ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಇತ್ತ ರಾಮನ ಭಟರು ಸುತ್ತಲಿಂದ ಲಂಕೆಯನ್ನು ಮುತ್ತಿರಲು ರಾಕ್ಷಸರು ರಾವಣನ ಮನೆಗೆ ಹೋಗಿ ಲಂಕೆಗೆ ಲಗ್ಗೆ ಹಾಕಲಾಗಿದೆ ಎಂಬ ವಾರ್ತೆಯನ್ನು ರಾವಣನಿಗೆ ಅರುಹಿದರು. ಯಾರ ಕಡೆಯಿಂದ ಬರಬೇಕೋ ಅವರ ಕಡೆಯಿಂದ ವಾನರ ಸೇನಾ ಸಹಿತನಾಗಿ ರಾಮನು ಲಂಕೆಗೆ ಮುತ್ತಿಗೆ ಹಾಕಿದ್ದಾನೆ ಎಂಬ ವಾರ್ತೆ ಅಧಿಕೃತವಾಗಿ ರಾವಣನಿಗೆ ಬಂದಿದೆ. ಸಿಟ್ಟು ಬಂತು. ಸಿಟ್ಟುಗೊಂಡ ರಾವಣನು ನಗರರಕ್ಷೆಗಾಗಿ ತಾನು ಏನು ಏರ್ಪಾಡನ್ನು ಮಾಡಿದಾನೋ ಅದನ್ನು ದುಪ್ಪಟ್ಟುಗೊಳಿಸಿದ. ಇದು ಎರಡನೇ ಬಾರಿ ದುಪ್ಪಟ್ಟುಗೊಳಿಸ್ತಾ ಇರೋದು. ನಾಲ್ಕು ಪಟ್ಟು ಹೆಚ್ಚು ಮಾಡಿದ ಹಾಗಾಯ್ತು.

ಇದು ಒಂದು ಕಡೆ ರಾವಣನ ಆತಂಕವನ್ನು ಸೂಚನೆ ಮಾಡಿದ್ರೆ, ಇನ್ನೊಂದು ಕಡೆ ಅವರಲ್ಲಿ ಸಂಗ್ರಹ ಇತ್ತು. ಯುದ್ಧ ಸಂಗ್ರಹ ಎಲ್ಲವನ್ನೂ ಕೂಡ ವಿನಿಯೋಗ ಮಾಡಿರ್ಲಿಲ್ಲ. ವಿನಿಯೋಗ ಮಾಡಿದ್ದು ಸ್ವಲ್ಪ ಭಾಗವನ್ನು ಮಾತ್ರ. ಇನ್ನೂ ಬೇಕಾದಷ್ಟು ಸಂಗ್ರಹ ಇದೆ. ಸೇನಾ ಸಂಗ್ರಹ, ಆಯುಧ ಸಂಗ್ರಹ ಬೇಕಾದಷ್ಟಿದೆ ಎನ್ನುವುದಕ್ಕೆ ಸೂಚನೆ ಕೊಡ್ತಾ ಇದೆ. ಬಳಿಕ ತಾನೇ ಗೋಪುರವನ್ನೇರಿ ಲಂಕೆಯ ಸುತ್ತಮುತ್ತ ಏನಾಗಿದೆ ಎನ್ನುವುದನ್ನ ಗಮನಿಸ್ತಾ ಇದ್ದಾನೆ. ಲಂಕೆಯ ಶೈಲ-ವನ-ಕಾನನಗಳು ಯುದ್ಧಕಾಂಕ್ಷಿಗಳಾದ ಅಸಂಖ್ಯ ಕಪಿಗಣಗಳಿಂದ ವ್ಯಾಪ್ತವಾಗಿ ಹೋಗಿದೆ. ನೆಲ ಕಾಣ್ತಾ ಇಲ್ಲ. ಬರೇ ಕಪಿಗಳು ಕಾಣ್ತಾ ಇವೆ. ಸುತ್ತ ನೋಡಿದ್ರೆ ಕಪಿಗಳ ಪಿಂಗಲವರ್ಣ ಮಾತ್ರ ಕಾಣ್ತಾ ಇದೆ. ರಾವಣನಿಗೆ ಚಿಂತೆಯಾಯ್ತು. ಹೇಗೆ ಇವರನ್ನ ಖರ್ಚು ಮಾಡೋದು ಅಂತ. ಸುಮಾರು ಹೊತ್ತು ಇದೇ ಚಿಂತೆ ಅವನನ್ನ ಬಾಧಿಸ್ತಾ ಇತ್ತು. ಇಷ್ಟು ದೊಡ್ಡ ವಾನರ ಸೇನೆಯನ್ನು ವ್ಯಯಗೊಳಿಸುವುದು ಹೇಗೆ? ಕೊನೆಗೆ ಧೈರ್ಯತಾಳಿ ಕಣ್ಬಿಟ್ಟು ನೋಡಿದನಂತೆ ರಾಮನನ್ನೂ, ಕಪಿಸೇನೆಯನ್ನು. ಹೇಗೆ ಅಂದ್ರೆ ಕಣ್ಣಗಲ ಮಾಡಿ… ಆಶ್ಚರ್ಯ ಮತ್ತು ಉದ್ವೇಗದಿಂದ ಕಣ್ಣಗಲವಾಯಿತು ಎಂಬುದಾಗಿ ಅರ್ಥ. ಅತ್ತ ರಾಮನಾದರೂ ಯಾವ ಆತಂಕವೂ ಇಲ್ಲದೆ, ಭಯವೂ ಇಲ್ಲದೆ ಮುದಿತನಾಗಿ ಧಾವಿಸಿದನು ಲಂಕೆಯ ಕಡೆಗೆ. ಲಂಕೆಯನ್ನು ವೀಕ್ಷಿಸಿದನು ರಾಮ ಆದರೆ ಕೂಡಲೆ ಅವನಿಗೆ ನೋವಾಯ್ತಂತೆ. ಯಾಕೆ? ಚಿತ್ರವಿಚಿತ್ರವಾದ ಧ್ವಜಗಳಿಂದ ಶೋಭಿತವಾಗಿರತಕ್ಕಂತಹ ಭವ್ಯವಾದ ಲಂಕೆ ಆದರೆ ಅವನಿಗೆ ಅದ್ಯಾವುದೂ ಕಾಣ್ತಾಯಿಲ್ಲ. ಅವನಿಗೆ ಕಂಡಿದ್ದು ಲಂಕೆಯಲ್ಲಿ ನೋಯುವ ಸೀತೆ. ನೋಯುವ ಮನದಿಂದ ಸೀತೆಯನ್ನು ಸೇರಿದನು ರಾಮ. ಸೀತೆ ಎಲ್ಲಿರಬಹುದೋ? ಹೇಗಿರಬಹುದೋ? ಮನಸ್ಸಿನಿಂದಲೆ ಸೀತೆಯನ್ನು ಸೇರಿದನು ರಾಮ. ಸೀತೆಯ ವರ್ಣನೆಯಲ್ಲಿ ಕೂಡ ನಾವಿದನ್ನು ಕೇಳಿದೇವೆ. ತನ್ನ ಸಂಕಲ್ಪವನ್ನೇ ಕುದುರೆಗಳನ್ನಾಗಿ ಮಾಡಿಕೊಂಡು ತನ್ನ ಮನೋರಥವನ್ನೇರಿ ರಾಮನೆಡೆಗೆ ವೇಗವಾಗಿ ಧಾವಿಸಿದಳು ಎಂದು ನಾವು ಸುಂದರಕಾಂಡದಲ್ಲಿ ಕೇಳಿದೇವೆ. ಅದೇ ರೀತಿ ನೋಯುವ ಮನಸ್ಸಿನಿಂದ ಸೀತೆಯನ್ನು ಸೇರಿದನು ರಾಮ. ಇಲ್ಲಿ ಆ ಮೃಗನಯನೆ ಜನಕನಂದಿನಿ ನನಗಾಗಿ ಪೀಡಿತಳಾಗಿದಾಳೆ. ರಾಮನಿಗಾಗಿ ಅಂತಿಲ್ಲದಿದ್ರೆ ಅವಳ್ಯಾಕೆ ಪೀಡಿತಳಾಗ್ಬೇಕು? ಬೇರೆ ರಾಕ್ಷಸಿಯರೆಲ್ಲ ರಾವಣನನ್ನ ಒಪ್ಪಿಕೊಂಡಿದಾರೆ. ಆದರೆ ಇವಳು ಹಾಗೆ ಮಾಡಲಿಲ್ಲ. ನನಗಾಗಿ ಕಾದಿದ್ದಾಳೆ. ನನಗಾಗಿ ನೊಂದಿದ್ದಾಳೆ. ಶೋಕಸಂತಪ್ತಳಾಗಿದಾಳೆ. ಕೃಶಳಾಗಿದಾಳೆ. ನೆಲದ ಮೇಲೆ ಮಲಗ್ತಾಳೆ. ಹಾಗೆ ಎಡಬಿಡದೆ ಪೀಡಿಸಲ್ಪಡುವ ಸೀತೆಯನ್ನು ನೆನೆಸಿದಾಗ ಅವನ ಮನಸ್ಸು ತುಂಬಾ ನೊಂದಿತು ಮತ್ತು ಕ್ರುದ್ಧಗೊಂಡಿತು. ಆಗ ಇಡೀ ವಾನರಸೇನೆಗೆ ರಾಕ್ಷಸರನ್ನು ಸಂಹರಿಸಿ ಎಂಬುದಾಗಿ ರಾಕ್ಷಸಸಂಹಾರಕ್ಕೆ ಆಜ್ಞೆಗೈದನು ರಾಮ.

