ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಒಂದು ಎರಡಾಯಿತು. ಎರಡನ್ನು ಒಂದುಗೂಡಿಸಲು, ಒಂದು ಎರಡಾಯಿತು. ಪರಿಣಾಮ, ಎರಡು ಒಂದಾಯಿತು. ಮತ್ತೆ ಎರಡನ್ನು ಒಂದುಗೂಡಿಸಲು ಒಂದು ಎರಡಾಯಿತು. ಎರಡು ಒಂದಾಯಿತು. ಕೊನೆಯಲ್ಲಿ ಎರಡೂ ಒಂದಾಯಿತು…!

ಇದು ಸಂಪೂರ್ಣ ರಾಮಾಯಣ ಪ್ರವಚನ…..!!!

ಬಿಡಿಸುವುದಾದರೆ, ಒಂದು ಎರಡಾಯಿತು. ಹರಿಯಲ್ಲಿ ಒಂದಾಗಿದ್ದ ಜಯವಿಜಯರು ಎರಡಾದರು. ಭೂಮಿಗೆ ಬಂದರು. ರಾವಣ ಕುಂಭಕರ್ಣರಾದರು. ಎರಡಾಯಿತು. ಆ ಎರಡನ್ನು ಒಂದುಗೂಡಿಸಲು, ಒಂದು ಎರಡಾಯಿತು. ಶಿವಧನಸ್ಸು ಎರಡಾಯಿತಲ್ವಾ.. ಸೀತಾರಾಮರನ್ನು ವಿವಾಹಬಂಧನದಲ್ಲಿ ಒಂದುಗೂಡಿಸಲು, ಒಂದು ಎರಡಾಯಿತು. ಪರಿಣಾಮ,ಸೀತಾರಾಮರು ಒಂದಾದರು. ಎರಡನ್ನು ಒಂದುಗೂಡಿಸಲು ಒಂದು ಎರಡಾಯಿತು ಅಂದರೆ, ಸೀತಾಪಹರಣವಾಯಿತು. ಸೀತೆಯಿಂದ ರಾಮನನ್ನು ಬೇರೆಮಾಡಿ, ಅಂದರೆ ಲೌಕಿಕವಾಗಿ ಬೇರೆಮಾಡಿ ಲಂಕೆಯಲ್ಲಿ ಇರಿಸಲಾಯಿತು. ಒಂದು ಎರಡಾಗಿದ್ದೇಕೆ ಅಂದರೆ ಎರಡಾದ ಜಯವಿಜಯರನ್ನು ಒಂದುಗೂಡಿಸುವ ಸಲುವಾಗಿ. ಪರಿಣಾಮ, ಎರಡು ಒಂದಾಯಿತು. ರಾವಣಕುಂಭಕರ್ಣರ ಮೋಕ್ಷವಾಯಿತು. ಜಯವಿಜಯರಿಗೆ ವಿಷ್ಣು ದೊರೆತನು.

ಇಂದು ಸೀತಾರಾಮರು ಒಂದಾದ ದಿನ… ಸೀತಾರಾಮಕಲ್ಯಾಣೋತ್ಸವ…..!!

ಯೋಗ್ಯತೆ ಯೋಗವೂ ಇತ್ತು. ಜನಕ ರಾಮನಿಗೆ ಸೀತೆಯನ್ನು ಧಾರೆಯೆರೆದು ಕೊಡುತ್ತಾನೆ. ಈಗ ಅಯೋಧ್ಯೆಗೆ ಹೊರಡಬೇಕಾಗಿದೆ. ತನ್ನ ಪಾತ್ರವನ್ನು ಮುಗಿಸಿ ವಿಶ್ವಾಮಿತ್ರರು ಹಿಮಾಲಯದತ್ತ ಹೊರಟರು. ದಶರಥ ಮಕ್ಕಳು ಸೊಸೆಯರೊಡಗೂಡಿ ಕೋಸಲದತ್ತ ಹೊರಟನು. ಜನಕ ಉತ್ತಮೋತ್ತಮ ಉಡುಗೊರೆಗಳನ್ನ, ಸೇನೆಗಳನ್ನು, ಸ್ವರ್ಣ ರಥಗಳನ್ನು ಕೊಟ್ಟು, ಕೊಂಚ ದೂರ ಅನುಸರಿಸಿ, ಸೀತಾರಾಮರನ್ನು ಕಳುಹಿಸಿ ಹಿಂದಿರುಗಿದರು…

ದಾರಿಮಧ್ಯದಲ್ಲಿ ಪ್ರಕೃತಿಯ ಮಾತು….! ಪಕ್ಷಿಗಳ ಅಮಂಗಲ ಧನಿ, ಮೃಗಗಳ ಮಂಗಲ ಗತಿ…! ಜಿಜ್ಞಾಸೆ ಬಂದಾಗ ಗುರುಗಳು ಬೇಕು. ವಸಿಷ್ಠರನ್ನು ಕೇಳಿದಾಗ, “ಒಂದು ಘೋರ ಆಪತ್ತು ಬರುತ್ತದೆ. ಅಮಂಗಲದ ಸೂಚನೆ. ಅದು ಸುಲಭವಾಗಿ ಪರಿಹಾರವಾಗುತ್ತದೆ. ಇದು ಮಂಗಲ ಸೂಚನೆ. ” ಎನ್ನುವಾಗಲೇ, ಗಾಡಾಂಧಕಾರ ಆವರಿಸಿತು. ಅಲ್ಲಿಗೆ ಬಂದದ್ದು ಪರಶುರಾಮ.

“ಶಿವಧನಸ್ಸನ್ನು ಮುರಿದ ನೀನು, ವೈಷ್ಣವ ಧನಸ್ಸನ್ನು ಬಾಗಿಸಿ ಹೆದೆಯೇರಿಸು ಬಾಣವನ್ನು. ಇದರಲ್ಲಿ ಸಫಲನಾದರೆ ದ್ವಂದ್ವ ಯುದ್ಧಮಾಡೋಣ” ಎಂದು ಪರಶುರಾಮರು ದಾಶರಥ ರಾಮನಿಗೆ ಹೇಳಿದರು. ಇದಕ್ಕೆ “ರಾಮ-ರಾಮ ವಿವಾದ” ಎಂದು ಹೆಸರು.

ಕುಪಿತನಾದರೂ ರಾಮ, ಗುರುಹಿರಿಯರ ಮುಂದೆ ಸಂಯಮದಿಂದ, ಧನಸ್ಸನ್ನು ಲೀಲಾಜಾಲವಾಗಿ ಎತ್ತಿ ಹೆದೆಯೇರಿ ಬಾಣವನ್ನು ಹೂಡಿ, ಪರಶುರಾಮನ ಕಡೆಗೆ ಹಿಡಿದು, “ಬ್ರಾಹ್ಮಣರಿದ್ದೀರಿ, ವಿಶ್ವಾಮಿತ್ರರ ಬಂಧುಗಳು ನೀವು. ಗೌರವವಿದೆ. ಇದಲ್ಲದಿದ್ದರೆ ಬಾಣವು ನಿಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತಿತ್ತು” ಎಂದನು ದಾಶರಥ ರಾಮ.

“ನಿಮ್ಮ ಚಲನಶಕ್ತಿಯನ್ನು ನಾಶಮಾಡ್ತೇನೆ ಅಥವಾ ಈವರೆಗೆ ಪಡೆದ ಪುಣ್ಯಲೋಕಗಳನ್ನು ನಾಶಮಾಡಲೋ” ಎಂದಾಗ ಪುಣ್ಯಲೋಕವನ್ನು ಮಾಡು ಎಂದರು ಪರಶುರಾಮರು. ಬಿಟ್ಟ ಬಾಣವು ಪರಶುರಾಮರ ಪುಣ್ಯಲೋಕಗಳನ್ನು ನಾಶಮಾಡಿತು.

ನಂತರ, ಸೀತಾರಾಮರು ಕೋಸಲಕೆ ಬಂದು, ಗೃಹಪ್ರವೇಶ ಮಾಡಿದರು. ಮಕ್ಕಳ ವಿಷಯದಲ್ಲಿ ದಶರಥ ಸುಪ್ರೀತ….!
ರಾಮನ ಹೃದಯವಾಸಿ ಸೀತೆ. ಸೀತೆಗೆ ರಾಮನೆಂದರೆ ಅದಕ್ಕಿಂತ ದುಪ್ಪಟ್ಟು ಪ್ರೀತಿ. ಮತ್ತೆ ರಾಮನಿಗೆ ಮತ್ತೂ ಪ್ರೀತಿ. ಹೃದಯವೇ ಹೃದಯಕ್ಕೆ ಹೇಳುತ್ತಿತ್ತು. ಹೀಗಿದ್ದರು ರಾಮಸೀತೆಯರು. ಅಕ್ಷರದಲ್ಲಿ ವಿವರಿಸಲಾಗದಷ್ಟು ಪ್ರೀತಿ ಅವರಿಬ್ಬರಲ್ಲಿತ್ತು.

ಇಲ್ಲಿಗೆ ಬಾಲಕಾಂಡದ 71ಸರ್ಗದೊಂದಿಗೆ ರಾಮಪಾದಗಳಿಗೆ ಸಮರ್ಪಿತವಾಯಿತು.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box