ಬ್ರಹ್ಮಾಂಡದಲ್ಲಿ ಅನಂತ ಕೋಟಿ ಜೀವಗಳು ಬದುಕುತ್ತಿದ್ದಾವೆ, ಆ ಎಲ್ಲ ಜೀವಿಗಳು ಪ್ರತಿಕ್ಷಣವೂ ಒಂದಿಲ್ಲೊಂದನ್ನು ಬಯಸುತ್ತಲೇ ಇರುತ್ತವೆ, ಇಷ್ಟಾರು ಅನಂತ ಕೋಟಿ ಜೀವಗಳ ಬಯಕೆಗಳನ್ನು ಸಂಗ್ರಹಿಸಿ ಹೇಳೋದಾದರೆ, ಕೆಲವು ಇಷ್ಟ ಪ್ರಾಪ್ತಿ, ಕೆಲವು ಕಷ್ಟ ಪರಿಹಾರಗಳು.. ಕೆಲವು ಬೇಕುಗಳು, ಕೆಲವು ಬೇಡಗಳು..

ಈ ಎಲ್ಲ ಬೇಕು,ಬೇಡಗಳ ಈಡೇರಿಕೆಗೆ ಯಾವುದಾದರೂ ಭದ್ರವಾದ ವ್ಯಕ್ತಿ ಅಥವಾ ಶಕ್ತಿಯನ್ನು ಆಶ್ರಯಿಸಬೇಕು.

*ಸೂಕ್ತವಾದ ಆಯ್ಕೆ ಮತ್ತು ಆಯ್ಕೆಯ ಕುರಿತು ಭದ್ರವಾದ ನಂಬಿಕೆ, ಇವೆರಡು ಇದ್ದರೆ ಜೀವನ ಭದ್ರ ~ ಶ್ರೀಸೂಕ್ತಿ*

~
ಶಾಂತಾ-ಋಷ್ಯಶೃಂಗರು ಅಯೋಧ್ಯೆಗೆ ಬಂದ ಬಹುದಿನಗಳು ಕಳೆದ ಬಳಿಕ, ವಸಂತ ಋತುವಿನ ಸಮಯದಲ್ಲಿ ರಾಜನಿಗೆ – ಈಗ ಯಾಗ ಮಾಡಬೇಕು ಎಂಬ ಮನಸ್ಸು ಬಂತು.

ಮುನಿಯನ್ನು ಪ್ರಸನ್ನಗೊಳಿಸಿ ಒಲಿಸಿಕೊಂಡು ವರಿಸಿದ.
ಯಜ್ಞಕ್ಕಾಗಿ ವರಿಸಿದ್ದು, ಯಜ್ಞವು ಸಂತಾನಕ್ಕಾಗಿ, ಸಂತಾನವು ಕುಲಕ್ಕಾಗಿ‌..

ಕಷ್ಟ ಪರಿಹಾರ ಆಗಬೇಕಿದೆ, ಇಷ್ಟ ಪ್ರಾಪ್ತಿಯಾಗಬೇಕಿದೆ; ಸಂತಾನವಿಲ್ಲದ ಕಷ್ಟ ಪರಿಹಾರವಾಗಿ ಸಂತಾನದ ಇಷ್ಟ ಪ್ರಾಪ್ತಿ ಆಗಬೇಕಾಗಿದೆ. ಇದಕ್ಕೆ ದಶರಥ ಸೂಕ್ತವಾದ ವ್ಯಕ್ತಿ-ಶಕ್ತಿಯನ್ನು ಆಶ್ರಯಿಸಿದ್ದ… ಋಷ್ಯಶೃಂಗರು ಒಪ್ಪಿದರು; ಅಂಗೀಕರಿಸಿದರು.

ಋಷ್ಯಶೃಂಗರ ಪ್ರಭಾವದಿಂದ ಅಶ್ವಮೇಧವನ್ನು ಮಾಡಿಸಿ ಸಂತಾನವನ್ನು ಪಡೆಯಬೇಕಿದೆ, ಒಪ್ಪಿಗೆಯೇ ಎಂದು ದಶರಥ ತನ್ನ ವಸಿಷ್ಠಾದಿ ಗುರುಗಳನ್ನು ಕೇಳಿದ, ಗುರುಗಳು ಅಂಗೀಕರಿಸಿದರು‌. ಇಲ್ಲಿರುವ ಸೂಕ್ಷ್ಮ, ಕಲಿಕೆಯೇನೆಂದರೆ:
ಸರಿಯಾದ ಸಮಯದಲ್ಲಿ ಮಾತಾಡಿಕೊಂಡರೆ ಹಲವು ಸಮಸ್ಯೆಗಳೇ ಬರುವುದಿಲ್ಲ!

