಧಿಗಳಲ್ಲದವರಿಗೆ ದಂಡ ವಿಧಿಸಬಾರದು. ಹೀಗೆಲ್ಲಾ ವಾಲಿಯು ರಾಮನಿಗೆ ಹೇಳಿದನು. ಲೋಕವಿಖ್ಯಾತ ವಂಶಸ್ಥನಾದ ನೀನು ನಿಯಮಗಳನ್ನು ಪಾಲಿಸುತ್ತಿಯೇ ಎಂದು ನಂಬಿದ್ದೇನೆ ಎಂದು ರಾಮನಿಗೆ ಹೇಳಿದನು. ತಾರೆ ಎಷ್ಟು ಸಲ ಯುದ್ಧ ಬೇಡ ಎಂದರೂ ಅವಳ ಮಾತನ್ನು ಲೆಕ್ಕಿಸದೆ ಸುಗ್ರೀವನ ಜೊತೆ ಯುದ್ಧ ಮಾಡಿದೆ. ನಿನ್ನನ್ನು ಕಾಣುವ ಮೊದಲು ಸುಗ್ರೀವನ ಜೊತೆ ನಾನು ಯುದ್ಧ ಮಾಡುತ್ತಿರುವಾಗ ಬಾಣ ಪ್ರಯೋಗ ಮಾಡುವುದಿಲ್ಲ ಎಂದು ನಂಬಿದ್ದೆ ಎಂದು ವಾಲಿಯು ರಾಮನಿಗೆ ಹೇಳಿದನು. ರಾಮನ ಮುಂದೆ ಮಾತನ್ನು ಮುಂದುವರೆಸಿದ ವಾಲಿಯು ನೀನು ಪಥನಗೊಂಡ ಆತ್ಮವುಳ್ಳವನು (ಆತ್ಮ ಸತ್ತವನು), ಅಧಾರ್ಮಿಕನು ಎಂದು ಹೇಳಿದನು. ಹುಲ್ಲಿನಿಂದ ಮುಚ್ಚಿದ ಬಾವಿಯಂತೆ ನಿನ್ನೊಳಗೆ ಏನಿದೆ ಎಂದು ತಿಳಿಯಲಿಲ್ಲ. ಸಜ್ಜನರ ವೇಷಧಾರಣೆ ಮಾಡಿದ್ದಿಯೇ. ನಿನ್ನೊಳಗೆ ಪಾಪವೇ ತುಂಬಿದೆ, ಬೂದಿ ಮುಚ್ಚಿದ ಕೆಂಡ ಎಂದು ತಿಳಿಯಲಿಲ್ಲ. ಛದ್ಮವೇಷ ನಿನ್ನದು. ನಿಜವಾದ ಧರ್ಮ ನಿನ್ನಲ್ಲಿಲ್ಲ ಎಂದು ರಾಮನಿಗೆ ವಾಲಿಯು ಹೇಳಿದನು. ಅದಲ್ಲದಿದ್ದರೆ ನನ್ನನ್ನು ಯಾಕೆ ಕೊಂದೆ …? ಯಾಕೆ ಹೀಗೆ ಕೊಂದೆ..?? ಮರೆಯಿಂದ ಏಕೆ ಬಾಣ ಪ್ರಯೋಗ ಮಾಡಿದೆ ? ಎಂದು ರಾಮನನ್ನು ಪ್ರಶ್ನಿಸಿದನು. ರಾಮನಿಗೆ ವಾಲಿಯು ನಾನು ನಿನಗೇನು ಮಾಡಿದ್ದೆ ? ಅಯೋಧ್ಯೆಗೆ ನನ್ನಿಂದ ಏನಾಗಿದೆ? ನಾನು ನಿನ್ನ ರಾಜಧಾನಿಗಾಗಲಿ / ರಾಜ್ಯಕ್ಕಾಗಲಿ ಯಾವ ಅಪರಾಧ ಮಾಡಿದೆ ..? ನಾನು ನಿನಗೆ ಮಾಡಿದ ಅಪಮಾನವಾದರೂ ಏನು..?? ನಿನಗೆ ಏನನ್ನೂ ಮಾಡದಿದ್ದರೂ ಯಾಕೆ ಕೊಂದೆ? ಎಂದು ರಾಮನನ್ನು ಪ್ರಶ್ನಿಸಿದನು. ಹಣ್ಣು-ಹಂಪಲುಗಳನ್ನು ತಿಂದು ಜೀವಿಸುವ ವಾನರ ನಾನು. ಇನ್ನೊಂದು ವಾನರನ ಜೊತೆ ಕಾದಾಡುತ್ತಿರುವಾಗ ಕೊಂದಿದ್ದು ಯಾಕೆ?

