ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಬದುಕು, ಹೀಗೇಕೆ ಮಾಡಿದೆ? ಎಂಬ ಪ್ರಶ್ನೆಯನ್ನು ಕೇಳಿದಾಗ, ಉತ್ತರವಿಲ್ಲದೆ ತಲೆಕೆಳಗೆ ಹಾಕುವ ಸ್ಥಿತಿಯನ್ನು ನಾವು ಯಾರೂ ತಂದುಕೊಳ್ಳಬಾರದು. ನಾವು ಏನು ಮಾಡಿದರೂ , ಅದನ್ನು ಏಕೆ ಮಾಡಿದೆವು ಎನ್ನುವ ಬಗ್ಗೆ ನಮ್ಮಲ್ಲಿ ಸರಿಯಾದ ಕಾರ್ಯಕಾರಣ ಮತ್ತು ವಿವೇಚನೆ ಇರಬೇಕು. ನಾವು ಮಾಡಿದ ಕಾರ್ಯ ಸರಿಯಿದೆ ಎಂದು ನಮ್ಮ ಆತ್ಮ ಒಪ್ಪುವಂತೆ ನಮ್ಮ ಬದುಕು ಇರದಿದ್ದರೆ ನರಕ ಮುಂದೆ ಕಾದಿದೆ. ಪತನ ಮುಂದೆ ಕಾದಿದೆ. ಕಿಷ್ಕಿಂಧಾ ಕಾಂಡದ 19ನೇ ಸರ್ಗದ ಮೊದಲ ಶ್ಲೋಕ ವಾಲಿಯ ಕುರಿತು ಹೇಳುವುದು ಇದನ್ನು; ನನ್ನನು ಏಕೆ ಹೊಡೆದೆ? ನನ್ನನ್ನು ಏಕೆ ಬಳಸಿಕೊಳ್ಳಲಿಲ್ಲ ? ಎಂದು ವಾಲಿ ರಾಮನನ್ನು ಪ್ರಶ್ನಿಸಿದ್ದಾನೆ. ಉತ್ತರವಿಲ್ಲದ ಭಾವ ರಾಮನಲ್ಲಿ ಆದರೆ ರಾಮ ನೀಡಿದ ಉತ್ತರದಲ್ಲಿ ವಾಲಿಗೆ ಪ್ರಶ್ನೆಗಳಿದ್ದವು. ಆದರೆ ವಾಲಿಯ ಬಳಿ ಆ ಪ್ರಶ್ನೆಗಳಿಗೆ ತನ್ನಾತ್ಮ ಒಪ್ಪುವಂತಹ ಉತ್ತರವಿರಲಿಲ್ಲ. ವಾನರರ ಮಹಾರಾಜನು ರಾಮನ ಶರದಿಂದ ಭೇದಿಸಲ್ಪಟ್ಟು , ರಣಶಯ್ಯೆಯಲ್ಲಿ ಮಲಗಿದ್ದಾನೆ. ಆ ಸಮಯದಲ್ಲಿ ಅವನ ಪ್ರಶ್ನೆಗಳಿಗೆ ಯುಕ್ತಿಯುತವಾದ, ವಾಲಿಯೇ ಒಪ್ಪುವಂತಹ ಉತ್ತರವನ್ನು ರಾಮನು ಕೊಟ್ಟಾಗ, ಉತ್ತರದೊಳಗಿದ್ದ ಪ್ರಶ್ನೆಗಳಿಗೆ ವಾಲಿಯ ಬಳಿಯಲ್ಲಿ ಉತ್ತರವಿರಲಿಲ್ಲ. ವಾಲಿ ಉತ್ತರವಿಲ್ಲದೆ ಸುಮ್ಮನಾದ.

ಕೊನೆಯ ಸಮಯ ಹತ್ತಿರ ಬರುತ್ತಿದೆ ವಾಲಿಗೆ. ಒಂದೆಡೆ ಸುಗ್ರೀವನು ವಾಲಿಯ ಮೇಲೆ ಎಸೆದ ದೊಡ್ಡ ದೊಡ್ಡ ಬಂಡೆಗಳು , ಮರಗಳು. ಈ ಪೆಟ್ಟು ಈಗ ನೋವನ್ನು ಕೊಡುತ್ತಿದೆ ವಾಲಿಗೆ. ವಾಲಿಯ ಮನಸ್ಸು ಸುಗ್ರೀವನ ವಿಷಯದಲ್ಲಿ ಹೂವಿನಂತೆ ಮೃದುವಾಗಿದೆ. ಆದರೆ ಶರೀರದ ಮೇಲೆ ಬಂಡೆಗಳು , ಮರಗಳಿಂದಾದ ಪೆಟ್ಟುಗಳು ಅದರಿಂದಾದ ನೋವು ಈಗ ಕಾಣುತ್ತಿದೆ. ಆದರೆ ಅದಕ್ಕಿಂತ ಮಿಗಿಲಾಗಿ ರಾಮಬಾಣದಿಂದ ಕ್ಲಾoತನಾಗಿದ್ದಾನೆ ವಾಲಿ. ಬದುಕಿನ ಕೊನೆ ಕೊನೆಯ ಕ್ಷಣದಲ್ಲಿ ವಾಲಿಗೆ ಪ್ರಜ್ಞೆತಪ್ಪಿತು, ಮೈಮರೆವು ಉಂಟಾಯಿತು. ಈ ಸಮಯದಲ್ಲಿ ವಾಲಿಯ ಪತ್ನಿ ತಾರೆ ಆಕೆ ಕಪಿಸಮ್ರಾಜ್ಞಿ, ವಿವೇಚನೆ ಹೊಂದಿದವಳು, ಭಾವರ್ತಿ. ಆಕೆಗೆ ರಾಮದತ್ತವಾದ ಬಾಣದಿಂದ ವಾಲಿ ಹತನಾಗಿದ್ದಾನೆ ಎಂಬ ವಾರ್ತೆಹೋಯಿತು. ಅಪ್ರಿಯವಾದ, ಅತಿ ದಾರುಣವಾದ, ಪತಿ ವಿಘಾತದ ವಾರ್ತೆ ಕೇಳಿದಾಗ ಬೆದರಿದ ಜಿಂಕೆಯಂತೆ ಹೊರಬಂದಳು ತಾರೆ. ತಾರೆಯ ಜೊತೆಗೆ ವಾನರ ಚಕ್ರವರ್ತಿಯ ಏಕಮಾತ್ರ ಪುತ್ರ ಅಂಗದ ಮತ್ತು ಅವನ ಪರಿವಾರದವರು ಹೊರಬಂದರು. ಅಂಗದನ ಪರಿವಾರದ ವಾನರರು ಧನುಷ್ಪಾಣಿಯಾದ ರಾಮನನ್ನು ಕಂಡು ಬೆದರಿ ಚೆಲ್ಲಾಪಿಲ್ಲಿಯಾಗಿ ಓಡಿದರು. ಓಡುವ ವಾನರ ವೀರರನ್ನು ಕಂಡು ತಾರೆ ಹೇಳಿದಳು; ರಾಜಸಿಂಹನಾದ ವಾಲಿಯ ಪರಿವಾರದವರು ನೀವು. ದುರ್ಗತಿ ಹೊಂದಿದವರಂತೆ ಈ ರೀತಿ ಓಡಿಹೋಗುತ್ತಿದ್ದೀರಲ್ಲಾ, ಏನಾಗಿದೆ ನಿಮಗೆ? ಎಲ್ಲಿ ಹೋಯಿತು ನಿಮ್ಮ ಸ್ವಾಮಿಭಕ್ತಿ, ಧೈರ್ಯಪರಾಕ್ರಮಗಳು? ನೀವು ನಿಮ್ಮ ಕರ್ತವ್ಯವನ್ನು ಮಾಡಬಹುದಲ್ಲಾ? ಎಂದಳು. ಆಗ ಅವರೆಲ್ಲಾ ಇದ್ದ ವಿಷಯವನ್ನು ಹೇಳಿದರು; ತಾರೆ ಮಹಾರಾಣಿ, ದೇವರು ದೊಡ್ಡವನು ನಿನ್ನ ಮಗ ಇನ್ನೂ ಬದುಕಿದ್ದಾನೆ. ಹೋಗು, ಗುಹೆಯೊಳಗೆ ಹೋಗಿ ಬಾಗಿಲುಗಳನ್ನು ಹಾಕಿಕೋ. ಅಂಗದನಿಗೆ ಒಳಗೊಳಗೇ ರಾಜ್ಯಾಭಿಷೇಕವನ್ನು ಮಾಡಿಬಿಡು. ಅಂಗದ ರಾಜನೆಂದು ತಿಳಿದರೆ ಇರುವ ಒಂದಿಷ್ಟು ವಾನರರಾದರೂ ಅವನ ಬಳಿ ಉಳಿದಾರು ಅಥವಾ ನಮ್ಮ ಜೊತೆ ಓಡಿಬರುವುದೇ ಒಳಿತು. ಏಕೆಂದರೆ ವಾಲಿಯಿಂದ ಹೊರಹಾಕಲ್ಪಟ್ಟ ಸುಗ್ರೀವ, ಅವನ ಜೊತೆಗಿರುವ ವೀರವಾನರರು ಕಿಷ್ಕಿಂಧೆಯನ್ನು ಮುತ್ತಬಹುದು ಹಾಗಾಗಿ ನೀನು ನಮ್ಮ ಜೊತೆ ಕಾಡುಸೇರುವುದು ಒಳಿತು. ಎಂದಾಗ ಅವರ ಮಾತುಗಳನ್ನು ಕೇಳಿ ವಿಷಾದದ ನಗುಬಂತಂತೆ. ನಕ್ಕು ತಾರೆ ಹೇಳಿದಳು; ನನ್ನ ಪ್ರಿಯಕಾಂತ ಕ್ಷೀಣಿಸುವ ಹೊತ್ತಿನಲ್ಲಿ ಗುಹೆಯ ಬಾಗಿಲುಗಳನ್ನು ಹಾಕಿಕೊಂಡು ನನ್ನ ಮಗನಿಗೆ ಪಟ್ಟಾಭಿಷೇಕ ಮಾಡಬೇಕಾ? ಇಲ್ಲ. ರಾಮನ ಬಾಣದಿಂದ ಹತನಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ನನ್ನ ಪತಿ ವಾಲಿಯ ಪಾದಮೂಲವನ್ನು ಸೇರುತ್ತೇನೆ ಎಂಬುದಾಗಿ ಹೇಳಿ, ತನ್ನ ಕೈಗಳಿಂದ ತಲೆಯನ್ನು ಮತ್ತು ಹೊಟ್ಟೆಯನ್ನು ಚಚ್ಚಿಕೊಳ್ಳುತ್ತಾ ವಾಲಿಯ ಕಡೆ ಧಾವಿಸಿದಳು ತಾರೆ. ಹೋಗಿ ನೋಡುತ್ತಾಳೆ, ಪತಿ ನಿಪತಿತ. ದಾನವೇಂದ್ರನನ್ನು ಸಂಹಾರಮಾಡಿದವನು, ಒಂದು ಕಾಲದಲ್ಲಿ ಪರ್ವತವನ್ನು ಕಿತ್ತು ಬೀಳಿಸಿದವನು. ಅಂತಹ ವಾಲಿಯನ್ನು ವಿಧಿ ಎಲ್ಲಿಂದ ಎಲ್ಲಿಗೋ ತೆಗೆದುಕೊಂಡು ಹೋಗಿದೆ. ಮೋಡ ಮಳೆನೀರು ಸುರಿಸಿ ಬರಿದಾಗುವಂತೆ ಬರಿದಾಗಿದ್ದಾನೆ ವಾಲಿ.

ಜೀವ ಉಳಿಯುವ ಪರಿಸ್ಥಿತಿಯಲ್ಲಿ ಇಲ್ಲ ವಾಲಿ! ಸಾಯುವ ಹಂತದಲ್ಲಿ ಮಲಗಿದಾನೆ ವಾಲಿ. ಪ್ರಪಂಚದಲ್ಲಿ ವೀರಘರ್ಜನೆಯನ್ನು ಮಾಡಲಿಕ್ಕೆ ಯಾರೆಲ್ಲ ಪ್ರಸಿದ್ಧರೋ ಅವರ ನಡುವೆ ವಾಲಿಯಂತೆ ಯಾರೂ ಇಲ್ಲ. ಅಂತಹ ಘರ್ಜನೆಯ ಮುಂದೆ ಬೇರಾರಿಲ್ಲ. ನಿಶ್ಶಬ್ದವಾಗಿ ಮಲಗಿದಾನೆ. ಶೂರನೇನೋ ಹೌದು, ಆದರೆ ಮಹಾಶೂರನಿಂದ ಹತನಾಗಿದಾನೆ. ವಾಲಿಯು ರಾಮನಿಂದ ಹತನಾಗಿ ಮಲ್ಗಿದಾನೆ. ವಾಲ್ಮೀಕಿಗಳು ಒಂದು ಚೆಂದದ ಉದಾಹರಣೆಯನ್ನು ಕೊಡ್ತಾರೆ, ಲೋಕವೆಲ್ಲ ಪೂಜೆ ಮಾಡುವ ವೃಕ್ಷವನ್ನು ಹಾವು ಸೇರಿಕೊಂಡಿದೆ. ಗರುಡ ಬಂದು ಮರವನ್ನು ಹಾಳುಗೆಡವಿದಂತೆ. ವಾಲಿ ಕೂಡ ಹಾಗೆ. ದೋಷಗಳಿಂದಾಗಿ ತನ್ನ ಪತನವಾಯಿತು ವಾಲಿಯದು.

