|| ಹರೇರಾಮ ||

ಏನಾಶ್ಚರ್ಯ..!?
ಸೃಷ್ಟಿಯಲ್ಲಿರುವ ವಸ್ತುಗಳಿಗೆ ಲೆಖ್ಖವಿಲ್ಲ..!
ಆದರೆ ಒಂದರ ಹಾಗೆ ಇನ್ನೊಂದಿಲ್ಲ..!

ಮೇಲ್ನೋಟಕ್ಕೆ ಒಂದೇ ರೀತಿ ಕಾಣುವ ಮನುಷ್ಯ ಸಂತತಿಯಲ್ಲಿ ಯಾರಿಬ್ಬರ ಹೆಬ್ಬೆರಳ ಗುರುತೂ ಒಂದೇ ರೀತಿಯಿಲ್ಲ..!
ಒಂದೇ ಮರದ ನೂರು ಹಣ್ಣುಗಳಲ್ಲಿ ಪ್ರತಿಯೊಂದರ ಗಾತ್ರ, ಬಣ್ಣ, ರುಚಿಗಳು ಬೇರೆ ಬೇರೆಯೇ ಆಗಿದೆ..!
ಒಂದು ಹಣ್ಣಿನಲ್ಲಿಯೇ ಸಿಪ್ಪೆ, ತೊಟ್ಟು, ತಿರುಳು, ಬೀಜಗಳಲ್ಲಿ ಎಲ್ಲವೂ ಭಿನ್ನ ಭಿನ್ನವೇ..!!
ತಿರುಳಿನಲ್ಲಿಯೂ ಕೂಡಾ ಏಕರೂಪದ ಸ್ವಾದವಿಲ್ಲ..!
ತೊಟ್ಟಿನ ಬಳಿಯಲ್ಲಿ ಸವಿ ಹೆಚ್ಚಿದ್ದರೆ, ಮೇಲೆ ಹೋದಂತೆ ಕಡಿಮೆ ಕಡಿಮೆ..!
ಸೃಷ್ಠಿಯಲ್ಲಿ ನಕಲಿ ಇಲ್ಲವೇ ಇಲ್ಲ ..!
ಆದರೆ ಮನುಷ್ಯಮಾತ್ರ ನಕಲಿಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಬಿಟ್ಟಿಲ್ಲ..!

ಇದು ಇಂದು ನಿನ್ನೆಯ ಕಥೆಯಲ್ಲ..!
ಎಂದಿನಿಂದಲೂ ಇರುವ ವ್ಯಥೆ..!

ಭಗವಾನ್ ಶ್ರೀಕೃಷ್ಣನಂಥವರು ಸೃಷ್ಟಿಯಲ್ಲಿ ಎಷ್ಟಿರಲು ಸಾಧ್ಯ..?
ಆದರೆ ಮನುಷ್ಯ ದೇವರನ್ನೂ ನಕಲಿಮಾಡಲೆಳಸುವುದುಂಟು..!!!

