|| ಹರೇರಾಮ ||

ಹಾಸ್ಯಗಾರ ಃ ಆಹೋಹೋ….
ಮತ್ತು ಹೊಸನಗರದಲ್ಲಿ ವಾಸವಾಗಿರುವ ಶ್ರೀ ಸೀತಾರಾಮಚಂದ್ರ ದೇವರು…!
ಭಾಗವತರು
ಮಾತಾರಾಮೋ ಮತ್ಪಿತಾ ರಾಮಚಂದ್ರಃ ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ….!!
ಹಾಸ್ಯಗಾರ ಃ ಶಾಭಾಸ್..!
ಭಾಗವತರು ಃ
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ ನಾನ್ಯಂ ಜಾನೇ ನೈವ ಜಾನೇ ನ ಜಾನೆ…!!
ಹಾಸ್ಯಗಾರ ಃ ಭಲಾ..!
ಭಾಗವತರು :
ನಂಬಿರುವ ಭಕ್ತರಿಗೆ ಪ್ರೀತಿಯಿಂದ ಕೊಟ್ಟ ಶ್ರೀಮುಡಿಗಂಧ ಪ್ರಸಾದ… ಶ್ರೀ ರಾಮಾರ್ಪಣಮಸ್ತು |
ಹಾಸ್ಯಗಾರ ಃ ದಕ್ಕಿತ್ತೋ ದಕ್ಕಿತ್ತು…!!

ಸ್ಥಳ ಃ ಶ್ರೀರಾಮಚಂದ್ರಾಪುರ ಮಠ ಪೆರಾಜೆ- ಮಾಣಿ…

ಶ್ರೀಮುಡಿ ಗಂಧಪ್ರಸಾದ

ಶ್ರೀಮುಡಿ ಗಂಧಪ್ರಸಾದ

ಸಮಯ : ವಿಕೃತಿ ಸಂವತ್ಸರದ ವೈಶಾಖ ಶುದ್ಧ ತ್ರಯೋದಶಿ ರಾತ್ರಿ,,,
ಸಂದರ್ಭ : ಹೊಸನಗರದ ಶ್ರೀರಾಮಚಂದ್ರ ಕೃಪಾಪೋಶಿತ ಯಕ್ಷಗಾನ ಮೇಳದ ವರ್ಷದ ತಿರುಗಾಟದ ಮುಕ್ತಾಯದ ನಿಮಿತ್ತ ಮಾಣಿ ಮಠದಲ್ಲಿ ಸೇವೆಯಾಟ…
ಸಾಯಂಕಾಲ ನಾವು ಮಾಡುವ ಶ್ರೀರಾಮ ಪೂಜೆಯ ನಂತರ ದೇವರ ಮುಂದೆ ಕೊನೆಯ ಬಾರಿಗೆ ಕುಣಿದು,
ಮತ್ತೆ ಗೆಜ್ಜೆಬಿಚ್ಚಿ ದೇವರಿಗೊಪ್ಪಿಸಿ ಪ್ರಸಾದದೊಂದಿಗೆ ಮರಳಿ ಪಡೆಯುವಾಗ ಭಾಗವತ ಮತ್ತು ಹಾಸ್ಯಗಾರರ ನಡುವೆ ನಡೆಯುವ ನುಡಿಗಟ್ಟುಗಳ ರೂಪದ ಸಾಂಪ್ರದಾಯಿಕ ಸಂಭಾಷಣೆ..

ಯೋಗಾಯೋಗವೆಂದರೆ ಅದು ನಮ್ಮ ಪೀಠಾರೋಹಣ ದಿನವೂ ಆಗಿತ್ತು…..!!
ತನ್ನಿಮಿತ್ತವಾಗಿ ಬೇರಾವ ಕಾರ್ಯಕ್ರಮಗಳೂ ಇರಲಿಲ್ಲ..
ಮೇಳದ ವರ್ಷದ ತಿರುಗಾಟದ ಮುಕ್ತಾಯ ಕಾರ್ಯಕ್ರಮವೇ ಪೀಠಾರೋಹಣ ವಾರ್ಷಿಕೋತ್ಸವದ ಆಚರಣೆಯಾಗಿತ್ತು.!
ಮಠವೆಂಬ ಮೇಳದ ತಿರುಗಾಟದ ಪ್ರಾರಂಭದ ದಿನವೇ ಮಠದ ಮೇಳದ ವಾರ್ಷಿಕ ತಿರುಗಾಟದ ಮುಕ್ತಾಯದ ದಿನವಾಗಿ ಬರಬೇಕೇ..?

