ಹನುಮ ಜಯಂತಿಯ ಪ್ರಯುಕ್ತ ಧರ್ಮಭಾರತೀ ಪತ್ರಿಕೆಯಲ್ಲಿ ಪ್ರಕಟವಾದ “ಹನುಮ ಚರಿತೆ” ಎಂಬ ಲೇಖನವನ್ನು ಹರೇರಾಮದ ಆಸ್ತಿಕ ಓದುಗರಿಗಾಗಿ ಕಂತುಗಳಲ್ಲಿ ಮರುಪ್ರಕಟಿಸುತ್ತಿದ್ದೇವೆ.
ಲೇಖನದ ಕರ್ತೃ ಚಿ. ಕೃಷ್ಣಾನಂದ ಶರ್ಮರಿಗೂ, ಪ್ರಕಟಣೆಯ ಕೃಪೆಯಿತ್ತ ಧರ್ಮಭಾರತಿಗೂ ಕೃತಜ್ಞತೆಗಳು.

ಇಲ್ಲಿಯವರೆಗೆ: ಹನುಮಚರಿತೆ ಭಾಗ 01

ಹನುಮ ಚರಿತೆ : ಭಾಗ 02

(ಕೃಷ್ಣಾನಂದ ಶರ್ಮ, ಬಂಗಲಗಲ್ಲು)

ಜಾಂಬವಂತ ಹನುಮನ ಹುಟ್ಟು ಮತ್ತು ಅಂತವಿಲ್ಲದ ವೃತ್ತಾಂತವನ್ನು ಹೇಳಲು ಉಪಕ್ರಮಿಸಿದ . . .

~

ವಾನರ ಚರ್ಚೆ (ಚಿತ್ರ: ಧರ್ಮಭಾರತೀ)

ವಾನರ ಚರ್ಚೆ (ಚಿತ್ರ: ಧರ್ಮಭಾರತೀ)

ಅವಳು ಅಂಜನಾ! ಕುಂಜರನ ಕಂದ.
‘ಪುಂಜಿಕಸ್ಥಲಾ’ ಎಂಬ ಅಪ್ಸರೆಯಾಗಿದ್ದ ಅವಳು ಶಾಪದಿಂದಾಗಿ ಇಳೆಯಲ್ಲಿ ಕಾಮರೂಪಿಣಿಯಾದ ವಾನರಿಯಾಗಿ ಜನಿಸಿದ್ದಳು.
ಕಪಿಶ್ರೇಷ್ಠನಾದ ಕೇಸರಿಯನ್ನು ವರಿಸಿದ್ದಳು.
ಅದೊಂದು ದಿನ ಆ ಅಂಜನಾ, ಮಾನುಷರೂಪ ತಾಳಿ, ಕೆಂಪಂಚಿನ ಹೊಂಬಣ್ಣದ ರೇಷ್ಮೆಸೀರೆಯುಟ್ಟು, ವಿವಿಧ ಪುಷ್ಪಮಾಲೆ-ಆಭರಣಗಳನ್ನು ಧರಿಸಿ, ಪರ್ವತಶಿಖರಗಳಲ್ಲಿ ಸಂಚರಿಸತೊಡಗಿದಳು.
ಆ ಅಂದಿನ ಅಂಜನೆಯ ರೂಪವೋ……
ಚಂದ್ರಮನನ್ನು ಸಪ್ಪೆ ಸಪ್ಪೆಯಾಗಿಸುವ ಕುಂದಿಲ್ಲದ ಅಂದವದು! ನಿಸರ್ಗದ ಚೆಲುವೆಲ್ಲ ಘನರೂಪತಾಳಿದಾಗ ಅದಕ್ಕೆ ’ಅಂಜನೆ’ ಎಂದು ಹೆಸರಿಟ್ಟಿರಬಹದೇನೋ!! ಅಂತಹ ರೂಪ!!!
ಸರ್ವಾಲಂಕಾರಭೂಷಿತೆಯಾಗಿ ಅಂಜನೆ ಹೋಗುತ್ತಿರುವಾಗ ವಾಯುದೇವ ಅಂಜನೆಯ ರೇಷ್ಮೆ ಸೀರೆಯನ್ನು ಮೆಲ್ಲ ಮೆಲ್ಲನೆ ಹಾರಿಸಿಬಿಟ್ಟ!
ಕ್ಷಣಮಾತ್ರದಲ್ಲಿ ಅಂಜನೆ ವಿವಸ್ತ್ರಳಾಗಿದ್ದಳು!

