|| ಹರೇರಾಮ ||

ಗುಣವೆಂಬ ಶಬ್ಧಕ್ಕೆ ಸಂಸ್ಕೃತದಲ್ಲಿ ಸೂತ್ರ(ದಾರ)ವೆಂದು ಅರ್ಥವಿದೆ..
ಸದ್ಗುಣಗಳು ಒಡನಾಡಿಗಳನ್ನು ನಮ್ಮೊಡನೆ ಬಂಧಿಸಿಡುವ ಸೂತ್ರಗಳು..!
ಇವು ರಾಮನಲ್ಲಿ ಅನಂತವಾಗಿದ್ದುದರಿಂದಲೇ ಸಕಲ ಜೀವರಾಶಿಗಳೂ ಆತನೊಡನೆ ಬಿಡಲಾರದ ಬಂಧನಕ್ಕೊಳಗಾದವು.!.
ಆದುದರಿಂದಲೇ ಶ್ರೀರಾಮನ ವ್ಯಕ್ತಿತ್ವವನ್ನು ವರ್ಣಿಸಲು ಹೊರಟ ನಾರದರಿಗೆ ಎಲ್ಲಿಂದ ಪ್ರಾರಂಭಿಸಬೇಕು, ಎಲ್ಲಿ ನಿಲ್ಲಿಸಬೇಕು ಎಂಬುದೇ ತಿಳಿಯದಾಯಿತು…!!
ಇದೋ… ನಾರದರ ಹೃದಯವನ್ನು ಸ್ಪರ್ಶಿಸಿದ ಶ್ರೀರಾಮನ ಇನ್ನಷ್ಟು ಗುಣಗಳು..

ಲಕ್ಷ್ಮೀವಾನ್ :-
ಲಕ್ಷ್ಮವೆಂದರೆ ಗುರುತು.. ಭಗವಂತನ ಗುರುತುಳ್ಳವಳು ಲಕ್ಷ್ಮಿ..
ಲಕ್ಶ್ಮಿಯ ನಾನಾ ರೂಪಗಳು ಭಗವಂತನ  ಕೃಪೆಯ ಚಿಹ್ನೆಗಳು..
ಧನ, ರೂಪ, ವಿದ್ಯೆ, ಬಲ ಮೊದಲಾದ ಸಂಪತ್ತಿನ ವಿವಿಧ ರೂಪಗಳೆಲ್ಲವೂ ಈಶ್ವರನ ಅಭಿವ್ಯಕ್ತಿಗಳೇ ಆಗಿದೆ…

ಅವೆಲ್ಲವನ್ನೂ ಹೊಂದಿದವನು ಶ್ರೀರಾಮ..

ಪ್ರತಾಪವಾನ್ :-
ಸಮರದ ಮಾತು ಹಾಗಿರಲಿ, ಸ್ಮರಣ ಮಾತ್ರದಿಂದಲೇ ಶತ್ರುವಿನ ಎದೆಯೊಡೆಯುವಂತೆ ಮಾಡುವ ಪೌರುಷವೇ ಪ್ರತಾಪ…
ಅದುಳ್ಳವನು ಶ್ರೀರಾಮ..

ಶುಭಲಕ್ಷಣ :-

ಆತನ ಶರೀರವನ್ನಲಂಕರಿಸಿದ್ದ ಶಂಖ, ಚಕ್ರ, ಪದ್ಮ, ವಜ್ರ, ಮೊದಲಾದ ಚಿಹ್ನೆಗಳು ಸಕಲ ಜಗತ್ತಿಗೆ ಆತನಿಂದ ಉಂಟಾಗಲಿರುವ ಶುಭವನ್ನು ಸಾರಿ ಹೇಳುತ್ತಿದ್ದವು..

ಧರ್ಮಜ್ಞ :-
ಕೇವಲ ಆಚರಣೆಯನ್ನು  ಮಾತ್ರವಲ್ಲ, ಧರ್ಮದ ನಿಗೂಢ ಮರ್ಮವನ್ನೂ ಬಲ್ಲವನು..