ಚಂದದ ರೂಪವುಳ್ಳವನಾದ, ಕೃಷ್ಣಾಜನ ಧರಿಸಿದ, ಪ್ರಸಿದ್ದ ರಾಜಮನೆತನದವನಾದ, ಕ್ಷತ್ರಿಯ ಕುಲದಲ್ಲಿ ಜನಿಸಿ, ಗುರುಕುಲದಲ್ಲಿ ಅಧ್ಯಯನ ಮಾಡಿಯೂ ಇಂತಹ ಕ್ರೂರ ಕರ್ಮವನ್ನು ಹೇಗೆ ಮಾಡಿದೆ ಎಂದು ವಾಲಿಯು ರಾಮನಿಗೆ ಕೇಳಿದನು. ನೀನು ಭವ್ಯನಲ್ಲ. ನೀನು ಪ್ರಪಂಚದಲ್ಲೆಲ್ಲ ಭವ್ಯ ರೂಪದಿಂದ ಓಡಾಡುವುದು ಯಾಕೆ ? ಧರ್ಮವಂತ ಎಂದು ಕರೆಸಿಕೊಳ್ಳುವುದು ಏಕೆ ? ಸಾಮ, ದಾನ, ಕ್ಷಮೆ, ಧರ್ಮ, ಸತ್ಯ, ದೃತಿ, ಪರಾಕ್ರಮ, ಅಪರಾಧಿಗಳಿಗೆ ದಂಡ ಇವುಗಳೆಲ್ಲ ರಾಜನಿಗೆ ಇರಬೇಕಾದ ಗುಣಗಳು. ನಾವು ಕಾಡಿನಲ್ಲಿ ಓಡಾಡುತ್ತಾ ಇರುವವರು. ನೀನು ರಾಜ, ಚಕ್ರವರ್ತಿ, ವಿದ್ಯಾವಂತನಾಗಿ ಏಕೆ ಇಂತಹ ಕಾರ್ಯಗಳನ್ನು ಮಾಡಿದೆ…? ಹೆಣ್ಣು, ಹೊನ್ನು, ಮಣ್ಣು, ಭೂಮಿ ಇವುಗಳೆಲ್ಲ ಕಲಹಕ್ಕೆ ಕಾರಣಗಳು. ಆದರೆ ನನಗೂ ನಿನಗೆ ಯಾವ ವಿಷಯದಲ್ಲಿ ವಿವಾದವಿತ್ತು .? ಎಂದು ರಾಮನಿಗೆ ವಾಲಿಯು ಹೇಳಿದನು. ಇದು ನನ್ನ ಕಾಡು, ಇಲ್ಲಿ ಸಿಗುವ ಕಂದಮೂಲ ಫಲಗಳ ಮೇಲೆ ನಿನಗೇನು ಲೋಭವಿದೆಯೇ ಎಂದು ಪ್ರಶ್ನಿಸುತ್ತಾ, ನಯ-ವಿನಯಗಳು, ಅನುಗ್ರಹ-ನಿಗ್ರಹಗಳು ರಾಜನಾದವನಿಗೆ ಗೊತ್ತಿರಬೇಕು, ರಾಜನಾದವನು ಮನಸ್ಸಿಗೆ ಬಂದ ಹಾಗೆ ಮಾಡಬಾರದು ಎಂದು ರಾಮನಿಗೆ ಹೇಳಿದನು. ನೀನು ಕಾಮಪ್ರಧಾನ. ನೀನು ಮನಸ್ಸಿಗೆ ಬಂದ ಹಾಗೆ ಇರುವವನು. ನೀನು ಕ್ರೋಧಪ್ರಧಾನ. ಸಿಟ್ಟು ಬಂದಾಗ ಕೊಲ್ಲುವವನು ನೀನು. ರಾಜನನ್ನು ಕೊಂದವನು, ಗೋಹತ್ಯೆ ಮಾಡಿದವನು, ಬ್ರಹ್ಮಹತ್ಯೆ ಮಾಡಿದವನು, ಪ್ರಾಣಿ ವಧೆ ಮಾಡಿದವನು, ಅಣ್ಣನಿಗಿಂತ ಮೊದಲೇ ಮದುವೆ ಮಾಡಿಕೊಳ್ಳುವ ತಮ್ಮ, ಇವರೆಲ್ಲರೂ ನರಕಕ್ಕೆ ಹೋಗುತ್ತಾರೆ. ನೀನು ರಾಜನನ್ನು ಕೊಂದೆ, ಪ್ರಾಣಿ ವಧೆ ಮಾಡಿದೆ. ಬಿಲ್ಲು – ಬಾಣ ಮಾತ್ರ ಗೊತ್ತು. ಅದನ್ನು ಯಾರ ಮೇಲೆ ಯಾವಾಗ ಹೇಗೆ ಬಳಸಬೇಕು ಎನ್ನುವುದು ನಿನಗೆ ಗೊತ್ತಿಲ್ಲ ಎಂದು ವಾಲಿಯು ರಾಮನಿಗೆ ಹೇಳಿದನು. ಸಜ್ಜನರ ಮಧ್ಯೆ ಸಭೆ ಸೇರಿದರೆ ಹೇಗೆ ಈ ಘಟನೆಯನ್ನು ಸಮರ್ಥಿಸುವಿಯಾ…? ಎಂದು ಕೇಳಿದನು. ಚುಚ್ಚಿಕೊಡುವವನು, ಮಿತ್ರನನ್ನು ಕೊಲ್ಲುವವನು, ಗುರು ಪತ್ನಿಯಲ್ಲಿ ಪಾಪ ಮಾಡುವವರಿಗೆ ಬರುವಂತಹ ಪಾಪಗಳು ನಿನಗೆ ಬರುತ್ತದೆ ಎಂದು ವಾಲಿಯು ಹೇಳಿದನು.

