ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಪೂರ್ಣತೆಯ ಸಮಯ ಅತ್ಯಂತ ಸನಿಹದಲ್ಲಿದೆ. ಹದಿನಾಲ್ಕು ವರ್ಷಗಳ ರಾಮನ ವನವಾಸದ ಪೂರ್ಣತೆಯ ಸಮಯ. ಇನ್ನೇನು ಸಿದ್ಧವಾಗಿದೆ. ಪಂಚಮಿಯ ದಿನ ಲಕ್ಷ್ಮಣಾಗ್ರಜನು ಭರದ್ವಾಜಾಶ್ರಮವನ್ನು ಸೇರಿದನು. ಹಿಂದಿನ ಪ್ರವಚನದಲ್ಲಿ ನಾವು ಎಲ್ಲಿಗೆ ನಿಲ್ಲಿಸಿದ್ವು ಅಂದ್ರೆ ಪುಷ್ಪಕ ವಿಮಾನವು ಅಯೋಧ್ಯೆಯನ್ನು ಕಂಡಿತು. ಹತ್ತಿರ ಹತ್ತಿರ ಹೋಗಿದೆ ಪುಷ್ಪಕವಿಮಾನ ಆದರೆ ಇಳಿಲಿಲ್ಲ. ಯಾಕಂದ್ರೆ ಹದಿನಾಲ್ಕು ವರ್ಷ ಇನ್ನು ಪೂರ್ತಿಯಾಗಿಲ್ಲ. ಸ್ವಲ್ಪ ಸಮಯ ಬಾಕಿ ಇದೆ. ಮಾತ್ರವಲ್ಲ, ಅಯೋಧ್ಯೆಗೆ ಹೋಗುವ ಮುನ್ನ ಇನ್ನೊಂದು ಪರೀಕ್ಷೆ ಆಗಬೇಕಾಗಿದೆ. ರಾಮನ ದೊಡ್ಡತನ, ಭರತನ ದೊಡ್ಡತನ ಲೋಕಕ್ಕೆ ಪ್ರಕಟವಾಗ್ಬೇಕಾಗಿದೆ. ಹಾಗಾಗಿ ಅಯೋಧ್ಯೆಗೆ ಹೋಗಿ ಇಳಿಯದೇ ಕೊಂಚ ಹಿಂದಕ್ಕೆ ಬಂದು ಪ್ರಯಾಗದಲ್ಲಿ ಭರದ್ವಾಜ ಮುನಿಗಳ ಪುಣ್ಯಾಶ್ರಮಕ್ಕೆ ರಾಮನು ತೆರಳ್ತಾನೆ.

ಮುನಿಗೆ ವಂದಿಸಿ ಬಳಿಕ ಪ್ರಶ್ನಿಸ್ತಾನೆ. ಅಯೋಧ್ಯೆ ಹೇಗಿದೆ? ಸುಭಿಕ್ಷ (ಹೊಟ್ಟೆಗೆ ತತ್ವಾರ ಆಗಬಾರದು), ಅನಾಮಯ (ಖಾಯಿಲೆ ಇಲ್ಲ) ತಾನೇ ಎಂಬ ಪ್ರಶ್ನೆಯನ್ನು ಕೇಳ್ತಾನೆ. ಭರತ ಹೇಗಿದ್ದಾನೆ? ತಾಯಂದಿರು ಬದುಕಿರುವರೇ? ಎಂದು ಕೇಳುವಾಗ ಭರದ್ವಾಜರು ಒಂದೇ ಮಾತನ್ನ ಹೇಳ್ತಾರೆ – ಭರತ ನಿನ್ನನ್ನು ಕಾಯ್ತಿದಾನೆ. ಕೂದಲಿಗೆ ಯಾವ ಸಂಸ್ಕಾರವನ್ನು ಕೊಟ್ಟಿಲ್ಲ ಜಟೆಯಾಗಿದೆ, ದೇಹದ ಕಡೆಗೆ ಗಮನ ಇಲ್ಲದೇ ಕೇವಲ ಮುನಿಯಂತೆ ಭರತ ನಿನ್ನನ್ನು ಕಾಯ್ತಿದಾನೆ. ಪಾದುಕೆಗಳನ್ನು ಮುಂದಿಟ್ಟುಕೊಂಡು. ಅವನ ಬದುಕು ನಿನ್ನ ಪಾದುಕೆ, ಉಸಿರು ನಿನ್ನ ಪಾದುಕೆ. ಮತ್ತೆಲ್ಲ ಕುಶಲ. ನೀನು ಹೋಗಿ ತಲುಪುವವರೆಗೆ ಭರತ ಕುಶಲಿಯಲ್ಲ, ಮಾತ್ರವಲ್ಲ ನೀನು ಸರಿಯಾದ ಸಮಯಕ್ಕೆ ಹೋಗದಿದ್ದರೆ ಭರತ ಇರ್ತಾನೋ ಇಲ್ವೋ ಗೊತ್ತಿಲ್ಲ. ಅವನ ಪ್ರತಿಜ್ಞೆಯೇ ಹಾಗಿದೆ. ಹದಿನಾಲ್ಕು ವರ್ಷ ಪೂರೈಸಿದ ಮರುದಿನ ನೀನು ಬಾರದೆ ಇದ್ರೆ ಅಗ್ನಿಪ್ರವೇಶ ಮಾಡ್ತೇನೆ. ಬಳಿಕ ರಾಮನ ಕುರಿತು ಭರದ್ವಾಜರು ಮಾತಾಡ್ತಾರೆ – ಅಂದು ನಿನ್ನನ್ನು ನೋಡಿದ್ದೆ, ಇಂದೂ ನಿನ್ನನ್ನು ನೋಡ್ತಿದೇನೆ. ಎಷ್ಟು ವ್ಯತ್ಯಾಸ! ಅಂದು ನನಗೆ ದುಃಖವಾಗಿತ್ತು. ಸ್ವರ್ಗದಿಂದ ಚ್ಯುತನಾದ ದೇವತೆಯಂತೆ ನೀನು ರಾಜ್ಯವನ್ನು, ಕೋಶವನ್ನು, ಬಂಧು-ಬಾಂಧವರನ್ನು ಎಲ್ಲರನ್ನು ಅಗಲಿ, ಕೇವಲ ಧರ್ಮಕಾಮನಾಗಿ ಕಾಡಿಗೆ ಹೊರಟಿದ್ದೆಯಲ್ಲ, ತಾಯಿಯ ಮಾತನ್ನು ನಡೆಸುವ ಸಲುವಾಗಿ, ತಂದೆಗೆ ಕೊಟ್ಟ ವಚನವನ್ನು ಪಾಲಿಸುವ ಸಲುವಾಗಿ ಮೃಷ್ಟಾನ್ನವನ್ನು ಬಿಟ್ಟು ಗೆಡ್ಡೆ-ಗೆಣಸುಗಳನ್ನು, ಹಣ್ಣು-ಹಂಪಲುಗಳನ್ನು ಆಶ್ರಯಿಸಿ ನೀನು ವನವಾಸಕ್ಕೆ ಮುಂದಾಗಿದ್ದೆ. ಎಷ್ಟು ನೋವಾಗಿತ್ತು ನನಗೆ. ಈಗ ನೋಡಿದರೆ ತುಂಬ ತುಂಬ ಸಂತೋಷವಾಗ್ತಿದೆ. ಯಾಕೆ ಅಂದ್ರೆ ಒಂದು; ನೀನು ವನವಾಸವನ್ನು ಪೂರೈಸಿದ್ದಿ, ಅಲ್ಲಿಗೆ ನಿನ್ನ ತಂದೆ ನಿನ್ನ ತಾಯಿಗೆ ಕೊಟ್ಟ ವಚನ ಪೂರ್ಣವಾಯಿತು. ನೀನು ನಿನ್ನ ತಾಯಿಗೆ (ಕೈಕೇಯಿಗೆ) ಕೊಟ್ಟ ಮಾತು ಪೂರ್ಣವಾಯಿತು ಮಾತ್ರವಲ್ಲ, ಲೋಕಕ್ಕೆ ಮಹದುಪಕಾರವಾಯಿತು. ನಿನ್ನ ವನವಾಸದ ಫಲವಾಗಿ ದಂಡಕಾವನವು ನಿಷ್ಕಂಟಕವಾಯಿತು ಮಾತ್ರವಲ್ಲ, ರಾವಣ ಸಂಹಾರದಿಂದಾಗಿ ಮೂರು ಲೋಕವೂ ನಿಷ್ಕಂಟಕವಾಯಿತು. ಯಾವುದನ್ನು ದೇವತೆಗಳು ಬಯಸಿದ್ದರೋ, ಋಷಿ-ಮುನಿಗಳು ಬಯಸಿದ್ದರೋ, ಜಗತ್ತಿನ ಸತ್ಪುರುಷರು ಬಯಸಿದ್ದರೋ, ಗಂಧರ್ವ, ಯಕ್ಷ, ಕಿನ್ನರ, ಕಿಂಪುರುಷರು ಬಯಸಿದ್ದರೋ, ಸೃಷ್ಟಿ ಬಯಸಿತ್ತೋ, ಅಂಥದ್ದೊಂದು ಮಹತ್ಕಾರ್ಯವನ್ನು ಮಾಡಿ ಎಷ್ಟು ದೊಡ್ಡ ಪರಿವಾರದೊಂದಿಗೆ ಬಂದಿದ್ದೀಯೆ ನೀನಿವತ್ತು. ಕೋಟ್ಯಂತರ ಕಪಿಗಳು, ವಾನರಸೇನೆ ನಿನ್ನ ಜೊತೆಗಿದೆ, ರಾಕ್ಷಸೇಂದ್ರ ವಿಭೀಷಣ ಇವರನ್ನು ಮಿತ್ರರಾಗಿ ಹೊಂದಿ ಗೆದ್ದು ಬಂದವನು ನೀನು. ಮುಂದೆ ಪಟ್ಟಕ್ಕೆ ಹೋಗಲಿಕ್ಕಿರುವಂಥವನು. ಹಾಗಾಗಿ ಇಂದು ನನ್ನ ಆನಂದವಿದೆಯಲ್ಲ ಇದಕ್ಕಿಂತ ದೊಡ್ಡ ಆನಂದ ನನ್ನ ಜೀವನದಲ್ಲಿ ಬರಲಿಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೇಳಿ ಭರದ್ವಾಜರು ನಡೆದ ಘಟನೆಗಳ ಬಗ್ಗೆ ನೀನು ಹೇಳಬೇಕಾಗಿಲ್ಲ, ಭರತನಿಗೆ ಪಾದುಕೆ ಕೊಟ್ಟು ಕಳುಹಿದಂದಿನಿಂದ ರಾವಣಸಂಹಾರದವರೆಗಿನ ನಿನ್ನೆಲ್ಲ ಸುಖ-ದುಃಖಗಳು ಗೊತ್ತು ನನಗೆ. ನಾನೂ ಒಂದು ವರವನ್ನು ಕೊಡ್ತೇನೆ ನಿನಗೆ‚ ಸ್ವೀಕಾರ ಮಾಡು ಅದನ್ನು. ಜೊತೆಗೆ ನನ್ನದೊಂದು ಅಪೇಕ್ಷೆಯಿದೆ ಅದನ್ನು ನಡೆಸಿಕೊಡು. ಏನೆಂದರೆ ಇವತ್ತು ಇಲ್ಲಿಯೇ ಇದ್ದು ನನ್ನ ಆತಿಥ್ಯವನ್ನು ಸ್ವೀಕಾರ ಮಾಡಬೇಕು ಎಂದಾಗ ರಾಮ ಆಯಿತು. ವರ ಕೇಳ್ತೇನೆ – ಈ ಕಪಿಗಳು ಇಲ್ಲಿಂದ ಅಯೋಧ್ಯೆಗೆ ಹೋಗ್ತಾರೆ ಈಗ. ಅವರು ಹೋಗುವ ದಾರಿಯಲ್ಲಿ ಎಲ್ಲ ಮರಗಳು ಹಣ್ಣು ಬಿಟ್ಟಿರಬೇಕು. ಜೇನು ಸುರಿಸುತ್ತಿರಬೇಕು. ಮುನಿಗಳು ತಥಾಸ್ತು ಎನ್ನುತ್ತಿದ್ದಂತೆಯೇ ಮೂರುಯೋಜನ ಸುತ್ತಳತೆಯಲ್ಲಿ ಎಲ್ಲ ವೃಕ್ಷಗಳೂ ಕಲ್ಪವೃಕ್ಷಗಳಾದವು. ನಿಷ್ಫಲವಾದ ವೃಕ್ಷಗಳು ಸ’ಫಲ’ವಾದವು. ವೃಕ್ಷಗಳಲ್ಲಿ ಜೇನು ಸುರೀಲಿಕ್ಕೆ ಆರಂಭವಾಯಿತು. ಆಶೆ ತೀರುವವರೆಗೆ ಹಣ್ಣು ತಿಂದು ಜೇನು ಕುಡಿದರಂತೆ ಕಪಿಗಳು.

