ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 24:

ನ್ಯಾಯದರ್ಶನ  

          ವಿದ್ವಾನ್ ರಾಜೇಶ್ವರಶಾಸ್ತ್ರಿ ಜೋಶಿ

“ಕಾಣಾದಂ ಪಾಣಿನೀಯಂ ಚ ಸರ್ವಶಾಸ್ತ್ರೋಪಕಾರಕಮ್’ಎಂಬ ಉಕ್ತಿಯಂತೆ ನ್ಯಾಯದರ್ಶನವು ಸರ್ವಶಾಸ್ತ್ರಗಳಿಗೂ ಉಪಕಾರಕವಾಗಿದೆ. ಒಂದು ಕಾಲದಲ್ಲಿ ನಾಸ್ತಿಕರ ಪ್ರಾಬಲ್ಯವು ಅಧಿಕವಾಗಿತ್ತು. ಜೈನ, ಬೌದ್ಧ, ಚಾರ್ವಾಕರು ಭಗವಂತನ ಅಸ್ತಿತ್ವ, ವೇದಪ್ರಾಮಾಣ್ಯ, ಕರ್ಮಶ್ರದ್ಧೆಗಳನ್ನು ಅಲ್ಲಗಳೆದು ತಮ್ಮದೇ ವೈಶಿಷ್ಟ್ಯವನ್ನು ಸ್ಥಾಪಿಸಲು ಯತ್ನಿಸುತ್ತಿದ್ದರು. ಈಶ್ವರನು ಬೇರೆಯಿಲ್ಲ. ರಾಜ್ಯವನ್ನು ಆಳತಕ್ಕ ರಾಜರೇ ದೇವರು. ಪುನರ್ಜನ್ಮವಂತೂ ಇಲ್ಲವೇ ಇಲ್ಲ. ಕರ್ಮದಿಂದ ಉಂಟಾಗುವ ಪ್ರಾತ್ಯಕ್ಷಿಕ ಫಲವನ್ನು ಬಿಟ್ಟು ಕಾಲಾಂತರ ಅಥವಾ ಜನ್ಮಾಂತರದಲ್ಲಿ ಬರತಕ್ಕ ಅಪೂರ್ವದ್ವಾರಕವಾದ ಫಲವನ್ನು ನಂಬುವುದು ಅಸಾಧ್ಯ. ಮರಣಾನಂತರ ಜೀವನ ಕರ್ತವ್ಯವೇ ಮುಗಿದು ತಿರುಗಿ ಅವನು ಹುಟ್ಟುವ ಪ್ರಸಕ್ತಿಯೇ ಇಲ್ಲ. ಹೀಗೆ ಚಾರ್ವಾಕರು ಹೇಳಿದರೆ ಅಹಿಂಸಾ ಪುದ್ಗಲಾದಿಗಳಿಂದ ತಮ್ಮ ಮತ ಪ್ರಚಾರ ಮಾಡಿ ಜೈನರು ಬೌದ್ಧರು ಜನರಲ್ಲಿ ಭ್ರಾಂತಿ ಹುಟ್ಟಿಸಿದರು. ಇದನ್ನು ಕಂಡು ಉದಯನಾಚಾರ್ಯರು ನಾಸ್ತಿಕಮತ ಖಂಡನದಲ್ಲಿ ಅಗ್ರೇಸರರಾದರು. ಒಂದು ಸಾರೆ ಉದಯನಾಚಾರ್ಯರು ಜಗನ್ನಾಥಪುರಿಗೆ ಹೋದಾಗ ಇವರಿಗೆ ದೇವದರ್ಶನವಾಗಲಿಲ್ಲ. ಆಗ –

“ಐಶ್ವರ್ಯಮದಮತ್ತೋsಸಿ ಮಾಮವಜ್ಞಾಯ ತಿಪ್ಠಸಿ
ಸಮಾಯಾತೇ ಪುನರ್ಬೌದ್ಧೇ ಮದಧೀನಾ ತವ ಸ್ಥಿತಿಃ ||”