ಬೇಟೆಯಾಡಿ ಮೃಗಗಳನ್ನು ಹೊಡೆಯುವ ಹಾಗೆ ನನ್ನನ್ನು ಹೊಡೆದೆ ಎಂದಾದರೆ ಅದಕ್ಕೆ ಕಾರಣ ಏನು.? ಬೇಟೆಯಾಡುವುದಕ್ಕೂ ಕಾರಣ ಬೇಕು. ಕೆಲವು ಪ್ರಾಣಿಗಳನ್ನು ಚರ್ಮಕ್ಕಾಗಿ, ಕೆಲವುಗಳನ್ನು ರೋಮಕ್ಕಾಗಿ, ಇನ್ನು ಕೆಲವು ಪ್ರಾಣಿಗಳನ್ನು ಮಾಂಸಕ್ಕಾಗಿ ಭೇಟಿಯಾಡುತ್ತಾರೆ. ನನ್ನಲ್ಲಿ ಏನಿದೆ ..? ಹೇಳು ಎಂದು ರಾಮನನ್ನು ವಾಲಿಯು ಪ್ರಶ್ನಿಸಿದನು. ನನ್ನ ಚರ್ಮವನ್ನು ಧಾರಣೆ ಮಾಡಬಹುದಾ? ನಿನ್ನಂತಹ ಸತ್ಪುರುಷರು ಕೃಷ್ಣಾಜನವನ್ನು ಧರಿಸುತ್ತಾರೆ. ವಾನರ ಚರ್ಮವನ್ನು ಧರಿಸುವುದಿಲ್ಲ. ರೋಮವೂ ಕೂಡ ಪ್ರಶಸ್ತವಲ್ಲ. ಮಾಂಸವನ್ನು ಕೂಡ ತಿನ್ನುವಂತೆಯೇ ಇಲ್ಲ. ಐದು ಉಗುರುಳ್ಳ ಪ್ರಾಣಿಯ ಮಾಂಸ ತಿನ್ನಲು ಯೋಗ್ಯವಲ್ಲ ಎಂದು ರಾಮನಿಗೆ ಹೇಳಿದನು. ಸರ್ವಜ್ಞೆಯಾದ ತಾರೆ ಹೇಳಿದ್ದು ಸರಿಯಾಗಿತ್ತು. ನಾನು ಕಾಲಕ್ಕೆ ವಶನಾಗಿ ತಾರೆಯ ಮಾತನ್ನು ಮೀರಿದೆ. ಅವಳು ಹೇಳಿದ್ದನ್ನು ಕೇಳದೆ ಮೃತ್ಯುವಿಗೆ ವಶವಾದೆ ಎಂದು ಕಾಲ ಮಿಂಚಿ ಹೋದ ಮೇಲೆ ವಾಲಿಯು ಚಿಂತಿಸಿದನು. ನೀನು ನಾಳೆ ದೊರೆಯಾದರೆ ಅದು ಈ ಭೂಮಿಯ ದೌರ್ಭಾಗ್ಯ. ನಿನ್ನನ್ನು ದೊರೆಯಾಗಿ ಹೊಂದುವಂತದ್ದು ಭೂಮಿಗೆ ದೊಡ್ಡ ಕಷ್ಟ. ನೀನು ಮೊಸಗಾರ, ನೀನು ಕ್ಷುದ್ರ, ನೀನು ಕಪಟಗಾರ, ನೀನು ಶಾಂತ ಚಿತ್ತತೆಯ ಭ್ರಮೆಯನ್ನು ಉಂಟುಮಾಡತಕ್ಕವನು, ಇಂತಹ ದೋಷಯುಕ್ತನಾಗಿ ಅಂತಹ ಪುಣ್ಯಾತ್ಮ ದಶರಥನ ಮಗನಾಗಿ ಹೇಗೆ ಜನಿಸಿದೆ ? ರಾಮನೆಂಬ ಆನೆ ನನ್ನನ್ನು ತುಳಿದು ಕೊಂದುಬಿಟ್ಟಿತು. ರಾಮನೆಂಬ ಆನೆಯು ಚಾರಿತ್ರ್ಯವೆಂಬ ಸರಪಳಿಯನ್ನು ಹರಿದು ನುಗ್ಗಿ ಮುಂದೆ ಬಂದು ನನ್ನನ್ನು ಕೊಂದಿತು. ಧರ್ಮವೆಂಬ ಅಂಕುಶವಿಲ್ಲದ, ಸಜ್ಜನರ ದಾರಿಯನ್ನು ಬಿಟ್ಟ ಆನೆಯು ತನ್ನನ್ನು ಕೊಂದಿತು ಎಂದು ವಾಲಿಯು ರಾಮನಿಗೆ ಹೇಳಿದನು. ನನ್ನಲ್ಲಿ ಇಷ್ಟೆಲ್ಲ ಪರಾಕ್ರಮವನ್ನು ತೋರಿಸಿದೆಯಲ್ಲ. ನಿನ್ನ ವೈರಿಯಲ್ಲಿ ಯಾಕೆ ಪರಾಕ್ರಮವನ್ನು ತೋರಿಸಿಲ್ಲ ? ರಾವಣನಲ್ಲಿ ತೋರಿಸಿದ ಪರಾಕ್ರಮ ಕಾಣುತ್ತಾ ಇಲ್ಲ. ತಟಸ್ಥರಾದ ನಮ್ಮಲ್ಲಿ ಪರಾಕ್ರಮ ತೋರಿಸಿದ ನೀನು ರಾವಣನಲ್ಲಿ ಏಕೆ ತೋರಿಸುತ್ತಿಲ್ಲ ? ಕಣ್ಣಿಗೆ ಕಾಣದೆ ಬಾಣ ಪ್ರಯೋಗ ಮಾಡಿದ್ದಕ್ಕೆ ಬದುಕಿದೆ. ಎದುರಿಗೆ ಬಂದಿದ್ದರೆ ನೀನು ಯಮನನ್ನು ಕಾಣುತ್ತಿದ್ದೆ. ಮದ್ಯಪಾನ ಮಾಡಿ ಮಲಗಿದವನನ್ನು ಹಾವು ಕಚ್ಚಿದ ಹಾಗೆ ಆಯಿತು ಎಂದು ವಾಲಿಯು ಹೇಳಿದನು. ತನ್ನ ಮಾತನ್ನು ಮುಂದುವರೆಸಿದ ವಾಲಿಯೂ, ನೀನು ಸೀತಾ ಅನ್ವೇಷಣೆಯ ಕಾರ್ಯವನ್ನು ನನ್ನ ಹತ್ತಿರ ಹೇಳಿದ್ದರೆ ಒಂದು ಹಗಲಿನಲ್ಲಿ ಸೀತೆಯನ್ನು ಹುಡುಕುತ್ತಿದ್ದೆ ಎಂದು ರಾಮನಲ್ಲಿ ಹೇಳಿದನು. ರಾವಣನ ಕೊರಳಿಗೆ ಪಾಶವನ್ನು ಹಾಕಿ, ಕೊಲ್ಲದೆ ನಿನ್ನ ಪಾದಬುಡದಲ್ಲಿ ತಂದು ಕೊಡವುತ್ತಿದ್ದೆ. ಸೀತೆ ಎಲ್ಲೇ ಇರಲಿ, ಪಾತಾಳದಲ್ಲಿ ಇರಲಿ, ಜಲದಲ್ಲಿ ಮುಳುಗಿರಲಿ, ನೀನು ಆದೇಶ ಮಾಡಿದ್ದರೆ ನಾನು ಸೀತೆಯನ್ನು ತಂದು ಕೊಡುತ್ತಿದ್ದೆ. ಹೇಗೆ ಬಿಳಿಯ ಹೆಸರುಗತ್ತೆಯ ರೂಪದಲ್ಲಿ ಇರುವ ವೇದಗಳನ್ನು ರಕ್ಕಸರು ಅಪಹಾರ ಮಾಡಿದಾಗ ಪರಮಾತ್ಮನು ವೇದಗಳನ್ನು ಮರಳಿ ತಂದುಕೊಟ್ಟನೋ ಹಾಗೆ ಸೀತೆಯನ್ನು ನಿನಗೆ ನಾನು ಮರಳಿ ತಂದು ಕೊಡುತ್ತಿದ್ದೆ ಎಂದು ವಾಲಿಯು ರಾಮನಿಗೆ ಹೇಳಿದನು. ನಾನು ಸತ್ತ ಮೇಲೆ ಸುಗ್ರೀವ ರಾಜನಾಗುತ್ತಾನೆ. ಅದು ಸರಿ ಇದೆ. ಆದರೆ ನೀನು ನನ್ನನ್ನು ಕೊಂದ ರೀತಿ ಸರಿ ಇಲ್ಲ. ಇದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದನು. ಮಾತನಾಡುತ್ತಾ ಗಂಟಲು ಒಣಗಿದಾಗ ವಾಲಿಯು ಕೊನೆಯಲ್ಲಿ ಯಾರಾದರೂ ಒಂದು ದಿನ ಸಾಯಲೇಬೇಕು. ನನಗೆ ಈಗ ಸಾವು ಬಂದಿದೆ. ಆದರೆ ನಿನಗೆ ನನಗೆ ಉತ್ತರ ಕೊಡುವ ಕರ್ತವ್ಯ ಇದೆ. ನನ್ನ ಜಿಜ್ಞಾಸೆಗಳಿಗೆ ಉತ್ತರವನ್ನು ಕೊಡಬಲ್ಲೆಯಾ..? ಆಲೋಚಿಸು ಎಂದು ರಾಮನಿಗೆ ಹೇಳಿ, ವಾಲಿಯು ವಿರಮಿಸಿದನು.