ಏತನ್ಮಧ್ಯೆ ಹನುಮಂತನಿಗೆ ರಾಮನು ಒಂದು ಸೂಚನೆ ಕೊಡ್ತಾನೆ. ಅಯೋಧ್ಯೆಗೆ ಹೋಗು. ಎಲ್ಲ ಕ್ಷೇಮವಾ ಎಂಬುದನ್ನು ನೋಡು. ದಾರಿಯಲ್ಲಿ ಶೃಂಗಿಭೇರಪುರ ಸಿಗ್ತದೆ. ಅಲ್ಲಿ ಗುಹ ರಾಜ್ಯವಾಳ್ತಾನೆ. ನಿಷಧರ ಅಧಿಪತಿ. ಅವನನ್ನು ಕಂಡು ಹೇಳು ; ನಿನ್ನ ಸ್ನೇಹಿತ ರಾಮ ಕುಶಲವಾಗಿದ್ದಾನೆ. ಅವನ ಕಷ್ಟಗಳೆಲ್ಲ ಮುಗಿದಿದೆ. ಗುಹ ನಿನಗೆ ಅಯೋಧ್ಯೆಯ ದಾರಿಯನ್ನು, ಭರತನ ಸುದ್ದಿಯನ್ನು ಹೇಳ್ತಾನೆ. ಅದನ್ನು ಕೇಳಿಕೊಂಡು ಹೋಗಿ ಭರತನನ್ನು ಕಾಣು. ಭರತನಿಗೆ ಹೇಳು – ನಾನು ಕುಶಲವಾಗಿ ಮರಳಿ ಬಂದಿದೇನೆ. ಜೊತೆಗೆ ಸೀತೆ ಮತ್ತು ಲಕ್ಷ್ಮಣರೂ ಬಂದಿದಾರೆ. ಇಷ್ಟು ಹೇಳಿ ಸೀತೆಯ ಅಪಹರಣವಾಗಿದ್ದು, ಹುಡುಕಿಕೊಂಡು ಹೋಗಿದ್ದು, ಸುಗ್ರೀವ ಸಖ್ಯ, ಪ್ರಪಂಚವೆಲ್ಲ ಸೀತಾನ್ವೇಷಣ, ಹನುಮಂತನ ಮುಖಾಂತರ ಸೀತೆಯ ಸುದ್ದಿ ಗೊತಾಗಿದ್ದು, ಸಮುದ್ರಕ್ಕೆ ಸೇತುವೆ ಕಟ್ಟಿದ್ದು, ಯುದ್ಧ ಮಾಡಿ ರಾವಣನನ್ನು ಸಂಹಾರ ಮಾಡಿದ್ದು ಎಲ್ಲವನ್ನೂ ಹೇಳು ಎಲ್ಲಿಯವರೆಗೆ ಅಂದ್ರೆ ಶಿವನ ಕೃಪೆಯಿಂದ ದಶರಥನನ್ನು ಕಂಡಿದ್ದು ಅಲ್ಲಿಯವರೆಗೆ ಎಲ್ಲವನ್ನೂ ಭರತನಿಗೆ ಹೇಳು. ಈಗ ರಾಕ್ಷಸರಾಜ ವಿಭೀಷಣ ಮತ್ತು ಕಪಿರಾಜ ಸುಗ್ರೀವನೊಡನೆ ರಾಮ ಬರ್ತಾ ಇದ್ದಾನೆ ಅಯೋಧ್ಯೆಗೆ ಎಂದು ಹೇಳು. ದೊಡ್ಡ ಕೀರ್ತಿಯನ್ನು ಸಂಪಾದನೆ ಮಾಡಿದ್ದಾನೆ ರಾಮ, ದೊಡ್ಡ ಮಿತ್ರವೃಂದವನ್ನೂ ಸಂಪಾದನೆ ಮಾಡಿದ್ದಾನೆ ಇದೆಲ್ಲವನ್ನೂ ಹೇಳು. ಹೇಳಿದ ಮೇಲೆ ಭರತನ ಮುಖ ಹೇಗಾಗ್ತದೆ? ಭರತನ ಧ್ವನಿ ಹೇಗಾಗ್ತದೆ? ಭರತನ ಚಹರೆಗಳು ಹೇಗಾಗ್ತದೆ? ಸೂಕ್ಷ್ಮವಾಗಿ ಗಮನಿಸು. ಸಂಶಯವಿದೆ ಅಂತಲ್ಲ ರಾಮನಿಗೆ. ಇದನ್ನ ಯಾಕೆ ಮಾಡ್ತಾನೆ ಅಂದ್ರೆ ಹದಿನಾಲ್ಕು ವರ್ಷ ರಾಜ್ಯವಾಳಿದಾಗ ಎಲ್ಲಿಯಾದರೂ ಅಭಿರುಚಿ ಬಂದಿದ್ದರೆ ಅವನೇ ರಾಜ್ಯವಾಳಲಿ. ಅವನಿಗೆ ರಾಜ್ಯ ಹೇಗೆ ಅಭ್ಯಾಸ ಆಗಿದೆಯೋ ಹಾಗೇ ನಮಗೆ ಕಾಡು ಅಭ್ಯಾಸವಾಗಿದೆ. ಉಳಿದ ಆಯಸ್ಸನ್ನು ನಾವು ಕಾಡಲೇ ಕಳೆದು ಬಿಡೋಣ. ಅಯೋಧ್ಯೆಯಲ್ಲಿ ಏನು ಕಡಿಮೆ ಇದೆ? ಮನುಷ್ಯ ಬಯಸುವ ಯಾವ ಸಂಗತಿ ಅಯೋಧ್ಯೆಯಲ್ಲಿಲ್ಲ? ಅಂಥಾ ಸಮೃದ್ಧವಾಗಿರತಕ್ಕಂತಹ ಒಂದು ರಾಜ್ಯ ಅಯೋಧ್ಯೆ. ಅಲ್ಲಿ ಚತುರಂಗ ಬಲ ಅದ್ಭುತವಾಗಿರತಕ್ಕಂಥದ್ದು. ಯಾರ ಮನಸ್ಸನ್ನೂ ಬದಲಾಯಿಸಲಿಕ್ಕೆ ಸಮರ್ಥ ರಾಜ್ಯವೆನ್ನುವಂಥದ್ದು. ಚಿತ್ರಕೂಟಕ್ಕೆ ಬಂದಾಗ ಭರತನಿಗೆ ಆ ತರದ ಯಾವ ಅಪೇಕ್ಷೆಯೂ ಇರಲಿಲ್ಲ. ಆದರೆ ಹದಿನಾಲ್ಕು ವರ್ಷ ರಾಜ್ಯಭಾರ ಮಾಡಿದ ಮೇಲೆ ಒಂದು ಸಂತೋಷ, ಒಂದು ಖುಷಿ ಅವನಿಗೆ ಬಂದಿದ್ದರೆ ಭೂಮಂಡಲವನ್ನು ಅವನಿಗೆ ಬಿಟ್ಟುಬಿಡೋಣ. ಪ್ರೀತಿಯಿಂದ ಹೇಳಿದ್ದಿದು. ಹಾಗೆ ಭರತನ ಮನಸ್ಸನ್ನು ಅರ್ಥ ಮಾಡಿಕೊಂಡು ಬೇಗ ಮರಳಿ ಬಾ. ನಾನು ಬರುತ್ತಿರುತ್ತೇನೆ. ನಾನು ಬಂದು ಸೇರುವುದರೊಳಗೆ ನೀನು ನನಗೆ ವಿಷಯ ಹೇಳಬೇಕು. ಇದು ಕೊನೆಯ ಪರೀಕ್ಷೆ ಭರತನಿಗೆ.

