॥ಶ್ರೀ ಹನುಮಾನ್ ಪಂಚರತ್ನಮ್ ॥

“ಹನುಮನೊಡನೆ ರಾಮನೆಡೆಗೆ” -ಮಾಣಿ ಮಠದ ಆಂಜನೇಯ

॥ಹರೇರಾಮ

ಶ್ರೀರಾಮಚಂದ್ರಾಪುರ ಮಠ ಪೆರಾಜೆ-ಮಾಣಿಯಲ್ಲಿ  “ವಿಜಯ ಚಾತುರ್ಮಾಸ್ಯ” ಪುಣ್ಯಕಾಲದ  ಮುಖ್ಯಕೇಂದ್ರಬಿಂದು ಶ್ರೀಮಠದಲ್ಲಿ ಸಂಚಾರದಲ್ಲಿರುವ  ಆಂಜನೇಯ. ಅಂಜನೇಯನನ್ನು ಚಾತುರ್ಮಾಸ್ಯದ ಎಲ್ಲಾ ದಿನಗಳಲ್ಲಿಯೂ, ನಾನಾ ರೂಪದಲ್ಲಿ, ನಾನಾ ವಿಧದಲ್ಲಿ ಸ್ತುತಿಸುತ್ತಾ ಚಾತುರ್ಮಾಸ್ಯವನ್ನು ಹನುಮಮಯ ಮಾಡಬೇಕಾಗಿದೆ. ಆ ಪ್ರಯುಕ್ತ ಶ್ರೀ ಪೀಠದ ಎಲ್ಲಾ ಶಿಷ್ಯವರ್ಗ ನಮ್ಮ ಪೀಠದ ಸಂಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ “ಶ್ರೀ ಹನುಮಾನ್ ಪಂಚರತ್ನಮ್” ವನ್ನು ಪಠಿಸಿ, ಆಂಜನೇಯನ ಕೃಪೆಗೆ ಪಾತ್ರರಾಗಿ, “ಹನುಮನೊಡನೆ ರಾಮನೆಡೆಗೆ” ಸಾಗಬೇಕಾಗಿದೆ.

~

ಧ್ವನಿಃ ಸಾಕೇತ ಶರ್ಮಾ, ಬೆಂಗಳೂರು
ರಚನೆಃಶ್ರೀ ಶಂಕರಾಚಾರ್ಯ ಭಗವತ್ಪಾದರು

॥ಶ್ರೀ ಹನುಮಾನ್ ಪಂಚರತ್ನಮ್ ॥

ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಂ
ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ ||೧॥

ವಿಷಯಸುಖಗಳ ಬಯಕೆಯನ್ನೆಲ್ಲ ತ್ಯಜಿಸಿದ, ಸಂತಸದ ಕಣ್ಣೀರಿನಿಂದ ಪುಳಕಿತನಾದ, ಅತ್ಯಂತ ಪರಿಶುದ್ಧನಾದ, ಜಾನಕೀರಮಣನ ಮೊಟ್ಟಮೊದಲ ದೂತನಾದ, ಸುಂದರನಾದ, ವಾಯುಪುತ್ರ ಆಂಜನೇಯನನ್ನು ಇಂದು ಭಾವಿಸುತ್ತೇನೆ.

ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಂ
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ ||೨॥

ಬಾಲಾರುಣನಂತೆ ಕಾಂತಿಯುಕ್ತವಾದ ಮುಖಕಮಲವುಳ್ಳ, ದಯಾರಸಪ್ರವಾಹದಿಂದ ತುಂಬಿದ ಕಡೆಗಣ್ಣುಳ್ಳ, ಜೀವದಾತನಾದ, ಮನೋಜ್ಞ ಮಹಿಮೆಯುಳ್ಳ, ಅಂಜನಾದೇವಿಯ ಪಾಲಿಗೆ ಭಾಗ್ಯವಾದ ಹನುಮಂತನನ್ನು ಸ್ತುತಿಸುತ್ತೇನೆ.