ಅಂಜನೆಯ ಆ ರೂಪಪರಾಕಾಷ್ಠೆ ವಾಯುದೇವನಂತಹ ವಾಯು ದೇವನನ್ನೂ ಸೆಳೆಯಿತು!
ಅನಿತರಸಾಧಾರಣರೂಪವತಿ ಅಂಜನೆಯನ್ನು ವಾಯು ತನ್ನೆರಡು ಬಾಹುಗಳಿಂದ ಆಲಂಗಿಸಿದ!
ಅಂಜನೆಗೋ ದಿಗ್ಭ್ರಮೆ! ಅದುವರೆಗೂ ಪಾಲಿಸಿಕೊಂಡು ಬಂದಿದ್ದ ಪಾತಿವ್ರತ್ಯ ಪತನವಾಗುವುದೆಂಬ ಬೆದರಿಕೆಯಿಂದ ಕೂಡಿದ ಮನದ ಬೇನೆ!
ಆಕೆ ಗಾಬರಿಯಿಂದ . . . .
“ಯಾರು, ನನ್ನ ಪಾತಿವ್ರತ್ಯಕ್ಕೆ ಭಂಗ ತರಲು ಬಯಸುತ್ತಿರುವವನಾರು?” ಎಂದು ಪ್ರಶ್ನಿಸಿದಳು.
ಅದಕ್ಕೆ ವಾಯು…..
“ಸುಭಗೆ,
ಭಯ ಬೇಡ. ನಾನು ನಿನ್ನನ್ನು ಹಿಂಸಿಸುವುದಿಲ್ಲ. ನಿನ್ನ ಪಾತಿವ್ರತ್ಯಕ್ಕೂ ಭಂಗಪಡಿಸುವುದಿಲ್ಲ. ನಿನ್ನನ್ನು ಆಲಂಗಿಸಿ ಮನಸ್ಸಿನ ಮೂಲಕವಾಗಿ ನಿನ್ನೊಳಗೆ ಪ್ರವೇಶಿಸಿದ್ದೇನೆ.
ಈ ಸಮಾಗಮದಿಂದ ನಿನಗೆ ಮಹಾಚತುರನೂ, ಮಹಾಸತ್ತ್ವನೂ ಆದ ಮಗ ಹುಟ್ಟುತ್ತಾನೆ. ನೆಗೆಯುವುದರಲ್ಲಿ ಅವನು ನನಗೆ ಸಮಾನನಾಗುತ್ತಾನೆ.” ಎಂದ
ಅದಕ್ಕವಳು ಒಪ್ಪಿದಳು! ಇಲ್ಲಿ ಅವಳ ಒಪ್ಪಿಗೆ ನೆಪಮಾತ್ರ. ಏಕೆಂದರೆ ಅದು ದೇವನಿರ್ಣಯ!

ಅಂಜನೆ ಪರ್ವತತಪ್ಪಲಿನ ಗುಹೆಯೊಂದರಲ್ಲಿ ಮಗುವೊಂದನ್ನು ಪ್ರಸವಿಸಿದಳು!!
ಅವನು…….?
ಅವನು……?
ಅವನೇ…….
ಆಂಜನೇಯ!! ಅಂಜನಾತನಯ!!
~*~

ಆಂಜನೇಯ ಆಗಿನ್ನೂ ಬಾಲಕ.
ಮಣ್ಣು ತಿನ್ನುವ ವಯಸ್ಸಿರಬಹುದು. ಒಂದು ದಿನ ಆತ ಆಗತಾನೆ ಹುಟ್ಟಿದ ಸೂರ್ಯನನ್ನು ನೋಡಿದ.
ನೋಡಿದ್ದಷ್ಟೇ ಅಲ್ಲ; ಹಣ್ಣೆಂದು ಭಾವಿಸಿದ!
ಭಾವಿಸಿದ್ದಷ್ಟೇ ಅಲ್ಲ; ಕಿತ್ತುತರಲು ಯೋಚಿಸಿದ!
ಯೋಚಿಸಿದ್ದಷ್ಟೇ ಅಲ್ಲ; ಅದಕ್ಕಾಗಿ ಹೊರಟ!
ಆಂಜನೇಯ ಆಕಾಶ ಮಾರ್ಗವಾಗಿ ಮುನ್ನೂರು ಯೋಜನ ಕ್ರಮಿಸಿದ.
ಸೂರ್ಯನ ತೀಕ್ಷ್ಣ ತೇಜಸ್ಸಿನ ಝಳ ಪುಟ್ಟಬಾಲಕನ ದೇಹಕ್ಕೆ ತಟ್ಟಿತು! ಊಹುಂ, ಸೂರ್ಯನ ತೇಜಸ್ಸಿಗೆ ಕವಡೆ ಕಾಸಿನ ಕಿಮ್ಮತ್ತೂ ದಕ್ಕಲಿಲ್ಲ!
ಆತ ಆ ಹಣ್ಣನ್ನೇ ನೋಡುತ್ತಾ ಕ್ಷಿಪ್ರಗತಿಯಲ್ಲಿ ಸಾಗುತ್ತಲೇ ಇದ್ದ!