ಹನುಮಂತ ಮನುಷ್ಯ ರೂಪ ಧಾರಣೆ ಮಾಡಿ ಹೊರಟ. ವಾಯುಮಾರ್ಗದಲ್ಲಿ ಪ್ರಯಾಣ ಮಾಡ್ತಿದಾನೆ. ಗಂಗಾ ಯಮುನಾ ಸಂಗಮ. ಅಲ್ಲಿ ಅನೇಕ ಭುಜಗರಾಜರಿದಾರಂತೆ. ಅವರ ನೆಲೆಯನ್ನೆಲ್ಲ ದಾಟಿ ಶೃಂಗಿಭೇರಪುರವನ್ನ ಸೇರ್ತಾನೆ. ಗುಹನನ್ನ ಕಾಣ್ತಾನೆ. ಗುಹನಿಗೆ ಹೇಳ್ತಾನೆ – ನಿನ್ನ ಸಖ ರಾಮ, ಸತ್ಯಪರಾಕ್ರಮ ನಿನ್ನ ಕುಶಲ ಪ್ರಶ್ನೆ ಮಾಡಿದಾನೆ. ಪಂಚಮಿ ಇಂದು ಅಲ್ಲಿ ಭರದ್ವಾಜರ ಆಶ್ರಮದಲ್ಲಿ ವಾಸ ಮಾಡ್ತಾನೆ. ವಿಶ್ರಾಂತಿಯ ಬಳಿಕ ನಾಳೆ ಹೊರಟು ಬರ್ತಾನೆ ಅಯೋಧ್ಯೆಗೆ, ನೀನು ನೋಡಬಹುದಂತೆ ಎಂದು ಹೇಳಿ ಅವನ ಉತ್ತರಕ್ಕೂ ಕಾಯದೇ ಸಂಪ್ರೀತನಾಗಿ ಅಲ್ಲಿಂದ ಅಯೋಧ್ಯೆಯ ಕಡೆಗೆ ಪ್ರಯಾಣ ಮಾಡ್ತಾನೆ. ನಡುವೆ ಪರಶುರಾಮ ತೀರ್ಥವಿದೆ, ವಾಲುಕಿನಿ ನದಿಯಿದೆ, ಗೋಮತಿ ನದಿಯಿದೆ. ಅದನ್ನೆಲ್ಲ ದಾಟಿ ಒಂದು ದೊಡ್ಡ ಸಾಲವೃಕ್ಷವನ ಇದೆ ಅದೆಲ್ಲವನ್ನು ದಾಟಿ ಕೋಸಲ ದೇಶವನ್ನು ವೀಕ್ಷಣೆ ಮಾಡ್ತಾನೆ. ಪ್ರಕೃತಿ, ಗ್ರಾಮಗಳು, ನಗರಗಳು ಎಲ್ಲವೂ ಸಮೃದ್ಧ. ಅಂತಹ ಕೋಸಲವನ್ನು ವೀಕ್ಷಣೆ ಮಾಡ್ತಾ ನಂದಿಗ್ರಾಮವನ್ನು ಸಮೀಪಿಸಿದ. ನಂದಿಗ್ರಾಮದ ಹಸಿರು ಕಾಡನ್ನ ಕಂಡ. ನಂದಿಗ್ರಾಮದ ನಿಕಟದ ಉದ್ಯಾನವನದಲ್ಲಿ ವೃದ್ಧರು, ಸ್ತ್ರೀಯರು, ಚಿಕ್ಕಮಕ್ಕಳು ಎಲ್ಲ ಕೂತ್ಕೊಂಡಿದ್ರಂತೆ. ಅದನ್ನು ದಾಟಿ ಅಯೋಧ್ಯೆಗೆ ಮೂರು ಮೈಲು ದೂರದಲ್ಲಿ ಭರತನನ್ನು ಕಂಡ.

ನಾರುಬಟ್ಟೆಯುಟ್ಟು ಕೃಷ್ಣಾಜಿನವನ್ನು ಹೊದ್ದು ದೈನ್ಯವೇ ಮೂರ್ತಿವೆತ್ತಂತಿದ್ದ. ಆಶ್ರಮವಾಸಿಯಂತಿದ್ದ. ಮೈಕೈಕಡೆಗೆ ಗಮನವಿಲ್ಲ, ಅಂಗಾಂಗಗಳಲ್ಲಿ ರಾಮವಿರಹದ ದುಃಖ. ಹಣ್ಣು-ಹಂಪಲು ಗೆಡ್ಡೆ-ಗೆಣಸುಗಳನ್ನು ತಿಂದುಕೊಂಡು ಇದಾನೆ. ಇಂದ್ರಿಯ ನಿಗ್ರಹ ಮಾಡಿದಾನೆ. ನಿತ್ಯವೂ ಆತ್ಮಧ್ಯಾನದಲ್ಲಿ (ರಾಮಧ್ಯಾನದಲ್ಲಿ) ಮುಳುಗಿದ್ದಾನೆ. ಬ್ರಹ್ಮರ್ಷಿಯಂತೆ ಕಂಡ. ಅಣ್ಣನ ಪಾದುಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಭಾರವನ್ನು ಮಾಡ್ತಿದಾನೆ. ಏನು ಮಾಡುವುದಿದ್ದರೂ ಪಾದುಕೆಯನ್ನು ಕೇಳಿಯೇ ಮಾಡ್ತಾನೆ. ಯಾವ ಉಡುಗೊರೆ ಬಂದರೂ ಪಾದುಕೆಗೆ ಸಮರ್ಪಣೆ ಮಾಡ್ತಾನೆ. ಯಾವ ಕೆಲಸವಾದರೂ ಪಾದುಕೆಗೆ ವರದಿ ಮಾಡ್ತಾನೆ. ಬ್ರಾಹ್ಮಣರಾಗಲಿ, ಕ್ಷತ್ರಿಯರಾಗಲಿ, ವೈಶ್ಯರಾಗಲಿ, ಶೂದ್ರರಾಗಲಿ ತನ್ನ ರಾಜ್ಯದ ಯಾವ ಪ್ರಜೆಗಳಾದರೂ ಕೂಡ ಅವರನ್ನು ಕಾಪಾಡುವ ಹೊಣೆ ಹೊತ್ತವನು. ಅವರಿಗೆ ಯಾವ ಭಯವೂ ಇಲ್ಲದಂತೆ, ತನ್ನ ಪ್ರಜೆಗಳಿಗೆ ಯಾವ ಆಪತ್ತೂ ಬಂದೊದಗದಂತೆ ಅವರನ್ನು ತಾಯಿ ಶಿಶುವನ್ನು ಕಾಪಾಡುವಂತೆ ಕಾಪಾಡ್ತಿದಾನೆ. ಅವನ ಸುತ್ತ ಅಮಾತ್ಯರಿದ್ದರು, ಪುರೋಹಿತರಿದ್ದರು, ಸೇನಾಪತಿಗಳಿದ್ದರು. ಎಲ್ಲ ಕಾಷಾಯ ತೊಟ್ಟಿದ್ದರು. ಅವನ ಪೌರರು ಯಾರೂ ಕೂಡಾ ಭೋಗಜೀವನವನ್ನು ಮಾಡ್ತಾ ಇರಲಿಲ್ಲವಂತೆ. ಅವನ ಪ್ರಜೆಗಳಿಗೆ ಒಂದು ಒಳ್ಳೆಯ ಬಟ್ಟೆಯನ್ನುಡುವ ಮನಸ್ಸಿಲ್ಲ, ಯಾವ ಸುಖವನ್ನೂ ಅನುಭವಿಸುವ ಮನಸ್ಸಿಲ್ಲ. ಯಾಕೆ ಅಂದ್ರೆ ಭರತನಿಗಿಲ್ಲ, ಅವನ ಅಣ್ಣ ರಾಮನಿಗಿಲ್ಲ, ನಮಗ್ಯಾಕೆ? ಎಂಬ ಭಾವದಲ್ಲಿ ಪ್ರಜೆಗಳಿದ್ದರಂತೆ. ಆ ಧರ್ಮಪ್ರೇಮಿಯನ್ನು ಬಿಟ್ಟು ಯಾವ ಸುಖವನ್ನೂ ಅನುಭವಿಸೋದಕ್ಕೆ ಪೌರರು ಸಿದ್ಧವಿಲ್ದೇ ಇರೋದ್ರಿಂದ ಅವರದ್ದೂ ಕೂಡ ವಿರಕ್ತ ಜೀವನವೇ ಆಗಿತ್ತು.