ಅನತಿದೂರದಲ್ಲಿ ತನ್ನ ಮಹಾಧನಸ್ಸನ್ನು ಭೂಮಿಗೆ ಊರಿ ನಿಂತಿರುವ ರಾಮ, ಲಕ್ಷ್ಮಣ ಹಾಗೂ ಶುಭನಾದ ಸುಗ್ರೀವ! ಇವರೆಲ್ಲರನ್ನೂ ದಾಟಿ ತನ್ನ ಪತಿಯನ್ನು ನೋಡ್ತಾಳೆ ತಾರೆ, ಕುಸಿದು ಬಿದ್ದಳು. ಬಳಿಕ ನಿದ್ರಿಸಿ ಎದ್ದವಳಂತೆ, “ಆರ್ಯಪುತ್ರಾ” ಎಂಬುದಾಗಿ ತನ್ನ ಪತಿಯನ್ನು ಕರೆದಳು. ಮೃತ್ಯುಪಾಶವು ಆತನನ್ನಾವರಿಸಿದೆ. ಸುಗ್ರೀವ ತಾರೆಯನ್ನೂ, ಶೋಕಮುಖದ ಅಂಗದನನ್ನು ನೋಡ್ತಾನೆ. ಇನ್ನಿಲ್ಲದ ವ್ಯಥೆಯಾಯಿತು ಸುಗ್ರೀವನಿಗೆ! ಸುಗ್ರೀವನಿಗೆ ತಾರೆಯೆಂದರೆ ಆದರ, ಅಂಗದನೆಂದರೆ ಮಮತೆ. ತಾರೆ ವಾಲಿಯಲ್ಲಿ ಮಾತಾಡ್ತಾಳೆ, “ಯುದ್ಧದಲ್ಲಿ ವೀರ ನೀನು, ಕಪಿಗಳಲ್ಲಿ ಶ್ರೇಷ್ಠ ನೀನು. ಯಾಕೆ ಪ್ರಿಯ ಪತ್ನಿ ನಿನ್ನ ಮುಂದೆ ನಿಂತು, ನಿನ್ನನ್ನು ಮಾತನಾಡಿಸಿದರೂ ಮಾತನಾಡುತ್ತಿಲ್ಲ ಯಾಕೆ? ಮಾತನಾಡು ನನ್ನಲ್ಲಿ. ಏಳು ಕಪಿಶ್ರೇಷ್ಠನೇ, ಚಕ್ರವರ್ತಿಗಳು ಈ ಭೂಮಿಯ ಮೇಲೆ ಮಲಗುವರೇ? ನೀನು ಮಲಗಬೇಕಾದದ್ದು ಹಂಸತೂಲಿಕಾತಲ್ಪದ ಮೇಲೆ. ಮಣ್ಣಿನಲ್ಲಿ ಮಲಗಿದೆಯಲ್ಲ? ನನಗಿಂತ ಭೂಮಿಯನ್ನು ಇಷ್ಟಪಟ್ಟು ತಬ್ಬಿ ಮಲಗಿದೀಯಾ? ಎಂದು ವಿಲಪಿಸ್ತಾಳೆ. ನಿನ್ನ ಬದುಕಿನ ಪುಣ್ಯಗಳ ಫಲವಾಗಿ ಆ ಪುಣ್ಯನಗರಿ ನಿನ್ನನ್ನು ಕೈಬೀಸಿ ಕರೆದಿರಬಹುದು. ಆದರೆ ನಾನು ಹತಳಾಗಿಹೋದೆ. ನಿರಾಶಳು ನಾನು. ಆನಂದ ನನಗಿಲ್ಲ ಇನ್ನು. ನನ್ನ ಹೃದಯ ವಜ್ರದ್ದಾಗಿರಬಹುದು. ಯಾಕೆಂದರೆ ನಿನ್ನ ಸಾವನ್ನು ಕಂಡಾಗಲೂ ಸಾವಿರ ಚೂರಾಗಿ ಒಡೆದು ಹೋಗುವುದಿಲ್ಲವಲ್ಲ..! ಶೋಕದಿಂದ ಇಷ್ಟನ್ನು ಹೇಳಿ, ವಿವೇಕದಿಂದ ಮಾತಾಡ್ತಾಳೆ. ಸುಗ್ರೀವನ ಪ್ರಿಯಪತ್ನಿಯನ್ನು ಅಪಹರಿಸಿದೆ, ಸುಗ್ರೀವನನ್ನು ನೂಕಿದೆ ಹೊರಗೆ. ತಪ್ಪು!! ಈ ಪಾಪದ ಫಲ ನಿನಗಿದೋ ಬಂತು. ಇದು ಅದೇ, ಬೇರೇನೂ ಅಲ್ಲ. ಇದೆರಡು ಪಾಪದ ಫಲವಾಗಿ ನೀನು ಹತನಾದೆ. ನಾನು ಎಷ್ಟು ಬಾರಿ ಹೇಳಿದೆ ನಿನಗೆ. ನನ್ನನ್ನೇ ಬೈದೆ, ತೆಗಳಿದೆ. ನಾನು ನಿನ್ನ ಹಿತೈಷಿಣಿಯಾಗಿದ್ದೆ. ನಿನಗೇನು ಇನ್ನು? ನಾನು ಇಲ್ಲಿ ಹತಳಾಗಿ ಹೋಗ್ತೇನೆ. ವೈಧವ್ಯದ ಬದುಕಿನ್ನು. ಶೋಕ ಸಂತಾಪ ದೈನ್ಯ! ಹೇಗೆ ಬದುಕಲಿ ನಾನು? ನಿನ್ನ ಮುದ್ದಿನಲ್ಲಿ ಬೆಳೆದ ಅಂಗದನ ಕಥೆಯೇನು? ಮಗನೇ ನಿನ್ನ ತಂದೆಯನ್ನು ಕಣ್ತುಂಬ ನೋಡಿಕೋ ಎಂದಳು.