ಮಹಾತ್ಮರ ಕುರಿತಾಗಿ ಮಾಡುವ ವಿವೇಕ ಶೂನ್ಯವಾದ ದೋಷಾರೋಪಗಳು ಪರಮ ಪಾಪಕರ ― ಶ್ರೀಸೂಕ್ತಿ.

ವಾಲಿಯ ಮಾತು ಮುಗಿಯುವವರೆಗೂ ರಾಮನು ಮಾತನಾಡಲಿಲ್ಲ. ಎಲ್ಲಿಯೂ ನಿಲ್ಲಿಸು, ಮಧ್ಯೆ ಅವಕಾಶ ಕೊಡು ಎಂದು ಕೇಳಲಿಲ್ಲ. ರಾಮನು ವಾಲಿಯ ಎಲ್ಲ ಮಾತುಗಳನ್ನು ಸಮಾಧಾನವಾಗಿ ಕೇಳಿಕೊಳ್ಳುತ್ತಾನೆ. ವಾಲಿಗೆ ಬಾಣದಿಂದ ಪೆಟ್ಟು ಬಿದ್ದಿದ್ದಕ್ಕಾಗಿ ಇಷ್ಟೆಲ್ಲ ಹಲುಬುತ್ತಿದ್ದಾನೆ ಎಂದು ರಾಮನು ಭಾವಿಸಿದನು. ಮಾತನಾಡಿದ ಬಳಿಕ ವಾಲಿಯು, ಮಳೆ ಸುರಿಸಿ ನೀರೆಲ್ಲ ಖಾಲಿಯಾದ ನಂತರ ಇರುವ ಮೊಡದಂತೆ ಇದ್ದ. ಅಥವಾ ಬಿರುವಷ್ಟು ಬೆಳಕನ್ನು ಬೀರಿ ಕತ್ತಲಾದ ಸೂರ್ಯನಂತೆ, ಆರುವ ಬೆಂಕಿಯಂತೆ ವಾಲಿಯೂ ಇದ್ದ.

