#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
19-09-2018:

ವರಾಹಾವತಾರ

ಚರಾಚರ ಪ್ರಪಂಚದ ಸಮಸ್ತ ಜೀವರಾಶಿಗಳ ಉಸಿರೇ ಆದ ಪ್ರಭು ಶ್ರೀಕೃಷ್ಣನ ಶ್ರೀಚರಣಗಳಲ್ಲಿ ಪ್ರಣಾಮಗಳನ್ನು ಸಲ್ಲಿಸಿ ಇಂದಿನ ವಿಷಯಕ್ಕೆ ಉಪಕ್ರಮಿಸೋಣ, ಇಂದಿನ ವಿಷಯ ವರಾಹಾವತಾರ.

ಉಸಿರೇ ಭಗವಂತ; ಹೌದು ಇದು ಕೇವಲ ನಮ್ಮ ವಿಷಯ ಅಲ್ಲ, ಬ್ರಹ್ಮದೇವರ ವಿಷಯ ಕೂಡಾ, ಒಮ್ಮೆ ಬ್ರಹ್ಮದೇವರ ಮೂಗಿನಿಂದ ಹೆಬ್ಬೆರಳ ಗಾತ್ರದೊಂದು ವಿಶಿಷ್ಟ ರೂಪ (ಶಿಶು ವರಾಹ) ಹೊರಗೆ ಬಂತು. ಅದು ಮುಂದಿನ ಒಂದೆರಡು ಕ್ಷಣಗಳವರೆಗೆ ಮಾತ್ರವೇ ಮರಿಯಾಗಿತ್ತು, ನಂತರ ಕ್ರಮೇಣ ಬೆಳೆಯುತ್ತಾ, ಬೆಳೆಯುತ್ತಾ ಭೂಮ್ಯಾಕಾಶಗಳನ್ನು ವ್ಯಾಪಿಸಿ ಬೆಳೆಯಿತು. ಬ್ರಹ್ಮದೇವರಿಗೆ ಇದನ್ನು ನೋಡಿ ಒಂದು ಪ್ರಶ್ನೆ ಬಂತು ಇದೇನು ಜೀವನೋ ದೇವನೋ? ಆಗ ಆ ವರಾಹಾಕಾರ ತಾನೇನೂ ನುಡಿಯದೇ, ಋಷಿಮಹರ್ಷಿಗಳ ಮುಖದಿಂದ ತಾನಾರೆಂಬುದನ್ನು ಪ್ರಕಟಮಾಡಿತು, ಋಷಿಮಹರ್ಷಿಗಳು ಅದನ್ನು ಸ್ತುತಿಸಲು ಪ್ರಾರಂಭಿಸಿದರು. ಆಗ ಅದು ತನ್ನ ಘರ್ಜನೆಯಿಂದ ತಾನೇನು ಅನ್ನುವುದನ್ನು ಪ್ರಕಟಮಾಡಿತು. ಅದೇ ಶ್ರೀಮನ್ಮಹಾವಿಷ್ಣು.

ತತ್ತ್ವಭಾಗವತಮ್

ಈ ಅವತಾರದ ಉದ್ದೇಶವೇನೆಂದರೆ ರಸಾತಳದಲ್ಲೆಲ್ಲೋ ಮುಳುಗಿಹೋಗಿದ್ದ ಭೂಮಿಯನ್ನು ಮೇಲೆತ್ತುವುದು. ಸೃಷ್ಟಿಯಲ್ಲಿ ಒಟ್ಟು ಲೋಕಗಳು ೧೪, ಅವುಗಳ ಪೈಕಿ ೬ ತೆಜೋ ಲೋಕಗಳು, ೭ ತಮೋಲೋಕಗಳು. ಭೂಮಿಯು ಹೊಸ್ತಿಲಿನಂತಿರುವ ಲೋಕ, ಈ ಎರಡರ ಮಧ್ಯೆ ಇದೆ, ಹಾಗಾಗಿ ಜ್ಞಾನ-ಅಜ್ಞಾನ, ಸುಖ-ದುಃಖ, ಜೀವನ-ಮರಣ, ಶುಭ-ಅಶುಭ ಎರಡೂ ಇಲ್ಲಿದೆ. ಇದು ದ್ವಂದ್ವ ಲೋಕ. ಕಲ್ಪನೆ ಮಾಡಿಕೊಳ್ಳಿ, ಇಷ್ಟು ಎತ್ತರದಲ್ಲಿರುವ ಈ ಭೂಮಿ ಅಷ್ಟು ಆಳಕ್ಕೆ ಹೋದರೆ ಏನಾಗಬಹುದು? ಹೀಗಾದ ಭೂಮಿಯನ್ನು ಉದ್ಧರಿಸುವ ಸಂಕಲ್ಪ ಬ್ರಹ್ಮದೇವರದ್ದು. ಹೀಗೆ ಚಿಂತನೆಯಲ್ಲಿರುವಾಗಲೇ ಆ ರೂಪದ ಪ್ರಾದುರ್ಭಾವ ಆಯಿತು. ಅದೂ ಮೂಗಿನಿಂದ, ಘ್ರಾಣದಲ್ಲಿರುವುದು ಪ್ರಾಣ; ಘ್ರಾಣದಿಂದಲೇ ಪ್ರಾದುರ್ಭಾವ, ಹಾಗಾಗಿ ಉಸಿರೇ ಭಗವಂತ. ಭಗವಂತ ನಮ್ಮಲ್ಲಿ ಜಾಗೃತವಾಗಿರುವುದರ ಕುರುಹೇ ಉಸಿರಾಟ. ಸತ್ ಹೋದರೆ ದೇಹದಲ್ಲಿ ಉಸಿರಾಟ ನಿಲ್ಲುತ್ತದೆ. ಸತ್ ಇರುವವರೆಗೂ ಉಸಿರಾಟ, ಉಸಿರಾಟಕ್ಕೂ ಅದಕ್ಕೂ ಹತ್ತಿರದ ಸಂಬಂಧ. ಪ್ರಾಣ ತುಂಬಾ ಮುಖ್ಯವಾದದ್ದು. ಈ ಎರಡಕ್ಕೂ ಬಹಳ ಹತ್ತಿರದ ಸಂಬಂಧ, ಪ್ರಾಣದಿಂದಲೇ ಎಲ್ಲವೂ, ಚರಾಚರ ಪ್ರಪಂಚವೆಲ್ಲವೂ ಈ ಪ್ರಾಣದಿಂದಲೇ ಆಗಿದೆ ಅದೂ ಸಾಕ್ಷಾತ್ ಸೃಷ್ಟಿಕರ್ತನ ಪ್ರಾಣದಿಂದ. ಈ ಅವತಾರಕ್ಕೂ ಬೇರೆಯ ಅವತಾರಗಳಿಗೂ ವ್ಯತ್ಯಾಸವವೇನೆಂದರೆ ಉಳಿದ ಅವತಾರಗಳಲ್ಲಿ ಇಳೆಯಲ್ಲಿನ ಜನರ ಜೀವನಮಟ್ಟ ಇಳಿದು ಹೋಗಿದೆ, ಅವರ ಉದ್ಧಾರಕ್ಕಾಗಿ ಭಗವಂತ ಅವತಾರ ಮಾಡಿದರೆ, ಇಲ್ಲಿ ಸಾಕ್ಷಾತ್ ಭೂಮಿಯೇ ಇಳಿದು ಹೋಗಿದೆ, ಅದನ್ನೇ ಉದ್ಧರಿಸಬೇಕಾಗಿದೆ.

