LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಜ್ಯೋತಿ 08: “ದೆವ್ವದೊಡನೆ ಸಂಸಾರ”

Author: ; Published On: ಶನಿವಾರ, ನವೆಂಬರ 28th, 2015;

Switch to language: ಕನ್ನಡ | English | हिंदी         Shortlink:

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 08: ದೆವ್ವದೊಡನೆ ಸಂಸಾರ

ಅವನೊಬ್ಬ ನವಾಬ. ಯಾವ ಕೊರತೆಗಳೂ ಇಲ್ಲದ ಸಮೃದ್ಧ ಜೀವನ ಅವನದು. ಅಧಿಕಾರವಿತ್ತು, ಐಶ್ವರ್ಯವಿತ್ತು, ಆಳು ಕಾಳುಗಳಿದ್ದವು. ಜೀವನ ಸುಖದಿಂದ ಸಾಗಿತ್ತು. ಹೀಗಿರಲು ಒಂದು ದಿನ ಉದ್ಯಾನವನವೊಂದರಲ್ಲಿ ವಿಹರಿಸುತ್ತಿದ್ದಾಗ ಸ್ಫುರದ್ರೂಪಿಯಾದ ಯುವತಿಯೊಬ್ಬಳು ಆತನೆದುರಲ್ಲಿ ಕಾಣಿಸಿಕೊಂಡಳು. ಅಚ್ಚರಿಗೊಂಡ ನವಾಬನನ್ನು ಮತ್ತಷ್ಟು ಅಚ್ಚರಿಪಡಿಸುತ್ತಾ ಪರಿಣಯದ ಬೇಡಿಕೆಯನ್ನಿತ್ತಳು. ನವಾಬ ಹೇಳಿದ. ” ನನಗೊಬ್ಬರು ಗುರುಗಳಿದ್ದಾರೆ. ಅವರು ಸಮ್ಮತಿಸಿದರೆ ನಿನ್ನ ಕೈ ಹಿಡಿಯುವೆ.” ನವಾಬನ ಮನಸ್ಸು ಆಕೆಯಲ್ಲಿ ನೆಟ್ಟಿತ್ತು. ಗುರುಗಳಲ್ಲಿ ನಡೆದ ಘಟನೆಗಳನ್ನು ನಿವೇದಿಸಿಕೊಂಡ. ಗುರುಗಳು ವಿವಾಹಕ್ಕೆ ಸಮ್ಮತಿಸಲಿಲ್ಲ. ಆದರೆ, ನವಾಬನ ಮನಸ್ಸಿನಲ್ಲಿ ಅಂಕುರಿಸಿದ ಆಸೆಯ ಸಸಿ ಹೆಮ್ಮರವಾಗಿ ಬೆಳೆಯುತ್ತಿತ್ತು. ಗುರುಗಳನ್ನು ಸಮ್ಮತಿಗಾಗಿ ಒತ್ತಾಯಿಸಿದ. ಕೊನೆಗೆ ಅವನ ಒತ್ತಾಯಕ್ಕೆ ಮಣಿದು ವಿವಾಹಕ್ಕೆ ಸಮ್ಮತಿಯನ್ನಿತ್ತ ಗುರುಗಳು, ನವಾಬನ ಕೈಗೆ ‘ರಕ್ಷಾಸೂತ್ರ’ವೊಂದನ್ನು ಕಟ್ಟುತ್ತಾ ಹೇಳಿದರು. “ನಿರಂತರವಾಗಿ ನಿನ್ನನ್ನು ರಕ್ಷಿಸುವ ಈ ರಕ್ಷಾಸೂತ್ರವನ್ನು ಎಂದಿಗೂ ಬಿಚ್ಚದಿರು”. ನವಾಬ ತಲೆಯಾಡಿಸಿದ. ವಿವಾಹ ಸಂಭ್ರಮದಿಂದ ನೆರವೇರಿತು. ಅನೇಕ ವರ್ಷಗಳ ಕಾಲ ಸಂಸಾರ ಸಾಗಿತು. ತನ್ನ ಪರಿಪರಿಯಾದ ಸೇವೆಯಿಂದ ಹೆಂಡತಿ ನವಾಬನ ಮನಗೆದ್ದಳು.