ರಾಮನನ್ನು ಕುರಿತು ಹೇಳ್ತಾಳೆ ತಾರೆ, ರಾಮ ತನ್ನ ಕರ್ತವ್ಯವನ್ನು ಪೂರ್ತಿಮಾಡಿದೆ. ಸುಗ್ರೀವನನ್ನು ಕುರಿತು, ನಿನಗೆ ರುಮೆ ಸಿಗ್ತಾಳೆ. ನಿಷ್ಕಂಟಕವಾದ ರಾಜ್ಯ ಸಿಗ್ತದೆ ಅನುಭವಿಸು. ನಿನ್ನಣ್ಣ ಇನ್ನಿಲ್ಲ ಎಂದು ಹೇಳಿದಳು. ಮತ್ತೆ ವಾಲಿಯನ್ನು ಕುರಿತು, ಇಷ್ಟೆಲ್ಲ ವಿಲಪಿಸುವ ನನ್ನ ಕುರಿತು ಯಾಕೆ ಒಂದೂ ಮಾತಾಡ್ತಾ ಇಲ್ಲ? ಹೋಗಲಿ ನಿನ್ನನೇಕ ವಾನರಿಯರನ್ನಾದರು ಮಾತನಾಡಿಸು ಎಂದಾಗ ಅವರೆಲ್ಲ ಅತ್ತರು. ನಿನ್ನ ಮಗನನ್ನು ಬಿಟ್ಟು ಎಲ್ಲಿಗೆ ಹೊರಟೆ? ನಾನೇನು ಮಾಡಿದೆ ನಿನಗೆ? ನಮ್ಮಿಬ್ಬರನ್ನು ಬಿಟ್ಟು ಹೋಗುವುದಾದರೂ ಏಕೆ? ನಾನು ನಿನ್ನವಳಾದಾಗಿನಿಂದ ಏನಾದರೂ ತಪ್ಪು ಮಾಡಿದೇನಾ? ತಪ್ಪು ಮಾಡಿದರೆ, ತಪ್ಪು ಮಾತನಾಡಿದ್ದರೆ ಕ್ಷಮಿಸು ಎಂದು ಏನೂ ತಪ್ಪು ಮಾಡದ ತಾರೆ ಕೇಳಿದಳು. ವಾಲಿಯ ತಪ್ಪನ್ನು ತಿದ್ದಲು ಪ್ರಯತ್ನಿಸಿದವಳು. ಪ್ರಾಯೋಪವೇಶಕ್ಕೆ ನಿರ್ಧರಿಸಿದಳು. ಅಂದರೆ ನಿಜವಾದ ಅರ್ಥದ ಆಮರಣ ಉಪವಾಸ..!

ಆಗ ಹನುಮಂತ ತಾರೆಯನ್ನು ನೋಡಿ, ಅಷ್ಟೆತ್ತರದ ತಾರೆ ಇಂದು ಭೂಮಿಯಲ್ಲಿ ಬಿದ್ದಿದ್ದಾಳೆ. ಸಂತೈಸಿದ ಹನುಮ, ಇದು ಅನಿವಾರ್ಯ. ಕರ್ಮಫಲ ತಪ್ಪದು ಜೀವಕ್ಕೆ. ಅದು ಯಾರನ್ನೂ ಬಿಡದು, ಶುಭವಾಗಲಿ, ಅಶುಭವಾಗಲಿ. ತನ್ನ ಸಮಯಕ್ಕೆ ಬಂದು ಅದು ಫಲವನ್ನು ಕೊಡುವುದನ್ನು ಯಾರೂ ತಪ್ಪಿಸಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ನಿನ್ನ ಗಂಡನಿಗೆ ಮಾತ್ರವಲ್ಲ, ಎಲ್ಲರಿಗೂ ಹೀಗೆ. ನೀನ್ಯಾಕೆ ಶೋಕಿಸ್ತೀಯಾ? ಯಾರಿಗೆ ಯಾರುಂಟು ಹೇಳು..? ದೇಹವೆಂಬುದು ನೀರಮೇಲಣ ಗುಳ್ಳೆ. ಯಾರು ಶಾಶ್ವತ ಹೇಳು. ಹೋಗಲೆಬೇಕು ಒಂದಲ್ಲ ಒಂದು ದಿನ, ಅಂಗದನ ಭವಿಷ್ಯವನ್ನು ಚಿಂತಿಸು. ಉಪವಾಸ ಬಿದ್ದು ಪ್ರಾಣಬಿಟ್ಟರೆ ಅಂಗದನ ಕಥೆಯೇನು ಎಂದು ಹನುಮಂತನು ಅವಳ ಕರ್ತವ್ಯಪ್ರಜ್ಞೆ ಮಾಡಿದನು. ವಾಲಿಗೆ ಶ್ರೇಷ್ಠಗತಿ ಪ್ರಾಪ್ತವಾಗಿದೆ. ಚಿಂತಿಸಬೇಡ ವಾಲಿಯ ಕುರಿತು. ನಮಗೆಲ್ಲ ಒಡತಿ ನೀನು, ವಾನರ ಶ್ರೇಷ್ಠನ ಪತ್ನಿ. ಮುಂದಿನದನ್ನು ಆಲೋಚಿಸು. ವಾಲಿಗೆ ಸಂಸ್ಕಾರವಾಗಬೇಕು, ಅಂಗದನಿಗೆ ಅಭಿಷೇಕವಾಗಬೇಕು ಎಂದನು ಹನುಮಂತ.

ಆಗ ತಾರೆ ಹನುಮಂತನಿಗೆ ಹೇಳಿದಳು, ಬದುಕಿರುವ ಅಂಗದನಂಥಹ ನೂರು ಪುತ್ರರಿಗಿಂತ ಸತ್ತ ಪತಿಯ ಆಲಿಂಗನ ಸತಿಗೆ ಶ್ರೇಷ್ಠ ಎಂದಳು. ಯಾಕೆಂದರೆ ಸತಿ ಪತಿ ಬಂಧವಿದು. ಕಪಿರಾಜ್ಯ ಮುಂದೇನು, ಅಂಗದನಿಗೇನಾಗಬೇಕೆನ್ನುವುದನ್ನು ಸುಗ್ರೀವನಲ್ಲಿ ಕೇಳು, ನನ್ನಲ್ಲಲ್ಲ. ವಾಲಿ ಇಲ್ಲದಿದ್ದರೆ ಸುಗ್ರೀವನೇ ಕಪಿಗಳಿಗೆ. ನನಗಿನ್ನೇನೂ ಬೇಡ ಹನುಮಂತ, ಪತಿಯೊಟ್ಟಿಗಿನ ವೀರಶಯನ ಬೇಕಾದದ್ದು ಎಂದು ಹೇಳಿದಳು. ಅಷ್ಟು ಹೊತ್ತಿಗೆ ವಾಲಿಗಿ ಎಚ್ಚರವಾಯಿತು. ಮೇಲುಸಿರು ಬಂದಿದೆ. ಸುಗ್ರೀವನು ಕಂಡನು, ಅವನ ಹಿಂದೆ ತನ್ನ ಮಗ ಅಂಗದ. ಪ್ರೀತಿತುಂಬಿ ಮಾತನಾಡಿದ ವಾಲಿ, ಸುಗ್ರೀವಾ ನನ್ನ ಕುರಿತು ತಪ್ಪು ತಿಳ್ಕೋಬೇಡ, ಯಾಕೆಂದರೆ ಇದು ವಿಧಿ. ಬಹುಶಃ ಹೀಗೆ ಸಾಯುವ ವಿಧಿ ನನಗಿತ್ತು. ವಿಧಿ ನನ್ನ ಬುದ್ಧಿಗೆ ಮಂಕುಕವಿಸಿತ್ತು. ತಪ್ಪನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡ್ತಾನೆ ವಾಲಿ. ತಮ್ಮಾ ನಮಗಿಬ್ಬರಿಗೂ ಒಟ್ಟಿಗೆ ಸುಖಪಡುವ ಯೋಗವೇ ಇಲ್ಲವಲ್ಲೋ..! ನಾನು ರಾಜಾಧಿರಾಜನಾಗಿ ಮೆರಿತಾ ಇದ್ದೆ, ನೀನು ಕಾಡಪಾಲಾಗಿದ್ದೆ. ಈಗ ನೀನು ಕಿಷ್ಕಿಂಧೆಗೆ ಬಂದೆ, ನಾನು ಯಮಲೋಕಕ್ಕೆ ಹೊರಟೆ. ವಾನರರ ರಾಜ್ಯಕ್ಕೆ ಅಧಿಪತಿಯಾಗಬೇಕು ನೀನು, ಅದ ನೋಡಲು ನಾನಿಲ್ಲವಲ್ಲ! ಹೇಗಿದ್ದೆವು, ಹೇಗಾಯಿತು ಎಂದು ವ್ಯಥಿಸ್ತಾನೆ. ಎಲ್ಲವನ್ನೂ ಬಿಟ್ಟು ಹೋಗ್ತಾ ಇದ್ದೇನೆ, ರಾಜ್ಯಲಕ್ಷ್ಮಿ, ಕೀರ್ತಿ, ವಿಜಯ, ಬಂಧುಬಳಗ ಎಲ್ಲವನ್ನೂ ಬಿಟ್ಟು ಹೋಗ್ತೇನೆ. ರಾಜನೇ, ಈ ಸ್ಥಿತಿಯಲ್ಲಿ, ನಾನು ಹೇಳುವುದನ್ನು ನೀನು ನಡೆಸಬೇಕು. ಅಂಗದನನ್ನು ತೋರಿಸಿ, ಇನ್ನೂ ಚಿಕ್ಕವನು, ಬಾಲ. ಇಂಥಹವನು ಕಣ್ಣೀರಿಡ್ತಾ ನೆಲದ ಮೇಲೆ ಬಿದ್ದಿದಾನೆ. ನನ್ನ ಮಗ ಅವನು, ಆದರೆ ಇನ್ನು ಮುಂದೆ ನೀನು ಅವನನ್ನು ಸ್ವಂತ ಮಗನಂತೆ ನೋಡಬೇಕು. ಅವನಿಗಿನ್ನು ನಾನಿಲ್ಲ, ನೀನೇ ಎಲ್ಲ. ಸುಗ್ರೀವ, ಅಂಗದನಿಗೆ ನೀನೇ ದಾತ. ಎಲ್ಲೆಡೆಯಿಂದ ಅವನನ್ನು ಕಾಪಾಡುವವನು ನೀನೇ. ಅವನಿಗೆ ಭಯವಾದಾಗ, ಆಪತ್ತು ಬಂದಾಗ ರಕ್ಷಿಸುವವನು ನೀನು. ಅಷ್ಟನ್ನೇ ಹೇಳಿ ನಿಲ್ಸೋದಿಲ್ಲ ವಾಲಿ, ಅಂಗದನಿಗೆ ಏನು ಮಾಡ್ಬೇಕು ಮತ್ತು ಏನು ಮಾಡ್ತಾನೆ ಅಂತನೂ ಹೇಳ್ತಾನೆ. ನೋಡು ಸುಗ್ರೀವ, ತಾರೆಯ ಪುತ್ರನಾದ ಈ ಅಂಗದನು ನಿನಗಿಂತ ಕಡಿಮೆ ಪರಾಕ್ರಮದವನಲ್ಲ. ನೀನೆಂತಹ ಪರಾಕ್ರಮಿಯೋ ಇವನೂ ಅಷ್ಟೇ ಪರಾಕ್ರಮಿ. ಹಾಗಾಗಿ ಅವನು ಮುಂದೆ ರಾಕ್ಷಸ ವಧೆಯ ಸಂಧರ್ಭದಲ್ಲಿ ನಿನಗಿಂತ ಮುಂದೆ ನಿಂತು ಸಾಹಸಕಾರ್ಯಗಳನ್ನ ಮಾಡ್ತಾನೆ. ನಾನಿದ್ದರೆ ಎಂತಹ ಕರ್ಮಗಳನ್ನ ಮಾಡ್ತಿದ್ನೋ ಅಂತಹದೇ ಮಹತ್ಕರ್ಮಗಳನ್ನ ಮಾಡ್ತಾನೆ ಅಂಗದ. ಹಾಗಾಗಿ ಇವನನ್ನು ಬಳಸಿಕೋ ಎಂದು ಹೇಳಿ ತಾರೆಯ ಬಗ್ಗೆ ಹೇಳ್ತಾನೆ.

ಸುಷೇಣನ ಸುಪುತ್ರಿ ತಾರೆ. ಒಂದು ಸೂಕ್ಷ್ಮವಾದ ಜಟಿಲ ವಿಷಯ ಇದ್ದರೆ ಅದನ್ನ ತೀರ್ಮಾನ ಮಾಡಲಿಕ್ಕೆ ಇವಳಿಗೆ ಸಮನಾದವರು ನಮ್ಮ ಕಿಷ್ಕಿಂದೆಯಲ್ಲಿ ಯಾರೂ ಇಲ್ಲ. ರಾಜನೀತಿಯ ಕಗ್ಗಂಟುಗಳು, ರಾಜ್ಯಭಾರ ಮಾಡುವಾಗ ಬರುವ ಸವಾಲುಗಳು, ಸಮಸ್ಯೆಗಳನ್ನ ಬಿಡಿಸಲಿಕ್ಕೆ ತಾರೆ ನಿನಗೆ ಸಹಾಯವಾಗ್ತಾಳೆ. ಅವಳು ತುಂಬಾ ಸೂಕ್ಷ್ಮಗ್ರಾಹಿ. ನಿಮಿತ್ತಗಳನ್ನು, ಶಕುನಗಳನ್ನು ಗುರುತಿಸಿ ಮುಂದಾಗಬಲ್ಲ ಅನಾಹುತಗಳನ್ನು ಹೇಳಬಲ್ಲಳು. ಅವಳ ಚಾತುರ್ಯಗಳನ್ನು ಬಳಸಿಕೊ. ವಾಲಿ ಸ್ಪಷ್ಟವಾಗಿ ಹೇಳ್ತಾನೆ ಸುಗ್ರೀವನಿಗೆ. ಇವಳು ಏನನ್ನು ಮಾಡ್ಬೇಕು ಹೇಳ್ತಾಳೋ ಅದನ್ನ ಯಾವ ಸಂಶಯಕ್ಕೂ ಎಡೆಯಿಲ್ಲದೇ, ಯಾವ ವಿಮರ್ಶೆಯನ್ನೂ ಮಾಡದೇ ಮಾಡಿಬಿಡು. ಈವರೆಗೆ ತಾರೆ ಹೇಳಿದ್ದು ಆಗಿದ್ದಿಲ್ಲ ಎನ್ನುವುದು ಇಲ್ಲ. ಹೀಗೇ ಆಗ್ತದೆ ಅಂತ ಅವಳು ಹೇಳಿದ್ದರೆ ಅದು ಹಾಗೇ ಆಗಿದೆ. ತಾರೆಯನ್ನು ಉಪೇಕ್ಷೆ ಮಾಡ್ಬೇಡ ಎಂದು ಹೇಳಿ, ಸುಗ್ರೀವನಿಗೆ ಸಲ್ಲುವಂಥ ಮಾತೊಂದನ್ನ ಹೇಳ್ತಾನೆ. ನೋಡು ಸುಗ್ರೀವ, ರಾಮನ ಕಾರ್ಯವನ್ನು ಮಾಡ್ಬೇಕು. ಆ ವಿಷಯದಲ್ಲಿ ಶಂಕೆ ಮಾಡ್ಬೇಡ. ಅಷ್ಟು ದೊಡ್ಡ ಉಪಕಾರ ಅವನಿಂದ ನಿನಗೆ ಆಗಿದೆ. ಮಾಡದಿದ್ದರೆ ಅಧರ್ಮವಾದೀತು ಅದು. ಪಾಪ ತಟ್ಟೀತು. ಅಷ್ಟು ಮಾತ್ರವಲ್ಲ, ಅವನು ಕುಪಿತನಾದರೆ ನಿನಗೆ ಬದುಕಿಲ್ಲದೇ ಹೋದೀತು. ಕೊನೆಯಲ್ಲಿ ಹೇಳ್ತಾನೆ ಸುಗ್ರೀವನಿಗೆ, ನೋಡು, ಈ ಕಾಂಚನಮಾಲೆ ಇಂದ್ರ ನನಗೆ ಕೊಟ್ಟಿರುವಂಥದ್ದು. ಈ ಮಾಲೆಯಲ್ಲಿ ಅತ್ಯುತ್ಕರ್ಷದ ಲಕ್ಷ್ಮಿಯು ನೆಲೆಸಿದಾಳೆ. ನಾನು ಸತ್ತರೆ ಇದರ ಪ್ರಭಾವ ಹೋಗಿಬಿಡ್ತದೆ. ಹಾಗಾಗಿ ಸುಗ್ರೀವ, ನಾನು ಸಾಯುವುದರ ಒಳಗೆ ಇದೋ ಈ ಮಾಲೆ ನಿನಗೆ. ನೀನು ಧಾರಣೆ ಮಾಡು ಎಂದು ವಾಲಿ ತೆಗೆದುಕೊಟ್ಟಾಗ ಭ್ರಾತೃತ್ವ ಪರಿಪೂರ್ಣವಾಯಿತು.

ಸುಗ್ರೀವನ ಮುಖ ಕಂದಿತು. ಅವನ ವಿಜಯೋತ್ಸಾಹ ಮಣ್ಣು ಪಾಲಾಯಿತು. ಸುಗ್ರೀವನಿಗೆ ಅಣ್ಣನಲ್ಲಿ ಅದೇ ಹಳೆಯ ಪ್ರೀತಿ ಉಕ್ಕಿ ಬರ್ತಾಇದೆ. ಸುಗ್ರೀವನೆಂಬ ಸೂರ್ಯನಿಗೆ ಗ್ರಹಣ ಹಿಡಿಯಿತು. ವಾಲಿ ಏನು ಹೇಳ್ತಾನೋ ಹಾಗೆಯೇ ಮಾಡ್ತಾನೆ ಸುಗ್ರೀವ. ಅಣ್ಣನ ಅಪ್ಪಣೆ ಪಡೆದು ಅವನಿತ್ತ ಮಾಲೆಯನ್ನ ಧಾರಣೆ ಮಾಡ್ತಾನೆ.

ಕಾಂಚನ ಮಾಲೆಯನ್ನ ಸುಗ್ರೀವನಿಗೆ ಕೊಟ್ಟ ವಾಲಿ ಕೊಟ್ಟಕೊನೆಯದಾಗಿ ಅಂಗದನಿಗೆ ಸಂದೇಶವನ್ನ ಕೊಡ್ತಾನೆ. ಪ್ರಿಯ ಪುತ್ರನಾದ ಅಂಗದನನ್ನ ಕರೆದು ಹೇಳ್ತಾನೆ. ದೇಶಕಾಲಗಳನ್ನು ಆಧರಿಸು. ಯಾವಾಗಲೂ ನೀನು ಎಲ್ಲಿದ್ದೀಯೆ? ಇದು ಯಾವ ಸಮಯ? ಎಂಬ ಎಚ್ಚರವಿರಬೇಕು. ಸುಖ-ದುಃಖಗಳನ್ನು, ಪ್ರಿಯ-ಅಪ್ರಿಯಗಳನ್ನು ಸಹಿಸು. ಸುಗ್ರೀವನ ವಶವರ್ತಿಯಾಗು. ಆದರೆ ನನ್ನ ಜೊತೆಗೆ ಯಾವ ಮುದ್ದು ಇತ್ತೋ ಅದನ್ನು ಸುಗ್ರೀವನಿಂದ ನಿರೀಕ್ಷೆ ಮಾಡಬಾರದು. ಸುಗ್ರೀವನಿಗೆ ಯಾರು ಆಗದವರೋ ಅವರ ಜೊತೆ ಸೇರಬೇಡ. ಇನ್ನು ಮುಂದೆ ಸುಗ್ರೀವ ದೊರೆ. ನೀನು ಅವನ ಕೆಳಗೆ ಕೆಲಸ ಮಾಡತಕ್ಕಂತವನು. ರಾಜ್ಯದ ಮತ್ತು ದೊರೆಯ ಹಿತವೇನೋ ಅದಕ್ಕೆ ಪೂರಕವಾಗಿ ಕೆಲಸ ಮಾಡ್ಬೇಕು. ಸಿಂಹಾಸನಕ್ಕೆ, ಸುಗ್ರೀವನಿಗೆ ಯಾವುದು ಒಳಿತೋ ಅದನ್ನು ಮಾಡುವಲ್ಲಿ ನಿನ್ನ ಗಮನ ಇರಬೇಕೇ ಹೊರತು ಬೇರೆರೀತಿಯಲ್ಲ. ಮನಸ್ಸು ಇಂದ್ರಿಯ ನಿಗ್ರಹದಲ್ಲಿಟ್ಟುಕೋ. ಸುಗ್ರೀವನಿಗೆ ಮೀರಿ ವರ್ತಿಸಬೇಡ. ಅವನಿಗೆ ವಶವಾಗಿರು. ವಾಲಿಯ ಕೊನೆಯ ಮಾತು. ಅತಿಪ್ರೀತಿ ಒಳ್ಳೆಯದಲ್ಲ. ಪ್ರೀತಿ ಇಲ್ಲದಿರುವುದೂ ಒಳ್ಳೆಯದಲ್ಲ. ಅಪ್ರೀತಿ – ಅತಿಪ್ರೀತಿ ಇವೆರಡರ ಮಧ್ಯೆ ನಿನ್ನ ಬದುಕಿರಲಿ. ಇಷ್ಟು ಹೇಳುತ್ತಿರುವಾಗಲೇ ವಾಲಿಯ ಕಣ್ಣು ಅಗಲವಾಗಿ ಅರಳಿತು, ರಾಮ ಶರವು ಅವನನ್ನು ಮುಕ್ತಿಗೆ ಕರೆಯಿತು. ತನ್ನ ಹಲ್ಲುಗಳನ್ನು ಅಗಲವಾಗಿ ಕಿರಿದು ವಾಲಿಯು ತನ್ನ ಅಸುವನ್ನು ತೊರೆದನು. ವಾಲಿಯ ಪ್ರಾಣತ್ಯಾಗವಾಯಿತು. ಆಗ ವಾನರರೆಲ್ಲರೂ ಆಕ್ರಂದನ ಮಾಡ್ತಾರೆ. ಅವರೇನು ಒಬ್ಬರಿಗೊಬ್ಬರು ಮಾತಾಡಿಕೊಳ್ತಾರೆ ಅಂದ್ರೆ ವಾಲಿ ಇಲ್ಲದ ಕಿಷ್ಕಿಂಧೆಯು ಶೂನ್ಯ. ಯಾವ ವಾಲಿ ಎಲ್ಲಿಂದಲಾದರೂ ಆಕಾಶದಲ್ಲಿ ಹಾರಿ ಬಂದರೆ ಅವನ ಜೊತೆ ಹೂವಿನ ಮಳೆ ಬರ್ತಾಯಿತ್ತು, ಯಾವ ವಾಲಿ ಇಲ್ಲಿಂದ ಎಲ್ಲಿಗಾದರೂ ಹಾರಿದರೆ ವೃಕ್ಷಗಳೇ ಕಿತ್ತುಬರ್ತಾಯಿತ್ತು ಅಂತಹ ವಾಲಿ ಇನ್ನಿಲ್ಲ.