ಸ್ವಯಂಭುಮನುವಿಗೆ ಬ್ರಹ್ಮದೇವ ಆದೇಶ ಮಾಡುತ್ತಾನೆ. ಶತರೂಪೆಯೆಂಬ ನಿನ್ನ ಪತ್ನಿಯ ಜೊತೆಗೂಡಿ ಸೃಷ್ಟಿಕಾರ್ಯದಲ್ಲಿ ತೊಡಗು ಅಂತ. ಆಗ ಮನು ಕೇಳುತ್ತಾನೆ ಎಲ್ಲಿ ಮಾಡುವುದು? ಅಂತ, ಬ್ರಹ್ಮದೇವರು ಭೂಮಿಯಲ್ಲಿ ಎಂದು ಹೇಳುತ್ತಾರೆ. ಆಗ ಮತ್ತೆ ಪ್ರಶ್ನೆ ಮನುವಿನದ್ದು, ಭೂಮಿ ಎಲ್ಲಿದೆ? ಅದು ರಸಾತಳದಲ್ಲೆಲ್ಲೋ ಇಳಿದು ಹೋಗಿದೆ. ಆಗ ಬ್ರಹ್ಮದೇವರ ಚಿಂತನೆ ಪ್ರಾರಂಭವಾಗುತ್ತದೆ. ಯಾರಪ್ಪಾ ಭೂಮಿಯನ್ನು ಅಲ್ಲಿಂದ ಎತ್ತುವುದು ಅಂತ, ಆಗಲೇ ವರಾಹರೂಪಿ ಅವನಿಂದ ಹೊರಬಂದಿದ್ದು. ಹೀಗಾಗಿ ಈ ಅವತಾರಕ್ಕೆ ಇದೇ ಮುನ್ನುಡಿಯಾಗುತ್ತೆ. ಇದು ಕೇವಲ ಭೂಮಿಯ ಉದ್ಧರಣಕ್ಕಾಗಿ ಮಾತ್ರವೇ ಅಲ್ಲದೇ ಭೂಮಿಯಲ್ಲಿನ ಜೀವಿಗಳ ಉದ್ಧಾರಕ್ಕಾಗಿಯೂ ಆಗಿದೆ.

