||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು…

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು…

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?

ಆತ್ಮ- ಬುದ್ಧಿಗಳು ಎಲ್ಲರಲ್ಲಿಯೂ ಇವೆ. ಆದರೆ ಆತ್ಮ ಕೆಟ್ಟು ಕೆಟ್ಟವರಾರಿಲ್ಲ..ಬುದ್ಧಿ ಕೆಟ್ಟು ಕೆಟ್ಟವರುಂಟು..!

ಬಂಧನ -ಮೋಕ್ಷಗಳು ಬುದ್ಧಿಯಿಂದಲಾಗಿ, ಆತ್ಮದಿಂದಲಾಗಿಯಲ್ಲ..

ಒಳ್ಳೆಯವರು- ಕೆಟ್ಟವರೆನಿಸುವುದು ಒಳ್ಳೆಯ-ಕೆಟ್ಟ ಬುದ್ಧಿಗಳಿಂದಲಾಗಿ, ಆತ್ಮದಿಂದಲಾಗಿಯಲ್ಲ..

ವ್ಯಕ್ತಿಯ ಉನ್ನತಿ- ಅವನತಿಗಳಿಗೆ ಹೇಗೆ ಅವನ ಬುದ್ಧಿ ಕಾರಣವೋ ಹಾಗೆಯೇ ರಾಜ್ಯವೊಂದರ ಉನ್ನತಿ- ಅವನತಿಗಳಿಗೆ ಆ ರಾಜ್ಯದ ಮಂತ್ರಿಗಳೇ ಎದುರು ಕಾಣದ, ಆದರೆ ನೈಜವಾದ ಕಾರಣರು..

ಆದುದರಿಂದಲೇ ಇರಬೇಕು..ರಾಜನನ್ನು ೩೮ ಬಗೆಯಲ್ಲಿ ಬಣ್ಣಿಸಿದ ವಾಲ್ಮೀಕಿಗಳು ಮಂತ್ರಿಗಳನ್ನು ೫೧ ಬಗೆಯಲ್ಲಿ ಬಣ್ಣಿಸಿದರು !! ಏಕೆಂದರೆ ವ್ಯಕ್ತಿಯನ್ನು ಎಷ್ಟೇ ಬಣ್ಣಿಸಲಿ, ಕೊನೆಗೂ ಬಂದು ನಿಲ್ಲುವುದು ‘ಆತನಿಂದ ಯಾರಿಗೆ ಏನು ಲಾಭವಾಯಿತು?’ ಎಂಬಲ್ಲಿಯೇ ಅಲ್ಲವೇ..!? ಹಾಗಲ್ಲದಿದ್ದರೆ ‘ ಮಾಣಿ ಬಹಳ ಒಳ್ಳೆಯವನೇ, ಆದರೆ ತೋಟ ಮಾತ್ರ ಸಂಪೂರ್ಣ ಹಾಳು’ ‘ Operation success, but patient is dead’ ಎಂಬಂತಾದೀತು..

ಪರಿಣಾಮವೇ ಇಲ್ಲದ ಒಳ್ಳೆಯದನ್ನು ಕಟ್ಟಿಕೊಂಡು ಯಾರಿಗೇನು ?

ಚಂದನದ ಸಾರವನ್ನು ಸುಗಂಧದಲ್ಲಿ ಕಾಣುವಂತೆ, ಸಕ್ಕರೆಯ ಸಾರವನ್ನು ಸವಿಯಲ್ಲಿ ಕಾಣುವಂತೆ, ಸೂರ್ಯನ ಸಾರವನ್ನು ಬೆಳಕಲ್ಲಿ ಕಾಣುವಂತೆ, ರಾಜನ ಸಾರವನ್ನು ರಾಜ್ಯಭಾರದಲ್ಲಿ ಕಾಣಬೇಕು..! ರಾಜ್ಯಭಾರದ ಮೂರ್ತರೂಪರೇ ಮಂತ್ರಿಗಳು..ಆದುದರಿಂದಲೇ ಮಂತ್ರಿಗಳ ಬಗೆಗೆ ಇಷ್ಟೊಂದು ವಿವರಣೆ..ಮಂತ್ರಿಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ವಾಲ್ಮೀಕಿಗಳು ವರ್ಣಿಸಿದ್ದು ದಶರಥನ ರಾಜ್ಯಭಾರವನ್ನೇ..!!

ಸವಾಲು : – ‘ ಗುರು ‘ ಏನೆಂಬುದನ್ನು ಒಂದೇ ಪದದಲ್ಲಿ ವ್ಯಾಖ್ಯಾನಿಸಿ..