ಒಂದು ದಿನ ಏಕಾಂತದಲ್ಲಿ ಪ್ರೇಮಭರಿತವಾದ ಮಾತುಕತೆಗಳ ನಡುವೆ ನವಾಬನನ್ನು ಕೇಳಿದಳು. “ಅನೇಕ ವರ್ಷಗಳ ಕಾಲ ನಾವಿಬ್ಬರೂ ಜೊತೆ ಜೊತೆಯಾಗಿ ಸಂಸಾರವನ್ನು ಸಾಗಿಸಿದ್ದೇವೆ. ನಿನ್ನ ಒಡನಾಡಿಯಾಗಿ ಇಷ್ಟು ಕಾಲವೂ ಎಡೆಬಿಡದೇ ನಿನ್ನನ್ನು ಸೇವಿಸಿದ ನನ್ನ ಮೇಲೆ ನಿನಗೀಗಲೂ ಸಂಶಯವೇ? ಹಾಗಿದ್ದಲ್ಲಿ ಕೈಗೆ ಕಟ್ಟಿದ ‘ರಕ್ಷಾಸೂತ್ರ’ವನ್ನು ಏಕೆ ಬಿಚ್ಚುತ್ತಿಲ್ಲ?” ನವಾಬನಿಗೆ ಹೌದೆನಿಸಿತು. ನಿರಂತರವಾಗಿ ತನ್ನನ್ನೇ ನಂಬಿದ ಹೆಂಡತಿಯನ್ನು ಸಂಶಯಿಸಬಾರದೆಂದು ಎನಿಸಿತು. ಗುರುಗಳು ಕಟ್ಟಿದ ‘ರಕ್ಷಾಸೂತ್ರ’ವನ್ನು ಬಿಚ್ಚಿಸಿದ. ಮರುಕ್ಷಣವೇ ನವಾಬನ ಹೆಂಡತಿಯಿದ್ದ ಸ್ಥಳದಲ್ಲಿ ಜ್ವಾಲಾಮುಖಿಗಳಿಂದ ಕೂಡಿದ ಕರಾಳವಾದ ದೆವ್ವದ ಆಕಾರ ಕಾಣಿಸಿತು. ನೋಡನೋಡುತ್ತಿದ್ದಂತೆ ಆ ಅಗ್ನಿಜ್ವಾಲೆ ಅರಮನೆಯೊಟ್ಟಿಗೆ ನವಾಬನನ್ನೂ ಭಸ್ಮ ಮಾಡಿತು.

ಇದು ನವಾಬನ ಕಥೆ ಮಾತ್ರವಲ್ಲ, ನಮ್ಮೆಲ್ಲರ ಕಥೆಯೂ ಆಗಿದೆ. ಮಾಯೆ ಕಣ್ಣು ಕುಕ್ಕುವ ಚೆಲುವಿನಿಂದ ಬಂದು ಮನಸೆಳೆದಾಗ ಜೀವಿ ಅದರ ವಶವಾಗುತ್ತಾನೆ. ಮಾಯಾ ಪಿಶಾಚಿಯೊಂದಿಗೆ ಸಂಸಾರ ಆರಂಭಿಸುತ್ತಾನೆ. ಅದು ಮೈ ಮರೆಸುತ್ತದೆ. ಭ್ರಮಾಲೋಕದಲ್ಲಿ ವ್ಯವಹರಿಸುತ್ತಿರುವ ಜೀವಿಯ ಮುಂದೆ ಒಂದು ದಿನ ಸಾವು-ನೋವುಗಳ ತನ್ನ ಕರಾಳ ರೂಪವನ್ನು ಪ್ರಕಟಿಸುತ್ತಾಳೆ. ಮೃತ್ಯು ತನ್ನ ಕರಾಳ ಜ್ವಾಲೆಯನ್ನು ಚಾಚಿ ಜೀವಿಯನ್ನು ಬದುಕಿನುದ್ದದ ಸಮಸ್ತ ಸಂಪಾದನೆಯೊಟ್ಟಿಗೆ ಕೊನೆಗೆ ಭಸ್ಮ ಮಾಡುತ್ತದೆ.