ಅಶ್ವಗಳ ವಿಮೋಚನೆ ಆಗಿದೆ, ಮತ್ತೆ ಒಂದು ವರ್ಷ ಕಳೆಯಬೇಕು, ಇನ್ನೊಮ್ಮೆ ವಸಂತ ಬರಬೇಕು..

ಪುನಃ ವಸಂತ ಬಂದಾಗ, ಯಜ್ಞಕ್ಕಾಗಿ ಯಾಗಶಾಲೆಯನ್ನು ಪ್ರವೇಶಿಸಿ, ವಸಿಷ್ಠರ ಚರಣಕ್ಕೆರಗಿ, “ಗುರುಗಳೇ, ಈ ಯಜ್ಞವು ಸಂಪೂರ್ಣವಾಗಿ ಯಶಸ್ವಿಯಾಗಬೇಕಿದೆ. ನೀವಿಲ್ಲದೆ ಒಂದು ಹೆಜ್ಜೆಯೂ ಮುಂದೆ ಹೋಗಲು ಸಾಧ್ಯವಿಲ್ಲ. ನೀವು ನನಗೆ ಪರಮಸಖರೂ ಹೌದು, ಮಹಾಗುರು-ಪರಮಗುರುವೂ ಹೌದು, ಈ ಯಜ್ಞದ ಯಶಸ್ಸಿನ ಭಾರವು ನಿಮ್ಮ ಹೆಗಲ ಮೇಲಿರಲಿ” ಎಂದ ದಶರಥ!

*ಗುರುವೆಂದರೆ ಎರಡೂ ಆಗಿರಬೇಕು! ಅಷ್ಟೆತ್ತರವೂ ಇರಬೇಕು, ಇಷ್ಟು ಹತ್ತಿರವೂ ಇರಬೇಕು ~ ಶ್ರೀಸೂಕ್ತಿ*

ವಸಿಷ್ಠರು ಪೂರ್ಣವಾಗಿ ಒಪ್ಪಿದರು, “ನಿನ್ನ ಪ್ರೇರಣೆಯಂತೇ ಅಶ್ವಮೇಧ ನಡೆಯಲಿದೆ, ನೀನೇನು ಚಿಂತೆ ಮಾಡಬೇಡ, ನಾನೇ ಇದ್ದು ನೋಡಿಕೊಳ್ಳುತ್ತೇನೆ” ಎಂದರು.

ಹೇಳಿದ್ದು ಮಾತ್ರ ಅಲ್ಲ, ಕಾರ್ಯೋನ್ಮುಖರಾದರು. ಅಶ್ವಮೇಧ ವಿಮೋಚನೆ ಮಾಡಲು ಏನೇನು ಬೇಕೊ, ಯಾರುಯಾರು ಬೇಕೋ ಆ ಎಲ್ಲ ಸಿದ್ಧತೆ ಮಾಡಿದರು.

ಹಿರಿಯ ಅನುಭವಿ ಬ್ರಾಹ್ಮಣರು, ಯಜ್ಞಕ್ಕೆ ಬೇಕಾದ ಶಿಲ್ಪಕರ್ಮಿಗಳು, ಕರ್ಮಾಂತಿಕರು, ಶಿಲ್ಪಕರರು, ಬಡಗಿಗಳು, ನೆಲವನ್ನು ಅಗೆಯುವವರು, ನಟ ನರ್ತಕರು, ಶಾಸ್ತ್ರಜ್ಞರು, ತಿಳಿದವರು, ಇವರನ್ನೆಲ್ಲ ಕರೆದು ಸಭೆ ಮಾಡಿ ಈ “ಅಶ್ವಮೇಧ ಯಜ್ಞವನ್ನು ನಿರ್ವಹಿಸಿ, ಇದು ಗುರುಕರೆ ಮಾತ್ರವಲ್ಲ ರಾಜಾಜ್ಞೆಯೂ ಹೌದು” ಎಂದರು.