ವಾಲಿಗೆ ರಾಮನು ನೀನು ನನ್ನ ನಿಂದೆ ಮಾಡುತ್ತಾ ಇದ್ದಿಯೇ. ನಿನ್ನ ನಿಂದೆಯ ಹಿಂದೆ ಇರುವಂತದ್ದು ಅಜ್ಞಾನ ಮತ್ತು ಬಾಲ್ಯ. ನೀನು ಶರೀರದಲ್ಲಿ ದೊಡ್ಡವನು, ರಾಜನೆಂದು ಎನಿಸಿಕೊಂಡಿದ್ದಿಯೇ!.ಆದರೆ ನಿನ್ನ ಬುದ್ದಿಗೆ ಮಾತ್ರ ಇನ್ನೂ ಬಾಲ್ಯವೇ ಇದೆ. ಧರ್ಮ ಗೊತ್ತಿರಬೇಕು, ಅರ್ಥ, ಕಾಮಗಳು ಗೊತ್ತಿರಬೇಕು. ಲೌಕಿಕ ಸಂಬಂಧಗಳು ಗೊತ್ತಿರಬೇಕು. ಇವೆಲ್ಲ ಸರಿಯಾಗಿ ನಿನಗೆ ತಿಳಿದಿದ್ದರೆ ಇಂತಹ ಮಾತುಗಳನ್ನು ಆಡುತ್ತಿರಲಿಲ್ಲ. ಧರ್ಮ, ಅರ್ಥ, ಕಾಮ, ಲೌಕಿಕ ಸಮಯ- ಒಪ್ಪಂದಗಳನ್ನು ಪರಿಭಾವಿಸು, ಆಲೋಚಿಸು ಎಂದು ರಾಮನು ವಾಲಿಗೆ ಹೇಳಿದನು. ನಂತರ ವಾಲಿಯನ್ನು ಸಹೋದರನೇ ಎಂದು ಸಂಭೋದಿಸಿ, ತನ್ನ ಮಾತನ್ನು ಮುಂದುವರೆಸಿದನು. ಬುದ್ದಿ ಸಂಪನ್ನರಾದ ಗುರು-ಹಿರಿಯರಲ್ಲಿ ವಿಚಾರ ಮಾಡದೆ, ಕೇವಲ ವಾನರ ಚಾಪಲ್ಯದಿಂದ ಏನೆಲ್ಲ ಹೇಳಿಬಿಟ್ಟೆ ನೀನು ಎಂದು ರಾಮನು ಕೇಳಿದನು. ನೀನು ಹತನಾಗಿ ಈಗ ಎಲ್ಲಿ ಮಲಗಿದ್ದೆಯೊ ಇದು ಸೇರಿದಂತೆ ಭೂಮಂಡಲವೇ ಇಕ್ಷ್ವಾಕುಗಳಿಗೆ ಸೇರಿದ್ದು. ಪ್ರಾಣಿ-ಪಕ್ಷಿಗಳ, ಮನುಷ್ಯರ ಅನುಗ್ರಹ- ನಿಗ್ರಹಗಳು ಸೂರ್ಯವಂಶಕ್ಕೆ ಸೇರಿದ್ದು. ಯಾವುದೇ ಜೀವ ಜಾಲಗಳು ದಾರಿ ತಪ್ಪಿದಾಗ ದಂಡಿಸುವುದು ಮತ್ತು ಸರಿ ದಾರಿಯಲ್ಲಿದ್ದಾಗ ರಕ್ಷಣೆ ಕೊಡುವಂತದ್ದು ಸೂರ್ಯ ವಂಶದ ಕರ್ತವ್ಯ ಎಂದು ರಾಮನು ವಾಲಿಗೆ ಹೇಳಿದನು. ರಾಮನೂ ಸಹ ಕಾಡಿನಲ್ಲಿ ಋಷಿ-ಮುನಿಗಳಿಗೆ ರಕ್ಷಣೆ ಕೊಡುವ ಮೂಲಕ ತನ್ನ ಕರ್ತವ್ಯವನ್ನು ಮಾಡುತ್ತಾನೆ.

ಶಿಷ್ಟರ ರಕ್ಷಣೆ ಮಾಡುವುದು. ದುಷ್ಟರನ್ನು ಶಿಕ್ಷಿಸುವುದು ರಾಜನಾದವನ ಕರ್ತವ್ಯ ― ಶ್ರೀಸೂಕ್ತಿ.