ಹನುಮನ ಕಣ್ಣಿಗೆ ದೇಹ ತಾಳಿದ ಧರ್ಮದಂತೆ ಕಂಡನಂತೆ ಭರತ. ಅವನಿಗೆ ಕೈಮುಗಿದು ಹನುಮಂತ ಹೇಳಿದ್ನಂತೆ. ದಂಡಕಾರಣ್ಯದಲ್ಲಿ ನಾರುಡೆಯುಟ್ಟು ವನವಾಸ ಮಾಡ್ತಾ ಇರತಕ್ಕಂತಹ ಯಾವ ರಾಮನನ್ನು ಕುರಿತು ನೀನು ನಿತ್ಯವೂ ಶೋಕ ಪಡ್ತಾ ಇದೀಯೋ ಅವನು ನಿನ್ನ ಕ್ಷೇಮವನ್ನು ಕೇಳಿದಾನೆ. ಈ ಸಹಿಸಲಸಾಧ್ಯವಾದ ಶೋಕವನ್ನು ತ್ಯಾಗ ಮಾಡು ಯಾಕೆ ಅಂದ್ರೆ ನಿನಗೊಂದು ಪ್ರಿಯ ವಾರ್ತೆಯನ್ನು ಹೇಳಲಿಕ್ಕಿದೇನೆ ನಾನು. ಸ್ವಲ್ಪವೇ ಕಾಲದಲ್ಲಿ ನೀನು ರಾಮನನ್ನು ಕಾಣುವಿಯಂತೆ. ನೀನು ರಾಮನೊಡನೆ ಸೇರುವೆಯಂತೆ. ರಾವಣನನ್ನು ಸಂಹರಿಸಿ, ಮೈಥಿಲಿಯನ್ನು ಪಡೆದುಕೊಂಡು ಮಿತ್ರರೊಡಗೂಡಿ ಸಮೃದ್ಧನಾಗಿ ರಾಮನು ಇತ್ತ ಕಡೆಗೇ ಬರ್ತಿದಾನೆ. ಜೊತೆಯಲ್ಲಿ ಲಕ್ಷ್ಮಣ, ಸೀತೆಯೂ ಇದ್ದಾರೆ ಎಂದು ಹೇಳಿದರೆ ಆ ಅಸದೃಶ ಭ್ರಾತೃಪ್ರೇಮಿ ಹನುಮಂತ ಇದಿಷ್ಟು ಹೇಳುತ್ತಿದ್ದಂತೆಯೇ ಹರ್ಷಾತಿರೇಕದಲ್ಲಿ ಎಚ್ಚರತಪ್ಪಿ ಬಿದ್ದುಬಿಟ್ನಂತೆ. ಸಂತೋಷವಾಗಲಿ ದುಃಖವಾಗಲಿ ಅತಿಯಾಗಿ ಆದಾಗ ಅದನ್ನ ತಡೆದುಕೊಳ್ಳಲಾಗುವುದಿಲ್ಲ. ಕೊಂಚ ಸಮಯದ ಬಳಿಕ ಮರಳಿ ಪ್ರಜ್ಞೆ ಬಂತು ಭರತನಿಗೆ. ಸ್ವಲ್ಪ ಚೇತರಿಸಿಕೊಂಡು ಬಳಿಕ ಹೋಗಿ ತಬ್ಬಿಕೊಂಡನಂತೆ ಹನುಮಂತನನ್ನು. ಎಷ್ಟು ಅತ್ತನಂತೆ ಅಂದ್ರೆ ಹನುಮಂತನ ಮೈ ಪೂರ್ತಿ ತೋಯ್ದು ಹೋಯಿತು.

ಭರತ ಹನುಮನಿಗೆ ಕೇಳಿದನಂತೆ – ನನ್ನ ಮೇಲೆ ಕರುಣೆಯಿಂದ ಬಂದವನೇ ಹೇಳು ನೀನು ದೇವನೋ? ಮನುಷ್ಯನೋ? ಅತ್ಯಂತ ಪ್ರಿಯ ವಾರ್ತೆಯನ್ನು ಹೇಳಿದವರಿಗೆ ಉಡುಗೊರೆ, ಪಾರಿತೋಷಕ ಕೊಡುವ ಪದ್ಧತಿಯಿದೆ. ಬಳಿಕ ಸ್ವಲ್ಪ ಸಾಧಾರಣ ಸ್ಥಿತಿಗೆ ಬಂದ ಮೇಲೆ ಭರತ ಹನುಮಂತನಿಗೆ ಒಂದು ಲಕ್ಷ ಗೋವುಗಳು, ನೂರಕ್ಕಿಂತ ಹೆಚ್ಚು ಗ್ರಾಮಗಳು, ಒಳ್ಳೆಯ ಚಾರಿತ್ರ್ಯವುಳ್ಳ,ಒಳ್ಳೆ ಕುಲ ಜಾತಿಗೆ ಸೇರಿದವರು ಇಂತಹ ಹದಿನಾರು ಕನ್ಯೆಯರನ್ನು ಪಾರಿತೋಷಕವಾಗಿ ಕೊಡ್ತೆನೆ ನಿನಗೆ. ಆ ವೈಷ್ಟಿಕ, ನಿತ್ಯ ಬ್ರಹ್ಮಚಾರಿಗೆ ಹದಿನಾರು ಕನ್ಯೆಯರ ಕೊಡುಗೆ. ಭರತನಿಗೆ ರಾಮನ ವಾರ್ತೆ ಹೇಳಿದ್ದಕ್ಕೆ ಬಹುಮಾನ. ಹನುಮಂತನ ಬಗ್ಗೆ ಭರತನಿಗೆ ಗೊತ್ತಿಲ್ಲ ಪಾಪ. ಹನುಮಂತ ತನ್ನ ಕೆಲಸ ಮಾಡಿದ. ವಾರ್ತೆ ಹೇಳಬೇಕಿತ್ತು, ಹೇಳಿದ. ತನ್ನ ಪರಿಚಯ ಏನೂ ಹೇಳಲಿಲ್ಲ. ಕೆಲವು ಕಡೆ ಲೇಖನಿ ಒಂದು ಪುಟವಾದರೇ ಅವರ ಪರಿಚಯ ನಾಲ್ಕು ಪುಟದ್ದು. ಹಾಗಲ್ಲ ಹನುಮಂತ, ಹಾಗಾಗಿ ತನ್ನ ಪರಿಚಯ ಏನೂ ಹೇಳಿಕೊಳ್ಳಲಿಲ್ಲ. ರಾಮ ಬರುತ್ತಾನೆ ಎನ್ನುವ ವಾರ್ತೆಯನು ಕೇಳಿ ಭರತನ ಕಣ್ಣು ಕಾತರಿಸಿದವು. ಪುನಃ ಹೇಳ್ತಾನೆ, “ಎಷ್ಟು ವರ್ಷ ಆಯಿತು ರಾಮನನ್ನು ಕಾಣದೆ. ನನ್ನ ಪ್ರಭು ನನ್ನ ಅಣ್ಣ ಕಾಡು ಸೇರಿ ಎಷ್ಟೋ ವರ್ಷ ಕಳೆದಿದೆ.” ಹನುಮಂತ ಸೀತೆಯನ್ನು ಕಂಡಾಗ ಹೇಳಿದ ಮಾತನ್ನೇ ಭರತನೂ ಹೇಳ್ತಾನೆ, “ನೂರು ವರ್ಷ ಬದುಕಿದ್ದರೇ ಆನಂದ ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ. ಬದುಕಿದ್ದರೇ ಇಂದಲ್ಲ ನಾಳೆ, ಈ ವರ್ಷವಲ್ಲ, ಮುಂದಿನ ವರ್ಷ, ಒಳಿತು ನಮ್ಮನ್ನು ಹುಡುಕಿಕೊಂಡು ಬಂದೇ ಬರ್ತದೆ. ಜೀವನ ದುರಂತವಲ್ಲ, ಸುಖಾಂತ. ಕಥೆ ಹೇಳು. ವಾನರರಿಗೂ ರಾಮನಿಗೂ ಏನು ಸಂಬಂಧ. ಏಲ್ಲಿ ಸೇರಿಕೊಂಡ್ರು? ಏನೆಲ್ಲ ಆಯಿತು.” ಎಂದು ಹೇಳಿ ಮಣೆ ಹಾಕಿ ಕೂರಿಸಿಬಿಟ್ಟ ಭರತ, ಹನುಮಂತನನ್ನು. ಇಡಿ ಕಥೆಯನ್ನು ಹನುಮಂತ ಭರತನಿಗೆ ಹೇಳ್ತಾನೆ. ಕೈಕೇಯಿಗೆ ವರ ಕೊಟ್ಟ ವಿಷಯದಿಂದ ಶುರುವಾಗಿ, ನೀನು ಬಂದು ಹೋದ ಮೇಲೆ ಮುಂದೇನಾಯಿತು ಎಂದು ವಿಸ್ತಾರವಾಗಿ ಹೇಳಿದ. ಇಷ್ಟು ಹೇಳಿ, “ಈಗ ವಾನರರ ಜೊತೆಗೆ ಕಿಷ್ಕಿಂಧೆಯಲ್ಲಿ ಇಳಿದು, ವಾನರ ಸ್ತ್ರೀಯರನ್ನೂ, ಸುಗ್ರೀವನ ಅಂತಃಪುರದಲ್ಲಿರುವ ಸತಿಯರನ್ನೂ ಕರೆದುಕೊಂಡು ಭರದ್ವಾಜ ಆಶ್ರಮಕ್ಕೆ ಬಂದು ಉಳಿದುಕೊಂಡಿದ್ದಾನೆ. ನಾಳೆ ಪುಷ್ಯ ನಕ್ಷತ್ರದಲ್ಲಿ ರಾಮ ನಾಳೆ ಬರ್ತಾನೆ.” ಎಂದು ಹೇಳಿದ ಹನುಮಂತ. ರಾಮ, ಹೊರಟಿದ್ದೂ ಪುಷ್ಯ ನಕ್ಷತ್ರದಲ್ಲಿ (ಅವನ ರಾಜ್ಯಾಭಿಷೇಕ ಆಗುವುದೂ ಪುಷ್ಯ ನಕ್ಷತ್ರದಲ್ಲಿ ಅಂತ ಆಗಿತ್ತು). ಎಂದಾಗ “ಎಷ್ಟು ಕಾಲದ ನನ್ನ ಆಸೆ ನೆರವೇರಿತು” ಎಂದು ಭರತ ಉಸಿರುಬಿಟ್ಟ. ಹನುಮಂತ ಕಥೆಯನ್ನು ಹೇಳುವಾಗ, ಭರತ ಕೈ ಜೋಡಿಸಿಕೊಂಡೇ ಇದ್ದ.

