LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಜ್ಯೋತಿ 06: “ಹಿಂಸೆಯ ಮೂಲ”

Author: ; Published On: ಶನಿವಾರ, ನವೆಂಬರ 21st, 2015;

Switch to language: ಕನ್ನಡ | English | हिंदी         Shortlink:

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 06: ಹಿಂಸೆಯ ಮೂಲ

ರಾಮಾಯಣದಲ್ಲಿ ಬರುವ ಕಥೆಯಿದು.
ದಂಡಕಾರಣ್ಯದಲ್ಲಿ ಮುನಿಯೊಬ್ಬ ಗಹನವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ತಪಸ್ಸು ತೀವ್ರವಾದಂತೆ ಇಂದ್ರನಿಗೆ ಭಯವುಂಟಾಯಿತು. ತಪಸ್ಸಿನ ಫಲವಾಗಿ ಎಲ್ಲಿಯಾದರೂ ಇಂದ್ರಪದವಿಯನ್ನೇ ಕೇಳಿದರೇ ಎನ್ನುವ ಶಂಕೆ ಇಂದ್ರನನ್ನಾವರಿಸಿತು. ಅವನ ತಪೋಭಂಗ ಮಾಡಲು ಅಪ್ಸರೆಯರಿಂದ ಸಾಧ್ಯವಿರಲಿಲ್ಲ. ಅದಕ್ಕಾಗಿ ಇಂದ್ರ ಹೊಸ ಹೂಟವೊಂದನ್ನು ಹೂಡಿದ.
ಸಾಮಾನ್ಯ ಕ್ಷತ್ರಿಯನ ವೇಷದಲ್ಲಿ ಮುನಿಯ ಆಶ್ರಮವನ್ನು ಪ್ರವೇಶಿಸಿದ.
ಮುನಿಯನ್ನು ಸಮೀಪಿಸಿ ಖಡ್ಗವೊಂದನ್ನು ಅವನ ಮುಂದಿಟ್ಟು ವಂದಿಸಿ ಹೇಳಿದ – “ಮುನಿವರ್ಯ, ಕಾರ್ಯನಿಮಿತ್ತ ಬೇರೆಲ್ಲಿಯೋ ಹೊರಟಿದ್ದೇನೆ. ನನ್ನ ಈ ಖಡ್ಗವನ್ನು ನ್ಯಾಸವಾಗಿ ನಿಮ್ಮಲ್ಲಿ ಇಡುತ್ತೇನೆ. ನಾನು ಹಿಂದಿರುಗಿ ಬರುವವರೆಗೂ ಇದನ್ನು ರಕ್ಷಿಸಿ ಕೊಡಬೇಕು.” ಮುನಿ ಇಂದ್ರನ ಪ್ರಾರ್ಥನೆಯನ್ನು ಅಂಗೀಕರಿಸಿ ಖಡ್ಗವನ್ನು ಸ್ವೀಕರಿಸಿದ.
ಅದನ್ನು ಜೋಪಾನವಾಗಿ ರಕ್ಷಿಸುವ ಉದ್ದೇಶದಿಂದ ಬಳಿಯಲ್ಲಿಯೇ ಇರಿಸಿಕೊಳ್ಳತೊಡಗಿದ.
ಸ್ನಾನ ಮಾಡುವಾಗ, ಧ್ಯಾನ ಮಾಡುವಾಗ, ಭೋಜನ ಮಾಡುವಾಗ, ಹೀಗೆ ಸದಾ ಕಾಲವೂ ಖಡ್ಗವು ಅವನ ಜೊತೆಯಲ್ಲಿಯೇ ಇರುತ್ತಿತ್ತು.

