“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 05: ಸಹವಾಸ

ಅವನೊಬ್ಬ ಬಹು ದೊಡ್ಡ ಕಳ್ಳ. ಜೀವನದಲ್ಲಿ ಅದೆಷ್ಟೋ ಕಳ್ಳತನಗಳನ್ನು, ಕೊಲೆ ಸುಲಿಗೆಗಳನ್ನು ಮಾಡಿದವನು. ಪರಧನಾಪಹಾರ ಪರಪ್ರಾಣಾಪಹಾರಗಳನ್ನು ತನ್ನ ಸಹಜಸ್ವಭಾವವನ್ನಾಗಿ ಮಾಡಿಕೊಂಡವನು. ಅವನನ್ನು ತಿದ್ದುವ ಆಸೆಯನ್ನು ಹೃದಯದಲ್ಲಿ ಹೊತ್ತಿದ್ದ ಸನ್ಮಿತ್ರನೊಬ್ಬ ಒಮ್ಮೆ ಅವನನ್ನು ಸಂಧಿಸಿದಾಗ ಹೇಳಿದ. “ಒಮ್ಮೆಲೆ ಬಹುದೊಡ್ಡ ಸಂಪತ್ತು ನಿನ್ನ ಕೈಸೇರುವಂತೆ ಮಾಡುತ್ತೇನೆ. ಆಗ ನಿನಗೆ ಆಗಾಗ ಕಳ್ಳತನ ಮಾಡುತ್ತಾ ಕಷ್ಟಪಡುವ ಪ್ರಸಂಗ ಇರುವುದಿಲ್ಲ. ಈ ಊರಿನ ಹೊರಗೆ ಇರುವ ಕಾಡಿನ ಪರಿಸರದಲ್ಲಿ ಒಂದು ಗುಹೆ ಇದೆ. ಆ ಗುಹೆಯಲ್ಲಿ ನೋಡಲು ದಟ್ಟದರಿದ್ರರಂತೆ ಕಾಣುವ ಕೆಲವು ಜನರು ವಾಸ ಮಾಡುತ್ತಾರೆ. ಆದರೆ ಅವರಲ್ಲಿ ಹುದುಗಿಸಿಟ್ಟ ಅಪಾರವಾದ ನಿಧಿ ಇದೆ. ಅದು ನಿನ್ನ ಕೈವಶವಾದರೆ ನಿನ್ನ ಜೀವನದ ಎಲ್ಲ ಕಷ್ಟಗಳೂ ಮುಗಿಯುತ್ತವೆ. ಈ ಜಗತ್ತಿನಲ್ಲಿ ಮತ್ತೆ ನೀನು ಪಡೆಯಬೇಕಾದುದೇನೂ ಉಳಿಯುವುದಿಲ್ಲ. ಆದರೆ ನೀನು ಪಡೆಯಬೇಕಾದರೆ ಅವರಿಗೆ ಸಂಶಯ ಬಾರದಂತೆ ವರ್ತಿಸಬೇಕು. ನಡೆ-ನುಡಿಯಲ್ಲಿ ಪೂರ್ಣವಾಗಿ ಅವರನ್ನೇ ಅನುಕರಿಸಿ ಅವರನ್ನು ನಂಬಿಸಿದರೆ ನಿನ್ನ ಕಾರ್ಯ ಕೈಗೂಡುವುದು ಶತಸಿದ್ಧ.”

ಮಿತ್ರನ ಮಾತನ್ನು ಕೇಳಿದ ಕಳ್ಳನ ಮನದಲ್ಲಿ ಆಸೆ ಚಿಗುರಿತು. ಒಮ್ಮೆಲೇ ಶ್ರೀಮಂತನಾಗುವ ಬಯಕೆ ಅವನನ್ನು ಆ ಗುಹೆಯ ಬಳಿಗೊಯ್ದಿತು. ಗುಹೆಯ ಒಳಗೆ ಪ್ರವೇಶಿಸಿದಾಗ ಅಲ್ಲಿ ಬೈರಾಗಿಗಳಂತೆ ಕಾಣುವ ಅನೇಕ ಜನರು ಅವನ ಕಣ್ಣಿಗೆ ಬಿದ್ದರು. ಅದು ನಿಜವಾಗಿಯೂ ಆತ್ಮಸಾಧನಾಪರವಶರಾಗಿದ್ದ ಯೋಗಿಗಳ ಗುಂಪಾಗಿತ್ತು. ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದ ಅವರ್ಯಾರೂ ಇವನನ್ನು ಅಷ್ಟಾಗಿ ಗಮನಿಸಲಿಲ್ಲ. ಕಳ್ಳ ಅವರ ನಡೆ ನುಡಿಗಳನ್ನು ಅನುಕರಿಸುತ್ತಾ ಅಲ್ಲೇ ವಾಸಮಾಡತೊಡಗಿದ. ಅವರೆಲ್ಲ ಬೆಳಗಿನ ಜಾವ ಬಹುಬೇಗನೆ ಏಳುತ್ತಿದ್ದರು. ಸಾತ್ವಿಕವಾದ ಅಹಾರವನ್ನೇ ಸೇವಿಸುತ್ತಿದ್ದರು. ಶಾಂತವಾಗಿ ವರ್ತಿಸುತ್ತಿದ್ದರು. ಕೆಲವರು ಜಪ ಮಾಡುತ್ತಿದ್ದರು. ಕೆಲವರು ಹೋಮಗೈಯ್ಯುತ್ತಿದ್ದರು. ಅವರ ಜೀವನಚರ್ಯೆಯನ್ನೇ ಅನುಕರಿಸುತ್ತಾ ಅವರ ಸಹವಾಸದಲ್ಲಿದ್ದ ಕಳ್ಳನ ಸ್ವಭಾವಗಳು ಮಾರ್ಪಟ್ಟವು. ಅವನ ತಾಮಸ ವ್ಯಕ್ತಿತ್ವ ಕಳೆದು ಸಾತ್ವಿಕಕಳೆ ಕಾಣಿಸಿಕೊಂಡಿತು. ತಾನೇಕೆ ಬಂದೆನೆಂಬುದನ್ನೇ ಮರೆತ ಆತ ಯೋಗಿಗಳಂತೆ ಧ್ಯಾನಮೌನಗಳಲ್ಲಿ ಮೈ ಮರೆತು ಒಂದು ದಿನ ದೇವರನ್ನು ಕಂಡ. ಆ ಕ್ಷಣದಲ್ಲಿ ಎಲ್ಲ ನೋವುಗಳು ಕಷ್ಟಗಳು ದೂರವಾದವು. ಮಿತ್ರ ಹೇಳಿದಂತೆ ಆ ಸನ್ನಿಧಿಯನ್ನು ಕಂಡಾಗ ಜಗತ್ತಿನ ಬೇರೆ ಯಾವ ನಿಧಿಯೂ ಬೇಕೆನಿಸಲಿಲ್ಲ. ಹೀಗೆ ದರೋಡೆಕೋರನೊಬ್ಬ ಪೂರ್ಣಕಾಮನಾದ ಜ್ಞಾನಿಯಾದ.

