LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಜ್ಯೋತಿ 19: “ಗುರುಮೂರುತಿ – ಗುರುಮಾರುತಿ”

Author: ; Published On: ರವಿವಾರ, ಫೆಬ್ರವರಿ 10th, 2013;

Switch to language: ಕನ್ನಡ | English | हिंदी         Shortlink:

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 19: ಗುರುಮೂರುತಿ – ಗುರುಮಾರುತಿ

ರಾಮಾಯಣದ ಕಥೆ ಭಾರತ ವರ್ಷದಲ್ಲಿ ಯಾರಿಗೆ ತಾನೆ ಗೊತ್ತಿಲ್ಲ? ಆದರೆ ರಾಮಾಯಣದ ತಾತ್ತ್ವಿಕ ಹಿನ್ನೆಲೆಯನ್ನು ಚಿಂತಿಸುವವರೆಷ್ಟು ಮಂದಿ?
ತೆಂಗಿನಕಾಯಿಯ ಕರಟವನ್ನು ಭೇದಿಸಿದವನಿಗೆ ಒಳಗಿನ ತಿರುಳು ಸಿಗುವಂತೆ ಕಥೆಯ ಕರಟವನ್ನು ಭೇದಿಸುವ ನಿಶಿತಮತಿಗೆ ಮಾತ್ರ ಒಳಗಿನ ತತ್ತ್ವಾರ್ಥದ ತಿರುಳು ಸಿಗುತ್ತದೆ. ರಾಮಾಯಣದ ತಾತ್ತ್ವಿಕ ತಿರುಳನ್ನು ಸವಿಯುವ ಪ್ರಯತ್ನ ಮಾಡೋಣ.

ಸೀತಾದೇವಿಯೊಡನೆ ಶ್ರೀರಾಮ ದಂಡಕಾವನದಲ್ಲಿ ಸಂಚಾರ ಮಾಡುತ್ತಿದ್ದಾಗ ಬಂಗಾರದ ಜಿಂಕೆಯೊಂದು ಸೀತೆಯ ಕಣ್ಮುಂದೆ ಸುಳಿಯಿತು.
ಅಲ್ಲಿಯವರೆಗೆ ರಾಮನನ್ನು ಹೊರತು ಬೇರೇನನ್ನೂ ಬಯಸದ ಸೀತೆ ಮಾಯಾ ಬಂಗಾರದ ಜಿಂಕೆಯನ್ನು ಬಯಸಿದಳು. ಅದಕ್ಕಾಗಿ ಶ್ರೀರಾಮನನ್ನು ದೂರ ಕಳುಹಿಸಿದಳು. ತನ್ನ ರಕ್ಷಣೆಗಾಗಿ ರಾಮನಿಂದ ನಿಯುಕ್ತನಾದ ಲಕ್ಷ್ಮಣನನ್ನು ದೂರ ಅಟ್ಟಿದಳು.
ಮಾಯಾವಿಯಾದ ರಾವಣ ಸಮಯ ಕಾದು ಸೀತೆಯನ್ನಪಹರಿಸಿದ. ಸಮುದ್ರ ಮಧ್ಯದ ಲಂಕೆಯ ಅಶೋಕವನದಲ್ಲಿ ಸೀತೆಯನ್ನು ಬಂಧಿಸಿದ. ರಾಮನ ವಿರಹದಿಂದ ಕಂಗೆಟ್ಟ ಸೀತೆ ಕಣ್ಣೀರಿಟ್ಟಳು.
ಸೀತೆಯ ಮೊರೆ ತಲುಪಿತೋ ಏನೋ, ಶ್ರೀರಾಮನ ದೂತ ಮಾರುತಿ ಸಮುದ್ರ ಹಾರಿ ಲಂಕೆಯನ್ನು ತಲುಪಿದ.
ಹೆಸರಿಗೆ ಅಶೋಕವನವಾದರೂ ಶೋಕವನವೇ ಆಗಿದ್ದ ರಾವಣನ ಉದ್ಯಾನದಲ್ಲಿ ಸೀತೆಯನ್ನು ಸಂಧಿಸಿದ. ರಾವಣನ ಮಾಯೆಗಳನ್ನು ನೋಡಿ ಯಾರನ್ನೂ ನಂಬದ ಸ್ಥಿತಿಗೆ ತಲುಪಿದ್ದ ಸೀತೆ ಮಾರುತಿಯನ್ನು ನಂಬಲಿಲ್ಲ.
ರಾಮನ ಚಿಹ್ನೆಯಾದ ಮುದ್ರೆಯುಂಗುರವನ್ನು ತೋರಿ ಮಾರುತಿ ಸೀತೆಯ ಪರೀಕ್ಷೆಯಲ್ಲಿ ಉತ್ತೀರ್ಣನಾದ. ದೂರವಾಗಿದ್ದ ಸೀತಾರಾಮರನ್ನು ಪುನಃ ಬೆಸೆದ. ಮಾರುತಿಯ ಸಂದೇಶದ ಮೇರೆಗೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ ಶ್ರೀರಾಮ ಲಂಕೆಗೆ ತಲುಪಿ ರಾಕ್ಷಸರನ್ನೆಲ್ಲ ಸಂಹರಿಸಿದ.
ಅಗ್ನಿಪರೀಕ್ಷೆಯಲ್ಲಿ ಪರಿಶುದ್ಧಳಾಗಿ ಹೊರಹೊಮ್ಮಿದ ಸೀತೆಯೊಡನೆ ಅಯೋಧ್ಯೆಯ ರತ್ನಸಿಂಹಾಸನವನ್ನೇರಿದ.