ನೀನು ಐಶ್ವರ್ಯದಿಂದ ಉನ್ಮತ್ತನಾಗಿರುವಿ. ಆ‍ದ್ದರಿಂದ ನನ್ನನ್ನು ತಿರಸ್ಕರಿಸುವಿ. ಬೌದ್ಧನು ಪುನಃ ಬಂದಾಗ ನಿನ್ನ ಸ್ಥಿತಿಯು ನನ್ನ ಅಧೀನವಾಗುವುದು ಎಂಬ ಇವರ ಹೆಮ್ಮೆಯ ವಾಕ್ಯವು ಮನನೀಯವಾಗಿದೆ. ನೈಯಾಯಿಕರು ವ್ಯಾಪ್ತಿಪರಾಮರ್ಶಾದಿಗಳಿಂದ ಅನುಮಾನದ ಪ್ರಾಮಾಣ್ಯವನ್ನು ದೃಢೀಕರಿಸಿ ಅದರಿಂದಲೇ ಈಶ್ವರ ಹಾಗೂ ವೇದಪ್ರಾಮಾಣ್ಯವನ್ನು ಸ್ಥಾಪಿಸುತ್ತಾರೆ. ಗೌತಮಸೂತ್ರಗಳು ಈ ದರ್ಶನಕ್ಕೆ ಮೂಲ ಭೂತವಾಗಿವೆ. ನ್ಯಾಯವೆಂದರೆ-

“ಪ್ರಮಾಣೈಃ ಅರ್ಥಪರೀಕ್ಷಣಂ ನ್ಯಾಯಃ”

ಪ್ರಮಾಣಗಳಿಂದ ಪದಾರ್ಥಗಳನ್ನು ಪರೀಕ್ಷಿಸುವುದೇ ನ್ಯಾಯವಾಗಿದೆ. ಮೊದಲು ಪೂರ್ವಮೀಮಾಂಸೆಯ ಅಧಿಕರಣಗಳಿಗೆ ನ್ಯಾಯವೆಂದು ಹೆಸರಿದ್ದರೂ ಕಾಲಕ್ರಮದಲ್ಲಿ ಈ ಶಾಸ್ತ್ರಕ್ಕೆ ನ್ಯಾಯಶಬ್ದವು ರೂಢವಾಯಿತು.

ಪ್ರದೀಪಃ ಸರ್ವಶಾಸ್ತ್ರಾಣಾಮುಪಾಯಃ ಸರ್ವಕರ್ಮಣಾಮ್ |
ಆಶ್ರಯಃ ಸರ್ವಭೂತಾನಾಂ ಶಶ್ವದಾನ್ವೀಕ್ಷಿಕೀ ಮತಾ ||

ಸರ್ವಶಾಸ್ತ್ರಗಳಿಗೂ ಇದು ದೀಪರೂಪವಾಗಿದ್ದು ಎಲ್ಲ ಕರ್ಮಗಳಿಗೂ ಮಾರ್ಗದರ್ಶಕವಾಗಿದೆ ಮತ್ತು ಈ ನ್ಯಾಯಶಾಸ್ತ್ರವು ಎಲ್ಲರಿಗೂ ಆಶ್ರಯವಾಗಿದೆ ಎಂದು ಚಾಣಕ್ಯನು ಇದರ ಮಹಿಮೆಯನ್ನು ಹೇಳುತ್ತಾನೆ. ಕಣಾದರು ದ್ರವ್ಯ, ಗುಣ,ಕರ್ಮ, ಸಾಮಾನ್ಯ, ವಿಶೇಷ, ಸಮವಾಯ, ಅಭಾವ ಎಂದು ಸಪ್ತಪದಾರ್ಥವಾದಿಯಾದರೆ ಗೌತಮರು ಪ್ರಮಾಣ, ಪ್ರಮೇಯಾದಿ ಷೋಡಶಪದಾರ್ಥವಾದಿಗಳಾಗಿದ್ದಾರೆ. ಇವರ ಮುಂದಿನ ನೈಯಾಯಿಕರು ಪ್ರತಿಪಾದಿಸಲು ಸುಲಭವಾಗಿರುವುದರಿಂದ ಗೌತಮರ ಹದಿನಾರು ಪದಾರ್ಥಗಳನ್ನು ಏಳು ಪದಾರ್ಥಗಳಲ್ಲಿಯೇ ಅಂತರ್ಭಾವ ಮಾಡಿ ಸಪ್ತಪದಾರ್ಥಗಳನ್ನೇ ನಿರೂಪಿಸುತ್ತ ಹೋಗುತ್ತಾರೆ. ಪ್ರಾಚೀನ ನೈಯಾಯಿಕರಲ್ಲಿ ನಾಸ್ತಿಕ ಖಂಡನಕ್ಕೆ ಉಪಾಯಗಳು ಸಾಕಷ್ಟಿದ್ದರೂ ವಿವರಣೆ ಅಥವಾ ವಾದ ಮಾಡುವ ವಿಷಯದಲ್ಲಿ ನ್ಯೂನತೆಯನ್ನು ಕಂಡ ನವದ್ವೀಪದ ನೈಯಾಯಿಕರಾದ ಗಂಗೇಶೋಪಾಧ್ಯಾಯರಿಂದ ಈ ಶಾಸ್ತ್ರವು ನವಚೈತನ್ಯವನ್ನು ಪಡೆದು ವಿಸ್ತಾರವನ್ನು  ಹೊಂದಿತು.

