“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 18: ಅರಿತವನಿಗೆ ಅರಿವಿಲ್ಲ.

ಆನೆಯೊಂದು ವಿಶಾಲವಾದ ಕೊಳದಲ್ಲಿ ಸ್ನಾನ ಮಾಡುತ್ತಿತ್ತು. ಆಗ ಸುಂಡಿಲಿಯೊಂದು ಅಲ್ಲಿಗೆ ಆಗಮಿಸಿತು. ದಂಡೆಯ ಮೇಲೆ ನಿಂತು “ಎಲೈ! ಆನೆಯೇ, ಕೂಡಲೇ ಮೇಲೆ ಬಾ” ಎಂದು ಕರೆಯಿತು. ಆನೆ ಇಲಿಯ ಕೂಗನ್ನು ಕಿವಿಗೂ ಹಾಕಿಕೊಳ್ಳದೆ ತನ್ನ ಪಾಡಿಗೆ ಸ್ನಾನವನ್ನು ಮುಂದುವರಿಸುತ್ತಿತ್ತು. ಪಟ್ಟು ಬಿಡದ ಇಲಿ ಸ್ವರವೇರಿಸಿ ಮತ್ತೊಮ್ಮೆ ಆನೆಯನ್ನು ಕರೆಯಿತು- “ನಿನ್ನಲ್ಲಿ ಅತ್ಯಂತ ಅವಸರವಾಗಿ ಮಾತನಾಡುವುದಿದೆ. ತಡಮಾಡದೆ ಮೇಲೆ ಬಾ.” ದಿವ್ಯ ನಿರ್ಲಕ್ಷ್ಯದಿಂದ ಒಮ್ಮೆ ಆ ಕಡೆ ದೃಷ್ಟಿ ಹಾಯಿಸಿದ ಆನೆ ಇಲಿಗೆ ಬೆನ್ನು ಹಾಕಿ ತನ್ನ ಕಾರ್ಯವನ್ನು ಮುಂದುವರಿಸಿತು. ಸಹನೆ ಕಳೆದುಕೊಂಡ ಇಲಿ ಅತ್ತಿತ್ತ ನೆಗೆಯುತ್ತಾ ಕಿರುಚಾಡತೊಡಗಿತು. ಮಾತ್ರವಲ್ಲ,” ಮೇಲೆ ಬರದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು” ಎಂದು ಎಚ್ಚರಿಸಿತು. ಇಲಿಯ ಕಿರಿಕಿರಿಯನ್ನು ತಾಳಲಾರದೇ ಆನೆ ಮೆಲ್ಲಗೆ ದಂಡೆಗೇರಿ ಬಂತು. ಆನೆಯನ್ನು ಬಾಲದಿಂದ ಸೊಂಡಿಲಿನವರೆಗೆ ಒಮ್ಮೆ ವೀಕ್ಷಿಸಿದ ಇಲಿ ತಣ್ಣನೆಯ ಸ್ವರದಲ್ಲಿ “ಸರಿ ನೀನಿನ್ನು ಹೋಗಬಹುದು” ಎಂದಿತು. ಈಗ ಕೋಪಗೊಳ್ಳುವ ಸರದಿ ಆನೆಯದು. “ಹಾಗಾದರೆ ನನ್ನ ಪಾಡಿಗೆ ಜಲಕೇಳಿಯಲ್ಲಿ ಮುಳುಗಿದ್ದ ನನ್ನನ್ನೇಕೆ ಮೇಲೆ ಕರೆದೆ?” ಎಂದು ಪ್ರಶ್ನಿಸಿತು. ಇಲಿ ಶಾಂತವಾಗಿ ಉತ್ತರಿಸಿತು. “ಏನಿಲ್ಲ, ನನ್ನ ಈಜುಡುಗೆ ಕಾಣಿಸುತ್ತಿಲ್ಲ. ನೀನೇನಾದರೂ ಅದನ್ನು ಧರಿಸಿದ್ದೀಯಾ ಎಂದು ನೋಡಬೇಕಾಗಿತ್ತು.”