ಇಲ್ಲಿ ಜೀವನವೇ ದಂಡಕಾವನ. ಸೀತಾರಾಮರೆಂದರೆ ಜೀವ-ದೇವರುಗಳು. ದೇವನೊಡನೆ ಆನಂದದಿಂದ ವಿಹರಿಸುತ್ತಿದ್ದ ಜೀವನ ಕಣ್ಮುಂದೆ ಮಾಯೆಯೆಂಬ ರಾವಣನಿಂದ ನಿರ್ಮಿತವಾದ ವಿಷಯಸುಖವೆಂಬ ಕನಕಮೃಗ ಸುಳಿದಾಡುತ್ತದೆ.
ದೇವನನ್ನು ಮಾತ್ರವೇ ಬಯಸಬೇಕಾದ ಜೀವ ಅದನ್ನು ಬಿಟ್ಟು ವಿಷಯಸುಖದ ಕನಕಮೃಗವನ್ನು ಬಯಸಿತು.
ಕಾಣುವ ಬಂಗಾರದ ಜಿಂಕೆಯ ಕವಚದಲ್ಲಿ ಕಾಣದ ಘೋರರಾಕ್ಷಸನಿರುವಂತೆ, ಕಾಣುವ ವಿಷಯಸುಖದ ಹಿನ್ನೆಲೆಯಲ್ಲಿ ಕಾಣದ ದಾರುಣ ದುಃಖವಿದೆಯೆಂದು ಅರಿಯಲಿಲ್ಲ.
ವಿಷಯ ಸುಖದ ಮರೀಚಿಕೆಗಾಗಿ ಜೀವ, ದೇವನನ್ನೂ ಕಳೆದುಕೊಂಡಿದ್ದಲ್ಲದೆ, ತನ್ನ ರಕ್ಷಣೆಗೆ ದೇವನಿಂದ ನಿಯುಕ್ತನಾದ ಲಕ್ಷ್ಮಣನನ್ನೂ ದೂರ ಅಟ್ಟಿತು.