ಈಶ್ವರ
ನೈಯಾಯಿಕರು ವೇದಗಳು ಪೌರುಷೇಯವೆಂದು ಹೇಳುತ್ತಾರೆ. ಈಶ್ವರನಿಂದ ರಚಿತವಾಗಿರುವುದರಿಂದಲೇ ವೇದಗಳಿಗೆ ಪ್ರಾಮಾಣ್ಯವಿದೆ. ವೇದಗಳಲ್ಲಿ ಈಶ್ವರನು ಪ್ರತಿಪಾದಿತನಾಗಿರುವುದರಿಂದ ಅವನಿಗೆ ಪ್ರಾಮಾಣ್ಯವೆಂದು ಹೇಳಿದರೆ ಅನ್ಯೋನ್ಯಾಶ್ರಯ ಬಂದರೂ ಬೀಜಾಂಕುರನ್ಯಾಯದಂತೆ ಇದಕ್ಕೆ ಅನಾದಿತ್ವವನ್ನು ಹೇಳುತ್ತಾರೆ. ಈಶ್ವರನು ಸರ್ವಜ್ಞನೂ, ಸೃಷ್ಟಿಸ್ಥಿತಿಲಯಕಾರಕನೂ ಆಗಿದ್ದಾನೆ. ಇವನಲ್ಲಿ ನಿತ್ಯಜ್ಞಾನ, ನಿತ್ಯಸುಖಗಳು ಇವೆ. ಮನುಷ್ಯನಿಗೆ ಹೋಗಲಿಕ್ಕಾಗದ ಸ್ಥಳದಲ್ಲಿ ಬೆಳೆದ ಅಂಕುರವು ಜನ್ಯವಾಗಿರುವುದರಿಂದ ಅದು ಕರ್ತೃಜನ್ಯವಾಗಿದೆ. ಆ ಕರ್ತೃತ್ವ ಇತರ ಮನುಷ್ಯರಿಗೆ ಶಕ್ಯವಿಲ್ಲದೇ ಇರುವುದರಿಂದ ಆ ಕರ್ತಾ ಈಶ್ವರನೇ ಆಗಿದ್ದಾನೆಂದು ಈಶ್ವರ ಸಿದ್ಧಿಯನ್ನು ಮಾಡುತ್ತಾರೆ. ಈಶ್ವರನು ನಿತ್ಯಜ್ಞಾನಾಧಿಕರಣನಾದರೆ “ನಿತ್ಯಂ ವಿಜ್ಞಾನಮಾನಂದಂ ಬ್ರಹ್ಮ” ಎಂಬ ವಿಜ್ಞಾನಸ್ವರೂಪವನ್ನು ಹೇಳುವ ಶ್ರುತಿಗೆ ವಿರೋಧ ಬರಬಹುದೆಂದು ಸಂಶಯ ಬರಬಹುದು. ಆದರೆ ಆನಂದಪದದಂತೆ ವಿಜ್ಞಾನಶಬ್ಧವು ಅರ್ಶಾಅದಿಗಣ ಪಠಿತವಾಗಿರುವುದರಿಂದ ವಿಜ್ಞಾನಕ್ಕೆ ಈಶ್ವರನು ಆಶ್ರಯನಾಗಿದ್ದಾನೆಂದು ಅರ್ಥ. ಹೀಗೆಂದು ನೈಯಾಯಿಕರು ಹೇಳುತ್ತಾರೆ.