ಸೀತೆಯ ಕುರಿತಾದ ರಾಮನ ಮನಸ್ಸು ಮತ್ತೆ ಮತ್ತೆ ಸ್ಫುಟ ಇಲ್ಲಿ. ಸಾಂದರ್ಭಿಕವಾಗಿ ಹಾಗೆ ಹೇಳಬೇಕಾಗಿ ಬರ್ತದೆ ರಾಮ ಮುಂದೊಂದು ಸಂದರ್ಭದಲ್ಲಿ ಸೀತೆಗಾಗಿ ಅಲ್ಲ ನಾನು ಈ ಯುದ್ಧವನ್ನು ಮಾಡಿದ್ದು ಎಂದು ಒಂದು ಸಂದರ್ಭಕ್ಕೆ ತಕ್ಕಂತೆ ಹೇಳಬೇಕಾಗಿ ಬರ್ತದೆ. ಸತ್ಯ ಏನು ಅಂದ್ರೆ ಸೀತೆಗಾಗಿಯೇ. ಅಕ್ಲಿಷ್ಟಕರ್ಮ ರಾಮ ಈ ಮಾತನ್ನ ಆಡುತ್ತಿದ್ದಂತೆಯೇ ವಾನರರ ಮಧ್ಯೆ ದೊಡ್ಡ ಸ್ಪರ್ಧೆ ಉಂಟಾಗಿಹೋಯಿತು. ಸಿಂಹನಾದಗಳನ್ನು ಮಾಡಿದರು. ನಾ ಮೊದಲು ನಾ ಮೊದಲು ಎಂದು ಪರಸ್ಪರ ಒತ್ತಾಡಿದರು. ಮುನ್ನುಗ್ಗಿದರು. ಆ ಕಪಿಸೈನಿಕರ ಮನಸ್ಸು ಏನಿತ್ತು ಆ ಸಮಯದಲ್ಲಿ? ಎಂದರೆ ಪರ್ವತಶಿಖರಗಳಿಂದಾಗಲಿ ಅಥವಾ ಬರಿಮುಷ್ಟಿಗಳಿಂದಲಾಗಲಿ ಲಂಕೆಯನ್ನು ಕುಟ್ಟಿ ಪುಡಿಮಾಡುತ್ತೇವೆ ಎಂಬ ಮನಸ್ಸು ಆ ಕಪಿಗಳದ್ದಾಗಿತ್ತು. ಅವರ ಕೈಯಲಿ ಗಿರಿಶಿಖರಗಳು, ಬಂಡೆಗಳು ಮತ್ತು ದೊಡ್ಡ ದೊಡ್ಡ ಮರಗಳು.

ರಾವಣನು ಗೋಪುರದ ಮೇಲಿನಿಂದ ನೋಡುತ್ತಿದ್ದಂತೆಯೇ ಕಪಿಗಳು ಲಂಕೆಯನ್ನೇರಿದರು. ಯಾಕಾಗಿ ಅಂದ್ರೆ ಅವರ ಮನಸ್ಸಲ್ಲಿ ಆ ಕ್ಷಣದಲ್ಲಿ ಬೇರೇನೂ ಇರಲಿಲ್ಲ. ರಾಮನಿಗಾಗಿ ಎಂಬ ಭಾವ ಮಾತ್ರವೆ ಆ ಕಪಿಸೈನಿಕರಲ್ಲಿ ಇತ್ತು. ರಾವಣನು ನೋಡ್ತಾ ಇದಾನೆ. ಕೆಂಪು ಮೋರೆಯ ಹೊಂಬಣ್ಣದ ಕಪಿಗಳು ರಾಮನಿಗೆ ಈ ಜೀವ ಸಮರ್ಪಿತ ಎಂಬ ಭಾವದಲ್ಲಿ ಸಾಲತಾಲ ಶಿಲಾಯುಧರಾಗಿ ಲಂಕೆಯ ಮೇಲೇರಿದರು. ಮೊದಲು ಮಾಡಿದ್ದ ಏನೆಂದರೆ ಈ ಕೋಟೆಯ ಹೊರಗೆ ಕಂದಕ, ಅದರ ಹೊರಗೆ ಪುನಃ ಕೋಟೆ ಇರ್ತದೆ. ಅದನ್ನ ಧ್ವಂಸ ಮಾಡಿದ್ರಂತೆ. ಆಮೇಲೆ ಕೋಟೆಯ ಹೊರಗಿನ ಉದ್ಯಾನವನಗಳು ನಾಮಾವಶೇಷವಾದವು.

ಬಳಿಕ ದ್ವಾರಗಳನ್ನು ಧ್ವಂಸ ಮಾಡಿದ್ರು. ಕಂದಕಗಳನ್ನು ತುಂಬಿದರಂತೆ. ತಿಳಿನೀರು. ಮೊಸಳೆಗಳಿಂದ ಕೂಡಿರತಕ್ಕಂತಹ ಕಂದಕ. ನೀರು ಹರಿತಾ ಇತ್ತು ಕಂದಕಗಳಲ್ಲಿ. ಮೊಸಳೆಗಳ ಮೇಲೆ ಮಣ್ಣು ತುಂಬಿದರಂತೆ. ಒಂದಷ್ಟು ಮಣ್ಣು, ಒಂದಷ್ಟು ಪರ್ವತ ಶಿಖರಗಳು, ಹುಲ್ಲು ಮತ್ತು ಮರಗಳನ್ನ ಹಾಕಿ ಕಂದವನ್ನೇ ಇಲ್ಲ ಅಂತ ಮಾಡಿದರು. ಬಳಿಕ ಕೋಟ್ಯನುಕೋಟಿ ಕಪಿಗಳು ಲಂಕೆಯನ್ನು, ಲಂಕೆಯ ಕೋಟೆಯನ್ನು ಏರ್ತಾ ಇದಾರೆ. ಅಲ್ಲಿ ಸಿಕ್ಕಿದ ಬಂಗಾರದ ದ್ವಾರಗಳೆಲ್ಲ ಧ್ವಂಸವಾದವು. ಕೈಲಾಸ ಶಿಖರದಂತಿದ್ದ ಗೋಪುರಗಳು ಧ್ವಂಸಗೊಂಡವು ಕಪಿಗಳ ಕೈಯಲ್ಲಿ. ಆ ಕಪಿಗಳು ಹಾರುತ್ತಾ, ಘರ್ಜಿಸುತ್ತಾ ಮದ್ದಾನೆಗಳಂತೆ ಲಂಕೆಗೆ ಮುತ್ತಿಗೆ ಹಾಕ್ತಾ ಇದಾರೆ. ಏತನ್ಮಧ್ಯೆ ಕಪಿಗಳ ಜಯಜಯಕಾರ ದೊಡ್ಡದಾಗಿ ಕೇಳಿಬಂತು. ಏನಂತ ಅಂದ್ರೆ ಅತಿಬಲ ರಾಮನಿಗೆ ಜಯವಾಗಲಿ, ಮಹಾಬಲ ಲಕ್ಷ್ಮಣನಿಗೆ ಜಯವಾಗಲಿ, ರಾಮ ಪಾಲಿತ ರಾಜಾ ಸುಗ್ರೀವನಿಗೆ ಜಯವಾಗಲಿ. ಅಧಿನಾಯಕನಾಗಿ ಅವರು ರಾಮನನ್ನು ಅಂಗೀಕಾರ ಮಾಡಿಬಿಟ್ಟಿದಾರೆ ಎಂಬುದು ಸ್ಪಷ್ಟ. ಹೀಗೆ ಘೋಷಣೆಗಳನ್ನು ಹಾಕುತ್ತಾ, ಘರ್ಜಿಸುತ್ತಾ ಲಂಕೆಯ ಕೋಟೆಯನ್ನು ಮುತ್ತಿದ್ದಾರೆ ಕಪಿಗಳು.

ಏತನ್ಮಧ್ಯೆ ನಲ ಮತ್ತು ಅವನ ಇಬ್ಬರು ಸಹಚರರು ವೀರಬಾಹು, ಸುಬಾಹು ಜೊತೆಗೂಡಿ ಒಂದು ಭಾಗ ಕೋಟೆಯನ್ನು ಧ್ವಂಸ ಮಾಡಿ ಅದರ ಮೇಲೆ ಕೂತಿದಾರಂತೆ. ಅಲ್ಲಿಯೇ ವಾನರರ ಸೇನಾಶಿಬಿರಗಳನ್ನು ಅದರ ಮೇಲೇ ಕಟ್ಟಿದರು. ಏತನ್ಮಧ್ಯೆ ದ್ವಾರದ್ವಾರಗಳಲ್ಲಿ ಹೆಚ್ಚುವರಿ ಸೇನೆಯ ಜಮಾವಣೆಯಾಯಿತು. ಪೂರ್ವದ್ವಾರವನ್ನು ಕುಮುದನು ಕೋಟ್ಯನುಕೋಟಿ ಕಪಿಗಳಿಂದ ಆವೃತನಾಗಿ ಪೂರ್ವದ್ವಾರಕ್ಕೆ ಹೋಗ್ತಾನೆ. ಅವನ ಸಹಾಯಕ್ಕೆ ಪ್ರಹಸ ಮತ್ತು ಪ್ರಘಸ. ದಕ್ಷಿಣ ದ್ವಾರಕ್ಕೆ ಶತಬಲಿ ಬಂದ. ಕುಮುದ ಪೂರ್ವದ್ವಾರಕ್ಕೆ ಏನು ಕೋಟಿಕಪಿಗಳನ್ನ ಕರೆದುಕೊಂಡು ಹೋಗಿದ್ದ ಅದಕ್ಕೆ ದುಪ್ಪಟ್ಟು ಕಪಿಗಳೊಡನೆ ಶತಬಲಿ ದಕ್ಷಿಣ ದ್ವಾರಕ್ಕೆ ಬಂದ. ಬಳಿಕ ಸುಷೇಣ, ಅವನು ಪರ್ವದ್ವಾರದ ಮೂರುಪಟ್ಟು ಕಪಿಗಳ ಜೊತೆಯಲ್ಲಿ ಪಶ್ಚಿಮ ದ್ವಾರಕ್ಕೆ ಇಂದ್ರಜಿತು ಇರುವಲ್ಲಿಗೆ ಬರ್ತಾನೆ. ಹಾಗಾಗಿ ಸೇನೆ ಜಾಸ್ತಿ ಇರತಕ್ಕಂಥದ್ದು. ಇಂದ್ರಜಿತು ಅತ್ಯಂತ ಅಪಾಯಕಾರಿ. ಉತ್ತರ ದ್ವಾರದಲ್ಲಿ ರಾಮನಿದ್ದಾನೆ, ಲಕ್ಷ್ಮಣನಿದ್ದಾನೆ, ಕೊಂಚ ಹಿಂದೆ ಸುಗ್ರೀವನಿದ್ದಾನೆ. ಅಲ್ಲಿಗೆ ಧೂಮ್ರ, ಜಾಂಬವಂತನ ಅಣ್ಣ ಅವನು ಕೋಟ್ಯನುಕೋಟಿ ಕಪಿಗಳ ಜೊತೆಯಲ್ಲಿ ರಾಮನ ಹಿಂದಕ್ಕೆ ಬರ್ತಾನೆ.