ಆಗ ಸಂನ್ಯಾಸಿಯ ಭವ್ಯರೂಪದಲ್ಲಿ ಬಳಿ ಬಂದ ರಾವಣನೆಂಬ ಮಾಯೆ ಜೀವಸೀತೆಯನ್ನಪಹರಿಸಿ, ಸಂಸಾರಸಮುದ್ರದ ಮಧ್ಯದಲ್ಲಿ ಕಾಮಕ್ರೋಧಗಳೆಂಬ ರಾಕ್ಷಸರಿಂದ ಆವೃತವಾದ ಅಜ್ಞಾನದ ಲಂಕಾನಗರಿಯಲ್ಲಿರಿಸಿತು.
ಲಂಕೆಯ ಅಶೋಕವನದಲ್ಲಿ ರಾಮನಿಲ್ಲದೆ ಸೀತೆ ನೊಂದಂತೆ, ಜೀವನ ಶೋಕವನದಲ್ಲಿ ದೇವನನ್ನು ಕಾಣುವ ಹಂಬಲದಲ್ಲಿ ಜೀವ ನೊಂದಾಗ, ಕರಗಿ ಕಣ್ಣೀರಿಟ್ಟಾಗ, ಮಾಯೆಯ ಭೋಗದ ಆಮಿಷಕ್ಕೆ ಮನಮಾಡದೆ, ದೇವನಲ್ಲಿಯೇ ಮನವನ್ನು ನೆಟ್ಟಾಗ ಕೃಪೆ ತೋರುತ್ತಾನೆ.
ತನ್ನ ಪ್ರತಿನಿಧಿಯಾದ ಮಾರುತಿಯೆಂಬ ಗುರುಮೂರುತಿಯನ್ನು ಕಳುಹಿಸಿಕೊಡುತ್ತಾನೆ.
ಆ ಗುರು, ಭಗವಂತನ ಅಭಿಜ್ಞಾನವನ್ನು ಹೊತ್ತವನಾಗಿರಬೇಕು. ಜೀವದ ವೇದನೆಯನ್ನು ಭಗವಂತನಲ್ಲಿ ನಿವೇದನೆ ಮಾಡಬಲ್ಲವನಾಗಿರಬೇಕು. ಜೀವ, ಗುರುವನ್ನು ಪರೀಕ್ಷಿಸಿಯೇ ಸ್ವೀಕರಿಸಬೇಕು. ಆಮೇಲೆ ದೇವ, ಜೀವನನ್ನು ಸುತ್ತುವರಿದ ಎಲ್ಲಾ ರಾಕ್ಷಸರನ್ನೂ ಸಂಹರಿಸಿ, ಸಾಧನೆಯ ಅಗ್ನಿಪರೀಕ್ಷೆಯಲ್ಲಿ ಪರಿಶುದ್ಧನಾಗಿ ಹೊರಹೊಮ್ಮಿದ ಜೀವನನ್ನು ಪರಿಗ್ರಹಿಸುತ್ತಾನೆ. ಎಲ್ಲ ಯುದ್ಧಗಳಿಗೆ ಮೀರಿದ ಅಯೋಧ್ಯೆಯ ಮೋಕ್ಷಸಿಂಹಾಸನದಲ್ಲಿ ತನ್ನೊಡನೆ ಜೀವನನ್ನು ಕುಳ್ಳಿರಿಸಿಕೊಳ್ಳುತ್ತಾನೆ.
ಹೀಗೆ:

ಜೀವ – ದೇವರ ವಿರಹ – ಸಂಗಮಗಳ ಕಥೆಯೇ ರಾಮಾಯಣ.

~*~

2 Responses to ಧರ್ಮಜ್ಯೋತಿ 19: “ಗುರುಮೂರುತಿ – ಗುರುಮಾರುತಿ”

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಕೋಟಿ ಕೋಟಿ ಜೀವಿಗಳು ತಿಳಿದೋ ತಿಳಿಯದೆಯೋ ಹುಡುಕುತ್ತಿರುವ ಜೀವನದ ಪರಮ ರಹಸ್ಯವನ್ನು ಕೆಲವೇ ಕೆಲವು ವಾಕ್ಯಗಳಲ್ಲಿ ಸ್ಪಷ್ಟವಾಗಿ ತಿಳಿಸಿಕೊಡುತ್ತಿರುವ ಗುರುಮೂರುತಿಯೇ – ಮಾರುತಿಯೇ ಈ ಜೀವವೆಂಬ ಸೀತೆಯನ್ನು ರಾಮನ ಜೊತೆ ಸೇರಿಸಬಾರದೆ?

  [Reply]

 2. ಪ್ರದೀಪ್ ಮುಣ್ಚಿಕಾನ

  ಹರೇ ರಾಮ

  [Reply]

Leave a Reply

Highslide for Wordpress Plugin