ರವಿಯ ತಾಪ ಆಂಜನೇಯನಿಗೆ ತಟ್ಟಲಿಲ್ಲ ನಿಜ. ಆದರೆ ಆ ತಾಪ ತಟ್ಟದಿರುವುದು ಇಂದ್ರನಿಗೆ ಕೋಪ ನೆತ್ತಿಗೇರುವಂತೆ ಮಾಡಿತು.
ಅದರ ಪರಿಣಾಮ, ಆ ಪುಟ್ಟ ಕಂದನ ಮೇಲೆ ವಜ್ರಾಯುಧಪ್ರಹಾರ! ಗಿಳಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತೆ!
ವಜ್ರಾಯುಧ ಪ್ರಹಾರವೇಕೆ, ವಜ್ರಾಯುಧದ ದರ್ಶನದಿಂದಲೇ ವೀರಾಗ್ರೇಸರರ ಎದೆ ನಡುಗುವುದುಂಟು!
ಆದರೆ ಇಲ್ಲಿ ಒಂದು ಹಸುಗೂಸಿನ ಮೇಲೆ ವಜ್ರಾಯುಧಪ್ರಹಾರ!
ಆ ಪ್ರಹಾರ ಇತರರ ಮೇಲಾಗಿದ್ದರೆ, ಅವರ ಭಾವಚಿತ್ರಕ್ಕೆ ಹಾರ ಬೀಳುತ್ತಿತ್ತು.!

ಆದರೆ ಆಂಜನೇಯನಿಗೆ ಹಾಗೇನೂ ಆಗಲಿಲ್ಲ. ಆ ಪ್ರಹಾರದ ರಭಸಕ್ಕೆ ಅವನು ಪರ್ವತದ ತುದಿಯಲ್ಲಿ ಬಿದ್ದ!
ಎಡ ದವಡೆ ಜಜ್ಜಿ ಹೋಯಿತು. ಅಂದಿನಿಂದ ಅವನಿಗೆ ’ಹನುಮಾನ್? ಎಂಬ
ಹೆಸರು ಅನ್ವರ್ಥವಾಯಿತು! (ಹನು ಎಂದರೆ ಕೆನ್ನೆಯ ಕೆಳಭಾಗ. ಪ್ರಶಸ್ತವಾದ ಹನು ಆತನಿಗಿರುವುದರಿಂದ ’ಹನುಮಾನ್?)

ಕಥೆ ಅಲ್ಲಿಗೇ ಮುಗಿಯಲಿಲ್ಲ……..
ತನ್ನ ಮಗುವಿಗೆ ಯಾರದೋ ಅಪ್ಪ ಹೊಡೆದರೆ ಹೇಗಾಗಬೇಡ ಆ ವಾಯುವಿಗೆ! ಅವನು ಕ್ರುದ್ಧನಾದ.
ಸಾಮಾನ್ಯ ಜನರು ಕ್ರುದ್ಧರಾದರೆ ಪ್ರತಿಪ್ರಹಾರವನ್ನೋ ಅಥವಾ ಯುದ್ಧವನ್ನೋ ಮಾಡುತ್ತಿದ್ದರು. ವಾಯು ಹಾಗೆ ಮಾಡುವ ಬದಲು ಸುಮ್ಮನಾದ!
ಜೀವಜಗತ್ತಿನ ಉಸಿರಾಟಕ್ಕೆ ಅಸಹಕಾರ ಆಂದೋಲನ!
ಅದರಿಂದ ಪ್ರತಿಪ್ರಹಾರಕ್ಕಿಂತಲೂ ಪರಿಣಾಮ ಜಾಸ್ತಿಯೇ ಆಯಿತು. ಏಕೆಂದರೆ, ಯಾವ ವಾಯುವಿನಿಂದ ಜೀವಿಗಳೆಲ್ಲ ಜೀವಂತವಾಗಿರುವವೋ ಅಂತಹ ವಾಯುವೇ ಇಲ್ಲವಾದರೆ?
ಜಗತ್ತು ಸ್ತಬ್ಧವಾಯಿತು! ದೇವತೆಗಳು ಗಾಬರಿಗೊಂಡರು! ನಾಕ ತಲ್ಲಣಿಸಿತು!