ಸತ್ಯ ಸಂಧಃ :

‘ಸಂಧಾ’ ಎಂದರೆ ಪ್ರತಿಜ್ಞೆ…
ಸತ್ಯಸಂಧನೆಂದರೆ ಎಂದೆಂದೂ ಸುಳ್ಳಾಗದ ಪ್ರತಿಜ್ಞೆಯುಳ್ಳವನು..
ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ  ಶ್ರೀರಾಮನೇ ಹೀಗೆ ಹೇಳುತ್ತಾನೆ..

” ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||”

ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣಗಳನ್ನಾದರೂ ಬಿಟ್ಟೇನು…!.
ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು..!!
ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು…!!!

ಆದರೆ…
ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ…!!


ಪ್ರಜಾನಾಂ ಚ ಹಿತೇ ರತಃ  ಃ-
ದೂರ್ವೆ ಎಂಬ ಮಂಗಲ ಸಸ್ಯ ಒಂಟಿಯಾಗಿ ಬೆಳೆಯುವುದೇ ಇಲ್ಲ..!
ಅದು ಗುಂಪು ಗುಂಪಾಗಿಯೇ ಬೆಳೆಯುವುದು…
“ದೂರ್ವಾದಲಶ್ಯಾಮ“ನಾದ ಮಂಗಲಪುರುಷ  ಶ್ರೀರಾಮನೂ ಹಾಗೆಯೇ…
ತಾನೊಬ್ಬನೇ ಬೆಳೆಯುವುದರಲ್ಲಿ ಆತನಿಗೆ ಅಭಿರುಚಿ ಇರಲಿಲ್ಲ…
ಸಮಸ್ತ ಪ್ರಜೆಗಳ ಒಳಿತನ್ನಾತ ಬಯಸುತ್ತಿದ್ದ, ಮಾತ್ರವಲ್ಲ, ಪ್ರಜಾಹಿತದಲ್ಲಿಯೇ ಸದಾ ಮಗ್ನನಾಗಿರುತ್ತಿದ್ದ…!

ಯಶಸ್ವೀ :- ಕೀರ್ತಿಶಾಲಿ…….
ಸರ್ವದೇಶಗಳಲ್ಲಿ, ಸರ್ವ ಲೋಕಗಳಲ್ಲಿ, ಸರ್ವಕಾಲಗಳಲ್ಲಿ ಹಬ್ಬಿಹರಡಿದ ಕೀರ್ತಿಯುಳ್ಳವನು…
ರಾಮಾಯಣ ನಡೆದು ಯುಗಗಳೇ ಕಳೆದ ನಂತರವೂ ಇಂದಿಗೂ ಆತನ ಕೀರ್ತಿ ಎಲ್ಲೆಡೆ ಹರಡಿದೆ ಎಂದರೆ…
ಆತನ ವ್ಯಕ್ತಿತ್ವ ಎಂಥದೆಂಬುದನ್ನು ನಾವು ಊಹಿಸಬೇಕು..!

ಜ್ಞಾನ ಸಂಪನ್ನಃ :- ಪರಿಪೂರ್ಣ ಜ್ಞಾನಿ…..
ವ್ಯವಹಾರ ಜಗತ್ತಿನಲ್ಲಿಯೇ ಆಗಲಿ, ಪರಮಾರ್ಥ ಜಗತ್ತಿನಲ್ಲಿಯೇ ಆಗಲಿ ಆತನ ಅರಿವಿಗೆ ನಿಲುಕದ ವಿಷಯವೆಂಬುದೇ ಇರಲಿಲ್ಲ..!!