ಇಟ್ಟಿಗೆಗಳನ್ನು ತನ್ನಿ, ಔಪಕಾರ್ಯಗಳ ನಿರ್ಮಾಣ, ಬ್ರಾಹ್ಮಣತ್ತೋಮರಿಗೆ ವಾಸಸ್ಥಾನಗಳನ್ನು ನಿರ್ಮಿಸಿ, ಪೌರರಿಗೆ ವಿಸ್ತೃತವಾದ ವಸತಿಗೃಹಗಳನ್ನು, ಅಶ್ವಶಾಲೆ, ಗಜಶಾಲೆಗಳನ್ನು ನಿರ್ಮಿಸಿ, ವಿದೇಶದ ಭಟರಿಗೆ ಬೇಕಾದ ವ್ಯವಸ್ಥೆಯನ್ನು, ಹಳ್ಳಿ ಜನರಿಗೆ ಬಹುಶೋಭವಾದ ವ್ಯವಸ್ಥೆ ಕಲ್ಪಿಸಿ. ಅನ್ನದಾನ ಮಾಡಬೇಕು,ಎಲ್ಲಿಯೂ ಅನಾದರ ಇರಬಾರದು‌. ಏನೇ ಮಾಡಿದರೂ ಹೃದಯದ ತುಂಬಾ ಒಲವನ್ನು ತುಂಬಿ ಮಾಡಿ” ಎಂದರು

*ಆಹಾರದ ಸಮಯದಲ್ಲಿ ಅನಾದರ ಸಲ್ಲ – ಶ್ರಿಸೂಕ್ತಿ*

ಆ ಎಲ್ಲರೂ, “ನೀವು ಹೇಳಿದ್ದರಲ್ಕಿ ಒಂಚೂರು ಕೊರತೆ ಇಲ್ಲದಂತೆ ಮಾಡುತ್ತೇವೆ” ಎಂದು ವಿಶ್ವಾಸದಿಂದ ಹೇಳಿದರು.

ಸುಮಂತ್ರನಲ್ಲಿ ಎಲ್ಲ ರಾಜ್ಯದೇಶಗಳ ಮಹಾಮಹಿಮರನ್ನು ಸತ್ಕರಿಸಿ ಆಮಂತ್ರಿಸ ಬೇಕು. ಹಾಗೆಯೇ ಮಿಥಿಲಾಪುರದ ರಾಜ ಜನಕನನ್ನು ನೀನೇ ಹೋಗಿ ಸಕಲ ಗೌರವದಿಂದ ಆಹ್ವಾನಿಸಬೇಕು. ಕಾಶೀಪತಿ ದೇವಸುದರ್ಶ, ಕೇಕೇಯದ ರಾಜ ಅಶ್ವಪತಿ, ಅಂಗರಾಜ್ಯದ ರಾಜ ರೋಮಪಾದ ಇವರನ್ನೆಲ್ಲ ವಿಶೇಷವಾಗಿ ಆಹ್ವಾನಿಸು, ಕೋಸಲದ ಮಿತ್ರರಾಷ್ಟ್ರಗಳನ್ನೂ ಆಹ್ವಾನಿಸಬೇಕು ಎಂದು ವಸಿಷ್ಠರು ಹೇಳಿದರು‌‌.

ಸುಮಂತ್ರ ಅದೆಲ್ಲವನ್ನೂ ನೇರವೇರಿಸುತ್ತಾನೆ.

ಅನೇಕ ರಾಜ್ಯಗಳ ದೊರೆಗಳು ಬಂದಿದಾರೆ, ಹೊಣೆಗಾರಿಕೆ ಪೂರ್ತಿಯಾಗಿತ್ತು, ಆಗ ವಸಿಷ್ಠರು ದಶರಥನಿಗೆ “ಇನ್ನು ನೀನು ಯಜ್ಞಕ್ಕೆ ಹೊರಡಬಹುದು” ಎಂದು ಹೇಳಿ ಯಜ್ಞದೀಕ್ಷೇಯನ್ನು ಕೊಡಿಸಿ ಯಜ್ಞವನ್ನು ಪ್ರಾರಂಭ ಮಾಡಿಸಿದರು.

ವಿಧಿವತ್ತಾಗಿ, ಕಿಂಚಿತ್ತೂ ತಪ್ಪಿಲ್ಲದೇ, ನಿರ್ವಿಘ್ನವಾಗಿ ಅಶ್ವಮೇಧ ಯಜ್ಞ ನಡೆಯುತ್ತಿದೆ.