ಏತನ್ಮಧ್ಯೆ ಗದಾಪಾಣಿಯಾದ ವಿಭೀಷಣನು ತನ್ನ ನಾಲ್ವರು ಸಚಿವರ ಜೊತೆಗೆ ರಾಮನಿಗೆ ಅನತಿದೂರದಲ್ಲಿ ಬಂದು ನಿಂತ್ಕೊಂಡ. ಗಜ, ಗವಾಕ್ಷ, ಗವಯ, ಶರಭ, ಗಂಧಮಾದನರು ಲಂಕೆಯನ್ನು ಸುತ್ತುವರಿತಾ ಇದ್ದರು. ರಾವಣನು ಕೋಪಪರಿತಾತ್ಮನಾಗಿ ಆಜ್ಞೆಯನ್ನು ಮಾಡ್ತಾನೆ. ಎಲ್ಲಾ ಸೈನ್ಯ, ಎಲ್ಲಾ ರಾಕ್ಷಸ ನಾಯಕರು ನುಗ್ಗಲಿ ಹೊರಗೆ. ಆ ಆಜ್ಞೆ ಆಗ್ತಾ ಇದ್ದಂತೆಯೇ ಭಯಂಕರವಾದ ಘರ್ಜನೆ ರಾಕ್ಷಸರ ಕಡೆಯಿಂದ ಕೇಳಿಬಂತು. ಬಂಗಾರದ ಕೋಲುಗಳಿಂದ ಭೇರಿಗಳನ್ನು ಬಡಿದರು ರಾಕ್ಷಸರು. ಘರ್ಜನೆ ಮಾಡಿದರು ಮತ್ತು ಲಕ್ಷೋಪಲಕ್ಷ ರಾಕ್ಷಸರು ಒಟ್ಟಿಗೆ ಶಂಖವನ್ನು ಊದಿದರು. ಅದರದ್ದೊಂದು ವರ್ಣನೆ ಕೂಡ ಇದೆ. ರಾಕ್ಷಸರು ಕಪ್ಪುಹಸಿರು ಬಣ್ಣದವರಂತೆ. ಶಂಖ ಬಿಳಿ. ನೋಡಿದರೆ, ಮೋಡಗಳು ಮತ್ತು ಮಿಂಚು (ಅವರ ಮೇಲಿನ ಆಭರಣಗಳು) ಬೆಳ್ಳಕ್ಕಿಗಳು (ಶಂಖ). ಬಿಳಿಬಟ್ಟೆ ಧರಿಸಿದ ಕಪ್ಪುರಾಕ್ಷಸರಂತೆ ಕಾಣ್ತಾ ಇತ್ತು ಅದು. ಯುದ್ಧ ಹರ್ಷದಿಂದ ರಾವಣ ಪ್ರಚೋದಿತರಾಗಿರತಕ್ಕಂತಹ ರಾಕ್ಷಸರು ಕೋಟೆಯ ಹೊರಗೆ ಬರ್ತಾ ಇದಾರೆ. ಅದು ಸಮುದ್ರವು ಮೇರೆಮೀರಿ ಬರುತ್ತಿರುವಂತಿತ್ತು. ಅದನ್ನು ಕಂಡ ವಾನರ ಸೈನ್ಯವು ಬಹುದೊಡ್ಡ ಘರ್ಜನೆಯನ್ನು ಮಾಡಿತು. ಎಷ್ಟರಮಟ್ಟಿಗೆ ಅಂದ್ರೆ ಮಲಯಪರ್ವತವು ತುಂಬಿಹೋಗುವಂತೆ. ಮಲಯಪರ್ವತ ಸಮುದ್ರದ ಆಚೆಗಿದೆ. ಮಲಯ ಶಬ್ದಕ್ಕೆ ಪರ್ವತದ ಭಾಗ ಅಂತಲೂ ಅರ್ಥವಿದೆ. ಕಿಷ್ಕಿಂಧೆಯ ಪರಿಸರದಲ್ಲಿರುವ ಪರ್ವತವನ್ನೂ ಮಲಯ ಅಂತ ಕರೆದಿದ್ದಿದೆ. ಶಂಖ, ದುಂದುಭಿಗಳನ್ನ ಕಪಿಗಳೂ ವಾದನ ಮಾಡ್ತಾರೆ. ಸಿಂಹನಾದ ಮಾಡ್ತಾರೆ. ಭೂಮಿ, ಅಂತರಿಕ್ಷ ಮತ್ತು ಸಮುದ್ರಗಳು ಪ್ರತಿಧ್ವನಿಸುವಂತೆ. ಆ ಕಡೆ ರಾಕ್ಷಸರ ಕಡೆಯಿಂದ ಆನೆಗಳ ಘೀಳಿಡುವಿಕೆ, ಕುದುರೆಗಳ ಹೇಷಾರವ, ರಥಗಳ ನೇಮಿಘೋಷ, ಮತ್ತು ಪದಾತಿಗಳ ಹೆಜ್ಜೆ ಶಬ್ದ ಕೇಳಿಬರ್ತಾ ಇದೆ.

ಏತನ್ಮಧ್ಯದಲ್ಲಿ ಘೋರ ಯುದ್ಧವು ಪ್ರಾರಂಭವಾಯಿತು. ರಾಕ್ಷಸರಿಗೂ, ವಾನರರಿಗೂ. ಆ ಯುದ್ಧ ದೇವಾಸುರ ಯುದ್ಧವನ್ನು ಹೋಲುವಂತೆ ಇತ್ತು. ನಿಜವಾಗಿಯೂ ದೇವಾಸುರ ಯುದ್ಧವೇ. ರಾಕ್ಷಸರು ರಾಕ್ಷಸರೇ, ಕಪಿಗಳು ದೇವತೆಗಳು. ರಾಕ್ಷಸರು ಪ್ರಜ್ವಲಿಸುವ ಗದೆಗಳಿಂದ ಶಕ್ತಿ, ಶೂಲ, ಪರಶುಗಳಿಂದ ವಾನರರನ್ನು ಪ್ರಹರಿಸ್ತಾರೆ. ತಮ್ಮ ತಮ್ಮ ಪರಾಕ್ರಮಗಳನ್ನು ಹೇಳಿಕೊಳ್ತಾ ವಾನರರನ್ನು ರಾಕ್ಷಸರು ಆಯುಧಗಳಿಂದ ಪ್ರಹರಿಸಿದರು. ವಾನರರೂ ಕೂಡಾ ಮಹಾ ವೀರರು, ರಾಕ್ಷಸರನ್ನು ಪ್ರತಿಯಾಗಿ ಪ್ರಹರಿಸಿದರು. ಅವರು ಪರಾಕ್ರಮ ಕೊಚ್ಚಲಿಲ್ಲ. ‘ಅತಿಬಲ ರಾಮನಿಗೆ ಜಯವಾಗಲಿ’,’ಮಹಾಬಲ ಲಕ್ಷ್ಮಣನಿಗೆ ಜಯವಾಗಲಿ’,’ರಾಮಪಾಲಿತ ರಾಜ ಸುಗ್ರೀವನಿಗೆ ಜಯವಾಗಲಿ’ ಎಂಬ ಘೋಷ ಮುಗಿಲು ಮುಟ್ಟಿತು. ಅವರು ತಮ್ಮ ತಮ್ಮ ಹೆಸರನ್ನು ಹೇಳಿಕೊಂಡರು. ಅದಕ್ಕಿಂತ ಮೊದಲು ರಾಮನಿಗೆ, ಲಕ್ಷ್ಮಣನಿಗೆ, ಸುಗ್ರೀವನಿಗೆ ಜಯಕಾರವನ್ನು ಹೇಳಿ, ಆಮೇಲೆ ರಾಕ್ಷಸರ ಮೇಲೆ ಪ್ರಹಾರ. ಯಾವುದರಿಂದ? ಉಗುರು, ಹಲ್ಲುಗಳಿಂದ. ಏತನ್ಮಧ್ಯೆ ಭೀಮಾಕಾರದ, ಕೋಟೆಯ ಮೇಲಿರುವ ರಾಕ್ಷಸರು ಮೇಲಿಂದ ಭಿಂಡಿಪಾಲ, ಖಡ್ಗ, ಶೂಲಗಳನ್ನು ಎಸೆದು ಕಪಿಗಳನ್ನು ಸೀಳುತ್ತಾರೆ. ಅವರಿಗೆ ಆ ಅವಕಾಶವಿದೆ. ವಾನರರು ನೆಲದಿಂದ ಕೋಟೆಯ ಮೇಲೆ ಹಾರಿ ಅಲ್ಲಿಂದ ಅವರನ್ನು ಕೆಳಗೆಳೆದು ತಂದು ಬಡಿದರು. ಹೀಗೆ ರಕ್ತಮಾಂಸವೇ ಕೆಸರಾಗಿರುವ ರಾಕ್ಷಸ-ವಾನರರ ಅದ್ಭುತ ಸಂಗ್ರಾಮ ನಡೆಯುತ್ತಿದೆ. ಹೀಗೆ ಯುದ್ಧ ಮಾಡುತ್ತಾ ಮಾಡುತ್ತಾ ಬಲ-ಕೋಪ ಎರಡೂ ಸೇರಿ ಯುದ್ಧ ಘೋರವಾಯಿತು. ಬಲದಿಂದಲಾಗಿ ಪ್ರಹಾರಗಳು. ಕೋಪದಿಂದ ಇಲ್ಲದ ಬಲವೂ ಬರುತ್ತದೆ. ರಾಕ್ಷಸರು ಸ್ವರ್ಣಾಭರಣಗಳನ್ನು ಧರಿಸಿರುವ ಕುದುರೆಗಳು, ಅಗ್ನಿಜ್ವಾಲೆಯಂತಿರುವ ಧ್ವಜಗಳು, ಸೂರ್ಯನನ್ನು ಹೋಲುವ ರಥಗಳು, ರಮಣೀಯವಾದ ಸ್ವರ್ಣಕವಚಗಳನ್ನು ಧಾರಣೆ ಮಾಡಿ ಬರುತ್ತಿದ್ದಾರೆ. ಅವರು ಮಾತ್ರ ಕಪ್ಪು, ಇನ್ನೆಲ್ಲಾ ಚಿನ್ನದ ಬಣ್ಣದ್ದು. ಆ ರಥಗಳನ್ನೇರಿ ಭೀಮಕರ್ಮಗಳನ್ನು ಮಾಡುವ ರಾಕ್ಷಸವ್ಯಾಘ್ರರು ದಿಕ್ಕುದಿಕ್ಕುಗಳನ್ನು ತಮ್ಮ ಘರ್ಜನೆಯಿಂದ ತುಂಬುತ್ತಾ ರಾವಣನಿಗೆ ಜಯವನ್ನು ಹಾರೈಸಿ ಹೊರಬಂದರು. ವಾನರರ ಸೈನ್ಯವೂ ಕೂಡಾ ರಾಮನಿಗೆ ಜಯ ಬಯಸಿ ರಾಕ್ಷಸರ ಸೈನ್ಯದ ಕಡೆ ಧಾವಿಸಿದೆ.