ಎತ್ತಣಿಂದೆತ್ತಣ ಸಂಬಂಧವಿದು..!?
ಒಂದು ಮಠದಲ್ಲಿ ಪೀಠಾರೋಹಣದ ವಾರ್ಷಿಕೋತ್ಸವವಾಗುವುದಕ್ಕೂ, ಒಂದು ಮೇಳದ ತಿರುಗಾಟ ಮುಕ್ತಾಯವಾಗುವುದಕ್ಕೂ ಎಲ್ಲಿ ಸಮನ್ವಯ..!!?

ಇದು ತಾಯಿ-ಮಕ್ಕಳ ಸಂಬಂಧ..!
ರಾಮಚಂದ್ರಾಪುರ ಮಠ ತಾಯಿಯಾದರೆ, ಯಕ್ಷಗಾನ ಮೇಳ ಅದರ ಮಗು..!
ತಾಯಿಯಂತೆ ಮಗು – ಮಗುವಿನಂತೆ ತಾಯಿ…!!
ಎರಡೂ ಮೇಳಗಳೇ..!
ತಿರುಗಾಟ ಎರಡೂ ಕಡೆ ಸಮಾನ..!
ಆದರೆ, ತಿರುಗಾಟದ ಮುಕ್ತಾಯವೊಂದು..
ಮುಕ್ತಾಯವೇ ಇಲ್ಲದ ತಿರುಗಾಟವಿನ್ನೊಂದು…!!


ಉದ್ದೇಶವೂ ಒಂದೇ..!
ನೊಂದ ಜೀವಗಳ ನೋವು ನಿವಾರಿಸುವುದು….
ಆನಂದ ಹಂಚುವುದು..!
ಬದುಕಿಗೊಂದು ಸಂದೇಶ ನೀಡುವುದು….
ಯಕ್ಷಗಾನವನ್ನು ವೀಕ್ಷಿಸುವ ಪ್ರೇಕ್ಷಕ ಕ್ಷಣ ಹೊತ್ತಾದರೂ ತನ್ನ ನೋವುಗಳನ್ನು ಮರೆಯುತ್ತಾನೆ…
ಆನಂದವನ್ನನುಭವಿಸುತ್ತಾನೆ..!
ರಂಗವು ಅವನ ಅಂತರಂಗಕ್ಕೆ ಅನೇಕ ಜೀವನ ಸಂದೇಶಗಳನ್ನು ರವಾನಿಸುತ್ತಿರುತ್ತದೆ..!

ಮಠವೆಂಬ ಮೇಳವೂ ಹೀಗೆಯೇ…..!

ಮಠ-ಮೇಳ

ಮಠ-ಮೇಳ

ಮಠವನ್ನು ಪ್ರತಿನಿಧಿಸುವ ಗುರು ನಿರಂತರವಾಗಿ ಸಂಚರಿಸುತ್ತಿರಬೇಕು..
(ಮಳೆಗಾಲದಲ್ಲಿ ಎರಡೂ ಕಡೆ ತಿರುಗಾಟವಿಲ್ಲ..! )
ಮಳೆಯ ಹಾಗೆ ತಾನು ಸಂಚರಿಸಿದಲ್ಲೆಲ್ಲಾ ಬದುಕಿನ ಬೇಗೆ ಕಳೆಯಬೇಕು..
ಪಾಪದ ಕೊಳೆ ತೊಳೆಯಬೇಕು…!
ಸಂಸ್ಕೃತಿಯ ಬೆಳೆ ಬೆಳೆಯ ಬೇಕು..
ದೀಪದ ಹಾಗೆ ತಾನು ಸಂಚರಿಸುವಲ್ಲೆಲ್ಲಾ ಜ್ಞಾನಾನಂದಗಳ ಬೆಳಕು ಚೆಲ್ಲಬೇಕು..!
ಜ್ಞಾನ(ಶಂಕರಾಚಾರ್ಯರು)ವೆಂಬುದು ಬದುಕಿನ ಹಾದಿಯ ಬೆಳಕು..!!
ಆನಂದ(ಶ್ರೀರಾಮ)ವೆಂಬುದು ಬದುಕನ್ನು ಮುನ್ನೆಡೆಸುವ ಶಕ್ತಿ..!!

ಮೇಳವೆಂದರೇ ಹೊಂದಾಣಿಕೆ..!
ಭಾಗವತರ ಕಂಠದಿಂದ ಹೊರಹೊಮ್ಮುವ ಪದ್ಯಕ್ಕೂ, ಕೈಗಳಲ್ಲಿ ಧ್ವನಿಗೈಯುವ ತಾಳಕ್ಕೂ ಹೊಂದಾಣಿಕೆ ಬೇಕು..!
ತಾಳವು ಮದ್ದಳೆಯಲ್ಲಿ ಧಿಮಿಧಿಮಿಯೆಂದು ಪ್ರತಿಧ್ವನಿಸಬೇಕು…!
ಚಂಡೆ – ಮೃದಂಗಗಳು ಪರಸ್ಪರ ಮಾತನಾಡಿಕೊಳ್ಳಬೇಕು..!
ಹಿಮ್ಮೇಳ – ಮುಮ್ಮೇಳಗಳಲ್ಲಿ ‘ಮೇಳ’ ಬೇಕು..!
ಪಾತ್ರಗಳು ಒಂದನ್ನೊಂದು ಪೋಷಿಸಬೇಕು…!
ಕಲಾವಿದರ ರಂಗಸ್ಥಳ ಮತ್ತು ಪ್ರೇಕ್ಷಕರ ಅಂತರಂಗ ಸ್ಥಳಗಳು ಭೇದವೇ ಇರದಂತೆ ಬೆಸೆದುಕೊಳ್ಳಬೇಕು…
ವ್ಯವಸ್ಥಾಪಕರು + ಕಲಾವಿದರು + ಪ್ರೇಕ್ಷಕರು + ವಾದ್ಯಗಳು + ಬಣ್ಣ + ಬೆಳಕು…
ಇವುಗಳ ಸಮರಸವಾದ ಮೇಳನವೇ ಯಕ್ಷಗಾನ ಮೇಳ. ….!!

ಮಠವೆಂದರೂ ಹಾಗೆಯೇ..!
ಶಿಷ್ಯರ ಪರಸ್ಪರ ಮೇಳನ..!
ಶಿಷ್ಯರು ಕಾರ್ಯಕರ್ತರ ಮೇಳನ..!
ಕಾರ್ಯಕರ್ತರ ಪರಸ್ಪರ ಮೇಳನ..!
ಶಿಷ್ಯರು ಕಾರ್ಯಕರ್ತರ ಮೇಳನ ಗುರುವಿನೊಂದಿಗೆ …!
ಶಿಷ್ಯರು ಕಾರ್ಯಕರ್ತರ ಸಹಿತ ಗುರುವಿನ ಮೇಳನ ಶ್ರೀರಾಮನೊಂದಿಗೆ.. ..!!

ಗುರುಗಳು, ಪರಿವಾರ, ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಶಿಷ್ಯರು ಇವೆಲ್ಲವೂ ಇಲ್ಲಿ ಪಾತ್ರಗಳೇ..!!
ಧರ್ಮವೇ ಇಲ್ಲಿ ಸೂತ್ರ..!
ಸ್ವಯಂ ಶ್ರೀರಾಮನೇ ಸೂತ್ರಧಾರ…!
ಆಯಾ ಪಾತ್ರಗಳಿಗೆ ಅವರವರು ಪಾತ್ರರಾಗಬೇಕು..
ಪರಸ್ಪರರಲ್ಲಿ ಮೇಳನ ಬೇಕು..!
ಹಾಗಿದ್ದಲ್ಲಿ ಮಠವೆಂಬ ಮಹಾಮೇಳ ತನ್ನೊಡಗೂಡುವ ಜೀವಗಳ ನೋವು ನಿವಾರಿಸುವುದು ಮತ್ತು
ಸಂತೋಷ – ಸಂದೇಶಗಳನ್ನು ಹಂಚುವುದು ನಿಶ್ಚಿತ..
ಹಾಗಾಗದಿದ್ದರೆ ಅದು ಹೊಂದಿಕೆಯ ಹದ ತಪ್ಪಿದ ಯಕ್ಷಗಾನವಾದೀತು..!!

ಉತ್ತರ ಕನ್ನಡದ ಒಂದು ಹಳ್ಳಿ..
ಆ ರಾತ್ರಿ ಯಕ್ಷಗಾನ ನಡೆಯಬೇಕಿತ್ತಲ್ಲಿ..
ಪ್ರಸಂಗ ಗದಾಯುದ್ಧ….
ಒಂಭತ್ತೂವರೆಗೆ ಪ್ರಾರಂಭವಾಗಬೇಕಿದ್ದ ಆಟ ಹನ್ನೆರಡಾದರೂ ಪ್ರಾರಂಭವಾಗಲಿಲ್ಲ..!!
ಕಾರಣ – ಐವರು ಕಲಾವಿದರು ದುರ್ಯೋಧನನ ವೇಷ ಧರಿಸಿ ಕುಳಿತದ್ದು..!!
ಆ ಪ್ರಸಂಗದಲ್ಲಿ ದುರ್ಯೋಧನ,ಕೃಷ್ಣ,ಭೀಮ, ಸಂಜಯ ಮೊದಲಾದ ಹಲವಾರು ಪಾತ್ರಗಳಿವೆ..
ಅದರಲ್ಲಿ ದುರ್ಯೋಧನನ ಪಾತ್ರವೇ ಮುಖ್ಯ ಪಾತ್ರ, ಅದನ್ನು ಮಾಡಬೇಕಾದವನು ನಾನೇ ಎಂಬ ಭ್ರಮೆ ಅವರನ್ನಾವರಿಸಿತ್ತು…!

ಎಲ್ಲಕಲಾವಿದರೂ ಒಂದೇ ಪಾತ್ರವನ್ನು ಮಾಡಹೊರಟರೆ ಆಟ ನಡೆಯುವುದಾದರೂ ಹೇಗೆ..?
ಎಲ್ಲ ಶಿಲೆಗಳೂ ಪೂಜೆಗೊಳ್ಳುವ ಆಧಾರಶಿಲೆಯೇ ಆಗ ಹೊರಟರೆ ಕಟ್ಟಡ ಕಟ್ಟುವುದೆಲ್ಲಿಂದ..?

ಬೀಜದೊಳಗಿನ ಕೆಲವಂಶ ಬೇರಾಗಬೇಕು, ಕೆಲವು ನಾರಾಗಬೇಕು..
ಕೆಲವಂಶ ತೊಗಟೆಯಾಗಬೇಕು…. ಕೆಲವು ತಿರುಳಾಗಬೇಕು..
ಕೆಲವಂಶ ಪತ್ರವಾಗಬೇಕು,ಪುಷ್ಪವಾಗಬೇಕು.. ಕೆಲವು ಫಲವಾಗಬೇಕು..
ಇವುಗಳೆಲ್ಲವೂ ಅದರದರ ಸ್ಥಾನದಲ್ಲಿ ನಿಂತು ಒಂದಕ್ಕೊಂದು ಬೆಸೆದುಕೊಂಡರೆ…
ಅಲ್ಲಿ ವೃಕ್ಷ ಸೃಷ್ಟಿ…!

ಹೀಗೆಯೇ ಮೇಳ ಸೃಷ್ಟಿ….ಸಮಾಜ ಸೃಷ್ಟಿ..!
ಯಾವ ಕ್ಷಣ ನಮ್ಮ ಪಾತ್ರವೇನೆಂಬುದು ನಮಗರ್ಥವಾಗುತ್ತದೆಯೋ, ಸಮಾಜ ಜೀವನ ಪ್ರಾರಂಭವಾಗುವುದು ಆ ಕ್ಷಣದಿಂದಲೇ..!
ಮಠವೆಂಬುದು ಸಮಾಜವನ್ನು ಸುವ್ಯವಸ್ಥೆಯಲ್ಲಿ ಬಂಧಿಸಿಡುವ ಒಂದು ಸೂತ್ರ..

ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |
ಕೋಟಿ ನಟರಾಂತಿಹರು ಚಿತ್ರ – ಪಾತ್ರಗಳ ||
ಆಟಕ್ಕೆ ಕಥೆಯಿಲ್ಲ, ಕೊನೆಯಿಲ್ಲ, ಮೊದಲಿಲ್ಲ |
ನೋಟಕನುಂ ಆಟಕನೇ..! – ಮಂಕುತಿಮ್ಮ

ಬಗೆದು ನೋಡಿದರೆ ಸೃಷ್ಟಿಯೇ ಒಂದು ಮೇಳ..
ಬ್ರಹ್ಮಾಂಡವದರ ರಂಗಸ್ಥಲ..
ತುದಿಮೊದಲಿಲ್ಲದ ನಿರಂತರ ನಡೆಯುವ ಕಥೆ..
ಇಲ್ಲಿ ಆಟಕರು- ನೋಟಕರು ಬೇರೆಯಿಲ್ಲ..
ಆಟಕರೂ ನೋಟಕರೇ… ನೋಟಕರೂ ಆಟಕರೇ..!!

ಸೃಷ್ಟಿನಾಟಕದಲ್ಲಿ ಮಹತ್ವದ ಪಾತ್ರ ವಹಿಸುವ ರವಿ-ಚಂದ್ರ-ತಾರೆಗಳು,ಸಾಗರ-ನದೀ-ಸರೋವರಗಳು,ಪರ್ವತ-ಪರಮಾಣುಗಳು ಎಂದಿಗೂ
ತಮ್ಮ ಪಾತ್ರದ ಮಿತಿಯನ್ನು ಮೀರುವುದೂ ಇಲ್ಲ…ಮರೆಯುವುದೂ ಇಲ್ಲ…
ಆದುದರಿಂದಲೇ ಸೃಷ್ಟಿ ಸೊಗಸೇ ಸೊಗಸು..!
ಆದರೆ ಅದು ನಮಗೆ ಸೊಗಸಾಗಬೇಕಾದರೆ ಅದರೊಳಗಿನ ನಮ್ಮ ಪಾತ್ರ ಸೊಗಸಾಗಬೇಕು..!

ಶತ್ರುಗಳೂ ‘ಶಾಭಾಸ್’ ಎನ್ನುವಂತೆ…
ಬಂಧುಗಳು ‘ಭಲಾ’ ಎನ್ನುವಂತೆ..
ಆತ್ಮವೇ ‘ಆಹೋಹೋ’ ಎನ್ನುವಂತೆ..
ನಮ್ಮ ಪಾತ್ರವೇ ‘ರಾಮಾರ್ಪಣವಾಗುವಂತೆ’..
ನಮ್ಮ ಮುಡಿ ಅವನಡಿಯ ಪ್ರಸಾದವಾಗುವಂತೆ ಬದುಕಿದರೆ….

ಅಂಥವನಿಗೆ ಬದುಕು ‘ದಕ್ಕಿತ್ತೋ ದಕ್ಕಿತ್ತು’…!!!

|| ಹರೇರಾಮ ||

Facebook Comments Box