ಶತಾನುಚರ ಬ್ರಾಹ್ಮಣೋತ್ತಮರಿಗೆ ಶ್ರಮವಾಗದಂತೆ, ಹಸಿವಾಗದಂತೆ ನೋಡಿಕೊಳ್ಳಲಾಯಿತು‌‌‌.
ಬ್ರಾಹ್ಮಣರು, ದಾಸರು, ಶ್ರವಣರು, ಸನ್ಯಾಸಿಗಳು, ದಿಗಂಬರು, ಸ್ತ್ರೀಯರು, ಮಕ್ಕಳು ಊಟ ಮಾಡ್ತಿದಾರೆ. ಉಂಡಷ್ಟು ಉಣ್ಣಬೇಕೆನ್ನುವಷ್ಟು ರುಚಿಯಾಗಿತ್ತಂತೆ ಅನ್ನ. ಅನ್ನವನ್ನು ಕೊಡಿ, ವಸ್ತ್ರವನ್ನು ಕೊಡಿ..‌ಈ ಕೊಡಿ ಕೊಡಿ ಎಂಬ ಉದ್ಘಾರಗಳು ಮಂತ್ರಗಳಂತೆ ಕೇಳುತ್ತಿತ್ತು ಇಡಿಯ ಪರಿಸರದಲ್ಲಿ. ಅಷ್ಟೊಂದು ದಾನ ನಡೆಯುತ್ತಿತ್ತು.
ಬ್ರಾಹ್ಮಣರು ‘ಅಹೋ ತೃಪ್ತಿಯಾಯಿತು’ ಎಂದು ಉದ್ಘರಿಸಿದರು‌!

ಬಡಿಸುವವರು ಶುಚಿಯೂ, ಸ್ವಲಂಕೃತರೂ, ಬೆಲೆಬಾಳುವ ಮಣಿಕುಂಡಲಗಳನ್ನು ಧರಿಸಿದವರೂ ಆಗಿದ್ದರು. ಊಟ ಬಡಿಸುವವರು ಲಕ್ಷಣವಾಗಿ, ಶುಚಿಯಾಗಿರಬೇಕು

*ಜೀವ ತೃಪ್ತಿಯೇ ದೇಹ ತೃಪ್ತಿ, ದೇಹ ತೃಪ್ತಿಯಿಂದ ಆತ್ಮ ತೃಪ್ತಿ, ಆತ್ಮತೃಪ್ತಿಯಿಂದ ದೇವ ತೃಪ್ತಿ~ ಶ್ರೀಸೂಕ್ತಿ*

ಋತ್ವಿಜರಿಗೆ ದಾನ-ದಕ್ಷಿಣೆಯ ಹೊತ್ತು.. ಋಗ್ವೇದಿಗಳ ಪರವಾಗಿ-ಹೋತ, ಯಶುರ್ವೇದಿಗಳ ಪರವಾಗಿ-ಅಧ್ವರ್ಯು, ಸಾಮವೇದಿಗಳ ಪರವಾಗಿ-ಉದ್ಘಾತ, ಅಥರ್ವವೇದಿಗಳ ಪರವಾಗಿ- ಬ್ರಹ್ಮ ಇರುತ್ತಾರೆ.

ಅವನ ಆಳ್ವಿಕೆಯ ಭೂಮಂಡಲದ ಪೂರ್ವದಿಕ್ಕನ ಭಾಗವನ್ನು
ಹೋತುವಿಗೆ, ಪಶ್ಚಿಮ ದಿಕ್ಕಿನ ಭಾಗವನ್ನು
ಅಧ್ವರ್ಯುವಿಗೆ, ಉತ್ತರ ದಿಕ್ಕಿನ ಭಾಗವನ್ನು
ಉದ್ಘಾತನಿಗೆ, ದಕ್ಷಿಣ ದಿಕ್ಕಿನ ಭಾಗವನ್ನು
ಬ್ರಹ್ಮನಿಗೂ ದಾನ ಮಾಡುತ್ತಾನೆ.

ಅಶ್ವಮೇಧ ಯಜ್ಞದ ಕೊನೆಯಲ್ಲಿ ತನ್ನ ಆಳ್ವಿಕೆಯ ಪೂರ್ತಿ ಭೂಮಂಡಲವನ್ನು ದಾನ ಮಾಡುತ್ತಾನೆ.