ಒಂದು ಯುದ್ಧವನ್ನ ಉಲ್ಲೇಖ ಮಾಡಿ ವಾನರರು ಗೋಳಾಡ್ತಾರೆ. ಗೋಲಭನಿಗೂ ವಾಲಿಗೂ ವಿಶ್ರಾಂತಿಯಿಲ್ಲದೇ ನಿರಂತರವಾಗಿ 15ವರ್ಷಗಳ ಕಾಲ ಯುದ್ಧವಾಯ್ತು. 16ನೇ ವರ್ಷ ಗೋಲಭನು ಬಿದ್ದ. ಅಂತಹ ವಾಲಿಗೂ ಪತನವೆಂಬುದು ಇದೆಯಾ? ನಿಜಕ್ಕೂ ಆತ ಸತ್ತಿದ್ದು ಹೌದಾ? ಎಂತಹ ಆಪತ್ತು ಬಂದರೂ ಸರ್ವಾಭಯಕರನಾಗಿದ್ದ ವಾಲಿ ಇನ್ನೆಲ್ಲಿ? ಎಂದು ವಾನರರು ಗೋಳಾಡ್ತಾರೆ. ಅವರು ರಾಮನನ್ನು ಕಂಡಾಗ ಸಿಂಹನಿರುವ ಕಾಡಿನಲ್ಲಿ ಗೋವುಗಳು ಭಯಪಟ್ಟಂತೆ ಭಯಗೊಂಡರು. ವಾಲಿಯ ಜೊತೆಯಿದ್ದ ವಾನರರು.

ಅತ್ತ ತಾರೆ ಧರೆಗುರುಳ್ತಾಳೆ. ಕಪಿರಾಜ ವಾಲಿಯ ಮುಖವನ್ನು ಆಘ್ರಾಣಿಸಿ ಗತಿಸಿದ ವಾಲಿಗೆ ಹೇಳ್ತಾಳೆ. ನನ್ನ ಮಾತನ್ನ ನಡೆಸದೆ ಯಾಕೆ ಬಂದು ಈ ಮಲಗಲು ಯೋಗ್ಯವಲ್ಲದ ವಿಷಮ ಭೂಮಿಯಲ್ಲಿ ಮಲಗಿದೆ? ವಿಧಿಯು ಸುಗ್ರೀವನ ವಶವಾಯ್ತು ಎಂದು ಹೇಳ್ತಾ ನೋಡು, ಕಪಿ, ಕರಡಿಗಳೆಲ್ಲ ಗೋಳಾಡ್ತಾಯಿದಾರೆ. ಅಂಗದ ಗೋಳಾಡ್ತಾಯಿದಾನೆ. ನಾನು ಗೋಳಾಡ್ತಾ ಇದೇನೆ ನಿನಗೆ ಎಚ್ಚರವಾಗಬಾರದ? ಎಷ್ಟೋ ವೀರರನ್ನು ಕೊಂದ ಇದೇ ಭೂಮಿಯಲ್ಲಿ ನೀನೇ ಕೊನೆಯಲ್ಲಿ ಮಲಗಿದೆ. ಅನಾಥಳಾದ ನನ್ನನ್ನು ಬಿಟ್ಟು ಎಲ್ಲಿ ಹೊರಟೆ? ಎಂದು ಕೇಳಿ ಒಂದು ವಿಚಿತ್ರ ಮಾತನ್ನು ಆಡ್ತಾಳೆ. ಹೆಣ್ಣನ್ನು ವೀರನಿಗೆ ಕೊಡಬಾರದು. ಏಕೆಂದರೆ, ನೋಡಿ ನನ್ನ ಅವಸ್ಥೆಯನ್ನು, ಪರಿಸ್ಥಿತಿಯನ್ನು. ಏನಾಯಿತು ನನಗೆ. ವೀರರ ಪತ್ನಿಯರ ಬದುಕು ಕೆಲವೊಮ್ಮೆ ಅಲ್ಲೆಲ್ಲೋ ಆಕಾಶದಲ್ಲಿ ಮೋಡಗಳ ಮೇಲೆ, ಕೆಲವೊಮ್ಮೆ ಪಾತಾಳದಲ್ಲಿ. ಎಷ್ಟೋ ವೀರರ ಕಥೆ ಇದೇ ಆಗಿದೆ ಹಾಗಾಗಿ ಶೂರನಿಗೆ ಹೆಣ್ಣು ಕೊಡಬಾರದು ಎಂದೆಲ್ಲಾ ಹೇಳಿ, ತನ್ನ ಮುಂದಿನ ಬದುಕನ್ನು ಯೋಚಿಸಿ ಬಹುವಾಗಿ ದುಃಖಪಡ್ತಾಳೆ. ವಾಲಿ ಬಗ್ಗೆ ಒಂದು ಮಾತನ್ನ ಹೇಳ್ತಾಳೆ. ವಾಲಿ ನನ್ನ ಪತಿಯೂ ಹೌದು, ನನ್ನ ಸಖನೂ ಹೌದು. ಮೊದಲು ಸಖ, ಬಳಿಕ ಪತಿ. ಸಹಜವಾಗಿ ನನಗಿಷ್ಟ ಅವನು. ಅಂತಹ ವಾಲಿ ಇನ್ನಿಲ್ಲ. ವಿಧವೆಯಾದೆ ತಾನು ಎಂದೆಲ್ಲ ವಿಲಪಿಸ್ತಾಳೆ ತಾರೆ. ಮತ್ತೆ ನೋಡ್ತಾಳೆ. ತನ್ನ ದೇಹದಿಂದಲೇ ಹರಿದ ರಕ್ತದಲ್ಲಿ ತೋಯ್ದು ಹೋಗಿದಾನೆ ವಾಲಿ. ಒಂದಷ್ಟು ರಕ್ತ ಮತ್ತೆ ಒಂದಷ್ಟು ಯುದ್ಧಭೂಮಿಯ ಧೂಳು ಅವನನ್ನು ಮುತ್ತಿದೆ. ವಾಲಿಯನ್ನು ಆಲಿಂಗಿಸಲಿಕ್ಕೆ ಪ್ರಯತ್ನ ಪಡ್ತಿದಾಳೆ ಆದರೆ ಆಗ್ತಾಇಲ್ಲ ಆಕೆಗೆ. ಹೇಳ್ತಾಳೆ, ರಾಮ ಬಿಟ್ಟ ಒಂದು ಬಾಣದಲ್ಲಿ ಸುಗ್ರೀವನ ಭಯ ದೂರಾಯಿತು, ಆದರೆ ನನಗೆ ನನ್ನ ಗಂಡನನ್ನು ತಬ್ಬಿಕೊಳ್ಳಲಿಕ್ಕೂ ಸಾಧ್ಯವಾಗ್ತಾ ಇಲ್ಲ ಎಂದಾಗ ಸೇನಾಪತಿ ನೀಲ ಮುಂದೆ ಬಂದು ವಾಲಿಯ ಎದೆಯಲ್ಲಿ ನೆಟ್ಟ ಬಾಣವನ್ನು ಕಿತ್ತು ತೆಗೆದಾಗ ಕೆಂಪಾದ ಬಾಣವು ಸಂಜೆಯ ಸೂರ್ಯನ ರಶ್ಮಿಯಂತೆ ಕಂಡಿತು. ಬಾಣವನ್ನು ತೆಗೆಯುತ್ತಿದ್ದಂತೆಯೇ ವಾಲಿಯ ಮೈಯ ಎಲ್ಲಾ ಗಾಯಗಳಿಂದ ರಕ್ತವು ಸ್ರವಿಸಿತು. ಹಾಗೆ ಮೈತುಂಬಾ ರಕ್ತ ಮತ್ತು ಧೂಳಾದ ವಾಲಿಯನ್ನು ತಾರೆ ಒರೆಸ್ತಾಳೆ. ತನ್ನ ಕಣ್ಣೀರಿನಿಂದ ತೊಳೀತಾಳೆ ವಾಲಿಯನ್ನು. ಅಂಗದನನ್ನ ಕರೀತಾಳೆ. ಆಗಲೂ ಹೇಳ್ತಾಳೆ ಒಂದು ಪಾಪಕರ್ಮ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿತು. ಇದು ಕೊನೆಯ ಅವಕಾಶ ನಮಸ್ಕಾರ ಮಾಡು ಎಂದು ಅಂಗದನಿಗೆ ಹೇಳಿದಾಗ ಅಂಗದನು ತಾನು ಅಂಗದ ಎಂದು ಹೇಳಿ ನಮಸ್ಕಾರವನ್ನು ಮಾಡ್ತಾನೆ. ಆಗ ಪುನಃ ಕೇಳ್ತಾಳೆ ತಾರೆ. ಯಾಕೆ ನೀನು ಅವನಿಗೆ ದೀರ್ಘಾಯುಷಿಯಾಗು ಅಂತ ಆಶೀರ್ವಾದ ಮಾಡ್ತಾಯಿಲ್ಲ? ಎಂಬುದಾಗಿ ಕೇಳಿ ಇದು ಯುದ್ಧ ಯಜ್ಞ. ಯಜ್ಞದ ಕೊನೆಯಲ್ಲಿ ಅವಭೃತ ಸ್ನಾನ ಮಾಡಿದೀಯೆ ನೀನು. ಪತ್ನಿಯ ಜೊತೆಗೆ ಮಾಡಬೇಕು ಅಂತ ಲೆಕ್ಕ. ನೀನು ರಾಮಬಾಣವೆಂಬ ಅವಭೃತ ಸ್ನಾನ ಮಾಡುವಾಗ ನನ್ನನ್ನು ಮರೆತೆ ಏಕೆ? ಇದೇ ಬಾಣದಲ್ಲಿ ನಾನು ಹೋಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿ ಆ ಕಾಂಚನಮಾಲೆಯನ್ನು ಹುಡುಕ್ತಾಳೆ. ಆದರೂ ಕೂಡ ಸತ್ತ ಬಳಿಕವೂ ರಾಜ ಕಳೆ ನಿನ್ನಿಂದ ದೂರವಾಗಿಲ್ಲ ಎಂದು ಹೇಳಿ, ನನ್ನ ಮಾತನ್ನು ಕೇಳಿದ್ರೆ ನೀನು ಉಳಿಯುತ್ತಿದ್ದೆ, ನಾನೂ ಉಳಿಯುತ್ತಿದ್ದೆ. ಅಂಗದನೂ ಚೆನ್ನಾಗಿರ್ತಿದ್ದ. ಈಗ ನೀನು ಸತ್ತೆ ಮಾತ್ರವಲ್ಲ, ನಮ್ಮನ್ನೂ ಕೊಂದಹಾಗಾಯ್ತು ನೀನು ಎಂಬುದಾಗಿ ತಾರೆ ವಿಲಪಿಸುವಾಗ ಅದೆಲ್ಲವನ್ನು ಕಂಡ ಸುಗ್ರೀವ ಬದುಕಿನ ಶ್ರದ್ಧೆಯನ್ನು ಕಳೆದುಕೊಂಡ. ಸುಗ್ರೀವನಿಗೆ ಬದುಕೇ ಬೇಡವಾಯಿತು. ಇಂತಹ ದುಃಖವನ್ನು ಕಿಷ್ಕಿಂಧೆಗೂ, ತಾರೆ, ಅಂಗದರಿಗೂ ಕೊಟ್ಟ ಮೇಲೆ ತನಗೆ ಬದುಕು ತರವಲ್ಲ ಎಂದು ಸುಗ್ರೀವನು ಸಾವಿನ ಕಡೆಗೆ ವಾಲಿದಾಗ ಯಾರು ಅವನನ್ನು ಉಳಿಸಿದರು ಎಂಬುದನ್ನು ಮುಂದಿನ ಪ್ರವಚನದಲ್ಲಿ ನೋಡೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments