ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನೆಮ್ಮದಿಯ ಹತ್ತಿರದ ದಾರಿ ನಂಬಿಕೆ -ಶ್ರೀಸೂಕ್ತಿ

ನಂಬುವುದೆಂದರೆ ನೂರು ಸಾವಿರ ಸಲ ಯೋಚನೆ ಮಾಡಿ ನಂಬಬೇಕು. ನಂಬಿಕೆಯನ್ನು ಕೆಡಿಸುವುದಕ್ಕೆ ಕ್ಷಮೆಯಿಲ್ಲ.

ಮಂಥರೆ ಕೈಕೆಯಿಯ ನಂಬಿಕೆಯನ್ನು ತನ್ನ ಸ್ವಾರ್ಥಕ್ಕೋಸ್ಕರ ಕೆಡಿಸುವ ಪ್ರಯತ್ನವನ್ನು ಮಾಡುತ್ತಾಳೆ. ಕೈಕೇಯಿಯ ಮುಖಾಂತರ ತನ್ನ ವಶದಲ್ಲಿ ಎಲ್ಲವೂ ಇರಬೇಕೆಂಬ ಸ್ವಾರ್ಥ.

ಮಂಥರೆ, ” ಅಶ್ವಪತಿಯ ಮಗಳೇ, ರಾಜನೀತಿಯು ಕಠೋರ, ನಿನಗೆ ತಿಳಿಯದು. ನಿನ್ನ ಗಂಡ ಮಾತಿನಲ್ಲಿ ಧರ್ಮಿಷ್ಠ, ಆದರೆ ಮಾಡುವುದು ಮೋಸ, ಆತನು ಕೌಸಲ್ಯೆಗೆ ಉಪಕಾರವನ್ನು ಮಾಡುತ್ತಿದ್ದಾನೆ. ಭರತನನ್ನು ಕೇಕಯ ರಾಜ್ಯಕ್ಕೆ ಕಳುಹಿಸಿ ರಾಮನಿಗೆ ಪಟ್ಟಕಟ್ಟುತ್ತಿದ್ದಾರೆ? ಪತಿಯ ನೆಪದಲ್ಲಿ ಶತ್ರು ಅವನು, ರಾಮನಿಗೆ ಪಟ್ಟಕಟ್ಟಿದರೆ, ನಿನ್ನ ಸರ್ವನಾಶ ಕಟ್ಟಿಟ್ಟಬುತ್ತಿ. ಭರತನನ್ನು, ನಿನ್ನನ್ನು, ನನ್ನನ್ನೂ ಕಾಪಾಡಿಕೊ!!” ಎಂದಳು.

ಪರಮಪ್ರಿಯವಾದದ್ದನ್ನು ತಿಳಿದ ರಾಣಿ ಕೈಕೇಯಿ ಅತ್ಯಂತ ಸಂತುಷ್ಟಳಾಗಿ  ಆಭರಣವನ್ನು ಮಂಥರೆಗೆ ಕೊಟ್ಟಳು. ರಾಮನಿಗೆ ಪಟ್ಟಕಟ್ಟುವುದು ಅತ್ಯಂತ ಸಿಹಿಸುದ್ದಿಯಾಗಿತ್ತು.

ಮಂಥರೆಯು ಆಕೆಗೆ ನೀಡಿದ ಆಭರಣವನ್ನು ಎಸೆದಳು. “ಸವತಿಯ ಮಗ ಶತ್ರು ಇದ್ದಂತೆ. ಆದರೆ ನೀನು ಸಂತೋಷಪಡುತ್ತಿದ್ದಿ. ರಾಮನಿಗೆ ಪಟ್ಟಕಟ್ಟಿದರೆ, ಭರತನಿಗೆ ಅಪಾಯ. ಭರತನು ಜೀವಂತ ಇರುವುದಿಲ್ಲ. ರಾಮನ ಬಳಗ ಸಂತೋಷ ಪಡುತ್ತದೆ ಆದರೆ ನಿನ್ನ ಬಳಗ ದುಃಖದಿಂದ ಕೊರಗಬೇಕಾದೀತು” ಎಂದು ಕಪಟದಿಂದ ನುಡಿದಳು.

ಆಗ ರಾಣಿ, ರಾಮನ ಗುಣವನ್ನು ಹೊಗಳುತ್ತಾಳೆ. ಅಷ್ಟೇ ಅಲ್ಲದೆ “ರಾಮ ರಾಜನಾಗಬೇಕಾದವನು, ಅದು ಪರಂಪರೆ. ರಾಮ ರಾಜನಾದರೆ ಭರತನಿಗೆ ಏನೂ ತೊಂದರೆ ಇಲ್ಲ. ತಮ್ಮಂದಿರನ್ನು ತನ್ನ ಮಕ್ಕಳ ಹಾಗೆ ನೋಡಿಕೊಳ್ಳುವನು ಎಂದು ರಾಮನ ಕುರಿತು ಹೇಳಿದಳು ರಾಣಿ. ರಾಮ ಅಸಂಖ್ಯ ವರ್ಷಗಳ ಕಾಲ ಆಳಿದ ನಂತರ ಭರತನಿಗೆ ರಾಜ್ಯ ದೊರಕುತ್ತದೆ.  ಆಗ ಆತನು ಆಳಲಿ. ಕೊನೆಗೆ ಭರತ ಹೇಗೆ ನನಗೆ ಮಾನ್ಯನೋ ರಾಮ ಅದಕ್ಕಿಂತ ಹೆಚ್ಚು. ಏಕೆಂದರೆ, ರಾಮನು ಕೌಸಲ್ಯೆಗಿಂತ ನನಗೆ ಹೆಚ್ಚು ಸೇವೆ ಮಾಡಿದ್ದಾನೆ.” ಎಂದು ವಿಶ್ವಾಸದಿಂದ ಹೇಳಿದಳು ರಾಣಿ.

ಅತೀವ ದುಃಖದಿಂದ ಕೂಡಿದ ದಾಸಿ, “ರಾಮನಾದ ಮೇಲೆ ಆತನ ಮಕ್ಕಳು ರಾಜ್ಯವನ್ನಾಳುತ್ತಾರೆ, ಭರತನಲ್ಲ. ಗುಣವಂತರಾದ ಮಕ್ಕಳು ಆಳಲು ಅರ್ಹರು. ಭರತನನ್ನು ದೇಶಾಂತರಕ್ಕೆ ಅಥವಾ ಪರಲೋಕಕ್ಕೆ ಕಳುಹಿಸುತ್ತಾನೆ ರಾಮ.  ಈವರೆಗೆ ನೀನು ಕೌಸಲ್ಯೆಯನ್ನು ರಾಜದರ್ಪದಿಂದ ಪೀಡಿಸಿದ್ದನ್ನು ರಾಜಮಾತೆಯಾದಮೇಲೆ ಆಕೆ ತೀರಿಸದೆ ಇರಬಹುದೇ!!?? ಕೌಸಲ್ಯೆಯೇ ನಿಜವಾದ ಸ್ಪರ್ಧಿ.” ಎಂದು ರಾಣಿಗೆ ಹೇಳಿದಳು.

ಕೈಕೇಯಿಯ ಮುಖ ಕ್ರೋಧದಿಂದ ಉರಿದುಹೋಯಿತು. ಆಕೆಯು ‘ಇಂದೇ ರಾಮನನ್ನು ಕಾಡಿಗೆ ಅಟ್ಟುತ್ತೇನೆ” ಎಂದಳು.

ಮಂಥರೆಯಲ್ಲಿ ಕೈಕೇಯಿಯು ಉಪಾಯವನ್ನು ಕೇಳಿದಾಗ  ದಾಸಿ, “ದೇವದಾನವರ ಯುದ್ಧದಲ್ಲಿ ದಶರಥನು ಇಂದ್ರನಿಗೆ ಸಹಾಯ ಮಾಡಲು ಹೋದಾಗ ನಿನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ.  ಶಂಭರಾಪುರದಲ್ಲಿ ಘೋರಯುದ್ಧದಲ್ಲಿ ರಾಜ ಗಾಯಗೊಂಡಾಗ ನೀನು ಆತನಿಗೆ ಸಹಾಯಮಾಡಿದಾಗ ನಿನಗೆ 2 ವರವನ್ನು ನೀಡಿದ್ದ. ಆಗ ನೀನು ಮುಂದೆ ಬೇಕಾದಾಗ ಕೇಳುತ್ತೇನೆ ಎಂದು ಹೇಳಿರುವೆ. ಈಗ ಆ ವರವನ್ನು ಕೇಳುವ ಸಮಯ ಬಂದಿದೆ. 1)ಭರತ ರಾಜನಾಗಬೇಕು, 2)ರಾಮನಿಗೆ 14 ವರ್ಷ ವನವಾಸ.