ಇಲಿಯ ಈಜುಡುಗೆಯಲ್ಲಿ ಆನೆಯಾದರೂ ಹಿಡಿಸಬಹುದು. ಆದರೆ ನಮ್ಮ ಸೀಮಿತ ಕಲ್ಪನೆಗಳಲ್ಲಿ ವಿಶ್ವವ್ಯಾಪಕನಾದ ಭಗವಂತ ಹಿಡಿಸಲಾರ. ದೇವರನ್ನು ಅಳೆಯುವ ಪ್ರಯತ್ನಗಳು ಸೃಷ್ಟಿಯ ಆದಿಯಿಂದಲೂ ನಡೆದಿವೆ. ದೇವರನ್ನು ಹೀಗೆಯೇ ಎಂದು ಹೇಳಲೆಳಸುವ ಅಸಂಖ್ಯ ಮತಗಳು ಲೋಕದಲ್ಲೆಲ್ಲಾ ಹರಡಿವೆ. ಅನೇಕ ಮತಪ್ರವರ್ತಕರು, ಪಂಡಿತರು, ದೇವರಸ್ವರೂಪದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ಕೊಟ್ಟಿದ್ದಾರೆ. ಕರ್ಮವೇ ದೇವರೆನ್ನುವವರೂ ಕೆಲವರಿದ್ದಾರೆ. ದೇವರೇ ಇಲ್ಲ ಎನ್ನುವವರೂ ಅನೇಕರಿದ್ದಾರೆ. ಕಲ್ಪಿಸುವ ಬುದ್ಧಿಗೇ ಪ್ರಭುವೆನಿಸಿದ ದೇವರು ಈ ಯಾವ ಕಲ್ಪನೆಗಳಿಗೂ ಸಿಲುಕುವುದಿಲ್ಲ. ಆದ್ದರಿಂದಲೇ ದೇವರ ಅನ್ವೇಷಣೆಯ ದಾರಿಯಲ್ಲಿ ಬಹುದೂರ ಸಾಗಿದ ಮಹರ್ಷಿಗಳು ದೇವರನ್ನು “ವಾಙ್ಮನಸಾತೀತಃ” ಅಂದರೆ ಮನಸ್ಸು ಮತ್ತು ಮಾತುಗಳು ಅವನನ್ನು ತಲುಪಲಾರವು ಎಂದು ಹೇಳಿದರು. ಇದನ್ನೇ ಕೇನೋಪನಿಷತ್ತು ಬಹು ಸುಂದರವಾಗಿ ಹೇಳಿದೆ “ಅವಿಜ್ಞಾತಂ ವಿಜಾನತಾಂ ವಿಜ್ಞಾತಮ್ ಅವಿಜಾನತಾಮ್” ದೇವರನ್ನು ಕಾಣದವನು ಮಾತ್ರ ದೇವರು ತನಗೆ ಗೊತ್ತಿದೆ ಎಂದುಕೊಳ್ಳುತ್ತಾನೆ. ಆದರೆ ಆದಿ ಅಂತ್ಯಗಳಿಲ್ಲದ, ಎಲ್ಲೆಲ್ಲೂ ವ್ಯಾಪಿಸಿರುವ, ಎಲ್ಲವೂ ಆಗಿರುವ ದೇವರ ಸ್ವರೂಪವನ್ನು ಕಂಡವನು ದೇವರು ತನಗೆ ಗೊತ್ತಿಲ್ಲವೆಂದೇ ಭಾವಿಸುತ್ತಾನೆ. ದಂಡೆಯ ಮೇಲೆ ನಿಂತು ನೋಡುವವನಿಗೆ ಸಾಗರ ಕಾಣುವುದಾದರೂ, ಸಾಗರದ ಸಂಪೂರ್ಣರೂಪವನ್ನು ಅರಿಯಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ಅಲ್ಪಬುದ್ಧಿ ಮತ್ತು ಅಲ್ಪದೃಷ್ಟಿಗಳು ಒಮ್ಮೆ ದೇವರನ್ನು ಕಂಡರೂ,

ಎಲ್ಲೆ ಇಲ್ಲದ ದೇವರ ಎಲ್ಲವನ್ನೂ ಅರಿಯಲು ಸಾಧ್ಯವಿಲ್ಲ.

~*~

Facebook Comments