ಪ್ರತಿಯೊಂದು ಜೀವಗಳ ರಕ್ಷಣೆಯ ಹೊಣೆ ಇಂದು ಸೂರ್ಯವಂಶದಲ್ಲಿ ಭರತನಿಗೆ ಇದೆ. ಮತ್ತು ನಾನು ಅವನ ಪ್ರತಿನಿಧಿ ಎಂದು ವಿನಯದಿಂದ ರಾಮನು ವಾಲಿಗೆ ಹೇಳಿದನು. ರಾಮನು ವಾಲಿಗೆ ನೀನು ಧರ್ಮ, ಅರ್ಥ, ಮೋಕ್ಷ ಪ್ರಧಾನವಾದ ಕೆಲಸವನ್ನು ಮಾಡಿಲ್ಲ. ನಿನ್ನ ಬದುಕಿಗೆ ಕಾಮವೇ ಪ್ರಧಾನ. ರಕ್ಷಣೆ ಕೊಡಬೇಕಾದ ನೀನೇ ನಿನ್ನ ತಮ್ಮನ ಪತ್ನಿಯ ಮಾನಹರಣಕ್ಕೆ ಮುಂದಾದರೆ ಏನು ಹೇಳಬೇಕು. ಇದಕ್ಕೆ ರಾಜತ್ವ ಎಂದು ಕರೆಯುವರೆ? ನೀನು ರಾಜ ಮಾರ್ಗದಲ್ಲಿ ಇಲ್ಲ ಎಂದು ರಾಮನು ವಾಲಿಗೆ ಹೇಳಿದನು.

ಜನ್ಮ ಕೊಟ್ಟ ತಂದೆ, ಜ್ಞಾನ ನೀಡಿದ ಗುರು, ಹಿರಿಯ ಅಣ್ಣ ಮೂವರಿಗೂ ತಂದೆಯ ಸ್ಥಾನವಿದೆ ― ಶ್ರೀಸೂಕ್ತಿ.

ಧರ್ಮವೆಂಬುದು ಸೂಕ್ಷ್ಮವಾಗಿರುವಂತದ್ದು. ಯಾವುದು ಧರ್ಮ ಮತ್ತು ಯಾವುದು ಅಧರ್ಮ ಎಂದು ತಿಳಿದುಕೊಳ್ಳುವುದು ಸುಲಭವಲ್ಲ. ಆದರೆ ನಮ್ಮೊಳಗೆ ಇರುವ ಆತ್ಮಕ್ಕೆ ಧರ್ಮ ಯಾವುದು ಎಂದು ತಿಳಿದಿದೆ ಎಂದು ರಾಮನು ವಾಲಿಗೆ ಹೇಳಿದನು. ತನ್ನ ಮಾತನ್ನು ಮುಂದುವರೆಸಿದ ರಾಮನು ವಾಲಿಗೆ ಹತನಾದ ಕಾರಣವನ್ನು ಹೇಳುತ್ತಾನೆ.

ನೀನು ಧರ್ಮವನ್ನು ತ್ಯಜಿಸಿ, ನಿನ್ನ ತಮ್ಮನ ಹೆಂಡತಿಯಲ್ಲಿ ತಪ್ಪು ನಡೆದೆ. ಅದು ಈ ಶಿಕ್ಷೆಗೆ ಕಾರಣ. ವಾನರರ ಒಪ್ಪಂದದಂತೆ ತಮ್ಮನ ಪತ್ನಿಯನ್ನು ಮುಟ್ಟಲು ಅವಕಾಶವಿಲ್ಲ. ಧರ್ಮದ ವಿರುದ್ಧ ಮತ್ತು ಲೋಕದ ನಡೆತೆಗೆ ವ್ಯತ್ಯಸ್ಥವಾಗಿ ನಡೆದ ಮೇಲೆ ದಂಡವನ್ನು ವಿಧಿಸಲೇಬೇಕು. ಒಡಹುಟ್ಟಿದ ತಂಗಿ, ತಮ್ಮನ ಹೆಂಡತಿ ಇವರೀರ್ವರ ವಿಷಯದಲ್ಲಿ ಕಾಮಪರವಶನಾಗಿ ವರ್ತಿಸಿದರೆ ಅವರಿಗೆ ಮೃತ್ಯು ದಂಡವೇ ಶಿಕ್ಷೆ. ಇದು ಶಿಕ್ಷೆಯೇ ಹೊರತು ಯುದ್ದವಲ್ಲ. ನಂತರ ರಾಮನು ಪ್ರಜೆಗಳು ತಪ್ಪು ಮಾಡಿದಾಗ ದಂಡಿಸಬೇಕು. ಹಾಗೆ ಮಾಡಿದರೆ ಪ್ರಜೆಗಳು ದಂಡನೆಯಿಂದ ಪಾಪಮುಕ್ತರಾಗುತ್ತಾರೆ. ಹಾಗೆ ಮಾಡದೆ ಇದ್ದಾಗ ಪ್ರಜೆಗೂ ಪಾಪ ಉಳಿಯುತ್ತದೆ. ರಾಜನಿಗೂ ಪಾಪ ಬರುತ್ತದೆ.

ರಾಜನಾದವನು ಅಪರಾಧಿಗಳನ್ನು ಶಿಕ್ಷಿಸದೇ ಇರಬಾರದು. ನಿರಪರಾಧಿಗಳನ್ನು ಯಾವ ಕಾರಣಕ್ಕೂ ಶಿಕ್ಷಿಸಕೂಡದು ― ಶ್ರೀಸೂಕ್ತಿ.