ಏತನ್ಮಧ್ಯೆ ದ್ವಂದ್ವಯುದ್ಧ ಪ್ರಾರಂಭವಾಯಿತು. ಎರಡೂ ಸೈನ್ಯದ ಪ್ರಧಾನ ವೀರರು ಇಬ್ಬರೇ ಪರಸ್ಪರ ಯುದ್ಧ ಮಾಡುವುದನ್ನು ದ್ವಂದ್ವಯುದ್ಧ ಎಂದು ಕರೆಯುತ್ತಾರೆ. ಅಂಗದ-ಇಂದ್ರಜಿತುವಿನ ನಡುವಿನ ಯುದ್ಧವನ್ನು ನೋಡಿದರೆ ತ್ರ್ಯಂಬಕ-ಅಂಧಕ ಯುದ್ಧ ಮಾಡಿದಂತಿತ್ತು. ಶಿವನು ಅಂಧಕಾಸುರ ಸಂಹಾರಿ. ಆ ಯುದ್ಧದಂತೆ ಇವರ ಯುದ್ಧವಿತ್ತು. ಅತ್ತ ಪ್ರಜಂಘ ಮತ್ತು ಸಂಪಾತಿ ಯುದ್ಧಮಾಡುತ್ತಿದ್ದಾರೆ. ಕಪಿನಾಯಕ ಈ ಸಂಪಾತಿ. ಅವನಿಗೆ ಯುದ್ಧದಲ್ಲಿ ಸಹನೆ ಕಡಿಮೆ. ಹನುಮಂತನಿಗೂ ಜಂಬುಮಾಲಿಗೂ ಯುದ್ಧ ಪ್ರಾರಂಭವಾಗಿದೆ( ಇದು ಇನ್ನೊಬ್ಬ ಜಂಬುಮಾಲಿ, ಸುಂದರಕಾಂಡದವನನ್ನು ಹನುಮಂತ ಮೇಲೆ ಕಳಿಸಿಯಾಗಿದೆ). ವಿಭೀಷಣನನ್ನು ಕ್ರೋಧ ಆವರಿಸಿದೆ. ಅದು ಅವನ ಸ್ವಭಾವವಲ್ಲ. ಅವನು ಮಿತ್ರಘ್ನ(ಮಿತ್ರನನ್ನು ಕೊಲ್ಲುವವನು) ಎಂಬ ರಾಕ್ಷಸನನ್ನು ಎದುರಿಸುತ್ತಿದ್ದಾನೆ. ವಿಭೀಷಣ ಮಿತ್ರಜ್ಞ, ರಾಮನು ಅವನನ್ನು ಸಖನಾಗಿ ಸ್ವೀಕಾರ ಮಾಡಿದ್ದಾನೆ. ತಪನ ಎಂಬ ರಾಕ್ಷಸನ ಜೊತೆ ಗಜ ಯುದ್ಧ ಮಾಡುತ್ತಿದ್ದಾನೆ. ಕುಂಭಕರ್ಣನ ಮಗನಾದ (ಎರಡನೆಯವನು)ನಿಕುಂಭ ಘೋರ ಪರಾಕ್ರಮಿ. ಅವನಿಗೂ ಕಪಿ ಸೇನಾಪತಿ ನೀಲನಿಗೂ ಯುದ್ಧ ನಡೆಯುತ್ತಿದೆ. ಸುಗ್ರೀವನಿಗೂ ಪ್ರಘಸನೆಂಬ ರಾಕ್ಷಸನಿಗೂ ಯುದ್ಧವಾಗುತ್ತಿದೆ. ಲಕ್ಷ್ಮಣನಿಗೂ ವಿರೂಪಾಕ್ಷ(ವಿಕಾರ ಕಣ್ಣುಳ್ಳವ)ನಿಗೂ ಯುದ್ಧವಾಯಿತು. ರಾಮನನ್ನು ಅಗ್ನಿಕೇತು, ರಶ್ಮಿಕೇತು, ಸುಪ್ತಘ್ನ, ಯಜ್ಞಕೋಪ ಎನ್ನುವ ನಾಲ್ವರು ರಾಕ್ಷಸನಾಯಕರು ಮುತ್ತಿದರು. ವಜ್ರಮುಷ್ಠಿ ಎಂಬ ರಾಕ್ಷಸ ಮೈಂದನ ಜೊತೆ ಯುದ್ಧ ಮಾಡುತ್ತಿದ್ದಾನೆ. ದ್ವಿವಿದನ ಜೊತೆ ಅಶನಿಪ್ರಭಾ ಎಂಬ ರಾಕ್ಷಸ ಯುದ್ಧ ಮಾಡುತ್ತಿದ್ದಾನೆ. ಮೈಂದ-ದ್ವಿವಿದರು ಸದಾ ಜೊತೆಯಲ್ಲಿ ಇರುತ್ತಾರೆ. ಪ್ರತಪನ ಎಂಬ ಘೋರನಾದ ರಾಕ್ಷಸ ನಲನ ಜೊತೆ ಯುದ್ಧ ಮಾಡುತ್ತಿದ್ದಾನೆ. ಯಮಧರ್ಮನ ಮಗನಾದ ಸುಷೇಣ ವಿದ್ಯುನ್ಮಾಲಿ ಎಂಬ ರಾಕ್ಷಸನ ಜೊತೆಗೆ ಯುದ್ಧ ಮಾಡುತ್ತಿದ್ದಾನೆ. ಹೀಗೇ ಉಳಿದ ವಾನರರೂ ಕೂಡಾ ಒಂದೊಂದು ರಾಕ್ಷಸನೊಂದಿಗೆ ಯುದ್ಧ ಮಾಡುತ್ತಿದ್ದಾರೆ. ರೋಮಾಂಚನಕಾರಿಯಾದ ದ್ವಂದ್ವಯುದ್ಧ ನಡೆಯುತ್ತಿದೆ.

ಯುದ್ಧ ಮುಂದುವರೆದಂತೆ ರಕ್ತದ ನದಿಗಳು ಹರಿದವು. ಕೂದಲುಗಳೇ ದಡದ ಮೇಲಿನ ಹುಲ್ಲು.ಏತನ್ಮಧ್ಯೆ ಇಂದ್ರಜಿತನು ಕ್ರುದ್ಧನಾಗಿ ತನ್ನ ಗದೆಯಿಂದ ಅಂಗದನನ್ನು ಎದುರಿಸಿದ. ಏಕೆಂದರೆ ಅವನನ್ನು ಬಿಟ್ಟರೆ ಶತ್ರುಸೈನ್ಯದ ಒಂದೊಂದು ಪ್ರದೇಶವೇ ಖಾಲಿಯಾಗುತ್ತದೆ. ಅಲ್ಲಿನ ಎಲ್ಲಾ ರಾಕ್ಷಸರನ್ನು ಕೊಂದು ಬಿಡುತ್ತಾನೆ ಅಂಗದ. ತನ್ನ ಗದೆಯಿಂದ ಅಂಗದನನ್ನು ಪ್ರಹರಿಸಿದ. ಅವನು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಮುನ್ನುಗ್ಗಿ ಇಂದ್ರಜಿತುವಿನ ರಥವನ್ನು ಧ್ವಂಸಮಾಡಿದ. ಕುದುರೆಗಳನ್ನು ಕೊಂದ, ಸಾರಥಿಯನ್ನು ಕೂಡಾ ಕೊಂದು ಬರಿಗೈ, ಬರಿಗಾಲಿನಲ್ಲಿ ನಿಲ್ಲಿಸಿದ ಇಂದ್ರಜಿತುವನ್ನು. ಅತ್ತ ಪ್ರಜಂಘ ಸಂಪಾತಿಯನ್ನು ಮೂರು ಬಾಣಗಳಿಂದ ಪ್ರಹರಿಸಿದ್ದಾನೆ. ಸಂಪಾತಿ ಒಂದೇ ವೃಕ್ಷದಿಂದ ಪ್ರಜಂಘನನ್ನು ಮುಗಿಸಿದ. ಜಂಬುಮಾಲಿ ರಥದಲ್ಲಿ ಕುಳಿತು ರಥಶಕ್ತಿಯನ್ನು(ಈಟಿಯಂತಿರುತ್ತದೆ) ಹನುಮಂತನ ಕಡೆ ಎಸೆದ. ಅದು ಹನುಮಂತನ ಎದೆಗೆ ಬಂದು ತಾಗಿತು. ಹನುಮಂತ ಮರುಕ್ಷಣದಲ್ಲಿ ರಥವನ್ನೇರಿ ತಲದಿಂದ ಪ್ರಹಾರ ಮಾಡಿ ರಥವನ್ನೂ, ಜಂಬುಮಾಲಿಯನ್ನೂ ಮುಗಿಸಿದ. ಪ್ರತಪನ ಎಂಬ ದೊಡ್ಡ ರಾಕ್ಷಸ ನಲನ ಕಡೆಗೆ ಧಾವಿಸುತ್ತಿದ್ದಾನೆ. ಅವನು ಬರುವಷ್ಟರಲ್ಲಿ ನಲನು ಅವನ ಕಣ್ಣುಗಳನ್ನು ಕಿತ್ತು ಬಿಸಾಡಿದ. ತಪನನು ಗಜನ ಮೇಲೆ ತೀಕ್ಷ್ಣವಾದ ಬಾಣಗಳನ್ನು ಪ್ರಯೋಗಿಸುತ್ತಿದ್ದಾನೆ. ಗಜನ ಶರೀರದಿಂದ ರಕ್ತ ಬರುತ್ತಿದೆ. ತಪನನನ್ನು ಗಜ ಪರ್ವತ ಶಿಖರದಿಂದ ಪ್ರಹರಿಸುತ್ತಾನೆ. ಮತ್ತೆ ಮುಷ್ಟಿಯಿಂದ ಪ್ರಹಾರ ಮಾಡುತ್ತಾನೆ. ಅಲ್ಲಿಗೆ ಮುಗಿಯಿತು.