ಮುಕ್ಕೋಟಿ ದೇವತೆಗಳು ವಾಯುವನ್ನು ಪ್ರಸನ್ನಗೊಳಿಸಲು ಓಡೋಡಿ ಬಂದರು; ಪ್ರಸನ್ನಗೊಳಿಸಿದರು ಕೂಡ!
ಅನಂತರ ನಮ್ಮ ಹನುಮನೆಡೆ ದೇವತೆಗಳಿಂದ ವರಪ್ರವಾಹವೇ ಹರಿದು ಬಂದಿತು…..
ಬ್ರಹ್ಮ…. “ಅಸ್ತ್ರಾಘಾತದಿಂದ ಮರಣ ಸಂಭವಿಸದೇ ಇರಲಿ” ಎಂಬ ವರವನ್ನಿತ್ತ
ವಜ್ರಾಯುಧಪ್ರಹಾರ ಮಾಡಿದರೂ ಸ್ವಲ್ಪವೂ ಗಾಯವಾಗದ್ದನ್ನು ಕಂಡು ಪ್ರೀತನಾಗಿ “ಇಚ್ಛಾಮರಣಿಯಾಗು” ಎಂಬ ವರವನ್ನಿತ್ತ.
ಈ ರೀತಿಯ ಹಲವಾರು ವರಗಳು ಹರಿದುಬಂದವು!
ಈ ವರಪ್ರವಾಹಕ್ಕೆ ವಜ್ರಾಯುಧಪ್ರಹಾರವೇ ನಾಂದಿಯಾಯಿತು!
ಹೀಗೆ ಹನುಮನ ಕಥೆಯನ್ನು ಹೇಳುವುದರ ಮೂಲಕ ಹನುಮನಿಗೆ ಹನುಮನ ಪರಿಚಯವನ್ನು ಮಾಡಿಕೊಟ್ಟ ಜಾಂಬವಂತ!
~*~

ಜಾಂಬವಂತ ಉದ್ಬೋಧಕಾರಿ ಮಾತನ್ನಾಡಲು ಉಪಕ್ರಮಿಸಿದ….
“ಹನುಮ
ವೇಗದಲ್ಲಿ ವಾಯುವಿಗೆ ಸಮನಾದ ನೀನು ಹೀಗಿರುವುದು ಸಲ್ಲ.
ಎದ್ದೇಳು! ಶೋಚನೀಯ ಸ್ಥಿತಿಯಲ್ಲಿರುವ ನಮ್ಮನ್ನು ರಕ್ಷಿಸು. ನಮ್ಮನ್ನು ರಕ್ಷಿಸುವಷ್ಟು ಬಲ ನಿನ್ನಲ್ಲಿ ಮಾತ್ರ ಅಡಗಿದೆ.
ಮಹಾವೇಗನೇ, ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನೇ ಅಳೆದ ವಿಷ್ಣುವಿನಂತೆ ಈ ಸಮುದ್ರವನ್ನು ಲಂಘಿಸಿ ಅಂತಹ ಪರಾಕ್ರಮವನ್ನು ತೋರಿಸು…..”
ಎಂಬ ಮಾತು ಕೇಳಿ ಪ್ರೇರಿತನಾದ ಹನುಮ ಎದೆಯುಬ್ಬಿಸಿ ನಿಂತ.