ನಮಗೆಲ್ಲ ಗೊತ್ತಿರುವಂತೆ ಜಯವಿಜಯರು ವಿಷ್ಣುವಿನ ದ್ವಾರಪಾಲಕರು, ವೈಕುಂಠವಾಸಿಗಳು, ವೈಕುಂಠ ಅನ್ನುವ ಶಬ್ಧಕ್ಕೆ ತಡೆಯಿಲ್ಲದ್ದು ಅಂತ ಅರ್ಥ. ಕುಂಠ ಅಂದರೆ ತಡೆ, ನಡೆಯಲು ಆಗದು ಅಂತ. ಅಲ್ಲಿಗೆ ಯಾರೋ ಮಹಾತ್ಮರು, ಅಲ್ಲಿಗೆ ಸಲ್ಲುವವರು, ಸನಕಾದಿ ಋಷಿಗಳು ದರ್ಶನಕ್ಕೆ ಬಂದಾಗ, ತಮ್ಮ ಹುದ್ದೆಯ ದರ್ಪವನ್ನು ತೋರಿಸಿ ಅವರನ್ನು ತಡೆದು ನಿಲ್ಲಿಸಿ ಶಾಪ ತೆಗೆದುಕೊಂಡರು. ಮತ್ತೇನಿಲ್ಲ, ಶಾಪವೆಂದರೆ ನೀವು ಇಲ್ಲಿರಲು ಯೋಗ್ಯರಲ್ಲ, ನೀವು ದೇವರಿಗೂ ಭಕ್ತರಿಗೂ ದ್ವಾರಬೇಕಾಗಿದ್ದವರು ಗೋಡೆಯಾಗಿದ್ದೀರಿ. ಹಾಗಾಗಿ ನೀವು ಕೆಳಗೆ ಹೋಗಿ ಅಂತ ಶಾಪ ಕೊಟ್ಟರು, ಭಗವಂತ ಸಮಾಧಾನ ಮಾಡಿದ, ನೀವು ನನ್ನ ಸೇವಕರು ಹಾಗಾಗಿ ನಿಮ್ಮನ್ನು ಬಿಟ್ಟು ಕೊಡಲಾರೆ, ಆದರೆ ಮಹಾತ್ಮರ ಶಾಪ ಅವಶ್ಯ ಅನುಭವಿಸಬೇಕು, ಆದರೆ ನಾನು ಅದಕ್ಕೆ ವ್ಯವಸ್ಥೆ ಮಾಡಿಕೊಡುತ್ತೇನೆ. ಅದನ್ನು ಅನುಭವಿಸಿ ತಿರುಗಿ ಬನ್ನಿ ಎಂದ, ಎರಡು ಅವಕಾಶಗಳನ್ನು ಕೊಡುತ್ತೇನಿ ನಿಮಗೆ, ಒಂದೋ ೭ ಜನ್ಮಗಳಲ್ಲಿ ಭಕ್ತರಾಗಿ ಹುಟ್ಟಿ ಬಂದು ಮರಳಿ ನನ್ನನ್ನು ಸೇರಿರಿ ಅಥವಾ ೩ ಜನ್ಮಗಳಲ್ಲಿ ಶತ್ರುಗಳಾಗಿ ಹುಟ್ಟಿ ಮರಳಿ ಬಂದು ನನ್ನನ್ನು ಸೇರಿರಿ ಅಂತ. ಬಹಳ ಸೂಕ್ಷ್ಮ ಇದೆ ಇಲ್ಲಿ, ೩ ಜನ್ಮಗಳ ಅವಕಾಶವಾದರೆ ಬೇಗ ಬರಬಹುದು ಆದರೆ ಭಗವಂತನಿಗೇ ಶತ್ರುಗಳಾಗಿರಬೇಕು, ೭ ಜನ್ಮಗಳು ಹೆಚ್ಚಾದರೂ ಭಗವಂತ ಜೊತೆಯಲ್ಲಿರುತ್ತಾನೆ. ಜಯವಿಜಯರು ೩ ಜನ್ಮವನ್ನೇ ಆರಿಸಿಕೊಂಡರು ಬೇಗನೇ ಬರುವ ಉದ್ದೇಶದಿಂದ, ಅವರಿಗೆ ಇಲ್ಲಿನ ಅಧಿಕಾರ ಮುಖ್ಯವಾಗಿತ್ತು, ಭಗವಂತನ ಜೊತೆಯಲ್ಲ. ಹಾಗಾಗಿ ಭಗವಂತನ ವೈರವನ್ನು ಆರಿಸಿಕೊಂಡರು.

ಕುಲಶೇಖರ ಆಳ್ವಾರರು ಹೇಳಿರುವಂತೆ ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ನರಕದಲ್ಲಾದರೂ ದೇವಲೋಕದಲ್ಲಾದರೂ ಇರಿಸು; ಒಂದೇ ಅಪೇಕ್ಷೆ ನಿನ್ನ ಸ್ಮರಣೆ ಮರೆಯದಂತೆ ನೋಡಿಕೋ. ಅದೊಂದು ಇದ್ದರೆ ಅಲ್ಲೆ ವೈಕುಂಠದಲ್ಲೇ ಇದ್ದಂತೆ. ಹೀಗೆ ಒಬ್ಬ ಮನುಷ್ಯಮಾತ್ರರಿಗೆ ಬಂದ ಮನಸ್ಸು ಜಯವಿಜಯರಿಗೆ ಬರಲಿಲ್ಲ. ಇಲ್ಲಿ ಪದವಿ ಮುಖ್ಯವಾಗಿತ್ತು, ಹಾಗಾಗಿ ಮೊದಲ ಜನ್ಮವೇ ಹಿರಣ್ಯಕಶಿಪು ಹಿರಣ್ಯಾಕ್ಷರದ್ದು. ಇಬ್ಬರನ್ನು ಒಟ್ಟಿಗೇ ಉದ್ಧರಿಸಲು ಸಾಧ್ಯವಿಲ್ಲ, ಎರಡೂ ಜನಗಳಿಗೆ ಬೇರೆ ಬೇರೆ ಅವತಾರ ಎತ್ತಿದ ಭಗವಂತ, ಮೊದಲಿಗೆ ಹಿರಣ್ಯಾಕ್ಷನನ್ನು ಉದ್ಧರಿಸಲು ಈ ಅವತಾರ.
ಅವಳಿ ಮಕ್ಕಳು ಜನಿಸುವಾಗ ಮೊದಲು ಅಂಕುರಿಸಿದ್ದು ಒಳಗೆ ನಂತರದ್ದು ಹೊರಗಿರುತ್ತದೆ. ಹೀಗಾಗಿ ನಂತರ ಅಂಕುರಿಸಿದ ಗರ್ಭ ಮೊದಲು ಹುಟ್ಟುತ್ತೆ ಹಾಗಾಗಿ ಮೊದಲು ಹುಟ್ಟಿದವರು ತಮ್ಮ, ನಂತರದವರು ಅಣ್ಣ ಹೀಗೆ ಲೆಕ್ಕಮಾಡಬೇಕು. ಹೀಗೆ ಮೊದಲು ಹುಟ್ಟಿದವನು ಹಿರಣ್ಯಾಕ್ಷ. ಇವನ ಉಪಟಳ ಅತಿಯಾಗಿ ಹೋಗಿತ್ತು, ಹಿರಣ್ಯಾಕ್ಷ ಅಂದರೆ ಬಂಗಾರದ ಕಣ್ಣುಳ್ಳವನು ಅಂತ, ಸಂತಸ ಪಡಲಿಕ್ಕೇನೂ ಇಲ್ಲ; ಇದರರ್ಥ ಕಾಮಾಲೆ ಕಣ್ಣುಳ್ಳವನು ಅಂತ, ಹೀಗಾದರೆ ದೃಷ್ಟಿಯೇ ಹಾಳಾದಂತೆ, ದೃಷ್ಟಿ ಹಾಳಾದರೆ ಸೃಷ್ಟಿಯೂ ಕೆಡುಕೇ ಅವನ ಪಾಲಿಗೆ. ಅಲ್ಲದೇ ಇನ್ನೊಂದು ಅರ್ಥವೂ ಇದೆ, ಅದು ಅವನಿಗೆ ಯಾವಾಗಲೂ ಬಂಗಾರದ ಮೇಲೆಯೇ ಕಣ್ಣು ಎಂದು. ಎಂಥಾ ಸ್ಥಿತಿ ಬಂದಿದೆ ನೋಡಿ. ಭಾವ, ಸಂಬಂಧ ಯಾವುದೂ ಮುಖ್ಯವಲ್ಲ ದುಡ್ಡು ಮಾತ್ರವೇ ಮುಖ್ಯ ಅಂತಾದರೆ ಯಾರಿಗೇ ಹೀಗಾದರೂ ಅವನು ಅಸುರನೇ ಆಗುತ್ತಾನೆ. ಬೇರೇನೂ ಕಾರಣ ಬೇಡ, ಅವನು ರಾಕ್ಷಸನಾಗಲಿಕ್ಕೆ. ಏಕೆಂದರೆ ಸನಕಾದಿಗಳು ಸುಮ್ಮನೇ ಶಾಪ ಕೊಟ್ಟಿಲ್ಲ, ನಿಮ್ಮಲ್ಲಿ ಬೇಕಾದಷ್ಟು ದೋಷಗಳು ತುಂಬಿವೆ ಅದನ್ನೆಲ್ಲಾ ಭೂಮಿಯಲ್ಲಿ ಹೋಗಿ ಶಮನ ಮಾಡಿ ಬನ್ನಿ ಅಂತ.