 ಜೀವ
ನ್ಯಾಯಮತದಲ್ಲಿ ಜೀವನು ಪರಮಾತ್ಮನಿಗಿಂತ ಭಿನ್ನನು. ಇವನಿಗೆ ಸುಖದುಃಖಾದಿಗಳು ಸಂಭವಿಸುವವು. ಸುಖದುಃಖಗಳ ವೈಚಿತ್ರ್ಯವೇ ಜೀವಭೇದಕ್ಕೆ ಕಾರಣವಾಗಿದೆ. ಜೀವನು ಅಣುವಾಗಲೀ, ಮಧ್ಯಮಪರಿಣಾಮಸ್ವರೂಪನಾಗಲೀ ಇರುವುದಿಲ್ಲ. ಪರಮಾತ್ಮನಂತೆ ನಿತ್ಯನೂ, ವಿಭುವೂ ಆಗಿ ದೇಹವ್ಯತಿರಿಕ್ತನಾಗಿರುವನು. ಜೀವನಿಗೆ ಅಣುತ್ವವನ್ನು ಅಂಗೀಕರಿಸಿದರೆ ಶರೀರದ ಎಲ್ಲ ಭಾಗಗಳಲ್ಲಿ ಆಗುವ ಸುಖಾನುಭವವು ಸಂಭವಿಸುವುದಿಲ್ಲ. ಮಧ್ಯಮ ಪರಿಣಾಮ ಅಂದರೆ ಶರೀರದಷ್ಟೇ ಅಳತೆಯುಳ್ಳವನೆಂದು ಹೇಳಿದರೆ ಶರೀರವು ಅನಿತ್ಯವಾಗಿರುವುದರಿಂದ ಆತ್ಮವು ಕೂಡ ಅನಿತ್ಯವಾಗಬೇಕಾಗುವುದು.

 ಜಗತ್ತು
ನೈಯಯಿಕರು ಪರಮಾಣುವಾದಿಗಳು. ಪರಮಾಣುಗಳು ಅಚೇತನವಾದರೂ ಈಶ್ವರನ ಸಿಸೃಕ್ಷೆ (ಸೃಷ್ಟಿ ಮಾಡುವ ಇಚ್ಛೆ)ಯಿಂದ ಪರಮಾಣುಗಳಲ್ಲಿ ಕ್ರಿಯೆ ಉತ್ಪನ್ನವಾಗಿ ದ್ವ್ಯಣುಕ, ತ್ರ್ಯಣುಕ, ಚತುರಣುಕ ಹೀಗೆ ಇವುಗಳಿಂದ ಮಹಾಭೂತಗಳಾದ ಪೃಥಿವೀ, ಜಲ, ತೇಜಸ್ಸು, ವಾಯುಗಳು ಹುಟ್ಟುತ್ತವೆ. ಪೃಥ್ವಿಯಲ್ಲಿ ಗಂಧ, ಜಲದಲ್ಲಿ ಸ್ನೇಹ, ಅಗ್ನಿಯಲ್ಲಿ ಉಷ್ಣಸ್ಪರ್ಶ, ವಾಯುವಿನಲ್ಲಿ ಅನುಷ್ಣಾಶೀತಸ್ಪರ್ಶ ಮತ್ತು ರೂಪಾಭಾವ, ಆಕಾಶದಲ್ಲಿ ಶಬ್ದ ಈ ಗುಣಗಳು ಅವುಗಳಲ್ಲಷ್ಟೆ ಇರುತ್ತವೆ. ಈ ರೀತಿಯಾಗಿ ಈಶ್ವರನ ಸಂಜಿಹೀರ್ಷ (ಸಂಹಾರ ಮಾಡುವ ಇಚ್ಛೆ)ಯಿಂದ ಪರಮಾಣು ಪರ್ಯಂತ ವಿಭಾಗವಾಗಿ ಎಲ್ಲ ಕಾರ್ಯಭೂತಗಳು ನಾಶವಾಗುವವು. “ಅಸಮವಾಯಿಕಾರಣನಾಶಾತ್ ಕಾರ್ಯನಾಶಃ” ಎಂದು ಹೇಳುವರು.

 ಮೋಕ್ಷ
ನ್ಯಾಯಮತದಲ್ಲಿ ಪದಾರ್ಥತತ್ತ್ವಜ್ಞಾನವೇ ಮೋಕ್ಷಕ್ಕೆ ಪರಮಸಾಧನವಾಗಿದೆ. ಹೇಗೆಂದರೆ – ಶ್ರವನ, ಮನನ, ನಿದಿಧ್ಯಾಸಗಳು ಆತ್ಮಸಾಕ್ಷಾತ್ಕಾರಕ್ಕೆ ಕಾರಣವಾಗಿವೆ. ಯುಕ್ತಿಗಳಿಂದ ವಿಚಾರಮಾಡುವುದೇ ಮನನವಾಗಿದ್ದು ಅದನ್ನು ಶಾಸ್ತ್ರವು ನಿರೂಪಿಸುವುದರಿಂದ ಶಾಸ್ತ್ರಕ್ಕೂ ಮೋಕ್ಷೋಪಯೋಗಿತ್ವವಿದೆ. ಆಮೇಲೆ ಶ್ರುತಿಯಲ್ಲಿ ಹೇಳಿದ ಯೋಗವಿಧಿಯಿಂದ ನಿದಿಧ್ಯಾಸ ಮಾಡಿ ಆತ್ಮಸಾಕ್ಷಾತ್ಕಾರವಾದ ಮೇಲೆ ಮಿಥ್ಯಾಜ್ಞಾನ, (ದೇಹದಲ್ಲಿ ಅಹಮಭಿಮಾನ) ರಾಗದ್ವೇಷರೂಪದೋಷ, ಧರ್ಮಾಧರ್ಮರೂಪಪ್ರವೃತ್ತಿ, ಆದ್ಯಶರೀರಪ್ರಾಣಸಂಯೋಗರೂಪ ಜನ್ಮ, ಇವುಗಳು ನಾಶವಾಗುವವು. ನಂತರ ಚರಮದುಃಖಧ್ವಂಸರೂಪ ಮೋಕ್ಷವು ಉತ್ಪನ್ನವಾಗುವುದು. ಜ್ಞಾನವೇ ಮೋಕ್ಷಕ್ಕೆ ಸಾಧನವಾಗಿದೆ.