ಶುಚಿಃ :–  ಪರಿಶುದ್ಧನವನು…….
ಶುಚಿಯಾದ ಶರೀರದೊಳಗೊಂದು ಶುಚಿಯಾದ ಮನಸ್ಸು.. ಅಲ್ಲಿ ಶುಚಿಯಾದ ಭಾವಗಳು….!
ಶುಚಿಯಾದ ಮನದೊಂದಿಗೆ ಶುಚಿಯಾದ ಇಂದ್ರಿಯಗಳು..
ಅವುಗಳಮೂಲಕ ನಡೆಯುವ ಶುಚಿಯಾದ ಕರ್ಮಗಳು..!

ಇದು ರಾಮನ ಬದುಕು…!!

ವಶ್ಯಃ :- ಸುಲಭವಾಗಿ ವಶನಾಗುವವನು….

‘ವಶೀ’ ಎಂದರೆ ಎಲ್ಲವನ್ನೂ ತನ್ನ ವಶದಲ್ಲಿರಿಸಿಕೊಳ್ಳುವವನು ಎಂದರ್ಥ..
‘ವಶ್ಯಃ‘ ಎಂದರೆ ಸುಲಭವಾಗಿ ವಶನಾಗುವವನು ಎಂದರ್ಥ..

ಒಂದೇ ಉಸಿರಿನಲ್ಲಿ ರಾಮನ ಕುರಿತಾಗಿ ಈ ಎರಡು ಶಬ್ಧಗಳನ್ನು ನಾರದರು ಉಚ್ಛರಿಸುತ್ತಾರೆ…!!.

ವಿರೋಧಾರ್ಥಕವಾದ ಈ ಎರಡೂ ಪದಗಳೂ ರಾಮನಿಗೆ ಸಲ್ಲುತ್ತವೆ…!!

ರಾಮನ ವ್ಯಕ್ತಿತ್ವದ ಪ್ರಭಾವ ಹೇಗಿತ್ತೆಂದರೆ, ಸಂಪರ್ಕಕ್ಕೆ ಬಂದವರೆಲ್ಲರೂ ಆತನ ವಶವಾಗುತ್ತಿದ್ದರು..!!
ಆದರೆ ಆತನನ್ನೂ ಸುಲಭವಾಗಿ ವಶಪಡಿಸಿಕೊಳ್ಳಲು ಸಾಧ್ಯವಿತ್ತು …
ಅದಕ್ಕಿದ್ದ ಸುಲಭೋಪಾಯವೆಂದರೆ ಪ್ರೀತಿ..!
ಪ್ರೀತಿಯಿಂದ ಯಾರು ಬೇಕಾದರೂ ಆತನನ್ನು ಗೆಲ್ಲಬಹುದಿತ್ತು….!
‘ಪ್ರಭು..! ಪ್ರೇಮ ಪರಾಧೀನ..!!’

ಸಮಾಧಿಮಾನ್ :-
ಸಮಾಧಿ ಎಂದರೆ ಏಕಾಗ್ರತೆ – ತನ್ಮಯತೆ..
ಬದುಕಿನ ಎಲ್ಲ ಬೀಗಗಳನ್ನೂ ತೆಗೆಯುವ ಒಂದೇ ಒಂದು ಕೀಲಿಕೈ ಎಂದರೆ ಇದು..!!
ಓದಿನಲ್ಲಿ ಏಕಾಗ್ರತೆ ಇದ್ದರೆ, ವಿದ್ಯಾರ್ಥಿಯೊಬ್ಬ ಶ್ರೇಷ್ಠ ವಿದ್ಯಾವಂತನಾಗಲು ಸಾಧ್ಯ..
ಕರ್ಮದಲ್ಲಿ ಏಕಾಗ್ರತೆಯಿದ್ದರೆ, ಕಾರ್ಮಿಕನೊಬ್ಬ ಮಹತ್ಕರ್ಮಗಳನ್ನು ಮಾಡಲು ಸಾಧ್ಯ..!
ಸೇವೆಯಲ್ಲಿ ತನ್ಮಯತೆಯಿದ್ದರೆ, ಸೇವಕನೊಬ್ಬ ಸ್ವಾಮಿ ಸಂಪ್ರೀತಿಗೆ ಪಾತ್ರನಾಗಲು ಸಾಧ್ಯ..!
ಪರಮಾತ್ಮನಲ್ಲಿ ತನ್ಮಯತೆ ಇದ್ದರೆ, ಯೋಗಿಯೊಬ್ಬ ಬದುಕಿನ ಪರಮ ಲಕ್ಷ್ಯವನ್ನೇ ತಲುಪಲು ಸಾದ್ಯ..!
ಉಳಿದವರಿಗೆ ಎಷ್ಟು ಅಭ್ಯಾಸ ಮಾಡಿದರೂ ಬಾರದ ಈ ಗುಣ ರಾಮನಲ್ಲಿ ಸಹಜವಾಗಿತ್ತು…!!.

ಪ್ರಜಾಪತಿ ಸಮಃ :-
ವಯಸ್ಸಿನಲ್ಲಿ ಕಿರಿಯನಾದರೂ ಸೃಷ್ಟಿಯಲ್ಲಿಯೇ ಅತಿ ವೃದ್ಧನಾದ ಚತುರ್ಮುಖ ಬ್ರಹ್ಮನಲ್ಲಿರಬಹುದಾದ ಹಿರಿತನ – ಪ್ರಬುದ್ಧತೆಗಳು ಆತನ ವ್ಯಕ್ತಿತ್ವವನ್ನು ಶೋಭೆಗೊಳಿಸಿದ್ದವು..
ಆದುದರಿಂದಲೇ ಪೂರ್ವ ಪರಿಚಯವಿಲ್ಲದವರೂ ಕೂಡಾ ಆತನನ್ನು ಕಂಡೊಡನೆ ಗೌರವಿಸುವಂತಾಗುತ್ತಿತ್ತು..

ಧಾತಾ :-
ಧಾರಣೆ ಮತ್ತು ಪೋಷಣೆ ಎಂಬರ್ಥದಲ್ಲಿರುವ ” ಡು ಧಾ ಞ್ ಎಂಬ ಧಾತುವಿನಿಂದ ನಿಷ್ಪನ್ನವಾದ ಶಬ್ದವಿದು..
ರಾಜನಾಗುವವನಿಗೆ ಸರ್ವ ಪ್ರಜೆಗಳ ಧಾರಣೆ-ಪೋಷಣೆಗೆ ಬೇಕಾದ ಮನೋಭಾವ ಮತ್ತು ಸಾಮಥ್ಯ೯ ವಿರಬೇಕಾಗುತ್ತದೆ..
ಅದುಳ್ಳವನು ಶ್ರೀರಾಮ.. !!

ರಿಪುನಿಷೂದನಃ  ಃ-

ಸೃಷ್ಟಿಯಲ್ಲಿ ಒಳಿತು ಹೇಗಿದೆಯೋ ಕೆಡುಕೂ ಕೂಡಾ ಹಾಗೇಯೇ ಇದೆ…

ಸೃಷ್ಟಿಗೆ ಪೂರಕವಾಗಿ ಕಾರ್ಯವೆಸಗುವ ದೈವೀ ಶಕ್ತಿಗಳು ಹೇಗಿವೆಯೋ..ಸೃಷ್ಟಿಯ ವ್ಯವಸ್ಥೆಯನ್ನು ಹಾಳುಗೆಡಹುವ ದುಷ್ಟಶಕ್ತಿಗಳೂ ಹಾಗೆಯೇ ಇವೆ..!
ಅಂಥ ಸೃಷ್ಟಿ ಕಂಟಕರ, ಸಮಾಜ ಕಂಟಕರ, ಧರ್ಮಕಂಟಕರ ನಿವಾರಣೆಗೆ ಬದ್ಧಕಂಕಣನಾದವನು..!


|| ಹರೇರಾಮ ||

Facebook Comments Box