ಹಿರಣ್ಯಾಕ್ಷನ ಕೆಲಸವೇ ಎಲ್ಲರಿಗೂ ತೊಂದರೆ ನೀಡುವುದು. ಅಣ್ಣನಾದ ಹಿರಣ್ಯಕಶಿಪು ಆಗಲೇ ಅಧಿಪತಿಯಾಗಿದ್ದ. ಈ ಇಬ್ಬರ ಸಂಬಂಧವೂ ಚೆನ್ನಾಗಿತ್ತು, ಹಾಗಾಗಿ ಇವನ ನಿತ್ಯದ ಕೆಲಸವೇನೆಂದರೆ ಹೆಗಲಿಗೆ ಒಂದು ಗದೆಯನ್ನು ಹಾಕಿಕೊಂಡು ಸಿಕ್ಕಿದವರನ್ನು ಯುದ್ಧಕ್ಕೆ ಕರೆದು ಹಿಂಸಿಸುವುದೇ ಆಗಿತ್ತು, ಹೀಗಿರುವಾಗ ಒಂದು ದಿನ ವರುಣದೇವ ಇವನಿಗೆ ಎದುರಾಗುತ್ತಾನೆ. ಅವನನ್ನು ಯುದ್ಧಕ್ಕೆ ಆಹ್ವಾನಿಸಿದ. ನೀರು; ಅದು ಮೊದಲೇ ತಂಪು, ಅದಾಗಿ ಬಿಸಿಯಾಗಿದ್ದು ಇದೆಯೇ? ಯಾವಾಗ ಬೆಂಕಿಯ ಸಂಪರ್ಕ ಬರುತ್ತದೋ ಹಾಗೂ ಇರುತ್ತದೋ ಅಲ್ಲಿಯವರೆಗೆ ಮಾತ್ರವೇ ಅದು ಬಿಸಿ. ಹಾಗಾಗಿ ವರುಣದೇವನಿಗೂ ಯುದ್ಧಕ್ಕೂ ಸಂಬಂಧವಿಲ್ಲ. ಹಾಗೆಯೇ ಹೇಳುತ್ತಾನೆ ವರುಣದೇವ; ನೀನು ಅಪ್ರತಿಮ ಪರಾಕ್ರಮಿ, ನಾನು ನಿನ್ನೊಡನೆ ಕಾದಲು ಅರ್ಹನಲ್ಲ. ಹಾಗಾಗಿ ವೈಕುಂಠಕ್ಕೆ ಹೋಗು ಅಲ್ಲಿ ನಿನಗೆ ಯೋಗ್ಯ ಜೊತೆಗಾರನೊಬ್ಬ ಸಿಗುತ್ತಾನೆ ಅಂತ. ಅಲ್ಲಿ ವೈಕುಂಠಾಧಿಪತಿ ಹರಿಯಿದ್ದಾನೆ, ಅವನೇ ನಿನಗೆ ಸರಿ. ಅವನೊಡನೆ ಯುದ್ಧಮಾಡಿದರೆ ನಿನ್ನೆಲ್ಲಾ ಹಮ್ಮೂ ಇಳಿಯುತ್ತದೆ ಹಾಗೂ ನಿಮ್ಮಿಬ್ಬರಲ್ಲಿ ಯುದ್ಧ ನಡೆದದ್ದು ನಿಜವೇ ಆದರೆ ನಿನ್ನ ಜೊತೆಗೆ ಉಳಿಯುವುದು ಕೇವಲ ನಾಯಿನರಿಗಳು ಮಾತ್ರವೇ, ನೀನು ಶವವಾಗುತ್ತೀಯೆ ಅಂತ ಅವನ ಅಹಂಕಾರಕ್ಕೆ ತುಪ್ಪ ಹಾಕಿದ. ಸರಿ ಹಿರಣ್ಯಾಕ್ಷ ಹರಿಯನ್ನು ಹುಡುಕುತ್ತಾ ಹೊರಟ, ನಾರದರು ಹೇಳಿದರು ಶ್ರೀಹರಿ ವೈಕುಂಠದಲ್ಲಿಲ್ಲ, ಶ್ರೀಯನ್ನು ಮಾತ್ರವೇ ಅಲ್ಲಿಬಿಟ್ಟು ಅವನು ಹರಿದು ಹೋಗಿದ್ದಾನೆ ರಸಾತಲಕ್ಕೆ ಅಂತ.