ಅಷ್ಟೇ ಅಲ್ಲ ಸಮುದ್ರಲಂಘನಕ್ಕಾಗಿ ಇಡೀ ದೇಹವನ್ನೇ ಉಬ್ಬಿಸಿದ!
ಅದನ್ನು ಕಂಡ ಕಪಿಸೈನ್ಯದಲ್ಲಿ ಹರ್ಷೋನ್ಮಾದ! ಅಚ್ಚರಿ!
ಅವನನ್ನು ನೋಡುವ ಉತ್ಸುಕತೆ! ಏಕೆಂದರೆ ಹನುಮ ಸ್ವಲ್ಪ ಹೊತ್ತಿನ ಮುಂಚೆ ಇದ್ದಂತಿರಲಿಲ್ಲ ಆಗ!
ಕಪಿಗಳ ಹನುಮ ಸ್ತುತಿ, ಜಯಘೋಷ ಮುಗಿಲು ಮುಟ್ಟಿತು! ಹನುಮನ ಸ್ತುತಿ ವೃದ್ಧಿ ಹೊಂದಿದಂತೆ ಅವನ ದೇಹವೂ ವರ್ಧಿಸಿತು!
ಅನಂತರ ತನ್ನ ಬಾಲವನ್ನೊಮ್ಮೆ ಹರ್ಷದಿಂದ ನೆಲಕ್ಕಪ್ಪಳಿಸಿದ! ಅದು ತನ್ನ ಬಲವನ್ನು ಸ್ಮರಿಸಿಕೊಳ್ಳಲು ಅವನು ಬಳಸುವ ಉಪಾಯವಷ್ಟೆ!
ಆ ಸಮಯದಲ್ಲಿ ಅವನ ಸ್ವರೂಪವೋ ಅತ್ಯದ್ಭುತ! ಅವನ ಮುಖ ಸೂರ್ಯಮಂಡಲದಂತೆ ಉರಿದು ಕೆಂಪಾಗಿತ್ತು!
ಅಂತಹ ಹನುಮ ವೃದ್ಧವಾನರರಿಗೆ ನಮಸ್ಕರಿಸಿ, ಕಪಿಸೈನ್ಯಕ್ಕೆ ತನ್ನ ಸಾಮರ್ಥ್ಯದ ಪರಿಚಯ ಮಾಡಿಸಲು ಮುಂದಾದ…

ಕಪಿಶ್ರೇಷ್ಠರೇ,
ಅತ್ಯಂತ ಶೀಘ್ರಗಾಮಿಯಾದ, ಪರ್ವತವನ್ನು ಭೇದಿಸಬಲ್ಲ ವಾಯುವಿನ ಪುತ್ರ ನಾನು. ಹಾರುವುದರಲ್ಲಿ ನನಗೆ ಸಮನಾದವರನ್ನು ನಾ ಕಾಣೆ.
ಮುಗಿಲಿಗೆ ಮುತ್ತಿಕ್ಕುವಂತಿರುವ ವಿಸ್ತಾರವಾದ ಮೇರುಪರ್ವತವನ್ನು ಒಮ್ಮೆಯೂ ವಿಶ್ರಾಂತಿ ಪಡೆಯದೆಯೇ ಸಾವಿರ ಬಾರಿ ಪ್ರದಕ್ಷಿಣೆ ಮಾಡುವ ಸಾಮರ್ಥ್ಯ ನನ್ನದು!
ನನ್ನ ಬಾಹುಗಳನ್ನಾಶ್ರಯಿಸಿ ಈ ಸಮುದ್ರದ ನೀರಿನಿಂದ ಜಗತ್ತನ್ನೇ ಮುಳುಗಿಸಿಬಿಡಬಲ್ಲೆ!
ಉದಯಾಚಲದಿಂದ ಸೂರ್ಯನೊಡನೆ ಹೊರಟು, ಅವನನ್ನು ಹಿಂದಿಕ್ಕಿ ಎರಡು ಸಲ ಅಸ್ತಾಚಲವನ್ನು ಮುಟ್ಟಿ ಸೂರ್ಯನ ಅಭಿಮುಖವಾಗಿ ಬರಬಲ್ಲೆ!
ಗಗನದಲ್ಲಿರುವ ಗ್ರಹನಕ್ಷತ್ರಗಳಾರೂ ನನ್ನ ವೇಗಕ್ಕೆ ಸಮರಲ್ಲ! ನಾನು ಸಮುದ್ರವನ್ನು ಲಂಘಿಸುವಾಗ ಪರ್ವತಗಳನ್ನು ನಡುಗಿಸುವುದನ್ನು ನೀವು ನೋಡುವಿರಿ.
ಸಮುದ್ರವನ್ನು ಶೋಷಿಸಿಬಿಡಬಲ್ಲೆ! ಆಕಾಶದಲ್ಲಿ ನನ್ನನ್ನು ಹಿಂಬಾಲಿಸಲು ಯಾರಿಗೂ ಸಾಧ್ಯವಿಲ್ಲ!
ನೂರಲ್ಲ, ಹತ್ತು ಸಾವಿರ ಯೋಜನ ಹಾರಬಲ್ಲಷ್ಟು ಸಾಮರ್ಥ್ಯ ನನಗಿದೆ! ನನ್ನ ಪರಾಕ್ರಮದಿಂದ ವಜ್ರಪಾಣಿಯಾದ ಇಂದ್ರನಿಂದ ಅಥವಾ ಬ್ರಹ್ಮನಿಂದ ಅಮೃತವನ್ನು ಕಸಿದು ತರಬಲ್ಲೆ!” ಎಂದು ಗರ್ಜಿಸಿದ!