ಜಗದ ಉದ್ದಗಲಕ್ಕೂ ಕೃಷ್ಣನ ಕೀರ್ತಿ ಹರಡಿದ್ದ ಕಾಲವದು..
ಆಗ ಕರೂಷದೇಶದ ದೊರೆಯಾಗಿದ್ದ ಪೌಂಡ್ರಕನಿಗೆ
ವಿಚಿತ್ರವಾದ ಚಿತ್ತಭ್ರಮೆಉಂಟಾಯಿತು..!
ಭ್ರಮೆಗೊಳ್ಳಲು ಹೊಗಳಿಕೆಗಿಂತ ದೊಡ್ಡಸಾಧನ ಬೇಕಿಲ್ಲ..!!
ರಾಜರ ಬಳಿ ಹೊಗಳುಭಟರಿಗೇನು ಕಡಿಮೆಯೆಲ್ಲ..!
ಸತ್ಯದ ಪರಿಧಿಯನ್ನು ಮೀರಿದ ಮೇಲೆ ಮತ್ತೆ ಎಲ್ಲೆ ಎಲ್ಲಿ..!!?
ಇಲ್ಲದ್ದನ್ನು ಸೇರಿಸಿ ಹೊಗಳ ತೊಡಗಿದರೆ ಮತ್ತೆ ಅದಕ್ಕೆ ಕೊನೆಯೆಲ್ಲಿ..?
ಪೌಂಡ್ರಕನನ್ನು ಹೊಗಳುಭಟರು ವಾಸುದೇವನೆಂದೇ ಸ್ತುತಿಸತೊಡಗಿದರು..!
ದೇವರೆಂದರೆ ಸೃಷ್ಟಿಯ ತುತ್ತ ತುದಿ..!
ಹೊಗಳಿಕೆಯ ತುತ್ತ ತುದಿಯೂ ಅದೇ..!!!(ನೀನೇ ದೇವರು ಎಂದು)
ನಾನೇ ದೇವರೆನ್ನುವುದು ಪರಮಾನುಭವದ ಸತ್ಯ..!
ಪರಮಾನಂದವನ್ನು ಕೊಡುವ ಸತ್ಯ..!!
ಆದರೆ ಆ ಅನುಭವವನ್ನು ಪಡೆಯದೆಯೇ, ಆ ಅವಸ್ಥೆಯನ್ನು ತಲುಪದೆಯೇ ನಾನೇ ದೇವರೆಂದುಕೊಳ್ಳುವುದು ತಿಳಿಗೇಡಿತನದ ಪರಮಾವಧಿ..!
ಅದು ಆತ್ಮ ವಂಚನೆ..!
ಅದು ಅನಾಹುತಗಳಿಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ..!

ಹೊಗಳುಭಟರ ಹೊಗಳಿಕೆಗೆ ಮಾರುಹೋದ ಪೌಂಡ್ರಕ ತನ್ನನ್ನು ತಾನು ನಿಜವಾಗಿಯೂ ವಾಸುದೇವನೆಂದೇ ನಂಬಿದ..!!
ಅಷ್ಟುಮಾತ್ರವಲ್ಲ್ಲ, ಕೃಷ್ಣನ ಹಾಗೇ ವೇಷಧರಿಸಲೂ ಪ್ರಾರಂಭಿಸಿದ..!
ಇರುವ ಎರಡು ಬಾಹುಗಳ ಹಿಂದೆ ಕೃತ್ರಿಮವಾದ ಮತ್ತೆರಡು ಬಾಹುಗಳು..!
ಅವುಗಳಲ್ಲಿ ನಕಲಿ ಶಂಖ, ಚಕ್ರ, ಗದಾ, ಪದ್ಮಗಳು..!
ಕಟಿಯಲ್ಲಿ ಪೀತಾಂಬರ..!
ಎದೆಯಲ್ಲಿ ಕೌಸ್ತುಭ ಮಣಿ..!
ಕೊರಳಲ್ಲಿ ವನಮಾಲೆ..!
ತಲೆಯಲ್ಲಿ ನವಿಲುಗರಿ ಹಾರಲೊಂದು ಕೀಲುಗರುಡ..!
ಚರ್ಮಕ್ಕೆಲ್ಲಾ ನೀಲಿ ಬಣ್ಣ..!!!

ಹೀಗೆ ಪೌಂಡ್ರಕನ ಮನದಲ್ಲಿ ಹುಟ್ಟಿದ ಭ್ರಮೆ ಮೈಯೆಲ್ಲ ವ್ಯಾಪಿಸಿತು..!!

ಪೌಂಡ್ರಕನ ಭ್ರಮೆ ಇಲ್ಲಿಗೇ ಮುಗಿಯಲಿಲ್ಲ…..
ನಕಲಿಯೇ ಅಸಲಿಗೆ ಲಾಯರ್ ನೋಟಿಸ್ ಕೊಡುವಲ್ಲಿಯವರೆಗೆ ತಲುಪಿತು..!!

ಒಂದು ದಿನ ದ್ವಾರಕೆಯ ಸುಧರ್ಮಾ ಸಭೆಯಲ್ಲಿ ಯಾದವರೊಂದಿಗೆ ನಿಜವಾದ ಶ್ರೀ ಕೃಷ್ಣ ಮಂಡಿಸಿರುವಾಗ…
ಪೌಂಡ್ರಕನಿಂದ ಅಟ್ಟಲ್ಪಟ್ಟ ದೂತನೊಬ್ಬ ಶ್ರೀ ಕೃಷ್ಣನನ್ನು ಸಂಭೋದಿಸಿ ತನ್ನ ದೊರೆಯ ಬೆದರಿಕೆ ಪತ್ರವನ್ನು ವಾಚನ ಮಾಡಿದ..

ಎಲವೋ ನಕಲಿ ವಾಸುದೆವನೇ..!
ನನ್ನ ಸಹಜ ಚಿಹ್ನೆಗಳಾದ ಶಂಖ, ಚಕ್ರ, ಗದಾ-ಪದ್ಮಗಳನ್ನು, ಪೀತಾಂಬರ, ವನಮಾಲೆ, ನವಿಲುಗರಿಗಳನ್ನು, ಗರುಡ ವಾಹನವನ್ನು ಇತ್ತೀಚೆಗೆ ನೀನು ಬಳಸುತ್ತಿರುವುದು ನಮ್ಮ ಅವಗಾಹನೆಗೆ ಬಂದಿದೆ.
ಅಷ್ಟುಮಾತ್ರವಲ್ಲ, ನಾನೇ ವಾಸುದೇವನೆಂದು ಸುಳ್ಳು ಸುಳ್ಳೇ ಊರೆಲ್ಲಾ ಹೇಳಿಕೊಂಡು ತಿರುಗುತ್ತಿರುವುದು ಕಂಡು ಬಂದಿದೆ..
ಇದೋ ನಿನಗಿದು ಶಾಸನ ಬದ್ಧ ಎಚ್ಚರಿಕೆ..
ನನ್ನ ಹೆಸರು ಚಿಹ್ನೆಗಳ ದುರುಪಯೋಗವನ್ನು ಈ ಕ್ಷಣದಿಂದಲೇ ಬಿಟ್ಟು ಶರಣಾದೆಯೋ ಸರಿ ಇಲ್ಲದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸ ಬೇಕಾದೀತು..”

ಒಮ್ಮಿಂದೊಮ್ಮೆಗೆ ಯಾದವ ಸಭೆ ಅವಾಕ್ಕಾಯಿತು. ದಿಗ್ಭ್ರಮೆ,ಆಶ್ಚರ್ಯ ಮೌನಗಳು ಸಭೆಯನ್ನಾವರಿಸಿದವು..
ವಿಷಯ ಅರ್ಥವಾಗುತ್ತಿದ್ದಂತೆಯೇ ಯಾದವರು ನಕ್ಕ ನಗು ದಿಕ್ಕುಗಳಲ್ಲಿ ಪ್ರತಿಧ್ವನಿಸಿತು..!
ಅಪರೂಪದಲ್ಲಿ ಅಪರೂಪದ ಶ್ರೀಕೃಷ್ಣನಂಥಾ ವ್ಯಕ್ತಿತ್ವವನ್ನೂ ನಕಲು ಮಾಡುವ ಭೂಪರುಂಟೇ ಎಂದು..!!!?

ಸಭೆ ಶಾಂತವಾಗುತ್ತಿದ್ದಂತೆಯೇ ಶ್ರೀ ಕೃಷ್ಣನ ಮಾರುತ್ತರ ಬಂದಿತು..

” ಎಲವೋ ಜಗತ್ತಿನ ಬಹುದೊಡ್ಡ ಭ್ರಮೆಯ ದೂತನೇ,
ನಿಮ್ಮೂರಿನಲ್ಲಿ ಉತ್ತಮ ಮನೋವೈದ್ಯರಿಲ್ಲವೇ..!?
ಹಾಗಿದ್ದಲ್ಲಿ ನಿಮ್ಮ ದೊರೆಗೆ ನಾನೇ ಚಿಕಿತ್ಸೆ ಮಾಡುವುದು ಅನಿವಾರ್ಯ..
ಯಾವ ಮಹಾಸುದರ್ಶನವನ್ನು ನಿನ್ನ ಮೂರ್ಖದೊರೆ ಕೃತ್ರಿಮವೆಂದನೋ, ಅದನ್ನು ಆತನ ಮೇಲೇ ಪ್ರಯೋಗಿಸುವೆನು. ಅದು ಅಸಲಿಯೋ ನಕಲಿಯೋ ಎಂಬುದನ್ನು ರಣಭೂಮಿಯಲ್ಲಿ ಬದುಕಿ ಉಳಿದರೆ ಪರಿಶೀಲಿಸಲು ಹೇಳು”.

ಮತ್ತೆ ನಡೆಯಿತು ಅಸಲಿ ನಕಲಿ ಗಳ ಮಧ್ಯೆ ಒಂದು ಮಹಾಯುದ್ಧ..!

ಬೆಳಕಿನ ಆಗಮನವಾದ ಮೇಲೆ ಕತ್ತಲೆ ಕರಗದಿರುವುದುಂಟೇ..!?
ಅಸಲಿ ನಕಲಿಗಳ ನಡುವಿನ ಯುದ್ಧದಲ್ಲಿ ನಕಲಿಯ ನಾಶವಾಯಿತು..!
ಶಾಶ್ವತ ಸತ್ಯ ಸ್ವರೂಪನಾದ ಶ್ರೀಕೃಷ್ಣನ ಪ್ರಭೆ ಲೋಕವನ್ನೇ ಬೆಳಗಿತು..!

ಕೆಲವೆಡೆ ಭ್ರಮೆಯ ಮುಖವಾಡ ಕಳಚುವುದಿದೆ..
ಇಲ್ಲಿ ಮಾತ್ರ ಮುಖವೇ ಕಳಚಿ ಹೋಯಿತು..!

ಶ್ರೀಕೃಷ್ಣನ ಕರುಣೆದೊಡ್ಡದು..
ದುಷ್ಟರಲ್ಲಿಯೂ ಹುದುಗಿರುವ ಶಿಷ್ಟಗುಣಗಳನ್ನರಸಿ ಕಂಡು ಅವರಿಗೂ ಒಳಿತುಮಾಡುವನವನು..
ನಕಲುಮಾಡಲೋಸುಗವಾದರೂ ಶ್ರೀಕೃಷ್ಣನ ದಿವ್ಯ-ಮಂಗಲರೂಪವನ್ನು ಚಿತ್ಯ್ತದಲ್ಲಿ ಧರಿಸಿದ ಪೌಂಡ್ರಕನಿಗೆ ಶ್ರೀಕೃಷ್ಣನ ಕೃಪೆಯಿಂದ ಸಾರೂಪ್ಯ ಮುಕ್ತಿ ಲಭಿಸಿತು..!
ಆಹಾ..!
ಕರುಣಿಗಳರಸ..!
ಪತಿತ ಪಾವನ..!
ಶತ್ರುವತ್ಸಲ..!

ಈ ಯುಗದಲ್ಲಿ ವಸ್ತುಗಳು ನಕಲಿ..!
ವ್ಯಕ್ತಿಗಳು ನಕಲಿ..!
ನಗುನಕಲಿ-ಅಳುನಕಲಿ..!
ಮಗುನಕಲಿ-ಮಾತೆಯೂ ನಕಲಿ..!
ಗುರುಗಳು ನಕಲಿ..!
ದೇವರೂ ನಕಲಿ..!

ನಕಲಿಯ ಕಲಿಕೆಯಲ್ಲಿಯೇ ಮಗ್ನವಾದ,
ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ,
ನಿತ್ಯ ನಟನೆಯನ್ನೇ ಬದುಕಿನ ಸಹಜತೆಯಾಗಿಸಿಕೊಂಡ,
ಸಮಾಜದ ಸಂತುಲನವನ್ನೇ ಸಂಹರಿಸಿಬಿಡುವ ಕ್ಲೋನಿಂಗ್ ನಂಥಾ ಸಂಶೋಧನೆಗಳಿಗೆ ಪ್ರೋತ್ಸಾಹವಿರುವ ಈ ಯುಗವನ್ನು
ಕಲಿಯುಗವೆನ್ನುವುದಕ್ಕಿಂತ ನಕಲಿಯುಗವೆನ್ನುವುದೇ ಸರಿಯಲ್ಲವೇ..?

ರಾಮಬಾಣ:- ಸತ್ಯಮೇವ ಜಯತೇ ; ನ ಅನೃತಮ್ ||

|| ಹರೇರಾಮ ||

Facebook Comments Box