ಕೂಡಲೇ ಶತ್ರುಘ್ನನನ್ನು ಕರೆದು “ಎಲ್ಲ ಸಿದ್ಧತೆ ಮಾಡು. ನಗರದ ಎಲ್ಲ ದೇವಸ್ಥಾನಗಳು ಮತ್ತು ಪೂಜಾ ಸ್ಥಾನಗಳು (ಅಶ್ವಥ ಮರದ ಕಟ್ಟೆ), ಎಲ್ಲವನ್ನೂ ಸುಗಂಧ ಹೂಮಾಲೆಗಳಿಂದ ಅಲಂಕರಿಸಲಿ ಮತ್ತು ಅರ್ಚಿಸಲಿ. ಆಮೇಲೆ ವಂದಿ, ಮಾಗದರು ಮತ್ತು ಸೂತರು, (ಸೂತರು ಅಂದ್ರೆ ಸ್ತುತಿ ಬಲ್ಲವರು ಮತ್ತು ಹಿಂದಾದ ಘಟನೆಗಳನ್ನು ಬಲ್ಲವರು, ಹೊಗಳಿಕೆಯನ್ನು ಬಲ್ಲವರು, ವಂಶಾವಳಿಯನ್ನು ಬಲ್ಲವರು) ಇವರನ್ನೆಲ್ಲ ಸಿದ್ಧಮಾಡು. ಹಾಗೇ ಅಯೋಧ್ಯೆಯಲ್ಲಿರುವ ಉತ್ತಮೊತ್ತಮ ವಾದಕರು, ನರ್ತಕಿಯರು, ಗಾಯಕರು ಇವರನ್ನೆಲ್ಲ ಅನುವುಗೊಳಿಸು. ರಾಮನ ಚಂದ್ರಸಮಾನಾದ ಮುಖವನ್ನು ನೋಡಲು, ಇಡೀ ಅಯೋಧ್ಯೆಯೇ ಬರಲಿ.” ಎಂದು ಅಪ್ಪಣೆ ಮಾಡ್ತಾನೆ. ಶತ್ರುಘ್ನನು, ಅನೇಕ ಕಾರ್ಯಕರ್ತರನ್ನು ಸೇರಿಸ್ತಾನೆ. ವಾಲ್ಮೀಕಿ ರಾಮಾಯಣದಲ್ಲಿ “ವಿಷ್ಟೀ” ಎಂಬ ಶಬ್ದ ಬಳಸಲಾಗಿದೆ. ಯಾರು ಮೌಲ್ಯ ಇಲ್ಲದೇ ಕೆಲಸ ಮಾಡ್ತಾರೋ ಅವರನ್ನು ವಿಷ್ಟೀ ಎಂದು ಉದ್ದೇಶಿಸಲಾಗಿದೆ. ವಿಷ್ಟೀ ಅಪಭ್ರಂಸವಾಗಿ ಕನ್ನಡದಲ್ಲಿ “ಬಿಟ್ಟಿ” ಅಂತ ಆಗಿದೆ. ಶತ್ರುಘ್ನ ಅಯೋಧ್ಯೆಗೆ ರಾಮ ಬರುವ ಸೂಚನೆ ಕೊಟ್ಟು ಕಾರ್ಯಕರ್ತರಿಗೆ ಆಜ್ಞೆ ಮಾಡಿದ, “ನಂದಿಗ್ರಾಮದಿಂದ ಅಯೋಧ್ಯೆಯವರೆಗೆ ಮತ್ತು ಅಯೋಧ್ಯೆಯಿಂದ ನಂದಿಗ್ರಾಮದವರೆಗೆ ದಾರಿಯನ್ನು ಸಮತಲಗೊಳಿಸಿ. ಮಾತ್ರವಲ್ಲ, ಮಾರ್ಗವನ್ನು ತಂಪಾದ ನೀರಿನಿಂದ ಸಿಂಚನ ಮಾಡಿ. ದಾರಿಯುದ್ದಕ್ಕೂ ಪುಷ್ಪವನ್ನು ಚೆಲ್ಲಿ. ಹಾಗೆಯೇ ಅಯೋಧ್ಯೆಯ ಬೀದಿ ಬೀದಿಗಳಲ್ಲಿ ಅಯೋಧ್ಯೆಯ ಪತಾಕೆಗಳು, ಧ್ವಜಗಳು ಏರಲಿ. ರಾಜಮಾರ್ಗದಲ್ಲಿ ರಂಗೋಲಿಯನ್ನು ಹಾಕಬೇಕು. ಸುಗಂಧಭರಿತ ಪುಷ್ಪಗಳಿಂದ ಅದನ್ನು ಅಲಂಕರಿಸಬೇಕು.