ಶಂಬರವೈರಿಶರಾತಿಗಮಂಬುಜದಲವಿಪುಲಲೋಚನೋದಾರಂ
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮವಲಂಬೇ ||೩॥

ಮನ್ಮಥನ ಬಾಣವನ್ನು ದೂರೀಕರಿಸಿದ, ತಾವರೆಯ ದಳದಂತೆ ವಿಶಾಲವಾದ ಕಣ್ಣಿನಿಂದ ಉದಾರನಾದ, ಶಂಖದಂತೆ ಕೊರಳುಳ್ಳ, ವಾಯುದೇವನಿಗೆ ಭಾಗ್ಯವಾದ, ತೊಂಡೆಹಣ್ಣಿನಂತೆ ಕಾಂತಿಯುಕ್ತವಾದ ತುಟಿಯುಳ್ಳ ಆಂಜನೇಯನೊಬ್ಬನನ್ನೇ ನಾನು ಆಶ್ರಯಿಸುತ್ತೇನೆ.

ದೂರೀಕೃತಸೀತಾರ್ತಿಃಪ್ರಕಟೀಕೃತರಾಮವೈಭವಸ್ಫೂರ್ತಿಃ
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನೂಮತೋ ಮೂರ್ತಿಃ ||೪॥

ಜಾನಕೀದೇವಿಯ ದುಃಖವನ್ನು ದೂರಮಾಡಿದ, ಶ್ರೀರಾಮಚಂದ್ರನವೈಭವದ ಸ್ಪೂರ್ತಿಯನ್ನು ಪ್ರಕಟಪಡಿಸಿದ, ದಶಮುಖ ರಾವಣನ ಕೀರ್ತಿಯನ್ನು ನಾಶಗೊಳಿಸಿದ ಹನುಮಂತನ ಮೂರ್ತಿಯು ಸದಾ ನನ್ನೆದುರಿಗೆ ಶೋಭಿಸಲಿ.

ವಾನರನಿಕರಾಧ್ಯಕ್ಷಂ ದಾನವಕುಮುದಕುಲರವಿಕರಸದೃಕ್ಷಂ
ದೀನಜನಾವನದೀಕ್ಷಂ ಪವನತಪಃಪಾಕಪುಂಜಮದ್ರಾಕ್ಷಮ್ ||೫॥

ವಾನರ ಸೈನ್ಯಕ್ಕೆ ನಾಯಕನಾದ, ದೈತ್ಯಕುಲವೆಂಬ  ನೈದಿಲೆಗಳನ್ನು ಸೂರ್ಯನಕಿರಣವಾಗಿ ನಾಶಗೊಳಿಸಿದ, ದೀನಜನರನ್ನು ರಕ್ಷಿಸುವುದರಲ್ಲಿ ದೀಕ್ಷಾಬದ್ಧನಾದ, ವಾಯುದೇವನ ತಪಸ್ಸಿನ ಸಿದ್ಧಗಳ ಸಮೂಹನಾದ, ಹನುಮಂತನನ್ನು ನಾನು ದರ್ಶನ ಮಾಡಿದೆನು.

ಫಲಶ್ರುತಿಃ
ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಂ ।
ಚಿರಮಿಹ ನಿಖಿಲಾನ್ಭೋಗಾನ್ಫುಂಕ್ತ್ವಾ ಶ್ರೀರಾಮಭಕ್ತಿಭಾಗ್ಭವತಿ ॥೬॥

ಈ ಹನುಮಾನ್ ಪಂಚರತ್ನ ಸ್ತೋತ್ರವನ್ನು ಯಾರು ಪಠಿಸುತ್ತಾರೋ  ಅವರು ಬಹುಕಾಲ ಈ ಲೋಕದ ಭೋಗಭಾಗ್ಯಗಳನ್ನು ಅನುಭವಿಸಿ ಶ್ರೀರಾಮಚಂದ್ರನ ಭಕ್ತಿಗೆ ಪಾತ್ರನಾಗುತ್ತಾರೆ.

~*~

“ಬನ್ನಿ, ಹನುಮನಾಗುವ ಮೂಲಕ ರಾಮಸೇವಕರಾಗೋಣ”

~*~

Facebook Comments Box