*ದೊಡ್ದ ಫಲವನ್ನು ಅಪೇಕ್ಷಿಸಿದರೆ ದೊಡ್ಡ ತ್ಯಾಗಕ್ಕೆ ಸಿದ್ಧವಾಗಿರಬೇಕು – ಶ್ರೀಸೂಕ್ತಿ*

“ಈ ಭೂಮಂಡಲವನ್ನು ಪಾಲಿಸುವ ಅರ್ಹತೆ ಇದ್ದರೆ ಅದು ನಿನಗೆ ಮಾತ್ರ, ನಮಗಿಲ್ಲ, ಇದು ನಮಗೆ ಹೇಳಿಸಿದ್ದಲ್ಲ, ನಮಗೆ ಕಿಂಚಿತ್ ಕೊಡು ಸಾಕು, ನಮ್ಮ ಗೃಹಸ್ತ ಧರ್ಮ ನಡೆಯಲು ಬೇಕಾದುದನ್ನು ಕೊಡು, ಈ ಭೂಮಿ ಬೇಡ ನಮಗೆ” ಎಂದರಂತೆ ಋತ್ವಿಜರು

ದಶರಥ ಕಿಂಚಿತ್ತನ್ನು ಕೊಟ್ಟನಂತೆ, ೧೦ ಲಕ್ಷ ಗೋವುಗಳು, ೧೦ ಕೋಟಿ ಚಿನ್ನದ ನಾಣ್ಯಗಳು, ೪೦ ಕೋಟಿ ಬೆಳ್ಳಿ ನಾಣ್ಯಗಳು..!!

ಋತ್ವಿಜರೆಲ್ಲ ಸೇರಿ ಈ ಸಂಪೂರ್ಣ ರಾಶಿಯನ್ನು ವಸಿಷ್ಠ-ಋಷ್ಯಶೃಂಗರ ಮುಂದಿಟ್ಟು, ನಿಮಗೆ ಬೇಕಾದ ಹಾಗೆ ಮಾಡಿ ಎಂದರಂತೆ.. ಋಷ್ಯಶೃಂಗರು ಆ ರಾಶಿಯನ್ನು ಋತ್ವಿಜರೆಲ್ಲರಿಗೂ ಹಂಚಿದರು. ಎಲ್ಲರೂ ದಶರಥನಿಗೆ ಹರಸಿದರು.

ದಶರಥನ ದಾನ ಕಾರ್ಯ ಮುಂದುವರೆದಿತ್ತು. ದಾನ ಮಾಡಬೇಕೆಂದಿಟ್ಟುಕೊಂಡಿದ್ದೆಲ್ಲವನ್ನೂ ದಾನ ಮಾಡಿ ಆಗಿತ್ತು, ಆಮೇಲೆ ಒಬ್ಬ ಬಡ ಬ್ರಾಹ್ಮಣ ಬಂದು, ದೇಹಿ ಎಂದು ಕೇಳಿದ.. ಕೊಡಲು ಏನೂ ಇರಲಿಲ್ಲ, ಆಗ ದಶರಥ ತನ್ನ ಕೈಯಲ್ಲಿರುವ ಆಭರಣವನ್ನೇ ಕೊಟ್ಟ.

ಕೊನೆಯಲ್ಲಿ ಸುಪ್ರೀತರಾದ ಆ ಎಲ್ಲಾ ಬ್ರಾಹ್ಮಣರ ಮುಂದೆ ದಶರಥನು ಧೂಳೀಧೂಸರಿತನಾಗಿ ನೆಲಕ್ಕೆ ಬಿದ್ದು ದೀರ್ಘದಂಡ ನಮಸ್ಕಾರ ಮಾಡುತ್ತಾನೆ. ಆ ಬ್ರಾಹ್ಮಣರೆಲ್ಲರೂ ವಿಧಿವತ್ತಾಗಿ ಹೃದಯತುಂಬಿ ತಮ್ಮ ಪುಣ್ಯದ ಫಲವನ್ನು ಧಾರೆ ಎರೆದು, ನಿನ್ನ ಸಂಕಲ್ಪ ಈಡೇರಲಿ ಎಂದರು!