ಹೀಗಿರಲು ಒಂದು ದಿನ ಆಕಸ್ಮಿಕವಾಗಿ ಖಡ್ಗದ ಹರಿತವಾದ ಅಲುಗು ತಗುಲಿ ಗಿಡದ ಗೆಲ್ಲೊಂದು ಕತ್ತರಿಸಿತು. ಮುನಿಯ ಮನಸ್ಸು ಭ್ರಮಿಸಿತು.
ಮನದಲ್ಲಿ ಹಿಂಸೆಯ ಅಭಿರುಚಿ ಅಂಕುರಿಸಿತು. ಅಂದಿನಿಂದ ಆಗಾಗ ಗಿಡಮರಗಳನ್ನು ಕತ್ತರಿಸಿ ಸಂತೋಷಪಡಲಾರಂಭಿಸಿದ.
ಸಸ್ಯ ಹಿಂಸೆಯಿಂದ ಆರಂಭವಾದ ಅವನ ಹಿಂಸಾ ಪ್ರವೃತ್ತಿ ಕ್ರಮೇಣ ಪ್ರಾಣಿ ಹಿಂಸೆಗೂ ವಿಸ್ತರಿಸಿತು.
ನಿಷ್ಕರುಣವಾದ ದಾರುಣ ಪ್ರಾಣಿಹಿಂಸೆಯಿಂದ ಮುನಿಯ ತಪಸ್ಸು ಕ್ಷಯಿಸಿತು. ಪಾಪ ವೃದ್ಧಿಸಿತು.
ಕೊನೆಗೆ ಇಂದ್ರ ಪದವಿಯನ್ನೇರಬೇಕಾದ ಮುನಿ ಆ ಖಡ್ಗದ ಸಹವಾಸದಿಂದ ನರಕವನ್ನು ಸೇರಿದ.
ಹಿಂಸಾಪ್ರವೃತ್ತಿ ಮುನಿಯ ಮನಸ್ಸಿನಲ್ಲಿ ಸುಪ್ತವಾಗಿತ್ತು. ಮನಸ್ಸಿನ ಮಾನಸಕಣಜದಲ್ಲಿ ಹಿಂಸೆಯ ವಿಷಬೀಜಗಳು ಹುದುಗಿತ್ತು. ಇಂದ್ರನ ಖಡ್ಗ ಅದನ್ನು ಪ್ರಕಟಪಡಿಸಿತಷ್ಟೆ.

ಬೀಜಗಳು ಕಣಜದಲ್ಲಿರುವಾಗ ಸುಪ್ತವಾಗಿರುತ್ತವೆ. ಆದರೆ ಮಣ್ಣು-ನೀರು-ಗಾಳಿ-ಬೆಳಕುಗಳು ಸಿಕ್ಕಿದರೆ ಚಿಗುರಿ ಮೊಳಕೆಯೊಡೆಯುತ್ತವೆ.
ಕೃತಯುಗದಲ್ಲಿ ರಾಕ್ಷಸರ ವಾಸ ಕಾಡಿನಲ್ಲಿತ್ತು.
ತ್ರೇತಾಯುಗದಲ್ಲಿ ನಾಡುಗಳು ರಾಕ್ಷಸರ ಬೀಡುಗಳಾದವು.
ದ್ವಾಪರ ಯುಗದಲ್ಲಿ ರಾಕ್ಷಸರು ಮನೆ-ಮನೆಗಳಲ್ಲಿ ಕಾಣಿಸಿಕೊಂಡರು.
ಇಂದು ಕಲಿಯುಗದಲ್ಲಿ ರಾಕ್ಷಸರು ಮನ-ಮನಗಳಲ್ಲಿ ನೆಲೆಸಿದ್ದಾರೆ.
ಇಂದು ಮಾನವನ ಮನ ಹಿಂಸೆಯ ಕ್ರೂರ ಮೃಗಗಳ ಸಂಚಾರದ ವನವಾಗಿದೆ.
ಮನದ ರಾಕ್ಷಸರು ವಿಜೃಂಭಿಸುವಾಗ ಮನುಷ್ಯ ರಾಕ್ಷಸನಾಗುತ್ತಾನೆ. ಸಮಾಜದ ನೆಮ್ಮದಿಯನ್ನು ಕದಡುತ್ತಾನೆ. ಸರಕಾರ-ನ್ಯಾಯಸ್ಥಾನ-ಆರಕ್ಷಕರುಗಳು ಹಿಂಸೆಯ ಬಹಿರಂಗಸ್ವರೂಪವನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ. ಆದರೆ ಹಿಂಸೆಯ ಮೂಲ ಇರುವುದು ಮನಸ್ಸಿನಲ್ಲಿ.