ಮಿತ್ರಘ್ನನು ವಿಭೀಷಣನ ಮೇಲೆ ಬಾಣಗಳ ಮಳೆ ಕರೆದಿದ್ದಾನೆ. ವಿಭೀಷಣನಿಗೆ ಗಾಯಗಳಾಗಿವೆ. ತನ್ನ ಗದೆಯಿಂದ ಪ್ರಹರಿಸಿ ಅವನನ್ನು ಹಿಮ್ಮೆಟ್ಟಿಸಿದ ವಿಭೀಷಣ. ಪ್ರಘಸನು ಬಾಣಗಳಿಂದ ವಾನರಸೈನ್ಯವನ್ನು ಮರ್ಧಿಸುತ್ತಿದ್ದಾನೆ. ಅವನನ್ನು ಸುಗ್ರೀವನು ಸಪ್ತಪರ್ಣ ಎಂಬ ವೃಕ್ಷದಿಂದ ಕೊಂದನು. ವಿರೂಪಾಕ್ಷನ ಮೇಲೆ ಲಕ್ಷ್ಮಣನು ಬಾಣಗಳ ಮಳೆಗರೆಯುತ್ತಾನೆ. ಬಳಿಕ ಒಂದು ಬಾಣದಿಂದ ಅವನನ್ನು ಬೇಧಿಸಿದ. ರಾಮನನ್ನು ಮುತ್ತಿದ ರಾಕ್ಷಸರು ರಾಮನ ಮೇಲೆ ಬಾಣ ಪ್ರಯೋಗ ಮಾಡುತ್ತಾರೆ, ಅವನಿಗೆ ಗಾಯ ಮಾಡುತ್ತಾರೆ. ರಾಮನು ಒಂದೊಂದು ಬಾಣಪ್ರಯೋಗದಿಂದ ನಾಲ್ವರನ್ನೂ ಸಂಹರಿಸಿದ. ವಜ್ರಮುಷ್ಟಿಯನ್ನು ಮೈಂದನು ತನ್ನ ಮುಷ್ಟಿಯಿಂದಲೇ ಬಡಿದು ಕೊಂದಿದ್ದಾನೆ. ಅವನ ರಥ, ಕುದುರೆ ಎಲ್ಲಾ ಧ್ವಂಸವಾಗಿದೆ. ನೀಲ-ನಿಕುಂಭರ ಮಧ್ಯೆ ಯುದ್ಧವಾಗುತ್ತಿದೆ. ನಿಕುಂಭನು ತೀಕ್ಷ್ಣವಾದ ಬಾಣಗಳಿಂದ ನೀಲನನ್ನು ಬೇಧಿಸುತ್ತಿದ್ದಾನೆ. ಅಟ್ಟಹಾಸ ಮಾಡಿ ನಕ್ಕಿದ್ದಾನೆ. ನೀಲ ನುಗ್ಗಿ ಹೋಗಿ ನಿಕುಂಭನ ರಥದ ಚಕ್ರವನ್ನು ಕಿತ್ತು, ಆ ಚಕ್ರದಿಂದ ಮಹಾವಿಷ್ಣುವಿನಂತೆ ನಿಕುಂಭನ ಸಾರಥಿಯ ತಲೆ ಕತ್ತರಿಸಿದ. ನಿಕುಂಭನನ್ನು ರಥಹೀನನನ್ನಾಗಿ ಮಾಡಿದ. ಅದು ಹಿನ್ನಡೆ. ಅಶನಿಪ್ರಭನನ್ನು ದ್ವಿವಿದನು ಗಿರಿಶೃಂಗದಿಂದ ಅಪ್ಪಳಿಸಿದರೆ, ದ್ವಿವಿದನನ್ನು ಬಾಣಗಳಿಂದ ಸೀಳುತ್ತಾನೆ ಅಶನಿಪ್ರಭ. ಸುಮಾರು ಗಾಯಗಳಾಗಿ ಸಿಟ್ಟೂ ಬಂದಿತು ದ್ವಿವಿದನಿಗೆ. ಸಾಲವೃಕ್ಷವೊಂದನ್ನು ಕಿತ್ತು ಅದರಿಂದ ರಥ, ಕುದುರೆ, ಅಶನಿಪ್ರಭ ಎಲ್ಲರನ್ನೂ ಬಡಿದು ಸಂಹಾರ ಮಾಡಿದ. ಸುಷೇಣ- ವಿದ್ಯುನ್ಮಾಲಿಯ ಮಧ್ಯೆ ಸುಮಾರು ಹೊತ್ತು ಯುದ್ಧ ನಡೆದಿದೆ. ಕಾಂಚನಭೂಷಿತವಾದ ರಥದಲ್ಲಿ ಕುಳಿತು ವಿದ್ಯುನ್ಮಾಲಿಯು ಸುಷೇಣನನ್ನು ಬಾಣಗಳಿಂದ ಪ್ರಹರಿಸುತ್ತಿದ್ದಾನೆ, ಘರ್ಜಿಸುತ್ತಿದ್ದಾನೆ. ಸುಷೇಣನು ಒಂದು ಬೆಟ್ಟದ ಶೃಂಗವನ್ನು ಮುರಿದು ವಿದ್ಯುನ್ಮಾಲಿಯ ರಥದ ಮೇಲೆ ಹಾಕಿದ. ರಥದಿಂದ ನೆಗೆದು ಬದುಕಿದ ವಿದ್ಯುನ್ಮಾಲಿ. ಸುಷೇಣ ಒಂದು ದೊಡ್ಡ ಬಂಡೆ ತಂದು ವಿದ್ಯುನ್ಮಾಲಿಯ ಮೇಲೆ ಹಾಕುವಷ್ಟರಲ್ಲಿ ವಿದ್ಯುನ್ಮಾಲಿಯು ಸುಷೇಣನ ಎದೆಗೆ ಗದೆಯಿಂದ ಹೊಡೆದ. ಆದರೂ ಬಂಡೆಯಿಂದ ಪ್ರಹರಿಸಿ ವಿದ್ಯುನ್ಮಾಲಿಯನ್ನು ಸಂಹರಿಸಿದನು ಸುಷೇಣ.

ಹೀಗೆ ಮುಖ್ಯ ವಾನರರಿಂದ ರಾಕ್ಷಸನಾಯಕರು ಯುದ್ಧದಲ್ಲಿ ಹಿನ್ನಡೆಯನ್ನು ಅನುಭವಿಸಿದರು. ಯುದ್ಧಭೂಮಿಯಲ್ಲಿ ಮುರಿದು ಬಿದ್ದ ಖಡ್ಗಗಳು, ಗದೆಗಳು, ಶಕ್ತಿಗಳು, ತೋಮರಗಳು, ಪಟ್ಟಸಗಳು, ಮುರಿದು ಬಿದ್ದ ರಥಗಳು, ಕುದುರೆಗಳು, ಸತ್ತ ಆನೆಗಳು ಎಲ್ಲದರ ಜೊತೆಗೆ ಕೆಲವು ವಾನರರು, ರಾಕ್ಷಸರೂ ಬಿದ್ದಿದ್ದಾರೆ. ಆಗಲೇ ಯುದ್ಧಭೂಮಿಯನ್ನು ನರಿಗಳು ಬಂದು ಮುತ್ತಿದ್ದಾವೆ. ಎರಡೂ ಕಡೆಗಳಲ್ಲಿ ತಲೆಯಿಲ್ಲದ ಅನೇಕ ದೇಹಗಳು ಎದ್ದು ನಿಂತಿದ್ದವು. ಭಯಂಕರವಾದ ದೃಶ್ಯ ಅದು. ದೇವಾಸುರರ ಸಂಗ್ರಾಮದ ಹೋಲಿಕೆಯನ್ನು ವಾಲ್ಮೀಕಿಗಳು ಕೊಟ್ಟಿದ್ದಾರೆ. ರಾಕ್ಷಸರಿಗೆ ಹಿನ್ನಡೆಯಾಗಿದೆ. ಆದರೂ ಯುದ್ಧಮಾಡುತ್ತಿದ್ದಾರೆ. ಏಕೆಂದರೆ ಸಂಜೆಯಾಗಲು ಕಾಯುತ್ತಿದ್ದಾರೆ. ಅವರಿಗೆ ಸೂರ್ಯಾಸ್ತದ ನಂತರ ಬಲ ಹೆಚ್ಚು. ಕತ್ತಲೆ, ಮೋಸ, ಮಾಯೆ ಇದರಲ್ಲಿ ಇವರ ಪರಿಣಿತಿ. ರಾತ್ರಿ ಇದಕ್ಕೆ ಅನುಕೂಲ. ಯುದ್ಧ ಮಾಡುತ್ತಿದ್ದಂತೆ ರಾತ್ರಿ ಬಂತು. ಸೂರ್ಯಾಸ್ತವಾಯಿತು.