ಅಶ್ವಮೇಧದ ಫಲಗಳನಾನು ವಾಲ್ಮೀಕಿಗಳು ಹೀಗೆ ಹೇಳುತ್ತಾರೆ: ಪಾಪವನ್ನು ಪರಿಹಾರ ಮಾಡುತ್ತದೆ, ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತದೆ!

ಋಷ್ಯಶೃಂಗರ ಬಳಿ “ಇನ್ನು ಕುಲವರ್ಧನೆಗೆ ಬೇಕಾದ ಕರ್ಮವನ್ನು ನಡೆಸಿಕೊಡಿ” ಎಂದು ಕೇಳಿಕೊಳ್ಳುತ್ತಾನೆ ‌

ಹಾಗಾದರೆ ಇಲ್ಲಿಯವರೆಗೆ ಮಾಡಿದ ಅಶ್ವಮೇಧ ಎಂಬ ಪ್ರಶ್ನೆ ಮೂಡಿತೇ? ಉತ್ತರ: ಸಂತಾನಕ್ಕೆ ಪ್ರತಿಬಂಧಕವಾದ ಪಾಪ ಯಾವುದಿದೆಯೋ ಅದರ ಪರಿಹಾರ ಮಾಡಲು ಅಶ್ವಮೇಧ ಯಜ್ಞ ಆಗಿದೆ, ಕಷ್ಟ ಪರಿಹಾರ ಆಗಿದೆ, ಸ್ವರ್ಗ ಪ್ರಾಪ್ತಿಯಾಗಿದೆ. ಇನ್ನು ಸಂತಾನದ ಸಂಕಲ್ಪ ಇಷ್ಟ ಪ್ರಾಪ್ತಿಗೆ ಬೇರೆಯೇ ಕರ್ಮ ಆಗಬೇಕಿದೆ!

ಹಾ, ನಿನ್ನ ಕುಲವನ್ನು ಮೇಲೆತ್ತುವ ನಾಲ್ಕು ಮಕ್ಕಳಾಗುತ್ತಾರೆ, ಅದಕ್ಕೆ ಬೇಕಾದ ಕರ್ಮವನ್ನು ನಾನು ಮಾಡುವೆ ಎಂದು ಹೇಳಿ, ಆಳವಾದ ಧ್ಯಾನಕ್ಕೆ ಹೋದರು.., ಧ್ಯಾನದಿಂದ ಹೊರಗೆ ಬಂದು, ಪುತ್ರಕಾಮೇಷ್ಠಿಯನ್ನು ನಡೆಸಿಕೊಡುತ್ತೇನೆ. ಎಂದು ಹೇಳಿ ಪುತ್ರಕಾಮೇಷ್ಠಿಗೆ ತೊಡಗಿದರು‌.

ಅಗ್ನಿಗೆ ಹವಿಸ್ಸು ಹಾಕಲು ಪ್ರಾರಂಭಿಸಿದಾಗ, ಮುಕ್ಕೋಟಿ ದೇವತೆಗಳೆಲ್ಲ ಹವಿರನ್ನವನ್ನು ಸ್ವೀಕರಿಸಲು ಬಂದು ಸೇರಿದ್ದಾರೆ‌ ದಶರಥನ ಯಜ್ಞಶಾಲೆಗೆ! ದಶರಥ ನೀಡುತ್ತಿರುವ ಅಮೃತಸಮಾನ ಹವಿಸ್ಸು ಕೂಡಾ ದೆವತೆಗಳಿಗೆ ರುಚಿಸಲಿಲ್ಲ ಏಕೆಂದರೆ ದೇವತೆಗಳು ಚಿಂತಾಕ್ರಾಂತರಾಗಿದ್ದಾರೆ. ಎಲ್ಲ ದೇವತೆಗಳು ಹೋಗಿ ಬ್ರಹ್ಮದೇವನನ್ನು ಸುತ್ತುವರೆದು “ಹೇ ಬ್ರಹ್ಮದೇವ, ನಿನ್ನ ಆಶೀರ್ವಾದದಿಂದಾಗಿ-ನಿನ್ನ ಅನುಗ್ರಹದಿಂದಾಗಿ ನಮಗೆ ಸುಖವಿಲ್ಲ, ನಾವೆಲ್ಲ ಕಷ್ಟದಲ್ಲಿದ್ದೇವೆ, ಅನುಗ್ರಹಿಸು” ಎಂದು ಪ್ರಾರ್ಥಿಸುತ್ತಾರೆ.

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments Box