ಅದಕೆ ಜಾಂಬವಂತ..
“ವೀರನೇ,
ನಿನ್ನ ಶ್ರೇಯಸ್ಸಿಗಾಗಿ ನಾವೆಲ್ಲರೂ ಏಕಾಗ್ರಚಿತ್ತದಿಂದ ಮಂಗಲಾಚರಣೆ ಮಾಡುತ್ತೇವೆ. ಗುರುಜನರ ಅನುಗ್ರಹದಿಂದ ಸಮುದ್ರವನ್ನು ಉಲ್ಲಂಘಿಸು. ನೆನಪಿಡು. ಎಲ್ಲ ಕಪಿಗಳ ಪ್ರಾಣಗಳೂ ನಿನ್ನನ್ನೇ ಆಶ್ರಯಿಸಿವೆ” ಎಂದ.

ಸಮುದ್ರವನ್ನುಲ್ಲಂಘಿಸಲು ಹನುಮ ಮಹೇಂದ್ರಪರ್ವತದ ತುದಿಗೆ ಹೊರಟ!
ಹಾರಲು ಸರಿಯಾದ ಸ್ಥಳವನ್ನು ಆರಿಸಿಕೊಂಡ! ಅವನ ಪಾದಾಘಾತದಿಂದ ಬಂಡೆಗಳು ಕೆಳಗೆ ಬೀಳುತ್ತಿದ್ದವು!
ವೃಕ್ಷಗಳು ಜೋಕಾಲಿಯಾಡುತ್ತಿದ್ದವು. ಪ್ರಾಣಿಗಳಿಗೆ ನಡುಕ ಹತ್ತಿತು!
ಕಾಮಕೇಳಿಯಲ್ಲಿ ತೊಡಗಿದ್ದ ಗಂಧರ್ವರು ಅಲ್ಲಿಂದ ಕಾಲ್ಕಿತ್ತರು.
ಹನುಮ ವೇಗವನ್ನು ಕೇಂದ್ರೀಕರಿಸಿ ಮನಸ್ಸಿನಿಂದ ಲಂಕೆಯನ್ನು ಮುಟ್ಟಿಯಾಗಿತ್ತು. ತನ್ನ ತನುವಿನಿಂದ ಹೋಗುವುದೊಂದು ಬಾಕಿಯಿತ್ತು.
~*~