ಮಾಯೆಯನ್ನು ಮೀರಿದ ಗುರುವಿನಲ್ಲಿ ಶರಣಾಗತಿಯೆಂಬ ‘ರಕ್ಷಾಸೂತ್ರ’ ನಮ್ಮಲ್ಲಿರುವ ತನಕ ಮಾಯಾಪಿಶಾಚಿಯಿಂದ ಯಾವುದೇ ಭಯವಿಲ್ಲ. ಅಂಥವನು ಮಾತ್ರ ಜೀವನದಲ್ಲಿ ಗೆಲ್ಲಬಲ್ಲ.

~*~

6 Responses to ಧರ್ಮಜ್ಯೋತಿ 08: “ದೆವ್ವದೊಡನೆ ಸಂಸಾರ”

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಮೃತ ಸಾಗರದ ಸವಿಯನ್ನು ಅನುಭವಿಸಿದ ಈ ಜೀವಕ್ಕೆ ಮತ್ತೆ ಸಂಸಾರ ಸಾಗರದ ಅಲೆಗಳನ್ನು ನೋಡಿ ಭಯವಾಗುತ್ತಿದೆ. ಮಾಯೆಯ ದೊಡ್ಡ ದೊಡ್ಡ ಅಲೆಗಳೆದ್ದು ಬರುತ್ತಿವೆ. ‘ರಕ್ಶಾಸೂತ್ರವನ್ನೂ’ ಅದೆಂದು ಕಿತ್ತು ಎಸೆದೆನೆಂದೇ ತಿಳಿಯುತ್ತಿಲ್ಲ. ಮತ್ತೆ ರಕ್ಷಾ ಸೂತ್ರವನ್ನು ಕೇಳುವ ಯೋಗ್ಯತೆಯಿದೆಯೋ ನಾನರಿಯೆ. ‘ಗುರುವೇ ಗುರಿಯೆಡೆಗೆ ಮುನ್ನಡೆಸಿ………..”

  [Reply]

 2. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ‘ರಕ್ಶಾಸೂತ್ರ’ ಕೈಯಲ್ಲಿದ್ದರೆ ಸಂಸಾರ ಸಾಗರದಲ್ಲಿ ಬಿದ್ದರೂ,ಎದ್ದರೂ ಎರಡೂ ಲಾಭವನ್ನು ಉಂಟುಮಾಡುತ್ತದೆ… ಸಾಗರದಲ್ಲಿ ಮತ್ಯಾವುದರ ಭಯ?

  [Reply]

 3. Adithi B S Bhat

  ಶ್ರೀ ಗುರುಭ್ಯೋ ನಮಃ

  [Reply]

 4. pakalakunja gopalakrishna bhat

  ಹರೇ ರಾಮ…ಶ್ರೀ ಗುರು ‘ರಕ್ಶಾಸೂತ್ರ’ ಯಾವತ್ತೂ ಕೈಯಲ್ಲಿರಲಿ…

  [Reply]

 5. dentist mava

  shri gurugala aashirvada namma meliruvaga yava devvagala bhayavu namagilla
  sanmargadalli nadeyuva shakthi kodu tande (guruve)

  [Reply]

 6. ಕಾಂಚನ ರೋಹಿಣಿ ಸುಬ್ಬರತ್ನಂ

  ಶ್ರೀ ಗುರು ಚರಣವು ನಮ್ಮ ಮನದಲ್ಲಿ ನೆಲೆಸಿರುವವರೆಗೂ ನಮಗೆ ಶ್ರೀ ರಕ್ಷೆ.. ಮನದಲ್ಲಿ ಇಡುವುದು ನಮ್ಮ ಹೊಣೆ

  [Reply]

Leave a Reply

Highslide for Wordpress Plugin