ಆ ಸಮಯಕ್ಕೆ ಸರಿಯಾಗಿ ಬ್ರಹ್ಮದೇವನ ಮುಂದೆ ಪ್ರಕಟವಾದ ಆ ಶ್ವೇತವರಾಹರೂಪಿ, ಯಜ್ಞವರಾಹ ಸಮಸ್ತ ಪ್ರಪಂಚವನ್ನೂ ಓಂಕಾರ ನಾದದಿಂದ ತುಂಬುತ್ತಾ ಘರ್ಜಿಸುತ್ತಾ, ತನ್ನ ತೀಕ್ಷ್ಣವಾದ ಭೀಕರವಾದ ಕೋರೆದಾಡೆಗಳಿಂದ ಶೋಭಿತನಾಗಿ ನೀರಿನಲ್ಲಿ ಇಳಿದು ಆಗಿದೆ, ಬಾಣದಂತೆ ಹರಿತವಾಗಿರುವ ತನ್ನ ಗೊರಸುಗಳಿಂದ ನೀರನ್ನು ಸೀಳುತ್ತಾ ರಸಾತಲದಲ್ಲಿ ಭೂಮಿಯನ್ನು ಹುಡುಕುತ್ತಾ ಹೊರಟ, ಭೂಮಿ ಸಿಕ್ಕಿತು. ಅದರೆ ಆ ಹೊತ್ತಿಗಾಗಲೇ ಹಿರಣ್ಯಾಕ್ಷನ ಉಪಟಳಕ್ಕೆ ಸಿಲುಕಿ ಅದರ ಸತ್ವವೆಲ್ಲಾ ನಾಶವಾಗಿತ್ತು. ಅದರ ಧಾರಣ ಗುಣವೇ ಮರೆಯಾಗಿಬಿಟ್ಟಿತ್ತು. ಅಂತಹ ನಿಸ್ಸತ್ವ ಭೂಮಿಯನ್ನು ಕಂಡ ಭಗವಂತ. ತನ್ನ ಸ್ವರೂಪದ ಗುಣದಂತೆ ಭೂಮಿಯನ್ನು ಆಘ್ರಾಣಿಸಿದ, ಅದೇ ಘ್ರಾಣದಿಂದ ಹುಟ್ಟಿದವನು ಅವನು, ಪ್ರೀತಿಯ ದ್ಯೋತಕ ಅದು, ಅದು ತನ್ನ ಪ್ರೇಮವನ್ನು ವ್ಯಕ್ತಪಡಿಸಿದ ಬಗೆ. ಹಸುಗಳು ತಮ್ಮ ಕರುಗಳನ್ನು ಸಂತೈಸುವ ಪರಿಯಿದು. ಹಳೇ ಕಾಲದ ಪದ್ಧತಿ ಹೀಗೆ, ತಮಗೆ ನಮಸ್ಕಾರವನ್ನು ಮಾಡಿದವರನ್ನು ಹಿಡಿದೆತ್ತಿ ನೆತ್ತಿಯನ್ನು ಅಘ್ರಾಣಿಸುವುದು. ಅದರರ್ಥವೇನೆಂದರೆ ಪ್ರಾಣಕ್ಕೆ ಪ್ರಾಣವನ್ನು ಸೇರಿಸುವುದು. ಅಥವಾ ಹರಸುವಂಥದ್ದು. ಬಳಿಕ ತನ್ನ ಏಕಶೃಂಗದ ಮೇಲೆ ಭೂಮಿಯನ್ನು ಹಾಗೇ ಸುಂದರವಾಗಿಟ್ಟಕೊಂಡು ಹೊರಟ. ಭೂಮಿಯಂಥ ಭೂಮಿಯನ್ನು ಸರಳವಾಗಿ ಎತ್ತಿ ತನ್ನ ಶೃಂಗದ ಮೇಲಿಟ್ಟು ಹೊರಟ. ಶಂಕರರು ಇದನ್ನು ಹೇಗೆ ಹೋಲಿಸಿದ್ದಾರೆಂದರೆ, ತಾಳೆಪುಷ್ಪದ ಎಸಳಿನ ತುದಿಯಲ್ಲಿ ಕುಳಿತಿರುವ ದುಂಬಿಯಂತೆ ಕಾಣುತ್ತಿದೆ ಅಂತ. ಇಂತಹ ವರಾಹ ನಮಗೆ ಶುಭವನ್ನುಂಟುಮಾಡಲಿ ಅಂತ. ಅಲ್ಲಿಗೆ ಹೋಗಿ ಅವನನ್ನು ಭೇಟಿ ಮಾಡಿದ ಹಿರಣ್ಯಾಕ್ಷ. ವೈಕುಂಠದ ಪ್ರಭುವನ್ನು ರಸಾತಲದಲ್ಲಿ ಭೇಟಿ ಮಾಡುವುದೆಂದರೆ ಅದು ಅವನೇ ಆಗಬೇಕು, ಅವನ ಸಹಜ ಚಾರಣದ ಜಾಗಗಳು ಅವು; ಹಾಗಾಗಿ ಅವನನ್ನು ಉದ್ಧರಿಸಲು ಹರಿಯೇ ಅಲ್ಲಿಗೆ ಬಂದಿದ್ದ.