ಸೇನೆಗಳು, ಸೈನಿಕರ ಪತ್ನಿಯರು, ಬ್ರಾಹ್ಮಣರು, ಕ್ಷತ್ರಿಯರು, ಪುರಮುಖರು ಮತ್ತು ದೃಷ್ಟಿ ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಸುಮಂತ್ರ ಎಂಬ ಮಂತ್ರಿಗಳು. ಹಿಂದೆ ದಶರಥನ ಮತ್ತು ಮುಂದೆ ರಾಮನ ಅಷ್ಟಮಂತ್ರಿಗಳು ಇವರೆಲ್ಲರೂ ಹೊರಟರು. ಸ್ವರ್ಣಭೂಷಿತ ಒಂದು ಸಾವಿರ ಆನೆಗಳು. ಅನೇಕರು ಹೆಣ್ಣು ಆನೆಯನ್ನೇರಿ ಬಂದರು, ಕೆಲವರು ಗಂಡು ಆನೆಯ ಮೇಲೆ, ಇನ್ನು ಕೆಲವರು ಕುದುರೆಯನ್ನೇರಿ ಬಂದರು, ಕೆಲವರು ರಥಗಳ ಮೇಲೆ, ಕೆಲವರು ಕಾಲ್ನಡುಗೆಯಲ್ಲಿ. ಸೇನೆ ಆಯುಧ ಸನ್ನಧವಾಗಿ, ಗೌರವಾರ್ಥವಾಗಿ. ರಾಜ ಪತ್ನಿಯರು, ಕೌಸಲ್ಯೆ ಮತ್ತು ಸುಮಿತ್ರೆ ಹೊರಟರು. ವಾಲ್ಮೀಕಿ ರಾಮಾಯಣದಲ್ಲಿ ಕೈಕೇಯಿ ಹೊರಟಿದ್ದು ಬೇರೆ ಬರೆದಿದ್ದಾರೆ. ಕೈಕೇಯಿಯ ಮೇಲೆ ಭರತ ಸಿಟ್ಟು ಮಾಡುವ ಹಾಗಿಲ್ಲ ಯಾಕೆಂದ್ರೆ ಚಿತ್ರಕೂಟದಿಂದ ಹೊರಡುವಾಗ, ತಾಯಿಯ ಮೇಲೆ ಕೋಪ ಮಾಡಬಾರದು ಎಂದು ರಾಮ, ರಾಮ ಮತ್ತು ಸೀತೆಯ ಆಣೆ ಹಾಕಿದ್ದಾನೆ. ಇಡೀ ಅಯೋಧ್ಯೆ, ಮೂರು ಮೈಲು ದೂರ ಇರುವ ನಂದಿಗ್ರಾಮಕ್ಕೆ ಬಂತು. ಕುದುರೆಗಳ ಖುರಪುಟ, ರಥಗಳ ಶಬ್ದ, ಶಂಖ ದುಂದುಭಿಗಳ ನಿನಾದ. ಭೂಮಿಯೇ ಕಂಪಿಸಿದಂತೆ. ಏತನ್ಮಧ್ಯೆ ಭರತನನ್ನು ಬ್ರಾಹ್ಮಣೊತ್ತಮರು, ಪುರಜನರು ಸುತ್ತುವರೆದಿದ್ದಾರೆ. ಮಂತ್ರಿಗಳು, ಪದ್ಧತಿಯಂತೆ, ಕೈಯಲ್ಲಿ ಮಾಲೆ ಮತ್ತು ಮೋದಕಗಳನ್ನು ಹಿಡಿದುಕೊಂಡು ಕಾಯ್ತಾ ಇದ್ದರು. ಸ್ತುತಿಕರ್ತರು, ರಾಮಂದು ಮತ್ತು ಸೂರ್ಯವಂಶರದ್ದು, ಸ್ತೋತ್ರ ಪಠಣ ಮಾಡ್ತಾ ಇದ್ದಾರೆ. ರಾಮನ ಪಾದುಕೆಗಳನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ರಾಮನನ್ನು ಬೀಳ್ಕುಡುವಾಗ ರಾಮನ ಪಾದುಕೆ ಭರತನ ತಲೆಯಮೇಲಿತ್ತು, ಹಾಗೆಯೇ ಸ್ವಾಗತ ಮಾಡುವಾಗ ರಾಮನ ಪಾದುಕೆ ಭರತನ ತಲೆಯಮೇಲೆ. ಕಾಲಿಗಿಂತ ಕೆಳಗೆ ಮತ್ತು ತಲೆಕ್ಕಿಂತ ಮೇಲೆ ಯಾವ ಅಂಗವೂ ಇಲ್ಲ. ರಾಮನ ಕಾಲ ಕೆಳಗಿ ಇರುವುದು ಭರತನ ತಲೆಯ ಮೇಲೆ. ಇದನ್ನು ನೋಡಿದಾಗ, ಭರತ ರಾಮನನ್ನು ಹೇಗೆ ನೋಡಿರಬೇಕು ಎಂದು ಅರ್ಥ ಆಗ್ತಾ ಇದೆ. ಆ ಪಾದುಕೆಗೆ ಶ್ವೇತಛತ್ರ. ಆ ಶ್ವೇತಛತ್ರಕ್ಕೆ ಬಿಳಿಯ ಮಾಲೆಯಿಂದ ಅಲಂಕಾರ ಮಾಡಲಾಗಿದೆ. ಪಾದುಕೆಗೆ, ರಾಜರಿಗೆ ಬೀಸುವಂತಹ, ಚಾಮರ ಮತ್ತು ವ್ಯಜನಗಳನ್ನು ಬೀಸ್ತಾ ಇದ್ದಾರೆ. ಇಂತಹ ವಾತಾವರಣದಲ್ಲಿ ಭರತನು ರಾಮನ ಪ್ರತೀಕ್ಷೆಯಲ್ಲಿದ್ದಾನೆ.

ಭರತನನ್ನು ನೋಡಿದವರು ಯಾರೂ ಹೇಳಬಹುದಾಗಿತ್ತು, ಉಪವಾಸದಿಂದ ಕೃಶನಾಗಿ, ದೈನ್ಯನಾಗಿ ಮತ್ತು ನಾರು ಮಡಿ ಉಟ್ಟು ನಿಂತಿದ್ದಾನೆ. ಅಶೋಕವನದಲ್ಲಿ ಸೀತೆ ಹೇಗಿದ್ದಳೋ ಅದೇ ಸ್ಥಿತಿಯಲ್ಲಿ ಭರತ ಇದ್ದ. ರಾಮನನ್ನು ಬೀಳ್ಕೋಟ್ಟು ಬರುವಾಗ ಹೊರಟು ಹೋದ ಹರ್ಷವು, ಹದಿನಾಲ್ಕು ವರ್ಷದ ನಂತರ ಸಂತೋಷ ಈಗ ಬಂದಿದೆ. ಈ ಹದಿನಾಲ್ಕು ವರ್ಷದಲ್ಲಿ ಕರ್ತವ್ಯ ಮಾಡಿದ್ದಾನೆ ಅಷ್ಟೇ. ಹನುಮಂತನಿಗೆ ರಾಮ ಹೇಳಿದ್ದೇನು? ಭರತನ ಮನಸ್ಥಿತಿ ಏನು? ಅವನ ಭಾವನೆ ಏನು ಎಂದು ತಿಳಿದುಕೊಂಡು ಬೇಗ ಬಾ ಎಂದು ಹೇಳಿದ್ದ. ಆದರೆ ಹನುಮಂತ ಯಾಕೆ ಬೇಗ ಹೋಗಿಲ್ಲ ಎಂದು ಕೆಲವೊಂದು ವಾಖ್ಯಾನಕಾರರ ವಾದ. ಇನ್ನೊಬ್ಬರು ಹೇಳಿದ್ರು ಯಾಕೆಂದ್ರೆ ಭರತ ಹನುಮಂತನನ್ನು ಬಿಟ್ಟೇ ಇಲ್ಲ. ಇನ್ನೊಬ್ಬ ವಾಖ್ಯಾನಕಾರರು ಹೇಳಿದ್ದೇನು? ರಾಮ ಹೇಳಿದ್ದೇನು ಭರತನಲ್ಲಿ ಏನಾದರೂ ವ್ಯತ್ಯಾಸ ಇದ್ದರೆ, ಭರತನಿಗೆ ರಾಜ್ಯ ಇಷ್ಟ ಆದ್ರೆ, ರಾಮ ಒಂದು ವೇಳೇ ಕಾಡಿಗೆ ಮರಳಿ ಹೋಗಬೇಕು ಎನ್ನುವ ಸಂದರ್ಭ ಇದ್ರೆ ಬಂದು ಹೇಳು ಎಂದು ಹೇಳಿದ್ದ ರಾಮ. ಇಲ್ಲದಿದ್ದರೆ ಹೇಳಬೇಕೂಂತ ಇಲ್ಲ ಎಂದೇ ರಾಮನ ಭಾವ. ಮತ್ಯಾರೋ ಹೆಳಿದ್ದಾರೆ, ಇದ್ದಕ್ಕಿದ್ದಂತೆ ರಾಮ ಹೋಗಿ ಭರತ ಮುಂದೆ ಪ್ರತ್ಯಕ್ಷ ಆದ್ರೆ ಅವನ ಕಥೆ ಏನಾಗಬಹುದೋ ಏನೋ? ವಿಪರೀತ ಆನಂದವನ್ನು ತಡೆದುಕೊಳ್ಳಲು ಆಗದೇ ಹೋಗಿ ಅವನು ಅತ್ಮಹತ್ಯೆಯನ್ನೇ ಮಾಡಿಕೊಳ್ಳಬಹುದು. ರಾಮ ಕಾಡಿಗೆ ಮರಳಿ ಹೋಗಬೇಕು ಎನ್ನುವ ಸಂದರ್ಭ ಇಲ್ಲ ಅಲ್ಲಿ.

ಸುಮಾರು ಹೊತ್ತಾಯಿತಂತೆ ರಾಮನಿಗಾಗಿ ಕಾದು, ಭರತನಿಗೆ ಸಂಶಯ ಬಂದು ಹನುಮಂತನನ್ನು ಕೇಳಿದ, “ಕಪಿಗಳು ಚಂಚಲ ಚಿತ್ತರು, ನೀನು ಎಲ್ಲಿಯಾದರೂ ಕಪಿ ಬುದ್ಧಿ ತೋರಿಸಿದೆಯಾ? ಕಪಿ ಚಾಪಲ್ಯದಿಂದ ನನಗೆ ಸುಳ್ಳು ಹೇಳಿದೆಯಾ ರಾಮ ಬರ್ತಾ ಇದ್ದಾನೆ ಅಂತ.” ಒಂದೊಂದು ಕ್ಷಣವೂ ಭರತನಿಗೆ ಕಠಿಣ. ಹನುಮಂತನಿಗೂ ಕಷ್ಟ, ರಾಮ ಬರುವುದು ತಡವಾದರೆ ಭರತನಿಗೆ ಉತ್ತರಿಸುವುದೂ ಕಷ್ಟ. ಸೀತೆಯನ್ನು ಹುಡುಕಿದ ಸಮಯದಲ್ಲೂ ಹನುಮಂತನಿಗೆ ಇಂತಹದ್ದೇ ಪರೀಕ್ಷೆ. “ನಿನ್ನನ್ನು ಎತ್ತಿಕೊಂಡು ರಾಮನ ಬಳಿಗೆ ಕೊಂಡೊಯ್ಯುತ್ತೇನೆ” ಎಂದಾಗ ಸೀತೆ ಅವನಿಗೆ “ನಿನ್ನದು ಕಪಿ ಬುದ್ಧಿ, ಇಷ್ಟು ಸಣ್ಣವನಿದ್ದೀಯಾ ನೀನು ನನ್ನನ್ನು ಕೊಂಡೊಯ್ಯುತ್ತೀಯಾ” ಎಂದು ಕೇಳಿದ್ದಳು. ಹನುಮಂತನಿಗೆ ಬಹಳ ಅವಮಾನ ಆಗಿತ್ತಂತೆ. ಈಗಲೂ ಸುಮಾರು ಅದೇ ಪರಿಸ್ಥಿತಿ. ಭರತನ ಕಾತುರತೆಗೆ ಉತ್ತರವಿರಲಿಲ್ಲ ಹನುಮಂತನಿಗೆ. ಒಂದು ವೇಳೆ ರಾಮ ಬರದಿದ್ದರೇ ಭರತನ ಸ್ಥಿತಿ ಏನು? ಆಗ ಹನುಮಂತ ಹೇಳಿದ, ರಾಮ ಖಂಡಿತ ಬರ್ತಾನೆ. ಸ್ವಲ್ಪ ತಡವಾಗಿರಬಹುದು ವಾನರರಿಂದ. ಯಾಕೆಂದ್ರೆ ಅವರಿಗೆ, ಭರದ್ವಾಜರ ಆಶೀರ್ವಾದದಿಂದ, ದಾರಿಯಲ್ಲಿ ಬಹಳಷ್ಟು ಹಣ್ಣು ಹಂಪಲು ಮತ್ತು ಜೇನು ಸಿಕ್ಕಿದೆ. ಅದೂ ಒಂದು ಕಾರಣ ಇರಬಹುದು. ಅದೂ ಅಲ್ಲದೇ ಭರದ್ವಾಜರು ಬಹಳ ಆತಿಥ್ಯ ಮಾಡ್ತಾ ಇದ್ದಾರೆ. ಆತಿಥ್ಯ ಸ್ವೀಕಾರ ಮಾಡಬೇಕಲ್ವಾ? ಅವರು ಅಪ್ಪಣೆ ಕೊಟ್ಟಾಗ ತಾನೆ ಹೊರಡುವುದು.”. ಅಷ್ಟರಲ್ಲಿ ಕಪಿ ಸೇನೆಯ ನಿನಾದ ಕೇಳಿತು. ಹನುಮಂತ, “ಇದು ನನ್ನವರ ಶಬ್ದಗಳು. ನನ್ನ ಪ್ರಕಾರ ಕಪಿ ಸೇನೆ ಗೋಮತೀ ನದಿಯನ್ನು ದಾಟುತ್ತಾ ಇದೆ. ನೋಡು, ಆ ಕಡೆ ಧೂಳೆದ್ದಿದೆ. ವಾಲುಕೀ ನದಿಯ ಪರಿಸರದಲ್ಲಿ ಧೂಳೆಬ್ಬಿದೆ, ಹಾಗಾದರೆ ಅವರು ವಾಲುಕೀ ನದಿಯನ್ನು ದಾಟಿದ್ದಾರೆ. ಸಾಲವನದಲ್ಲೂ ಶಬ್ದ ಕೇಳ್ತಾ ಇದೆ. ಹಾಗಾದರೆ ಸಾಲವನ ಹುಡಿಯಾಯಿತು.” ಶಬ್ದದ ಮೇಲೆ, ಧೂಳಿನ ಮೇಲೆ ಎಲ್ಲಿಯವರೆಗೆ ಬಂದಿರಬಹುದು ಎಂದು ಹೇಳ್ತಾ ಭರತನನ್ನು ಸಮಾಧಾನ ಮಾಡ್ತಾನೆ.

ಅಷ್ಟಾಗುತ್ತಿದ್ದಂತೆ, ದೂರದಲ್ಲಿ ಆಕಾಶದಲ್ಲಿ ಪುಷ್ಪಕವಿಮಾನ ತೋರಿಬಂತು. ಗಗನದಲ್ಲಿ ಚಂದ್ರನಂತೇ ಕಾಣ್ತಾ ಇದೆ. “ಇದು ಪುಷ್ಪಕ ವಿಮಾನ, ಬ್ರಹ್ಮನ ಮನಸ್ಸಿನಿಂದ ನಿರ್ಮಿತವಾದದ್ದು. ರಾವಣನನ್ನು ಸಂಹಾರ ಮಾಡಿ ಪಡೆದುಕೊಂಡದ್ದು ಇದು, ರಾಮನದ್ದು. ಬ್ರಹ್ಮ ಕುಬೇರನಿಗೆ ಕೊಟ್ಟಿದ್ದು. ರಾವಣ ಅದನ್ನು ಒತ್ತಾಯದಿಂದ ಪಡೆದಿದ್ದ. ಇದು ರಾಮ ವಾಹನ. ಇದರೊಳಗೆ, ರಾಮ, ಸೀತೆ, ಲಕ್ಷ್ಮಣ, ವಿಭೀಷಣ, ಸುಗ್ರೀವ ಇದ್ದಾರೆ.” ಎಂದು ಹನುಮಂತ ಹೇಳುತ್ತಿರುವಂತೆಯೇ ಹರ್ಷಘೋಷ ಮುಗಿಲು ಮುಟ್ಟಿತು. ಇದು ರಾಮನ ವಿಮಾನ, ರಾಮ ಬಂದ, ಎಂದು ಕೇಳುತ್ತಿದ್ದಂತೆಯೇ ಪುರಜನರ ಜಯಘೋಷ ಸ್ವರ್ಗಮುಟ್ಟಿತು. ಸ್ತ್ರೀಯರು, ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಬಳ್ಳಿ ಬಿಚ್ಚಿದ ಕರುವಿನಂತೆ ಆದರು. ಕೆಲವರು ಕುದುರೆ ಮೇಲೆ, ಕೆಲವರು ಆನೆಯ ಮೇಲೆ, ಕೆಲವರು ವಾಹನದಲ್ಲಿದ್ದವರೆಲ್ಲ ತಮ್ಮ ತಮ್ಮ ಸ್ಥಾನದಿಂದ ಕೆಳಗೆ ಹಾರಿದರು. ನೆಲದಲ್ಲಿ ನಿಂತು ವಿಮಾನದ ಕಡೆಗೆ ನೋಡಿದರು. ರಾಮನನ್ನು ಸೋಮನಂತೆ (ಚಂದ್ರನಂತೆ), ಪುಷ್ಪಕ ವಿಮಾನದಲ್ಲಿ ಬೆಳಗುವ ಸೂರ್ಯನಂತೆ ಪುರಜನರು ಅವನನ್ನು ನೋಡುತ್ತಿದ್ದಾರೆ. ಭರತ ತಲೆಬಾಗಿದ, ಕೈಮುಗಿದ ಅಲ್ಲಿಂದಲೇ. ಅವನ ಮುಖವು ರಾಮನ ಕಡೆಗೆ ತಿರುಗಿತು, ಸೂರ್ಯಕಾಂತಿಯ ಹಾಗೆ.

ವಿಮಾನ ಬಳಿ ಬರುತ್ತಿದ್ದಂತೆಯೇ, ಸ್ವಾಗತಿಸಿದನು ಭರತ. ಅಲ್ಲಿಂದಲೇ ಪೂಜೆ ಮಾಡ್ತಾನೆ. ಸ್ಪಷ್ಟವಾಗಿ ಗೋಚರಿಸಿದನು ರಾಮ. ಬ್ರಹ್ಮಮಾನಸನಿರ್ಮಿತ ವಿಮಾನದಲ್ಲಿ ಭರತಾಗ್ರಜನು ತನ್ನ ವಿಶಾಲವಾದ ಪದ್ಮದಳನೇತ್ರದಿಂದ ಶೋಭಿಸುತ್ತಾ ಇದ್ದಾನೆ. ಮೇರು ಪರ್ವತದ ಮೇಲಿನ ಸೂರ್ಯನನ್ನು ವಂದಿಸುವ ಹಾಗೇ ಭೂಮಿಯಿಂದ ಭರತ ವಂದಿಸ್ತಿದ್ದಾನೆ.