ಸಹವಾಸಕ್ಕೆ ಪರಿವರ್ತನೆ ಮಾಡುವ ಶಕ್ತಿಯಿದೆ. ಸಂಸ್ಕೃತದಲ್ಲಿ “ಭ್ರಮರಕೀಟನ್ಯಾಯ”ವೆಂಬ ನ್ಯಾಯವಿದೆ. ನಿರ್ಧಿಷ್ಟ ಭ್ರಮರವೊಂದು ಸಂತಾನೋತ್ಪತ್ತಿ ಮಾಡುವುದಿಲ್ಲವಂತೆ. ಅದರ ಬದಲು ಕೀಟದ ಮರಿಯೊಂದನ್ನು ಹಿಡಿದು ತಂದು ತನ್ನ ಗೂಡಿನಲ್ಲಿ ಕೂಡಿ ಹಾಕುತ್ತದೆಯಂತೆ. ಆಮೇಲೆ ಝೇಂಕಾರಗೈಯ್ಯುತ್ತಾ ನಿರಂತರವಾಗಿ ಅದರ ಸುತ್ತ ಸುತ್ತುತ್ತದೆ. ಅನವರತವಾಗಿ ಭ್ರಮರದ ಸ್ವರ ಕೇಳುತ್ತಾ ಅದನ್ನೇ ನೋಡುವ ಮರಿ ಕೀಟ ಕ್ರಮೇಣ ಸ್ವರೂಪ ಪರಿವರ್ತಿಸಿ ಭ್ರಮರವೇ ಆಗಿಬಿಡುತ್ತದೆ. ಹಾಗೆಯೇ ಮಹಾತ್ಮರ ಮಾತುಗಳನ್ನು ಕೇಳುತ್ತಾ ನಿತ್ಯ ಅವರ ಸನ್ನಿಧಿಯಲ್ಲಿದ್ದರೆ ನಮ್ಮಲ್ಲಿಯೂ ಪರಿವರ್ತನೆ ಸಾಧ್ಯವಿದೆ. ಶಂಕರಾಚಾರ್ಯರು ಹೇಳುತ್ತಾರೆ – “ಸಂಸಾರ ಸಮುದ್ರವನ್ನು ದಾಟಲು ಇರುವ ದೈವದತ್ತವಾದ ಏಕೈಕ ನೌಕೆಯೆಂದರೆ ಸತ್ಸಹವಾಸ”. ಬೇಡನಾಗಿ ಯಾರಿಗೂ ಬೇಡವಾಗಿದ್ದ ವಾಲ್ಮೀಕಿ ಸಪ್ತರ್ಷಿಗಳ ಸಹವಾಸದಿಂದ ಮಹಾಮುನಿಯಾದ.

ಸಗಣಿಯವನೊಡನೆ ಸರಸಕ್ಕಿಂತ ಗಂಧದವನೊಡನೆ ಗುದ್ದಾಟ ಲೇಸು. ಸಗಣಿಯವನೊಡನೆ ಸರಸವಾಡಿದರೆ ನಮ್ಮ ಮೈ ದುರ್ಗಂಧಿತವಾಗುವುದು. ಗಂಧದವನೊಡನೆ ಗುದ್ದಾಡಿದರೆ ಮೈ ಸುಗಂಧಿತವಾಗುವುದು.
ವಿಷಯವಾಸನೆಯ ಪಾಮರರ ಸಂಗವನ್ನು ಬಿಟ್ಟು ಆತ್ಮಗಂಧದ ಸತ್ಪುರುಷರ ಸಹವಾಸದಲ್ಲಿ ಜೀವನವನ್ನು ಸುಗಂಧಿತಗೊಳಿಸಿಕೊಳ್ಳೋಣ.

~*~

Facebook Comments Box