ಆಂಜನೇಯ ಬ್ರಹ್ಮ ಮಹೇಂದ್ರಾದಿ ದೇವತೆಗಳಿಗೆ ನಮಸ್ಕರಿಸಿ, ವಾಯು ದೇವನನ್ನು ಸ್ಮರಿಸಿ, ದಕ್ಷಿಣ ದಿಕ್ಕಿನಲ್ಲಿ ಎತ್ತರೆತ್ತರಕ್ಕೆ ಬೆಳೆಯತೊಡಗಿದ!
ಹಾರುವಾಗ ತನ್ನ ಕೈಕಾಲುಗಳಿಂದ ಪರ್ವತವನ್ನು ಬಹುವಾಗಿ ಪೀಡಿಸಿದ! ಆ ಪೀಡನೆಯಿಂದ ಪರ್ವತ ಸ್ವಲ್ಪ ಹೊತ್ತಿನವರೆಗೆ ಅಲುಗಾಡುತ್ತಲೆ ಇತ್ತು!
ಅಲ್ಲಿದ್ದ ಪ್ರಾಣಿಗಳು ಬೆದರಿ ಬೊಬ್ಬಿರಿದವು! ಆ ಪರ್ವತದಲ್ಲಿ ವಾಸವಿದ್ದ ಋಷಿಗಳು, ಕಾಮಕೇಳಿಯಲ್ಲಿ ತೊಡಗಿದ್ದ ಗಂಧರ್ವ, ವಿದ್ಯಾಧರರು ಆಕಾಶದಲ್ಲಿ ನಿಂತು ಉಲ್ಲಂಘನೆಯ ದೃಶ್ಯವನ್ನು ನೋಡತೊಡಗಿದರು.
ಹನುಮ ಹಾರುವಾಗ ಕಪಿಗಳನ್ನುದ್ದೇಶಿಸಿ… “ನೀವು ನಿಶ್ಚಿಂತೆಯಿಂದಿರಿ. ರಾಮ ಬಿಟ್ಟ ಬಾಣದಂತೆ ಲಂಕೆಯನ್ನು ಸೇರುತ್ತೇನೆ.
ಅಲ್ಲಿ ಸೀತೆ ಕಾಣದಿದ್ದರೆ ಸ್ವರ್ಗಕ್ಕೆ ಹೋಗುತ್ತೇನೆ. ಅಲ್ಲಿಯೂ ಕಾಣದಿದ್ದರೆ ಲಂಕೆ ಸಮೇತವಾಗಿ ರಾವಣನನ್ನು ಬಂಧಿಸಿ ಕರೆತರುತ್ತೇನೆ.” ಎಂದು ಅಭಯವಿತ್ತು ಹಾರಿಯೇ ಬಿಟ್ಟ