ಅದಕ್ಕಾಗಿ ನೀನು ಕ್ರೋಧಾಗಾರವನ್ನು ಪ್ರವೇಶಿಸಬೇಕು. ದಶರಥನಿಗೆ ತಿಳಿಯಲಿ.  ಕೊಳಕು ಬಟ್ಟೆಯನ್ನು ಸುತ್ತು, ಬಂದರೂ ನೋಡಬೇಡ, ಕ್ರೋಧಗೊಂಡಂತೆ ನಟಿಸು, ಮಾತನಾಡದಿರು. ದೊರೆಯನ್ನು ಕಂಡಕೂಡಲೇ ಅಳಲು ಆರಂಭಿಸು.” ಎಂದು ಕೈಕೇಯಿಗೆ ಉಪಾಯವನ್ನು ನೀಡಿ ಮುಂದುವರಿಸುತ್ತಾಳೆ.

“ಗಂಡನಿಗೆ ನೀನು ಅತ್ಯಂತ ಪ್ರಿಯೆ, ನಿನಗಾಗಿ ಬೆಂಕಿಯನ್ನು ಹೊಕ್ಕಾನು, ಪ್ರಾಣ ಕೊಟ್ಟಾನು. ನಿನ್ನನ್ನು ಮೀರಲಾರನು.”

ದುಃಖವಾದಾಗ ಸಂಯಮವನ್ನು ಮೀರಬಾರದು -ಶ್ರೀಸೂಕ್ತಿ

ಅನರ್ಥವನ್ನು ಅರ್ಥವನ್ನಾಗಿ ಪರಿವರ್ತಿಸಿಕೊಂಡ ಕೈಕೆಯಿಗೆ ಮಂಥರೆಯ ಮೇಲೆ ಗರ್ವ ಬಂತು. ಆಕೆಯನ್ನು ರಾಣಿ ಹೊಗಳುತ್ತಾಳೆ. “ಅತ್ಯಂತ ಶ್ರೇಷ್ಠಳು ನೀನು, ಭೂಮಂಡಲದ ಎಲ್ಲಾ ಕುಬ್ಜರಲ್ಲಿ ನೀನು ಶ್ರೇಷ್ಠ. ನಿನ್ನ ಒಳ್ಳೆ ಬುದ್ದಿ, ರಾಜನ ಕೆಟ್ಟ ಬುದ್ದಿ ನನಗೆ ತಿಳಿಯಲಿಲ್ಲ. ನೀನು ಪ್ರಿಯದರ್ಶಿನಿ, ರಾಜಹಂಸಿನಿ. ನಿನ್ನ ಗೂನಿನಲ್ಲಿ ಎಲ್ಲ ಮಾಯೆಗಳು, ಉಪಾಯಗಳು ಅಡಗಿದೆ” ಎಂದು ಹೇಳಿ ಉಡುಗೊರೆ, ಬಹುಮಾನಗಳನ್ನು ನೀಡಿದಳು. “ಚಿನ್ನದ ಕವಚವನ್ನು ಆಕೆಯ ಗೂನಿಗೆ ಹಾಕುತ್ತೇನೆ ಎಂದು ಹೇಳಿದಳು. ಮೈತುಂಬ ಚಿನ್ನ, ಉತ್ತಮೋತ್ತಮವಾದಂತಹ ಸೀರೆಗಳನ್ನುಟ್ಟು ಎಲ್ಲರನ್ನು ಹೊಟ್ಟೆಯುರಿಸುತ್ತ ಓಡಾಡಬೇಕು” ಎಂದು ಹೇಳಿದಳು.

ಆಗ ಮಂಥರೆ,”ಎಲ್ಲವನ್ನು ಕೊಡು. ಆದರೆ ಈ ಕೆಲಸವನ್ನು ತಡಮಾಡಬೇಡ. ಈಗಲೇ ಕಾರ್ಯವನ್ನು ಮಾಡು ಎಂದು ಹೇಳಿದಳು.”

ಮುಂದೆ ಈ ಕಪಟಿಯ ಮಾತನ್ನು ಕೇಳಿದ ಕೈಕೇಯಿ ಏನು ಮಾಡಿದಳು?? ಎಂದು ನಾಳಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments Box