“ನಾನ್ಯಃ ಪಂಥಾ ವಿದ್ಯತೇsಯನಾಯ”

ಎಂಬ ಶ್ರುತಿಯು ಇದನ್ನೇ ಪುಷ್ಟೀಕರಿಸುತ್ತದೆ. ಕೆಲವು ಕಡೆಗೆ ಕರ್ಮವೂ ಮೋಕ್ಷಕ್ಕೆ ಕಾರಣವೆಂದು ಹೇಳಿದ್ದರೂ, “ನಿತ್ಯನೈಮಿತ್ತಿಕೈರೇವ ಕುರ್ವಾಣೋ ದುರಿತಕ್ಷಯಮ್” ನಿತ್ಯನೈಮಿತ್ತಿಕಕರ್ಮಗಳಿಂದಲೇ ದುರಿತಕ್ಷಯವಾಗಿ ಜ್ಞಾನ ಪ್ರಾಪ್ತಿಯಾಗುವುದೆಂದು ಇರುವುದರಿಂದ ಕರ್ಮಜ್ಞಾನಕ್ಕೆ ಸಾಧನವಾಗಿ ಜ್ಞಾನದಿಂದಲೇ ಮೋಕ್ಷವಾಗುವುದು. ದುಃಖಧ್ವಂಸರೂಪವಾದ ಮೋಕ್ಷವು ಸುಖಸ್ವರೂಪವಾಗದೇ ಇದ್ದಲ್ಲಿ ನಿತ್ಯಸುಖವನ್ನು ಅಪೇಕ್ಷಿಸುವ ಜನರಿಗೆ ಪ್ರವೃತ್ತಿಯಾಗದೇ ಹೋದೀತೆಂಬ ಸಂಶಯ ಬರಬಹುದು. ಇದಕ್ಕೆ ನೈಯಾಯಿಕರು “ಭಾರಾದ್ಯಪಗಮೇ ಸುಖೀಸಂವೃತ್ತಃ” ಬಹಳ ಭಾರವನ್ನು ಹೊತ್ತ ಮನುಷ್ಯನು ಭಾರವನ್ನು ಇಳಿಸಿದ ಮೇಲೆ “ನನಗೆ ಸುಖವಾಯಿತು” ಎಂದು ಹೇಳುವಾಗ ಹೊಸ ಸುಖ ಬರದೇ ಇದ್ದ ಸುಖದ ಅಭಿವ್ಯಕ್ತಿಯಾಗುವಂತೆ ದುಃಖ ಧ್ವಂಸವಾದ ಮೇಲೆ ಪೂರ್ವದಲ್ಲಿದ್ದ ಸುಖವೇ ಅನುಭವವೇದ್ಯವಾಗುವುದೆಂದು ಹೇಳುವರು.

ನ್ಯಾಯಶಾಸ್ತ್ರವು ಕೇವಲ ಪರಮಾರ್ಥಕ್ಕಷ್ಟೇ ಅಲ್ಲದೆ ವ್ಯಾವಹಾರಿಕ ಕಾರ್ಯಗಳಿಗೂ ಅತ್ಯಂತ ಉಪಯುಕ್ತವಾಗಿರುವುದರಿಂದ ಸರ್ವಶಾಸ್ತ್ರೋಪಕಾರಕತ್ವವೂ ನಿಸ್ಸಂದಿಗ್ಧವಾಗಿದೆ.

~*~

Facebook Comments Box