ರಾಮನ ಆದೇಶದಂತೆ ವಿಮಾನವು ಭೂಮಿಗಿಳಿಯಿತು. ರಾಮ ತಾನಿಳಿಯುವ ಮೊದಲು ಭರತನನ್ನು ವಿಮಾನದಲ್ಲಿ ಹತ್ತಿಸಿಕೊಂಡನು. ನಂದಿಗ್ರಾಮದಿಂದ ತುಂಬ ಮುಂದೆ ಬಂದು ಸ್ವಾಗತ ಮಾಡುತ್ತಿರುವಂಥದ್ದು. ರಾಮ ಭರತನನ್ನು ಕಣ್ತುಂಬ ನೋಡ್ತಾನೆ. ಎಷ್ಟೋ ಕಾಲದ ಬಳಿಕ ರಾಮ ಭರತನನ್ನು ನೋಡ್ತಾ ಇದ್ದಾನೆ. ರಾಮ ಭರತನನ್ನು ಬಾಚಿ ತಬ್ಬಿಕೊಂಡು, ತನ್ನ ಕಾಲ ಮೇಲೆ ಕುಳ್ಳಿಸಿಕೊಳ್ತಾನೆ. ಇಬ್ಬರೂ ಅತ್ತರು. ಆನಂದಿತರಾದರು. ಆಮೇಲೆ ಸೀತೆಗೆ ವಂದಿಸಿದನು. ಉಳಿದೆಲ್ಲರನ್ನೂ ತಬ್ಬಿಕೊಂಡನು ಭರತ. ಮಾನುಷರೂಪದಲ್ಲಿದ್ದ ವಾನರರನ್ನು ತಬ್ಬಿಕೊಂಡನು ಭರತ. ಸುಗ್ರೀವನ ಹತ್ತಿರ ಬಂದು, ನಾವು ನಾಲ್ವರು ಅಣ್ಣತಮ್ಮಂದಿರಿದ್ದೆವು ಇಷ್ಟು ದಿನ, ಇನ್ಮೇಲೆ ಐದು. ನೀನು ಐದನೇಯವನು ಎಂದನು. ನಂತರ ವಿಭೀಷಣನಲ್ಲಿ, ನಿನ್ನ ಸಹಾಯದಿಂದ ರಾವಣನ ವಧೆಯು ಸಾಧ್ಯವಾಯಿತು ಎಂದನು. ಶತ್ರುಘ್ನ ಸಹೋದರರೆಲ್ಲರಿಗೂ, ಸೀತೆಗೂ ನಮಸ್ಕರಿಸಿದನು. ರಾಮ ಕೌಸಲ್ಯೆಗೆ ವಂದಿಸಿದನು, ಸುಮಿತ್ರೆಗೆ ಹಾಗೂ ಕೈಕೇಯಿಗೂ ಮನಃಪೂರ್ತಿ ನಮಸ್ಕರಿಸಿದನು. ಗುರುಗಳಿಗೂ ನಮಸ್ಕರಿಸಿದನು.

ಆಗ ಪ್ರಜೆಗಳೆಲ್ಲರೂ ಕೈಜೋಡಿಸಿ, ಕೌಸಲ್ಯಾನಂದವರ್ಧನನಿಗೆ ಸ್ವಾಗತ ಎಂದು ಉದ್ಘೋಷ ಮಾಡಿದರು. ಆಗ ಭರತ ಪಾದುಕೆಯನ್ನು ರಾಮನ ಕಾಲಿಗೆ ಜೋಡಿಸಿದನು. ನಿರಾಳನಾದ ಭರತ. ಅದೊಂದು ಸಾಂಕೇತಿಕ. “ಪಾದುಕೆಗಳ ಮೂಲಕವಾಗಿ, ರಾಜ್ಯವನ್ನು ನಿನಗೆ ಸಮರ್ಪಿಸಿದೆ. ದೊರೆಯೇ, ನಿನ್ನ ರಾಜ್ಯವನ್ನು ಯಥಾಶಕ್ತಿ ಪಾಲಿಸಿದ್ದೇನೆ. ಇಂದು ನನ್ನ ಜನ್ಮ ಕೃತಾರ್ಥ. ಎಷ್ಟೋ ಕಾಲದ ನನ್ನ ಆಸೆ ಪೂರ್ತಿಯಾಗುವ ಕ್ಷಣವಿದು. ಯಾಕೆಂದರೆ ಎಷ್ಟೋ ಕಾಲದ ಬಳಿಕ ನೀನು ಬಂದು ದೊರೆಯಾಗುವುದನ್ನು ಕಾಣ್ತಾ ಇದೇನಲ್ಲಾ…! ಈ ಕ್ಷಣ ಬದುಕಿನ ಧನ್ಯ ಕ್ಷಣ. ಒಂದು ಸಣ್ಣ ವರದಿಯನ್ನು ಕೊಡ್ತಾನೆ. ಅಯೋಧ್ಯೆಯ ಕೋಷ್ಠಾಗಾರ ಮತ್ತು ರಾಜಧಾನಿ, ಸೇನೆ ಇವೆಲ್ಲ ಹದಿನಾಲ್ಕು ವರ್ಷದಲ್ಲಿ ಮೊದಲಿಗಿಂತ ಹತ್ತು ಪಾಲು ಬೆಳೆದಿದೆ. ಇದು ನಿನ್ನ ತೇಜಸ್ಸಿನಿಂದಾಗಿ, ನಾನು ನೆಪಮಾತ್ರ” ಎಂದನು ಭರತ. ಭರತನ ಪ್ರೀತಿ, ತ್ಯಾಗ, ಸಾಮರ್ಥ್ಯವನ್ನು ಗಮನಿಸಬಹುದು. ಇದಕ್ಕೆ ಸಾಕ್ಷಿಯಾದ ಸುಗ್ರೀವ, ವಿಭೀಷಣ ಎಲ್ಲರೂ ಗಳಗಳನೆ ಅತ್ತರು. ಭರತಾಶ್ರಮಕ್ಕೆ ವಿಮಾನದಲ್ಲಿ ಬಂದರು ಎಲ್ಲರೂ.

ಇಳಿದ ತಕ್ಷಣ ರಾಮ ವಿಮಾನಕ್ಕೆ ಹೇಳಿದನು, ಹೋಗು ಕುಬೇರನ ಸ್ಥಾನಕ್ಕೆ. ಅಲ್ಲಿ ಸಲ್ಲುವವನು ನೀನು. ನಿನ್ನ ಸೇವೆ ಸಂದಿದೆ. ಬ್ರಹ್ಮ ಕುಬೇರನಿಗೆ ನೀಡಿದ ವಿಮಾನ. ಅನ್ಯಾಯವಾಗಿ ಕಿತ್ತುಕೊಂಡು ಬಂದಿದ್ದ ರಾವಣ. ರಾಮನ ಭಾವನೆ. ರಾಮನ ಸಖ ಸುಯಜ್ಞನ ಬಳಿ ಹೋಗಿ ರಾಮ ಕುಳಿತನು. ಸಖ್ಯಪ್ರಶ್ನೆಮಾಡ್ತಾನೆ. ಹೀಗೆ ಎಲ್ಲರೂ ನಂದಿಗ್ರಾಮಕ್ಕೆ ಬಂದು ತಲುಪಿದರು. ರಾಮ ಲಕ್ಷ್ಮಣ ಭರತ ಶತ್ರುಘ್ನ, ಕೌಸಲ್ಯೆ ಸುಮಿತ್ರೆ ಕೈಕೇಯಿ, ವಸಿಷ್ಠರು, ಸುಮಂತ್ರನೇ ಮೊದಲಾದ ಎಂಟು ಮಂತ್ರಿಗಳು, ಸೇನಾಪತಿಗಳು, ಸೇನೆ, ನಾಗರಿಕರು, ಋಷಿಮುನಿಗಳು, ಇಡೀ ಕಪಿಸೇನೆ, ವಿಭೀಷಣ ಹಾಗೂ ಅವನ ನಾಲ್ವರು ಅಮಾತ್ಯರು. ರಾಮನ ಪಟ್ಟಾಭಿಷೇಕವೊಂದೇ ಬಾಕಿ ಇರುವುದು. ಪಟ್ಟಾಭಿಷೇಕಕ್ಕೆ ನಂದಿಗ್ರಾಮದಿಂದ ಅಯೋಧ್ಯೆಗೆ ಹೋಗಬೇಕು.

ರಾಮನೆಂದರೆ ರಾತ್ರಿ ಕಳೆದು ಬೆಳಗು ಮಾಡುವವನು. ಅವನು ಬಂದಾಗ ರಾವಣನೆಂಬ ಕಾಳರಾತ್ರಿಯಿತ್ತು ಭುವಿಯಲ್ಲಿ, ಅದನ್ನು ಕಳೆದು ಬೆಳಕು ಕೊಟ್ಟವನು ರಾಮ. ಪಟ್ಟಾಭಿಷೇಕವನ್ನು ಮುಂದಿನ ಪ್ರವಚನವನ್ನು ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments Box