ಹರಿಯನ್ನು ನೋಡಿ ಭರ್ತ್ಸನೆ ಮಾಡಲು ಪ್ರಾರಂಭಿಸಿದ, ತಮಾಷೆ ಮಾಡತೊಡಗಿದ, ಅಯ್ಯೋ ಕಾಡುಪ್ರಾಣಿಯೇ ಅಂತ ಗಹಗಹಿಸಿ ನಗತೊಡಗಿದ, ವರಾಹ ಏನೂ ಪ್ರತಿಕ್ರಯಿಸಲಿಲ್ಲ. ಮತ್ತೆ ಹೇಳಿದ ಮಾಯಾರೂಪವನ್ನು ತಾಳಿದ ಹೇಡಿಯೇ ಅಂತ, ಆದರೆ ಏನೂ ಪ್ರತಿಕ್ರಿಯೆ ಕೊಡಲಿಲ್ಲ. ಆನೆ ನಡೆಯುವಾಗ ನಾಯಿ ಬೊಗಳಿದರೆ ಅದು ನಿಂತು ನಾಯಿಗೆ ಉತ್ತರಿಸಬೇಕೇ, ಹಾಗೆ. ಮುಂದುವರೆಸಿದ, ನನ್ನ ಗದಾದಂಡದ ಪ್ರಹಾರದಿಂದ ನಿನ್ನ ತಲೆ ಒಡೆದು ಬಿಡುತ್ತೇನೆ ಅಂತ, ಭೂಮಿ ನಡುಗುತ್ತಿದ್ದಾಳೆ, ಅವನ ಪ್ರಹಾರ ನನ್ನ ಮೇಲೆ ಆದರೆ ಏನು ಗತಿ ಅಂತ, ಆದರೆ ವರಾಹನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಭೂಮಿಯನ್ನು ಎತ್ತಿಕೊಂಡು ಯೋಗ್ಯಸ್ಥಳಕ್ಕೆ ತಲುಪಿಸುವವರೆಗೂ, ಅವನೇನು ಹೇಳಿದರೂ ಏನೂ ಪ್ರತಿಕ್ರಯಿಸದೇ ತನ್ನಷ್ಟಕ್ಕೇ ಉಳಿದ, ಭೂಮಿಯನ್ನು ಯೋಗ್ಯಸ್ಥಳಕ್ಕೆ ಸೇರಿಸಿದ. ಆಧುನಿಕ ವಿಜ್ಞಾನಿಗಳೂ ಕೂಡಾ ಭೂಮಿಯು ಹಿಂದೆ ತನ್ನ ಕಕ್ಷೆಯನ್ನು ಬಿಟ್ಟು ಸರಿದಿತ್ತು, ಪುನಃ ತನ್ನ ಕಕ್ಷೆಗೆ ಮರಳಿದೆ ಅಂತ ಹೇಳಿದ್ದಾರೆ. ವರಾಹನು ಭೂಮಿಯನ್ನು ಅದರ ಕಕ್ಷೆಗೆ ತಲುಪಿಸಿದ್ದು ಮಾತ್ರವಲ್ಲ ಅದಕ್ಕೆ ಧಾರಣಾ ಶಕ್ತಿಯನ್ನು ಪ್ರದಾನ ಮಾಡುತ್ತಾನೆ. ನಿನ್ನೆ ಹೇಳಿದಂತೆ ಭಗವಂತನು ಮೂಲಾಧಾರ. ನಮಗೆ ನಾವು ಅನಾಥರು ಅನ್ನಿಸಿದಾಗ, ನಮಗೆ ಯಾರೂ ಇಲ್ಲ ಅನ್ನಿಸಿದಾಗ ನಿರಾಧಾರರು ಅನ್ನಿಸಿದಾಗ ಯಾರದೂ ಅವಲಂಬನ ಇಲ್ಲ ಎನ್ನಿಸಿದಾಗ ನೀನೇ ಆಧಾರ ಅಂತ ಭಗವಂತನಲ್ಲಿ ಶರನಣಾಗಬೇಕು. ಅದು ಎಷ್ಟು ಬೇಗ ಅನ್ನಿಸಿದರೆ ಒಳ್ಳೆಯದು.