ರಾಕ್ಷಸರು ಮತ್ತು ವಾನರ ಮಧ್ಯೆ ರಾತ್ರಿ ಯುದ್ಧ ಆರಂಭ ಆಯಿತು. ಒಬ್ಬರಿಗೊಬ್ಬರು ಕಾಣ್ತಾ ಇಲ್ಲ ಆದರೂ ಪರಸ್ಪರ ಪ್ರಹಾರ ಮಾಡ್ತಾ ಇದ್ದಾರೆ. ನೀನು ರಾಕ್ಷಸ ಅಂತ ವಾನರರು ಗುದ್ದುತ್ತಾ ಇದ್ದಾರೆ. ಯಾರನ್ನು ಗುದ್ದಿದರೋ…? ನೀನು ವಾನರ ಅಂತ ರಾಕ್ಷಸರು ಗುದ್ದುತ್ತಾ ಇದ್ದಾರೆ. ಶಬ್ದಗಳು ಕೇಳಿ ಬಂದವು, ಕೊಲ್ಲು, ಸೀಳು, ಯಾಕೆ ಒಡ್ತಾ ಇದ್ದೀಯಾ? ರಾಕ್ಷಸರು ಹೇಗೆ ಕಂಡರು ಅಂದ್ರೆ, ಕಪ್ಪು ಬಣ್ಣದ ಮೈ ಅದರಲ್ಲಿ ಬಂಗಾರದ ಆಭರಣಗಳು, ದೀಪ್ತವಾದ ಔಷಧಿಗಳ ವನದಂತೆ ಕಂಡರು. ಕೆಲವೊಂದು ವಿಶೇಷ ಔಷಧಿಗಳು ಬೆಳಗುತ್ತಾ ಇರ್ತವೆ. ದಿವೌಷಧಗಳು ಎಲ್ಲರಿಗೂ ಕಾಣಿಸೋದಿಲ್ಲ. ಕುಶಲ ವೈದ್ಯನ ಕಣ್ಣಿಗೆ ಮಾತ್ರ ಕಾಣ್ತಾದೆ. ಹಾಗೆ ಕಾಣ್ತಾ ಇದ್ದರು. ರಾಕ್ಷಸರು ವಾನರರನ್ನು ತಿನ್ನುತ್ತಾ ತಿನ್ನುತ್ತಾ ಮುಂದೆ ಹೋಗ್ತಾ ಇದ್ದರು. ವಾನರರು ಏನು ಮಾಡಿದ್ರು ಅಂದ್ರೆ ತಮ್ಮ ಉಗುರುಗಳಿಂದ ಏನು ಸಿಗುತ್ತೋ ಅದು, ಕುದುರೆಗಳೋ ಆ ಬಂಗಾರದ ಆಭರಣಗಳೋ, ಸೀಳ್ತಾ ಇದ್ದರಂತೆ. ಹಾಗೆ ರಾತ್ರೆಯಲ್ಲೂ ಕೂಡ ರಾಕ್ಷಸ ಸೈನ್ಯಕ್ಕೆ ಕ್ಷೋಭೆಗೊಳಿಸಿದರು ವಾನರರು. ಏತನ್ಮಧ್ಯೆ ರಾಮ ಮತ್ತು ಲಕ್ಷ್ಮಣರು ತಮ್ಮ ಧನಸ್ಸಿನಿಂದ ಕಾಣುವ ಕಾಣದ ಸಾವಿರಸಾವಿರ, ಲಕ್ಷಲಕ್ಷ ರಾಕ್ಷಸರನ್ನು ಪ್ರಹರಿಸಿದರು. ರಥಚಕ್ರ ಮತ್ತು ಕುದುರೆಗಳ ಓಡಾಟದಿಂದ ಎದ್ದ ಧೂಳು, ರಾಕ್ಷಸರ ಕಿವಿ ಮತ್ತು ಕಣ್ಣುಗಳನ್ನು ಮುಚ್ಚಿತು. ಆ ಧೂಳು ಶಾಂತವಾಯಿತು ಯಾಕೆಂದ್ರೆ ರಕ್ತದ ನದಿಗಳು ಹರಿದವು. ರಣವಾದ್ಯಗಳು, ಭೇರಿ ಮೃದಂಗಗಳು ಕೊಳಲು ಅದ್ಭುತವಾಗಿ ಕೇಳಿಬಂದವು. ರಾಕ್ಷಸರ ಆರ್ತನಾದಗಳೂ ಕೇಳಿಬರ್ತಾ ಇವೆ ಯುದ್ಧಭೂಮಿಯಲ್ಲಿ. ಹತರಾದ ವಾನರ ವೀರರು ರಾಕ್ಷಸರು ಶಕ್ತಿಶೂಲ ಪರಶುಗಳು ಪರ್ವತಾಗ್ರಿಗಳು ವೃಕ್ಷಗಳು ಎಲ್ಲ ಕಾಣ್ತಾ ಇವೆ. ನೋಡಿದರೆ ಯುದ್ಧ ಭೂಮಿಯನ್ನು ಶಸ್ತ್ರಗಳಿಂದ ಪೂಜೆ ಮಾಡಿದ ಹಾಗೆ. ಎಲ್ಲ ಕಡೆ ಶವಗಳು, ರಕ್ತಗಳು, ಮಾಂಸಗಳು ಎಲ್ಲಿ ಕಾಲಿಡಬೇಕು ಎಂದು ಗೊತ್ತಾಗುತ್ತ ಇರಲಿಲ್ಲ. ಆ ಕಾಳರಾತ್ರಿ ಎಷ್ಟೋ ಜೀವಗಳನ್ನು ತೆಗೆದುಕೊಂಡಿತು.

ರಾಕ್ಷಸರು ಒಂದು ಉಪಾಯ ಮಾಡ್ತಾರೆ. ಎಲ್ಲ ಹೋಗಿ ರಾಮನನ್ನು ಮುತ್ತಿಬಿಡೋಣ. ಅವನೇ ಕೇಂದ್ರ, ಅವನಿಗೇನಾದರೂ ಆದರೆ ಎಲ್ಲ ಮುಗಿಯಿತು. ಹಾಗಾಗಿ ರಾಮನಿಂದ ಘಾಸಿಯಾದ, ಘೋರರಾದ ರಾಕ್ಷಸರು, ರಾಮನೆಡೆಗೆ ಧಾವಿಸ್ತಾ ಇದ್ದರೆ. ಅದರಲ್ಲಿ ಆರು ರಾಕ್ಷಸರು, ಯಜ್ಞಶತ್ರು, ಮಹಾಪಾಶ ಮಹೋದರರು, ವಜ್ರದಂಷ್ಟ್ರ, ಶುಕ ಸಾರಣರು, ಅತ್ಯಂತ ಹತ್ತಿರ ಬಂದರಂತೆ. ಕಣ್ಣು ಮುಚ್ಚಿ ತೆಗೆಯುವುದರೊಳಗೆ ಆರು ಬಾಣಗಳನ್ನು ಈ ಆರು ರಾಕ್ಷಸರ ಮೇಲೆ ಪ್ರಯೋಗ ಮಾಡ್ತಾನೆ. ಎದ್ದೆನೋ ಬಿದ್ದೆನೋ ಅಂತ ಓಡಿ ಹೋದರಂತೆ. ರಾಮನ ಮುಂದಿಂದ ಮಾತ್ರ ಅಲ್ಲ, ಯುದ್ಧ ಭೂಮಿಯಿಂದಲೇ ಓಡಿ ಹೋಗಿ ಬದುಕಿದರು. ಸ್ವರ್ಣಭೂಷಿತವಾದ ತನ್ನ ಬಾಣಗಳನ್ನು ರಾಮ ಬಾಕಿ ರಾಕ್ಷಸರ ಮೆಲೆ ಪ್ರಯೋಗ ಮಾಡ್ತಾನೆ. ಆ ಬಾಣಗಳ ಮೇಲೆ “ರಾಮ” ಎನ್ನುವ ನಾಮಾಂಕನ ಇದೆ. ಎಲ್ಲ ರಾಕ್ಷಸರೂ ಸತ್ತರು ಯಾರೂ ಉಳಿಯಲಿಲ್ಲ. ದೀಪದ ಹುಳುಗಳಂತೆ ರಾಮನನ್ನು ಮುತ್ತಿ ನಷ್ಟರಾಗಿ ಹೋಗ್ತಾರೆ. ಎಷ್ಟು ಶಬ್ದ ಬರ್ತಾ ಇದೆ ಅಂದ್ರೆ ತ್ರಿಕೂಟ ಪರ್ವತ ಮಾತಡಿದಂತೆ. ಒಂದು ವಿಚಿತ್ರ ಘಟನೆ ನಡೆಯಿತು, ಗೋಲಾಂಗುಲರು, ಅವರ ಬಣ್ಣ ಕತ್ತಲೆಯದ್ದು, ದೊಡ್ದ ಶರೀರ. ಗೋಲಾಂಗುಲರು ಈ ರಾಕ್ಷಸರನ್ನು ತಬ್ಬಿ ತಿನ್ತಾ ಇದ್ದರಂತೆ. ಅದು ರಾಕ್ಷಸರಿಗೆ ಮಾತ್ರ ಸಾಧ್ಯ. ಸಿಟ್ಟಿನಲ್ಲಿ, ರಾಕ್ಷಸರು ವಾನರರನ್ನು ತಿಂದರಲ್ವಾ, ಅದಕ್ಕೆ ತಾವು ಅವರನ್ನು ತಿನ್ನಬೇಕೆಂದು ತಿನ್ತಾ ಇದ್ದರಂತೆ. ಏತನ್ಮಧ್ಯೆ ಯುದ್ಧಕ್ಕೊಂದು ತಾತ್ಕಾಲಿಕ ತಿರುವು ಕೊಡುವಂತಹ ಘಟನೆ ನಡೆಯಿತು. ಅಂಗದ ಅವನ ಮುಂದೆ ಇಂದ್ರಜಿತು ಇದ್ದಾನೆ. ಇಂದ್ರಜಿತುವನ್ನು ಕೊಲ್ಲಬೇಕು ಎನ್ನುವ ಮನಸ್ಸಿದೆ. ಆ ರೋಷದಲ್ಲಿಯೇ ಅಂಗದನು ತನ್ನ ಪ್ರಹಾರದಿಂದ ರಥವನ್ನು ಧ್ವಂಸಮಾಡಿದ್ದಾನೆ, ಸಾರಥಿಯನ್ನು ಕೊಂದಿದ್ದಾನೆ, ಕುದುರೆಗಳನ್ನು ಕೊಂದು ಇಂದ್ರಜಿತುವನ್ನು ನೆಲದಲ್ಲಿ ನಿಲ್ಲಿಸಿದ್ದಾನೆ. ಇಂದ್ರಜಿತು ರಥವನ್ನು ಬಿಟ್ಟು ನೆಲಕ್ಕೆ ಜಿಗಿದಿದ್ದಾನೆ. ಇದ್ದಕ್ಕಿದ್ದಂತೆ ಮಾಯವಾದ. ಅತ್ತ ಅಂಗದನನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ದೇವತೆಗಳೂ ಅಭಿನಂದಿಸುತ್ತಿದ್ದಾರೆ ಯಾಕೆಂದ್ರೆ ಅವರೂ ಪೆಟ್ಟು ತಿಂದವರೇ. ಇಂದ್ರನನ್ನು ಕಟ್ಟಿ ಸೆರೆಯಲ್ಲಿ ಇಟ್ಟವನು. ರಾಮಲಕ್ಷ್ಮಣರೂ ಅಂಗದನ ಪರಾಕ್ರಮಕ್ಕೆ ಅಭಿನಂದಿಸಿದರು. ಇಂದ್ರಜಿತುವಿನ ಪ್ರಭಾವ ಈ ಯುದ್ಧದಲ್ಲಿ ಏನು ಎಂಬುದು ಯಾರಿಗೆ ಗೊತ್ತಿಲ್ಲ. ಹಾಗಾಗಿ ಎಲ್ಲರೂ ಅಭಿನಂದಿಸಿದರು. ಅವನು ಸಾಲದ್ದಕ್ಕೆ ತಾಮಸಿ ಎಂಬ ಪ್ರಯೋಗದಿಂದ ಅವನು ಕತ್ತಲಿನಲ್ಲಿ ಕರಗಿ ಹೋಗಿ ಮಾಯೆಯಿಂದ. ಹಾಗಾಗಿ ಅವನೊಡನೆ ಯುದ್ಧ ಮಾಡುವುದು ಕಷ್ಟ. ಅವನೂ ಅವನ ಸಹಚರರನ್ನು ಬಿಟ್ರೆ ಎಲ್ಲರಿಗೂ ಸಂತೋಷವಾಗಿದೆ. ವಾನರ ಸೈನ್ಯ ಅಂತೂ ಏಷ್ಟೋ ಸಂತೋಷ ಪಟ್ರು. ಸುಗ್ರೀವ ಜಾಂಬವಂತರು ಸಾಧು ಸಾಧು ಎಂದು ಘರ್ಜನೆ ಮಾಡಿದ್ರು.