ಮಾನವನ ಮನವನ್ನು ತಿದ್ದುವ ಕಾರ್ಯವನ್ನು ಗುರು ಮಾಡುತ್ತಾನೆ. ಹಿಂಸೆಯ ಮೂಲವನ್ನೇ ಕಿತ್ತೊಗೆಯುತ್ತಾನೆ.

ಶಂಕರಾಚಾರ್ಯರು ಶಿವನನ್ನು ಪ್ರಾರ್ಥಿಸುತ್ತಾರೆ. “ಹೇ ಶಿವನೇ! ನನ್ನ ಮನದಲ್ಲಿಯೇ ವಾಸ ಮಾಡು. ನೀನು ಆದಿ ಕಿರಾತನಲ್ಲವೇ? ನನ್ನ ಮನ ‘ಹಿಂಸೆಯ’ ಕ್ರೂರ ಮೃಗಗಳು ಸಂಚರಿಸುವ ವನವಾಗಿದೆ. ಅವುಗಳನ್ನು ಸಂಹರಿಸಿ ನೀನು ನಿಜಕ್ಕೂ ಬೇಟೆಯ ವಿನೋದವನ್ನು ಪಡೆಯಬಹುದು.”

ಶಂಕರರ ಈ ಪ್ರಾರ್ಥನೆ ಇಂದಿಗೂ ಪ್ರಸ್ತುತವಲ್ಲವೇ?

~*~

3 Responses to ಧರ್ಮಜ್ಯೋತಿ 06: “ಹಿಂಸೆಯ ಮೂಲ”

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…
  “ನಾ ಜಗದೊಳಗೋ… ಜಗವೇ ನನ್ನೊಳಗೋ…” ಎಂಬಂತೆ ಜಗತ್ತಿನಲ್ಲಿ ಏನೇನು ಕಾಣುತ್ತೇವೋ ಅದೆಲ್ಲವೂ ನಮ್ಮೊಳಗೆ ‘ಸುಪ್ತವಾಗಿ ಅಥವಾ ವ್ಯಕ್ತವಾಗಿ’ ಇದ್ದೇ ಇದೆ. ಕ್ಷಣ ಕ್ಷಣವೂ ಬೇಟೆಯಾಡು ಸದ್ಗುರುವೇ… ಸತ್ಪಥದಲಿ ಮುನ್ನಡೆಸು…

  [Reply]

 2. mallayya

  hareraama
  ಮಲ್ಲಯ್ಯ

  [Reply]

 3. Lalitalaxmi Bhat

  ಹರೇರಾಮ..
  “ಭಗವನ್ ! ಕಿಮುಪಾದೇಯಂ?
  ಗುರುವಚನಂ |ಕಿಮಕಾರ್ಯಂ? ಹೇಯಮಪಿಚ |
  ಕೋ ಗುರುರಧಿಗತ ತತ್ತ್ವ:?
  ಶಿಷ್ಯಹಿತಾಯೋದ್ಯತ: ಸತತಂ||
  “ಭಗವಂತ ! ಯಾವುದು ಅನುಸರಿಸಬೇಕಾದ ಮಾತು?- ಗುರುವಿನ ನುಡಿ. ಬಿಡಬೇಕಾದುದಾವುದು?- ಕೆಟ್ಟ ಕೆಲಸ. ಯಾರು ಗುರು ?- ಚೆನ್ನಾಗಿ ತತ್ತ್ವವನ್ನು ತಿಳಿದವನೂ, ಸದಾಕಾಲ ಶಿಷ್ಯರ ಹಿತವನ್ನೇ ಬಯಸುವವನೂ ಆದವನು”
  ಇವು ಅನುಭಾವಿಕರ ನುಡಿಗಳು. ಸುದೈವವಶಾತ್ ದೊರೆತ ಅಂಥ ಗುರು ರಾಘವೇಶ್ವರರ ಸಿರಿಚರಣಕೆರಗಿ, ಒಂದಾಗಿ ಅನುಸರಿಸಿ, ಭಾಗ್ಯಶಾಲಿಗಳಾಗೋಣ. ಗುರುಕರುಣೆ ಜಗ ಪೊರೆಯಲಿ…ಹರೇರಾಮ||

  [Reply]

Leave a Reply

Highslide for Wordpress Plugin