ಇದು ಆದಮೇಲೆ ಹಿರಣ್ಯಾಕ್ಷನೆಡೆಗೆ ತಿರುಗಿ ಅವನದ್ದೇ ಭಾಷೆಯಲ್ಲಿ ಉತ್ತರಿಸತೊಡಗಿದ, ಪರಿಹಾಸ ಮಾಡಿ. ಇದನ್ನು ಕೇಳಿದ ಹಿರಣ್ಯಾಕ್ಷನಿಗೆ ಸಿಟ್ಟು ಬರತೊಡಗಿತು. ಇಂತಹವರು ಇರುತ್ತಾರೆ. ಅವರು ಯಾರಿಗೆ ಏನು ಬೇಕಾದರೂ ಹೇಳಬಹುದು, ಆದರೆ ಅವರಿಗೆ ಯಾರೂ ಏನೂ ಹೇಳುವಂತಿಲ್ಲ, ಅವರು ಬೇರೆಯವರಿಗೆ ತಮಾಷೆ ಮಾಡಬಹುದು, ಆದರೆ ಅವರಿಗೆ ಯಾರೂ ತಮಾಷೆ ಮಾಡಬಾರದು; ಇಂತಹ ಒಂದು ಜಾತಿಯವರನ್ನು ನಾವು ನೋಡುತ್ತಿರುತ್ತೇವೆ. ಹಿರಣ್ಯಾಕ್ಷ ವರಾಹನ ಎದೆಯ ಮೇಲೆ ಪ್ರಹಾರಮಾಡುತ್ತಾನೆ. ಪೆಟ್ಟಿನ ಆಟ ಅದು, ಅವನಿಗೆ ಎಲ್ಲಿ ಸಾಟಿ ಇವನು. ಒಂದಷ್ಟು ಹೊತ್ತು ಆಟ ನಡೆಯಿತು ಹಿರಣ್ಯಾಕ್ಷನದ್ದು, ವರಾಹಮೂರ್ತಿಯೂ ಅದನ್ನು ತಮಾಷೆಯಾಗಿಯೇ ಸ್ವೀಕರಿಸಿದ್ದ. ಬೆಕ್ಕು ಇಲಿ ಜಗಳ ಅಂತೀವಲ್ಲ ಹಾಗೆ. ಬೆಕ್ಕಿಗೆ ಇಲಿ ಲೆಕ್ಕವೇ? ಆದರೂ ಅದು ಸ್ವಲ್ಪಕಾಲ ಅದನ್ನು ಆನಂದಿಸುತ್ತಿರುತ್ತೆ. ಅಷ್ಟರಲ್ಲಿ ಬ್ರಹ್ಮದೇವರ ಆಗಮನವಾಯಿತು. ವರಾಹಮೂರ್ತಿಯನ್ನು ಕುರಿತು ಬ್ರಹ್ಮದೇವರು ಹೇಳಿದರು, ನಾನೇ ಇವನಿಗೆ ವರ ಕೊಟ್ಟಿದ್ದು ಅದೇ ವರಬಲದಿಂದ ಕೊಬ್ಬಿ ಇವನು ಬೇಡದ್ದೆಲ್ಲಾ ಮಾಡಿ ಮುಗಿಸಿದ್ದಾನೆ, ಇನ್ನು ಸಾಕು ಇವನ ಕಾಲ ಬಂದಿದೆ. ಅಭಿಜಿನ್ ಮುಹೂರ್ತ, ಇವನನ್ನು ಸಂಹಾರ ಮಾಡು ಎಂದ. ಹೀಗಾಗುತ್ತದೆ ನೋಡಿ, ಕೊಟ್ಟ ವರವನ್ನು ಕೆಟ್ಟದಕ್ಕಾಗಿ ಬಳಸಿದರೆ ಸೃಷ್ಟಿಕರ್ತನೂ ಸಂಹಾರದ ಕುರಿತು ಚಿಂತನೆ ಮಾಡುತ್ತಾನೆ. ಯಾಕೆಂದರೆ ಇವನನ್ನು ಬಿಟ್ಟರೆ ಸೃಷ್ಟಿಯನ್ನೇ ಸಂಹಾರಮಾಡಿಬಿಡುತ್ತಾನೆ ಅಂತ. ಆಯಾ ಕಾಲಕ್ಕೆ ಹೀಗೆ ಯಾರಾದರೂ ನೆನಪು ಮಾಡುತ್ತಾರೆ ಅಂತ. ರಾವಣ ಸಂಹಾರದ ಕಾಲಕ್ಕೂ ಹೀಗೇ ಆಯಿತು, ರಾಮನಿಗೆ ದೇವತೆಗಳು ನೆನಪು ಮಡುತ್ತಾರೆ, ಸಾರಥಿಯಾದ ಮಾತಲಿ ನೆನಪುಮಾಡುತ್ತಾನೆ. ಇದವನ ಮುಹೂರ್ತ, ನೀನ್ಯಾಕೆ ಗೊತ್ತಿಲ್ಲದವನಂತೆ ಮಾಡುತ್ತೀಯೆ? ಇದೇ ಮುಹೂರ್ತ ಅವನ ವಧೆ ನೆರವೇರಲಿ ಅಂತ. ಆಗ ಅಗಸ್ತ್ಯರಿಂದ ಬಂದ ಬ್ರಹ್ಮದತ್ತವಾದ ಬಾಣವನ್ನು ತೆಗೆದು ಪ್ರಯೋಗ ಮಾಡಿದ, ಮೊದಲೇ ತಿಳಿದಿಲ್ಲದಿದ್ದರೆ ಈಗ ಅದೇ ಬಾಣವನ್ನು ಹೇಗೆ ತೆಗೆಯಲು ಸಾಧ್ಯ? ಹೀಗೆ ಮಾಲೆ ಹಾಕುವುದಕ್ಕಾದರೂ, ಬಾಣಬಿಡಲೇ ಆದರೂ ಮುಹೂರ್ತ ಬರಬೇಕು. ಎರಡೂ ಎದೆಯನ್ನೇ ಅಲಂಕರಿಸಿದರೂ ಕಾಲ ಕೂಡಿಬರಬೇಕು.