ಪರಿತಪಿಸಬೇಡ, ಧರ್ಮಕ್ಕೆ ತಪ್ಪು ನಡೆದಾಗ ಬಂದ ಶಿಕ್ಷೆ ಇದು. ನನಗೆ ಬೇರೆ ದಾರಿ ಇಲ್ಲ. ನಿನಗೆ ಬೇರೆ ಯಾವ ಪರಿಹಾರವೂ ಇಲ್ಲ. ರಾಜನಾದವನು ದುಷ್ಟ ಮೃಗಗಳನ್ನು ಬೇಟೆಯಾಡಬೆಕು. ನೀನು ಯುದ್ಧ ಧರ್ಮದ ಒಳಗೆ ಬಂದಿಲ್ಲ. ನೀನೊಂದು ಕೋತಿಯಾಗಿದ್ದರಿಂದ ಬೇಟೆಯಾಡಿದೆ. ನೀನು ನಿಜವಾಗಿಯೂ ರಾಜನೇ ಆಗಿದ್ದರೆ ಸುಗ್ರೀವನ ಬಗ್ಗೆ ಸರಿಯಾದ ಸಂಭಾಷಣೆ ಮಾಡಬೇಕಿತ್ತು. ಸುಗ್ರೀವನಿಂದ ತಪ್ಪು ಆಗಿದ್ದರೂ , ಅವನ ಪತ್ನಿ ಯಾವ ತಪ್ಪನ್ನು ಮಾಡಿದ್ದಳು ? ಎಂದು ರಾಮನು ಪ್ರಶ್ನಿಸಿದನು. ಕೋತಿಯಂತೆ ನೀನು ನಡೆದುಕೊಂಡಿದ್ದರಿಂದ ದುಷ್ಟ ಮೃಗದಂತೆ ನಿನ್ನನ್ನು ಬೇಟೆಯಾಡಬೇಕಾಯಿತು ಎಂದು ರಾಮನು ವಾಲಿಗೆ ಹೇಳಿದನು.

ಭಾರತೀಯ ದಂಡನೀತಿಯು ಜೀವಿಯೊಳಗಿನ ಪಾಪಕ್ಕೆ ಮಾಡುವ ಚಿಕಿತ್ಸೆ. ― ಶ್ರೀಸೂಕ್ತಿ.

ರಾಮನ ಮಾತುಗಳನ್ನು ಕೇಳಿದ ವಾಲಿಗೆ ತುಂಬಾ ನೋವಾಯಿತು. ವಾಲಿಯು ಪೂರ್ವಾಲೋಕನ ಮಾಡಿ ರಾಮನ ತಪ್ಪಲ್ಲ ಎನ್ನುವ ನಿಶ್ಚಯಕ್ಕೆ ಬರುತ್ತಾನೆ. ತನ್ನದೇ ತಪ್ಪು ಎಂದು ಅರಿವಾದಾಗ ವಾಲಿಯು ರಾಮನಿಗೆ ಕೈಮುಗಿದು, ಹೇ! ನರಶ್ರೇಷ್ಟನೇ ನೀನು ಹೇಳಿದ್ದೆಲ್ಲ ಸರಿ. ಮತ್ತು ನಿನಗೆ ಉತ್ತರ ಕೊಡಲು ನಾನು ಯೋಗ್ಯನಲ್ಲ. ಏಕೆಂದರೆ ನೀನು ಉತ್ಕೃಷ್ಟ, ನಾನು ಅಪಕೃಷ್ಟ ಎಂದು ವಾಲಿಯು ರಾಮನಿಗೆ ಹೇಳಿದನು. ಹಿಂದೆ ಆಡಿದ ಅನುಚಿತವಾದ ಮಾತುಗಳಿಗೆ ವಾಲಿಯು ರಾಮನಲ್ಲಿ ಕ್ಷಮೆಯನ್ನು ಕೇಳಿದ. ಪ್ರಮಾದದಿಂದ ಏನೇನೋ ಹೇಳಿಬಿಟ್ಟೆ. ನಾನು ಹೇಳಿದ್ದಕ್ಕೆ ಆಗ್ರಹ ಮಾಡಬೇಡ. ನಿನಗೆ ತತ್ವಜ್ಞಾನ ಇದೆ. ಧರ್ಮ ಬಿಟ್ಟ ನನ್ನನ್ನು ಪಾಲಿಸು, ಕೊನೆಯ ಹೊತ್ತಿನಲ್ಲಿ ನಿನ್ನ ಮಾತುಗಳು ಬೇಕು ಎಂದು ವಾಲಿಯು ರಾಮನಲ್ಲಿ ಬೇಡಿಕೊಳ್ಳುತ್ತಾನೆ.