ಮನೆಗೆ ಬಂದ ನೆಂಟನನ್ನು ಮನೆಯವರು ಕಳುಹಿಸಿಕೊಡುವ ತೆರದಿ ಅವನ ತೊಡೆಯ ವೇಗಕ್ಕೆ ಪರ್ವತದಲ್ಲಿದ್ದ ವೃಕ್ಷಗಳು ಅವನನ್ನು ಸ್ವಲ್ಪದೂರ ಹಿಂಬಾಲಿಸಿಕೊಂಡು ಬಂದವು!
ಹನುಮ ಹಾರಿದಾಗ ವಾತಾವರಣದಲ್ಲಿ ಆದ ಪರಿಣಾಮಗಳನ್ನು ಬಣ್ಣಿಸಲು ಪದಗಳೇ ಇಲ್ಲ!
ಇದ್ದ ಪದಗಳನ್ನು ವಾಲ್ಮಿಕಿಗಳೇ ಪ್ರಯೋಗಿಸಿಬಿಟ್ಟಿದ್ದಾರೆ!!
ಸಾಮಾನ್ಯರಿಗೆ ಅಸಾಧ್ಯವಾದ ಕಾರ್ಯವನ್ನು ಹನುಮ ಮಾಡುತ್ತಿರುವುದನ್ನು ನೋಡಿ ಋಷಿಗಳು, ಯಕ್ಷ ಗಂಧರ್ವಾದಿಗಳು ಮನಸಾರೆ ಸ್ತುತಿಸಿದರು.
ರಾಮಕಾರ್ಯಕ್ಕೆ ಹೋಗುತ್ತಿರುವ ಹನುಮನಿಗಾಗಿ ರವಿ ತನ್ನ ತಾಪವನ್ನು ತಗ್ಗಿಸಿದ:
ಸುತ್ತಲೂ ವಾಯು ಮಂದವಾಗಿ ಬೀಸಿ ಶ್ರಮ ಪರಿಹರಿಸುತ್ತಿದ್ದ! ರಾಮಕಾರ್ಯಕ್ಕಾಗಿ ಅವರಿಂದಲೂ ಸಣ್ಣ ಸೇವೆ ಸಂದಿತು.
~*~
ರಾಮ ಬಿಟ್ಟ ಬಾಣದಂತೆ ಹೋಗುತ್ತಿದ್ದ ಹನುಮನನ್ನು ನೋಡಿ, ಸಮುದ್ರರಾಜನೊಳಗಿದ್ದ ಕೃತಜ್ಞತಾಭಾವ ಎದ್ದು ಕುಳಿತಿತ್ತು.
ರಾಮನ ಪೂರ್ವಜನಾದ ಸಗರನಿಂದಾದ ಉಪಕಾರ ಸ್ಮರಿಸಿಕೊಂಡ.
ರಾಮನ ಕಾರ್ಯಕ್ಕಾಗಿ ಹಾರಲಿರುವ ಹನುಮನಿಗೆ ಸಹಾಯ ಮಾಡದಿದ್ದರೆ ಜನರು ಆಡಿಕೊಳ್ಳುತ್ತಾರೆ, ಹಾಗಾಗಿ ಅವನ ವಿಶ್ರಾಂತಿಗಾಗಿ ಜಾಗ ಕೊಡಬೇಕೆಂದು ನಿರ್ಧರಿಸಿದ.
ತನ್ನೊಳಗಿದ್ದ ಮೈನಾಕ ಪರ್ವತವನ್ನು ಎದ್ದು ನಿಲ್ಲುವಂತೆ ಆದೇಶಿಸಿದ ಕೂಡ!
ಇದ್ದಕ್ಕಿದ್ದಂತೆ ಎದ್ದುಬಂದ ಪರ್ವತವನ್ನು ನೋಡಿದ ಹನುಮ ಇದು ವಿಘ್ನಮಾಡಲೆಂದೇ ಬಂದಿದೆಯೆಂದು ಭಾವಿಸಿ, ತನ್ನ ಎದೆಯಿಂದ ಪರ್ವತದ ಮೇಲೆ ಅಪ್ಪಳಿಸಿದ!
ಪರ್ವತ ಕೆಳಕ್ಕುರುಳಿತು! ಹನುಮನ ವೇಗ, ಬಲವನ್ನರಿತ ಮೈನಾಕ ಸಂತೋಷದಿಂದ ಸಿಂಹನಾದ ಮಾಡಿತು.
ಅನಂತರ ಮೈನಾಕ ಮನುಷ್ಯರೂಪತಾಳಿ ತನ್ನ ಪರ್ವತದ ಮೇಲೆ ನಿಂತು ಸಮುದ್ರರಾಜನ ಕೃತಜ್ಞತಾ ಭಾವ, ಮನದ ಇಂಗಿತವನ್ನು ಹನುಮನಿಗೆ ತಿಳಿಯಪಡಿಸಿದ.
ವಿಶ್ರಾಂತಿ ಪಡೆಯಲು ಪರಿಪರಿಯಾಗಿ ಬೇಡಿಕೊಂಡ! ಸ್ತುತಿಸಿದ! ಪ್ರಾರ್ಥಿಸಿದ! ಗೋಗರೆದ!

ಊಹೂಂ! ಇದಾವುದೂ ಹನುಮನ ರಾಮಧ್ಯೇಯದ ಮುಂದೆ ಕೆಲಸಕ್ಕೆ ಬರಲಿಲ್ಲ.
ಹನುಮ “ಮೈನಾಕವೇ, ನೀನಾಡಿದ ಸವಿನುಡಿಯಿಂದ ಸಂತುಷ್ಟನಾಗಿದ್ದೇನೆ. ಬೇಸರಿಸದಿರು.
ಕಾರ್ಯದ ಒತ್ತಡ ನನ್ನನ್ನು ಆವರಿಸುತ್ತಿದೆ. ಮಧ್ಯೆ ವಿಶ್ರಮಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೇನೆ” ಎಂದು ಹಾರಿಯೇ ಬಿಟ್ಟ!
ಅಂಜನಾತನಯನ ರಾಮಕಾರ್ಯತತ್ಪರತೆ ಜಗಜ್ಜಾಹೀರಾಯಿತು!
ಅವನಿಗೆ ಸಹಾಯ ಮಾಡಲು ಬಂದುದಕ್ಕಾಗಿ ಮೈನಾಕನಿಗಿದ್ದ ಇಂದ್ರಭಯ ದೂರಾಯಿತು!
ರಾಮಮಹಿಮೆ!
~*~

ವಿಘ್ನ ಅಲ್ಲಿಗೇ ಮುಗಿಯಲಿಲ್ಲ…

(ಸಶೇಷ)

~

  • ಲೇಖನ ಕೃಪೆ: ಧರ್ಮಭಾರತೀ
  • ಲೇಖಕರ ಸಂಪರ್ಕ ಪುಟ
Facebook Comments Box