ಸರಿ, ಈಗ ಇಲ್ಲಿ ವರಾಹಮೂರ್ತಿ ಸುದರ್ಶನವನ್ನು ನೆನಪು ಮಾಡುತ್ತಾನೆ. ಅದನ್ನು ಪ್ರಯೋಗಿಸಿ ಆ ಅಸುರನನ್ನು ಸಂಹಾರ ಮಾಡುತ್ತಾನೆ. ಒಟ್ಟು ಆದದ್ದು ಉದ್ಧಾರ, ಏನು ಉದ್ಧಾರ ಎಂದರೆ, ಭೂಮಿಯ ಉದ್ಧಾರ ಹಾಗೂ ಭೂಮಿಯ ಪೀಡಕನ ಉದ್ಧಾರ ಹೀಗೆ ಎರಡೂ ಆಯಿತು. ದುಷ್ಟಶಕ್ತಿ ಹಾಗೂ ಶಿಷ್ಟಶಕ್ತಿ ಎರಡರ ಉದ್ಧಾರ.

ದೇವರ ಮುಖ್ಯವಾದ ಕಾರ್ಯ ಯಾವುದು? ಬಹಳಷ್ಟಿದೆ. ಸೃಷ್ಟಿ, ಸ್ಥಿತಿ, ಪ್ರಳಯ; ಇಷ್ಟು ದೊಡ್ಡ ವ್ಯವಸ್ಥೆಯನ್ನು ಪಾಲಿಸುವುದು. ಇದೆಲ್ಲದಕ್ಕಿಂತ ಮುಖ್ಯವಾದ ಕಾರ್ಯ ಇದೆ ಅದು ಉದ್ಧರಣ. ಜೀವೋದ್ಧಾರ. ಜೀವಗಳು ಅಂದರೆ ಅವನ ಕಂದಗಳು, ಅವನದ್ದೇ ಜೀವಗಳು ತನ್ನ ನೆಲೆಯನ್ನು ಕಳೆದುಕೊಂಡು ಈ ೧೪ ಲೋಕಗಳಲ್ಲಿ ಎಲ್ಲೋ ಒಂದು ಕಡೆ ಬಿದ್ದಿರುತ್ತವೆ, ಅಥವಾ ಸುಲಭದಲ್ಲಿ ಹೇಳುವುದಾದರೆ ಸ್ವರ್ಗ, ಭೂಮಿ ಹಾಗೂ ಪಾತಾಳ ಈ ಮೂರರಲ್ಲಿ ಎಲ್ಲೋ ಒಂದು ಕಡೆ ಬಿದ್ದಿರುವವರನ್ನು ತಾನೇ ಬಂದು ಮೇಲಕ್ಕೆತ್ತುತ್ತಾನೆ. ಉದಾ: ಮಾರುಕಟ್ಟೆಯಲ್ಲಿ ಕಳೆದು ಹೋದ ಮಗುವನ್ನು ತಾಯಿಯು ಹುಡುಕುತ್ತಾ ಬಂದಂತೆ. ಅದೇ ಮೇಲೆತ್ತುವುದು ಅಂದರೆ, ಅದೇ ಉದ್ಧಾರ ಎಂದರೆ. ಈ ಅವತಾರ ಹಾಗೂ ಉದ್ಧಾರ ಎರಡೂ ಪ್ರತಿಸ್ಪಂದಿಗಳು. ಇಳಿದುಬರುವುದೇ ಉದ್ಧಾರದ ಸಲುವಾಗಿ. ಅದು ಕರುಣೆಯೇ, ಅವತಾರಕ್ಕೆ ಕರುಣೆಯೇ ಉದ್ದೇಶ. ಕರುಣೆ ಇಲ್ಲದಿದ್ದರೆ ಅವನು ಯಾಕೆ ಬರಬೇಕು? ಹಾಗಾಗಿ ಉದ್ಧಾರ ಅನ್ನುವುದೇ ಮುಖ್ಯವಾದ ಕಾರ್ಯ. ಯಾವುದೇ ಅವತಾರವಾದರೂ ಸರಿ ಭೂಭಾರಹರಣ ಇದ್ದೇ ಇದೆ ಅಲ್ಲಿ. ಭೂಮಿಯಲ್ಲಿ ಪಾಪಗಳೇ ತುಂಬಿಕೊಂಡಾಗ ಭೌತಿಕವಾಗಿಯಲ್ಲದಿದ್ದರೂ ಆದ್ಯಾತ್ಮಿಕವಾಗಿ ಭೂಮಿಯು ಕುಸಿಯುತ್ತದೆ. ಆಗ ಶ್ರೀರಾಮ ಒಬ್ಬ ಭೂಮಿಗೆ ಬಂದ, ಅಂದರೆ ಎಷ್ಟು ಜನರ ಉದ್ಧಾರವಾಯಿತು ಅವನ ಇಡೀ ಜೀವಮಾನದಲ್ಲಿ, ಈಗಲೂ ಅವನ ಸ್ಮರಣೆ ಕೀರ್ತನೆ, ಇತ್ಯಾದಿಗಳಿಂದ ಎಷ್ಟು ಜನ ಉದ್ಧಾರವಾಗುತ್ತಿಲ್ಲ.

ಹೀಗೆ ಅಖಂಡಕೋಟಿ ಬ್ರಹ್ಮಾಂಡ ನಾಯಕನಿಗೆ ಏನು ಕೆಲಸ ಅಂದರೆ ನಮ್ಮದೇ ಕೆಲಸ, ನಾವು ತಪ್ಪು ಮಾಡಿದಾಗ ಕಣ್ಣೊರೆಸಿ ಉದ್ಧಾರಮಾಡುವುದೇ ಕೆಲಸ. ಇದೇ ವರಾಹಾವತಾರದ ಪರಮ ತತ್ವ, ಇದನ್ನು ಅನುಸಂಧಾನ ಮಾಡೋಣ ಹಾಗೂ ಮುಂದಿನ ಅವತಾರಕ್ಕೆ ಹೋಗುತ್ತಾ ಇರೋಣ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box