ಜವಾಬು :- ‘ ಶಿಷ್ಯ ‘

ಏಕೆಂದರೆ ಗುರುವಿನ ಗುರುತು- ಗುರುತ್ವಗಳು ಶಿಷ್ಯನಲ್ಲಿಯಲ್ಲವೇ ಪ್ರಕಟವಾಗುವುದು – ಅಳೆಯಲ್ಪಡುವುದು ..? ಹಾಗೆಯೇ ರಾಜನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೋಡಬೇಕಾದುದು ರಾಜ್ಯವನ್ನು, ಗಮನಿಸಬೇಕಾದುದು ‘ ರಾಜ್ಯಭಾರ ‘ ವನ್ನು..!!

ದಶರಥನು ದೇಶವೆಂಬ ದೇಹದ ಹೃದಯವಾಗಿದ್ದರೆ, ಮಿದುಳಾಗಿದ್ದರು ಆತನ ಮಂತ್ರಿಗಳು..

ಮಿದುಳಿಗೆ ಅರಿವೇ ಅಲ್ಲವೇ ಮುಖ್ಯ ಕಾರ್ಯ..?

ಬುದ್ಧಿಗೆ ಅರಿವೇ ಸಿದ್ಧಿ, ಮರೆವು ವಿಪತ್ತಿ..!!

ದಶರಥನ ಮಂತ್ರಿಗಳು ಎಲ್ಲದರಲ್ಲಿಯೂ ಬಲ್ಲಿದರಾಗಿದ್ದರೆಂಬುದನ್ನು ( ಬಲ್ಲ + ಇದ = ಬಲ್ಲಿದ ) ಬಣ್ಣಿಸುವ ಋಷಿಪದಗಳನ್ನು ಒಮ್ಮೆ ಅವಲೋಕಿಸಿ..

* || ಪ್ರಕೃತ್ಯಾ ಸಂಪದನ್ವಿತಾಃ || ವಿದ್ಯಾವಿನೀತಾ ಃ ||

ಭೂಮಿಯಲ್ಲಿ ನೈಸರ್ಗಿಕವಾಗಿ ನೀರಿದ್ದರೆ, ಬಾವಿ ತೋಡಿದಾಗ ಅದು ಸರ್ವಜನೋಪಯೋಗಿಯಾಗಿ ಪ್ರಕಟಗೊಳ್ಳುತ್ತದೆ..ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಾಮರ್ಥ್ಯವಿದ್ದರೆ, ಸರಿಯಾದ ಶಿಕ್ಷಣ ನೀಡಿದಾಗ ಅದು ವಿಕಸಿತಗೊಂಡು, ವ್ಯಕ್ತಿಗೂ, ಸಮಾಜಕ್ಕೂ ಹಿತವಾಗುವಂತೆ ಪ್ರಕಟಗೊಳ್ಳುತ್ತದೆ.. ಸಾಮರ್ಥ್ಯವಿಲ್ಲದವನಿಗೆ ಶಿಕ್ಷಣ ನೀಡುವುದು ನೀರಿಲ್ಲದಲ್ಲಿ ಬಾವಿ ತೋಡಿದಂತೆಯೇ ಸರಿ..! ಸಾಮರ್ಥ್ಯವಿರುವವನಿಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ, ಭೂಮಿಯಲ್ಲಿ ನೀರಿದ್ದರೂ ಮೇಲೆತ್ತುವ ಮನುಷ್ಯಪ್ರಯತ್ನವಿಲ್ಲದಾಗ ಅದು ವ್ಯರ್ಥವಾಗಿ ಹೋಗುವಂತೆಯೇ ಸರಿ….!

ರಾಜ್ಯರಕ್ಷಣೆಗೆ ಬೇಕಾದ ಜ್ಞಾನ – ಗುಣಸಂಪತ್ತನ್ನು ನೈಸರ್ಗಿಕವಾಗಿಯೇ ಹೊಂದಿರುವ ವ್ಯಕ್ತಿತ್ವಗಳನ್ನು ಅಯೋಧ್ಯೆಯ ಅರಮನೆಯು ಗುರುತಿಸಿತ್ತು.. ಅವರಿಗೆ ಸಮುಚಿತವಾದ ಶಿಕ್ಷಣವನ್ನು ನೀಡಿ, ಮಂತ್ರಿಪದದಲ್ಲಿ ಪ್ರತಿಷ್ಠಾಪಿಸಿತ್ತು..

ಶ್ರೇಷ್ಠವಾದ ಆಡಳಿತವೆಂದರೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಯೋಗ್ಯವಾದ ಶಿಕ್ಷಣ- ಉಪಕರಣಗಳನ್ನು ನೀಡಿ, ಯೋಗ್ಯವಾದ ಪದವಿಯಲ್ಲಿ ನೆಲೆಗೊಳಿಸುವುದೇ ಅಲ್ಲವೇ..?

Facebook Comments Box