ಇಂದ್ರಜಿತು ಸಿಟ್ಟಿನಿಂದ ಬ್ರಹ್ಮದತ್ತ ವರದಿಂದ ಯಾರಿಗೂ ಕಾಣದಂತೆ ಅದೃಶ್ಯನಾದ. ಅದೃಶ್ಯನಾಗಿ ಬಾಣಗಳನ್ನು ಬಿಡಲಿಕ್ಕೆ ಆರಂಭ ಮಾಡಿದ. ಸಂಚರಿಸ್ತುತ್ತಾ ಬಾಣ ಪ್ರಯೋಗ ಮಾಡ್ತಾನೆ. ಅವನೂ ಕಾಣ್ತಾ ಇಲ್ಲ ಒಂದೊಂದು ಸಲ ಒಂದೊಂದು ಕಡೆಯಿಂದ ಬಾಣ ಬಿಡ್ತಾ ಇದ್ದಾನೆ. ಬಾಣ ಎಲ್ಲಿ ಪ್ರಯೋಗ ಮಾಡ್ತಾ ಇದ್ದಾನೆ ಅಂದ್ರೆ ಬರೇ ರಾಮ ಲಕ್ಷ್ಮಣರ ಮೇಲೆ ಮಾತ್ರ ಮಾಡ್ತಾ ಇದ್ದಾನೆ. ಆ ಬಾಣಗಳೂ ಯಾವುದೆಂದರೆ ಘೋರ ಸರ್ಪಗಳು, ಬಾಣದ ರೂಪದಲ್ಲಿ. ಅದಕ್ಕೆ ನಾಗಪಾಶಬಂಧ ಅಂತ ಹೇಳ್ತಾರೆ. ಆ ಬಾಣ, ಶರೀರವನ್ನು ಭೇದಿಸಿ ಸುತ್ತಿಕೊಳ್ತವೆ ಕೂಡಲೇ ಮತ್ತು ಕಚ್ಚುತ್ತವೆ. ಆ ನಾಗಪಾಶ ಬಂಧಕ್ಕೆ ಪ್ರತಿವಿದ್ಯೆ ಅಂತ ಇಲ್ಲ, ಅದಕ್ಕೆ ಮೋಕ್ಷ ಅಂತ ಇಲ್ಲ. ನಾಗಮಯವಾದ ಶರಗಳಿಂದ ಅಪಾದಮಸ್ತಕ ರಾಮಲಕ್ಷ್ಮಣರನ್ನು ಭೇದಿಸಿದ. ವಾಲ್ಮೀಕಿಗಳು ಅವನನ್ನು ಕೂಟಯೋಧಿ ಅಂತ ಕರೆದಿದ್ದಾರೆ. ಕೂಟಯೋಧಿ ಅಂದ್ರೆ ಮೋಸದ ಯುದ್ಧ, ಮಾಯೆಯ ಯುದ್ಧ ಮಾಡ್ತಾ ಇದ್ದಾನೆ. ಧರ್ಮದ ಯುದ್ಧದಲ್ಲಿ ಒಬ್ಬರಿಗೊಬ್ಬರು ಕಾಣಬೇಕು. ಚೀನಾ ದೇಶದವರು ನಮ್ಮ ಅನೇಕ ಯುದ್ಧ ಪ್ರಕಾರಗಳನ್ನು ತೆಗೆದುಕೊಂಡು ಹೋಗಿದ್ದಾರೆ, ಅದರಲ್ಲಿ ಈ ಮೋಸಗಳನ್ನು ಸೇರಿಸಿಕೊಂಡಿದ್ದಾರೆ. ನಮ್ಮಲ್ಲಿ ಹೇಗೆ ಅಂದ್ರೆ ಶತ್ರುಗಳಿಗೆ ಗೊತ್ತಾಗದಂತೆ ಹಿಂದಿನಿಂದ ಹೊಡೆಯುವಂತಿಲ್ಲ. ವಂಚನೆಯಿಂದ ಅದೃಶ್ಯದಿಂದ ನಾಗಪಾಶ ಬಂಧವನ್ನು ಪ್ರಯೋಗಿಸಿ ಅವರನ್ನು ಬಂಧಿಸುವಂತಹ ಪ್ರಯತ್ನವನ್ನು ಮಾಡ್ತಾ ಇದ್ದಾನೆ. ವಾನರರು ದೀನರಾಗಿ ವೀಕ್ಷಣೆ ಮಾಡ್ತಾ ಇದ್ದಾರೆ. ಶರದಂತೆ ಇರುವ ಸರ್ಪಗಳು ಬಂದು ಬೀಳ್ತಾ ಇದ್ದಾವೆ. ರಾಕ್ಷಸರಾಜನ ಮಗನಿಗೆ ಯಾವಾಗ ರಾಮ ಲಕ್ಷ್ಮಣರನ್ನು ಸಮ್ಮುಖದಲ್ಲಿ ಎದುರಿಸಲಿಕ್ಕೆ ಸಾಧ್ಯವಾಗಲಿಲ್ಲ, ಆ ಹೇಡಿಯು ಮಾಯೆಯನ್ನು ಪ್ರಯೋಗಮಾಡಿ ಅವರನ್ನು ಬಂಧಿಸಲಿಕ್ಕೆ ಪ್ರಯತ್ನ ಮಾಡ್ತಾ ಇದ್ದಾನೆ. ಇಂದ್ರಜಿತುವನ್ನು ಹುಡುಕಿ ಎಂದು ರಾಮನು ಹತ್ತು ವಾನರ ಯೂತಪತಿಗಳಿಗೆ ಅಪ್ಪಣೆ ಮಾಡ್ತಾನೆ. ಯಾರ್ಯಾರು ಅಂದ್ರೆ ಸುಶೇಣ ಸೋದರರು ಇಬ್ಬರು, ನೀಲ, ಅಂಗದ, ಶರಭ, ವಿನತ, ಜಾಂಬವಂತ, ಸಾಮಪ್ರಸ್ತ, ವೃಷಭ. ತಮ್ಮನ್ನು ರಾಮ ಆರಿಸಿದ್ದಾನೆ ಎಂದು ಸಂತೋಷ ಪಟ್ಟು, ಇವರೆಲ್ಲ ದೊಡ್ಡ ದೊಡ್ಡ ವೃಕ್ಷಗಳನ್ನು ಹಿಡಿದು ಆಕಾಶವನ್ನು ಪ್ರವೇಶ ಮಾಡ್ತಾರೆ. ಹತ್ತು ದಿಕ್ಕುಗಳಲ್ಲಿ ಇಂದ್ರಜಿತುವನ್ನು ಹುಡುಕುತ್ತಾ ಇದ್ದಾರೆ, ಅವರ ಮೇಲೆ ಇಂದ್ರಜಿತು ಬಾಣಗಳನ್ನು ಪ್ರಯೋಗ ಮಾಡ್ತಾ ಇದ್ದಾನೆ ಇಮ್ಮಡಿ ವೇಗದಲ್ಲಿ. ಅವರಿಗೆ ಇಂದ್ರಜಿತು ಕಾಣಲಿಲ್ಲ ಆದರೆ ಬಾಣಗಳು ಅವರನ್ನು ಭೇದಿಸ್ತಾ ಇದೆ. ಈ ಹತ್ತು ಯೂತಪತಿಗಳ ಮೇಲೆ ಪ್ರಯೋಗ ಮಾಡಿ ಅವರನ್ನು ತಡೆದ ಇಂದ್ರಜಿತು ಮತ್ತೆ ರಾಮ ಲಕ್ಷ್ಮಣರ ಮೇಲೆ ಪ್ರಯೋಗ ಮಾಡ್ತಾ ಇದ್ದಾನೆ.