ವಾಲಿಯು ರಾಮನಿಗೆ ತನ್ನ ಮಗನಾದ ಅಂಗದನನ್ನು ರಕ್ಷಿಸಲು ಹೇಳಿ, ಮಗನನ್ನು ರಾಮನಿಗೆ ಒಪ್ಪಿಸಿದನು.
ರಾಮನ ಬಾಣ ವಾಲಿಯನ್ನು ಪ್ರವೇಶಿದ ಮೇಲೆ, ರಾಮನ ಮಾತುಗಳು ಕಿವಿಯ ಮೇಲೆ ಬಿದ್ದಾಗ ವಾಲಿಗೆ ಸುಗ್ರೀವನ ಮೇಲೆ ಮಮತೆ ಬಂತು. ಸುಗ್ರೀವ ಮತ್ತು ಅಂಗದರ ಬಗ್ಗೆ ನಿನ್ನ ಒಳ್ಳೆಯ ಮನಸ್ಸು ಯಾವಾಗಲೂ ಇರಲಿ ಎಂದು ರಾಮನಲ್ಲಿ ವಾಲಿಯು ಪ್ರಾರ್ಥಿಸಿದನು. ನಿನಗೆ ಲಕ್ಷ್ಮಣ ಹೇಗೋ ಭರತ ಹೇಗೋ ಅದೇ ಭಾವವನ್ನು ಅಂಗದ ಮತ್ತು ಸುಗ್ರೀವನಲ್ಲಿ ಇಟ್ಟು ಅವರನ್ನು ಮುನ್ನಡೆಸು ಎಂದು ಹೇಳುತ್ತಾನೆ. ಮಾತನ್ನು ಮುಂದುವರೆಸಿದ ವಾಲಿಯು ತಾರೆಯಲ್ಲಿ ದೋಷ ಇಲ್ಲ. ಸುಗ್ರೀವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡುವುದು ನಿನ್ನ ಜವಾಬ್ದಾರಿ ಎಂದು ರಾಮನಿಗೆ ಹೇಳಿದನು. ಮುಂದೆ ರಾಜ್ಯಭಾರ ಮಾಡಲು ನಿನ್ನ ಅನುಗ್ರಹ ಬೇಕು ಎಂದು ಕೇಳುತ್ತಾನೆ.
ಕೊನೆಯದಾಗಿ ವಾಲಿಯು ತಾರೆ ತಡೆದರೂ ನಾನು ಬಂದೆ, ನನಗೆ ನಿನ್ನ ಕೈಯಲ್ಲಿ ಸಾವು ಬೇಕಿತ್ತು ಎಂದು ರಾಮನಿಗೆ ಹೇಳಿದನು. ಇದನ್ನೆಲ್ಲ ಹೇಳಿ ವಾಲಿಯು ವಿರಮಿಸಿದಾಗ ರಾಮನು ವಾಲಿಯನ್ನು ಸಮಾಧಾನ ಪಡಿಸಿದನು. ಸಂತಾಪವನ್ನು ಬಿಡು, ಅಂಗದ, ಸುಗ್ರೀವ, ಮತ್ತು ತಾರೆಯರ ಚಿಂತೆಯನ್ನು ಬಿಡು ಮತ್ತು ನಾನೆಂತಹ ಪಾಪಿ ಎಂದು ಚಿಂತಿಸಬೇಡ. ನಿನ್ನ ಪಾಪವನ್ನು ಪರಿಹರಿಸಿದ್ದೇನೆ. ರಾಮನಿಗೆ ಏನು ದೋಷ ಬರುತ್ತದೋ ಎಂದು ಚಿಂತಿಸಬೇಡ ಎಂದು ರಾಮನು ವಾಲಿಗೆ ಹೇಳಿದನು. ದಂಡವನ್ನು ಕೊಟ್ಟವನು ಮತ್ತು ಸ್ವೀಕಾರ ಮಾಡಿದವನು ಇಬ್ಬರಿಗೂ ಶ್ರೇಯಸ್ಸು. ನಿನಗೀಗ ಧರ್ಮಮಯವಾದ ಮೂಲ ಪ್ರಕೃತಿ ಸಿಕ್ಕಿದೆ ಆದ್ದರಿಂದ ಶೋಕ, ಮೋಹ ಮತ್ತು ಹೃದಯದೊಳಗಿನ ಭಯವನ್ನು ಬಿಡು ಎಂದು ರಾಮನು ವಾಲಿಗೆ ಹೇಳಿದನು.

ಅಂಗದನನ್ನು ನಾನು ಮತ್ತು ಸುಗ್ರೀವನು ಮಗನಂತೆ ನೋಡಿಕೊಳ್ಳುತ್ತೇವೆ ಎಂದು ರಾಮ ಹೇಳಿದಾಗ ವಾಲಿಗೆ ಸಂಪೂರ್ಣ ಸಮಾಧಾನವಾಯಿತು. ಬಾಣವು ತನ್ನೊಳಗೆ ಪ್ರವೇಶಿಸಿದಾಗ ಆಡಿದ ಮಾತುಗಳನ್ನು ಕ್ಷಮಿಸು ಎಂದು ರಾಮನಲ್ಲಿ ವಾಲಿಯು ಪ್ರಾರ್ಥಿಸಿದನು. ಶ್ರೀಮನ್ನಾರಾಯಣನು ಶ್ರೀರಾಮನಾಗಿ ಭೂಮಿಗೆ ಬಂದಾಗ, ಇಂದ್ರನು ವಾಲಿಯ ರೂಪ ಧರಿಸಿ ಬಂದಿದ್ದ. ಆದರೆ ವಾಲಿ ರಾವಣನ ಜೊತೆ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡ ನಂತರ ವಾಲಿಯು ದುಷ್ಟನಾದ. ಅದಕ್ಕಾಗಿಯೇ ವಿಧಿ ಅಂಗದನನ್ನು ಸಜ್ಜುಗೊಳಿಸಿತು. ವಾಲಿ ಮಾಡಬೇಕಾದ ಕಾರ್ಯವನ್ನು ಮುಂದೆ ಅಂಗದನು ಮಾಡುತ್ತಾನೆ. ಸಾಯುವ ಮೊದಲು ವಾಲಿಯು ಅಂಗದ ಮತ್ತು ಸುಗ್ರೀವನಿಗೆ ರಾಮನ ಸೇವೆಯನ್ನು ಮಾಡಲು ಹೇಳುತ್ತಾನೆ.

ಮುಂದೇನಾಯಿತು?… ಎನ್ನುವುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments