|| ಹರೇರಾಮ ||

“ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?”

ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು..
ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು..
ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ…!
ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ..
ಮನೆ ಸುಧಾರಿಸಿದರೆ ಊರು ಸುಧಾರಿಸುವ ಪ್ರಯತ್ನಕ್ಕೆ ಶಕ್ತಿ ಬಂದೀತು..!
ಊರು ಸುಧಾರಿಸುವ ಪ್ರಯತ್ನ ಸಂಪೂರ್ಣ ಸಫಲವಾಗದಿದ್ದರೂ, ಕೊನೆಯ ಪಕ್ಷ ಊರಿನ ಒಂದಂಶವನ್ನು ಸುಧಾರಿಸಿದ ಸಾರ್ಥಕತೆಯುಳಿದೀತು..!

ಈ ಬಗೆಯ ಭಾವಗಳು ದಶರಥನ ಹೃದಯದಲ್ಲಿ ಮತ್ತೆ ಮತ್ತೆ ಆಡಿರಬೇಕು..
ತನ್ನ ರಾಜ್ಯದಲ್ಲಿ ತಾನೇನು ಕಾಣಬಯಸಿದನೋ ಅದನ್ನು ತನ್ನೊಳಗೆ ತಂದುಕೊಳ್ಳಲೆಳಸಿದನಾತ..
ಪರಿಣಾಮವಾಗಿ ಆತನ ಸಹಜ ಸಾಮಥ್ಯ೯-ಸುಗುಣಗಳು ವಿಕಸಿತಗೊಂಡವು..
‘ಅಭ್ಯಾಸಜ’ವಾದವು ಅಭ್ಯಾಗತರಂತೆ ಬಂದು ಆತನ ವ್ಯಕ್ತಿತ್ವವನ್ನಲಂಕರಿಸಿದವು…

ಲಕ್ಷ ಜನರನ್ನು ಆಳಬಯಸುವವನು ಲಕ್ಷ ಜನರ ಸಾಮರ್ಥ್ಯ- ಕೌಶಲಗಳನ್ನು ಸ್ವತಃ ತಾನು ಹೊಂದಿರಬೇಕಾಗುತ್ತದೆ..
ಹಾಗಿಲ್ಲದಿದ್ದರೆ ಆಳುವವನು ಅಳುವವನಾಗಿಬಿಡುತ್ತಾನೆ..!
ಕ್ಷತ್ರಿಯ ರಾಜನೊಬ್ಬನಲ್ಲಿ ಮುಖ್ಯವಾಗಿ ಇರಬೇಕಾದ ಗುಣವೇ ‘ಪರಾಕ್ರಮ’

“ಏಕೋ ದಶಸಹಸ್ರಾಣಿ ಯೋಧಯೇದ್ಯಸ್ತು ಧನ್ವಿನಾಂ |
ಶಸ್ತ್ರಶಾಸ್ತ್ರಪ್ರವೀಣಶ್ಚ ಸ ವೈ ಪ್ರೋಕ್ತೋ ಮಹಾರಥಃ ||
ಅಮಿತಾನ್ಯೋಧಯೇದ್ಯಸ್ತು ಸಂಪ್ರೋಕ್ತೋ ಅತಿರಥಃ ಸ್ಮೃತಃ |
ರಥಸ್ತ್ವೇಕೆನ ಯೋದ್ಧಾ ಸ್ಯಾತ್ ತನ್ನ್ಯೂನೋ ಅರ್ಧರಥಃ ಸ್ಮೃತಃ ||”

ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಂಡು ಪ್ರತಿವೀರನೊಬ್ಬನೊಡನೆ ವೀರತೆಯಿಂದ ಹೋರಾಡಬಲ್ಲವನು ‘ರಥ’..
ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಂಡು ೧೦,೦೦೦ ರಥರೊಡನೆ ಕೆಚ್ಚೆದೆಯಿಂದ ಕಾದಾಡಬಲ್ಲವನು ‘ಮಹಾರಥ’..
ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಳ್ಳುತ್ತಾ, ರಣಾಂಗಣದಲ್ಲಿ ಅಸಂಖ್ಯ ಸಂಖ್ಯೆಯ ಮಹಾರಥರನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಬಲ್ಲ ಮಹಾವೀರನೇ ‘ಅತಿರಥ’..
ಅಂದು ಭುವಿಯನ್ನಲಂಕರಿಸಿದ್ದ ಕ್ಷತ್ರಿಯವೀರರ ಮಧ್ಯದಲ್ಲಿ ತನ್ನ ಯುದ್ಧ ಕೌಶಲದಿಂದಲೇ ‘ಅತಿರಥ’ನೆನಿಸಿಕೊಂಡಿದ್ದನು ದಶರಥ..

(ಅಂದು ಯುದ್ಧದ ನಿರ್ಣಯವನ್ನು ಕೈಗೊಳ್ಳುತ್ತಿದ್ದ ನಾಯಕನು ಸ್ವಯಂ ಮುಂಚೂಣಿಯಲ್ಲಿ ನಿಂತು ಕಾದಾಡುತ್ತಿದ್ದ..
ತನ್ನವರನ್ನು ರಕ್ಷಿಸುವಲ್ಲಿ ಅಗತ್ಯಬಿದ್ದರೆ ರಣದಲ್ಲಿ ಪ್ರಾಣವನ್ನೂ ನೀಡುತ್ತಿದ್ದ..
ಇಂದಿನ ನಮ್ಮ ನಾಯಕರು……??)

ದೇವರಲ್ಲಿ ‘ಸಂಪತ್ತು – ಸಾಮರ್ಥ್ಯಗಳನ್ನು ಕೊಡು’ ಎಂದು ಬೇಡಿದರೆ ಸಾಲದು..
‘ನೀ ಕೊಟ್ಟದ್ದನ್ನು ಸದುಪಯೋಗ ಮಾಡುವ ಬುದ್ಧಿ-ಅವಕಾಶಗಳನ್ನು ಕೊಡು’ ಎಂದೂ ಜೊತೆಯಲ್ಲಿ ಕೇಳಬೇಕು..
ದೇವರ ವರವನ್ನು ಸದ್ವಿನಿಯೋಗ ಮಾಡದಿದ್ದರೆ ಅದು ‘ವ್ಯರ್ಥ’..
ದುರ್ವಿನಿಯೋಗ ಮಾಡಿದರೆ ಅದು ‘ಅನರ್ಥ’..
ಅಷ್ಟು ಮಾತ್ರವಲ್ಲ, ಕೊಟ್ಟವನ ಕೋಪಕ್ಕೂ ಗುರಿಯಾಗಬೇಕಾದೀತು..!

ಸರ್ವಶಕ್ತನು ತನಗಿತ್ತ ಶಕ್ತಿಯನ್ನು ಸಾರ್ಥಕಪಡಿಸಿದನು ದಶರಥ..
ತನ್ನ ಬದುಕಿನುದ್ದಕ್ಕೂ ಸತ್ಯಕ್ಕಾಗಿಯೇ ಸಮರಗಳನ್ನು ನಡೆಸಿ ‘ಸತ್ಯಪರಾಕ್ರಮ’ನೆನಿಸಿದನವನು..
ಪ್ರಖರ ಸೂರ್ಯನು ತನ್ನ ಪ್ರತಾಪದಿಂದ ಕತ್ತಲ ಕೂಟವನ್ನೇ ಧ್ವಂಸಗೊಳಿಸುವಂತೆ –
ತನ್ನ ಪ್ರತಾಪದಿಂದ ಹಲವು ಲೋಕಕಂಟಕರನ್ನೂ, ಧರ್ಮಕಂಟಕರನ್ನೂ ಬಡಿದೋಡಿಸಿದ ದಶರಥನನ್ನು ಲೋಕವು ‘ಪ್ರತಾಪಹತಕಂಟಕ’ನೆಂದು ಕೊಂಡಾಡಿತು..
ರಣಕಣದಲ್ಲಿ ಇದಿರಾದ ಯಾವ ಶತ್ರುವೂ ದಶರಥನಿಗೆ ಸರಿ-ಮಿಗಿಲೆನಿಸಲಿಲ್ಲ..
ಜಯಸಿರಿಯು ಆತನನ್ನೆಂದೂ ತೊರೆಯಲೇ ಇಲ್ಲ..

ಬಾಹ್ಯಬಲವು ದೇಹವಾದರೆ ಅದರಲ್ಲಿ ಜೀವ ತುಂಬುವುದು ಆಂತರವಾದ ಜ್ಞಾನಬಲ..
ಶಕ್ತಿಯಿದ್ದರೆ ಸಾಕೇ?
ದಿಕ್ಕೂ ಬೇಡವೇ..?
ವಾಯುವೇಗದಲ್ಲಿ ಓಡುವ ವಾಹನದಲ್ಲಿ ಕುಶಲ ಸಾರಥಿಯಿರಬೇಡವೇ..?
ಸಕಲ ಸುಖ ಸಾಮಗ್ರಿಗಳಿದ್ದೂ ಅಲ್ಲಿ ಬೆಳಕೇ ಇಲ್ಲದಿದ್ದರೆ ಏನು ಪ್ರಯೋಜನ..?
ಬದುಕೆಂಬ ಕೋಣೆಯಲ್ಲಿ ಬೆಳಕೇ ಅರಿವು..
ಅದು ಧಾರಾಳವಾಗಿದ್ದಿತು ದಶರಥನಲ್ಲಿ..
ವೇದ-ವೇದಾಂಗಗಳ, ಶಾಸ್ತ್ರ-ಪುರಾಣಗಳ, ಸಂಗೀತ-ಸಾಹಿತ್ಯಗಳ, ಬಗೆಬಗೆಯ ವಿದ್ಯೆ-ಕಲೆಗಳ ಸಾರವು ಸನ್ನಿಹಿತವಾಗಿದ್ದಿತು ಆತನ ಬುದ್ಧಿ-ಹೃದಯಗಳಲ್ಲಿ..
ಆದುದರಿಂದಲೇ ಆತನ ಆಶ್ರಯದಲ್ಲಿ ವೀರವರರು-ವೇದವಿದರು ಬಹುಸಂಖ್ಯೆಯಲ್ಲಿ ಬೆಳೆದರು..
ತನ್ನಲ್ಲಿ ತುಂಬಿ ತುಳುಕುವ ಬಲ -ಪರಾಕ್ರಮಗಳಿಂದ, ಜ್ಞಾನ -ವಿಜ್ಞಾನಗಳಿಂದ ಅವರೆಲ್ಲರಿಗೂ ಮೇಲ್ಪಂಕ್ತಿಯಾದನಾತ..

ಪೂರ್ಣತೆಯೆಂಬುದು ಬದುಕಿನ ಪರಮಗುರಿ..
ಧರ್ಮವು ಪೂರ್ಣತೆಯೆಡೆಗೆ ನಮ್ಮನ್ನು ಕರೆದೊಯ್ಯುವ ದಾರಿ..
ಜ್ಞಾನವು ಪೂರ್ಣತೆಯ ದಾರಿಯನ್ನು ಬೆಳಗುವ ಬೆಳಕು..
ಮೂರೂ ಸೇರಿದರೆ ಬದುಕು ‘ಪ್ರಯಾಗ’..
ಹಾಗಿಲ್ಲದಿದ್ದರೆ ಅದು ……….’ಪ್ರಯಾಸ’..
ಧರ್ಮದ ಮಾರ್ಗದಲ್ಲಿ…
ಜ್ಞಾನದ ಬೆಳಕಿನಲ್ಲಿ..
ಪೂರ್ಣತೆಯ ಗಮ್ಯದೆಡೆಗೆ ಮುನ್ನಡೆದಿತ್ತು ದಶರಥನ ಜೀವರಥ..!!

ಸರಿಯಾದ ದಾರಿಯೇ ‘ಧರ್ಮ’..
ದಾರಿ ತಪ್ಪಿದರೆ ಅದು ‘ಅಧರ್ಮ’..
ಇಂದ್ರಿಯಗಳೆಂಬ ಕುದುರೆಗಳು, ಮನವೆಂಬ ಸಾರಥಿ ದಾರಿ ತಪ್ಪದಂತೆ ಜಾಗೃತನಾಗಿ (ಅಧರ್ಮಂ ಪರಿವರ್ಜಯನ್) ಅವುಗಳ ಮೇಲೆ ನಿಯಂತ್ರಣ ಸಾಧಿಸಿದುದರಿಂದ ಬಲ್ಲವರು ಅವನನ್ನು ‘ವಿಜಿತೇಂದ್ರಿಯ, ವಶೀ’ ಎಂದು ಕರೆದರು..

ದಶರಥನೋ ‘ ಧರ್ಮರತ’
ರತಿಯೆಂದರೆ ಆನಂದ..
ಧರ್ಮದಲ್ಲಿ ಆನಂದವನ್ನು ಕಂಡವನು ‘ಧರ್ಮರತ’
ಧರ್ಮದ ರುಚಿ ಗೊತ್ತಿಲ್ಲದವರಿಗೆ ಪ್ರಯಾಸದ ವಿಷಯ..
ದಶರಥನಿಗೋ ಅದು ಪ್ರೀತಿಯ ವಿಷಯ..
ಸಪ್ಪೆಯಲ್ಲ ಧರ್ಮವವನಿಗೆ..

ಪ್ರತಿಫಲನವು ಪ್ರೀತಿಯ ಸ್ವಭಾವ
ಯಾವೆಡೆಗೆ ನಾವು ಪ್ರೀತಿಯನ್ನು ಹರಿಸುವೆವೋ, ಇಮ್ಮಡಿಯಾಗಿ ಅಲ್ಲಿಂದ ನಮ್ಮೆಡೆಗೆ ಅದು ತಿರುಗಿ ಬರುವುದರಲ್ಲಿ ಸಂಶಯವಿಲ್ಲ..
ಯಾವ ಧರ್ಮದಲ್ಲಿ ದಶರಥನು ‘ರತ’ನಾಗಿದ್ದನೋ ಆ ಧರ್ಮವು ಆತನನ್ನು ಪರಿಪರಿಯಾಗಿ ಅನುಗ್ರಹಿಸಿತು..
ಅರ್ಥ-ಕಾಮಗಳು ಧರ್ಮವೃಕ್ಷದ ಸುಪುಷ್ಪ-ಸುಫಲಗಳೇ ಅಲ್ಲವೇ..?
ನಿಯಮದಿಂದ ಧರ್ಮವನ್ನು ಆರಾಧಿಸಿದ ದಶರಥನಿಗೆ ಸಂಪತ್ಸುಖಗಳು(ಅರ್ಥ-ಕಾಮಗಳು) ಒಲಿದು ಬಂದವು…

ಎಲ್ಲೆಡೆಯಿಂದ ತನ್ನೆಡೆಗೆ ಹರಿದು ಬರುವ ಜಲಧಾರೆಗಳನ್ನು ಸಾಗರವು ಪ್ರತಿಗ್ರಹಿಸುವಂತೆ,
ಲೋಕದಿಂದ ತನ್ನೆಡೆಗೆ ಹರಿದು ಬಂದ ಸಂಪತ್ತುಗಳನ್ನು- ಸುವಸ್ತುಗಳನ್ನು ಸಂಗ್ರಹಿಸಿ ರಕ್ಷಿಸಿದನವನು..
ಧನಪತಿ ಕುಬೇರನಿಗೂ, ತ್ರಿಲೋಕಪತಿ ಮಹೇಂದ್ರನಿಗೂ ಸಾಟಿಯೆನಿಸುವ ಕೋಶವು ಅವನದಾಯಿತು..
‘ ಸಂಗ್ರಹೀ ನಾವಸೀದತಿ’
ಸಂಗ್ರಹಿಗೆ ನಾಶವಿಲ್ಲ..

ಆದರೊಂದು ಮಾತು..
ಲೋಕದಿಂದ ನಮಗೆ ಸಂದಷ್ಟು ನಮ್ಮಿಂದ ಲೋಕಕ್ಕೆ ಸಲ್ಲದಿದ್ದರೆ ಬದುಕಿನ ಸಮತೋಲನ ತಪ್ಪುತ್ತದೆ..
ಸದ್ವಿನಿಯೋಗವಾಗದ ಸಂಗ್ರಹ ಜೀವಕ್ಕೂ-ಜೀವನಕ್ಕೂ ‘ ಭಾರ’ವಾದೀತು, ಬಾಧೆಯಾದೀತು..
ತನ್ನಲ್ಲಿರುವ ಸಂಪತ್ತಿಗೆ ತಾನು ‘ಮಾಲಕ’ನಲ್ಲ, ‘ಪಾಲಕ’ ಮಾತ್ರ ಎಂಬ ಅರಿವಿದ್ದ ದಶರಥನು ಬಿಚ್ಚುಮನಸ್ಸು-ಬಿಚ್ಚುಕೈಗಳಿಂದ ದಾನ-ಮಾನಗಳನ್ನು ನಡೆಸಿದನು..
ಆದರೆ ಏನಾಶ್ಚರ್ಯ!
ತೆಗೆದುಕೊಂಡವರು ತುಂಬಿಹೋದರು..ದಶರಥ ಬರಿದಾಗಲೇ ಇಲ್ಲ…!!

|| ಹರೇರಾಮ ||

Facebook Comments Box