ಸರ್ವದೇಹಮೇಲೆ, ಯಾವ ಅಂಗವನ್ನೂ ಬಿಟ್ಟಿಲ್ಲ, ಬಾಣಗಳನ್ನು ಇಳಿಸ್ತಾ ಇದ್ದಾನೆ. ಕೊಂಚ ಹೊತ್ತಿನಲ್ಲಿ, ಅವರ ದೇಹದ ಮೇಲೆ ಬಾಣ ಇಲ್ಲದ ಜಾಗ ಇಲ್ಲ ಅಂತ ಇಲ್ಲ. ನೋಡಲು ಮುಳ್ಳುಹಂದಿ ರೀತಿಯಲ್ಲಿ ಕಾಣ್ತಾ ಇದ್ದರು ರಾಕ್ಷಸರು. ಬಾಣದ ರೂಪತಾಳಿದ ಪನ್ನಗಗಳು, ಸರ್ಪಗಳು ರಾಮ ಮತ್ತು ಲಕ್ಷ್ಮಣರ ಶರೀರವನ್ನು ಭೇದಿಸ್ತಾ ಇದ್ದಾವೆ, ರಕ್ತ ಹರಿತಾ ಇದೆ ಇಬ್ಬರ ಶರೀರದಿಂದ ಹೂಬಿಟ್ಟ ಶಿಂಶುಪಾವೃಕ್ಷದಂತೆ. ವೇಗದಿಂದ ರಕ್ತ ಹರಿದು ಹೋಗ್ತಾ ಇದೆಯಂತೆ. ಏತನ್ಮಧ್ಯೆ ಅದೃಶವಾಗಿ ಇಂದ್ರಜಿತುವಿನ ಧ್ವನಿ ಕೇಳಿತಂತೆ. ರಾಮಲಕ್ಷ್ಮಣರಿಗೆ ಸಂಬೋಧಿಸಿ, ಅದೃಶ್ಯನಾಗಿ ನಾನು ಯುದ್ಧ ಮಾಡುವಾಗ ನನ್ನನ್ನು ಹಿಡಿಯಲು ಇಂದ್ರನಿಂದಲೂ ಸಾಧ್ಯವಿಲ್ಲ. ನಿಮಗೆಲ್ಲಿಂದ ಸಾಧ್ಯ..? ಬಾಣಗಳ ಜಾಲದಿಂದ ನಿಮ್ಮನ್ನು ಬೇಧಿಸಿ, ಯಮಪುರಿಗಟ್ಟುತ್ತೇನೆ. ಹೀಗೆ ಹೇಳಿ ಮತ್ತಷ್ಟು, ಅಸಂಖ್ಯಾತ ಬಾಣಗಳನ್ನು ಪ್ರಯೋಗಿಸಿದ. ಕ್ಷಣಮಾತ್ರದಲ್ಲಿಯೂ ರಾಮಲಕ್ಷ್ಮಣರು ತಿರುಗಿ ನೋಡುವಂತಿಲ್ಲ. ಪೂರ್ತಿ ಬಾಣಗಳು ಹೊಕ್ಕಿವೆ ರಾಮಲಕ್ಷ್ಮಣರನ್ನು. ಜಗತೀಪತಿಗಳು ಭೂಮಿಯನ್ನು ಮುಟ್ಟದೇ ಮಲಗಿದಾರೆ. ಬಾಣಗಳು ಅವರ ಶರೀರವನ್ನು ಬೇಧಿಸಿರುವುದರಿಂದ ಭೂಮಿಯನ್ನು ಮುಟ್ಟಲಾಗಲಿಲ್ಲ. ಯುದ್ಧದಲ್ಲಿ ಒಬ್ಬ ವೀರನಿಗೆ ಇನ್ನೂ ಹೆಚ್ಚು ನೋವಾಗಲು ಸಾಧ್ಯವಿಲ್ಲ. ಬಾಣದಿಂದ ಬೇಧಿಸಲ್ಪಡದ ಅಂಗುಲದಷ್ಟು ಸ್ಥಳವಿಲ್ಲ ಅವರ ಶರೀರದಲ್ಲಿ. ಅಷ್ಟು ಬಾಣಗಳಿದ್ದವು ರಾಮಲಕ್ಷ್ಮಣರಲ್ಲಿ. ಮೊದಲು ರಾಮ ಮಲಗಿದ.

ತುಂಬ ವೇಗಶಾಲಿ ಬಾಣಗಳು ಯಾವುದೆಂದರೆ ನಾರಾಚ- ಪೂರ್ತಿ ಲೋಹದ ಬಾಣ, ಅರ್ಧನಾರಾಚ- ಅರ್ಧ ಲೋಹಮಯವಾದ ಬಾಣ, ಬಲ್ಲ- ತುದಿಗೆ ಅರ್ಧಚಂದ್ರ ಇರುವುದು, ಅಂಜಲಿಕ- ಬಾಣದ ತುದಿಗೆ ಅರ್ಧ ಕೈಮುಗಿದಂತಿದೆ, ವತ್ಸದಂತ- ಮಕ್ಕಳ ಹಲ್ಲಿನಂತೆ ಇರುವ ಬಾಣಗಳು, ಸಿಂಹದಂಷ್ಟ್ರಾ- ಸಿಂಹದ ಕೋರೆಹಲ್ಲಿನಾಕಾರದ ಬಾಣಗಳು, ಕ್ಷುರ- ಕತ್ತಿಯಂತ ಬಾಣಗಳು. ಇವೆಲ್ಲ ರಾಮನನ್ನು ಪ್ರವೇಶಿಸಿದೆ. ಧರೆಗೊರಗಿದಾಗಲೂ ರಾಮನ ಕೈಯಲ್ಲಿ ಧನುಸ್ಸಿತ್ತು. ಧರೆಗೊರಗುವ ರಾಮನನ್ನು ಕಂಡ ಲಕ್ಷ್ಮಣನಿಗೆ ಜೀವವೇ ಬೇಡ ಎನ್ನುವ ಭಾವವು ಬಂದಿತು. ವಾನರರು ರಾಮಲಕ್ಷ್ಮಣರನ್ನು ಸುತ್ತಿದರು. ಧಾರಾಕಾರವಾಗಿ ಅತ್ತರು ಕಪಿಗಳು. ಮಿತಿಮೀರಿದ ವಿಷಾದವನ್ನು ತಾಳಿದರು ವಾನರರು. ಆ ಸಮಯದಲ್ಲಿ ಸುಗ್ರೀವ ಹಾಗೂ ವಿಭೀಷಣ ಬಂದರು. ಎಲ್ಲರೂ ಶೋಕಿಸುತ್ತಿದ್ದಾರೆ. ರಾಮಲಕ್ಷ್ಮಣರಲ್ಲಿ ಚಲನೆಯಿಲ್ಲ, ಮೈಪೂರ್ತಿ ರಕ್ತ, ಮೆಲ್ಲುಸಿರು ಬಿಡುತ್ತಿದ್ದಾರೆ. ಎಲ್ಲಿ ನೋಡಿದರೂ ಇಂದ್ರಜಿತುವಿನ ಸುಳಿವಿಲ್ಲ. ವಿಭೀಷಣನಿಗೆ ಮಾಯಾಬಲದಿಂದ ಕಂಡನು ಇಂದ್ರಜಿತು. ಇಂದ್ರಜಿತುವಿಗೆ ಭಾರೀ ತೃಪ್ತಿಯಾಗಿದೆ. ರಾಕ್ಷಸರನ್ನುದ್ದೇಶಿಸಿ, ಇಂದ್ರಜಿತು ಹೇಳಿದನು, ಖರದೂಷಣರ ಸಂಹಾರ ಮಾಡಿದವರು ಹೇಗೆ ಬಿದ್ದರು ನೋಡಿ. ಯಾರೇ ಬಂದರೂ, ಈ ಪಾಶದಿಂದ ಬಿಡಿಸಲು ಸಾಧ್ಯವಿಲ್ಲ. ಎಷ್ಟು ರಾತ್ರಿಗಳಾದವೋ, ನಮ್ಮ ಅಪ್ಪ ಸರಿಯಾಗಿ ನಿದ್ದೆ ಮಾಡದೇ. ಈ ಭಯಾಕ್ರಾಂತವನ್ನು ಲಂಕೆಗೆ ತಂದೊಡ್ಡಿದ ರಾಮಲಕ್ಷ್ಮಣರು ಧರೆಗುರುಳಿದಾರೆ. ಲಂಕೆಗೆ ಬಂದ ಮಹದಾಪತ್ತನ್ನು ನಾನು ಪರಿಹರಿಸಿದೆ. ಈ ಎಲ್ಲ ವಾನರರ, ರಾಮಲಕ್ಷ್ಮಣರ ಎಲ್ಲರ ಪ್ರಯತ್ನ ವಿಫಲ ಎಂದನು.

ಮತ್ತೆ ಅಲ್ಲಿರುವ ಕಪಿನಾಯಕರ ಮೇಲೆ ಬಾಣಗಳ ಮಳೆಗರೆಯಲಾರಂಭಿಸಿದನು. ಬೊಬ್ಬಿರಿದು ಹೇಳಿದನು ಇಂದ್ರಜಿತು, ನೋಡಿ ಶರಬಂಧದಿಂದ ಬೇಧಿಸಿದ್ದೇನೆ ರಾಮಲಕ್ಷ್ಮಣರನ್ನು. ಇನ್ಯಾರು ಬರ್ತಾರೆ ಎಂದು ಕೂಗಿದಾಗ ರಾಕ್ಷಸರಿಗೆ ಖುಷಿಯಾಯಿತು. ರಾಕ್ಷಸರ ಕಡೆಯಿಂದ ರಾಮನು ಹತನಾದನೆಂದು ಇಂದ್ರಜಿತುವನ್ನು ಹೊಗಳಿದರು. ರಾಮಾಯಣದಲ್ಲಿ ತುಂಬ ತಿರುವುಗಳಿವೆ…! ರಾಮಲಕ್ಷ್ಮಣರು ಹತರಾಗಿ ಹೋದರು ಎಂದು ನಿಶ್ಚಯಿಸಿದನು. ಭವಿಷ್ಯದ ಅರಿವಿಲ್ಲದೇ ಲಂಕೆಯನ್ನು ಪ್ರವೇಶಿಸಿದನು ಇಂದ್ರಜಿತು.

ಮುಂದೇನಾಯಿತು… ಮುಂದಿನ ಪ್ರವಚನದಲ್ಲಿ ಕೇಳೋಣ..

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments